ಕಾನನದ ನಡುವೆ ಹಸಿರುಡುಗೆಯ ಮಧ್ಯೆ ಶೋಭಿಸುವ ಈ ಮೋಹಕ ಪುಷ್ಪಗಳದ್ದೇ ಒಂದು ಬೆಡಗು.

ಈ ವರ್ಷದ ಮಳೆಗಾಲದಲ್ಲಿ ನಮ್ಮ ಒಂದು ಪುಟ್ಟ ತಂಡ ಕೊಡಗಿನ ಬೆಡಗಿನ ಜಲಪಾತಗಳ ದರ್ಶನಕ್ಕೆಂದು ಹೊರಟಿತ್ತು. ಕೊಡಗಿನ ಪ್ರಸಿದ್ದ ತಡಿಯಂಡಮೋಳ್ ಶಿಖರದ ಏರು ಹಾದಿಯಲ್ಲಿ ಉತ್ಸಾಹದಿಂದ ಸಾಗುತ್ತಿದ್ದಾಗ ನಮ್ಮ ಕಣ್ಣಿಗೆ ಗೋಚರಿಸಿದ್ದು ಈ ನಾಟ್ಯ ಸುಂದರಿಯರು. ಅಲ್ಲಲ್ಲಿ ಕಂಡು ಬಂದ ವಿಶಾಲ ಬಂಡೆಗಳಲ್ಲಿ ಸೊಗಸಾದ ಪುಷ್ಪಗಳು ಲಾಸ್ಯವಾಡುತ್ತಿದ್ದವು. ಇವುಗಳಿಗೆ ನೀರು ಹನಿಸಿದವರು ಯಾರೂ ಇರಲಿಲ್ಲ. ಗೊಬ್ಬರ ಹಾಕಿದವರಿರಲಿಲ್ಲ. ಕುಂಡಗಳಲ್ಲಿ ಆರೈಕೆ ಮಾಡಿದವರಿರಲಿಲ್ಲ. ಎಲ್ಲರಿಗೂ ಅಚ್ಚರಿ ಹುಟ್ಟಿಸುವಂತೆ ಮಣ್ಣು,ನೀರು ಗೊಬ್ಬರಗಳ ಆಸರೆ ಇಲ್ಲದೆ ಬೆಳೆದ ನಾಟ್ಯ ಸುಂದರಿಯರು ಕಣ್ಮನ ಸೆಳೆಯುತ್ತಿದ್ದರು. ಆಕರ್ಷಕ ವರ್ಣದ ನಾನಾರೀತಿಯ ಹೂಗಳನ್ನು ಹೊತ್ತು ದೊಡ್ಡ ದೊಡ್ಡ ಉದ್ಯಾನಗಳಲ್ಲಿ ಮನೆಯ ಮುಂದಿನ ಕುಂಡಗಳಲ್ಲಿ ಬೆಳೆಯುವ ಹೂವಿನ ಸಸ್ಯಗಳು ಹಲವು. ಅದರಲ್ಲೂ ಮಳೆಗಾಲದ ತಂಪು ನೆಲದ ಹಸಿರುಡುಗೆ ನಡುವೆ ಕೆಲವು ಅಪರೂಪದ ಪುಷ್ಪಗಳು ಕಾಣಸಿಗುತ್ತವೆ. ಈ ಅಪರೂಪದ ಕುಸುಮ ಕನ್ಯೆಯರ ಪೈಕಿ ಕರ್ಣಕುಂಡಲವೂ ಒಂದು. ಇಂಪೇಶಿಯನ್ಸ್ ಬಾಲ್ಸಮಿನ ಎಂಬ ವೈಜ್ಞಾನಿಕ ಹೆಸರಿನ ಈ ಮಳೆಗಾಲದ ಅತಿಥಿ ಬಾಲ್ಸಮಿನೇಸಿ ಕುಟುಂಬಕ್ಕೆ ಸೇರಿದ ಒಂದು ವಾರ್ಷಿಕ ಸಸ್ಯ. ಇದಕ್ಕೆ ಗೌರಿ ಹೂಗಿಡ, ಬಸವನ ಪಾದ ಮುಂತಾದ ಹೆಸರುಗಳಿವೆ. ಹಸಿರು ಗಿಡದ ನಡುವೆ ಮುತ್ತುಪೋಣಿಸಿದಂತೆ ಕಾಣಿಸಿಕೊಳ್ಳುವ ಇದು ಸಾಮಾನ್ಯವಾಗಿ ಉದ್ಯಾನ ಕೈತೋಟಗಳಲ್ಲಿ ಮನೆಯ ಆವರಣಗಳಲ್ಲಿ ಬೆಳೆಸಲು ಯೋಗ್ಯವಾದ ಗಿಡ. ಮಳೆಗಾಲದಲ್ಲಿ ಚೆನ್ನಾಗಿ ಬೆಳೆಯುವ ಈ ಸಸ್ಯದ ಹೂಗಳನ್ನು ಪೂಜೆಗೆ ಉಪಯೋಗಿಸಲೆಂದು ಕುಂಡಗಳಲ್ಲಿ ಹೂಮಡಿಗಳಲ್ಲಿ ಬೆಳೆಸಲಾಗುತ್ತದೆ. ಆದರೆ ಈ ಕುಸುಮ ಕನ್ಯೆಗಿಂತ ತುಸು ಭಿನ್ನವಾಗಿ ಯಾರ ಕಣ್ಣಿಗೂ ಬೀಳದೆ ಅನುಪಮ ಸೌಂದರ್ಯದಿಂದ ಕಾಡಿನಲ್ಲಿ ಮೆರೆಯುವ ಕರ್ಣಕುಂಡಲವೊಂದಿದೆ. ದಕ್ಷಿಣ ಭಾರತದ ಕಾಡಿನ ಪ್ರದೇಶಗಳಲ್ಲಿ ಕಂಡುಬರುವ ಕರ್ಣಕುಂಡಲದ ಪ್ರಬೇಧವಿದು. ಇಂಪೇಶಿಯನ್ಸ್ ಸ್ಕೆಪಿಫ್ಲೋರಾ ಎಂಬ ಸಸ್ಯಶಾಸ್ತ್ರೀಯ ಹೆಸರುಳ್ಳ ಇದು ಬಾಲ್ಸಮಿನೇಸಿ ಕುಟುಂಬಕ್ಕೆ ಸೇರಿದೆ. ಮಳೆಗಾಲದಲ್ಲಿ ಕೊಡಗಿನ ಬೆಟ್ಟ ಕಾಡುಗಳಲ್ಲಿ ಇದು ಹೇರಳವಾಗಿ ಕಂಡುಬರುತ್ತದೆ. ಕಾಡಿನಲ್ಲಿ ದೊಡ್ಡ ದೊಡ್ಡ ವೃಕ್ಷಗಳ ಕೆಳಗಿನ ತಂಪು ಪ್ರದೇಶದಲ್ಲಿ ಕಲ್ಲಿನ ಮೇಲೆ ಯಾವ ವಿಶೇಷ ಆರೈಕೆಯೂ ಇಲ್ಲದೆ ಬೆಳೆಯುವ ಈ ಶಿಲಾ ಸುಂದರಿಯನ್ನು ಗುರುತಿಸಿ ಗೌರವಿಸುವವರು ಕಡಿಮೆ. ಕಾಡಿನ ನಡುವೆ ಯಾರ ಗಮನಕ್ಕೂ ಬಾರದೆ ಮುಗ್ಧತೆಯಿಂದ ಮುಗುಳ್ನಗುತ್ತಾ ಅನುಪಮ ಬೆಡಗನ್ನು ತೋರಿ ಬಾಡಿ ಹೋಗುತ್ತವೆ. ಮಳೆಗಾಲ ಆರಂಭವಾದೊಡನೆ ಈ ಸುಕೋಮಲ ಹೂ ಅರಳುತ್ತದೆ. ಬೆಟ್ಟಗುಡ್ಡಗಳಲ್ಲಿರುವ ಕಲ್ಲುಬಂಡೆಗಳಲ್ಲಿ ನೀರು ಜಿನುಗತೊಡಗಿದಾಗ ಕಲ್ಲಿನ ಮೇಲೆಯೇ ಸಸ್ಯ ಬೆಳವಣಿಗೆ ಕಂಡುಕೊಳ್ಳುತ್ತದೆ. ಅರಳಿದ ಹೂ ಚಿಕ್ಕದಾಗಿದ್ದರೂ ನೋಡಲು ಆಕರ್ಷಕ. ಹೆಚ್ಚು ಎತ್ತರ ಬೆಳೆಯುವ ದಂಟುಗಳಲ್ಲಿ ಸೊಗಸಾದ ಹೂಗಳು ಅರಳುತ್ತವೆ. ಎಲೆಗಳು ಮಾತ್ರ ದಂಟಿನ ತಳದಲ್ಲಿ ಅದೇ ಕಾಂಡಕ್ಕೆ ಹೊಂದಿಕೊಂಡು ಇಲ್ಲವೇ ಪ್ರತ್ಯೇಕವಾಗಿ ಇರುವುದು.

ಈ ವನಪುಷ್ಪವನ್ನು ಬೆಳೆಯಬೇಕಾದರೆ ನೀರು ಗೊಬ್ಬರ ಬೇಡ. ಕುಂಡಗಳಲ್ಲಿ ಆರೈಕೆಮಾಡಬೇಕಾದ್ದಿಲ್ಲ. ಹಾಗೆಂದು ಈ ಸುಂದರ ಕಾಡು ಹೂವನ್ನು ಮನೆಯ ಮುಂದಿನ ಉದ್ಯಾನವನಗಳಲ್ಲಿ ಇಲ್ಲವೇ ಹೂಕುಂಡಗಳಲ್ಲಿ ಬೆಳೆಯಲು ಅಸಾಧ್ಯ. ಹರಿದ್ವರ್ಣ ಕಾಡುಗಳಲ್ಲಿ, ಜೌಗು ಪ್ರದೇಶ, ನೀರು ಹರಿಯುವ ಸ್ಥಳಗಳಲ್ಲಿ ಅದರಲ್ಲೂ ಹೆಚ್ಚಾಗಿ ನೀರ ಹನಿಗಳನ್ನು ಚಿಮ್ಮಿಸಿಕೊಳ್ಳುವ ಕಲ್ಲುಗಳ ನಡುವೆ ಕಂಡು ಬರುವ ಈ ಸಸ್ಯಗಳು ಶಿಲಾ ಉದ್ಯಾನಗಳಿಗೆ ಮಾತ್ರ ಹೆಚ್ಚಿನ ಶೋಭೆಯನ್ನು ತರುವವು. ಕಾಡಿನಲ್ಲಿ ಸಹಜ ಸುಂದರಿಯರಾಗಿ ಶಿಲಾಬಂಡೆಗಳಲ್ಲಿ ನಾಟ್ಯಸುಂದರಿಯರಾಗಿ ಮೆರೆಯುವ ಈ ಪುಷ್ಪ ಸುಂದರಿಗೆ ಉದ್ಯಾನ ಪ್ರಿಯರ ಆರೈಕೆ ಏಕೆ ಹಿಡಿಸುವುದಿಲ್ಲ?