ವೃಷಸೇನ : ಯಲಾ ಅರ್ಜುನ, ಯಿಂತಾ ಜಂಬದ ಮಾತುಗಳನ್ನು ನನ್ನಲ್ಲಿ ವುಸುರಬೇಡ ಹೇಳುತ್ತೇನೆ ಕೇಳುವನಾಗು.

ಪದ

ನರನೆ ಕೂಗಲ್ಯಾಕಿನ್ನು ತರಳನೆಂದು ಯಣಿಸಬೇಡ
ಕರದಲ್ಲಿರುವ ಧನು ಕರಗಳಿಗೆ ತರಳವೇನೆಲಾ ॥

ವೃಷಸೇನ : ಯಲಾ ನರನಾದ ಅರ್ಜುನನೆ ಯಾತಕ್ಕೆ ಕೂಗಿಕೊಳ್ಳುವೆ. ನಿನ್ನ ಕೂಗು ನಾನು ಬಲ್ಲೆ. ಮೂದೇವಿ ನಾನು ತರಳನಾದಾಗ್ಯು ನನ್ನ ಕೈಯಲ್ಲಿರುವ ಶರಗಳಿಗೆ ತರಳತ್ವವೆ. ದುರುಳನೆ ರಣಾಗ್ರಕ್ಕೆ ಯದುರಾಗು.

ಅರ್ಜುನ : ಯಲವೋ ಬಾಲಕನೆ ಹೇಳುತ್ತೇನೆ ಕೇಳು.

ಪದ

ಯಲಾ ಸಣ್ಣ ಹುಡುಗ ಸಾಯಬೇಡ ಯನ್ನೊಳ್ವಾದಿಸಿ
ನಿಮ್ಮಪ್ಪ ಕರ್ಣಬರಲಿ ಪೇಳೊ ರಣಕ್ಕೆ ಸಾಹಸಿ ॥

ವೃಷಸೇನ : ಯಲಾ ನರನೆ, ನಾಯಿ ಹೊಡೆಯುವುದಕ್ಕೆ ಬಣ್ಣದ ಕೋಲು ಬೇಕೆ. ಆಹಾ ನಿನ್ನ ಜಂಬವನ್ನು ನಾನು ಬಲ್ಲೆನು. ಹೆದರಿಸಬೇಡ ಹೇಳುತ್ತೇನೆ ಕೇಳು.

ಪದ

ಕೊಳನೀರ ದಾಂಟದವ ಹೊಳೆಯ ಬಯಸುವೆ
ಯನ್ನಾ ಗೆಲಿದ ಮೇಲೆ ಬರುವ ತಂದೆ ಕರ್ಣನು ॥

ವೃಷಸೇನ : ಯಲಾ ಅರ್ಜುನ, ಸಣ್ಣ ಕಾಲುವೆಯನ್ನು ದಾಟಲಾರದವನು ಸಮುದ್ರವನ್ನು ಲಂಘಿಸುವೆನೆಂದು ಯಾತಕ್ಕೆ ಜಂಬವನ್ನು ವದರಿಕೊಳ್ಳುತ್ತೀಯ. ನಿನ್ನ ವದನವನ್ನೂ ನಾನು ಬಲ್ಲೆನು. ನಾನು ನಿನ್ನ ವಂಶೀಭೂತನು. ಜಗ್ಗತಕ್ಕ ಪಿಂಡವಲ್ಲ. ನನ್ನನ್ನು ಗೆದ್ದ ನಂತರ ನಮ್ಮ ತಂದೆಯಾದ ಕರ್ಣನು ಬರುವನು. ಸದ್ಯಕ್ಕೆ ನನ್ನಲ್ಲಿ ಯುದ್ಧವನ್ನೂ ಮಾಡಿ ಪ್ರಸಿದ್ಧಿಯನ್ನೂ ಹೊಂದಬಹುದೋ ಪಾರ್ಥ.

ಅರ್ಜುನ : ಯಲಾ ಹುಡುಗನೆ ಶಹಬಾಸ್, ಹಾಗಾದರೆ ನನಗೇನು ದೋಷವಲ್ಲ ಕೈಗಾರಿಕೆಯನ್ನು ತೋರಲೊ.

ವೃಷಸೇನ : ತೋರಿಸಬಹುದು.

ಅರ್ಜುನ : ಹಾಗಾದರೆ ತೋರಿಸುವೆನು ನೋಡು.

ಪದ

ಹುಡುಗನೆಂದು ತಡೆದರೆ ನಿನ್ನ ಕಡುಹು ಹೆಚ್ಚಿತೆನುತ ನರನು
ಹೊಡೆಯಲಾಗ ಶಿರವು ನಭಕೆ ಸಿಡಿದು ಬಿದ್ದುದು ॥

ಅರ್ಜುನ : ಯಲಾ ವೃಷಸೇನ, ಕಂದನ ಕೊಂದರೆ ಕುಂದಕ ಬರಬಹುದೆಂದು ಕೈ ನಿಲಿಸಿದ್ದೆ. ಯೀ ಶರದಿಂದಲೇ ನಿನ್ನ ಶಿರವು ಹಾರಿ ಭೂ ಪತನವಾಗುವುದು ಕುನ್ನಿ ರಣಾಗ್ರಕ್ಕೆ ಯದುರಾಗು.

ವೃಷಸೇನ : ಯಲಾ ಅರ್ಜುನ, ಯೀ ನಿನ್ನ ಶರದಿಂದ ನನ್ನಾ ಶಿರ ಹೋದರು ಹೋಗಲಿ ಪ್ರಯೋಗಿಸುವಂಥವನಾಗು.

 

(ವೃಷಸೇನನ ಮರಣ)

ಪದ

ತರಳನ ಶಿರವು ಧರೆಗೆ ಬೀಳೆ ಹರಿಯು ಸಹಿತಪೋದ ಪಾರ್ಥ
ದುರುಳ ಕರ್ಣನನ್ನು ಕೊಲುವ ಭರದೊಳಾಕ್ಷಣ ॥

ಅರ್ಜುನ : ಭಾವಯ್ಯ, ಯೀ ತರಳನ ಶಿರವು ಧರೆಗೆ ಬೀಳುವಂಥದ್ದಾಯಿತು. ಕಾಲವನ್ನು ಯಾತಕ್ಕೆ ಕಳೆಯೋಣ. ಮುಂದಕ್ಕೆ ದುರುಳನಾದ ಕರ್ಣನ ಸಂಹಾರ ಮಾಡುವುದಕ್ಕೆ ಕುರುಬಲಕ್ಕೆ ರಥವನ್ನು ಬಿಡುವಂಥವನಾಗು.

ಭಾಮಿನಿ

ಧರೆಗೊರಗಲು ಕರ್ಣಸಂಭವ ಕುರುರಾಯ ನೋಡೀ ಮನದಿ
ದುಃಖದೊಳು ತರಣಿಸುತನೇನ ಹೇಳಲಿ ಅರುಹು
ಸುಕುಮಾರ ಯನುತ ಹಲುಬಿದನು ರಾಯ ॥

ಕೌರವ : ಅಯ್ಯೋ ಹರಹರ, ನನಗೆ ಬಾಹುಬಲವಾಗಿರುವ ಕರ್ಣನಮಗ ಯೀ ವೃಷಸೇನನು ನರನ ಶರಕ್ಕೆ ಶಿರವನ್ನು ಕೊಟ್ಟು ಧರೆಗೆ ವರಗಿರುವನಲ್ಲಾ. ತರಣಿ ಸುತನಾದ ಕರ್ಣನು ಬಂದು ಕೇಳಿದರೆ ಯೇನ ಹೇಳಲಯ್ಯ ಮಗುವೆ ಹಾ ಸುಕುಮಾರ ಧೀರ.

ಪದ

ಕರ್ಣಜಾತ ಕಾಮರೂಪ ವರ್ಣ ನಾಲ್ಕರಲ್ಲಿ
ನಿನ್ನ ಪೋಲ್ವ ಪುತ್ರರುಂಟೆ ಕಂದ ಕಂದ ॥

ಕೌರವ : ಹೇ ಮಗುವೆ, ನಾಲ್ಕು ವರ್ಣದಲ್ಲಿ ಹುಡುಕಿದಾಗ್ಯು ನಿನ್ನ ರೂಪಿಗೆ ತಕ್ಕ ಮಕ್ಕಳಿಲ್ಲವಲ್ಲ. ಹೇ ಕಂದ ಮನ್ಮಥನಂತೆ ಮೃತಪಟ್ಟನಲ್ಲ ಕಂದ ಯೆದ್ದು ಮಾತನಾಡಬಾರದೆ ಕಂದ.

ಪದ

ತರಣಿಸುತನು ತರಳನೆಲ್ಲಿ ಯೆಂದು ಕೇಳೆ
ಅರುಹಲೇನ ಕೊಂದೆನೆಂದು ಯಲ ಕಂದ ॥

ಕೌರವ : ಹೇ ಕಂದ ಹೇ ಬಾಲ, ನಿಮ್ಮ ತಂದೆಯಾದ ಕರ್ಣನು ಬಂದು ನನ್ನ ಮಗನಾದ ವೃಷಸೇನನು ಎಲ್ಲಿ ಯೆಂದು ಕೇಳಿದರೆ ಮಂದಮತಿಯಾದ ನಾನು ಕೊಂದೆನೆಂದು ಹೇಳಲೇನಪ್ಪಾ ಕಂದ. ಹೇ ಮಗುವೆ ಯೆದ್ದು ವೊಂದು ಮಾತನಾಡಬಾರದೆ ॥

ಪದ

ಧರೆಯ ಆಸೆಗಾಗಿ ಕರ್ಣನ ಕಂದನನ್ನೂ ಕೊಲ್ಲಿಸಿದೆನು
ಯೆಂದು ನಿಂದೆ ಬಂತು ಜಗದಿ ಕೇಳೊ ಕಂದ ॥

ಕೌರವ : ಹೇ ಮಗುವೆ, ಲೋಕದಲ್ಲಿ ನಿಮ್ಮ ತಂದೆಯಾದ ಕರ್ಣನನ್ನೂ ನನ್ನಲ್ಲಿ ಪರಾಕ್ರಮಕ್ಕೆ ಸೇರಿ ತನ್ನ ಮಗುವಾದ ವೃಷಸೇನನನ್ನು ಕಳೆದುಕೊಂಡನೆಂದು ಜನರು ನಿಂದಿಸುವರಲ್ಲಾ. ಹೇ ಕಂದ ಎದ್ದು ವೊಂದು ಮಾತನಾಡಬಾರದೆ ಕಂದ.

ಪದ

ಸುಡಲಿ ರಾಜ್ಯದಾಸೆ ಯೆನಗೆ ಕಂದ ನಾನು ನಿನ್ನ
ಕೊಲಿಸಿಕೊಟ್ಟು ಮುಖವ ತೋರಲೆಂತು ಕಂದ ॥

ಕೌರವ : ಹೇ ಕಂದ, ಧರಿತ್ರಿಯಲ್ಲಿ ರಾಜ್ಯದ ಆಸೆಗೋಸ್ಕರವಾಗಿ ನನ್ನ ಸೇರಿದ ನಿಮ್ಮಗಳಿಗೆ ತೊಂದರೆಯನ್ನು ಕೊಟ್ಟು ನಾನೇ ನನ್ನ ಕೈಯ್ಯರ ಸಂಹಾರ ಮಾಡಿದ ಹಾಗಾಯಿತಲ್ಲಾ. ಅಯ್ಯೋ ನನ್ನ ದುರ್ಭಾಗ್ಯವೆ ಬಾಲಾ ಯದ್ದು ವೊಂದು ಮಾತನಾಡಬಾರದೆ.

ಭಾಮಿನಿ

ಯೇನು ಕುರುಪತಿ ದುಗುಡ ಮನದೊಳು ಪೇಳು ಶೀಘ್ರದೊಳೆನಲು
ಕುರುಕುಲ ಮೌಳಿ ನುಡಿದನು ಬಾಷ್ಪನಯನದಿ ದಿನಪನಂದನಗೆ ॥

ಕರ್ಣ : ಅಯ್ಯ ಕೌರವೇಶ್ವರ, ಯಿದೇನು ಆಶ್ಚರ‌್ಯ ಸತ್ತ ಶವವನ್ನು ಮುಂದಿಟ್ಟುಕೊಂಡು ದುಃಖಪಡುತ್ತೀಯ, ಯೀ ಶವ ಯಾವುದು ಯಿಷ್ಟು ಅನಾಹುತಕ್ಕೆ ಕಾರಣವೇನು ಅಪ್ಪಣೆಯಾಗಲಿ.

ಪದ

ಕೇಳು ನೀ ಯಲೆ ಕರ್ಣ ಕಾಳಗದ ದುಸ್ಥಿತಿಯ
ಪೇಳಲಂಜುವೆ ನಿನಗೆ ಬಾಳುವೆಯು ಸುಡಲಿ ॥

ಕೌರವ : ಅಯ್ಯ ಕರ್ಣ, ಯೀ ದಿವಸ ರಣಾಗ್ರದಲ್ಲಿ ಬಂದ ಅಪಜಯವನ್ನು ಹೇಳುವುದಕ್ಕೆ ಅಂಜಿಕೆಯಾಗುವುದಲ್ಲಾ. ಅಯ್ಯೋ ನನ್ನ ಬಾಳುವೆಯನ್ನು ಸುಡಲಿ ಅಯ್ಯ ಕರ್ಣ ಹ್ಯಾಗೆ ಹೇಳಲಿ.

ಕರ್ಣ : ಮಹಾರಾಜನೆ ಸಂದೇಹವ್ಯಾಕೆ ಅನುಮಾನವನ್ನು ಬಿಟ್ಟು ಹೇಳಬಹುದಲ್ಲಾ.

ಕೌರವ : ಅಯ್ಯ ಕರ್ಣ, ಪವನಜನಾದ ಭೀಮನು ಅನುಜನಾದ ದುಶ್ಯಾಸನನನ್ನು ರಣಭೂಮಿಯಲ್ಲಿ ಗರ್ವದಲ್ಲಿ ಯಿರುವಾಗ್ಯೆ ಬಂದ ಅತಿಶಯವನ್ನು ಯೇನ ಹೇಳಲಿ.

ಕರ್ಣ : ಮಹಾರಾಜನೆ ಅಂಥಾ ಅತಿಶಯವೇನು ಹೇಳುವಂಥವನಾಗು.

ಕೌರವ : ಅಯ್ಯ ಕರ್ಣ ಹೇಳುತ್ತೇನೆ ಕೇಳು.

ಪದ

ಕೇಳೋ ನಿನ್ನಯ ಕುವರ ಖೂಳ ಭೀಮನ ಗೆಲಿದ
ಕಾಳಗದೊಳರ್ಜುನನು ಒಯ್ದ ಯಮಪುರಕೆ ॥

ಕೌರವ : ಅಯ್ಯ ಕರ್ಣ, ನಿನ್ನ ಮಗನಾದ ವೃಷಕೇತನು ಮದ್ದಾನೆಯಂತಿದ್ದ ಭೀಮನನ್ನು ಮೂರ್ಛೆ ಮಾಡೋಣ ಮುಂದಿನ ಸಂಗತಿಯನ್ನು ಹ್ಯಾಗೆ ನಿನ್ನೊಡನೆ ಹೇಳಲಯ್ಯ ಕರ್ಣ. ನಿನ್ನ ಮಗುವಾದ ವೃಷಸೇನನು ನರನ ಶರಕ್ಕೆ ಶಿರವನ್ನು ಕೊಟ್ಟು ಮರಣವಾಗಿರುವನು. ಯಿವನನ್ನು ಅರ್ಜುನನು ಸಂಹಾರ ಮಾಡಿದನಲ್ಲಯ್ಯ ಕರ್ಣ.

ಭಾಮಿನಿ

ನುಡಿಯ ಕೇಳುತ ಕರ್ಣ ಮೂರ್ಚಿಸಿಹ
ಹಡದೊಡಲು ಹಾಳಾಯ್ತೆ ಯನುತಲಿ
ಕಡಿದ ತನಯನ ನೋಡಿ ಹೊರಳಿದನು ತನುವಿನಲಿ ॥

ಕರ್ಣ : ಹರಹರ, ನನ್ನ ಹಡದೊಡಲು ಯಿವತ್ತಿಗೆ ಹಾಳಾಯ್ತೆ. ಶಿವ ಶಿವ ಯೀ ಕೂಸನ್ನು ಕಳೆದುಕೊಂಡು ಯೀ ಪ್ರಾಣವನ್ನೂ ಹ್ಯಾಗೆ ಯಿಡಲಿ ಅಯ್ಯೋ ಹರಹರ.

ಪದ

ಯತ್ತ ವೋದೆ ಯನ್ನ ಪ್ರಾಣರತ್ನವೆ ಕಂದ ಕಂದ
ಪೃಥ್ವೀಶರ ಸೇವೆಯೊಳಿಹ ಜನ್ಮ ಕಂದ ಕಂದ ॥

ಕರ್ಣ : ಯನ್ನ ಪ್ರಾಣರತ್ನದೋಪಾದಿಯಲ್ಲಿದ್ದಂಥ ಸುಕುಮಾರನೆ ಹಾ ಕಂದ, ಯೆಲ್ಲಿಗೆ ಹೋದಂಥವನಾದೆ. ಪರರ ಸೇವೆಗೆಬಂದು ಪುತ್ರನಾದ ನಿನ್ನನ್ನು ವ್ಯರ್ಥವಾಗಿ ಬಲಿಗೊಡಿಸಿದೆನಲ್ಲಾ. ಅಯ್ಯೋ ಯನ್ನ ಜನ್ಮವು ಯಂತಾದ್ದೊ, ಶಂಕರ ಪಾರ್ವತಿ ಪ್ರಾಣದೊಲ್ಲಭ ಯನಗೆ ಯಿಂಥಾ ಸಂಕಟವನ್ನು ಕೊಡಬಹುದೆ.

ಪದ

ಎತ್ತಿ ಸಲಹಿದಂಥ ತೋಳು ವ್ಯರ್ಥವಾಗಿ ಹೋಯಿತಲ್ಲಾ ಕಂದ
ಕಂದ ಬತ್ತಳಿಕೆ ಬೆನ್ನೊಳಾಂತು ಹೊತ್ತು ಮಲಗುವರೆ ಕಂದ ಕಂದ ॥

ಕರ್ಣ : ಹೇ ಬಾಲ, ನಿನ್ನನ್ನು ಬಾಲ್ಯಾರಭ್ಯದಿಂದ ಯೆತ್ತಿ ಮುದ್ದಾಡಿದ ಯೀ ಬಾಹುಗಳೆರಡು ಭೂಮಿಗೆ ಬಿದ್ದವೆ. ಬೆನ್ನಿನಲ್ಲಿ ಕಟ್ಟಿಕೊಂಡಿರುವ ಬತ್ತಳಿಕೆಯಲ್ಲಿ ಯಾರನ್ನು ಮಲಗಿಸಿಕೊಳ್ಳಲಿ ಹಾ ಸುಕುಮಾರ ಯದ್ದು ವೊಂದು ಮಾತನಾಡಬಾರದೆ ಕಂದ.

ಭಾಮಿನಿ

ಸುತಗೆ ಮರಣವ ಗೈದ ಪಾರ್ಥನ ಸತಿಯ ವೋಲೆಯ ತೆಗೆವೆ
ನೋಡೆಂದರೆ ಮನೋಚಿಂತೆಯಲಿ ಹೊರಟನು॥

ಕರ್ಣ : ಅಯ್ಯ ಭಾಗವತರೆ, ಯೆಷ್ಟು ದುಃಖಪಟ್ಟರು ಪ್ರಯೋಜನವಿಲ್ಲ. ಆದರೆ ನನ್ನ ಕಂದನ ಕೊಂದ ಮಂದಮತಿಯಾದ ಅರ್ಜುನನ ಹೆಂಡತಿಯಾದ ಸೌಭದ್ರೆಯ ಕರ್ಣದಲ್ಲಿರುವ ವೋಲೆ ಭಾಗ್ಯವನ್ನು ನಾಳೆಯ ದಿವಸ ನಾನು ತೆಗೆಸದೆ ಹೋದರೆ, ನಾನು ಕರ್ಣನೆ ಸೂರ‌್ಯನ ಮಗನೆ. ವೊಳ್ಳೇದು ಮುಂದಿನ ರಣಾಗ್ರವನ್ನು ನೋಡಿಕೊಳ್ಳುತ್ತೇನೆ.

ಭಾಮಿನಿ

ಯಿತ್ತ ಪಾರ್ಥನು ಹರಿಸಹಿತ ರಥವೆತ್ತಿ ಬಂದರು ಕುರುಬಲಕ್ಕೆ
ಮೊರೆವುತ್ತ ವಾದ್ಯಗಳಿಂದ ಕಂಡರು ಸೂತನಂದನನ ॥

ಅರ್ಜುನ : ಭಾವಯ್ಯ, ಕುರುಕ್ಷೇತ್ರದಲ್ಲಿ ಯೀ ದಿನ ವೈರಿಯಾದ ಕರ್ಣನನ್ನು ಕಂಡ ಹಾಗಾಯಿತು. ಕಾಳಗಕ್ಕೆ ಕೈಗೊಡುತ್ತೇನೆ ನೋಡಿರಿ. ಯಲಾ ಕರ್ಣ ಹೇಳುತ್ತೇನೆ ಕೇಳು ॥

ಪದ

ಕರದೊಳು ಧನುವಾಂತಾಕ್ಷಣ ನರ ತಾ ಕರೆದನು ತರಣಿಜನ
ಕೇಳೆಲೆ ಸೂತಜ ಮುರಿವೆನು ನಿನ್ನಯ ಗರ್ವ ನಾ ಬಲ್ಲೆ ॥

ಅರ್ಜುನ : ಹೇ ತರಣಿಜನಾದ ಕರ್ಣನೆ ಹೇ ಮರುಳೆ ಸೂತಜ. ನಿನ್ನ ಗರ್ವವನ್ನು ಮುರಿಯುವುದಕ್ಕೆ ಕರದಲ್ಲಿ ಶರಗಳನ್ನು ತೆಗೆದುಕೊಂಡು ಬಂದಿರುತ್ತೇನೆ. ಯುದ್ಧಕ್ಕೆ ಸನ್ನದ್ಧನಾಗೊ. ದಗಡಿ.

ಕರ್ಣ : ಯಲಾ ಅರ್ಜುನ ಶಹಬ್ಬಾಷ್ ಮೂದೇವಿ ಹೇಳುತ್ತೇನೆ ॥

ಪದ

ಬಲ್ಲೆನೆಲವೊ ಕಡು ಪಾತಕಿ ನಿನ್ನ ಹುಲ್ಲೆಯವ ತಾನು
ಎಲ್ಲಡಗಿದೆ ಧರ್ಮಜ ರಣಗಳ್ಳನೆ ನೀನೆಂದ ॥

ಕರ್ಣ : ಯಲಾ ಕಡುಪಾತಕಿಯಾದ ಪಾರ್ಥನೆ ಕೇಳು. ನಿನ್ನ ಪರಾಕ್ರವನ್ನು ನಾನು ಬಲ್ಲೆ. ನಿನ್ನೆಯ ದಿವಸ ನಿಮ್ಮ ಅಣ್ಣನಾದ ಧರ್ಮಜನನ್ನು ನನ್ನಲ್ಲಿಗೆ ಕಳುಹಿಸಿ ರಣಗಳ್ಳನೆ ಯೆಲ್ಲಿಗೆ ಕದ್ದು ಹೋಗಿದ್ದೆ. ಯೀ ಕರ್ಣನ ಪರಾಕ್ರಮವನ್ನು ತೋರಿಸುತ್ತೇನೆ ನೋಡು ॥

ಅರ್ಜುನ : ಯಲಾ ಕರ್ಣ ನಾನು ರಣಗಳ್ಳನೊ ಮೂದೇವಿ ಹೇಳುತ್ತೇನೆ ಕೇಳು.

ಪದ

ಕಿರಿಕುಲದವ ಕೇಳ್ ಯಿಂದಿದು ನೀನು ಧುರಕಿದಿರಾದುದು
ಕುರುವೆಳೆದರ್ಬೆಯನರಸಿದ ತೆರದೊಳು ಹರುಷಗಳಾಯ್ತೆಂದ ॥

ಅರ್ಜುನ : ಹೀನಕುಲದಲ್ಲಿ ಹುಟ್ಟಿದ ಶ್ವಾನನಾದ ಕರ್ಣನೆ, ಯಿವತ್ತಿನ ಧುರದಲ್ಲಿ ನೀನು ದೊರೆತದ್ದು ಹ್ಯಾಗಾಯಿತೆಂದರೆ ಹಸಿದಿರತಕ್ಕ ಗೋವಿಗೆ ಎಳೆಯ ಹುಲ್ಲು ಕಂಡರೆ ಹರ್ಷವಾಗುವುದು. ನಿನ್ನ ಪಾಡು ಕಾಡು ಪಾಲಾಗುವುದೊ ಕರ್ಣ.

ಕರ್ಣ : ಯಲಾ ಪಾಮರ, ಯೀ ದಿವಸ ನನ್ನ ಕಾಡುಪಾಲು ಮಾಡುವೆಯ ಯಿರಲಿ ಹೇಳುತ್ತೇನೆ.

ಪದ

ಕಲಿಪಾರ್ಥನೆ ನೀ ದೊರೆತುದು ಯಿಂದಿನಲಿ ಪರಿತೋಷಗಳಾಯ್ತು
ಪಶು ದೊರೆತಂತಾಯಿತು ಹಸಿದಿಹ ವ್ಯಾಘ್ರನಿಗೆ ॥

ಕರ್ಣ : ಯಲಾ ಅರ್ಜುನ, ನಾನು ನಿನಗೆ ದೊರಕಿದ್ದು ಹಸಿದಿರತಕ್ಕ ಗೋವಿಗೆ ಹುಲ್ಲು ಸಿಕ್ಕಿದಂತೆ ಆಯಿತೊ ವೊಳ್ಳೇದು. ಆದರೆ ನನ್ನ ಕೈಗೆ ನೀನು ಸಿಕ್ಕಿದ್ದು ಹಸಿದಿರತಕ್ಕ ವ್ಯಾಘ್ರನಿಗೆ ಗೋವು ಸಿಕ್ಕಿದಂತೆ ಹರುಷವಾಯಿತು. ಕಡೆಗೆ ನಿನ್ನ ಪಾಡು ಯೇನಾಗುವುದು ನೋಡಿಕೊಳ್ಳುವಂಥವನಾಗು.

ಅರ್ಜುನ : ಯಲಾ ಕರ್ಣ ಯಲಾ ಕಳ್ಳ ಹೇಳುತ್ತೇನೆ ॥

ಪದ

ರಣಚೋರನು ನೀನೆಂಬುದ ಬಲ್ಲೆನು ತರಳನ ಕೋಟೆಯಲಿ
ಧುರ ಕಾಣದೆ ಹಿಂ ಮುಖದೊಳು ನಿಂತು ಕರವನು ತರಿದುದನು ॥

ಅರ್ಜುನ : ಯಲಾ ಕರ್ಣ, ಚಕ್ರವ್ಯೆಹ ಕೋಟೆಯಲ್ಲಿ ನನ್ನ ಮಗುವಾದ ಅಭಿಮನ್ಯು ಖಾಡಾ ಖಾಡಾ ಯುದ್ಧವನ್ನು ಮಾಡುವಂಥ ಕಾಲದಲ್ಲಿ ಮುಂದೆನಿಂತು ಕಾದಲಾರದೆ, ಹಿಂದೆ ನಿಂತು ನಾರಿಯಂತೆ ಶರಗಳನ್ನು ಹೂಡಿ ಕರಗಳನ್ನು ಹರಿಸಿದಂತವನಾದೆ. ಹೇ ರಣಗಳ್ಳ ನನ್ನ ಮಗುವಿನ ಕೈ ಕತ್ತರಿಸುವುದಕ್ಕೆ ನಿನಗೆ ಮನಸ್ಸು ಹೇಗೆ ಬಂದಿತು ಮೂದೇವಿ.

ಕರ್ಣ : ಯಲಾ ಅರ್ಜುನ, ನಾನೇನೊ ಶಿಶುಹತ್ಯೆಗೆ ಅಂಜಿ ಕರಗಳನ್ನು ಕತ್ತರಿಸಿದ್ದು ಖರೆ, ಯೀಗ ಯರಡು ಗಳಿಗೆಗಿನ್ನ ಮುಂಚೆ ನೀನು ಮಾಡಿರತಕ್ಕ ಕೆಲಸ ಹೇಳುತ್ತೇನೆ ಕೇಳು.

ಪದ

ಯಳೆ ಕೂಸಂಬುದನರಿಯದೆ ರಣದೊಳು ತರಿದೆನ್ನೆಯ ಸುತನಾ
ಕುರಿ ನಿನ್ನನು ನಾ ಖಂಡ್ರಿಸದಿದ್ದರೆ ತರಣಿಜನಲ್ಲೆಂದ ॥

ಕರ್ಣ : ಯಲಾ ಅರ್ಜುನ, ಹೇ ನಿಷ್ಕರುಣಿ. ನನ್ನ ಮಗುವಾದ ವೃಷಸೇನನನ್ನು ಸಣ್ಣ ಮಗುವೆಂದು ನೋಡದೆ ಶಿಶುಹತ್ಯಕ್ಕೆ ಅಂಜದೆ ಕೊಂದಂಥವನಾದೆ. ಹೇ ಮಂದಮತಿ ನರಕುರಿಯಂತಿರುವ ನಿನ್ನ ಶಿರವನ್ನು ಯೀ ದಿವಸ ಖಂಡ್ರಿಸದೆ ಹೋದರೆ ನಾನು ಕರ್ಣನೆ ಸೂರ‌್ಯನ ಮಗನೆ, ನನ್ನ ಪರಾಕ್ರಮವನ್ನು ನೋಡುವನಾಗು.

ಅರ್ಜುನ : ಯಲಾ ಕರ್ಣ ಯೀ ದಿವಸ ನನ್ನ ತಲೆಯನ್ನು ಖಂಡ್ರಿಸುವೆಯೊ ಕುನ್ನಿ. ಸನ್ನಿ ಹಿಡಿಯಿತೆ ಹೇಳುತ್ತೇನೆ ಕೇಳುವಂಥವನಾಗು.

ಪದ

ಯೆನುತಾರ್ಭಟಿಸುತ ಕಲಿಪಾರ್ಥನು ರಥವನು ಹರಿಸುತಲಾಕ್ಷಣದಿ
ಶರ ಮಳೆಯನು ಕರೆದನು ಕೋಪದಿ ತರಣಿಸುತನ ಮೇಲೆ ॥

ಅರ್ಜುನ : ಯಲಾ ಕರ್ಣ, ಎಷ್ಟು ಹೊತ್ತು ನಿನ್ನ ಮುಖವನ್ನು ನೋಡುವುದು. ದುರುಳನೆ ನರಳುವಂತೆ ಶರಮಳೆಯನ್ನು ಕರೆದಿರುತ್ತೇನೆ, ತರಹರಿಸಿಕೊಳ್ಳುವಂಥವನಾಗು.

ಕರ್ಣ : ಯಲಾ ಅರ್ಜುನ ಹೇಳುತ್ತೇನೆ.

ಪದ

ಎಚ್ಚಂಬುಗಳನು ಖಂಡ್ರಿಸಿ ಕರ್ಣನು ಕೆಚ್ಚುಗೊಳುತ ಮುದದಿ
ಹೊಸ ಕೂರ್ಗಣೆಯನು ಯಸೆದನು ಅಚ್ಚುತನಿಗೆ ಸಹಿತ ॥

ಕರ್ಣ : ಯಲಾ ಅರ್ಜುನ, ನೀನು ಬಿಟ್ಟ ಶರಗಳನ್ನು ಪರಿಹರಿಸಿಕೊಂಡು ಭೋರ್ಗರೆಯುವ ಹೊಸ ಕೂರ್ಗಣೆಗಳನ್ನು ಅಚ್ಚುತನಿಗೂ ಸಹ ಅಭಿಮಂತ್ರಿಸಿ ಬಿಟ್ಟಿರುತ್ತೇನೆ. ತರಹರಸಿಕೊಳ್ಳುವಂಥವನಾಗು.

ಅರ್ಜುನ : ಯಲಾ ಕರ್ಣ, ಚಿಂತೆಯಿಲ್ಲ ಹೇಳುತ್ತೇನೆ ಕೇಳುವಂಥವನಾಗು.

ಪದ

ಬರುವಾಸ್ತ್ರಗಳನ್ನು ತರಿವುತ ಪಾರ್ಥನು ಬರಸಿಡಿಲಂದದಲಿ
ಶರವ ಬಿಡೆ ಮೈಯ್ಯಳು ನಾಂಟಿತು ರವಿಜಗೆ ತರಹರಿಸಿದನಾಗ ॥

ಅರ್ಜುನ : ಯಲಾ ಕರ್ಣ, ನೀನು ಬಿಟ್ಟ ಕೂರ್ಗಣೆಗಳನ್ನು ಖಂಡ್ರಿಸಿ ಬರಸಿಡಿಲಿನೋಪಾದಿಯಲ್ಲಿ ಆರ್ಭಟಿಸುವ ಶ್ಯಾರ್ಜನಗಳನ್ನು ನಿನ್ನ ಶರೀರ ಮುಸುಕುವಂತೆ ಪ್ರಯೋಗಿಸಿ ಯಿರುತ್ತೇನೆ, ತರಹರಿಸಿಕೊಳ್ಳುವಂಥವನಾಗು.

ಕರ್ಣ : ಯಲಾ ಅರ್ಜುನ, ನೀನು ಪ್ರಯೋಗಿಸಿದ ಬರಸಿಡಿಲಿನಂತೆ ಆರ್ಭಟಿಸುವ ಶ್ಯಾರ್ಜನ್ಯಗಳನ್ನೂ ಪರಿಹರಿಸಿಕೊಂಡಿದ್ದೇನೆ. ಪಾರ್ಥ ನಿನ್ನ ಸಾಹಸ ಯಿಷ್ಟೆ ಅಹುದೋ ನನ್ನ ಸಾಹಸವನ್ನೂ ಯೀಗ ತೋರಿಸುತ್ತೇನೆ ನೋಡು.

ಪದ

ಹೂಡಿ ಧನುವಿಂಗೆ ಬರಸೆಳೆದು ಆರ್ಭಟಿಸುತಲಿ
ನರಶಿರಕೆ ಗುರಿಯನು ನೋಡಿ ಸರ್ಪಾಸ್ತ್ರ ಬಾಣವನು ಹೂಡುತ ತಾನು ॥

ಕರ್ಣ : ಅಯ್ಯ ಶಲ್ಯ ನೃಪಾಲನೆ, ಆರ್ಭಟಿಯಿಂದ ಅಹಿತರೆದೆ ತಲ್ಲಣಿಸುವ ಯೀ ಸರ್ಪಾಸ್ತ್ರವನ್ನು ವೈರಿಯಾದ ಸವ್ಯಸಾಚಿಯ ಶಿರಸ್ಸಿಗೆ ಶಿಸ್ತು ಯಿರಿಸಿದ್ದೇನೆ ನೋಡಯ್ಯ ಶಲ್ಯ ಭೂಪತಿ.

ಪದ

ನರನ ಶಿರವನು ತರಿದು ಬಿಡುವೆನು ನೋಡೆನುತ
ಯಮಜನಿಲಜರು ಸಹಿತ ಸೇವಿಪರು ವಿಷವನ್ನೂ
ತುರುಗಾಯ್ವ ಗೊಲ್ಲನ ಕೊಲ್ಲಬಹುದೈಯ್ಯ ॥

ಕರ್ಣ : ಅಯ್ಯ ಶಲ್ಯ ನೃಪಾಲನೆ, ಯೀ ಶರದಿಂದಲೆ ನರನ ಶಿರವು ಹರಿದು ಹೋಗುವುದು. ಯಿವನ ತಲೆ ಹೋದ ಬಳಿಕ ಧರ್ಮರಾಯ ಭೀಮ ನಕುಲ ಸಹದೇವ ಯಿವರು ವಿಷವನ್ನು ಭುಂಜಿಸಿ ಅವರ ಸ್ವಯಿಚ್ಛೆಯಿಂದಲೆ ಪ್ರಾಣವನ್ನು ಬಿಡುವರು. ಅನಂತರ ದನಕಾಯುವ ಕೃಷ್ಣ ವಬ್ಬ ವುಳಿಯುವನು. ಅವನನ್ನು ಮರ್ಧಿಸುವುದು ನನ್ನ ಮನಸ್ಸಿನಲ್ಲಿ ಯಿಲ್ಲ. ಧರಣೀಪತಿಯಾದ ಕುರುಕುಲೇಂದ್ರನಿಗೆ ರಾಜ್ಯಲಕ್ಷ್ಮಿಯೆಂಬ ಸಿರಿಯು ಶಾಶ್ವತವಾಗಿ ಸೆರೆಯಲ್ಲಿ ಬಿದ್ದಿರುವಳಲ್ಲಯ್ಯ ಶಲ್ಯ ಭೂಪತಿ.

ಭಾಮಿನಿ

ಮೆಚ್ಚಿದೆನು ರವಿಸುತನೆ ಬಾಣವು ಯಿತ್ತಪ್ಪುದು ಧರಣಿಯನು
ರಾಯಗೆ ಕೀರ್ತಿ ಬರುವುದು ನಿನಗೆ ಆದರೆ ಕೊರತೆಯೊಂದುಂಟು ॥

ಶಲ್ಯ : ಅಯ್ಯ ಕರ್ಣ ನಿನ್ನ ಸಾಹಸಕ್ಕೆ ಮೆಚ್ಚಿದಂಥವನಾದೆ. ನಿನಗಿಂತ ಮುಂಚಿತವಾಗಿ ಯೀ ಸರ್ಪಾಸ್ತ್ರ ಬಾಣವು ರಾಷ್ಟ್ರಾಧಿಪನಿಗೆ ಜಯವನ್ನುಂಟು ಮಾಡಬೇಕೆಂದು ಕಾಯ್ದುಕೊಂಡಿರುವುದು. ಆದರೆ ನಿನಗೆ ವೊಂದು ಕೊರತೆವುಂಟಲ್ಲಯ್ಯ ಕರ್ಣ.

ಕರ್ಣ : ಅಯ್ಯ ಶಲ್ಯ ಭೂಪತಿ ಅಂಥಾ ಕೊರತೆಯೇನು ಹೇಳುವನಾಗು.

ಪದ

ವೀರನಾರಾಯಣನು ಸಾರಥಿಯು ನರನಿಗೆ
ಧಾರುಣಿಯನೊತ್ತುವನು ಪಾರ್ಥನುಳುವಿಂಗೆ ॥

ಶಲ್ಯ : ಅಯ್ಯ ಕರ್ಣ, ನರನ ಶಿರಸ್ಸಿಗೆ ಯೀ ಶರವನ್ನೂ ಗುರಿಯಿಟ್ಟಿರುವೆ. ಆದರೆ ಪಾರ್ಥನ ಸಾರಥಿಯಾದ ಶ್ರೀಮನ್ನಾರಾಯಣನು ತನ್ನ ಸದ್ಭಕ್ತನ ಪ್ರಾಣವನ್ನು ವುಳಿಸಿಕೊಳ್ಳುವುದಕ್ಕೆ ರಥವನ್ನು ಪಾತಾಳಕ್ಕೆ ತುಳಿಯುವನು. ವೈರಿಯ ಶಿರಕ್ಕಿಟ್ಟ ಗುರಿಯು ಮೀರಿ ಹಾರುವುದಲ್ಲಯ್ಯ ಕರ್ಣ ಆಮೇಲೆ ಯೇನು ಮಾಡುವೆ.

ಕರ್ಣ : ವೊಳ್ಳೇದು, ಯೀ ಕಾಲದಲ್ಲಿ ಮತ್ತಿನ್ನಾವ ಸನ್ನಾಹವನ್ನು ಮಾಡಬೇಕಯ್ಯ ಶಲ್ಯ ಭೂಪತಿ.

ಪದ

ಕೊರಳಿಗೊಡ್ಡಿದ ಶರ ವುರಕೆ ಸೇರಿಸು ನರನ ಹರಿದು ಪೋಪುದು
ಕೊರಳು ಹರಿಗೆ ಅಸದಳವು ॥

ಶಲ್ಯ : ಅಯ್ಯ ಕರ್ಣ, ನರನ ಶಿರಸ್ಸಿಗೆ ಗುರಿಯಿಟ್ಟಿರುವ ಯೀ ಶರವನ್ನೂ ತೆಗೆದು ವುರಕ್ಕೆ ಸೇರಿಸಿ ಗುರಿಹಿಡಿದು ಹೊಡೆದರೆ ಶ್ರೀಹರಿಗೂ ಅಸಾಧ್ಯವಾಗಿ ವೈರಿಯ ಶಿರಸ್ಸು ಯೀ ಶರದಿಂದಲೆ ಧರೆಗೆ ಬಿದ್ದು ಹೋಗುವುದಯ್ಯ ಕರ್ಣ.

ಪದ

ಧರಣಿಯೊಳು ನಿನಗಿನ್ನೂ ಸಮರಿಲ್ಲೆನ್ನಿಸಿಕೊಂಬೆ
ಬರುವುದೆನಗೆಯು ಕೀರ್ತಿ ದೊರೆಯೇ ನೀನೆಂದ ॥