ಪದ

ಕುರುಪತಿ ಮೊದಲಾದವರ ಮೇಲಿಲ್ಲದ ಹಗೆ ದೇವ ಕೇಳೈ
ಯೀ ತರಣಿಸುತನ ಮೇಲೆ ಯಾತಕ್ಕೆ ಬಂದಿತು ದೇವ ಕೇಳೈ ॥

ಅರ್ಜುನ : ಹೇ ಭಾವಯ್ಯ, ಕುರುಪತಿಯಾದ ಕೌರವೇಶ್ವರನೆ ಮೊದಲಾದ ನೂರೊಂದು ಜನ ಸಹೋದರರ ಮೇಲೆ ಯಿಲ್ಲದಂಥ ಹಗೆತನವು, ಯೀ ರವಿಸುತನಾದ ಕರ್ಣನ ಮೇಲೆ ಯಾತಕ್ಕೆ ಬಂದದ್ದಾಯಿತು. ಯಿದರ ವಿಸ್ತಾರವನ್ನು ಸಾಂಗವಾಗಿ ಹೇಳುವರಾಗಿರಿ ಭಾವಯ್ಯ.

ಭಾಮಿನಿ

ಯಂದ ಮಾತನು ಕೇಳಿ ಮುರಹರಿ ಸರಿದ ಪಾರ್ಥನು ಮೋಹಪಾಶಕೆ
ಯಿಂದಿದಕೆ ತೆರನೇನೆನುತ ಪೇಳಿದ ಹರಿಯು ಪಾರ್ಥನೊಳು ॥

ಕೃಷ್ಣ : ಆಹಾ ಯೇನು ಮಾಡಲಿ. ಯೀ ಅರ್ಜುನನು ಭ್ರಾಂತಿ ಮಾತಿಗೆ ವಳಗಾಗಿ ಧುರದಲ್ಲಿ ಅಪಜಯವನ್ನು ಹೊಂದಿ ನರಳುತ್ತ ಬಿದ್ದಿರುವ ಯೀ ಕರ್ಣನ ಪ್ರೀತಿ ಮಾತಿಗೆ ಮರುಳಾದನಲ್ಲಾ. ಯಿದಕ್ಕೆ ಯಾವ ಹದನವನೂ ಮಾಡಲಿ ॥

ಭಾಮಿನಿ

ಮಂದಮತಿ ನೀನ್ಯಾರು ಸೂತನಂದನ ಯಿವನ್ಯಾರು
ಸಿಂಹಕೆ ಸರಿಯಹುದೆ ಮೂಢ ಕೇಳೆಂದ ॥

ಕೃಷ್ಣ : ಹೇ ಮಂದಮತಿಯಾದ ಪಾರ್ಥನೆ, ನಿನಗೇನು ಮರುಳು ಹಿಡಿಯಿತು. ಸೂತಜನಾದ ಕರ್ಣನು ಯಾರೆಂಬುದನ್ನು ತಿಳಿಯದೆ ಚಿಂತಿಸುತ್ತಿರುವೆಯ. ಹಂದಿಯಂತೆ ಯಿರುವ ಕರ್ಣನು ಸಿಂಹಕ್ಕೆ ಸಮಾನವಾದ ನಿನ್ನಂತೆಯೆ ಭಾವಿಸುತ್ತಿರುವೆಯಲ್ಲಾ ಪಾರ್ಥ ನೀ ಬದುಕಿದ್ದು ವ್ಯರ್ಥ.

ಪದ

ನರನೆ ಕೇಳೊ ಧರ್ಮಜನ ಜರಿದು ಮೂದಲಿಸಿದ
ರಣಪರಾಕ್ರಮಿ ಕರ್ಣ ಪರಮ ಬಾಂಧವನೆ ॥

ಕೃಷ್ಣ : ಹೇ ಅರ್ಜುನ, ಹಿಂದೆ ನೀನು ಪಾತಾಳ ಲೋಕಕ್ಕೆ ಸಮಸಪ್ತಕರ ಮೇಲೆ ಯುದ್ಧಕ್ಕೆ ಹೋಗಿದ್ದ ಕಾಲದಲ್ಲಿ ಕರ್ಣನ ಮೇಲೆ ಯುದ್ಧಕ್ಕೆ ನಿಮ್ಮ ಅಣ್ಣನಾದ ಧರ್ಮರಾಯನನ್ನು ಕಳುಹಿಸಿರಲಿಲ್ಲವೆ. ಯೀ ಕರ್ಣನು ಧರ್ಮಜನನ್ನು ಸೋಲಿಸಿ ಭೂಮಿಗೆ ಕೆಡವಿ ಕಾಲಿನಿಂದ ವದ್ದು ಮೂದಲಿಸಿ ಮಾನವನ್ಮು ಕಳೆದಂಥ ಕರ್ಣನು, ನಿನಗೆ ಪರಮ ಬಾಂಧವನಾಗಬೇಕೆ ಪಾರ್ಥ ನಿನ್ನ ಬುದ್ದಿ ವ್ಯರ್ಥ.

ಪದ

ಪೋಗಲಿ ನಿನ್ನಯ ನಂದನನ ಹಿಂದೆ ಮೋಸದಿ ನಿಂತು ಕರವ ಕತ್ತರಿಸಿ ॥

ಕೃಷ್ಣ : ಹೇ ಮಂದಮತಿಯಾದ ಪಾರ್ಥನೆ, ಯಿದುವರೆವಿಗೂ ನಿನಗೆ ಹೇಳಿದ ಮಾತುಗಳೆಲ್ಲ ಹಾಗಿರಲಿ. ಹಿಂದೆ ಕರ್ಣನು ಚಕ್ರವ್ಯೆಹದ ಕೋಟೆಯಲ್ಲಿ ನಿನ್ನ ಮಗುವಾದ ಅಭಿಮನ್ಯುವನ್ನು ಹಿಂದೆ ನಿಂತು ಮೋಸದಿಂದ ಕರವನ್ನು ಕತ್ತರಿಸಲಿಲ್ಲವೆ, ಅಂಥಾ ಪಾತಕಿಯು ನಿನಗೆ ಪರಮಬಾಂಧವನಾಗಬೇಕೆ ಪಾರ್ಥ ನಿನ್ನ ಜನ್ಮ ವ್ಯರ್ಥ ॥

ಭಾಮಿನಿ

ಅರೆ ಮೆಚ್ಚಿದೆ ಧರ್ಮ ನೀತಿಯ ನರನ ಮುಖದಲಿ ತಿಳಿದೆ
ಮೂಢರು ನಾವು ಕಲಿ ಧನಂಜಯನೆಂದ ಮುರವೈರಿ

ಕೃಷ್ಣ : ಹೇ ಅರ್ಜುನ, ಯಿದುವರೆವಿಗೂ ನೀನು ನನ್ನ ಸಂಗಡ ಹೇಳಿದ ಮಾತುಗಳೆಲ್ಲವೂ ಧರ್ಮನೀತಿ ಮಾತುಗಳೆಂದು ಹೇಳುತ್ತಿರುವೆ. ನೀನೇ ಧರ್ಮನೀತಿಗಳನ್ನು ಬಲ್ಲವನು. ನಾವು ಯೇನೂ ತಿಳಿಯದ ಮೂಢರು ಹೇಳುತ್ತೇನೆ ಕೇಳು.

ಭಾಮಿನಿ

ಕೊಲುವೆಯೊ ಕರ್ಣನನು ನೀ ಕೊಲ್ಲದಿದ್ದರೆ
ಪವನಜಾತನ ತಂದು ಕೊಲಿಸುವೆ ಅವನು ಕೊಲ್ಲದಿರೆ
ನಾನೇ ಕೊಲುವೆನು ಚಕ್ರದೊಳಗೆಂದ ॥

ಕೃಷ್ಣ : ಯಲಾ ಅರ್ಜುನ, ನಿನ್ನ ಧರ್ಮದ ನೀತಿ ಮಾತುಗಳು ಹಾಗಿರಲಿ. ಯೀ ಖೂಳ ಕರ್ಣನನ್ನೂ ನೀನು ಸಂಹಾರ ಮಾಡುವೆಯೊ ಯಿಲ್ಲವೊ ಹಾಗೆ ನೀನು ಕೊಲ್ಲದೆ ಯಿದ್ದರೆ ಪವನಜನಾದ ಭೀಮನಿಂದ ಕೊಲ್ಲಿಸುತ್ತೇನೆ. ಅವನು ನಿನ್ನ ಹಾಗೆ ಪ್ರತ್ಯುತ್ತರವನ್ನು ಕೊಟ್ಟರೆ ನಾನೇ ನನ್ನ ಚಕ್ರದಿಂದ ಸಂಹರಿಸಿ ಬಿಡುತ್ತೇನೆ ನೋಡು.

ಭಾಮಿನಿ

ಯೆನುತ ಹರಿ ಜರಿಯಲ್ಕೆ ಪಾರ್ಥನು ಹರಿಯ ಚರಣಕ್ಕೆ ನಮಿಸಿ
ಪಾಪಕೆ ಹೊರಗೆ ನಾನೆಲೆ ದೇವ ಯೆನುತ ತುಡುಕಿದನು ಧನುವ ॥

ಅರ್ಜುನ : ಭಾವಯ್ಯ ಶ್ರೀಹರಿ ತಮ್ಮ ಪಾದಕ್ಕೆ ನಮಸ್ಕರಿಸುವೆನು. ಯೀ ನಿನ್ನ ವಾಕ್ಯವನ್ನು ಕೇಳಿ ನನ್ನ ಮನಸ್ಸಿನ ದುಗುಡವೆಲ್ಲವನ್ನು ತಮ್ಮ ಪಾದಕ್ಕೆ ಅರ್ಪಿಸಿರುತ್ತೇನೆ. ಯೀ ರವಿಜನಾದ ಕರ್ಣನ ಮೇಲೆ ಯುದ್ಧಕ್ಕೆ ಸನ್ನದ್ಧನಾಗುತ್ತೇನೆ. ಕರ್ಣನಿಂದುಂಟಾಗುವ ದೋಷ ಹತ್ಯಕ್ಕೆ ನೀನೇ ಪಾತ್ರನಲ್ಲದೆ ನನ್ನದೇನೂ ಯಿರುವುದಿಲ್ಲ. ಯಿಗೋ ಕರಕ್ಕೆ ಶರವನ್ನು ತೆಗೆದುಕೊಳ್ಳುತ್ತೇನೆ.

ಪದ

ಕಡುಪಾತಕಿ ಕೇಳೆಲವೊ ನಿನ್ನ ಪಡದಾಕೆಗೆ ಪೇಳೆಲವೊ
ಪೊಡವಿಗುರುಳಿಸುವೆನು ಶಿರವ ಯೆನುತೆಚ್ಚನು ತರಣಿಜನ ॥

ಅರ್ಜುನ : ಹೇ ಪಾತಕಿಯಾದ ಕರ್ಣನೆ, ನಿನ್ನ ಹೆತ್ತವಳ ಸ್ಮರಣೆಯನ್ನು ಮಾಡುತ್ತ ಯುದ್ಧಕ್ಕೆ ಸನ್ನದ್ಧನಾಗು. ಯೀ ದಿನ ರಣದಲ್ಲಿ ನಿನ್ನ ತಲೆಯನ್ನು ಕತ್ತರಿಸಿ ಬಿಡುತ್ತೇನೆ. ಯಿಗೋ ಬಾಣವನ್ನು ಬಿಡುತ್ತೇನೆ.

ಪದ

ಕಕುಲಾತಿಯು ದೊರಕಿದುದೆ ಕ್ಷಣ ಪುರುಸತ್ತು ಕೊಡದೆ ಸೈರಿಸದೆ
ಅಸ್ತ್ರವ ಕರೆದೆಯೊ ಪಿಸುಣ ಯೆನುತೆಚ್ಚನು ಶರವನು ಕರ್ಣ ॥

ಕರ್ಣ : ಯಲಾ ಪಾಪಿಯಾದ ಅರ್ಜುನನೆ, ಆ ಗೊಲ್ಲನ ಕಕುಲಾತಿಯ ಮಾತುಗಳನ್ನು ಕೇಳಿ ಅಬಲನಾದ ನನಗೆ ವೊಂದು ಕ್ಷಣ ಪುರುಸತ್ತು ಕೊಡದೆ ಬಾಣ ಪ್ರಯೋಗ ಮಾಡಿರುವೆಯ. ನೀನು ಬಿಟ್ಟಿರುವ ಬಾಣವನ್ನೂ ಖಂಡ್ರಿಸಿ ನಿನ್ನ ಮೇಲೆ ಪ್ರತಿಯಾಗಿ ಬಾಣವನ್ನು ಬಿಟ್ಟಿರುತ್ತೇನೆ ತರಹರಿಸುವನಾಗು.

ಪದ

ನರನಾಕ್ಷಣ ಕಡು ಮುಳಿದು ಶರಮಳೆಯನು ಕರೆದನು
ಮೇಲ್ವರಿದು ತರಣಿಜ ಕೈಗುಂದಿದನು
ಶರವರುಷದೊಳಗೆ ಮುಳುಗಿದನು ॥

ಅರ್ಜುನ : ಯಲಾ ಕರ್ಣ, ನೀನು ಅಬಲಸ್ಥನೆಂದು ಕೈ ಚಳಕವನ್ನು ನಿಲ್ಲಿಸಿದ್ದಕ್ಕೆ ನಿನಗಿಂತಾ ಪರಾಕ್ರಮವು ಬಂತೆ. ಹೇ ತಬ್ಬಲಿಯಾದ ಕಬ್ಬಲಿಗ, ನೀನು ನಿನ್ನ ಸೇನೆಯು ನಿನ್ನ ರಥವು ಸಹ ಪುಡಿಪುಡಿಯಾಗುವಂಥ ಅಸ್ತ್ರವನ್ನು ಬಿಟ್ಟಿರುತ್ತೇನೆ ತರಹರಿಸಿಕೊಳ್ಳುವನಾಗು.

ಭಾಮಿನಿ

ಅಕಟಕಟ ಕೈಗುಂದಿದೆನು ಹರಹರ ಪ್ರಕಟಿಸಿತೆ ಅಪಜಯವು
ಒಡೆಯಗೆ ಕೃಪಣನಾದೆನು ಯೆನುತ ಕಡುಚಿಂತಿಸಿದ ಕರ್ಣ ॥

ಕರ್ಣ : ಅಯ್ಯೋ ಹರಹರ, ಯೀ ದಿನ ಯುದ್ಧದಲ್ಲಿ ನನಗೆ ಅಪಜಯ ಬಂದ ಹಾಗಾಯಿತಲ್ಲ. ಯಿದುವರೆವಿಗೂ ನನ್ನನ್ನು ಸಲಹಿಕೊಂಡಿದ್ದ ಕೌರವೇಶ್ವರನಿಗೆ ಅಪಕೀರ್ತಿಯನ್ನು ತಂದಂಥವನಾದೆನಲ್ಲಾ ಹಾ ಶಂಕರ ಹಾ ಗೌರೀಶ ಮುಂದೇನು ಗತಿ.

ಭಾಮಿನಿ

ಹರಿಗೆ ಪೇಳುವೆನೆಂದಡಾತನು ನರನ ತಡೆಯದೆ ಕೊಲ್ಲ ಪೇಳಿದ
ಹರಗೆ ಪೇಳುವೆನೆಂದಡಾತನು ಹಗೆಗೆ ಬಾಣವನಿತ್ತ
ಧರೆಗೆ ಪೇಳುವೆನೆಂದಡಾತನು ಪುರುಷ ಸಾರಥಿಯಾಗಿ ಕುಳಿತಿಹ
ಒರೆವೆ ಯಿಂದ್ರಗೆಂದಡೆಯು ಆತನ ಮಗನೆ ಕಲಿ ಪಾರ್ಥ ॥

ಕರ್ಣ : ಅಯ್ಯೋ ಹರಹರ, ನನಗಿಂಥ ದುರವಸ್ಥೆಯು ವದಗಿರುವದಲ್ಲಾ. ನನ್ನ ಕಷ್ಟವನ್ನು ಯಾರಿಗೆ ಹೇಳಿಕೊಳ್ಳಲಿ. ಮುರವೈರಿಯಾದ ಕೃಷ್ಣನಿಗೆ ಹೇಳಿಕೊಳ್ಳೋಣವೆಂದರೆ ಆ ಕೃಷ್ಣನು ನರನಾದ ಅರ್ಜುನನಿಗೆ ನನ್ನನ್ನೂ ಕೊಲ್ಲುಯೆಂದು ಮೊದಲೇ ಹೇಳಿರುವನು. ಪರಮೇಶ್ವರನಿಗೆ ಹೇಳೋಣವೆಂದರೆ ನನ್ನ ವೈರಿಯಾದ ಅರ್ಜುನನಿಗೆ ಮೊದಲೇ ಬಾಣವನ್ನು ಕೊಟ್ಟಿರುವನಲ್ಲಾ. ಹಾ ದೈವವೆ ಮುಂದೇನು ಮಾಡಲಿ.

ಭಾಮಿನಿ

ಬಗುಳಿದರೆ ಫಲವೇನು ದೈವಕೆ ಹಗೆಯು ಆದನು ಕೌರವನು
ಅದು ನಿಮಿತ್ಯದಿ ಮರಣವಲ್ಲದೆ ವುಳಿವುದಿಲ್ಲವೆನುತ ॥

ಕರ್ಣ : ಹಾ ದೈವವೆ, ದುರಾದೃಷ್ಟವಾದ ದೈವದ ಫಲಕ್ಕೆ ಚಿಂತಿಸಿ ಫಲವೇನು. ಯೀ ಕಾರಣದಿಂದ ದೊರೆಯಾದ ಕೌರವೇಶ್ವರನೇ ನನಗೆ ಹಗೆಯಾಗುವಂಥವನಾದನು. ಯೀ ದಿನ ಧುರದಲ್ಲಿ ವೈರಿಯಿಂದ ನನಗೆ ಮರಣ ಸಂಭವಿಸದೆ ಬಿಡುವುದಿಲ್ಲ ಯಿದಕ್ಕೇನುಪಾಯ ಮಾಡಲೊ ಶಂಕರ ॥

ಭಾಮಿನಿ

ಪದುಮನಾಭನ ಪಾದಪದ್ಮವ ಹೃದಯದೊಳು ತಾನಿಟ್ಟು
ಪದವಿ ಸೇರಲಿ ಪೃಥ್ವಿ ಮಕ್ಕಳಿಗೆಂತು ಧನುವಾಂತು ॥

ಕರ್ಣ : ಹಾ ದೈವವೆ, ಯೀ ದಿನ ಸಮರದಲ್ಲಿ ನನಗೆ ಯಶೋಲಾಭವು ದೊರಕುವುದು ಯಿಲ್ಲಾ. ವೃಥಾ ದುಃಖಿಸುವುದರಿಂದ ಫಲವೇನು. ಪದುಮನಾಭನಾದ ಶ್ರೀ ಹರಿಯ ಸ್ಮರಣೆಯನ್ನು ಮನಸ್ಸಿನಲ್ಲಿ ಸ್ಮರಿಸುತ್ತಾ ವೈರಿಯಿಂದ ಮೃತಪಟ್ಟರೆ ಸ್ವಾಮಿ ಪಾದದಲ್ಲಿ ಸೇರಿ ಸೌಖ್ಯವಾಗಿರುವುದೇ ವುತ್ತಮವಾಗಿರುವುದು. ಯಲಾ ಅರ್ಜುನ ಯುದ್ಧಕ್ಕೆ ಸನ್ನದ್ಧನಾಗಿ ಬಂದಿರುತ್ತೇನೆ ತರಹರಿಸಿಕೊಳ್ಳುವನಾಗು.

ಭಾಮಿನಿ

ಶರವನುಗಿದಾಕ್ಷಣದಿ ಪಾರ್ಥನು ಬೊಬ್ಬಿರಿದು
ಹೊಡೆಯಲು ಅಸ್ತ್ರವುಗಿದುದು ಕೊಳ್ಳದಿರೆ ಭಟನ ॥

ಅರ್ಜುನ : ಭಾವಯ್ಯ ಶ್ರೀಹರಿಯೆ, ನಾನು ಪ್ರಯೋಗಿಸಿಬಿಟ್ಟ ಬಾಣವು ಕರ್ಣನ ದೇಹಕ್ಕೆ ಮುಸುಕದೆ ಹಿಂಮರಳಿ ಬಂದಿರುವುದಲ್ಲಾ ಭಾವಯ್ಯ.

ಭಾಮಿನಿ

ಹರಿಯು ತಿಳಿದಾಕ್ಷಣದಿ ಯಿವನಿಗೆ ಮರಣ ಬಹುದಿಲ್ಲೆನುತ
ವಿಪ್ರನ ತೆರದಿ ಬೇಡಿದ ಸೂತನಂದನನ ॥

ಕೃಷ್ಣ : ಆಹಾ ಯಿದೇನಾಶ್ಚರ‌್ಯ, ಯೀಗ ಪ್ರಯೋಗಿಸಿಬಿಟ್ಟ ಬಾಣವು ಕರ್ಣನ ಶರೀರಕ್ಕೆ ತಾಕದೆ ಹಿಮ್ಮರಳಿ ಬಂದಿರುವುದು. ವೃಥಾ ಹೀಗೆ ಶ್ರಮಪಟ್ಟಿದ್ದರಿಂದ ವೈರಿಗೆ ಮರಣ ಸಂಭವಿಸುವುದಿಲ್ಲ. ಆದಕಾರಣ ಯೀಗಲೆ ನಾನು ಕಪಟ ವೇಷದಿಂದ ನನ್ನ ರೂಪನ್ನು ಬದಲಾಯಿಸಿ ಬ್ರಾಹ್ಮಣವೇಷದಿಂದ ಕರ್ಣನಲ್ಲಿ ಹೋಗಿ ಅವನ ಕಿವಿಯಲ್ಲಿರುವಂಥ ಅತ್ಯಾಶ್ಚರ‌್ಯವಾದ ಕರ್ಣಕುಂಡಲವನ್ನೂ ದಾನ ತೆಗೆದುಕೊಂಡು ಬರುತ್ತೇನೆ.

ಪದರಾಗಸಾವೇರಿತ್ರಿವುಡೆ

ಸ್ವಸ್ತಿಶ್ರೀ ಮತುರಾಜಮಸ್ತಕ ಯಿತ್ತೆನಾಶೀರ್ವಾದ ನಿನಗೆಯು
ಪೃಥ್ವಿಯೊಳು ನಿನಗೆದುರು ಪೇಳು ರಣವಿಜಯಕೆಂದ ॥

ಬ್ರಾಹ್ಮಣ : ಸ್ವಸ್ತಿಶ್ರೀಮತು ಮಹಾರಾಜ ಭೂಪತಿಯೆ ಕೇಳು, ಯಿಗೋ ನಿನಗೆ ಆಶೀರ್ವದಿಸಿರುತ್ತೇನಯ್ಯ ಕರ್ಣ ಭೂಪತಿಯೆ. ದಾನ ಕೊಡುವುದರಲ್ಲಿ ತ್ಯಾಗದಲ್ಲಿ ಕರ್ಣ ಯೆಂಬ ಬಿರುದಾಂಕಿತವು ಯೀ ಭೂಮಿಯಲ್ಲಿ ನಿನ್ನ ಕೀರ್ತಿಯು ಯಲ್ಲೆಲಿಯು ಪ್ರಕಟಗೊಂಡಿರುವುದು. ಆದ್ದರಿಂದ ನಿನ್ನಲ್ಲಿಗೆ ಬಂದಿರುತ್ತೇನಯ್ಯ ಕರ್ಣಭೂಪತಿ.

ಪದ

ತ್ಯಾಗ ಮಾಳ್ಪತೆಗೀಗ ಸಮಯವು ಬೇಗ ಬಂದಿದೆ ನಿನ್ನ ಬಳಿಗೆ
ಯೀಗಲೆನ್ನಯ ಮನದಭೀಷ್ಟವ ಬೇಗ ಸಲಿಸೈ ॥

ಬ್ರಾಹ್ಮಣ : ಅಯ್ಯ ಕರ್ಣ ಭೂಪತಿ ದಾನ ಕೊಡುವುದರಲ್ಲಿ ನಿನ್ನ ಸಮಾನರಾದ ಧೀರರು ಯಾರೂ ಯಿಲ್ಲವೆಂದು ನಿನ್ನಲ್ಲಿಗೆ ಬಹಳ ದೂರದಿಂದ ಬಳಲಿ ಬಂದಿರುತ್ತೇನೆ. ನನ್ನ ಮನಸ್ಸಿನ ಯಿಷ್ಟಾನುಸಾರ ದಾನವನ್ನು ಕೊಟ್ಟು ಕೀರ್ತಿಯನ್ನು ಪಡೆಯುವನಾಗಯ್ಯ ಕರ್ಣ ಭೂಪತಿ.

ಪದ

ಮರುಳ ವಿಪ್ರನೆ ಕೇಳು ದೊರೆಯು ಸಿಂಹಾಸನದಿ
ಯಿರುವ ವೇಳೆಯೋಳ್ ಕೇಳೆ ಕೊಡುವೆನು ನಿನಗೆ
ರಣದೊಳು ನಿಂತು ನಾನು ಹಗೆಯ ಸಂಹರಿಸುವಾಗ್ಯೆ
ಕೇಳಿದರೆ ಹ್ಯಾಗೆ ನಾ ಕೊಡಲಿ ॥

ಕರ್ಣ : ಹೇ ಮರುಳೆಯಾದ ಬ್ರಾಹ್ಮಣನೆ ಕೇಳು. ಸಿಂಹಾಸನಾರೂಢನಾಗಿ ಅರಮನೆಯಲ್ಲಿರುವಾಗ್ಗೆ ದಾನವನ್ನು ಕೇಳಿದರೆ ನಿನ್ನ ಯಿಷ್ಟಾನುಸಾರ ದಾನ ಕೊಡುವುದರಲ್ಲಿ ಯಾವ ಸಂದೇಹವು ಯಿರುವುದಿಲ್ಲ. ಯೀ ಕಾಲದಲ್ಲಿ ರಣ ಭೂಮಿಯಲ್ಲಿ ನಿಂತು ಯುದ್ಧ ಮಾಡುವ ಕಾಲದಲ್ಲಿ ದಾನವನ್ನು ಕೇಳಿದರೆ ಹ್ಯಾಗೆ ಕೊಡಲಯ್ಯ ಭೂಸುರೋತ್ತಮ.

ಪದ

ತ್ಯಾಗಿಯಾದವನಿಗೆ ಮನೆಯೇನು ಮಠವೇನು
ಲೋಗರು ಬೇಡುವವೇಳೆ ಭಾಗ್ಯವಿದ್ದುದ ತಾ ಕೊಡಲು ಬಹುದಯ್ಯ ॥

ಬ್ರಾಹ್ಮಣ : ಅಯ್ಯ ಕರ್ಣಭೂಪತಿ, ದಾನವನ್ನು ಕೊಡುವ ವೀರಾಧಿವೀರನಿಗೆ ಧುರವೇನು ಅರಮನೆಯೇನು. ದಾನವನ್ನು ಬೇಡತಕ್ಕಂಥ ಬ್ರಾಹ್ಮಣೋತ್ತಮನಿಗೆ ಯೆಲ್ಲಿ ಕೊಟ್ಟರೂ ಕೀರ್ತಿಯು ವೊಂದೇ ಸಮನಾಗಿರುತ್ತೆ. ಆದಕಾರಣ ನಾನು ಬೇಡಿದ ದಾನವನ್ನು ಬೇಗನೆ ಕೊಡುವನಾಗಯ್ಯ ಕರ್ಣಭೂಪತಿ.

ಪದ

ಬೇಡು ವಿಪ್ರನೆ ನನ್ನೊಳಿರುವುದ ನೀನೀಗ
ಬೇಗದಿ ಕೊಡುವೆನು ಯೆಂದ ಕಾಮಜನಕನಿಗೆ ಅರ್ಪಿತವಾಗಲಿ ॥

ಕರ್ಣ : ಹೇ ಭೂಸುರೋತ್ತಮ, ಯೀಗ ನನ್ನಲ್ಲಿ ಯಿರುವುದರಲ್ಲಿ ನಿನ್ನ ಯಿಷ್ಟಾನುಸಾರವಾಗಿ ಯಾವುದನ್ನು ಕೇಳುವೆಯೊ, ಅದನ್ನೀಗಲೇ ಶ್ರೀಹರಿಗೆ ಅರ್ಪಿತವಾಗುವಂತೆ ಕೊಡುವೆನು. ಜಾಗ್ರತೆ ಕೇಳುವನಾಗಯ್ಯ ಭೂಸುರೋತ್ತಮ.

ಪದ

ಕೊಡುವುದಾದರೆ ಕೊಡು ಕರ್ಣಕುಂಡಲವನ್ನು
ಕೊಡು ಧಾರೆಯರೆದು ನೀನೀಗ ಪೊಡವಿಗಧಿಕವಾದ
ಪದವಿಯಾಗುವುದೆಂದು ಕಪಟವಿಪ್ರನು ನುಡಿದ ॥

ಬ್ರಾಹ್ಮಣ : ಹೇ ರಾಜೋತ್ತಮನಾದ ಕರ್ಣಭೂಪತಿಯೆ, ನನ್ನ ಯಿಷ್ಟಾನುಸಾರ ದಾನವನ್ನು ಕೊಡುವುದಾದರೆ ನಿನ್ನ ಕಿವಿಯಲ್ಲಿರತಕ್ಕ ಕರ್ಣಕುಂಡಲವನ್ನು ಧಾರಾಪೂರ್ವಕವಾಗಿ ಏಕಮನಸ್ಸಿನಿಂದ ಕೊಟ್ಟು, ಯೀ ಭೂಮಿಯಲ್ಲಿ ಅಧಿಕವಾದ ಪದವಿಯನ್ನು ಹೊಂದುವಂಥವನಾಗಯ್ಯ ಕರ್ಣಭೂಪತಿ.

ಭಾಮಿನಿ

ನೋಡಿ ಕರ್ಣನು ಮನದಿ ಹರುಷವನು ಮಾಡಿದನು
ಕುಂಡಲವ ಕಾಣ್ಬಕೆ ನಾಡಪಾಲಿಪ ಹರಿಯು ಒಬ್ಬನು
ತರಣಿ ಹೊರತಾಗಿ ರೂಢಿಯೊಳು ಮತ್ತೊಬ್ಬರರಿಯರು
ಬೇಡಲೇನೀತನು ಪರಾತ್ಪರ ಮೂರ್ತಿಯು
ಕೊಡುವೆನೀ ತೆಗೆ ತನುವ ತಾನೆಂದ ॥

ಕರ್ಣ : ಆಹಾ ಯಿದೇನಾಶ್ಚರ‌್ಯ, ಯೀ ಬ್ರಾಹ್ಮಣೋತ್ತಮನು ನನ್ನ ಕಿವಿಯಲ್ಲಿರುವ ಕರ್ಣಕುಂಡಲವನ್ನೂ ಕೇಳುತ್ತಿರುವನಲ್ಲಾ. ಕರ್ಣಕುಂಡಲವನ್ನು ಕಾಣಬೇಕಾದರೆ ಜಗದ್ರಕ್ಷಕನಾದ ನಾರಾಯಣನಿಗು ತರಣಿ ಸಂಭವನಾದ ಸೂರ‌್ಯನಿಗೂ ಯಿವರಿಬ್ಬರಿಗೂ ಗೋಚರವಾಗುವುದಲ್ಲದೆ ಮತ್ಯಾರು ತಿಳಿಯರು. ಆದಕಾರಣ ಯೀತನು ಬ್ರಾಹ್ಮಣನಲ್ಲ. ಜಗದ್ರಕ್ಷಕನಾದ ನಾರಾಯಣನೆ ಬ್ರಾಹ್ಮಣ ವೇಷಧಾರಿಯಾಗಿ ಬಂದು ಯೀ ಕರ್ಣಕುಂಡಲವನ್ನು ಕೇಳುತ್ತಿರುವನು. ಯೀಗಲೆ ನಾನು ಮನಹರುಷದಿಂದ ಕರ್ಣಕುಂಡಲವನ್ನು ಕೊಟ್ಟು ಯಿವನಿಂದಲೆ ಸದ್ಗತಿಯನ್ನು ಹೊಂದುತ್ತೇನೆ ॥

ಪದ

ಯಲವೊ ಭೂಸುರ ಕೇಳು ತಿಳಿದೆ ನಿನ್ನಯ ವಿವರ
ಜಲವಿಲ್ಲದೆ ಧಾರೆಯನು ಹ್ಯಾಗೆ ಕೊಡಲೆಂದ ॥

ಕರ್ಣ : ಅಯ್ಯ ಭೂಸುರೋತ್ತಮ, ನಿನ್ನ ಕಪಟ ಬುದ್ಧಿಯನ್ನು ನಾನು ಬಲ್ಲೆ. ನೀನು ಕೇಳುವಂತೆ ಕರ್ಣಕುಂಡಲವನ್ನು ದಾನ ಕೊಡಬೇಕಾದರೆ ಜಲವಿಲ್ಲದೆ ಧಾರೆಯನ್ನೂ ಎರೆದು ಹ್ಯಾಗೆ ಕೊಡಲಯ್ಯ ಭೂಸುರೋತ್ತಮ ॥

ಪದ

ಕದನವೀರನೆ ನಿನ್ನ ಹೃದಯದೊಳಿರುವಂಥ
ಸುಧೆಯನು ತೆಗೆದು ಧಾರೆಯೆರೆಯೆಂದ ॥

ಬ್ರಾಹ್ಮಣ : ಹೇ ರಣಶೂರನಾದ ಕರ್ಣಭೂಪತಿಯೆ ಕೇಳು. ಈ ಸ್ವಲ್ಪ ಕಾರ‌್ಯಕ್ಕಾಗಿ ಯಾತಕ್ಕೆ ಚಿಂತಿಸುವೆ. ನಿನ್ನ ಶರೀರದಲ್ಲಿರತಕ್ಕ ಅಮೃತಕಲಶವನ್ನು ತೆಗೆದು ಅದರಿಂದ ಧಾರೆಯನ್ನೆರೆದು ಜಾಗ್ರತೆ ಕರ್ಣಕುಂಡಲವನ್ನು ದಾನ ಕೊಡುವಂಥವನಾಗಯ್ಯ ಕರ್ಣಭೂಪತಿ ॥

ಪದ

ಯೆಂದ ಮಾತನು ಕೇಳಿ ಅಂದು ವುದರವ ಸೀಳಿ
ಗೋವಿಂದಗರ್ಪಿತವು ನನ್ನಾತ್ಮ ಸುಧೆಯು ॥

ಕರ್ಣ : ಅಯ್ಯ ಭೂಸುರೋತ್ತಮ, ನಿನ್ನ ಮಾತಿನಂತೆ ನನ್ನ ಶರೀರವನ್ನೂ ಸೀಳಿ ಒಳಗಿರುವ ಅಮೃತ ಕಲಶವನ್ನು ತೆಗೆದು ಆ ನಾರಾಯಣನಿಗೆ ಅರ್ಪಿತವಾಗುವಂತೆ ಧಾರೆಯನ್ನೆರೆದು ಯಿರುತ್ತೇನೆ. ಯಿಗೋ ಕರ್ಣಕುಂಡಲವನ್ನು ಕೊಡುತ್ತೇನೆ ತೆಗೆದುಕೊಳ್ಳುವರಾಗಿರಿ.

ಬ್ರಾಹ್ಮಣ : ಅಯ್ಯ ಕರ್ಣ, ದಾನ ಕೊಡುವುದರಲ್ಲಿ ನಿನ್ನ ಸಮಾನವಾದ ಭಕ್ತಿಭಾವವುಳ್ಳ ಧೀರನನ್ನು ಮತ್ಯಾರನ್ನೂ ಕಾಣಲಿಲ್ಲ. ನಾನಾದರೆ ಹೋಗಿ ಬರುತ್ತೇನೆ.

ಭಾಮಿನಿ

ಹರಿಗೆ ಧಾರೆಯನೆರೆಯಲಾಕ್ಷಣ ನರನ ರಥದೊಳು ಕುಳಿತು
ತೋರಿದ ಹರಿಯು ನಿಜರೂಪವನು ಮನೋಹರುಷದಲಿ ॥

ಕರ್ಣ : ಆಹಾ, ಬ್ರಾಹ್ಮಣ ವೇಷಧಾರಿಯಾಗಿ ಬಂದು ಕರ್ಣಕುಂಡಲವನ್ನು ದಾನ ತೆಗೆದುಕೊಂಡು ಹೋಗಿ ಅರ್ಜುನನ ರಥದ ಮೇಲೆ ಕುಳಿತುಕೊಂಡು ಶ್ರೀ ಹರಿಯು ತನ್ನ ನಿಜರೂಪವನ್ನು ತೋರಿದಂಥವನಾದನು. ಆದಕಾರಣ ಯೀ ದಿನ ನಾನು ಧನ್ಯನಾದೆ, ಸುಕೃತವನ್ನು ಹೊಂದಿದಂಥವನಾದೆ.

ಭಾಮಿನಿ

ನೋಡಿ ಕರ್ಣನು ಹರುಷದಲಿ ಓಲಾಡಿ ಯೀಕ್ಷಿಸುತಿರಲು
ಹೂಡು ಬಾಣವ ಎಂದು ನರನಿಗೆ ಎಚ್ಚರಿಸೆ ಮುರವೈರಿ ॥

ಕೃಷ್ಣ : ಅಯ್ಯ ಅರ್ಜುನ, ಯಾಕೆ ಸಾವಕಾಶವನ್ನೂ ಮಾಡುತ್ತಿರುವೆ. ಜಾಗ್ರತೆ ಬಾಣವನ್ನು ಹೂಡಿ ಆ ಕರ್ಣನ ಮೇಲೆ ಬಾಣವನ್ನು ಹೊಡೆಯುವಂಥವನಾಗು ॥

ಪದ

ನರನಾಕ್ಷಣ ಕಡುಕೋಪದಿ ಶರವನು ತೆಗೆಯುತಲಿ ತಿರುಪನು
ಏರಿಸಿ ಧನುವನು ಹೂಡಿದ ಧರಣಿಯು ಕಂಪಿಸಲು ॥

ಅರ್ಜುನ : ಯಲಾ ಕರ್ಣ, ಯಿನ್ಯಾತಕ್ಕೆ ಯೋಚನೆಯನ್ನು ಮಾಡುತ್ತಿರುವೆ. ಕ್ಷಣ ಮಾತ್ರದಲ್ಲಿ ನಿನ್ನ ಶಿರವನ್ನು ಹರಿಯುವ ಬಾಣ ಪ್ರಯೋಗವನ್ನು ಬಿಟ್ಟಿರುತ್ತೇನೆ ತರಹರಿಸುವನಾಗು.

ಕರ್ಣ : ಯಲಾ ಅರ್ಜುನ, ಸುಮ್ಮನೆ ಯಾತಕ್ಕೆ ಕೂಗಿಕೊಳ್ಳುವೆ. ನಿನ್ನ ಶೌರ‌್ಯವನ್ನೂ ನನ್ನಲ್ಲಿ ತೋರಿಸು. ಯಲಾ ಅರ್ಜುನ ನೀನು ಬಿಟ್ಟಿರುವ ಬಾಣವನ್ನು ಮಧ್ಯದಲ್ಲಿಯೇ ಖಂಡಿಸಿರುತ್ತೇನೆ ನೋಡು.

ಅರ್ಜುನ : ಭಾವಯ್ಯ ಶ್ರೀಹರಿಯೆ, ಕರ್ಣನ ಮೇಲೆ ಅಭಿಮಂತ್ರಿಸಿ ಬಿಟ್ಟ ಬಾಣವನ್ನು ಕರ್ಣನು ಖಂಡ್ರಿಸಿರುವನಲ್ಲಾ ಯಿದಕ್ಕೆ ಮುಂದೇನು ಹದನವನ್ನೂ ಮಾಡೋಣ.

ಪದ
ಸ್ಮರಿಸಿ ಮನದೊಳು ಕಾಲಹರನನು ಶರದ ತುದಿಯೊಳು
ಹರಿಯ ಮಧ್ಯದಿ ಕಮಲೋದ್ಭವ ಬುಡದಿ ನಿಲಿಸಿ ಬೇಗದಿ ॥

ಕೃಷ್ಣ : ಅಯ್ಯ ಅರ್ಜುನ, ಯೀ ಸ್ವಲ್ಪ ಕಾರ‌್ಯಕ್ಕೆ ಯಾತಕ್ಕೆ ಚಿಂತಿಸುವೆ. ಕಾಲಹರನಾದ ಶಂಕರನನ್ನು ಮನದಲ್ಲಿ ಧ್ಯಾನ ಮಾಡುತ್ತಾ ಶರವನ್ನು ಬಿಲ್ಲಿಗೆ ಸೇರಿಸುವನಾಗು. ಬಾಣದ ತುದಿಯಲ್ಲಿ ಕಾಲಹರನನ್ನು ಮಧ್ಯದಲ್ಲಿ ನಾನು ಬುಡದಲ್ಲಿ ಬ್ರಹ್ಮನೂ ಸಹ ಯಿದ್ದು ಸರ್ವಶಕ್ತಿಯಿಂದ ಆ ಕರ್ಣನ ತಲೆಯನ್ನು ಹರಿದು ಕತ್ತರಿಸುವಂತೆ ಮಾಡುತ್ತೇನೆ. ಜಾಗ್ರತೆ ಬಾಣವನ್ನು ಹೂಡುವನಾಗು.

ಪದ

ತರಣಿಸುತನ ತಾ ನೋಡುತ ಪಾರ್ಥನು ತಿರುವಿ ಶರವು
ತರಿದು ಕರ್ಣನ ಕೆಡಹಲು ತಿರುಗಿತು ನರನೆಡೆಗೆ ॥

ಅರ್ಜುನ : ಯಲಾ ಕರ್ಣ, ಯೆಷ್ಟೊತ್ತು ನಿನ್ನ ಮುಖವನ್ನು ನೋಡುವುದು. ಯೀಗ ನಿನ್ನ ಮೇಲೆ ಪ್ರಯೋಗ ಮಾಡಿರುವ ಯೀ ಶರದಿಂದಲೆ ನಿನ್ನ ಶಿರವನ್ನು ತರಿದು ಬಿಡುತ್ತೇನೆ. ಜಾಗ್ರತೆ ರಣಾಗ್ರಕ್ಕೆ ಯದುರಾಗು.

 

(ಕರ್ಣನ ಮರಣ)

ಅರ್ಜುನ : ಯಲಾ ಕರ್ಣ, ಯೀ ದಿನ ನಿನ್ನ ಪರಾಕ್ರಮವು ಯೆಲ್ಲಿ ಹೋಯಿತು. ಅಧಮ ನಿನ್ನ ಪಾಡೇನಾಗಿರುವುದು ನೋಡಿಕೋ.

ಭಾಮಿನಿ
ಥಳಥಳಪ ಮುಖಕಾಂತಿ ಹೊಳೆವ ಕಣ್ಗಳ ಗದುಗಿನ ಪುರ್ಬುಗಳ
ಹೊಳೆವ ದಂತದ ಕುಡಿ ಮೀಸೆಗಳ ತರಣಿಜನ ಶಿರವಾಗ
ಧಾತ್ರಿಗೆ ಕುಲವೃಕ್ಷ ಬಿದ್ದಂತೆ ಬೀಳಲು ಕುರುಪತಿಯು
ರಥದಿಂದ ದೊಪ್ಪನೆ ಬಿದ್ದನವನಿಯಲಿ ॥

ಕೌರವ : ಅಯ್ಯೋ ಹರಹರ, ನನಗೆ ಬಾಹುಬಲವಾಗಿದ್ದ ರಾಧಾಪುತ್ರ ಕರ್ಣ ಭೂಪತಿಯು ನನಗೋಸ್ಕರವಾಗಿ ಅನೇಕ ವೀರಾಧಿವೀರರೊಡನೆ ಕಾದಿ ಬಹುತರವಾಗಿ ದಣಿದಿದ್ದನು. ಯಿಂಥಾ ಶೂರನಾದ ರವಿಪುತ್ರನು ಧುರದಲ್ಲಿ ನರನ ಶರದಿಂದ ಮೃತಪಡುವಂಥವನಾದನಲ್ಲ ಮತ್ತೇನು ಮಾಡಲೊ ಶಂಕರ.

ಭಾಮಿನಿ

ತೆರೆದ ಕಂಗಳನಾಗ ಹಾ ಕರ್ಣನೆ ಹಾ ರಾಧೇಯನೆ
ಹಾಯೆಂದು ಹಲುಬುತಲಿ ಮೂರ್ಛಿಸಿದನಾಗನವನಿಯಲಿ ॥

ಕೌರವ : ಹಾ ಕರ್ಣ ಹಾ ರಾಧೇಯ, ಯೀ ದಿವಸ ರಣಭೂಮಿಯಲ್ಲಿ ಮೃತನಾಗಿ ಮಲಗಿರುವೆಯಾ. ಯದ್ದು ನನ್ನೊಡನೆ ವೊಂದು ಮಾತಾಡಬಾರದೆ ಕರ್ಣ, ಮುಂದೇನು ಮಾಡಲೋ ಶಂಕರ ಗೌರೀಶ.

(ಕೌರವನ ಮೂರ್ಛೆ)

ಭಾಮಿನಿ
ಚರರು ಜನಪನ ಕಂಡು ಅಂದಣದೊಳಗೆ ಪಾಳೆಯಕಾಗವೈದರು
ಹರಿಸಹಿತ ಪಾಂಡವರಿತ್ತ ದುಗುಡದಲಿ ವರಲಿದರು
ಪಾಂಚಾಲೆ ತಮ್ಮೊಳು ಮರುಗಿದರು ಧರ‌್ಮಸುತ
ಹರಿಯು ತೋಷವ ತಾಳ್ದುದಾ ಜನಮೇಜಯನೆ ಕೇಳೆಂದ

 

(ಮಂಗಳಾರತಿ)

ಮಂಗಳ ಮಹಾಗೌರಿ ರಂಗಸಹೋದರಿ ಗಂಗಾಧರನ ರಾಣಿ
ಶ್ರೀಗೌರಿ ನತ್ತು ಮೂಗುತಿ ಕೊಡೆ ಮುತ್ತಿ
ನ್ಹಾರವ ಕೊಡೆ ಮುತ್ತೈದೆ ಸ್ಥಾನವ ಕೊಟ್ಟು ಕಾಪಾಡೆ
ವಂಕಿಬಾವುಲಿ ಕೊಡೆ ಕಂಠಮಾಲೆಯ ಕೊಡೆ
ಸಂತೋಷವನು ಕೊಟ್ಟು ಕಾಪಾಡೆ ಮಂಗಳ                                      ॥

ಜಡೆಯ ಬಂಗಾರ ಕೊಡೆ ನಡುವಿನೊಡ್ವಾಣ ಕೊಡೆ ಜಯ

ಶಂಕರನ ರಾಣಿ ಶ್ರೀ ಗೌರಿ ಮಂಗಳ ಮಹಾಗೌರಿ                                ॥

ಹಾರಹೀರವ ಕೊಡೆ ಹಾಡಿ ಹವಳವ ಕೊಡೆ ಆರಿದ್ರ

ಕುಂಕುಮ ಕೊಟ್ಟು ಕಾಪಾಡೆ ॥

(ಕರ್ಣಾರ್ಜುನರ ಕಾಳಗ ಸಂಪೂರ್ಣಂ)