ಶಲ್ಯ : ಅಯ್ಯ ಕರ್ಣ, ದಯವಿಟ್ಟು ನಾನು ಹೇಳಿದಂತೆ ನೀನು ಕೇಳಿದರೆ ಯೀ ಪೃಥ್ವಿಯಲ್ಲಿ ನಿನ್ನ ಸಮಾನ ಯಾರೂ ಯಿಲ್ಲವೆಂದು ಪ್ರಖ್ಯಾತಿಯನ್ನು ಹೊಂದುವುದಲ್ಲದೆ ನಾನು ನಿನ್ನಲ್ಲಿ ಸಾರಥಿಯಾದ್ದಕ್ಕೂ ಸಾರ್ಥಕವಾಗುವುದಯ್ಯ ಕರ್ಣ.

ಕರ್ಣ : ವೊಳ್ಳೇದು ನೀನು ಹೇಳಿದಂತೆ ನಾನು ಕೇಳಿ ಮಾಡತಕ್ಕ ಕೆಲಸವೇನಯ್ಯ.

ಶಲ್ಯ : ಅಯ್ಯ ಕರ್ಣ ಹಾಗಾದರೆ ಹೇಳುತ್ತೇನೆ.

ಪದ

ಕರವ ಮುಗಿವೆನು ಬೇಗ ಶರವ ತಿರುಗೂಡೆನಲು
ತರಣಿಜನು ಪೇಳಿದನು ವರ ಮದ್ರೇಶನಿಗೆ ॥

ಶಲ್ಯ : ಅಯ್ಯ ಕರ್ಣ ಯಿಗೋ ಕರವನ್ನು ಮುಗಿದು ಬೇಡಿಕೊಳ್ಳುತ್ತೇನೆ. ವೈರಿಯಾದ ನರನ ಶಿರಸ್ಸಿಗೆ ಯಿಟ್ಟಿರುವ ಗುರಿಯನ್ನು ತೆಗೆದು ವುರಕ್ಕೆ ಸೇರಿಸಿ ಪ್ರಯೋಗ ಮಾಡುವಂಥವನಾಗು.

ಕರ್ಣ : ಅಯ್ಯ ಶಲ್ಯ ನಿನ್ನ ಅಭಿಪ್ರಾಯ ಹೀಗಿರುವುದೊ ಹೇಳುವೆನು ಕೇಳು.

ಪದ

ಮರುಳೆ ಸಾರಥಿ ಕೇಳೊ ಧುರಕೆ ಮತ್ತೊಬ್ಬರ ಪರಿಯ
ಕೇಳುವವ ರಿಪುವೆ ವೀರನೆ ಕರ್ಣ ॥

ಕರ್ಣ : ಹೇ ಮರುಳೆ ಸಾರಥಿ, ಯೀ ಪರಾಕ್ರಮಿಯು ಧುರದಲ್ಲಿ ನಿಂತುಕೊಂಡು ವೊಬ್ಬ ಹೇಳಿದ ಮಾತು ಕೇಳಿ ನಡೆಸತಕ್ಕವನಲ್ಲ ಯೆಂಬ ಸಂಗತಿಯನ್ನು, ನೀನು ತಿಳಿದೂ ಕೂಡ ಯಾತಕ್ಕೆ ಹೇಳಿ ಕಳೆದುಕೊಳ್ಳುತ್ತೀಯ. ಹೇ ಮಂದಮತಿ ವೊಂದು ಪಕ್ಷ ನಿನ್ನ ಮಾತಿನಂತೆ ನಡೆಸಲು ಪೂರ್ವದಲ್ಲಿ ನಾನು ಕೊಟ್ಟ ವಾಗ್ದಾನ ಹೋಗುವುದಯ್ಯ ಶಲ್ಯ.

ಶಲ್ಯ : ನೀನು ಕೊಟ್ಟ ವಾಗ್ದಾನ ಹೋಗುವುದು ಯಾವುದಯ್ಯ ಕರ್ಣ.

ಪದ

ಯಿತ್ತಿಗೆ ಪೂರ್ವದೊಳ್ಭಾಷೆಯ ಜನನಿಗೆ ಪುತ್ರರ ಕೊಲ್ವೆನು
ಯೆಂದು ತೊಟ್ಟ ಶರವ ನಾನು ಮರಳಿ ತೊಡುವುದಿಲ್ಲ
ಯೆಂದು ಸತ್ಯವಾಕ್ಯವ ಪೇಳಿದೆ ॥

ಕರ್ಣ : ಅಯ್ಯ ಶಲ್ಯ ನೃಪಾಲನೆ, ಪೂರ್ವದಲ್ಲಿ ಮಾತೋಶ್ರೀಯವರಾದ ಕುಂತೀದೇವಿಯರಿಗೆ ನಿನ್ನ ಮಕ್ಕಳಿಗೆ ಯಿಟ್ಟ ಗುರಿ, ತೊಟ್ಟ ಬಾಣವನ್ನು ತೊಟ್ಟು ನಿನ್ನ ಮಕ್ಕಳ ಕೊಲ್ಲುವುದಿಲ್ಲವೆಂದು ಭಾಷೆಯನ್ನು ಕೊಟ್ಟು ಯಿರುವೆನು. ಯಿದಕ್ಕೆ ತಪ್ಪುವುದಿಲ್ಲ. ಆದ್ದರಿಂದ ಯೀಗ ಯಿಟ್ಟಿರುವ ಗುರಿಯನ್ನು ತೆಗೆಯುವುದಿಲ್ಲವೊ ಶಲ್ಯ.

ಪದ

ಮತ್ತೆ ನೀ ಪೇಳಿದಂದದಿ ರಣಗೈಯೆ ಸಾರಲೆನ್ನುತ ಕರ್ಣನು
ಬತ್ತಳಿಕೆಯೊಳು ಶರ ಸೆಳೆಯುತೆ ಪಾರ್ಥಗೆ ಮತ್ತೆ ಪೇಳಿದನಾಕ್ಷಣ ॥

ಕರ್ಣ : ಅಯ್ಯ ಶಲ್ಯ, ನೀನು ಹೇಳಿದಂತೆ ನಾನು ಕೇಳತಕ್ಕವನಲ್ಲ. ಸುಮ್ಮನೆ ವೊಂದು ಕಡೆ ನಿಂತುಕೊಳ್ಳುವನಾಗು. ಯಲಾ ಅರ್ಜುನ, ನನ್ನ ಬತ್ತಳಿಕೆಯಲ್ಲಿ ಭೋರ‌್ಗರೆಯುವ ಸರ್ಪಾಸ್ತ್ರವನ್ನು ನೋಡಿದೆಯೊ ಹೇಳುತ್ತೇನೆ ಕೇಳು.

ಪದ

 

ನರನೆ ಕೇಳೊ ಸಮರವಿನ್ನು ಸರಸವಲ್ಲ ಮುಂದೆ ನಿಂನ
ಪೊರೆದ ಜನನಿ ಜನಕರನ್ನು ಸ್ಮರಿಸು ಮನದಲಿ ॥

ಕರ್ಣ : ಯಲಾ ನರನೆ, ಯೀಗಿನ ಸಮರವು ಸರಸವಲ್ಲ. ಭೋರ‌್ಗರೆಯುವ ಯೀ ಸರ್ಪಾಸ್ತ್ರದಿಂದ ನಿನ್ನ ಶಿರಸ್ಸು ಬೀಳುವುದು. ಮೂದೇವಿ ನಿನ್ನ ಸಂರಕ್ಷಣೆ ಮಾಡಿದ ಜನನಿ ಜನಕರನ್ನು ಮನದಲ್ಲಿ ಸ್ಮರಿಸಿಕೊಳ್ಳುವನಾಗು. ಯಿಗೋ ಸರ್ಪಾಸ್ತ್ರ ಹೊರಡುವುದು ನೋಡು.

ಕೃಷ್ಣ : ಅಯ್ಯ ಅರ್ಜುನ, ವೈರಿಯಾದ ಕರ್ಣನು ನಿನ್ನ ಶಿರಸ್ಸಿಗೆ ಗುರಿಯಿಟ್ಟು ಸರ್ಪಾಸ್ತ್ರವನ್ನು ಪ್ರಯೋಗಿಸುವನು. ಪರಿಹರಿಸಿಕೊಳ್ಳಲು ನಿನ್ನ ತಲೆಯನ್ನು ಭೂಮಿಗೆ ತಗ್ಗಿಸುವನಾಗು.

ಅರ್ಜುನ : ಭಾವಯ್ಯ, ವೈರಿ ಯದುರಿಗೆ ಶಿರವನ್ನು ತಗ್ಗಿಸಬೇಕೆಂದು ಹೇಳಿದರೆ ತಗ್ಗಿಸುವನಲ್ಲ. ಯೀ ಶರದಿಂದಲೆ ಶಿರ ಹೋದರು ಹೋಗಲಿ. ನಾನು ಯೀ ಸಮರ ಭೂಮಿಯಲ್ಲಿ ನಿಂತುಕೊಂಡು ಶಿರವನ್ನು ಬಗ್ಗಿಸಿದರೆ ನನ್ನ ದಶನಾಮಕ್ಕೆ ಕುಂದಕವಲ್ಲವೆ ಭಾವಯ್ಯ ಯೀ ಮಾತು ಹೇಳಬೇಡಿರಿ.

ಕೃಷ್ಣ : ಯೇನ ಮಾಡಲಿ ವುಗುಳಿದರೆ ತುಪ್ಪ ಹೋಗುವುದು ನುಂಗಿದರೆ ಗಂಟಲು ಸುಡುವುದು. ಅರ್ಜುನನಿಗೆ ಯಿನ್ನೇನ ಹೇಳಲಿ. ನನ್ನ ಕೈ ಚಮತ್ಕಾರವನ್ನು ಯೀ ಕಾಲದಲ್ಲಿ ಪೂರ್ಣವಾಗಿ ತೋರದೆಯಿದ್ದರೆ ಯೀ ನರನ ಶಿರವು ವುಳಿಯುವುದಿಲ್ಲ. ಆದ್ದರಿಂದ ನನ್ನ ಕೈ ಚಮತ್ಕಾರವನ್ನು ತೋರುವೆನು. ಯಲಾ ಕರ್ಣ ಯಲಾ ಅಂಬಿಗ ಎಲ್ಲಿ ನಿನ್ನ ಸರ್ಪಾಸ್ತ್ರ ಹೊರಡಲಿ.

ಪದ

ಯೆನುತ ಸರ್ಪಶರವ ರವಿಜ ಬಿಡಲು ನೋಡಿ ಹರಿಯು
ಧರಣಿಗೊತ್ತಿದನು ರಥವ ಚರಣಯುಗದಲಿ ॥

ಕೃಷ್ಣ : ಆಹಾ ನೋಡಿದಿರೊ, ಪಾತಾಳಕ್ಕೆ ರಥವನ್ನು ಮೆಟ್ಟಿ ನನ್ನ ಸದ್ಭಕ್ತನಾದ  ಯೀ ಸವ್ಯಸಾಚಿಗೆ ಬಂದ ಪ್ರಾಣ ಸಂಕಟವನ್ನು ಪರಿಹರಿಸಿಕೊಂಡು ಯಿರುವೆನು. ಯೀ ನನ್ನ ಸಾಹಸವು ಹ್ಯಾಗಿದೆ ನೋಡಿದಿರೊ.

ಪದ

ವುರಿಯನುಗುಳುತಾಗ ಶರವು ನರನ ಮಕುಟವನ್ನು ಕೊಂಡು
ಧರಣಿಗಿಡಲು ನೋಡಿ ಯಲ್ಲ ಹರುಶತಾಳಿದರು

ತಕ್ಷಕ : ಆಹಾ ನನ್ನ ವೈರಿಯಾದ ನರನ ಶಿರವನ್ನು ತೆಗೆದುಕೊಳ್ಳಬೇಕೆಂದು ಬಹು ದಿವಸದಿಂದ ಸಾಧಿಸಿಕೊಂಡದ್ದು ವ್ಯರ್ಥವಾಯಿತು. ಅಯ್ಯೋ ಯೇನು ಮಾಡಲಿ. ಭಳಿರೆ ಕರ್ಣ ಭಾಪುರೆ ಕರ್ಣ ಹೇಳುವೆನು.

ಪದ

ತಿರುಗಿಬಂದು ಸರ್ಪಶರವು ಜರಿದೆ ಸಾರಥಿಯ ನುಡಿಯು
ತರಣಿಸುತನೆ ಹೂಡು ನರನ ಕೊರಳನರಿವೆನು ॥

ತಕ್ಷಕ : ಅಯ್ಯ ಕರ್ಣ, ನಿನ್ನ ಸಾರಥಿಯಾದ ಶಲ್ಯ ನೃಪಾಲನ ಮಾತು ಕೇಳದೆ ಹೋದದ್ದು ಯಾಕೆ, ಚಿಂತೆಯಿಲ್ಲ ಅರ್ಜುನನ ತಲೆಯನ್ನೂ ತೆಗೆದುಕೊಳ್ಳಬೇಕೆಂದು ಬಹು ದಿವಸದಿಂದ ನಿನ್ನ ಬತ್ತಳಿಕೆಯಲ್ಲಿ ಯಿರುತ್ತೇನೆ. ಯೀ ಬಾರಿ ನನ್ನನ್ನು ಹೂಡು. ಅರ್ಜುನನ ತಲೆಯನ್ನು ತೆಗೆದುಕೊಳ್ಳುತ್ತೇನೆ.

ಕರ್ಣ : ಯಲಾ ತಕ್ಷಕ, ನಿನ್ನ ಬಲಾತ್ಕಾರದಿಂದ ವೈರಿಯನ್ನು ಗೆಲ್ಲಬೇಕಾಗಿಲ್ಲ. ನನ್ನ ಸಾಹಸವೇನೊ ನನಗಿರುವುದು. ಪುನಹಾ ನಿನ್ನನ್ನು ಹೂಡುವುದಿಲ್ಲ.

ತಕ್ಷಕ : ಕರ್ಣ ಕರವನ್ನು ಮುಗಿದು ಬೇಡಿಕೊಳ್ಳುತ್ತೇನೆ. ಯಿದೊಂದು ದಪಾ ನನ್ನನ್ನು ಹೂಡೈಯ್ಯ ಮಹಾರಾಜ.

ಕರ್ಣ : ಛೀ ಪಾಪಿ ಹೂಡುವುದಿಲ್ಲ. ಯಾತಕ್ಕೆ ಹಲುಬಿ ಆತುವರೆಯುವೆ. ನಿನ್ನ ಸ್ವಸ್ಥಾನಕ್ಕೆ ಹೊರಟು ಹೋಗು.

ತಕ್ಷಕ : ನಾನು ಪಾಪಿಯಲ್ಲವೋ ನೀನು ಪಾಪಿ. ಛೇ ಶಿಖಂಡಿ. ನೀನು ಯಾವ ದೊಡ್ಡ ಪರಾಕ್ರಮಿ. ಹೊರಟು ಹೋಗುವೆನು, ಯಲಾ ಅರ್ಜುನ ಕರ್ಣನು ಕೈ ಬಿಟ್ಟ ಮಾತ್ರಕ್ಕೆ ಗೆದ್ದೆನೆಂದು ತಿಳಿದಿರುವೆಯಾ. ನನ್ನ ಕೈಲಾದಷ್ಟು ಸಾಹಸ ತೋರಿ ವಿಷವನ್ನು ಕಾರಿ ನಿನ್ನನ್ನು ಮುಸುಕಿಕೊಳ್ಳುವೆ.

ಪದ

ಹಿಂದೆ ತಿರುಗಿ ಬಂದು ಶರವು ಯಿಂದ್ರಸುತನನ್ನೂ ಮುಸುಕಲಾಗ
ವೊಂದು ಕ್ಷಣ ಧೂಳದನು ಕುಡಿದ ಪಾಂಡು ಪುತ್ರನು ॥

ಅರ್ಜುನ : ಯಲಾ ತಕ್ಷಕ, ನಿನ್ನ ಜಾತಿ ಸ್ವಭಾವದಂತೆ ಹಿಂದೆ ಬಂದು ಮೋಸದಿಂದ ವಿಷವನ್ನು ಕಾರುವುದಕ್ಕೆ ನನ್ನ ಸಮೀಪಕ್ಕೆ ಬರಲು ಮುಂಚಿತವಾಗಿ ನಿನ್ನನ್ನು ಯರಡು ತುಂಡಿಗೆ ಖಂಡಿಸಿ ಯಿರುತ್ತೇನೆ ನೋಡು ॥

ತಕ್ಷಕ : ಯಲವೊ ಅರ್ಜುನ, ನನ್ನನ್ನು ಯರಡು ತುಂಡಿಗೆ ಖಂಡ್ರಿಸಿರುವೆ ವೊಳ್ಳೇದು. ನಿನ್ನ ಸೆರಗಿನಲ್ಲಿ ಮೂರುಗಂಟು ಹೂಡಿಕೊ. ಪಾಪಿಯಾದ ಕರ್ಣನು ಮೋಸ ಮಾಡಿದನು. ಯಿವತ್ತೇ ನಿನ್ನ ತಲೆವುಳಿಯುತ್ತಿರಲಿಲ್ಲ ಮುಂದೆ ನಿನ್ನ ವೀರ‌್ಯದಿಂದ ವುಟ್ಟಿದ ಮಗನಿಂದ ಕೊಲ್ಲಿಸಿ ನನ್ನ ಪಂಥವನ್ನು ಪೂರೈಸಿಕೊಳ್ಳುತ್ತೇನೆ. ಅದು ತಪ್ಪಿದರೆ ನನ್ನ ನಾಲಗೆಯನ್ನು ನಾನೇ ಕಡಿದುಕೊಂಡು ಪ್ರಾಣ ಬಿಡುವೆ. ಇದು ನಿನಗೆ ತಪ್ಪಿದ್ದಲ್ಲ. ಯೀಗ ನನ್ನ ಹಟವನ್ನಾದರು ಮುಂದೆ ನೋಡು. ಯಲೋ ಕರ್ಣ ಪಾಮರ ಶಿಖಂಡಿ, ಯೀ ದಿವಸ ನಿನ್ನ ತಲೆವುಳಿಯುವುದಿಲ್ಲ. ನಿನ್ನ ನಂಬಿದ ಕೌರವ ಬದುಕಲಿಲ್ಲ. ಆ ಕುರುಡನ ಹುಡುಗ ಕೌರವನ ಗತಿ ಅವನಿಗಾಯಿತು. ಛೇ ಪಾಪಿ ನಿನ್ನ ಸಂಗಡ ಮಾತೇನು ಪಾತಾಳ ಲೋಕಕ್ಕೆ ಹೋಗುತ್ತೇನೆ.

ಪದ

ತರಣಿಸುತನ ಬೈದು ಶರವು ಧರಣಿಗಿಳಿಯಲಾಗ ಶಲ್ಯ
ಜರಿದು ನುಡಿದ ಯಿನಜನನ್ನ ವುರಿಯನುಗುಳತ ॥

ಶಲ್ಯ : ಯಲಾ ಕರ್ಣ ಯಲಾ ಅಂಬಿಗ ರಾಜದ್ರೋಹಿ ವಿಷಪಾತಕ ಕುನ್ನಿ ಹೇಳುತ್ತೇನೆ ಕೇಳು.

ಭಾಮಿನಿ

ನಂಬಿ ಹಿಡಿದರೆ ಹಗೆಯಮಗೆ ಹಗೆಯಂಬಿಗಿತ್ತನು ಕಾಯವನು
ಮಗನೆಂಬ ಮೋಹಕೆ ತನುವ ಬಿಸುಟನು ಗರುಡಿಯಾಚಾರ‌್ಯ
ಅಂಬುಬೆಸನನು ಬೇಡಿದರೆ ಕೊಡೆನೆಂದು ನೀ ನೀತಿಗೊಳದೆ
ನಿಮ್ಮೂವರ ನಂಬಿ ಕೌರವ ಕೆಟ್ಟನಕಟಕಟೆಂದನಾ ಶಲ್ಯ ॥

ಶಲ್ಯ : ಯಲಾ ಕರ್ಣ, ಭೀಷ್ಮಾಚಾರಿ ದ್ರೋಣಾಚಾರಿ ನಿಮ್ಮ ಮೂವರನ್ನೂ ಆಪತ್ಕಾಲಕ್ಕೆ ಆಗುತ್ತಾರೆಂದು ಬಹುತರವಾಗಿ ನಂಬಿಕೊಂಡಿದ್ದ ಕೌರವನಿಗೆ ಕೊಟ್ಟಿರಿ ಕೈವೊಂದನೆ. ಭೀಷ್ಮಾಚಾರಿಯು ಸರಳ ಮಂಚದಲ್ಲಿ ಮಲಗಿಬಿಟ್ಟ. ದ್ರೋಣಾಚಾರಿಯು ತನ್ನ ಮಗನ ನೆವದಿಂದ ಪ್ರಾಣವನ್ನು ಬಿಟ್ಟನು. ಕರ್ಣನಾದ ನೀನು ಯಿಟ್ಟ ಗುರಿಯಿಡುವುದಿಲ್ಲ ತೊಟ್ಟ ಬಾಣ ತೊಡುವುದಿಲ್ಲವೆಂದು ನನ್ನ  ಮಾತನ್ನು ತಿರಸ್ಕಾರ ಮಾಡಿದೆ. ಯೀ ನಿಮ್ಮ ಮೂರು ಜನಗಳನ್ನೂ ನಂಬಿದ್ದಕ್ಕೆ ಯಿವತ್ತಿಗೆ ಕೌರವನು ಕೆಟ್ಟು ಹೋದನೊ ಕರ್ಣ.

ಪದ

ಯಲವೊ ಸೂತಜ ಕೇಳು ನಿನ್ನಯ ಶೌರ‌್ಯವು ಘಳಿಲನೆ
ಪೋಪುದಿನ್ನು ಗೆಲುವ ಕಾಣೆನು ಸರ್ಪಶರ
ಹೋದ ಬಳಿಕಿನ್ನು ತಲೆಯು ಬೀಳ್ವುದು ಭೂಮಿಯೊಳಗೆ ॥

ಶಲ್ಯ : ಯಲವೊ ಸೂತಜನಾದ ಕರ್ಣನೆ ಕೇಳು. ನಿನ್ನ ಶೌರ‌್ಯವು ಯೀಗ ಯರಡು ಗಳಿಗೆಗಿನ್ನಾ ಮುಂಚಿತವಾಗಿಯೆ ಯಿತ್ತು. ಸರ್ಪಾಸ್ತ್ರವನ್ನು ಯಾವಾಗ ಕಳೆದುಕೊಂಡೆಯೊ ಆಗಲೆ ನಿನ್ನ ಚೆಂಡು ಹೋಯಿತು. ಯೀ ದಿವಸ ರಣಭೂಮಿಯಲ್ಲಿ ನಿನ್ನ ತಲೆ ಬಿದ್ದು ಹೋಗುವುದು ಸಹಜ ಸತ್ಯವಾಗಿ ಹೇಳುತ್ತೇನೆ ಕೇಳು.

ಪದ

ನರನಸ್ತ್ರದೊಳು ರವಿಜನೆ ಕೇಳು ಮರಣ ಬಂದುದು ನಿನಗೆ
ಬರಿದೆ ಯನ್ನಯ ನುಡಿಕೇಳದೆ ಮೂರ್ಖನೆ ಕುರುಪತಿಯನು ಕಳೆದೆಯಲ್ಲಾ ॥

ಶಲ್ಯ : ಯಲಾ ಕರ್ಣ, ರಣಾಗ್ರದಲ್ಲಿ ನರನಾದ ಅರ್ಜುನನಿಂದ ನಿನಗೆ ಮರಣ ಬರುವುದು ಖರೆ. ನನ್ನ ಮಾತು ಕೇಳದೆ ಕೌರವನನ್ನೂ ನೀಗಿಬಿಟ್ಟೆಯಲ್ಲೊ ಕರ್ಣ ಮತ್ತೂ ಹೇಳುತ್ತೇನೆ ॥

ಪದ

ಕಿರಿಕುಲದವನೊಳು ಯಿರಲಾರೆನೆಂದರೆ ಯರಗಿ ಪೇಳಿದರಾ
ಯಿರಲಾಗದಿನ್ನು ಯೆಂದೆನುತ ರಥವ ಬಿಟ್ಟು ತೆರಳಿದ ಮಾದ್ರಭೂಪ ॥

ಶಲ್ಯ : ಯಲಾ ಕರ್ಣ, ಕಿರಿಕುಲದವನಾದ ನಿನಗೆ ಸಾರಥಿಯಾಗುವುದಿಲ್ಲವೆಂದು ಕೌರವನಿಗೆ ಎಷ್ಟು ಹೇಳಿದಾಗ್ಯು ಕೇಳಲಿಲ್ಲ. ಅವನು ದೈನ್ಯ ವೃತ್ತಿಯಿಂದ ಪೇಚಾಡಿದ್ದನ್ನು ನೋಡಿ ನಿನ್ನಲ್ಲಿ ಬಂದು ಸೇರಿದೆನು. ಸಫಲವೇನು. ಯಿಲ್ಲಿ ನನ್ನ ಮಾತು ಯಾವುದು ನಡೆಯದಿದ್ದರೆ ಆಗಲೂ ನಿನ್ನಲ್ಲಿ ಯಿರುವುದಿಲ್ಲವೆಂದು ಕೌರವನಿಗೆ ಮೊದಲೇ ಹೇಳಿರುತ್ತೇನೆ. ನನ್ನಲ್ಲಿ ದೋಷವೇನು ಇಲ್ಲ. ಹೇ ಕರ್ಣ, ಯಿಗೋ ನಿನ್ನ ರಥವನ್ನೂ ನಿಲ್ಲಿಸಿರುತ್ತೇನೆ. ಯಿಗೋ ಕಂಬಿಯನ್ನು ಬಿಸಾಟು ಯಿರುತ್ತೇನೆ. ನಿನ್ನ ಗತಿ ನಿನಗಾಯಿತು ನನ್ನ ಗತಿ ನನಗಾಯಿತು. ನನ್ನ ಪಟ್ಟಣಕ್ಕೆ ತೆರಳುತ್ತೇನೆ.

ಕರ್ಣ : ಯಲಾ ಶಲ್ಯ, ಅಸಹಾಯಶೂರನಿಗೆ ಪರರ ಹಂಗೇನು ಅಂದ ಹಾಗೆ ನಿನ್ನ ಬಲಾತ್ಕಾರದಿಂದ ನನಗೇನು ಸಹಾಯವಾಗಲಾರದು. ನಿನ್ನ ಯಿಷ್ಟವಿದ್ದರೆ ಯಿರು ಯಿಲ್ಲವಾದರೆ ಹೋಗುವನಾಗು.

ಶಲ್ಯ : ಆಹಾ, ಪುನಹ ನಿನ್ನಲ್ಲಿ ಯಿರಬೇಕಾದರೆ ಯಾತಕ್ಕೂ ಪ್ರಯೋಜನವಿಲ್ಲದ ಕನಿಷ್ಠನು ಯಿರಬೇಕು. ಛೀ ಹೋಗು ಭಿಕಾರಿ ನಾನು ಹೊರಟು ಹೋಗುತ್ತೇನೆ.

ಭಾಮಿನಿ

ಸರಿದ ಶಲ್ಯನ ನೋಡಿ ಕರ್ಣನು ಹರಹರ ಯಿಂತಾಯ್ತೆ
ಯೆನುತಲಿ ನರನ ಕೊಲ್ಲದೆ ಬಿಡೆನೆನುತ ತುರಗವನು ಸಂತೈಸಿ ॥

ಕರ್ಣ : ಅಯ್ಯ ಭಾಗವತರೆ, ನನ್ನ ಸಹಾಯಕ್ಕೆ ಬಂದಿದ್ದ ಸಾರಥಿಯಾದ ಶಲ್ಯನು ನನ್ನಲ್ಲಿ ಯಿರುವುದಿಲ್ಲವೆಂದು ಹೊರಟು ಹೋದನು. ನಾನು ವೋರ್ವನಾದೆ. ಆದರೂ ನಾನು ರಥವನ್ನು ಹೊಡೆದುಕೊಂಡು ರಣಾಗ್ರವನ್ನೂ ಮಾಡಿ ನನ್ನ ವೈರಿಯಾದ ಅರ್ಜುನನನ್ನು ಕೊಲ್ಲುತ್ತೇನೆ.

ಭಾಮಿನಿ

ಕರದಿ ಧನುವಾಂತಾಗ ರಥವನು ಹರಿಸುತಲಿ ತವಕದೊಳು
ಆಕ್ಷಣ ಕರೆದ ಬಾಣದ ಮಳೆಯ ಶ್ವೇತವಾಹನನ ದೇಹದಲಿ ॥

ಕರ್ಣ : ಯಲಾ ಅರ್ಜುನ, ಸಾರಥಿಯಾದ ಶಲ್ಯ ಹೋದರು ಯುದ್ಧವನ್ನು ಬಿಡುವುದಿಲ್ಲ. ಮೂದೇವಿ ನಿನ್ನ ಮೇಲೆ ಬಾಣದ ಮಳೆಯನ್ನು ಸುರಿದಿರುತ್ತೇನೆ. ಹೇಳುವೆನು ಕೇಳು ॥

ರಾಗಸಾವೇರಿರೂಪಕತಾಳ

ಯಲವೊ ಯಿಂದ್ರಸುತನೆ ಕೇಳು ಗೆಲಿದೆನೆಂದು ವುರಗ ಶರವ
ಮನದಿ ಸಂತೋಷವೇನೊ ಯೆನುತ ಹೊಡೆದನು ॥

ಕರ್ಣ : ಯಲಾ ಅರ್ಜುನ, ನನ್ನಲ್ಲಿ ನಿನಗೆ ಮೃತ್ಯುವಾಗಿರುವ ಸರ್ಪಾಸ್ತ್ರ ಹೋಯಿತೆಂಬುದಾಗಿ ಸಂತೋಷವಾಯಿತೊ. ಸದ್ಯಕ್ಕೆ ಯುದ್ಧದಲ್ಲಿ ಮರ್ದಿಸದೆ ಬಿಡಲಿಕ್ಕಿಲ್ಲ. ಮೂದೇವಿ ವೊಂದು ಬಾಣವನ್ನು ಹೊಡೆದಿರುತ್ತೇನೆ ತರಹರಿಸಿಕೊಳ್ಳುವನಾಗು.

ಅರ್ಜುನ : ಯಲಾ ಕರ್ಣ ಹೇಳುತ್ತೇನೆ.

ಪದ

ತರಹರಿಸುತ ನರನು ಪೇಳ್ದ ಮರುಳೆ ಯಿನ್ನು ಗೆಲುವಿನಾಶೆ
ತೊರೆದು ಕಳೆಯೊ ಯೆನುತ ಹೊಡೆದ ತರಣಿಜಾತನ ॥

ಅರ್ಜುನ : ಯಲಾ ಕರ್ಣ, ಯೆಷ್ಟೊತ್ತು ನಿನ್ನ ಮುಖವನ್ನು ನೋಡುವುದು. ಯಿನ್ನು ನಿನ್ನ ಪ್ರಾಣವನ್ನು ತೆಗೆದುಬಿಡುವಂಥ ಬಾಣ ಪ್ರಯೋಗವನ್ನು ಅಭಿಮಂತ್ರಿಸಿ ಬಿಟ್ಟಿರುತ್ತೇನೆ ತರಹರಿಸಿಕೊಳ್ಳುವನಾಗು.

ಭಾಮಿನಿ

ಧರಣಿಯೋಳ್ ರಥವಾಗ ಶಿಲ್ಕಿತು ವರಶ್ರೋಣಿತ
ಕೆಸರಿನೊಳಗೆಯು ನೋಡುತ ಮನದೊಳು ಮರುಗುತ
ಕೌರವ ನಿರ್ಭಾಗ್ಯನಾದನೆಂದು ಕಡುಚಿಂತಿಸಿದ ॥

ಕರ್ಣ : ಅಯ್ಯೋ ಹರಹರ, ಯೀ ನರನಾದ ಅರ್ಜುನನು ಹೊಡೆದ ಬಾಣದ ಘಾತಕ್ಕೆ ರಕ್ತಶ್ರೋಣಿತವು ಯೀ ಭೂಮಿಯಲ್ಲಿ ಸುರಿದಿರುವುದು. ಯೀ ರಕ್ತದ ಕೆಸರಿನಲ್ಲಿ ನನ್ನ ರಥವು ಸಿಕ್ಕಿಕೊಂಡು ಹೂತು ಹೋಗಿರುವುದು ಹಾ ಶಂಕರ ಹಾ ಗೌರೀಶ.

ಭಾಮಿನಿ

ವರಲಿ ಫಲವೇನೆಂದು ಕರ್ಣನು ಶರಗಳಳವಡಿಸುತಲಿ
ಧಾತ್ರಿಗೆ ಭರದಿ ರಕುತದಲಿ ಹೂಳಿದ ರಥವ ನೆಗಹುತಲಿ ॥

ಕರ್ಣ : ಹಾ ಶಂಕರ, ಹಾ ಗೌರೀಶ, ಯೀ ದಿನ ಧುರದಲ್ಲಿ ನನ್ನ ಕೈಚಮತ್ಕಾರವು ಕುಗ್ಗಿ ಹೋಗಿರುವುದರಿಂದ ಅಪಜಯಕ್ಕೆ ಕಾರಣವಾಯಿತು. ದುಃಖಿಸುವುದರಿಂದ ಫಲವಿಲ್ಲ. ರಕ್ತದಲ್ಲಿ ಹೂಳಿರತಕ್ಕ ರಥವನ್ನು ಮುಂದಕ್ಕೆ ನಡೆಸಿಕೊಂಡು ಧುರಕ್ಕೆ ಸನ್ನದ್ಧನಾಗುತ್ತೇನೆ.

ಭಾಮಿನಿ

ತಿರುಗಿ ನೋಡಿದ ನರನ ರವಿಜನು ಅರಘಳಿಗೆಯು ಸೈರಿಸುತ
ಧರ್ಮದ ನೆಲೆಯ ನೀ ಬಲ್ಲೆ ವಿರತ ಅಗ್ರಹೀನರನು ಕಲಕಿದರೆ
ಕೇಳ್ ಭರದಿ ರಣದಲಿ ಕೊಂದರಾತಗೆ
ನರಕ ತಪ್ಪದು ನೆಗಹಿ ಕೊಡುವೆನು ಮತ್ತೆ ಕಾಳಗವ ॥

ಕರ್ಣ : ಪಾರ್ಥ, ಯೀ ದಿನ ಧುರದಲ್ಲಿ ನನ್ನ ಕೈ ಚಮತ್ಕಾರವು ತಪ್ಪಿ ಹೋಗಿ ಅಬಲಸ್ಥನಾಗಿರುವೆನು. ಧರ್ಮದ ನೆಲೆಯ ಬಲ್ಲ ನೀನು ಅರಘಳಿಗೆ ಪುರುಸತ್ತು ಕೊಟ್ಟರೆ ಯುದ್ಧಕ್ಕೆ ಸನ್ನದ್ಧನಾಗುತ್ತೇನೆ. ಅಗ್ರಹೀನರನ್ನು ರಥಹೀನರನ್ನು ರಣದಲ್ಲಿ ಕೊಂದದ್ದೇಯಾದರೆ ರವರವ ನರಕವು ತಪ್ಪದು. ಆದಕಾರಣ ಅರಘಳಿಗೆ ಸೈರಿಸುವನಾಗೊ ಪಾರ್ಥ ॥

ಭಾಮಿನಿ

ಯೆಂಬ ನುಡಿಯನು ಕೇಳಿ ಪಾರ್ಥನು ಸಂದೇಹದಲಿ ವುರಿತಾಪ
ಹೆಚ್ಚಿತು ಕಂಗಳೊಳು ವುದುರಿದವು ಭಾಷ್ಪವು ಧನುವನಿರಿಸಿದನು ॥

ಅರ್ಜುನ : ಆಹಾ ಭಾವಯ್ಯ, ಯೀ ದಿನ ಧುರದಲ್ಲಿ ವೈರಿಯಾಗಿ ಬಂದ ಕರ್ಣನು ಧುರದಲ್ಲಿ ಅಪಜಯವನ್ನು ಹೊಂದಿ ದೀನತ್ವದಿಂದ ದಯೆಯನ್ನೂ ಅಪೇಕ್ಷಿಸುತ್ತಿರುವನಲ್ಲ. ಯಿದಕ್ಕೆ ಹದನವೇನು ಹೇಳುವರಾಗಿ ಭಾವಯ್ಯ.

ಭಾಮಿನಿ

ರಣದೊಳಾಕ್ಷಣದಿ ಮಕುಟವನಂದು ಚಾಚುತಲಾಗ ನರನಿಗೆ
ಬಂದುದೀತಗೆ ಭ್ರಾಂತು ಮೋಹವು ಯೆಂದು ಹರಿ ತಿಳಿದು ॥

ಕೃಷ್ಣ : ಆಹಾ ಯಿದೇನಾಶ್ಚರ‌್ಯ. ಧುರದಲ್ಲಿ ಅಪಜಯವನ್ನು ಹೊಂದಿ ನರಳುತ್ತಿರುವ ಆ ಕರ್ಣನ ದೈನ್ಯಭಾವದ ಮಾತುಗಳನ್ನೂ ಕೇಳಿ ಅರ್ಜುನನು ಕರದಲ್ಲಿರುವ ಧನುಸ್ಸನ್ನೂ ಭೂಮಿಯ ಮೇಲೆ ಯಿರಿಸಿ, ಮಂಡೆಗೆ ಕರವನ್ನು ಕೊಟ್ಟು ಭ್ರಾಂತಿಯಿಂದ ಚಿಂತಿಸುತ್ತಿರುವೆನಲ್ಲ ಏನು ಮಾಡಲಿ.

ಪದ

ಹಾರವೇನಯ್ಯ ಪಾರ್ಥ ತೋರುತಿದೆ ಕಂಗಳಲಿ
ಆರ ಭಯ ರಣದೊಳಗೆ ವೀರ ಕೇಳೆಂದ

ಕೃಷ್ಣ : ಅಯ್ಯ ಪಾರ್ಥ, ಯೀ ದಿನ ರಣಾಗ್ರದಲ್ಲಿ ಜಯವನ್ನು ಹೊಂದಿದ ನಿನಗೆ ಯಿಂಥ ಸಂಕಟವು ಯಾರಿಂದ ವುಂಟಾಯಿತು ಮರೆಮಾಜದೆ ಹೇಳುವನಾಗು.

ಪದ

ಅಸ್ತ್ರರಥಹೀನರನು ಮತ್ತೆ ಕೊಲುವುದೆ ದೇವ
ಹರಿಯೆ ಚಿತ್ತೈಸಿರಿ ಹಗೆಯ ದುಸ್ಥಿತಿಯ॥

ಅರ್ಜುನ : ಭಾವಯ್ಯ ಮುರವೈರಿ, ಧುರದಲ್ಲಿ ಯುದ್ಧಕ್ಕೆ ಸನ್ನದ್ಧನಾಗಿ ಬಂದು ರಣಾಗ್ರ ಮಾಡುವ ಕಾಲದಲ್ಲಿ ಕೈ ಚಮತ್ಕಾರವು ತಪ್ಪಿರುವ ಅಸ್ತ್ರ ಅಪ್ಪಣೆ ಕೊಡುವರಾಗಿರಿ.

ಭಾಮಿನಿ

ಯಲ ಮರುಳೆ ಗಾಂಢೀವಿ ವೈರಿಗಳಿಗಾಪತ್ತೆಸಗಿದಾಗಲೆ
ಹಗೆಯ ಕೊಲುವುದು ವಸುಮತೀಶರಿಗರಸನಾದವನ
ನೀತಿಯು ಯೆಂದ ಮುರವೈರಿ ॥

ಕೃಷ್ಣ : ಹೇ ಮರುಳೆ ಪಾರ್ಥನೆ, ಯೇನು ನಿನಗೆ ಮಂದಬುದ್ಧಿ ದೊರಕುವದಾಯ್ತು. ಧುರದಲ್ಲಿ ರಣಾಗ್ರ ಮಾಡುವ ಕಾಲದಲ್ಲಿ ವೈರಿಗಳಿಗೆ ವಿಪತ್ತು ಸಂಭವಿಸಿರುವಾಗಲೆ ಹಗೆಯನ್ನು ಕೊಲ್ಲುವುದು ವುತ್ತಮವಾಗಿರುವುದು. ಯೀ ಸಮಯದಲ್ಲಿ ನೀನು ಕೈ ಚಮತ್ಕಾರವನ್ನು ತೋರಿ ವೈರಿಯನ್ನು ಕೊಲ್ಲುವುದು ಬಿಟ್ಟು ಬುದ್ಧಿಹೀನರಾದವರಂತೆ ಹೀಗೆ ಚಿಂತೆಪಡುವರೇನೈ ಪಾರ್ಥ.

ಪದರಾಗಅಷ್ಟತಾಳ

ಕೇಳೊ ಮಾಧವ ನಾನು ಪೇಳಲಂಜುವೆನಯ್ಯ ಕರ್ಣನಾರೈ
ತೋರುವುದುರಿಯ ಸೈರಿಸಲಾರೆ ತಾಪವ ಕರ್ಣನಾರೈ ॥

ಅರ್ಜುನ : ಹೇ ಭಾವಯ್ಯ ಮುರವೈರಿಯೆ, ಧುರದಲ್ಲಿ ರಣಾಗ್ರವನ್ನು ಮಾಡದೆ ಸೋತು ನರಳುತ್ತಿರುವ ಯೀ ಕರ್ಣನು ಯಾರಾಗಿರಬಹುದು ಹೇಳಬೇಕೊ ಭಾವಯ್ಯ.

ಪದ

ಧನುವನೆತ್ತಲಾರೆ ಕೂರ್ಗಣೆ ಕೊಡಲಾರೆನು ಕರ್ಣನಾರೈ
ಜನಪ ಯುಧಿಷ್ಟಿರನಂತೆ ಕಾಣುತಲಿಹ ಕರ್ಣನಾರೈ ॥

ಅರ್ಜುನ : ಭಾವಯ್ಯ ಮುರವೈರಿಯೆ, ಧುರದಲ್ಲಿ ಅಪಜಯವನ್ನು ಹೊಂದಿ ಕಷ್ಟಪಡುವ ಕರ್ಣನನ್ನು ನೋಡಿದ್ದೆಯಾದರೆ ಅಗ್ರಜರಾದ ಧರ್ಮರಾಯರಂತೆ ಕಾಣುತ್ತಿರುವನು, ಯಿವನನ್ನು ಕೊಲ್ಲುವುದಿಲ್ಲ. ಯೀ ಕರ್ಣನು ಯಾರೆಂಬುದನ್ನು ನನ್ನ ಸಂಗಡ ಹೇಳಬೇಕೊ ಭಾವಯ್ಯ ॥

ಪದ

ಧರೆಯನಾಳಲಿ ಕುರುಪತಿಯು ಸಂಗರ ಬೇಡ ಕರ್ಣನಾರೈ
ನಾವು ಐವರು ವನದಿ ನಿಮ್ಮನ್ನು ಸ್ಮರಿಸುವೆವು ಕರ್ಣನಾರೈ ॥

ಅರ್ಜುನ : ಭಾವಯ್ಯ, ಕುರುಪತಿಯಾದ ಕೌರವೇಶ್ವರನೆ ಯೀ ಭೂಮಿಯನ್ನು ಆಳಲಿ. ನಾವು ಐದು ಜನರು ಅರಣ್ಯದಲ್ಲಿದ್ದುಕೊಂಡು ನಿಮ್ಮ ಸ್ಮರಣೆಯಲ್ಲಿಯೆ ವಾಸ ಮಾಡುತ್ತೇವೆ. ಕರ್ಣನನ್ನು ಸಂಹರಿಸಲು ನನಗೆ ಮನಸ್ಸು ಬರುವುದಿಲ್ಲವೊ ಭಾವ.

ಪದ

ಗಂಗಾಸುತ ದ್ರೋಣರನ್ನು ಕೊಲ್ಲುವ ವೇಳೆ ದೇವ ಕೇಳೈ
ನಾನು ಹಿಂದೆ ಸರಿದನೆ ಹೇಸಿದೆನೆ ದೇವ ಕೇಳೈ ॥

ಅರ್ಜುನ : ಹೇ ಮುರವೈರಿ, ಹಿಂದೆ ಗಂಗಾಸುತ ದ್ರೋಣರನ್ನು ಸಂಹರಿಸುವಾಗ್ಯೆ ಹಿಂದೆ ಸರಿದು ನಿಂತೆನೆ. ಯೀ ಕರ್ಣನು ಕರುಳು ಸಂಬಂಧದವನಂತೆ ಕಾಣುವನು. ಯಿವನನ್ನು ಯಷ್ಟು ಮಾತ್ರಕ್ಕೂ ಕೊಲ್ಲುವುದಿಲ್ಲವೊ ಭಾವಯ್ಯ.

ಪದ

ಯಿಂದಿರಾಪತಿ ನಿನ್ನ ಚರಣಕೊಂದಿಪೆನಯ್ಯ ದೇವ ಕೇಳೈ
ಯಿಂದಿವನನು ಕೊಲ್ಲಲಾರೆನು ಕೇಶವ ದೇವ ಕೇಳೈ ॥

ಅರ್ಜುನ : ಹೇ ಯಿಂದಿರಾಪತಿಯಾದ ಶ್ರೀಹರಿಯೆ, ನಿನ್ನ ಪಾದಕಮಲಗಳಲ್ಲಿ ನಾನು ನಮಸ್ಕರಿಸುತ್ತೇನೆ. ಯೀ ಕರ್ಣನನ್ನು ನಾನು ಯೆಷ್ಟು ಮಾತ್ರಕ್ಕೂ ಸಂಹರಿಸಲಾರೆನೋ ದೇವ ॥