ಗಣೇಶ ಬರುವಿಕೆ

ಸಾರಥಿ : ಅಯ್ಯ ಭಾಗವತರೆ ಅಡ್ಡ ಅಡ್ಡದಂತೆ ಗುಡ್ಡ ಗುಡ್ಡದಂತೆ ಕಿತ್ತ ಕೆಂಮಣ್ಣು ಮಂಟಿಯ ಆನೆಯೊಂದು ಮುಸುಡಿ ಮಾಡಿಕೊಂಡು ರಂಗಸ್ಥಳದಲ್ಲಿ ಬಂದು ನಿಂತಿರುವರು ಯಿವರಾಚವಣಂ ಅಂಜಿ ಹೇಳ ಬೇಗನ

ಭಾಗವತ : ಯಲಾ ವರಸಿದ್ಧಿ ಗಣೇಶ ಕಾಣೋ

ಸಾರಥಿ : ಸಿದ್ಧಿ ಗಣೇಶ್ವರನೋ ಬೂದಿಗಣೇಶ್ವರನೋ ಯಾಕೆ ಬಂದಿದಾರಪ್ಪ ॥

ಭಾಗವತ : ಯಲಾ ಸವಾರಿ ಮಾರ್ಗವಾಗಿ ಬಂದಿದ್ದಾರೆ ಕಾಣೋ

ಸಾರಥಿ : ಸ್ವಾಮಿ ಅಂದೆ ಅಂತಪ್ಪ ಸ್ವಾರೆಯಾದರೆ ನನಗೆ ಹತ್ತು ಯಿಪ್ಪತ್ತು ಕೊಡಿಸಬಾರದೇನಯ್

ಭಾಗವತ : ಯಲಾ ಅನುನಾಯ್ಕ ಸ್ವಾರೆ ಬೇಕಾದರೆ ಕುಂಬಾರರ ಮನೆಗೆ ಹೋದರೆ ಸಿಕ್ಕುತ್ತೆ

ಸಾರಥಿ : ಅಯ್ಯ ಭಾಗವತರೆ ಮತ್ಯಾಕೆ ಬಂದಿದ್ದಾರಪ್ಪ ಯಿವರು ॥

ಭಾಗವತ : ಯಲಾ ಹನುಮ ನಿನಗೆ ಇಷ್ಟಾರ್ಥವನ್ನು ಕೊಡುವಂಥವರು ಬಂದಿರುತ್ತಾರೆ ॥

ಸಾರಥಿ : ಸ್ವಾಮಿ ಅಂದೆ. ಹಿಟ್ಟು ಪದಾರ್ಥ ಕೊಡುವಳು ಮನೆಯಾಗಿದ್ದಾಳೆ ಅದೂ ಅಲ್ಲವೋ ॥

ಭಾಗವತ : ಯಲಾ ಅವಳು ಯಾರೋ

ಸಾರಥಿ : ಹೆಂಡರೇ ಅವ್ವಾ ಕಾಣಪ್ಪ

ಭಾಗವತ : ಯಲಾ ಹನುಮ ನಿನಗೆ ನಿನ್ನ ಹೆಂಡತಿ ಅವ್ವನೇನೋ

ಸಾರಥಿ : ಸ್ವಾಮಿ ಅಂದೆ ಹೆಂಡತೀಗೆ ಅವ್ವ ಇಲ್ಲದೇ ಉಂಟೇನೈ ॥

ಭಾಗವತ : ಯಲಾ ಸಾರಥಿ ಹೆಂಡತಿ ಅವ್ವ ಅತ್ತೆಯಾಗಬೇಕು ಕಣಪ್ಪಾ

ಸಾರಥಿ : ಅವಳು ಅತ್ತಲೆ ನಾನು ಯಿತ್ತಲೆ ಕಾಣೈಯ್ಯ ॥

ಭಾಗವತ : ಯಲಾ ಹನುಮ ನಾಯಕ ಗಣೇಶ್ವರದೇವರು ಬಂದು ಬಹಳ ಹೊತ್ತಾಯಿತು. ಪೂಜೆ ವಿಧಾನಂಗಳಂ ಮಾಡುವುದಕ್ಕೆ ಒಬ್ಬ ಜೋಯಿಸರನ್ನು ಕರೆದುಕೊಂಡು ಬರುವಂಥವನಾಗು ಹನುಮಾ॥

ಸಾರಥಿ : ಆಗಲಿ ಬುದ್ಧಿ ಹೋಗಿ ಕರೆದುಕೊಂಡು ಬರುತ್ತೇನೆ.

 

ಜೋಯಿಸರು ಬರುವಿಕೆ

ಪದ್ಯ

ನಂಮ್ಮ ಗಣೇಶನ ಕುಂಬಾರಿ ಬಂದ ನಂಮ
ವಿಘ್ನೇಶನ ಪೂಜಾರಿ ಬಂದ ಅಯ್ಯ
ವಾಡೋ ವಚ್ಚುಂಡಾಡೋ ಗೋದಾವರಿಗೆ ವಚ್ಚುಂಡಾಡೋ ಅಯ್ಯ

ಗಣಪತಿ ಮಂಗಳ

ಪದ

ಗಜಮುಖದವಗೆ ಗಣಪತಿಗೆ ಚಲ್ವಕ್ರಿ ಭಾಗವಂದಿತಗೆ
ಆರತಿ ಎತ್ತೀರೆ ಗಜಕರದೊಳು ಪಾಶಂಕುಶ ಧರಿಸಿ ಮೆರೆವಗೆ
ಕರುಣಾದಿ ಭಕ್ತಾರ ಪೊರೆವನಿಗೆ, ಆವಾಗಮನದೊಳು
ನೆನೆದ ಇಷ್ಟಾರ್ಥ ವರಗಳ ಕೊಡುವ ಗಣಂ ಗಣಪನಿಗೆ ಗಜಮುಖ ॥
ಪಾಶಂಕುಶನಿಗೆ ಮೂಷಕ ವಾಹನನಿಗೆ ದೇಶದೇಶದಿ ಪೂಜೆಗೊಂಬುವಗೆ ॥
ಈಶ್ವರನಪುತ್ರ  ಶ್ರೀ ಸುಂತೀಲ ಗಣಪಾಗೆ ಜೋತಿ ಮಾಣಿಕದ
ಆರತಿ ಎತ್ತೀರೆ ಗಜಮುಖದವಗೆ ಗಣಪಗೆ

ಭಾಮಿನಿ

ತಾರಕಾಸುರನ ಕೊಲಲೆಂದು ಶಿವನಕುಮಾರಕನಿಗರುಹಲು
ಪರ್ವತದಿ ನೆಲಸಿದ ಮೂಲೋಕದೊಡೆಯಾ ಕರುಣವಿತ್ತು ಸುಬ್ರಹ್ಮಣ್ಯ
ಸಲಹೆನ್ನ ಕುಂಡಲಮಣಿ ಮುಕುಟ ಹೇ ಸುಬ್ಬರಾಯ ಮಂಡಲನಾಯಕನೆ

ಷಣ್ಮುಖ : ಭಲೈ ಸಾರಥಿ ಹೀಗೆ ಬಾ ಮತ್ತೂ ಹೀಗೆ ಬಾ. ಭಲೈ ಸಾರಥಿ ಯೀಗ ಬಂದವರು ಧಾರುಧಾರೆಂದು ಪರಿಯಿಂದ ವಿಚಾರಮಾಡುವ ನೀ ಧಾರು ಹೀಗೆ ಬರುವಂಥವನಾಗೊ ಸಾರಥಿ.

ಸಾರಥಿ : ತಮ್ಮ ಅಟ್ಟದ ಮೇಲಾಡೋ ಪುಟ್ಟ ಸಾರಥಿಯೆಂದು ಕರೆಯುತ್ತಾರೆ ಸ್ವಾಮಿ.

ಷಣ್ಮುಖ : ಭಲೈ ಸಾರಥಿ. ಯೀರೇಳು ಲೋಕಕ್ಕೆ ಅಡಕವಾದ ಕೈಲಾಸ ಪಟ್ಟಣವನ್ನು ದಿಟ್ಟತನದಿಂದ ಪಾಲಿಸುವ ಈಶ್ವರನ ಕುಮಾರನಾದಂಥ ಷಣ್ಮುಖ ಸುಬ್ಬರಾಯನೆಂದು ಈ ಮಂದಿರದಲ್ಲಿ ವಡ್ಡೋಲಗವನ್ನು ನಡೆಸುವಂಥವನಾಗೈ ಸಾರಥಿ ಸಂತಾನ ಸಮ್ಮತಿ ॥ಮತ್ತೂ ಹೇಳುತ್ತೇನೆ ಲಾಲಿಸುವಂಥವನಾಗು.

ಸಾರಥಿ : ಹೇ ದೇವತಾಮಯೀ ಸಭಾ ಮಧ್ಯರಂಗಸ್ಥಳಕ್ಕೆ ಬಂದು ನಿಂದವರು ತಾವು ಧಾರು ಮತ್ತು ಕಾರಣವೇನು ಅಪ್ಪಣೆಯಾಗಲಿ ಸ್ವಾಮಿ ॥

ಪದ

ಭಕ್ತರ ಪೊರೆಯುವೆವು ಯೀ ಭೂಮಿಯೋಳ್
ದುಷ್ಟಾರ ಶಿಕ್ಷಿಸುವೆ ಲೀಲೆಯೊಳಗೆ
ನಮ್ಮ ಧ್ಯಾನಿಪ ಭಕ್ತರ ಕ್ಷೇಮದಿ ಪಾಲಿಸುವೆ.

ಷಣ್ಮುಖ : ಭಲೈ ಸಾರಥಿ ನಂಮ್ಮನ್ನು ಎಡೆಬಿಡದೆ ನಂಬಿರುವ ಭಕ್ತರನ್ನು ಪರಿಪಾಲಿಸಿ, ದುಷ್ಟರನ್ನು ಶಿಕ್ಷಿಸುವ ಷಣ್ಮುಖನೆಂದು ತಿಳಿಯುವಂಥವನಾಗು ಸಾರಥಿ ಸದ್ಗುಣ ಮೂರುತಿ ॥

ಪದ

ಕೈಲಾಸಗಿರಿಯನ್ನು ಪೊರೆಯುವ ಯೀಶ
ವರಕುವರ ಷಣ್ಮುಖನೆಂದೆನ್ನ ಪೊಗಳುವರಲ್ಲಿ ಯನ್ನನು

ಷಣ್ಮುಖ : ಭಲೈ ಸಾರಥಿ. ಕೈಲಾಸಗಿರಿಯನ್ನು ಆಳುವ ಯೀಶ್ವರನ ಕುಮಾರನಾದ ಎನ್ನನ್ನು ತ್ರಿಲೋಕದಲ್ಲಿಯು ಭಜಿಸುತ್ತಿರುವರೈ ಸಾರಥಿ ಸಂಧಾನ ಸಮ್ಮತೀ ॥

ಪದ

ನವಿಲು ವಾಹನವೇರಿ ನಲಿದಾಡುತ ಬಂದು
ದುಷ್ಟತಾರಕನ ಕೊಂದು ಈರೇಳು ಹದಿನಾಲ್ಕು
ಲೋಕವ ಪಾಲಿಪ ಧೀರ ಷಣ್ಮುಖನು ಕೇಳೈ ॥

ಷಣ್ಮುಖ : ಭಲೈ ಸಾರಥಿ, ನವಿಲು ವಾಹನವನ್ನು ಏರಿಕೊಂಡು ಭಕ್ತರ ಸಂತೋಷಕ್ಕಾಗಿ ಬಂದು ದುಷ್ಟನಾದ ತಾರಕಾಸುರನನ್ನು ಮರ್ದನ ಮಾಡಿದಂಥ ಷಣ್ಮುಖ ಸುಬ್ಬರಾಯನೆಂದು ತಿಳಿಯುವಂಥವನಾಗೈ ಸಾರಥಿ ಸದ್ಗುಣ ಮೂರುತಿ. ಭಲೈ ಸಾರಥಿ ನಾನು ಬಂದು ಬಹಳ ವೊತ್ತಾಯಿತು. ಆದ ಕಾರಣ ಕೈಲಾಸಪಟ್ಟಣಕ್ಕೆ ಹೋಗಿ ಬರುತ್ತೇನೆ.

ಸಾರಥಿ : ಹಾಗಾದರೆ ಕೈಲಾಸ ಪಟ್ಟಣಕ್ಕೆ ತೆರಳಬೌದು ಸ್ವಾಮಿ.

 

(ಕೃಷ್ಣದೇವರು ಬರುವಿಕೆ)

ಕೃಷ್ಣ : ಭಲೈ ಸಾರಥಿ ಹೀಗೆ ಬಾ ಮತ್ತೂ ಹೀಗೆ ಬಾ. ಭಲೈ ಸಾರಥಿ ಯೀರೇಳು ಲೋಕಕ್ಕೆ ಅಧಿಕವಾದ ಚಾರುತರವಾದ ಧೀರಚಂದ್ರಮನಂತೆ ವಾರಿಜಾಕ್ಷಿಯರ ಸುರತದಲ್ಲಿ ಮಾರನೆಂದೆನಿಸಿ, ಯೀ ಧಾರುಣಿಯ ಜನರನ್ನು ರಕ್ಷಿಪ ಕ್ಷೀರಾಬ್ಧಿಶಯನನಾದ. ನಾರಾಯಣ ಮೂರುತಿ ನಾನೇ ಅಲ್ಲವೇನೈ ಸಾರಥಿ ಸದ್ಗುಣ ಮೂರುತಿ. ಯಿನ್ನಾದರು ಹೇಳುತ್ತೇನೆ ಈ ಶಂಕು ಚಕ್ರವನ್ನು ಕರದಲ್ಲಿ ಧರಿಸಿ ಪಂಕಜನಾಭನೆಂಬ ಪರಮ ನಾಮಾಂಕಿತವುಳ್ಳ ಶ್ರೀಕೃಷ್ಣ ಮೂರುತಿ ನಾನೇ ಅಲ್ಲವೇನೈ ಸಾರಥಿ ಸದ್ಗುಣಮೂರುತಿ.

ಪದ

ಭೂಮಿಯಾ ಜನರನ್ನೂ ಪ್ರೇಮದಿಂ ಪೊರೆಯುವ
ಕಾಮಿತ ಫಲಗಳ ಕೊಡುವಾ ಗೋಪಾಲ ಬಾಲ

ಕೃಷ್ಣ : ಭಲೈ ಸೇವಕ ಯೀ ಭೂಮಿಯಲ್ಲಿರುವ ಭಕ್ತರನ್ನೂ ರಕ್ಷಿಪ. ಕ್ಷೀರಾಬ್ಧಿಶಯನನಾದ ನಾರಾಯಣ ಮೂರುತಿ ನಾನೇ ಅಲ್ಲವೇನೈ ಸಾರಥಿ ಸದ್ಗುಣ ಮೂರುತಿ.

ಪದ

ಶರಧಿಯ ಮಧ್ಯದೋಳ್ ಯಿರುವ ದ್ವಾರಾವತಿಯ ಹರುಷದಿಂದಾಳುವ
ಹರಿಯು ತಾನೆನುತಾ ಆನಂದ ಯಿಂದುವದನದೇವ ॥

ಕೃಷ್ಣ : ಭಲೈ ಸಾರಥಿ, ಸಿಂಧುವಿನ ಮಧ್ಯದಲ್ಲಿ ಅಂದವಾಗಿ ಚಂದದಿಂದ ಶೋಭಿಸುವ ಮತ್ತು ಅಂದವಾದ ದ್ವಾರಾವತಿಯನ್ನು ಆನಂದದಿಂದ ಪರಿಪಾಲಿಸುವ ಯಿಂದಿರೇಶಗೋವಿಂದ ಮೂರುತಿ ನಾನೆ ಅಲ್ಲವೇನೈ ಸೇವಕ ॥ಯೀ ಲೋಕವನ್ನೂ ಉತ್ಪತ್ತಿ ಮಾಡುವದಕ್ಕೆ ಬ್ರಹ್ಮನೇ ಕರ್ತನು. ಆತನು ಉತ್ಪತ್ತಿ ಮಾಡಿದ ಸಚರಾಚರ ಪ್ರಾಣಕೋಟಿಗಳನ್ನೂ ಪಾಲಿಸಲು ನಾನೇ ಕರ್ತನು. ಪ್ರಳಯ ಕಾಲಕ್ಕೆ ರುದ್ರನೇ ಕರ್ತನು. ಸಕಲ ವಿದ್ಯೆವೇದಂಗಳಿಗೆ ವಿನಾಯಕನೆ ಕರ್ತನು. ಭಲೈ ಸಾರಥಿ ಮತ್ತೂ ಹೇಳುತ್ತೇನೆ ಚೆನ್ನಾಗಿ ಲಾಲಿಸು॥

ಪದ

ದೇವಕಿಯೊಳು ಜನಿಸಿ ಮಾವ ಕಂಸಾನ ಕೊಂದೆ
ಯೀ ಭೂಮಿಯೊಳು ನಾನು, ಕ್ರಿಷ್ಣನೆಂದೆನಿಸಿದೆ
ಅದೇನಂದೋ ಇಂದುವದನನು ದೇವ ॥

ಕೃಷ್ಣ : ಭಲೈ ಸಾರಥಿ, ನಾನು ದೇವಕೀ ದೇವಿಯ ಗರ್ಭದಲಿ ಜನಿಸಿ, ನಂಮ ಮಾವನಾದ, ಕಂಸಾಸುರ ಧೇನುಕಾಸುರರನ್ನು ಸಂಹರಿಸಿ ಗೋಕುಲವನ್ನು ರಕ್ಷಿಸಿದಂಥ ಶ್ರೀಕೃಷ್ಣ ಮೂರುತಿ ನಾನೆ ಅಲ್ಲವೇನೈ ಸಾರಥಿ ಸದ್ಗುಣ ಮೂರುತಿ ॥ಭಲೈ ಸಾರಥಿ ನಾವು ಬಂದು ಬಹಳ ಹೊತ್ತಾಯಿತು. ಆದ ಕಾರಣ ಗೋಕುಲಕ್ಕೆ ಹೋಗಿ ಬರುತ್ತೇನೈ ಭಾಗವತರೆ॥

 

ಕಥಾರಂಭ

ರಾಗನಾಟಿವೃತ್ತ

ಶ್ರೀಮದ್‌ಗಿರೀಂದ್ರ ತನಯ ವದನಾಬ್ಜಮಿತ್ರಂ ಕಾಮಾಂತ ಕಂಭಜಿತ ರಮ್ಯ ಗಾತ್ರಂ
ಚಾಮೇಂದ್ರನಂ ಚಾರುನಿಟಿಲಾನೇತ್ರಂ  ಸೋಮಾವತಂ ಸಮರಸ್ತುತಾಸಚ್ಚರಿತ್ರಂ ॥

ಭಾಮಿನಿ

ಅರಸ ಕೇಳಿಂದಿನಲಿ ಕೌರವರರಸನೊಡ್ಡೋಲಗದೊಳೊಪ್ಪಿರೆ
ಸೇನೆಯೊಳಳಿದು ಪೋದನು ಶರದ ಗುರು
ಪಾಂಡವರು ಹರಿಸಹಿತ ತೆರಳಿದರು ಪಾಳಯಕೆ ॥

ಭಾಗವತ : ಅಸಮಾನ ಶೌರ‌್ಯ ಧುರಂಧುರರಾದ ದ್ರೋಣಾಚಾರ‌್ಯರು, ರಾಜಾಧಿರಾಜ ಮಾರ್ತಾಂಡ ವುದ್ದಂಡ ಭುಜ ಬಲೋರ್ದಾಂಡ  ಹಿಂಡುಗಲಿಗಳ ಮಿಂಡ ಮೂರುಲೋಕದ ಗಂಡನೆಂದು ಪ್ರಖ್ಯಾತಿಯಂ ಪಡೆದಿರುವ ಅರ್ಜುನನ ಶರಸಂಧಾನದಲ್ಲಿ ಮುಳುಗಿ, ಸುರಪುರವನ್ನೂ ಸಾರಲು ಅಲ್ಲಿಂದ ಪಾಂಡವರು ಜಯಶೀಲರಾಗಿ, ಲಕ್ಷ್ಮೀಲೋಲನಾದ ಶ್ರೀ ಹರಿಸಹಿತ ಮರಳಿ ಪಾಳಯಕೆ ಬಂದು ಯಿತ್ತ ಶಕ್ತ ಪ್ರಸ್ತಪುರಿಯಲ್ಲಿ ಯಾವ ರೀತಿ ವಡ್ಡೋಲಗಸ್ತರಾದರು ಎಂದರೆ

 

(ಪಾಂಡವರ ಸಭೆ)

ಭಾಗವತ : ಭಳಿರೆ ರಾಜಾಧಿರಾಜ ರಾಜಕೀರ್ತಿ ಮನೋಹರ ನತಜನೋದ್ಧಾರ ವೀರ ಬಹುಪರಾಕು-

ಧರ್ಮಜ : ಬನ್ನಿರೈಯ್ಯಿ ಭಾಗವತರೆ ॥

ಭಾಗವತ : ತಾವು ಯಾರು ತಂಮ್ಮಗಳ ನಾಮಾಂಕಿತವೇನು.

ಧರ್ಮಜ : ಯಿಂದ್ರಪ್ರಸ್ತ ಪಟ್ಟಣಕ್ಕೆ ಯಾರೆಂದು ಕೇಳಿಬಲ್ಲಿರಿ.

ಭಾಗವತ : ಸತ್ಯಸಂಧನಾದ ಯುಧಿಷ್ಟಿರ ಮಹಾರಾಜನೆಂದು ಕೇಳಿಬಲ್ಲೆ ॥

ಧರ್ಮಜ : ಹಾಗೆಂದುಕೊಳ್ಳಭೌದು.

ಭಾಗವತ : ಬಂದಂಥ ಕಾರಣವೇನು?

ಧರ್ಮಜ : ಬಹಳ ಬಹಳವುಂಟು.

ಭಾಗವತ : ಯೀಗ ನಂಮಿಂದ ಆಗಬೇಕಾದ ಕಾರಣವೇನು.

ಧರ್ಮಜ : ಅಯ್ಯ ಭಾಗವತರೆ, ನಂಮ್ಮ ಭಾವೈಯ್ಯನವರಾದ ಶ್ರೀಕೃಷ್ಣದೇವರನ್ನು ಬರಮಾಡಿ ಭೇಟಿ ಮಾಡಿಸಿಕೊಡಿ.

ಭಾಗವತ : ಮಹಾರಾಜನ ಅಪ್ಪಣೆಯಂತೆ ಕರೆಸಿಕೊಡುತ್ತೇನೆ. ಯೋಗ್ಯಸ್ಥಾನದಲ್ಲಿ ಕುಳಿತುಕೊಂಡು ವಿಶ್ರಮಿಸಿಕೊಳ್ಳಿರಿ. ಚಾರಕ ಶ್ರೀಕೃಷ್ಣ ದೇವರನ್ನು ಬರಮಾಡುವನಾಗು ॥

 

(ಶ್ರೀಕೃಷ್ಣದೇವರು ಬರುವಿಕೆ)

ಪದ

ಆಡುತಾಡುತಾ ಬಂದ ಹರಿಯು ಸಂತೋಷದಿ ಆಡುತಾಡುತ
ಬಂದ ಹರಿಯು ಆಡುತ ಪಾಡುತ ಕೂಡುತ ನಲಿಯುತ
ಸಂತೋಷದಿಂದ ಆಡುತಾಡುತಾ ಬಂದ ಹರಿಯು ॥

ಭಾಗವತ : ಭಳಿರೇ ರಾಜಾಧಿರಾಜ ಕೀರ್ತಿ ಮನೋಹರ.

ಕೃಷ್ಣ : ಬನ್ನಿರೈಯ್ಯಿ ಭಾಗವತರೇ

ಭಾಗವತ : ತಾವು ಯಾರು, ತಂಮ್ಮ ಸ್ಥಳ ನಾಮಾಂಕಿತ ಯಾವುದು?

ಕೃಷ್ಣ : ಸಿಂಧುವಿನ ಮಧ್ಯದಲಿ ಚಂದದಿಂದ ಶೋಭಿಸುವ ಅಂದವಾದ ದ್ವಾರಕಾವತಿಗೆ ಯಾರೆಂದು ಕೇಳಬಲ್ಲಿರಿ

ಭಾಗವತ : ಶಂಕುಚಕ್ರ ಗದಾಧಾರಿಯಾದ ಕೃಷ್ಣದೇವರೆಂದು ಕೇಳಿ ಬಲ್ಲೈವೈ ದೇವ ಭಕ್ತಸಂಜೀವ ॥

ಕೃಷ್ಣ : ಹಾಗೆಂದುಕೊಳ್ಳಬೌದು ॥

ಭಾಗವತ : ದಯಮಾಡಿಸಿದ ಕಾರಣವೇನು ॥

ಕೃಷ್ಣ : ಬಹಳ ಬಹಳವುಂಟು ॥

ಭಾಗವತ :  ಮತ್ತೇನಾಗಬೇಕು ॥

ಕೃಷ್ಣ : ಯೀ ಯಿಂದ್ರಪ್ರಸ್ತ ಪಟ್ಟಣವನ್ನು ಪರಿಪಾಲಿಸುವ ಸತ್ಯಸಂಧನಾದ ಯುಧಿಷ್ಠಿರ ಮಹರಾಜನು ಧಾವಲ್ಲಿರುವನು ಭೇಟಿ ಮಾಡಿಸಿಕೊಡಿರಿ.

ಭಾಗವತ : ರಾಜಾಸ್ಥಾನದಲ್ಲಿ ವಡ್ಡೋಲಗಸ್ತರಾಗಿ ಕುಳಿತಿರುವರು.

ಧರ್ಮಜ : ಭಾವಯ್ಯನವರ ಪಾದಕ್ಕೆ ನಮಸ್ಕಾರ ದೇವ ಭಕ್ತ ಸಂಜೀವ ॥

ಕೃಷ್ಣ : ನಿನಗೆ ಮಂಗಳವಾಗಲಯ್ಯ ಸತ್ಯಸಂಧನಾದ ಧರ್ಮಜನೆ. ಯನ್ನನ್ನು ಇಷ್ಟು ಜಾಗ್ರತೆಯಿಂದ ಕರೆಸಿಕೊಂಡ ಕಾರಣವೇನು ಚೆನ್ನಾಗಿ ಹೇಳುವಂಥವನಾಗು.

ಧರ್ಮಜ : ಭಾವಯ್ಯ ಅರಿಕೆ ಮಾಡಿಕೊಳ್ಳುತ್ತೇನೆ ಚಿತ್ತವಿಟ್ಟು ಲಾಲಿಸಬೇಕೋ ದೇವ ಭಕ್ತ ಸಂಜೀವ.

ಭಾಮಿನಿ

ಹರಿಯ ಚರಣಕೆ ನಮಿಸಿ ಧರ್ಮಜ ಪರಮಭಕ್ತಿಯೊಳಗೆ ದೇವರ
ಕರುಣವುಳ್ಳವರೇನು ಧನ್ಯರೋ ಧರಣಿಯೊಳಗೆಂದ ॥

ಧರ್ಮಜ : ಭಾವಯ್ಯ, ತಂಮ್ಮ ಕರುಣಕಟಾಕ್ಷವೆಂಬ ದಯಾರಸವು ನಂಮ್ಮಲ್ಲಿ ನೆಲೆಗೊಂಡ ಕಾರಣದಿಂದ ನಾವು ಧನ್ಯರಾದ ಸುಕೃತವನ್ನು ಎಷ್ಟೆಂದು ಹೇಳಿದರು ತೀರದಲ್ಲೊ ಭಾವಯ್ಯ ಲಕ್ಷ್ಮಿಲೋಲ॥

ಕೃಷ್ಣ :  ಅಯ್ಯ ಧರ್ಮಜ. ಯೆಷ್ಟು ಹೇಳಿದರು ತೀರದೆಂದು ಪೇಳುವೆಯಲ್ಲಾ. ನಾನು ನಿಮಗೆ ಮಾಡಿದ ಸುಕ್ರುತವೇನು. ಭಾವಯ್ಯ ಹಾಗಾದರೆ ಬಿನ್ನವಿಸಿಕೊಳ್ಳುತ್ತೇನೆ

ಪದ ರಾಗ ಜಂಪೆ

ಜಲಜಾಕ್ಷ ತವಚರಣ ಸಲಿಲಜನ ಕೃಪೆಯಿರಲು
ಕಲಶಾಧಿ ಸುಭಟರನು ಗೆಲಿದೇ ನಾನಿಂದು ॥

ಧರ್ಮಜ  : ಜಲಜಾಕ್ಷನಾದಂಥ ಹೇ ಶ್ರೀಹರಿಯೇ, ಸರ‌್ವಕಾಲದಲ್ಲಿಯು ತಮ್ಮ ಚರಣಾರವಿಂದದ ಕೃಪಾಕಟಾಕ್ಷವು ಸಂಪೂರ್ಣವಾಗಿ ನಮ್ಮ ಮೇಲೆ ಯಿದ್ದದ್ದರಿಂದ ನೆನ್ನೆಯ ದಿವಸ ನಡೆದ ಯುದ್ಧಲ್ಲಿ ಕಲಶಜರಾದ ದ್ರೋಣಾಚಾರ‌್ಯ ಆದಿಯಾಗಿ ಅನೇಕ ಜನ ಸುಭಟರನ್ನು ಗೆದ್ದಂಥವರಾದೆವು ಭಾವಯ್ಯ ಯಿಷ್ಟು ಸಾಲದೆ…….

ಕೃಷ್ಣ : ಅಯ್ಯ ಧರ್ಮಜ ಕೊಂಚ ಹೇಳುತ್ತೇನೆ ಲಾಲಿಸೊ ಧರ್ಮಜ ॥

ಪದ

ನಿಂನ ಧರ್ಮಫಲ  ಅನ್ಯರನು ಜೈಸಿದುದು ಯನ್ನಿಂದ ಅಹುದೇನು ಪೇಳು ನೀನೆಂದ

ಕೃಷ್ಣ : ಹೇ ಸತ್ಯಸಂಧನಾದ ಧರ್ಮಜನೆ, ವೃಥಾ ಯಂನನ್ನು ಯಾತಕ್ಕೆ ಹೊಗಳುವೆ. ನಂನ್ನಿಂದ ಆದದ್ದೇನು. ಮುಖ್ಯವಾಗಿ ನೀನು ಮಾಡಿದ ದಾನಧರ್ಮದಿಂದ ನಿನ್ನ ಶತ್ರುಗಳು ಮೃತ್ಯುವಿಗೆ ತುತ್ತಾದರು. ಅಹುದೊ ಯಿಲ್ಲವೊ ನೀನೆ ಯೋಚನೆಯನ್ನು ಮಾಡು

ಧರ್ಮಜ : ಭಾವಯ್ಯ ಶ್ರೀಹರಿಯೆ, ಅಪ್ಪಣೆಯನ್ನು ಕೊಡು ಅರಿಕೆ ಮಾಡಿಕೊಳ್ಳುತ್ತೇನೆ.

ಪದ

ಕರುಣವಾರುಧಿ ನೀನು ಅರುಹುವದು ಸಹಜಗುಣ
ಧರೆಯೊಳಗೆ ಸುಜನರು ತಂಮ್ಮ ಪೊಗಳುವರೆ

ಧರ್ಮಜ : ಭಾವಯ್ಯ ಹೇ ಕರುಣಾ ವಾರುಧಿಯೆ ತಾವೇನೊ  ಮೊದಲು ಅಪ್ಪಣೆ ಕೊಡಿಸಿದ್ದು ಸಹಜ. ಆದರೆ ಯೀ ಪೃಥ್ವಿಯಲ್ಲಿ ಸತ್ಪುರುಷರಾದವರು ತಾವು ಮಾಡಿದ ಸಾಹಸವನ್ನು ತಾವೇ ತಂಮ್ಮ ಬಾಯಿಂದ ಹೇಳಿಕೊಳ್ಳುವರುಂಟೆ, ಹೇಳಿಕೊಳ್ಳಲಾರರು  ಹೇ ತ್ರಿಜಗತ್ ಪಾವನ ಅನಾಥರಕ್ಷಕ  ಭಾವಯ್ಯ ಮತ್ತೂ ಹೇಳುತ್ತೇನೆ ಲಾಲಿಸಬೇಕು॥

ಪದ

ತವ ಚರಣಕೃಪೆಯಿರಲೂ ಅನುಜರು ಇನ್ನುಳಿದವರ
ಗೆಲಲಸಾಧ್ಯವು ಎಂದು ನಮಿಸಿದ ಧರ್ಮಜನು ॥

ಧರ್ಮಜ : ಭಾವಯ್ಯ, ತಂಮ ಕೃಪಾಕಟಾಕ್ಷವೇನೋ ನಂಮ್ಮ ಮೇಲೆ ಸಂಪೂರ್ಣವಾಗಿರುವಲ್ಲಿ, ಮುಂದಿರತಕ್ಕ ಮಹಾಭಾರವನ್ನು ಅನುಜರಾದ ಭೀಮಾರ್ಜುನರಿಂದ ಸಂಹಾರವನ್ನು ಮಾಡಿಸಿ, ಯಶೋಲಾಭವನ್ನೂ ತೆಗೆದುಕೊಳ್ಳುವಂಥವರಾಗಿರಿ ಭಾವಯ್ಯನವರೇ ಶ್ರೀಹರಿ ॥

ಕೃಷ್ಣ : ಅಯ್ಯ ಧರ್ಮಜ, ಮುಂದೇ ಯಿರತಕ್ಕ ಮಹಾರಥರು ಅಂತಾ ಶೂರರೇನಯ್ಯ ಯುಧಿಷ್ಠಿರನೇ॥

ಧರ್ಮಜ : ಭಾವಯ್ಯ ಶೂರರಲ್ಲವೇ ಹೇಳುತ್ತೇನೆ ಚನ್ನಾಗಿ ಆಲೈಸುವಂಥವರಾಗಿರಿ ॥

ಪದ

ಅಳಿದ ಭಟರಬಲಾರು, ವುಳಿದ ವೀರರ ಗೆಲಿದು
ಬಳಿಕ ನಮಗುಪಕಾರ ವಿರಚಿಸೆಂದ॥

ಧರ್ಮಜ : ಭಾವಯ್ಯ, ರಣದಲ್ಲಿ ವುಳಿದಿರತಕ್ಕ ಅಸಹಾಯಶೂರರಾದ ಕರ್ಣಾಧಿಪಗಳನ್ನೂ ಜಯಪ್ರದವನ್ನು ಮಾಡಿಸಿ ನಂಮ್ಮನ್ನೂ ವುದ್ದಾರ ಮಾಡಬೇಕು ಭಾವಯ್ಯ, ಯಿಷ್ಟೇ ನನ್ನ ವಿಜ್ಞಾಪನೆ ತಿಳಿಯಿತೋ ಯಿಲ್ಲವೋ ಹೇಳಿರಿ.

ಕೃಷ್ಣ : ಅಯ್ಯ ಧರ್ಮಜ, ನಿನ್ನ ವಿಜ್ಞಾಪನೆಯನ್ನು ಎಷ್ಟು ಹೇಳಿದರು ತೀರದು. ಪಾರಂಗತವೇ ಇಲ್ಲದ ಹಾಗೆ, ನಿಮ್ಮ ನಡತೆಗಳನ್ನು ಯೋಚನೆ ಮಾಡಿ ನೋಡಿದ್ದೇಯಾದರೆ ನನಗೆ ನಾಚಿಕೆ ಬರುವದಲ್ಲೈಯ್ಯ ಧರ್ಮಜ.

ಧರ್ಮಜ : ಭಾವಯ್ಯ ಪರಮಾತ್ಮನೆ, ನಿಮ್ಮ ಮನಸ್ಸಿಗೆ ನಾಚಿಕೆ ಬರುವಂತೆ ಆಗಿರುವದೇನು ಅಪ್ಪಣೆಯಾಗಲಿ ಶ್ರೀಹರಿ ॥

ಕೃಷ್ಣ : ಹಾಗಾದರೆ ಬಾಯಿ ಬಿಡಲೊ ಹೇಳುತ್ತೇನೆ ॥

ಭಾಮಿನಿ

ಎಲೆಲೆ ಧರ್ಮಜ ಸಾಕು ಸುಮ್ಮನೆ ಬರಿದೆ ಪೊಗಳುವೆ ಯಾಕೆ
ನಿನ್ನಯ ಅನುಜರೊಳು ಕಡು ಅಧಮ ಭೀಮನು ನುಡಿದುದೇನರಿಯಾ

ಕೃಷ್ಣ : ಎಲೈ ಧರ್ಮಜ ಸಾಕು ಸಾಕು ಬಿಡು. ಸುಮ್ಮನೆ ಯಾತಕ್ಕೆ ಈ ರಾಜಸಭೆಯಲ್ಲಿ ಹೊಗಳಿಕೊಳ್ಳುತ್ತೀಯ. ನಿನ್ನ ಅನುಜರ ಪೈಕಿ ಕಡು ಅಧಮನಾದ ಭೀಮನು ಈ ಮುಂಚೆ ಮಾಡಿಕೊಂಡಿರತಕ್ಕ ಪ್ರತಿಜ್ಞೆಯನ್ನೂ ಮರೆತೆಯಾ ಸಾಕು ಸಾಕು ಸಾರ್ಥಕವಾಯಿತು –

ಧರ್ಮ : ಭಾವಯ್ಯನವರೆ ಮರೆತು ಇರುವೆನು. ಜ್ಞಾಪಕ ಕೊಡಬೇಕು.

ಭಾಮಿನಿ

ಕಡು ಪರಾಕ್ರಮಿ ಕೌರವನುಜನ ಬಿಡದೆ ವುದರವ ಸೀಳಿ
ನಾರಿ ಮುಡಿಯ ಕಟ್ಟುವೆನೆಂಬ ಭಾಷೆಯ ಕೇಳಿ ನಾಚುವೆನೂ ॥

ಕೃಷ್ಣ : ಅಯ್ಯ ಧರ್ಮಜ, ಕುರುಬಲದಲ್ಲಿ ಕಡು ಪರಾಕ್ರಮಿಯಾದ ಕೌವರವನ ತಮ್ಮನಾದ ದುಶ್ಯಾಸನನು ಪೂರ್ವದೋಳ್ ರಾಜಸ್ತೋಮದಲ್ಲಿ ನಿಮ್ಮ ಧರ್ಮಪತ್ನಿಯಾದ ದ್ರೌಪದಿಯನ್ನು ನಿಲ್ಲಿಸಿಕೊಂಡು ಶೀರೆಯನ್ನು ಶೆಳೆದು ಮಾನಭಂಗವನ್ನು ಮಾಡುವ ವೇಳೆ, ನಿನ್ನ ತಮ್ಮನಾದ ಭೀಮನು ದುಶ್ಯಾಸನನ ವುದರವನ್ನೂ ಸೀಳಿ-ಪೊಳಗಿರತಕ್ಕ ತಿಳಿರಕ್ತವನ್ನೂ ತೆಗೆದು – ದ್ರೌಪದಿಯ ಕುರುಳು ನೆನೆಯುವಂತೆ ಹಚ್ಚಿ, ಅವನ ಹಲ್ಲುಗಳನ್ನು ಕಿತ್ತು ಮುಡಿಯನ್ನು ಬಾಚಿ ಕಟ್ಟುತ್ತೇನೆಂಬುದಾಗಿ ಪಂಥವನ್ನೂ ಮಾಡಿಕೊಂಡಿರಲಿಲ್ಲವೆ – ಮರೆತು ಬಿಟ್ಟೆಯಾ. ಈ ಪಂಥವೂ ಪೂರೈಸಿತೊ. ಪೂರೈಸಲಿಲ್ಲಾ. ಅಂದಿನಿಂದ ಯನ್ನ ಸಹೋದರಿಯ ಸಂಕಟವನ್ನು ಸಹಿಸಿಕೊಳ್ಳಲಾರೆನು. ನಿಮ್ಮ ಜನ್ಮಕ್ಕೆ ನಾಚಿಕೆಯಾಗು ವುದಿಲ್ಲವೆ ಸುಮ್ಮನಿರು.

ಧರ್ಮಜ : ಭಾವಯ್ಯನವರೆ ಯೀಗಲು ನಿಮ್ಮ ಕೃಪಾಕಟಾಕ್ಷವು ನಂಮ್ಮ ಮೇಲೆ ಯಿರಲು ದುಶ್ಯಾಸನನ ವಧೆಯನ್ನೂ ಮಾಡುವುದು ತಮ್ಮನಾದ ಭೀಮನಿಗೇನು ದೊಡ್ಡದಲ್ಲ ಯೋಚನೆ ಮಾಡಿರಿ…

ಕೃಷ್ಣ : ಅಯ್ಯ ಧರ್ಮಜ, ವಂದು ವೇಳೆ ಭೀಮನು ದುಶ್ಯಾಸನನ ವಧೆಯನ್ನೂ ಮಾಡ್ಯಾನು ಅನಂತರ ಮತ್ತೊಂದು ಕಂಟಕವಿರುವದಲ್ಲಯ್ಯ ಧರ್ಮಜನೆ ಹೇಳು ನೋಡುವ.