ಭಾಮಿನಿ

ವೀರ ಸಮಸಪ್ತಕರು ಸೇನಾ ವಾರುಧಿಯ ಪೊಕ್ಕಾಗ
ವೋರ್ವ ಚಾರಕನ ಕರೆದು ಪೇಳ್ವರು ಭೂರಿ ಹರುಷದಲಿ ॥

ದೈತ್ಯರು : ಯಲಾ ಚಾರಕ ಹತ್ತಿರಕ್ಕೆ ಬಾ ಹೇಳುವೆವು ಕೇಳು ॥

ಪದ

ಭರದಿಂ ವೀಳ್ಯವ ಕೊಡುತ ಹೂಂಕರಿಸಿ ಪರಾಕ್ರಮವೆನುತ
ಚರರನು ಕರೆದುಸುರಿದರು ಭೂರಿ ಹರುಷದಿ ಸಮಸಪ್ತಕರು

ದೈತ್ಯರು : ಯಲೋ ದೂತ, ಜಾಗ್ರತೆ ಅರ್ಜುನನ ಬಳಿಗೆ ಹೋಗಿ ದನಕಾಯುವ ಸಲ್ಲದ ಗೊಲ್ಲ ಸಾರಥಿಯಾಗಿದ್ದಾನೆ ಬಲ್ಲೆಯಾ. ಯೀವತ್ತಿನ ರಣಾಗ್ರಕ್ಕೆ ಅವನನ್ನು ಬಿಟ್ಟು ಶಶಿಮೌಳಿಯಾದ ಶಂಕರನನ್ನೂ ಬೆಂಬಲಕ್ಕೆ ಕರೆದುಕೊಂಡು ಬರಬೇಕೆಂದು ಹೇಳುವನಾಗು ॥

ಸಾರಥಿ : ಹುಕ್ಕೊ ಅಪ್ಪಣೆ. ನಿಮ್ಮ ಮಾತಿನಂತೆ ಹೋಗಿ ಕರೆಯುತ್ತೇನೆ. ಕರೆದುದ್ದಕ್ಕೆ ಬಂದರೇನೊ ಸರಿ ಬಾರದೆ ಹೋದರೆ ನಾನೇನು ನೋಡಲಿಲ್ಲ ॥

ಪದ

ಎಂದಾತನ ಮುಂದೆ ನುಡಿದು ನೀನ್ ಕುಂದದೆ ಶರಗನು ಪಿಡಿದು
ಬೇಗದೊಳಗೆ ಬಹುದೆಂದು ನೀ ಹೋಗಿ ಕರೆದು ತಾರೆಂದು ॥

ದೈತ್ಯರು : ಯಲಾ ದೂತ, ಆ ಧಗಡಿಯಾದ ಅರ್ಜುನನನ್ನೂ ಛಲೋ ಮಾತಿನಲ್ಲಿ ಕರೆದದ್ದಕ್ಕೆ ಬಂದರೆ ಸರಿ. ಬಾರದೆ ಹೋದರೆ ಅವನ ಶರಗನ್ನೂ ಹಿಡಿದುಕೊಂಡು ಮುಖ ನೋಡದೆ ಧರಾಧರನೆ ಎಳೆದುಕೊಂಡು ಬರುವಂಥವನಾಗು.

ಸಾರಥಿ : ನಿನ್ನ ಮಾತಿನಂತೆ ಹೋಗಿ ಶರಗನ್ನು ಹಿಡಿದು ಯೆಳೆದರೆ ಗೋಣು ಮುರಿಸಿಕೊಂಡು ಬರುತ್ತೇನೆ, ಆಗಲಿ ಹೋಗಿ ಬರುತ್ತೇನೆ.

ಅರ್ಜುನ : ಯಲಾ ಚಾರಕ ನೀನು ದಾರು ಎಲ್ಲಿಂದ ಬಂದಂಥವನಾದಿ ಧಾರ ಕಡೆಯವ?

ಸಾರಥಿ : ನಾನು ಸಮಸಪ್ತಕರ ಕಡೆ ಚಾರಕ. ಪಾತಾಳ ಲೋಕದಿಂದ ಬಂದುಯಿದ್ದೇನೆ ॥

ಅರ್ಜುನ : ಯಲಾ ಚಾರಕ ಚಿಂತೆಯಿಲ್ಲ ಗೊತ್ತಾಯಿತು. ನನ್ನಲ್ಲಿಗೆ ನಿನ್ನನ್ನು ಯಾತಕ್ಕೋಸ್ಕರ ಕಳುಹಿಸಿರುತ್ತಾರೆ.

ಪದ

ಲಾಲಿಸಿ ಕೇಳಿಂದ್ರಜಾತ ನಾ ಪೇಳುವೆನು ಮಾತ
ಕರೆದು ಬಾರೆಂದು ಕಳುಹಿದರು ನಿಮ್ಮನು ಧುರಕೆ

ಸಾರಥಿ : ನಮ್ಮ ದೊರೆಗಳು ನಿಮ್ಮಲ್ಲಿ ಯುದ್ಧ  ಮಾಡುವುದಕ್ಕಾಗಿ ಕರೆದುಕೊಂಡು ಬರಹೇಳಿದ್ದಾರೆ ಅಪ್ಪಣೆಯಾಗಬೇಕು.

ಅರ್ಜುನ : ಯಲಾ ಚಾರಕ, ರಣಾಗ್ರಕ್ಕೆ ವಿನಹ ಮತ್ತೇನಿರುವುದು ಹೇಳುವನಾಗು.

ಪದ

ನಂದಗೋಪನ ಬಿಟ್ಟೀಗ ನೀ ಕರೆಸಿಕೋ ಶಶಿಮೌಳಿಯ
ಬೆಂಬಲಕೀಗ ಯಿಂದಿನ ರಣದೊಳು ಬದುಕಿದೆಯಾದರೆ
ಯೆಂದೆಂದಿಗು ನೀ ಬದುಕಿರುವುದು ಸಹಜ ॥

ಸಾರಥಿ : ಕೃಷ್ಣನನ್ನು ಬಿಟ್ಟು ಯೀಶ್ವರ ಮಹದೇವರ್ಗೆ ಕರೆದುಕೊಂಡು ಬರಬೇಕು. ಯಿವತ್ತಿನ ರಣಾಗ್ರದಲ್ಲಿ ನೀವು ಬದುಕಿದ್ದೆಯಾದರೆ ನಿಮಗೆ ಯೆಂದೆಂದಿಗು ಭಯವಿಲ್ಲ.

ಅರ್ಜುನ : ಯಲಾ ಚಾರಕ ಶಹಬಾಶ್, ನೀನಿಷ್ಟು ಹೇಳುವಲ್ಲಿ ಆ ಸಮಸಪ್ತಕರು ಅಸಹಾಯ ಶೂರರೆ ಸರಿ ಚಿಂತೆಯಿಲ್ಲ ಹೇಳುವೆನು ॥

ಭಾಮಿನಿ

ಚರರ ನುಡಿಯನು ಕೇಳಿ ನಗುತಲಿ ನರನು ಪೇಳಿದನೊಲವಿನಿಂದಲಿ
ಬರುವೆವೈ ಸಂಗರಕೇ ಬೇಕಾದವರನೊಡಗೊಂಡು ॥

ಅರ್ಜುನ : ಯಲಾ ಚಾರಕ, ಯೀ ನಿನ್ನ ವಾಕ್ಯವನ್ನು ಕೇಳಿ ಬಹಳ ಸಂತೋಷವಾಯಿತು. ನಿಮ್ಮ ದೊರೆಗಳಾದ ಸಮಸಪ್ತಕರಿಗೆ ಬೇಕಾದ ಸನ್ನಾಹಗಳನ್ನು ಮಾಡಿಕೊಂಡು ಯುದ್ಧಕ್ಕೆ ಬರುತ್ತಾರೆಂದು ಹೇಳುವನಾಗು ನಡೀ ನಿಲ್ಲಬೇಡ ॥

ಭಾಮಿನಿ

ತೆರಳು ಯನುತಲಿ ಕಳುಹಲಿತ್ತಲು ತರಣಿಜನ ಚಾರಕನು
ಬಂದು ನರನೊಳೆಂದನು ರಣ ಸಾಮಾನ್ಯವಲ್ಲೆಂದ ॥

ಸಾರಥಿ : ಅಗಡದೀ ಬುದ್ದಿ ಸಲಾಂ ತೆಗೆದುಕೊಳ್ಳಿ ॥

ಅರ್ಜುನ : ಯಲಾ ಚಾರಕ, ನೀನು ಧಾರು ನೀನು ಬಂದಿರುವ ಸಂಗತಿಯೇನು ಹೇಳುವನಾಗು.

ಸಾರಥಿ : ಅಪ್ಪೋ ಅರ್ಜುನಪ್ಪ ಕವುರಪ್ಪನ ಕಡೆ ಕರ್ಣಪ್ಪನಿಗೆ ಸಾರಥಿ. ಅವರಿಗೂ ನಿಮಗೂ ಕುಸ್ತಿ ನಡೆಯಬೇಕಂತೆ. ಸಬೂಬ್ ಹೇಳದೆ ಜಲ್ದಿ ಬರಬೇಕಂತೆ ॥

ಅರ್ಜುನ : ಯಲಾ ಚಾರಕ, ವೊಳ್ಳೇದು ಯಿದು ವೊಂದಿರಲಿ ಹತ್ತರೊಳಗೆ ಹನ್ನೊಂದು ಯಂಬ ಗಾದೆಗೆ ಬಂದಿತು. ಕರ್ಣನು ಯೀ ಮುಂಚೆ ಹೊಡೆದ ಪೆಟ್ಟುಗಳನ್ನೂ ತರಹರಿಸಿಕೊಂಡಿದ್ದಾನೆ. ಅವನಿಗೂ ಬರುತ್ತಾರೆಂದು ನೀನೀಕ್ಷಣವೆ ಹೇಳುವನಾಗು ನಡಿ ನಿಲ್ಲಬೇಡ ॥

ಭಾಮಿನಿ

ಬರುವೆ ನಡೆ ಯಂದವನ ಕಳುಹಿಸಿ ಹರಿಗೆ ವಂದಿಸಿ
ಫಲುಗುಣನು ಯಿತ್ತರ ದೂತರು ಯಿಲ್ಲ ದೇವರಭಿಮತವು ॥

ಅರ್ಜುನ : ಹೇ ಭಾವಯ್ಯ ಶ್ರೀ ಹರಿಯೆ, ಯೇಕ ಕಾಲದಲ್ಲಿ ರಣಾಗ್ರಕ್ಕೆ ಬರಬೇಕೆಂದು ಪಾತಾಳಲೋಕದಿಂದ ಸಮಸಪ್ತಕರು ಚಾರಕನನ್ನು ಕಳುಹಿಸಿದ್ದರು. ಯಿತ್ತ ಕುರು ಬಲದಲ್ಲಿ ಕರ್ಣನು ರಣಾಗ್ರಕ್ಕೆ ಬರಬೇಕೆಂದು ಚಾರಕನನ್ನು ಕಳುಹಿಸಿದ್ದನು. ಹೀಗಿರುವಲ್ಲಿ ಭಾವಯ್ಯ ಏನು ಮಾಡಬೇಕು ಅಪ್ಪಣೆಯಾಗಲಿ ॥

ಕೃಷ್ಣ : ಅರ್ಜುನ ಯಿದು ಸ್ವಲ್ಪ ಕೆಲಸ ತಾನೆ ಹೇಳುವೆನು.

ಭಾಮಿನಿ

ಯನಲು ಪೇಳಿದ ಹರಿಯು ಭೀಮ ಯಮಜರು
ತರಣಿಜರೊಳಗೆ ಕಾದಲಿ ದುರುಳರನು ಗೆಲುವುದಕ್ಕೆ ನಡಿ
ಯನುತಾ ರಥವ ತಾ ಹರಿಸಿದನು ಬೇಗದಲಿ

ಕೃಷ್ಣ : ಅರ್ಜುನ ಕುರುಬಲಕ್ಕೆ ಕರ್ಣನ ಮೇಲೆ ನಿಮ್ಮ ಅಗ್ರಜರಾದ ಧರ್ಮರಾಯ ಭೀಮಸೇನ ಯಿವರೀರ್ವರು ತೆರಳಲಿ. ನಾವೀರ್ವರು ಪಾತಾಳ ಲೋಕಕ್ಕೆ ಸಮಸಪ್ತಕರ ಮೇಲೆ ಯುದ್ಧಕ್ಕೆ ಹೋಗೋಣ ರಥಾರೂಢನಾಗೈಯ್ಯ ಅರ್ಜುನ.

ಪದ ರಾಗ ಝಂಪೆ

ಹೋಗಲಾ ನರಹರಿಯು ಆಗ ದೈತ್ಯರ
ವಧೆಗೆ ಸಾಗಿದನು ಕುರುಬಲಕೆ ಬೇಗ ಪವನಜನು ॥

ಭೀಮ : ಆಹಾ ಭಾವಯ್ಯನವರು ಅರ್ಜುನ ಸಹ ಸಮಸಪ್ತಕರ ಸಂಹರಿಸುವುದಕ್ಕೆ ಹೊರಟು ಹೋದರು. ನಾನು ಕುರುಬಲದಲ್ಲಿ ನನ್ನ ವೈರಿಯಾದ ದುಶ್ಯಾಸನನನ್ನು ಸಂಹಾರ ಮಾಡುವುದಕ್ಕೆ ಹೋಗುತ್ತೇನೆ.

ಪದ

ವರ ಯುಧಿಷ್ಟಿರ ತಾನು ತರಣಿಜನ ಗೆಲುವುದಕೆ
ತರಿಸಿದನು ದಿವ್ಯರಥ ತುರಗಗಳ ಹೂಡೆ ॥

ಧರ್ಮಜ : ಯಲಾ ಚಾರಕ, ಕರ್ಣನ ಮೇಲೆ ಯೀಕ್ಷಣವೆ ರಣಾಗ್ರಕ್ಕೆ ಹೋಗಬೇಕೆಂದು ಭಾವಯ್ಯನವರ ಅಪ್ಪಣೆಯಾಗಿರುವುದರಿಂದ ಸಿದ್ಧವಾಗಿ ಹೊರಟಿರುತ್ತೇನೆ. ವಾಯುವೇಗ ಮನೋವೇಗದಲ್ಲಿ ಹೋಗತಕ್ಕ ಕುದುರೆಗಳನ್ನೂ ತಂದು ರಥಕ್ಕೆ ಹೂಡುವಂಥವನಾಗು.

ಪದ

ಕರದೊಳಗೆ ಧನುವಾಂತು ಯಿರುವ ಭೂಪನ ಕಂಡು
ತರುಣೀಮಣಿ ದ್ರೌಪದಿಯು ಅರಸನನ್ನು ತಡೆಯೆ –

ದ್ರೌಪದಿ : ಪತಿಯ ಪಾದಕ್ಕೆ ವಂದಿಸುವೆನು.

ಧರ್ಮಜ : ನಿನಗೆ ಮಂಗಳವಾಗಲಿ ದ್ರೌಪದಿ ಪ್ರಯಾಣ ಕಾಲದಲ್ಲಿ ಬಂದ ಕಾರಣವೇನು ॥

ದ್ರೌಪದಿ : ಆರ‌್ಯರೆ ಅರಿಕೆ ಮಾಡುವೆನು.

ಪದ

ಪೋಪುದೆಲ್ಲಿಗೆ ಕಾಂತ ಪೇಳು ವೃತ್ತಾಂತ ನೀ ಪೋಪುದೆಲ್ಲಿಗೆ
ಕಾಂತ ಕರದೊಳಗೆ ಖಡ್ಗ ಪಿಡಿದು ಝಳಪಿಸುವಿರಿ ನೀವು ॥

ದ್ರೌಪದಿ : ಆರ‌್ಯರೆ, ಯಿವತ್ತಿನ ದಿವಸ ಏಕಾಂಗಿಯಾಗಿ ಥಳಥಳಿಪ ಖಡ್ಗವನ್ನು ಝಳಪಿಸುತ್ತಾ ಯಿಳೆಯೊಳಗೆ ಯಾರೂ ಯಿದಿರಿಲ್ಲವೆಂದು ಕಾಳಗಕ್ಕೆ ತೆರಳುವುದು ಧಾವಲ್ಲಿಗೆ ಅಪ್ಪಣೆಯಾಗಲಿ.

ಪದ

ತರುಣಿ ರನ್ನಾಳೆ ಕೇಳು ತಡವುದುಚಿತವಲ್ಲ
ಕುರುಬಲದೊಳು ನಾನು ತರಣಿಜನ ಗೆಲುವೆ ॥

ಧರ್ಮಜ : ತರುಣೀಮಣಿಯಾದ ದ್ರೌಪದಿಯೆ ಕೇಳು. ತರಣಿ ಸುಕುಮಾರನಾದ ಕರ್ಣನನ್ನೂ ಸಂಹಾರ ಮಾಡುವುದಕ್ಕೆ ಕುರುಬಲಕ್ಕೆ ಹೊರಟಿರುತ್ತೇನೆ. ಹೊರಟ ಕಾಲದಲ್ಲಿ ತಡೆಯುವುದು ವುಚಿತವಲ್ಲ ನಿನ್ನ ಸ್ವಸ್ಥಾನಕ್ಕೆ ಹೊರಟು ನಡಿ.

ಪದ

ಅರಸ ಕೇಳು ಕರ್ಣನೊಳು ಯುದ್ಧ ಸಾಧ್ಯವೆ
ನಿಮಗೆ ಸವ್ಯಸಾಚಿಯನ್ನು ಕಳುಹಬಾರದೆ॥

ದ್ರೌಪದಿ : ಆರ‌್ಯರೆ, ಪರಾಕ್ರಮಿಯಾದ ಕರ್ಣನಲ್ಲಿ ಯುದ್ಧ ಮಾಡುವುದು ನಿಮಗೆ ತಿಣ್ಣವಾಗಿರುವುದು. ನಿಮ್ಮ ಸಾಹಸವು ನನಗೆ ಗೊತ್ತಿರುವುದು. ಅಸಮಾನ ಶೌರ‌್ಯ ಧುರಂಧರರಾದ ಅರ್ಜುನ ದೇವರನ್ನು ಕಳುಹಿಸಿ, ಅರಮನೆಯಲ್ಲಿ ನೀವು ಆಹ್ನೀಕಗಳನ್ನೂ ಮಾಡಿಕೊಂಡು ಯಿರಬಾರದೆ. ಯಿಷ್ಟೇ ನನ್ನ ವಿಜ್ಞಾಪನೆ.

ಭಾಮಿನಿ

ತರುಣಿ ಕೇಳ್ ಸಂಗರಕೆ ಮನ ತರಹರಿಪುದು ಜನಪನ ಜನ್ಮದರ್ಥವು
ಮುಖದಿರುವಿದರೆೆ ಬೀಳುವೆ ನರಕಕೆ ಸತ್ಯ ಕೇಳೆಂದ ॥

ಧರ್ಮಜ : ಹೇ ಕಾಂತೆ, ಕ್ಷಾತ್ರವಂಶದಲ್ಲಿ ಹುಟ್ಟಿ ರಣಾಗ್ರಕ್ಕೆ ಹೊರಟು ಹಿಂಜಗ್ಗಿದರೆ ನರಕ ಪ್ರಾಪ್ತವಾಗುವುದು. ಹೀಗಿರುವಲ್ಲಿ ಹಿಂದುಳಿಯಬಹುದೆ ದ್ರೌಪದಿ ಹೇಳುವೆನು.

ಭಾಮಿನಿ

ತರುಣಿ ಮುಂದಡಿಯಿಟ್ಟು ರಿಪುಗಳ ತರಿದು ಮರಣವ ಪಡೆದೆನಾದಡೆ
ಸುರರಿಗದಳವಾದ ವೀರ ಸ್ವರ್ಗವಹುದೆಂದ ॥

ಧರ್ಮಜ : ಹೇ ಕಾಂತೆ, ರಣಭೂಮಿಯಲ್ಲಿ ವೊಂದು ವೇಳೆ ವೈರಿಗಳಿಂ ಈ ಪ್ರಾಣ ಹೋದಾಗ್ಯು ಸುರರಿಗೆ ಅಸದಳವಾದ ವೀರಸ್ವರ್ಗ ಪ್ರಾಪ್ತವಾಗುವುದು ಕಂಡೆಯೊ. ಯಿದು ಕ್ಷತ್ರಿಯ ಧರ್ಮವಾಗಿರುವಲ್ಲಿ ನಿನ್ನ ಮಾತು ಕೇಳತಕ್ಕವನಲ್ಲ ಅರಮನೆಗೆ ಹೊರಡುವಳಾಗು ॥

ದ್ರೌಪದಿ : ಪ್ರಿಯರೆ, ನೀವಿಷ್ಟು ಹೇಳುವಲ್ಲಿನನ್ನ ಮಾತೇನು ಸಾಗುವುದಿಲ್ಲ, ಚಿಂತೆಯಿಲ್ಲ. ಕರ್ಣನಲ್ಲಿ ಜಯಪ್ರದ ಹೊಂದಿ ಬರುವುದನ್ನು ನಾನು ಕಾಣುತ್ತೇನೆ. ವೊಳ್ಳೇದು ಅರಮನೆಗೆ ಹೊರಡುತ್ತೇನೆ ನಮಸ್ಕಾರ.

ಪದ ರಾಗ ಅಷ್ಟತಾಳ

ಯೆಂದೆನುತಲಿ ಸತಿಯಳನು ಸಂತೈಸುತ್ತ ಬಂದನಾಕ್ಷಣ ಧರ್ಮಜ
ಮನದಲ್ಲಿ ಗೋವಿಂದ ರಕ್ಷಿಪುದೆನುತಲಿ ಬಂದ ರಥಕೆ ॥

ಧರ್ಮಜ : ಯಲಾ ಚಾರಕ, ಸತಿಯಾದ ದ್ರೌಪದಿಯನ್ನು ಸಂತೈಸಿ ನಮ್ಮ ಭಾವಯ್ಯನವರಾದ ಶ್ರೀ ಕೃಷ್ಣದೇವರ ಧ್ಯಾನವನ್ನು ಮಾಡಿ, ಕರಕಮಲಕ್ಕೆ ಶರಗಳನ್ನು ತೆಗೆದುಕೊಂಡು ರಥದ ಮೇಲೆ ಕುಳಿತು ಯಿರುತ್ತೇನೆ. ಕುರುಸೇನೆಗೆ ರಥವನ್ನು ಬಿಡುವಂಥವನಾಗು.

ಪದ

ಕುರುಸೇನೆಗಾಗ ತಾತ ಹರಿಸಿದ ರಥವನು ಹರುಷವ ತಾಳುತಲಿ ಜರಿದು
ರಿಪುಗಳ ಬರುವ ಧರ್ಮಜನನ್ನು ತರಣಿ ಸುತನು ಕಂಡನು ॥

ಧರ್ಮಜ : ಯಲಾ ಚಾರಕ, ಕುರುಸೇನೆಗೆ ಬಂದು ಯುದ್ಧಕ್ಕೆ ಸನ್ನದ್ಧನಾಗಿ ಭೋರ್ಗರೆಯುತ್ತಿರುವನೆಲ್ಲ. ಪರಾಕ್ರಮಿಗಳಾದವರು ಯೀಗ ಯನ್ನೆದುರಿಗೆ ಬರಬಾರದೆ.

ಪದ

ನೋಡಿದೇನಯ್ಯ ಶಲ್ಯ ರಣದ ಸಗಾಢಿಕೆಯ ಧರ್ಮಜನ
ದುಸ್ಥಿತಿಯ ಭರವಿದು ರೂಢಿ ಮೇಲಣ ಆಸೆಯೆಂತುಟೊ ಕ್ಷಾತ್ರವಂಶಜರಿಗೆ ॥

ಕರ್ಣ : ಅಯ್ಯ ಶಲ್ಯ ಭೂಪತಿ, ಯೀ ದಿನದ ರಣದ ಸಘಾಡಿಕೆಯನ್ನು ನೋಡಿದೆಯೊ. ಧರ್ಮರಾಯನು ಪ್ರಾಣದಾಸೆಯನ್ನು ಬಿಟ್ಟು ಯುದ್ಧಕ್ಕೆ ಸಿದ್ದವಾಗಿ ಬಂದು ಇದ್ದಾನೆ. ಶಿವ ಶಿವ ಯೀ ಭೂಮಿ ಮೇಲಣ ಆಸೆಯೆಂಬ ಪಾಶವು, ಕ್ಷತ್ರಿಯರಾದವರಿಗೆ ಯಿನ್ನೆಷ್ಟರ ಮಟ್ಟಿಗೆ ಯಿರಬಹುದೆಂದು ಯೋಚನೆ ಮಾಡು ಹೇಳುತ್ತೇನೆ.

ಭಾಮಿನಿ

ಆಡಿ ಫಲವೇನಿನ್ನ ಶುನಕನ ವೋಡಿಸುವೆ ನೋಡು
ಕ್ಷಣಮಾತ್ರೆನುತ ಮೂದಲಿಸಿದನು ಧರ್ಮಜನ ॥

ಕರ್ಣ : ಅಯ್ಯ ಶಲ್ಯ ಭೂಪತಿ, ಬಾಯಿಂದ ಯೀಗ ಯಾತಕ್ಕೆ ಹೇಳಲಿ. ಹೇಳಿದರೆ ಪ್ರಯೋಜನವಿಲ್ಲ. ನಿನ್ನ ಕಣ್ಣೆದುರಿನಲ್ಲಿಯೆ ಯೀ ಶುನಕನಂತಿರುವ ಧರ್ಮಜನನ್ನು ಹಾರಿಸಿ ಹೊಡೆದು ಮುಖಭಂಗವನ್ನು ಮಾಡಿ ವದ್ದು ವೋಡಿಸುತ್ತೇನೆ ನೋಡು. ಯಲಾ ಧರ್ಮಜ ಯೀವತ್ತಿನ ರಣಾಗ್ರಕ್ಕೆ ಬರಬೇಕೆಂದು ಬಂದೆಯಾ, ಅಯ್ಯ ಮೂದೇವಿ ಕಡೆಗಾಲ ಕೂಡಿತು ಹೇಳುವೆನು.

ರಾಗ ಅಷ್ಟತಾಳ

ಸಿಕ್ಕಿದೆ ಯಲ ಧರ್ಮರಾಯ ಗಕ್ಕರವಾಯಿತು ಜೀಯ ರಕ್ಕಸಾರಿಯು
ಬಂದು ಪಂಜರದ ಗಿಳಿ ಫಕ್ಕನೆ ಬಂದೆನ್ನ ಕೈಯ್ಯಳು ನೀನು ॥

ಕರ್ಣ : ಯಲಾ ಧರ್ಮರಾಯ ಪಂಜರದಲ್ಲಿರುವ ಅರಗಿಳಿಯು ಹಾರಿಬಂದು ಬೆಕ್ಕಿನ ಕೈಗೆ ಸಿಕ್ಕಿದಂಥವನಾದೆ. ಬೆಂಬಲಕ್ಕೆ ಕೃಷ್ಣ ಯಿದ್ದೂ ಕೂಡ ನಿನ್ನನ್ನು ಕಳುಹಿಸಿದನೆ.

ಪದ

ಭೀಮ ಕಿರೀಟಿಯು ನಕುಲರು ಯಲ್ಲ ಸ್ವಾಮಿಗೆ ದ್ರೋಹಿಗಳೆ
ಯೀ ಮಹಾ ಮಡುವಿಗೆ ನೂಕಿದ ಬಳಿಕಿನ್ನು
ನೀನು ಮಹೇಶನ ಮರೆಹೊಕ್ಕೂ ಜೀವಿಸು ॥

ಕರ್ಣ : ಯಲಾ ಧರ್ಮರಾಯ, ಅಸಹಾಯಶೂರರಾದ ನಿನ್ನ ತಮ್ಮಂದಿರು ಭೀಮಾರ್ಜುನ ನಕುಲ ಸಹದೇವರು ಕೃಷ್ಣ ಸಹ ಯಿದ್ದೂ, ಮುಂಚಿತವಾಗಿ ಯೀ ರಣ ಮಂಡಲವೆಂಬ ಮಡುವಿಗೆ ನಿನ್ನನ್ನು ದೂಡಿಬಿಟ್ಟರೆ. ಅಯ್ಯೋ ನನ್ನ ಕೈಗೆ ನೀನು ಸಿಕ್ಕಿದ ಮೇಲೆ ಬದುಕುವುದುಂಟೆ. ವೊಳ್ಳೇದು ಯೀಗಲು ನಮ್ಮ ವಡೆಯನಾದ ಕೌರವೇಶ್ವರನಿಗೆ ಶರಣಾಗತನಾಗು, ಪ್ರಾಣವನ್ನು ಕಾಯುತ್ತೇನೆ.

ಪದ

ನದಿಯೊಳು ಸ್ನಾನವ ರಚಿಸಿ ಬಹುವಿಧದೊಳು ತಪಗಳಾಚರಿಸಿ
ಮುದಿಗೂಗೆಯ ತೆರದೊಳಗಿಹಗೆ ಯೋಗ್ಯವೆ ಕದನಗಳು

ಕರ್ಣ : ಯಲಾ ಧರ್ಮಜ, ನದಿಯಲ್ಲಿ ತಣ್ಣೀರು ಮುಳುಗಿ ಜಪತಪ ಹೋಮಾದಿಗಳನ್ನು ಮಾಡಿಕೊಂಡು ಯಿರುವುದನ್ನು ಬಿಟ್ಟು ಯುದ್ಧಕ್ಕೆ ಬಂದಿರುತ್ತೀಯ ದಗಡಿ. ನಿನ್ನ ನೋಡಿದರೆ ಮುದಿಗೂಗೆ ನೋಡಿದ ಹಾಗೆ ಕಾಣುತ್ತೀಯ. ನೀನ್ಯಾರು ರಣಾಗ್ರವ್ಯಾರು. ನನ್ನಲ್ಲಿ ಸೆಣಸದೆ ಶೀಘ್ರವಾಗಿ ಹೊರಟು ಹೋದರೆ ಚೆನ್ನಾಗಿರುತ್ತೆ, ಯೋಚನೆ ಮಾಡಿ ಹೇಳುವನಾಗು.

ಧರ್ಮಜ : ಯಲಾ ಕರ್ಣ, ಕದನದಲ್ಲಿ ಹದನವನರಿಯದೆ ಹೆದರಿಸಬೇಡ ಹೇಳುತ್ತೇನೆ.

ಪದರಾಗ ರೂಪಕ

ಖೂಳ ರವಿಜ ಕೇಳೊ ನೀನು ತೋಳಬಲುಹ ತೋರದಿರು
ಕೀಳು ನುಡಿಯ ನುಡಿಯಬೇಡ ಕೋಲನೆಸೆಯಲಾ ॥

ಧರ್ಮಜ : ಯಲಾ ಖೂಳನಾದ ಕರ್ಣನೆ ಕೇಳು. ನಿನ್ನ ಭುಜಬಲಪರಾಕ್ರಮವನ್ನು ನಾನು ಬಲ್ಲೆ. ಯಿಂಥ ಸಲ್ಲದ ನುಡಿಗಳನ್ನು ನುಡಿದರೆ ನಿನ್ನ ಹಲ್ಲ ಮುರಿಸುವೆ ಖುಲ್ಲಾ ಹೇಳುತ್ತೇನೆ ಕೇಳು.

ಪದ

ಬಲ್ಲೆ ನಾನು ರಣದ ಮಾತಿನಲ್ಲಿ ಕರ್ಣ ಬಲನು
ಯೆಂದು ಯನ್ನ ಕಣ್ಣಮುಂದೆ ತೋರೆಲಾ ॥

ಧರ್ಮಜ : ಯಲಾ ಕರ್ಣ ನಾನು ಬಲ್ಲೆ. ಸಣ್ಣ ಮಾತಾಡುವುದರಲ್ಲಿ ನಿನ್ನ ಸಮಾನ ಯಾರೂ ಯಿಲ್ಲ ಕಂಡಿಯೋ. ಕರ್ಣ ನಿನ್ನ ಬಣ್ಣಗಾರಿಕೆಯನ್ನು ನನ್ನ ಕಣ್ಣ ಮುಂದೆ ತೋರಬೇಡ. ಶೂರನಾದರೆ ಶರಗಳನ್ನು ಬಿಡುವಂಥವನಾಗು.

ಕರ್ಣ : ಯಲಾ ಧರ್ಮಜ, ಅಬಲನೆಂದು ಕೈ ಚಳಕವನ್ನು ನಿಲ್ಲಿಸಿದ್ದೆಯಾದರೆ ಯಿಷ್ಟು ಶೂರತ್ವ ಬಂದಿತೇನೋ ಮೂದೇವಿ ಹೇಳುವೆನು.

ಪದ

ಯಂದ ನುಡಿಯ ಕೇಳಿ ದಿನಪ ನಂದನನು ಕೋಪದಿಂದ
ವೊಂದು ಶರವ ಬಿಡಲು ಅದನು ಕಂಡು ಧರ್ಮಜ ॥

ಕರ್ಣ : ಧರಣಿಯೊಳಗೆ ಪಿಸುಣನಂತೊಪ್ಪುವ ಧರ್ಮಜನೆ ಕೇಳು. ಕದನದಲ್ಲಿ ಹದನವನರಿಯದೆ ಹೆದರಿಸಿ ಕಾಲಕೆರೆದುಕೊಂಡು ಕಾಳಗಕ್ಕೆ ಬಂದಿರುತ್ತೀಯ ಖೂಳ. ನಿನ್ನ ಬಾಳುವೆ ಕಡಿಮೆಯಾಯಿತು. ಯೀಗ್ಯೆ ಹೆಚ್ಚಾಗಿ ಬಿಡುವುದಿಲ್ಲ, ವೊಂದು ಶರವನ್ನು ಬಿಟ್ಟಿದ್ದೇನೆ ತರಹರಿಸಿಕೊಳ್ಳುವನಾಗು ॥

ಪದ

ಯಚ್ಚ ಶರವನಾಗ ಯಮಜ ನುಚ್ಚುನುರಿಯ ಮಾಡಿ ತಾನು
ವೊಚ್ಚ ಕೂರ್ಗಣೆಗಳನ್ನು ಯಚ್ಚಿನಾಕ್ಷಣ ॥

ಧರ್ಮಜ : ಯಲಾ ಕರ್ಣ, ನೀನು ಬಿಟ್ಟು ಯಿರುವ ಶರವನ್ನು ಪುಡಿಪುಡಿಯಂ ಮಾಡಿ ಘನ ಗರ್ಜನೆಯಿಂದ ಹೊಸ ಕೂರ್ಗಣೆಗಳನ್ನು ಭೋರ‌್ಗರೆದು ಬಿಟ್ಟಿರುತ್ತೇನೆ, ತರಹರಿಸಿಕೊಳ್ಳುವನಾಗು.

ಪದ

ಮೂಢ ಹೋಗು ಯನುತ ಕರ್ಣ ಗಾಢದಿಂದ ಪರ್ವತಾಸ್ತ್ರ
ಮೂಡಿಗೆಯೊಳು ತೆಗೆದು ಬಿಡಲು ನೋಡೆ ಯಮಜನು

ಕರ್ಣ : ಯಲಾ ಮೂಢ, ಗಾಢದೋಳ್ ಮೂಡಿಗೆಯೊಳಿದ್ದ ಪರ್ವತಾಸ್ತ್ರವನ್ನು ನಿನ್ನ ಮೇಲೆ ಪ್ರಯೋಗಿಸಿ ಬಿಟ್ಟಿರುತ್ತೇನೆ, ತರಹರಿಸಿಕೊಳ್ಳುವಂಥವನಾಗು.

ಪದ

ವಜ್ರ ಶರದೊಳದನು ತಾನು ರೌದ್ರದಿಂದ ಪಲ್ಲಮರೆದು
ಮಾದ್ರಭೂಪತಿಯನೆಚ್ಚಿ ರಥವ ಛಿದ್ರಗೈದನು ॥

ಧರ್ಮಜ : ಯಲಾ ಕರ್ಣ, ನೀನು ಬಿಟ್ಟ ಪರ್ವತಾಸ್ತ್ರಕ್ಕೆ ವಜ್ರಾಸ್ತ್ರವನ್ನು ಪ್ರಯೋಗಿಸಿ ಪುಡಿಪುಡಿಯಂ ಮಾಡಿರುವುದಲ್ಲದೆ, ನಿನ್ನ ಸಾರಥಿಯಾದ ಶಲ್ಯ ನೀನು ನಿನ್ನ ರಥ ಯೇನಾಗಿದೆ ನೋಡಿಕೊಳ್ಳುವನಾಗು.

ಪದ

ಹೊಸ ರಥವಡರ್ದು ಕರ್ಣ ಮಸದು ಪಲ್ಗಳನ್ನು ಕಡಿದು
ಯಸೆದನು ಅನೇಕ ಶರವಸುವೆನಾತಗೆ ॥

ಕರ್ಣ : ಯಲಾ ಧರ್ಮಜ, ಭಲಾ ನೀನು ಗಟ್ಟಿಗನೇ ಸರಿ. ರಥ ಹೋದರು ಹೋಗಲಿ ಹೊಸ ರಥವನ್ನು ಏರಿಕೊಂಡು ಬಂದು ಯಿದ್ದೇನೆ ಅಧಮ. ಅನೇಕ ಶಸ್ತ್ರಾಸ್ತ್ರವನ್ನು ನಿನ್ನ ಮೇಲೆ ಪ್ರಯೋಗಿಸಿ ಯಿರುತ್ತೇನೆ, ತರಹರಿಸಿಕೊಳ್ಳುವಂಥವನಾಗು.

ಪದ

ಸೈರಿಸುತಲೆ ಶರದೊಳಾಗ ಭಾನುಪುತ್ರನನ್ನು ಹೊಡೆಯೆ
ತಾನು ಮೂರ್ಛೆಗೈದು ಯಿದ್ದೂದೇನ ಹೇಳಲಿ ॥

ಧರ್ಮಜ : ಯಲಾ ಅಧಮ, ನೀನು ನನ್ನ ಮೇಲೆ ಪ್ರಯೋಗಿಸಿದ ಅನೇಕ ಶಸ್ತ್ರಾಸ್ತ್ರಗಳನ್ನು ಖಂಡ್ರಿಸಿ ಯಿರುತ್ತೇನೆ, ಕಾಳಗಕ್ಕೆ ಕೈಗೂಡುವಂಥವನಾಗು.

 

(ಕರ್ಣನ ಮೂರ್ಛೆ)

ಧರ್ಮಜ : ಯಲಾ ತರಳನಾದ ದುರುಳನೆ, ಯೀ ಧರ್ಮಜನ ಪರಾಕ್ರಮವು ಗೊತ್ತಾಯಿತೊ ನೋಡಿಕೊಳ್ಳುವನಾಗು.

ಪದ

ಯಲವೊ ಖೂಳ ಅಬಲನೆಂದು ಯಿನಿತು ಸೈರಿಸಿದೆನು ಕೇಳು
ಯನುತ ಘೋರ ಶರವ ಬಿಡಲು ಜನಪ ಮೂರ್ಚಿಸೆ ॥

ಕರ್ಣ : ಯಲಾ ಖೂಳ, ಅಬಲನೆಂದು ತಿಳಿದು ನನ್ನ ಪೂರ್ಣಶಕ್ತಿಯನ್ನು ಯಿದುವರೆವಿಗು ತೋರದೆ ಹೋದ್ದರಿಂದ ನನಗಿಷ್ಟು ಶ್ರಮವನ್ನುಂಟು ಮಾಡಿದೆ ಮೂದೇವಿ. ನೀನು ಮೂರ್ಛೆ ಹೋಗುವಂಥ ಘೋರವಾದ ಶರಗಳನ್ನು ಅಭಿಮಂತ್ರಿಸಿ ಬಿಟ್ಟಿರುತ್ತೇನೆ, ರಣಾಗ್ರಕ್ಕೆ ಯದುರಾಗು.