ಕೌರವ : ಹೇ ಮಾವಯ್ಯ, ಅಂತಪ್ಪ ಮಹದೇವನ ಕರದಲ್ಲಿರುವ ಧನುಸ್ಸಿಗೆ ಆದಿಶೇಷನೆ ಶಿಂಜಿನಿಯಾದನು. ಲಕ್ಷ್ಮೀಪತಿಯಾದ ಶ್ರೀಮನ್ ನಾರಾಯಣನು ಬಾಣವಾದನು. ಯಿಂತಾ ಘನಸಂನಾಹದಿಂದ ಗಮನ ಮಾಡಿ ತ್ರಿಪುರದಲ್ಲಿದ್ದ ಕಂಟಕರಾದ ತಾರಕಾಕ್ಷ ವೀರವಿದ್ಯುನ್ಮಾಲಿ ಕಮಲಲೋಚನರೆಂಬ ಮೂರು ಜನ ದೈತ್ಯರು ಅಲ್ಲದೆ ಅಲ್ಲಿದ್ದ ಅನೇಕ ಜನ ರಾಕ್ಷಸರನ್ನೂ , ಧಾಮಧೂಮ ನಿರ್ಧೂಮವನ್ನು ಮಾಡುವಂಥವರಾದರು ಮಾವಯ್ಯ ಹೇಳುವೆನು.

ಭಾಮಿನಿ

ಪುರದೊಳಗೆ ಮಯನು ನಿರ್ಮಿಸಿಯಿರುವ ಪರಮ
ಶಿದ್ದೋದಕದ ಕೂಪಕೆ ಕೊರೆದ ಜೀವಿಗಳನ್ನೂ ಹಾಕಲು
ಅಳಿದ ದಾನವ ಮರಳಿ ಬರುವುದ ಕಂಡು
ಶಂಕರನು ಚಿಂತಿಸುತಿರ್ದನವನಿಯಲಿ ॥

ಕೌರವ : ಹೇ ಮಾವಯ್ಯ, ಆ ತ್ರಿಪುರ ಪಟ್ಟಣದಲ್ಲಿ ಮಯನಿಂದ ನಿರ್ಮಿಸಿದ್ದ ಸಿದ್ದೋದಕದ ಕೊಳಕ್ಕೆ ಮೃತಪಟ್ಟ ರಾಕ್ಷಸರನ್ನೆಲ್ಲ ಹಾಕಲು ಪುನಹ ರಾಕ್ಷಸರು ಬದುಕಿ ರಣಾಗ್ರಕ್ಕೆ ಬರುತ್ತಿದ್ದರು. ಯಿದನ್ನು ಪರಶಿವನು ನೋಡಿ ಯಷ್ಟು ರಣಾಗ್ರವನ್ನು ಮಾಡಿದರು, ತದ್ವತ್ ದೈತ್ಯರು ಬದುಕುತ್ತಿರುವುದನ್ನು ಕಂಡು ಚಿಂತಾಕ್ರಾಂತರಾಗಿ ಭೂಮಿ ಮೇಲೆ ಬಾಣವನ್ನೂ ಇರಿಸಿ ದುಂಡೆಗೆ ಕರವನ್ನು ಹೊತ್ತುಕೊಂಡು ದಿಕ್ಕುತೋಚದೆ ಮೌನವನ್ನು ಧರಿಸುವಂಥವರಾದರು ಮಾವಾ ಹೇಳುತ್ತೇನೆ.

ಭಾಮಿನಿ

ಆ ಸಮಯದಲಿ ಹರಿ ಪಶುವಾದ ಕಮಲೋದ್ಭವನು ಕರುವಾಗಿ
ಯೀ ಪರಿಯೊಳಗೆ ಪುರವಹೊಕ್ಕು ಹರುಷದಿಂದೀರಿದರು ಶಿದ್ದಾರಸವನು
ಸರ್ವರು ಮರಳಿ ಶಂಕರನು ಸವರಿದನಖಿಳ ರಾಕ್ಷಸರ

ಕೌರವ : ಹೇ ಮಾವಯ್ಯ, ಗೌರೀಪತಿಯಾದ ಚಂದ್ರಶೇಖರನು ಚಿಂತಿಸುವ ಸಮಯದಲ್ಲಿ ಮಹಾವಿಷ್ಣುವು ಪಶುವಾಗಿಯೂ ಕಮಲೋದ್ಭವನು ಕರುವಾಗಿಯು ತ್ರಿಪುರವನ್ನು ಹೊಕ್ಕು, ಆ ಕೊಳದಲ್ಲಿ ಯಿದ್ದ ಸಿದ್ಧರಸವನ್ನು ಸ್ವಲ್ಪವೂ ಯಿಲ್ಲದಂತೆ ಪಾನವನ್ನೂ ಮಾಡಲು, ಯಿತ್ತ ಶಂಕರನು ರಾಕ್ಷಸರ ಪಡೆಯನ್ನೂ ಸಮೂಲಾಗ್ರವಾಗಿ ಸಂಹಾರವನ್ನು ಮಾಡುವಂಥವರಾದರು ಮಾವಯ್ಯ ಅರಿಕೆ ಮಾಡಿಕೊಳ್ಳುತ್ತೇನೆ.

ಭಾಮಿನಿ

ಪೇಳಿದನು ಯಲ್ಲವನು ಮಾವನೆ ತಾಳಲಾರೆನು
ವೈರಿಯುಪಟಳ ಸಾರಥಿಯಾಗಿ ಸಲಹೆನ್ನ

ಕೌರವ : ಹೇ ಮಾವಯ್ಯ, ತ್ರಿಪುರ ದಹನ ಸಂಗತಿಯನ್ನೂ ಸವಿಸ್ತಾರವಾಗಿ ಹೇಳಿರುತ್ತೇನೆ. ನಾನು ವೈರಿಗಳಾದ ಪಾಂಡವರ ವುಪಟಳವನ್ನು ತಾಳಲಾರೆನು. ನನ್ನನ್ನು ಖೂಳನೆಂಬುದಾಗಿ ಹೀಂಕಾರವನ್ನು ಮಾಡದೆ, ನನಗೋಸ್ಕರವಾಗಿ ಕರ್ಣನಿಗೆ ಸಾರಥಿಯಾಗಿ ನನ್ನನ್ನು ಕಾಪಾಡುವಂಥವರಾಗಿ ಮಾವಯ್ಯ.

ಭಾಮಿನಿ

ಕೇಳುತಲಿ ಮದ್ರೇಶ ಭೂಪತಿ ತಾಳಿದನು ರೋಷಗಳ ಹರಹರ
ಖೂಳಕರ್ಣಗೆ ನಾನು ಸಾರಥಿಯಾಗುವುದಾಯ್ತೆ ವಿಧಿವಶದಿ –

ಶಲ್ಯ : ಅಯ್ಯ ಭಾಗವತರೆ, ನನ್ನ ಹಣೆಯಲ್ಲಿ ಹಾಳು ವಿಧಿಯಾಗಿರುವಂಥದು ಖೂಳನಾದ ಕರ್ಣನಿಗೆ ಸಾರಥಿಯಾಗುವಂತೆ ಬರೆಯಬಹುದೆ ಶಿವಶಿವ ಮಾಡತಕ್ಕದ್ದೇನು.

ಭಾಮಿನಿ

ಆಡಿ ಫಲವೇನಿನ್ನು ಮುಂದಣ ಹಾಳು ತೊತ್ತಿನ ಮಗನ ಕೆಲಸ
ಪ್ರಾಣವ ಬಿಡಲು ಬಂದುದೆ ಪೂರ್ವಾರ್ಜಿತ ಫಲವೆಂದ

ಶಲ್ಯ : ಅಯ್ಯ ಭಾಗವತರೆ, ಆಡಿ ಫಲವೇನು ಹಾಳುತೊತ್ತಿನ ಮಗ ಕರಿಕುಲದಲ್ಲಿ ಹುಟ್ಟಿದ ತಬ್ಬಲಿಗ ಕರ್ಣನ ಕಾಲಕೆಳಗೆ ಕುಳಿತುಕೊಂಡು, ಚಾಕರಿ ಮಾಡುವುದು ನನ್ನ ಪೂರ್ವಾರ್ಜಿತದ ಫಲವಲ್ಲದೆ ಮತ್ತೆ ಬೇರೆಯಿಲ್ಲ. ಅನುಭವಿಸಬೇಕಾಗಿ ಬಂದಿತು. ವೊಳ್ಳೇದು ಅನುಭವಿಸುವೆನು. ಅಯ್ಯ ಕೌರವೇಶ್ವರ ಹೇಳುವೆನು ಲಾಲಿಸು.

ಪದ

ಕುರು ಕುಲಾಗ್ರಣಿ ಕೇಳು ಪರವುಪಕಾರಕ್ಕೆ ಕಿರಿ ಕೆಲಸವ ಗೈದಡೆ
ಕೊರತೆಯಿಲ್ಲದರೊಳು ಸುಜನರಿಗೆಂಬುದನರಿತು ಪೇಳಿದೆ ಯನ್ನೊಳು

ಶಲ್ಯ : ಅಯ್ಯ ಸುಯೋಧನ ಭೂಪಾಲ, ಸತ್ಪುರುಷರಾದವರು ಪರೋಪಕಾರಕ್ಕೆ ಕಿರಿ ಕೆಲಸವನ್ನು ಮಾಡಿದರೂ ಮಾನಕ್ಕೆ ಕೊರತೆಯಿಲ್ಲವೆಂದು ಪೇಳಿರುವೆಯಲ್ಲಾ ವೊಳ್ಳೇದು ಹೇಳುವೆನು ಕೇಳು.

ಪದ

ಬರುವೆ ನಿನ್ನಾ ಕಾರ‌್ಯಕ್ಕಾಗಿ ಕರ್ಣಗೆ ನಾನು ಸಾರಥಿಯಾಗುವೆನು
ಪೇಳಿದಂದದೊಳವನಾ ಸಾರಥಿಯಾಗಿರುವೆ ಕೇಳಿದೊಡೆ

ಶಲ್ಯ : ಅಯ್ಯ ಕೌರವೇಶ್ವರ, ನಿನ್ನ ಕಾರ‌್ಯಕ್ಕೋಸ್ಕರವಾಗಿ ನಾನು ಬಂದು ಕರ್ಣನಿಗೆ ಸಾರಥಿಯೇನೋ ಆಗುತ್ತೇನೆ. ಕರ್ಣನು ನನ್ನ ಯಿಷ್ಟಾನುಸಾರವಾಗಿ ಯಿದ್ದರೆ ಸರಿ. ಯಿಲ್ಲವಾದರೆ ಅವನಲ್ಲಿ ಅರಘಳಿಗೆಯೂ ಯಿರತಕ್ಕವನಲ್ಲ ಹೊರಟು ಬರುವದು ಸಹಜ. ಯಿಗೋ ನಾನು ಖಂಡಿತವಾಗಿ ಮಾತನಾಡಿರುತ್ತೇನೆ ಯಿದರ ಮೇಲೆ ನಿನ್ನಾ ಯಿಷ್ಟ॥

ಕೌರವ : ಮಾವಯ್ಯ ಹಾಗೆ ಮಾಡಿರಿ ಅರಿಕೆ ಮಾಡಿಕೊಳ್ಳುತ್ತೇನೆ.

ಪದ

ನಿಮ್ಮ ನೇಮದೊಳು ಯಿರುವಂತೆ ರವಿಜಗೆ ಸಂಮತವನು
ಮಾಡುವೆ ತಮ್ಮ ಕೃಪೆಯೊಳು ರಿಪುಗಳ
ಗೆಲುವೆನು ದಮ್ಮಯ್ಯ ಬಹುದು ಯೆಂದ

ಕೌರವ : ಮಾವಯ್ಯ, ಕರ್ಣನು ತಮ್ಮ ಆಜ್ಞಾನುಸಾರವಾಗಿ ಯಿರುವಂತೆ ಸಮ್ಮತವನ್ನೂ ಮಾಡುತ್ತೇನೆ. ಅಲ್ಲದೆ, ನೀವೀರ‌್ವರು ಸೇರಿ ನನ್ನ ಮೇಲೆ ಕೃಪೆಯಿಟ್ಟು ತುಂಟರಿಂದ ಬಂದಿರುವ ಕಂಟಕವನ್ನು ತಂಟೆಯಿಲ್ಲದಂತೆ ಪರಿಹರಿಸಿಕೊಡುವಂಥವರಾಗಿರಿ.

ಶಲ್ಯ : ಅಯ್ಯ ಕೌರವೇಶ್ವರ, ಚಿಂತೆಯಿಲ್ಲ ಕರ್ಣನ ಬಳಿಗೆ ಹೋಗೋಣ ನಡಿ ಯೆಲ್ಲಿಯಿದ್ದಾನೆ.

ಭಾಮಿನಿ

ಯಂದೊಡಂಬಡಿಸುತಲಿ ಕವುರವನಂದು ಮದ್ರೇಶನನು ಮನ್ನಿಸಿ
ಕರ್ಣನ ಮುಂದೆ ನಿಲಿಸಿ ವೊಂಬಟ್ಟಲಲಿ ವೀಳೆಯವ ॥

ಕೌರವ : ಅಯ್ಯ ಕರ್ಣ, ನೀನು ಹೇಳಿದಂತೆ ನಮ್ಮ ಮಾವನಾದ ಶಲ್ಯ ಭೂಪತಿಯನ್ನು ಸಮಾಧಾನಪಡಿಸಿ ಕರೆದುಕೊಂಡು ಬಂದು ಸಾರಥಿಯ ಮಾಡಿ ರತ್ನದ ಬಟ್ಟಲಲ್ಲಿ ವೀಳೆಯವನ್ನೂ ಕೊಡುತ್ತೇನೆ ತೆಗೆದುಕೊಳ್ಳುವಂಥವನಾಗೈಯ್ಯ ಕರ್ಣ.

ಕರ್ಣ : ಮಹಾರಾಜನೆ ತೆಗೆದುಕೊಂಡೆನು, ಮುಂದೇನು ಅಪ್ಪಣೆ.

ಭಾಮಿನಿ

ಮುಂದೆ ನಿನ್ನಯ ಜಯವು ನಿನ್ನೊಳಗೆಂದು ಪೇಳುತಲಾಗ
ಕರ್ಣಗೆ ಅಂದು ಅಪ್ಪಣೆಯಿತ್ತಾಗ ಬೇಗದಿ ರಣವ ಜೈಸೆನುತ

ಕೌರವ : ಅಯ್ಯ ಕರ್ಣ, ಮುಂದೆ ಜಯಲಾಭವನ್ನು ಹೊಂದತಕ್ಕದ್ದು, ನಿನ್ನ ಕೆಲಸ ನನ್ನ ಕೆಲಸವೆರಡೂ ಪೂರೈಸಿತು ಹೇಳುವೆನು.

ಪದ

ವೈರಿಯ ಬಲವ ಸಂಹರಿಸಿ ಯನ್ನ ವೈರಾಗ್ಯವ ನೀವು ಗೆಲಿಸಿ
ಶೌರಿಯ ಸಾಹಸ ನಿಲ್ಲಿಸಿ ಘನ ಶೌರ‌್ಯದಿ ನಾರಿಯ ವಲಿಸಿ ॥

ಕೌರವ : ಅಯ್ಯ ಕರ್ಣ, ಹೇ ಮಾವಯ್ಯ. ನೀವು ಯೀರ್ವರು ವೈರಿಗಳ ಸಮೂಹಕ್ಕೆ ತೆರಳಿ, ಘನಶೌರ‌್ಯದಿಂದ ಶೌರಿಯಾದ ಶ್ರೀಹರಿಯ ಸಾಹಸವನ್ನು ನಿಲಿಸಿ, ಅಲ್ಲಿ ಯಿರುವ ಜಯಸಿರಿಯೆಂಬ ಲಕ್ಷ್ಮಿಯನ್ನು ವೋಡಿಸಿಕೊಂಡು ಬರುವಂತವರಾಗಿರಿ ॥

ಕರ್ಣ : ಅಯ್ಯ ಕೌರವೇಶ್ವರ, ನನ್ನ ಕೈಚಮತ್ಕಾರಕ್ಕೆ ತಕ್ಕ ಸಾರಥಿಯಾದ ಬಳಿಕ ಪಾಂಡವರಲ್ಲಿ ಜಯಪ್ರದವನ್ನೂ ಹೊಂದತಕ್ಕ ಕೆಲಸ ನನ್ನದಾಗಿದೆ. ಮುಂದೆ ನನ್ನ ಶೌರ‌್ಯವನ್ನೂ ನೋಡಬಹುದು. ಅಯ್ಯ ಸಾರಥಿಯಾದ ಶಲ್ಯ ಭೂಪತಿಯೆ, ತಾತ್ಸಾರವೇಕೆ ನನಗೆ ನೀನು ಸಾರಥಿಯಾದ್ದು ನನ್ನ ಪುಣ್ಯ ಪ್ರಭಾವವೆ ಸರಿ. ರಥಾರೋಹಣನಾಗುತ್ತೇನೆ ರಿಪುಸೈನ್ಯಕ್ಕೆ ರಥವನ್ನು ಹೊಡಿಯುವಂಥವನಾಗೈ.

ಶಲ್ಯ : ಅಯ್ಯ ಕರ್ಣ, ಆಗಲಯ್ಯ ಆ ಕೆಲಸಕ್ಕೆ ಬಂದಿರುವುದಾಗಿದೆ ರಥವನ್ನು ನಡೆಸುವೆನು.

ಪದರಾಗ ಜಂಪೆ

ಪದ್ಯ

ನಡೆದ ಕರ್ಣನು ಬಹಳ ಸಡಗರದಿ ರಥವಡರಿ
ಜಡಿಯುತ ಧನುವನು ತಾನು ವಡನಿಹ ಶಲ್ಯ ಭೂಪತಿ
ಸಹಿತ ಪಡೆಮೃಡನು ಬಂದರು ಗೆಲ್ವೆನೆನುತ ॥

ಕರ್ಣ : ಅಯ್ಯ ಸಾರಥಿಯಾದ ಶಲ್ಯ ಭೂಪತಿಯೆ, ರಥವನ್ನು ಜಾಗರೂಕನಾಗಿ ನಡೆಸುತ್ತಾ ಬಹಳ ಹುಷಾರಿಯಿಂದ ಕೈ ಚಳಕವನ್ನು ನಡೆಸಬೇಕು. ಯಿವತ್ತಿನ ಯುದ್ಧದಲ್ಲಿ ಸದ್ಯದೋಳ್ ಪಾಂಡವರ ಮಾತು ಯಿರಲಿ. ಪರಮೇಶ್ವರನೆ ಬಂದರು ಬಿಡತಕ್ಕವನಲ್ಲ ಪ್ರಚಂಡನಾಗಿರುವೆ ಹೇಳುತ್ತೇನೆ.

ಪದ

ಪಾಕಶಾಸನ ಸುತನ ತರಿದು ರಕ್ತವ ತೆಗೆದು ಭೀಮನ
ಕಪಾಲದಲಿ ಮೊಗಮೊಗೆದು ಶಾಕಿನಿಯ ಬಳಗಕ್ಕೆ ತಾ ಬಲಿಯ ಕೊಡುವೆ ॥

ಕರ್ಣ : ಅಯ್ಯ ಶಲ್ಯ, ಪಾಕಶಾಸನನ ಸುತನಾದ ಅರ್ಜುನನ ಶಿರಸ್ಸನ್ನು ಕಡಿದು ಆ ರಕ್ತವನ್ನೂ ಭೀಮನ ಕಪಾಲದಲ್ಲಿ ಮೊಗೆ ಮೊಗೆದು ಶಾಕಿನಿ ಡಾಕಿನಿಯೆಂಬ ಭೂತ ಪ್ರೇತಗಳ ಬಳಗಕ್ಕೆ ಬಲಿಯನ್ನೂ ಕೊಟ್ಟಿದ್ದೆಯಾದರೆ, ಕೌರವೇಶ್ವರನು ನನ್ನನ್ನೂ ಯಿದುವರೆವಿಗೂ ಸಾಕಿದ್ದಕ್ಕೆ ಸಫಲವಾಗುವುದಯ್ಯ ಶಲ್ಯ ಭೂಪತಿ ಭಲಂಬಲ ಹೇಳುತ್ತೇನೆ ॥

ಪದ

ತೋರು ಸಾರಥಿ ನೀನು ಕಂಡೆಯಾದಡೆ ರಣದಿ
ಮೂರು ಲೋಕದ ಗಂಡನೆನ್ನುವ ಚೋರನನು
ತೋರಿದರೆ ಕೊಡುವೆ ಕೇಳ್‌ವೂರುಶೀಮೆಗಳ ॥

ಕರ್ಣ : ಅಯ್ಯ ಶಲ್ಯ, ಯೀ ರಣ ಮಂಡಲದಲ್ಲಿ ಮೂರು ಲೋಕದ ಗಂಡನೆಂದು ಹೆಸರು ಪಡೆದ ಚೋರನಾದ ಅರ್ಜುನನನ್ನೂ ತೋರಿಸಿದ್ದೆಯಾದರೆ ನಿನಗೆ ಹೆಚ್ಚಾದ ವಸ್ತ್ರ ಆಭರಣ ಹಾರ ಹೀರಾವಳಿ ಮತ್ತು ಗ್ರಾಮಗಳ ಜಹಗೀರು ಸಹಿತವಾಗಿ ಕೊಡುತ್ತೇನೆ. ಯಲ್ಲಿ ಯಿದ್ದಾನೆ ತೋರಿಸಯ್ಯ ಸಾರಥಿ.

ಶಲ್ಯ : ಅಯ್ಯ ಕರ್ಣ, ಅರ್ಜುನನನ್ನು ರಣರಂಗದಲ್ಲಿ ತೋರಿದರೆ, ಅನಾಥನಾದ ನನಗೆ ಗ್ರಾಮಗಳನ್ನು ಜಹಗೀರು ಹಾಕಿಸಿಕೊಡುವುದು ನಿಶ್ಚಯವೊ ನಂಬಲೊ.

ಪದ

ಯಿದಕೆ ಸಂಶಯವಿಲ್ಲ ಕೊಡುವೆ ನಿಶ್ಚಯವಾಗಿ
ಯನಲು ಮದ್ರೇಶನು ಪಿತ್ತವೇರಿಕೆಯಿಂದ

ಕರ್ಣ : ಅಯ್ಯ ಸಾರಥಿ, ನಾನು ಕೊಡುತ್ತೇನೆಂದು ಹೇಳಿರುವ ಮಾತಿಗೆ ಸಂಶಯವಿಲ್ಲ. ತ್ಯಾಗದಲ್ಲಿ ಕರ್ಣ ಯೆಂಬುವಂಥ ನಾಮಾಂಕಿತವನ್ನೂ ನೀನು ಕೇಳಲಿಲ್ಲವೆ. ಅರ್ಜುನನನ್ನು ತೋರಿಸಿದರೆ ನೀನು ಬೇಡಿದ ಪದಾರ್ಥವನ್ನು ಕೊಡುತ್ತೇನಯ್ಯ ಸಾರಥಿ.

ಭಾಮಿನಿ

ಯಲೆ ಮೊಗೇರನ ಮಗನೆ ಬಗುಳದಿರು ಕಲಿ ತಾ ನರನು
ತಾನೆತ್ತ ಬಲು ಗೋಣ ನೀನೆತ್ತ ಕ್ಷಣಕೆ ನಿನ್ನಯ ತಲೆಯ ಕೊಂಬುವ
ಪಾರ್ಥನನು ತೋರುವೆನು ನೋಡೆಂದನಾ ಶಲ್ಯ ॥

ಶಲ್ಯ : ಯಲಾ ಅಂಬಿಗರ ಹುಡುಗನೆ, ತಬ್ಬಲಿಯಾದ ತಬ್ದಲಿಗ. ಯಾತಕ್ಕೆ ಹೊಗಳಿಕೊಂಡು ಬಗುಳಿಕೊಳ್ಳುತ್ತೀಯ. ನೀಯೆತ್ತ ಅರ್ಜುನನೆತ್ತ. ನಿನ್ನ ತಲೆಯನ್ನೂ ಕ್ಷಣ ಮಾತ್ರದಲ್ಲಿ ತೆಗೆದುಕೊಳ್ಳುವಂಥ ಮೂರು ಲೋಕದ ಗಂಡನಾದ ಅರ್ಜುನನನ್ನೂ ತೋರಿಸುತ್ತೇನೆ, ಆತರಿಸಿ ಅಹಂಕಾರಪಡಬೇಡ ಅರಘಳಿಗೆ ಪುರುಸತ್ತು ಕೊಡುವಂಥವನಾಗೋ ಅಧಮ.

ಭಾಮಿನಿ

ಹೀಗೆನಲು ಯಿನಸುತನು ತಾ ಕೇಳಿ ಕಡುಕೋಪದಿಂದಾಕ್ಷಣದಿ
ಧನುವನೊದರಿ ಕೋಪದಿ ತುಡುಕಲು ಮರೆವುತಿಂತೆಂದ ॥

ಕರ್ಣ : ಯಲಾ ಶಲ್ಯ, ಶಹಬಾಸ್ ನನ್ನಲ್ಲಿ ಆಳುತನಕ್ಕೆ ಬಂದು ವೈರಿಯನ್ನು ಹೊಗಳುತ್ತೀಯೋ ಕುನ್ನಿ ಹೇಳುವೆನು ॥

ಪದ ಏಕತಾಳ

ಕೊಲುವೆನು ನಾ ಮೊದಲಿಲ್ಲಿ  ಬಳಿಕುಳಿದ ಪಾಂಡವರನ್ನು ಗೆಲುವೆನು ಅಲ್ಲಿ
ನಿನ್ನ ತಲೆ ಹೊಡೆಯುವೆನಿಲ್ಲಿ ಯಮಪುರಕೋಡಿಸುವೆನು ಅಲ್ಲಿ ॥

ಕರ್ಣ : ಯಲಾ ಶಲ್ಯ, ಬಾಕಿ ಮಾತೇನು ಮೊದಲು ನಾನು ನಿನ್ನನ್ನು ಯೀ ರಥಕ್ಕೆ ದಿಗ್ಭಲಿಯನ್ನು ಕೊಟ್ಟು, ಯಮಪುರಕ್ಕೆ ಸೇರಿಸಿ ಅನಂತರ ಅಧಮರಾದ ಪಾಂಡವರನ್ನು ಸಂಹಾರ ಮಾಡುತ್ತೇನೆ. ನಿನ್ನ ಹಂಗೇನು ಮೊದಲು ನಿನ್ನ ತಲೆಯನ್ನು ವುಳಿಸಿಕೊಳ್ಳುವಂಥವನಾಗು.

ಪದ

ಕಾಲಕೆಳಗೆ ನೀ ಕುಳಿತು ಯನ್ನ ಸೇವೆಯ ಮಾಳ್ಪುದು ಮರೆತು
ವೀರನೊಳಿಂತಾ ಮಾತು ತೋರಿ ಬದುಕುವೆಯಲಾ ಭ್ರಾಂತು ॥

ಕರ್ಣ : ಯಲಾ ಶಲ್ಯ, ಕಾಲಕೆಳಗೆ ಕುಳಿತುಕೊಂಡು ಆಳುತನದ ಕೆಲಸ ಮಾಡುವುದ ಮರೆತು ಅರಸುತನದ ಮಾತುಗಳಂ ಬೊಗಳುತ್ತೀಯ ಮೂದೇವಿ. ವೀರಾಧಿವೀರನಾದ ನನ್ನಲ್ಲಿ ನಿನ್ನ ಶೂರತನದ ಮಾತನ್ನೂ ಮೀರಿ ತೋರಿಸಿದರೆ ನಡೆಯುವ ಹಾಗೆಯಿಲ್ಲ. ನೀನು ಬದುಕುವುದೂ ಯಿಲ್ಲ. ನಿನಗೆ ಹುಚ್ಚು ಹಿಡಿಯಿತೆ, ನಿನ್ನಾ ಕಣ್ಣುಕಿತ್ತು ಮಣ್ಣುಪಾಲು ಮಾಡುತ್ತೇನೆ ನೋಡು ॥

ಶಲ್ಯ : ಯಲಾ ಅಧಮ ನೀನೇನ ಮಾಡಬಹುದು ಹೇಳುತ್ತೇನೆ.

ಪದ

ಕುರುಪತಿಗೋಸುಗ ನಾ ಬಂದೆ ಕಿರಿಕುಲದವ ಕೇಳ್ ನೀವು
ಮರೆ ಹೋಗುವ ಪುರಾಂತಕನನಿಂ ತರಿದು ಬಿಡುವೆನಂತಕನೆ

ಶಲ್ಯ : ಯಲಾ ಕಿರಿಕುಲದಲ್ಲಿ ಹುಟ್ಟಿದಂತ ತಬ್ಬಲಿಗನಾದ ಕರ್ಣನೆ ಕೇಳು. ನಾನು ಕೌರವನಿಗೋಸ್ಕರ ಪರೋಪಕಾರಕ್ಕೆ ಬಂದು ನಿನಗೆ ಸಾರಥಿಯಾದೆನೆ ಹೊರತು, ನಿನ್ನ ಜಂಭಕ್ಕೆ ಬಂದವನಲ್ಲ. ಯೀ ದಿವಸ ನೀನು ತ್ರಿಪುರಾಂತಕನಾದ ಯೀಶ್ವರನ ಮರೆಬಿದ್ದರು, ನಿನ್ನ ಮಂಡೆಯನ್ನೂ ಚೆಂಡಾಡಿ ದಂಡಧರನಿಗೆ ಕೊಡದೆ ಬಿಡತಕ್ಕ ಪಿಂಡವಲ್ಲ ನೋಡುವನಾಗು.

ಪದ

ಯನಲಾರ್ಭಟಿಸುತ ರವಿಜನು ಶರಮಳೆಯನು ಕರೆಯಲು
ಯೀರ್ವರೋಳ್ ಕದನ ಕುರುರಾಯ ಕಂಡನು ಹದನ ॥

ಕರ್ಣ : ಯಲಾ ಅಧಮ, ನಿನ್ನ ವದನವನ್ನೂ ಯಷ್ಟೋ ನೋಡಬೇಕಾಗಿದೆ. ಭೋರ್ಗರೆಯುವ ಶರಗಳನ್ನೂ ಪ್ರಯೋಗಿಸುತ್ತೇನೆ ಯುದ್ಧಕ್ಕೆ ಸನ್ನದ್ಧನಾಗು ॥

ಕೌರವ : ಅಯ್ಯ ಕರ್ಣ ಕೈ ತಡಿ. ಮಾವಯ್ಯ ನೀವು ಹೀಗೆ ಬನ್ನಿರಿ. ಸಾರ್ಥಕವಾಯಿತು ಸಾಕು ಸಾಕು ಹೇಳುವೆನು.

ಪದ

ಅಹಹ ಮೆಚ್ಚಿದೆನಿದಕೆ ನಿಮ್ಮ ಸಾಹಸಕೆ ಅರಿಗಳ ಗೆಲುವದು ಅಸದಳವೆನುತಲಿ
ದೊರಕಿಸಿ ಕೊಂಡಿರಿ ನಿಮ್ಮೊಳು ಕದನ ಅಹಹ ಮೆಚ್ಚಿದೆನಿದಕೆ ॥

ಕೌರವ : ಹೇ ಮಾವಯ್ಯ ಹೇ ಕರ್ಣ, ನಿಮ್ಮಗಳ ಸಾಹಸಕ್ಕೆ ನಾನು ಮೆಚ್ಚುವಂಥವನಾದೆ. ಬಿಡಿಬಿಡಿ ಮುಂದೆ ವೈರಿಗಳನ್ನು ಗೆಲ್ಲುವುದು ಅಸಾಧ್ಯವೆಂದು ನಿಮ್ಮಿಬ್ಬರಲ್ಲಿಯೇ ಕದನವನ್ನು ಹುಡುಕಿಕೊಂಡಿರೊ. ಯೀ ಕದನ ಪ್ರಥಮದಲ್ಲಿಯೆ ದಂತಭಗ್ನವಾದ ಹಾಗಾಯಿತು, ಮುಂದೇನಾಗುವುದೊ ತಿಳಿಯದು ಹೇಳುತ್ತೇನೆ.

ಪದ

ಬಲವು ನಿಮ್ಮೊಳಗಿರುವ ವೈರಿಗಳ ಮುಂದೆ ತೋರಿ ನೀವು
ಕೊಳುಗುಳವನು ನೀವು ಪಾಳೆಯದಿ ಗೈದರೆ
ನಗುವರೈ ಅರಿಗಳೂ ಶಹಬಾಸ್‌ಯೆಂದು

ಕೌರವ : ಮಾವಯ್ಯ, ನಿಮ್ಮ ಭುಜಬಲ ಪರಾಕ್ರಮವನ್ನೂ ವೈರಿಗಳಲ್ಲಿ ತೋರಿಸದೆ ವೊಬ್ಬರಿಗೊಬ್ಬರು ನೀವೇ ಕಲಹ ಮಾಡಿಕೊಂಡು ಪಾಳಯದಲ್ಲಿಯೆ ತುಳಿದಾಟವನ್ನು ಮಾಡಿಕೊಂಡರೆ, ವೈರಿಗಳಾದ ಪಾಂಡವರು ನೋಡಿ ನಗುವುದಿಲ್ಲವೆ. ಮಾವಯ್ಯ ನಿಮಗೆ ನಾಚಿಕೆಯಾಗಲಿಲ್ಲವೆ, ಕರ್ಣ ನಿನಗೆ ನಾಚಿಕೆಯಾಗಲಿಲ್ಲವೆ ಹೇಳುವೆನು ॥

ಪದ

ಗೆಲುವ ತಂದಿರಿ ಯನಗೆ ಮಾವಯ್ಯ ನಾನು
ಬಲುಬಿನ್ನಹಗೈದ ಬಗೆ ಯಿನ ಸುತನೊಳು
ನೀವು ಕಲಹವ ಬಗೆವುದು ನೃಪರ ನೀತಿಗಳೇನೈಯ್ಯ ॥

ಕೌರವ : ಮಾವಯ್ಯ, ನಾನು ನಿಮ್ಮಲ್ಲಿ ಬಂದು ಚಾಲುವರಿದು ಕರೆದುಕೊಂಡು ಬಂದುದಕ್ಕೆ ಗೆಲುವನ್ನು ತಂದಂಥವರಾದಿರಿ. ಸಾರ್ಥಕವೇನು, ಕರ್ಣನ ಸಂಗಡ ಕಲಹವನ್ನೂ ಕಲಕದೆ ದುರುಳರನ್ನು ಸರಳಿನಿಂದ ನರಳಿಸಲು ಮರಳಿ ತೆರಳುವಂಥವರಾಗಿ. ಹೀಗೆ ತಾವು ಮಾಡತಕ್ಕಂಥಾದ್ದು ರಾಜನೀತಿಯಲ್ಲ ಯೋಚಿಸಬಹುದು.

ಶಲ್ಯ : ಅಯ್ಯ ಕೌರವ, ನಿನ್ನ ಮಾತಿಗೋಸ್ಕರವಾಗಿ ಹೀನ ವೃತ್ತಿ ಕೆಲಸವನ್ನೂ ಮಾಡಿ ಮಾನವನ್ನು ಕಳೆದುಕೊಳ್ಳುವಂಥದ್ದಾಯಿತು. ಆದರೂ ಆಗಲಪ್ಪ ಅನುಭವಿಸುತ್ತೇನೆ. ಕರ್ಣನಿಗೆ ಸಮಾಧಾನವನ್ನೂ ಹೇಳು.

ಕೌರವ : ಅಯ್ಯ ಕರ್ಣ, ಮಾವಯ್ಯನವರಿಗೆ ನಿಮ್ಮಲ್ಲಿ ಕಲಹವನ್ನು ಮಾಡದಂತೆ ಹೇಳಿರುತ್ತೇನೆ. ಉಭಯತ್ರರು ಏಕ ಮನಸ್ಸಿನಿಂದ ವೈರಿಗಳ ಸಮೂಹಕ್ಕೆ ಮರಳಿ ತೆರಳುವಂಥವರಾಗಿರಿ.

ಕರ್ಣ : ಮಹಾರಾಜನೆ ವೊಳ್ಳೇದು ಅಪ್ಪಣೆ. ಅಯ್ಯ ಶಲ್ಯ ಭೂಪತಿ, ಪಾಳಯದಲ್ಲಿ ನಾವೇ ತುಳಿದಾಟವನ್ನೂ ಮಾಡಿಕೊಂಡು ಕಲಹ ಬೆಳೆಸಿದರೆ ವೈರಿಗಳ ಅಪಹಾಸ್ಯಕ್ಕೆ ಕಾರಣವಲ್ಲದೆ ಕೌರವೇಶ್ವರನು ನಂಬಿರುವುದಕ್ಕೆ ಸಫಲವಾಗುವುದಿಲ್ಲ. ಯಿಲ್ಲಿಗೆನ್ನ ಮೇಲೆ ಹಿಂದಿರುವ ನಿಮ್ಮ ದ್ವೇಷವನ್ನು ಬಿಟ್ಟುಬಿಡಿ. ಯೇಕವಾಗಿ ಹೋಗೋಣ.  ಯೀ ಕ್ಷಣವೆ ರಥವನ್ನೂ ವೈರಿಗಳ ಸಮೂಹಕ್ಕೆ ಹೊಡೆಯುವಂಥವನಾಗು.

ಶಲ್ಯ : ಆಗಲೈಯ್ಯ ಕರ್ಣ, ಯೀ ಕ್ಷಣವೆ ರಥವನ್ನು ಹೊಡೆಯುವೆ ಕೂರುವನಾಗು.

ಕರ್ಣ : ಅಯ್ಯ ಶಲ್ಯ ಭೂಪತಿ, ರಣಭೂಮಿಗೆ ರಥ ಬಂದ ಹಾಗಾಯಿತು. ವೈರಿಯಾದ ಅರ್ಜುನನನ್ನು ಕರೆಸುತ್ತೇನೆ. ಯಲಾ ಚಾರಕ, ನಿಮಿಷದಲ್ಲಿ ಫಲುಗುಣನ ಬಳಿಗೆ ಹೋಗಿ ರಣಾಗ್ರಕ್ಕೆ ಕರೆದುಕೊಂಡು ಬರುವಂಥವನಾಗು.

ಸಾರಥಿ : ಅಪ್ಪಣೆ ಕರೆದುಕೊಂಡು ಬರುತ್ತೇನೆ.

ಕೌರವ : ಅಯ್ಯ ಭಾಗವತರೆ, ಕಲಹವನ್ನು ಕಟ್ಟಿಕೊಂಡಿದ್ದ ಕರ್ಣ ಶಲ್ಯರನ್ನು ಸಮಾಧಾನಪಡಿಸಿ ಕಾಳಗಕ್ಕೆ ಕಳುಹಿಸಿದ ಹಾಗಾಯಿತು. ನಾನು ಕಾರ‌್ಯಭಾಗಿಯಾಗಿರುವೆನು.

ಪದ ರಾಗ ಝಂಪೆ

ಹರಹರಾ ಯಿದಕೇನ ತೆರನ ಮಾಡಲಿ ನಾನು
ಹಗೆಯ ಕರವ ಪಿಡಿದಳೆ ಸಿರಿಯು ವರಲಿ ಫಲವೇನು ॥

ಕೌರವ : ಅಯ್ಯೋ ಹರಹರ, ಜಯಲಕ್ಷ್ಮಿಯೆಂಬ ಸಿರಿಯು ಹಗೆಯಾದ ಧರ್ಮಜನಲ್ಲಿ ಸೇರಿರುವಳಲ್ಲ. ವರಲಿ ಫಲವೇನು ಮತ್ತೊಂದು ಅಭಿಪ್ರಾಯವಿರುವುದು ಹೇಳುವೆನು.

ಪದ

ಆದರೊಂದುಂಟೆನಗೆ ಆದಿಯಲಿ ಸ್ನೇಹಿತರು
ಮೇದಿನಿ ಸ್ಥಳದೊಳಿಹ ವೀರದಾನವರೂ ॥

ಕೌರವ : ಅಯ್ಯ ಭಾಗವತರೆ, ಪಾತಾಳಲೋಕದಲ್ಲಿ ನಿವಾತ ಕವಚನ ಮಕ್ಕಳು ಸಮಸಪ್ತಕರೆಂಬ ರಾಕ್ಷಸರು ನನಗೆ ಸ್ನೇಹಿತರು. ಕಷ್ಟ ಬಂದ ಕಾಲದಲ್ಲಿ ಕರೆಸಿದರೆ ಬಂದು ಪರಿಹರಿಸುವುದಾಗಿ ಅಭಯವನ್ನು ಕೊಟ್ಟು ಯಿದ್ದರು ಹೇಳುತ್ತೇನೆ.

ಪದ

ಆತನ ಕರಸೀಗ ಪಾಂಡವರ ಸಂಹರಿಸಿ
ಭೂತಳವ ಪಾಲಿಪುವ ಬುದ್ಧಿ ತನಗಿನ್ನೂ ॥

ಕೌರವ : ಅಯ್ಯ ಭಾಗವತರೆ, ಆ ಸಮಸಪ್ತಕರನ್ನೂ ಬರಮಾಡಿಕೊಂಡು ನನ್ನ ಕಷ್ಟವನ್ನು ಅವರಲ್ಲಿ ಬಿನ್ನೈಸಿ ಪಾಂಡವರನ್ನು ಸಂಹರಿಸಿ ವುದ್ದಂಡನಾಗಿ ದಂಡಧರನಂತೆ ಯೀ ಭೂಮಂಡಲವನ್ನೂ ಪರಿಪಾಲಿಸುವೆನು. ಯಿನ್ನಾದರೂ ಅವರ ಧ್ಯಾನವನ್ನೂ ಮಾಡುತ್ತೇನೆ. ಅಯ್ಯ ಸಮಸಪ್ತಕರೆ ಬೇಗ ಬನ್ನಿ ॥

ಪದ

ಯಿತ್ತ ಕವುರವ ಸ್ಮರಿಸಿ ಮತ್ತೆ  ಸಮಸಪ್ತಕರು
ದೈತ್ಯರಾಕ್ಷಣ ಬಂದು ಪೃಥ್ವೀಶಗೆರಗೆ

ಸಮಸಪ್ತಕರು : ನಮೋನಮೋ ಕವುರವೇಶ್ವರ ಕ್ಷೇಮವಾಗಿದ್ದೀಯ.

ಕೌರವ : ನಮೋ ನಮೋ ಮಿತ್ರ ಶಿಖಾಮಣಿಗಳಾದ ಸಮಸಪ್ತಕರೆ ನೀವು ಕ್ಷೇಮವಾಗಿದ್ದೀರಾ.

ದೈತ್ಯರು : ಅಯ್ಯ ಕವುರವೇಶ್ವರ ನಾವು ಕ್ಷೇಮವಾಗಿದ್ದೇವೆ. ನಿನ್ನ ಮುಖ ಕಮಲವು ಯಾಕೊ ಖಿನ್ನವಾಗಿರುವುದು ಕಾರಣವೇನು ॥

ಪದ

ಯೇನು ಕಾರಣ ನೆನೆದೆ ಮಾನವಾಧಿಪನವರ್ಗೆ
ನೀನುಸುರು ಶೀಘ್ರದಲಿ ದಾನವರ್ಗೆಂದ॥

ದೈತ್ಯರು : ಅಯ್ಯ ರಾಷ್ಟ್ರಾಧಿಪತಿಯಾದ ಕವುರವೇಶ್ವರನೆ, ನಮ್ಮನ್ನು ಯಿಷ್ಟು ತ್ವರಿತದಿಂದ ಕರೆಸಿದ ಕಾರಣವೇನು ಹೇಳುವಂಥವನಾಗು ॥

ಪದ
ಯಿನಸುತನ ಪಡಿಬಲಕೆ ತೆರಳಿ ಪಾರ್ಥನ
ಶಿರವನಿಳುಹುವರೆಂದೆನುತ ಕರಸಿದೆನು ನಿಮ್ಮ ॥

ಕೌರವ : ಅಯ್ಯ ಸಮಸಪ್ತಕರೆ, ಎನ್ನ ವೈರಿಗಳಾದ ಪಾಂಡವರ ಮೇಲೆ ಸೂರ‌್ಯಸುತನಾದ ಕರ್ಣ ಶಲ್ಯ ಯಿವರೀರ್ವರು ಸಂಗ್ರಾಮಕ್ಕೆ ತೆರಳಿರುವರು. ನೀವು ಅವರಿಗೆ ಬೆಂಬಲವಾಗಿ ಹೋಗಿ ಅರ್ಜುನನನ್ನು ಸಂಹರಿಸಿಕೊಂಡು ಬರುವವರಾಗಿರಿ.

ದೈತ್ಯರು : ಅಯ್ಯ ಕೌರವೇಶ್ವರ ವೊಳ್ಳೇದು. ನಿನಗೆ ಮೃತ್ಯುವಾಗಿರತಕ್ಕ ಆ ನರನಾದ ಅರ್ಜುನನನ್ನು ಸಂಹಾರ ಮಾಡಿಕೊಡುತ್ತೇವೆ. ಕರವನ್ನು ಹಿಡಿ ಅಭಯವನ್ನು ತೆಗೆದುಕೊ ಅರಮನೆಗೆ ತೆರಳು.