ಕರ್ಣ : ಅಯ್ಯ ಭಾಗವತರೆ ನಮ್ಮ ದೊರೆಯಾದ ಕೌರವೇಶ್ವರ ಧಾವಲ್ಲಿ ಯಿರುತ್ತಾರೆ ಭೇಟಿ ಮಾಡಿಸಿ ಕೊಡುವಂಥವರಾಗಿರಿ.

ಭಾಗವತ : ಒಡ್ಡೋಲಗಸ್ತರಾಗಿ ಇದ್ದಾರೆ.

ಕರ್ಣ : ಗುರುಪುತ್ರರಾದಂಥ ಅಶ್ವತ್ಥಾಮರ ಪಾದಕ್ಕೆ ನಮಸ್ಕಾರ.

ಅಶ್ವತ್ಥಾಮ : ನಿನಗೆ ಜಯವಾಗಲಯ್ಯ ರಾಧಾ ಪುತ್ರನೆ ॥

ಕರ್ಣ : ರಾಷ್ಟ್ರಾಧಿಪತಿಯಾದ ಮಹಾರಾಜರಿಗೆ ನಮಸ್ಕಾರ.

ಕೌರವ : ಹೀಗೆ ಬಾರಯ್ಯ ಕರ್ಣ ರಿಪುಕುಲಜೀರ್ಣ ನಿನಗೆ ಮಂಗಳವಾಗಲಿ, ಮೇಲಕ್ಕೇಳಯ್ಯ ಕರ್ಣ.

ಕರ್ಣ : ಮಹಾರಾಜರೆ, ಗುರುಪುತ್ರರಾದ ಅಶ್ವತ್ಥಾಮರು ಯನ್ನನ್ನು ಸಹ ಬರಮಾಡಿಕೊಂಡ ಕಾರಣವೇನು ಅಪ್ಪಣೆಯಾಗಲಯ್ಯ ದೊರೆಯೆ ॥

ಕೌರವ : ಅಯ್ಯ ಕರ್ಣ ಹಾಗಾದರೆ ಹೇಳುತ್ತೇನೆ ಲಾಲಿಸು.

ಭಾಮಿನಿ

ಯನುತ ಭೂಪಾಲಕನು ತಾ ಮರುಗಿ ಮನದೊಳಗೆ
ಗೆಲುವ ಕಾಣದೆ ಗುರುಸುತ ಯಿನಸುತಾದಿಗಳೆಲ್ಲ
ಮೌನದೊಳಿರಲು ತಾ ಕಂಡು ॥

ಕೌರವ : ಸ್ವಾಮಿ ಅಶ್ವತ್ಥಾಮಾಚಾರ‌್ಯರೆ ಅಯ್ಯ ಕರ್ಣ, ನೀವುಗಳೆಲ್ಲ ಹೀಗೆ ಮೌನವನ್ನು ಧರಿಸಿದ ಬಳಿಕ ನನ್ನ ಗತಿ ನನಗಾಯಿತು. ಅಯ್ಯ ಕರ್ಣ ಹೇಳುತ್ತೇನೆ ಲಾಲಿಸು ॥

ರಾಗ ಜಂಪೆ

ಪದ

ಯಾತಕ್ಕೋಸ್ಕರ ಮೌನ ಪಿಡಿದುಕೊಳ್ಳಲು ಕೈಯ್ಯ
ಭೂತಳಾಧಿಪರೆಲ್ಲಾ ಧುರದಿ ಬಳಲಿದಿರೇ

ಕೌರವ : ಸ್ವಾಮಿ ಗುರುಪುತ್ರರೆ ಅಯ್ಯ ಕರ್ಣ, ಅದೃಷ್ಟಹೀನನಾದ ಯನಗೋಸ್ಕರವಾಗಿ ನೀವುಗಳೆಲ್ಲಾ ಮೌನವನ್ನು ಧರಿಸಿಕೊಂಡು ತೊಳಲುವಿರಲ್ಲಾ. ಶಿವಶಿವ ವೃಥಾ ಧುರದೋಳ್ ಬಳಲುವಂಥವರಾದಿರಿ ಶಂಕರ ಮತ್ತೂ ಹೇಳುತ್ತೇನೆ ॥

ಪದ

ನಾನು ಪುಣ್ಯವಿಹೀನನಾದ ಬಳಿಕೆಲ್ಲರು ಯೇನ
ಮಾಡುವಿರಯ್ಯ ಯಂಮೊಡನೆ ಭಟರು ॥

ಕೌರವ : ಸ್ವಾಮಿ ಅಶ್ವತ್ಥಾಮರೆ, ಅಯ್ಯ ಕರ್ಣ, ನನ್ನ ದುರ್ಭಾಗ್ಯಕ್ಕೆ ನೀವುಗಳೆಲ್ಲ ಏನು ಮಾಡುವಿರಿ. ನೀವಿಷ್ಟು ಶ್ರಮಪಟ್ಟರು ತಪ್ಪಲಿಲ್ಲಾ. ಮುಖ್ಯವಾಗಿ ನಾನು ಪುಣ್ಯದಲ್ಲಿ ಹೀನ. ಆರ‌್ಯರೆ ಹಿಂದೆ ನಡೆದದ್ದು ಹೋಗಲಿ. ಮುಂದೆ ವೈರಿಗಳ ಸಂಹಾರ ಮಾಡಲು ತಕ್ಕ ಪ್ರಯತ್ನವನ್ನು ಮಾಡುವುದಿಲ್ಲವೇನಿರಯ್ಯ ಗುರುಪುತ್ರರೆ ॥

ಅಶ್ವತ್ಥಾಮ : ಮಹಾರಾಜನೆ ಸುಯೋಧನ ಭೂಪಾಲ, ಚಿಂತೆಯಿಲ್ಲ ಹೇಳುತ್ತೇನೆ ಚಿನ್ನಾಗಿ ಲಾಲಿಸು.

ಪದ್ಯ

ಯನಲು ಕೇಳುತಲಾಗ ಗುರು ತನುಜ ಪೇಳಿದನು
ಯನಗೆ ಪಿತನಳಿದ ವಾರ್ತೆಯನೂ ಕೆಣಕದಿರೂ

ಅಶ್ವತ್ಥಾಮ : ಮಹರಾಜನೆ, ಯೀ ಪ್ರಪಂಚದಲ್ಲಿ ತನ್ನ ಕಷ್ಟವೆ ತನ್ನದು ಹೇಳುವದು ವಾಸ್ತವ. ಯೀಗ ಗೊತ್ತಾಯಿತು. ತಂದೆಯವರು ಮೃತಪಟ್ಟ ದುಃಖವನ್ನು ಸಹಿಸಿಕೊಳ್ಳುವುದೇ ಸಾಕಾಗಿರುವುದು, ಹೀಗಿರಲು ಮತ್ತಷ್ಟು ಬೇಗೆಯನ್ನು ಹಚ್ಚಿ ನಮ್ಮ ಉದರವನ್ನೂ ಉರಿಸಬೇಡಪ್ಪ ದೊರೆಯೆ, ಮತ್ತೂ ಹೇಳುತ್ತೇನೆ ಕೇಳು.

ಪದ

ಜನಪನೇ ಸಿರಿವಂತ ಕಡುಪಾಪಿಗಳು ನಾವ್
ನಿಮಗೆ ಯಂಮಿಂದಾಯ್ತು ಧುರದೊಳಪಜಯವು

ಅಶ್ವತ್ಥಾಮ : ಅಯ್ಯ ಕೌರವೇಶ್ವರ, ನೀನೇನೋ ಭಾಗ್ಯವಂತ ಖರೆ. ನಾವುಗಳೇನೋ ಬಡಪಾಪಿಗಳು ನಂಮ ತಂದೆಯವರು ಮೃತಪಟ್ಟರು ಚಿಂತೆಯಿಲ್ಲ. ನಮ್ಮ ಗತಿ ನಮಗಾಯಿತು. ಮುಖ್ಯವಾಗಿ ನಿನಗೆ ನಮ್ಮಿಂದ ಅಪಜಯ ಬರುವುದಾಯಿತಲ್ಲಯ್ಯ ಕೌರವೇಶ್ವರ॥

ಕೌರವ : ಸ್ವಾಮಿ ಅಶ್ವತ್ಥಾಮಾಚಾರ‌್ಯರೆ, ತಾವಿಷ್ಟೂ ಬೇಸರಪಟ್ಟು ಮಾತನಾಡಬೇಡಿರಿ. ಅರಿಕೆ ಮಾಡಿಕೊಳ್ಳುತ್ತೇನೆ.

ಪದ

ಗುರುತನುಜನು ನೀವ್ಯಾಕೆ ಕೋಪಿಸುವಿರಿ ಧುರದೋಳ್
ಇಚ್ಚಾಮರಣಿಗಳು ತೆರಳಿದರು.

ಕೌರವ : ಸ್ವಾಮಿ ಗುರು ಬಾಲಕ, ಯಾತಕ್ಕೋಸ್ಕರವಾಗಿ ನನ್ನ ಮೇಲೆ ತಾವಿಷ್ಟು ಕೋಪವನ್ನು ಮಾಡುತ್ತೀರಿ. ನಿಮ್ಮ ತಂದೆಯವರಾದ ದ್ರೋಣಾಚಾರ್ಯರು ಸ್ವಯಿಚ್ಛೆಯಿಂದ ಮರಣವಾದರಂತೆ ಮತ್ತೆ ಬೇರೆಯಿಲ್ಲ. ಹಿಂದೆ ನಡೆದ ಮಾತು ನುಡಿದು ಫಲವೇನು. ಯಿಲ್ಲಿಗೆ ಮರೆತುಬಿಟ್ಟು ಮುಂದೆ ಪಾಂಡವರನ್ನು ಜಯಿಸತಕ್ಕ ಹದನವನ್ನು ಹೇಳುವಂಥವರಾಗಿರಿ॥

ಅಶ್ವತ್ಥಾಮ : ಮಹಾರಾಜನೆ, ಹಾಗಾದರೆ ಪಾಂಡವರನ್ನು ಜಯಿಸತಕ್ಕ ಉಪಾಯವನ್ನು ಹೇಳುತ್ತೇನೆ ಕೇಳುವಂಥವನಾಗೋ ಕೌರವೇಶ್ವರ.

ರಾಗ ಆರಭಿ ತ್ರಿಪುಡೆ

ಪದ

ಮಂತ್ರಾಗಮದಿ ಪಂಕಜವದನೆಯರು ಶೋಭಾನದಿಂದಲಿ
ದಳಪತಿತ್ವಂ ತರಣಿ ಸುತನಿಗೆ ವಿರಚಿಸೆಂದ ॥

ಅಶ್ವತ್ಥಾಮ : ಮಹಾರಾಜ ಸುಯೋಧನ ಭೂಪಾಲ, ಈ ಕ್ಷಣವೆ ಹಸ್ತಿನಾವತಿಯನ್ನು ಮಕರತೋರಣದಿಂದ ಅಲಂಕಾರವನ್ನು ಮಾಡಿಸಿ, ಶಾಸ್ತ್ರೋಕ್ತದಿಂದ ಮತ್ತು ಭೂಸುರೋತ್ತಮರಿಂದ ಮುಹೂರ್ತವನ್ನು ಮಾಡಿಸಿ, ನಿನಗೆ ಬಾಹುಬಲವಾಗಿರುವ ಯೀ ಕರ್ಣನಿಗೆ ದಳಪತಿಪಟ್ಟವನ್ನು ಕಟ್ಟಿ, ನಿನ್ನಾ ವೈರಿಗಳಾದ ಪಾಂಡವರ ಮೇಲೆ ಯುದ್ಧಕ್ಕೆ  ಸಿದ್ಧವಾಗಿ ಪ್ರಸಿದ್ಧಪಡಿಸಿ ಕಳುಹಿಸಿಕೊಡುವಂಥವ ನಾಗೈ ಕೌರವೇಶ್ವರಾ.

ಕರ್ಣ : ಸ್ವಾಮಿ ಗುರುಪುತ್ರರೆ ಚಲೋ ಮಾತು ಅಪ್ಪಣೆ ಕೊಡಿಸಿದಿರಿ. ಶಹಬಾಸ್ ಸಂತೋಷವಾಯಿತು. ಚಿಂತೆ ಇಲ್ಲಾ ಅರಿಕೆ ಮಾಡಿಕೊಳ್ಳುತ್ತೇನೆ ಲಾಲಿಸಬೇಕು.

ಪದ

ಯೆನಲು ಕೇಳುತ ಅರ್ಕಸಂಭವ ಜನಪನೆದುರಿಗೆ ಪೇಳ್ದನಾಕ್ಷಣ
ನಿನಗೆ ಯೋಗ್ಯವು ನಿಮ್ಮ ತಂದೆಯ ಕೆಲಸವೆಂದು ॥

ಕರ್ಣ : ಸ್ವಾಮಿ ಅಶ್ವತ್ಥಾಮಾಚಾರ‌್ಯರೆ ನನಗೆ ದಳಪತಿಪಟ್ಟವನ್ನು ಕಟ್ಟಬೇಕೆಂಬುದಾಗಿ ಮಹಾರಾಜರಲ್ಲಿ ಹೇಳುವದು ಸರಿಯಲ್ಲ. ಯೀ ಮುಂಚೆ ನಿಮ್ಮ ತಂದೆಯವರು ವಹಿಸಿಕೊಂಡ ದಳಪತಿಪಟ್ಟವನ್ನು ನೀವೇ ಕಟ್ಟಿಕೊಂಡು ವೈರಿಗಳ ಮೇಲೆ ತೆರಳಬೇಕಲ್ಲದೆ ನನಗೆ ಸಲ್ಲತಕ್ಕದಲ್ಲಾ. ಅವುದೋ ಅಲ್ಲವೋ ಯೋಚಿಸಬೇಕು

ಅಶ್ವತ್ಥಾಮ : ಅಹುದಯ್ಯ ಕರ್ಣ, ನೀನು ಹೇಳತಕ್ಕ ಮಾತು ವೊಪ್ಪಬೇಕು. ಅದರಲ್ಲೂ ಇನ್ನೊಂದು ಭಾಗವಿರುವದು ಹೇಳುತ್ತೇನೆ ಕೇಳು.

ಪದ

ದ್ವಿಜರಿಯೋಗ್ಯವೆ ಕೇಳು ರಣದಭ್ಯುದಯಗಳು ಧಾವೆತ್ತ ಬಲ್ಲೆವು
ತ್ರಿಜಗದೊಳು ನಿನಗೆ ಮೆರೆ ಪೋಗು ರಣವಿಜಯಕೆಂದ ॥

ಅಶ್ವತ್ಥಾಮ : ಅಯ್ಯ ಕರ್ಣ ನಾವು ಬ್ರಾಹ್ಮಣರು. ನಮಗೆ ರಣಾಗ್ರ ಮಾಡತಕ್ಕದ್ದು ಯೋಗ್ಯವೆ. ಮುಖ್ಯವಾಗಿ ನಿನ್ನಂಥ ವೀರಾಧಿವೀರನಿಗೆ ಸಲ್ಲತಕ್ಕಂತದ್ದು. ರಣಾಗ್ರದಲ್ಲಿ ಬಿಲ್ಲನ್ನು ಹ್ಯಾಗೆ ಹಿಡಿಯತಕ್ಕದ್ದು ಹೇಳಯ್ಯ ಕರ್ಣ.

ಕರ್ಣ : ಸ್ವಾಮಿ ಪೂಜ್ಯರೆ ಹೀಗೆ ಹಿಡಿಯಬೇಕು.

ಅಶ್ವತ್ಥಾಮ : ಇಗೋ ಹಿಡಿಯತಕ್ಕದ್ದು ಹೀಗೆ.

ಕರ್ಣ : ಹಾಗಲ್ಲ ಸ್ವಾಮಿ ಹೀಗೆ ಹಿಡಿಯಬೇಕು.

ಅಶ್ವತ್ಥಾಮ : ನಮಗೆ ಇದು ತಿಳಿಯದು. ಆದ್ದರಿಂದ ನಮ್ಮ ಮಾತಿಗೆ ಪ್ರತಿಕೂಲವಿಲ್ಲದಂತೆ ದಳಪತಿಪಟ್ಟ ವನ್ನು ಕಟ್ಟಿಕೊಂಡು, ಪಾಂಡವರ ಮೇಲೆ ಯುದ್ಧಕ್ಕೆ ತೆರಳಿ ಮಹಾರಾಜನಿಗೆ ಯಶೋಲಾಭವನ್ನು ತರುವಂಥವನಾಗಯ್ಯ ಕರ್ಣ.

ಕರ್ಣ : ಸ್ವಾಮಿ ಹಾಗಾದರೆ ತಂಮ ಮಾತಿಗೆ ಉತ್ತರವನ್ನು ಉತ್ತರಿಸುವುದಿಲ್ಲಾ, ಆಗಲಿ ದಳಪತಿಪಟ್ಟವನ್ನು ಕಟ್ಟಿಕೊಂಡು ಪಾಂಡವರ ಮೇಲೆ ಯುದ್ಧಕ್ಕೆ ಸನ್ನದ್ಧನಾಗುತ್ತೇನೆ ದೇವ ಪ್ರಾಣಸಂಜೀವ.

ಅಶ್ವತ್ಥಾಮ : ಅಯ್ಯ ಕೌರವೇಶ್ವರಾ, ಕರ್ಣನನ್ನು ವಡಂಬಡಿಸಿದ ಹಾಗಾಯಿತು. ಸಾವಕಾಶವೇಕೆ ಕರ್ಣನಿಗೆ ದಳಪತಿಪಟ್ಟವನ್ನು ಕಟ್ಟಿ ಡಂಗೂರವನ್ನು ಹೊಡೆಸುವಂಥವನಾಗು.

ಕೌರವ : ಅಪ್ಪಣೆ ಹೊಡೆಸುತ್ತೇನೆ. ಯಲಾ ಚಾರಕ, ಯೀ ದಿವಸ ಕುರುಬಲದಲ್ಲಿ ತ್ಯಾಗದೋಳ್ ಪರಿಪೂರ್ಣ ವೀರ ಕರ್ಣನಿಗೆ ದಳಪತಿ ಪಟ್ಟವಾಯಿತೆಂದು ಮುಂದಾಗಿ ಡಂಗೂರವನ್ನು ಪಟ್ಟಣದಲ್ಲಿ ಹೊಡೆಯುವಂಥವನಾಗೋ ಚಾರಕ.

ಚಾರಕ : ಮದ್ಲೇಕಾರಣ್ಣ ಯಲ್ಲಿ ಮತ್ತೇ ನನ್ನ ತಮಟೆಗತಿಗೆ ಸರಿಯಾಗಿ ಮದಲೆ ಹಾಕು. ಮತ್ತೇ ಸಾರ‌್ತೀನಿ ತಮಟೆಗತ್ತು ಹೇಳಿಕೊಂಡು ಕುರುಸೇನೆಯಲ್ಲಿ ಕರ್ಣಫ್ಪನಿಗೆ ದಳಪತಿ ಪಟ್ಟವಾಯಿತು.

ಭಾಮಿನಿ

ಧರಣಿಪತಿ ಕೇಳಿತ್ತ ನುಡಿಗಳ ಹರುಷವನು ತಾಳುತ್ತ ಮನದೊಳು
ಧುರಕೆ ದಳಪತಿ ಕರ್ಣನೆಂದೊಡೆಯಿಸಿದನು ಡಂಗುರವ
ತರಣಿ ತಲೆದೋರಿದನು ಮೂಡಣಗಿರಿಯ ಶಿಖರದಿ
ಆ ಕ್ಷಣಕೆ ಧರಣಿ ಬೆಳಗಿತ್ತುನುದಯ ಕಾಲವನು ॥

ಕರ್ಣ : ಅಯ್ಯ ಭಾಗವತರೆ, ಯೀ ಮುಹೂರ್ತದೊಳ್ ಪೂರ್ವಾದ್ರಿಯಲ್ಲಿ ನಮ್ಮ ತಂದೆಯಾದ ಸೂರ‌್ಯನಾರಾಯಣನು ವುದ್ಭವಿಸುವ ಸಮಯವಾಗಿರುವುದು ಹೇಳುತ್ತೇನೆ ಕೇಳಿ.

ಪದ

ತಂದೆಯ ಭರವ ನಿರೀಕ್ಷಿಸಿ ಕರ್ಣನು ಸ್ಥಾನಂಗ ವಿರಚಿಸುತ
ತಂದೆಗೆ ಅರ್ಘ್ಯವನಿತ್ತ ಕ್ಷಣದೊಳು ಬಂದೆರಗಿದ ರಥವ ॥

ಕರ್ಣ : ಅಯ್ಯ ಭಾಗವತರೆ, ಪೂರ್ವಾಚಲದಲ್ಲಿ ಸಪ್ತಾಶ್ವರಥಾರೂಡನಾದ ಯನ್ನಾ ಜನಕನು ಜನಿಸಿದ್ದರಿಂದ ಜಾಗ್ರತೆ ಸ್ನಾನವನ್ನು ಮಾಡಿ ಮಡಿಯನ್ನುಟ್ಟು, ನಿತ್ಯಾಕರ್ಮಾನುಷ್ಠಾನುವನ್ನು ತೀರಿಸಿಕೊಂಡು ತಂದೆಯವರಿಗೆ ಆರ್ಘ್ಯಪ್ರದಾನವನ್ನು ಕೊಟ್ಟಂಥವನಾದೆ. ಯಿನ್ನಾದರೂ ರಥಾರೋಹಣನಾಗುತ್ತೇನೆ ನೋಡಿರಿ. ಯಲಾ ಚಾರಕ, ರಥವನ್ನೂ ಹೊಡೆದುಕೊಂಡು ಬರುವಂಥವನಾಗು ಹೇಳುತ್ತೇನೆ ಕೇಳುವಂಥವನಾಗು.

ಕರ್ಣ : ಅಯ್ಯ ಭಾಗವತರೆ, ಶರ ಶಾಲೆಗೆ ಪ್ರವೇಶ ಮಾಡಿ ಯನಗೆ ಅಸ್ತ್ರಶಸ್ತ್ರ ಪ್ರಯೋಗೋಪ ಸಂಹಾರಗಳನ್ನು ಕಲಿಸಿದಂಥ ಪರಶುರಾಮ ದೇವರಿಗೆ ಪಾದಾಭಿವಂದನೆಯನ್ನು ಮಾಡಿ. ಕರಂಗಳಲ್ಲಿ ಶರಗಳನ್ನೂ ತೆಗೆದುಕೊಂಡಂಥವನಾದೆ. ಯಿನ್ನಾದರೂ ಗುರುಪುತ್ರರಲ್ಲಿ ಶರಗಳನ್ನು ಹರಸಿಕೊಳ್ಳುತ್ತೇನೆ. ಸ್ವಾಮಿ ಅಶ್ವತ್ಥಾಮರೆ, ವೈರಿಗಳ ಸಂಹಾರ ಮಾಡಲು ಯೀ ಶರಗಳನ್ನೂ ಹರಸಿ ಆಶೀರ್ವಾದವನ್ನು ಮಾಡಿ ಕರಕಮಲಕ್ಕೆ ದಯಮಾಡಿಸಬೇಕೈ ದೇವ ಪ್ರಾಣ ಸಂಜೀವ.

ಅಶ್ವತ್ಥಾಮ : ಅಯ್ಯ ಕರ್ಣ, ಶರಗಳನ್ನು ಹರಸಿಕೊಡುವೆನು ಕೇಳು ॥ ಜಯವಾಗಲಿ ಶರಗಳನ್ನೂ ಹರಸಿದ್ದೇನೆ ಕರಕ್ಕೆ ತೆಗೆದುಕೊಳ್ಳುವಂಥವನಾಗೈ ಕರ್ಣ.

ಕರ್ಣ : ಪೂಜ್ಯರೆ ಅಸ್ತ್ರವನ್ನು ದಯಪಾಲಿಸಬೇಕು.

ಪದ

ಕುರುಪತಿಗಾಕ್ಷಣ ಕರವನು ಮುಗಿಯುತ ಧುರಕಪ್ಪಣೆ ಕೇಳೆ
ತರಿಸಿಕೊಟ್ಟ ಹೊಂಬಟ್ಟಲೋಳ್ ವೀಳ್ಯವ ತರಣಿಸುತನ ಕಳುವೆ ॥

ಕರ್ಣ : ರಾಷ್ಟ್ರಾಧಿಪತಿಯಾದ ಕೌರವೇಶ್ವರನೆ ಇಗೋ ಕೈಮುಗಿಯುತ್ತೇನೆ. ಭಂಡರಾದ ಪಾಂಡವರ ಮಂಡೆಯನ್ನೂ ದಂಡಧರನಂತೆ ದಂಡಿಸಿ ಚೆಂಡಾಡಲು ಹೊರಟಿರುವೆನು. ವೀಳ್ಯವನ್ನು ತರಿಸಿಕೊಡುವಂಥವನಾಗು.

ಕೌರವ : ಕರವನ್ನು ಒಡ್ಡಯ್ಯ ಕರ್ಣ, ತಗೋ ವೀಳ್ಯವನ್ನೂ ಕೊಡುತ್ತೇನೆ. ಜಯಶೀಲನಾಗಿ ಯಶೋಲಾಭವನ್ನೂ ತೆಗೆದುಕೊಂಡು ಬರುವಂಥವನಾಗೈಯ್ಯ ಕರ್ಣ ॥

ಪದ

ಕರೆಯಿರ‌್ಯೊ ಪಾಂಡುಕುಮಾರರನೀಗಲು ಬರಲಿಂದಿನ ಆಹವಕೆ
ಗುರುಗಳು ಭೀಷ್ಮರ ಗೆಲಿದಿಹ ಗರ್ವವ ಮುರಿವೆನು ಯೀ ಕ್ಷಣಕೇ ॥

ಕರ್ಣ : ಯಲಾ ಚಾರಕ, ಯಿವತ್ತಿನ ರಣಾಗ್ರದಲ್ಲಿ ತಬ್ಬಲಿಗಳಾದ ಪಾಂಡವರನ್ನು ಕರೆಯಿರಿ. ಪಾಮರರು ಯೀ ಮುಂಚೆ ಗುರುಗಳಾದ ದ್ರೋಣಾಚಾರ‌್ಯರು ಕೃಪಾಚಾರ‌್ಯರು ಮೊದಲಾದ ಅಂಡ ಮುಖಂಡರನ್ನು ಗೆದ್ದಂಥ ಗರ್ವವನ್ನೂ ಮುರಿಯುತ್ತೇನೆ. ಜಾಗ್ರತೆ ಯೀ ಷಂಡರನ್ನೂ ತೋರಬಾರದೇನು ಸೇವಕ ಭವತ್ರುಣಪಾವಕ.

ಭಾಮಿನಿ

ಯಿಂತು ಕರ್ಣನು ದಳ ಸಹಿತಲವನಾಂತು ಪಾಂಡುಕುಮಾರರ
ಸೇನೆಗೆ ಅಂತಕನ ತೆರನಂತೆ ಕೋಪದಿ ಬಂದು ಹುಡುಕಿದನು ॥

ಕರ್ಣ : ಅಯ್ಯೋ, ಯಿವತ್ತಿನ ದಿವಸ ಪಾಂಡವರ ಸೇನೆಗೆ ಅಂತಕನ ತೆರನಂತೆ ನುಗ್ಗಿ ಎಷ್ಟೂ ಹುಡುಕಿದರು, ಆ ಕಳ್ಳರು ಸಿಕ್ಕಲಿಲ್ಲವಲ್ಲಾ ವಳ್ಳೇದು ಯಿರಲಿ.

ಭಾಮಿನಿ

ಪಂಥವುಳ್ಳಡೆ ಬರಲಿ ಪಾರ್ಥನು ನಿಂತು ನೋಡಲಿ ಭೀಮಯೇರಲಿ
ಕಂತುಹರನನು ಮರೆಯಾ ಪಾರ್ಥನು ಬಿಡನು ತಾನೆಂದ ॥

ಕರ್ಣ : ಹರಹರ ಅಂತಪ್ಪ ಅಧಮರಾದ ಭೀಮಾರ್ಜುನರಿಗೆ ಪಂಥವಿರತಕ್ಕ ಭಾಗದಲ್ಲಿ ಯನ್ನ ಯದುರು ತಾಕಿದ್ದೇಯಾದರೆ ಯೀವತ್ತಿನ ದಿವಸ, ಯೀ ದಗಡಿಗಳು ತ್ರಿಪುರಾಂತಕನಾದ ಕಾಲರುದ್ರನ ಮರೆಬಿದ್ದರು ಯೀ ರಣಭೂಮಿಗೆ ದಿಗ್ಭಲಿಯನ್ನು ಕೊಡದೆ ಬಿಟ್ಟರೆ ನಾನು ಕರ್ಣನೆ ಮತ್ತು ಸೂರ‌್ಯಸುತನೆ ಅಲ್ಲಾ.

ಪದರಾಗ ತ್ರಿಪುಡೆ

ಧುರಕೆ ದಳಪತಿಯಾದ ಕರ್ಣನು ಯೆಂದೆಂಬ
ಬಿರುನುಡಿಯ ವಾಕ್ಯವ  ಕೇಳಿ ಸರಿದುಹೋದರು ಕಳ್ಳ
ಭೀಮ ಪಾರ್ಥರನು ಹಿಡಿತರುವುದಿಲ್ಲಾ  ಯೆಮ್ಮೊಳೆಂದ ॥

ಕರ್ಣ : ಯಲಾ ಚಾರಕ, ಕುರುಸೇನೆಯಲ್ಲಿ ಸೇನಾಧಿಪತ್ಯವು ಕರ್ಣನಿಗೆ ಆಯಿತೆಂಬ ವರ‌್ತಮಾನವನ್ನು ಕೇಳಿ ಆ ಚೋರರಾದ ಭೀಮಾರ್ಜುನರು ಎಲ್ಲಿ ಕದ್ದು ಹೋಗಿರುತ್ತಾರೆ. ಅವರನ್ನೂ ಬೇಧಿಸಿ ಎಳೆತರುವಂಥವರು ಯಾರೂ ಯಿಲ್ಲವಲ್ಲ. ಏನು ಮಾಡುವಂಥವನಾಗಲೊ ಸಿವಸಿವಾ ॥ಆಹಾ ಗೌರೀಶ

ಪದ

ಹಲ್ಲುಗಳುದುರಿದ ಭೀಷ್ಮಾ ಹಾರುವನು ಶರಗುರುವ
ಗೆಲಿದನೆಂಬುವ ಗರ್ವವನ್ನು ಇನ ನಂದನನ ಮುಂದೆ ತೋರಲಿ
ಕ್ಷಣದೊಳಗೆ ಬಣಗು ಪಾಂಡವರ ಬರ ಹೇಳು ॥

ಕರ್ಣ : ಯಲಾ ಚಾರಕ. ದಂತಭಗ್ನರಾದ ಮುದಿಹಾರುವ ಭೀಷ್ಮ ದ್ರೋಣಾದಿಗಳನ್ನು ಗೆದ್ದೆನೆಂಬಹಂಕಾರವು ಬಹುಶಃ ಅರ್ಜುನನಿಗೆ ಯಿರಬೌದು, ಅದಂತಿರಲಿ. ಅಂಥ ಪರಾಕ್ರಮವೆ ಅರ್ಜುನನಿಗಿರುವ ಭಾಗದಲ್ಲಿ ಸೂರ‌್ಯ ಕುಮಾರನಾದ ಈ ವೀರಕರ್ಣನಲ್ಲಿ ತೋರಲಿ, ಈ ಕ್ಷಣವೆ ಬರಹೇಳುವಂಥವನಾಗೊ ಸಾರಥಿ ಸಂಧಾನ ಸಂಮತಿ.

ಪದ

ಅಂತು ಕಾದುವ ಧೈರ‌್ಯವಿಲ್ಲದೆ ಧರ್ಮಜನು ಬಂದು
ಕುರುಪತಿಗೆರಗೆ ಯೆಂದಿಗು ಭಯವಿಲ್ಲದಂತೆ ಕಾಯುವೆನು
ಯೆಂದೆಂಬ ನುಡಿಯ ನರನು ಕೇಳ್ದನೂ ॥

ಕರ್ಣ : ಯಲಾ ಚಾರಕ, ಯನ್ನೆದುರು ನಿಂತು ಕಾದುವ ಧೈರ‌್ಯವು ಧರ್ಮರಾಯನಿಗೆ ಯಿಲ್ಲದೆಯಿದ್ದ ಬಳಿಕ ನಮ್ಮ ದೊರೆಯಾದ ಕೌರವೇಶ್ವರನಿಗೆ ಕಪ್ಪಕಾಣಿಕೆಯನ್ನು ವಪ್ಪಿಸಿ ಶರಣಾಗತನಾದರೆ, ಆ ಪಾಂಡವರನ್ನೂ ಸಂರಕ್ಷಣೆ ಮಾಡುವುದರಲ್ಲಿ ಸಂದೇಹವಿಲ್ಲ. ಯಿದಕ್ಕೆ ಸಂಗತಿಯೊ ಹ್ಯಾಗೆ ತಿಳಿಯುವಂಥವನಾಗೊ ಚಾರ.

ಭಾಮಿನಿ

ನುಡಿಯ ಕೇಳುತ ಪಾರ್ಥ ಕಲ್ಪದ ಕಾಲಭೈರವನಂತೆ ಗರ್ಜಿಸಿ
ಕೋಲ ತೂಗುತ ಬಂದು ನಿಂತನು ಕರ್ಣನೆದುರಿನಲಿ

ಅರ್ಜುನ : ಯಲಾ ದುರ್ನೀತನಾದ ಕರ್ಣನೆ, ಹಿಂದೆ ಬಗುಳುವುದರಲ್ಲಿ ನಿನ್ನ ಸಮಾನ ಯಾರು ಇಲ್ಲ ಕಂಡೆಯಾ ॥ಯೀಗ ಯದುರು ನಿಂತಿದ್ದೇನೆ. ಹೇಳುತ್ತೇನೆ ಕೇಳುವಂಥವನಾಗೋ ಛೀ ನತದೃಷ್ಟ॥

ಪದರಾಗ ರೂಪಕತಾಳ

ಯಲವೋ ಸೂತ ತನಯ ನೀನು ಬಂದೆ ಸಮರಕೀಗ
ಯೇನ ಹೇಳಲೆನ್ನಾ ಪುಣ್ಯ ನೀನೆ ದೊರೆತೆಲಾ ॥

ಅರ್ಜುನ : ಯಲವೋ ಸೂತಜನಾದಂಥ ಕರ್ಣನೆ, ಯೀವತ್ತಿನ ದಿವಸ ನೀನು ಯುದ್ಧಕ್ಕೆ ಸನ್ನದ್ಧನಾಗಿ ಬಂದದ್ದು ನನ್ನಾ ಪುಣ್ಯವೆ ಸರಿ. ನಾನೇ ಹುಡುಕಬೇಕಾಗಿತ್ತು. ಮೂದೇವಿ. ನಿನ್ನಾ ಪಾಡು ಕಾಡುಕಪಿಯಾಗುವದು. ಕರ್ಣ ಕಡೆಗೆ ನೋಡಿಕೊಳ್ಳುವಂಥವನಾಗು.

ಕರ್ಣ : ಯಲಾ ಅರ್ಜುನ ಕಡೆಗೇನು ನೋಡಿಕೊಳ್ಳುವೆ ಶಹಬ್ಬಾಸ್ ಹೇಳುತ್ತೇನೆ ಕೇಳು ॥

ಪದ

ಬಂದಡೇನೋ ಯಿಂದ್ರ ತನಯ ಕೊಂದ ದ್ರೋಣಭೀಷ್ಮರನ್ನೂ
ಯಂಬ ಗರ್ವವನ್ನೂ ಯನ್ನ ಮುಂದೆ ತೊರೆಯೊ

ಕರ್ಣ : ಯಲಾ ಪಾಪಿಯಾದ ಅರ್ಜುನನೇ ನಿನ್ನ ಗರ್ಜನೆಯನ್ನು ಬಲ್ಲೆ. ನೀನು ರಣಾಗ್ರಕ್ಕೆ ನಿಂತರೆ ಬೆದರುವೆನೆ. ಯಿದಂತಿರಲಿ ಯೀ ಮುಂಚೆ ಭೀಷ್ಮ ದ್ರೋಣಾದಿಗಳಲ್ಲಿ ಜಯಪ್ರದವನ್ನು ಹೊಂದಿದ ಪರಾಕ್ರಮವನ್ನು ಯನ್ನ ಮುಂದೆ ತೋರುವಂಥವನಾಗೆಲಾ ಭ್ರಷ್ಟ ಪರಮ ಪಾಪಿಷ್ಟ ॥

ಅರ್ಜುನ : ಯಲಾ ಕರ್ಣ, ಶುನಕವಂ ಕೊಲ್ಲುವದಕ್ಕೆ ಬಣ್ಣದ ಕಟಿಗೆ ಬೇಕೇನೊ ಮೂದೇವಿ ಹೇಳುತ್ತೇನೆ ಕೇಳು.

ಪದ

ಬಲ್ಲೆ ನಿನ್ನಾ ಬಗೆಯ ಪಂಥವೆಲ್ಲ ತುರುವ ತಿರುಹುವಾಗ
ಯಲ್ಲಿ ಪೋಗಿ ಅಡಗಿದೆಲವೊ ಖುಲ್ಲ ಪೇಳು ॥

ಅರ್ಜುನ : ಯಲಾ ಕರ್ಣ ನಿನ್ನ ಪಂಥವನ್ನು ನಾನು ಬಲ್ಲೆ. ಪೂರ್ವದಲ್ಲಿ ವಿರಾಟನಗರಿಯಲ್ಲಿದ್ದ ತುರುಗಳನ್ನೂ ತಿರುವಿಕೊಂಡು ಬರುವ ಸಮಯದಲ್ಲಿ ಯೆಲ್ಲಿ ಪೋಗಿ ಅಡಗಿಕೊಂಡು ಯಿದ್ದೆ. ಕಳ್ಳ ಆಗಿಲ್ಲದ ಉಲ್ಲಾಸವು  ಈಗೆಲ್ಲಿ ಬಂತೋ ಛೀ ನತದೃಷ್ಟ ನಿನ್ನಾ ಜನ್ಮವನ್ನು ಸುಡಬಾರದೇನೋ ಪಾಪಿ.

ಕರ್ಣ : ಯಲಾ ಅರ್ಜುನ, ನಿನ್ನ ಹುಚ್ಚಿನ ಮಾತುಗಳನ್ನು ನಾನು ಬಲ್ಲೆ  ಛೀ ಪಾಪಿ ಹೇಳುತ್ತೇನೆ ಕೇಳುವಂಥವನಾಗು.

ಪದ

ಬಗಳಬೇಡ ನರನೆ ಕೇಳು ಯಿಂದುವದನೆ ವೇಷವನ್ನು ತಾಳಿ
ಕದನಕೈದುವಂತಕ ಅಧಮ ಹೋಗೆಲಾ ॥

ಕರ್ಣ : ಯಲಾ ಫಲುಗುಣ, ನನ್ನ ಮುಂದೆ ಬಗಳುವುದಕ್ಕೆ ನಾಚಿಕೆಯಾಗುವದಿಲ್ಲವೆ. ಪೂರ್ವದಲ್ಲಿ ವಿರಾಟನಗರಿಯಲ್ಲಿರುವಾಗ್ಯೆ ನಾರಿಯಂತೆ ಸೀರೆಯನುಟ್ಟುಕೊಂಡು ರಣಾಗ್ರಕ್ಕೆ ಬಂದಂಥವನಾದೆ. ನೀನು ಚೋರತನದಿಂದ ಬಂದು ಜಯಶೀಲನಾದೆ ಹೊರತು ನಿಜವಾಗಿ  ಬಂದು ಸಮರಕ್ಕೆ ಸನ್ನದ್ಧನಾಗಲಿಲ್ಲ ಧಗಡಿ ಸಾಕು ಸಾಕು ಬಾಯಿ ಮುಚ್ಚು ॥

ಅರ್ಜುನ : ಯಲಾ ಕರ್ಣ ಚಿಂತೆಯಿಲ್ಲಾ ಹೇಳುತ್ತೇನೆ ಕೇಳು ॥

ಪದ

ಯನಲು ತೋವಿಸುತಲಿ ಪಾರ್ಥ ಕವಲು ಬಾಣವನ್ನೂ ಎಸೆಯೆ
ಯಿನಸುತನು ಮೂರ್ಚೆತಾಳ್ದು ಮನದೋಳ್ ಭೀತಿಸಿ ॥

ಅರ್ಜುನ : ಯಲಾ ಕರ್ಣ ನನ್ನ ಸಾಹಸವನ್ನೂ ಯಾತಕ್ಕೆ ಹೆಚ್ಚಾಗಿ ವೆಚ್ಚ ಮಾಡಲಿ. ಯರಡು ಕವಲು ಬಾಣಗಳನ್ನೂ ಪ್ರಯೋಗಿಸಿರುತ್ತೇನೆ. ಈಗ ಇದನ್ನು ನೀನು ಅರಗಿಸಿಕೊಳ್ಳುವದು ಕಠಿಣವಾಗಿರುವುದು ಮೂದೇವಿ ರಣಾಗ್ರಕ್ಕೆ ಯೆದುರಾಗು ॥

 

ಕರ್ಣನ ಮೂರ್ಛೆ

ಅರ್ಜುನ : ಯಲಾ ಕರ್ಣ ನನ್ನ ಸಾಹಸವು ಗೊತ್ತಾಯಿತೋ ವಳ್ಳೇದು. ಅಯ್ಯ ಭಾಗವತರೆ,
ಈ ಕರ್ಣನಿಗೆ ಯೀ ಪೆಟ್ಟು ತಿಂದಿರುವದೇ ಸಾಕಾಗಿರುವದು. ಚೇತರಿಸಿಕೊಳ್ಳುವಂಥವನಾಗಲಿ, ಕಡೆಗೆ ಯಿವನ ಸಾಹಸವನ್ನು ನೋಡಿಕೊಳ್ಳುತ್ತೇನೆ. ಈಗ ಹಿಮ್ಮರಳುತ್ತೇನೆ.

ಭಾಮಿನಿ

ಯಿತ್ತ ಕರ್ಣನು ಮೂರ್ಚಿಸಲು ನರನೆತ್ತ ಸರಿದನು ಹೇಡಿ
ಎನುತಲಿ ಮತ್ತೆ ಕೌರವರಾಯ ಕಂಡನು ಯಿನಸುತನ ಹದನ ॥

ಕೌರವ : ಅಯ್ಯೋ ದೈವವೆ, ಯೀವತ್ತಿನ ಧುರದಲ್ಲಿ ನನಗೆ ಬಾಹುಬಲವಾಗಿರುವ ಕರ್ಣನು ಹಾಗೆ ಯಾತಕ್ಕೊ ಬಳಲಿರುವನಲ್ಲ ವೊಳ್ಳೇದು. ಮಾತನಾಡಿಸುವೆನು. ಹೇ ಕರ್ಣ ಹೇ ರಾಧೇಯನೆ, ಆಹಾ ಮಾತನಾಡುವದಿಲ್ಲವಲ್ಲಾ ಏನು ಮಾಡಲಿ.

ಪದ

ಯೇನಾಯ್ತಿಂದಿನ ದಿನದ ಮಾನನಿಧಿ ಕಲಿ ಕರ್ಣ
ಮಾನನಿಧಿಗಳ್ಯಾರೈ ಯೀ ಪರಿಯಾಯವು ॥

ಕೌರವ : ಅಯ್ಯ ಕರ್ಣ, ಯೀ ಹೊತ್ತಿನ ಧುರದಲ್ಲಿ ಬಳಲಿ ಬೆಂಡಾಗಿರುವೆಯಲ್ಲಾ ಯಿದರ ಪರಿಯಾಯವೇನು.

ಪದ

ಅತಿರಥ ಮಹಾರಥರ ಜೊತೆಗೆ ನಾ ಕೊಟ್ಟಿರಲು
ಮರೆಸಾದ್ಯತಕೆ ರಿಪು ಮನದೊಳಗರುಹು ॥