ಕೌರವ : ಅಯ್ಯ ಕರ್ಣ, ನಿನಗೆ ಸಹಾಯಕ್ಕೆ ಅತಿರಥ ಮಹಾರಥರು ಮುಂತಾಗಿ ಅನೇಕ ಜನ ಪ್ರಮುಖರನ್ನು ಕೊಟ್ಟಿರಲಿಲ್ಲವೆ. ಹೀಗೆ ಯಿದ್ದರು ಕೂಡ ನಿನಗೆ ಸಂಭವಿಸಿದ ಅಪಾಯವೇನಯ್ಯ ಕರ್ಣ.

ಕರ್ಣ : ಹೇ ರಾಜೋತ್ತಮನೆ, ನನಗೆ ಸಂಭವಿಸಿದ ಅಪಾಯವನ್ನು ನನ್ನ ನಾಲಿಗೆಯಿಂದ ಹೇಳಲು ಅಂಜುತ್ತೇನೆ. ಚಿಂತೆಯಿಲ್ಲಾ ಅರಿಕೆ ಮಾಡಿಕೊಳ್ಳುತ್ತೇನೆ. ಲಾಲಿಸಬೇಕು ॥

ಪದ

ರಾಯ ಕೇಳೈಯ್ಯ ರಿಪುರಾಜೀವ ಸರಿಯಂಬೆ
ಯನಗೆ ಅಹುದು ವೊಂದರೋಳ್ ಕೊರತೆ ॥

ಕರ್ಣ : ಹೇ ರಾಜೋತ್ತಮನೆ, ವೈರಿಗಳೆಂಬ ಕಮಲ ಸಮುದಾಯಕ್ಕೆ ಈ ವೀರ ಮದ್ದಾನೆಯಂತಿರುವ ಶೂರನಾದ ಯನಗೆ ಪಾಂಡವರ ಸಂಹಾರ ಮಾಡತಕ್ಕದ್ದು ದೊಡ್ಡದಾಗಿರಲಿಲ್ಲ. ಮಹಾರಾಜನೆ, ನಳಿನವನ್ನು ನಾಶಗೊಳಿಸುವ ಕರಟಗೆ ನಾಗಯಂತ್ರ ಇಲ್ಲದಂತೆ, ವೊಂದು ಭಾಗದಲ್ಲಿ ನನಗೆ ಸಂಭವಿಸಿದ ಕೊರತೆಯನ್ನು ಮತ್ತೂ ಹೇಳುತ್ತೇನೆ.

ಪದ

ಬಾಯಿಂದ ಬಗುಳಿದರಪ್ಪನೆ ಸಾರಥಿಯುಪಾಯವ ಕಾಣದೆ ಪಿಸುಣ ನಾನಾದೆ ॥

ಕರ್ಣ : ಮಹರಾಜನೆ ವಚನ ಪೂರ್ತಿಯಾಗಿ ಹೇಳಿಕೊಂಡಿದ್ದೆಯಾದರೆ, ನನ್ನಾ ಭಾಗದ ಜಯಶೀಲೆಗೆ ಸಮಾನವಾದ ಸಾರಥಿ ದೊರೆಯುವನೆ. ಹೇ ರಾಜನೆ ನನ್ನ ಕೈ ಚಮತ್ಕಾರಕ್ಕೆ ತಕ್ಕ ಸಾರಥಿಯಿಲ್ಲದೆ ಹೋದ್ದರಿಂದ ಜೈನ ದೀಕ್ಷೆಯನ್ನು ಹೊಂದಿದವನಾದೆನು. ಮುಂದೆ ಜಯಶೀಲನಾಗುವ ನಿನ್ನಾ ಅಭಿಪ್ರಾಯವೇನಯ್ಯಾ ದೊರೆಯೆ.

ಕೌರವ : ಅಯ್ಯ ಕರ್ಣ, ಕೈ ಚಮತ್ಕಾರಕ್ಕೆ ತಕ್ಕ ಸಾರಥಿಯಿಲ್ಲದೆ ಹೋದ್ದರಿಂದ ಜೈನದೀಕ್ಷೆಯನ್ನು ಹೊಂದಿದೆನೆಂದು ಹೇಳುವೆಯಲ್ಲಾ, ವಳ್ಳೇದು. ಪೂರ್ವದಲ್ಲಿ ಯಾರಾದರು ಸಾರಥಿಗಳ ಸಹಾಯದಿಂದ ಜಯಶೀಲರಾಗಿದ್ದಾರೇನಯ್ಯಾ ಕರ್ಣ.

ಕರ್ಣ : ಮಹರಾಜನೆ ಹಾಗಾದರೆ ಅರಿಕೆ ಮಾಡಿಕೊಳ್ಳುತ್ತೇನೆ.

ಪದ

ಹಿಂದೆ ಮಾತಲಿಯಿಂ ಕೊಂದ ದೈತ್ಯನ ರಾಮ
ಯಿಂಧುಧರ ಕಮಲಜನ ಸಾರಥಿಯ ಬಲದಿ
ಅಂದು ತ್ರಿಪುರವ ಗೆಲಿದುಕೊಂಡ ದೈತ್ಯರನೆಲ್ಲಾ
ಯಿಂದೆನಗೆ ಯಿಲ್ಲದಿರೆ ಹೊಂದಿತಪಜಯವು ॥

ಕರ್ಣ : ಮಹಾರಾಜನೆ, ಪೂರ್ವಯುಗದಲ್ಲಿ ಶ್ರೀರಾಮದೇವರಿಗೆ ಮಾತಲಿಯು ಸಾರಥಿಯಾದ್ದರಿಂದ ರಾವಣ ಕುಂಭಕರ್ಣರೆಂಬ ದೈತ್ಯರನ್ನು ಗೆದ್ದಂಥವರಾದರು. ಅಲ್ಲದೆ ತ್ರಿಪುರ ದಹನದಲ್ಲಿ ಸಾಕ್ಷಾತ್ ಪರಶಿವನಿಗೆ ಕಮಲಜನಾದ ಬ್ರಹ್ಮನು ಸಾರಥಿಯಾದ್ದರಿಂದ  ದಿಗ್ಧಂತಿಗಳಾದಂಥ ರಾಕ್ಷಸರು ಮರಣ ಹೊಂದಿದರು. ಸಾರಥಿ ಸಹಾಯವಿಲ್ಲದ್ದರಿಂದ ಅಪಜಯ ಕಾರಣವಾಯಿತ್ತಯ್ಯ ದೊರೆಯೆ.

ಕೌರವ : ಅಯ್ಯ ಕರ್ಣ ಚಿಂತೆಯಿಲ್ಲ ಕೇಳು ಹೇಳುತ್ತೇನೆ.

ಭಾಮಿನಿ

ಯಿನಸುತನ ದುಂಮಾನವನು ಕೇಳುತ ಕುರುಕುಲಾಗ್ರಣಂಗರುಹೆ
ಸಂತೈಸಿ ಕರ್ಣನ ಮಮತೆಯಲಿ ಯನಗಿರುವ ಯೇಕಾದಶಿ
ಅಕ್ಷೊಃಹಿಣಿಯ ಮಾರ್ಬಲದೊಳಗೆ ನಿನ್ನಯ ಮನಕೆ
ಬಂದಾತನಂ ಸಾರಥಿ ಕೊಡುವೆ ತಾನೆಂದ ॥

ಕೌರವ : ತ್ಯಾಗದೋಳ್ ಪರಿಪೂರ್ಣನಾದ ಹೇ ಕರ್ಣನೇ ಕೇಳು, ಯನಗಿರತಕ್ಕ ಹನ್ನೊಂದು ಅಕ್ಷೋಹಿಣಿ ಮಾರ್ಬಲದಲ್ಲಿ, ನಿನಗೆ ಯಾರು ಬೇಕು ಹೇಳಿದ್ದೇಯಾದರೆ ಯೀಗಲೆ ಕರೆದುಕೊಂಡು ಬಂದು ವೊಪ್ಪಿಸುತ್ತೇನೆ ಜಾಗ್ರತೆ ಹೇಳೈಯ್ಯ ಕರ್ಣ॥

ಕರ್ಣ : ಅಯ್ಯ ಕೌರವೇಶ್ವರ ಹಾಗಾದರೆ ಅರಿಕೆ ಮಾಡಿಕೊಳ್ಳುತ್ತೇನೆ ಲಾಲಿಸಬೇಕು ॥

ಪದ

ಯಂದ ಮಾತನು ಕೇಳಿ ರವಿಜಾತ ಮನದೊಳು
ಮಂದಹಾಸದಿ ನಗುತ ಅಂದು ರಾಯನಲಿ ಪೇಳಿದನು
ತನ್ನಯ ಮನಕೆ ಬಂದಂಥ ಸಾರಥಿಯ ॥

ಕರ್ಣ : ಹೇ ರಾಜೇಂದ್ರನೆ, ಮದಗಜ ಸಮುದಾಯಕ್ಕೆ ವೀರ ಕಂಠೀರವನಾದ ಯನ್ನ ವಿಜ್ಞಾಪನೆಯನ್ನು ಲಾಲಿಸಿ, ತಮ್ಮ ವಚನಾಮೃತವನ್ನು ಕೇಳಿ ಆನಂದ ಸಾಗರದಲ್ಲಿ ಮುಳುಗಿದೆನು. ಪರಂತು ನನ್ನಯ ಮನಸ್ಸಿನ ಸಂಕಲ್ಪವನ್ನೂ ಅರಿಕೆ ಮಾಡಿಕೊಳ್ಳುತ್ತೇನೆ.

ಕರ್ಣ : ಸಮೀರನಂತೆಸೆವ ಮಹಾರಾಜನೆ ಕೇಳು. ಮಾದ್ರದೇಶಕ್ಕೆ ದೊರೆಯಾದ ಶಲ್ಯ ಭೂಪತಿಯು ಸಾರಥಿತನದಲ್ಲಿ ಅತ್ಯಂತ ಸಂಪೂರ್ಣನಾಗಿರುತ್ತಾನೆ. ಪ್ರಯುಕ್ತ ಯೇನಾದರು ಪ್ರಯತ್ನಪಟ್ಟು ಆತನ ಕರೆದುಕೊಂಡು ಬಂದು ಸಾರಥಿ ಕೆಲಸಕ್ಕೆ ನೇಮಿಸಿಕೊಟ್ಟರೆ, ನಿನ್ನ ವೈರಿಗಳಾದ ಪಾಂಡವರನ್ನೂ ಕ್ಷಣ ಮಾತ್ರದಲ್ಲಿ ಜಯಿಸಿಕೊಂಡು ಬರುತ್ತೇನಯ್ಯ ದೊರೆಯೆ.

ಕೌರವ : ಕರ್ಣ ಕ್ಷಣಮಾತ್ರದಲ್ಲಿ ಜಯಿಸಿಕೊಂಡು ಬರುತ್ತೀಯೆ ಹೇಳುತ್ತೇನೆ ಕೇಳುವಂಥವನಾಗು.

ಪದ

ಇದಕೆ ಯೋಚನೆ ಯಾಕೆ ಕರತಂದುಕೊಡುವೆನು
ಮುದದೊಳು ಮಾವನನು ಹಗೆಯ ಗೆಲ್ಲುವ ಭಾರ
ನಿನ್ನಾದೆಂದೆನುತಲಿ ಮದನಪುರುಷ ನಡೆದಾ ॥

ಕೌರವ : ವೈರಿಗಳೆಂಬ ಮದಗಜ ಸಮುದಾಯಕ್ಕೆ ವೀರ ಕಂಠೀರವನಾದ ಹೇ ಕರ್ಣನೆ, ಇದಕ್ಯಾತಕ್ಕೆ ಚಿಂತೆಯನ್ನು ಮಾಡುತ್ತೀಯ. ಶಲ್ಯ ಭೂಪತಿಯು ದೂರದವನಲ್ಲಾ. ಕೇವಲ ಪರಮಬಾಂಧವ ಯನಗೆ ಮಾವನಾಗಬೇಕು. ಆತನನ್ನೂ ಕರೆತಂದು ಸಾರಥಿ ಮಾಡತಕ್ಕದ್ದು ನನ್ನ ಕೆಲಸ. ಮುಖ್ಯವಾಗಿ ನನ್ನ ಶತ್ರುಗಳಾದ ಪಾಂಡವರನ್ನೂ ಮೃತ್ಯುವಿಗೆ ತುತ್ತು ಮಾಡಿಸುವುದು ನಿನ್ನಾ ಕೆಲಸ. ಹಾಗಾದರೆ ಮದ್ರ ದೇಶಕ್ಕೆ ಹೋಗಿ ಬರುವೆನಯ್ಯ ಕರ್ಣ.

ಕೌರವ : ಯಲಾ ಚಾರಕ ಯೀ ಕ್ಷಣವೆ ಮದ್ರ ದೇಶಕ್ಕೆ ಹೋಗಬೇಕು. ಕತ್ತಲೆಯಾಗಿರುವದು, ಕೈ ಲಾಂದ್ರಗಳನ್ನು ಹಿಡಿದುಕೊಂಡು ಹೊರಡುವಂಥವನಾಗು ॥

ಸಾರಥಿ : ಮಹರಾಜನೆ ಹುಕುಂ  ಸಿದ್ಧವಾಗಿರುವೆನು ನಡೆಯಿರಿ ಜಾಗ್ರತೆ ಹೋಗೋಣ ॥

ಭಾಮಿನಿ

ಇತ್ತ ಕರ್ಣಗೆ ಪೇಳಿ ಕುರುಪತಿ ಬಂದ ಕೈದೀವಿಗೆಯ ಬೆಳಕಲಿ
ಸಂಧಿಸಿದ ನಿಶೆಯೊಳಗೆ ಬರುತಿರ್ದ ಶಲ್ಯನೃಪಾಲನರಮನೆಗೆ ॥

ವಚನ : ಯೀ ಪ್ರಕಾರದಿಂದ ಕೌರವೇಶ್ವರನು ಕತ್ತಲೆಯಾದ್ದರಿಂದ ಕೈ ಲಾಂದ್ರಗಳನ್ನು ಹಿಡಿಸಿಕೊಂಡು ಮಾದ್ರ ದೇಶಕ್ಕೆ ಬರುವಲ್ಲಿ, ಆ ಮಾದ್ರ ದೇಶಕ್ಕೆ ದೊರೆಯಾದ ಶಲ್ಯನೃಪಾಲನು ಯಾವ ರೀತಿ ವಡ್ಡೋಲಗಸ್ಥನಾದನು ಯಂದರೆ

 

(ಶಲ್ಯ ಭೂಪತಿ ಬರುವಿಕೆ)

ಭಾಗವತ : ಭಳಿರೇ ರಾಜಾಧಿರಾಜ ರಾಜಕೀರ್ತಿ ಮನೋಹರ ॥

ಶಲ್ಯ : ಬನ್ನಿರೈಯ ಬನ್ನಿರಿ ॥

ಭಾಗವತ : ತಾವು ಯಾರು ತಮ್ಮ ಸ್ಥಳ ನಾಮಾಂಕಿತ ಯಾವುದು?

ಶಲ್ಯ : ಮದ್ರದೇಶಕ್ಕೆ ಯಾರೆಂಬುದಾಗಿ ಕೇಳಬಲ್ಲಿರಿ.

ಭಾಗವತ : ಶಲ್ಯ ಭೂಪತಿಯೆಂದು ಕೇಳಿಬಲ್ಲೆವು ॥

ಶಲ್ಯ : ಹಾಗೆಂದುಕೊಳ್ಳಬೌದು.

ಭಾಗವತ : ಬಂದಂತ ಕಾರಣವೇನು?

ಶಲ್ಯ : ಬಹಳ ಬಹಳ ಉಂಟು.

ಭಾಗವತ : ಮತ್ತೇನಾಗಬೇಕು.

ಶಲ್ಯ : ನಮ್ಮ ಕಡೆ ಸಾರಥಿಯನ್ನು ಕರೆಸಿಕೊಡುವಂಥವರಾಗಿರಿ. ಮಹಾದ್ವಾರದಲ್ಲಿ ಸಿದ್ಧವಾಗಿರುವನು.

ಕೌರವ : ಮಾವಯ್ಯನವರ ಪಾದಕ್ಕೆ ನಮಸ್ಕಾರ

ಶಲ್ಯ : ನಿನಗೆ ಮಂಗಳವಾಗಲಯ್ಯ ಮಹಾರಾಜನೆ. ಯೀ ನಿಶಿರಾತ್ರಿಯಲ್ಲಿ ಯನ್ನಾ ಆಸ್ಥಾನಕ್ಕೆ ಬಂದ ಕಾರಣವೇನು?

ಭಾಮಿನಿ

ತಂದು ಕಾಣಿಕೆಯಿತ್ತು ಚರಣಕೆ ವಂದಿಸುತ ದುಂಮಾನದಿಂದಿರೆ
ಬಂದುದೇನೈ ನೃಪತಿ ಎನುತಪ್ಪಿದನು ಮದ್ರೇಶಾ ॥

ಕೌರವ : ಹೇ ಮಾವಯ್ಯ, ಮರ‌್ಯಾದಾರ್ಥವಾಗಿ ಪಾದಕ್ಕೆ ನಾನು ತಂದು ವಪ್ಪಿಸಿರುವ, ಯೀ ಮುತ್ತು ರತ್ನ ವಜ್ರ ವೈಢೂರ‌್ಯ ಮುಂತಾದ ಕಪ್ಪ ಕಾಣಿಕೆಯನ್ನೂ ಸಮರ್ಪಿಸಿಕೊಳ್ಳಬೇಕು॥

ಶಲ್ಯ : ಅಯ್ಯ ಕೌರವೇಶ್ವರಾ, ನೀನು ತಂದಂಥ ಕಪ್ಪಕಾಣಿಕೆಯು ಯನಗೆ ಸಮರ್ಪಕವಾಯಿತು ಪೇಳುತ್ತೇನೆ ಕೇಳುವಂಥವನಾಗು ॥

ಪದರಾಗ ಅಷ್ಟತಾಳ

ಏನಯ್ಯ ಕುರುಕುಲಾಗ್ರಣಿಯೆ ಬಹು ಬಳಲಿದೆ
ದುಂಮಾನವೇನು ಪೇಳು ಯೀಗಲು ಬಂದಿಹ
ಕೊರತೆಯ ಯನ್ನೊಳು ಪೇಳು ಯೆಂದನು ಶಲ್ಯನು

ಶಲ್ಯ : ಅಯ್ಯ ಕೌರವೇಶ್ವರ, ಯೀವತ್ತಿನ ದಿವಸ ನಿನ್ನಾ ಬರುವಿಕೆಯನ್ನು ನೋಡುವಲ್ಲಿ ಯನ್ನಿಂದ ಆಗಬೇಕಾದದದ್ದೇನೋ ವಂದು ಕಾರ‌್ಯಭಾಗವಿರುವಂತೆ ತೋರುವದು, ಮತ್ತು ನಿನ್ನ ಮುಖಕಮಲವು ಕಂದಿರುವದು. ನಿನಗೆ ಬಂದಿರತಕ್ಕ ಕೊರತೆಯನ್ನು ಹೇಳುವಂಥವನಾಗಯ್ಯ ಕೌರವೇಶ್ವರ

ಕೌರವ : ಮಾವಯ್ಯ ಹಾಗಾದರೆ ಬಿನ್ನವಿಸಿಕೊಳ್ಳುತ್ತೇನೆ ಲಾಲಿಸಬೇಕೋ ಮಾವಯ್ಯನವರೆ.

ಪದ

ಮಾವ ಕೇಳಯ್ಯ ನಿಂಮೊಡನೊಂದು ಕಾರ‌್ಯವ
ಭಾವಿಸಿ ಬಂದೆ ನಾನು ನಿಮ್ಮನುಗ್ರಹ ಮಾಡಿದರೆ
ಪಾಂಡುಸುತರು ಯಾವ ದೊಡ್ಡೀತು ಭಾನುಸುತಗೆ

ಕೌರವ : ಹೇ ಮಾವಯ್ಯ, ತಾವು ಅಪ್ಪಣೆ ಕೊಡಿಸಿದಂತೆ ನಿಂಮಿಂದ ಆಗಬೇಕಾದ ವಂದು ಕಾರ‌್ಯ ಭಾಗವಿರುವುದು. ಖರೆ, ಆದರೆ ನೀವು ನನ್ನ ಮೇಲೆ ಪೂರ್ಣ ಕಟಾಕ್ಷವಿಟ್ಟರೆ, ಪಾಂಡವರು ಉಂಟಲ್ಲಾ ಯನ್ನಾ ವೈರಿಗಳು, ಯಿವರು ನನಗೆ ಬಾಹುಬಲವಾಗಿರುವ ಭಾನುಸುತನಾದ ಕರ್ಣನಿಗೆ ಯೀಡಾಗಲಾರರು.

ಶಲ್ಯ : ಅಯ್ಯ ಕೌರವೇಶ್ವರ ವಳ್ಳೇದು ನನ್ನಿಂದ ಯೇನಾಗಬೇಕು. ಹೇಳು ನೋಡುವ.

ಕೌರವ : ಮಾವಯ್ಯ ಹಾಗಾದರೆ ಹೇಳುತ್ತೇನೆ.

ಪದ

ಕರ್ಣಗೆ ನೀವು ಸಾರಥಿಯಾಗಿ ರಣದಲ್ಲಿ ವಹಿಸಬೇಕು
ವಿಕ್ರಮವ ಯನ್ನಯ ಕೊರಳಿಗೆ ವೊಡ್ಡಿದ ಖಡ್ಗ
ತೆಗೆಸಿದರೆನ್ನುವ ಬಿರುದಾಗುವದು ಮಾವ॥

ಕೌರವ : ಮಾವಯ್ಯ ಕರ್ಣನಿಗೆ ಸಾರಥಿಯಾಗಿ ರಥವನ್ನೂ ನಡೆಸಿದರೆ ನನ್ನಾ ವೈರಿಗಳನ್ನು ಕರ್ಣನು ವಂದುಕಡೆಯಿಂದ ದಿಗ್ಬಲವನ್ನು ಕೊಟ್ಟುಕೊಂಡು ಬರುತ್ತಾನೆ. ಯೀಗ್ಯೆ ಆ ಪಾಂಡುವರು ನನ್ನಾ ಕೊರಳಿಗೆ ವೊಡ್ಡಿದ ಖಡ್ಗದಂತಿರುವರು. ಯೀ ಖಡ್ಗವನ್ನು ನೀವು ತೆಗೆಸಿದರೆಂಬುದಾಗಿ ಭುವನದೊಳ್ ಬಿರುದಾಗುವದು. ಮಾವಯ್ಯ ಶಿರಸಾವಹಿಸಿ ಬೇಡಿಕೊಂಡಿರುತ್ತೇನೆ. ಕರ್ಣನಿಗೆ ಸಾರಥಿಯಾಗಬೇಕು. ಯಿಷ್ಟೇ ನನ್ನ ವಿಜ್ಞಾಪನೆ ಮಾವಯ್ಯನವರೆ.

ಭಾಮಿನಿ

ನುಡಿಯ ಕೇಳುತ ಶಲ್ಯ ಕಲ್ಪದ ಕಡಲೊಡೆದ ತೆರನಂತೆ
ರೋಷದಿ ಕುರುಪತಿಗಾಗ ಘುಡುಘುಡಿಸುದಿಂತೆಂದ ॥

ಶಲ್ಯ : ಯಲಾ ಕೌರವ, ಯೇನು ಮಾತು ಬಗುಳಿದಂಥವನಾದೆ. ಧಗಡಿ ನಿನಗೆ ನಾಲಿಗೆ ಹ್ಯಾಗೆ ಬಂತು. ಮೂದೇವಿ ಹೇಳುತ್ತೇನೆ ಕೇಳೋ ಪಾಮರ.

ಭಾಮಿನಿ

ನುಡಿ ನುಡಿಗೆ ಯಿನ್ನೊಮ್ಮೆ ಗಂಟಲ ಕಡಿದು ಕೊರಳಿಗೆ
ಅಹುತಣ ಮಾಡುವೆನೆನುತ ಮದ್ರಾಧಿಪನು ಖತಿಗೊಂಡ ॥

ಶಲ್ಯ : ಯಲಾ ಕೌರವ, ಮತ್ತೊಂದು ಸಾರಿ ಯೀ ಮಾತು ನಿನ್ನ ನಾಲಿಗೆಯಿದ ಹೊರಟರೆ ನಿನ್ನ ನಾಲಿಗೆಯನ್ನು ಹಿರಿದು, ಕೊಬ್ಬುಗಳನ್ನು ತೆಗೆದು ಕೊರತಿಯೆಂಬ ಭೂತಪ್ರೇತಗಳಿಗೆ ಹಬ್ಬವನ್ನು ಮಾಡಿಸೇನು ಹುಶಾರ್.

ಪದರಾಗ ತ್ರಿಪುಡೆ

ಯೇನ ಬೊಗಳಿದೊ ಯಲವೋ ಕೌರವ ಆಳುವಡಿದೆ
ಸೂತಗೆ ನಾನು ಪೇಳಿ ಫಲವೇನಿನ್ನ ನಿನ್ನ ಕೊಳತನವ ॥

ಶಲ್ಯ : ಯಲಾ ಕೌರವ, ಸನ್ನಿ ಹಿಡಿದ ಕುನ್ನಿಯಂತೆ ಯಂಥಾ ಮಾತು ಬಗುಳಿದಂಥವನಾದೆ. ವೀರಾಧಿವೀರನಾದ ಯನ್ನನ್ನು, ಹೀನ ಕುಲದಲ್ಲಿ ವುಟ್ಟಿದಂತಾ ಕರ್ಣನಿಗೆ ಆಳು ಮಾಡುವುದಕ್ಕೆ ಬಂದೆಯಾ. ನಿನ್ನಾ ಖೂಳ ಪರಾಕ್ರಮವನ್ನೂ ಏನ ಹೇಳಲೊ ಮೂಢ ಆಧಮ ಹೇಳುತ್ತೇನೆ ಕೇಳು॥

ಪದ

ಆವ ದೇಶಾಧಿಪನೋ ರವಿಜನೋ ಹೀನಕುಲದಲಿ
ಉದಿಸಿದವನಿಗೆ ನಾನು ಸಾರಥಿಯಾಗೆ ನಿನಗೆ ಸುಮಾನವಹುದೇ

ಶಲ್ಯ : ಯಲಾ ಕೌರವ, ಆ ರವಿಜ ಅಂದರೆ ಕರ್ಣನು ಯಾವ ದೇಶದವನೋ ಯಾವ ಕುಲದವನೋ. ಹೀನ ಕುಲದಲ್ಲಿ ಹುಟ್ಟಿದಂಥ ಕರ್ಣನಿಗೆ, ನಾನು ಸಾರಥಿಯಾದರೆ ನಿನಗೆ ಸಂತೋಷವೇನೋ ಪಾಪಿ ಪರಮ ಕುರುವೆ, ಹೇಳುತ್ತೇನೆ ಕೇಳು ಭ್ರಷ್ಟ ಪರಮ ಪಾಪಿಷ್ಟ.

ಪದ

ನೀನು ಮಾಡಲ್ಲದಡೆ ನಿನ್ನಯ ಸೂನುಗಳು ಸಹಜಾತರೂ
ಕಾಲಕೆಳಗೆ ಕುಳಿತು ಸಾಧಿಸಿ ಭೂಮಿಯನ್ನೂ

ಶಲ್ಯ : ಯಲಾ ಕೌರವ, ಕರ್ಣನ ಕಾಲಕೆಳಗೆ ಕುಳಿತುಕೊಂಡು ಚಾಕರಿ ಮಾಡುವದಕ್ಕೆ ನಿನಗೆ ಕೊರತೆಗೆ ಕಾರಣವಿದ್ದರೆ ನಿನ್ನಾ ತಮ್ಮಂದಿರುಂಟಲ್ಲ, ದುಶ್ಯಾಸನ ಮೊದಲ್ಗೊಂಡು ಯಿವರು ಮಾಡಲಿ. ಅಲ್ಲದೆ ಹೋದರೆ ನಿನ್ನಾ ಮಕ್ಕಳು ಉಂಟಲ್ಲಾ ಲಕ್ಷಣಾದಿಗಳು ಯಿವರಿಂದ ಮಾಡಿಸು. ಯೀ ಧರಿತ್ರಿ ಮೇಲಣ ಆಸೆಯು ನಿನಗಿರತಕ್ಕ ಭಾಗದಲ್ಲಿ, ನೀನೇ ಅವನಲ್ಲಿ ಚಾಕರಿಯಂ ಮಾಡಿ ನವುಕರಿಯಲ್ಲಿರಬಹುದೋ ಪೋಕರಿ. ಹೇ ಭಿಕಾರಿ ನನ್ನಲ್ಲಿ ಪುನಃ ಯೀ ಮಾತು ಹೇಳೀಯಾ ತುಚ್ಛನೆ ಯಚ್ಚರ ॥

ಕೌರವ : ಮಾವಯ್ಯ ದೊಡ್ಡ ಮನಸ್ಸು ಮಾಡಬೇಕು. ಅರಿಕೆ ಮಾಡಿಕೊಳ್ಳುತ್ತೇನೆ ಕೋಪ ಮಾಡಲಾಗದು.

ಪದರಾಗ ಅಷ್ಟತಾಳ

ಮಾವ ಕೋಪವ್ಯಾಕೈ ನಾ ಪೇಳ್ದ ಮಾತುಗಳಿಂದೇನೈಯ್ಯ
ಪರರ ಆಪತ್ತಿಗಾಗಿ ಕಾಯಬೇಕೆಂದು ಚರಣದೊಳಗೆ ಯರಗಿ
ಅರುಹಲವನೂ ಕೇಳಿ ಮರುಗಿದ ಪಾಮರನು
ಎಂಬುವ ನುಡಿ ಅರಿಯದಲೆ ನೀವು ಮಾವ ಕೋಪವ್ಯಾಕೈ

ಕೌರವ : ಹೇ ಮಾವಯ್ಯ, ಕೋಪವ್ಯಾತಕ್ಕೆ ಮಾಡುತ್ತೀರ. ಶಾಂತರಾಗಿ. ನಾನು ಅರಿಕೆ ಮಾಡಿಕೊಂಡಿರುವ ವಿಷಯದಲ್ಲಿ ಕುಂದಕವೇನು. ಅಲ್ಲದೆ, ಲೋಕದಲ್ಲಿ ಪರೋಪಕಾರ ದೊಡ್ಡದು, ಯಿದನ್ನೆಲ್ಲಾ ತಾವು ತಿಳಿದವರೇ ಹೊರತು ಮೂಢರಲ್ಲಾ. ಮಾವಯ್ಯ ಚೆನ್ನಾಗಿ ಯೋಚಿಸಬೇಕೋ ದೇವ ಪ್ರಾಣಸಂಜೀವ॥

ಶಲ್ಯ : ಅಯ್ಯ ಕೌರವೇಶ್ವರ, ವಳ್ಳೇದು ಚಿಂತೆಯಿಲ್ಲ. ಪೂರ್ವದಲ್ಲಿ ಯಾರಾದರು ಸಾರಥಿ ಬಲದಿಂದ ದಿಗ್ವಿಜಯವನ್ನು ಹೊಂದಿರುವರೇನೈಯ್ಯ ಕೌರವೇಶ್ವರ ಹೇಳು ನೋಡುವ.

ಕೌರವ : ಮಾವ ಹೀಗೆ ಕೇಳಿರಿ ಅರಿಕೆ ಮಾಡಿಕೊಳ್ಳುತ್ತೇನೋ ಮಾವ ಪ್ರಾಣ ಸಂಜೀವ.

ಪದ

ಅಮರರ ಕಾಯಲೆಂದು ತಪಸಿರ್ದ ಕಮಲ ಸಂಜಾತರಂದು
ವಲಿದು ಸಾರಥಿಯಾಗಿ ಗೆಲಿವರು ತ್ರಿಪುರವ ನರಗೆ ಸಾರಥಿಯಾದ
ಹರಿಯು ಕಂಡರೆ ಯೀಗ ಮಾವ ಕೋಪವು ಯಾತಕ್ಕಯ್ಯ ॥

ಕೌರವ : ಮಾವಯ್ಯ, ಪೂರ್ವದಲ್ಲಿ ತ್ರಿಪುರಗಳನ್ನು ನಾಶಗೊಳಿಸುವುದಕ್ಕೆ ಸಾಕ್ಷಾತ್ ಪರಶಿವನಿಗೆ ಚತುರ್ಮುಖನಾದ ಬ್ರಹ್ಮನು ಸಾರಥಿಯಾಗಿರಲಿಲ್ಲವೆ, ಮತ್ತು ಲೋಕ ಕಂಟಕರಾಗಿದ್ದ ರಾವಣ ಕುಂಭಕರ್ಣರೆಂಬ ರಾಕ್ಷಸರನ್ನು ನಾಶಗೊಳಿಸಲು ಶ್ರೀ ರಾಮಚಂದ್ರಮೂರ್ತಿಯವರಿಗೆ ಮಾತಲಿಯು ಸಾರಥಿಯಾಗಲಿಲ್ಲವೆ ಮಾವಯ್ಯ. ಯಿದು ಹೋಗಲಿ, ತಮ್ಮ ಕಣ್ಣೆದುರಿಗೆ ಹಾಲಿ ನರನಾದ ಅರ್ಜುನನಿಗೆ ಶ್ರೀಕೃಷ್ಣ ಮೂರುತಿಯೂ ಸಾರಥಿಯಾಗಲಿಲ್ಲವೆ ಮಾವಯ್ಯ. ಯಿದನ್ನೆಲ್ಲಾ ಘನವಾದ ಚಿತ್ತಕ್ಕೆ ತಂದು ಯೋಚನೆಯನ್ನೂ ಮಾಡಿ ಕೃಪೆಯಿಟ್ಟು ಕಾಪಾಡಬೇಕೈ ಮಾವ.

ಶಲ್ಯ : ಅಯ್ಯ ರಾಷ್ಟ್ರಾಧಿಪನೆ ವಳ್ಳೇದು. ಯೀ ಕರ್ಣನು ಯಾವ ದೇಶಕ್ಕಾದರೂ ದೊರೆಯೊ ಹ್ಯಾಗೆ ಮತ್ತು ಯುದ್ಧ ಸಂನಾಹದಲ್ಲಿ ಅಂಥ ಶೂರನೇನಯ್ಯ ಕೌರವೇಶ್ವರ.

ಕೌರವ : ಮಾವಯ್ಯ ಹಾಗಾದರೆ ಹೇಳುತ್ತೇನೆ ಕೇಳು.

ಪದ

ವಂಗ ದೇಶಾಧಿಪನು ರವಿಜನು ಮತ್ತೆ ಸಂಗರದೊಳು
ಶೂರನು ಭಂಗವೇನವನೊಳು ಪೇಳೋ
ಭಾವನೆ ಯಂದು ತುಂಗವಿಕ್ರಮನಾಗ
ನಮಿಸುತಲಿಂತೆಂದ ಮಾವ ಕೋಪವು ಯಾತಕಯ್ಯ ॥

ಕೌರವ : ಮಾವಯ್ಯ, ಯೀ ರವಿಜಾತನಾದ ಕರ್ಣನು ವಂಗದೇಶಕ್ಕೆ ದೊರೆಯಾಗಿರುವನಲ್ಲದೆ ಸಂಗರದಲ್ಲಿ ರಣಶೂರ. ತರಣಿ ಸುಕುಮಾರ ತ್ಯಾಗದೋಳ್ ಪರಿಪೂರ್ಣ ವೀರ, ಕರ್ಣನೆಂದು ವಿಖ್ಯಾತಿಯನ್ನು ಪಡೆದಿರುವನಯ್ಯ ಮಾವ.

ಶಲ್ಯ : ಅಯ್ಯ ಕೌರವೇಶ್ವರ ಕರ್ಣನಿಗೆ ಸಾರಥಿಯಾಗುವ ಮಾತು ಹಾಗೆ ಯಿರಲಿ. ವುತ್ತರೋತ್ತರ ನೋಡಿಕೊಳ್ಳೋಣ ಹೇಳುತ್ತೇನೆ ಕೇಳು

ಭಾಮಿನಿ

ತ್ರಿಪುರವ ಗೆಲಿದ ಮುರಹರಗೆಂತು ಸಾರಥಿಯಾದ ಬ್ರಹ್ಮನು
ನಿಂತು ಕಾದಿದನ್ಯಾರು ತ್ರಿಪುರವು ಯಿನ್ನೆಂತು ಪುಟ್ಟಿದುದು

ಶಲ್ಯ : ಅಯ್ಯ ಕೌರವೇಶ್ವರಾ, ಈಶ್ವರ ಮಹದೇವರಿಗೆ ಕಮಲಜನಾದ ಬ್ರಹ್ಮನು ಸಾರಥಿಯಾಗಿ ತ್ರಿಪುರವನ್ನು ನಾಶ ಮಾಡಿದರೆಂಬುದಾಗಿ ಹೇಳುವೆಯಲ್ಲಾ. ಅಂತರಿಕ್ಷದಲ್ಲಿ ಯಿದ್ದರೆ ಪುರಮಹೇಶ್ವರನಿಗೆ ಹ್ಯಾಗೆ ಸಾಧ್ಯವಾಯಿತು. ಚತುರ್ಮುಖನಾದ ಬ್ರಹ್ಮನು ಸಾರಥಿಯಾದ ತ್ರಿಪುರಾ ಪಟ್ಟಣವು ಹ್ಯಾಗೆ ಹುಟ್ಟಿತು. ಯಿದರ ಪೂರ್ವಾಪರವನ್ನೂ ಸಾಂಗವಾಗಿ ಕೇಳುತ್ತೇನೆ ಹೇಳುವಂಥವನಾಗು ॥

ಭಾಮಿನಿ

ಯಿಂತೆದೆಲ್ಲವನರುಹಬೇಕೆನೆ ಸಂತಸದಿ ಕುರುರಾಯ
ಪೇಳಿದಂತೆ ಚರ್ಮಾಂಬರನು ಗೆಲುವನು ಮಾದ್ರ ಭೂಪತಿಗೆ

ಕೌರವ : ಮಾವಯ್ಯ, ಹಾಗಾದರೆ ತ್ರಿಪುರ ದಹನ ಸಂಗತಿಯನ್ನೂ ಸವಿಸ್ತಾರವಾಗಿ ಅರಿಕೆ ಮಾಡಿಕೊಳ್ಳುತ್ತೇನೆ

ಭಾಮಿನಿ

ಮಾವ ಕೇಳ್ ಪೂರ್ವದಲ್ಲಿ ತಾರಕಾಸುರನ ಸುತರಾದ
ತಾರಕಾಕ್ಷ ವೀರ ವಿದ್ಯುನ್ಮಾಲಿ ಕಮಲಲೋಚನರೆಂಬುದಾಗಿ
ಮೂರುಜನ ದೈತ್ಯರುದಿಸಿದರಿಳೆಯೊಳು ॥

ಕೌರವ : ಹೇ ಮಾವಯ್ಯ, ತತ್ಪೂರ‌್ವದಲ್ಲಿ ತಾರಕಸುರನೆಂಬ ರಾಕ್ಷಸನಿಗೆ ತಾರಕಾಕ್ಷ, ವೀರ ವಿದ್ಯುನ್ಮಾಲಿ ಕಮಲಲೋಚನರೆಂಬುದಾಗಿ ಮೂರು ಜನ ರಾಕ್ಷಸರು ಲೋಕ ಕಂಟಕರಾಗಿ ವುದ್ಭವಿಸುವಂಥವರಾದರು.

ಭಾಮಿನಿ

ಮೇಲು ತಪದಲಿ ಮಯನ ಮೆಚ್ಚಿಸಿ ಕೇಳು ರಜಕದಿ
ಕಬ್ಬಿಣದಿ ಲೋಹದಿ ಮೂರು ಪುರವನು ಅಂತರಿಕ್ಷದಲಿ ॥

ಕೌರವ : ಹೇ ಮಾವಯ್ಯ, ಅಂತಪ್ಪ ರಾಕ್ಷಸರು ಮಯನ ಕುರಿತು ಘೋರ ತಪಸ್ಸು ಮಾಡಿ, ಮಯನನ್ನು ಮೆಚ್ಚಿಸಿ ಆತನಿಂದ ಅಂತರಿಕ್ಷದಲ್ಲಿ ರಜತದಲ್ಲಿ ವೊಂದು, ಕಬ್ಬಿಣದಲ್ಲಿ ವೊಂದು, ಲೋಹದಲ್ಲಿ ವೊಂದು ಯೀ ಮೂರರಲ್ಲಿ ಶತಯೋಜನ ಪ್ರಾಕಾರವುಳ್ಳ ಮೂರು ಪಟ್ಟಣಗಳನ್ನೂ ನಿರ್ಮಿಸಿಕೊಂಡಂಥವ ರಾದರು ಮಾವಯ್ಯ.

ಭಾಮಿನಿ

ಆಳುತಲಿ ತಾವ್ ಕೊಟ್ಟರಂಜಿಕೆಗಳನು ಅಮರರಿಗೆ
ಅಮರರು ತಾಳಲಾರದೆ ಶಶಿಮೌಳಿಗರುಹಲು ಅಭಯವನು
ಕೊಡುತ ಕಾಲಹರನಸುರರ ಸಂಹರಿಸಲೆಂದು

ಕೌರವ : ಹೇ ಮಾವಯ್ಯ, ಅಂತಪ್ಪ ರಾಕ್ಷಸರು ಮಹಾಬಲಶಾಲಿಗಳಾಗಿ ಯಿಂದ್ರಾದಿ ದೇವತೆಗಳಿಗೆ ಹಿಂಸೆಯನ್ನು ಕೊಡಲು, ಯಿವರ ವುಪಟಳವನ್ನೂ ತಾಳಲಾರದೆ ಯಿಂದ್ರಾದಿ ದೇವತೆಗಳೆಲ್ಲ ಕೈಲಾಸಕ್ಕೆ ಬಂದು ಶಶಿಮೌಳಿಯಾದ ಯೀಶ್ವರ ಮಹದೇವರಲ್ಲಿ ದೂರನ್ನು ಹೇಳಿಕೊಳ್ಳಲು, ಅಂತಪ್ಪ ಮಹದೇವನು ರಾಕ್ಷಸರ ವುಪಟಳವನ್ನು ಪರಿಹರಿಸಿಕೊಡುತ್ತೇನೆ ಎಂದು ಅಭಯವನ್ನು ಕೊಟ್ಟು ಪುರದಹನಕ್ಕೆ ಹ್ಯಾಗೆ ಬಂದರು ಯೆಂದರೆ ಹೇಳುತ್ತೇನೆ.

ಭಾಮಿನಿ

ಧರಣಿಯೆ ರಥಗಾಲಿಗಳು ಹಿಮಕರನು ಭಾಸ್ಕರನು ಬ್ರಹ್ಮ ಸಾರಥಿ
ತುರಗಗಳೆ ವೇದಗಳು ಹಿಮಾಚಲವೆ ಧನುವಾಯ್ತು.

ಕೌರವ : ಮಾವಯ್ಯ, ಅಂತಪ್ಪ ಯೀಶ್ವರ ಮಹದೇವರಿಗೆ ಯೀ ಭೂಮಿಯೆ ರಥವಾಗಿ, ಸೂರ‌್ಯ ಚಂದ್ರರೆ ಆ ರಥಕ್ಕೆ ಯೆರಡು ಗಾಲಿಗಳಾಗಿ, ಬ್ರಹ್ಮ ಸಾರಥಿಯಾಗಿ, ಚತುರ್ವೇದಗಳು ಧನುಸ್ಸಾಗಿ ಮಾವಯ್ಯ ಯೀ ಮೇರೆ ಸನ್ನಾಹವನ್ನು ಮಾಡಿಕೊಂಡರು. ಮುಂದೆ ಹೇಳುವೆನು ಕೇಳು.

ಭಾಮಿನಿ

ವುರಗಪತಿಯೆ ಸೂತ್ರ ಲಕ್ಷ್ಮೀವರನೆ ಬಾಣಗಳಾಗಿ
ಯೀ ಪರಿಯೊಳಗೆ ಸದೆಬಡಿದ ಹರನು ಅನಂತ ರಾಕ್ಷಸರ.