ಧರ್ಮಜ : ಭಾವಯ್ಯನವರೆ ಮತ್ತೊಂದು ಕಂಟಕವೇನು ಪೇಳುವಂಥವರಾಗಿ.

ಕೃಷ್ಣ : ಅಯ್ಯ ಧರ್ಮಜ ಕೌರವನಿಗೆ ಬಾಹುಬಲವಾಗಿರುವ ಕಡು ಪರಾಕ್ರಮಿಯಾದ ರವಿಪುತ್ರನು ಸುಂದರಗಾತ್ರ ರಣಧೀರ ಹಂಮೀರನಾದ ಕರ್ಣನೆದುರಿನಲ್ಲಿ ನಿಲ್ಲತಕ್ಕವರ‌್ಯಾರು. ಕರ್ಣನನ್ನು ಜಯಿಸುವದು ಬಹು ಕಠಿಣವಾಗಿರುವುದಯ್ಯ ಧರ್ಮಜ.

ಭಾಮಿನಿ

ಕಡು ಪರಾಕ್ರಮಿ ಕರ್ಣನೆದುರಲಿ ಮಿಡುಕುವರನೆಗುಂಟೆಯೆನೆ
ಪಲ್ಗಳ ಕಡಿಯುತಲಿ ಪವನಜನು ನುಡಿದನು ಮುರರಿಪುವಿಗಾಗ ॥

ಭೀಮ : ಭಾವಯ್ಯ ಶ್ರೀಹರಿಯೇ, ಅಗ್ರಜನಾದ ಧರ್ಮಜನಲ್ಲಿ ಹೇಳಿದರೆ ಅಲ್ಲೇನಾಗುವದು. ಯಿಗೋ ಇಲ್ಲಿ ನೋಡು. ಭೀಮನ ಪರಾಕ್ರಮವನ್ನು ಅರಿಕೆ ಮಾಡಿಕೊಳ್ಳುತ್ತೇನೆ ನೋಡಿ ಭಾವ ॥

ರಾಗ ಆದಿತಾಳ

ಪದ

ದಾನವಮರ್ದನ ನೀಯನ್ನದಟ ನಿದಾನಿಸುನೊಲವಿಂದವ
ನಾನುಸುರಿದೆ ನುಡಿನುಡಿ ಖೂಳರಿಗೆ ಸಮಾನವೇ ತಾನೆಂದ ॥

ಮಾತು : ದಾನವಾರಿಯಾದ ಹೇ ಶ್ರೀ ಹರಿಯೆ, ಏನು ಮಾತು ಅಪಣೆ ಕೊಡಿಸಿದಿರಿ. ಬಿಡಿಬಿಡಿ, ಅಸಹಾಯಶೂರನಾದ ಯನ್ನ ಖೂಳನಾದ ಕೌರವರಿಗೆ ಸಮಾನನೆಂದು ಜರಿಯಬಹುದೆ. ಹಾಗೆ ತಿಳಿದುಕೊಂಡು ಇರುವಿರೋ ಹಾಗೆ ತಿಳಿಯಬ್ಯಾಡಿ ಹೇಳುತ್ತೇನೆ ॥

ಪದ

ಹರಕಮಲಜರಜ ಬರಲಿಂದಿನ ಹದಕೆ
ತರುಣಿಯ ಮುಡಿಗಟ್ಟಿ ನೃಪಗೊಲಿಸುವೆ ಧರೆಯನು ಯೀ ಕ್ಷಣಕೆ

ಭೀಮ : ಭಾವ, ಯೀ ದಿವಸ ರಣಾಗ್ರದಲ್ಲಿ ಯನ್ನ ವೈರಿಯಾದ ದುಶ್ಯಾಸನನಿಗೆ ಪ್ರಳಯಾಂತಕನಾದ ಮಹಾರುದ್ರ ಚತುರ್ಮುಖನಾದ ಬ್ರಹ್ಮನೆ ಆದಿಯಾಗಿ ಬೆಂಬಲವಾದರು, ಅವನ ಉದರವನ್ನು ಸೀಳಿ ಕರುಳನ್ನು ತೆಗೆದು ದ್ರೌಪದಿಯ ಮುಡಿಯನ್ನು ಕಟ್ಟಿ ಯೀ ಪೃಥ್ವಿಯನ್ನು ಅಗ್ರಜರಾದ ಧರ್ಮರಾಯರಿಗೆ ವಹಿಸುತ್ತೇನೋ ಇಲ್ಲವೋ ಯನ್ನ ಸಾಹಸವನ್ನು ನೋಡಬಹುದು ಮತ್ತೂ ಹೇಳುತ್ತೇನೆ ಕೇಳು ॥

ಪದ

ಸೂತಜ ಕೌರವ ಶಲ್ಯಾದಿಗಳನ್ನು ಘಾತಿಸಿ ತಳವನು
ನೃಪಗೊಲಿಸುವೆ ಧರೆಯ ನೀಕ್ಷಿಸಿ ನಿಟಿಲಾಕ್ಷದೊಳಗೆ.

ಭೀಮ : ಭಾವಯ್ಯ, ಸೂತಜ ಅಂದರೆ ಹೀನಕುಲದಲ್ಲಿ ಹುಟ್ಟಿದ ಕರ್ಣ, ಕುರುಡನ ಹುಡುಗ ಕೌರವ ಶಲ್ಯ ಇವರುಗಳನ್ನು ನಾಳೆ ದಿವಸ ಭೂಮಿಗೆ ದಿಗ್ಭಲಿಯನ್ನು ಕೊಟ್ಟು ಅಗ್ರಜರಾದ ಧರ‌್ಮರಾಯರಿಗೆ ರಾಜ್ಯ ಪಟ್ಟಾಭಿಷೇಕವನ್ನು ಮಾಡದೆ ಹೋದರೆ, ನಾನು ವಾಯುಪುತ್ರ ಭೀಮನೆ ಮತ್ತು ನೀನೆನ್ನಾ ಭಾವಮೈದುನನೆ, ಯೀ ಪಂಥವನ್ನಾದರು ಪರೀಕ್ಷೆ ಮಾಡಬೌದು.

ಭಾಮಿನಿ

ಯನುತ ಪವನಜ ಕೋಪದಲಿ ಮುರಹರಗೆ ಪೇಳ್ವನಿತರೊಳ್
ಪಾರ್ಥನು ಘನ ಪರಾಕ್ರಮದೊಳಗೆ ತರಣಿಜನ ಕೊಲ್ಲುವೆನೆನುತ ಪೇಳಲು
ಮಾಧವನು ಸಂತೈಸಿದನು ಮೈದುನನ ॥

ಅರ್ಜುನ : ಭಾವಯ್ಯ, ಅಗ್ರಜನಾದ ಭೀಮಸೇನನ ಪರಾಕ್ರಮವು ಗೊತ್ತಾಯಿತಷ್ಟೆ. ಯಿಗೋ ಇಲ್ಲಿ ನೋಡು. ನಾನು ನಿನ್ನ ಸದ್ಭಕ್ತನಾದ ಯೀ ಅರ್ಜುನನು ನಾಳೆ ರಣಾಗ್ರದಲ್ಲಿ ತರಣಿ ಸುಕುಮಾರನಾದ ಕರ್ಣನನ್ನು ಸಂಹಾರ ಮಾಡದೆ ಎಷ್ಟು ಮಾತ್ರಕ್ಕೂ ಬಿಡತಕ್ಕವನಲ್ಲಾ. ಯನ್ನ ಸಾಹಸವನ್ನೂ ನಾಳೆಯೇ ನೋಡಬೌದು.

ಕೃಷ್ಣ : ಅಸಹಾಯಶೂರರಾದ ಭೀಮಾರ್ಜುನರೆ, ನಿಮ್ಮ ಉಭಯತ್ರರ ಪರಾಕ್ರಮವು ವುತ್ತರೋತ್ತರ ವಿದಿತವಾಗುವುದು. ಚಿಂತೆಯಿಲ್ಲಾ ನೋಡುವೆನು. ಅಯ್ಯ ಧರ್ಮಜ, ನಾವು ಬಂದ ವೇಳೆಯು ಬಹಳ ಹೊತ್ತಾಯಿತು. ಆದ್ದರಿಂದ ನಿತ್ಯ ಕರ್ಮಾನುಷ್ಟಾನವನ್ನು ನೆರವೇರಿಸಿಕೊಳ್ಳಲು ಸರ‌್ವರು ಅರಮನೆಗೆ ಹೋಗೋಣ ನಡೆಯಿರಿ.

(ಕೌರವನ ಸಭೆ)

ಭಾಗವತ : ಯೀ ಪ್ರಕಾರದಿಂದ ಸರ‌್ವಾಂತರ‌್ಯಾಮಿಯಾದ ಶ್ರೀ ಹರಿಯು ಪಾಂಡವರಿಗೆ ವೈರತ್ವವನ್ನೂ ಬೆಳೆಸಿ ಯಿಂದ್ರಪ್ರಸ್ತದಲ್ಲಿ ಯಿರುತ್ತಿರುವಲ್ಲಿ, ಇತ್ತ ಹಸ್ತಿನಾವತಿಯಲ್ಲಿ ಇಷ್ಟವಚನನಾದ ಕೌರವೇಶ್ವರನು ಯಾವ ರೀತಿಯಲ್ಲಿ ಒಡ್ಡೋಲಗಸ್ತನಾದನೆಂದರೆ॥

ಭಾಗವತ : ಭಳಿರೇ ರಾಜಾಧಿರಾಜ ಕೀರ್ತಿ ಮನೋಹರ ಬನ್ನಿರೈಯ್ಯಿ ಬನ್ನಿರಿ ॥

ಭಾಗವತ : ತಾವು ಯಾರು ತಂಮ ಸ್ಥಳ ನಾಮಾಂಕಿತ ಯಾವುದು ಹೇಳಬೌದು ॥

ಕೌರವ : ಹಸ್ತಿನಾವತಿಗೆ ಯಾರೆಂಬುದಾಗಿ ಕೇಳಿಬಲ್ಲಿರಿ.

ಭಾಗವತ : ರಾಷ್ಟ್ರಾಧಿಪನಾದ ಕೌರವೇಶ್ವರನೆಂದು ಕೇಳಬಲ್ಲೆವು.

ಕೌರವ : ಹಾಗೆಂದುಕೊಳ್ಳಬೌದು.

ಭಾಗವತ : ಬಂದ ಕಾರಣವೇನು ॥

ಕೌರವ : ಬಹಳ ಬಹಳುಂಟು.

ಭಾಗವತ : ಮಹರಾಜನೆ ಅದೇನು ॥

ಕೌರವ : ಅಯ್ಯ ಭಾಗವತರೆ, ನೆನ್ನೆಯ ದಿವಸ ರಣಾಗ್ರಕ್ಕೆ ದಯ ಮಾಡಿಸಿದ ಅಸಹಾಯಶೂರರಾದ ಕಳಶಜರು ಇದುವರೆವಿಗು ಬರಲಿಲ್ಲವಲ್ಲ. ಅಲ್ಲಿ ಯೇನಾಯಿತೋ ಕಾಣೆನಲ್ಲಾ. ಶಿವಶಿವಾ ಏನು ಮಾಡುವಂಥವನಾಗಲಿ ಮನಸ್ಸು ವಡಂಬಡುವದಿಲ್ಲಾ, ವಿಕಲ್ಪವಾಗಿರುವದು. ಗುರುಗಳ ಸಂಗಡ ತೆರಳಿದ ಚಾರಕನು ಕೂಡ ಯಾವ ವರ್ತಮಾನಕ್ಕೂ ಬರಲಿಲ್ಲವಲ್ಲ ಏನು ಮಾಡಲೋ ಶರಗುರು –

ಭಾಮಿನಿ

ಧರಣಿಪತಿ ಕೇಳಿತ್ತ ಕೌರವರರಸನೊಡ್ಡೋಲಗದಳೊಪ್ಪಿದ ಶರದ
ಗುರುವಿನ ರಥವ ಸಾರಥಿ ತಿರುಗಿಸಿದನು ಪುರಕೆ ॥

ಸಾರಥಿ : ಅಗಡದೀನ್ ಸಲಾಮ್ ಬತ್ತೈತಿ ಬುದ್ಧಿ. ನಿಂನ್ನಾ ಮಗತ್ತೈನು ಗುಲಾಮಬುದ್ದಿ

ಕೌರವ : ಏನಂದೆಯೊ ಚಾರಕ ॥

ಸಾರಥಿ : ಅಲ್ಲ ಅಲ್ಲ, ನಾ ನಿಂಮ ಗುಲಾಮ. ಚಕ್ರವ್ಯೆಹ್ಮದ ಕೋಟೆಯಿಂದ ಬರೀ ರಥವನ್ನೂ ಹೊಡೆದುಕೊಂಡು ಬಂದಿರುತ್ತೇನೆ ಪರಾಂಬರಿಸಬೇಕು ॥

ಭಾಮಿನಿ

ಬರಿ ರಥವಾ ತಾ ಕಂಡು ಕೌರವ ಹರಹರ ಏನಾಯ್ತು
ಯೆನುತಲಿ ಕರೆದು ಸಾರಥಿಯನ್ನು ಕೇಳುತಲಿ ತವಕದೊಳು ॥

ಕೌರವ : ಅಯ್ಯೋ ಹರಹರ, ಬರೀ ರಥವನ್ನು ನೋಡಿದ ಹಾಗಾಯಿತಲ್ಲ. ದ್ರೋಣಾಚಾರ‌್ಯರು ಕಾಣುವರೆ, ಇಲ್ಲ ಏನು ಅಸಂಗತವಾಯಿತೋ ಕಾಣೆನಲ್ಲಾ. ಅಯ್ಯ ಚಾರಕ ಯಿತ್ತ ಬಾ. ನಿಂನ್ನ ರವಸನ್ನು ನೋಡಿದ್ದೇಯಾದರೆ ಗಾಬರಿಯಾದಂತೆ ತೋರುವುದು. ನಾನು ಕೇಳುವ ಮಾತಿಗೆ ಉತ್ತರವನ್ನು ಕೊಡುವಂಥವನಾಗು ॥

ರಾಗ ಆದಿತಾಳ

ಪದ

ಸೂತನೆ ಕೇಳು ರಥವನ್ನು ತಿರುಗಿಸಿ ಯಾತಕೆ ತಂದೆ
ಭೀತಿಗಳೇನಿದು ಬಿಡು ವೃತ್ತಾಂತವ ನೀ ಪೇಳೆನ್ನ ಮುಂದೆ ॥

ಕೌರವ : ಯಲೈ ಚಾರಕ, ನಿಂನ್ನಾ ಮುಖಕಮಲವನ್ನು ನೋಡುವಲ್ಲಿ ಯೇನೋ ವಂದು ಅನಾಹುತ ವದಗಿದಂತೆ ಕಾಣುವದು. ಮತ್ತು ನೆನ್ನೆಯ ದಿವಸ ಚಕ್ರವ್ಯೆಹದ ಕೋಟೆಯಲ್ಲಿ ನಡೆದಿರತಕ್ಕ ವೃತ್ತಾಂತವನ್ನು ಚಂಚಲಪಡದೆ ವಂಚನೆಯಂ ಬಿಟ್ಟು ಯನ್ನ ಮುಂದೆ ಕೊಂಚ ಪೇಳುವಂಥವನಾಗು ಮತ್ತೂ ಪೇಳುತ್ತೇನೆ ಲಾಲಿಸುವಂಥವನಾಗು ॥

ಪದ

ಗುರುವಿಲ್ಲದ ಬರಿ ರಥವನ್ನು ನೋಡಲು
ಕುಲಶೋದ್ಭವನು ಹರಿಗಳ ಗೆಲಿದನೋ
ಅಳಿದನೆಲಾ ರಣದೊಳು ಅರುಹು ಯನಗೆಂದ ॥

ಕೌರವ : ಯಲೈ ಚಾರಕ, ಗುರುಗಳಾದ ದ್ರೋಣಾಚಾರ‌್ಯರು ಯಿಲ್ಲದ ಬರಿರಥವನ್ನು ನೋಡುವಲ್ಲಿ ಮನಸ್ಸಿಗೆ ಸಂದೇಹವಾಗಿರುವದು. ರಣರಂಗದಲ್ಲಿ ದ್ರೋಣಾಚಾರ‌್ಯರು ವೈರಿಗಳನ್ನು ಗೆದ್ದರೋ ವೈರಿಗಳೇ ದ್ರೋಣಾಚಾರ‌್ಯರನ್ನು ಗೆದ್ದರೋ ಅಲ್ಲಿ ನಡೆದ ಸಂಗತಿಯನ್ನು ಜಾಗ್ರತೆಯಾಗಿ ಹೇಳುವಂಥವನಾಗು॥

ಪದ

ಯಿತ್ತ ಭಾಷೆಯೇನಾದುದೊ ದ್ರೋಣನು ಮತ್ತೆಲ್ಲಿಗೆ
ಸರಿದಾ ವಿಸ್ತಾರದಿ ಪೇಳನುತಲಿ ಪೃಥ್ವೀಶನು ನುಡಿದ ॥

ಕೌರವ : ಯಲೈ ಚಾರಕ ನನಗೆ ಮೃತ್ಯುವಾಗಿರುವ ಶತ್ರುಗಳಾದ ಪಾಂಡವರನ್ನು, ಜಯಪ್ರದವನ್ನು ಮಾಡಿಕೊಡುವದಾಗಿ ದ್ರೋಣಾಚಾರ‌್ಯರು ಕೊಟ್ಟ ಭಾಷೆಯೇನಾಯಿತು. ದುಗುಡವನ್ನು ಬಿಟ್ಟು ಸವಿಸ್ತಾರವಾಗಿ ಪೇಳುವಂಥವನಾಗಯ್ಯ ಚಾರಕ.

ಸಾರಥಿ : ಅರೇ ಸ್ವಾಮಿ ಮಹಾರಾಜ್ ಸವಿಸ್ತಾರವಾಗಿ ಹೇಳಬೇಕು. ಹಾಗಾದರೆ ಹೇಳ್ತೀನಿ ಕೇಳಬೇಕು.

ಪದ

ದೊರೆಯೆ ಲಾಲಿಸಯ್ಯ ಪೇಳುವೆ ಜೀಯ
ದೊರೆರಾಯ ಲಾಲಿಸಯ್ಯ, ಅರುಹುವರೆನಗೆ
ಅಂಜಿಕೆಯಪ್ಪುಹುದು ಮಹಾರಾಜ ಲಾಲಿಸೈ ॥

ಸಾರಥಿ : ಮಹಾರಾಜ ನೆನ್ನೆ ದಿವಸ ನೋಡಿ, ರಣಾಗ್ರದಲ್ಲಿ ನಡೆದ ಸಂಗತಿಯನ್ನೂ ಅರಿಕೆ ಮಾಡಲು ನನಗೆ ಭಯವಾಗುತ್ತೆ ಸುಳ್ಳು ಹೇಳಲೋ ನಿಜ ಹೇಳಲೋ.

ಕೌರವ : ಯಲಾ ಅನು ನಾಯಕ. ಸುಳ್ಳು ಹೇಳಬೇಡ ನಿಜವಾಗಿಯೆ ಹೇಳುವಂಥವನಾಗೊ.

ಸಾರಥಿ : ಹಾಗಾದರೆ ಹೇಳುತ್ತೇನೆ ಕೇಳಿ.

ಪದ

ಚಕ್ರವ್ಯೆಹವ ಮಾಳ್ಪರು ಮತ್ತದರಲ್ಲಿ ಪಾರ್ಥಸುತನ ಕೊಂದರೂ

ಸಾರಥಿ : ಅರೇ ಸ್ವಾಮಿ ಮಹಾರಾಜ್, ಚಕ್ರವ್ಯೆಹದ ಕೋಟೆವಳಗೆ ಅಭಿಮನ್ಯು ಅರ್ಜುನನ ಮಗ ಯಿವನನ್ನು  ದ್ರೋಣಾಚಾರ‌್ಯರು ಸಂಹಾರ ಮಾಡಿದರು.

ಕೌರವ : ಯಲಾ ಚಾರಕ ಹಾಗಂದರೇನು ॥

ಸಾರಥಿ : ಹಾಗಂದರೇನು ಅಲ್ಲಿಗೆ ಅಭಿಮನ್ಯು ಸತ್ತುಹೋದ.

ಕೌರವ : ಅನಂತರ ಏನಾಯಿತು.

ಪದ

ವೀರಪಾರ್ಥನು ಬಂದನು ಆಮೇಲೆ ಕೇಳು
ದ್ರೋಣನ ಗೋಣ ಮುರಿದನು ಮಹಾರಾಜ.

ಸಾರಥಿ : ಮಹರಾಜ, ಅಭಿಮನ್ಯು ಸತ್ತುಹೋದ ಮೇಲೆ ಯಿವರಪ್ಪ ನೋಡಿ ಅರ್ಜುನಪ್ಪ ಮೂರುಲೋಕಕ್ಕೆ ಗಂಡ ಅರ್ಜುನಪ್ಪ ದ್ರೋಣಪ್ಪನಿಗೆ ಗೋಣು ಮುರಿದು ಜವರಪ್ಪನಿಗೆ ಕೊಟ್ಟು ಬಿಟ್ಟ.

ಕೌರವ : ಯಲಾ ಚಾರಕ ಹಾಗಂದರೇನು.

ಸಾರಥಿ : ಹಾಗಂದರೇನು ಹೀಗಂದರೇನು, ನಿಮ್ಮ ಗುರುಗಳಾದ ದ್ರೋಣಾಚಾರ‌್ಯರು ಯಮನ ಪಟ್ಟಣಕ್ಕೆ ತೆರಳಿದರು.

ಕೌರವ : ಯಲ ಹನುಮನಾಯಕ, ಹಾಗಾದರೆ ಗುರುಗಳಾದ ದ್ರೋಣಾಚಾರ‌್ಯರು ಪರಂಧಾಮವನ್ನು ಹೊಂದಿದರೇನೋ ಚಾರಕ.

ಸಾರಥಿ : ಅರೇ ಸಾಮಿ, ಅದು ನಮಗೆ ತಿಳಿಯದು. ಸತ್ತೋದ ಕಾಣಯ್ಯ ಕೌರವಪ್ಪ

ಕೌರವ : ಶಿವಶಿವಶಂಭು ಹರಹರ ಗುರುಗಳಾದಂಥ ದ್ರೋಣಾಚಾರ‌್ಯರು ಮೃತಪಟ್ಟರಲ್ಲಾ, ದೈವವೇ ಯಿನ್ನಾದರು ಹೇಳುತ್ತೇನೆ

ರಾಗ ಅಷ್ಟತಾಳ

ಪದ

ಏನಾ ಮಾಡಲಿ ನಾನು ಪಾಂಡವರ ಸೋಲಿಪಡೆ
ದಾನವಾಂತಕನವರ್ಗೆ ಸಾರಥಿಯಾಗಿಹನೊ ॥

ಕೌರವ : ಅಯ್ಯ ಹರಹರ ಅಯ್ಯ ಭಾಗವತರೆ, ನಾನಿನ್ನೇನು ಮಾಡಲಿ. ಭಂಡರಾದ ಪಾಂಡವರನ್ನು ಯೀ ಭೂಮಂಡಲದಲ್ಲಿ ಯಿಡಕೂಡದೆಂದು ಯೆಷ್ಟೋ ಪ್ರಯತ್ನಪಟ್ಟರು ಸಾಗಲಿಲ್ಲ. ಮುಖ್ಯವಾಗಿ ಸರ‌್ವಂತರ‌್ಯಾಮಿಯಾದ ಶ್ರೀಹರಿಯು ನರನಾದ ಅರ್ಜುನನಿಗೆ ಸಾರಥಿಯಾಗಿರುವನಲ್ಲಾ, ಹರಹರ ಶಂಕರ ಪಾರ್ವತೀರಮಣ ಕಾಪಾಡು ಕಾಪಾಡು.

ಪದ

ನೋಡಿದರೆ ಪಾಂಡವರು ಕಡು ಪರಾಕ್ರಮಿಗಳು
ರೂಢಿಯೋಳ್ ಸಮನಾದ ಸುಭಟರಿಲ್ಲಾವರ್ಗೆ

ಕೌರವ : ಅಯ್ಯೋ ದೈವವೆ, ಭಂಡರಾದ ಪಾಂಡವರು ಯೀ ಭೂಮಂಡಲದಲ್ಲಿ ಉದ್ದಂಡ ಪರಾಕ್ರಮಿಗಳಾಗಿರುವರು. ಇವರನ್ನು ಜಯಪ್ರದ ಮಾಡುವಂಥ ಶೂರರು ನಮ್ಮಲ್ಲಿ ಯಾರೂ ಯಿಲ್ಲವಲ್ಲ ಏನು ಮಾಡುವಂಥವನಾಗಲಿ ಶಂಕರ ॥

ಪದ

ಮೂರು ಲೋಕದೊಳೊಬ್ಭ ವೀರ ಅರ್ಜುನ
ಹೊರತು ಬೇರೆ ಭಟರಿನ್ನಿಲ್ಲಾ  ಧಾರುಣಿ ವಳಗೆ ॥

ಕೌರವ : ಅಯ್ಯೋ ದೈವವೆ, ಸ್ವರ್ಗ ಮರ್ತ್ಯ ಪಾತಾಳ ಯೀ ತ್ರಿಲೋಕದಲ್ಲಿಯೂ, ಅರ್ಜುನ ವಬ್ಬನೇ ಧೀರ ಹೊರತು ಅವನಂ ವೋಲ್ವ ವೀರರು ಪೃಥ್ವಿಯಲ್ಲಿ ಇಲ್ಲವಲ್ಲ, ಶಿವ ಶಿವ ಏನು ಮಾಡುವಂಥವನಾಗಲಿ

ಪದ

ಬಲರಾಮನಿಹನೆಂದು ಬಹಳ ಧೈರ‌್ಯದೊಳಿದ್ದೆ
ಯಿಳೆಯೋಳ್ ಭೂಪ್ರದಕ್ಷಿಣಿ ಆಯಿತು ಅವರ್ಗಿನ್ನೂ ॥

ಕೌರವ : ಅಯ್ಯ ಹರಹರ, ಇದುವರೆವಿಗು ಬಲರಾಮದೇವರು ಇದ್ದರೆಂಬುದಾಗಿ ಪೂರಾ ಭರವಸೆ ಇತ್ತು. ಅದೃಷ್ಟಹೀನನಾದ ಕಾರಣ ಯಿದೇ ಕಾಲದಲ್ಲಿ ಅವರಿಗು ಕೂಡ ಭೂಪ್ರದಕ್ಷಿಣೆ ಪ್ರಾಪ್ತಿಯಾಗು ವಂತದ್ದಾಯಿತು.

ಪದ

ಏನು ಮಾಡುವಂತವನಾಗಲಿ ಛಲದಂಕ ಭೀಷ್ಮಾ ಮಲಗಿದನು
ಮಂಚದಲಿ ಬಿಲ್ಲು ಮುರಿದು ವಿದುರಾನು ಮೊದಲೆ ಜಾರಿದನು ॥

ಕೌರವ : ಅಯ್ಯ ಭಾಗವತರೆ, ಛಲದಂಕರಾದಂಥ ಭೀಷ್ಮಾಚಾರ‌್ಯರು ಸರಳುಮಂಚದಲ್ಲಿ ಪವಡಿಸುವಂಥವರಾದರು. ಇದೂ ಅಲ್ಲದೆ ಇದಕ್ಕೆ ಮುಂಚೆ ನಮ್ಮ ಚಿಕ್ಕಪ್ಪನಾದ ವಿದುರನು ಬಿಲ್ಲನ್ನು ಮುರಿದುಕೊಂಡು ಮೊದಲೆ ಜಾರಿಬಿದ್ದಂತವನಾದ. ಯಿಂತಾವರೆಲ್ಲ ಹೀಗಾದ ಬಳಿಕ ನಾನು ಪಾಪಿಷ್ಠನಲ್ಲವೆ ಶಂಕರ ಏನು ಮಾಡಲೊ ಪಾರ್ವತೀಶ.

ಪದ

ಗರುಡಿಯಾಚಾರ‌್ಯರಿಗೆ ಧುರದೊಳಗೆ ಅಳಿವಾಯ್ತು
ಹರಕರುಣ ತಪ್ಪಿಹುದು ವರಲೀ ಫಲವೇನು ॥

ಕೌರವ : ಅಯ್ಯ ಭಾಗವತರೆ, ಗರುಡಿಯಾಚಾರ‌್ಯರಾದ ದ್ರೋಣಾಚಾರ‌್ಯರು ಧುರದಲ್ಲಿ ಅಪಜಯವನ್ನು ಹೊಂದಿ ಪರಂಧಾಮವನ್ನು ಹೊಂದಿದರು. ಶಂಕರ ನಾನಿಷ್ಟು ವ್ಯಥೆಪಟ್ಟು ಸಂಕಟಪಟ್ಟರೆ ಫಲವಿಲ್ಲಾ. ನಿನ್ನಾ ಕರುಣರಸವು ನನ್ನ ಮೇಲೆ ಯಿಲ್ಲದ್ದರಿಂದ ಪಾಂಡವರಲ್ಲಿ ಜಯಲಕ್ಷ್ಮಿಯು ಸೇರಿದಳು. ನನ್ನಲ್ಲಿ ಅಪಜಯ ಲಕ್ಷ್ಮಿಯೇ ನೆಲೆಗೊಂಡಳು. ಆದಕಾರಣ ನನಗಿಷ್ಟು ಅನಾಹುತಕ್ಕೆ ಕಾರಣವಾಯಿತಲ್ಲಾ ಮುಂದೇನು ಮಾಡುವಂಥವನಾಗಲಿ ಶಂಕರ ಗೌರೀಶ ॥

ಭಾಗವತ : ಮಹಾರಾಜನೆ, ನೀನು ರಾಷ್ಟ್ರಾಧಿಪತಿಯಾಗಿ ಮುಂದೇನು ಮಾಡಲಿ ಯೆಂದು ಯೋಚಿಸಿದರೆ ಪ್ರಯೋಜನವಿಲ್ಲ. ರಾಜಸನ್ನಾಹದಿಂದ ವೈರಿಗಳನ್ನು ಜಯಪ್ರದವನ್ನು ಮಾಡಿ ಕೀರ್ತಿಯನ್ನು ಪಡೆಯಬೇಕಯ್ಯ ಕೌರವೇಶ್ವರ

ಕೌರವ : ಅಯ್ಯ ಭಾಗವತರೆ, ಹಾಗಾದರೆ ನನ್ನ ಆಸ್ಥಾನಕ್ಕೆ ಗುರುಪುತ್ರರಾದ ಅಶ್ವತ್ಥಾಮರು ನನಗೆ ಬಾಹುಬಲವಾಗಿರುವರಾದ ಕರ್ಣ ಯಿವರೀರ‌್ವರನ್ನೂ ಯೀ ಕ್ಷಣವೇ ಬರಮಾಡಿ॥

ಭಾಗವತ : ಮಹಾರಾಜನ ಅಪ್ಪಣೆಯಂತೆ ಯೀ ಕ್ಷಣವೆ ಬರಮಾಡಿಕೊಡುತ್ತೇನೆ ॥

 

(ಅಶ್ವತ್ಥಾಮ ಬರುವಿಕೆ)

ಪದ

ಹರಿ ನಾರಾಯಣ ವೇದಪರಾಯಣ
ಶ್ರೀಪತಿ ಕಮಲಾ ಕಾಂತಾಹರೆ ನಾರಾಯಣನೆಂಬೊ ನಾಮದ
ಬೀಜ ನಾರದ ಬಿತ್ತಿದ ಧರೆಯೊಳಗೆ ಹರಿ ನಾರಾಯಣ ॥

ಸಾರಥಿ : ನಾರಾಯಣ ನಾರಾಯಣ ನರೋಹರಿ ಶೀರೇಹರಿ ಕುಪ್ಪಸಹರಿ  ರವಿಕೆ ಹರಿ ಹೋಂ ಹೋಂ ॥

ಭಾಗವತ : ನಮಗೊಂದು ಹತ್ತು ಇಪ್ಪತ್ತು ಹೋರಿ ॥

ಸಾರಥಿ : ಯೇನಕ್ಕಯ್ಯ ಭಾಗವತರೇ ॥

ಭಾಗವತ : ಹೋರಿ ಹೋರಿ

ಸಾರಥಿ : ಯೇನಿರಯ್ಯ ಹೋರಿಗಳು ಬೇಕಾದರೆ ಇತ್ತಲಾಗಿ ಮೂಡಲಾಗಿ ಹೋಗೋಣ, ಹೋರಿಗಳ ಕೊಳ್ಳೋಣ. ಅವುಗಳನ್ನು ಹೊಡೆದುಕೊಂಡು ಬಂದು ಗಂಡಸಿ ಬಾರೆ ಸಂತೆಯಲ್ಲಿ ಲಾಭಕ್ಕೆ ಮಾರೋಣ ದುಡ್ಡು ತಕ್ಕೊಳ್ಳೋಣ.

ಭಾಗವತ : ಅದನ್ಯಾರು ಕೇಳಿದರು ॥

ಸಾರಥಿ : ಮತ್ತಿನ್ನೇನು ಕೇಳಿದಿರಯ್ಯ ॥

ಭಾಗವತ : ರಂಗಸ್ಥಳಕ್ಕೆ ಬಂದವರ ನಾಮಧೇಯವೇನು॥

ಸಾರಥಿ : ಆಹಾ, ಭಾಗವತರೆ ನಂಮ ನಾಮದೇಹವನ್ನು ಕೇಳಿದಿರಾ ಈ ದೇಹಕ್ಕೆ ಯಿದೇನಾಮ ಯೀ ನಾಮಕ್ಕೆ ಇದೇ ದೇಹ.

ಭಾಗವತ : ಅದನ್ಯಾರು ಕೇಳಿದರು ಸ್ವಾಮಿ.

ಸಾರಥಿ : ಮತ್ತಿನ್ನೇನು ಕೇಳಿದಿರಯ್ಯ.

ಭಾಗವತ : ಸ್ವಾಮಿ ತಂಮ ನಾಮಕರಣವನ್ನೂ ಕೇಳಿದಿರ. ಕಳೆದ ಕ್ಷಾಮದಲ್ಲಿ ಧಾತು ಸಂವತ್ಸರದೊಳಗೆ ಹಣಕ್ಕೆ ಸೇರು, ಗೋವು ಚಂದ್ರವಿತ್ತು. ಆವಾಗ್ಗೆ ನಮಗೆ ತರಬೇಕು ಯೆಂದರೆ ಕೈಲಿ ಕಾಸಿಲ್ಲಾ ಬಿಟ್ಟೆವು. ಯಿದನ್ನು ತಿಳಿದುಕೊಂಡು, ಯಿವರಂಥ ಪುಣ್ಯಾತ್ಮರ ಮನೆಗೆ ಹೋಗಿ ಸುಂಣದ ಗೋಡೆಗೆ ಮುಖವನ್ನು ಹಾಗೂ ಹೀಗೂ ಉಜ್ಜೋಣ ಅದೇನು ಆವಾಗ್ಯೆ ಕರ‌್ರಗಿತ್ತೋ ಬೆಳ್ಳಗಿತ್ತೋ ಭಗವಂತನಿಗೆ ಗೊತ್ತು ನೋಡ್ರಪ್ಪ ಇಷ್ಟೇ.

ಅಶ್ವತ್ಥಾಮ : ಅಯ್ಯ ಭಾಗವತರೆ, ಶಾಪಾದಪಿ ಶರಾದಪಿಗಳಾದ ಕಲಶಜರ ಮಕ್ಕಳು ಅಶ್ವತ್ಥಾಮಾಚಾರ‌್ಯರೆಂದು ಪ್ರಸಿದ್ಧಿಯಲ್ಲಿದೆ ನೋಡಪ್ಪ.

ಭಾಗವತ : ಪೂಜ್ಯರೇ ಯೀ ಆಸ್ಥಾನಕ್ಕೆ ದಯಮಾಡಬೇಕಾದ ಕಾರಣವೇನೈ ದೇವಾ, ಕರುಣಪ್ರಭಾವ.

ಅಶ್ವತ್ಥಾಮ : ಪ್ರತಿನಿತ್ಯವು ರಾಷ್ಟ್ರಾಧಿಪತಿಯಾದ ಕೌರವೇಶ್ವರನ ಆಸ್ಥಾನಕ್ಕೆ ಬರಬೇಕಾದ ಕಾರಣ, ನೋಡುವೆನು ಮಹರಾಜರು ಧಾವಲ್ಲಿರುವರು ಕಾಣೆನಲ್ಲಾ.

ಭಾಗವತ : ಹಾಗಾದರೆ ಅವರು ದರ್ಬಾರದಲ್ಲಿ ವಡ್ಡೋಲಗಸ್ತರಾಗಿರುವರು.

ಕೌರವ : ಗುರುಪುತ್ರರ ಪಾದಕ್ಕೆ ನಮಸ್ಕಾರ.

ಅಶ್ವತ್ಥಾಮ : ನಿನಗೆ ಮಂಗಳವಾಗಲಯ್ಯ ಸುಯೋಧನ ಭೂಪಾಲ.

ಕೌರವ : ಪೂಜ್ಯರೆ ಯೀ ಪೀಠವನ್ನು ಅಲಂಕರಿಸಬೇಕು.

ಅಶ್ವತ್ತಾಮ : ಮಹಾರಾಜನೆ ಆಗಲಯ್ಯ ಸಂತೋಷ. ನಮ್ಮನ್ನೂ ಕರೆಸಿದ ಕಾರಣವೇನು
ಹೇಳು.

ಕೌರವ : ಕರ್ಣನು ಬರಲಿ ಹೇಳುತ್ತೇನೆ.

ಅಶ್ವತ್ಥಾಮ : ಮಹಾರಾಜನೆ ಹಾಗಾದರೆ ಕರ್ಣನನ್ನೂ ಕರೆಸುವವನಾಗಯ್ಯ ಕುರುಪತಿ

ಕೌರವ : ಪೂಜ್ಯರೆ ತಮ್ಮ ಅಪ್ಪಣೆಯಂತೆ ಕರೆಸುವೆ  ಯಲಾ ಚಾರಕ, ನನಗೆ ಬಾಹುಬಲವಾಗಿರುವ ರಾಧಾಪುತ್ರನಾದ ಕರ್ಣಭೂಪತಿಯನ್ನು ಕರೆದುಕೊಂಡು ಬರುವಂಥವನಾಗು.

ಸಾರಥಿ : ಮಹಾರಾಜನೆ ಅಪ್ಪಣೆ ಈ ಕ್ಷಣವೆ ಕರೆದುಕೊಂಡು ಬರುವೆನು

 

(ಕರ್ಣನ ಬರುವಿಕೆ)

ಭಾಗವತ : ಭಳಿರೆ ರಾಜಾಧಿರಾಜ ರಾಜಕೀರ್ತಿ ಮನೋಹರ ಜನೋದ್ಧಾರ ವೀರ ಪರಿವಾರ ಬಹುಪರಾಕು.

ಕರ್ಣ : ಬನ್ನಿರಯ್ಯಿ ಬನ್ನಿರಿ

ಭಾಗವತ : ತಾವು ಯಾರು ತಮ್ಮ ಸ್ಥಳ ನಾಮಾಂಕಿತ ಯಾವುದು, ಹೇಳುವಂಥವರಾಗಿರಿ.

ಕರ್ಣ : ಅಯ್ಯ ಭಾಗವತರೆ ವಂಗದೇಶಕ್ಕೆ ಯಾರೆಂಬುದಾಗಿ ಕೇಳಬಲ್ಲಿರಿ.

ಭಾಗವತ : ರಾಧೇಯನಾದ ಕರ್ಣಭೂಪತಿಯೆಂದು ಕೇಳಿಬಲ್ಲೆವು.

ಕರ್ಣ : ಹಾಗೆಂದುಕೊಳ್ಳಬೌದು ॥

ಭಾಗವತ : ಬಂದ ಕಾರಣವೇನು.

ಕರ್ಣ : ಬಹಳ ಬಹಳವುಂಟು.