(ಧರ್ಮರಾಯನ ಮೂರ್ಛೆ)

ಕರ್ಣ : ಯಲಾ ಅಧಮ, ಕೈಗುಂದಿದೆಯಲ್ಲೊ ಕುನ್ನಿ. ಎಲ್ಲಿ ನಿನ್ನ ಮುಖವನ್ನು ನೋಡೋಣ ಯಿದೇ ಯೀಗ ಬಿಟ್ಟರೆ ಸಿಕ್ಕುವುದಿಲ್ಲ. ನನ್ನ ಹಸ್ತಗತವಾದ ಯೀ ಖಡ್ಗದಿಂದ ಯೀ ತರಳನ ಕಂಠವನ್ನು ಕತ್ತರಿಸುತ್ತೇನೆ ನೋಡು.

ಶಲ್ಯ : ಅಯ್ಯ ಕರ್ಣ ಕೈ ತಡೆಯುವಂಥವನಾಗು. ಆತುರಪಡಬೇಡ. ಆಜ್ಞಾದಾರಕನಾದ ನನ್ನ ವಿಜ್ಞಾಪನೆ ಒಂದಿರುವುದು. ನಡೆಸಿ ಕೊಡುವುದಾದರೆ ಅರಿಕೆ ಮಾಡಿಕೊಳ್ಳುತ್ತೇನೆ॥

ಕರ್ಣ : ಅಯ್ಯ ಸಾರಥಿಯಾದ ಶಲ್ಯ ಭೂಪತಿಯೆ, ಸಂದೇಹಪಡಬೇಡ ನಡೆಸಿ ಕೊಡುವುದಾದರೆ ನಡೆಸಿಕೊಡುತ್ತೇನೆ ಹೇಳುವನಾಗು.

ಪದರಾಗ ತ್ರಿಪುಡೆ

ವೀರ ಮದಗಜ ಸಿಂಹ ಭಾಪುರೆ ಆರು
ನಿನಗಿದಿರಿಲ್ಲ ರಣದೊಳು ಪೌರುಷವ ಕಂಡರಿವೆ
ನಿನ್ನಂಥ ತರುಣ ಶೂರರನ್ನೂ ॥

ಶಲ್ಯ : ವೈರಿಗಳೆಂಬ ಮದಗಜ ಸಮುದಾಯಕ್ಕೆ ವೀರಕಂಠೀರವನಂತೊಪ್ಪುವ ಕರ್ಣನೆ ಕೇಳು, ಭಳಿರೇ ಕರ್ಣ ಭಾಪುರೆ ಕರ್ಣ, ಯೀ ದಿವಸ ರಣಾಗ್ರದಲ್ಲಿ ನಿನ್ನ ಪೌರುಷವನ್ನು ಕಂಡ ಹಾಗಾಯಿತು. ನಿನ್ನಂಥ ರಣಶೂರರನ್ನು ಯಿದುವರೆವಿಗೂ ನೋಡಿರಲಿಲ್ಲ ಹೇಳುವೆನು.

ಪದ

ಧಾತುಗೆಡಿಸಿದ ಧರ್ಮಪುತ್ರನೆ ನಿನ್ನ ಶೌರ‌್ಯಕ್ಕೆ ಮೆಚ್ಚಿದೆ
ಮಾತನೊಂದನು ಪೇಳ್ವೆ ಲಾಲಿಸು ಪ್ರೀತಿಯಿಂದ ॥

ಶಲ್ಯ : ಅಯ್ಯ ಕರ್ಣ, ಯೀ ಧರ್ಮರಾಯನು ಬಹಳ ಸತ್ಯವಂತನು. ನಿನ್ನಿಂದ ಸಂಕಟ ಹೊಂದಿ ಬಾಯಿ ಬಿಡುತ್ತಿರುವನು. ಯಿದನ್ನು ನೋಡಲಾರೆನು. ಆದರೆ ನನ್ನ ಮನೋಗತವೊಂದಿರುವುದು ನಡೆಸಿ ಕೊಡಬೇಕಯ್ಯ ಕರ್ಣ.

ಪದ

ಪರಮ ಪುರುಷನು ಧರ್ಮಪುತ್ರನ ಕೊರಳನರಿಯಲು ಬೇಡ
ಯಿಂದಿಗೆ ಬರಲಿ ಯೀತನ ಅನುಜರನೆಲ್ಲ ತರಿದು ಬಿಸುಡೈ ॥

ಶಲ್ಯ : ಅಯ್ಯ ಕರ್ಣ, ಯೀ ಧರ್ಮರಾಜನು ನನಗೆ ಪರಮ ಮಿತ್ರನಲ್ಲದೆ ಬಾಂಧವನಾಗಬೇಕು. ಯಿವನ ಪ್ರಾಣವನ್ನು ಕಳೆಯಬೇಡ. ಯಿಲ್ಲಿಗೆ ಬಿಟ್ಟು ಬಿಡು. ಯಿವನ ತಮ್ಮಂದಿರು ಭೀಮಾರ್ಜುನ ನಕುಲ ಸಹದೇವರು ಯಿವರನ್ನು ಕೊಲ್ಲಬಹುದು.

ಕರ್ಣ : ಅಯ್ಯ ಶಲ್ಯ ಭೂಪತಿ, ನೀನಿಷ್ಟು ಹೇಳುವಲ್ಲಿ ನನ್ನ ಯತ್ನವೇನು ಯಿರುವುದಿಲ್ಲ. ಯೀ ಅಧಮನ ವದನವನ್ನೂ ನೋಡದೆ ಮೂದಲಿಸಿ ಬಿಡುತ್ತೇನೆ, ಪ್ರಾಣದಿಂದ ಬದುಕಿಕೊಳ್ಳಲಿ ॥

ಪದ

ಮಂದಮತಿ ನಾರಿಯೊಳು ಕರ್ಣನ ಕೊಂದು ಬಿಸುಡುವೆನೆಂದು ಬಂದೆಯಾ
ಹಿಂದಕ್ಕೆ ಹೋಗಿ ತೋರುವೆ ಯಂತು ಮೋರೆಯನು ॥

ಕರ್ಣ : ಯಲಾ ಮಂದಮತಿಯಾದ ಧರ್ಮಜನೆ, ನೀನು ರಣಾಗ್ರಕ್ಕೆ ಹೊರಟು ಬರುವ ಕಾಲದಲ್ಲಿ ನಿನ್ನ ಸತಿಯಾದ ದ್ರೌಪದಿಗೆ ಕರ್ಣನ ಕೊಂದು ಬರುತ್ತೇನೆಂದು ಹೇಳಿ ಬಂದಿರಬಹುದು. ಪುನಹ ಹಿಂದಕ್ಕೆ ಹೋಗಿ ನಾರಿಗೆ ಮೋರೆಯನ್ನು ಹ್ಯಾಗೆ ತೋರುವೆಯೊ ಮೂದೇವಿ ॥

ಭಾಮಿನಿ

ಹರಿದು ಬಿಸುಡುವೆ ತಲೆಯನೆಂದಡೆ ಪರಮ ಪತಿವ್ರತೆ ಮಾತೆಗಿತ್ತೆನು
ಪರಮ ಭಾಷೆಯನದಕೆ ಅಂಜುವೆ ಮೂಢ ಹೋಗೆಂದ ॥

ಕರ್ಣ : ಯಲಾ ಧರ್ಮಜ, ನಿನ್ನನ್ನು ಯೀಗಲೆ ಕೊಲ್ಲುತ್ತಾಯಿದ್ದೆ. ಯೇನು ಮಾಡಲಿ ಪೂರ್ವದಲ್ಲಿ ಪತಿವ್ರತೆಯಳಾದ ಮಾತೋಶ್ರೀಯವರಿಗೆ ನಾನು ಕೊಟ್ಟಿರುವ ವಾಗ್ದಾನದ ಮೇಲೆ ಮತ್ತು ನನಗೆ ಸಾರಥಿಯಾಗಿರುವ ಶಲ್ಯ ನೃಪಾಲನ ಹೇಳಿಕೆಯಿಂದಲೂ ಬಿಟ್ಟಿದ್ದೇನೆ.

ಭಾಮಿನಿ

ಯಲೆಲೋ ಬಾಹಿರ ನಿನ್ನ ಬಲುಹನು ಯಿನಿತು ತಿಳಿದು
ಪೊರೆವೆ ಮರಳಿ ಶರವನು ಬಿಡದೆ ಹಿಂದಕೆ ತೆಗೆಯುವೆನು
ಪೊಲೆಯ ಹೋಗೆಂದಾಗ ವದ್ದನು ಜನಪನನು ಕಲಿ ಕರ್ಣ ॥

ಕರ್ಣ : ಯಲಾ ಮಂದಮತಿಯಾದ ಧರ್ಮಜನೆ, ನಿನ್ನ ಕಂಠಕ್ಕೆ ಚಾಚಿರುವ ಖಡ್ಗವನ್ನು ಹಿಂದಕ್ಕೆ ತೆಗೆದುಕೊಂಡು ಯಡಗಾಲಿನಿಂದ ವದ್ದೂ ಯಿರುತ್ತೇನೆ. ಹೊರಟು ಹೋಗು. ಅಯ್ಯ ಶಲ್ಯ ಭೂಪತಿ ಯಿವತ್ತಿನ ಸಮರ ಜನಪ್ರದವಾಯಿತು. ವೇಳೆಯು ಬಹಳವಾದ ಕಾರಣ ಆಹ್ನೀಕಗಳನ್ನು ಪೂರೈಸಿಕೊಂಡು ಬರೋಣ ನಡಿ.

ಧರ್ಮಜ : ಅಯ್ಯ ಚಾರಕ, ಯೀ ದಿವಸ ಧುರದಲ್ಲಿ ಅಪಜಯ ಬಂದ ಹಾಗಾಯಿತು.

ಸಾರಥಿ : ಅಪಜಯ ಬಂದ ಹಾಗಾಯಿತು ನೀನೇ ನೋಡಪ್ಪ. ಅಮ್ಮಯ್ಯನವರು ಬರುವಾಗಲೆ ಹೇಳಲಿಲ್ಲವೆ ಹೋಗಬೇಡಿ ಯಂದು. ಕಾಲಕೆರೆದುಕೊಂಡು ಕರ್ಣನ ಕೊಚ್ಚುತ್ತೇನೆ ಕಡಿಯುತ್ತೇನೆ ಯಂದು ವದರಿಕೊಂಡು ಬಂದೆಯಲ್ಲಪ್ಪ, ಕರ್ಣಪ್ಪನ ಕೈಗಾರಿಕೆ ಹ್ಯಾಗಿದೆ ನೋಡಪ್ಪಾ.

ಧರ್ಮಜ : ಸಾರಥಿ ಹೀಗೆಯೇ ಆಗುತ್ತೆಂದು ಹ್ಯಾಗೆ ತಿಳಿಯಬೇಕಾಗಿತ್ತು.

ಸಾರಥಿ : ಅಹುದಹುದು, ನನಗೇನು ಯೇಟು ತಿಂದವರು ನೀವು. ತಿಂದಿರಿ ಹೋಗಲಿ ಬಿಡಿರಪ್ಪಾ ಯಲ್ಯಪ್ಪ ಯಿವತ್ತಿಗೆ ತಿಂಗಳು ತುಂಬಿತು ನನ್ನ ಸಂಬಳ ಕೊಟ್ಟು ಬಿಡಿ.

ಧರ್ಮಜ : ಯಲಾ ಹನುಮನಾಯ್ಕ. ಗುರುತು ಪರಿಚಯವಿಲ್ಲದೆ ಯಿದ್ದರೆ ನನಗೆ ಆಗೋದಿಲ್ಲ ಅರಮನೆಗೆ ಹೋಗೋಣ ನಡಿಯಪ್ಪ.

ಸಾರಥಿ : ಅಪ್ಪೋ ಧರ್ಮಜಪ್ಪ ಬಿಡಪ್ಪ ಹಾಗಾದರೆ ಹಾಗೆ ಮಾಡಿರಿ ರಥವನ್ನು ಬಿಡುತ್ತೇನೆ.

ಭಾಮಿನಿ

ಅತ್ತ ಕರ್ಣನು ಧರ್ಮಜನ ಮೂದಲಿಸಿ ಮಾನವ ಕಳೆದು ಪೋಗಲು
ಯಿತ್ತ ಸಾರಥಿ ಜನಪನಿರವನು ನೋಡಿ ತಿರುಗಿಸಿದ ಪಾಳೆಯಕೆ
ರಥವಾಗ ಬೇಗದಲಿ ಪೃಥ್ವೀಪತಿ ಕೇಳತ್ತ ಸಮಸಪ್ತಕರು
ಕಂಡಾಗ ಸವ್ಯಸಾಚಿಯ ರಥವ ನಡೆಸಿದರೆ ಪಾರ್ಥನೊಳೆಂದರದಟಿನಲಿ ॥

ದೈತ್ಯರು : ಅಯ್ಯ ಭಾಗವತರೆ, ಯೀ ರಣಮಂಡಲದಲ್ಲಿ ಅರ್ಜುನನನ್ನು ಕಂಡ ಹಾಗಾಯಿತಲ್ಲಾ ಯಿವನ ರಥವನ್ನು ಅಡ್ಡೈಸಿ ಸಂಹಾರ ಮಾಡಿ ಕೌರವನ ಕೊರತೆಯನ್ನು ನೆರವೇರಿಸುತ್ತೇನೆ ನೋಡಿರಿ. ಯಲಾ ಅರ್ಜುನ ಅಲ್ಲೇ ನಿಲ್ಲಿಸು. ನಿನ್ನ ರಥವನ್ನೂ ಮುಂದಕ್ಕೆ ಬಿಡಬೇಡ ಹುಷಾರ್ ಹೇಳುತ್ತೇನೆ.

ಪದ

ಪೋಗುವೆ ಯಲ್ಲಿಗೆ ನರನೆ ನೀನೀಗ ಪೇಳೋ ಪಾಮರನೆ
ಕಾಗೆಗಂಚುವೆ ನಿನ್ನೊಡಲು ಯನುತಾಗ ಶರಮಳೆಯನು ಬಿಡಲು ॥

ರಾಕ್ಷಸರು : ಯಲಾ ಪಾಮರನಾದ ಅರ್ಜುನನೆ, ಮುಂದಕ್ಕೆ ಎಲ್ಲಿಗೆ ಹೋಗುತ್ತೀಯ. ಅಲ್ಲೇ ನಿಂತು ಮಾತನಾಡು. ಯೀ ದಿವಸ ನಿನ್ನ ವುದರವನ್ನು ಬಗೆದು ಹದ್ದು ಕಾಗೆಗಳ ಪಾಲು ಮಾಡುವೆ. ದುರುಳನೆ ಶರಗಳನ್ನು ಬಿಟ್ಟಿರುವೆ ತರಹರಿಸಿಕೊಳ್ಳುವಂಥವನಾಗು.

ಪದ

ಸುರೆಗುಡಿಕರಿರ ಮಾತಾಡಿ ನಿಮ್ಮ ಶಿರಗಳನೀಗ ಕೊಚ್ಯಾಡಿ
ತರಹರಿಸಿರಿ ಯಿದನೆನುತ ಪಾರ್ಥ ನಸುನಗುತ

ಅರ್ಜುನ : ಯಲವೊ ಸುರಗುಡಿಕರಾದ ಸಮಸಪ್ತಕರೆ, ನಿಮ್ಮ ಶೌರ‌್ಯವನ್ನು ಮೀರಿ ನನ್ನಲ್ಲಿ ತೋರಿಸಿ ಶಿರಗಳನ್ನೂ ಕಳೆದುಕೊಳ್ಳಬ್ಯಾಡಿರಿ. ಅನೇಕ ಶರಗಳನ್ನು ಕರೆದಿರುತ್ತೇನೆ ತರಹರಿಸಿಕೊಳ್ಳುವಂಥವರಾಗಿ.

ಪದ

ನಂದಗೋಪನ ಮಗನಿಹನೊ ಯೆಂದೆಂಬುವ ಗರ್ವದಿ ನೀನು
ಬಂದಿದಿರಾದೆಯೊ ಖೂಳ ಯೆನುತೆಸೆದರು ಶರಗಳ ಬಹಳ ॥

ದೈತ್ಯರು : ಯಲಾ ರಣಹೇಡಿಯಾದ ನರನೆ, ನಂದಗೋಪಾಲನ ಮಗನಾದ ಯೀ ದನಾ ಕಾಯುವ ಗೊಲ್ಲ ಕಳ್ಳ ಕೃಷ್ಣನು, ಬೆಂಬಲವಾಗಿ ಯಿರುತ್ತಾನೆಂಬ ಗರ್ವದಿಂದ ನಿನಗೆ ಹೆಮ್ಮೆಯಿರುವುದು ಕಂಡಿಯೋ ಮೂದೇವಿ. ನಿನ್ನ ಪಾಡು ಕಾಡು ಪಾಲಾಗುವುದು ಖಂಡಿತ. ನಿಮ್ಮ ಯಿಬ್ಬರ ಮೇಲೆ ಅನೇಕ ಶರಗಳನ್ನು ಅಭಿಮಂತ್ರಿಸಿ ಬಿಟ್ಟು ಯಿರುತ್ತೇನೆ ಸೈರಿಸಿಕೊಳ್ಳುವಂಥವನಾಗು ॥

ಪದ

ಕಿಡಿಗೆದರುತ ಕಲಿ ಪಾರ್ಥನು ಧನು ಜಡಿದು ಬಿಟ್ಟ ದಿವ್ಯಾಸ್ತ್ರವನು
ಕಡಿದು ದೈತ್ಯನ ಸಿರವ ಬಹುಪಡೆಯ ಕೊಂದ ಸಾವಿರವ ॥

ಅರ್ಜುನ : ಯಲಾ ದೈತ್ಯ, ನೀನು ಬಿಟ್ಟಂಥ ಶರಗಳನ್ನೂ ಪರಿಹರಿಸಿಕೊಂಡು ನಿಮ್ಮ ಶಿರಗಳನ್ನು ಹಾರಿಸುವ ಪ್ರತಿ ಶರಗಳನ್ನೂ ಪ್ರಯೋಗಿಸಿ ಯಿರುತ್ತೇನೆ. ರಣಾಗ್ರಕ್ಕೆ ಯದುರಾಗು ಮೂದೇವಿ.

 

(ಸಮಸಪ್ತಕರು ಬೀಳುವರು)

ಅರ್ಜುನ : ಯಲಾ ದೈತ್ಯ, ಯೀ ಅರ್ಜುನನ ಸಾಹಸವು ಹ್ಯಾಗಿದೆ ಗೊತ್ತಾಯಿತೊ ದಗಡಿ. ನಿನ್ನ ಪಾಡು ಕಾಡು ಪಾಲಾಗುವುದು ಖಂಡಿತ ॥

ಪದ

ಧರಣಿಗುರುಳೆ ಆ ಖಳರು ಹರಿ ತಿರುಗಿಸಿದ ರಥವನ್ನು
ನರಗಾದುದು ವುರಿತಾಪ ಹರಿಚರಣಕೆರಗಿ ಪೇಳಿದನು ॥

ಅರ್ಜುನ : ಭಾವಯ್ಯ ಶ್ರೀ ಹರಿಯೆ, ಯೀ ಸಮಯದಲ್ಲಿ ಯಾಕೋ ನನಗೆ ವುದರದಲ್ಲಿ ವುರಿತಾಪವುಂಟಾಗಿ ದಹಿಸುತ್ತಿರುವುದು. ಲಕ್ಷ್ಮೀಲೋಲನೆ ಅನಾಥ ರಕ್ಷಕ ಅರಿಕೆ ಮಾಡಿಕೊಳ್ಳುತ್ತೇನೆ.

ಪದ

ಕೇಳೋ ಮುರರಿಪು ಕಮಲಲೋಚನ ತಾಳಲಾರೆನು ಪೇಳ್ವೆದುರಿಯನು
ವಡಲು ಸುಡುತಿದೆ ತಡೆಯಲಾರೆನು ಪೊಡವಿಪಾಲನ ವರ್ತಮಾನವ ॥

ಅರ್ಜುನ : ಮುರವೈರಿಯಾದ ಕಮಲಲೋಚನನೆ, ನನ್ನ ಶರೀರ ಯಾವತ್ತು ಜಾಜ್ವಲ್ಯಮಾನವಾಗಿ ಬೆಂದು ಹೋಗುತ್ತಿರುವುದು. ಸಹಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಅಗ್ರಜರಾದ ಧರ್ಮರಾಯರು ಕರ್ಣನ ಮೇಲೆ ರಣಾಗ್ರಕ್ಕೆ ಹೋಗಿದ್ದರು. ಅವರ ಸಮಾಚಾರ ಯಾವುದೂ ತಿಳಿಯಲಿಲ್ಲ. ಹೀಗಾಗಲು ಕಾರಣವೇನು ಕರುಣಾಕರನೆ ಭಾವಯ್ಯ ಅರಿಕೆ ಮಾಡಿಕೊಳ್ಳುತ್ತೇನೆ.

ಪದ

ಮಾಧವ ಅಣ್ಣನಿರವನು ಕಡುಪರಾಕ್ರಮಿ ಖೂಳ ರವಿಜನೂ
ಯೇನ ಗೈದನೊ ಮಾನವೇಂದ್ರನ ದೀನರಕ್ಷಕ ಪೇಳು ಶೀಘ್ರದಿ ॥

ಅರ್ಜುನ : ಹೇ ಮಾಧವ ಭಾವಯ್ಯ, ಕಡು ಪರಾಕ್ರಮಿಯಾದ ಕರ್ಣನ ಮೇಲೆ ಅಗ್ರಜರಾದ ಧರ್ಮರಾಯರು ರಣಾಗ್ರಕ್ಕೆ ಹೋಗಿದ್ದರಷ್ಟೆ. ಧರ್ಮರಾಯರು ಅಬಲರು ಕರ್ಣನು ಬಲಾಢ್ಯನು. ಹೀಗಿರುವಲ್ಲಿ ಅಗ್ರಜರಿಗೆ ಯೇನಾದರು ಅವನಿಂದ ಅಪಾಯ ಸಂಭವಿಸಿದೆಯೋ ಹ್ಯಾಗೆ. ವಂಚನೆಯಿಲ್ಲದೆ ಹೇಳುವಂಥವರಾಗಿರಿ ಅರಿಕೆ ಮಾಡುವೆನು॥

ಪದ

ಹಿಂದೆ ತರಳನು ಮಡಿದ ದಿವಸದ ಅಂದವಾಗಿದೆ ಶರೀರ ತಾಪವು
ಯನುತಾಗ ಪಾರ್ಥನು ಬಂದು ಹೊರಳಿದ ಹರಿಯ ಚರಣದಿ ॥

ಅರ್ಜುನ : ಭಾವಯ್ಯ, ಹಿಂದೆ ಚಕ್ರವ್ಯೆಹದ ಕೋಟೆಯಲ್ಲಿ ನನ್ನ ಮಗುವಾದ ಅಭಿಮನ್ಯು ಮೃತಪಟ್ಟಾಗ ಯಾವ ರೀತಿ ಪರಿತಾಪ ವುದ್ಭವಿಸಿತ್ತೊ, ಅದೇ ರೀತಿಯಾಗಿ ದಹಿಸುತ್ತಿರುವುದು. ಭಾವಯ್ಯ ಶ್ರೀಹರಿಯೆ ಲಕ್ಷ್ಮೀಲೋಲನೆ ನನ್ನ ಕರುಳು ಸಂಬಂಧಕ್ಕೆ ಕಷ್ಟ ವದಗದೆ ಯಿದ್ದರೆ ನನಗೀ ಅವಸ್ಥೆ ವದಗಲು ಕಾರಣವಿಲ್ಲ. ಕರುಣಾಕರನೆ ಇದರ ನಿಜಸ್ಥಿತಿಯನ್ನು ಮರೆಮಾಜದೆ ಹೇಳುವಂಥವರಾಗಿರಿ ಭಾವಯ್ಯ

ಭಾಮಿನಿ

ಹರಿಯು ನೋಡಿದ ಕರುಣ ದೃಷ್ಟಿಯೋಳ್ ನರನ ಮಸ್ತಕವನ್ನು
ನೆಗಹುತ ಒರೆದ ಕರ್ಣನ ಶೌರ‌್ಯವನು ಧರ್ಮಜನ ದುಕ್ಕವನು ॥

ಕೃಷ್ಣ : ಅಯ್ಯ ಅರ್ಜುನ, ಯಾತಕ್ಕೆ ಚಿಂತೆಯನ್ನು ಮಾಡುತ್ತೀಯ. ನಿಮ್ಮ ಅಗ್ರಜನಾದ ಧರ್ಮರಾಜನಿಗೆ ಸಂಭವಿಸಿದ ಕಷ್ಟವನ್ನು ಪ್ರಮುಖನಾದ ಕರ್ಣನಿಗೆ ವದಗಿದ ಶೌರ‌್ಯವನ್ನು ಸಾಂಗವಾಗಿ ಹೇಳುತ್ತೇನೆ ॥

ಭಾಮಿನಿ

ನರನೆ ಕೇಳೈ ಧರ್ಮತನಯನು ಬೆರಸಿ ತುಡುಕಿದ ಕರ್ಣನೊಳು
ಹರಣ ಮಾತ್ರದಿ ವುಳಿದನು ಕೇಳೆಂದನಸುರಾರಿ ॥

ಕೃಷ್ಣ : ಹೇ ನರನಾದ ಅರ್ಜುನನೆ ಕೇಳು. ಕರ್ಣನಲ್ಲಿ ಧರ್ಮರಾಯನು ಯುದ್ಧವನ್ನು ಮಾಡಿ ಜೀವ ಸಹಿತ ಬದುಕಿಕೊಂಡಿರುವುದೆ ದುರ್ಲಭವಾಗಿರುವುದು. ನಡೆದ ಸಂಗತಿಯನ್ನು ಸಾಂಗವಾಗಿ ಹೇಳುವೆನು ಕೇಳು.

ಪದ

ಕೇಳೈಯ್ಯ ಪಾರ್ಥ ನಾ ಪೇಳಲಂಜುವೆನೈಯ್ಯ
ಖೂಳ ರಾಧೇಯನೋಳ್ಕಾದಿ ಮೂರ್ಛಿಸಿದನು॥

ಕೃಷ್ಣ : ಅಯ್ಯ ಅರ್ಜುನ, ನಿಮ್ಮ ಅಗ್ರಜನಾದ ಧರ್ಮಜನಿಗೆ ಸಂಭವಿಸಿದ ಕಷ್ಟವನ್ನು ಸಂದೇಹವಿಲ್ಲದೆ ಹೇಳುತ್ತೇನೆ. ರಾಧೇಯನಾದ ಕರ್ಣನಲ್ಲಿ ನಿಮ್ಮ ಅಣ್ಣನಾದ ಧರ್ಮರಾಯನು ತನ್ನ ಶಕ್ತಿಯನ್ನು ಮೀರಿ ಯುದ್ಧ ಮಾಡಿ ಕಡೆಗೆ ಸೋತು ಮೂರ್ಛೆ ಹೊಂದುವಂಥವನಾದ.

ಅರ್ಜುನ : ಭಾವಯ್ಯ, ಅಗ್ರಜರು ಮೂರ್ಛೆಯಾಗುವಂಥಾದ್ದು ಏನಾಯಿತು ಅಪ್ಪಣೆಯಾಗಲಿ.

ಪದ

ಬಿಲ್ಲು ಕೊಪ್ಪಿನೊಳಾಗ ಯದೆಗಿರಿದನು ಕೇಳೊ ಸವ್ಯಸಾಚಿ
ಜಳ್ಳು ಭೀಮಾರ್ಜುನರೆಲ್ಲಿ ತೋರೆಂದನು ಸವ್ಯಸಾಚಿ ॥

ಕೃಷ್ಣ : ಅಯ್ಯ ಅರ್ಜುನ, ನಿಮ್ಮಗ್ರಜನು ಮೂರ್ಛೆಯಾಗೋಣ, ಕಡುಪರಾಕ್ರಮಿಯಾದ ಕರ್ಣನು ತನ್ನ ಕೈಯಲ್ಲಿ ಯಿದ್ದ ಬಿಲ್ಲಿನ ತುದಿಯಿಂದ ಯದೆಗೆ ಯಿರಿದಿರಿದು, ಜಳ್ಳುಗಳಾದ ನಿನ್ನ ತಮ್ಮದಿರು ಯೆಲ್ಲಿ ಯೆಂಬುದಾಗಿ ಮೂದಲಿಸಿ ಮಾನವನ್ನೂ ಕಳೆದಂಥವನಾದನೈಯ್ಯ ಅರ್ಜುನ.

ಅರ್ಜುನ : ಭಾವಯ್ಯ ಅನಂತರ ಯೇನಾಯ್ತು.

ಪದ

ಯಡಗಾಲ ತುದಿಯಿಂದ ಒದ್ದು ಮೂದಲಿಸಿದ ಸವ್ಯಸಾಚಿ
ಕಡುಪರಾಕ್ರಮಿ ಕೇಳೊ ಕರ್ಣನು ರಣದೊಳು ಸವ್ಯಸಾಚಿ ॥

ಕೃಷ್ಣ : ಅಯ್ಯ ಅರ್ಜುನ, ಕಡುಪರಾಕ್ರಮಿಯಾದ ಕರ್ಣನು ಧರ್ಮಜನನ್ನು, ಯಡಗಾಲಿನಿಂದ ವದ್ದು ಮೂದಲಿಸಿ ಬಹಳತರವಾಗಿ ಜರಿದು ಹೀಯಾಳಿಸಿದನೈಯ್ಯ ಅರ್ಜುನ ಹೇಳುತ್ತೇನೆ.

ಪದ

ಅರಸನುದರದ ಮೇಲೆ ಕುಳಿತು ಮೂದಲಿಸಿದ ಕಡುಪರಾಕ್ರಮಿ
ಕೇಳೋ ಕರ್ಣನು ರಣದೊಳು ಸವ್ಯಸಾಚಿ ॥

ಕೃಷ್ಣ : ಅಯ್ಯ ಅರ್ಜುನ, ಕರ್ಣನು ಧರ್ಮರಾಯನನ್ನು ಮೂದಲಿಸಿ ಯದೆಯ ಮೇಲೆ ಕುಳಿತುಕೊಂಡು ಖಡ್ಗವನ್ನು ಚಾಚಿ ಪ್ರಾಣವನ್ನು ಕಳೆಯುವುದಕ್ಕೆ ಪ್ರಯತ್ನಪಡುವಂಥವನಾದನಯ್ಯ ಅರ್ಜುನ.

ಅರ್ಜುನ : ಭಾವಯ್ಯ, ಕರ್ಣನು ಅಗ್ರಜನ ಪ್ರಾಣವನ್ನು ಕಳೆಯುವುದಕ್ಕೆ ಪ್ರಯತ್ನಪಟ್ಟಾಗ್ಗೆ ಅಲ್ಲಿ ಯಿದ್ದವರು ಯಾರಾದರು ಬಿಡಿಸಲಿಲ್ಲವೆ ಭಾವಯ್ಯ.

ಪದ

ಒಡನಿಹ ಶಲ್ಯನು ಬಿಡಿಸಿಕೊಂಡನು ಕೇಳು
ಕಡು ಪರಾಕ್ರಮಿ ಕೇಳೋ ನೀನಿದಿರೆ ಅವರಿಗೆ ಸವ್ಯಸಾಚಿ ॥

ಕೃಷ್ಣ : ಅಯ್ಯ ಅರ್ಜುನ, ಆ ಕಾಲದಲ್ಲಿ ಮದ್ರದೇಶಕ್ಕೆ ದೊರೆಯಾದ ಶಲ್ಯನೂ ಕನಿಕರಪಟ್ಟ. ಥವನಾಗಿ ಕರ್ಣನಿಗೆ ಬಹುತರವಾಗಿ ನೀತಿ ಮಾರ್ಗವನ್ನು ಹೇಳಿ ಕಾಪಾಡಿ ಕಳುಹಿಸಿರುತ್ತಾನೆ. ಆದರೆ ಕರ್ಣನ ಪರಾಕ್ರಮವನ್ನು ಯೆಷ್ಟು ಹೇಳಿದರು ತೀರಲಿಲ್ಲಯ್ಯ ಅರ್ಜುನ.

ಭಾಮಿನಿ

ಹರಿಯ ನುಡಿಯನು ಕೇಳಿ ಫಲುಗುಣ ಮರುಗುತಲಿ ತಾ ನುಡಿದನಾಕ್ಷಣ
ಮರಳಿಸೈ ಮಾಧವನೆ ರಥವನು ಪಾಳೆಯಕೆ ಯಂದ ॥

ಅರ್ಜುನ : ಭಾವಯ್ಯ, ಅಗ್ರಜರಿಗೆ ಸಂಭವಿಸಿದ ಕಷ್ಟವನ್ನು ಕೇಳಿ ಮತ್ತಷ್ಟು ವುದರದಲ್ಲಿ ವುರಿತಾಪ ಹೆಚ್ಚುವುದಾಯ್ತು. ಅಚ್ಯುತನೆ ಅರಘಳಿಗೆಯು ಯಿಲ್ಲಿ ಯಿರಕೂಡದು. ಅಣ್ಣಯ್ಯನವರನ್ನು ನೋಡುವವರೆಗೂ ಮನಸ್ಸಿಗೆ ಕೊರತೆಗೆ ಕಾರಣವಾಯಿತು. ಪಾಳೆಯಕ್ಕೆ ಅಣ್ಣಯ್ಯನವರ ಸನ್ನಿಧಾನಕ್ಕೆ ರಥವನ್ನು ಬಿಡುವಂಥವರಾಗಿರಿ.

ಭಾಮಿನಿ

ಬರುತ ಕುರುಬಲದೊಳಗೆ ಯಿರುವ ಮರುತಸುತನನು ಕಂಡು
ಫಲುಗುಣ ಯರಗುತಲಿ ಪಾದದಲಿ ಬಿದ್ದು ಹೊರಳಿದನು

ಅರ್ಜುನ : ಅಣ್ಣಯ್ಯ ಸಹಜಾತ, ನನ್ನಿಂದ ನಿಮ್ಮ ಪಾದಕ್ಕೆ ನಮಸ್ಕಾರ ಬರುತ್ತದೆ.

ಭೀಮ : ಭಾವಯ್ಯ, ನೀನು ಅರ್ಜುನ ಇಬ್ಬರೂ ಸಮಸಪ್ತಕರ ಮೇಲೆ ಪಾತಾಳ ಲೋಕಕ್ಕೆ ಹೋಗಿದ್ದಿರಲ್ಲ. ಜಯವನ್ನು ಹೊಂದಿ ಬಂದಿರೊ ಹೇಗೆ ಹೇಳುವಂತವರಾಗಿ.

ಅರ್ಜುನ : ಭಾವಯ್ಯನವರು ಸಹಾಯವಾಗಿರುವಾಗ್ಗೆ ಅಪಜಯವುಂಟೆ. ಜಯಶೀಲರಾಗಿ ಬಂದಿರುವೆವು. ಆದರೆ ನನ್ನದೊಂದು ವಿಜ್ಞಾಪನೆಯಿರುವುದು.

ಭೀಮ : ಅಯ್ಯ ಪಾರ್ಥ ಅದೇನು ಹೇಳುವನಾಗು.

ಪದ

ಅಣ್ಣ ಕೇಳ್ ಧರ್ಮಜನಲ್ಲಿಗೆ ನಡೆಬೇಗ ದಮ್ಮಯ್ಯ ಕೇಳೋ ನೀನು
ಸುಮ್ಮನಿರಿಸು ನಾನಾ ಬಗೆಯೊಳುಪಚರಿಸು ಮೌನದೊಳಿಹಮಾಪನ ॥

ಅರ್ಜುನ : ಹೇ ಅಗ್ರಜನಾದ ಭೀಮಸೇನನೆ ಲಾಲಿಸು. ಅಗ್ರಜರಾದ ಧರ್ಮರಾಯರು ಕರ್ಣನ ಮೇಲೆ ರಣಾಗ್ರಕ್ಕೆ ಹೋಗಿದ್ದರಷ್ಟೆ. ಕರ್ಣನಾಗಿರುವಂಥವನು ಅಗ್ರಜನನ್ನು ಸೋಲಿಸಿ ಅವಮಾನ ಮಾಡಿ ದೂಡಿ ಹೋಗಿರುತ್ತಾನೆ. ಅಗ್ರಜನು ಕರ್ಣನಿಂದ ಪೆಟ್ಟುತಿಂದು ಪಾಳೆಯಕ್ಕೆ ಬಂದು ನರಳುತ್ತಿರುವರಂತೆ ವೋಡಿ ಹೋಗಿ ಕಾಪಾಡಬಾರದೆ ಅಗ್ರಜ.

ಭೀಮ : ಸಹಜಾತನಾದ ಅರ್ಜುನನೆ, ನಾನು ನನ್ನ ವೈರಿಯಾದ ದುಶ್ಯಾಸನನನ್ನೂ ಸಂಹಾರ ಮಾಡಬೇಕೆಂದು ಯೀ ಕುರುಕ್ಷೇತ್ರದಲ್ಲಿ ಅರಸುತ್ತಿರುವೆನು. ಅಗ್ರಜರನ್ನೂ ವುಪಚರಿಸುವುದಕ್ಕೆ ನಾನು ಹೇಗೆ ಹೋಗಲಿ. ನೀನು ಹೋಗಿ ಅಗ್ರಜನನ್ನು ಸಂತೈಸಿಕೊಳ್ಳುವಂಥವನಾಗು.

ಅರ್ಜುನ : ಅಗ್ರಜ ಅರಿಕೆ ಮಾಡಿಕೊಳ್ಳುತ್ತೇನೆ.

ಪದ

ಕುರುಬಲವನು ನಾನು ತರಿದು ಕಾದುತಲಿಹೆ ಬರುವತನಕ ನೀನು
ಪರಮ ಕೃಪಾನಿಧಿ ಹೋಗೆಂದೆನಲು ಕೇಳಿ ವುರಿಯನುಗುಳಿದ ಭೀಮ ॥

ಅರ್ಜುನ : ಅಗ್ರಜಾ ನಿಮಗೆ ಬದಲಾಗಿ ನಾನು ಯೀ ಕುರುಕ್ಷೇತ್ರದಲ್ಲಿ, ನೀವು ಅಣ್ಣಯ್ಯನವರನ್ನು ಕಂಣಿನಿಂದ ಕಂಡು ಬರುವವರೆಗೂ ಯುದ್ಧ ಮಾಡುತ್ತಾ ಯಿರುತ್ತೇನೆ. ಯೀ ಕ್ಷಣವೆ ಹೋಗಿ ವುಪಚರಿಸಿಕೊಂಡು ಬರುವರಾಗಿರಿ.

ಭೀಮ : ಯಲಾ ಅರ್ಜುನ ಶಹಬಾಸ್. ನೀನು ಯಿಲ್ಲಿ ರಣಾಗ್ರವನ್ನು ಮಾಡು. ನಾನು ಮುಟ್ಟಾಳ ಅಗ್ರಜನನ್ನು ಸಂತೈಸುವುದಕ್ಕೆ ಹೋಗುತ್ತೇನೆ. ದಗಡಿ, ನಿನ್ನ ಕಣ್ಣಿಗೆ ಹಾಗೆ ಕಂಡೆನೆ ಹಾಗಾದರೆ ಹೇಳುತ್ತೇನೆ.

ಪದ

ಸಾರಿ ಬಗುಳಲಿಬ್ಯಾಡ ನಿನ್ನನು ಮಹಾವೀರನೆನುತ ಪೆತ್ತಳೆ ನಾರಿ
ಯೆಂದೆನುತೆನ್ನಾ ಪಡೆದಳೆ ಜನನಿಯು ಚೋರನೆ ನಾನೆಂದ ॥

ಭೀಮ : ಯಲಾ ಅರ್ಜುನ, ನಮ್ಮ ತಾಯಿಯಾದ ಕುಂತಿದೇವಿಯು ನಿನ್ನನ್ನು ಗಂಡು ಯೆಂಬುದಾಗಿಯೂ, ನನ್ನನ್ನು ಹೆಣ್ಣು ಯೆಂಬುದಾಗಿಯೂ ಹಡೆದಿರಬಹುದು. ಅದಕ್ಕಿಂಥ ಮಾತು ಬಗುಳುತ್ತೀಯ. ಹೇ ದಗಡಿ ಹೋಗು ಹೋಗು ನಾನು ಬಲ್ಲೆ ॥

ಅರ್ಜುನ : ಅಗ್ರಜ, ಯಿಹಪರವನ್ನು ತಿಳಿಯದೆ ಮಾತನಾಡಿದರೆ ಪ್ರಯೋಜನವೇನು. ಹೇ ನಿಷ್ಕರುಣಿಯೆ ಹಾಗಾದರೆ ಅಗ್ರಜರಾದ ಧರ್ಮರಾಯರಲ್ಲಿ ನಿನಗೇನು ಪ್ರೇಮವಿಲ್ಲವೊ.

ಭೀಮ : ಯಲಾ ಅರ್ಜುನ ನಾನು ನಿಷ್ಕರುಣಿಯೆ ಹೇಳುವೆನು.

ಪದ

ಅಗ್ರಜನೊಳು ಪ್ರೇಮವಿದ್ದರೆ ನೀ ಪೋಗಿ ಶೀಘ್ರದಿ ಸಂತೈಸು
ನಿಗ್ರಹಿಸಿ ಬಹೆ ಕುರುಕುಲ ಬಲವನು ನಾನು ಸ್ವರ್ಗಕ್ಕೆ ಸೇರಿಸುವೆ ॥

ಭೀಮ : ಯಲಾ ಅರ್ಜುನ, ಅಗ್ರಜನಾದ ಧರ್ಮರಾಯರಲ್ಲಿ ನಿನಗಿಷ್ಟು ಪ್ರೇಮವಿದ್ದರೆ ಯೀ ಕ್ಷಣವೆ ಹೋಗಿ ಸಂತೈಸಬಹುದು. ನಾನು ಕುರುಬಲದಲ್ಲಿ ನನ್ನ ವೈರಿಯಾದ ದುಶ್ಯಾಸನನನ್ನು ಸಂಹಾರ ಮಾಡುವವರೆವಿಗು ಬರತಕ್ಕವನಲ್ಲ ಹೊರಟುಹೋಗು.

ಕೃಷ್ಣ : ಅಯ್ಯ ಅರ್ಜುನ, ಯೀ ಭೀಮಸೇನನ ಮರ್ಜಿಯನ್ನೂ ಕಂಡ ಹಾಗಾಯಿತು. ನಿನ್ನ ನನ್ನ ಮಾತುಗಳ್ಯಾವುದೂ ಯಿವನಲ್ಲಿ ನಡೆಯುವುದೆ. ಚಿಂತೆಯಿಲ್ಲ ಯೀತನು ಯೀ ಕುರುಬಲದಲ್ಲಿಯೇ ಯುದ್ಧ ಮಾಡಲಿ. ನಾವು ಸತ್ಯಸಂಧನಾದ ಧರ್ಮರಾಯನ ಬಳಿಗೆ ಹೋಗೋಣ ನಡಿ.

ಭಾಮಿನಿ

ಯಂದ ಮಾರುತಿಯ ನುಡಿಗೇಳುತ ಮುರಹರನಂದು ತೋಷಿಷಿದ
ನಾಗಸ್ಯಂದನ ತಿರುಹುತ ಬಂದು ಕಂಡನು ಯಮನಂದನನಿರವನಾಗ