ಕೃಷ್ಣ : ಅಯ್ಯ ಧರ್ಮಜ ಸತ್ಯಸಂಧನೆ ಯುದಿಷ್ಟಿರ ಭೂಪಾಲ. ಆಹಾ ಯೀ ಧರ್ಮಜನು ಯೆಷ್ಟು ಮಾತನಾಡಿಸಿದರೂ ಪ್ರಜ್ಞೆ ತಪ್ಪಿ ನರಳುತ್ತಿರುವನಲ್ಲ. ಸರಳಿನಿಂದ ದುರುಳನು ಹೊಡೆದಿರುವ ಪೆಟ್ಟುಗಳನ್ನು ನೋಡಲಾರೆನಲ್ಲಾ ಶಿವ ಶಿವ ಶಂಕರ ಗೌರೀಪತಿ.

ಭಾಮಿನಿ

ಬಂದು ನೋಡುತ ಹರಿಯು ಕರುಣದಿಂತೆಂದ ನಿನಗೀ
ಬವಣೆಯಾಯಿತು ಮಂದಮತಿ ತಾನಿಂತುಗೈದನೆ ಭಾಸ್ಕರನ ಸೂನು ॥

ಕೃಷ್ಣ : ಹೇ ಧರ್ಮಜನೆ, ಮಂದಮತಿಯಾದ ಕರ್ಣನು ಅಂಧಕನ ಹುಡುಗನಿಗೋಸ್ಕರ ನಿನಗಿಷ್ಟು ಕುಂದಕವನ್ನು ಕೊಟ್ಟು ಕಷ್ಟಪಡಿಸಿದನೆ ಯಿರಲಿ.

ಭಾಮಿನಿ

ಯಂದು ಕಂಬನಿದುಂಬಿ ಭೂಪನನಂದು ಮೈದಡಹುತಲಿ
ಮಂದಭಾಗ್ಯನು ತಾನು ತನ್ನವರ್ಗಾನಿಯಾಯ್ತೆಂದ ॥

ಕೃಷ್ಣ : ಅಯ್ಯ ಧರ್ಮಜ, ಮಂದಭಾಗ್ಯನಾದ ಯನ್ನನ್ನು ನಂಬಿಕೊಂಡು ಯಿದ್ದ ನಿನಗೆ ಯೀ ದುರವಸ್ಥೆಯು ದೊರೆಯುವುದಾಯಿತಲ್ಲ ಪ್ರಯೋಜನವೇನು ಹೇಳುವೆನು॥

ಪದ

ನಿನಗೀ ಬವಣೆಯನ್ನು ತಂದ ಪಾಪಿಯನ್ನೂ ನಾನು ಕೊಂದಲ್ಲದೆ
ಬಿಡೆನು ಕೇಳೋ ಧರ್ಮಜ ॥

ಕೃಷ್ಣ : ಅಯ್ಯ ಧರ್ಮಜ ವ್ಯಸನವನ್ನು ಬಿಡು. ನಿನಗೆ ಯಿಷ್ಟು ಕಷ್ಟಕ್ಕೆ ಕಾರಣವನ್ನುಂಟು ಮಾಡಿದ ಪರಮ ಪಾಪಿಯಾದ ಕರ್ಣನನ್ನು ಸದ್ಯದಲ್ಲಿಯೆ ಸಂಹರಿಸದೆ ಬಿಡಲಿಕ್ಕಿಲ್ಲ ಹೇಳುವೆನು.

ಪದ

ಅರಿಯದೋದೆ ಕೇಳೊ ನಿನಗೀ ಪರಿಯು ಬಹುದೆಂಬುದಾನು
ಕೊರತೆಯಾಯ್ತು ಯನ್ನ ಭಾಷೆಯ ವರಲಿ ಫಲವೇನು ॥

ಕೃಷ್ಣ : ಅಯ್ಯ ಧರ್ಮಜ ಮೋಸವಾಯಿತು. ನಿನಗೀ ಕಷ್ಟ ಪ್ರಾಪ್ತವಾಗುವುದೆಂದು ಮೊದಲಿಗೆ ತಿಳಿದಿದ್ದರೆ ನಿನ್ನನ್ನು ಕಳುಹಿಸುತ್ತಿರಲಿಲ್ಲ. ನಾನು ಪಾಂಡವ ಸ್ಥಾಪನಾಚಾರ‌್ಯನೆಂದು ಹೆಸರು ತೆಗೆದುಕೊಂಡದ್ದಕ್ಕೆ ಕೊರತೆಗೆ ಕಾರಣವಾಯಿತು. ನಡೆದ ಮಾತು ನುಡಿದು ಫಲವಿಲ್ಲ ಹೇಳುವೆನು.

ಪದ

ತರಣಿ ಸುತನ ಕೊಲದೆ ಬಿಡುವುದಿಲ್ಲ ಹರಿಯು ನುಡಿಯೆ
ಪಾರ್ಥ ಬಂದು ಅಂಣಗೆರಗಿದ ॥

ಕೃಷ್ಣ : ಅಯ್ಯ ಧರ್ಮಜ, ಸರಳಿನಿಂದ ನರಳಿಸಿದ ದುರುಳನಾದ ಕರ್ಣನ ಕೊಲ್ಲಿಸುವ ಪರಿಯಂತರವೂ ನನಗೊಂದು ಕೊರತೆಯುಂಟಾಯಿತು. ವ್ಯಸನವನ್ನು ಮಾಡಬೇಡಯ್ಯ ಧರ್ಮಜ.

ಅರ್ಜುನ : ಅಗ್ರಜರ ಪಾದಕ್ಕೆ ಬಾಲಕನ ನಮಸ್ಕಾರ ಬರುವುದು. ಆಹಾ. ಅಣ್ಣಯ್ಯನವರು ಮಾತನಾಡುವುದಿಲ್ಲವಲ್ಲ. ಯಿನ್ನೆಷ್ಟರ ಮಟ್ಟಿಗೆ ಕಷ್ಟ ಪಟ್ಟಿದ್ದಾರೆಂಬುದಾಗಿ ತಿಳಿದುಕೊಳ್ಳಲಿ ಶಂಕರ ದಿಗಂಬರ.

ಪದ ರಾಗ ಅಷ್ಟತಾಳ

ಅಣ್ಣ ಯೀ ಪರಿಯಾಯ್ತೆ ನಿಮಗೆ ನಾವು ಪುಣ್ಯಹೀನರು ಆದೆವು
ಸಣ್ಣವರನು ಸಲಹಿ ಸಂತೈಸಿದುದಕೆ ಕಣ್ಣ ಹಬ್ಬವ ಕಂಡೆವೆ ॥

ಅರ್ಜುನ : ಅಣ್ಣಯ್ಯ, ತಂದೆಯಾದ ಪಾಂಡು ಚಕ್ರವರ್ತಿಯು ಪರಂಧಾಮಕ್ಕೆ ಹೋದಾರಭ್ಯದಿಂದ ನಮ್ಮನ್ನು ಚಿಕ್ಕಂದಿನಿಂದ ಸಾಕಿ ಸಂರಕ್ಷಣೆ ಮಾಡಿದಿರಿ. ನಾವು ಪ್ರಬಲರಾಗಿ ನಿಮಗೀ ದುರವಸ್ಥೆಯು ಬಂದ ಬಳಿಕ ನಾವಿದ್ದು ಪ್ರಯೋಜನವೇನು ಹೇಳುವೆನು.

ಪದ

ಮೋಸ ಹೋದೆನು ನಿಮ್ಮ ಅಗಲಿ ಯಿಂದು ದೋಷಕ್ಕೆ ಗುರಿಯಾದೆನು
ಕೇಶವ ಪೇಳು ನೀನು ಯನಗೆ ಗತಿ ವಾಸುದೇವನೆ ಪಾಲಿಸು ॥

ಅರ್ಜುನ : ಅಗ್ರಜ, ಕರ್ಣನ ಮೇಲೆ ನಿಮ್ಮನ್ನು ಯುದ್ಧಕ್ಕೆ ಕಳುಹಿಸಿದ್ದೆ ಮೋಸವಾಗಿ ದೋಷಕ್ಕೆ ಪಾತ್ರನಾದೆನು. ಹೇ ಕೇಶವ ಹೇ ಮಾಧವ ಭಾವಯ್ಯ ಮುಂದೇನು ಗತಿ.

ಪದ

ಯೆಷ್ಟು ಜನ್ಮಕ್ಕೆ ಪೋಪುದು ಅಗ್ರಜಗಿಂತ ಘಾಶಿ ಮಾಡಿದ ಪಂಥವು
ದಾಶರಥಿಯೆ ಪೇಳ್ವುದು ಯೆನುತಲಿ ಭೂಮೀಶನಡಿಗೆ ವಂದಿಸಲು ॥

ಅರ್ಜುನ : ಭಾವಯ್ಯ, ಅಗ್ರಜರನ್ನು ನಾವಾಗಿ ಕಳುಹಿಸಿ ಕಷ್ಟಪಡಿಸಿರುವ ದೋಷವನ್ನು ಎಷ್ಟು ಜನ್ಮ ತೊಳಲಿದರೆ ಹೋದೀತು. ಆಹಾ ಕರ್ಣನು ಹೊಡೆದಿರುವ ಬಾಣದ ಪೆಟ್ಟುಗಳನ್ನೂ ನೋಡಲಾರೆನಲ್ಲಾ, ಯಷ್ಟು ಶ್ರಮವಾಗಿರಬಹುದು. ಮಾತನಾಡಬಾರದೆ ಅಗ್ರಜ.

ಭಾಮಿನಿ

ಯಂದು ಪಾರ್ಥನು ನುಡಿವ ಮಾತನು ಅಂದು ಕೇಳುತ ಧರ್ಮಪುತ್ರನು
ಮಂದಮತಿ ಕೇಳೆನುತ ಪೇಳ್ದನು ಅನುಜನೊಳು ತಾನು ॥

ಧರ್ಮಜ : ಹೇ ತಮ್ಮ ಅರ್ಜುನ, ಮಂದಮತಿಯಾದ ನನಗೆ ಬಂದ ಕುಂದಕವನ್ನು ಯಾತಕ್ಕೆ ಕೇಳುತ್ತೀಯ ಹೇಳುವೆನು ॥

ಪದ

ಬಂದೆಯಾ ಪಾರ್ಥ ನೀನು ಸಮಸಪ್ತಕರು ಹ್ಯಾಗೆ ಬಿಟ್ಟರು ನಿನ್ನನು
ಕೊಂದು ಬಂದೆಯೊ ಇಲ್ಲಾ ಕೊಲ್ಲದೆ ನನ್ನಂತೆ ಸತ್ಪಗುಂದಿ ಹಿಂದಿರುಗಿದೆಯೊ ॥

ಧರ್ಮಜ : ತಮ್ಮ ಅರ್ಜುನ ಬಂದಂಥವನಾದಿಯಾ. ಸಮಸಪ್ತಕರೆಂಬ ರಾಕ್ಷಸರು ಬಹಳ ಶೂರರಲ್ಲದೆ ನನಗೆ ಪೂರ್ವಕ್ಕೆ ದ್ವೇಷಿಗಳು. ನಿನ್ನನ್ನು ಯಿಲ್ಲಿನವರೆವಿಗೆ ಹ್ಯಾಗೆ ಬಿಟ್ಟಂಥವರಾದರು. ಅವರನ್ನು ಕೊಂದು ಬಂದೆಯೊ ಅವರಿಂದ ಪೆಟ್ಟುತಿಂದು ಬಂದೆಯೊ ಹ್ಯಾಗೆ, ಯಿದರ ನಿಶ್ಚಯವನ್ನು ಹೇಳುವನಾಗು.

ಪದ್ಯ

ಕುರುಪತಿ ಧನ್ಯನಲಾ ಜಳ್ಳುಗಳಿವು ಸರಿಯೆ ಕರ್ಣನ
ಪೇಳೆಲಾ ಧುರದೊಳಗವನೊಳು ಕಾದುವವರ ಕಾಣೆ
ಕುರಿಗಳು ನೀವೆಲ್ಲ ವರಲಿ ಫಲವೇನು ॥

ಧರ್ಮಜ : ತಮ್ಮ ಅರ್ಜುನ, ಕುರುಪತಿಯಾದ ಕೌರವ ಬಲಾಡ್ಯ. ಯಿವನಿಗೆ ಬಾಹುಬಲವಾಗಿರುವ ಕರ್ಣನ ಪ್ರತಾಪವನ್ನು ಯೆಷ್ಟು ಹೇಳಿದರು ತೀರದು. ಯೀ ಕರ್ಣನ ಭಾಗಕ್ಕೆ ನೀವುಗಳೆಲ್ಲ ಕುರಿಗಳ ಸಮಾನ. ಅವನಲ್ಲಿ ಯುದ್ಧ ಮಾಡುವುದಕ್ಕೆ ಅಸಾಧ್ಯವಾಗಿರುವುದಯ್ಯ ಅರ್ಜುನ ॥

ಅರ್ಜುನ : ಅಗ್ರಜ, ಯುದ್ಧ ಮಾಡುವುದಕ್ಕೆ ಅಸಾಧ್ಯವಾಗಿರುವ ಭಾಗದಲ್ಲಿ ಯೇನು
ಮಾಡಬೇಕು.

ಪದ

ಕರದೊಳಿರುವ ಧನುವ ನೀ ಕೊಡು ಬೇಗ
ನರಕ ವೈರಿಯು ಕಾಯ್ವನು ತುರಗವ ನಡೆಸು ಹರಿಗೆ
ಸಾರಥಿಯಾಗಿ ಪರಮ ಕೃಪಾನಿಧಿ ಪೊರೆಯುವ ನಮ್ಮನು ॥

ಧರ್ಮಜ : ತಮ್ಮಾ ಅರ್ಜುನ, ಶ್ರೀ ಹರಿಗೆ ನೀನು ಸಾರಥಿಯಾಗಿ ಧನಂಜಯನಲ್ಲಿ ನೀನು ಪಡೆದ ನಿನ್ನ ಕಂಬದಲ್ಲಿರುವ ಶರವನ್ನು ಭಾವಯ್ಯನವರಿಗೆ ಕೊಟ್ಟು ರಥವನ್ನೂ ನಡೆಸಿದ್ದೇ ಆದರೆ, ಪರಮಾತ್ಮನು ನಮ್ಮನ್ನು ವುದ್ದರಿಸುವನು. ಗಾಂಢೀವ ಬಾಣವನ್ನೂ ಶ್ರೀಹರಿಗೆ ವೊಪ್ಪಿಸಿ ನೀನು ಶ್ರೀ ಹರಿಗೆ ಸಾರಥಿಯಾಗಿ ರಥವನ್ನೂ ನಡೆಸಯ್ಯ ನರನೆ.

ಅರ್ಜುನ : ಯಲಾ ಧರ್ಮಜ ಹೇಳುತ್ತೇನೆ.

ಭಾಮಿನಿ

ನುಡಿಯ ಕೇಳುತಲಾಗ ಕಲ್ಪದ ಕಡಲೊಡೆದ ತೆರನಂತೆ ಫಲುಗುಣ
ಪೊಡವಿಗುರುಳಿಪೆ ಯಿವನ ಶಿರವನು ಎನುತ ಪಲ್ಮೊರೆದು ॥

ಅರ್ಜುನ : ಯಲಾ ಧರ್ಮಜ, ನಿನ್ನ ಬಾಯಲ್ಲಿ ಯೀ ಮಾತು ಹೊರಡಬಹುದೆ. ಮೂದೇವಿ ನನ್ನ ಕೈಲಿರತಕ್ಕ ಯಿದೇ ಗಾಂಢೀವ ಧನುಸ್ಸಿಗೆ ಬಲಿಯನ್ನು ಕೊಟ್ಟು, ನಿನ್ನ ಶಿರವನ್ನು ಯೀ ಧರೆಯಲ್ಲಿ ಕಡಿದು ಬಿಡುತ್ತೇನೆ ನೋಡು.

ಭಾಮಿನಿ

ಖಡುಗವನು ತಾ ಕೊಂಡು ಶಿರವನು ಕಡಿದು ಬಿಸುಡುವೆನೆಂದು ಬರೆ
ಜಗ ನಡುಗಲಾಕ್ಷಣ ತಡೆದು ಪೇಳಿದನಾಗ ಮಾಧವನು ॥

ಕೃಷ್ಣ : ಅಯ್ಯ ಅರ್ಜುನ, ಆತುರಪಡಬೇಡ ಕೈತಡಿ. ದುಡುಕುತನ ಕೆಡಿಸುವುದು. ನಿಧಾನ ಬಹು ದೊಡ್ಡದು. ಮೋಸವಾದೀತು ವಾರಿಗೆ ನಿಲ್ಲು ಹೇಳುತ್ತೇನೆ ॥

ಪದ

ಚಂದವಾಯಿತಯ್ಯ ಪಾರ್ಥ ಯಿಂದು ನಿನ್ನ ಶೌರ‌್ಯ
ವ್ಯರ್ಥ ಮಂದಭಾಗ್ಯನೆ ಅಗ್ರಜನನ್ನೂ ಕೊಂದು ಬಿಡಬಹುದೆ ॥

ಕೃಷ್ಣ : ಅಯ್ಯ ಪಾರ್ಥ ಬಹು ಚಂದವಾಯಿತು. ಯೀ ದಿವಸ ನಿನ್ನ ಶೌರ‌್ಯ ವ್ಯರ್ಥವಾಯಿತಲ್ಲ. ಹೇ ಮಂದಮತಿ, ಜ್ಯೇಷ್ಟನಾದ ನಿಮ್ಮ ಅಗ್ರಜನನ್ನು ಕೊಂದುಬಿಡಬಹುದೆ.

ಪದ

ಕಂಡೆಯೇನೈ ಹರಿಯೆ ಜನಪನೆಂದ ನುಡಿಯನು
ಖಾಂಡವ ದಹನದೋಳ್ ಯಜ್ಞೇಶ ಯೆಂದ ಮಾತ ॥

ಅರ್ಜುನ : ಭಾವಯ್ಯ, ಯೀ ಧರ್ಮಜನ ಬಾಯಲ್ಲಿ ಯೀ ಮಾತು ಹೊರಡಬಹುದೆ. ಖಾಂಡವವನ ದಹನ ಕಾಲದಲ್ಲಿ ಪಾವಕನಿಗೂ ನನಗೂ ನಡೆದಿರುವ ಪ್ರತಿಜ್ಞೆಯೇನು ಹೇಳುವೆನು.

ಪದ

ಧನುವನಾರು ಜರಿಯಲವನ ಶಿರವನಿಳುಹು ಯೆಂದು
ಅರುಹಿದನು ಭಾಷೆಗಾಗಿ ತರಿವೆ ಅಣ್ಣನ ॥

ಅರ್ಜುನ : ಭಾವಯ್ಯ, ಧನಂಜಯನಿಂದ ಯೀ ಧನುಸ್ಸು ಪ್ರಾಪ್ತವಾಗುವಾಗ್ಗೆ ಯೀ ಧನುಸ್ಸನ್ನು ಯಾರು ಜರಿಯುತ್ತಾರೊ ಅವರನ್ನು ಆಗಲೇ ದಹನ ಮಾಡಬೇಕೆಂಬ ನಿಯಾಮಕವಿರುವುದು ಕಂಡಿರೊ. ಆದ್ದರಿಂದ ಯೀ ಧರ್ಮಜನನ್ನು ಯಿದೇ ಬಾಣದಿಂದ ಹೊಡೆದು ದಹನ ಮಾಡುತ್ತೇನೆ ನೋಡಿರಿ.

ಕೃಷ್ಣ : ಅಯ್ಯ ಧನಂಜಯ, ಆ ಪ್ರತಿಜ್ಞೆಯಂತೆ ಹೋದರೆ ನಿನಗೆ ಸಂಭವಿಸುವ ಕಷ್ಟವನ್ನು ಹೇಳುವೆನು.

ಪದ

ಮರುಳೆ ಕೇಳೊ ಹಿರಿಯನನ್ನು ತರಿದ ಮಾನವನಿಗೆ ನರಕವೆಂದು
ಪೇಳ್ವುದು ಶ್ರುತಿಯು ಅರಿಯದೋದೆಯ ॥

ಕೃಷ್ಣ : ಹೇ ಮರುಳೆ, ಪ್ರಪಂಚದೊಳು ಯಾವ ಮನುಷ್ಯನಾದರು ಹಿರಿಯರನ್ನು ಕೊಂದರೆ ಅಧೋಗತಿ ಪ್ರಾಪ್ತವಾಗಿ ರವರವ ನರಕವನ್ನು ಅನುಭವಿಸುವನೆಂಬ ಸಿದ್ಧಾಂತವನ್ನು ತಿಳಿದೂ ಕೂಡ, ನಿನ್ನ ಬುದ್ಧಿ ಹೀಗಾದ ಮೇಲೆ ಓದಿ ಕೆಟ್ಟ ಕೂಚು ಭಟ್ಟ ಎಂಬ ಗಾದೆಗೆ ಅನುಸಾರವಾಯಿತು. ಅರ್ಜುನ ಅನುಭವಿಸಬಹುದು.

ಅರ್ಜುನ : ಭಾವಯ್ಯ, ಹಾಗಾದರೆ ಅಗ್ರಜರಾದ ಧರ್ಮರಾಯರಿಗೆ ನನ್ನಿಂದ ಮರಣ ಸಂಭವಿಸದಂತೆಯೂ ಯಜ್ಞೇಶ್ವರನ ಪ್ರತಿಜ್ಞೆಗೆ ಕುಂದಕವಿಲ್ಲದಂತೆಯು ಆಗುವ ರೀತಿಯೇನು ಮಾಡಬೇಕು ಅಪ್ಪಣೆಯಾಗಲಿ.

ಕೃಷ್ಣ : ಅಯ್ಯ ಸವ್ಯಸಾಚಿ ಸತ್ಯಸಂಧನಾದ ಯುಧಿಷ್ಟಿರನು ಬಹು ಮಾನಿಷ್ಟನು. ಆದ್ದರಿಂದ ಅವನಿಗೆ ನೀನು ಅವಮಾನವನ್ನು ಮಾಡಿ ಜರಿದು ಹೀಯಾಳಿಸಿ ಮಾನಭಂಗವನ್ನು ಮಾಡಿದರೆ, ನೀನು ಸಂಹಾರ ಮಾಡಿದಂತಾಗುವುದು ಧರ್ಮಜನನ್ನು ನಿಂದಿಸು.

ಭಾಮಿನಿ

ಯಂದು ಹರಿ ನುಡಿಯಲ್ಕೆ ಫಲುಗುಣನಿಂದು ಕೋಪಾನಲನ
ತೆರದೊಳು ನಿಂದಿಸಿದ ನಾನಾ ತೆರದಿ ಅಗ್ರಜನ ॥

ಅರ್ಜುನ : ಯಲಾ ಧರ್ಮಜ, ನಾರಿಯಂತೆ ಮೋರೆಯನ್ನು ವಾರೆ ಮಾಡಬೇಡ ಮೂದೇವಿ ಹೇಳುತ್ತೇನೆ.

ಭಾಮಿನಿ

ಮಂದಮತಿ ನೀನ್ಯಾಕೆ ಧರೆಯೊಳು ಬಂದೆ ಕ್ಷಿತಿಯಳು ಧುರದಲಿ
ನೀನು ಹಂದಿ ಹುಟ್ಟಿದಕಿಂತ ಕಡೆ ಹೋಗೆಂದನಾ ಪಾರ್ಥ ॥

ಅರ್ಜುನ : ಯಲಾ ಮಂದಮತಿಯಾದ ಧರ್ಮಜನೆ, ಯೀ ಪೃಥ್ವಿಯಲ್ಲಿ ಕ್ಷಾತ್ರವಂಶದಲ್ಲಿ ಹುಟ್ಟಬಹುದೇ, ನೀನು ಹುಟ್ಟಿದ್ದು ಗ್ರಾಮ ಶೂರನಿಗಿಂತ ಕಡೆಯಾಯಿತೊ ಮೂದೇವಿ ಹೇಳುತ್ತೇನೆ ॥

ಪದರಾಗ ಆದಿತಾಳ

ಮೂಢ ನೀನು ವುದಿಸಲಾಗಿ ಆಡಿ ಕಪಟ ದ್ಯೂತ ಹಗೆಗೆ
ನಾಡ ನೋಡು ನಂಬಿದವಳ ಕೋಡಿಗಳೆದೆಲಾ ॥

ಅರ್ಜುನ : ಯಲಾ ಧರ್ಮಜ, ನಮಗೆಲ್ಲಾ ಜೇಷ್ಠನಾಗಿ ಹುಟ್ಟಿ ಕೌರವನಲ್ಲಿ ಕಪಟ ದ್ಯೂತವನ್ನಾಡಿ ಕೂಡಿದ ಮಡದಿಯನ್ನು ಸೋತು, ರಾಜಸ್ತೋಮದಲ್ಲಿ ಶೀರೆಯನ್ನು ಸೆಳೆಸಿ ಮಾನಭಂಗವನ್ನು ಮಾಡಿಸಿದೆ ಮೂದೇವಿ ನಿನ್ನ ಜನ್ಮವನ್ನು ಸುಡಬಾರದೆ.

ಪದ

ಧರೆಯ ಸೋತು ಹಗೆಗೆ ನಮ್ಮ ಮರಡಿ ಕಲ್ಲು ಕಾನನದೊಳು
ತಿರುಗಿಸಿನ್ನು ಬಳಲಿಸಿದೆಯೊ ಪರಮಪಾಪಿಯೆ ॥

ಅರ್ಜುನ : ಯಲಾ ಧರ್ಮಜ, ಯೀ ಭೂಮಿಯಲ್ಲಿ ದಾಯಾದಿಯಾದ ಕೌರವನಿಗೆ ದ್ಯೂತ ಮುಖದಿಂ ಸೋತು ಮಹಾಗ್ರೇಸರರಾದ ನಮ್ಮನ್ನು, ವನವಾಸದಲ್ಲಿ ಕಲ್ಲು ಮುಳ್ಳು ಮರಗಳನ್ನೂ ತುಳಿಸಿ ಬಹಳ ಶ್ರಮಪಡಿಸಿದಂಥವನಾದೆ ಪಾಪಿ. ಹೇ ನಿಷ್ಕರುಣಿ ಹೇಳುತ್ತೇನೆ.

ಪದ

ಕುರುಪತಿಯನು ಯಿಂದ್ರಸೇನ ತರಿದು ವೊಯ್ವ ವೇಳೆಯಲ್ಲಿ
ಕರೆಸಿಕೊಂಡೆ ನಮ್ಮನೆಲ್ಲ ಕರಿಯಲೆನುತಲಿ ॥

ಅರ್ಜುನ : ಯಲಾ ಧರ್ಮರಾಜ, ಚಿತ್ರಸೇನನೆಂಬ ಗಾಂಧರ್ವನು ಪಾಪಿಯಾದ ಕೌರವನನ್ನು ಯಡಕಟ್ಟಿನಿಂದ ಕಟ್ಟಿ ತೆಗೆದುಕೊಂಡು ಹೋಗುವ ಕಾಲದಲ್ಲಿ, ನಿನ್ನಲ್ಲಿ ಮೊರೆ ಇಡಲು ಬಿಡಿಸಿಕೊಂಬುವ ಗಂಡಸುತನ ನಿನಗಿಲ್ಲದೆ ನಾನು ಆ ಕೌರವನ ಕರೆಯನ್ನು ಬಿಡಿಸಿದಂಥವನಾದೆ. ಹೇ ಭಿಕಾರಿ ಹೇಳುವೆನು.

ಪದ

ಹರನ ಕುರಿತು ಹಲವು ಕಾಲಕೆ ತೊರೆದೆ ಅನ್ನ ಪಾನಗಳನು
ಕರುಣವುಂಟೆ ಪಾಪಿ ಪಾಮರನು ನೀನೇ ॥

ಅರ್ಜುನ : ಯಲಾ ಧರ್ಮಜ, ಯಿಂದ್ರಕೀಲದಲ್ಲಿ ಹಲಕಾಲ ನಿರಂತರ ವ್ರತದಿಂದ ತಪಸ್ಸು ಮಾಡಿ ಪರಶಿವಮೂರ್ತಿಯಾದ ಶಂಕರನನ್ನು ಮೆಚ್ಚಿಸಿ ಪಾಶುಪತವನ್ನು ಪಡೆದುಕೊಂಡೆನು. ಯಿಂಥಾ ಸಾಹಸವು ನಿನಗುಂಟೆ. ಛೀ ಹೇಡಿ ಹೇಳು.

ಪದ

ಗುರುವು ಭೀಷ್ಮರನ್ನು ಗೆಲಿದೆ ತರಿದು ದೈತ್ಯರನ್ನೂ
ತಾನು ಕುರುಬಲವ ಕೊಂದೆ ಕೇಳೊ ಹರಿಯ ಕರುಣದಿ

ಅರ್ಜುನ : ಯಲಾ ಧರ್ಮಜ, ಕುರುಬಲದ ಯೋಧಾಗ್ರೇಸರರಾದ ದ್ರೋಣ, ಮುತ್ತಯ್ಯನಾದ ಭೀಷ್ಮ ಮತ್ತು ಶೂರರಾದ ಸಮಸಪ್ತಕರನ್ನು ಸಹ ರಣಭೂಮಿಗೆ ದಿಗ್ಭಲಿಯನ್ನು ಕೊಟ್ಟು ಕೊಂದು ಬಂದಿರುತ್ತೇನೆ. ನಾನು ಮಾಡಿರತಕ್ಕ ಸಾಹಸವಿಷ್ಟು. ನೀನು ಮಾಡಿರುವ ಸಾಹಸ ಯಾವುದೊ ಧರ್ಮಜ. ಛೀ ನಿನ್ನ ಜನ್ಮವನ್ನು ಸುಡಬಾರದೆ.

ಪದ

ಯಂದು ಪಾರ್ಥ ನಾನಾ ಪರಿಯ ನಿಂದೆಗಳನು ನುಡಿಯೆ
ಯಮಜ ಹೊಂದಿ ಮೂರ್ಛೆಯೊಳಗೆ ಹರಿಯ ಮುಂದೆ ಕೆಡೆದನು ॥

ಧರ್ಮಜ : ಅಯ್ಯೋ ವಿಧಿಯೆ, ಭಾವಯ್ಯ ಅರ್ಜುನ ಆಡುವ ಕರ್ಣಕಠೋರವಾದ ಮಾತು ಕೇಳುವುದಕ್ಕಿಂತ ತಮ್ಮ ಸನ್ನಿಧಾನದಲ್ಲಿಯೆ ಪ್ರಾಣವನ್ನು ಕಳೆದುಕೊಳ್ಳುವುದು ವುತ್ತಮವಾಗಿರುವುದು. ಹೇ ಶ್ರೀಹರಿ ಅನಾಥ ರಕ್ಷಕ ಆಪದ್ಭಾಂದವ ಲಕ್ಷ್ಮೀ ಲೋಲನೆ.

ಭಾಮಿನಿ

ನೋಡಿದನು ಕಲಿಪಾರ್ಥ ಹರಹರ ಕೋಡಿಗಳೆದನು ಕೃಷ್ಣ
ಅಣ್ಣ ದೇವರ ನಾಡಿನೊಳಗಿನ್ನೆಂತ ಅಧಮರು ದಾರು ಹೇಳೆಂದ ॥

ಅರ್ಜುನ : ಅಯ್ಯೋ ಹರಹರ, ಅಗ್ರಜನಾದ ಧರ್ಮರಾಯರನ್ನು ಬಹುತರವಾಗಿ ಮೂದಲಿಸಿ ಮಾನವನ್ನು ಕಳೆದಂತವನಾದೆ. ಯನ್ನಂಥ ಅಧಮರು ಯೀ ಲೋಕದಲ್ಲಿ ಯಾರಾದರು ವುಂಟೆ. ಭಾವಯ್ಯ ರಾಧಾರಮಣ ಅರಿಕೆ ಮಾಡಿಕೊಳ್ಳುತ್ತೇನೆ.

ಭಾಮಿನಿ

ಆಡಲಾರದೆ ಹರಿಯೊಳುತ್ತರ ಆಡಿದಗೆ ಯಂತರಿವುದೆನುತಲಿ ಬಾಗಿ
ವಿಜಯನಿಗೆ ಪೇಳ್ದನು ಮಾಧವಗೆ ನರನು ॥

ಅರ್ಜುನ : ಭಾವಯ್ಯ ಶ್ರೀಹರಿ, ನಿಮ್ಮ ಅಪ್ಪಣೆಯಂತೆ ಅಗ್ರಜನನ್ನು ನಿಂದಿಸಿ ದೋಷಕ್ಕೆ ಗುರಿಯಾಗಿರುವೆನು. ನಿವೃತ್ತಿಯಾಗುವುದನ್ನು ಹೇಳುವರಾಗಿರಿ ಭಾವಯ್ಯ.

ಭಾಮಿನಿ

ನಾಡೊಳಗೆ ತಾ ಮಾಡಿದ ಪೌರುಷ ಆಡಿಕೊಂಡರೆ ತಾವು ಮರಣವು
ಮಾಡಿದಂತಪುದದಕೆ ಕಾರಣವಿವೆ ಕೇಳೆಂದ ॥

ಕೃಷ್ಣ : ಅಯ್ಯ ಅರ್ಜುನ, ಯೀ ಪೃಥ್ವಿಯಲ್ಲಿ ಯಾವ ಪುರುಷನು ತಾನು ಮಾಡಿದ ಸಾಹಸವನ್ನೂ ಬಾಯಿಂದ ಹೊಗಳಿಕೊಂಡರೆ ಅಂಥವನು ಜೀವದೊಂದಿಗೆ ಯಿದ್ದರೂ ಮರಣವಾದವನ ಹಾಗೆ ಭಾವಿಸಬೇಕು. ಹೀಗಿರುವಲ್ಲಿ ಧರ್ಮಜನ ನಿಂದಿಸಿದ ದೋಷವು ಪರಿಹರಿಸಿಕೊಳ್ಳುವಲ್ಲಿ ಹೇಳುತ್ತೇನೆ.

ಭಾಮಿನಿ

ಮಾಡು ಬೇಗದಿ ಆತ್ಮಸ್ತುತಿಯನು ವೋಡಿ ಪೋಪುದು ಅಘವು
ಯೆನೆ ತಾನಾಡಿಕೊಂಡನು ತನ್ನ ಪೌರುಷವನ್ನೂ ಕಲಿಪಾರ್ಥ ॥

ಕೃಷ್ಣ : ಅಯ್ಯ ಅರ್ಜುನ, ಹಿಂದೆ ನೀನು ಮಾಡಿರುವ ಸಾಹಸಗಳನ್ನು ನೀನೇ ಹೊಗಳಿಕೊಂಡು ನಿನ್ನ ಆತ್ಮಸ್ತುತಿಯನ್ನೂ ಯೀ ಕ್ಷಣವೆ ಮಾಡಿಕೊಳ್ಳುವಂಥವನಾಗು.

ಪದ

ವೀರ ಮಾತೆಗಾಗಿ ದೇವಪುರಕೆ ದಾರಿಕಟ್ಟಿ
ವಾರಣ ವಸ್ತುವ ಸಹಿತ ಭೂಮಿಗಿಳಿಸಿದೆ॥

ಅರ್ಜುನ : ಪೂರ್ವದಲ್ಲಿ ಮಾತೋಶ್ರೀಯವರ ಮಾತಿಗಾಗಿ ದೇವಲೋಕಕ್ಕೆ ಶರಪಂಜರವನ್ನು ಕಟ್ಟಿ, ಕಾಮಧೇನು ಕಲ್ಪವೃಕ್ಷ ರಂಬಾ ವೂರ್ವಶಿ ಮೊದಲಾದ ಅಪ್ಸರ ಸ್ತ್ರೀಯರು ಶ್ವೇತಗಜವು ಸಹ ಯೀ ಭೂಮಿಗೆ ಯಿಳುಹಿ, ಅಮ್ಮಯ್ಯನವರ ಮನಸ್ಸು ಆನಂದಪಡಿಸಿ ಪ್ರಖ್ಯಾತಿಯನ್ನು ಪಡೆದೆ. ಇಂತಾ ಸಾಹಸವು ಯೀ ಧರ್ಮಜನಿಗುಂಟೆ ಹೇಳುತ್ತೇನೆ.

ಪದ

ಯಿಂದ್ರವನ ಅಗ್ನಿಗಿತ್ತೆ ಗುರುವು ಪೇಳಲಿಕೆ ದೃಪದನಂ ತಂದು
ಚರಣಕೊಪ್ಪಿಸಿದೆನು ಹಿಂದೆ ಭೂಪನ ॥

ಅರ್ಜುನ : ಅಯ್ಯ ಭಾಗವತರೆ, ದೇವೇಂದ್ರನ ವನವನ್ನು ಯಜ್ಞೇಶ್ವರನಿಗಿತ್ತು ತೃಪ್ತಿಪಡಿಸಿದೆನು ಮತ್ತು ವಿದ್ಯಾಗುರುಗಳಾದ ದ್ರೋಣಾಚಾರ‌್ಯರ ಪಂಥವನ್ನುಂಟು ಮಾಡುವುದಕ್ಕೆ ಪಾಂಚಾಲ ದೇಶದ ಅರಸನಾದ ದೃಪದನನ್ನು ಹೆಡೆಮುರಿ ಕಟ್ಟಿ, ಗುರುಗಳ ಪಾದಕ್ಕೆ ಅಡ್ಡ ಕೆಡಹಿ ಗುರುದಕ್ಷಿಣೆಯನ್ನು ಕೊಟ್ಟಂಥವನಾದ ನನ್ನ ಸಾಹಸವು ಹ್ಯಾಗಿರುವುದು ನೋಡಿರಿ.

ಪದ

ಹರನೋಳ್ಕಾದಿ ಶರವ ತಂದೆ ಕುರುಪತಿಯನು ಬಿಡಿಸಿಕೊಡೆ
ಗಯನ ಸಲಹಿ ನಾನು ಹರಿಯೋಳ್ಕಾದಿದೆ ॥

ಅರ್ಜುನ : ಅಯ್ಯ ಭಾಗವತರೆ, ಕೈಲಾಸವಾಸಿಯಾದ ಪರಶಿವಮೂರ್ತಿಯಲ್ಲಿ ಖಾಡಾಖಾಡಿ ಯುದ್ಧ ಮಾಡಿ ಅಮೋಘವಾದ ಪಾಶುಪತವೆ ಮೊದಲಾದ ದಿವ್ಯಾಸ್ತ್ರಗಳನ್ನು ಪಡೆದಿರುವೆನು ಮತ್ತು ಗಂಧರ್ವನಾದ ಚಿತ್ರಸೇನನನ್ನು ಯುದ್ಧರಂಗದಲ್ಲಿ ಜಯಿಸಿ ಕುನ್ನಿಯಾದ ಕೌರವನನ್ನು ಬಿಡಿಸಿಕೊಂಡು ಬಂದು ಮಂದಮತಿಯಾದ ಧರ್ಮಜನಿಗೆ ವಪ್ಪಿಸಿರುವೆನು ಮತ್ತು ಧನಾಧಿಪನಾದ ಕುಬೇರನ ಮಗ ಗಯನಿಗೋಸ್ಕರ ಕೊಟ್ಟ ವಾಗ್ದಾನಕ್ಕಾಗಿ ಶ್ರೀ ಹರಿಯಲ್ಲಿ ಧುರದಲ್ಲಿ ಜಯವನ್ನು ಹೊಂದಿ ಗಯನ ಪ್ರಾಣವನ್ನು ವುಳಿಸಿಕೊಂಡಿರುವೆನು. ನನ್ನ ಸಾಹಸಗಳು ಯೀ ಧರ್ಮಜನಿಗೆ ಬಂದೀತೆ. ಯಲಾ ಧರ್ಮಜ ಗ್ರಾಮ ಶೂರ ಛೀ ನಿನ್ನ ಜನ್ಮವನ್ನು ಸುಡಬಾರದೆ ॥

ಭಾಮಿನಿ

ಯೆಂದ ಪಾರ್ಥನ ನುಡಿಯ ಕೇಳುತ ಅಂದು ಧರ್ಮಜ
ಹರಿಗೆ ವೊಂದಿಸಿ ಮಂದಭಾಗ್ಯನು ತಾನಿರಲು
ಯಿವರ್ಗೀ ಬವರವಾಯ್ತೆಂದ ತಂದು ಕಣ್ಣಲಿ ಜಲವ
ಗೋವಿಂದನೆ ಸಲಹೆಂದ ಧರ್ಮಜನಿಂದು
ಬಿನ್ನವಿಸಿದನು ಮಾಧವನೊಡನೆ ದುಃಖದಲಿ

ಧರ್ಮಜ : ಭಾವಯ್ಯ, ಪಾಪಿಯಾದ ನನ್ನ ಅದೃಷ್ಟವು ಯಿನ್ನೆಷ್ಟರ ಮಟ್ಟಿಗೆ ಯಿರಬಹುದು. ಕರ್ಣನಿಂದ ಅವಮಾನವನ್ನೊಂದಿ ಬಂದಿರುವುದೇ ಸಾಕಾಗಿರುತ್ತದೆ. ಯಿಂತಾದ್ಧರಲ್ಲಿ ಅರ್ಜುನನಿಂದಲೂ ಅವಮಾನವನ್ನೊಂದಿ ಮುಖವನ್ನು ಹ್ಯಾಗೆ ತೋರುವುದು. ನಿರ್ಭಾಗ್ಯನಾದ ನಾನು ಯಿದ್ದದ್ದರಿಂದ ತಾನೆ ಯಿಷ್ಟಾದದ್ದು. ಭಾವಯ್ಯ ಶ್ರೀ ಹರಿ ಲಕ್ಷ್ಮೀಕಾಂತ ಬಿನ್ನವಿಸಿಕೊಳ್ಳುತ್ತೇನೆ.