ಭಾಮಿನಿ

ಕುರುಕುಲಾಗ್ರಣಿ ನೀನು ಬಿಡಿಸೈ ದುರುಳ ನಿನ್ನಾ ಅನುಜನಲ್ಲವೆ
ಮರಣವಾದರೆ ಸತ್ಯವೇ ದಾಯಾದ್ಯ ಮತ್ಸರವೆ ॥

ಭೀಮ : ಯಲಾ ಕೌರವ, ಯೀ ದುರುಳನು ನಿನ್ನ ತಮ್ಮನಲ್ಲವೆ. ಹೇ ನಿಷ್ಕರುಣಿಯೆ ನೀನಾದರು ಬಂದು ಬಿಡಿಸಿಕೊಳ್ಳಬಾರದೆ, ದಾಯಾದಿ ಮತ್ಸರದಿಂದ ಯಿವನಿಗೆ ಬರತಕ್ಕ ರಾಜ್ಯಕೋಶಗಳ್ಯಾವತ್ತು ನನಿಗೆ ಆಯಿತೆಂದು ಸಂತೋಷದಿಂದ ಯಿರುತ್ತೀಯೇನು ಶಿಖಂಡಿ ಬಂದು ಬಿಡಿಸಬಾರದೆ.

ಭಾಮಿನಿ

ಭಾನುಸುತನೇ ಬಂದು ಬಿಡಿಸೈ ಪಾಲಿಸಿದ ದೊರೆಯ
ಅನುಜನಲ್ಲವೆ ನೀನು ನೋಡುವೆ ಯಾಕೆ
ಸುಮ್ಮನೆ ಕೌರವನ್ಹದನವ ಸುರಿತೆಂದೆ ॥

ಭೀಮ : ಯಲಾ ಕರ್ಣ ನಿನ್ನ ಸಂರಕ್ಷಣೆ ಮಾಡಿದಂಥ ಕೌರವನ ತಮ್ಮನಲ್ಲವೆ. ಯೀ ದುರುಳನನ್ನು ಬಿಡಿಸಿಕೊಳ್ಳುವ ಶಕ್ತಿ ಯಿಲ್ಲದೆ ಕಣ್ಣು ಕಣ್ಣು ಬಿಡುತ್ತಾ ಕುಳಿತಿರುವೆಯಲ್ಲಾ ಮೂದೇವಿ. ಆದರೆ ಕೌರವನ ಭಂಡಾರದಲ್ಲಿ ಯಿರತಕ್ಕ ಅರ್ಥವನ್ನು ವ್ಯರ್ಥವಾಗಿ ತಿನ್ನುವುದಕ್ಕೆ ಸಮರ್ಥ. ಆಪತ್ಕಾಲದಲ್ಲಿ ಮಾತ್ರ ನೋಟಕನಾಗಿ ಕುಳಿತಿರುವೆಯಲ್ಲೋ ಕರ್ಣ ಛೀ ನಿನ್ನ ಜನ್ಮವನ್ನು ಸುಡಬಾರದೆ.

ಭಾಮಿನಿ

ಬಾರೊ ಗುರುಸುತ ಕೃಪರು ಶಲ್ಯರು ವೀರಕೃತವರ್ಮಾನುಸಾಲ್ವರು
ಸೇನಾವಾರುಧಿಯೊಳ್ಮಿಡುಕುಳ್ಳ ವೀರರು ಬಿಡಿಸಿರೈ ಯಿವನ ॥

ಭೀಮ : ಯಲಾ ಅಶ್ವತ್ಥಾಮ, ಕೃಪಾಚಾರ‌್ಯ, ಕೃತವರ್ಮ ಮೊದಲಾದ ಪಟುಭಟರೆ, ನೀವುಗಳೆಲ್ಲ ಕೌರವನಿಗೆ ಅತಿಹಿತರಲ್ಲವೆ. ಅವನ ತಮ್ಮನಾದ ಈ ದುಶ್ಶಾಸನನ ಪ್ರಾಣಸಂರಕ್ಷಣೆಯನ್ನು ಮಾಡದೆ ಯಾತಕ್ಕೆ ಕುಳಿತಿರುವಿರಿ, ಛೀ ನಿಮ್ಮ ಜನ್ಮವನ್ನು ಸುಡಬಾರದೆ.

ಭಾಮಿನಿ

ಸಾರಿಸುವೆ ಯಿವನೊಡಲ ಬಿಡಿಸುವರಿಲ್ಲ
ಮಾರಿ ಕೈಗೊಪ್ಪಿಸಿದ ಅಧಮರು ಸಾಕಿವರ ಹಂಗೇಕೆ ॥

ಭೀಮ : ಅಯ್ಯ ಭಾಗವತರೆ, ಯೀ ಕುರುಕುಲದಲ್ಲಿ ಇವನನ್ನು ಸಂರಕ್ಷಣೆ ಮಾಡುವರು ಯಾರೂ ಯಿಲ್ಲ. ಸಾರಿಸಾರಿ ಕೇಳಿದೆನು. ಆದರೆ ಮಾರಿ ಕೈಗೆ ವೊಪ್ಪಿಸಿದ ಕುರಿಯನ್ನೂ ಯಾರಾದರೂ ಬಿಡಿಸುವುದುಂಟೆ. ಯಾದವರ ಸೇನೆಯಲ್ಲಿ ಬಿಡಿಸತಕ್ಕವರು ಯಾರಾದರೂ ಯಿರಬಹುದೆ ನೋಡುವೆನು.

ಭಾಮಿನಿ

ಹಲಬರಲಿ ಫಲವೇನು ದಾನವ ಕುಲದ್ವಂಶಿ ಕುಲದಿಶಾಪಟ
ಕೃಷ್ಣ ಮುನಿದರೆ ಕಳೆದು ಕೌಮೋದಕಿಯನೆಂದೊದರಿದನು ಕಲಿಭೀಮ ॥

ಭೀಮ : ಅಯ್ಯ ಭಾಗವತರೆ, ಯಾದವರ ಸೇನೆಯಲ್ಲಿ ಯಾರು ತಾನೆ ಯಿದ್ದಾರೆ, ಹುಸಿನಾಮವನ್ನು ಧರಿಸಿರುವ ಅಸುರಾರಿಯಾದ ಈ ಕೃಷ್ಣನು ಭಾರತ ಯುದ್ಧಕ್ಕೆ ಸುದರ್ಶನಪಾಣಿಯಾಗುವುದಿಲ್ಲವೆಂದು ಮೊದಲೇ ಶಪಥವನ್ನು ಮಾಡಿಕೊಂಡು ಯಿದ್ದಾನೆ. ಯೀ ಗೊಲ್ಲನಲ್ಲೂ ಪ್ರಯೋಜನವಿಲ್ಲ. ಪಾಂಡವರ ಸೇನೆಯಲ್ಲಿ ಯಾರಾದರೂ ಯಿರಬಹುದೆ ವಿಚಾರಿಸಿ ನೋಡುತ್ತೇನೆ ॥

ಭಾಮಿನಿ

ಮೂರು ಲೋಕದ ಗಂಡನೆಂಬುವ ಭೇರಿಗರ್ವದೊಳಿರುವ
ಪಾರ್ಥನೆ ನೀನು ಬಿಡಿಸೈ ತಮ್ಮನಲ್ಲವೆ ದೋಷವೇನಿದಕೆ ॥

ಭೀಮ : ಯಲಾ ಅರ್ಜುನ, ಮೂರು ಲೋಕದ ಗಂಡ ಅರ್ಜುನ ಧೀರನೆಂದು ದಶನಾಮವನ್ನು ಪಡೆದಿರುವೆ. ಆದರೆ ಯೀ ಕೌರವನ ತಮ್ಮನಾದ ದುಶ್ಯಾಸನ ನಿನಗೂ ತಮ್ಮನಲ್ಲವೆ. ಬಿಡಿಸಿಕೊಂಡಿದ್ದೆ ಆದರೆ ದೋಷಬರುವುದೇ ಅರ್ಜುನ ನೀನು ಬಂದು ಬಿಡಿಸಿಕೊಳ್ಳಬಾರದೆ ॥

ಭಾಮಿನಿ

ವೀರಕ್ಷತ್ರಿಯರಾಗಿ ಪುಟ್ಟಿದವರಾದರು ಆಗಲಿ ರಣಕ್ಕೆ ಕರೆದರೆ
ಮೋರೆ ತಿರುಹುವರನೆ ಪಾತಕಿಯು ಯೆಂದ ॥

ಭೀಮ : ಆಹಾ, ಕ್ಷತ್ರಿಯವಂಶದಲ್ಲಿ ಹುಟ್ಟಿ ರಣಾಗ್ರಕ್ಕೆ ಕರೆದರೆ ಮೋರೆಯನ್ನು ನಾರಿಯಂತೆ ಮಾಡಿಕೊಂಡು ಯೀ ಪಾಂಡವರ ಸೇನೆಯಲ್ಲಿ ತೂಕಡಿಸುತ್ತಿರುವರಲ್ಲಾ. ಯೀ ಶಿಖಂಡಿಯಾದ ಅರ್ಜುನನಲ್ಲೂ ಪ್ರಯೋಜನವಿಲ್ಲಾ, ಯಿನ್ನೂ ಯಿವನ ರಕ್ತವನ್ನು ಪಾನ ಮಾಡುತ್ತೇನೆ ನೋಡಿರಿ ॥

ಭಾಮಿನಿ

ಆರು ಕಾಯುವರಿಲ್ಲಿವನ ಯನಿತುಬ್ಬೇರಿ ರಕ್ತವ ಮೊಗೆದು
ಮಾಂಸಾಹಾರವನು ಮಾಡುತಿರಲು ಯಿಂದ್ರಕುಮಾರ ಖತಿಗೊಂಡ ॥

ಅರ್ಜುನ : ಆಹಾ, ಯೀ ಭಂಡನಾದ ಭೀಮನು ಯೀ ಮಂಡಲದಲ್ಲಿ ದುಶ್ಯಾಸನನನ್ನು ಬಿಡಿಸತಕ್ಕವರು ಯಾರೂ ಯಿಲ್ಲವೆಂದು ಮದಗರ್ವದಿಂದ ಮಾಂಸಾಹಾರವನ್ನು ಮಾಡುತ್ತಿರುವನಲ್ಲಾ ವೊಳ್ಳೆಯದು ಇರಲಿ ನೋಡುವೆನು.

ಭಾಮಿನಿ

ಬಾಗಿದನು ಶರವಾಂತು ಕೋಪದಿ ಮಾರುತಿಯ
ಕೊಲಲೆನುತ ಹೊರಡಲು ವಾರಿಜಾಕ್ಷನು
ಕಂಡು ಭರವಿದು ಆರ ಮೇಲೆಂದ ॥

ಅರ್ಜುನ : ಅಯ್ಯ ಭಾಗವತರೆ, ಯಿದೇ ಗಾಂಢೀವ ಬಾಣದಿಂದ ಭಂಡನಾದ ಭೀಮನನ್ನು ಕೊಂದು ಯೀ ಭೂಮಿಗೆ ಹ್ಯಾಗೆ ದಿಗ್ಬಲಿಯನ್ನು ಕೊಡುತ್ತೇನೆ ನೋಡಿರಿ.

ಕೃಷ್ಣ : ಅಯ್ಯ ಅರ್ಜುನ ಕೈತಡಿ ನಿಧಾನ ಬಹು ದೊಡ್ಡದು. ತನ್ನ ದುಡುಕು ತನ್ನ ಕೆಡಿಸುವುದು. ನಮ್ಮಂತೆ ಸುಮ್ಮನಿದ್ದವನು ಯಾತಕ್ಕೆ ಯದ್ದಂತವನಾದೆ.

ಪದ

ಕೇಳೊ ಮಾಧವ ದಾನವಾಂತಕ ಪೇಳಿಕೊಂಬೆನು ಸತ್ಯವಾಕ್ಯವ
ಜನಪವಂಶದಿ ಜನಿಸಿದವನಿಗೆ ಅನುಜತಗ್ರಜ ಗುರುಗಳಾಗಲಿ ॥

ಅರ್ಜುನ : ಹೇ ಮಾಧವ ದಾನವಾರಿಯೆ, ಕ್ಷತ್ರಿಯವಂಶದಲ್ಲಿ ಹುಟ್ಟಿದವನು ರಣರಂಗದಲ್ಲಿ ತಂದೆಯಾಗಲಿ ತಮ್ಮನಾಗಲಿ ಅಣ್ಣನಾಗಲಿ ಗುರುಗಳಾಗಲಿ ಅವರನ್ನು ಕೊಂದರೆ ದೋಷವಿಲ್ಲ ಯಂಬುದಾಗಿ ಶ್ರುತಿಯಿರುವುದು ಬಲ್ಲಿರೊ ಹೇಳುತ್ತೇನೆ ಕೇಳಬಹುದು.

ಪದ

ರಣಕೆ ಕರೆದರೆ ಕೊಲುವದುಚಿತವು ಜರಿದ ತಂನನು
ಪವನಸಂಭವ ತರಿದು ಯಿವನನು ಕೊರಳ
ಕೊಟ್ಟೆನ್ನ ಕುರುಕುಲೇಂದ್ರನ ಅನುಜನಾ ಕಾಯ್ವೆ ॥

ಅರ್ಜುನ : ಭಾವಯ್ಯ, ನಾನು ಸುಮ್ಮನೆ ಮೌನದಲ್ಲಿದ್ದರೆ ಯೀ ಪವನಜನಾದ ಭೀಮನು ಯುದ್ಧಕ್ಕೆ ಕರೆಯುವನಲ್ಲಾ ನನ್ನಿಂದ ತಪ್ಪೇನು. ಅವನಾಗಿ ಕರೆಯುವಾಗ್ಗೆ ಯಿವನ ಸಂಹರಿಸಿ ಕೌರವನ ತಮ್ಮನಾದ ಯೀ ದುಶ್ಯಾಸನನ ರಕ್ತಪಾನವನ್ನು ಮಾಡಿರುವುದನ್ನು ನಿಮ್ಮ ಯದುರಿಗೆ ಕಾರಿಸಿ ಬಿಡುತ್ತೇನೆ ನೋಡಿರಿ.

ಪದ

ಯೆನುತ ಹರಿಯೊಳು ಪೇಳ್ ಫಲುಗುಣ
ಕರುಣವಾರುಧಿ ನುಡಿದ ಪಾರ್ಥಗೆ ॥

ಕೃಷ್ಣ : ಅಯ್ಯ ಅರ್ಜುನ ನಿನಗಷ್ಟು ಪರಾಕ್ರಮವೇಕೆ ಹೇಳುತ್ತೇನೆ ಕೇಳು.

ಪದ

ಮರುಳಾದೆಯೇನೊ ಪಾರ್ಥ ನಿನ್ನೊಳು ಬುದ್ಧಿ ಸ್ಥಿರವಾಗಲಿಲ್ಲವಲ್ಲಾ
ಯೇನು ಮಾಡಲಿ ಯೀ ಪೃಥ್ವಿಯಲ್ಲಿ ನೀನೊಬ್ಬನೆ ವೀರಾಧಿವೀರನು
ನಾವುಗಳೆಲ್ಲ ಶಿಖಂಡಿಗಳೇನೈ ಅರ್ಜುನ ॥

ಕುರುಬಲವನು ಜರಿದುದಲ್ಲದೆ ಯನ್ನ ಕರದ ಚಕ್ರವ ಕರೆದ
ಧುರಕೊಲ್ಲದೆ ನಾವು ಮೌನದೊಳಿದ್ದೆವು ತರಿವೆಯ
ಮರುತಜನ ಮರುಳಾದೆಯೇನೊ ಪಾರ್ಥ ॥

ಕೃಷ್ಣ : ಅರ್ಜುನಾ, ಪವನ ಸಂಭವನಾದ ಭೀಮನು ಯೀ ಸಮರ ಭೂಮಿಯಲ್ಲಿ ನಿನ್ನ ಒಬ್ಬನನ್ನೇ ಜರಿಯಲಿಲ್ಲ. ಕುರುಬಲವನ್ನು ಜರಿದು ನನ್ನಾ ಶರವನ್ನು ಕೂಡ ಹೀಯಾಳಿಸಿದನು. ನನ್ನ ಕರದಲ್ಲಿ ಯಿರತಕ್ಕ ಯೀ ಚಕ್ರವನ್ನೇ ಜರಿದನು. ಹೀಗಿರುವಲ್ಲಿ ಭೀಮನ ಮೇಲೆ ಹುಂಮಳಿಸಿದರೆ ಬದುಕುವುದುಂಟೆ ಭೀಮನ ಮೇಲೆ ಕೈಮಾಡತಕ್ಕದ್ದು ಕಾಲವಲ್ಲವೊ ಕಿರೀಟಿ.

ಅರ್ಜುನ : ಕಾಲವಲ್ಲದೆ ಯೇನಾಗಿರುವುದು ಯೀ ಭೀಮನು ಯಿನ್ನೆಷ್ಟರಮಟ್ಟಿಗೆ ಯಿರಬಹುದು.

ಕೃಷ್ಣ : ಅಯ್ಯ ಅರ್ಜುನ, ನಿನ್ನ ಶೌರ‌್ಯವನ್ನು ಬಿಡಲೇ ಇಲ್ಲವಲ್ಲ ಹೇಳುತ್ತೇನೆ ಕೇಳು. ಯಿಲ್ಲಿ ಬಾ ದಿವ್ಯ ದೃಷ್ಟಿಯನ್ನೂ ಕೊಡುತ್ತೇನೆ ಯಿಲ್ಲೀಗ ನೋಡುವನಾಗು. ನಿಮ್ಮಣ್ಣನಾದ ಭೀಮನೊ ಪ್ರಳಯ ಕಾಲದ ಮಹಾರುದ್ರನೊ ನೋಡು.

ಅರ್ಜುನ : ಭಾವಯ್ಯ ಮಹರುದ್ರನೆ ಹೊರತು ಅಣ್ಣನಾದ ಭೀಮನಲ್ಲ.

ಕೃಷ್ಣ : ಅರ್ಜುನ ಹಾಗಾದರೆ ಯುದ್ಧವನ್ನು ಮಾಡಬೇಕಾಗಿದ್ದರೆ ಹೋಗಬಹುದಲ್ಲಾ.

ಅರ್ಜುನ : ಭಾವಯ್ಯ ಹಾಗಾದರೆ ಅರಿಕೆ ಮಾಡಿಕೊಳ್ಳುತ್ತೇನೆ.

ಭಾಮಿನಿ

ನೋಡಿ ಕಣ್ಗಳು ಸೀಯೆ ನರನಿಗೆ ಖೋಡಿಯೋದುದು
ಮನವು ಪಾಡ ಕಾಣದೆ ಅಳಿವುತಿರ್ದೆನು ನೀವು ಪೇಳದಿರೆ ॥

ಅರ್ಜುನ : ಸ್ವಾಮಿ ಪರಮಾತ್ಮನೆ, ನಯನ ದೃಷ್ಟಿಯಿಂದ ನೋಡುವಲ್ಲಿ ಮಹಾಜ್ವಾಲೆ ವ್ಯಾಪಿಸುತ್ತಿರುವುದು. ಹತ್ತಿರ ಹೋಗಿ ಬದುಕುವುದುಂಟೆ. ತಾವು ಹೇಳದೆ ಯಿದ್ದರೆ ವ್ಯರ್ಥವಾಗಿ ಕೆಟ್ಟು ಹೋಗುತ್ತಾ ಯಿದ್ದೆ ಭಾವಯ್ಯ ಹೇಳುತ್ತೇನೆ.

ಭಾಮಿನಿ

ನೋಡಲಿವನೆ ತ್ರಿಪುರಹರ ಮಾತಾಡಿ ಕೆಟ್ಟೆನು ಅಣ್ಣನಲ್ಲ
ಆಡಿ ಫಲವೇನೆನುತ ಬಂದೊರಳಿದನು ಚರಣದೊಳು ॥

ಅರ್ಜುನ : ಭಾವಯ್ಯ, ಹೆಮ್ಮೆಯಿಂದ ಮಾತನಾಡಿ ಕೆಟ್ಟೆನು. ಅಣ್ಣನಾದ ಭೀಮನಲ್ಲ ಪ್ರಳಯ ಕಾಲದ ಮಹಾರುದ್ರನು ಮುಂದೇನು ಗತಿ ॥

ಕೃಷ್ಣ : ಅರ್ಜುನಾ ದೂರದಲ್ಲಿ ನಿಂತು ಭಕ್ತಿಯಲ್ಲಿ ಪ್ರಾರ್ಥನೆಯನ್ನು ಮಾಡು.

ಭಾಮಿನಿ

ಜಯ ಕೃಪಾಕರ ಮೂರ್ತಿ ನೋಡದೆ ತನಯನಪರಾಧವನು ಕಾಯೈ
ವನದೊಳಗೆ ಶರವಿತ್ತ ಅಭಯವನೆ ರಕ್ಷಿಸೆನ್ನನು ॥

ಅರ್ಜುನ : ಹೇ ಶಂಭುಶಂಕರ ದಿಗಂಬರ ಮಹೇಶ್ವರ ಫಾಲಾಕ್ಷ, ಶತಾಪರಾಧಿಯಾದ ತನಯನ ಅಪರಾಧವನ್ನು ಯೆಣಿಸದೆ ಅಭಯವನ್ನಿತ್ತು ಹರಸಿ ರಕ್ಷಿಸುವಂಥವರಾಗಿರಿ.

ಭಾಮಿನಿ

ಯೆನುತ ಫಲುಗುಣನೆರಗಲಡಿಯೊಳು ಘನಕೃಪೆಯೊಳಾ
ಮೇರುರೂಪನು ಕುರುಬಲವ ಜೈಸೆಂದು ಯಿತ್ತನು ಅಭಯವನು ನರಗೆ ॥

ಭೀಮ : ಅರ್ಜುನಾ, ಮುಂದಿನ ಧುರದಲ್ಲಿ ಕುರುಬಲದೋಳ್ ಜಯಶೀಲನಾಗೆಂದು ನನ್ನ ಪೂರ್ಣಾನಂದ ಆಶೀರ್ವಾದವನ್ನೂ ಕೊಟ್ಟು ಯಿರುವೆನು. ದಿಗ್ವಿಜಯವನ್ನು ಹೊಂದಯ್ಯ ವಿಜಯನೆ.

ಭೀಮ : ಯಲಾ ಚಾರಕ ಯಿಲ್ಲಿ ಬಾ.

ಸಾರಥಿ : ಅಪ್ಪೊ ಹತ್ತಿರಕ್ಕೆ ಕರೆಯುತ್ತೀರ ಹ್ಯಾಂಗೆ ಬರಲಪ್ಪಾ ಹೆದರಿಕೆ ಆಗ್ತದೆ. ಅದೇನಿದ್ರು ಅಲ್ಲೆ ಹೇಳಪ್ಪ.

ಭೀಮ : ಯಲಾ ಚಾರಕ ಹೆದರಬೇಡ. ಅರಮನೆಗೆ ಹೋಗಿ ಅಂಗನೆಯಾದ ದ್ರೌಪದಿಯನ್ನು ಕರೆದುಕೊಂಡು ಬರುವಂಥವನಾಗು.

ಸಾರಥಿ : ದ್ರೌಪತಮ್ಮ ಅವ್ವ ವಳಗೆ ಯೇನ ಮಾಡುತ್ತೀರಾ ಯೀಚೆಗೆ ಬಾರವ್ವಾ.

ದ್ರೌಪದಿ : ಯೇನಯ್ಯ ಸಾರಥಿ ಯಾತಕ್ಕೋಸ್ಕರ ಕರೆದಂಥವನಾದೆ.

ಸಾರಥಿ : ಅವ್ವೋ ಅಪ್ಪಾರು ಯಾತಕ್ಕೋ ಕರಕೊಂಡು ಬರಹೇಳಿದರು.

ದ್ರೌಪದಿ : ಹಾಗಂದರೇನಪ್ಪ ಸಾರಥಿ.

ಸಾರಥಿ : ಅವ್ವಾ ಭೀಮಪ್ಪ ನಿಮ್ಮನ್ನ ಬಿರೀನ ಕರಕೊಂಡು ಬರಹೇಳಿದರು.

ದ್ರೌಪದಿ : ಯಾತಕ್ಕೆ ಕರೆದು ಬಾಯೆಂದರು.

ಸಾರಥಿ : ಸ್ವಾಮಿಯವರು ದೊಡ್ಡ ಬೀಳು ಕೆಡವಿದ್ದಾರೆ. ವುಪ್ಪುಕಂಡ ಮಾಡೋದಕ್ಕೆ ಕಾರ ಅರಿಯೋದಕ್ಕೆ.

ದ್ರೌಪದಿ : ಧಾವಲ್ಲಿ ಯಿರುವರು.

ಸಾರಥಿ : ಯಿಗೋ ಯಿಲ್ಲಿ ಬನ್ನಿ ನಾ ಬ್ಯಾರೆ ಹತ್ತಿರಕ್ಕೆ ಬರೋದಿಲ್ಲ. ಅಗೋ ನೋಡಿ ಬೀಳಿನ ಮೇಲೆ ಕುಳಿತಿದ್ದಾರೆ ನೋಡಿ.

ದ್ರೌಪದಿ : ಸ್ವಾಮಿಯವರ ಪಾದಕ್ಕೆ ನಮಸ್ಕಾರ.

ಭೀಮ : ದ್ರೌಪದಿ ನಿನಗೆ ಮಂಗಳವಾಗಲಿ ವಾಮಾಂಕದಲ್ಲಿ ವಿಶ್ರಮಿಸಿಕೊ.

ದ್ರೌಪದಿ : ಸ್ವಾಮಿ, ತಾವು ಯಂದಿನ ಹಾಗೆ ಯಿಲ್ಲ ಹತ್ತಿರಕ್ಕೆ ಬರಲು ಅಂಜಿಕೆಯಾಗುವುದು.

ಭೀಮ : ದ್ರೌಪದಿ ಭಯಪಡಬೇಡ ಹತ್ತಿರಕ್ಕೆ ಕೂರುವಳಾಗು.

ದ್ರೌಪದಿ : ಹೇ ಪ್ರಿಯರೆ ನನ್ನನ್ನು ಕರೆಸಿದ ಕಾರಣವೇನು ಸ್ವಾಮಿ.

ಭೀಮ : ಹೇ ಪ್ರಿಯಳೆ, ಪೂರ್ವದಲ್ಲಿ ದುಶ್ಯಾಸನನು ನಿನ್ನ ಸೀರೆಯನ್ನೂ ಸೆಳೆದು ಮಾನಭಂಗವನ್ನು ಮಾಡುವ ಕಾಲದಲ್ಲಿ ನಾನು ನಿನಗೆ ಯೇನು ಹೇಳಿದ್ದೆ ॥

ದ್ರೌಪದಿ : ಕಾಂತಾ, ಆ ಕಾಲದಲ್ಲಿ ದುಶ್ಯಾಸನನ ವುದರವನ್ನು ಸೀಳಿ ರಕ್ತವನ್ನು ತೆಗೆದು ನನ್ನ ಮಂಡೆಗೆ ಹಚ್ಚಿ ಹಲ್ಲುಗಳನ್ನು ಕಿತ್ತು ತಲೆಯನ್ನು ಬಾಚಿ ಕರುಳನ್ನು ಕಿತ್ತು ಕುರುಳು ಕಟ್ಟುವುದಾಗಿ ವಾಗ್ದಾನವಾಗಿತ್ತು.

ಭೀಮ : ದ್ರೌಪದಿ ಅಹುದೊ ಮರೆತಿಲ್ಲವೊ ಹೇಳುತ್ತೇನೆ ಕೇಳುವಳಾಗು.

ಭಾಮಿನಿ

ಯಿತ್ತಲಾ ಘನಪರಾಕ್ರಮಿ ಭೀಮ ಕರೆಸಿ ನಿಜಸತಿಯ
ದುರುಳನ ವುದರ ರಕ್ತವ ತೆಗೆದು ನಾರಿಯ ತುರುಬ ನೆನೆಯಿಸಿ
ಕರುಳ ಪೂಮಾಲೆಗಳ ಮುಡಿಸುತ ತರುಣಿಗಿಂತೆಂದ ॥

ಭೀಮ : ಹೇ ಕಾಂತೆ, ಪೂರ್ವದಲ್ಲಿ ನಿನಗೆ ಕೊಟ್ಟ ವಾಗ್ದಾನಕ್ಕಾಗಿ ಯೀ ದಿವಸ ಯೀ ದುರುಳನಾದ ದುಶ್ಯಾಸನನ ವುದರವನ್ನು ಬಗೆದು ರಕ್ತವನ್ನು ತೆಗೆದು ಕುರುಳು ನೆನೆಯುವಂತೆ ಮಂಡೆಗೆ ಹಚ್ಚಿ ಯಿವನ ಹಲ್ಲುಗಳನ್ನು ಕಿತ್ತು ತಲೆಯನ್ನು ಬಾಚಿ ಯಿಗೋ ಕರುಳನ್ನೂ ತೆಗೆದು ಮುಡಿಯನ್ನು ಕಟ್ಟಿ ಯಿರುತ್ತೇನೆ ಆನಂದವಾಯಿತೇನೆ ರಮಣಿ.

ದ್ರೌಪದಿ : ಪತಿಯವರೆ ಆನಂದವಾಯಿತು.

ಭಾಮಿನಿ

ದುರುಳ ದುಶ್ಯಾಸನನಹುದೊ ಭರದಿ ನೋಡಂಜದಿರು
ಸಭೆಯೊಳಗೊರೆದ ಭಾಷೆಯು ಸಂದುದು ನಡಿ ಪಾಳೆಯಕೆ ಯೆಂದ ॥

ಭೀಮ : ದ್ರೌಪದಿ ನಿನ್ನ ಮಾನಭಂಗವನ್ನು ಮಾಡಿದಂಥ ದುರುಳನಾದ ದುಶ್ಯಾಸನ ಯಿವನೇ ಅಹುದೊ ಅಲ್ಲವೊ ಅಂಜಬೇಡ ಚನ್ನಾಗಿ ನೋಡು.

ದ್ರೌಪದಿ : ಪ್ರಿಯರೆ, ನನ್ನ ಮಾನಭಂಗವನ್ನು ಮಾಡಿದಂತ ಮೂದೇವಿ ಯಿವನೇ ಅಹುದು ನೋಡಿದೆನು.

ಭೀಮ : ಅರ್ಧಾಂಗಿಯೆ ಹಾಗಾದರೆ ಪಂಥವು ಯೀಡೇರಿತು.

ದ್ರೌಪದಿ : ಕಾಂತಾ ಯೀಡೇರಿತು.

ಭೀಮ : ದ್ರೌಪದಿ ಯೀ ಮೂದೇವಿಯನ್ನೂ ನನ್ನ ಮುಂದೆ ಜರಿಯುವಂಥವಳಾಗು.

ದ್ರೌಪದಿ : ಯಲಾ ದುರುಳ, ನಾನು ಪೂರ್ವದಲ್ಲಿ ಬೇಡವೆಂದು ಸಾರಿ ಹೇಳಿದರು ಕೇಳದೆ ಸೀರೆಯನ್ನು ಸೆಳೆದುದಕ್ಕೆ ನಿನಗೆ ಯಿಗೋ ಕಡೆಗಾಲಕ್ಕೆ ಕಾರಣವಾಯಿತು, ಛೀ ಹೋಗು ಶುನಕ. ಪ್ರಿಯರೆ ಯೀ ಲಂಡನನ್ನು ಜರಿದೆನು ನನ್ನಿಂದ ಯಿನ್ನೇನು ಕೆಲಸ.

ಭೀಮ : ದ್ರೌಪದಿ, ಯಿನ್ನೇನು ನಿನ್ನಿಂದ ಕೆಲಸ ಅರಮನೆಗೆ ಹೊರಟು ಹೋಗು.

ದ್ರೌಪದಿ : ಪ್ರಿಯರೆ ಅಪ್ಪಣೆ ಹೊರಟು ಹೋಗುವೆನು ನಮಸ್ಕಾರ.

ಭಾಮಿನಿ

ತರುಣಿ ಪೇಳಿದಳಾಗ ಕಾಂತನೋಳ್ ಪರಮ ಶೂರನು ಪಂಥದಲಿ
ಯೆಂದೊರೆದು ತೆರಳ್ದಳು ಪಾಳಯಕೆ ಯಿತ್ತ ಪವನಜನು ॥

ಭೀಮ : ಅಯ್ಯ ಭಾಗವತರೆ, ಯೀ ದುರುಳನಾದ ದುಶ್ಯಾಸನನ ವಧೆಯನ್ನು ಮಾಡಿದ್ದರಿಂದ ನನ್ನ ಶರೀರವು ರಕ್ತವಾಗಿರುವುದರಿಂದ ಸ್ನಾನವನ್ನು ಮಾಡಿಕೊಂಡು ಮುಂದಕ್ಕೆ ತೆರಳುತ್ತೇನೆ.

ಭಾಮಿನಿ

ದುರುಳನನ್ನು ಕೊಂದಾಗ ಶರೀರದೊಳಗಿರುವ ಶ್ರೋಣಿತವನ್ನು
ತೊಳೆದು ಉರವಣಿಸಿ ಬರುತಿತಲು ಕರ್ಣಕುಮಾರನಿದಿರಾದ ॥

ವೃಷಸೇನ : ಯಲಾ ವಾಯುಪುತ್ರನಾದ ಭೀಮನೆ, ನಿನ್ನ ರಥವನ್ನೂ ಅಲ್ಲೇ ನಿಲ್ಲಿಸು. ಕರ್ಣಪುತ್ರನಾದ ನನ್ನಲ್ಲಿ ಜಯಪ್ರದವನ್ನೂ ಹೊಂದಿ ಮುಂದಕ್ಕೆ ತೆರಳುವನಾಗು ಹೇಳುತ್ತೇನೆ.

ಪದ

ನಿಲ್ಲೆಲ್ಲಿಗೆ ಪೋಗುವೆ ಪವನಜ ಬಲ್ಲೆನು ಪೌರುಷವ
ಯಲ್ಲರೊಳಗೆ ನೀ ಬಗುಳಿದ ಮಾತುಗಳೆನ್ನೊಳು ಪೇಳೆಂದ ॥

ವೃಷಸೇನ : ಯಲಾ ಪವನಜನಾದ ಭೀಮನೆ ನಿಲ್ಲು ನಿಲ್ಲು. ನಿನ್ನ ಪೌರುಷವನ್ನು ನಾನು ಬಲ್ಲೆ. ರಾಷ್ಟ್ರಾಧಿಪನಾದ ಕೌರವನ ತಮ್ಮನಾದ ದುಶ್ಯಾಸನ ಮಹಾರಾಜನನ್ನು ಸಂಹಾರ ಮಾಡಿದೆನೆಂಬ ಅಹಂಕಾರ ಯಿರಬಹುದು. ಆ ಪರಾಕ್ರಮವನ್ನು ಯೀಗ ನನ್ನಲ್ಲಿ ತೋರಿಸಿ ಮುಂದಕ್ಕೆ ತೆರಳಬಹುದೊ ದುರುಳ.

ಭೀಮ : ಯಲಾ ಹುಡುಗನೆ ಶಹಬ್ಬಾಸ್ ಹೇಳುತ್ತೇನೆ ಕೇಳು.

ಪದ

ಹಸುಮಗನಾಗಿ ನೋಡಲು ಮಮತೆಯು ಪಸರಿಸುವದು
ಮುನ್ನಾ ವಸುಧೆಯೊಳಗೆ ನೀ ಸಾಯದಿರೆನುತಲಿ ಹೊಸ ಕಣೆಗಳ ಹೊಡೆಯೆ ॥

ಭೀಮ : ಯಲಾ ಹುಡುಗನೆ, ನಿನ್ನನ್ನು ನೋಡಿ ಕರುಣ ಹುಟ್ಟಿ ಕೈ ಮಾಡುವುದಕ್ಕೆ ಮನಸ್ಸು ಬಾರದು. ಆದಾಗ್ಯು ಹೊಸ ಕೂರ್ಗಣಿಗಳನ್ನು ಬಿಟ್ಟುಯಿರುತ್ತೇನೆ ತರಹರಿಸಿಕೊಳ್ಳುವಂಥವನಾಗು.

ವೃಷಸೇನ : ಯಲಾ ಭೀಮ ಹಾಗಾದರೆ ಹೇಳುತ್ತೇನೆ.

ಪದ

ವೃಷಸೇನನು ಅದ ಖಂಡ್ರಿಸಿ ಭೀಮನು ದೆಸೆಗೆಡುವಂದದಲಿ
ಅಶ್ವಿನಿ ಬಾಣಗಳನ್ನು ಹೊಡೆಯಲು ಹಾರ್ದುದು ರವಿ ಶಶಿಗಳ ಬಳಿಗೆ ॥

ವೃಷಸೇನ : ಯಲಾ ಭೀಮ, ನೀನು ಬಿಟ್ಟುಯಿರುವ ಕಣೆಗಳನ್ನೂ ಖಂಡ್ರಿಸಿ ನೀನು ದೆಶೆಗೆಡುವಂತೆ ಸೂರ‌್ಯಮಂಡಲ ಚಂದ್ರಮಂಡಲವನ್ನೂ ಮೀರಿ ಹಾರುವ ಅಶ್ವಿನಿ ಬಾಣಗಳನ್ನು ಅಭಿಮಂತ್ರಿಸಿ ಬಿಟ್ಟುಯಿರುತ್ತೇನೆ ತರಹರಿಸಿಕೊಳ್ಳುವಂಥವನಾಗು.

ಭೀಮ : ಭಳಿರೆ ಕರ್ಣಕುಮಾರ ಹಾಗಾದರೆ ಹೇಳುತ್ತೇನೆ.

ಪದ

ಭಳಿರೆ ಯನುತ ಕಲಿ ಪವನಜ ಬಾಣವ ಸವರುತ ಯಲ್ಲವನು
ಯಿನಸುತ ಪುತ್ರನ ಮೇಲ್ಕರೆದನು ಘನಕಣೆಗಳನು ॥

ಭೀಮ : ಯಲಾ ಬಾಲಕನೆ, ನೀನು ಅಭಿಮಂತ್ರಿಸಿ ಬಿಟ್ಟ ಅಶ್ವಿನಿ ಬಾಣಗಳನ್ನೂ ಖಂಡ್ರಿಸಿ ನಿನ್ನ ಮೇಲೆ ಬಹಳ ಘನತರವಾದ ಬಾಣಗಳನ್ನು ಬಿಟ್ಟುಯಿರುತ್ತೇನೆ ತರಹರಿಸಿಕೊಳ್ಳುವಂಥವನಾಗು.

ವೃಷಸೇನ : ಯಲಾ ಭೀಮ ಹಾಗಾದರೆ ಹೇಳುವೆನು.

ಪದ

ಯಚ್ಚಂಬುಗಳನು ಸವರುತ ರವಿಜನು ಸತ್ವದೊಳಾಕ್ಷಣದಿ ಚುಚ್ಚಿದ
ಘನತರ ಘೋರಶರವನಾಗ ಮೂರ್ಛಿಸಿದನು ಭೀಮ ॥

ವೃಷಸೇನ : ಯಲಾ ಭೀಮ, ನೀನು ಬಿಟ್ಟ ಘನತರವಾದ ಬಾಣಗಳನ್ನು ಖಂಡ್ರಿಸಿ ನೀನು ಮೂರ್ಛೆ ಹೊಂದುವ ಘನತರವಾದ ಶರಗಳನ್ನು ಅಭಿಮಂತ್ರಿಸಿ ಬಿಟ್ಟಿರುತ್ತೇನೆ ರಣಾಗ್ರಕ್ಕೆ ಯದುರಾಗು.

 

(ಭೀಮನ ಮೂರ್ಛೆ)

ವೃಷಸೇನ : ಯಲಾ ಭೀಮ, ನಿನ್ನ ಪಾಡೇನಾಯ್ತು ನೋಡಿಕೊಳ್ಳುವಂಥವನಾಗು, ಯೀ ಕರ್ಣಕುಮಾರನ ಕೈಗಾರಿಕೆ ಗೊತ್ತಾಯ್ತೇನೊ ದಗಡಿ ॥

ಭಾಮಿನಿ

ಪೊಡವಿಯೋಳ್ ಮೂರ್ಛಿಸೆ ಅನಿಲಜ
ಖಡಿಖಡಿಯುಗುಳುತಲಿ ಪಾರ್ಥ ಬಂದಾಕ್ಷಣದೊಳು
ಹುಡುಗನೆ ಮುಂದಕ್ಕೆ ತೆರಳದಿರು
ಪಡದಾಕಿಗೆ ಮರಣದ ವಾರ್ತೆಯನು ಕೊಡುವೆನೆಂದ ॥

ಅರ್ಜುನ : ಯಲಾ ತರಳನೆ ಮುಂದಕ್ಕೆ ತೆರಳೀಯ ಹುಷಾರ್. ನಿನ್ನ ಹೆತ್ತವ್ವನಿಗೆ ಮೊದಲು ಮರಣದ ಸುದ್ಧಿಯನ್ನು ಕೊಟ್ಟು ನನ್ನೊಡನೆ ಕಾಳಗಕ್ಕೆ ಕೈಗೊಡುವಂಥವನಾಗು ಕುನ್ನಿ.