ಪದ ರಾಗ ಆದಿತಾಳ

ಬ್ಯಾಡವೆನಗೆ ದೊರೆತನ ಮುರಹರನೆ ಕೇಳು ಕಾಡೊಳಗಿರುವುದು ಘನ
ಪಾರ್ಥ ಜೈಸಿದಂತೆ ದೊರೆತನ ಅವರೇ ಆಳಲಿ ॥

ಧರ್ಮಜ : ಮುರವೈರಿಯಾದ ಶ್ರೀಹರಿಯೆ, ನಾನು ಯಿದುವರೆವಿಗು ದೊರೆತನ ಮಾಡಿದ್ದೆ ಸಾಕು, ಮುಂದೆ ನನಗೆ ಬ್ಯಾಡಿ. ಅರ್ಜುನ ಜೈಸಿದಂಥ ದೊರೆತನವನ್ನು ಭೀಮಾರ್ಜುನರೆ ವಹಿಸಿಕೊಳ್ಳಲಿ. ನಾನು ಕಾಡುಪಾಲಾಗಿ ತಮ್ಮ ಧ್ಯಾನವನ್ನು ಮಾಡಿಕೊಂಡು ಇರುತ್ತೇನೆ ಅಪ್ಪಣೆ ಕೊಡುವಂಥವರಾಗಿರಿ.

ಪದ

ನಾನು ಯಿರುವುದರಿಂದ ಯಿವರಿಗೀ ಪರಿಬವಣೆಯಾಯಿತು
ಪೇಳ್ವುದೇನೆಂದು ನೆನೆದು ನಿನ್ನಯ ಪಾದಪದ್ಮವ ಸ್ಮರಿಸುವೆ
ವನದೊಳಗಿರಲು ಯನಗೆ ನೀನೇ ಗತಿ ದೇವ ॥

ಧರ್ಮಜ : ಭಾವಯ್ಯ, ನಾನು ಯಿದ್ದದ್ದರಿಂದ ಯೀ ಅರ್ಜುನನಿಗೆ ಎಷ್ಟು ಪರಿಬವಣೆ ಬಂದಿರುವುದೊ, ಯಿವನಿಗೆ ಯಾತಕ್ಕೆ ಯಿಷ್ಟು ಬ್ಯಾಸರವಾಗಿರಬೇಕು. ಪ್ರಯೋಜನವಿಲ್ಲ ಕಾಡಿನಲ್ಲಿ ತಮ್ಮ ಧ್ಯಾನವನ್ನು ಮಾಡಿಕೊಂಡು ತಮ್ಮ ಕಮಲ ಚರಣ ಅಧರಾಮೃತವನ್ನು ಸ್ಮರಿಸಿಕೊಂಡು ಯಿರುತ್ತೇನೆ. ಅರಣ್ಯಕ್ಕೆ ಹೋಗಲು ಅಪ್ಪಣೆಯಾಗಬೇಕು.

ಪದ

ಯನುತ ಹೊರಡೆ ಧರ್ಮನಂದನ ದ್ರೌಪದಿ ಬಂದು
ಜನಪನೊಡನೆ ತಾನು ಕೇಳಿದಳು॥

ದ್ರೌಪದಿ : ಪ್ರಿಯರೆ ನಮಸ್ಕರಿಸುವೆ ನಿಮ್ಮ ಗಮನವೆಲ್ಲಿಗೆ ॥

ಧರ್ಮಜ : ನಿನಗೆ ಮಂಗಳವಾಗಲಿ ದ್ರೌಪದಿ. ಕಣ್ಣಿನಿಂದ ನೋಡಿ ಕರ್ಣದಿಂದ ಕೇಳಿ ನಿಮ್ಮ ಗಮನವೆಲ್ಲಿ ಯೆಂದು ಕೇಳುವೆಯಲ್ಲಾ. ಅರ್ಜುನನು ಆಡುವ ಕರ್ಣಕಠೋರವಾದ ಮಾತುಗಳನ್ನು ಕೇಳಿ ನಾನು ಯಿರಬಹುದೆ ನೀನೇ ಯೋಚಿಸು ಕಾಡಿಗೆ ಹೋಗುತ್ತೇನೆ.

ಪದ ರಾಗ ಆದಿತಾಳ

ಪ್ರಿಯ ಬರುವೆ ರಾಯ ಕೇಳಿ ಕರೆದು ಪೋಗಿ ಕಾಡಿಗೆನ್ನ
ನಿಮ್ಮ ಸೇವೆ ಮಾಡುತಿರುವೆ ಹರಿಯ ಧ್ಯಾನದಿ ॥

ದ್ರೌಪದಿ : ಆರ‌್ಯರೆ, ಸತ್ಯಸಂಧರಾದ ನಿಮ್ಮನ್ನಗಲಿ ಅರಘಳಿಗೆಯು ಯಿಲ್ಲಿ ಯಿರತಕ್ಕವಳಲ್ಲ. ಪ್ರಯಾಣಕ್ಕೆ ಸಿದ್ಧಳಾಗಿರುವೆ. ಕರೆದುಕೊಂಡು ಹೋಗಬೇಕಾಗಿ ಪ್ರಾರ್ಥಿಸುವೆನು.

ಧರ್ಮಜ : ಪ್ರಿಯಳೆ ಯಿದರ ಮೇಲೆ ನಿನ್ನ ಯಿಷ್ಟ ಹೊರಡಬಹುದು.

ಭಾಮಿನಿ

ಯಂದು ಧರ್ಮಜ ಹೊರಡಲು ಪಾರ್ಥನು ಬಂದು
ಬಿದ್ದನು ಹರಿಯ ಚರಣ ಗೋವಿಂದನೆ ಗತಿ
ಯಾರು ಯನಗೆಂದೆನುತ ಹಲುಬಿದನು ॥

ಅರ್ಜುನ : ಭಾವಯ್ಯ ಶ್ರೀಹರಿ ಲಕ್ಷ್ಮೀಲೋಲನೆ, ಅಗ್ರಜರಾದ ಧರ್ಮರಾಯರು ದ್ರೌಪದಿ ಸಮೇತ ವನವಾಸಕ್ಕೆ ಹೋಗುತ್ತೇವೆಂದು ಪ್ರಯಾಣಕ್ಕೆ ಸಿದ್ಧವಾಗಿರುವರಲ್ಲಾ, ಹೇ ದೈತ್ಯಾಂತಕ ನನಗೆ ಮುಂದೇನು ಗತಿ ಅಪ್ಪಣೆಯಾಗಲಿ.

ಕೃಷ್ಣ : ಅಯ್ಯ ಧನಂಜಯನೆ ಹಾಗಾದರೆ ಹೇಳುವೆ ಲಾಲಿಸು.

ಭಾಮಿನಿ

ನರನೆ ಶೀಘ್ರದಿ ಪೋಗಿ ಧರ್ಮಜಗೆರಗಿ ದುಃಖವ ಪರಿಹರಿಸಿ
ಭವನಕೆ ಕರೆದು ತಂದರೆ ನಿನ್ನ ಪುಣ್ಯಕೆ ಸರಿಯೆ ಹೋಗೆಂದಾ ॥

ಕೃಷ್ಣ : ಹೇ ನರನಾದ ಅರ್ಜುನನೆ, ಶೀಘ್ರದಲ್ಲಿ ಪೋಗಿ ಧರ್ಮಜನಿಗೆರಗಿ ಪಾದಾಭಿವೊಂದನೆಯಂ ಮಾಡಿ ಆತನ ಮನ ಮರುಗುವಂತೆ ಮಾತನಾಡಿಸಿ ಚಿತ್ತವನ್ನು ವುಲ್ಲಾಸಪಡಿಸಿ ದುಃಖವನ್ನು ಪರಿಹರಿಸಿ ಅರಮನೆಗೆ ಕರೆದು ತಂದರೆ ನಿನ್ನ ಪುಣ್ಯಕ್ಕೆ ಸಮಾನವಿಲ್ಲ ಕಂಡಿಯೊ. ಯೀ ಕ್ಷಣವೆ ಧರ್ಮಜನ ಪಾದಕ್ಕೆ ಯರಗಿ ಕರೆದುಕೊಂಡು ಬರುವಂಥವನಾಗಯ್ಯ ಪಾರ್ಥ ನೀ ಮಾಡಿದ್ದು ನಿರರ್ಥ.

ಪದ

ಬಂದೆರಗಿದ ಅಗ್ರಜನ ಪಾದದೊಳು ನಿಂದು ಶೋಕಿಸಿದ ನರನು
ತಂದೆ ಪಾಲಿಸು ಯನ್ನ ಅಪರಾಧಗಳನಿಂದು ಎಂದೊರಳಿದ ಪಾದದಿ ॥

ಅರ್ಜುನ : ಅಣ್ಣಯ್ಯ, ಮುಖವನ್ನು ಕೊಟ್ಟು ಮಾತನಾಡಲು ನನಗೆ ನಾಚಿಕೆಯಾಗಿರುವುದು. ಶತಾಪರಾಧಿಯಾದ ನನ್ನನ್ನೂ ಕಾಪಾಡಿ ಅರಮನೆಗೆ ದಯಮಾಡಿಸಬೇಕೊ ಅಣ್ಣಯ್ಯ.

ಧರ್ಮಜ : ಅಸಹಾಯಶೂರನಾದ ಅರ್ಜುನನೆ ನಿನಗೆ ನಾಚಿಕೆಯಿಲ್ಲ ನನಗೆ ಆಗಿರುವುದು. ಯೀ ನನ್ನ ಹಾಳು ಮೋರೆಯನ್ನು ನೋಡಬೇಡ ನನ್ನ ಕರೆಯಲೂ ಬೇಡ. ನನ್ನ ದಾರಿ ನನಗಿರುವುದು ಹೋಗು ಹೋಗು ನಿಲ್ಲಬೇಡ.

ಅರ್ಜುನ : ಅಣ್ಣಯ್ಯ, ಹೀಗೆ ಅಪ್ಪಣೆಯನ್ನು ಕೊಡಬಹುದೆ. ಶತಾಪರಾಧಿಯಾದ ನನ್ನ ತಪ್ಪನ್ನು ಕ್ಷಮಿಸಬೇಕೆಂದು ಮೊದಲೇ ವಿಜ್ಞಾಪಿಸಿರುವೆನು.

ಪದ

ತಂದೆ ಸಂದಾರಭ್ಯ ನಮ್ಮನ್ನೂ ನೀವು ಯಿಂದಿನೊರೆಗು
ಪೊರೆದು ಯಿಂದೆನ್ನ ಅಗಲಿ ॥

ಅರ್ಜುನ : ಅಣ್ಣಯ್ಯ, ತಂದೆಯವರು ಪರಂಧಾಮವನ್ನು ಹೊಂದಿದ ಕಾಲದಲ್ಲಿ ನಾವುಗಳೆಲ್ಲ ಎಳೆ ಕೂಸುಗಳು. ಅಂದಿನಿಂದ ಕಾಪಾಡಿ ಯೀ ಕಾಲದಲ್ಲಿ ನಮ್ಮನ್ನು ಕೈಬಿಟ್ಟು ಕಾಡಿದರೆ ನಾಡಿನವರು ಮೆಚ್ಚುವರೇ ಆಡಿಕೊಳ್ಳುವರೈ ಅಗ್ರಜ. ಮುಂದೆ ನಮಗೇನು ಗತಿ. ನನ್ನ ಅಪರಾಧವನ್ನು ಕ್ಷಮಿಸಿ ಅರಮನೆಗೆ ದಯಮಾಡಿಸಿ.

ಧರ್ಮಜ : ಪರಾಕ್ರಮಿಯಾದ ಅರ್ಜುನ ಧೀರನೆ, ನನ್ನ ಹಂಗೇನು ಯಿರುವುದು. ಸ್ವತಂತ್ರನಾಗಿರುವೆ ಮತ್ತು ನಿಮ್ಮ ಅಣ್ಣನಾದ ಭೀಮನು ಬಲಾಢ್ಯನಾಗಿರುವನು. ಹೀಗಿರುವಲ್ಲಿ ಪಾಮರನಾದ ನನ್ನಿಂದ ಆಗುವುದೇನು. ಒಂದನ್ನೂ ಅರಿಯದ ತಬ್ಬಲಿಗಳಾದ ನಕುಲ ಸಹದೇವರೆಂಬ ಬಾಲಕರನ್ನೂ ಮಾತ್ರ ಕಾಪಾಡುವೆಯೊ ಅದು ಯಿಲ್ಲವೊ. ನನ್ನ ಜೊತೆಯಲ್ಲಿ ಕಾಡಿನಲ್ಲಿ ಗೆಡ್ಡೆಗಣಸು ತಿನ್ನಿಸುವುದಕ್ಕೆ ಕರೆದುಕೊಂಡು ಹೋಗಲೇನಯ್ಯ ಅರ್ಜುನ.

ಅರ್ಜುನ : ಅಣ್ಣಯ್ಯ, ನಿರ್ದಯದಿಂದ ಯಿಂಥ ಮಾತುಗಳನ್ನಾಡಬೇಡ. ನಿನ್ನ ಕರುಣಾರಸವೆಂಬ ಮಡುವಿನಲ್ಲಿ ನಮ್ಮನ್ನು ಮುಳುಗಿಸಿ ಕಾಪಾಡಬೇಕೋ ಅಣ್ಣಯ್ಯ ಮುಂದೆ ಹೇಳುವೆ.

ಪದ

ನಿಮಗೆ ಕಂಟಕವಿತ್ತ ಯಿನ ಸುತನನು ನಾನು
ಘನ ಪೌರುಷದಿ ಕೊಂದು ನಿಮಗೆ ಮುಖವ
ತೋರ್ಪೆಯಿಂದಿನೊಳೆನುತಲಿ ಕಲಿಪಾರ್ಥನೆರಗಲಾಗ ॥

ಅರ್ಜುನ : ಅಣ್ಣಯ್ಯ, ನಿಮಗೆ ಕಂಟಕವನ್ನು ಕೊಟ್ಟು ಕಷ್ಟಪಡಿಸಿದ ರಾಧಾಪುತ್ರನಾದ ಖೂಳ ಕರ್ಣನನ್ನು ಸಂಹಾರ ಮಾಡಿ ಅನಂತರ ಬಂದು ನಿಮಗೆ ಮುಖವನ್ನು ತೋರಿಸುತ್ತೇನೆ. ಪರಂತು ಯೀ ಮಧ್ಯ ತೋರಿಸುವುದಿಲ್ಲ. ಮನೋಲ್ಲಾಸದಿಂದ ದ್ರೌಪದಿಯನ್ನು ಕರೆದುಕೊಂಡು ಅರಮನೆಗೆ ದಯಮಾಡಿಸಬಹುದೊ ಅಣ್ಣಯ್ಯ.

ಧರ್ಮಜ : ಆಹಾ, ಯೀ ಅರ್ಜುನನು ಯೆಷ್ಟು ಸಮಾಧಾನಪಡಿಸಿದರು, ಯಂನ ಮನ ವಡಂಬಿಡುವುದಿಲ್ಲವಲ್ಲ ಯೇನು ಮಾಡಲಿ.

ಕೃಷ್ಣ : ಅಯ್ಯ ಧರ್ಮಜ ಭೂಪಾಲ, ಹಾಗೆ ಮನವನ್ನು ಕೊಡಬೇಡ ನನ್ನ ಮಾತು ಲಾಲಿಸು.

ಭಾಮಿನಿ

ನೋಡಿ ಮುರರಿಪು ನಗುತ ಧರ್ಮಜನೊಳಾಡಿದನು
ಮಧುರೋಕ್ತಿಯಲಿ ಆಡಿ ಫಲವೇನಿನ್ನು ಕರ್ಣನ ತರಿವೆ
ಯಿಂದಿನಲಿ ಮಾಡದಿರು ಪಯಣಕ್ಕೆ ಮನವನು
ನೋಡು ಮುಂದಣ ಕಾರ‌್ಯವೆಂದೆನೆ ಬಾಡಿದ ವದನದಿಂದ
ಪೊಕ್ಕನು ಜನಪ ಪಾಳೆಯವ ॥

ಕೃಷ್ಣ : ಅಯ್ಯ ಧರ್ಮಜ, ಯಿದುವರೆವಿಗೂ ನುಡಿದ ಮಾತನ್ನೇ ನುಡಿದು ಫಲವೇನು. ಅರಣ್ಯಕ್ಕೆ ಹೋಗತಕ್ಕ ಗಮನವನ್ನು ಮರೆತು ಅರಮನೆಗೆ ನಡಿ. ನಿನ್ನ ವೈರಿಯಾದ ಖೂಳ ಕರ್ಣನನ್ನೂ ಕೊಲ್ಲುವುದಕ್ಕೆ ಯಿಲ್ಲಿಂದಲೆ ಮುಂದಕ್ಕೆ ಹೊರಟು ಹೋಗುತ್ತೇನೆ. ವುತ್ತರೋತ್ತರ ಕಾರ‌್ಯಮುಖೇನ ಗೊತ್ತಾದೀತು. ಪ್ರಯಾಣಕ್ಕೆ ಮನವನ್ನು ಕೊಡದೆ ಪಾಳೆಯಕ್ಕೆ ಹೊರಟು ಹೋಗುವಂಥವನಾಗಯ್ಯ ಧರ್ಮಜ.

ಧರ್ಮಜ : ಭಾವಯ್ಯ, ಪುನಹ ನಿಮ್ಮ ಮಾತಿಗೆ ಪ್ರತಿಕೂಲವಿಲ್ಲ. ಏನಾದರು ಆಗಲಿ ಹೊರಟು ಹೋಗುತ್ತೇನೆ.

ವಚನ : ಯೀ ಪ್ರಕಾರದಿಂದ ಶ್ರೀಕೃಷ್ಣದೇವರು ಧರ್ಮರಾಯನನ್ನು ಸಂತೈಸಿ ಪಾಳಯಕ್ಕೆ ಕಳುಹಿಸಿ, ಇತ್ತಲಾ ಕುರುಬಲದಲ್ಲಿ ಕೌರವೇಶ್ವರನ ತಮ್ಮನಾದ ದುಶ್ಯಾಸನ ಮಹಾರಾಜನು ಯಾವ ರೀತಿ ವಡ್ಡೋಲಗಸ್ತನಾದನು ಯಂದರೆ.

 

(ದುಶ್ಶಾಸನನ ಒಡ್ಡೋಲಗ)

ಭಾಗವತ : ಭಳಿರೆ ರಾಜಾಧಿರಾಜ ರಾಜ ಕೀರ್ತಿ ಮನೋಹರ.

ದುಶ್ಶಾಸನ : ಬನ್ನಿರೈಯ್ಯ ಬನ್ನಿರಿ.

ಭಾಗವತ : ತಾವು ಧಾರು ತಮ್ಮ ಸ್ಥಳ ನಾಮಾಂಕಿತ ಧಾವುದು.

ದುಶ್ಶಾಸನ : ಹಸ್ತಿನಾವತಿಗೆ ಯಾರೆಂಬುದಾಗಿ ಕೇಳಿಬಲ್ಲಿರ.

ಭಾಗವತ : ರಾಷ್ಟ್ರಾಧಿಪತಿಯಾದ ಕೌರವೇಶ್ವರನೆಂದು ಕೇಳಿಬಲ್ಲೆವು.

ದುಶ್ಶಾಸನ : ಅಂತಪ್ಪ ರಾಷ್ಟ್ರಾಧಿಪತಿಯಾದ ಕೌರವೇಶ್ವರನ ತಮ್ಮನಾದ ದುಶ್ಯಾಸನ ಮಹಾರಾಜನೆಂದು ತಿಳಿದುಕೊಳ್ಳಬಹುದು.

ಭಾಗವತ : ಮಹಾರಾಜನೆ ತಿಳಿದ ಹಾಗಾಯಿತು. ಯೀ ಕುರುಕ್ಷೇತ್ರಕ್ಕೆ ಬಂದ ಕಾರಣವೇನು.

ದುಶ್ಶಾಸನ : ಅಯ್ಯ ಭಾಗವತರೆ, ಯೀ ಕುರುಕ್ಷೇತ್ರದಲ್ಲಿ ನನ್ನ ವೈರಿಯಾದ ಭೀಮನು ಬಂದಿರುವನಂತೆ. ಅವನನ್ನು ಹುಡುಕಿಕೊಂಡು ಬಂದಿರುವೆನು. ಧಾವಲ್ಲಿರುವನೋ ಕಾಣೆನಲ್ಲಾ ಯೆಲ್ಲಿ ನೋಡಲಿ.

ಭಾಮಿನಿ

ಸಾರಿ ಹೇಳೋ ರಾಯ ಕುವರ ಮುರಾರಿ ದುಶ್ಯಾಸನ ಕಣಾ
ಫಡ ಭೀಮ ವೈರಿ ಧ್ವಜದ ಕುಂಭಸ್ಥಳಕ್ಕೆ ಪಂಚಮುಖ
ಭೂರಿ ವಿಕ್ರಮನಾಗ ಭೂಕ್ಷಣಹಾರದಿಂದೊಪ್ಪುವ
ಶರೀರನು ವೈರಿಸೇನೆಗೆ ಬರಲು ಕಂಡನು ಪವನ ಸುತನಾಗ ॥

ಭೀಮ : ಅಯ್ಯ ಭಾಗವತರೆ, ಯೀ ಕುರುಕ್ಷೇತ್ರದಲ್ಲಿ ಯಿವತ್ತಿನ ದಿವಸ ನನ್ನ ವೈರಿಯಾದ ದುಶ್ಯಾಸನನನ್ನು ಕಂಡ ಹಾಗಾಯಿತು ಹೇಳುತ್ತೇನೆ ಕೇಳಿರಿ.

ಪದ ರಾಗಜಂಪೆ

ಯೇನಾ ಹೇಳಲಿ ಯನ್ನಾ ಪೂರ್ವಾದ ಪುಣ್ಯವನು
ತೋಳನೆದುರಿಗೆ ಕುರಿಯು ಬಂದಂತಾಯ್ತೆಂದ ॥

ಭೀಮ : ಅಯ್ಯ ಭಾಗವತರೆ, ಯಿವತ್ತಿನ ದಿವಸ ನಾನು ಮಾಡಿದ ಪುಣ್ಯದಿಂದ ನನ್ನ ವೈರಿಯಾದ ಯೀ ದುಶ್ಯಾಸನ ದೊರೆತದ್ದು ಹಸಿದಿರತಕ್ಕ ತೋಳನ ಯದುರಿಗೆ ಕುರಿ ಬಂದಂತಾಯ್ತು. ಶಹಬಾಸ್ ಯಲಾ ದುಶ್ಯಾಸನ ಹೇಳುತ್ತೇನೆ.

ಪದ

ಬಾರಯ್ಯ ಕುರುಕುಲಾಗ್ರಣಿಯಾ ತಮ್ಮನೆ ನೀನು
ರಣದೊಳಗೇ ನಮ್ಮ ಕಾಂತೆ ದ್ರೌಪದಿಯ ಶೀರೆಯ ಸೆಳೆದ
ವಿಕ್ರಮ ತೋರು ನೋಡುವೆನೆಂದಾ ॥

ಭೀಮ : ಯಲಾ ಕುರುಪತಿಯ ತಮ್ಮನಾದ ದುಶ್ಯಾಸನನೆ, ಪೂರ್ವದಲ್ಲಿ ನಮ್ಮ ಕಾಂತೆ ದ್ರೌಪದಿಯನ್ನು ರಾಜಸಭೆಯಲ್ಲಿ ನಿಲ್ಲಿಸಿಕೊಂಡು ಸೀರೆಯನ್ನು ಸೆಳೆದ ನಿನ್ನ ಭುಜಬಲ ಪರಾಕ್ರಮವನ್ನು ನೋಡುತ್ತೇನೆ ತೋರಿಸಬಾರದೇನಯ್ಯ ದುಶ್ಯಾಸನ.

ಪದ

ಭುಜದ ವಿಕ್ರಮವ ತೋರಿ ನಮ್ಮನು ಗೆಲಿದು
ಗಜಪುರವನಾಳು ತೋಷದಲೀ ಮೊದಲೆ ನಿಮ್ಮಂಥ ವೀರರನು
ನಾ ಕಂಡಿಲ್ಲ ಅರ್ಜುನ ಶ್ರಿಷ್ಟಿಗಳೆಂದು ಕರೆದ ॥

ಭೀಮ : ಯಲಾ ದುಶ್ಯಾಸನ, ಯಿವತ್ತಿನ ರಣಾಗ್ರದಲ್ಲಿ ನಿನ್ನ ಭುಜಬಲ ಪರಾಕ್ರಮವನ್ನು ತೋರಿಸಿ ನನ್ನನ್ನು ಗೆದ್ದು ಅನಂತರ ಗಜಪುರವನ್ನು ಆಳು. ಯೀ ಮಧ್ಯ ನಿನಗೆ ಪುರುಸತ್ತು ಕೊಡುವವನಲ್ಲ ಪರಾಕ್ರಮಿ ಯೆದುರಿಗೆ ನಿಲ್ಲು ಹೇಳುತ್ತೇನೆ ॥

ಪದರಾಗಅಷ್ಟತಾಳ

ಬಾರೊ ಬಾರೆಲೊ ನೀನು ವೀರ ದುಶ್ಯಾಸನನೆ
ತೋರು ನಿನ್ನಯ ಶೌರ‌್ಯ ತಾಳಿದೆ ರೋಷ ॥

ಭೀಮ

ಯಲಾ ದುಶ್ಯಾಸನ ಯನ್ನೆದುರು ತಾಕು
ದಗಡಿ ನಿನ್ನ ಶೌರ‌್ಯ ಯಾವತ್ತು ನನ್ನಲ್ಲಿ ತೋರಿ ಬದುಕುವಂಥವನಾಗು ॥

ಪದ

ಭಾರಿ ಗದೆಯು ನಿನ್ನ ಚಾಲುವರಿಯುತಲಿದೆ
ಕಾರಿಸುವೆ ರಕ್ತವನು ಹೀರುವೆನೆನುತ॥

ಭೀಮ : ಯಲಾ ದುಶ್ಯಾಸನನೆ, ನನ್ನ ಕೈಯಲ್ಲಿರುವ ಗದಾದಂಡವು ನಿನ್ನ ಮಂಡೆಯನ್ನು ತೆಗೆದುಕೊಳ್ಳಬೇಕೆಂದು ಚಾಲುವರಿದು ಬೇಡುತ್ತಾ ಯಿರುವುದು. ರಕ್ತವನ್ನು ಕಾರಿಸಿ ಮಾರಿಯಂತೆ ಹೀರಿಬಿಡುತ್ತೇನೆ ನೋಡುವಂಥವನಾಗು.

ದುಶ್ಶಾಸನ : ಯಲಾ ಭೀಮ, ನನ್ನ ರಕ್ತವನ್ನು ಹೀರಿ ಬಿಡುತ್ತೀಯೊ ಮೂದೇವಿ ಹಾಗಾದರೆ ಹೇಳುತ್ತೇನೆ.

ಪದ

ಯಂದ ನುಡಿಯನು ಕೇಳಿ ಅಂಧಕಾತ್ಮಜನಾಗ
ಬಂದು ನೋಡೆನ್ನ ಶೌರ‌್ಯದಂದವ ನೀನು ॥

ದುಶ್ಶಾಸನ : ಯಲಾ ಭೀಮ, ಯೀ ಭೂಮಂಡಲದಲ್ಲಿರುವ ಹಿಂಡು ಭೂತಗಳುಂಡು ಸಂತೋಷಪಡುವಂತೆ ನಿನ್ನನ್ನೀಗ ಹಿಡಿದು, ಯೀ ಪೊಡವಿಯ ಮೇಲೆ ಕೆಡಹಿ ನಿನ್ನ ವಡಲನ್ನು ಬಗೆದು ವಳಗಿರುವ ತಿಳಿರಕ್ತವನ್ನು ಮೊಗೆದು ತಡಮಾಡದೆ ಕುಡಿವೆನಾದ ಕಾರಣ ಕಡು ಶೀಘ್ರದಿಂದ ಯುದ್ಧಕ್ಕೆ ಸನ್ನದ್ಧನಾಗೋ ಅಧಮ.

ಭೀಮ : ಯಲಾ ದಗಡಿ ಹೇಳುತ್ತೇನೆ ಕೇಳು ॥

ಪದ

ಯಂದ ನುಡಿಯ ಕೇಳಿ ಪವನ ನಂದನನು ಕೋಪದಿಂದ
ಬಂದು ಗದೆಯೊಳಪ್ಪಳಿಸಿದ ಅಂಧ ತನುಜನ ॥

ಭೀಮ : ಯಲಾ ದುಶ್ಯಾಸನ, ಯೆಷ್ಟೊತ್ತು ನಿನ್ನ ಮುಖವನ್ನು ನೋಡುವುದು ಮೂದೇವಿ. ನನ್ನ ಕೈಯಲ್ಲಿರುವ ಗದೆಯಿಂದ ಹಾಗೆ ನಿನ್ನನ್ನು ಅಪ್ಪಳಿಸಿರುತ್ತೇನೆ ತರಹರಿಸಿಕೊಳ್ಳುವಂಥವನಾಗು.

ದುಶ್ಶಾಸನ : ಯಲಾ ಭೀಮ, ನನ್ನನ್ನು ನಿನ್ನ ಗದೆಯಿಂದ ಅಪ್ಪಳಿಸುವೆಯೊ ಹಾಗಾದರೆ
ಹೇಳುತ್ತೇನೆ.

ಪದ

ತಪ್ಪಿಸುತಲಿ ಗದೆಯ ಗಾಯಸತ್ಪದಿಂದ ಗದೆಯೋಳ್ ಭೀಮ
ಮಸ್ತಕದ ಮೇಲೆ ಹೊಡೆಯೆ ಧಾತ್ರಿ ಕುಸಿದುದು ॥

ದುಶ್ಶಾಸನ : ಯಲಾ ಭೀಮ, ನೀನು ಗದೆಯಿಂದ ಹೊಡೆದ ಪೆಟ್ಟುಗಳನ್ನು ತರಹರಿಸಿಕೊಂಡು ಯಿಗೋ ನಿನ್ನ ಮಸ್ತಕಕ್ಕೆ ನನ್ನ ವಜ್ರಮುಷ್ಠಿಯಿಂದ ಯೀ ಧಾತ್ರಿ ಕುಸಿಯುವ ಹಾಗೆ ಹೊಡೆದಿರುತ್ತೇನೆ, ತರಹರಿಸಿಕೊಳ್ಳುವಂಥವನಾಗು.

ಪದ

ತರಹರಿಸುತಲಾಗ ಭೀಮ ಮೊರೆದು ಪಲ್ಗಳನು
ಅವನ ಬಿಲ್ಗಳನ್ನು ಮುರಿದು ಧರಣಿಗಿಟ್ಟನು ॥

ಭೀಮ : ಯಲಾ ದುಶ್ಯಾಸನ, ನೀನು ವಜ್ರಮುಷ್ಠಿಯಿಂದ ನನ್ನ ಮಸ್ತಕಕ್ಕೆ ಹೊಡೆದ ಪೆಟ್ಟುಗಳನ್ನು ತರಹರಿಸಿಕೊಂಡು, ನಿನ್ನ ಕರದಲ್ಲಿರುವ ಧನುರ್ಬಾಣಗಳನ್ನು ಯೀ ಧಾತ್ರಿಯಲ್ಲಿ ಮುರಿದು ಹಾಕಿದ್ದೇನೆ ನೋಡುವಂಥವನಾಗು.

ಪದ

ಕೋಪದಿಂದ ರಾಯನನುಜ ಭಾಪುರೆಯೆಂದೆನು ತಲಾ
ಗದಾತ್ರಿಕುಟಿಯೆರೆಯದು ಕರದಿ ಪಾರ್ಥನಂಣನ ॥

ದುಶ್ಯಾಸನ : ಯಲಾ ಭೀಮ, ನಿನಗೆಷ್ಟು ಅಹಂಕಾರ ಬಂತೊ. ಯನ್ನ ಕರದಲ್ಲಿರುವ ಧನುರ್ಬಾಣವನ್ನೂ ಮುರಿದಿಯೋ, ಯಲಾ ಭೀಮ ಯಿಗೋ ಯನ್ನ ಮುಷ್ಟಿಯಿಂದ ಧಾತ್ರಿ ಕುಸಿಯುವ ಹಾಗೆ ತಿವಿದಿರುತ್ತೇನೆ ತರಹರಿಸಿಕೊಳ್ಳುವಂಥವನಾಗು.

ಪದ

ಧಾತುಗೆಟ್ಟು ಭೀಮ ರಕ್ತದೋಕುಳಿಯೊಳು ಹರನ
ನೆನೆದು ಪ್ರೀತಿಯಿಂದ ಸ್ಮರಿಸೆ ರೌದ್ರರೂಪನಾದನು ॥

ಭೀಮ : ಹೇ ಶಂಕರ ಯೀ ದಿನ ಭಕ್ತನ ಮೇಲೆ ವೊಂದುಕ್ಷಣಮಾತ್ರ ವಿಶ್ವರೂಪು ದಯಪಾಲಿಸುವನಾಗು. ಯಲಾ ದುಶ್ಯಾಸನ, ಯಿದುವರೆವಿಗೂ ಅಬಲನೆಂದು ಕೈ ನಿಲಿಸಿದ್ದೆಯಾದರೆ ಯಿಷ್ಟು ಹತಾಹುತಿಯನ್ನೂ ಮಾಡಿದೆಯೊ. ಯೀ ಕಾಲದಲ್ಲಿ ಕಾಲಾಂತಕನಾದ ಕಾಲರುದ್ರನ ಸ್ತೋತ್ರವನ್ನು ಮಾಡಿ ರುದ್ರಾವತಾರವನ್ನು ತಾಳಿಕೊಂಡಿದ್ದೇನೆ. ನಿನ್ನ ಪರಾಕ್ರಮವನ್ನು ತೋರುವಂಥವನಾಗು ಹೇಳುತ್ತೇನೆ.

ಪದ

ಬಂದು ಕರದಿ ಪಿಡಿದು ಕೋಪದಿಂದ ರಾಯನನುಜ
ಹುದಿ ಹೋಗೆನುತ ಹೊಡೆದು ತಿವಿದನು ರಕ್ತ ಕಾರಲಾಗ ಖಳನ
ಮತ್ತೆ ಕಾಲಕೆಳಗೆ ಹಾಕಿ ಕತ್ತಕೊಯ್ವೆನೆನುತ ನುಡಿಯೆ ಕತ್ತರಿಸಿದನು ॥

ಭೀಮ : ಅಯ್ಯ ಭಾಗವತರೆ, ಖೂಳನಾದ ದುಶ್ಯಾಸನನು ನನ್ನ ರುದ್ರಾವತಾರವನ್ನು ನೋಡಿ ಹೆದರಿ ರಕ್ತವನ್ನು ಕಾರಿದ್ದಾನೆ. ಯಿನ್ನಾದರು ಯಿವನನ್ನು ನನ್ನ ಕಾಲಕೆಳಗೆ ಹಾಕಿಕೊಂಡು ಶಿರಚ್ಚೇದನ ಮಾಡುತ್ತೇನೆ ನೋಡಿರಿ.

ಭಾಮಿನಿ

ತೊತ್ತಿನಂದದಿ ದ್ರುಪದ ಸುತೆಯಳ ಧೂರ್ತ
ವಸ್ತ್ರವ ಸೆಳೆದೆ ಕಪಟ ಕೃತ್ಯದಲಿ ನೀನು ॥

ಭೀಮ : ಯಲಾ ದುಶ್ಯಾಸನ, ನೀನು ಕ್ಷಾತ್ರವಂಶದಲ್ಲಿ ಹುಟ್ಟಿ ರಾಜಾಸ್ಥಾನದಲ್ಲಿ ನಮ್ಮ ನಾರೀ ಶಿರೋಮಣಿಯಾದ ದ್ರೌಪದಿಯು ವುಟ್ಟಿದ್ದ ಸೀರೆಯನ್ನು ಸೆಳೆದಂತವನಾದೆ. ಛೀ ಯಿಂಥಾ ಕಪಟ ವಿದ್ಯವನ್ನು ಯಾರ ಗರುಡಿಯಲ್ಲಿ ಅಭ್ಯಾಸ ಮಾಡಿದ್ದೆ ಮೂದೇವಿ ಹೇಳುತ್ತೇನೆ ॥

ಭಾಮಿನಿ

ತೆರಳಿಸಿದೆರೆಮ್ಮನು ಕಾನನಾಂತರಕೆ ಮತ್ತೆ ಕೇಳೆಲೊ ಮೂಢ
ಮಾರಿಗೆ ತುತ್ತು ಮಾಡಿಹೆನೀಗ ನಿಮ್ಮವರೆತ್ತ ವೋದರು
ಹೇಡಿಗಳು ಸೆರೆ ಬಿಡಿಸಿಕೊಳಲೀಗ ॥

ಭೀಮ : ಯಲಾ ದುಶ್ಯಾಸನ, ಪೂರ್ವದಲ್ಲಿ ಕಪಟದ್ಯೂತವನ್ನಾಡಿಸಿ ನಮ್ಮನ್ನೂ ದೂಡಿಸಿದಂಥವನಾದೆ. ಆದಕಾರಣ ನಿನ್ನ ದೇಹವನ್ನು ಶೀಳಿ ಶಾಕಿನಿಡಾಕಿನಿ ಮಾಲಿನಿಯರೆಂಬ ಭೂತಗಳಿಗೆ ಹಬ್ಬವನ್ನು ಮಾಡಿರುತ್ತೇನೆ. ಯಲಾ ಅಧಮ ನಿನಗೆ ಬಾಹುಬಲವಾದ ಅಣ್ಣತಮ್ಮಂದಿರು ಬಿಡಿಸಿಕೊಳ್ಳಲಾರದೆ ನೋಡುತ್ತಾ ಯಿದ್ದಾರೆ. ನಿನ್ನ ಸೆರೆಯನ್ನು ಬಿಡಿಸಬಾರದೆ ಕರೆಯುವಂಥವನಾಗು.

ಭಾಮಿನಿ

ಯೆನುತ ಕರದೊಳು ಬಗೆದು ದುರುಳನ ವುದರ ರಕ್ತವ ತೆಗೆದು
ಕರುಳು ಧರಿಸಿಕೊಂಡುಬ್ಬುತಲಿ ಶ್ರೋಣಿತವನ್ನು ಸವಿಸವಿದು ॥

ಭೀಮ : ಯಲಾ ದುಶ್ಯಾಸನ, ನಿನ್ನ ಹೊಟ್ಟೆಯನ್ನು ತಟ್ಟನೆ ಸೀಳಿ ಕರುಳನ್ನು ತೆಗೆದು ನನ್ನ ಕೊರಳಿಗೆ ನಳನಳಿಸುವಂತೆ ವನಮಾಲೆಯನ್ನು ಹಾಕಿಕೊಂಡು ಯಿರುತ್ತೇನೆ. ಅಲ್ಲದೆ ನಿನ್ನ ರಕ್ತವನ್ನು ಪಾನಮಾಡುತ್ತೇನೆ ನೋಡು.

ಭಾಮಿನಿ

ಅರತಿ ಪೇಳಲಸಾಧ್ಯವಿದಕೆಯು ಪರಿಪರಿಯ ಭಕ್ಷ್ಯಗಳು
ಘೃತದಧಿ ಸರಿಯಬಾರದು ಯಿದಕೆನುತ ಚಪ್ಪರಿಸಿದನು ಕಲಿಭೀಮ ॥

ಭೀಮ : ಅಯ್ಯ ಭಾಗವತರೆ, ಯೀ ದುಶ್ಯಾಸನನ ರಕ್ತಪಾನವನ್ನು ಮಾಡಿದ್ದೆಯಾದರೆ ಹಾಲು ಮೊಸರು ತುಪ್ಪ ಜೇನಿಗಿಂತ ಹೆಚ್ಚಾದ ರುಚಿಕರವಾಗಿದೆ. ಹರಹರ ಯೇನು ಆನಂದವೋ ಹೇಳುವೆನು.

ಭಾಮಿನಿ

ನೋಡಿದನು ಕುರುಬಲವನೆಂದನು ಹೇಡಿಗಳೆಲಾ ನಿಮ್ಮಾಳ್ತನಕೆ
ಕೇಡ ಕಾಣುತ ಬಿಡಿಸಿಕೊಳ್ಳದೆ ಮೌನದೊಳಗಿರುವೆ ॥

ಭೀಮ : ಯಲಾ ದುಶ್ಯಾಸನ, ನಿನ್ನ ಅಣ್ಣತಮ್ಮಂದಿರೆಲ್ಲಾ ನಿನ್ನ ಪ್ರಾಣವಸನ ಕಾಲದಲ್ಲಿ ಬಿಡಿಸಿಕೊಳ್ಳದೆ ಮೌನದಲ್ಲಿ ಯಿದ್ದಾರೆ. ಯೀ ಕಾಲದಲ್ಲಿ ಬಂದು ನಿನ್ನ ಸೆರೆಯನ್ನೂ ಬಿಡಿಸಬಾರದೆ ಮೂದೇವಿ ॥

ಭಾಮಿನಿ

ಮಾರಿಕೈಗಳ ಪಂಥವುಳ್ಳೊಡೇ ವೋಡಿಸುವೆ ಅಂತಕನಪುರಕೆಲ್ಲಾ ನೋಡಿರೈ
ಮಧುಭಕ್ಷ ರುಚಿಗಿದು ಆತಲೇನೈ ಶ್ರೋಣಿತಕೆ ಸರಿಬರದು ಪೇಳೆಂದ ॥

ಭೀಮ : ಯಲಾ ದುಶ್ಯಾಸನ, ನಿನಗೆ ಬಾಹುಬಲವಾಗಿರುವ ವೀರಾಧಿವೀರರು ನನ್ನ ಮೇಲೆ ಕೈ ತೋರಿಸಿದ್ದೇ ಆದರೆ, ಯೀ ಕಾಲದಲ್ಲಿ ಅವರನ್ನು ಅಂತಕನಾಲಯಕ್ಕೆ ಅಟ್ಟುವೆನಲ್ಲದೆ ಬಿಡುವುದಿಲ್ಲ ಮತ್ತು ನಿನ್ನ ಹೊಟ್ಟೆಯನ್ನು ಸೀಳಿ ಒಳಗಿರುವ ತಿಳಿರಕ್ತವು ಹ್ಯಾಗಿದೆಯೆಂದರೆ ಭಕ್ಷ್ಯಭೋಜ್ಯ ಪರಮಾನ್ನ ಮೊದಲಾದ ಷಡ್ರಸವು ಕೂಡ ಸಮ ಬರಲಿಕ್ಕಿಲ್ಲ ಮೂದೇವಿ ಹೇಳುತ್ತೇನೆ ॥