ಭಾಮಿನಿ

ಹರಿಯ ನುಡಿಯನು ಕೇಳಿ ಫಲಗುಣ |
ನುರಿವ ಕರ್ಬೊಗೆಯಿಂದ ನಾಸದೊ |
ಳುರುಳಿದುದು ಕೆಂಗಿಡಿಯು ಕಣ್ಣಿನೊಳಾಗ ಫಲುಗುಣನ ||
ನರಕರಿಪು ಬಿತ್ತಿದನು ವರ್ಮದ |
ಭರಿತ ಬೀಜವನೆಲೆ ಮಹೀಪತಿ |
ಪುರವಿನಾಶನೆ ಬರಲಿ ಬಗೆವೆನೆ ಕರ್ಣಗಿರ್ಣರನು || ೫೨೪ ||

ಕಂದ

ಆ ಸಮಯದೊಳಿತ್ತ ಮಹೋ |
ಲ್ಲಾಸದೊಳಿನಜಾತನೆಬ್ಬಿಸುತ್ತಲೆ ರಥಮಂ ||
ವಾಸವಸುತನೊಡನಾ ಕ್ಷಣ |
ತಾ ಸಂಗ್ರಾಮಕನುವಾದನೇಂ ಸಾಹಸಿಯೋ || ೫೨೫ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಹಿಡಿ ಧನುವನನುಮಗು ಸಾಕಿ | ನ್ನೆಡಬಲವ ನೋಡದಿರೆನುತ್ತವ |
ತುಡುಕಿದನು ಕೂರಂಬ ಪಾರ್ಥನ | ಸರಿಸಕಾಗ || ೫೨೬ ||

ಘುಡುಘುಡಿಸಿ ಕಲಿ ಪಾರ್ಥ ಕಲ್ಪದ | ಕಡಲರವವೆಂಬಂತೆ ಗರ್ಜಿಸು |
ತೊಡನೆ ಬಾಣವನುಗಿದಕವಧಿಯ | ಕಾಣೆನಿನ್ನು || ೫೨೭ ||

ತೊಡುವ  ಬಿಡುವಂಬುಗಳನನಿತರೊಳ್ | ಕಡಿವನವನಿವನೇಂ ಸಮರ್ಥನೊ |
ಪೊಡವಿಪತಿ ಕೇಳ್ ಹಿಂದೆ ರಾಘವ | ರಾವಣನ್ನ || ೫೨೮ ||

ಕದನಕಿದು ಪೊಸತಾಯಿತಿಬ್ಬರ | ವರ ಮಹಾಸಂಗ್ರಾಮವೆನುತದ |
ನರಿದು ಮುರಹರನಿಳಿದು ರಥದಿಂ | ಪೊರಟನಾಗ || ೫೨೯ ||

ಭಾಮಿನಿ

ಹಾನಿದೋರಲ್ಕರಿತು ನೃಪ ನಿ |
ನ್ನಾನೆ ಕುಸಿದುದು ಕೇಳು ಕೊಳುಗುಳ |
ಕಾನುವಡೆ ಕೈಕಾಲು ನಡುಗಿತು ಧೈರ್ಯಸಿರಿ ತೊಲಗಿ ||
ಹೀನನಾದೆನು ಕೌರವೇಶ್ವರ |
ಗೇನು ಗತಿಯೊ ಹರ ಮಹಾದೇ |
ವೀ ನಿರೋಧಕೆ ಕಾದೆನೆಂದೆನುತಳಲಿದನು ಕರ್ಣ || ೫೩೦ ||

ರಾಗ ಸಾವೇರಿ ಏಕತಾಳ

ಶಿವ ಶಿವ  ಸಮರದೊಳು | ಕೈಸೋತೆನಲ್ಲೋ | ಭುವನೇಶ ಮಮತೆಯೊಳು ||
ಕುವರನಂದದಿ ಎನ್ನನು | ಆಪತ್ತಿಗಾ | ಗುವನೆಂದು ಸಲಹಿದನು || ೫೩೧ ||

ಕೀಳುವಂಶಜನೆಂಬುದ | ಗ್ರಹಿಸದೆ ಗುಣ | ಶೀಲನೆನ್ನುತ ಪೊರೆದ ||
ಕಾಳಗದೊಳು ಮಡಿದ | ಬಂಧುಗಳೆನ್ನ | ಮೇಲಾಸೆಯಿಂದ ಮರೆದ || ೫೩೨ ||

ಎನ್ನ ಕುಲವ ಕೃಷ್ಣನು | ಎಚ್ಚರಿಸಿ ತಾ | ಎನ್ನೊಡೆಯನ ಕೊಂದನು ||
ಇನ್ನೆಂತು ಕೌರವನ | ಅಗಲುವೆನಾತ | ಗೆನ್ನಂಥ ಮಿತ್ರರಾರಿನ್ನು || ೫೩೩ ||

ಚೆಲುವನ ಗುಣವ ಪೇಳಿ | ತುದಿಗಾಣೆನಯ್ಯೋ | ತಲೆಯ ರಣಾಗ್ರದಲಿ ||
ಸಲಹಿದಾತನ ಕಾರ್ಯದಿ | ಒಪ್ಪಿಸಲೆನ | ಗೊಲಿವನಚ್ಯುತ ಶೀಘ್ರದಿ || ೫೩೪ ||

ಭಾಮಿನಿ

ಆ ಸಮಯದಲಿ ಹರಿಯು ಭೂಸುರ |
ವೇಷವನು ತಾಳ್ದೊಡನೆ ಘನ ಸಂ |
ತೋಷದಿಂ ಪೊಗಳುತ್ತ ಕರ್ಣನ ಬಳಿಗೆ ನಡೆತಂದ ||
ಏಸು ಕೀರ್ತಿಯೊ ನೀನು ಜಗದಲಿ |
ಮಾಸಲಳಿಯದ ತ್ಯಾಗಿಯೆಂಬುದ |
ನೋಸರಿಸಿ ನಾ ಬಂದೆನೀವುದು ಎನ್ನ ಮನದಿರವ || ೫೩೫ ||

ಕಂದ

ಭೂಸುರ ಕೇಳೀ ವೇಷಗ |
ಳೇಸು ವಿಚಿತ್ರಂ ಬಲ್ಲೆನು ಎಲ್ಲವ ನಾಂ ||
ಸೂಸೆನನೃತವಾ ರಣದಾ |
ಯಾಸದಿ ನಾನೀಗ ಕೊಡುವುದೇನ್ ನಿನಗೆಂದಂ || ೫೩೬ ||

ರಾಗ ತೋಡಿ ಅಷ್ಟತಾಳ

ಭೂಸುರ ಕೇಳು ಸಿಂಹಾಸನದೊಳಿರುವಾಗ | ಬಂದು ಕೇಳಿದ ಜನರಿಗೆ ||
ಕಾಸು ಕನಕ ಭೂಮಿ ಗೋವುದಾನಂಗಳ | ನೇಸರ ಕೊಡಬಹುದು || ೫೩೭ ||

ಈಗ ಖಾಡಾಖಾಡಿ ಯುದ್ಧ ರಣಾಗ್ರದಿ | ಬೇಡಿದ ಕೊಡುವೆನೆಂತು |
ಯೋಗ ಇನ್ನೇನೆಂಬೆ ಮನಕೆ ಬಂದುದ ಬೇಡು | ಕೊಡುವೆ ನಾನೀಗದನು || ೫೩೮ ||

ಕೊಡುವುದಾದರೆ ಕರ್ಣಕುಂಡಲವೆರಡನ್ನು | ಕೊಡು ಧಾರೆಯೆರೆದು ನೀನು ||
ನುಡಿದ ಮಾತಿಗೆ ನೀರನರಸಲು ಕರ್ಣನೊಳ್ | ನುಡಿದನು ಮುರಹರನು || ೫೩೯ ||

ಉದಕವ ಹೊರಗರಸುವುದೇಕೆ ನಿನ್ನಯ | ಹೃದಯಕಮಲದೊಳಿಹ |
ಉದಕದಿ ಧಾರೆಯೆರೆದು ಕೊಡು ಎನಲಾತ | ಹರುಷದಿ ನಸುನಕ್ಕನು || ೫೪೦ ||

ಭಾಮಿನಿ

[ತಂದೆ ಮಿತ್ರನು ಬಲ್ಲನಿದರನು |
ಇಂದುಮುಖಿ ತಾಯ್ ಕುಂತಿ ಬಲ್ಲಳು |
ಮಂದರಾಧರನೊಬ್ಬ ಬಲ್ಲನು ಹೊರತು ಬೇರುಂಟೆ ||
ಇಂದು ಎನ್ನಯ ಪ್ರಾಣ ತೆಗೆವರೆ |
ಬಂದನೀ ಮುರಹರನೆನುತ ಮನ |
ನೊಂದು ಚಿಂತಿಸುತಕಟ ದ್ವಿಜ ನೀನಾರು ಹೇಳೆಂದ || ೫೪೧ ||]

ಮಾತೆ ಬಲ್ಲಳು ಬಾರಳೀ ತೆರ |
ತಾತ ಬಲ್ಲನು ಕೇಳನಿದ ಶ್ರೀ |
ನಾಥ ಬಲ್ಲನು ಬಂದನೀತನೆನುತ್ತ ಯೋಚಿಸಿದ |
ಹರಿಗಿದರ್ಪಿತವಾಗಲೊಂದೇ |
ಮನದಿ ತನ್ನಯ ತನುವ ಸರಳಲಿ |
ಸೀಳಿ ತೆಗೆದನು ಪರಮಹರುಷದಿ ನಿರ್ಮಲೋದಕವ || ೫೪೨ ||

ಎರೆದು ಧಾರೆಯನಿತ್ತು ಕುಂಡಲ |
ವೆರಡನರ್ಚಿಸಿ ಕೊಟ್ಟು ಭಕ್ತಿಯೊ |
ಳಿರದೆ ಕರಗಳ ಮುಗಿದು ಮುಕ್ತಿಯನೀಯಬೇಕೆಂದ || || ೫೪೩ ||

ಕಂದ

ಭಕ್ತಿಯೊಳೀತನ ಪೋಲುವ |
ಭಕ್ತರನುಂ ನಾನೆ ಕಾಣೆನೀ ಧಾರಿಣಿಯೊಳ್ ||
ಮುಕ್ತಿಪ್ರದಾಯಕ ಹರಿ ನಿಜ |
ಮೂರ್ತಿದರುಶನವಿತ್ತನೇಂ ಸುಕೃತಿಯೋ ಕಲಿ ಕರ್ಣಂ || ೫೪೪ ||

ವಾರ್ಧಕ

ಜಯ ಸುಮನಸೋದ್ಧಾರ ಜಯ ಶರಧಿಗಂಭೀರ |
ಜಯ ದೇವ ದೇವೇಶ ಜಯ ಭವವಿನಾಶ ಜಯ |
ಜಯ ಚಿದಾನಂದ ಜಯ ದೇವಕೀಕಂದ ಜಯ ಜಯ ನಮೋ ಜಯ ಮುಕುಂದ ||
ಜಯ ಕಮಲಭವತಾತ ಜಯ ರಮಾ ಸುಪ್ರೀತ |
ಜಯ ಕೋಟಿಶಶಿಕಿರಣ ಜಯ ಕೌಸ್ತುಭಾಭರಣ |
ಜಯ ಪಾಂಡುಸುತಪಕ್ಷ ಜಯ ಕಂಸಖಳಶಿಕ್ಷ ಜಯ ಜಯೆಂದೆರಗಿರ್ದನು || ೫೪೫ ||

ರಾಗ ನೀಲಾಂಬರಿ ಏಕತಾಳ

ಕೇಳು ಮುರರಿಪು | ಕಮಲಲೋಚನಾ | ತಾಳಲಾರೆನು | ಸರಳಿನುರಿಯನು || ೫೪೬ ||
ಒಡಲು ಸುಡುತಿದೆ | ತಾಪ ಹೆಚ್ಚಿದೆ | ಕಡಲಶಯನನೇ | ಕಾಯೊ ಕರುಣದಿ || ೫೪೭ ||
ಭಕ್ತವತ್ಸಲಾ | ಮುಕ್ತಿದಾಯಕಾ | ಶಕ್ತಿರೂಪನೇ | ಶೇಷಶಯನನೇ || ೫೪೮ ||

ಭಾಮಿನಿ

ಹರಿಯ ಮಾಯವನರಿವರಾರೀ |
ಸುರನರೋರಗರೊಳಗೆ ಕರ್ಣನ |
ಸಿರಿಯ ಸೊಬಗಿಲಿ ಮೆರೆವ ಕುಂಡಲಗಳನೆ ಅಪಹರಿಸಿ ||
ತಿರುಗಿದನು ನರನಲ್ಲಿಗಾ ಮುರ |
ಹರನ ಬರವನು ಕಾಣುತರ್ಜುನ |
ಕರವ ಮುಗಿದೊಡೆ ಎತ್ತಿ ತೋರ್ದನು ಕುಂಡಲದ್ವಯವ || ೫೪೯ ||

ರಾಗ ಸುರುಟಿ ಆದಿತಾಳ

ಕೇಳರ್ಜುನ ನೀನು | ಸುಮ್ಮನೆ | ವೇಳೆಗಳೆವರೇನು ||
ಬಾಳಲೋಚನನಿತ್ತಸ್ತ್ರಕೆ ಬಳುವಳಿ | ಪಾಲಿಸಿದಗಜೆಯ ಶರವನು ನೀನು || ೫೫೦ ||

ತೊಡು ಅಂಜನಶರವ | ಬೇಗದಿ | ಕಡಿ ಕರ್ಣನ ಶಿರವ |
ಮೃಡನಜನಮರೇಂದ್ರಾದಿಗಳೆಲ್ಲರು | ನುಡಿವರು ನಿನ್ನ ಶುಭೋದಯವೀಕ್ಷಿಸಿ || ೫೫೧ ||

ಅಸುರಹರನ ನುಡಿಗೆ | ಪೂಡಿದ | ವಿಶಿಖವಾಕ್ಷಣದೊಳಗೆ ||
ದೆಸೆಗೆಟ್ಟರು ಕೃಪ ಶಕುನಿ ದುರ್ಯೋಧನ | ಮುಸುಳಿಸಿದಾನನದೊಳಿರ್ದರಾಚೆಯಲಿ || ೫೫೨ ||

ಭಾಮಿನಿ

ಧರಣಿಪತಿ ಕೇಳಿಂತು ಶಸ್ತ್ರದ |
ಪರಿಯ ವರ್ಣಿಸಲರಿದು ಫಣಿಪಗೆ |
ಕುರುಕುಲಾಂಬುಧಿ  ಕಲಕಲಿತ್ತನು ಧೈರ್ಯ ತನ್ನವರ್ಗೆ ||
ಪರಿಯ ನೋಡಲು ಬಹುದು ಪಾರ್ಥನ |
ಸಿರಿಯ ಸೊಬಗನು ತೋರ್ಪೆ ನಾನರೆ |
ಗಳಿಗೆ ಸೈರಿಸು ಸೈರಿಸೆಂದನು ನಗುತ ಕಲಿ ಕರ್ಣ || ೫೫೩ ||

ರಾಗ ಮಾರವಿ ಏಕತಾಳ

ಆ ಸಮಯದಿ ಕಾಲಿಪಾರ್ಥನು ಗಿರಿಜೆಮ | ಹಾಸ್ತ್ರವನೇರಿಸುತ ||
ದೋಷವು ತನಗಿಲ್ಲಿನ್ನಸುರಾರಿಗೆ | ನುತ್ತಲೆ ಘೋಷಿಸುತ || ೫೫೪ ||

ಎಲವೋ ಕರ್ಣನೆ ಕೇಳೀ ಬಾಣವ | ಗೆಲುವೆತ್ನಗಳೇನು ||
ಘಳಿಲನೆ ನೋಡಿಕೊ ಎನುತವನುಗಿದನು | ಶೈಲಜೆಯಸ್ತ್ರವನು || ೫೫೫ ||

ಸಿಡಿಲಂದದಿ ಘುಡಿಘುಡಿಸುತಲಗ್ನಿಯ | ಕಿಡಿಯುಗುಳುತಲಾಗ ||
ಕಡು ಪ್ರಕಾಶದಿ ಭೋರ್ಗುಡಿಸುತಲಾ ಶರ | ಬಂದುದು ಅತಿ ಬೇಗ || ೫೫೬ ||

ಮುಟ್ಟವಿಸುತ ಬರಲಾ ಬಾಣವ ತರಿ | ದೊಟ್ಟುವೆನೆಂದೆನುತ ||
ತಟ್ಟವಿಸುತ್ತತಿಶಸ್ತ್ರಗಳಿಂ ಸರಿ | ಗಟ್ಟಿಯೆ ಪೊಯ್ಯಲು ತಾ || ೫೫೭ ||

ಆ ಮಹಾಸ್ತ್ರದ ತೇಜದಲೀ ಕ | ಣ್ಮುಚ್ಚಿದುದತಿ ಭಯದಿ |
ಆ ಮುಹೂರ್ತದೊಳಡರಿತು ಶಿರ ಗಗ | ನಾಂತರಕನಿತರಲಿ || ೫೫೮ ||

ಶಿರದ ಬೆಂಬಳಿಯ ಚಿಗಿದುದು ರಕ್ತಗ | ಳರೆಯೋಜನ ತನಕ ||
ಸುರಿಸುತ ಬಂದುರೆ ಧರೆಯಲಿ ಬಿದ್ದುದು | ಕೇಳೈ ನೃಪತಿಲಕ || ೫೫೯ ||

ಭಾಮಿನಿ

ಅರಸ ಕೇಳೈ ಕರ್ಣನೊಡಲಿನ |
ಪರಮತೇಜಃಪುಂಜ ದ್ಯುಮಣಿಯ |
ತೆರದಿ ಉದರದಿ ಒಡೆದು ಹಾಯ್ದುದು ಇನನ ಮಂಡಲಕೆ ||
ಅರರೆ ಶಿವ ಶಿವ ಸತ್ಯಕೋಸುಗ |
ತೊರೆದು ಜೀವವ ಬಿಟ್ಟ ಕರ್ಣಗೆ |
ಸರಿಯದಾವನೆನುತ್ತ ಮನದಲಿ ಮರುಗಿದನು ಹನುಮ || ೫೬೦ ||

ದ್ವಿಪದಿ

ಅರಸ ಕೇಳಿತ್ತಲಾ ಕೌರವೇಶ್ವರನು |
ತರಹರಿಸಿ ಮನದೊಳಗೆ ಭೀತಿ ತಾಳಿದನು || ೫೬೧ ||

ದ್ರೋಣ ಭೀಷ್ಮಾದಿಗಳು ಭುಜಗಳೆರಡೆನಗೆ |
ಪ್ರಾಣವೇ ಕಲಿ ಕರ್ಣ ಮಡಿದನೇ ನಮಗೆ || ೫೬೨ ||

ಅನಿತರೊಳು ಶಲ್ಯ ಕೃಪ ಗುರುಜರಯ್ತುಂದು |
ಜನಪತಿಗೆ ಧೈರ್ಯವನು ಪೇಳುತಿರಲಂದು || ೫೬೩ ||

ಹುಚ್ಚರಂದದಿ ಭ್ರಾಂತನಾಗಿ ತನ್ನೊಳಗೆ |
ಬೆಚ್ಚಿದನು ತರತರದಿ ತೊಳಲುತಡಿಗಡಿಗೆ || ೫೬೪ ||

ಬಾರಯ್ಯ ಕರ್ಣ ಪಂಚಪ್ರಾಣನೆನುತ |
ಚಾರಕನನಪ್ಪಿದನು ಕೊರಳ ತಬ್ಬುತ್ತ || ೫೬೫ ||

ಘನ ಚಿಂತೆಯಲಿ ಕೊರಗಿ ಕೌರವೇಶ್ವರನು |
ಪ್ರಾಣವನು ತೊರೆವೆ ತಾನೆನುತ ಮರುಗಿದನು || ೫೬೬ ||

ಕಂದ

ದಿನಮಣಿ ತನ್ನಯ ಮಗನಂ |
ಘನ ಗಗನಾಂಗಣದೊಳೀಕ್ಷಿಸೆ ಪಾಪವೆನುತ್ತಂ ||
ಕಣುಗಳಲುಕ್ಕುತ ಜಲವಂ |
ಮನಮರುಗುತಲುಸಿರಿದ ಪರಿಯನದೇಂ ಪೇಳ್ವೆಂ || ೫೬೭ ||

ವಾರ್ಧಕ

ಮಗನಳಿದ ತಾಪದಿಂ ತಪನ ಬಲು ಕೋಪದಿಂ |
ದೃಗುಯುಗಳ ವಾರಿಯಂ ಧರೆಗಿಳಿವ ಸ್ವಾರಿಯಂ |
ಝಗಝಗಿಸುವಂದದಿಂ ಮುನಿಜನ ಪ್ರಬಂಧದಿಂ ಸಪ್ತಾಶ್ವರಥಗಳಿಂದ ||
ಅಘಹರಂ ತನ್ನ ನಿಜ ಭಕ್ತರನು ಪಾಲಿಸುವ |
ಬಗೆಗೆನ್ನ ಪುತ್ರನಂ ಕೊಂದ ಕೌರವನೆನ್ನ |
ಮಗನಂತೆ ಹೊಂದಿ ಹೋಗಲಿ ನಾಳೆ ದಿನದೊಳೆಂದಡರಿದಂ ಪಡುಗಡಲನು || ೫೬೮ ||

ರಾಗ ಸಾಂಗತ್ಯ ರೂಪಕತಾಳ

ತರಣಿಯಸ್ತಮಿಸಲಾ ರಥವನು ತಿರುಹಿ ಶಿ | ಬಿರಕಭಿಮುಖವಾದರಾಗ ||
ಕರವ ಮುಗಿದು ರಣಮಂಡಲಕೆರಗುತ್ತ | ಬರುವ ಸಂಭ್ರಮಕಿತ್ತ ಯಮಜ || ೫೬೯ ||

ತರುಣಿ ದ್ರೌಪದಿ ಭೀಮ ನಕುಲಾಂಕ ಸಹದೇವ | ರರಿತಿದಿರ್ಗೊಡರ್ ತೋಷದಲಿ ||
ಮುರಹರಗೆರಗಲಾ ಯಮಜನ ಬಾಯೊಳ | ಗಿರುವ ವೀಳ್ಯವ ನೋಡಿ ನಗುತ || ೫೭೦ ||

ಹರ ಹರ ಕರ್ಣ ನಿನ್ನಣ್ಣನಲ್ಲವೆ ಬಾಯೊ | ಳಿರುವ ವೀಳ್ಯವನುಗುಳೆಂದ |
ಹರಿಯ ಮಾತುಗಳಂಬು ಕಂತಿ ಮೂಡಿತು ಬೆನ್ನೊ | ಳೊರಗಿ ಮೂರ್ಛಿತನಾಗುತೆಂದ || ೫೭೧ ||

ಭಾಮಿನಿ

ಹರ ಹರಾ ಮುರವೈರಿ ನೀನೇ |
ಕೊರಳ ಕೊಯ್ದೆಯೊ ಅಕಟ ಭಾಸ್ಕರ |
ತರುಣನಿವ ರಾಧೇಯನೆಂದೇ ಒರೆದೆಲಾ ಮೊದಲು ||
ಅರಿಯದಾದೆವು ನಾವು ಜನನಿಗೆ  |
ಹಿರಿಯ ಮಗನಿವ ಕರ್ಣನೆಂಬುದ |
ನರುಹಲೊಲ್ಲದೆ ಕೊಲಿಸಿದೈಯೆನುತೊರಲಿದನು ಯಮಜ || ೫೭೨ ||

ರಾಗ ಕಾಂಭೋಜಿ ಆದಿತಾಳ

ಹರ ಹರ ಈ ಕರ್ಣನೆನ್ನ | ಹಿರಿಯ ಅಣ್ಣನೆಂದು ||
ಅರಿಯದಾದೆನವನ ಕೊಲಿಸಿ | ಧರೆಯನಾಳ್ವುದೆಂತು || ೫೭೩ ||

ಹಿಂದೆ ತಾಯಿ ತನ್ನ ಮಗನ | ನೆಂತು ಬಿಟ್ಟಳಯ್ಯೋ |
ಇಂದುಕುಲಾಧೀಶ ತಂದನೊ ತಾ | ಬಂದು ಸೇರ್ದನೇನೋ  || ೫೭೪ ||

ಮಂದಗಮನೆಜನನಿಯರಿಗೇ | ನೆಂದು ಪೇಳಲಯ್ಯೋ ||
ಬಂದೆವು ತಾವೀಗಲೆನಲೊ | ಕೊಂದೆವಣ್ಣನೆನಲೋ || ೫೭೫ ||

ವಾರ್ಧಕ

ಎಲೆ ಯುಧಿಷ್ಠಿರ ಕೇಳು ಅಳಿದವರಿಗಳಲೆ ತಾವ್ |
ಮರಳಿ ಬರುವರೆ ವ್ಯರ್ಥ ಹೊಳೆಯೊಳಗೆ ಪರಿವ ನೀ |
ರಿನ ಗುಳ್ಳೆಯಂತಿರ್ಪುದೀ ದೇಹ ತಿಳಿಯಲಿದು ನಿಶ್ಚಯವೆ ಹೇಳೆಂದನು ||
ಖಳಶಿರೋಮಣಿ ಕರ್ಣನಣ್ಣನಾದರೆ ನಿನ್ನ |
ನಳಿನಮುಖಿ ಸೌಭದ್ರೆಯಣುಗನಂ ಕಳವಿನೊಳು |
ಇಳೆಗೆ ಕೆಡಹುವನೆ ತೋಳ್ಗಳ ಕುಲಾಂತಕನೆನುತ್ತವನಿಪನ ಸಂತಯಿಸಿದ || ೫೭೬ ||

ಅರಸ ಜನಮೇಜಯನೆ ಲಾಲಿಸೈ ಪಾಂಡವರು |
ತರಣಿಸುತನಂ ಗೆಲಿದು ಶಲ್ಯನಂ ಮಡುಹಿ ಕುರು |
ವರನನುಂ ಸಂಹರಿಸಿ ತಿರುಗಿ ನಿಜಪುರಕೈದಿ ಧೃತರಾಷ್ಟ್ರನಂ ಮನ್ನಿಸಿ ||
ವರ ಮುಹೂರ್ತದೊಳಯ್ದಿ ಪಟ್ಟಾಭಿಷೇಕಮಂ |
ವಿರಚಿಸುತ ನಾಲ್ಕನೆಯ ದಿನದಿಯವಭೃಥವೆಸಗಿ |
ಮುರಹರಂ ಪಾಂಡವರ ಮನ್ನಿಸುತ ಬೀಳ್ಗೊಂಡು ದ್ವಾರಕೆಗೆ ನಡೆತಂದನು || ೫೭೭ ||

ಕಂದ

ಬರಲಾ ಕ್ಷಣ ಸತಿ ರುಗ್ಮಿಣಿ |
ಸತ್ಯಭಾಮೆಸಹಿತಷ್ಟಮಹಿಷಿಯರುಗಳಾಗಳ್ ||
ಪರಿಪರಿಯಿಂದಂ ಹರುಷದಿ |
ಸುರುಚಿರದಾರತಿಗಳೆತ್ತಿ ಪಾಡಿದರಾಗಳ್  || ೫೭೮ ||

ರಾಗ ಢವಳಾರ ಏಕತಾಳ

ವರ ಸುದತಿಯರೆಲ್ಲರು ನೆರೆದು | ಸುರುಚಿರದಲಿ ಹಸೆಮಣೆಗಳ ಬರೆದು ||
ಸರಸಿಜಾಕ್ಷನೆ ಬಾರೆಂದು ಶ್ರೀಕೃಷ್ಣಗೆ | ತರುಣಿಯರಾರತಿಯ ಬೆಳಗಿರೆ || ಶೋಭಾನೆ || ೫೭೯ ||

ಕಡಗ ಕಂಕಣ ಚೂಡ್ಯ ದೋರೆಗಳ್ ಹೊಳೆಯೆ |
ನಡುವಿನೊಡ್ಯಾಣ ಕಿರುಗಂಟೆಗಳುಲಿಯೆ ||
ಒಡೆಯ ಕಡಗೋಲಾಡುವ ಕೃಷ್ಣಗೆ | ಮಡದಿಯರಾರತಿಯ ಬೆಳಗಿರೆ || ಶೋಭಾನೆ || ೫೮೦ ||

ದೇವಕಿದೇವಿ ಯಶೋದೆಯರೊಲಿದು |
ಭಾವಜಜನನಿ ರುಗ್ಮಿಣಿಯನ್ನು ಕರೆದು |
ದೇವದೇವನ ವಾಮಾಂಕದಲಿ ಕುಳ್ಳಿರಿಸಿ | ತಾವರೆಯಾರತಿಯ ಬೆಳಗಿರೆ || ಶೋಭಾನೆ || ೫೮೧ ||

ಕನಕಖಚಿತ ಕಿರೀಟದಂದದಲಿ | ದಿನಮಣಿಪ್ರಭೆಯಂತೆ ಪೊಳೆವ ಚಂದದಲಿ ||
ವನಜಲೋಚನೆ ಭಾಮಾದೇವಿ ಶ್ರೀಕೃಷ್ಣಗೆ |
ವನಿತೆಯರಾರತಿಯ ಬೆಳಗಿರೆ || ಶೋಭಾನೆ || ೫೮೨ ||

ಗಜಪುರಾಧೀಶ ನರಸಿಂಹದೇವನಿಗೆ | ತ್ರಿಜಗತ್ಪಾವನ ಶ್ರೀ ಗಣಪತಿಗೆ ||
ಭುಜಗಭೂಷಣ ಸೋಮನಾಥನ ಸಖನಿಗೆ |
ಗಜಗಮನೆಯರಾರತಿಯ ಬೆಳಗಿರೆ || ಶೋಭಾನೆ || ೫೮೩ ||

ಭಾಮಿನಿ

ಈ ಕಥೆಯ ಭಕ್ತಿಯಲಿ ಕೇಳ್ದರ |
ನೇಕ ದುರಿತವ ಹರಿದು ಕಡೆಯಲಿ |
ನಾಕವನು ಪಾಲಿಸುವ ಗಜಪುರದೊಡೆಯ ನರಸಿಂಹ ||
ಲೋಕದೊಳಗುತ್ತುಮರ ಸಂಸ್ಕೃತ |
ನೇಕ ಜನರಿದನರಿಯಬಲ್ಲರು |
ಈ ಕರ್ಣಾಟಕವೆನುತ ವೈಶಂಪಾಯಮುನಿ ನುಡಿದ || ೫೮೪ ||

ಇದು ಕಣಾ ಪರಮೋಕ್ಷಸಾಧನ | ವಿದು ಕಣಾ ಪಾತಕ ವಿನಾಶನ |
ವಿದು ಕಣಾ ಧನ ಕನಕ ರತ್ನಾದಿಗಳ ಲಭ್ಯಕರ ||
ಇದನು ಲಾಲಿಸಿ ಕೇಳ್ವ ಜನರಿಗೆ | ಮುದವೊಲಿದು ತಾ ಪೇಳಿದವರಿಗೆ |
ಪದುಮನಾಭನ ದಯವು ದೊರಕುವುದನವರತವವರ್ಗೆ || ೫೮೫ ||

ಕಂದ

ಈ ತೆರದಿಂದುತ್ತಮ ಕಥೆ |
ಕೋಟದ ಸೀಮೆಯ ಪಾಂಡೇಶ್ವರದಾ ||
ಮಾತೆಯು ಪುಟ್ಟಮ್ಮನವರ |
ದ್ವಿತೀಯಜಾತ ಬಾಲ ವೆಂಕಟ ವರ್ಣಿಸಿದಂ || || ೫೮೬ ||

ಮಂಗಲ

ರಾಗ ಆಹೇರಿ ಅಷ್ಟತಾಳ

ಮಂಗಲಂ ಜಯ ಮಂಗಲಂ   || ಪ ||

ಮಂಗಲ ಶ್ರೀ ಕೃಷ್ಣರಾಯನಿಗೆ | ಮಂಗಲ ದೇವಕಿಪುತ್ರನಿಗೆ  ||
ಮಂಗಲ ಶ್ರೀವಸುದೇವಸುತನಿಗೆ | ಮಂಗಲ ರುಗ್ಮಿಣಿವಲ್ಲಭಗೆ ||
ಮಂಗಲಂ ಜಯ ಮಂಗಲಂ || ೫೮೭ ||

ಮಂಗಲ ಲಕ್ಷುಮಿ ರಮಣನಿಗೆ | ಮಂಗಲ ಮತ್ಸ್ಯ ಕೂರ್ಮ ವರಹನಿಗೆ ||
ಮಂಗಲ ನರಸಿಂಹ ದೇವನಿಗೆ | ಮಂಗಲ ವಾಮನಾವತಾರನಿಗೆ ||
ಮಂಗಲಂ ಜಯ ಮಂಗಲಂ  || ೫೮೮ ||

ಭಾರ್ಗವತಾರದಿ ಮಾತೆಯನರಿದಗೆ | ಸೀತಾರಮಣಗೆ ಶ್ರೀಕೃಷ್ಣಗೆ ||
ತರುಣಿಯರ ವ್ರತವಳಿದ ಬೌದ್ಧಾವತಾರಗೆ | ತುರಗವಾಹನನಿಗೆ ಮಂಗಲಂ |
ನಿತ್ಯ ಶುಭೋದಯ ಮಂಗಲಂ || ೫೮೯ ||

ಯಕ್ಷಗಾನ ಕರ್ಣಾಜುನರ ಕಾಳಗ ಮುಗಿದುದು