ಸೂ. ನಗರ ಮೂರರ ದೂರುಕಾರರ
ದುಗುಡವನು ಪರಿಹರಿಸಿ ಕರುಣಾ
ಳುಗಳರಸ ಶಿವ ಸಂತವಿಟ್ಟನು ಸುರ ಕದಂಬಕವ

ಕೇಳು ಜನಮೇಜಯ ಧರಿತ್ರೀ
ಪಾಲ ಕೌರವ ನೃಪತಿ ಶಲ್ಯಗೆ
ಹೇಳಿದನು ಸಾರಥ್ಯ ಸಂಯೋಜನ ಸಮಾಹಿತವ
ಲೋಲನಾ ಪರಿಕರ‍್ಮತರು ನಿ
ರ್ಮೂಲನೈಕಕ್ಷಮ ಸುಧಾಕರ
ಮೌಳಿ ಕೇಳೀ ಕಲಿತ ವಿಸ್ತರ ವರ ಕಥಾಂತರವ ೧

ತಾರಕನ ಮಕ್ಕಳುಗಳೆನಿಸುವ
ತಾರಕಾಕ್ಷನು ಕಮಳಲೋಚನ
ವೀರ ವಿದ್ಯುನ್ಮಾಲಿಯೆಂಬೀ ಮೂವರತಿಬಳರು
ಘೋರತರ ಸುತಪಃಪ್ರಭಾವಿ
ಸ್ತಾರಿಗಳ ಸಂಖ್ಯಾತ ಯುಗದಲಿ
ವಾರಿಜೋದ್ಭವನನು ವಶೀಕರಿಸಿದರು ಭಕುತಿಯಲಿ ೨

ಬಂದು ಕಮಲಜನಿವದಿರಿದಿರಲಿ
ನಿಂದನೆಲೆ ಋಷಿಗಳಿರ ಸಾಕಿ
ನ್ನೆಂದು ಪರಿಯಂತೀ ತಪೋನುಷ್ಠಾನದಾಯಾಸ
ನಿಂದು ಬೇಡುವುದೊಲಿದುದನು ನಾ
ವಿಂದು ಸಲಿಸುವೆವೆನಲು ನಿಮಿಷಕೆ
ಕಂದೆರೆದು ಕಮಳಾಸನಂಗೆರಗಿದರು ಭಕ್ತಿಯಲಿ ೩

ಎನಿತನೊಲಿದಡೆ ಏನಹುದು ದು
ರ್ಜನರು ಪುರಷಾರ್ಥಿಗಳೆ ಹಾವಿಂ
ಗನಿಲನೇ ಆಹಾರವಾದಡೆ ಬಿಟ್ಟುದೇ ವಿಷವ
ದನುಜರದ್ಭುತ ತಪವ ಮಾಡಿದ
ರನಿಮಿಷಾವಳಿ ಬೇಂಟೆಯಾಡಲು
ನೆನೆದು ಬಿನ್ಸೈದರು ಕಮಲಭವಂಗೆ ನಿಜಮತವ ೪

ರಚಿಸುವೆವು ಪುರ ಮೂರನಗ್ಗದ
ಖಚರ ಕಿನ್ನರ ಸಿದ್ಧ ನಿರ್ಜರ
ನಿಚಯವೆಮಗೋಲೈಸಿ ಹೋಗಲಿ ಹಲವು ಮಾತೇನು
ಉಚಿತದಲಿ ನಿಮ್ಮಡಿಗಳನು ಪರಿ
ರಚಿಸಲಾವೋಲೈಸುವೆವು ವರ
ವಚನ ನಿಮ್ಮದು ಕರುಣಿಸುವುದಮರತ್ವವನು ನಮಗೆ ೫

ಹಾ ಮಹಾದೇವೀ ಕುಠಾರರ
ತಾಮಸದ ನೆನಹಿದ್ದ ಪರಿಯಿಂ
ತೀ ಮಹಾನುಷ್ಠಾನವಿದರಲಿ ಶಾಂತಿ ಲವವಿಲ್ಲ
ಕಾಮಿತವನಿವದಿರಿಗೆ ಕೊಟ್ಟರೆ
ಕಾಮಹರ ಕಮಳಾಕ್ಷರಿಗೆ ಸಂ
ಗ್ರಾಮದಲಿ ಜಯವಾಗದೆಂದಡಿಗಡಿಗೆ ಬೆರಗಾದ ೬

ಹುಲಿಗೆ ಧೈರ್ಯವನೆರಕೆಗಳನಹಿ
ಗಳಿಗೆ ಖಳರಿಗೆ ಲಕ್ಷ್ಮಿಯನು ಕ
ತ್ತಲೆಗೆ ಕಾಠಿಣ್ಯವನು ಚೈತನ್ಯವನು ಗಿರಿಗಳಿಗೆ
ಕೊಲೆಗಡಿಕರಿಗೆ ನಿತ್ಯದೇಹವ
ನೊಲಿದು ಕೊಟ್ಟರೆ ಲೇಸು ಬಳಿಕೇ
ನೆಲೆ ಮಹಾದೇವೇನ ನೆನೆದರೊ ಶಿವ ಶಿವಾ ಎಂದ ೭

ಪುರವ ವಿರಚಿಸಿ ದಿವ್ಯ ಸಾಸಿರ
ವರುಷ ಕೈಗೂಡಿದರೆ ಒಂದೇ
ಸರಳಲಾವವನೆಚ್ಚಡಾಗಳೆ ನಿಮಗೆ ಕಡೆಗಾಲ
ಬರಲಿ ಬಳಿಕಿಂದ್ರಾದಿ ನಿರ್ಜರ
ನೊರಜುಗಳ ನೀವ್ ಸದೆಯಿ ಹೋಗೆಂ
ದರಸ ಕೇಳೈ ಕೊಟ್ಟನವರಿಗೆ ಕಮಲಭವ ವರವ ೮

ಕರುಣವಿನಿತೇ ಸಾಕು ನಮಗೇ
ನುರದಲೊಗೆದವೆ ಮೊಲೆಗಳೆಮ್ಮಯ
ಪುರವನೊಂದಂಬಿನಲಿ ಗೆಲುವನ ತಾಯಿ ಹುಸಿಯೆನುತ
ದುರುಳರೀತನ ಬೀಳುಕೊಂಡು
ಬ್ಬರದ ಹರುಷದಿ ಹೆಚ್ಚಿ ಮಯನನು
ಕರಸಿ ಮಾಡಿಸಿದರು ಮಹಾವಿಭವದಲಿ ನಗರಗಳ ೯

ಕನಕದಲಿ ರಜತದಲಿ ಬಲುಗ
ಬ್ಬುನದಲೊಂದೊಂದಕ್ಕೆ ಶತ ಯೋ
ಜನದ ತೆರಹುಗಳೆಡೆಗೆ ಹಬ್ಬಿಸುವಮಳ ತೋರಣದ
ವಿನುತ ನಗರಿಗಳಾದುವಲ್ಲಿಯ
ದನುಜರೆರೆಗಳ ಹಾಯ್ಕಿ ಗಾಣದ
ಲನಿಮಿಷರನೀಡಾಡಿಕೊಂಡರು ದುರ್ಗವನು ಸುರರ ೧೦

ಸೂರೆವೋಯಿತು ಸುರಪತಿಯ ಭಂ
ಡಾರ ಹೆಂಡಿರು ಸಹಿತ ನಿರ್ಜರ
ನಾರಿಯರು ತೊತ್ತಾದರಮರಾರಿಗಳ ಮನೆಗಳಿಗೆ
ಮೂರು ಭುವನದೊಳಿವದಿರಾಣೆಯ
ಮೀರಿ ಬದುಕುವರಿಲ್ಲ ಕಡೆಯಲಿ
ತಾರಕನ ಮಕ್ಕಳಿಗೆ ಕೈವರ್ತಿಸಿತು ಜಗವೆಂದ ೧೧

ನೆರೆದುದಮರರು ಹಾಳು ಹರಿ ಸಾ
ಗರದ ಕಡೆಯಲಿ ರೂಹುಗಳೆದು
ಟ್ಟರುವೆಗಳ ಕಾಳಿಕೆಯ ಮೋರೆಯ ತಾರಿದೊಡಲುಗಳ
ಹುರಿದ ಧೈರ‍್ಯದ ತಳ್ಳವಾರುವ
ತರಳ ಹೃದಯದ ದೇವರಿಂದ್ರನ
ನರಸಿ ಕಂಡರು ತಮ್ಮೊಳಾಳೋಚನೆಯ ಮಾಡಿದರು ೧೨

ತಾರಕನ ಮಕ್ಕಳುಗಳೇ ಹಿಂ
ದಾರ ಗೆಲಿದರು ತಪವ ಮಾಡಿ ವಿ
ಕಾರಿಗಳು ಬ್ರಹ್ಮಂಗೆ ಬಂದಿಯನಿಕ್ಕಿದರು ಬಳಿಕ
ವಾರಿಜೋದ್ಭವ ಮೇಲನರಿಯ ಕು
ಠಾರ ನಾಯ್ಗಳ ಹೆಚ್ಚಿಸಿದನಿದ
ನಾರಿಗರುಪುವೆವೆಂದು ಸುಯ್ದರು ಬಯ್ದು ಕಮಲಜನ ೧೩

ಆದರೆಯು ನಮಗಾತನೇ ಗತಿ
ಯೀ ದುರಾತ್ಮರಿಗೆಂದು ಹರಿವೆಂ
ದಾದರಿಸಿ ಕೇಳುವೆವೆನುತ ಕಮಲಜನ ಹೊರೆಗೈದಿ
ಖೇದವನುಸುರಿದರು ಪಿತಾಮಹ
ನಾ ದಿವಿಜಗಣ ಸಹಿತ ಬಂದನು
ವೇದಸಿದ್ಧ ವಿಶುದ್ಧ ದೈವವ ಕಾಬ ತವಕದಲಿ ೧೪

ಬಂದು ಕೈಲಾಸಾದ್ರಿಯಲಿ ಗಿರಿ
ನಂದನಾವಕ್ಷೋಜ ಘಸೃಣ
ಸ್ಕಂಧತನು ಚಿನ್ಮಯ ನಿರಂಜನ ಭೂರಿ ಪಂಜರನ
ವಂದ್ಯಮಾನ ಸುರಾಸುರೋರಗ
ವೃಂದ ಮಣಿಮಕುಟ ಪ್ರಭಾ ನಿ
ಪ್ಯಂದ ಭೂಯಸ್ತಿಮಿತ ಕಾಯನ ಕಂಡನಬುಜಭವ ೧೫

ಕೊರಳ ಕಪ್ಪಿನ ಚಾರು ಚಂದ್ರಾ
ಭರಣ ಮೂರ್ಧದ ಭಾಳನಯನದ
ಭರಿತ ಪರಿಮಳದಂಗವಟ್ಟದ ಜಡಿದ ಕೆಂಜಡೆಯ
ಕರಗಿ ಕಾಸಿದವಿದ್ಯೆಯನು ಬೇ
ರಿರಿಸಿ ಶುದ್ಧಬ್ರಹ್ಮವನು ಕಂ
ಡರಿಸಿದಂತಿರಲೆಸೆವ ಶಿವನನು ಕಂಡನಬುಜಭವ ೧೬

ವೇದವರಿಯದ ತರ್ಕವಿದ್ಯಾ
ವಾದ ನಿಲುಕದ ಬುಧರ ಮತಿ ಸಂ
ಪಾದನೆಗೆ ಮುಖಗೊಡದ ವಾಚ್ಯಾಯನರ ಚೇತನಕೆ
ಹೋದ ಹೊಲಬಳವಡದ ಬ್ರಹ್ಮೇಂ
ದ್ರಾದಿ ಸುರರುಬ್ಬಟೆಗೆ ಸೋಲದ
ನಾದಿ ದೇವರದೇವ ಶಿವನನು ಕಂಡನಬುಜಭವ ೧೭

ಕಂತುಹರನನು ವಿಮಳನನು ವೇ
ದಾಂತ ವೇದ್ಯನನದ್ವಿತೀಯನ
ಚಿಂತ್ಯ ಮಹಿಮನ ಸಚ್ಚಿದಾನಂದೈಕರಸಮಯನ
ಅಂತ್ಯರಹಿತನನಪ್ರಮೇಯನ
ನಂತರೂಪನನಂಘ್ರಿಭಜಕ ಭ
ವಾಂತಕನನುದ್ದಂಡ ದೈವವ ಕಂಡನಬುಜಭವ ೧೮

ಇದ್ದು ದಗಣಿತ ರುದ್ರ ಕೋಟಿಗ
ಳಿದ್ದು ದನುಪಮ ವಿಷ್ಣುಕೋಟಿಗ
ಳಿದ್ದು ದಂಬುಜಭವ ಸುರೇಂದ್ರಾದಿಗಳು ಶತಕೋಟಿ
ಇದ್ದುದಮಳಾಮ್ನಾಯ ಕೋಟಿಗ
ಳಿದ್ದುದಗಣಿತ ಮಂತ್ರಮಧ್ಯದೊ
ಳಿದ್ದ ನಿರ್ಮಳ ಖಂಡಪರಶುವ ಕಂಡನಬುಜಭವ ೧೯

ಪುಳಕಜಲವುಬ್ಬರಿಸೆ ಕುಸುಮಾಂ
ಜಳಿಯನಂಘ್ರಿದ್ವಯಕೆ ಹಾಯಿಕಿ
ನಳಿನಭವ ಮೆಯ್ಯಿಕ್ಕಿದನು ಭಯಭರಿತ ಭಕ್ತಿಯಲಿ
ಬಳಿಯಲಮರೇಂದ್ರಾದಿ ದಿವಿಜಾ
ವಳಿಗಳವನಿಗೆ ಮೆಯ್ಯ ಚಾಚಿದ
ರುಲಿವುತಿರ್ದುದು ಜಯಜಯ ಧ್ವಾನದಲಿ ಸುರಕಟಕ ೨೦

ಪರಮಕರುಣ ಕಟಾಕ್ಷರಸದಲಿ
ಹೊರೆದು ಕಮಳಾಸನನ ಹತ್ತಿರೆ
ಕರೆದು ಮನ್ನಿಸಿ ನಿಖಿಳ ನಿರ್ಜರ ಜನವ ಸಂತೈಸಿ
ಬರವಿದೇನಿದ್ದಂತೆ ವಿಶ್ವಾ
ಮರ ಕದಂಬಕ ಸಹಿತ ಎಂದಂ
ಬುರುಹಭವನನು ನಸುನಗುತ ನುಡಿಸಿದನು ಶಶಿಮೌಳಿ ೨೧

ತಾರಕನ ಮಕ್ಕಳುಗಳಿಗೆ ನೆರೆ
ಸೂರೆವೋದುದು ಸುರರ ಸಿರಿ ಮು
ಮ್ಮಾರುವೋದುದು ಸುರರ ಸತಿಯರು ಖಳರ ಮನೆಗಳಿಗೆ
ಚಾರು ವೈದಿಕ ಹವ್ಯಕವ್ಯವಿ
ಹಾರ ವೃತ್ತಿಗಳಳಿದವಿದನವ
ಧಾರಿಸೆಂದಬುಜಾಸನನು ಮಾಡಿದನು ಬಿನ್ನಹವ ೨೨

ನಗೆಯ ಮೊಳೆ ನಸುಹೊಳೆಯೆ ಬೊಮ್ಮನ
ಮೊಗವ ನೋಡಿದನಭವನೀಶನ
ಬಗೆಯ ಭಾವವನರಿದು ತಲೆಗುತ್ತಿದನು ಕಮಲಭವ
ದುಗುಡವನು ಬಿಡಿ ನಿಖಿಳ ದಿವಿಜಾ
ಳಿಗಳು ಪಶುಗಳಳಾ ವಿರಿಂಚನ
ವಿಗಡತನದಲಿ ಕೆಟ್ಟಿರಕಟಿನ್ನಂಜಬೇಡೆಂದ ೨೩

ಪಶುಪತಿತ್ವವ ನಮಗೆ ಕೊಡಿ ನೀವ್
ಪಶುಗಳಾಗಿರಿ ಪಾಶುಪತ ವರ
ನಿಶಿತಶರದಲಿ ದೈತ್ಯ ದುರ್ಗವನುರುಹಿ ತೋರುವೆವು
ದೆಸೆ ದೆಸೆಗೆ ಹರೆದಖಿಳದೇವ
ಪ್ರಸರವನು ನೀವ್ ನೆರಹಿ ಮೇಲಿ
ನ್ನಸಮಸೆಗೆ ಹೆದರದಿರಿ ಎಂದನು ನಗುತ ಮದನಾರಿ ೨೪

ಜಾರಿದುಬ್ಬಿನ ಹೊತ್ತ ದುಗುಡದ
ಮೋರೆಗಳ ಮೋನದ ನಿಹಾರದ
ದೂರುಗಂಗಳ ದೇವ ನಿಕರವ ಕಂಡು ಕರುಣದಲಿ
ಏರುವಡೆದುದು ಮನವವಿದ್ಯೆಗೆ
ಮಾರುವೋದಿರಲಾ ಎನುತ ಶಿವ
ತೋರಿ ನುಡಿದನು ಪಾಶುಪತ್ಯದ ಸಾರ ಸಂಗತಿಯ ೨೫

ಕರ್ಮಕಿಂಕರರಾಗಿ ಕೃತ ದು
ಷ್ಕರ್ಮ ವಾಸನೆವಿಡಿದು ತಾನೇ
ಕರ್ಮಕರ್ತನು ಭೋಗಿ ತಾನೇ ದುಃಖಿಸುಖಿಯೆಂದು
ನಿರ್ಮಳಾತ್ಮನೊಳೀಯಹಂಕೃತಿ
ಧರ್ಮವನೆ ನೇವರಿಸಿ ಮರುಗುವ
ದುರ್ಮತಿಗಳನು ಪಶುಗಳೆಂದರೆ ಖೇದವೇಕೆಂದ ೨೬

ಪಂಚವಿಂಶತಿ ತತ್ವರೂಪದ
ಸಂಚವರಿಯದೆ ನೀತಿಮುಖದಲಿ
ರಂಚೆಗಾಣದೆ ಸಗುಣಮಯ ನೀಹಾರದಲಿ ಮುಳುಗಿ
ಮಿಂಚುವೆಳಗಿನ ಬಳಕೆಯಲಿ ಮನ
ಮುಂಚಿ ಮೈಗೊಂಡಳಲುವಾತುಮ
ವಂಚಕರು ನೀವ್ ಪಶುಗಳೆಂದರೆ ಖೇದವೇಕೆಂದ ೨೭

ತೋರುವೀ ಜಗವೆಲ್ಲ ಬೊಮ್ಮವೆ
ತೋರುತಿದೆಯೆನಿಪರ್ಥದಲಿ ಸಲೆ
ತೋರುವೀ ಜಗಕೆಲ್ಲ ಪರತತ್ವದಲಿ ಪರಿಣಾಮ
ತೋರುವೀ ತೋರಿಕೆಯೊಳಗೆ ಸಲೆ
ಮೀರಿ ತೋರುವ ನಿಜವನರಿಯದ
ಗಾರುಗಳು ನೀವ್ ಪಶುಗಳೆಂದರೆ ಖೇದವೇಕೆಂದ ೨೮

ಆದಿಭೌತಿಕದಿಂದ ನೊಂದು ವಿ
ರೋಧಿ ಷಡ್ವರ್ಗದ ವಿಕಾರ
ವ್ಯಾಧಿಯಲಿ ಬೆಂಡಾಗಿ ಭವಪಾಶದಲಿ ಬಿಗಿವಡೆದು
ವಾದ ರಚನೆಯ ಬಲೆಗೆ ಸಿಲುಕಿ ವಿ
ರೋಧಗೊಂಬೀ ಮೋಹ ವಿದ್ಯಾ
ಸಾಧಕರು ನೀವ್ ಪಶುಗಳೆಂದರೆ ಖೇದವೇಕೆಂದ ೨೯

ಪಶುಪತಿಯೆ ಪರಮಾತ್ಮ ಜೀವರು
ಪಶುಗಳೀ ಪರಿ ಜೀವ ಭಾವದೊ
ಳೆಸಗುವರು ನೀವ್ ಪಶುಗಳೀಗಳು ನಿಮ್ಮ ರಕ್ಷಣವ
ಪಸರಿಸುವ ಪರಮಾತ್ಮ ತಾನೀ
ಘಸಣಿ ನಿಮಗೇಕೆಂದು ದೇವ
ಪ್ರಸರವನು ತಿಳುಹಿದನು ಕಾರುಣ್ಯದಲಿ ಕಾಮಾರಿ ೩೦

ತುಬ್ಬಿಕೊಟ್ಟುದವಿದ್ಯೆಯನು ಸುಧೆ
ಗೊಬ್ಬುಗಳ ಗಂಡಿಗರ ಗಾಢದ
ಗರ್ಭವನು ಹೊಳ್ಳಿಸಿತು ಗರಳಗ್ರೀವನುಪದೇಶ
ಹುಬ್ಬಿನಲಿ ಮಾತಾಡಿ ತಮ್ಮೊಳ
ಗೊಬ್ಬರೊಬ್ಬರು ತಿಳಿದು ಸಕಳ ಸು
ಪರ್ಬಜನವೆರಗಿದುದು ಜಯ ಜಯ ಎನುತ ಪಶುಪತಿಗೆ ೩೧

ಜಗವುಘೇ ಎಂದುದು ಜಯಧ್ವನಿ
ಜಗವ ಝೊಂಪಿಸಿತೊಗ್ಗಿನಂಜುಳಿ
ಗಗನದಗಲಕೆ ಕುಣಿವುತಿದ್ದುದು ಸುರರ ಭಾಳದಲಿ
ಬೆಗಡು ಬೀತುದು ಬೇಸರಿನ ಬಲು
ದಗಹು ಸೋತುದು ಶಿವಗೆ ದೈತ್ಯಾ
ರಿಗಳು ಮುದದಲಿ ಮಾಡಿದರು ಮೂರ್ಧಾಭಿಷೇಚನವ ೩೨

ಪಾಶುಪತ್ಯದ ಪಟ್ಟವಾಯ್ತು ಮ
ಹೇಶನಲಿ ಬ್ರಹ್ಮಾದಿ ದೇವರು
ವಾಸಿವಟ್ಟವ ಬಿಟ್ಟರೋಲೈಸಿದರು ಪಶುಪತಿಯ
ಪಾಶುಪತ ಸುವ್ರತವ ಧರಿಸಿದು
ದಾ ಸುಪರ್ವಸ್ತೋಮ ವಿಶ್ವಾ
ಧೀಶನೆಸೆದನು ಕೋಟಿ ಶತಸೂರ‍್ಯಪ್ರಕಾಶದಲಿ ೩೩