ಸೂ.ಸಕಲ ದನುಜ ಭುಜಂಗ ವೃಂದಾ
ರಕಮಹಾಭೂತಾದಿಲೋಕ
ಪ್ರಕರವೆರಡೊಡ್ಡಾಯ್ತು ಕರ್ಣಾರ್ಜುನರ ಕದನದಲಿ

ಹೇಳು ಸಂಜಯ ಕರ್ಣಪಾರ್ಥರ
ಕಾಳೆಗದೊಳೇನಾಯ್ತು ಚಿತ್ರವ
ಕೇಳುವೆನು ಕರ್ಣಾಮೃತವೊ ಕರ್ಣವ್ಯಥಾಹವವೊ
ಹೇಳು ನೀನಂಜದಿರು ಕುರುಕುಲ
ಕಾಲಸರ್ಪನ ತಾಯುದರ ಸೀ
ತಾಳಮಳಿಗೆಯಲೇ ಮಹಾದ್ಭುತವೇನು ಹೇಳೆಂದ ೧

ಅರಸ ಕೇಳಾದರೆ ಮಹಾವಿ
ಸ್ತರವನಾ ಕರ್ಣಾರ್ಜುನರ ರಥ
ಸರಿಸದಲಿ ಚಾಚಿದವು ನೋಟಕರಾದುದುಭಯಬಲ
ಹರಿ ವಿರಿಂಚ ಸುರೇಂದ್ರ ದಿಗುಪಾ
ಲರು ಚತುರ್ದಶ ಮನುಗಳಾದಿ
ತ್ಯರು ಭುಜಂಗಮ ವಿಶ್ವವಸುಗಳು ನೆರೆದುದಭ್ರದಲಿ ೨

ಮಾನಿಕರ ಹಂತಿಗಳ ಹರ ಚತು
ರಾನನರ ವೊಡ್ಡೋಲಗದ ವಾಗ್ಜನಿತ ವಿಗ್ರಹವ
ಭಾನುಜನ ಭಾರಣೆಯನರ್ಜುನ
ನಾನಲಳವೇ ಫಲುಗುಣಗೆ ರವಿ
ಸೂನುವೇ ಫಡಪಾಡೆ ಎಂದುದು ಮೇಲೆ ಸುರಕಟಕ ೩

ರಾಸಿ ತಾರಾಗಣಸಹಿತವಾ
ಕಾಶ ಕರ್ಣನ ಕಡೆ ಸಮೀರ ಹು
ತಾಶನಾಂಬುಧಿ ಗಿರಿಸಹಿತಲೀ ಧರಣಿ ಪಾರ್ಥನಲಿ
ಆ ಸುರಾರಿಪ್ರಮುಖ ಯಕ್ಷರಿ
ಗಾಸೆ ಕರ್ಣನ ಮೇಲೆ ನಾಕನಿ
ವಾಸಿ ನಿರ್ಜರನಿಕರವಾದುದು ನರನ ಕೈವಾರ ೪

ವಿತತ ಮಂತ್ರಾಖ್ಯಾನ ವೇದ
ಸ್ಮೃತಿ ಪುರಾಣ ಷಡಂಗವಿಂದ್ರನ
ಸುತನ ದೆಸೆಯುಚ್ಚಾಟನಸ್ತಂಭಾದಿ ವಿದ್ಯಗಳು
ಕ್ಷಿತಿಪ ಕೇಳೈ ಕರ್ಣನತ್ತಲು
ಕ್ರತುಗಳಾ ದೆಸೆಯಾಭಿಚಾರ
ಕ್ರತುಗಳೀ ದೆಸೆಯಾಗಿ ನಿಂದವು ನೃಪತಿ ಕೇಳೆಂದ ೫

ವಿವಿಧ ರತ್ನಾವಳಿ ಮಹಾನಿಧಿ
ಯವರ ದೆಸೆ ರಜತಾದಿ ಲೋಹ
ಪ್ರವರ ಧಾತುಗಳಿತ್ತಲತ್ತಲು ನಿಮ್ಮ ಥಟ್ಟಿನಲಿ
ರವಿ ಶನೈಶ್ವರ ರಾಹು ಬುಧ ಭಾ
ರ್ಗವರು ಕರ್ಣನ ದೆಸೆಯಲಾ ಮಿ
ಕ್ಕವರು ಪಾರ್ಥನ ದೆಸೆಯಲಾಯಿತು ರಾಯ ಕೇಳೆಂದ ೬

ಶೇಷ ಕಾರ್ಕೋಟಕನು ತಕ್ಷಕ
ವಾಸುಕಿ ಪ್ರಮುಖರಿಗೆ ವಿಜಯದ
ವಾಸಿ ಪಾರ್ಥನ ಮೇಲೆಯುಳಿದೀ ಕ್ರೂರಫಣಿಗಳಿಗೆ
ಆಸೆ ಕರ್ಣನ ಮೇಲೆ ಖಗಮೃಗ
ಕೇಸರಿಗಳಾಚೆಯಲಿ ಜಂಬುಕ
ಕಾಸರ ವ್ಯಾಳಾದಿ ಖಗಮೃಗವಿತ್ತಲಾಯ್ತೆಂದ ೭

ಯಾತುಧಾನ ಕುಬೇರ ಕಿನ್ನರ
ಮಾತೃಗಣ ಕರ್ಣನಲಿ ಸುಮನೋ
ಜಾತ ಚಿತ್ರರಥಾದಿ ಗಂಧರ‍್ವರು ವಿಪಕ್ಷದಲಿ
ಭೂತಗಣವೀಚೆಯಲಿ ದೆಸೆ ದಿಗು
ಜಾತ ಮನು ವಸು ನಾರದಾದಿ ಮ
ಹಾತಪಸ್ವಿಗಳತ್ತಲಾಯಿತು ರಾಯ ಕೇಳೆಂದ ೮

ಭರತ ನಳ ನಹುಷಾದಿ ಭೂಮೀ
ಶ್ವರರು ಪಾರ್ಥನ ದೆಸೆಗೆ ಮಹಿಷಾ
ಸುರ ದಶಾನನ ತಾರಕಾದಿಗಳಾದುದೀಚೆಯಲಿ
ಸುರಮುನಿಗಳಿಂದ್ರಾನಲಾಂತಕ
ವರುಣ ವಾಯು ಮಹೇಶ ವಿದ್ಯಾ
ಧರರು ಪಾರ್ಥನ ದೆಸೆಯಲೈದಿತು ಭೂಪ ಕೇಳೆಂದ ೯

ಖ್ಯಾತಿ ತೇಜಸ್ತೋಮ ವೀರ
ಪ್ರೀತಿ ವಿಕ್ರಮ ಸತ್ಯ ಸಿದ್ಧಿ ವಿ
ಭೂತಿ ಶೌರ್ಯ ತಪಃ ಕ್ಷಮಾದಿಗಳಾದುದಾಚೆಯಲಿ
ಭೀತಿ ಕಾಮ ಕ್ರೋಧ ಕಲಿ ದು
ರ್ನೀತಿ ಮದವಖ್ಯಾತಿ ಮಾನವಿ
ಘಾತಿ ವಿಭ್ರಮ ಕೈತವಾದಿಗಳಾದುದೀಚೆಯಲಿ ೧೦

ಭೃಗು ವಸಿಷ್ಠಾಂಗಿರಸ ದಕ್ಷಾ
ದಿಗಳು ಪಾರ್ಥನ ಪಕ್ಷವಾಯ್ತೀ
ಚೆಗೆ ಪುಲಸ್ತ್ಯ ಮರೀಚಿ ವಿಶ್ವಾಮಿತ್ರ ಗೌತಮರು
ಜಗದ ಜೀವರು ಧಾತುಮೂಲಾ
ದಿಗಳೊಳಿಕ್ಕಟ್ಟಾದುದೀ ಕಾ
ಳೆಗ ಚತುರ್ದಶ ಭುವನಜನ ಸಂಕ್ಷೋಭವಾಯ್ತೆಂದ ೧೧

ಲೋಕವಿವರಲಿ ಪಕ್ಷಪಾತವಿ
ದೇಕೆ ನೋಡೈ ನಿಮ್ಮ ಕರ್ಣನು
ಲೋಕವಿಖ್ಯಾತಪ್ರತಾಪನಲಾ ಮಹಾದೇವ
ಆ ಕೃತ ತ್ರೇತಿಯಲಿ ಕಾದಿದ
ನೇಕ ದಿವಿಜಕ್ಷತ್ರದನುಜಾ
ನೀಕವೀ ಪರಿ ಚಿತ್ರವಿಲ್ಲವನೀಶ ಕೇಳೆಂದ ೧೨

ಅರಸ ಕೇಳೈ ಶಕ್ರ ಸೂರ‍್ಯರ
ಮರುಳುತನವೋ ಮೇಣು ಮರ್ತ್ಯಾ
ಚರಣೆಗಳ ನಾಟಕವೊ ಮೇಣ್ ಸಾಂಸಾರಿಕ ಭ್ರಮೆಯೊ
ನರನಲೇ ಲೋಕೈಕವೀರನು
ದಿರುರೆ ಮಝ ಭಾಪೆಂಬ ಸಡಿಫಡ
ಸರಿಯೆ ಕರ್ಣಂಗೆಂಬ ಕಳಕಳ ಕೇಳಲಾಯ್ತೆಂದ ೧೩

ಈ ಪರಿಯಲೆರಡಿಟ್ಟ ಜಗದಾ
ಳಾಪವನು ಕರ್ಣಾರ್ಜುನರ ಪ
ಕ್ಷೋಪಚಾರ ಪ್ರಕಟ ಕಲಹ ಕಠೋರ ಕಳಕಳವ
ಆ ಪುರಂದರ ಕಮಲಸಖರಾ
ಟೋಪವನು ಭುವನಾಪಘಾತವ
ನಾ ಪಿತಾಮಹನರಿದು ಸಂತೈಸಿದನು ಸಾಮದಲಿ ೧೪

ಅರಸ ಚಿತ್ತೈಸುಭಯಬಲದು
ಬ್ಬರದ ಬಹುವಿಧವಾದ್ಯರವದು
ಬ್ಬರವ ಮುಕ್ಕಳಿಸಿತು ಪಾಠಕ ನಿಕರ ನಿರ್ಘೋಷ
ಸುರರ ಕಳಕಳವೀ ಧ್ವನಿಯನು
ತ್ತರಿಸಿತೀ ಬಲುಗಜಬಜವ ನಡ
ತರದೊಳಿಕ್ಕಿತು ಕರ್ಣಪಾರ್ಥರ ಚಾಪಟಂಕಾರ ೧೫

ಅಳವಿಯಂಕೆಯ ಮೀರಿ ರಥರಥ
ಹಳಚಿದವು ಬಹುಮಾನದಲಿ ವೆ
ಗ್ಗಳಿಸಿದವು ವೇಗಾಯ್ಲವಾಜಿಯ ಲಳಿಯ ಲಹರಿಯಲಿ
ಹೊಳೆದವೆಡಬಲವಾಘೆ ಸನ್ನೆಯ
ಸುಳಿವ ಸುಭಟರ ರೇಖೆ ಸೆಳೆದುದು ಜನದ ಕಣ್ಮನವ ೧೬

ಉಪ್ಪರಿಸಿ ಲಳಿಯೆದ್ದು ಸೂತರ
ಚಪ್ಪರಣೆಗಳ ಮೀರಿ ಖುರದಲಿ
ಖೊಪ್ಪರಿಸಿ ಹೊಯ್ದಾಡಿದವು ಹೇಷಿತದ ಹಲ್ಲಣೆಯ
ದರ್ಪದಲಿ ತೇಜಿಗಳು ತೇಜಿಯ
ತಪ್ಪಡಿಗೆ ಲಟಕಟಿಸಿದವು ರಣ
ವೊಪ್ಪಿತೈ ಕರ್ಣಾರ್ಜುನರ ರಥವಾಜಿ ವಾಜಿಗಳ ೧೭

ಅರಸ ಕೇಳೇನೆಂಬೆನೈ ಕಪಿ
ವರನ ಕೋಳಾಹಳದ ಕದನವ
ಕರೆದು ನಖದಲಿ ಹೊಯ್ದು ಕರದಲಿ ಕಾದುವಂದದಲಿ
ಮುರಿದು ಬಾಲದಲಡಿಗಡಿಗೆ ಬೊ
ಬ್ಬಿರಿದು ಹೆಣಗಿದನಿನಸುತನ ಭಾ
ಸುರದ ಹೇಮಧ್ವಜದ ಹಲಗೆಯ ಹಸ್ತಿಕಕ್ಷದಲಿ ೧೮

ಏನ ಹೇಳುವೆ ಸೂತತನದಭಿ
ಮಾನವೇರಿದ ಪರಿಯನಾ ವೇ
ಷಾನುರೂಪ ವಿಚೇಷ್ಟೆಯನು ಲೋಕೈಕ ಚೇಷ್ಟಕನ
ನೀನೆನಗೆ ಸಾರಥಿತನದಲಿ ಸ
ಮಾನವೇ ಫಡ ತುರಗಹೃದಯ
ಜ್ಞಾನ ನಿನಗೇಕೆನುತ ಶಲ್ಯನ ಜರಿದನಸುರಾರಿ ೧೯

ಅಕಟ ಗೋರಕ್ಷಕನೆ ಪಶುಪಾ
ಲಕರ ಮಕ್ಕಳೊಳಶ್ವಹೃದಯ
ಪ್ರಕಟ ವಿಜ್ಞಾನಂಗಳುದಿಸಿದವೇ ವಿಶೇಷವಲಾ
ವಿಕಳರಾವಿದನೆತ್ತಬಲ್ಲೆವು
ಸಕಲಗುಣಸರ‍್ವಜ್ಞ ನಿನಗೀ
ಬಕವಿಡಂಬನವೇಕೆನುತ ಮೂದಲಿಸಿದನು ಶಲ್ಯ ೨೦

ಧಾರಿಣೀಪತಿ ಕೇಳು ಬಿಲುಟಂ
ಕಾರ ಕದನೋಪಕ್ರಮದೊಳೋಂ
ಕಾರವಾಯಿತು ಕಾರ‍್ಮುಕಸ್ವಾಧ್ಯಾಯವಿಸ್ತರಕೆ
ಭೂರಿ ಬಹುವಿಧ ಬಾಣವರ್ಗವಿ
ಹಾರವೆಸೆದುದು ಕರ್ಣಪಾರ್ಥರು
ದಾರ ಸಮರಾರಂಭವಳ್ಳಿರಿದುದು ಜಗತ್ರಯವ ೨೧

ಸೂತಜಾತಿಯೊಳೀ ಧನುರ್ವೇ
ದಾತಿಶಯವೆಂತಾಯ್ತು ಪಾರ್ಥಿವ
ಜಾತಿಯಧ್ಯಾಪನವಿಧಾನನಿಯೋಗವಾವನದು
ಪೂತು ಮಝರೇ ಸೈರಿಸಾದಡೆ
ಸೂತನಂದನ ಎನುತ ಬಾಣ
ವ್ರಾತದಲಿ ಹೊದಿಸಿದನು ಕರ್ಣನ ರಥವನಾ ಪಾರ್ಥ ೨೨

ಹರೆಗಡಿದನಾ ಕ್ಷಣದೊಳಾತನ
ಶರವನೆಲವೋ ಪಾರ್ಥ ನಿಮ್ಮೈ
ವರಿಗೆ ಜನಕನು ಪಾಂಡು ನೀವಧ್ಯಯನಯೋಗ್ಯರಲಾ
ಧರೆಯೊಳಗ್ಗದ ರಾಜಸೂಯಾ
ಧ್ವರಕೆ ಪತ್ನಿಯೊ ಯೋಗ್ಯೆ ಯಜಮಾ
ನರುಗಳೈ ನೀವೇನಹೇಳುವೆವೆನುತ ತೆಗೆದೆಚ್ಚ ೨೩

ಸೂಳೆಯರು ಗಡ ಸಾಮಗಾನವ
ನಾಳಿಗೊಂಬರು ಗಡ ದಿನೇಶನ
ಮೇಳವನು ಮುದುಗೂಗೆ ಮೆಚ್ಚದು ಹಾನಿಯೇನದಕೆ
ಆಳುತನದಂಘವಣೆಯುಂಟೇ
ಬೋಳೆಯಂಬಿನಲಾಡಿಕೊಳು ಬಿಡು
ಜಾಳುನುಡಿಗಳ ಜವಳಿವಾತನೆನುತ್ತ ನರನೆಚ್ಚ ೨೪

ಆತನೆಚ್ಚ ಶರೌಘವನು ಕಡಿ
ದೀತ ನುಡಿದನು ಹೊಳ್ಳುವಾತಿನ
ಹೋತುದರಿಹಿಗಳಿವರುಪಾಧ್ಯರು ನಾವು ಸೂಳೆಯರು
ಏತಕೀ ಬಳೆಗೈಗೆ ಬಿಲು ಹಿಣಿ
ಲೇತಕೀ ಚೊಲ್ಲೆಹಕೆ ಚಲ್ಲಣ
ವೇತಕೀ ಹೆಣ್ಣುಡಿಗೆಗೆನುತೆಚ್ಚನು ಧನಂಜಯನ ೨೫

ಕಾಣಿಸಿದನೈ ಕೌರವನ ಹರಿ
ವಾಣದಾಯದ ಹಂತಿಕಾರನು
ಕಾಣಿಕೊಂಕನು ನಮ್ಮ ಚರಿತಕೆ ಹಾ ಮಹಾದೇವ
ಜಾಣತನವೊಳ್ಳೆಯದು ಧರ್ಮಜ
ನಾಣೆ ಬಲ್ಲೆನು ದಿಟವೆನುತ ಬಲು
ಸಾಣೆಯಲಗಿನ ಸರಿಯ ಸುರಿದನು ಸವರಿ ರಿಪುಶರವ ೨೬

ರಾಯತನದಲಿ ಬೆರೆತು ರಾಜ್ಯ
ಶ್ರೀಯ ನೆರೆ ಹೋಗಾಡಿ ಪರರಿಗೆ
ಜೀಯ ಬೆಸಸುವುದೆಂದು ಜೀವಿಸುವವರು ನಾವಲ್ಲ
ರಾಯತನವೆಮಗಿಲ್ಲ ಕೌರವ
ರಾಯನೋಲೆಯಕಾರರಹೆವೆ
ಮ್ಮಾಯತವು ತಾ ಬೇರೆನುತ ಕವಿದೆಚ್ಚನಾ ಕರ್ಣ ೨೭

ಆವ ಹಂಜರಕೂಳಿ ಮೊಗವಲೆ
ಯಾವಗಾಣವು ಬೀಸುವಲೆಯುರೆ
ತೀವಿದುದಕದ ಮಡುವೆಯಿದು ಸಂಗ್ರಾಮಭೂಮಿ ಕಣಾ
ಹೇವವಿಲ್ಲದೆ ಕಾದಬೇಹುದು
ಧೀವರರವೋಲ್ ತಡಿಕೆವಲೆಯಲಿ
ಲಾವುಗೆಯ ಹೊಯ್ದಂದವಲ್ಲೆನುತೆಚ್ಚನಾ ಪಾರ್ಥ ೨೮

ನೀವು ನುಡಿದುದು ಹುಸಿಯೆ ಕೂಳಿಯ
ತೀವಿ ತೀವೆವು ಕೊಳಚೆಗಳ ಬಾ
ಣಾವಳಿಯ ತಡಿಕೆಯಲಿ ಹೊಯ್ವೆವು ನಕುಲ ಜಾತಿಯನು
ನಾವು ನಿಮ್ಮಯ ಹೃದಯಸರಸಿಯ
ಜೀವಮತ್ಸ್ಯಕೆ ಗಾಣವಿಕ್ಕುವ
ಧೀವರರು ನೋಡೆನುತ ಪಾರ್ಥನನೆಚ್ಚನಾ ಕರ್ಣ ೨೯

ಬೇರೆ ಕೆಲವಂಬುಗಳು ಗಡ ಮೈ
ದೋರಿದವು ನಿನಗೆಂಬರವ ನೀ
ತೋರಿಸಾ ನಿನಗಾಯ್ತು ಗಡ ಶಿಮೌಳಿಯುಪದೇಶ
ಹಾರುಗಣೆಗಳ ಹರಸಿ ಹೆಮ್ಮೆಯ
ಬೀರಿ ಚದುರಿಗತನವ ಮೆರೆದರೆ
ನೀರನೆಂಬರೆ ನಿನ್ನನೆನುತೆಚ್ಚನು ಧನಂಜಯನ ೩೦

ಮೊಲನ ಬೇಂಟೆಗೆ ತಿವಿದು ಹಾಸವ
ಕಳುಚುವರೆ ಕೇಸರಿಯನಕಟಾ
ಕೊಳಚೆಯುದಕಕೆ ಕೊಂಬುದೇ ಹರಗೋಲ ಬಾಡಗೆಯ
ಗಳಹತನವೇ ಹರನ ಬಾಣಾ
ವಳಿಗೆ ಗುರಿಯೇ ನೀನೆನುತ ಕೈ
ಚಳಕದಲಿ ರಿಪುಶರವ ಖಂಡಿಸಿ ತುಳುಕಿದನು ಪಾರ್ಥ ೩೧

ಡೊಂಬಿಯೇಕೈ ಪಾರ್ಥ ಬಯಲಾ
ಡಂಬರವ ನಾವರಿಯೆವೇ ತ್ರಿ
ಯಂಬಕಾಸ್ತ್ರದ ತೊಡಹವಲ್ಲಾ ನಿನ್ನ ವಿಕ್ರಮಕೆ
ಶಂಬರಾರಿಯ ಕಣೆಯವೊಲು ನಿ
ನ್ನಂಬು ಬಲ್ಲಿದವೆಂದು ಕೆಲದವ
ರೆಂಬರೈ ಹುಸಿಯಲ್ಲೆನುತ ರಿಪುಶರವ ಖಂಡಿಸಿದ ೩೨

ಲೇಸನಾಡಿದೆ ಕರ್ಣ ನೀನೇ
ನೈಸುಖೂಳನೆ ನಿನ್ನವಂದಿಗ
ವೇಷ ವಧುಗಳ ನುಗಿವಡಿವು ಮದನಾಸ್ತ್ರವೇಕಲ್ಲ
ಈ ಶರಾವಳಿ ಕುಸುಮಮಯ ನೀ
ನೈಸೆ ವನಿತಾಮಯನು ಪುಷ್ಪಶ
ರಾಸನನು ತಾನೆನುತ ಕಣೆಗೆದರಿದನು ಕಲಿಪಾರ್ಥ ೩೩

ಗಂಡುಗಲಿ ನೀ ಕಾಮನೈ ಕೈ
ಕೊಂಡೆವೈ ತಪ್ಪೇನು ನಾವೇ
ಖಂಡಪರಶುಗಳಾಗೆವೇ ಭವದೀಯ ವಿಗ್ರಹಕೆ
ಕಂಡೆ ನಿನ್ನನು ಸುಭಟವೇಷದ
ಭಂಡನೋ ಫಡ ಹೋಗೆನುತ ಪರಿ
ಮಂಡಳಿತ ಕೋದಂಡನೆಚ್ಚನು ಕರ್ಣನರ್ಜುನನ ೩೪

ನಿಮಿಷ ನಿಮಿಷಕೆ ಹೆಚ್ಚಿತಿಬ್ಬರ
ತಿಮಿರಮಯ ಘನರೋಷವಿಬ್ಬರ
ಸಮರಸಾಹಸಶೌರ‍್ಯವಿಬ್ಬರ ಕಣೆಯ ಕೈಚಳಕ
ಶ್ರಮವಿಧಾನವ್ಯಾಪ್ತಿಯಿಬ್ಬರ
ಗಮಕವಿಬ್ಬರ ಗಾಢವಿಬ್ಬರ
ಸಮತೆಯಿಬ್ಬರ ಗರ್ವವಿಬ್ಬರ ತೀವ್ರತರತೇಜ ೩೫

ಜನಪ ಕೇಳೈ ಬಳಿಕ ಕರ್ಣಾ
ರ್ಜುನರ ಸಮಸಂಗ್ರಾಮವನು ಗುರು
ತನುಜ ಕಂಡನು ಕೌರವೇಂದ್ರನ ಬಳಿಗೆ ನಡೆತಂದು
ತನತನಗೆ ತೊಲಗಿತು ಮಹೀಶರ
ಮೊನೆಯ ಸಮರಥರಾಜಿ ಗುರುನಂ
ದನನಲಾ ಎನುತಿದಿರುವಂದನು ನಿನ್ನ ಮಗ ನಗುತ ೩೬

ಏನು ಬಂದಿರಿ ಕಾಳೆಗದ ಹದ
ನೇನು ಪಾಂಡವರಾಜತಿಮಿರಕೆ
ಭ್ಞಾನುವಿನ ಭಾರಣೆಯ ಬಲುಹೇ ನಿಮ್ಮ ದಳಪತಿಯ
ಆನಲಳವೇ ಪಾರ್ಥನೀತನ
ನೇನು ಹದನೈ ರಾಜಕಾರ‍್ಯನಿ
ಧಾನವೇನೆಂದರಸ ನುಡಿದನು ದ್ರೋಣನಂದನನ ೩೭

ಏನನೆಂಬೆನು ಜೀಯ ಕರ್ಣನ
ನಾನುವಡೆ ಫಲುಗುಣನ ಪಾಡೆ ಕೃ
ಶಾನುನೇತ್ರನೊ ಕೈಟಭಾರಿಯೊ ಕಮಲಸಂಭವನೊ
ಆ ನಿರೂಢಿಯ ದೊರೆಗಳಿವನ ಸ
ಮಾನರೇ ಗುಣದಲಿ ಸಮತ್ಸರ
ಮಾನಿಸನೆ ನಿನ್ನಾಣೆ ಭಾರದ್ವಾಜನಾಣೆಂದ ೩೮

ಹರಿ ಮಹೇಶ್ವರರಾಳುತನಕಿ
ಬ್ಬೆರಳು ಮಿಗಿಲರ್ಜುನನ ಬಲುಹೀ
ಧರೆಯರಿಯಲೀ ಹೊತ್ತಿನಲಿ ನಿನ್ನಾತನಗ್ಗಳಿಕೆ
ಸರಿಗೆ ಸಂದುದೆ ಸಾಕು ತೂಗಿದ
ಡರಸ ರವೆ ಕುಂದದು ಪರಸ್ಪರ
ವರಸುಕಾರ‍್ಯದ ವಾಸಿ ಬಂದುದು ರಾಯ ಕೇಳೆಂದ ೩೯

ಒಮ್ಮೆ ಮುರಿವುದು ವೈರಿಗಳ ಮ
ತ್ತೊಮ್ಮೆ ಮುರಿವುದು ನಮ್ಮ ದಳ ಬಳಿ
ಕೊಮ್ಮೆ ಮಕ್ಕಳ ತಂಡವವರಲಿ ನಮ್ಮ ಥಟ್ಟಿನಲಿ
ನಮ್ಮ ದೆಸೆ ಬಲುದೊರೆಗಳಳಿವಿನೊ
ಳೊಮ್ಮೆ ಹೋಯಿತು ಹೊತ್ತು ರಣದಲಿ
ನಮ್ಮ ವಿಳಸಕೆ ಮೇಲುವಾಸಿ ನೃಪಾಲ ಕೇಳೆಂದ ೪೦

ಸರಿಗಳೆವೆನೆರಡಂಕವನು ನಾ
ಕರಸಿ ಕೊಡುವೆನು ಧರ್ಮಜನನೆರ
ಡರಸುಗಳು ಸರಿಯಾಗಿ ಭೋಗಿಸುವುದು ಮಹೀತಳವ
ಅರಸ ಕರ್ಣನ ಕೆಡಿಸದಿರು ನಿ
ಷ್ಠುರದ ನುಡಿಯಿದು ಕೆಂಡದಲಿ ಕ
ರ್ಪುರವ ಹಾಯ್ಕದಿರೆಂದು ರಾಯನ ಗಲ್ಲವನು ಪಿಡಿದ ೪೧

ಆಗಲಿದು ತಪ್ಪೇನು ಸಂಪ್ರತಿ
ಯಾಗಬೇಡೆಂದೆನೆ ಮಹಾಹವ
ವೀಗ ಸರಿಬರಿಯಾಯ್ತು ಬಂದುದು ವಾಸಿಯೆಂದಿರಲೆ
ಈಗಲಭಿಮನ್ಯುವಿಗೆ ಲಕ್ಷಣ
ಹೋಗಲಾ ಸೈಂಧವಗೆ ದ್ರುಪದನ
ನೀಗಲದು ಸರಿಯಾಗಲೆಂದನು ಕೌರವರರಾಯ ೪೨

ಗುರುನದೀಸುತರಳಿವುಭಯರಾ
ಯರಿಗೆ ಸರಿ ದುಶ್ಶಾಸನನ ನೆ
ತ್ತರದಿ ಪಾನಕ್ರೀಡನಾ ಸೌಭಾಗ್ಯಸಂಪದಕೆ
ಸರಿಯದಾವದು ಕರ್ಣತನಯನ
ಮರಣಕಾವುದು ಸರಿಸ ಭೀಮನ
ಕರುಳಲೆನ್ನಯ ಕರುಳು ತೊಡಕಲು ಮೇಲೆ ಸಂಧಾನ ೪೩

ಈ ದಿವಿಜರೀ ಸೇನೆಯೀ ಕ
ಕರ್ಣಾದಿ ಸುಭಟರು ನಾವು ನೀವೀ
ಮೇದಿನೀಶ್ವರರಖಿಳನಾಯಕರವರ ಥಟ್ಟಿನಲಿ
ಈ ದುರಾಗ್ರಹವುಚಿತವಲ್ಲೆನೆ
ಸೋದರನ ತನುಗೆಡಹಿ ರಕುತವ
ಸೇದಿ ಸೊಕ್ಕಿದ ಭೀಮನೊಡನೆಮಗೆಂತು ಸಂಧಾನ ೪೪

ನಿರಿಗರುಳನುಗಿದುಗಿದು ನೆತ್ತರಿ
ನೊರವಿನಲಿ ಮೊಗೆಮೊಗೆದು ಬಾಯೊಳ
ಗೆರೆದು ಸವಿನೋಡೆಂದು ನಿಮಗೆಲ್ಲರಿಗೆ ಕೈ ನೀಡಿ
ಇರಿದಿರಿದು ಮೂದಲಿಸಿ ಮಿಗೆ ಚ
ಪ್ಪರಿದು ಚಪ್ಪರಿದಾಡಿ ರಕುತವ
ಸುರಿದು ಸೊಕ್ಕಿದ ಭೀಮನೊಡನೆಮಗೆಂತು ಸಂಧಾನ ೪೫

ಆಡಲೇಕಿದನಿನ್ನು ಹಿಂದಣ
ಕೇಡನೆಣಿಸಿದಡೇನು ಫಲ ತಾ
ಗೂಡಿ ಹಲಬರು ಜೀವಪುರುಷರು ಹೆಂಗಳಾದೆವಲೆ
ನೋಡದಿರು ಹಿಂದಾದ ಭಂಗವ
ನಾಡದಿರು ಬಹುಬಂಧುವರ್ಗದ
ಕೇಡದೆಲ್ಲವನೊಬ್ಬ ಕರ್ಣನ ನೋಡಿ ಮರೆಯೆಂದ ೪೬

ಅನುಜರಳಿದುದು ನೂರು ಬವರದಿ
ತನುಜರಳಿದುದು ನೂರು ಬಾಂಧವ
ಜನರು ಸಂಖ್ಯಾರಹಿತ ಬಿದ್ದೇನವದಿರಿದ್ದೇನು
ಎನಗೆ ಕರ್ಣನ ಜೀವವೇ ಜೀ
ವನವಿದೆಂಬೆಯಲಾ ಸಹೋದರ
ತನುಜರೆಲ್ಲರನೊಬ್ಬ ಕರ್ಣನ ನೋಡಿ ಮರೆಯೆಂದ ೪೭

ರಣದೊಳಳಿದೀ ಸಕಲಬಾಂಧವ
ಗಣವಿದೆಲ್ಲವನೊಬ್ಬ ಕರ್ಣನ
ಗುಣವ ಕಂಡೇ ಮರೆದೆಯಕಟೀ ಕರ್ಣನಳಿವಿನಲಿ
ಎಣೆಯಗಲಿ ನೀ ಬದುಕುವೈ ಧಾ
ರುಣಿಯ ಪತಿಯೇ ಪಾರ್ಥವಹ್ನಿಯ
ನಣೆದು ಕರ್ಣನನುಳುಹಿಕೊಳು ಸಂಪ್ರತಿಯ ಮಾಡೆಂದ ೪೮

ಗುರುತನುಜ ನೀವಾಡಿದುದ ಧಿ
ಕ್ಕರಿಸುವವರಾವಲ್ಲ ಕರ್ಣನ
ಹಿರಿಯ ಮಗನನು ಪಾರ್ಥನುದರದೊಳಾ ಸಹೋದರನ
ದುರುಳ ಭೀಮನ ಬಸಿರ ಬಗಿದು
ತ್ತರಿಸುವೆನು ಭಾಷೆಯನು ನೀವ್ ಹಿರಿ
ಯರಸರಲಿ ಯಮಳರಲಿ ಸಂಧಿಯ ಮಾಡಿಕೊಡಿಯೆಂದ ೪೯