ಸೂ. ಪೃಥಿವಿಪತಿ ಮಾದ್ರೇಶನನು ಸಾ
ರಥಿಯ ಮಾಡಿದನೊಲವು ಮಿಗಲತಿ

ರಥ ಭಯಂಕರ ಭಾನುಸುತನಾಹವಕೆ ನಡೆತಂದ

ಹರನ ಬೀಳ್ಕೊಂಡಖಿಳದಿವಿಜರು
ಹರೆದುದೀ ಪರಿ ಕಮಲಭವನೀ
ಶ್ವರನ ಸಾರಥಿಯಾಗೆ ಸಾರಿದುದಮರರಭ್ಯುದಯ
ಹರಿಯ ಸಾರಥಿತನದಿ ಜಯವಂ
ಕುರಿಸಿತವರಿಗೆ ನಿಮ್ಮ ಕೃಪೆಯಲಿ
ಕುರುಬಲಕೆ ಗೆಲವಾದಡೊಳ್ಳಿತು ಮಾವ ಕೇಳೆಂದ ೧

ಹರನು ಬಿಲುವಿದ್ಯವನು ಕೊಡುತವೆ
ಪರಶುರಾಮಂಗೆಂದನಧಮರಿ
ಗೊರೆಯದಿರು ಸತ್ಪಾತ್ರಕಿದನಾದರಿಸಿ ಕಲಿಸೆಂದ
ಸುರರ ಮೆಚ್ಚದ ರಾಮನೀತನ
ಕರೆದು ಗರುಡಿಯ ಹೊಗಿಸಿದನು ಕಡು
ಗರುವನೀ ರಾಧೇಯನಧಮನೆ ಮಾವ ಕೇಳೆಂದ ೨

ಸೂತ ಕುಲಸಂಭವನೆ ಭುವನ
ಖ್ಯಾತ ಕರ್ಣನು ಸಾಕಿದಾತನು
ಸೂತನಾದಡೆ ಮಾವ ಕೇಳನ್ವಯಕೆ ಹಳಿವುಂಟೆ
ಸ್ವಾತಿಯುದಕದೊಳಾದ ಮೌಕ್ತಿಕ
ವ್ರಾತಕಯ್ಯನೆ ಚಿಪ್ಪು ನಿಮಗಿ
ನ್ನೇತಕೀ ಸಂದೇಹ ರವಿಸುತ ಸೂತನಲ್ಲೆಂದ ೩

ಈ ದುರಾಗ್ರಹ ನಿನ್ನ ಚಿತ್ತದೊ
ಳಾದುದೇ ತಪ್ಪೇನು ಕೋಗಿಲೆ
ಯಾದರಿಸಿದಡೆ ಬೇವು ಮಾವಹುದಾದಡೆಮಗೇನು
ಕಾದಿ ಗೆಲುವುದು ಭಾರಿ ಗುರು ಭೀ
ಷ್ಮಾದಿ ಭಟರೇನಾದರೈ ತಾ
ನಾದುದಾಗಲಿ ನಾವು ಸಾರಥಿಯಾದೆವೇಳೆಂದ ೪

ನಿಮ್ಮ ವಿಜಯಶ್ರೀಯ ಕಡೆಗ
ಣ್ಣೆಮ್ಮ ಮುಖದಲಿ ಮುರಿದುದಾದಡೆ
ನಮ್ಮ ಕೊರತೆಯದೇಕೆ ಕರಸೈ ಸೂತನಂದನನ
ನಮ್ಮ ಹೇಳಿಕೆ ಯಾವುದದ ನೀ
ತಮ್ಮ ಮೀರಿದು ನಡೆದನಾದಡೆ
ನಮ್ಮ ವಾಘೆಯ ಬೀಳುಕೊಡುವೆವು ರಾಯ ಕೇಳೆಂದ ೫

ಹೊತ್ತ ದುಗುಡವ ಹಾಯ್ಕಿ ಕೈವಿಡಿ
ದೆತ್ತಿ ಕರ್ಣನ ಕೊಟ್ಟು ಮೈಗಳ
ಲೆತ್ತು ಗುಡಿಗಳ ರೋಮ ಪುಳಕದ ಪೂರ್ಣ ಹರುಷದಲಿ
ಬತ್ತಿ ತಂತಸ್ತಾಪಜಲನಿಧಿ
ಚಿತ್ತದುರು ಸಂದೇಹ ತರುವಿನ
ಬಿತ್ತು ಕರಿಮೊಳೆವೋಯ್ತು ನಿನ್ನ ಮಗಂಗೆ ನಿಮಿಷದಲಿ ೬

ಬೀಳುಕೊಂಡನು ಶಲ್ಯನನು ಭೂ
ಪಾಲನಿತ್ತಲು ಕರ್ಣನಾಯುಧ
ಶಾಲೆಯಲಿ ಶುಚಿಯಾಗಿ ಶಸ್ತ್ರಾಸ್ತ್ರವನು ಪೂಜಿಸಿದ
ಸಾಲದೀವಿಗೆಗಳನು ಶಸ್ತ್ರ
ಜ್ವಾಲೆ ಮಿಕ್ಕವು ತೀಕ್ಷ್ಣ ಧಾರಾ
ಭೀಳ ವಿಕ್ರಮ ವಿಸ್ಫು ಲಿಂಗಿತವಾದವಡಿಗಡಿಗೆ ೭

ಕುರಿಯ ಹಣಿದದ ಕೋಳಿ ಕೋಣನ
ಮುರಿದಲೆಯ ಮೀಸಲಿನ ರಕುತದ
ದುರುದುರಿಪ ದಂಡೆಯಲಿ ಕಲಸಿದ ಕೂಳ ಮುದ್ದೆಗಳ
ಹೊರಗೆ ಬಡಿಸಿದ ಭೂತಬಲಿ ಬೊ
ಬ್ಬಿರಿತದೊಡನುಬ್ಬೇಳ್ವ ಲಗ್ಗೆಯ
ಹರೆಗಳಬ್ಬರವಾಯ್ತು ಕರ್ಣನ ಶಸ್ತ್ರ ಪೂಜೆಯಲಿ ೮

ವಿರಚಿಸಿತು ಶಸ್ತ್ರಾಸ್ತ್ರ ಪೂಜಾ
ಪರಿಸರಣ ರವಿಸೂನು ದರ್ಭಾಂ
ಕುರದ ಶಯನಸ್ಥಾನದಲಿ ಮಾಡಿದನು ಜಾಗರವ
ಕುರು ನೃಪಾಲನ ಪಾಳೆಯದೊಳಾ
ಯ್ತಿರುಳು ಮನೆಮನೆಗಳಲಿ ಶಸ್ತ್ರೋ
ತ್ಕರ ಸಮಾರಾಧನೆಯೊಳಿರ್ದುದು ಕೂಡೆ ನೃಪಕಟಕ ೯

ಸವೆದುದಿರುಳರುಣೋದಯದಲಾ
ಹವದ ಸಂಭ್ರಮರಭಸವೆದ್ದುದು
ವಿವಿಧ ಬಲ ಭಾರಣೆಯ ಭುಲ್ಲವಣೆಯ ಛಡಾಳದಲಿ
ತವಕಿಸುತ ಬಿಗಿ ವಾರುವನ ತಾ
ಸವಗವನು ಬಲ್ಲೆಹವ ಸೀಸಕ
ಕವಚಗಳನೆಂಬಬ್ಬರಣೆ ರಂಜಿಸಿತು ರಾವ್ತರಲಿ ೧೦

ಬಿಡು ಗಜವ ಬಿಗಿ ರೆಂಚೆಗಳ ತೆಗೆ
ದಡಿಯ ಹಾಯಿಕು ಗುಳವ ತಾ ಮೊಗ
ವಡವ ಕೊಡು ಪಟ್ಟೆಯವ ಕೈಯಲಿ ಬೀಸು ಚೌರಿಗಳ
ತಡವಿದೇನೋ ಸಾಯಿ ಫಡಿ ಫಡ
ಕೆಡೆಯೆನುತ ತಮ್ಮೊಬ್ಬರೊಬ್ಬರ
ಜಡಿಯಲಬ್ಬರವಾದುದಾರೋಹಕರ ಕೇರಿಯಲಿ ೧೧

ಕೀಲ ತೆಗೆಯಚ್ಚುಗಳ ಹೆರೆ ಬಲು
ಗಾಲಿಗಳ ಜೋಡಿಸು ಪತಾಕಾ
ಜಾಲವನು ನಿಲಿಸೀಸ ಬಲಿ ಬಲುಮಿಣಿಯ ಬಿಗಿಯೆನುತ
ಮೇಲೆ ಮೇಲಬ್ಬರದ ಘೋಳಾ
ಘೋಳಿ ಘಲ್ಲಿಸೆ ದೆಸೆಯಲತಿರಥ
ಜಾಲ ಕವಿದುದು ಕದನ ಕೌತೂಹಲರ ಕೇರಿಯಲಿ ೧೨

ನೀಡು ಬಿಲುಬತ್ತಳಿಕೆಯನು ನಡೆ
ಜೋಡ ತೆಗೆ ತಾ ಸವಳವನು ರಣ
ಖೇಡನೇ ಫಡ ಘಾಯವನು ಬಿಗಿ ಮದ್ದನರೆಯೆನುತ
ಕೂಡೆ ತಮತಮಗಾಹವದ ಖಯ
ಖೋಡಿಯಿಲ್ಲದೆ ಸುಭಟರಬ್ಬರ
ಝಾಡಿ ಮಸಗಿತು ಕದನದಲಿ ಕಾಲಾಳ ಕೇರಿಯಲಿ ೧೩

ಬಿರಿದುದಬುಜಭವಾಂಡವೆನೆ ಭೋಂ
ಕರಿಸಿದವು ನಿಸ್ಸಾಳತತಿ ನಿ
ಬ್ಬರದ ಬಿರುದನು ಬೀರುತಿರ್ದವು ಗೌರುಗಹಳೆಗಳು
ಎರಲು ಸುಳಿದುದು ದೀಪಶಿಖಿ ಪರಿ
ಹರಿಸಿದತಿಬಲದಬ್ಬರದ ನಿ
ಷ್ಠುರತೆಗಂಜದೆ ಮಾಣದೆನೆ ಹೆರಹಿಂಗಿತಾ ರಜನಿ ೧೪

ಅರಸ ಕೇಳಭ್ಯುದಿತವಾದುದು
ಸರಸ ಕೈರವ ರಾಜಿ ಕೋಮಲ
ಸರಸಿರುಹವನವಾದುದಾಕ್ಷಣ ಸುರಭಿ ನಿರ್ಮುಕ್ತ
ಕಿರಣ ತೋಮರ ದಕ್ಷಿಣೋರು
ಸ್ಫುರಣ ತಿಮಿರ ಮೃಗೀಕದಂಬಕ
ತರಣಿ ನೂಕಿದನುದಯಶೈಲಕೆ ರತುನಮಯ ರಥವ ೧೫

ಉಲಿವ ಮಂಗಳ ಪಾಠಕರ ಕಳ
ಕಳಿಕೆ ಮೆರೆಯಲು ಹೊಳೆವ ಹೊಂಬ
ಟ್ಟಲಲಿ ಸೂಸಿದನರ್ಘ್ಯಜಲವನು ಜನಕನಿದಿರಿನಲಿ
ಲಲಿತ ಮಂತ್ರಾಕ್ಷತೆಗಳನು ಕರ
ತಳದೊಳಾಂತು ಮಹೀಸುರರಿಗ
ಗ್ಗಳೆಯನಿತ್ತನು ಧೇನುಮಣಿಕನಕಾದಿ ವಸ್ತುಗಳ ೧೬

ವರ ನಿಭಾರಿಯ ಬಳವಿನಲಿ ಬಲ
ಮುರಿಯ ಬಿಗಿದನು ಬಿಗಿದ ಬದ್ದುಗೆ ದಾರ ಗೊಂಡೆಯವ
ಕಿರಣ ಲಹರಿಯ ವಜ್ರಮಾಣಿಕ
ಪರಿರಚಿತ ಭುಜಕಂಠಕರ್ಣಾ
ಭರಣ ಚರಣದ ಖಡೆಯದಲಿ ರಂಜಿಸಿದನಾ ಕರ್ಣ ೧೭

ದಿನ ಗಣನೆ ಹದಿನೆಂಟು ಕೋಟಿಯ
ಕನಕವಂದಿನ ದಿನದಿ ಚೆಲ್ಲಿದ
ನನುಪಮಿತ ಧನ ರತುನ ಭಂಡಾರವನು ತೆಗೆತೆಗಸಿ
ಮನದಣಿಯೆ ಯಾಚಕರಿಗಿತ್ತುದ
ನೆನಗೆ ಬಣ್ಣಿಸಲಳವೆ ಕೇಳೈ
ಜನಪ ಕರ್ಣನದೇನ ನಿಶ್ಚಯಿಸಿದನೊ ಮನದೊಳಗೆ ೧೮

ಹೊಳೆಹೊಳೆದವಾಭರಣ ತಾರಾ
ವಳಿಗಳಂತಿರೆ ಪೂರ್ಣ ಶಶಿಮಂ
ಡಲದವೊಲು ತನುಕಾಂತಿ ತಿವಿದುದು ನಿಖಿಳದಿಗುತಟವ
ತಳಿತ ವಿಕ್ರಮ ಸುಪ್ರತಾಪೋ
ಜ್ವಲಿತಸೂರ‍್ಯಪ್ರಭೆ ಜಗತ್ರಯ
ದೊಳಗೆ ಝಳಪಿಸೆ ಕರ್ಣನೆಸೆದನು ದಿವ್ಯತೇಜದಲಿ ೧೯

ದೇವ ಗುರು ವಿಪ್ರರಿಗೆ ಬಹು ಸಂ
ಭಾವನೆಯ ಮಾಡಿದನು ಶಸ್ತ್ರಾ
ಸ್ತ್ರಾವಳಿಯ ತರಿಸಿದನು ತುಂಬಿಸಿದನು ವರೂಥದಲಿ
ರಾವುತರಿಗಾರೋಹಕರಿಗೆ ಭ
ಟಾವಳಿಗೆ ರಥಿಕರಿಗೆ ಚೆಲ್ಲಿದ
ನಾ ವಿವಿಧ ಸೌಗಂಧ ಭಾವಿತ ಯಕ್ಷ ಕರ್ದಮವ ೨೦

ನಡೆದು ಬಂದನು ರಥಕೆ ದೆಸೆ ಕಂ
ಪಿಡುತ ನೆರೆದ ಮಹಾಪ್ರಧಾನರ
ನಡುವೆ ಚಲಿಸುವ ಚಾತುರಂಗದ ಸುಳಿಯ ಸಂದಣಿಯ
ಒಡನೆ ನೆಲನಳ್ಳಿರಿಯೆ ವಾದ್ಯದ
ಗಡಣ ಮೊರೆದುದು ಪಾಠಕರ ಗಡ
ಬಡಿಯ ಕಳರವ ಬಗಿದುದಬುಜಭವಾಂಡಮಂಡಲವ ೨೧

ಅತಿರಭಸದಿಂದಾಯ್ತು ಸೇನಾ
ಪತಿಯ ಪಯಣವಲಾ ಎನುತ ಗುರು
ಸುತ ಶಕುನಿ ಕೃತವರ್ಮ ಕೃಪ ದುಶ್ಶಾಸನಾದಿಗಳು
ವಿತತಸನ್ನಾಹದಲಿ ಕುರುಭೂ
ಪತಿಸಹಿತ ಹೊರವಂಟು ಭಾಸ್ಕರ
ಸುತನ ಸನ್ನೆಯ ಮೇಲೆ ನಡೆದರು ಮುಂದೆ ಸಂದಣಿಸಿ ೨೨

ಬಳಿಯ ನೆಲನುಗ್ಗಡಣೆಗಳ ವೆ
ಗ್ಗಳೆಯ ಸುಭಟರ ಮೇಳದಲಿ ಬಂ
ದಿಳಿದು ದಂಡಿಗೆಯಿಂದ ನಸುನಗುತೇರಿದನು ರಥವ
ಚಳಹಯಂಗಳು ಹುರಿಯ ವಾಘೆಯ
ನಳವಡಿಸೆ ಬಲನೆಡಕೆ ವಾಜಿಯ
ಸುಳಿಸಿ ಸಾರಥಿತನವ ತೋರಿದನಂದು ಕಲಿಶಲ್ಯ ೨೩

ಬಳಿಯ ಪಾಯವಧಾರುಗಳ ಕಳ
ಕಳದೊಳಗೆ ರಥವೇರಿದನು ನೆಲ
ಹಿಳಿಯೆ ಹೇರಾಳಿಸಿತು ಬಹುವಿಧವಾದ್ಯನಿರ್ಘೋಷ
ತಳಿತವಮಳಚ್ಛತ್ರ ಚಮರಾ
ವಳಿಯ ಝಲ್ಲಿಯ ಪಟ್ಟಿಗಳ ನವ
ಪಳಹರ ಧ್ವಜ ದಂಡವೆತ್ತಿತು ವರ ರಥಾಗ್ರದಲಿ ೨೪

ಇಕ್ಕೆಲದ ರಾವುತರ ತೇರಿನ
ತೆಕ್ಕೆಗಳ ಗಜಘಟೆಯ ಕಾಲಾ
ಳಕ್ಕಜದ ನಿಸ್ಸಾಳ ಸೂಳಿನ ಲಗ್ಗೆದಂಬಟದ
ಉಕ್ಕಿತೋ ವಿಲಯಾಬ್ಧಿಯೆನೆ ಸಾ
ಲಿಕ್ಕಿ ನಡೆದುದು ಸೇನೆ ರಾಯನ
ಸಿಕ್ಕಿನವಸರದಾನೆ ನಿಜ ಪಾಳೆಯವ ಬೀಳ್ಕೊಂಡ ೨೫

ರಾಯ ಕೇಳೈ ಬಳಿಕ ಕಲಿರಾ
ಧೇಯ ಬರುತಿರೆ ತೋರಿದುತ್ಪಾ
ತಾಯತವನೇನೆಂಬೆನೈ ಶಿವಶಿವ ಮಹಾದೇವ
ವಾಯಸದ ತಡೆ ಭೂಮಿಕಂಪ ನಿ
ಜಾಯುಧಂಗಳ ಕಿಡಿ ಗಜಾಶ್ವನಿ
ಕಾಯ ರಥವಾಜಿಗಳ ಕಂಬನಿ ಕಾಣಲಾಯ್ತೆಂದ ೨೬

ಒದರಿದವು ನರಿ ಮುಂದೆ ಕರ್ಣನ
ಕುದುರೆಗಳು ಮುಗ್ಗಿದವು ಪರಿವೇ
ಷದಲಿ ಸಪ್ತಗ್ರಹದ ವಕ್ರತೆ ಸೂರ್ಯಮಂಡಲಕೆ
ಇದಿರಿನಲಿ ಬಿರುಗಾಳಿ ಧೂಳಿಯ
ಕೆದರಿ ಬೀಸಿತು ನಿಖಿಳಬಲ ಮು
ಚ್ಚಿದುದು ಕಂಗಳನವನಿಪತಿ ಕಂಡನು ಮಹಾದ್ಭುತವ ೨೭

ತೃಣಕೆ ಕೊಂಬನೆ ಕರ್ಣನಿದನಾ
ರೆಣಿಸುವರು ದುಷ್ಕರ್ಮಶೇಷದ
ಋಣನಿಬದ್ಧರು ಕಂಡು ಮಾಡುವುದೇನು ಕೌರವರು ೞ
ರಣಮನೋರಾಗದಲಿ ದಳಸಂ
ದಣಿಯ ನಿಲಿಸಿದನತಿರಥರ ಲಾ
ವಣಿಗೆಗೊಂಡನು ಕರ್ಣ ಪರಿವಾರಕ್ಕೆ ಕೈಮುಗಿದು ೨೮

ನೊಂದವರು ನಿಲಿ ಸ್ವಾಮಿಕಾರ‍್ಯಕೆ
ಹಿಂದುಗಳೆವರು ಮರಳಿ ಮನೆಗಳ
ಹಿಂದಣಾಸೆಯ ಹೇವ ಹರುಕರಿಗಿಂದು ಮಹನವಮಿ
ನಿಂದರೊಳ್ಳಿತು ನೃಪನ ದೆಸೆಯಲಿ
ಕಂದು ಕಲೆಯುಳ್ಳವರು ಕಾಳೆಗ
ವಿಂದು ಬೆಟ್ಟಿತು ಬೀಳುಕೊಂಬುದು ಭೀತಿ ಬೇಡೆಂದ ೨೯

ಓಡಿ ನಾಚಿಸುವವರು ನಿಲಿ ರಣ
ಖೇಡರೀಗಳೆ ಮರಳಿ ಮನವ
ಲ್ಲಾಡಿ ಮರುಗುವರೇಳಿ ಮರಣದಲಾವ ಫಲಸಿದ್ಧಿ
ಕೂಡುಗಲಕರು ನಿಲ್ಲಿ ಇಹಪರ
ಗೇಡಿಗರು ಹೆರಸಾರಿ ಗುಣದಲಿ
ಬೇಡಿಕೊಂಬೆನು ಖಾತಿಗೊಳ್ಳೆನು ಹೋಗಿ ನೀವೆಂದ ೩೦

ಸಂದ ಸುಭಟರು ಬನ್ನಿ ಸ್ವರ್ಗದ
ಬಂದಿಕಾರರು ಬನ್ನಿ ಮನದಿಂ
ಮುಂದೆ ಹಜ್ಜೆಯ ತವಕಿಗರು ಬಹುದೆನ್ನ ಸಂಗಾತ
ನೊಂದಡುಬ್ಬುವರಿತ್ತು ಬನ್ನಿ ಪು
ರಂದರನ ಸರಿಗದ್ದುಗೆಗೆ ಮನ
ಸಂದವರು ಹೊಗಿ ರಣವನೆಂದನು ಕರ್ಣ ನಿಜಬಲಕೆ ೩೧

ವೀರ ಭಟರಾಹವವ ಹೊಗಿ ಜ
ಝ್ಝ್ಜಾರರಿತ್ತಲು ನಡಯಿ ಕದನವಿ
ಚಾರಶೀಲರು ಮುಂದೆ ಹೋಗಿ ಮಹಾರಥಾದಿಗಳು
ಆರು ಬಲ್ಲರು ಸಮರಯಜ್ಞದ
ಸಾರವನು ಪಾಪಿಗಳಿರಕಟ ಶ
ರೀರವನು ಕೊಡಿ ಪಡೆಯಿ ಮುಕ್ತಿಯನೆಂದನಾ ಕರ್ಣ ೩೨

ರಾಯ ಕೇಳೈ ಕರ್ಪುರದ ತವ
ಲಾಯಿಗಳನೊಡೆದೊಡೆದು ಭಟರಿಗೆ
ಹಾಯಿಕಿದನಂಜುಳಿಗಳಲಿ ಮೊಗೆಮೊಗೆದು ಬೇಸರದೆ
ಸಾಯದಿಹರೇ ರಣದೊಳಗೆ ರಾ
ಧೇಯನೀ ಮನ್ನಣೆಗೆ ಬದುಕುವ
ನಾಯಿಗಿಹಪರವುಂಟೆ ಎಂದುದು ನಿಖಿಳ ಪರಿವಾರ ೩೩

ಕೇಳಿರೈ ಪರಿವಾರವಿಂದಿನ
ಕಾಳೆಗವಲೇ ನಮಗೆ ಭೀಷ್ಮರ
ಕೋಲಗುರುವಿನ ಹರಿಬವನು ಮನವಾರೆ ಹೊತ್ತೆವಲ
ಸೋಲವೋ ಕೌರವನ ಭಾಗ್ಯದ
ಕಾಲವೋ ವಿಧಿ ಬಲ್ಲದೆನ್ನಯ
ತೋಳ ಬಲುಹನು ಹಗೆಗೆ ತೋರುವೆನೆಂದನಾ ಕರ್ಣ ೩೪

ಆವ ತೋರಿಸಲಾಪನರ್ಜುನ
ದೇವನನು ರಿಪುಬಲದೊಳಾತಂ
ಗೀವೆ ನೀ ಪದಕವನು ಖಡೆಯವ ವಜ್ರಮಾಣಿಕದ
ಆವನೀ ಫಲುಗುಣನ ತೇರಿನ
ಠಾವಿದೇ ಎಂದವಗೆ ಇದೆ ಮು
ಕ್ತಾವಳಿಯಲಂಕಾರವೆಂದನು ಕರ್ಣ ನಿಜಬಲಕೆ ೩೫

ನರನ ತೋರಿಸಿದವಗೆ ಶತ ಸಾ
ವಿರದ ಪಟ್ಟಣವರ್ಜುನನ ಮೋ
ಹರವಿದೇ ಎಂದವಗೆ ಕೊದುವೆನು ಹತ್ತುಸಾವಿರವ
ನರನ ತೆರಳಿಚಿ ತಂದು ತನ್ನೊಡ
ನರುಹಿದಗೆ ನೂರಾನೆ ಹಯ ಸಾ
ವಿರದ ವಳಿತವ ಬರಸಿ ಕೊಡುವೆನು ರಾಯನಾಣೆಂದ ೩೬

ತೋರಿರೈ ಫಲುಗುಣನನಿದಿರಲಿ
ತೋರಿರೈ ಸಿತಹಯನನಕಟಾ
ತೋರಿರೈ ವಿಜಯನನು ನಿಮಗೆಯು ಸ್ವಾಮಿಕಾರ‍್ಯವಲ
ತೋರಿ ಪಾರ್ಥನನವನ ನೆತ್ತರ
ಸೂರೆ ಶಾಕಿನಿಯರಿಗೆ ನಿಮಗುರೆ
ಸೂರೆಯೋ ಭಂಡಾರ ಕೌರವ ರಾಯನಾಣೆಂದ ೩೭

ನರನ ಶರಹತಿಗೆನ್ನ ತನು ಜ
ಝ್ಜರಿತವಾಗಲಿ ನನ್ನ ಕಣೆಯಲಿ
ಬಿರಿಯಲಾತನ ದೇಹ ಖಾಡಾಖಾಡಿಯುದ್ಧದಲಿ
ಕರುಳು ಕರುಳಲಿ ತೊಡಕಿ ನೊರೆ ನೆ
ತ್ತರಲಿ ನೆತ್ತರು ಕೂಡಿ ಕಡಿಯಲಿ
ಬೆರಸಿ ಕಡಿ ಪಲ್ಲಟಿಸೆ ಕಾದುವೆನಿಂದು ಹಗೆಯೊಡನೆ ೩೮

ಸರಳು ಸರಳಿಂಗೊಮ್ಮೆ ರೋಮಾಂ
ಕುರದ ಗುಡಿಯಲಿ ರಕ್ತಜಲದಲಿ
ಕರುಳ ಹೂಮಾಲೆಯಲಿ ವೀರರಣಾಭಿಷೇಕವನು
ಧರಿಸಿ ವೈರಿಯ ಘಾಯಘಾಯದ
ಧರಧುರಕೆ ತನಿಹೆಚ್ಚಿ ಮನದು
ಬ್ಬರದಲಿರಿದಾಡಿದರೆ ದಿಟ ಕೃತಕೃತ್ಯ ತಾನೆಂದ ೩೯

ಅವನ ಮುಂದಲೆ ತನ್ನ ಕೈಯಲಿ
ಅವನ ಕೈಯಲಿ ತನ್ನ ಮುಂದಲೆ
ಅವನ ದೇಹದ ಘಾಯವೆನ್ನಯ ಘಾಯ ಚುಂಬಿಸುತ
ಅವನ ಖಡುಗದಲೆನ್ನ ಮೈ ನಾ
ತಿವಿದ ಖಡ್ಗಕೆ ನರನ ಮೈ ಲವ
ಲವಿಸಲಡಿಮೇಲಾಗಿ ಹೊರಳ್ದರೆ ಧನ್ಯ ತಾನೆಂದ ೪೦

ಕೈದಣಿಯೆ ಹೊಯ್ದರಿಯ ಸೀಳಿದು
ಬಾಯ್ದಣಿಯೆ ಮೂದಲಿಸಿ ಹೆಚ್ಚಿದ
ಮೈದಣಿಯೆ ರಿಘಭಟನ ಹೊಯ್ಲಲಿ ಘಾಯವನು ಪಡೆದು
ಹಾಯ್ದ ಕರುಳಿನ ಮಿದುಳ ಜೋರಿನ
ತೊಯ್ದ ರಕ್ತಾಂಬರದಿ ತಾನಿರ
ಲೈದಿ ಕುರುಪತಿ ಕಂಡನಾದರೆ ಧನ್ಯ ತಾನೆಂದ ೪೧

ನರನ ಕರುತದ ಮದ್ಯಪಾನವ
ನೆರೆದು ಶಾಕಿನಿಯರಿಗೆ ಪಾರ್ಥನ
ಕರುಳ ದೊಂಡೆಯ ಕೂಳ ಮುದ್ದೆಯ ಬಡಿಸಿ ದೈತ್ಯರಿಗೆ
ಅರಿಯ ಖಂಡದಿ ಹಸಿಯ ಸುಂಟಿಗೆ
ವೆರಸಿ ಭೂತಾವಳಿಯ ದಣಿಸಿದ
ಡರಸು ಕೌರವನೆನ್ನ ಸಾಕಿತಕಿಂದು ಫಲವೆಂದ ೪೨