ಸೂ. ಕಾಮಕೋಳಾಹಳನು ದಕ್ಷನ
ಹೋಮದಳವುಳಕಾರ ಹರ ನಿ
ಸ್ಸೀಮದಲಿ ಪುರ ಮೂರ ಗೆಲಿದನು ಸಲಹಿದನು ಸುರರ

ರಚಿಸಿ ರಥವನು ಭೀತಿ ಬೇಡಿ
ನ್ನುಚಿತವೇನದ ಮಾಡಿ ದೈತ್ಯ
ಪ್ರಚಯವನು ಪರಿಹರಿಸಿ ಕೊಡುವುದು ಪಾಶುಪತ ಬಾಣ
ಕುಚಿತರಿನ್ನೇಗುವರು ಖಳರಿ
ನ್ನಚಳಿತವಲೇ ನಿಮ್ಮ ಪದವೆನೆ
ನಿಚಿತಹರುಷರು ವಿಶ್ವಕರ‍್ಮಂಗರುಹಿದರು ಹದನ ೧

ಮಾವ ಕೇಳದುಭುತವನೀ ವಿ
ಶ್ವಾವನೀತಳವಾಯ್ತು ರಥ ತಾ
ರಾವಳಿಗಳೀಸಾಯ್ತು ಸತ್ತಿಗೆಯಾಯ್ತು ಕನಕಾದ್ರಿ
ಆವುದಯಘನಶೈಲವಸ್ತ್ರ
ಗ್ರಾವ ಕೂಬರ ರಥದಧಿಷ್ಠಾ
ನಾವಲಂಬನವಾಗೆ ರಚಿಸಿದನಾತ ನಿಮಿಷದಲಿ ೨

ಆಸುರವಲೇ ವಿಂಧ್ಯ ಹಿಮಗಿರಿ
ಹಾಸು ಹಲಗೆಗಳಾದವಚ್ಚು ಮ
ಹಾಸಮುದ್ರವೆ ಆಯ್ತು ಗಾಲಿಗೆಬೇರೆ ತರಲೇಕೆ
ಆ ಸಸಿಯ ಸೂರಿಯನ ಮಂಡಲ
ವೈಸಲೇ ಗಂಗಾದಿ ಸಕಲ ಮ
ಹಾ ಸರಿತ್ಕುಲವಾಯ್ತು ಚಮರಗ್ರಾಹಿಣಿಯರಲ್ಲಿ ೩

ರಾಯ ಕೇಳೈ ಮತ್ತೆಯಾಹವ
ನೀಯ ಗಾರುಹಪತ್ಯ ದಕ್ಷಿಣ
ವಾಯುಸಖರಾದರು ತ್ರಿವೇಣುಕವಾ ರಥಾಗ್ರದಲಿ
ಆಯಿತಲ್ಲಿ ವರೂಥ ನಕ್ಷ
ತ್ರಾಯತವು ಬಳೆಯನುಕರುಷವೊಂ
ದಾಯಿತಾ ಗ್ರಹರಾಜಿಯಾದವು ಮಾವ ಕೇಳೆಂದ ೪

ಆ ರಥಾಗ್ರಕೆ ವೇದ ನಾಲುಕು
ವಾರುವಂಗಳ ಹೂಡಿದರು ನೊಗ
ನಾ ರಜನಿ ದಿನ ಮಾಸವುತ್ತರ ದಕ್ಷಿಣಾಯನವು
ಸಾರ ಧೃತಿ ವೇದಪ್ರತತಿ ವಿ
ಸ್ತಾರವಾದವು ನೊಗನ ಕೀಲ್ಗಳು
ಚಾರು ಕುಲಫಣಿನಿಕರ ಹಯ ಬಂಧನದ ನೇಣುಗಳು ೫

ಮಿಳಿಗಳಾದವು ಕುಹು ಸುತಾರಾ
ವಳಿಗಳಮಳ ಪ್ರಣವವಾದುದು
ಮೊಳೆಯ ಬಲುಚಮ್ಮಟಿಗೆ ಹಗ್ಗಕೆ ವರ ಷಡಂಗಮವು
ನಿಲಿಸಲಖಿಳ ಕ್ರತು ರಥಾಂಗಾ
ವಳಿಗಳಾದವು ವಿವಿಧವರ್ಣದ
ಜಲದಪಟಲ ಪತಾಕೆಯಾದವು ರಥದ ಬಳಸಿನಲಿ ೬

ಕಾಲದಂಡದ ರೌದ್ರದಂಡ ಕ
ರಾಳರಥ ಸೀಮಾಗ್ರ ದಂಡ ವಿ
ಶಾಲ ವಿಮಳ ಬ್ರಹ್ಮದಂಡದ ಸಾಲು ಚೆಲುವಾಯ್ತು
ಮೇಲುವಲಗೆಯ ಸುತ್ತ ಚಮರೀ
ಜಾಳ ಕನಕಧ್ವಜದ ತುದಿಯಲಿ
ಮೇಳವಿಸಿದನು ವಿಶ್ವಕರ್ಮನು ವಿಪುಳ ಶಾಕ್ವರವ ೭

ಅರಸ ಕೇಳ್ ಋತುಚರಿತ ಸಂವ
ತ್ಸರವೆ ಧನು ತತ್ಕಾಳ ರಾತ್ರಿಯೆ
ತಿರುವಿದೇನಾಶ್ಚರ‍್ಯವೈ ಶಿವ ಕಾಲರೂಪಿನಲಿ
ಸರಳ ರಚನೆಗೆ ವಿಷ್ಣುವನೆ ಸಂ
ಸ್ಮರಿಸಿದರು ವೈಕುಂಠ ತೇಜ
ಸ್ಫುರಿತ ಮಾರ್ಗಣ ಮೆರೆದುದಗ್ನಿಷ್ಟೋಮ ಮುಖವಾಗಿ ೮

ಶ್ರುತವೆ ನಿಮಗಿದು ಮಾವ ಬಹಳಾ
ದ್ಭುತದ ರಥ ನಿರ್ಮಾಣ ದೇವ
ಪ್ರತತಿ ನೆರೆದುದು ನೆರೆ ಚತುರ್ದಶಭುವನವಾಸಿಗಳ
ಶತಮುಖಬ್ರಹ್ಮಾದಿಗಳು ತ
ಮ್ಮತಿಶಯದ ತೇಜೋರ್ಧವನು ಪಶು
ಪತಿಯ ಪದಕೋಲೈಸಿದರು ಮಾದ್ರೇಶ ಕೇಳೆಂದ ೯

ಆ ಮಹಾ ಶಾಂಭವ ಸುತೇಜ
ಸ್ತೋಮಕೇನದು ಕೊರತೆಯೇ ಮ
ತ್ತೀ ಮಹೇಂದ್ರ ಬ್ರಹ್ಮಮುಖ ತೇಜಸ್ವಿಗಳ ಶಕ್ತಿ
ಆ ಮಹಾದೇವನಲಿ ಸೇರಿದು
ದೀ ಮಹಾರಥಕಾಗಿ ವಿಮಳ
ವ್ಯೋಮಕೇಶನು ನಗುತ ಬಿಜಯಂಗೆಯ್ಯಲನುವಾದ ೧೦

ಕಳಚಿ ತಲೆಮಾಲೆಯನು ಕೊಟ್ಟನು
ಕೆಲದವರ ಕೈಯಲಿ ವಿಭೂತಿಯ
ಗುಳಿಗೆಯನು ನೆಗ್ಗೊತ್ತಿ ಸರ್ವಾಂಗದಲಿ ಧೂಳಿಸಿದ
ಹೊಳೆ ಹೊಳೆವ ಕೆಂಜೆಡೆಯನಹಿಪತಿ
ಯಳುಕೆ ಬಿಗಿದನು ದಂತಿಚರ‍್ಮವ
ನೆಲಕೆ ಮುಂಜೆರಗೆಳೆಯಲುಟ್ಟನು ದೇಸಿ ಪರಿಮೆರೆಯೆ ೧೧

ಖಡೆಯ ಸರಪಣಿ ತೋಳಬಂದಿಗೆ
ಪೆಡೆವಣಿಯ ಮರಿವಾವುಗಳನಳ
ವಡಿಸಿದನು ಜೋಡಿಸಿದ ಶೇಷನ ಜಳವಟಿಗೆ ಮೆರೆಯೆ
ಜಡಿವ ಕಿರುಗೆಜ್ಜೆಗಳ ಬಿಗುಹಿನ
ಲುಡೆಯ ಬದ್ದುಗೆ ದಾರ ಉರಗನ
ಪೆಡೆವಣಿಯ ಗೊಂಡೆಯದ ಕಿಗ್ಗಟ್ಟೆಸೆಯೆ ಪಶುಪತಿಯ ೧೨

ನೆರೆದುದಭವನ ಕೆಲಬಲದಲು
ಬ್ಬರದ ಬೊಬ್ಬಿಯ ಜಡಿವ ಖಡ್ಗದ
ಬೆರಳ ಚಕ್ರದ ಭವಣಿಗಳ ಢವಣಿಸುವ ಢಾಣೆಗಳ
ಪರಿಪರಿಯ ಕೈದುಗಳ ಕರ್ಕಶ
ತರದ ಚರಿತದ ರೌದ್ರವೇಷದ
ವರ ಮಹಾಗಣ ವಿಕರವೊದಗಿತು ಮಾವ ಕೇಳೆಂದ ೧೩

ಸುರಬಲದ ನಿಸ್ಸಾಳ ಕೋಟಿಯ
ಮೊರಹು ಮೊಳಗಿತು ಬಿಲುದಿರುವಿನ
ಬ್ಬರದಲಾ ದನಿಯಡಗಿತಗಣಿತ ವಂದಿ ಘೋಷದಲಿ
ಅರರೆ ವಂದಿ ಧ್ವನಿಯ ಗರ್ಭೀ
ಕರಿಸಿ ಹೆಚ್ಚಿತು ಜಯಜಯಧ್ವನಿ
ನೆರೆ ಚತುರ್ದಶಜಗವ ಜಡಿದುದು ಮಾವ ಕೇಳೆಂದ ೧೪

ಮುರಿಯೆ ಬಲವಂಕದಲುಘೇ ಎಂ
ದೆರಗಿದವು ಶ್ರುತಿಕೋಟಿ ವಾಮದ
ಕೊರಳ ಕೊಂಕಿನಲುಪನಿಷತ್ತುಗಳೆರಗಿದವು ಕೋಟಿ
ತಿರುಗೆ ಬೆನ್ನಲಿ ನೆರೆದ ಸಚರಾ
ಚರವುಘೇ ಎಂದುದು ಕಪರ್ದಿಯ
ಸರಿಸದಲಿ ಸಿಡಿಲಂತೆ ಮೊಳಗಿತು ವೀರಗಣನಿಕರ ೧೫

ನಡೆದು ರಥದಲಿ ವಾಮ ಚರಣವ
ನಿಡುತ ಧೂರ್ಜಟಿ ದೇವ ನಿಕರಕೆ
ನುಡಿದನಾವನ ನೀ ರಥಕೆ ಸಾರಥಿಯ ಮಾಡಿದಿರಿ
ಕಡೆಗೆ ಸಾರಥಿಯಿಲ್ಲದೀ ರಥ
ನಡೆವುದೇ ದಾನವರ ಥಟ್ಟಣೆ
ತೊಡೆವುದೇ ಲೆಸಾಯ್ತೆನುತ ನೋಡಿದನು ಸುರಪತಿಯ ೧೬

ಮಾವ ಕೇಳೈ ಬಳಿಕ ಹರಿದುದು
ದೇವಕುಲ ಪರಮೇಷ್ಠಯಲ್ಲಿಗೆ
ಭಾವವನು ಬಿನ್ನೈಸಿದರು ನಿಜರಾಜಕಾರಿಯದ
ಆ ವಿಭುವನೊಡಬಡಿಸಿದರು ದಿವಿ
ಜಾವಳಿಗಳಿಂದಿನಲಿ ಕರ್ಣಗೆ
ನೀವು ಸಾರಥಿಯಾದಡಭಿಮತ ಸಿದ್ಧಿ ತನಗೆಂದ ೧೭

ಕೋಗಿಲೆಯ ಠಾಯಕ್ಕೆ ಬಂದುದು
ಕಾಗೆಗಳ ಧುರಪಥವದಂತಿರ
ಲಾಗಳಬುಜಾಸನನ ಸಾರಥಿತನವದೇನಾಯ್ತೊ
ಹೋಗಲದು ಸಾರಥ್ಯಕಾಯತ
ವಾಗಿ ಬಂದು ವಿರಿಂಚ ಮಕುಟವ
ತೂಗಿದನು ಹೊಗಳಿದನು ತ್ರಿಪುರ ನಿವಾಸಿಗಳ ಬಲುಹ ೧೮

ಹುಸಿಯೆ ಬಳಿಕದು ಸಕಲ ಜಗವೊಂ
ದೆಸೆ ಪುರತ್ರಯ ದೈತ್ಯಭಟರೊಂ
ದೆಸೆ ಮಹಾದೇವೆನುತ ಕಮಲಜನೇರಿದನು ರಥವ
ಸಸಿನೆ ವಾಘೆಯ ತಿದ್ದಿ ತುರಗ
ಪ್ರಸರವನು ಬೋಳೈಸಿ ರಥವನು
ದೆಸೆದೆಸೆಗೆ ಹೊಳಸಿದನು ಲುಳಿವಡಿಸಿದ ಮಹಾರಥವ ೧೯

ದೇವ ಬಿಜಯಂಗೈವುದೆನೆ ದಿವಿ
ಜಾವಳಿಗಳುಬ್ಬರದ ಬೊಬ್ಬೆಯ
ಡಾವರದಲೇರಿದನು ಧೂರ್ಜಟಿ ವೇದಮಯ ರಥವ
ಮಾವ ಕೇಳದುಭುತವನೀ ವಿ
ಶ್ವಾವನೀತಳ ರಥ ರಥಾಂಗ
ಗ್ರಾವ ತತಿ ನುಗ್ಗಾಯ್ತು ಮುಗ್ಗಿತು ತೇರು ನಿಮಿಷದಲಿ ೨೦

ಕುದುರೆ ತಲೆಕೆಳಗಾದುದಿಳೆಯೆ
ದ್ದುದು ರಸಾತಳಕವರ ಭಾರಕೆ
ಕೆದರಿದವು ಕುಲಗಿರಿಯ ಹೂಟದ ಸಂಚ ದೆಸೆದೆಸೆಗೆ
ಕುದಿದುದಮರ ವ್ರಾತ ಸಂತಾ
ಪದಲಿ ವಿತಳಕೆ ಹಾಯ್ದು ನಿಮಿಷಾ
ರ್ಧದಲಿ ಹೆಗಲಿಂದೆತ್ತಿದನು ಹರಿ ವೃಷಭ ರೂಪಿನಲಿ ೨೧

ಅದ್ದ ರಥ ಹರಿಯುರವಣೆಗೆ ಚಿಗಿ
ದೆದ್ದು ಸಮವಾಯ್ತುಭಯ ಘಟ ನೆಗೆ
ದೆದ್ದು ವಳಯವ ಕೊಡಹಿ ನಿಂದವು ವೇದವಾಜಿಗಳು
ಎದ್ದುದೋ ರಥ ಖಳ ಮನೋರಥ
ವದ್ದುದೋ ಮಝ ಪೂತುರೆನುತು
ಬ್ಬೆದ್ದುದಮರ ಕದಂಬ ಭಾರಿಯ ಭುಜದ ಬೊಬ್ಬೆಯಲಿ ೨೨

ಪ್ರಣವ ನಾದಾ ಹತಿಗೆ ಗತಿಯಲಿ
ಕುಣಿದವಗ್ಗದ ವೇದಹಯ ಹ
ಲ್ಲಣೆಯ ಹೇಷಿತ ರವಕೆ ಹೆದರಿತು ರಾಕ್ಷಸ ವ್ರಾತ
ಗಣಸಮೂಹದ ಚೂಣಿಯಲಿ ಸುರ
ಗಣ ಸುರಾರಿಗಳೂರ ಮುತ್ತಿತು
ಕೆಣಕಿದರು ಕಾಳೆಗವನಸುರರ ಥಟ್ಟು ಕಳವಳಿಸೆ ೨೩

ಭಟರು ವಿದ್ಯುನ್ಮಾಲಿಯದು ಲಟ
ಕಟಿಸಿ ನೂಕಿತು ತಾರಕಾಕ್ಷನ
ಚಟುಳ ಹಯ ಬಲ ಹೊಕ್ಕು ಹೊಯ್ದುದು ಬಿಟ್ಟ ಸೂಠಿಯಲಿ
ಲಟಕಟಿಸೆ ಸುರಸೇನೆ ಬಲುಗಜ
ಘಟೆಗಳೌಕಿತು ದೈತ್ಯ ಸುರ ಸಂ
ಘಟಿತ ಸಮರವನೇನನೆಂಬೆನು ಮಾವ ಕೇಳೆಂದ ೨೪

ಹೊಯ್ದುದಮರರನಸುರರಗ್ಗದ
ಕೈದುಕಾರರು ಮತ್ತೆ ನೂಕಿತು
ಮೈದೆಗೆಯಲೊಡವೆರಸಿ ನೂಕಿತು ಬೇಹ ಬೇಹವರು
ಬೈದರಿಂದ್ರನನಿಂದುಮೌಳಿಗೆ
ನೆಯ್ದ ರಥ ನುಗ್ಗಾಯ್ತು ನಾಳವ
ಕೊಯ್ದರೋ ಹುಗ್ಗಿಗರೆನುತೊರಲಿದುದು ಸುರ ಸ್ತೋಮ ೨೫

ಹೊಗಲಿ ಸಮರಕೆ ಸ್ವಾಮಿದ್ರೋಹರು
ತೆಗೆಯಬೇಡೋ ಬೆನ್ನ ಲಾಂಕೆಗೆ
ಜಗದೊಡೆಯನೋ ಫಡ ಫಡಂಜದಿರೆನಲು ಸುರರಾಜ
ಉಗಿದ ಖಡುಗದ ತಿರುವಿನಂಬಿನ
ಬಿಗಿದ ಬಿಲ್ಲಿನ ಸುರಪನಿದಿರಿನೊ
ಳಗಣಿತಾಮರ ಭಟರು ಹೊಕ್ಕುದು ದೈತ್ಯ ಬಲದೊಳಗೆ ೨೬

ಮೊಲನ ಮರಿ ಕೈವೊಯ್ದು ನಕ್ಕುದು
ಹುಲಿಯೊಡನೆ ಗಡ ಶಿವ ಶಿವಾ ವೆ
ಗ್ಗಳೆಯರನು ವಿಗ್ರಹದಲರಿವೆವು ಕಂಡು ಕೈಗುಣವ
ಹುಲುಪರೆಯ ದೇವಾಳಿ ತ್ರಿಪುರದ
ನೆಲನ ಮೆಟ್ಟಿತು ನಾಯ್ಗಳಿರ ಮುಂ (೨೭
ದಲೆಯ ಕೊಯ್ ಕಡಿ ಬೆರಳನೆಂದರು ಖಳರು ತಮ್ಮೊಳಗೆ ಕಾದ

ಲೋಹದ ಹಳಿಯವೊಲು ಕೆಂ
ಪಾದವಸುರರ ಮೋರೆಗಳು ತಿದಿ
ಯೂದುಗಿಚ್ಚಿನ ಹೊದರಿನಂತಿರೆ ಬಿಡದೆ ಭುಗಿಲಿಡುತ
ಸೇದುವೆರಳಿನ ತಿರುವಿನಂಬಿನ
ವಾದಿನೆಸುಗೆಯ ಬಿರುದರಗ್ಗದ
ಕೈದುಕಾರರು ಕೆಣಕಿದಮರರ ಹೊಟ್ಟ ತೂರಿದರು ೨೮

ಮುರಿದುದಿದು ಕಲ್ಪಾಂತ ವಹ್ನಿಯ
ಸೆರೆಯ ಬಿಟ್ಟರೊ ಶಿವಶಿವಾ ಖಳ
ರುರುಬೆ ಘನ ನಾವೇಕೆ ರಣವೇಕಿವರ ಕೂಡೆನುತ
ಒರಲುವಮರರ ಬಾಯಿಕೈಗಳ
ಮೊರೆಯ ತೆಗಸಿ ಮಹಾಗಣಂಗಳೊ
ಳುರುವ ನಂದೀಶ್ವರನು ಹೊಕ್ಕನು ಹೊಯ್ದು ದಾನವರ ೨೯

ದಿಂಡುದರಿದನು ದಾನವರ ಕಡಿ
ಖಂಡ ಮಯಮಾಯ್ತವನಿ ರಕುತದ
ದೊಂಡೆಗೆಸರಿನೊಳದ್ದು ದಗಣಿತ ರಥಗಜಾಶ್ವಚಯ
ಹಿಂಡೊಡೆದು ಹೇರಾಳ ರಕ್ಕಸ
ದಿಂಡೆಯರು ಧಿಮ್ಮೆನಲು ಹೊಯ್ದರು
ಖಂಡಪರಶುವಿನಾಳು ಹೊಯ್ದನು ಸಾಲಹೆಣ ಹರೆಯೆ ೩೦

ಅರನೆಲೆಯ ಮುರಿದಿಟ್ಟಣಿಸಿ ತಲೆ
ವರಿಗೆಯಲಿ ಹೊಕ್ಕೌಕಿ ದುರ್ಗದ
ಹಿರಿಯ ಹುಲಿಮುಖದೊಳಗೆ ಹೊಯ್ದರು ಬೇಹಬೇಹವರ
ಅರಸ ಕೇಳೈ ದೈತ್ಯಭಟರ
ಚ್ಚರಿಯ ಮಾಡಿದರಳಿದವರನೆ
ಚ್ಚರಿಸಿದರು ಮಯವಿರಚಿತಾಮೃತ ಸಲಿಲ ಕೂಪದಲಿ ೩೧

ಮಯನ ಬಿನ್ನಾಣವನು ದೇವ
ತ್ರಯವರಿದುದಿದು ತೀರಲಸುರರ
ಲಯವೆನುತ ಹರಿ ಧೇನುವಬುಜಾಸನನು ಕರುವಾಗಿ
ಭಯವಿಹೀನರು ಹೊಕ್ಕರಾ ಬಾ
ವಿಯನು ಬತ್ತಿಸಿ ಬಳಿಕ ದೈತ್ಯರ
ಜಯವ ಮುರಿದರು ಮೋಹನದ ಬೌದ್ಧಾವತಾರದಲಿ ೩೨

ಭವನ ಭಕುತಿಯ ಬಿಡಿಸಿದರು ಶಾಂ
ಭವ ಸುಸಿದ್ಧಾಂತವನು ಬೌದ್ಧ
ವ್ಯವಹರಣೆಗಳ ಮಾಯೆಯಲಿ ಕೆಡಹಿದರು ಕಪಟದಲಿ
ಯುವತಿಯರು ಪರಪುರುಷ ಯೋಗ
ಪ್ರವರ ದೀಕ್ಷಿತರಾಯ್ತು ಬೌದ್ಧನ
ವಿವಿಧ ಮಾಯೆಗೆ ಮಾರುವೋದುದು ಮನ ಸುರಾರಿಗಳ ೩೩

ಹರಿ ಸರೋಜಾಸನರು ಶೂಲಿಯ
ಹೊರೆಗೆ ಬಂದರು ದೇವ ದೈತ್ಯರ
ಪುರವಧರ್ಮದ ಪೇಟೆಯಾದುದು ನಯನಪಾವಕನ
ಕರೆದು ಬೆಸಸುವಡಿದು ಸಮಯವೀ
ಸುರರ ಸಲಹುವ ಚಿತ್ತವುಳ್ಳರೆ
ಕರುಣಿ ಬಿಜಯಂಗೈವುದೆಂದರು ಪಾರ್ವತೀಪತಿಗೆ ೩೪

ಬಿಲ್ಲ ತುಡುಕಿದನಭವನೆಡಬಲ
ದಲ್ಲಿ ಜಯ ಜಯಜಯಜಯಧ್ವನಿ
ಘಲ್ಲಿಸಿತ್ತೀರೇಳು ಭುವನಶ್ರವಣ ವೀಧಿಗಳ
ಭುಲ್ಲವಿಸಿ ಹಯ ಪದಸಮೂಹವ
ಚೆಲ್ಲಿದವು ಸಕ್ರಮದ ಪಾಳಿಯ
ಪಲ್ಲವಿಕೆ ಪರಿವಡೆದುದಮಳಪ್ರಣವಮಯವಾಗಿ ೩೫

ಅಡಿಗಡಿಗೆ ಚಮ್ಮಟಿಗೆಯಳ್ಳೆಯ
ತುಡುಕೆ ಕುಣಿದವು ವೇದಹಯ ಬಲ
ನೆಡ ಪುರಃಪಶ್ಚಿಮದಲೆರಗುವ ಮಂತ್ರ ಕೋಟಿಗಳ
ನುಡಿಯಲರಿದಾಕಾಶ ಸರಸಿಯೊ
ಳಿಡಿದ ತಾವರೆಮುಗುಳುಗಳೊ ಸುರ
ಪಡೆಯೊಳೊತ್ತಿದ ಮುಗಿದ ಕೈಗಳೊ ಚಿತ್ರವಾಯ್ತೆಂದ ೩೬

ಪರಮ ಶ್ರುತಿ ವೇದಾಂಗ ಮಂತ್ರೋ
ತ್ಕರ ಧರಿತ್ರಿ ಕುಲಾದ್ರಿ ಸಸಿ ಭಾ
ಸ್ಕರ ಸುರೋರಗ ಜಲಧಿ ನದಿ ನಕ್ಷತ್ರ ರಾಶಿಗಳು
ಸರಸಿರುಹಭವ ವಿಷ್ಣು ವಿವಿಧಾ
ಧ್ವರ ಮುನೀಂದ್ರ ಗ್ರಹವು ಸಚರಾ
ಚರವುಘೇ ಎಂದೆರಗುತಿರ್ದುದು ಶಿವನ ಬಳಸಿನಲಿ ೩೭

ಒದಗಿತೀ ಹೇಳಿದ ಸಮಸ್ತ
ತ್ರಿದಶಸಚರಾಚರವು ತಮ್ಮಂ
ಗದಲಿ ರಚಿಸಿದ ವಿಶ್ವಕರ್ಮನ ಕೃತ ನಿಯೋಗದಲಿ
ಅದು ಬಳಿಕ ನಿರ್ಜರ ಸಮೂಹಾ
ಭ್ಯುದಯವೈಸಲೆ ಧನುವ ಕೊಂಡನು
ಮದನರಿಪು ತಿರುಹಿದನು ಬೆರಳಲಿ ಪಾಶುಪತ ಶರವ ೩೮

ಕೃತಕವೋ ದಿಟವೋ ದುರಂತರ
ಶ್ರುತಿಗಳರಿಯವು ನಮ್ಮ ಮಿಡುಕುವ
ಮತಿಯ ಪಾಡೇ ನಿಮಿಷಕಬುಜಭವಾಂಡ ಕೋಟಿಗಳ
ಸ್ಥಿತಿಗತಿಯನಗ್ಗಳದ ನಯನಾ
ಹುತಿಯ ಮಾಡುವ ತ್ರಿಪುರಹರ ಸಂ
ಗತಿಯ ಸಮಯವ ಹಾರಿದನು ಸುರವರುಷಸಾವಿರವ ೩೯

ಕೂಡಿದವು ಪುರ ಮೂರು ನಿಮಿಷದೊ
ಳೀಡಿರಿದುದುರಿ ನಯನವಹ್ನಿಯ
ಕೂಡಿ ಹುರಿಗೊಂಡೌಕಿ ಹರಿದುದು ಪಾಶುಪತ ಬಾಣ
ಝಾಡಿ ಹೊರಳಿಯ ಹೊಗೆಯ ಜೋಡಿಯ
ನೀಡು ನಾಲಗೆ ಪುರದ ಸುತ್ತಲು
ಕೂಡೆ ವೇಢಯವಾಯ್ತು ಹರಹಿನ ಕಿಡಿಯ ಗಡಣದಲಿ ೪೦

ಕಟ್ಟಿತುರಿ ದೆಸೆ ನಾಲ್ಕರಲಿ ಬೆ
ನ್ನಟ್ಟಿ ಹೊಯ್ದುದು ಬಿನುಗುಗಳ ಜಗ
ಬಟ್ಟಿಗಳನೊರಗಿಸಿತು ಮರುಗಿಸಿತಸುರ ನಾರಿಯರ
ದಿಟ್ಟರುರಿದುದು ವೀರರಸುಗಳ
ಬಿಟ್ಟರಭವದ್ರೋಹಿಗಳು ನೆರೆ
ಕೆಟ್ಟ ಕೇಡಿಂಗಾರು ಮರುಗುವರರಸ ಕೇಳೆಂದ ೪೧

ಸರಳ ಮೊನೆಯಲಿ ಸಿಡಿದ ಕಿಡಿಯೊಂ
ದರೆಡರಲಿ ಬೆಂದುದು ಪುರತ್ರಯ
ವರಸ ಕೇಳೈ ಬಳಿಕ ಬಾಣದ ಬಾಯಿಧಾರೆಗಳ
ಹರನ ನಯನದ ಕಿಚ್ಚು ಕಾಣದು
ಪುರವನಾ ಖಾತಿಯಲಿ ಭೇದಿಸಿ (೪೨
ಮುರಿಮುರಿದು ಸುಡತೊಡಗಿತಬುಜಭವಾಂಡ ಮಂಡಲವ

ಎಲೆ ಚತುರ್ದಶ ಜಗವನುರಿಯ
ಪ್ಪಳಿಸಿತೇ ಬೆಂದುದು ಸುರೌಘದ
ಗೆಲವು ಕರೆಯಾ ಕಲ್ಪಮೇಘವನುರಿಯ ಮಾಣಿಸಲಿ
ಬಲುಕಣಿಗಳಲ್ಲಾ ಜನಾರ್ದನ
ನಳಿನಭವರಾವೆಡೆಯೆನುತ ಕಳ (೪೩
ವಳಿಸಿದುದು ಮೊರೆಯಿಟ್ಟುದಭವನ ಮುಂದೆ ಭುವನಜನ

ಅರಿಪುರತ್ರಯ ದಹನ ಕರ್ಮ
ಸ್ಫುರಣ ವಸ್ಮತ್ಕಾರ‍್ಯವದು ಗೋ
ಚರಿಸಿತಲ್ಲಿಂ ಮೇಲಣುಚಿತಾನುಚಿತ ಕೃತ್ಯವನು
ಕರುಣಿ ನೀನೇ ಬಲ್ಲೆ ಜನ ಸಂ
ಹರಣ ಕಾಲವೊ ಮೇಣು ರಕ್ಷಾ
ಕರಣ ಕಾಲವೊ ದೇವ ಎಂದೊರಲಿದುದು ಭುವನಜನ ೪೪

ತ್ರಾಹಿ ಮದನಾಂತಕ ಪುರತ್ರಯ
ದಾಹ ಹರ ಶಂಕರ ಮಹೇಶ
ತ್ರಾಹಿ ಮೃತ್ಯುಂಜಯ ಪಿನಾಕಿ ತ್ರಾಹಿ ಲೋಕೇಶ
ದ್ರೋಹಿಗಳು ಧೂಳಾಯ್ತು ಬಳಿಕಿನೊ
ಳೀ ಹದನು ಬಂದಿದೆ ಜಗತ್ರಯ
ರೂಹುಗೆಡುತಿದೆ ದೇವ ಎಂದುದು ಸಕಲ ಭುವನಜನ ೪೫

ಕರುಣರಸದಲಿ ನನೆದು ನಗೆಯಂ
ಕುರಿಸಲಾಜ್ಞಾಹಸ್ತದಲಿ ಶಂ
ಕರನ ಹೂಂಕರಣೆಯಲಿ ತಳಿತುರಿ ತಗ್ಗಿತಲ್ಲಲ್ಲಿ
ಶಿರವ ತಡಹುತ ದೇವತತಿ ಪುರ
ಹರನ ಬೀಳ್ಕೊಂಡರು ಮಹಾರಥ
ಹರಿದು ನಿಜ ಸಂಸ್ಥಾನ ಸಂಗತವಾಯ್ತು ನಿಮಿಷದಲಿ ೪೬