ಸೂ. ಮರಳಿದನು ಪಾಳೆಯಕೆ ಪಾಂಡವ
ರರಸನಿತ್ತಲು ಪಾರ್ಥ ಕೇಳಿದು
ಬರುತ ಗೆಲಿದನು ಸಕಲ ಕೌರವ ರಾಯ ಮೋಹರವ

ದೂರುವರಲೇ ಕರ್ಣನೋಲೆಯ
ಕಾರತನವನು ಹಿಂದೆ ಕೆಲಬರು
ದೂರಿದರೆ ಫಲವೇನು ಕದನದಲವಗೆ ಸರಿಯಹರೆ
ಹಾರಲೂದಿದನಹಿತ ರಾಯನ
ನೀರತನವನು ತನ್ನ ರಾಯನ
ಸೂರೆಗಡಹಾಯ್ದರಿಯ ತಡೆದನು ಭೂಪ ಕೇಳೆಂದ ೧

ಅರರೆ ಸಿಂಹದ ತೋಳ ತೆಕ್ಕೆಯ
ಕರಿಯ ಸೆಳೆವಂದದಲಿ ಗರುಡನ
ಕೊರಳ ಬಿಲದಲಿ ಬಿಳ್ದ ಸರ್ಪನ ಸೇದುವಂದದಲಿ
ಧರಣಿಪಾಲನ ತೆಗೆದು ಭೀಮನ
ಬರಿಯನೆಚ್ಚನು ಜೋಡ ಜೋಕೆಯ
ಜರುಹಿದನು ಜವಗೆಡಿಸಿದನು ನಿನ್ನಾತನನಿಲಜನ ೨

ಅರಸ ಕೇಳೈ ಕರ್ಣ ಭೀಮರ
ಧರಧುರದ ದೆಖ್ಖಾಯ್ಲತನ ಗ
ಬ್ಬರಿಸಿತಾಹವ ಗರ್ವಿತರ ಗಾಢಾಯ್ಲ ಚೇತನವ
ಧರಣಿಪಾಲನನತ್ತಲವರಾ
ದರಿಸಿದರು ಸಹದೇವ ನಕುಳರು
ಸರಳ ಕಿತ್ತರು ಘಾಯವನು ತೊಳೆತೊಳೆದು ಮಂತ್ರಿಸುತ ೩

ದುರದುರಿಪ ಬಿಸಿರಕ್ತವೇರಿನೊ
ಳೊರತೆ ಮಸಗಿತು ಬಹಳ ಧೈರ‍್ಯದ
ಹೊರಿಗೆ ಮರಿದುದು ಮೂಗಿನುಸಿರುಬ್ಬೆದ್ದುದಡಿಗಡಿಗೆ
ಅರಿವು ಮರವೆಗಳೊಂದನೊಂದನು
ಮುರಿದು ನೂಕಿದವವನಿಪತಿ ಕಡು
ವೆರಗ ಕೇಣಿಯ ಕೊಂಡವೋಲಿದ್ದನು ವಿಚೇಷ್ಟೆಯಲಿ ೪

ಜಯಸಮರ ಜಾರಾಯ್ತು ತೆಗೆ ಪಾ
ಳೆಯಕೆ ಮರಳಿಚು ರಥವನಿನ್ನೆ
ಲ್ಲಿಯದು ನೆಲ ನೆರೆ ಕುದಿವ ಕುರುಡನ ಮಕ್ಕಳೇ ಕೊಳಲಿ
ನಿಯತವೆಮ್ಮಿಬ್ಬರಿಗೆ ರಾಯನ
ಲಯವೆ ಲಯವಿನ್ನೆನುತಲಾ ಮಾ
ದ್ರಿಯ ಕುಮಾರರು ದೊರೆ ಸಹಿತ ತಿರುಗಿದರು ಪಾಳೆಯಕೆ ೫

ರಾಯರಥ ಮಡಮುರಿಯೆ ಮುರಿದುದು
ನಾಯಕರು ಪಾಂಚಾಲಕರು ವಾ
ನಾಯುಜರು ಮತ್ಸ್ಯ ಪ್ರಬುದ್ಧಕ ಸೋಮಕಾದಿಗಳು
ವಾಯುಹತಿಯಲಿ ಮೇಘದೊಡ್ಡಿಂ
ಗಾಯಸವು ಕರ್ಣಾಸ್ತ್ರಹತಿಯಲ
ಪಾಯವರಿ ರಾಯರಿಗಪೂರ್ವವೆ ಭೂಪ ಕೇಳೆಂದ ೬

ಮುರಿದುದೈ ರಿಪುರಾಯದಳ ಹಗೆ
ಹರಿದುದೈ ಕುರುಪತಿಗೆ ಹರುಷವ
ಕರೆದುದೈ ಕರ್ಣಪ್ರತಾಪಾಟೋಪ ಜೀಮೂತ
ಇರಿತ ಮೆರೆದುದು ನಿನ್ನವರ ಬೊ
ಬ್ಬಿರಿತ ಜರೆದುದು ವಿಜಯಲಕ್ಷ್ಮಿಯ
ಸೆರಗು ಸೋಂಕಿತು ಕೌರವೇಶ್ವರಗರಸ ಕೇಳೆಂದ ೭

ಅರಿಬಲದ ಲಗ್ಗೆಯನು ನಿಜ ಮೋ
ಹರದ ಮುರಿವಿನ ಸುಗ್ಗಿಯನು ಧರ
ಧುರದ ಪರಬಲದೊಸಗೆಯನು ನಿಜಬಲದ ಹಸುಗೆಯನು
ಮುರಮಥನ ನೋಡಿದನು ಮೂಗಿನ
ಬೆರಳ ತೂಗುವ ಮಕುಟದೊಲಹಿನ
ಬೆರಳ ಕುಡಿಚಮ್ಮಟಿಗೆಯಲಿ ಸೂಚಿಸಿದನರ್ಜುನಗೆ ೮

ಆರ ರಥವಾ ಹೋಹುದದು ಹಿಂ
ದಾರವರು ಬಳಿವಳಿಯಲೊಗ್ಗಿನ
ಲೋರಣಿಸಿ ಮುಂಚುವರು ಟೆಕ್ಕೆಯವಾರ ತೇರಿನದು
ಆರ ದಳವದು ಧುರಪಲಾಯನ
ಚಾರು ದೀಕ್ಷಿತರಾಯ್ತು ಫಲುಗುಣ
ಧಾರುಣೀಪತಿಯಾಣೆ ಹೇಳೆಂದಸುರರಿಪು ನುಡಿದ ೯

ನೋಡಿ ನೋಡಿ ಕಿರೀಟವನು ತೂ
ಗಾಡಿದನು ಕಂಬನಿಗಳಾಲಿಯೊ
ಳೀಡಿರಿದು ಸೋರಿದವು ಸೊಂಪಡಗಿತು ಮುಖಾಂಬುಜದ
ಹೂಡಿದಂಬಿನ ತೋಳ ತೆಗಹಿನ
ಬಾಡಿದುತ್ಸಾಹದ ವಿತಾಳದ
ಬೀಡಿಕೆಯ ಬೇಳುವೆಗೆ ಬೆಬ್ಬಳೆವೋದನಾ ಪಾರ್ಥ ೧೦

ಸೇನೆ ಮುರಿಯಲಿ ಕೌರವನ ದು
ಮ್ಮಾನ ಹರಿಯಲಿ ನನಗೆ ಚಿತ್ತ
ಗ್ಲಾನಿಯೆಳ್ಳನಿತಿಲ್ಲ ಕಟ್ಟಲಿ ಗುಡಿಯ ಗಜನಗರ
ಆ ನರೇಂದ್ರನ ಸಿರಿಮೊಗಕೆ ದು
ಮ್ಮಾನವೋ ಮೇಣ್ ಸುರಪುರಕೆ ಸಂ
ಧಾನವೋ ನಾನರಿಯೆನಳ್ಳೆದೆಯಾದುದೆನಗೆಂದ ೧೧

ಧರಣಿಪತಿ ಸಪ್ರಾಣನೇ ಜಗ
ಪುರದ ರಾಜ್ಯಕೆ ನಿಲಿಸುವೆನು ಮೇಣ್
ಸುರರೊಳಗೆ ಸಮ್ಮೇಳವೇ ಕುಂತೀಕುಮಾರಂಗೆ
ಅರೆಘಳಿಗೆ ಧರ್ಮಜನ ಬಿಟ್ಟಾ
ನಿರೆನು ಮುರಹರ ರಥವ ಮರಳಿಚು (ಎಂದ ೧೨
ಮರಳಿಚೈ ರಥ ಮುಂಚುವುದೊ ಮನ ಮುಂಚುವುದೊ

ತಿರುಹಿ ವಾಘೆಯ ಹಿಡಿದು ಹರಿ ಹೂಂ
ಕರಿಸಿ ಬಿಟ್ಟನು ರಥವನಾತನ
ಮುರಿವ ಕಂಡುದು ಲಳಿ ಮಸಗಿ ಸಮಸಪ್ತಕರ ಸೇನೆ
ಅರರೆ ನರ ಪೈಸರಿಸಿದನೊ ಪೈ
ಸದರಿಸಿದನೊ ಫಡ ಹೋಗಬಿಡದಿರಿ
ಕುರುನೃಪಾಲನ ಪುಣ್ಯವೆನುತಟ್ಟಿದರು ಸೂಠಿಯಲಿ ೧೩

ಕವಿದುದದುಭುತ ಬಲ ಮುರಾರಿಯ
ತಿವಿದರಡಗಟ್ಟಿದರು ತೇಜಿಯ
ಜವಗೆಡಿಸಿ ತಲೆಯಾರ ತಡೆದರು ತುಡುಕಿದರು ನೊಗನ
ಅವರನೊಂದೇ ನಿಮಿಷದಲಿ ಪರಿ
ಭವಿಸಿ ನಡೆತರೆ ಮುಂದೆ ಗುರುಸಂ
ಭವನ ರಥವಡಹಾಯ್ದು ದವನೀಪಾಲ ಕೇಳೆಂದ ೧೪

ಇತ್ತಲಿತ್ತಲು ಪಾರ್ಥ ಹೋಗದಿ
ರಿತ್ತಲಶ್ವತ್ಥಾಮನಾಣೆ ಮ
ಹೋತ್ತಮರು ಗುರು ಭೀಷ್ಮರಲಿ ಮೆರೆ ನಿನ್ನ ಸಾಹಸವ
ಕಿತ್ತು ಬಿಸುಡುವೆನಸುವನಿದಿರಾ
ಗತ್ತಲೆಲವೋ ನಿನ್ನ ಜೋಕೆಯ
ಜೊತ್ತಿನಾಹವವಲ್ಲೆನುತ ತರುಬಿದನು ಗುರುಸೂನು ೧೫

ಆವುದಿಲ್ಲಿಗುಪಾಯವೀತನ
ಭಾವ ಬೆಟ್ಟಿತು ತೆರಹುಗೊಡನಿಂ
ದೀ ವಿಸಂಧಿಯೊಳರಿಯೆನವನಿಪನಾಗುಹೋಗುಗಳ
ದೇವ ಹದನೇನೆನುತ ವರ ಗಾಂ
ಡೀವಿ ಮುಕ್ತಕಳಂಬಕಾಂಡ
ಪ್ರಾವರಣದಲಿ ಮುಸುಕಿದನು ಗುರುನಂದನನ ರಥವ ೧೬

ಖೂಳ ತೆಗೆ ಹೆರಸಾರು ಠಕ್ಕಿನ
ಠೌಳಿಯಾಟವೆ ಕದನ ಕುಟಿಲದ
ಬೇಳುವೆಯ ಡೊಳ್ಳಾಸ ಮದ್ದಿನ ಮಾಯೆ ನಮ್ಮೊಡನೆ
ಆಳುತನವುಳ್ಳೊಡೆ ಮಹಾಸ್ತ್ರದ
ಜಾಳಿಗೆಯನುಗಿಯೆನುತ ಪಾರ್ಥನ
ಕೋಲುಗಳ ನೆರೆ ತರಿದು ತೀವಿದನಂಬಿನಲಿ ನಭವ ೧೭

ಸರಳ ಹರಿಮೇಖಳೆಗೆ ನೀವೇ
ಗುರುಗಳಲ್ಲಾ ನಿಮ್ಮ ವಿದ್ಯೆಯ
ಹುರುಳುಗೆಡಿಸುವಿರೆನುತ ಗುರುಸುತನಂಬ ಹರೆಗಡಿದು
ತುರಗದಲಿ ರಥಚಕ್ರದಲಿ ಕೂ
ಬರದೊಳೀಸಿನಲಚ್ಚಿನಲಿ ದು
ರ್ಧರ ಶಿಳೀಮುಖ ಜಾಳವನು ಜೋಡಿಸಿದನಾ ಪಾರ್ಥ ೧೮

ತಳಿವ ನಿನ್ನಂಬಿನಮಳೆಗೆ ಮನ
ನಲಿವ ಚಾತಕಿಯರಿಯೆಲಾ ಕಳ
ವಳಿಸದಿರು ಕೊಳ್ಳಾದಡೆನುತೆಚ್ಚನು ಧನಂಜಯನ
ಹೊಳೆವ ಕಣೆ ಹೊಕ್ಕಿರಿದ ದಾರಿಯೊ
ಳುಳಿದ ಕಣೆ ದಾಂಟಿದವು ಗುರುಸುತ
ತುಳುಕಿದನು ಫಲುಗುಣನ ಮೈಯಲಿ ರಕುತ ರಾಟಳವ ೧೯

ಕಡುಗಿದರೆ ಕಾಲಾಗ್ನಿರುದ್ರನ
ಕಡುಹನಾನುವರೀತನೇ ಸೈ
ಗೆಡೆವ ರೋಮದ ಧೂಮ್ರವಕ್ತ್ರದ ಸ್ವೇದಬಿಂದುಗಳ
ಜಡಿವ ರೋಷದ ಭರದಲಡಿಗಡಿ
ಗೊಡಲನೊಲೆದು ಮಹಾಸ್ತ್ರದಲಿ ಕಡಿ (೨೦
ಕಡಿದು ಬಿಸುಟನು ಗುರುಸುತನ ಸಾರಥಿಯ ರಥಹಯವ

ಧನುವನುರು ಬತ್ತಳಿಕೆಗಳನಂ
ಬಿನ ಹೊದೆಯನುರು ಟೆಕ್ಕೆಯವ ಜೋ
ಡಿನ ಬನವ ಕಡಿದಿಕ್ಕಿದನು ಸೆಕ್ಕಿದನು ಸರಳುಗಳ
ಧನು ವರೂಥದ ಹಾನಿ ಗುರು ನಂ
ದನನ ಗರ‍್ವವಿನಾಶಿಯೇ ಫಡ
ಎನುತ ಪಾರ್ಥನ ತರುಬಿ ನಿಂದನು ಸೆಳೆದಡಾಯುಧದಿ ೨೧

ದಿಟ್ಟನೈ ಗುರುಸೂನು ಶಿವ ಜಗ
ಜಟ್ಟಿಯಲ್ಲಾ ಕೌರವೇಂದ್ರನ
ಥಟ್ಟಿನಲಿ ಭಟರಾರೆನುತ ತಲೆದೂಗಿದನು ಪಾರ್ಥ
ಇಟ್ಟಣಿಸಿದನು ಹಿಂದೆ ಕೃಪನಡ
ಗಟ್ಟಿದನು ಸಮಸಪ್ತಕರು ಸಲೆ
ಮುಟ್ಟಿ ಬಂದರು ಕೌರವೇಶ್ವರ ಸಕಲಬಲ ಸಹಿತ ೨೨

ತಡೆಯಿ ಪಾರ್ಥನನಿವನ ರಾಯನ
ಕೆಡಹಿದನು ಕಲಿ ಕರ್ಣ ನೀಗಳೆ
ಮುಡುಹುವನು ಪವನಜನನೊಂದರೆಘಳಿಗೆ ಮಾತ್ರದಲಿ
ಬಿಡಿದಿರೀತನನೆನುತ ಕುರುಪತಿ
ಯೊಡನೆ ದುಶ್ಶಾಸನ ಕೃಪಾದಿಗ
ಳಡಸಿದರು ಕೆಂಗೋಲ ಮಳೆಯಲಿ ನಾದಿದರು ನರನ ೨೩

ಅವನಿಪನ ಕಾಣಿಕೆಗೆ ಬಹು ವಿ
ಘ್ನವನು ಬಲಿದುದೆ ದೈವ ಯಂತ್ರವ
ನವಗಡಿಸಿ ನೂಕುವರೆ ನಮ್ಮಳವೇ ಶಿವಾ ಎನುತ
ಕವಲುಗೋಲೈದರಲಿ ಕೃಪ ಕೌ
ರವನ ತಮ್ಮಂದಿರ ಸುಸನ್ನಾ
ಹವ ವಿಸಂಚಿಸಿ ಬಗಿದು ಸಮಸಪ್ತಕರನೊಡೆಹಾಯ್ಸಿ ೨೪

ಹೋಗಹೋಗಲು ಮತ್ತೆ ಕುರುಬಲ
ಸಾಗರದ ಭಟಲಹರಿ ಲಳಿಯಲಿ
ತಾಗಿದರು ತುಡುಕಿದರು ತಡೆದರು ನಾಲ್ಕು ದೆಸೆಗಳಲಿ
ನೀಗಿದರು ಶಸ್ತ್ರಾಸ್ತ್ರವನು ಕೈ
ಲಾಗಿನಲಿ ಮರಳಿದರು ಪುನರಪಿ
ತಾಗಿದರು ಗುರುಸೂನು ಕೃತವರ್ಮಾದಿ ನಾಯಕರು ೨೫

ಮೇಲೆ ಬಿದ್ದುದು ಮತ್ತೆ ಬಲಮೇ
ಘಾಳಿ ನೂಕಿತು ನರನ ರಥ ಸುಳಿ
ಗಾಳಿಯಂತಿರೆ ತಿರುತಿರುಗಿದುದು ವಿಶ್ವತೋಮುಖದಿ
ಹೇಳಲೇನವನೀಶ ಚಪಳ ಭ
ಡಾಳ ಪಾರ್ಥನ ವಿಕ್ರಮಾಗ್ನಿ
ಜ್ವಾಲೆಯಲಿ ನೆರೆ ಸೀದು ಸೀಕರಿವೋಯ್ತು ಕುರುಸೇನೆ ೨೬

ಗುರುಸುತನ ಮುರಿಯೆಚ್ಚು ಶಕುನಿಯ
ಪರಿಭವಿಸಿ ಕೃತವರ್ಮಕನ ವಿ
ಸ್ತರಿಸಲೀಯದೆ ಕೇರಳ ದ್ರವಿಡಾಂಧ್ರ ಕೌಸಲರ
ಹುರುಳುಗೆಡಿಸಿ ಸುಯೋಧನನ ಮೊಗ
ಮುರಿಯಲೆಚ್ಚು ಸುಷೇಣ ಗೌತಮ
ರುರವಣಿಯ ನೆಗ್ಗೊತ್ತಿ ಹಾಯ್ದನು ಮತ್ತೆ ಸೈವರಿದು ೨೭

ಆವರಿಸಿದುದು ಮತ್ತೆ ಹೊಸ ಮೇ
ಳಾವದಲಿ ಕುರುಸೇನೆ ಘನ ಗಾಂ
ಡೀವ ವಿಗಳಿತ ವಿಶಿಖ ವಿಸರದ ವಹಿಗೆ ವಂಚಿಸದೆ
ಲಾವಣಿಗೆಗೊಳಲಲಸಿ ಯಮನನು
ಜೀವಿಗಳು ಜಡರಾಯ್ತು ಫಲುಗುಣ
ನಾವ ವಹಿಲದಲೆಸುವನೆಂಬುದನರಿಯೆ ನಾನೆಂದ ೨೮

ಜಾಳಿಸಿತು ರಥ ಜಡಿವ ಕೌರವ
ನಾಳ ಝೋಂಪಿಸಿ ಡೊಂಬು ಮಾಡುವ
ಜಾಳ ಝಾಡಿಸಿ ಬೈದು ಹೊಕ್ಕನು ಮತ್ತೆ ಗುರುಸೂನು
ಖೂಳ ಫಡ ಫಡ ಜಾರದಿರು ತೋ
ರಾಳ ತೂರಿದ ಡೊಂಬು ಬೇಡ ವಿ
ಡಾಳ ವಿದ್ಯೆಗಳೆಮ್ಮೊಡನೆಯೆನುತೆಚ್ಚನರ್ಜುನನ ೨೯

ಗುರುಸುತನನೊಟ್ಟೈಸಿ ಫಲುಗುಣ
ತಿರುಗಿ ಹಾಯ್ದನು ಮುಂದೆ ಶರಪಂ
ಜರವ ಹೂಡಿದನೀತನಾತನ ಬಯ್ದು ಬೆಂಬತ್ತಿ
ಸರಳ ಹರಹಿನ ಹೂಟವನು ಕಾ
ಹುರದ ಕಡುಹಿನಲೊದೆದು ಬೊಬ್ಬಿರಿ
ದುರವಣಿಸಿದನು ಪಾರ್ಥನೀತನ ಧನುವ ಖಂಡಿಸಿದ ೩೦

ಧನು ಮುರಿಯೆ ದಿಟ್ಟಾಯ ತನವೀ
ತನಲಿ ಸಾಕಿನ್ನೆನುತ ಗುರುನಂ
ದನನು ಮುರಿದನು ಹೊಗರು ಮೋರೆಯ ಹೊತ್ತ ದುಗುಡದಲಿ
ಅನಿಲಸೂನುವ ಹಳಚಿದರು ಮು
ಮ್ಮೊನೆಯ ಬೋಳೆಯ ಮೈಯ ಕೊಳು ಕೊಡೆ
ಯೆನಗೆ ತನಗೆಂಬಗ್ಗಳಿಕೆಗಳ ಮೆರೆದರಿಚ್ಛೆಯಲಿ ೩೧

ತರಣಿತನಯನ ತೆಗೆದು ಭೀಮನೊ
ಳುರವಣಿಸಿ ಗುರುಸೂನು ಕಾದು
ತ್ತಿರೆ ಧನಂಜಯ ತೆರಳಿದನು ಪಾಳೆಯದ ಪಥವಿಡಿದು
ಅರರೆ ಫಲುಗುಣನೋಟವನು ಸಂ
ಗರ ಸಮರ್ಥರ ನೋಟವನು ನ
ಮ್ಮರಸ ಕಂಡನಲಾ ಎನುತ ನೂಕಿದನು ಕಲಿಕರ್ಣ ೩೨

ನೆರೆದುದಲ್ಲಿಯದಲ್ಲಿ ಕಹಳೆಯ
ಧರಧುರದ ನಿಸ್ಸಾಳ ಸೂಳಿನ
ಮೊರೆವ ಭೇರಿಯ ರಾಯಗಿಡಿಗನ ಜಡಿವ ಚಂಬಕನ
ತುರಗ ಕರಿ ರಥ ಪಾಯದಳ ಚಾ
ಮರದ ಧವಳಚ್ಛತ್ರ ಪಟ ಪಳ
ಹರದ ಪಡಪಿನಲೌಕಿ ನಡೆದುದು ಮುಂದೆ ಪಾಯದಳ ೩೩

ಕವಿದು ಕೆಂಧೂಳಿಡುವ ಸೇನಾ
ಟವಿಯ ನೋಡುತ ಹಿಂದೆ ಕರ್ಣನ
ಲವಲವಿಕೆಯಾಯತವ ಕಂಡನು ಕದನಕೇಳಿಯಲಿ
ಅವನಿಪನ ದರುಶನವೆನಗೆ ಸಂ
ಭವಿಸಲರಿಯದು ಭಾಪುರೇ ಕೌ (೩೪
ರವ ಮಹಾರ್ಣವವೆನುತ ಮಕುಟವ ತೂಗಿದನು ಪಾರ್ಥ

ಬಳಿಕ ಸೇನಾಸ್ತಂಭ ಶರದಲಿ
ನಿಲಿಸಿದನು ಮಾರ್ಬಲವನಿತ್ತಲು
ಚಳೆಯದಲಿ ಹಿಮ್ಮೆಟ್ಟುತಿರೆ ಕಂಡನು ಧನಂಜಯನ
ಹೊಳಹು ದೂವಾಳಿಯಲಿ ಪಾರ್ಥನ
ಕೆಲಕೆ ಬಿಟ್ಟನು ರಥವ ನಿಲು ನಿ
ಲ್ಲೆಲವೊ ಹೋಗದಿರೆನುತ ಬೆಂಬತ್ತಿದನು ಕಲಿಕರ್ಣ ೩೫

ಕಂಡನರ್ಜುನನಿದಿರೊಳಿವನು
ದ್ದಂಡತನವನು ನೃಪತಿ ಚಿಂತಾ
ಖಂಡಧೈರ‍್ಯರು ನಾವಲಾ ಹೊತ್ತಲ್ಲ ಕಾದುವರೆ
ಕಂಡಿರೇ ಮುರವೈರಿ ದಳಪತಿ
ಚಂಡಬಳನಹ ನಡುಹಗಲ ಮಾ
ರ್ತಾಂಡನಂತಿರೆ ತೋರುತೈದನೆ ರಥವ ತಿರುಹೆಂದ ೩೬

ಜೀವಿಸಿರಲಾವಾವ ಲೇಸಿನ
ಠಾವ ಕಾಣೆವು ಜೀಯ ಕರ್ಣನ
ನಾವು ತೊಡಚುವರಲ್ಲ ತೆರಳಿಚು ಪಾಳೆಯಕೆ ರಥವ
ಈ ವಿಗಡನಂತಿರಲೆನುತ ಗಾಂ
ಡೀವಿ ಚಾಪವನಿಳುಹೆ ರಥವನು
ದೇವಕೀಸುತ ನೂಕಿದನು ಪವಮಾನ ವೇಗದಲಿ ೩೭

ಬರುತ ಭೀಮನ ಕಂಡರಾತನ
ಹೊರೆಗೆ ಬಿಟ್ಟರು ರಥವನರ್ಜುನ
ಕರೆದು ಬೆಸಗೊಂಡನು ನೃಪಾಲನ ಕ್ಷೇಮ ಕೌಶಲವ
ಅರಸನಿಂದು ಸಜೀವಿಯೋ ಸುರ
ಪುರ ನಿವಾಸಿಯೊ ಹದನನೇನೆಂ
ದರಿಯೆನೀ ಸಂಗ್ರಾಮ ಧುರವೆನಗೆಂದನಾ ಭೀಮ ೩೮

ಆದಡೆಲೆ ಪವಮಾನಸುತ ನೀ
ನಾದರಿಸು ನಡೆ ನೃಪತಿಯನು ನಾ
ಕಾದುವೆನು ಕೌರವರ ಸಕಲಬಲ ಪ್ರಘಾಟದಲಿ
ಕೈದುಕಾರರು ನಿಖಿಳ ದೆಸೆಗಳ
ಲೈದಿ ಬರುತಿದೆ ನೀ ಮರಳು ನಾ
ಛೇದಿಸುವೆನರೆಘಳಿಗೆ ಮಾತ್ರದಲೆಂದನಾ ಪಾರ್ಥ ೩೯

ಎಲೆ ಧನಂಜಯ ನೀನೆ ಬಲುಗೈ
ಯುಳಿದವರು ರಣಖೇಡರೇ ಕುರು
ಬಲವನೊಬ್ಬನೆ ಕೇಣಿಗೊಂಡೆನು ಕರ್ಣ ಮೊದಲಾಗಿ
ಅಳಿಕಿಸುವೆನೀಕ್ಷಣಕೆ ತನ್ನ
ಗ್ಗಳಿಕೆಯನು ನೋಡವನಿಪಾಲನ
ಬಳಲಿಕೆಯ ಸಂತೈಸು ನಡೆ ನೀನೆಂದನಾ ಭೀಮ ೪೦