ಸೂ. ರಾಯ ರಿಪುಬಲ ವಿಪಿನ ದಹನನ
ಜೇಯನೇಕಾಂಗದಲಿ ಕೌರವ
ರಾಯ ಬಲಬಹಳಾಂಬುಧಿಯ ಕಲಕಿದನು ಕಲಿಭೀಮ

ಕೇಳು ಧೃತರಾಷ್ಟ್ರಾವನಿಪ ದು
ವ್ವಾಳಿಯಲಿ ಕೃಷ್ಣಾರ್ಜುನರು ನಿಜ
ಪಾಳೆಯಕೆ ತಿರುಗಿದರು ಬಳಿಕಿತ್ತಲು ವೃಕೋದರನ
ಆಳುತನದ ಸಘಾಡಿಕೆಯ ನಾ
ಹೇಳಲರಿಯೆನು ಸಕಲ ಕುರುಬಲ
ಜಾಲವೊಂದೆಸೆ ಭೀಮನೊಂದೆಸೆ ಕೇಳು ಕೌತುಕವ ೧

ಸೆರಗ ಬೀಸಿತು ನಿನ್ನವರು ಬೊ
ಬ್ಬಿರಿದರರ್ಜುನನಿತ್ತ ಬೆನ್ನಿನ
ತೆರಿಗೆಯುತ್ಸವಧನವ ತೆಗೆ ಭಂಡಾರದೊಳಗೆನುತ
ತುರುಗಿತಲ್ಲಿಯದಲ್ಲಿ ಲಗ್ಗೆಯ
ಬಿರುದನಿಯ ನಿಸ್ಸಾಳ ಕಹಳೆಯ
ಜರಹು ಜೋಡಿಸಿ ಜರುಹಿತಡಕಿಲು ಜಗದ ಜೋಡಿಗಳ ೨

ಆರು ಸಾವಿರ ಕುದುರೆ ಕರಿಘಟೆ
ಮೂರು ಸಾವಿರ ಸಾವಿರದ ನಾ
ನೂರು ರಥ ಪರಿಗಣನೆಗೊಂದೇ ಲಕ್ಕ ಪಾಯದಳ
ನೂರು ರಥದಲಿ ಸರಳ ಹೊದೆ ಮೂ
ನೂರು ಪರಿಚಾರರು ಸಹಿತ ಮೈ
ದೋರಿ ನಿಂದನು ಭೀಮನೊಬ್ಬನೆ ತರುಬಿ ಕುರುಬಲವ ೩

ಅರಸ ಕೇಳೈ ನಿಮ್ಮ ದಳದೊಳು
ಗುರುತನುಜ ಕೃತವರ್ಮ ಕೃಪ ನಿ
ನ್ನರಸುಮಗ ರಾಧೇಯ ಶಕುನಿ ಸುಶರ್ಮ ವೃಷಸೇನ
ಮರು ಯವನ ಹಮ್ಮೀರ ಕೇರಳ
ತುರುಕ ಬಾಹ್ಲಿಕ ಮಗಧ ನೇಪಾ
ಳರು ಕುರೂಷಾದಿಗಳು ಸಂಖ್ಯಾತೀತಬಲವೆಂದ ೪

ಮಾಳವಾಂಧ್ರ ಪುಳಿಂದ ಬರ್ಬರ
ಗೌಳ ವಂಗ ದ್ರವಿಡ ಸಿಂಹಳ
ಲಾಳ ಗುರ್ಜರ ಚೀನ ಭೋಟ ಕರಾಳ ಖರ್ಪರರು
ಚೋಳ ಸಿಂಧು ಕಳಿಂಗ ಸಗರ ವ
ರಾಳ ಪಾರ‍್ಯಾತ್ರಪ್ರಮುಖ ಭೂ
ಪಾಲರಿವರೊಡ್ಡಿನಲಿ ಸಂಖ್ಯಾರಹಿತದಳವೆಂದ ೫

ಇದ್ದುದಾ ಸಮಸಪ್ತಕರು ಜಗ
ವದ್ದ ಜಲಧಿಯ ತೆರೆಯವೊಲು ಮುಳಿ
ದೆದ್ದ ಹರಿಬಲದಂತೆ ದುಶ್ಶಾಸನನ ಪಾಯದಳ
ದೊದ್ದೆಯಲ್ಲದೆ ದೊರೆಗಳೇ ಜರೆ
ದೆದ್ದುದರೆಡಕ್ಷೋಣಿಯನಿಬರಿ
ಗಿದ್ದನೊಬ್ಬನೆ ಭೀಮನವನೀಪಾಲ ಕೇಳೆಂದ ೬

ಹೇಳು ಸಂಜಯ ವಿಸ್ತರಿಸಿ ಕಾ
ಲಾಳು ಮೇಲಾಳಿನಲಿ ಭೀಮನ
ಕಾಳೆಗದ ಕೌತುಕವನೀ ಹೆಬ್ಬಲದ ದುರ್ಬಲವ
ಆಳು ಹಿರಿದಿದ್ದೇನು ಫಲ ಹೀ
ಹಾಳಿ ದೈವಕೆ ಬೇರೆ ಪರಿಯ ವಿ
ತಾಳವಿಲ್ಲ ವಿಪಕ್ಷಪಾತದೊಳೆಂದನಂಧನೃಪ ೭

ಅರಸ ಕೇಳಾದಡೆ ಮಹಾ ಸಾ
ಗರಕೆ ಮುನಿ ಮಂಡಿಸಿದವೊಲು ಸಂ
ಹರಣ ದಿನದಲಿ ಜಗಕೆ ಮಲೆವ ಮಹೇಶನಂದದಲಿ
ಅರಿ ಹಿರಣ್ಯಾಕ್ಷನ ಬಲಕೆ ಕೋ
ಡೆರಗಿ ನಿಂದ ವರಾಹನಂತಿರೆ
ಪರಬಲಾಂತಕಕ ಭೀಮ ನಿಂದನು ತರುಬಿ ಪರಬಲವ ೮

ಆತನಿಂದಂಘವಣೆಯನು ನಿ
ನ್ನಾತ ಕಂಡನು ಮೆಚ್ಚಿದನು ಮಝ
ಪೂತು ಭೀಮ ಸುಧೀರನೈ ಸದ್ಗುಣಕೆ ಮತ್ಸರವೆ
ಈತನೊಬ್ಬನೆ ಕೌರವರಸಂ
ಖ್ಯಾತವೆಂಬುದು ಲೋಕ ಸಾಕಿ
ನ್ನೀತ ಮರಳಲಿ ಎಂದು ಭಟ್ಟರನಟ್ಟಿದನು ಭೂಪ ೯

ಬಂದು ಭಟ್ಟರು ಭೀಮಸೇನಂ
ಗೆಂದರೆಲೆ ಕೌಂತೇಯ ನೀ ನಿ
ನ್ನಂದಿನಗ್ಗದ ದುಂದುಮಾರನ ಕಾರ್ತವೀರ್ಯಕನ
ಸಂದ ಭರತ ಭಗೀರಥಾದಿಗ
ಳಿಂದ ಮಿಗಿಲು ಮಹಾ ಪ್ರಚಂಡರೊ
ಳಿಂದು ನಿನಗೆಣೆಯಾರು ದನುಜಾಮರರ ಥಟ್ಟಿನಲಿ ೧೦

ರಾಯ ಜಗಜಟ್ಟಿಗಳು ರಿಪು ಕುರು
ರಾಯ ಥಟ್ಟಿನೊಳಿನಿಬರಿಗೆ ನಿ
ನ್ನಾಯತದಿ ನಿಲುವಂಘವಣೆಗಾವೇನ ಹೇಳುವೆವು
ರಾಯನನು ಸಂತೈಸುವುದು ಮಾ
ದ್ರೇಯ ಫಲುಗುಣ ಸಹಿತ ನಿಲು ನಿ
ನ್ನಾಯತದಿ ನಮ್ಮರಸನೊಲ್ಲನು ನಿನ್ನೊಡನೆ ರಣವ ೧೧

ಆಗಲದು ತಪ್ಪೇನು ಧರ್ಮಜ
ನಾಗುಹೋಗರ್ಜುನನ ಮೇಲೆ ವಿ
ಭಾಗದಲಿ ಬಂದುದು ಸುಯೋಧನ ಸೈನ್ಯಧುರವೆಮಗೆ
ಈಗಳೊಬ್ಬನೆ ವಿಷಮ ವಿಗ್ರಹ
ಯಾಗದಲಿ ರಿಪುಭಟ ಪಶು ಹಿಂ
ಸಾಗಮವ ತೋರುವೆನು ಸೈರಿಸಿಯೆಂದನಾ ಭೀಮ ೧೨

ವಿವಿಧ ಮಣಿ ಕನಕಾದಿ ವಸ್ತುವ
ನವರಿಗಿತ್ತನು ತನ್ನ ಪಾಠಕ
ನಿವಹವನು ಕಳುಹಿದನು ಕೌರವ ಬಲದ ಸುಭಟರಿಗೆ
ಅವರು ಬಂದರು ಕರ್ಣ ಗುರು ಸಂ
ಭವ ಸುಶರ್ಮಕ ಶಕುನಿ ಕೃಪ ಕೌ
ರವ ನೃಪಾದಿಗಳಿದಿರಲೊದರಿದರನಿಲಜನ ಮತವ ೧೩

ಮುರಿದು ಲೋಕವ ನುಂಗಿದರೆ ಕ
ಟ್ಟಿರುವೆಯೇ ಕಾಲಂಗೆ ಕತ್ತಲೆ
ಯಿರಿತದಲಿ ಕೈದೀವಿಗೆಯ ಹಂಗೇಕೆ ದಿನಮಣಿಗೆ
ಮರೆದೆಲಾ ರಾಧೇಯ ಕೃಪ ನಿಲು
ಹೊರಗೆ ಗುರುಸುತ ನಿನ್ನ ಗರ‍್ವವ
ಹೆರಿಸುವವು ಭೀಮಾಸ್ತ್ರವೆಂದುದು ವಂದಿ ಸಂದೋಹ ೧೪

ಆಸೆಯೇ ಜೀವದಲಿ ಕುರುಧರ
ಣೀಶ ಬಿಡು ರಾಜ್ಯವನು ಮಾತಿನ
ವಾಸಿಯೇ ಕೊಡು ಕದನವನು ಸಾಕುಳಿದ ಮಾತೇನು
ಈ ಸುಶರ್ಮಕ ಶಕುನಿ ಸಲೆ ದು
ಶ್ಶಾಸನಾದಿ ಪಿಪೀಲಕರು ತಮ
ಗೇಸು ಬಲುಹುಂಟೈಸನೊದಗಲಿ ಎಂದರವರಂದು ೧೫

ಇವರು ಕಳುಹಿದರುಚಿತದಲಿ ನಿ
ನ್ನವರು ಮಸಗಿದ ಕಡಲವೊಲು ಬಲು
ದವಕಿಗರು ಕೋಲಳವಿಗೊಂಡರು ಕೋಡ ಕೈಗಳಲಿ
ತವತವಗೆ ದೆಖ್ಖಾಯ ಮಿಗೆಯು
ತ್ಸವದಲುರುಬಿದರವನಿಪಾಲನ
ಗವಿಯ ಘಾಡಿಕೆ ಜೋಡಿಸಿತು ಗೀರ್ವಾಣರಾಲಿಗಳ ೧೬

ಇನ್ನರಿಯಬಹುದೆನುತ ರಾಯನ
ಮನ್ನಣೆಯ ಮದಸೊಕ್ಕಿದಾನೆಗ
ಳೆನ್ನ ಬಿಡು ಬಿಡು ತನ್ನ ಬಿಡು ಬಿಡು ಎನುತ ಖಾತಿಯಲಿ
ತಿನ್ನಡಗನೊಡೆಹೊಯ್ದು ಭೀಮನ
ಬೆನ್ನಲುಗಿ ತನಿಗರುಳನಕಟಾ
ಕುನ್ನಿಗಳಿರೆನುತೊದಗಿದರು ದುಶ್ಶಾಸನಾದಿಗಳು ೧೭

ಈತನೇ ನಮಗರ್ಜುನನು ಕೊ
ಳ್ಳೀತನನು ಹೊಯ್ ಹೊಯ್ಯೆನುತ ಗತ
ಭೀತರಿಟ್ಟಣಿಸಿದರು ಸಮಸಪ್ತಕರು ವಂಗಡಿಸಿ
ಪೂತು ಮಝರೇ ಭೀಮ ಎನುತವೆ
ಸೂತಸುತನೌಕಿದನು ಕೃಪ ಗುರು
ಜಾತ ಕೃತವರ್ಮಾದಿ ರಥಿಕರು ಹೊಕ್ಕರುರವಣಿಸಿ ೧೮

ಒಂದು ದೆಸೆಯಲಿ ರಾಯನಿಪ್ಪ
ತ್ತೊಂದು ಸಾವಿರ ರಥ ಸಹಿತುಘೇ
ಯೆಂದು ಬಿಟ್ಟನು ಭೀಮಸೇನನ ರಥದ ಸಮ್ಮುಖಕೆ
ಅಂದು ಗೋಗ್ರಹಣದಲಿ ಫಲುಗುಣ
ನಿಂದನನಿಬರಿಗರಸ ಚಿತ್ತೈ
ಸಿಂದು ಸೈರಿಸಿ ನಿಂದನನಿಬರಿಗೊಬ್ಬನೇ ಭೀಮ ೧೯

ಕೀರಿ ಕಾಲಿಡೆ ದಿಕ್ಕರಿಗಳೆದೆ
ಡೋರುವೋಗಲು ಸರ‍್ವ ಲಗ್ಗೆಯ
ಲೇರಿತೀ ದಳ ದಳವುಳಿಸಿ ದಳಪತಿಯ ನೇಮದಲಿ
ಏರು ಸೂರೆಗೆ ಹಾರಿ ಮೀಸಲಿ
ನೇರು ನಮ್ಮದು ತಮ್ಮದೆನುತು
ಬ್ಬೇರಿ ಭೀಮನ ಮುತ್ತಿದರು ಮೆತ್ತಿದರು ಸರಳಿನಲಿ ೨೦

ಅರಸ ಕೇಳೈ ನಿಮ್ಮ ಭೀಮನ
ಪರಿಯನೀ ಸರ್ವಾಸ್ತ್ರಘಾತ
ಸ್ಫುರಣ ಮದಕರಿ ಮಕ್ಷಿಕಾ ಸಂಘಾತದಂದದಲಿ
ಕೆರಳಿ ಕವಿದನು ಕೆದರಿದುರಿ ಕ
ರ್ಪುರಕೆ ಕವಿವಂದದಲಿ ಕರ್ಣನ
ಗುರುಸುತನ ಕುರುಪತಿಯ ದುಶ್ಶಾಸನನ ರಥಕಾಗಿ ೨೧

ಎಚ್ಚನವರವರೆಚ್ಚ ಬಾಣವ
ಕೊಚ್ಚಿದನು ಕೋಲಳವಿಗೊಡ್ಡಿದ
ನಿಚ್ಚಟರ ನೀಗಿದನು ತಾಗಿದನರಸು ಮೋಹರವ
ಹೆಚ್ಚಿ ವೀರಾವೇಶದಲಿ ಬಹ
ಬಿಚ್ಚುರಥಿಕರನಾಯ್ದು ಧೈರ‍್ಯದ
ಕೆಚ್ಚ ಮುರಿದನು ಕದಡಿದನು ರಿಪುಸುಭಟ ಸಾಗರವ ೨೨

ತುಡುಕುವಾನೆಯನೀಸಿನಲಿ ಖುರ
ವಿಡುವ ಕುದುರೆಯನೊತ್ತಿ ಹಾಯ್ಸುವ
ಬಿಡು ರಥವ ತಲೆವರಿಗೆಯಲಿ ತವಕಿಸುವ ಕಾಲಾಳ
ಕಡಿದನಂಬಿನೊಳಾ ಗಜವನಾ
ಕಡು ಹಯವನಾ ರಥವನಾ ವಂ
ಗಡದ ಕಾಲಾಳುಗಳನೊಂದು ವಿಘಳಿಗೆ ಮಾತ್ರದಲಿ ೨೩

ಮುಂದೆ ಸಬಳಿಗರೆಡ ಬಲದಲೋ
ರಂದದಲಿ ಬಿಲ್ಲಾಳು ದೊರೆಗಳ
ಮುಂದೆ ಹರಿಗೆಗಳೆರಡು ಬಾಹೆಯಲಾನೆ ಕುದುರೆಗಳು
ಸಂದಣಿಸಿದುದು ಮತ್ತೆ ಬೀಳುವ
ಮಂದಿಗದು ನೆರವಾಯ್ತು ನೆಗ್ಗಿದ
ನೊಂದು ಹಲಗೆಯಲೇರಿದವರನು ಭೂಪ ಕೇಳೆಂದ ೨೪

ಮುರಿದು ನೆಗ್ಗಿದ ರಥವ ಬರಿಕೈ
ಹರಿದು ಬೀಳುವ ಗಜವ ಘಾಯದ
ನೆರುವಣಿಗೆಯಲಿ ನೆಗ್ಗಿ ಮುಗ್ಗಿದ ಕುದುರೆ ಕಾಲಾಳ
ಅರಿಯೆನಭಿವರ್ಣಿಸಲು ಬಲ ಮು
ಕ್ಕುರಿಕಿಕೊಂಡುದು ಮೇಲೆ ಮೇಲ
ಳ್ಳಿರಿವ ಕಹಳೆಯ ಬಹಳ ಬಹುವಿಧ ವಾದ್ಯರಭಸದಲಿ ೨೫

ಸಿಕ್ಕಿದನು ಹಗೆ ಸ್ವಾಮಿದ್ರೋಹಿಯ
ಸೆಕ್ಕಿ ಸುರುಗಿಯೊಳಿವನ ಖಂಡವ
ನಿಕ್ಕುಳಿನೊಳೊಡೆಯವಚಿ ಕೊಯ್ ಸುಂಟಿಗೆಯ ತಿನ್ನೆನುತ
ಹೊಕ್ಕು ಹೊಯ್ದರು ರಥವನಳವಿಗೆ
ಮಿಕ್ಕು ಕೈ ಮಾಡಿದರು ಕಾಲ್ದುಳಿ
ಯೊಕ್ಕಿಲಲಿ ಬೇಸರಿಸಿದರು ಪವಮಾನ ನಂದನನ ೨೬

ನೆಲಕೆ ದೊಪ್ಪನೆ ಹಾಯ್ದು ಕೊಂಡನು
ಹಲಗೆ ಗದೆಯನು ಮೇಲುವಾಯ್ದ
ಪ್ಪಳಿಸಿದರೆ ಕುಪ್ಪಳಿಸಿತರಿಬಲ ಘಾಯ ಘಾಯದಲಿ
ತಲೆಗಳೊಟ್ಟಿಲ ಕರಿಗಳಟ್ಟೆಯ
ನೆಳೆವ ರಕುತದ ಹೊನಲ ಮುಂಡದ
ಲಳಿಯ ನಾಟ್ಯದಲೆಸೆದುದೈ ಬೀಭತ್ಸರೌದ್ರದಲಿ ೨೭

ಕರಿ ಕೆಡೆಯೆ ಕಾಲಿನಲಿ ಜೋದರು
ತೆರಳದೆಚ್ಚಾಡಿದರು ರಥಚಯ
ಮುರಿಯೆ ಕಾಲಿನಲೊದಗಿದರು ಸಮರಥ ಮಹಾರಥರು
ಹರಿಯೆ ಹಯ ರೂಢಿಯಲಿ ನಿಂದ
ಬ್ಬರಿಸಿದರು ರಾವುತರು ಭೀಮನ
ಬಿರುಗದೆಯ ಘಲ್ಲಣೆಗೆ ಚೆಲ್ಲಿತು ನಿಮ್ಮ ಪರಿವಾರ ೨೮

ರಾವುತರು ಕಡಿವಡೆಯೆ ಕಾಂಭೋ
ಜಾವಳಿಗಳೋಡಿದವು ಜೋದರ
ಜೀವ ಜಾಳಿಸೆ ಬೀದಿವರಿದವು ಗಜಘಟಾಳಿಗಳು
ತಾವು ನಿಬ್ಬರ ಗತಿಯ ರಥ ತುರ
ಗಾವಳಿಗಳೆಳೆದವು ರಥಂಗಳ
ನಾ ವಿಗಡ ವಿಗ್ರಹ ಮಹಾದ್ಭುತವರಸ ಕೇಳೆಂದ ೨೯

ಕೆಡೆದ ಝಲ್ಲರಿಗಳ ರಥಾಗ್ರದೊ
ಳುಡಿದ ಸಿಂಧದ ಮಕುಟ ಪದಕದ
ಖಡೆಯ ಸರಪಣಿ ತೋಳಬಂದಿಯ ವಜ್ರಮಾಣಿಕದ
ಕಡುಕು ಹೀರಾವಳಿಯ ಹಾರದ
ಕಡಿಯ ರಚನೆಯ ರಾಶಿ ಯಮನಂ ೩೦
ಗಡಿಯ ಪಸರವಿದೆನಲು ಮೆರೆದುದು ಕೂಡೆ ರಣಭೂಮಿ

ಕಡಿದ ಹಕ್ಕರಿಕೆಗಳ ಸೀಳಿದ
ದಡಿಯ ನೆಗ್ಗಿದ ಗುಳದ ರೆಂಚೆಯ
ಸಿಡಿದ ಸೀಸಕ ಬಾಹುರಕ್ಷೆಯ ಜೋಡು ಮೊಚ್ಚೆಯದ
ಉಡಿದ ಮಿಣಿ ಮೊಗರಂಬ ಗದ್ದುಗೆ
ಬಡಿಗೆಗಳ ಸೂತ್ರಿಕೆಯ ಕಬ್ಬಿಯ
ಕಡಿಯಣದ ಕುಸುರಿಗಳಲೆಸೆದುದು ಕೂಡೆ ರಣಭೂಮಿ ೩೧

ಮುರಿದ ದೂಹತ್ತಿಗಳ ನೆಗ್ಗಿದ
ಸುರಗಿಗಳ ಚಿನಕಡಿಯ ತೋಮರ
ಪರಶು ಸೆಲ್ಲೆಹ ಚಕ್ರ ಸಬಳ ಮುಸುಂಡಿ ಲೌಡೆಗಳ
ಹರಿದ ಹೊದೆಯಂಬುಡಿದ ಬಿಲ್ಲಿನ
ಬಿರಿದ ಬತ್ತಳಿಕೆಗಳ ಸೀಳಿದ
ಹರಿಗೆಗಳ ಹೇರಾಳದಲಿ ರಂಜಿಸಿತು ರಣಭೂಮಿ ೩೨

ಉರುಳ್ವ ತಲೆಗಳ ಕುಣಿವ ಮುಂಡದ
ಹೊರಳ್ವ ಕರಿಗಳ ಗದೆಯ ಹೊಯ್ಲಲಿ
ನರಳ್ವ ವೀರರ ಮಿದುಳ ಜೋರಿನ ಜೊಂಡೆ ಜೋಡಣೆಯ
ಅರಳ್ವ ಕಡಿನಾಳಿಕೆಯ ರಕುತಕೆ
ಮರಲ್ವ ಭೂತವ್ರಜದ ಝೋಂಪಿಸಿ
ಕೆರಳ್ವ ಭಟರಟ್ಟೆಗಳಲೆಸೆದುದು ಕೂಡೆ ರಣಭೂಮಿ ೩೩

ಅಲ್ಲಿ ಕರ್ಣನ ರಥದ ತೇಜಿಯ
ಘಲ್ಲಿಸಿದನಾ ಕ್ಷಣದೊಳಿಚ್ಚೆಯ
ಕೆಲ್ಲೆಯಲಿ ಕಾದಿದನು ಚಿಗಿದನು ಕೌರವನ ಹೊರೆಗೆ
ಅಲ್ಲಿ ಹೊಯ್ದು ಸುಶರ್ಮನವದಿರ
ಚೆಲ್ಲಬಡಿದನು ದಳದ ನಾಯಕ
ರೆಲ್ಲರಿಗೆ ಸವಿದೋರಿದನು ಬಲುಗದೆಯ ಹೊಯ್ಲುಗಳ ೩೪

ಇತ್ತಲಿತ್ತಲು ಭೀಮನೆಂದುರೆ
ಮುತ್ತಿ ಮುಸುಕಿತು ಸೇನೆ ಚಿಮ್ಮಿದ
ನತ್ತಲಾಚೆಯಲಲ್ಲಿ ದಳ ಘಾಡಿಸಿತು ವೇಢೆಯಲಿ
ಇತ್ತ ಹಾಯ್ದನು ಕೌರವನ ರಥ
ದತ್ತ ಚಿಗಿದನು ಗುರುಸುತಾದಿಗ
ಳತ್ತಲಲ್ಲಿಗೆ ಮೊಳಗಿದನು ಮೋದಿದನು ಪಟುಭಟರ ೩೫

ಕರಿಘಟೆಯ ಮರೆವೊಕ್ಕು ನಿಂದರು
ನರರು ತೇಜಿಗಳೋಡಿ ತೇರಿನ
ಮರೆಯ ಸಾರ್ದವು ತೇರು ಹಾಯ್ದವು ದೊರೆಯ ಹಿನ್ನೆಲೆಗೆ
ಕರಿಮುರಿದು ಕಾಲಾಳು ಕಾಲಾ
ಳ್ತೆರಳಿ ದೊರೆಗಳ ಹಿಂದೆ ದೊರೆ ಪೈ
ಸರಿಸಿತಲ್ಲಿಯದಲ್ಲಿ ಭೀಮನ ಹೊಯ್ಲ ಹೋರಟೆಗೆ ೩೬

ಪೂತು ಮಝ ರಿಪುರಾಯ ಮನ್ಮಥ
ಭೂತನಾಥ ವಿರೋಧಿಬಲ ಪುರು
ಹೂತ ರಾಯಘರಟ್ಟ ವೈರಿನಿಕಾಯ ಗಿರಿವಜ್ರ
ಏತಕೀ ಸೂಳೆಯರು ಕ್ಷತ್ರಿಯ
ಜಾತಿಯಲಿ ಜನಿಸಿದರು ಶಿವಶಿವ
ಪೂತು ಗಂಡಿಗನೆಂದು ಗರ್ಜಿಸಿತಖಿಳ ವಂದಿಜನ ೩೭