ಸೂ. ಮಡಿದರಾಹವದೊಳಗೆ ಕೌರ
ನೊಡನೆ ಹುಟ್ಟಿದರನಿಲಸುತನಿಂ
ದಡಿಗಡಿಗೆ ಹಳಚಿದನು ಯಮನಂದನನನಾ ಕರ್ಣ

ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳನಗ್ಗಳಿಕೆಯ ವಿಘಾತಿಯ
ಗಾಳಿ ತಾಗಿತು ತಿರುಗಿದುದು ಬಳಿಕೀ ಸಮಸ್ತಬಲ
ಕೋಲು ತಪ್ಪಿದ ಫಣಿಯವೊಲು ಲಯ
ಕಾಲಕೊದರುವ ಸಿಡಿಲವೊಲು ಹೀ
ಹಾಳಿಸುತ ತಮತಮಗೆ ಬಯ್ದುದು ಕೂಡೆ ಪರಿವಾರ ೧

ರಣದೊಳೊಪ್ಪಿಸಿಕೊಟ್ಟು ಕರ್ಣನ
ಹಣವ ಹೊಳ್ಳಿಸಿ ಮರೆದೆವೇ ಮ
ನ್ನಣೆಯ ಮೋಹವ ತೊರೆದೆವೇ ಕರ್ಪುರದ ವೀಳೆಯವ
ಗುಣ ಪಸಾಯದ ಕಾಣಿಕೆಯ ಹರಿ
ಯಣದ ಹಂತಿಯ ದಾಯದೂಟಕೆ
ಋಣಿಗಳಾದೆವೆ ಶಿವಶಿವಾ ಎಂದೊಳರಿತಖಿಳಬಲ ೨

ಮೀಸೆಯೇಕಿವ ಸುಡಲಿ ಸುಭಟರ
ವೇಷವೇಕಿವು ತಮ್ಮ ವಧುಗಳು
ಹೇಸಿ ನಮ್ಮನು ಬಿಸುಟು ಹೋಗಳೆ ಚಂಡಿಕಾದೇವಿ
ಭಾಷೆ ಬಾಯಲಿ ಕೈದು ಕೈಯಲಿ
ವಾಸಿಯನು ಬಿಸುಟಕಟ ಜೀವದ
ಲಾಸೆ ಮಾಡಿದೆವೆನುತ ಮರುಗಿತು ಕೂಡೆ ಪರಿವಾರ ೩

ಬಯ್ವ ಹೆಂಡಿರ ಚಿಂತೆಯಿಲ್ಲದೆ
ಹೊಯ್ವ ಕೀರ್ತಿಯ ಹಂಬಲಿಲ್ಲದೆ
ಒಯ್ವ ನರಕದ ನೆನಹದಿಲ್ಲದೆ ಪತಿಯ ಸಮಯದಲಿ
ಕಾಯ್ವರಾವಲ್ಲೆಂದು ಕೆಲದಲಿ
ಬಯ್ವರಿಗೆ ಮೈಗೊಟ್ಟು ಬದುಕುವ
ದೈವದೂರರು ನಾವೆನುತ ಮರುಗಿತ್ತು ಪರಿವಾರ ೪

ನುಡಿಯ ಭಂಡರು ಕೆಲರು ಸಿಂಧದ
ಗುಡಿಯ ಭಂಡರು ಕೆಲರು ಹಾಹೆಯ
ತೊಡರ ಭಂಡರು ಕೆಲರು ಕೆಲರು ಕುಲಕ್ರಮಾಗತದ
ಗಡಬಡೆಯ ಭಂಡರು ವಿಪತ್ತಿನೊ
ಳೊಡೆಯನಿರೆ ಕೈದುಗಳ ಹೊರೆತಲೆ
ಯೊಡನೆ ಬಿಟ್ಟಿಯ ಭಂಡರಾವೆಂದುದು ಭಟವ್ರಾತ ೫

ಮೀಸೆ ಸೀದವು ಭಟರ ಸುಯ್ಲಿನ
ಲಾಸೆ ಬೀತುದು ದೇಹದಲಿ ಬಲು
ವಾಸಿಯಲಿ ಮನ ಮುಳುಗಿತನಿಬರಿಗೇಕಮುಖವಾಗಿ
ಬೀಸಿದರು ಚೌರಿಗಳ ಬಲ ವಾ
ರಾಶಿ ಮಸಗಿತು ರಿಪುಗಳಸುವಿನ
ಮೀಸಲನು ತುಡುಕಿದುದು ಮನ ಕೌರವ ಮಹಾರಥರ ೬

ಕುದುರೆ ಕುದುರೆಯ ಮುಂಚಿದವು ಕರಿ
ಮದಕರಿಯ ಹಿಂದಿಕ್ಕಿದವು ನೂ
ಕಿದವು ರಥ ರಥದಿಂದ ಮುನ್ನ ಮಹಾರಥಾದಿಗಳು
ಇದಿರೊಳೊಬ್ಬನನೊಬ್ಬನೊದಗುವ
ಕದನ ಭರದ ಪದಾತಿ ಪೂರಾ
ಯದಲಿ ಕವಿದುದು ಜಡಿವ ಬಹುವಿಧವಾದ್ಯರಭಸದಲಿ ೭

ಪೂತು ಮಝ ದಳಪತಿಯ ಹರಿಬವ
ನಾತುದೇ ಕುರುಸೇನೆ ಸುಭಟ
ವ್ರಾತವಳವಿಗೆ ಬರಲಿ ಬರಲಿ ವಿಶೋಕ ನೋಡೆನುತ
ಹೂತ ಸಂಪಗೆವನವನಳಿಸಂ
ಘಾತ ಮುತ್ತಿ ದಡೇನೆನುತ ನಿ
ರ್ಭೀತನಿದ್ದನು ಭೀಮ ಸುಮ್ಮಾನದ ಸಘಾಡದಲಿ ೮

ಕವಿದುದಿದು ಗರಿಗಟ್ಟಿ ಕೌರವ
ನಿವಹ ಮೋಡಾಮೋಡಿಯಲಿ ರಣ
ದವಕಿ ಕರ್ಣದ್ರೋಹಿಯಾವೆಡೆ ತೋರು ತೋರೆನುತ
ತಿವಿವ ಬಲ್ಲೆಹದಿಡುವ ಚಕ್ರದ
ಕವಿವ ಬಾಣದ ಹೊಯ್ವ ಖಡ್ಗದ
ವಿವಿಧಬಲ ಬಿಡದೌಕಿ ಮುತ್ತಿತು ಪವನನಂದನನ ೯

ಸಿಕ್ಕಿದನು ರಿಪು ಸ್ವಾಮಿದ್ರೋಹನು
ಚುಕ್ಕಿಯೋ ತಡೆ ಹೋಗಬಿಡದಿರಿ
ಹೊಕ್ಕುಳಲಿ ಮಗವುಂಟೆ ಹಣೆಯಲಿ ನೋಟವೇ ಹಗೆಗೆ
ಹೊಕ್ಕುಹೊಯ್ ಹೊಯ್ ನೆತ್ತರೊಬ್ಬರಿ
ಗೊಕ್ಕುಡಿತೆಯೇ ಸಾಕೆನುತ ಬಲ
ಮುಕ್ಕುರುಕಿತನಿಲಜನ ಕಾಣೆನು ನಿಮಿಷಮಾತ್ರದಲಿ ೧೦

ಹರಿಬದೋಲೆಯಕಾರರೋ ಮು
ಕ್ಕುರುಕಿದರೊ ಪವನಜನು ಸಿಕ್ಕಿದ
ದೊರೆಯ ಬಿಡಿಸೋ ನೂಕೆನುತ ಪಾಂಚಾಲ ಕೈಕೆಯರು
ವರನಕುಳ ಸಹದೇವ ಸಾತ್ಯಕಿ
ತುರುಕ ಬರ್ಬರ ಭೋಟ ಮಾಗಧ
ಮರುಪುಳಿಂದಾದಿಗಳು ಕವಿದುದು ನೃಪನ ಸನ್ನೆಯಲಿ ೧೧

ಸರಕಟಿಸಿ ರಿಪುರಾಯದಳ ಸಂ
ವರಿಸಿಕೊಂಡುದು ಸಿಕ್ಕಿದಹಿತನ
ಸೆರೆಯ ಬಿಡದಿರಿ ಬಿಡದಿರಂಜದಿರಂಜದಿರಿ ಎನುತ
ಗುರುಜ ಕೃಪ ಕೃತವರ್ಮ ಯವನೇ
ಶ್ವರ ಕಳಿಂಗ ಕರೂಷ ಕೌರವ (೧೨
ರರಸ ಮೊದಲಾದಖಿಳ ಬಲ ಜೋಡಿಸಿತು ಝಡಿತೆಯಲಿ

ಏನ ಹೇಳುವೆನರಸ ಕರ್ಣನ
ಹಾನಿ ಹರಿಬದ ಬವರವನು ಪವ
ಮಾನನಂದನ ನಿಮಿಷದಲಿ ಮುಸುಕಿದನು ಬಾಣದಲಿ
ದಾನವರ ಥಟ್ಟಣೆಯ ಕೀಲಣ
ದಾ ನಗರಿಯನು ನೆಗ್ಗಿದಂತಿರ
ಲೀ ನಿಘಾತದ ಸೇನೆ ಮುರಿದುದು ಭಟನ ಭಾರಣೆಗೆ ೧೩

ಸಿಲುಕುವುವು ಮೃಗಪಕ್ಷಿ ಹೂಡಿದ
ಬಲೆಗಳಲಿ ಕಾಡಾನೆ ಬೀಸಿದ
ಬಲೆಯ ಕೊಂಬುದೆ ನಿನ್ನ ದಳ ಥಟ್ಟೈಸಿ ಮುತ್ತಿದರೆ
ಅಳುಕುವನೆ ಕಲಿ ಭೀಮನೆಡದಲಿ
ಕಲಕಿದನು ಬಲವಂಕದಲಿ ಕೈ
ವಳಿಸಿ ಕೊಂದನು ವರ ಪುರೋಭಾಗವ ವಿಭಾಡಿಸಿದ ೧೪

ಆಳ ಮೇಳೆಯ ಮುರಿದುದೀ ಸಾ
ಯಾಳು ಸತ್ತುದು ಹಲವು ಪಡಿಬಲ
ದಾಳು ಕೂಡದ ಮುನ್ನ ಕೊಂದನು ಕೋಟಿ ಸಂಖ್ಯೆಗಳ
ಮೇಲೆ ಮೇಲೊಡಗವಿವ ಸಮರಥ
ಜಾಲವನು ಮುರಿಯೆಚ್ಚು ನಿಮಿಷಕೆ
ಧೂಳಿಪಟ ಮಾಡಿದನು ಕರ್ಣನ ಮನ್ನಣೆಯ ಭಟರ ೧೫

ಮತ್ತೆ ಕವಿದುದು ಮೇಲೆ ಪಡಿಬಲ
ವೊತ್ತಿ ಹೊಕ್ಕುದು ಹೆಣದ ಬೆಟ್ಟವ
ಹತ್ತಿ ಹುಡಿ ಹುಡಿ ಮಾಡಿ ಹಿಡಿದರು ರಥದ ಕುದುರೆಗಳ
ಕುತ್ತಿದರು ಸಾರಥಿಯನಾತನ
ತೆತ್ತಿಸಿದರಿಟ್ಟಿಯಲಿ ಭೀಮನ
ಮುತ್ತಿ ಕೈಮಾಡಿದರು ರವಿಸುತ ಸಾಕಿದತಿಬಳರು ೧೬

ಇಳಿದು ರಥವನು ಗದೆಯ ಕೊಂಡ
ಪ್ಪಳಿಸಿದನು ಹೊರಕೈಯಲರೆದಿ
ಟ್ಟಳಿಸಿದರನೆಡಗಾಲಲೊದೆದನು ಹೊಯ್ದು ಮುಡುಹಿನಲಿ
ಕಲಕಿದನು ಕೌರವ ಮಹಾಬಲ
ಜಲಧಿಯನು ಸರ್ವಾಂಗ ಶೋಣಿತ
ಜಲದಲೆಸೆದನು ನನೆದ ಜಾಜಿನ ಗಿರಿಯವೊಲು ಭೀಮ ೧೭

ಸವರಿದನು ರವಿಸುತನ ಪರಿವಾ
ರವನು ಮಗುಳುಬ್ಬೆದ್ದ ಕೌರವ
ನಿವಹದಲಿ ಕಾದಿದನು ದುರ‍್ಯೋಧನ ಸಹೋದರರ
ತಿವಿದು ನಾಲ್ವರ ಕೊಂದನುಬ್ಬರಿ
ಸುವರ ಗರ‍್ವವ ಮುರಿದು ಪ್ರಳಯದ
ಭವನ ರೌದ್ರದವೋಲು ಭುಲ್ಲಯಿಸಿದನು ಕಲಿಭೀಮ ೧೮

ಶಿವಶಿವಾ ಕೌರವನ ತಮ್ಮದಿ
ರವಗಡಿಸಿದರು ನಂದೋಪನಂದರು
ಜವಗೆ ಜೇವಣಿಯಾದರೇ ಕಲಿ ಭೀಮನಿದಿರಿನಲಿ
ತಿವಿವರಿನ್ನಾರೆನುತ ಗುರುಸಂ
ಭವ ಕೃಪಾದಿಗಳೊತ್ತಿ ನಡೆತಹ
ರವವ ಕೇಳಿದು ಕುದಿದನವಮಾನದಲಿ ಕಲಿಕರ್ಣ ೧೯

ಪೂತು ದೈವವೆ ಭೀಮಸೇನನ
ಘಾತಿಯಲಿ ಸೊಪ್ಪಾದೆನೈ ಸುಡ
ಲೇತಕೀ ಧನುವೇತಕೀ ದಿವ್ಯಾಸ್ತ್ರ ನಿಕರಗಳು
ಜಾತಿ ನಾನೆಂದೆನ್ನನಗ್ಗಿಸಿ
ಭೂತಳಾಧಿಪ ಸಾಕಿದನು ತಾ
ನೇತರಿಂದುಪಕಾರಿ ಎಂದನು ಸುಯ್ದು ಕಲಿಕರ್ಣ ೨೦

ಎಲೆ ಮರುಳೆ ರಾಧೇಯ ಫಡ ಮನ
ವಿಳುಹದಿರು ತಪ್ಪೇನು ಸೋಲವು
ಗೆಲವು ದೈವಾಧೀನ ನಿನ್ನಾಳ್ತನಕೆ ಕುಂದೇನು
ಹಲಬರಮರಾಸುರರೊಳಗೆ ಹೆ
ಬ್ಬಲವೆ ದುರ್ಬಲವಾಯ್ತು ನೀ ಮನ
ವಳುಕದಿರು ಹಿಡಿ ಧನುವನನುವಾಗೆಂದನಾ ಶಲ್ಯ ೨೧

ಖಾತಿ ಮೊಳೆತುದು ಮತ್ತೆ ಬಲ ಸಂ
ಘಾತಕಭಯವನಿತ್ತು ಬಾಣ
ವ್ರಾತವನು ಹೊದೆಗೆದರಿ ಹೊಸ ಹೊಗರೆದ್ದನಡಿಗಡಿಗೆ
ಭೂತನಾಥನ ಮರೆಯ ಹೊಗಲಿ ಮ
ಹೀತಳೇಶನ ಹಿಡಿವೆನೆನುತ ವಿ
ಧೂತ ರಿಪುಬಲ ರಥವ ಬಿಟ್ಟನು ಧರ್ಮಜನ ಹೊರೆಗೆ ೨೨

ಕಾಲಯಮನೋ ಕರ್ಣನೋ ಭೂ
ಪಾಲಕನ ಬೆಂಬತ್ತಿದನು ಪಾಂ
ಚಾಲೆಯೋಲೆಯ ಕಾವರಿಲ್ಲಾ ಎನುತ ಬಲನೊದರೆ
ಕೇಳಿದನು ಕಳವಳವನೀ ರಿಪು
ಜಾಲವನು ಜರೆದಡ್ಡಹಾಯ್ದನು
ಗಾಳಿಗುದಿಸಿದ ವೀರನದ್ಭುತ ಸಿಂಹನಾದದಲಿ ೨೩

ಮತ್ತೆ ಕರ್ಣನ ಭೀಮನಾಹವ
ಹೊತ್ತಿದುದು ಹಿಂದಾದ ಹೆಕ್ಕಳ
ಹತ್ತು ಸಾವಿರ ಹಡೆಯದೇ ಫಡ ನೂಕು ನೂಕೆನುತ
ಮತ್ತೆ ಗಜಘಟೆಯಾರು ಸಾವಿರ
ಮುತ್ತಿದವು ಸೌಬಲನ ಥಟ್ಟಿನೊ
ಳೊತ್ತಿಬಿಟ್ಟವು ನಾಲ್ಕು ಸಾವಿರ ಕುದುರೆ ರಥಸಹಿತ ೨೪

ಸಂದಣಿಸಿ ದಳ ನೂಕಿಕೊಂಡೈ
ತಂದುದಿದು ರವಿಸುತನ ತೊಲಗಿಸಿ
ಮುಂದೆ ಮೋಹರದೆಗೆದು ಮೂದಲಿಸಿತು ಮರುತ್ಸುತನ
ಬಂದುದೇ ಕರ್ಣಂಗೆ ಪಡಿಬಲ
ತಂದುದೇ ನಮಗೊಸಗೆಯನು ಲೇ
ಸೆಂದು ಸುಭಟರ ದೇವ ಸುಮ್ಮಾನದಲಿ ಲಾಗಿಸಿದ ೨೫

ದಳದೊಳಗೆ ದಳವುಳಿಸಿದನು ಕೆಲ
ಬಲನನೆಚ್ಚನು ಕೇಣವಿಲ್ಲದೆ
ನಿಲುಕಿದರಿಗಳು ಚಿಗಿದರಮರೀಜನದ ತೋಳಿನಲಿ
ತಲೆಗಳೊಟ್ಟಿಲ ತೋಳ ಕಡಿಗಳ
ತಳಿದ ಖಂಡದ ಕುಣಿವ ಮುಂಡದ
ಸುಳಿಯ ರಕುತದ ಕಡಲ ರೌಕುಳವಾಯ್ತು ನಿಮಿಷದಲಿ ೨೬

ಬಿಟ್ಟ ಸೂಠಿಯೊಳೊಗ್ಗು ಮುರಿಯದೆ
ಬಿಟ್ಟ ಕುದುರೆಯ ದಳವ ಕೊಂದನು
ಬೆಟ್ಟವನು ಬಲವೈರಿ ತರಿವವೊಲಿಭದ ಮೋಹರವ
ಥಟ್ಟು ಗೆಡಹಿದನುರವಣಿಸಿ ಸಾ
ಲಿಟ್ಟು ರಥವಾಜಿಗಳ ನೆರೆ ಹುಡಿ
ಗುಟ್ಟಿದನು ಕಾಲಾಳ ಘಾಸಿಯನರಿಯೆ ನಾನೆಂದ ೨೭

ಮುರಿಯೆ ಪಡಿಬಲವಾಕೆಯಲಿ ಬಿಡೆ
ಜರೆದು ಬಿಟ್ಟನು ರಥವ ಭೀಮನ
ಬಿರುಬ ಕೊಳ್ಳದೆ ನೂಕಿದನು ಧರ್ಮಜನ ಸಮ್ಮುಖಕೆ
ಇರಿತಕಂಜದಿರಂಜದಿರು ಕೈ
ಮರೆಯದಿರು ಕಲಿಯಾಗೆನುತ ಬೊ
ಬ್ಬಿರಿದು ಧಾಳಾಧೂಳಿಯಲಿ ತಾಗಿದನು ಕಲಿಕರ್ಣ ೨೮

ಎಚ್ಚನರಸನ ಭುಜವ ಕೆಲ ಸಾ
ರ್ದೆಚ್ಚನಾತನ ಸಾರಥಿಯ ರಥ
ದಚ್ಚನಾತನ ಹಯವನವನೀಪತಿಯ ಟೆಕ್ಕೆಯವ
ಎಚ್ಚು ಮೂದಲಿಸಿದನು ಪುನರಪಿ
ಯೆಚ್ಚು ಭಂಗಿಸಿ ನೃಪನ ಮರ್ಮವ
ಚುಚ್ಚಿ ನುಡಿದನು ಘಾಸಿ ಮಾಡಿದನಾ ನೃಪಾಲಕನ ೨೯

ಚೆಲ್ಲಿತವನೀಪತಿಯ ಮೋಹರ
ವೆಲ್ಲ ನೆರೆ ನುಗ್ಗಾಯ್ತು ರಾಯನ
ಘಲ್ಲಿಸಿದನೇಳೆಂಟು ಬಾಣದಲೀತನಡಿಗಡಿಗೆ
ಅಲ್ಲಿಯದುಭುತ ರಣವನಪ್ರತಿ
ಮಲ್ಲ ಮಾರುತಿ ಕೇಳಿದನು ಮಗು
ಳಲ್ಲಿಯೇ ಮೊಳಗಿದನು ನಿಮಿಷಕೆ ಕರ್ಣನಿದಿರಿನಲಿ ೩೦

ಅಳಲಿಸಿದನೇ ಧರ್ಮಪುತ್ರನ
ಬಳಿಚಿ ಬಿಟ್ಟೆನು ನಾಯ ಕೊಲ್ಲದೆ
ಕಳುಹಿದರೆ ಬೆಂಬಿಡನಲಾ ಮರುಕೊಳಿಸಿ ಮರುಕೊಳಿಸಿ
ತಲೆ ಕೊರಳ ಸಂಪ್ರತಿಗೆ ಭೇದವ
ಬಳಸಿದರೆ ಸಾಕೈಸಲೇ ಎನು
ತುಲಿದು ಕಣೆಗಳ ಕೆದರಿ ಕರ್ಣನ ತರುಬಿದನು ಭೀಮ ೩೧

ಭೀಮಸೇನನ ದಳಪತಿಯ ಸಂ
ಗ್ರಾಮ ಮಸೆದುದು ಮತ್ತೆ ಕೈಕೊಳ
ಲೀ ಮಹಾರಥರೆನುತ ಕೈಬೀಸಿದನು ಕುರುರಾಯ
ಸೋಮದತ್ತನ ಸೂನು ಕೃಪನು
ದ್ದಾಮ ಶಕುನಿ ಸುಯೋಧನಾನುಜ
ನಾ ಮಹಾಹವಕೊದಗಿದರು ಕೃತವರ್ಮ ಗುರುಸುತರು ೩೨

ಅಖಿಳ ಬಲಭಾರಣೆಯಲೊಂದೇ
ಮುಖದಲೊಡ್ಡಿತು ಪವನಜನ ಸಂ
ಮುಖದೊಳನಿಬರು ಕೆಣಕಿದರು ಕಲ್ಪಾಂತಭೈರವನ
ಸುಖಿಗಳಕಟಾ ನೀವು ಸಮರೋ
ನ್ಮುಖರಹರೆ ಕರ್ಣಂಗೆ ಸಾವಿನ
ಸಖಿಗಳೇ ಲೇಸೆನುತ ಕೈಕೊಂಡೆಚ್ಚನಾ ಭೀಮ ೩೩

ಗುರುಸುತನನೈವತ್ತು ಬಾಣದ
ಲರಸನನುಜರ ಕೃಪನ ಕೃತವ
ರ್ಮರನು ಮೂನೂರಂಬಿನಲಿ ವೃಷಸೇನ ಸೌಬಲರ
ಸರಳು ಮೂವತ್ತರಲಿ ಪುನರಪಿ
ಗುರುಸುತಾದಿ ಮಹಾರಥರನೆರ (೩೪
ಡೆರಡರಲಿ ಮುರಿಯೆಚ್ಚು ವಿಮುಖರ ಮಾಡಿದನು ಭೀಮ

ಮತ್ತೆ ಜೋಡಿಸಿ ಕೌರವೇಂದ್ರನ
ನೊತ್ತಲಿಕ್ಕಿ ಮಹಾರಥರು ರಿಪು
ಮತ್ತದಂತಿಯ ಕೆಣಕಿದರು ಕೆದರಿದರು ಮಾರ್ಗಣವ
ಎತ್ತಲವನೀಪತಿಯ ಮೋಹರ
ವತ್ತ ಮೆಲ್ಲನೆ ರಥವ ಬಿಟ್ಟನು
ಮತ್ತೆ ಮೂದಲಿಸಿದನು ಯಮಸೂನುವನು ಕಲಿಕರ್ಣ ೩೫

ದ್ರೋಣ ಬರಸಿದ ಭಾಷೆಯೆಂದೇ
ಕ್ಷೋಣಿಪತಿ ಬಗೆಯದಿರು ತನ್ನನು
ವಾಣಿಯದ ವಿವರದಲಿ ಸಲಹನು ಕೌರವರ ರಾಯ
ಪ್ರಾಣದಾಸೆಯ ಮರೆದು ತನ್ನೊಳು
ಕೇಣವಿಲ್ಲದೆ ಕಾದೆನುತ ನಿ
ತ್ರಾಣನನು ನಿಬ್ಬರದ ನುಡಿಗಳಲಿರಿದನಾ ಕರ್ಣ ೩೬

ಬಿಡನು ರಾಯನ ಬೆನ್ನನೀತನ
ಕೆಡಹಿ ರಕುತವ ಕುಡಿಯೆನುತ ಬಲ
ನೆಡಳಿಟ್ಟಣಿಸಿದರು ಸಾತ್ಯಕಿ ನಕುಳ ಸಹದೇವ
ತುಡುಕಿದರು ಪಾಂಚಾಲ ಮತ್ಸ್ಯರ
ಗಡಣ ಕೈಕೆಯ ಪಂಚ ಪಾಂಡವ
ರಡಸಿದರು ಹೊದಿಸಿದರು ಕಣೆಯಲಿ ರವಿಸುತನ ರಥವ ೩೭

ಇನಿಬರೊಂದೇ ಸೂಠಿಯಲಿ ಮುಂ
ಮೊನೆಯ ಬೋಳೆಯ ಸುರಿದರಡಿಗಡಿ
ಗಿನಿಬರಂಬನು ಮುರಿದು ತರಿದನು ಸೂತ ವಾಜಿಗಳ
ತನತನಗೆ ಹೊಸ ರಥದೊಳೊಂದೆ
ಗ್ಗಿನಲಿ ಕವಿದೆಚ್ಚರು ಮಹಾಹವ
ವೆನಗೆ ಬಣ್ಣಿಸಲರಿದು ಧರಣೀಪಾಲ ಕೇಳೆಂದ ೩೮

ಭಟರು ಮುತ್ತಿದರಿನಸುತನ ಲಟ
ಕಟಿಸಲೆಚ್ಚರು ಶಿವ ಶಿವಾ ನಿ
ಚ್ಚಟದ ನಿಬ್ಬರದಂಘವಣೆ ಮಝ ಪೂತು ಲೇಸೆನುತ
ನಿಟಿಲನೇತ್ರನ ನಯನಶಿಖಿಯು
ಬ್ಬಟೆಗೆ ಸಮ ಜೋಡಿಸಿತು ಕರ್ಣನ
ಚಟುಳ ವಿಕ್ರಮಪವನಪರಿಗತ ಬಾಣಶಿಖಿನಿಕರ ೩೯

ನಕುಳನನು ನೋಯಿಸಿದ ಸಹದೇ
ವಕನ ಘಾಯಂಬಡಿಸಿದನು ಸಾ
ತ್ಯಕಿಯ ಮಸೆಗಾಣಿಸಿದನಾ ಪಾಂಚಾಲ ಕೈಕೆಯರ
ವಿಕಳಗೊಳಿಸಿದನಾ ಮಹಾರಥ
ನಿಕರ ಸೈರಿಸಿ ಮತ್ತೆ ಮೇಳಾ
ಪಕದಲಂಘೈಸಿದರು ತಡೆದರು ಭಾನುನಂದನನ ೪೦

ಹೇಳಲರಿಯೆನು ನಿನ್ನವನ ಕ
ಟ್ಟಾಳುತನವನು ದೇವ ದೈತ್ಯರ
ಕಾಳೆಗದಲಿವನಂತೆ ಬಲ್ಲಿದರಿಲ್ಲ ಬಿಲ್ಲಿನಲಿ
ಆಳ ಮುರಿದನು ಹೂಣೆ ಹೊಗುವ
ಬ್ಬಾಳುಗಳ ಬಲು ದೇಹದಂಬಿನ
ಕೀಲಣದ ಕಾಳಾಸದಿರಿತವ ಮೆರೆದನಾ ಕರ್ಣ ೪೧

ಸರಳ ಹತಿಯಲಿ ನಕುಲ ಸಾತ್ಯಕಿ
ಬಿರುದ ಸಹದೇವಾದಿ ವೀರರು
ಪಿರಿದು ನೊಂದರು ಮತ್ತೆ ತರುಬಿದನವನಿಪಾಲಕನ
ಅರಸ ಹಿಡಿಹಿಡಿ ಧನುವನಿನ್ನೆರ
ಡರಸನಾನದು ಧರಣಿಯೊಬ್ಬನ
ಶಿರದ ಬರಹವ ತೊಡೆವೆನಿದೆಯೆಂದೆನುತ ತೆಗೆದೆಚ್ಚ. ೪೨

ಅಕಟಕಟ ರಾಧೇಯ ಕೇಳೀ
ನಕುಳನೀ ಸಹದೇವನೀ ಸಾ
ತ್ಯಕಿ ನರೇಶ್ವರರೆನಿಸುವೀ ಕುಂತೀಕುಮಾರಕರು
ಅಕುಟಿಲರು ನಯಕೋವಿದರು ಧಾ
ರ್ಮಿಕರ ಕೊಲಬೇಡಿವರನತಿ ಬಾ
ಧಕರು ಭೀಮಾರ್ಜುನರ ಸಂಹರಿಸೆಂದನಾ ಶಲ್ಯ ೪೩

ಮುಳಿದು ಕಬ್ಬಿನ ತೋಟದಲಿ ನರಿ
ಹುಲಿಯುವೋಲ್ ಗರ್ಜಿಸಿತು ಗಡ ಹೆ
ಕ್ಕಳದ ಹೇರಾಳದಲಿ ಹೆಣಗಿದೆ ಬಾಲವೃದ್ಧರಲಿ
ಬಲುಹು ನಿನಗುಂಟಾದಡಿತ್ತಲು
ಫಲುಗುಣನ ಕೂಡಾಡು ನಡೆ ಮರು
ವಲಗೆಯನು ಭೀಮನಲ್ಲಿ ಬೇಡಿನ್ನೆಂದನಾ ಶಲ್ಯ ೪೪

ಎನಲು ಕಿಡಿಕಿಡಿವೋಗಿ ಭೀಮಾ
ರ್ಜುನರ ತೋರಾದರೆ ಎನುತ ನಿಜ
ಧನುವ ಮಿಡಿದಬ್ಬರಿಸಲಿತ್ತಲು ರಾಯದಳದೊಳಗೆ
ಅನಿಲಜನ ಕಾಲಾಟ ಕದಳೀ
ವನದ ಕಾಡಾನೆಯ ಮೃಗಾಳಿಯ
ವನಚರರ ದೆಖ್ಖಾಳದಬ್ಬರ ಕಾಣಲಾಯ್ತೆಂದ ೪೫

ಮಂಡಳಿಸಿ ಬಲಜಲಧಿ ಸುಳಿ ಸುಳಿ
ಗೊಂಡು ಸಿಕ್ಕಿದ ಕೌರವೇಂದ್ರನ
ಕೊಂಡು ಹಿಂಗುವ ಜೋಕೆ ನೂಕದೆ ಡಗೆಯ ಡಾವರದ
ಗಂಡುಗುಂದಿನ ಬೀತ ಬಿರುದಿನ
ತೊಂಡುಗೇಡಿನ ಯಜದ ಜಾರಿನ
ಖಂಡ ಶೌರ‍್ಯದ ಧೀರರಿದ್ದುದು ನೃಪನ ಬಳಸಿನಲಿ ೪೬

ವಾಯದಲಿ ಕೌರವನ ವಿಜಯ
ಶ್ರೀಯ ಸೆರೆವೋಯಿತ್ತು ಶಿವ ಶಿವ
ಕಾಯಲಾಪವರಿಲ್ಲಲಾ ಗುರುಸೂನು ಮೊದಲಾದ
ನಾಯಕರು ಸುಪಲಾಯನದ ನಿ
ರ್ಣಾಯಕರು ಮಝ ಪೂತುರೆಂದುದು ನಿಖಿಳ ಪರಿವಾರ ೪೭

ಕೇಳಿದನು ಕಳವಳವ ಕಿವಿಗೊ
ಟ್ಟಾಲಿಸಿದನೆಲೆ ಕರ್ಣ ಕರ್ಣ ಛ
ಡಾಳ ರವವೇನದು ಸುಯೋಧನ ಸೈನ್ಯ ಮಧ್ಯದಲಿ
ಖೂಳ ಬಿಡಿಸಾ ಭೀಮಸೇನನ
ತೋಳುವಲೆಯಲಿ ಸಿಕ್ಕಿದನು ಭೂ
ಪಾಲನಕಟಕಟೆನುತ ತೇಜಿಯ ತಿರುಹಿದನು ಶಲ್ಯ ೪೮