ವಿಜಯನಗರ ಸಾಮ್ರಾಜ್ಯ (ಕ್ರಿ.ಶ. ೧೩೩೬೧೫೬೫)

ಬೃಹತ್ ಕಾರ್ಯಗಳ ಯುಗ : ಬ್ರಿಟಿಷ್ ಯುಗಕ್ಕೆ ಮೊದಲು ಕರ್ನಾಟಕವು ಸೇರಿದಂತೆ ದಕ್ಷಿಣ ಭಾರತದಲ್ಲಿನ ನೀರಾವರಿಯ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯ ಇನ್ನೊಂದು ದೊಡ್ಡ ಹೆಜ್ಜೆ. ಕೆಲವು ಬೃಹತ್ ಯೋಜನೆಗಳ ನಿರ್ಮಾಣ ಈ ಮುನ್ನಡೆಯ ಲಕ್ಷಣ. ದಕ್ಷಿಣ ಭಾರತದ ಇತಿಹಾಸದಲ್ಲಿ ಆ ವರೆಗೆ ಇದ್ದ ಅತಿದೊಡ್ಡ ಯೋಜನೆಗಳು ಕಾವೇರಿ ಮುಖಜಭೂಮಿ ಯೋಜನೆ ಹಾಗೂ ಸೊಳೆಕೆರೆ. ಈ ಎರಡನೆಯದಕ್ಕೆ ಈಗಿನ ಹೆಸರು ಶಾಂತಿಸಾಗರ. ಅದನ್ನು ಅನುಬಂಧ – ೨ರಲ್ಲಿ ವಿವರಿಸಲಾಗಿದೆ. ಅದರ ಸುತ್ತಳತೆ ೪೦ ಮೈಲು. ೩೬೦ ಮೈಲು ಸುತ್ತಳತೆ ಇದ್ದ ಭೊಜಪುರ ಕೆರೆಯನ್ನು ಬಿಟ್ಟರೆ ಪ್ರಾಯಶಃ ಈ ಕೆರೆಯೇ ಭಾರತದಲ್ಲಿ ಆ ಮಾದರಿಯ ಅತಿ ದೊಡ್ಡ ಕೆರೆ. ಭೊಜಪುರ ಕೆರೆ ಈಗ ಇಲ್ಲ. ವಿಜಯನಗರದ ಚಕ್ರವರ್ತಿಗಳು ಮದಗ – ಮಾಸೂರು, ಪೊರುಮಾಮಿಲ್ಲ. ಕಂಬಂ ಹಾಗೂ ವ್ಯಾಸಸಮುದ್ರಗಳಂಥ ಬೃಹದಾಕಾರದ ಜಲಾಶಯಗಳನ್ನು ನಿರ್ಮಿಸಿದರು. ಇವೆಲ್ಲವು ಈಗಲೂ ಜನರಿಗೆ ಸೇವೆ ಸಲ್ಲಿಸುತ್ತಿವೆ. ಇದಲ್ಲದೆ ಅವರು ಬಳ್ಳಾರಿ, ರಾಯಚೂರು ಹಾಗೂ ಮೈಸೂರು ಜಿಲ್ಲೆಗಳಲ್ಲಿ ತುಂಗಭದ್ರಾ ಮತ್ತು ಕಾವೇರಿ ನದಿಗಳಿಗೆ ಅಣೆಕಟ್ಟುಗಳನ್ನು ಕಟ್ಟಿಸಿದರು. ಕೆಲವು ಅಣೆಗಳು ಕಲ್ಪನಾಕೌಶಲದ ನಿರ್ಮಾಣಗಳು. ಇಂದಿಗೂ ಐದಾರು ನೂರು ವರ್ಷಗಳ ನಂತರವು ಸುಸ್ಥಿತಿಯಲ್ಲಿವೆ. ಕೊನೆಯ ವರೆಗೂ ಅಂದರೆ ಕ್ರಿ.ಶ. ೧೫೬೫ ರಲ್ಲಿ ತಾಳಿಕೋಟೆ ಅಥವಾ ರಕ್ಕಸತಂಗಡಿಯ ಯುದ್ಧದಲ್ಲಿ ವಿಜಯನಗರ ಸೋಲುವ ವರೆಗೂ ರಾಜಧಾನಿಯೂ ರಾಜ್ಯವೂ ಉಚ್ಚ್ರಾಯ ಸ್ಥಿತಿಯಲ್ಲಿದ್ದವು.

ವಿಜಯನಗರ ದಕ್ಷಿಣ ಭಾರತದ ಇತಿಹಾಸದಲ್ಲೆ ಅತ್ಯಂತ ವಿಶಾಲವಾದ ಸಾಮ್ರಾಜ್ಯವಾಗಿತ್ತು. ಅದರ ಸಂಪನ್ಮೂಲಗಳು ವಿಪುಲವಾಗಿದ್ದವು. ಭಾರಿ ಜಲಾಶಯಗಳ ಹಾಗೂ ಅಣೆಕಟ್ಟುಗಳ ನಿರ್ಮಾಣದಲ್ಲಿ ವಿಜಯನಗರದ ಅರಸರು ಪಡೆದ ಬಹುಪಾಲು ಯಶಸ್ಸಿಗೆ ಇದೇಕಾರಣ. ಜೊತೆಗೆ, ಮೊದಲನೆಯ ಬುಕ್ಕ ಹಾಗೂ ಕೃಷ್ಣದೇವರಾಯರಂಥ ದೊರೆಗಳು, ಅವರ ಅನೇಕ ಅಧಿಕಾರಿಗಳು, ಶಿಲ್ಪಿಗಳು ಸಹ ತಮ್ಮ ಪ್ರಜೆಗಳ ಹಿತಕ್ಕಾಗಿ ಅಂಥ ಕಾರ್ಯಗಳಲ್ಲಿ ವೈಯಕ್ತಿಕ ಆಸಕ್ತಿ ವಹಿಸಿದ್ದು ಒಂದು ಕಾರಣ. ಆ ಯೋಜನೆಗಳ ವೆಚ್ಚದ ಬಗ್ಗೆ ನ್ಯೂನಿಜ್ ಹೇಳುತ್ತಾನೆ. ತುಂಗಭದ್ರ ಅಣೇಕಟ್ಟಿನ(ತುರುತ್ತು ಅಣೆಕಟ್ಟಿ) ನಿರ್ಮಾಣ ವೆಚ್ಚದಿಂದಾಗಿ ಮೊದಲನೆಯ ಬುಕ್ಕರಾಯನ ಖಜಾನೆಯ ಬರಿದಾಗಿಯೋಯಿತು ಎಂದು. ವಿಜಯನಗರ ಪಟ್ಟಣಕ್ಕೆ ನೀರು ಸರಬಾರಾಜು ಹಾಗೂ ಸುತ್ತಮುತ್ತಲಿನ ಭೂಮಿಗೆ ನೀರಾವರಿ ಆಗುತ್ತಿದ್ದುದು ಅದರಿಂದಲೇ.

ಅದೇ ಕಾಲದ ಇನ್ನೊಂದು ಕೃತಿ ರಫಿಯುದ್ದಿನ್ ಶಿರಾಜನ “ಬಿಜಾಪುರದ ಇತಿಹಾಸ.”[1] ಅದರಲ್ಲಿ ಹೇಳೀದೆ. “ಕೃಷ್ಣದೇವರಾಯ ಆರಂಭಿಸಿದ್ದ ಕಾಲುವೆ ಕೆಲಸವನ್ನು ರಾಮರಾಯ ಪೂರ್ಣಮಾಡಿದ. ಸಾಮ್ರಾಜ್ಯ ಅಸಾಮಾನ್ಯವಾಗಿ ಸಂಪದ್ಭರಿತವಾಯಿತು, ಸುಖಮಯವಾಯಿತು. ನಗರಕ್ಕೆ ನದಿಯಿಂದ ಹೇರಳವಾಗಿ ನೀರು ಒದಗುತ್ತಿತ್ತು. ನಗರದಲ್ಲಿ ೭೦ ದೊಡ್ಡ ನಾಲೆಗಳು ಹರಿಯುತ್ತಿದ್ದವು. ಪ್ರತಿಯೊಬ್ಬ ಅಧಿಕಾರಿಗೂ ವಿಸ್ತಾರವಾದ ತೋಟ ಇತ್ತು. ಅಲ್ಲಿ ಬೇಕಾದಷ್ಟು ನಾನಾ ಬಗೆಯ ಹಣ್ಣು ಬೆಳೆಯುತ್ತಿದ್ದವು”. ಈ ಎಲ್ಲ ಯೋಜನೆಗಳಿಗೂ ಜನಸಾಮಾನ್ಯರ ಹಿತ ಅದೇ ಕಾಲಕ್ಕೆ ರಾಜ್ಯದ ಕೋಶವೃದ್ಧಿ – ಈ ಎರಡೂ ಉದ್ದೇಶಗಳು ಇದ್ದುದರಲ್ಲಿ ಸಂದೇಹವಿಲ್ಲ.

ಹದಿನಾಲ್ಕನೆಯ ಶತಮಾನ : ಭಾರಿ ಯೋಜನೆಗಳ ಯುಕ್ತಾಯುಕ್ತತೆಯನ್ನು ವಿಮರ್ಶಿಸಿದ ನಂತರ ಹಾಗೂ ಅವುಗಳ ರಚನೆಯ ವಿವರಗಳನ್ನು ಮುಂದಿನ ಒಂದು ಅಧ್ಯಾಯಕ್ಕೆ ಮೀಸಲಿಟ್ಟು ನಾವೀಗ ಕೆಲವು ನೀರಾವರಿ ಯೋಜನೆಗಳನ್ನು ಗಮನಿಸಿ ಕಾಲಾನುಸಾರವಾಗಿ ಪರಿಶೀಲಿಸೋಣ. ಆ ಯೋಜನೆ, ಯೋಜನೆಗಳನ್ನು ದೊರೆಗಳು ಅಧಿಕಾರಿಗಳು ಹಾಗೂ ಸಾಮಾನ್ಯ ಜನರೂ ಕಟ್ಟಿದರು. ಅತಿಪ್ರಾಚೀನವಾದವುಗಳಲ್ಲಿ ಒಂದು ಹಾಸನ ಜಿಲ್ಲೆಯ ಹಿರಿಯ ಗಂಡಸಿಯಲ್ಲಿ ಒಂದನೆಯ ಹರಿಹರನ ಅಧಿಕಾರಿ ಬಾಯಣ್ಣ ಎಂಬಾತ ಕಟ್ಟಿಸಿದ ಮಂಗಸಮುದ್ರ.[2] ಅದನ್ನು ಆತ ತನ್ನ ತಾಯಿಯ ಹೆಸರಿನಲ್ಲಿ ಕಟ್ಟಿಸಿದ್ದ. ಅದಕ್ಕೆ ಒಂದು ಕೋಡಿಕಟ್ಟೆ, ಒಂದು ಉಪನಾಲೆ ಇದ್ದವು. ಅಂಥ ಸಂದರ್ಭಗಳಿಗೆ ಸಾಮಾನ್ಯವಾಗಿ ಇರುವಂತೆ ಆತ ಅಲ್ಲಿ “ಹಳೆಯ ಕೆರೆಗೆ ಬರುವ ನಾಲೆಯ ರಕ್ಷಣೆಗಾಗಿ” ಹನುಮಂತನ ಗುಡಿಯನ್ನು ಕಟ್ಟಿಸಿದ.

ಮುಂದಿನ ಉದಾಹರಣೆಯೂ ಒಂದನೆಯ ಹರಿಹರನ ಕಾಲದ್ದೇ. ಅದು ಹಾಸನ ಜಿಲ್ಲೆಯ ಚಂಗನಾಡಿಗೆ ಸಂಬಂಧಿಸಿದ್ದು. ಆಗ ಅದು ರಾಜಕುಮಾರ ಬುಕ್ಕಣ್ಣ ಒಡೆಯನ ಆಳ್ವಿಕೆಯಲ್ಲಿತ್ತು. ಮಹಾ ವಡ್ಡವ್ಯವಹಾರಿ ಮಹಾದೇವಣ್ಣ ದೊರೆಯ ಅನುಮತಿ ಪಡೆದು ಲಕ್ಷ್ಮೀಪುರ ಎಂಬ ಒಂದು ಅಗ್ರಹಾರವನ್ನೂ ಒಂದು ಕೆರೆಯನ್ನೂ ಸ್ಥಾಪಿಸಿದ – ಎಂದು ಕ್ರಿ.ಶ ೧೩೫೭ರ ರುದ್ರಪಟ್ಟಣದ ಒಂದು ಶಾಸನ[3] (ಅರಕಲಗೂಡು ತಾಲ್ಲೂಕು) ತಿಳಿಸುತ್ತದೆ. ಆ ಕೆರೆಯಿಂದ ಹೊರಟ ರಾಜಕಾಲುವೆ ಚಂಗನಾಡಿನ ಹಲವಾರು ಹಳ್ಳಿಗಳ ಮೂಲಕ ಹಾಯುತ್ತಿತ್ತು. ರಾಜಕಾಲುವೆಯ ಎರಡು ದಂಡೆಗಳಲ್ಲಿ ಕಲ್ಲುಕಟ್ಟಡವನ್ನು ಮಾಡಿಸುವಂತೆ ದೊರೆ ಹರಿಹರ, ರಾಜಕುಮಾರ ಬುಕ್ಕನಿಗೆ ಆಜ್ಞೆಮಾಡಿದ. ಬುಕ್ಕನ ಅಧಿಕಾರಿ ಸೋಮಪ್ಪರಸ ಈ ಕೆಲಸವನ್ನು ಮಾಡಿಸಿದ. ಅದನ್ನು ಮಾಡಿಸದೆ ಇದ್ದಪಕ್ಷದಲ್ಲಿ ಹಳ್ಳಿಯಲ್ಲಿ ನಾಲೆಗಿಂತ ಕೆಳಮಟ್ಟದಲ್ಲಿದ್ದ ಮನೆಗಳಿಗೂ ಧಾನ್ಯದ ಕಣಜಗಳಿಗೂ ನೀರು ಜಿನುಗಿ ಹಾಳಾಗುತ್ತಿದ್ದವು. ಶ್ರೀಸಾಮಾನ್ಯರ ಹಿತರಕ್ಷಣೆಯ ಬಗ್ಗೆ ಸರ್ಕಾರ ವಹಿಸುತ್ತಿದ್ದ ಕಾಳಜಿಗೆ ಇದು ದಿಕ್ಸೂಚಿ. ಕ್ರಿ.ಶ. ೧೩೬೯ರಲ್ಲಿ ವಿಜಯನಗರ ಕಾಲದ ಅತ್ಯಂತ ಪ್ರಖ್ಯಾತ ಯೋಜನೆಯಾದ ಪೊರುಮಾಮಿಲ್ಲ ಜಲಾಶಯ ನಿರ್ಮಾಣವಾಯಿತು. ಲಲರಚನಾತಂತ್ರ ಕುರಿತ ಮುಂದಿನ ಒಂದು ಅಧ್ಯಾಯದಲ್ಲಿ ಅದನ್ನು ವರ್ಣಿಸಲಾಗಿದೆ.

ಕೆಲ್ಲನಗೆರೆಯ (ಅರಸೀಕೆರೆ ತಾಲ್ಲೂಕು)[4] ಕ್ರಿ.ಶ. ೧೩೬೭ರ ಒಂದು ಶಾಸನ ಒಂದು ಕೆರೆಯ ಸಂರಕ್ಷಣೆಗೆ ಮಾಡಿದ ತೃಪ್ತಿಕರ ವ್ಯವಸ್ಥೆಯ ಬಗ್ಗೆ ತಿಳಿಸುತ್ತದೆ. ದಾನ ಪಡೆದವರು ಎಮ್ಮೆ – ಆಳು, ಕರೆಬಂಡಿ, ಕೀಲೆಣ್ಣೆ, ಸನ್ನೆಕೋಲು, ಪಿಕಾಸಿ ಇತ್ಯಾದಿಗಳನ್ನು ಇಟ್ಟಿರಬೇಕಾಗಿತ್ತು. ಕೆರೆಗಳ ಸಂರಕ್ಷಣೆಗೆ ಅಂಥ ತೃಪ್ತಿಕರ ವ್ಯವಸ್ಥೆ ಅಪರೂಪದ್ದೇನೂ ಆಗಿರಲಿಲ್ಲ ಎನ್ನುವುದು ಕ್ರಿ.ಶ ೧೩೭೧ರ ಜೋಳಕ್ಯಾತನಹಳ್ಳಿ ಶಾಸನದಿಂದ[5]ಸ್ಪಷ್ಟವಾಗುತ್ತದೆ. ಕೆರೆಯ ಸಲುವಾಗಿ ನಾಲ್ಕು ಬಂಡಿಗಳನ್ನು ಇಟ್ಟುಕೊಳ್ಳಲು ಚೋಳಕ್ಯಾತನಹಳ್ಳಿಗೆ ಸೇರಿದ ಬೋಮ್ಮಗೌಡ ಮತ್ತಿತರರಿಗೆ ಹೆಬ್ಬಾಳೆಯ ಮಹಾಜನರು ಭೂಮಿಯನ್ನು ಸುಂಕಗಳನ್ನು ದಾನವಾಗಿತ್ತುದನ್ನು ಆ ಶಾಸನ ದಾಖಲುಮಾಡಿದೆ.

ಬಂಗಾರುಪೇಟೆ ತಾಲ್ಲೂಕಿನ ರಾಮಸಾಗರ ಶಾಸನದ[6]ಪ್ರಕಾರ ಬುಕ್ಕರಾಯನೇ ಬುಕ್ಕಸಾಗರವನ್ನು ಕಟ್ಟಿಸಿದ್ದು. ಅದರ ಈಗಿನ ಹೆಸರು ರಾಮಸಾಗರ. ಶಾಸನ ಒಂದನೆಯ ದೇವರಾಯನ ಕಾಲಕ್ಕೆ ಸೇರಿದ್ದು, ಆದರೆ ಕೆರೆ ಕಟ್ಟಲಾದುದು ಒಂದನೆಯ ಬುಕ್ಕನ ಕಾಲದಲ್ಲಿ. ಈ ಕೆರೆಗೆ ದೀರ್ಘ ಇತಿಹಾಸವಿದೆ. ಅದನ್ನು ಅನುಬಂಧ – ೩ರಲ್ಲಿ ನಿರೂಪಿಸಲಾಗಿದೆ.

ಕ್ರಿ.ಶ ೧೩೮೮ ಕಲ್ಲೂಡಿ ಶಾಸನ[7] (ಗೌರಿಬಿದನೂರು ತಾಲ್ಲೂಕು) ಚೆನ್ನಾಗಿ ತಿಳಿದಿರುವಂಥದೇ. ಅದರ ಪ್ರಕಾರ ವೀರ ಹರಿಹರರಾಯನ ಮಗ ಶ್ರೀಪ್ರತಾಪ ಬುಕ್ಕರಾಯ ಪೆನುಗೊಂಡನಗರದಲ್ಲಿ ಇದ್ದಾಗ, ಪ್ರಜೆಗಳು ಸುಖವಾಗಿ ಇರಲಿ ಎಂಬ ಉದ್ದೇಶದಿಂದ, ನೀರು ಎಲ್ಲ ಪ್ರಾಣಿಗಳ ಜೀವರಸವಾದುದರಿಂದ ಹೆನ್ನ (ಪೆನ್ನಾರು) ನದಿಯ ನೀರನ್ನು ಪೆನುಗೊಂಡೆಗೆ ತರಬೇಕು ಎಂದು ಬುಕ್ಕರಾಯ ದಶಶಾಸ್ರ್ರಪಂಡಿತನಾಗಿದ್ದ ಜಲಸೂತ್ರ ಸಿಂಗಯ್ಯಭಟ್ಟನಿಗೆ ಬಹಿರಂಗ ಆಸ್ಥಾನದಲ್ಲಿ ಅಪ್ಪಣೆ ಮಾಡಿದ. ಅದರಂತೆಯೆ ಸಿಂಗಯ್ಯ ಭಟ್ಟ ಸಿರುವಾರ ಕೆರೆಗೆ ಒಂದು ಕಾಲುವೆಯನ್ನು ಹಾಯಿಸಿ ಅದಕ್ಕೆ ಪ್ರತಾಪ ಬುಕ್ಕರಾಯ ಮಂಡಲದ ಕಾಲುವೆ ಎಂದು ಹೆಸರು ಇಟ್ಟ. ಸಿಂಗಯ್ಯಭಟ್ಟನಿಗೆ ಹಿಂದಿನ ಅನುಭವ ಇದ್ದಿರಬೇಕು, ಶಿಲ್ಪಿಯಾಗಿ ಯಶಸ್ಸು ಪಡೆದ ಖ್ಯಾತಿ ಇದ್ದಿರಬೇಕು. ಪೋರುಮಾಮಿಲ್ಲ ಜಲಾಶಯದಂಥ ಕಾರ್ಯಗಳನ್ನು ನಿರ್ಮಿಸಿದಾಗ, ಆ ಅನುಭವವನ್ನು ಪಡೆದುದು ಸಂಭವನೀಯ.

ಭಟ್ಟರ ಬಾಚಿಯಪ್ಪ ಬುಕ್ಕರಾಯಸಮುದ್ರ, ಕೀರ್ತಿಸಮುದ್ರ, ಮಾಳುವೆಯಕೆರೆ ನಾಗವ್ವೆಯಕೆರೆ, ಬಾಚಪ್ಪನ ಕೆರೆ ಮೊದಲಾದ ಕೆರೆಗಳನ್ನು ಸ್ಥಾಪಿಸಿದ ಎನ್ನುವುದನ್ನು ಕ್ರಿ.ಶ. ೧೩೮೧ರ ಅರುವನಹಳ್ಳಿ (ಮದ್ದೂರು ತಾಲ್ಲೂಕು) ಶಾಸನವೂ[8]ಅದೇ ಸ್ಥಳದ ಕ್ರಿ.ಶ ೧೩೫೮ರ ಹಿಂದಿನ ಒಂದು ಶಾಸನವೂ ತಿಳಿಸುತ್ತವೆ. ಆತ ತಾನು ಕಟ್ಟಿಸಿದ ಕೆರೆಗಳಿಗೆ ತೂಬುಗಳನ್ನು ಮಾಡಿಸಿದ. ಈ ಕೆರೆಗಳಲ್ಲಿ ಮೊದಲು ಎರಡು ತನ್ನ ತಂದೆಯ ಹೆಸರಿನವು, ಮುಂದಿನ ಎರಡು ತಾಯಿ ಹಾಗೂ ನೆಂಟಳೊಬ್ಬನ ಹೆಸರಿನವು. ಇನ್ನೊಂದು ತನ್ನ ಹೆಸರಿನದು. ಇವೆಲ್ಲವು ಹೊಸ ಕೆರೆಗಳು (ಕನ್ನೆಗೆರೆ) ಆತ ಕೆರೆಗಳ ಸುತ್ತಲೂ ಮರಗಳನ್ನು ನೆಡಿಸಿ ಚಂದಗೊಳಿಸಿದ ಕೂಡ.

ಬಾಗೇಪಲ್ಲಿ ತಾಲ್ಲೂಕಿನ ಕ್ರಿ.ಶ. ೧೩೯೭ರ ತಿರುಮಣಿ ಶಾಸನ[9]ಮೇಲೆ ಹೆಸರಿಸಿದ ಕಲ್ಲೂಡಿ ಶಾಸನದಂತೆಯೇ ರಾಜಮನೆತನದವರು ನೀರಾವರಿಯಲ್ಲಿ ವಹಿಸುತ್ತಿದ್ದ ಆಸಕ್ತಿಯನ್ನು ಚಿತ್ರಿಸಿ ತೋರುತ್ತದೆ. ಆ ಶಾಸನದ ಪ್ರಕಾರ ತಿರುಮಣಿ ಗ್ರಾಮದ ಮುಂದೆ ಒಂದು ನಾಲೆ ತೋಡಿಸಬೇಕು ಎಂದು ಬುಕ್ಕರಾಯನ ಮೊಮ್ಮಗಳು ಜೊಮ್ಮದೇವಿ ನಿರ್ದೇಶಿಸಿದಳು. ಆ ಕೆಲಸದ ಗುತ್ತಿಗೆಯನ್ನು ಪೆದ್ದಬಾಯಿರವೋಜ ಹಾಗೂ ಸಿನ್ನಬಾಯಿರ ವೋಜ ಎಂಬ ಇಬ್ಬರು ಕಲ್ಲು ಕೆಲಸದವರಿಗೆ ವಹಿಸಲಾಯಿತು. ಅವರು ನಾಲೆ ತೋಡಿದರು, ಅದರಿಂದ ಕೆರೆ ತುಂಬಿತು. ತೂಬನ್ನು ರಚಿಸಲಾಯಿತು. ಯೋಜನೆ ಯಶಸ್ವಿಯಾದರೆ ಆ ಕಲ್ಲು ಕೆಲಸಗಾರರಿಗೆ ೧೩೦ ಗದ್ಯಾಣ, ಸ್ವಲ್ಪ ಭೂಮಿ, ಒಂದು ಕುದುರೆ ಹಾಗೂ ಕೈಕಡಗಗಳು ಸಲ್ಲುತ್ತವೆ. ವಿಫಲವಾದರೆ ಅವರು ಇವೆಲ್ಲವನ್ನು ಹಿಂದಿರುಗಿಸಬೇಕು. ಇದು ಗುತ್ತಿಗೆಯ ಷರತ್ತು. ಅದರ ಅದು ಯಶಸ್ವಿಯೆ ಆಯಿತು. ಆ ಹಳೆಯ ನಾಲೆ ಇಂದಿಗೂ ಇದೆ. ೨೦೧ ಎಕರೆ ಆಯಕಟ್ಟು ಉಳ್ಳ ತಿರುಮಣಿ ಕೆರೆಗೆ ನೀರು ತುಂಬುತ್ತದೆ.

ಹದಿನೈದನೆಯ ಶತಮಾನ : ಹದಿನಾಲ್ಕನೆಯ ಶತಮಾನದಲ್ಲಿ ಬಹುತೇಕ ಹೊಸ ಜಲಾಶಯಗಳನ್ನು ಭಾರಿ ಯಾದವನ್ನು ನಿರ್ಮಿಸಲಾಯಿತು. ಹದಿನೈದನೆಯ ಶತಮಾನದಲ್ಲಿ ಯಾದರೊ ಬಹುಪಾಲು ದಾಖಲೆಗಳು ಕೆರೆಗಳ ಜೀರ್ಣೋದ್ಧಾರವನ್ನೇ ಪ್ರಸ್ತಾಪಿಸುತ್ತದೆ. ಈ ಶತಮಾನದ ವೇಳೆಗೆ ಹೊಸ ನಿರ್ಮಾಣಗಳಿಗೆ ಆಸ್ಪದ ಮಿತವಾಗಿದ್ದಿರಬೇಕು. ಆದರೂ ಕಾವೇರಿಯ ಮೇಲೂ, ಹರಿಹರದಲ್ಲಿಯೂ ಆಣೆಕಟ್ಟುಗಳನ್ನು ನಿರ್ಮಿಸಿದ್ದು ಈ ಶತಮಾನದಲ್ಲಿಯೇ.

ಕೃಷ್ಣರಾಜನಗರ ತಾಲ್ಲೂಕಿನ ೧೫ನೇ ಶತಮಾನದ ಮಿರ್ಲೆಶಾಸನ[10]ಹಂಪಾಪುರದ ಮಹಾಜನರೂ ಹಳ್ಳಿ ಹಿರಿಯೂರಿನ ರೈತರೂ ಚಿಕ್ಕದೀಕ್ಷಿತನಿಗೆ ತರಿ ಮತ್ತು ಖುಷ್ಕಿ ಜಮೀನುಗಳನ್ನು ಮಾರಿದ್ದನ್ನು ದಾಖಲಿಸುತ್ತದೆ. ತಮ್ಮ ಹಳ್ಳಿಯಲ್ಲಿನ ಮೊದಲನೆಯ ನಾಲೆ ಎಂಟು ಹತ್ತು ಕಡೆಯಲ್ಲಿ ಒಡೆಯಿತೆಂದೂ, ಅದಕ್ಕೆ ಬೇಕಾದ ರಿಪೇರಿ ಮಾಡಿಸುವುದು ತಮಗೆ ಅಸಾಧ್ಯವಾಗಿದ್ದುದರಿಂದ ನಾಲೆಯ ರಿಪೇರಿಗೋಸ್ಕರ ಒಂದು ಮನೆಯನ್ನೂ ತರಿ ಮತ್ತು ಖುಷ್ಕಿ ಜಮೀನುಗಳನ್ನೂ ಮಾರಿದರೆಂದೂ ಶಾಸನ ಹೇಳುತ್ತದೆ. ನೀರಾವರಿ ನಾಲೆಯ ಸೂಕ್ತ ಸಂರಕ್ಷಣೆಯ ಬಗ್ಗೆ ಆ ಜನರಿಗೆ ಇದ್ದ ತೀವ್ರ ಕಾಳಜಿಯನ್ನು ಇದು ನಿಚ್ಚಳವಾಗಿ ತೋರಿಸುತ್ತದೆ.

ಚಿತ್ರದುರ್ಗ ಜಿಲ್ಲೆಯ ಹರಿಹರದ ಹರಿಹರೇಶ್ವರ ದೇವಸ್ಥಾನದಲ್ಲಿ ಎರಡು ಶಾಸನಗಳಿವೆ.[11] ಕೆಲವು ರೀತಿಯಲ್ಲಿ ವಿಶಿಷ್ಟವಾದ ನೀರಾವರಿ ಯೋಜನೆಯ ಇತಿಹಾಸವನ್ನು ಈ ಶಾಸನಗಳು ಕೊಡುತ್ತವೆ. ಆ ಕೆಲಸ ದೇವಸ್ಥಾನದ ಅಧಿಕಾರಿಗಳ ಹಾಗೂ ಹರಿಹರದ ಮಹಾಜನರ ಜಂಟಿ ಉದಯಮವಾಗಿತ್ತು. ದೇವಾಸ್ಥಾನದ ಅಧಿಕಾರಿಗಳು ಭೂಮಿಯನ್ನೂ, ಪ್ರತ್ಯಕ್ಷವಾಗಿ ವೆಚ್ಚದ ಮೂರನೆಯ ಎರಡು ಪಾಲನ್ನೂ ಕಾಣಿಕೆ ಕೊಟ್ಟರು. ೧೨೦ ಸಂಖ್ಯೆಯಿದ್ದ ಮಹಾಜನರು ಮೂರನೆಯ ಪಾಲು ವೆಚ್ಚವನ್ನು ಕೊಟ್ಟರು. ಯೋಜನೆಯ ಲಾಭ ಹಾಗೂ ಅದರ ಸಂರಕ್ಷಣೆಯ ವೆಚ್ಚ ಎರಡರಲ್ಲೂ ದೇವಸ್ಥಾನದ ಮೂರನೆಯ ಎರಡರಷ್ಟು, ಮಹಾಜನರು ಮೂರನೆಯ ಒಂದರಷ್ಟು ಪ್ರಮಾಣದಲ್ಲಿ ಹಂಚಿಕೊಳ್ಳಬೇಕಾಗಿತ್ತು. ತುಂಗಭದ್ರೆಯ ಉಪನದಿಯಾದ ಹರಿದ್ರಾನದಿಗೆ ಒಮದು ಅಡ್ಡಕಟ್ಟೆ ಕಟ್ಟುವುದು ಈ ಯೋಜನೆಯಲ್ಲಿ ಸೇರಿತ್ತು. ಉಪನದಿ ತುಂಗಭದ್ರೆಗೆ ಸೇರುವುದಕ್ಕೆ ಸ್ವಲ್ಪ ಹಿಂದೆ ಅಡ್ಡ ಕಟ್ಟೆಯನ್ನು ಕಟ್ಟಲಾಯಿತು. ಜಲಾಶಯದಿಂದ ಸುಮಾರು ಎಂಟು ಮೈಲು ಉದ್ದದ ನಾಲೆಯನ್ನು ರಚಿಸಲಾಯಿತು. ನಾಲೆಯು ಬೆಳ್ಳೂಡಿ, ಹನಗವಾಡಿ, ಹರಿಹರ, ಗುತ್ತೂರು ಮತ್ತು ಗಂಗನರಸಿ ಹಳ್ಳಿಗಳಲ್ಲಿ ಹಾದು ಹೋಗುತ್ತಿತ್ತು. (ಈಗಲೂ ಹಳ್ಳಿಗಳ ಹೆಸರು ಇವೇ). ಅನಂತರ ನಾಲೆ ತುಂಗಭದ್ರೆಗೆ ಸೇರುತ್ತಿತ್ತು. ಯೋಜನೆಗೆ ಕ್ರಿ.ಶ. ೧೪೧೦ ರಲ್ಲಿ ಒಂದನೆಯ ದೇವರಾಯನ ಅನುಮತಿ ದೊರೆತಿತ್ತು. ಇದನ್ನು ಬುಳ್ಳಪ್ಪ ಎಂಬಾತ ಕಟ್ಟಿದ.

ಅದೇ ಸ್ಥಳದ ಕ್ರಿ.ಶ. ೧೪೨೪ರ ಎರಡನೆಯ ಶಾಸನದಲ್ಲಿ ಈ ಆಣೆ ಒಡೆದುದೂ, ತಮ್ಮ ಎಲ್ಲ ಆಸ್ತಿಯನ್ನು ಕಳೆದುಕೊಂಡ ಮಹಾಜನರಿಗೆ ಸಂಕಟ ಉಂಟಾದುದೂ ದಾಖಲಾಗಿದೆ. ಆಗ ಮಂತ್ರಿ ಚಾಮರಾಜ ಮಹಾಜನರ ನೆರವಿಗೆ ಬಂದ. ದುರಸ್ತಿಗೆ ಬೇಕಾದ ಹಣವನ್ನು ಮುಂಗಡವಾಗಿತ್ತ. ನಾಲೆಯನ್ನು ಕಟ್ಟಿದ್ದ ಬುಳ್ಳಪ್ಪನೇ ರಿಪೇರಿಯನ್ನೂ ಮಾಡಿದ. ಅಲ್ಲಿಂದಾಚೆಗೆ ಯೋಜನೆ ಎಷ್ಟು ಕಾಲ ಸುಸ್ಥಿತಿಯಲ್ಲತ್ತೊ ಹೇಳುವುದು ಸಾಧ್ಯವಿಲ್ಲ. ಆದರೆ ಸುಸ್ಥಿತಿಯಲ್ಲಿ ಇದ್ದಷ್ಟು ಕಾಲ ಅದು ಹರಿಹರ ಪ್ರದೇಶಕ್ಕೆ ಮಹತ್ತರ ಅಭಿವೃದ್ಧಿಯನ್ನು ನೀಡಿತ್ತು. ಹರಿಹರದ ಮೊದಲನೆಯ ಶಾಸನದ ಪ್ರಕಾರ ಆ ಯೋಜನೆ ಆ ಸುತ್ತಿನ ಆರು ಹಳ್ಳಿಗಳಿಗೆ ಲಾಭದಾಯಕವಾಗಿತ್ತು ಅಂಥ ನಾಲೆ ಅನೇಕ ಸಣ್ಣಪುಟ್ಟ ಹಳ್ಳಗಳನ್ನು ದಾಟಬೇಕಾಗಿತ್ತು ಹಾಗೂ ಹಾದಿಯಲ್ಲಿನ ಪ್ರತಿಯೊಂದು ಹಳ್ಳಿಗೂ ನೀರು ಒದಗಿಸಲು ಸಾಕಷ್ಟು ವ್ಯವಸ್ಥೆ ಇದ್ದಿರಬೇಕಾಗಿತ್ತು. ಈಗ ಕಟ್ಟೆಯಾಗಲಿ ನಾಲೆಯಾಗಲಿ ಇಲ್ಲ. ಆದ್ದರಿಂದ ಪ್ರಾಯಶಃ ಅವೆರಡೂ ಹೂಳುತುಂಬಿ ಒಡೆದು ಹೋಗಿರಬೇಕು. ಸಕಾಲದಲ್ಲಿ ರಿಪೇರಿ ಆಗದೇ ಹೋಗಿರಬೇಕು ಎಂದು ತೀರ್ಮಾನಿಸಬೇಕಾಗುತ್ತದೆ.

ತೂಬುಗಳನ್ನು ಚಲಿಯಿಸುವುದು ಸುಲಭವಾಗಿರಲಿಲ್ಲ. ಕೆಲವು ಸಲ ಅದು ಪ್ರಾಣಾಂತಕವೂ ಆಗಿರುತ್ತಿತ್ತು. ಅಲ್ಲಗೌಂಡ ಎಂಬವನು ತೂಬಿನ ಕೊಂತವನ್ನು ಜೋಡಿಸುವ ಯತ್ನದಲ್ಲಿ ಕೆರೆಗೆ ಬಿದ್ದು ಸತ್ತು ಹೋದ. ಅನಂತರ ಬುಳಿಯೋಜನೆಂಬ ಕಲ್ಲು ಕೆಲಸಗಾರನನ್ನು ತರಿ – ಖುಷ್ಕಿ ಜಮೀನನ್ನೂ ಮನೆಯನ್ನೂ ದಾನಕೊಡುವುದಾಗಿ ಷರತ್ತಿನ ಮೇಲೆ ಆ ಕೆಲಸಕ್ಕೆ ನೇಮಿಸಲಾಯಿತು. ತೂಬಿಗೆ ಏನಾದರೂ ಜಖಂ ಆದರೆ ಆತ ಅದನ್ನು ಸರಿಪಡಿಸಬೇಕಾಗಿತ್ತು. ಆಗಿನಿಂದ ತೂಬನ್ನು ಸುಸ್ಥಿತಿಯಲ್ಲಿ ಇಟ್ಟಿರುವುದೂ ಅದನ್ನು ನಡೆಸುವುದೂ ಅವನ ಹೊಣೆಯೇ ಆಯಿತು. ಇಮ್ಮಡಿ ಹರಿಹರನ ಆಳ್ವಿಕೆಯ ಕ್ರಿ.ಶ. ೧೪೦೦ರ ಅರಳಾಳು (ಬೆಂಗಳೂರು ಜಿಲ್ಲೆ) ಶಾಸನದ[12]ಸಾರಾಂಶವೇ ಇದು.

ಕೆರೆ ಕಟ್ಟಿದ್ದವನಿಗೆ ದಶವಂದ ಅಥವಾ ಕಟ್ಟುಕೊಡಿಗೆ ಅಥವಾ ಕಂದಾಯವಿಲ್ಲದ ಭೂಮಿಯನ್ನು ಕೊಡಲಾಗುತ್ತಿತ್ತು. ದಶವಂದ ಕಾಲಕಾಲಕ್ಕೆ ಸ್ಥಳದಿಂದ ಸ್ಥಳಕ್ಕೆ ಬೇರೆ ಬೇರೆ ಆಗಿತ್ತು ಎನ್ನುವುದಕ್ಕೆ ಕ್ರಿ.ಶ. ೧೪೦೭ರ ವಣಿಗಾನಹಳ್ಳಿ (ಮುಳುಬಾಗಿಲು) ಶಾಸನ[13]ಒಳ್ಳೆಯ ನಿದರ್ಶನ. ಗೌರಿದೇವಿ ಗುಡಿಯ ಪುರೋಹಿತ ಮಂಗರಸ ಹಾಗೂ ಪ್ರಜೆಗಳು ಕೆರೆಗೆ ಕೊಡಿಗೆಯಾಗಿ ಅಥವಾ ಕಂದಾಯ ರಹಿತ ಭೂಮಿಯಾಗಿ ಕಂದಾಯವಿಲ್ಲದ ಭತ್ತದ ಗದ್ದೆಯನ್ನು ಕೊಡುವ ವಿಷಯವನ್ನೊಳಗೊಂಡ ಕೆಳಕಾಣಿಸಿರುವ ಶಾಸನವೊಂದನ್ನು ಬರೆಸಿದರು.

“ಅದಾಗಿ ನೀನು ವಣೆಯರಹಳ್ಳಿಯಲ್ಲಿ ಕೆರೆಯನ್ನು ಕಟ್ಟಿ ಮಂಗಸಮುದ್ರವನ್ನು ನಿರ್ಮಿಸಿರುವುದರಿಂದ, ನಾವು ನಿನಗೆ ಕೆರೆಯ ಕೆಳಗಿನ ಭತ್ತದ ಗದ್ದೆಗಳಲ್ಲಿ ಹಾಗೂ ಕೆರೆಯಲ್ಲಿ ಹತ್ತರಲ್ಲಿ ಎರಡು ಪಾಲನ್ನು ಕಟ್ಟುಕೊಡಿಗೆಯಾಗಿ ನೀಡುತ್ತೇವೆ ಮತ್ತು ನಾವು ನೀಡುವ ಸದರಿ ಎರಡು ಪಾಲುಗಳಲ್ಲಿ ಒಂದು ಪಾಲನ್ನು ಶಾಶ್ವತವಾಗಿ ಯಾವುದೇ ಕಂದಾಯವಿಲ್ಲದೆ ಅನುಭವಿಸತಕ್ಕದ್ದು.” ದಶವಂದ ಅಂದರೆ ಅಕ್ಷರಶಃ ಅರ್ಥ ಹತ್ತರಲ್ಲಿ ಒಂದು ಎಂದು. ಆದರೆ ಇಲ್ಲಿ ಹತ್ತರಲ್ಲಿ ಎರಡು ಎಂದಿದೆ. ಮುಂದೆ ನಾವು ಪರಿಶೀಲಿಸಲಿರುವ ರಾಜಗುಂಡ್ಲ ಹಳ್ಳಿಯಲ್ಲಿನಂತೆ ಇತರ ಕೆಲವೆಡೆ ಅದು ಹತ್ತರಲ್ಲಿ ಮೂರು ಆಗಿದ್ದುದೂ ಉಂಟು.

ಒಂಬತ್ತು ವರ್ಷಗಳ ನಂತರ ಅಂದರೆ ಕ್ರಿ.ಶ. ೧೪೧೬ರಲ್ಲಿ ಅದೇ ಮುಳುಬಾಗಿಲು ತಾಲ್ಲೂಕಿನಲ್ಲಿ ದಾನದ ನಿಯಮ ಬೇರೆಯಾಗಿತ್ತು. ಕತಾರಿಯನಹಳ್ಳಿಯಲ್ಲಿ ಪಾಲಾರು ನದಿಗೆ ಅಡ್ಡವಾಗಿದ್ದ ಅರಳಿಕ್ಟೆ ಬಹುಕಾಲದ ಹಿಂದೆಯೆ ಒಡೆದು ಹೋಗಿತ್ತು, ನೆಲಸಮವಾಗಿ ಹೋಗಿತ್ತು. ಅಲ್ಲಿ ಕೆರೆಯನ್ನು ಜೀರ್ಣೋದ್ಧಾರ ಮಾಡಿ ಊರು ಮತ್ತು ಕೆರೆ, ಎರಡೂ ಆಗು ಹಾಗೆ ಸ್ಥಳೀಯ ದೇವಾಲಯದ ಪುರೋಹಿತರು ಕೆಲವು ಬ್ರಾಹ್ಮಣರಿಗೆ ಮುಂದೆ ತಿಳಿಸಿರುವ ಷರತ್ತಿನ ಮೇಲೆ ಕಟ್ಟೆಯ ಹತ್ತಿರ ಭೂಮಿಯನ್ನು ದಾನವಾಗಿ ಕೊಟ್ಟರು – “ನೀವು ಕಟ್ಟುವ ಕೆರೆಯಲ್ಲಿ ಹಾಗೂ ಅದರ ಕೆಳಗಿನ ಭೂಮಿಯನ್ನು ನಾಲ್ಕು ಭಾಗವಾಗಿ ಮಾಡಿ, ಒಂದು ಭಾಗ ದೇವಾಲಯದ ಕೋಶಕ್ಕೆ ಸೇರುತ್ತದೆ. ಉಳಿದ ಮೂರು ಭಾಗ ಭೂಮಿಯನ್ನು ಅಗ್ರಹಾರವಾಗಿ ನಿಮಗೆ ದಾನವೀಯುತ್ತೇವೆ.”[14]

ಕ್ರಿ.ಶ ೧೪೧೭ರ ತ್ರಿಯಂಬಕಪುರ (ಗುಂಡ್ಲುಪೇಟೆ ತಾಲ್ಲೂಕು) ಶಾಸನದ[15]ಹಿರಿಮೆ ಎಂದರೆ ಒಂದೇ ಎಡೆಯಲ್ಲಿನ ಹದಿನಂಟು ಕೆರೆಗಳ ಉಲ್ಲೇಖ ಇರುವುದು. ಅವು ಹಾತಳಕೋಟೆ, ಮೊರಗ, ಅರೆಕೊಠಾರ, ಮುಳೂರು, ಅರಕಲವಾಡಿ, ನರಸಮಂಗಳ, ಹೆಗವಾಡಿ, ಅಂಕಿಹಳ್ಳಿ, ಹಾಗುಲ, ಕೋಡಿಹಳ್ಳಿ, ಕುತನೂರ, ವಿಜಯಪುರ, ನಲವುರು, ರಾಘವಪುರ, ಎಡತಲೆ, ಕೆಲಸೂರು, ವೊಡೆಯಾಣ ಮತ್ತು ಸಗಡಿ – ಈ ಹದಿನೆಂಟು ಕೆರೆಗಳಲ್ಲದೆ, ಹಿರಿಯಕಾಲುವೆ ಎಂಬ ಕಾಲುವೆಯ ಪ್ರಸ್ತಾಪವೂ ಇದೆ. ಈ ಕೆರೆಗಳ ನೆರವಿನಿಂದ ಬೆಳೆಯಲಾಗುತ್ತಿದ್ದ ಅಕ್ಕಿ, ಅಡಕೆಗಳನ್ನು ತ್ರಿಯಂಬಕೇಶ್ವರಸ್ವಾಮಿಯ ಪೂಜೆಗೆ ಅರ್ಪಿಸಲಾಗುತ್ತಿತ್ತು ಎಂದೂ ಶಾಸನ ಹೇಳುತ್ತದೆ. ಈಗಿನ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬೆ ಸೀಮೆಯನ್ನು ಈ ಎಲ್ಲ ಕೆರೆಗಳೂ, ಕರ್ನಾಟಕದ ದಕ್ಷಿಣ ಭಾಗದಲ್ಲಿಯೇ ಸಮೃದ್ಧ ಸ್ಥಳಗಳಲ್ಲಿ ಒಂದನ್ನಾಗಿ ಮಾಡಿದ್ದಿರಬೇಕು. ೧೯ನೆಯ ಶತಮಾನದ ಕೊನೆಯ ದಶಕದಲ್ಲಿ ಈ ಪ್ರದೇಶ ಹೇಗಿತ್ತು ಎನ್ನುವುದನ್ನು ರೈಸ್ ತನ್ನ ಗೆಜೆಟೆಯರ್‌ನಲ್ಲಿ[16]ಹೀಗೆ ವಿವರಿಸಿದ್ದಾನೆ. “ತೆರಕಣಾಂಬೆಯ ಸುತ್ತಮುತ್ತ ಲೆಕ್ಕವಿಲ್ಲದಷ್ಟು ಹಳೆಯ ಕೆರೆಗಳಿವೆ. ಅವು ಈಗ ಬಳಕೆಯಲ್ಲಿಲ್ಲ. ಆದರೆ ಅವು ಆ ಪ್ರದೇಶದ ಹಿಂದಿನ ಪ್ರಾಮುಖ್ಯತೆಯನ್ನು ಸೂಚಿಸುತ್ತವೆ”.

ವಿಜಯನಗರದ ಅಡಳಿತಗಾರರು ಹಳೆಯ ಕೆರೆಗಳ ಜೀರ್ಣೋದ್ಧಾರಕ್ಕೆ ಸುವ್ಯವಸ್ಥಿತವಾದ ಪ್ರಯತ್ನಮಾಡುತ್ತಿದ್ದರು ಎಂದು ತೋರುತ್ತದೆ. ಆ ಉದ್ದೇಶಕ್ಕಾಗಿ ಸೂಕ್ತಪೋಷಕರಿಗಾಗಿ(ಆಶ್ರಯದಾತ) ಹುಡುಕುತ್ತಿದ್ದರು. ಅರಳಿಕಟ್ಟೆಯನ್ನು ಬ್ರಾಹ್ಮಣರ ನೆರವಿನಿಂದ ಜೀರ್ಣೋದ್ಧಾರ ಮಾಡಿದಂತೆ ಬೆಟ್ಟಹಳ್ಳಿಯಲ್ಲಿ ಅಳಗಿಸೆಟ್ಟ ಎಂಬ ಉದ್ಯಮಿಗೆ ಜೀರ್ಣೋದ್ಧಾರದ ಕಾರ್ಯವನ್ನು ವಹಿಸಲಾಗಿತ್ತು. ಕ್ರಿ.ಶ. ೧೪೩೮ರ ಕೃಷ್ಣಾಪುರ ಶಾಸನ[17] (ಚೆನ್ನಪಟ್ಟಣ ತಾಲ್ಲೂಕು) ಹೀಗೆ ಹೇಳುತ್ತದೆ – “೪೦ ವರಹ ಕಂದಾಯ ಹುಟ್ಟುವಳಿಯಿದ್ದ ಬೆಟ್ಟಹಳ್ಳಿ ಹಾಳಾಗಿ ಹೋಗಿರುವುದರಿಂದ ಚಿಕ್ಕಪೆರುಮಾಳದೇವನು (ಸರ್ಕಾರಿ ಅಧಿಕಾರಿ) ತಿರುಮಲನಾಥಪುರ ಎಂಬ ಹೆಸರಿನ ಹೊಸ ಬೀಡನ್ನು ಸ್ಥಾಪಿಸಲೆಂದು, ಅದನ್ನು ಸರ್ವ ಮಾನ್ಯವಾಗಿ (ಸುಂಕ ಇಲ್ಲದ್ದು) ಅಳಗಿಸೆಟ್ಟೆಗೆ ವಹಿಸಿಕೊಟ್ಟನು. ಅಳಗಿಸೆಟ್ಟಿ ಪಟ್ಟಣವನ್ನು (ಊರನ್ನು) ಕಟ್ಟಿ, ಒಂದು ದೇವಾಲಯವನ್ನು ನಿರ್ಮಿಸಿ, ಅರ್ಕಸಮುದ್ರ ಹಾಗೂ ತಿಮ್ಮ ಸಮುದ್ರ ಎಂಬ ಎರಡು ಕೆರೆಗಳನ್ನು ತೋಡಿಸಿದು.” ಉದ್ಯಮ ಶೀಲತೆ ಮತ್ತು ಲೋಕೋಪಕಾರಬುದ್ಧಿಗಳ ಸಂಯೋಗಕ್ಕೆ ಇದು ಒಂದು ಅತ್ಯುತ್ತಮ ನಿದರ್ಶನ.

ಕಾವೇರಿ ಮತ್ತು ಅದರ ಉಪನದಿಗಳ ಮೇಲೆನ ಬಹುಪಾಲು ಆಣೆಗಳು ನಿರ್ಮಿತವಾದುದು ವಿಜಯನಗರ ಕಾಲದಲ್ಲಿ. ಅತ್ಯಂತ ಹಳೆಯದು ತಲಕಾಡಿನಲ್ಲಿರುವ ಮಾಧವಮಂತ್ರಿ ಕಟ್ಟೆ ಅಥವಾ ಆಣೆ. ಅದು ಹರಿಹರ ಮತ್ತು ಬುಕ್ಕರಲ್ಲಿ ಸೇವಮಾಡುತ್ತಿದ್ದ ಮಾಧವಮಂತ್ರಿ ಕಟ್ಟಿಸಿದ್ದು ಎನ್ನುವ ವಾಡಿಕೆ ಇದೆ. ೧೩ಅ ಆತ ತನ್ನ ತಾಯಿಯ ಹೆಸರಿನಲ್ಲಿ ಮಂಚಾಮುದ್ರ ಎಂಬ ಕೆರೆಯನ್ನು ಕಟ್ಟಿಸಿದ ಎಂದು ಕ್ರಿ.ಶ. ೧೩೯೧ರ ಒಂದು ಶಾಸನ[18]ಕೊಂಡಾಡುತ್ತದೆ. ತಲಕಾಡು ಅಣೆಯ ನಂತರ ಶ್ರೀರಂಗಪಟ್ಟಣದ ಬಳಿಯ ಸೀತಾಪುರ ಅಣೆ ನಿರ್ಮಿತವಾದಂತೆ ತೋರುತ್ತದೆ. ಸಿಂಗಣ್ಣೊಡೆಯನ ಮಗ ದೇವರಾಜ ಕಾವೇರಿಯಿಂದ ಒಂದು ಹೊಸ ನಾಲೆಯನ್ನು ತೋಡಿಸಿದಾಗ, ಹರವು ಗ್ರಾಮದ ಮಹಾಜನರು ಅದನ್ನು ತಮ್ಮ ಹಳ್ಳಿಯ ವರೆಗೂ ಮುಂದುವರಿಸಿಬೇಕು ಎಂದು ಇಚ್ಛಿಸಿದರು ಎಂದು ಕ್ರಿ.ಶ. ೧೪೬೭ರ ಸೀತಾಪುರ ಶಾಸನ[19]ಹೇಳುತ್ತದೆ. ದಾನಿಯಾದವನು ಒಪ್ಪಿ ತನ್ನ ವೆಚ್ಚದಲ್ಲಿಯೇ ಕಾಲುವೆಯನ್ನು ಅಗೆಸಿದ ಹಾಗೂ ಸೂಕ್ತ ಬಹುಮಾನವನ್ನು ಸ್ವೀಕರಿಸಿದ. ಯಾವುದೇ ಕಟ್ಟೆಯನ್ನು ಕಟ್ಟಿದ್ದನ್ನು ಶಾಸನ ತಿಳಿಸುವುದಿಲ್ಲ. ಅದರೂ ಕಟ್ಟೆ ಇದ್ದರೆ ಮಾತ್ರ ಕಾವೇರಿಯ ನೀರನ್ನು ತಿರುಗಿಸಿಕೊಳ್ಳುವುದು ಸಾಧ್ಯ. ಬಹುಶಃ ಅದೇ ಕಟ್ಟೆ ಹಾಗೂ ಕಾಲವೆಯ ಜಾಲವನ್ನು ಚಿಕ್ಕದೇವರಾಜ ಒಡೆಯ (ಕ್ರಿ.ಶ. ೧೬೭೩ – ೧೭೦೪) ಮತ್ತೆ ಕಟ್ಟಿಸಿರಬೇಕು. ಅವುಗಳ ಈಗಿನ ಹೆಸರು ಮದದ ಅಣೆಕಟ್ಟು ಹಾಗೂ ಚಿಕ್ಕದೇವರಾಯ ಸಾಗರ ನಾಲೆ.

ಒಂದು ಅಗ್ರಹಾರ ಅಥವಾ ಬ್ರಾಹ್ಮಣಪಂಡಿತರ ಬೀಡನ್ನು ಸ್ಥಾಪಿಸಲು ಒಂದು ದಾರಿ ಎಂದರೆ ಅವರಿಗೆ ಖಾಲಿ ಭೂಮಿಯನ್ನು ಅಥವಾ ಅಡವಿ ಭೂಮಿಯನ್ನು ವಹಿಸಿಕೊಡುವುದು. ಅಲ್ಲಿ ಕೆರೆ ತೋಡಿಸುವುದು ಅವರ ಆದ್ಯ ಕರ್ತವ್ಯ ಅಥವಾ ಜವಾಬ್ದಾರಿಯಾಗುತ್ತಿತ್ತು. ಮೊದಲು ಕೆರೆ ನಿರ್ಮಾಣ, ಆಮೇಲೆ ಅಗ್ರಹಾರ ಸ್ಥಾಪನೆ ಆಗುತ್ತಿತ್ತು. ದೇವಸಮುದ್ರ ಅಗ್ರಹಾರದ ಕೆರೆ, ಇದು ಕ್ರಿ.ಶ. ೧೪೯೩ರ ಹೆಗ್ಗಡದೇವನ ಕೋಟೆ (ಮೈಸೂರುಜಿಲ್ಲೆ) ಶಾಸನದಲ್ಲಿ ದಾಖಲಾಗಿದೆ.[20] ನಾಗನಾಯಕ ಎಂಬ ಅಧಿಕಾರಿ ಹಣ ಖರ್ಚುಮಾಡಿ ಕೆರೆಕಟ್ಟಿದ್ದನ್ನು ತಿಳಿಸುತ್ತದೆ. ಅನಂತರ ಆತ ನಾನಾ ಶಾಸ್ತ್ರಗಳಲ್ಲಿ ಪಾರಂಗತರಾಗಿದ್ದ ನಲವತ್ತು ವಿದ್ವಾಂಸರನ್ನು ಕರೆಸಿ, ಅವರು ಚಾಕೇನಹಳ್ಳಿಯಲ್ಲಿ ನೆಲೆಸುವಂತೆ ಮಾಡಿದ. ಆ ಸ್ಥಳವನ್ನು ಅಗ್ರಹಾರವಾಗಿ ಮಾಡುವಂತೆ ದೊರೆಯನ್ನು ಬೇಡಿಕೊಂಡ. ಕೆರೆ ಹಾಗೂ ಅಗ್ರಹಾರ ಎರಡನ್ನೂ ದೊರೆಯ ಹೆಸರಿನಲ್ಲಿ ದೇವಸಮುದ್ರ ಎಂದು ಕರೆಯಲಾಯಿತು.

ಕ್ರಿ.ಶ. ೧೪೯೬ರ ರಾಜಗೊಂಡಲಹಳ್ಳಿ (ಮುಳಬಾಗಿಲು ತಾಲ್ಲೂಕು) ಶಾಸನ[21]ಒಂದು ಜಲಾಶಯ ಹಾಗೂ ಅದರ ತೂಬುಗಳ ನಿರ್ಮಾಣದ ವೆಚ್ಚದ ವಿವರಗಳನ್ನು, ಅವುಗಳ ಸಂರಕ್ಷಣೆಗಾಗಿ ಮಾಡಲಾದ ಹಣಕಾಸು ವ್ಯವಸ್ಥೆಯನ್ನು ತಿಳಿಸುತ್ತದೆ. ಮೊದಲನೆಯದನ್ನು ಮುಂದಿನ ಒಂದು ಅಧ್ಯಾಯದಲ್ಲಿ ಬಳಸಿಕೊಳ್ಳಲಾಗಿದೆ. ಎರಡನೆಯದು ಕೆರೆ ಕಟ್ಟಿದವನಿಗೆ ಕೊಡಲಾದ ದಾನವನ್ನು ವಿವರಿಸುತ್ತದೆ. ಅದು ಈ ರೀತಿ ಮೂರು ಭಾಗಗಳಲ್ಲಿ (೧) ಕೆರೆ ಕೆಳಗೆ ಸಾಗುವಳಿಗೆ ತರಲಾದ ಭೂಮಿಯಲ್ಲಿ ಬೆಳೆದ ಅಕ್ಕಿಯ ನಾಲ್ಕು ಭಾಗ (೨) ಶ್ರೇಷ್ಠ ಮಧ್ಯಮ ಹಾಗೂ ಕನಿಷ್ಠ ಎಂದು ವಿಂಗಡಿಸಲಾದ ಕೆರೆ ಕೆಳಗಿನ ಭೂಮಿಯ ೩/೧೦ ಭಾಗ ಮತ್ತು (೩) ರಾಗಿ ಬೆಳೆಯಲು ಒಂದು ಖಂಡುಗ ಖುಷ್ಕಿ ಭೂಮಿ.

 

[1]ವಿ.ಆರ್. ನಾಟು “ಎ ಹಿಸ್ಟರಿ ಆಫ್ ಬಿಜಾಪುರ” (ಲೇ) ರಫಿಯುದ್ದೀನ್ ಶಿರಾಜೆ. ಜರ್ನಲ್ ಆಫ್‌ದಿ ಬಾಂಬೆ ಬ್ರಾಮಜ್ ಆಫ್ ದಿ ರಾಯಲ್ ಏಶಿಯಾಟಿಕ್ ಸೊಸೈಟಿ ೨೨ ಪು. ೨೭-೨೮.

[2]ಇ.ಸಿ. ೫ ಅರಸೀಕೆರೆ ೧೫೯.

[3]ಇ.ಸಿ. ೮ (ಆರ್) ಅರಕಲಗೂಡು ೧೦೭

[4]ಇ.ಸಿ. ೫, ಅರಸೀಕೆರೆ, ೧೧೫.

[5]ಇ.ಸಿ. ೮ (ಆರ್) ಅರಕಲಗೂಡು ೧೧

[6]ಎಂ.ಎ.ಆರ್. ೧೯೪೧ ಪು ೪೬ ಮತ್ತು ಇ.ಸಿ. ೧೦ ಬೌರಿಂಗ್ ಪೇಟೆ ೧೧

[7]ಇ.ಸಿ. ೧೦ ಗೌರಿಬಿದನೂರು ೬

[8]ಇ.ಸಿ. ೮ (ಆರ್) ಮದ್ದೂರು ೮೭ ಮತ್ತು ೯೩.

[9]ಇ.ಸಿ. ೧೦ (ಆರ್) ಬಾಗೇಪಲ್ಲಿ ೧೦.

[10]ಇ.ಸಿ. ೫ (ಆರ್) ಕೃಷ್ಣರಾಜನಗರ ೯೨,

[11]ಇ.ಸಿ. ೧೧ ದಾವಣಗೆರೆ ೨೩ ಮತ್ತು ೨೯.

[12]ಇ.ಸಿ. ೯ ಕನಕಪುರ ೯೭

[13]ಇ.ಸಿ. ೧೦ ಮುಳುಬಾಗಿಲು ೧೩೧

[14]ಅದೇ ೭.

[15]ಇ.ಸಿ. ೩ (ಆರ್) ಗುಂಡ್ಲುಪೇಟೆ ೧೪೯.

[16]ರೈಸ್ ೨ ಪು ೩೧೦.

[17]ಇ.ಸಿ. ೯ ಚೆನ್ನಪಟ್ಟಣ ೨ ಮತ್ತು ೪.

[18]ಎ.ಆರ್.ಇ.ಇ. ೧೯೬೨-೬೩-ಎ-೧-೪೬

[19]ಇ.ಸಿ. ೬ (ಆರ್) ಪಾಂಡವಪುರ ೧೯.

[20]ಇ.ಸಿ. ೩ (ಆರ್) ಹೆಗ್ಗಡೆದೇವನಕೋಟೆ ೮೯.

[21]ಇ.ಸಿ. ೧೦ ಮುಳುಬಾಗಿಲು ೧೭೨ ಮತ್ತು ೧೭೩