ಹೊಯ್ಸಳರು:

ಅತಿಪ್ರಮುಖ ಕೆರೆ ನಿರ್ಮಾಪಕರು : ಹನ್ನೊಂದನೆಯ ಶತಮಾನದ ಕೊನೆಯಿಂದ ಸುಮಾರು ಹದಿನಾಲ್ಕನೆಯ ಶತಮಾನದ ಮಧ್ಯದ ವರೆಗೂ ಉದ್ದಕ್ಕೂ ದಕ್ಷಿಣ ಕರ್ನಾಟಕವನ್ನೂ ಆಳಿದವರು ಹೊಯ್ಸಳರು. ಆದರೆ ಹನ್ನೊಂದನೆಯ ಶತಮಾನದ ಕೊನೆಯಿಂದ ಕೆಲವು ವರ್ಷಕಾಲ ಅವರ ಆಳ್ವಿಕೆಯ ಶಿಖರವಾಗಿದ್ದು, ಅವರು ಇಡೀ ಕರ್ನಾಟಕವನ್ನು ಆಳಿದರು. ಪ್ರಾಚೀನ ಕರ್ನಾಟಕದಲ್ಲಿ ಅತ್ಯಂತ ಶ್ರೇಷ್ಠ ಕೆರೆ ನಿರ್ಮಾಪಕರು ಹೊಯ್ಸಳರು.

ವಿಷ್ಣುವರ್ಧನ (೧೧೦೮ – ೧೧೫೬), ಇಮ್ಮಡಿ ವೀರ ಬಲ್ಲಾಳ (೧೧೭೩ – ೧೨೨೭), ಹಾಗೂ ಮುಮ್ಮಡಿವೀರ ಬಲ್ಲಾಳ (೧೨೮೨ – ೧೩೪೨) ಅತ್ಯಂತ ಕಾರ್ಯಶಾಲಿಗಳಾಗಿದ್ದವರು. ಅವರ ಆಳ್ವಿಕೆಯಲ್ಲಿ ಈ ದಿಸೆಯಲ್ಲಿ ಬಹಳ ಕಾರ್ಯ ನಡೆಯಿತು. ನಾನಾ ಜಿಲ್ಲೆಗಳಲ್ಲಿನ ಕೆರೆಗಳ ಹರವನ್ನು ನೊಡಿದಲ್ಲಿ ಅವರ ರಾಜಧಾನಿ ಬೇಲೂರು ಮತ್ತು ದ್ವಾರಸಮುದ್ರ ಅಥವಾ ಹಳೇಬೀಡು ಇದ್ದ ಹಾಸನ ಜಿಲ್ಲೆಗೆ ಮೊದಲನೆಯ ಸ್ಥಾನ, ಅನಂತರ ಕ್ರಮವಾಗಿ ಚಿಕ್ಕಮಗಳೂರು, ತುಮಕೂರು, ಮಂಡ್ಯ, ಜಿಲ್ಲೆಗಳು ಬರುತ್ತವೆ. ಚಿತ್ರದುರ್ಗ, ಕೋಲಾರ ಜಿಲ್ಲೆಗಳು ಕೊನೆಯವು. ತಮ್ಮ ಪ್ರಜೆಗಳ ನೀರಾವರಿ ಕಾರ್ಯಕ್ಕೆ ಪ್ರೋತ್ಸಾಹ ಕೊಡುವುದರಲ್ಲಿ ಹೊಯ್ಸಳ ಅರಸರು ಹೇಗೆ ವೈಯಕ್ತಿಕ ಆಸಕ್ತಿ ತಳೆದಿದ್ದರು ಎನ್ನುವುದಕ್ಕೆ ಒಂದು ಉದಾಹರಣೆ ಕೊಡಬಹುದು. ಕೃಷ್ಣರಾಜಪೇಟೆ ತಾಲ್ಲೂಕಿನ ಹರಿಹರಪುರ ಶಾಸನವು.[1] (ಕ್ರಿ.ಶ. ೧೩೨೨) ಕ್ರಿ.ಶ ೧೩೧೦ರಲ್ಲಿ ಮುಮ್ಮಡಿ ಬಲ್ಲಾಳ ಹರಿಹರ ಭಟ್ಟೊಪಾಧ್ಯಾಯನಿಗೆ ಮೂರು ಗ್ರಾಮಗಳನ್ನು ಕಾಣಿಕೆಯಿತ್ತುದನ್ನು ಹೇಳುತ್ತದೆ. ಭಟ್ಟೋಪಾಧ್ಯಾಯನಾದರೂ ಆ ಗ್ರಾಮಗಳನ್ನು ೧೨೬ ಮಹಾಜನರಿಗೆ ಕೊಟ್ಟು, ಅವರು ಒಂದು ಅಣೆಕಟ್ಟನ್ನು ಕಟ್ಟಿ ಕಾಲುವೆಗಳನ್ನು ನಿರ್ಮೀಸಬೇಕು ಎಂಬ ಷರತ್ತು ಹಾಕಿದ. ಆ ಕೆಲಸ ೧೩೨೨ರಲ್ಲಿ ಪೂರೈಸಿತು. ಆಗ ದೊರೆ ಮತ್ತೆ ಹರಿಹರಪುರಕ್ಕೆ ಬಂದು, ಆಣೆಯನ್ನು ಕಾಲುವೆಗಳನ್ನು ನೋಡಿದ. ಅದರಿಂದ ತೃಪ್ತವಾಗಿ, ಹರಹರ ಭಟ್ಟೋಪಾಧ್ಯಾಯನಿಗೂ ಮಹಾಜನರಿಗೂ, ಆಣೆಕಾಲುವೆಗಳ ಸಂರಕ್ಷಣೆಗಾಗಿ, ಕೆಲವು ತೆರಿಗೆಗಳ ಆದಾಯವನ್ನು ನೀಡಿದ.

ರಾಜಧಾನಿ ಪ್ರದೇಶ : ರಾಜಧಾನಿಗಳಾಗಿದ್ದ ಬೇಲೂರು ಮತ್ತು ಹಳೇಬೀಡು (ದ್ವಾರಸಮುದ್ರ) ಗಳಿಗೆ ನೀರು ಸರಬರಾಜು ಹಾಗೂ ಸುತ್ತಮುತ್ತಲಿನ ಭೂಮಿಗೆ ನೀರಾವರಿ – ಈ ಎರಡಕ್ಕೂ ದೊರೆಗಳ ಆದ್ಯಗಮನ ದೊರೆಕುವುದು ಸಹಜವೇ. ಹಳೇಬೀಡು ಸೇರಿದಂತೆ ಬೇಲೂರು ತಾಲ್ಲೂಕಿನ ನೀರಾವರಿ ಸೌಲಭ್ಯಗಳ ಬಗ್ಗೆ ಬರೆಯುತ್ತ ೧೮೯೭ರ ಮೈಸೂರು ಗೆಜೆಟಿಯರ್[2] ಹೀಗೆ ಹೇಳುತ್ತದೆ :

“ಯಗಚಿ ಮತ್ತು ಅದಕ್ಕೆ ಸೇರುವ ಸಣ್ಣ ಪುಟ್ಟ ತೊರೆಗಳು ಹಲವಾರು ಸಣ್ಣ ಕಾಲುವೆಗಳಿಗೆ ನೀರು ಒದಗಿಸುತ್ತವೆ. ಬೊಮ್ಡಿಹಳ್ಳಿ ನಾಲೆ ಮುಖ್ಯ ಹೊಳೆಯಿಂದ ಬಲದಂಡೆಯಲ್ಲಿ ೪ – ೫ ಮೈಲಿ ಹಾಯ್ದು ಬೇಲೂರಿನ ಬಳಿ ಕೊನೆಗೊಳ್ಳುತ್ತದೆ. ವಾಯುವ್ಯದಲ್ಲಿ ಒಂದು ಸಣ್ಣ ತೊರೆಯಿಂದ ಹೊರಡುವ ಕಿತ್ತೂರು ನಾಲೆ ಪಶ್ಚಿಮಕ್ಕೆ ಒಟ್ಟು ೫ ಮೈಲಿ ದೂರ ಹರಿಯುತ್ತದೆ. ಮದ್ದಿಘಟ್ಟ ನಾಲೆ ಎರಡು ಮೈಲಿ ಉದ್ದವಿದ್ದು ದಕ್ಷಿಣದ ಇನ್ನೊಂದು ಸಣ್ಣ ಹೊಳೆಯಿಂದ ಹೊರಡುತ್ತದೆ. ರಣಘಟ್ಟದಲ್ಲಿ ಒಂದು ಹಳೆಯ ಶಿಥಿಲವಾದ ಅಣೆ ಇದೆ. ಅದು ನದಿಯಿಂದ ಹಳೇಬೀಡು ಕೆರೆಗೆ ನೀರು ಸಾಗಿಸಲು ಯೋಚಿತವಾಗಿದ್ದಿರಬೇಕು. ಹಾಗೆ ನೀರು ಹಾಯಿಸುತ್ತಿದ್ದ ನಾಲೆಯ ಹೆಸರು ಸಂಗಿದೇವರ ಕಾಲುವೆ. ಅದರ ದಡ ಕೆಲವು ಕಡೆ ೧೫ ರಿಂದ ೨೦ ಅಡಿ ಎತ್ತರವಿದೆ”

ಬೇಲೂರು ಹಳೇಬೀಡು ಎರಡೂ ಹೊಯ್ಸಳರ ರಾಜಧಾನಿಗಳಾಗಿದ್ದುದರಿಂದ ಮೇಲೆ ಹೇಳಿದ ನೀರಾವರಿ ಕಾರ್ಯಗಳೆಲ್ಲ ಅವರ ಕಾಲದ್ದೆ ಎಂದು ಧಾರಾಳವಾಗಿ ಹೇಳಬಹುದು. ಈ ಊಹೆಗೆ ಹಳೇಬೀಡಿನ ಬಳಿ ಸಿಕ್ಕ ಕ್ರಿ.ಶ. ೧೩೦೦ರ ಸುಮಾರಿನ ಒಂದು ಶಾಸನದಲ್ಲಿ[3] ಸಮರ್ಥನೆ ಸಿಗುತ್ತದೆ. ಎಲಜಿ (ಎಗಜಿ) ನದಿಯಿಂದ ತೋಡಲಾದ ಒಂದು ಕಾಲುವೆಯ ಬಗ್ಗೆ ಶಾಸನ ‘ಎಲ್ಲ ಜನರೂ ಅದರಲ್ಲಿ ಸ್ನಾನ ಮಾಡಬಹುದು’ ಎನ್ನುತ್ತದೆ. ಅದರಲ್ಲಿ ರಾಜಗುರು ವಿಷ್ಣು ಉಪಾಧ್ಯಾಯನ ಸಹಿ ಇದೆ. ಮೆಕಂಜಿ ಹೇಗೆ ಹೇಳುತ್ತಾನೆ.

“ರಾಜಧಾನಿಗೆ ನೀರು ಒದಗಿಸಲು ಹಾಗೂ ಅದರ ಸುತ್ತಲ ಭೂಮಿಯ ಸಾಗುವಳಿಗೆ ನೀರು ಪೂರೈಸಲು ಬೈಲೂರು (ಬೇಲೂರು) ಬಳಿ ಹರಿಯುವ ಯಗಜಿ ನದಿಯ ನೀರನ್ನು ಕಾಲುವೆ ಮೂಲಕ ರಾಜಧಾನಿಗೆ ಹರಿಯಿಸಲಾಗುತ್ತಿತ್ತು ಎನ್ನಲಾಗಿದೆ. ಈ ಕತೆಗೆ ಆಧಾರವಾಗಿ ಹಾಸನ – ಬೇಲೂರು ರಸ್ತೆಯಲ್ಲಿ ೧೬ನೆಯ ಮೈಲಿಕಲ್ಲಿನ ಬಳಿ ಒಂದು ಆಳವಾದ ಸೀಳು ಇದೆ. ಆ ಸೀಳಿನ ಆಳ ಗಾತ್ರಗಳನ್ನು ನೊಡಿದರೆ ಅದು ಸಣ್ಣ ಕೆಲಸವೇನಲ್ಲ ಎನ್ನುವುದು ದೃಢವಾಗುತ್ತದೆ. ಇಡೀ ಯೋಜನೆ ಆ ಕಾಲದ ಇಂಜಿನಿಯರಿಂಗ್ (ಶಿಲ್ಪ) ಕೌಶಲ್ಯಕ್ಕೆ ಭೂಷಣಪ್ರಾಯವಾಗಿದೆ. ರಾಜಧಾನಿಗೆ ಶೀಘ್ರವಾಗಿ ನೀರು ಹಾಯಿಸಲಾಗುತ್ತಿದ್ದ ಒಂದು ಮೇಲು ಕಾಲುವೆಯ ತುಣುಕನ್ನು ದಕ್ಷಿಣ ಕೋಟೆಗೋಡೆಯ ಆಚೆಯ ತೋಟದಲ್ಲಿ ಕಾಣಬಹುದು.”[4]

ಯಗಚಿಯಿಂದ ನೀರು ತರುತ್ತಿದ್ದ ನಾಲೆಗಳ ಜೊತೆಗೆ, ಎರಡೂ ರಾಜಧಾನಿಗಳಲ್ಲಿ ಅನೇಕ ಜಲಾಶಯಗಳಿದ್ದವು. ಕ್ರಿ.ಶ. ೧೧೪೮ರ ಒಂದು ಶಾಸನದಂತೆ[5] ಬಿಟ್ಟಿದೇವ ಮತ್ತು ಮಾದಿಕಬ್ಬೆಯರು ಬೇಲೂರಿನಲ್ಲಿ ಹೊಯ್ಸಳಸಮುದ್ರವನ್ನು ಕಟ್ಟಿಸಿದರು. ಹಾಗೂ ಹಲವಾರು ಕೆರೆಗಳನ್ನು ಜೀರ್ಣೋದ್ಧಾರ ಮಾಡಿದರು. ಕ್ರಿ.ಶ. ೧೧೯೬ರ ಇನ್ನೊಂದು ಬೇಲೂರು ಶಾಸನ[6] ಸಾಮಂತ ಮಾರನೆಂಬವನು ಸಾಂತಸಮುದ್ರ ಹಾಗೂ ಬ್ರಹ್ಮಸಮುದ್ರ ಎಂಬ ಕೆರೆಗಳನ್ನು ತನ್ನ ಸ್ವಂತ ಖರ್ಚಿನಲ್ಲಿ ಕಟ್ಟಿಸಿದ ಎಂದು ಹೇಳುತ್ತದೆ. ಹರಿಹರ, ರಾಘವಾಂಕ ಕವಿಗಳ ಜೊತೆಗೆ ಮೂರನೆಯ ಕವಿಯಾಗಿದ್ದ ಕೆರೆಯ ಪದ್ಮರಸ ಕನ್ನಡ ಸಾಹಿತ್ಯಾಭ್ಯಾಸಿಗಳಿಗೆ ಪರಿಚಿತ. ಆತ ಬೇಲೂರಿನಲ್ಲಿ ನರಸಿಂಹ ಬಲ್ಲಾಳದ[7] ಆಳ್ವಿಕೆಯಲ್ಲಿ ಒಂದು ಕೆರೆ ಕಟ್ಟಿಸಿದ. ಆ ಕೆರೆಯ ಹೆಸರು ವಿಷ್ಣುಸಮುದ್ರ. ಅದಕ್ಕಾಗಿಯೇ ಆತನ ಹೆಸರಿಗೆ ‘ಕೆರೆಯ’ ಎಂಬ ಬಿರುದು ಲಭಿಸಿತು. ಹೀಗೆ ಬೇಲೂರಿನಲ್ಲಿ ಅಲ್ಲಿನ ಜನಸೇವಾಕಾಂಕ್ಷಿ ಪ್ರಜೆಗಳು ತಮ್ಮ ವೆಚ್ಚದಿಂದಲೇ ಕಟ್ಟಿಸಿದ ಕೆರೆಗಳಿಂದ ಒಳ್ಳೆಯ ನೀರು ಸರಬರಾಜು ಇತ್ತು.

ಬೇಲೂರಿನ ಹಾಗೆಯೇ ಹಳೆಬೀಡು ಸಹ ಯಗಚಿಯಿಂದ ಪಡೆಯುತ್ತಿದ್ದ ನೀರಿನ ಜೊತೆಗೆ ಅನೇಕ ಕೆರೆಗಳನ್ನು ಪಡೆದಿತ್ತು. ಅಲ್ಲಿನ ಒಂದು ಅತಿಪ್ರಾಚೀನ ಕೆರೆಯನ್ನು ವಿನಯಾದಿತ್ಯ ರಾಜ ಕ್ರಿ.ಶ. ೧೦೬೨ರಲ್ಲಿ ಕಟ್ಟಿಸಿ, ಆತ ಆ ಕೆರೆ ತೂಬನ್ನು ಮಾಡಿಸಿದ. ಹಾಗೂ ಕೆರೆಯ ಸಂರಕ್ಷಣೆಗಾಗಿ ಭೂಮಿದಾನವಿತ್ತ ಎಂದು ಆತನ ಒಂದು ಶಾಸನ[8] ಹೇಳುತ್ತದೆ. ಹಳೇಬೀಡು ಅಥವಾ ದೋರಸಮುದ್ರದಲ್ಲಿನ ಇನ್ನೊಂದು ಕೆರೆಯ ಈಗಿನ ಹೆಸರು ಹಳೇಬೀಡು ಕೆರೆ. ಕ್ರಿ.ಶ. ೧೧೩೬ರ ಒಂದು ಶಾಸನ[9] ಇದರ ನಿರ್ಮಾಣವನ್ನು ಪ್ರಸ್ತಾಪಿಸುತ್ತ ಇದನ್ನು ಪೆರಿಯ ಕೆರೆ ಅಥವಾ ದೊಡ್ಡ ಕೆರೆ ಎಂದು ಹೇಳಿದೆ. ಈ ಕೆರೆಯ ಏರಿಯ ಮೇಲೆ ಕ್ರಿ.ಶ. ೧೧೪೦ರ ಒಂದು ಶಾಸನ[10] ಇದೆ. ಶಿವಾಲಯಕ್ಕಾಗಿ ಹಿರಿಯ ಕೆರೆಯ ಕೆಳಗಿನ ಭೂಮಿಯನ್ನು ದಾನವಾಗಿತ್ತುದನ್ನು ಶಾಸನ ಹೇಳುತ್ತದೆ. ಈಗ ಶಿವಾಲಯ ಇಲ್ಲ. ಆದರೆ ದೇವಾಲಯದ ಅವಶೇಷಗಳು ಕೆರೆಯ ಅಂಗಳದಲ್ಲಿ ಕಾಣಸಿಗುತ್ತವೆ. ಬುಕಾನನ್ ಸುಮಾರು ಕ್ರಿ.ಶ. ೧೮೦೦ರಲ್ಲಿ ಈ ಕೆರೆಯನ್ನು ನೋಡಿದ “ಅದು ರಾಜಧಾನಿಯ ಕೇಂದ್ರ ಪ್ರದೇಶವಾಗಿತ್ತು. ಮತ್ತು ಒಳ್ಳೆಯ ಭತ್ತದ ಗದ್ದೆಗಳಿಗೆ ನೀರು ಒದಗಿಸುತ್ತಿತ್ತು. ಈಗ ಅಲ್ಲಿ ಕಬ್ಬನ್ನು ಹಾಕುತ್ತಾರೆ.” ಎಂದು ಹೇಳುತ್ತಾನೆ.[11]

ರಾಜಧಾನಿಯ ನೆರೆಹೊರೆ : ಹಳೇಬೀಡಿನ ಈಶಾನ್ಯಕ್ಕೆ ೧೮ ಮೈಲಿ ದೂರದಲ್ಲಿ ಬಾಣಾವರ ಎಂಬ ಒಂದು ಸಣ್ಣ ಊರು ಇದೆ. ಹೊಯ್ಸಳರ ಕಾಲದಲ್ಲಿ ಅದು ಉಚ್ಚಾಯಸ್ಥಿತಿಯಲ್ಲಿದ್ದ ವ್ಯಾಪರ ಕೇಂದ್ರವಾಗಿತ್ತು. ಆ ಉನ್ನತ ಸ್ಥಿತಿಗೆ ಕಾರಣ ಕೇರಳದಿಂದ ಬಂದಿದ್ದ ಒಂದು ವರ್ತಕನ ಪರಿವಾರ. ಆ ಚೆಟ್ಟಿ ಅಥವಾ ವರ್ತಕತನ ಪರಿವಾರ ಹಡಗುಗಳ ಮೂಲಕ ವ್ಯಾಪಾರ ನಡೆಸುತ್ತಿತ್ತು. ಹೊಯ್ಸಳ ಅರಸರಿಗೆ ಕುದುರೆಆನೆ ಹಾಗೂ ಮುತ್ತುಗಳನ್ನು ಸರಬರಾಜು ಮಾಡುತ್ತಿತ್ತು. ಆ ಪರಿವಾರಕ್ಕೆ ಸೇರಿದ ಕಮ್ಮಟಶೆಟ್ಟಿ ಬಾಣಾವರದಲ್ಲಿ ಒಂದು ಸಣ್ಣ ಕೆರೆಯನ್ನು ದೊಡ್ಡದು ಮಾಡಿಸಿದ. ಹಾಗೂ ತನ್ನ ಮಗನ ಹೆಸರಿನಲ್ಲಿ ಕನಕನಕೆರೆಯೆಂಬ ಹೊಸ ಕೆರೆಯನ್ನು ಕಟ್ಟಿಸಿದ. ಬಂಚಿಕಟ್ಟಿ ಎಂಬ ಇನ್ನೊಂದು ಕೆರೆಯನ್ನು ವಿಸ್ತಾರಗೊಳಿಸಿದ[12] ಬಾಣಾವರದ ಹತ್ತಿರವೇ ದಕ್ಷಿಣಕ್ಕೆ ಅರಸಿಕೆರೆ ಇದೆ. ಅರಸಿಯ ಕೆರೆ ಎಂಬ ಅದರ ಹೇಸರೇ ಸೂಚಿಸುವಂತೆ ಅಲ್ಲಿ ಹನ್ನೊಂದನೆಯ ಶತಮಾನದಲ್ಲಿ ಕಟ್ಟಲಾದ ಹಳೆಯ ಕೆರೆಯೊಂದಿದೆ. ಕ್ರಿ.ಶ೧೧೯೦ರಲ್ಲಿ ಅದರ ಕೋಡಿಯ ಸಂರಕ್ಷಣೆಗಾಗಿ ಭೂಮಿ ನೀಡಲಾಯಿತು.[13] ಬೊಮ್ಮನಹಳ್ಳಿ ಅರಸೀಕೆರೆಯ ಹತ್ತಿರದ ಈಗಿನ ಒಂದು ಸಣ್ಣ ಹಳ್ಳಿ. ಅದರೆ ಹೊಯ್ಸಳರ ಕಾಲದಲ್ಲಿ ಅದು ತೋಟಗಳ ಗುಂಪುಗಳಿಂದ, ಚೆನ್ನಾಗಿ ತುಂಬಿದ ಕಾಲುವೆಗಳಿಂದ, ಕಡಲಿನಂಥ ಕೆರೆಗಳಿಂದ, ಸುತ್ತಲೂ ಬೆಳೆದು ನಿಂತ ಪೈರುಪಚ್ಚೆಗಳಿಂದ, ಜನ ಸಮೂಹಗಳಿಂದ, ಭವ್ಯ ದೇಗುಲಗಳಿಂದ ನಿಬಿಡತವಾಗಿತ್ತು ಎಂದು ವರ್ಣಿತವಾಗಿದೆ.[14]

ಬಾಣಾವರ ಉತ್ತರಕ್ಕೆ ಇರುವುದು ಆಧುನಿಕ ಊರು ಕಡೂರು. ಆ ತಾಲ್ಲೂಕಿನಲ್ಲಿ ಕೆರೆಸಂತೆ ಅಥವಾ ವಿಷ್ಣುಸಮುದ್ರ ಎಂಬ ಸಣ್ಣ ಹಳ್ಳಿ ಇದೆ. ಊರಿಗೆ ಹೆಸರು ಬಂದುದು ಕೆರೆಯಿಂದಲೇ ಎನ್ನುವುದು ಆ ಎರಡೂ ಹೆಸರುಗಳ ಅರ್ಥ.[15] ಕ್ರಿ.ಶ. ೧೧೫೯ರ ಒಂದು ಶಾಸನ[16] ಕೆರೆಸಂತೆಯ ಹಿರೇಕೆರೆಯ ಕೆಳಗೆ ಹಳ್ಳಿಯ ಒಂದು ದೇವಾಲಯಕ್ಕಾಗಿ ಭೂಮಿ ದಾನಮಾಡಿದ್ದನ್ನು ತಿಳಿಸುತ್ತದೆ. ಹಿರೇಕೆರೆ ಅಥವಾ ದೊಡ್ಡಕೆರೆ ಎಂದಾಗ, ಅಲ್ಲಿ ಸಣ್ಣ ಸಣ್ಣ ಕೆರೆಗಳು ಇದ್ದುವು ಎನ್ನುವುದು ಸ್ಪಷ್ಟ. ಕ್ರಿ.ಶ ೧೧೮೨ರಲ್ಲಿ ಇಮ್ಮಡಿ ವೀರ ಬಲ್ಲಾಳನ ಆಳ್ವಿಕೆಯಲ್ಲಿ ಅಲ್ಲಿ ವಿಷ್ಣುಸಮುದ್ರ ಕೆರೆಯ ನಿರ್ಮಾಣವಾದಾಗ ಕೆರೆಸಂತೆ ವಿಷ್ಣು ಸಮುದ್ರ ಅಗ್ರಹಾರ ಆಯಿತು ಎಂದು ತೋರುತ್ತದೆ.[17] ಮಾಧವೀಭಟ್ಟಾರ್ಯ ಎಂಬ ದೊಡ್ಡ ವರ್ತಕನ ಮಗ ಅಲ್ಲಾಳದೇವ ವಿಷ್ಣುಸಮುದ್ರ ಅಥವಾ ಕೆರೆಸಂತೆ ಅಗ್ರಹಾರದ ಕೆರೆಗೆ ೩೦೦ ಗದ್ಯಾಣಗಳನ್ನು ದಾನವಾಗಿ ಕೊಟ್ಟ. ವರ್ಷಕ್ಕೆ ೩೦ ಗದ್ಯಾಣಗಳ ಬಡ್ಡಿಹಣವನ್ನು ಮಹಾಜನರು ಕೆರೆಯ ತೂಬು ಹಾಗೂ ಕಾಲುವೆಗಳ ದುರಸ್ತಿಗೆ ವೆಚ್ಚಮಾಡಬೇಕು ಎಂದು ಅದೇ ಸ್ಥಳದಲ್ಲಿನ ಕ್ರಿ.ಶ. ೧೨೫೦ರ ಶಾಸನವೊಂದು[18] ತಿಳಿಸುತ್ತದೆ. ಕೆರೆಗಳ ಸಂರಕ್ಷಣೆ ಅಥವಾ ಅತ್ಯಗತ್ಯ ವ್ಯವಸ್ಥೆಗಳಿಂದಾಗಿ ಕೆರೆಗಳ ಆಯುಷ್ಯ ನೂರಾರು ವರ್ಷಕ್ಕೆ ಹೆಚ್ಚಿತು ಎನ್ನುವುದನ್ನು ಕ್ರಿ.ಶ. ೧೫೫೦ರ ಒಂದು ಶಾಸನ[19] ದೃಢಪಡಿಸುತ್ತದೆ. ಕೆರೆಸಂತೆ ಕೆರೆಯ ಕೆಳಗಿನ ಒಂದೂವರೆ ಖಂಡುಗ ಬೆಳೆಯುವ ೧೦೦ ಕಂಬ ಗದ್ದೆಯನ್ನು ಧರ್ಮಾರ್ಥವಾಗಿ ಕೊಡಲಾಯಿತು ಎಂದು ಶಾಸನ ಹೇಳುತ್ತದೆ. ಕಾಲಕಾಲಕ್ಕೆ ದುರಸ್ತಿ ಕಾರ್ಯ ನಡೆದಲ್ಲಿ ಕೆರೆಗಳು ಶತಮಾನಗಳ ಕಾಲ ಸೇವೆ ಮಾಡುತ್ತಿದ್ದವು ಎನ್ನುವುದನ್ನು ಇದು ತೋರಿಸುತ್ತದೆ. ಆದರೆ ಕಡೂರಿನ ಬಳಿ ಹೊಯ್ಸಳರ ಕಾಲದಲ್ಲಿ ಅಥವಾ ಅವರಿಗೆ ಹಿಂದೆಯೇ ಕಟ್ಟಿಲಾದ ಅತ್ಯಂತ ಸುಂದರವಾದ ಕೆರೆಗಳೆಂದರೆ ಮದಗದಕೆರೆ ಹಾಗೂ ಅಯ್ಯನಕೆರೆ ಎಂಬ ಜೋಡಿಕೆರೆಗಳು. ನಿರ್ಮಾಣದ ದೃಷ್ಟಿಯಿಂದ ಅವು ತುಂಬ ಮುಖ್ಯವಾದವು ಮತ್ತು ಸ್ಥಳದ ದೃಷ್ಟಿಯಿಂದ ತುಂಬ ಆಕರ್ಷಕವಾದವು. ಮೊದಲನೆಯದು ಅಯ್ಯನ ಕೆರೆ ಅಥವಾ ದೊಡ್ಡಮದಗಕೆರೆಯು ಸಕ್ರೆಪಟ್ಟಣಕ್ಕೆ ನಾಲ್ಕುಮೈಲಿ ಈಶಾನ್ಯಕ್ಕೆ ಇದೆ. ಅಲ್ಲಿ ಶಕುನಗಿರಿ ಬೆಟ್ಟದ ಆಗ್ನೇಯ ಬುಡದಲ್ಲಿ ಸುತ್ತಲ ಬೆಟ್ಟಗಳಲ್ಲಿನ ಒಂದೇ ಬಾಯಿಯಿಂದ ೧೭೦೦ ಅಡಿ ಅಗಲದ ಸಂದಿಯಲ್ಲಿ ವೇದಾನದಿ ನುಗ್ಗಿಬರುತ್ತದೆ. ಅಲ್ಲಿ ಕಟ್ಟಿದ ಕಟ್ಟೆಯಿಂದ ಈ ಕೆರೆ ಆಗಿದೆ. ಏಳು ಮೈಲಿ ಸುತ್ತಳತೆಯ, ನಡುನಡುವೆ ಹಲವಾರು ನಡುಗಡ್ಡೆಗಳ ಬೆಟ್ಟಗಳನ್ನುಳ್ಳ ಸುಂದರ ಜಲವಿಸ್ತಾರ ಅದು. ಅದರಿಂದ ನಾಲ್ಕು ಕಾಲುವೆಗಳನ್ನು ತೆಗೆದು ಸುಮಾರು ೩೦೦ ಎಕರೆಗೆ ನೀರಾವರಿ ಮಾಡಲಾಗುತ್ತಿದೆ. ಇನ್ನೊಂದು ಕೆರೆ ಮದಗಕೆರೆ ಅಥವಾ ಕಡೂರು ಮದಗದಕೆರೆ, ಅದೇ ರೀತಿ ಕಟ್ಟಲಾದುದು. ಶಿವನಗಿರಿ ಹಾಗೂ ಹಗರಿಕನಗಿರಿ ಎಂಬ ಎರಡು ಬೆಟ್ಟಗಳು ಒಂದು ಸ್ವಾಭಾವಿಕ ತಗ್ಗು ಅಂಗಳವನ್ನು ಉಂಟುಮಾಡುಷ್ಟು ಪರಸ್ಪರ ಸಮೀಪಿಸುವ ಅಡೆಯಲ್ಲಿ ವೇದಾನದಿಯ ತಂಗಿ ಹೊಳೆಯಾದ ಅವತಿನದಿಗೆ ಅಡ್ಡ ಕಟ್ಟೆ ಹಾಕಿ ನಿರ್ಮಿತವಾಗಿದೆ. ಏರಿ ೧೨೦೦ ಅಡಿ ಉದ್ದವಾಗಿದೆ.[20]

ಈ ಕೆರೆಗಳಿಂದ ಹೊರಬೀಳುವ ವೇದಾ ಮತ್ತು ಆವತಿ ನದಿಗಳು ಕಡೂರಿನ ಬಳಿ ಸೇರಿ ವೇದಾವತಿ ನದಿ ಆಗುತ್ತದೆ.

ಹೊಯ್ಸಳ ಅಧಿಕಾರಿಗಳು : ಕಡೂರು, ಬಾಣಾವರ, ಅರಸೀಕೆರೆ ಇರುವುದು ರಾಜಧಾನಿ ಹಳೇಬೀಡಿನ ಈಶಾನ್ಯಕ್ಕೆ. ರಾಜಧಾನಿಯ ಇತರ ಪಾರ್ಶ್ವಗಳಲ್ಲೂ ಇದ್ದ ಕೆರೆಗಳ ಇದೇ ಬಗೆಯ ವರ್ಣನೆಗಳನ್ನು ಕೊಡಬಹುದು. ಅದರೆ ಸ್ಥಳ ಸಂಕೋಚ ತಡೆಯುತ್ತದೆ. ನೀರಾವರಿ ಸೌಲಭ್ಯಗಳನ್ನು ಒದಗಿಸುವ ವಿಷಯದಲ್ಲಿ ರಾಜಧಾನಿಗಳು ಮತ್ತು ನೆರೆಹೊರೆಯ ಪ್ರದೇಶವು ಮಾತ್ರವೇ ದೊರೆಗಳ ಹಾಗೂ ಅಧಿಕಾರಿಗಳ ಗಮನಕ್ಕೆ ಪಾತ್ರವಾಗಿದ್ದವು ಎಂದಲ್ಲ. ಹೊಯ್ಸಳ ಅಧಿಕಾರಿಗಳು ಇತರ ಪ್ರದೇಶಗಳಿಗೂ ಅಷ್ಟೆ ಗಮನವೀಯುತ್ತಿದ್ದರು. ವೀರದೇವ ಎಂಬ ಒಬ್ಬ ಅಧಿಕಾರಿ ೧೧೮೬ರಲ್ಲಿ ವೀರಬಲ್ಲಾಳಪುರ ಎಂಬ ಊರನ್ನು ಕಟ್ಟಿಸಿದ. ಅದರಲ್ಲಿ ಅಥವಾ ಅಸುಪಾಸಿನಲ್ಲಿ ರುದ್ರಸಮುದ್ರ, ಗಂಗಸಮುದ್ರ, ಅಚ್ಚ್ಯುತಸಮುದ್ರ ಹಾಗೂ ವೀರಸಮುದ್ರ ಎಂಬ ನಾಲ್ಕು ಕೆರೆಗಳನ್ನು ಕಟ್ಟಿಸಿದ.[21] ಈ ಬಾಬಿನಲ್ಲಿ ಎದ್ದು ಕಾಣುವ ಇನ್ನೊಬ್ಬ ಮಂತ್ರಿ ಪೆರುಮಾಳದೇವ ಡಣ್ಣಾಯಕ. ಆತನ ಔದಾರ್ಯ ರಾಜ್ಯದ ನಾನಾಭಾಗಗಳಲ್ಲಿ ಎದ್ದು ಕಾಣುತ್ತಿತ್ತು. ಉದಾಹರಣೆಗೆ ಕ್ರಿ.ಶ. ೧೨೬೯ರಲ್ಲಿ ಮುಮ್ಮಡಿ ನರಸಿಂಹನ ಆಳ್ವಿಕೆಯಲ್ಲಿ ಪೆರಮಾಳದೇವ ಅಪಾರ ಹಣವನ್ನು ವೆಚ್ಚಮಾಡಿ ಮಂಡ್ಯ ಜಿಲ್ಲೆಯ ಬೆಳ್ಳೂರಿನಲ್ಲಿ ಅಲ್ಲಾಳಸಮುದ್ರ, ಅವ್ವೆಯರ ಕೆರೆ, ತಗರಚೆಕೆರೆಗಳನ್ನು, ಕಾಲುವೆಗಳನ್ನು ಕಟ್ಟಿಸಿದ. ಗದ್ದೆಗಳನ್ನು ಮಾಡಿಸಿದ. ಹಾಗೂ ಅವಿಚ್ಚನ್ನನಾಗಿ ನೀರು ಒದಗುವಂತೆ ಮಾಡಿದ. ಈ ಉದ್ದೇಶಕ್ಕಾಗಿ ಆತ ಸ್ಥಳದ ಮುಖಂಡರ ಸಹಕಾರವನ್ನು ಪಡೆದ. ಈ ಪೈಕಿ ಇಬ್ಬರು ತಂಬಿಯಣ್ಣ ಹಾಗೂ ಶಿಗುವೇಂಗಡ ಪೆರುಮಾಳ್ ಎಂಬ ನಂಬಿಯಾರರು ಅಥವಾ ಪೂಜಾರಿಗಳು ಒಂದು ಕಡೆ, ಹಾಗೂ ಮಹಾಜನರು ಒಂದು ಕಡೆ ಒಪ್ಪಂದ ಮಾಡಿಕೊಂಡರು. ಅದರ ಪ್ರಕಾರ ನಂಬಿಯಾರರು ಕಾಲುವೆಗೆ ಅಡ್ಡ ಬರುತ್ತಿದ್ದ ತಮ್ಮ ಖುಷ್ಕಿಭೂಮಿಯನ್ನು ಬಿಟ್ಟುಕೊಟ್ಟು ಕಾಲುವೆ ಕೆಳಗೆ ತರಿ ಜಮೀನನ್ನು ಪಡೆದರು. ಅಲ್ಲದೆ ನಿಬಂಧ(ಕಾಣಿಕೆ)ಯಾಗಿ ಪ್ರತಿವರ್ಷವೂ ಖಂಡುಗಕ್ಕೆ ೪ ಹಣವನ್ನು ಬಿತ್ತುವಟ್ಟವಾಗಿ (ಸಂರಕ್ಷಣೆ) ಕೊಡುವುದಕ್ಕೂ ನಿರಂತರ ನೀರು ಸರಬರಾಜು ಇರುವಂತೆ ಖಾತರಿಮಾಡಲು ಅಧಿಕಾರಿಗಳಿಗೆ ಹಾಗೂ ಗೌಡರಿಗೆ ಅಥವಾ ಮುಖ್ಯಸ್ಥರಿಗೆ ನಿಗದಿಯಾದ ಮೊತ್ತವನ್ನು ಕೊಡುವುದಕ್ಕೂ ಸಮ್ಮತಿಸಿದರು. ಅದೇ ಸ್ಥಳದಲ್ಲಿ ಗೇಣಿ ರೈತರ ವಿಷಯದಲ್ಲಿ ಸುಂಕವಿನಾಯತಿ, ಮನೆಗಂದಾಯ ಪಾವತಿ, ಶಿಕ್ಷಣ ಸೌಲಭ್ಯ, ಪೂಜೆ, ಅನ್ನದಾನ ಇತ್ಯಾದಿಗಳ ಬಗ್ಗೆಯೂ ಇನ್ನೊಂದು ಒಪ್ಪಂದವಾಯಿತು.[22] ಇದೆಲ್ಲ ಏರ್ಪಾಡು ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಯಲ್ಲಿ ಬರುವಂಥದು. ಕೆರೆ ನಿರ್ಮಾಣದ ಜೊತೆಗೇ ಅದರ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಗೂ ವ್ಯವಸ್ಥೆ ಮಾಡಲಾಗುತ್ತಿತ್ತು ಎನ್ನುವುದನ್ನು ಇದು ಸೂಚಿಸುತ್ತದೆ.

ಕೆಲವು ಕುಟುಂಬಗಳಲ್ಲಿ ಕೆರೆ ನಿರ್ಮಾಣ ಒಂದು ಮಹಾದಾಸೆಯಾಗಿತ್ತು. ಕ್ರಿ.ಶ. ೧೧೦೦ರ ಚಿಂತಾಮಣಿ ತಾಲ್ಲೂಕು ಬೋವಿಗೊಂಡಲಹಳ್ಳಿ ಶಾಸನ[23] ಇದಕ್ಕೆ ಉದಾಹರಣೆ. ವಿಕ್ರಮಗೊಂಡನೆಂಬ ದೊಡ್ಡ ಜಮೀನುದಾರ ಒಂದು ಕೆರೆಯನ್ನು, ಕೋಡಿಯನ್ನು ಕಟ್ಟಿಸಿದ. ಅವನ ಮಕ್ಕಳೂ, ಅವರ ಮಕ್ಕಳೂ ಸಹ ಕೆರೆಗಳನ್ನು ಕಟ್ಟಿಸಿದರು ಎನ್ನುತ್ತದೆ ಶಾಸನ. ಕೆರೆನಿರ್ಮಾಣ ಒಂದು ವ್ಯಾಪಾರೀ ಉದ್ಯಮವೂ ಆಗಿದ್ದಿರಲೂಬಹುದು. ಮತ್ತು ಆ ವ್ಯಾಪಾರೀಗುಣ ವಂಶದಲ್ಲಿ ಹರಿದು ಅವರೆಲ್ಲ ಅದರಲ್ಲಿ ವಿಶೇಷತೆ ಪಡೆದಿರಬಹುದು. ಆದರೆ ಇನ್ನೂ ಕೆಲವು ಕುಟುಂಬಗಳಲ್ಲಿ ಇನ್ನೊಂದು ಉದ್ದೇಶ ಅಷ್ಟೇ ಬಲವಾಗಿದ್ದುದೂ ಉಂಟು. ಕೆರೆ ಕಟ್ಟಿಸುವುದರ ಮೂಲಕ ದೇವರ ಸೇವೆ ಮಾಡುವುದು ಇಲ್ಲವೇ ಪುಣ್ಯ ಸಂಪಾದಿಸುವುದು ಎಂಬ ಉದ್ದೇಶ. ವಿಷ್ಣುವರ್ಧನನ ಹಿರಿಯ ದಂಡನಾಯಕ ಗಂಗಪ್ಪಯ್ಯ ಕಣಗಲೆ ಯುದ್ಧದಲ್ಲಿ ತನ್ನ ಒಡೆಯನಿಗೆ ಅದ್ಭುತ ವಿಜಯವನ್ನು ಸಂಪಾದಿಸಿದ. ಇದರಿಂದ ಅತ್ಯಂತ ಸುಪ್ರೀತನಾದ ದೊರೆ ಯಾವ ಬಹುಮಾನ ಬೇಕು ಹೇಳು ಎಂದು ದಳಪತಿಯನ್ನು ಕೇಳಿದ. ಆ ನಮ್ರ ದಳಪತಿ ಕೇಳಿದ ಬಹುಮಾನ ಇದು – “ನನಗೆ ಒಂದು ಹಳ್ಳಿಯನ್ನು ನೀಡಿ. ಅಲ್ಲಿ ಒಂದು ಕೆರೆ ಕಟ್ಟಿಸುತ್ತೇನೆ. ಅದರ ನೀರನ್ನು ನನ್ನ ಕುಲದೇವರ ಪೂಜೆಗೆ ಉಪಯೋಗಿಸಬಹುದು. ಹಾಗೂ ಕೆರೆಯಿಂದ ಖಾತರಿಯಾಗಿ ನೀರು ಒದಗಿ ಸಾಗುವಳಿಯಾಗಿ ಅದರಿಂದ ಸಿಗುವ ಆಹಾರಧ್ಯಾನವನ್ನು ಅನ್ನದಾನಕ್ಕೆ ಉಪಯೋಗಿಸಬಹುದು”. ಯಾವುದೇ ಬಹುಮಾನವನ್ನಾದರೂ ಆತ ಒಡೆಯನಲ್ಲಿ ಕೇಳಬಹುದಾಗಿತ್ತು. ಒಂದು ಕೆರೆ ಕಟ್ಟಿಸಿ ಅದು ತನ್ನದೇವರ ಪೂಜೆಗೆ ಉಪಯೋಗವಾಗುವಂತೆ ಒಂದು ಹಳ್ಳಿಯನ್ನು ಬೇಡಿದನಲ್ಲ, ಅದು ಕೆರೆನಿರ್ಮಾಣದ ಹಿಂದೆ ಧಾರ್ಮಿಕ ಉದ್ದೇಶವೂ ಅಷ್ಟೇ ಬಲವಾಗಿತ್ತು ಎಂಬುದನ್ನು ತೋರಿಸುತ್ತದೆ.[24]

ಶ್ರೀಸಾಮಾನ್ಯ ನಿರ್ಮಾಪಕರು: ದೊರೆಗಳು, ಅಧಿಕಾರಿಗಳು ಇರಲಿ, ಸಾಮಾನ್ಯ ಜನ ಕೂಡ ಕೆರೆ ನಿರ್ಮಾಣಕಾರ್ಯದಲ್ಲಿ ಮುಂದಾಗುತ್ತಿದ್ದರು. ಸಿರಾ ತಾಲ್ಲೂಕಿನಲ್ಲಿ ಅಮರಪುರ ಶಾಸನ[25] (ಕ್ರಿ.ಶ. ೧೧೦೦) ಬೆಟ್ಟರಾಚಯ್ಯ ಎಂಬ ಕಾವಲುಗಾರನೊಬ್ಬ ಒಂದು ಕೆರೆಯನ್ನು ಹಾಗೂ ಒಂದು ಗುಡಿಯನ್ನು ಕಟ್ಟಿಸಿದ ಎನ್ನುತ್ತದೆ. ಸಾಮಾನ್ಯ ವ್ಯಕ್ತಿಯೊಬ್ಬ ಕೆರೆ ನಿರ್ಮಿಸಿದ ಇನ್ನೊಂದು ಉದಾಹರಣೆ ಕ್ರಿ.ಶ. ೧೧೯೫ರ ಮಾದೂಡಿ ಶಾಸನ[26]ದಲ್ಲಿದೆ. ಅಲ್ಲಿನ ಕೆರೆಯನ್ನು ಮಾವುತನೊಬ್ಬ ಕಟ್ಟಿಸಿದ ಎಂದು ದಾಖಲಾಗಿದೆ.

ಒಬ್ಬ ವ್ಯಕ್ತಿ ಕೆರೆಯನ್ನು ಕಟ್ಟಿದಾಗ, ಅವನ ಉದ್ದೇಶ ಏನಿತ್ತೊ ಬೊಟ್ಟು ಮಾಡಿ ಹೇಳುವುದು ಕಷ್ಟ. ಆದರೆ ಒಬ್ಬ ಧಾರ್ಮಿಕ ಮುಖಂಡ ಅಥವಾ ಸಂತ ಕಟ್ಟಿಸಿದಾಗ ಅಂಥ ಶಂಕೆಗೆ ಅವಕಾಶವೇ ಇರಲಾರದು. ಶ್ರೀರಂಗಪಟ್ಟಣಕ್ಕೆ ವಾಯುವ್ಯದಲ್ಲಿ ೧೮ ಕಿ.ಮೀ ದೂರದಲ್ಲಿರುವ ತೊಣ್ಣೂರಿನ ಮೋತಿ ತಲಾಬನ್ನು, ಮಹಾತ್ಮರಾದ ಶ್ರೀ ರಾಮಾನುಜಾಚಾರ್ಯರು ತಾವು ಮೇಲುಕೋಟೆಯಲ್ಲಿ ಇದ್ದಾಗ ಕಟ್ಟಿಸಿದರು ಅಥವಾ ದುರಸ್ತು ಮಾಡಿದಿರು ಎನ್ನಲಾಗಿದೆ. ಅದಕ್ಕೆ ಆಗಿನ ಹೆಸರು ಲಕ್ಷ್ಮೀಸಾಗರ. ಈ ಪ್ರಖ್ಯಾತ ಕೆರೆಯ ಹೆಚ್ಚಿನ ವಿವರಣೆ ಗ್ರಂಥದ ಅನುಬಂಧ – ೧ರಲ್ಲಿ ದೊರಕುತ್ತದೆ.

ಕೆರೆಗಳಿಂದ ಹೂಳನ್ನು ತೆಗೆಯಲು ಮಾಡಿದ ವ್ಯವಸ್ಥೆಗಳ ಬಗ್ಗೆ ಹೊಯ್ಸಳರ ಕಾಲದ ಶಾಸನಗಳು ತುಂಬ ಮಾಹಿತಿ ಉಳ್ಳವಾಗಿವೆ. ಅವು ಕೆರೆ ನಿರ್ಮಾಣ ವೆಚ್ಚದ ವಿವರಗಳನ್ನೂ ಕೊಡುತ್ತವೆ. ಇತಿಹಾಸ ಕುರಿತ ಅಧ್ಯಾಯದ ನಂತರ ಬರುವ ಸಾಮಾನ್ಯ ಅಧ್ಯಾಯಗಳಲ್ಲಿ ಈ ಮಾಹಿತಿಯನ್ನು ಪೂರಾ ಬಳಸಿಕೊಳ್ಳಲಾಗಿದೆ.

ಸೇವುಣರು : ದಕ್ಷಿಣ ಕರ್ನಾಟಕದಲ್ಲಿ ಹೊಯ್ಸಳರು ಆಳುತ್ತಿದ್ದ ಕಾಲದಲ್ಲಿಯೇ ಉತ್ತರ ಕರ್ನಾಟಕದಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ಸೇವುಣ ಅಥವಾ ಯಾದವರು ಆಳುತ್ತಿದ್ದರು. ಕೆರೆಗಳನ್ನು ಕುರಿತಂತೆ ಇರುವ ಅವರ ಶಾಸನಗಳು ಅತ್ಯಲ್ಪ. ಒಂದೆರಡನ್ನು ಇಲ್ಲಿ ಗಮನಿಸಲಾಗಿದೆ. ಯಾದವ ಸಿಂಘಣನ ಧಾರವಾಡ ಶಾಸನವೊಂದರಲ್ಲಿ[27] (ಕ್ರಿ.ಶ. ೧೨೪೨) ಅಲ್ಲಿ ಕಟ್ಟಲಾದ ಒಂದು ಹೊಸ ಕೆರೆಯ ಪ್ರಸ್ತಾಪವಿದೆ. ಇನ್ನೊಂದರಲ್ಲಿ ಬೆಣ್ಣೆಹಳ್ಳ ಎಂಬ ಈಗಲೂ ಇರುವ ಹೊಳೆಯ ಹಾಗೂ ಹೇರೂರು ತಟಾಕ ಎಂಬ ಕೆರೆಯ ಉಲ್ಲೇಖವಿದೆ. ಈ ವಿಷಯವೂ ಯಾದವ ಸಿಂಘಣ ಕ್ರಿ.ಶ. ೧೨೪೨ರ ಶಾಸನದಲ್ಲಿಯೆ[28] ಇದೆ. ಹೆರೂರು ಗ್ರಾಮದ ಚಿಕ್ಕಬಂದಿ ಹೀಗಿದೆ: ಅದು ಇರುವುದ ವೆಣ್ಣನದಿಯ (ಬೆಣ್ಣೆಹಳ್ಳ) ಎಡದಂಡೆಯಲ್ಲಿ. ದಾನದ ಭೂಮಿಗಳೂ ಗ್ರಾಮದ ಕೆರೆಯೂ ಇದ್ದುದು ಕುಸುಗಲ್ಲಿನ ದಕ್ಷಿಣಕ್ಕೆ, ಕುಂದಗೋಳದ ಉತ್ತರಕ್ಕೆ, ಹುಬ್ಬಳ್ಳಿಯ ಪೂರ್ವಕ್ಕೆ ಹಾಗೂ ಬೆಣ್ಣಹಳ್ಳದ ಪಶ್ಚಿಮಕ್ಕೆ, ಈ ಎಲ್ಲ ಸ್ಥಳಗಳಿಗೂ ಈಗಲೂ ಅವೇ ಹೆಸರುಗಳೇ ಇವೆ. ಆದರೆ ಉಲ್ಲೇಖಿತವಾದ ಕೆರೆ ಈಗ ಇಲ್ಲ. ಏಕೆಂದರೆ ಕುಸುಗಲ್ಲು ಜಲಕ್ಷಾಮಕ್ಕೆ ಕುಖ್ಯಾತವಾಗಿದೆ. ರಾಯಚೂರು ಜಿಲ್ಲೆಯ ಮುದಗಲ್ಲು ಎಂಬ ಊರು ಕೆರೆಗಳ ಸ್ಥಳ ಎಂದು ಶಾಸನ[29] ವರ್ಣಿಸುತ್ತದೆ. ಕುರುಂಬೆಟ್ಟದ (ಬೆಳಗಾಂವಿಯ ಜಿಲ್ಲೆಯ ಮಮದಾಪುರ)ಕ್ರಿ.ಶ. ೧೨೫೦ರ ಯಾದವ ಕನ್ನರನ ಇನ್ನೊಂದು ಶಾಸನ[30] ಅದು ಕೆರೆಗಳಿಂದ ತುಂಬಿದ ಊರು ಎಂದು ವರ್ಣಿಸುತ್ತದೆ.

ಸೌಂದತ್ತಿಯ ರಟ್ಟರು : ಬೆಳಗಾಂವಿ ಜಿಲ್ಲೆಯಲ್ಲಿ ಯಾದವರ ಸಾಮಾಂತರಾಗಿದ್ದ ಈ ವಂಶ ಬೆಳಗಾಂವಿ ನಗರದಲ್ಲೂ ಆಳಿದರು. ಕ್ರಿ.ಶ ೧೨೦೪ರ ಅವರ ಎರಡು ಶಾಸನಗಳು ಆ ನಗರದಲ್ಲಿನ ಕೆರೆಗಳನ್ನು ಪ್ರಸ್ತಾಪಿಸುತ್ತವೆ. ಒಂದು ಶಾಸನ, ಆನೆಯಕೆರೆಗೆ[31] ಹೋಗುವ ರಸ್ತೆಯನ್ನು ಉಲ್ಲೇಖಿಸುತ್ತದೆ. ಅದೇ ಸ್ಥಳ ಹಾಗೂ ಅದೇ ದಿನಾಂಕದ ಎರಡನೇಯ ಶಾಸನ ಹೆಗ್ಗೆರೆ ಅಥವಾ ದೊಡ್ಡಕೆರೆಯ ಬಗ್ಗೆ ತಿಳಿಸುತ್ತದೆ. ಇದು ಬೆಳಗಾಂವಿ ಕೋಟೆಯ ಪೂರ್ವ ಭಾಗದಲ್ಲಿ ಒಂದು ರಸ್ತೆ ಕನಬರ್ಗಿ ಹಳ್ಳಿಗೆ ಹೋಗುತ್ತದೆ.[32]

ಯಾದವರು ಹಾಗೂ ಹೊಯ್ಸಳರಾದ ಮೇಲೆ ಬಂದವರು ವಿಜಯನಗರದ ಅರಸರು ಕರ್ನಾಟಕದ ನೀರಾವರಿ ಅಭಿವೃದ್ಧಿಗೆ ಅವರ ಕೊಡುಗೆಯನ್ನು ಮುಂದಿನ ಅಧ್ಯಾಯದಲ್ಲಿ ಗಮನಿಸೋಣ.

 – – – –
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1]ಇ.ಸಿ.೯ (ಆರ್) ಕೃಷ್ಣರಾಜಪೇಟೆ ೧೧, ಪು.೧೦.

[2]ರೈಸ್ ೧ ಪು. ೭೩೮.

[3]ಎಂ.ಎ. ಆರ್. ೧೯೧೧, ಪು.೫೧ ಪ್ಯಾರಾ ೧೧೦.

[4]ಅದೇ.

[5]ಅದೇ ೧೯೩೭ ನಂ. ೨೮.

[6]ಅದೇ ನಂ. ೨೬.

[7] ‘ಕರ್ನಾಟಕ ಥ್ರೂದಿ ಏಜಸ್. (ಸಂ) ರಂ. ರಾ. ದಿವಾಕರ ಪು. ೪೬೭ ಮತ್ತು ಕ್ಯೂ ಜೆ.ಎಂ.ಎಸ್.೩. (೧೯೧೮) ಪು. ೧೦೦.

[8]ಎಂ.ಎ.ಆರ್.೧೯೨೯ ನಂ.೧೨

[9]ಇ.ಸಿ. ೫ ಬೇಲೂರು ೧೭.

[10]ಎಂ.ಎ.ಆರ್. ೧೯೩೭. ನಂ. ೩೨.

[11]ಬುಕಾನನ್ ೩ ಪು. ೩೯೧.

[12]ಇ.ಸಿ. ೫ ಅರಸೀಕೆರೆ ೨೨.

[13]ಅದೇ ೮೫.

[14]ಅದೇ ೧೧೮.

[15]ಮೈಸೂರು ಜನರಲ್ ಸೆನ್ಸ್‌ಸ್ ೧೮೭೧. ಅನುಬಂಧ-ಜಿ. ಇದರ ಪುರವಣಿ ಪ್ರಕಾರ. ಮೈಸೂರು ಸಂಸ್ಥಾನದಲ್ಲಿ ಕೆರೆ, ಗೆರೆ, ಕುಂಟೆ, ಸಾಗರ, ಸಮುದ್ರ, ಇತ್ಯಾದಿಯಾಗಿ ಕೊನೆಗೊಳ್ಳುವ ಹೆಸರುಗಳನ್ನುಳ್ಳ ೧೨೩೩ ಹಳ್ಳಿಗಳು ಇದ್ದವು. ಇದು ಕೆರೆಗಳಿಗೆ ಕೊಡುತ್ತಿದ್ದ ಪ್ರಾಮುಖ್ಯತೆಗೆ ತೋರುಬೆರಳು.

[16]ಎಂ.ಎ.ಆರ್. ೧೯೪೫ ನಂ. ೯

[17]ಎಂ.ಎ.ಆರ್. ೧೯೨೫ ನಂ. ೬೪.

[18]ಇ.ಸಿ.೬ ಕಡೂರು ೯೨.

[19]ಎಂ.ಎ.ಆರ್. ೧೯೪೪ ನಂ.೮.

[20]ರೈಸ್.೨ ಪು. ೩೭೦.

[21]ಇ.ಸಿ. ೫. ಬೇಲೂರು ೭-೧೭೫.

[22]ಅದೇ ನಂ. ೭೩, ೭೪, ೭೬ ಹಾಗೂ ಪೀಠಿಕೆಯ ಪು. ೧೦೫ ಹಾಗೂ ೧೦೬.

[23]ಇ.ಸಿ. ೧೦ ಚಿಂತಾಮಣಿ ೯.

[24]ಇ.ಸಿ.೧ (ಆರ್) ನಂ. ೫೫೮ ಪು. ೩೪೧.

[25]ಇ.ಸಿ.೧೨. ಎಸ್.ಐ. ೩೩.

[26]ಇ.ಸಿ. ೫. ಅರಸೀಕೆರೆ ೧೫೦.

[27]ಕರ್ನಾಟಕ ಇನ್ಸ್‌ಕ್ರಿಪ್ಷನ್ಸ್‌. ೪ ನಂ. ೪೮.

[28]ಇ.ಐ. ೩೪ ನಂ. ೭. ಸಿ.ಪಿ.ಎಲ್.

[29]ಹೆಚ್.ಎ.ಎಸ್. ೧೮ ನಂ. ೧೬.

[30]ಇ.ಐ. ೧೯, ೨೭ ಎ.

[31]ಇ.ಐ. ೧೨. ೩ ಎ.

[32]ಅದೇ ಮತ್ತು ಫ್ಲೀಟನ ಟಿಪ್ಪಣಿ ಪು.೨೫.