ಪೀಠಿಕೆ:

೧೭೯೯ರಲ್ಲಿ ಟಿಪ್ಪುವಿನ ಸೋಲು ಹಾಗೂ ೧೮೧೮ರಲ್ಲಿ ಪೇಶ್ವೆಗಳ ಸೋಲುಗಳ ನಂತರ ಇಡೀ ಕರ್ನಾಟಕ ಬ್ರಿಟಿಷರ ಕೈವಶವಾಯಿತು. ಮೈಸೂರು ಪ್ರಾಂತದಲ್ಲಿ ಒಡೆಯರು ಆಳಲಾರಂಭಿಸಿದರು. ದಕ್ಷಿಣ ಕನ್ನಡ, ಬಳ್ಳಾರಿ, ಕೊಡಗು ಜಿಲ್ಲೆಗಳು ಮದರಾಸು ಪ್ರಾಂತ್ಯಕ್ಕೆ ಸೇರಿದವು. ಮುಂಬೈ ಪ್ರಾಂತ್ಯ ಬೆಳಗಾಂ, ಧಾರಾವಾಡ, ಬಿಜಾಪುರ, ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಪಡೆದುಕೊಂಡಿತು. ಬಿದರ್, ಗುಲರ್ಗಾ, ರಾಯಚೂರು ಜಿಲ್ಲೆಗಳು ನಿಜಾಮನಿಗೆ ಸೇರಿದವು. ಮೈಸೂರು, ಮುಂಬೈ ಕರ್ನಾಟಕ, ಹೈದರಾಬಾದು ಕರ್ನಾಟಕ, ಬಳ್ಳಾರಿ, ಕೊಡಗು ಹಾಗೂ ದಕ್ಷಿಣ ಕನ್ನಡಗಳಲ್ಲಿ ಕೆರೆ ನೀರಾವರಿಯ ಬೆಳವಣಿಗೆಯನ್ನು ನಾವೀಗ ಪ್ರತ್ಯೇಕವಾಗಿ ಪರಿಶೀಲಿಸೋಣ.

ಮೈಸೂರು:

ಬ್ರಿಟಿಷರ ಕಾಲಕ್ಕೆ ಮೊದಲು ಇದ್ದ ಕೆರೆಗಳ ಸಂಖ್ಯೆ, ಅವುಗಳಿಂದ ನೀರಾವರಿಯಾಗುತ್ತಿದ್ದ ಪ್ರದೇಶ ಮತ್ತು ಅವುಗಳ ನಿರ್ಮಾಣ ಅಥವಾ ಸಂರಕ್ಷಣೆಗಾಗಿ ಮಾಡಿದ ವೆಚ್ಚ – ಈ ಬಗ್ಗೆ ಯಾವ ದಾಖಲೆಯೂ ಇಲ್ಲ. ಅಂಥ ಮಾಹಿತಿ ಸಿಗುವುದು ಬ್ರಿಟಿಷ್ ಆಡಳಿತ ಆರಂಭವಾದ ಮೇಲೆಯೇ. ೧೮೦೦ ರಿಂದಲೂ ಕೆರೆಗಳು ಎಷ್ಟು ಇದ್ದವು? ಅವುಗಳಿಂದ ನೀರಾವರಿ ಪಡೆಯುತ್ತಿದ್ದ ಪ್ರದೇಶದ ಹಾಗೂ ಅವುಗಳ ನಿರ್ಮಾಣ ಮತ್ತು ಸಂರಕ್ಷಣೆಗಾಗಿ ಆಗುತ್ತಿದ್ದ ವೆಚ್ಚವೇನು? ಈ ಬಗ್ಗೆ ಕ್ರಮವಾಗಿ ತಿಳಿದುಕೊಳ್ಳೋಣ.

೧೮೦೦ರಲ್ಲಿ ಇದ್ದ ಕೆರೆಗಳು:

ಟಿಪ್ಪುವಿನ ಸೋಲಿನ ಹಿಂದೆಯೇ ೧೭೯೯ರಲ್ಲಿ ಬ್ರಿಟಿಷರು ಮೈಸೂರು ಭೌಗೋಳಿಕ ಹಾಗೂ ಅಂಕಿ ಅಂಶಗಳ ಸಮೀಕ್ಷೆಯನ್ನು ಆರಂಭಿಸಿದರು. ಆ ಸಮೀಕ್ಷೆ ೧೮೦೦ಕ್ಕೆ ಮುಗಿಯಿತು. ಅದರ ವಿವರಗಳನ್ನು

[1] ಸಂಕಲಿಸಿದ್ದು ಕರ್ನಲ್ ಮೆಕಂಜಿ. ಅದರಿಂದ ೧೪೮೦೩ಕ್ಕೂ ಹೆಚ್ಚು ಕೆರೆಗಳೂ, ೮೫೬೨ ಕುಂಟೆಗಳೂ ಇದ್ದವೆಂದು ನಮಗೆ ತಿಳಿದುಬರುತ್ತದೆ. ಈಗಿನ ಶಿವಮೊಗ್ಗ ಜಿಲ್ಲೆಯಲ್ಲಿ ಇದ್ದ ಕೆರೆಗಳ ವಿಷಯ ಅದರಲ್ಲಿ ಇಲ್ಲ. ಮೈಸೂರಿನ ಇತರ ಪ್ರದೇಶಗಳ ವಿವರಗಳನ್ನು ಅನುಬಂಧ – ೯ರಲ್ಲಿ ಕೊಡಲಾಗಿದೆ.

ಕೆರೆಗಳ ಸಂಖ್ಯೆ (೧೮೦೦೧೯೦೦):

೧೮೪೬ರಲ್ಲಿ ಮುಖ್ಯ ಇಂಜಿನಿಯರ್ ಆಗಿದ್ದ ಕರ್ನಲ್ ಗ್ರೀನ್ ೨೦೦೦೦ಕ್ಕೂ ಹೆಚ್ಚು ಕೆರೆಗಳಿದ್ದವು ಎಂದು ತನ್ನ ವರದಿಯಲ್ಲಿ[2] ಹೇಳಿದ್ದಾನೆ. “೧೮೫೩ – ೫೪ ವರದಿಯ ಪ್ರಕಾರ ಮೈಸೂರು ಪ್ರಾಂತ್ಯದಲ್ಲಿ ಮುನಿಸಿಪಲ್ ಅಥವಾ ನೀರಾವರಿಗಲ್ಲದ ಹಾಗೂ ನೀರಾವರಿಯ ಎಂದು ವರ್ಗೀಕರಿಸಿದ ಕೆರೆಗಳು ೨೬೪೫೦ ಇದ್ದವು. ಆ ಪೈಕಿ ೪೧೦೬ ದೊಡ್ಡ ಕೆರೆಗಳು ೧೩೭೩೭ ಸಣ್ಣವು ಹಾಗೂ ೮೬೦೯ ನೀರಾವರಿಗಲ್ಲದ ಕೆರೆಗಳು. ಒಟ್ಟಾರೆ ಒಂದು ಚದರ ಮೈಲಿಗೆ ಒಂದು ಕೆರೆ ಇತ್ತು”.[3] ಅಲ್ಲದೆ “೨೭೨೬೯ ಚದರ ಮೈಲಿ ಪ್ರದೇಶದ ಮೈಸೂರು ಪ್ರಾಂತದಲ್ಲಿ ಸುಮಾರು ೬೦ರಷ್ಟು ಕೆರೆಗಳಿಂದ ಆವೃತವಾಗಿತ್ತು”.[4] ೧೮೭೧ರ ಇತ್ತೀಚಿನ ವರದಿಯ ಪ್ರಕಾರ “೩೬೨೬೫ ಕೆರೆಗಳಿದ್ದಿವು, ಆ ಪೈಕಿ ೯೮೬೫ ದುರಸ್ತಿಯಲ್ಲಿ ಇರಲಿಲ್ಲ ಅಥವಾ ಅತಿಕಡಿಮೆ ಕಂದಾಯ ನೀಡುತ್ತಿದ್ದವು.[5] ಮೈಸೂರು ಪ್ರಾಂತದ ನಾನಾ ಜಿಲ್ಲೆಗಳಲ್ಲಿನ ಕೆರೆಗಳ ಸಂಖ್ಯೆಯನ್ನು ಅನುಬಂಧ – ೧೦ರಲ್ಲಿ ಕೊಟ್ಟಿದೆ. ಸುಮಾರು ಶೇಕಡಾ ೮೦ರಷ್ಟು ಕೆರೆಗಳು ಇದ್ದುದು ಕಡೂರು (ಈಗಿನ ಚಿಕ್ಕಮಗಳೂರು), ಹಾಸನ, ಶಿವಮೊಗ್ಗ ಹಾಗೂ ಕೋಲಾರ ಜಿಲ್ಲೆಗಳಲ್ಲಿ.

೧೮೮೪ರಲ್ಲಿ ಮೈಸೂರು ದಿವಾನರಾದ ಸರ್.ಶೇಷಾದ್ರಿ ಅಯ್ಯರ್ ಪ್ರಜಾಪ್ರತಿನಿಧಿ ಸಭೆಯಲ್ಲಿ ಮಾತನಾಡುತ್ತ, ದೊಡ್ಡವು ಸಣ್ಣವು ಸೇರಿದಂತೆ ಹೆಚ್ಚು ಕಡಿಮೆ ೩೮೦೦೦ ಕೆರೆಗಳು ಇವೆ. ಹೊಸಕೆರೆಗೆ ಸೂಕ್ತವಾದ ಸ್ಥಳವನ್ನು ಹುಡುಕುವುದೇ ತುಂಬಕಷ್ಟ ಎಂದು ಹೇಳಿದರು.5ಅ

೧೯೦೨ರಲ್ಲಿ ವಿ.ಪಿ.ಮಾಧವರಾಯರು ಸಣ್ಣ ಕೆರೆ ನೀರಾವರಿ ಜೀರ್ಣೋದ್ಧಾರ ಯೋಜನೆಯನ್ನು ಕುರಿತ ತಮ್ಮ ವರದಿಯಲ್ಲಿ[6] ೩೯೦೦೦ ಕೆರೆಗಳಿವೆ. ಅವುಗಳಲ್ಲಿ ೧೦೦೦೦ ಕೆರೆಗಳಿಂದ ಯಾವ ಕಂದಾಯವೂ ಸಿಗುವುದಿಲ್ಲ ಎಂದು ಸೂಚಿಸಿದರು. ಅಲ್ಲದೆ ಅವರ ಪ್ರಕಾರ ಆ ೨೯೦೦೦ ಕೆರೆಗಳಲ್ಲಿ ೭೦೦೦ ಕೆರೆಗಳು ಒಡೆದು ಹೋಗಿದ್ದವು. ಈ ಕೆರೆಗಳ, ಅಚ್ಚುಕಟ್ಟು ಪ್ರದೇಶದ ಹಾಗೂ ಅವುಗಳಿಂದ ಬರುತ್ತಿದ್ದ ಕಂದಾಯದ ವಿವರಗಳನ್ನು ಒಳಗೊಂಡ ಪಟ್ಟಿಯನ್ನು ಅನುಬಂಧ – ೧೧ರಲ್ಲಿ ಕೊಡಲಾಗಿದೆ.

ಈ ಪುರಾವೆಯಿಂದ ನಿಚ್ಚಳವಾಗಿ ತೋರುವುದೇನೆಂದರೆ ೧೯ನೆಯ ಶತಮಾನದ ಆದಿಯಲ್ಲಿ ಮೈಸೂರು ಪ್ರಾಂತದಲ್ಲಿ ಸುಮಾರು ೩೦೦೦೦ ದೊಡ್ಡವು ಸಣ್ಣವು ಕೆರೆಗಳಿದ್ದವು ಎಂದು. ೨೦ನೆಯ ಶತಮಾನದ ಆದಿಯಲ್ಲೂ ಸಂಖ್ಯೆ ಅದೇ ಆಗಿತ್ತು. ಅವುಗಳಲ್ಲಿ ಅನೇಕವು ಒಡೆದು ಹೋಗಿದ್ದವು. ಆ ಕೆರೆಗಳ ಜೀರ್ಣೋದ್ಧಾರವೇ ಆ ಕಾಲದ ಮುಖ್ಯ ಕಾರ್ಯವಾಗಿತ್ತು.

ನೀರಾವರಿ ಪ್ರದೇಶ (೧೮೦೪೧೮೭೪):

ಆ ಹಿಂದಿನ ಕಾಲದ ನಾನಾ ಶಾಸನಗಳು ಬಹುಸಂಖ್ಯೆಯ ಕೆರೆಕಾಲುವೆಗಳು ಇದ್ದುದಾಗಿ ತಿಳಿಸಿದರೂ ನೀರಾವರಿಯಲ್ಲಿದ್ದ ಪ್ರದೇಶದ ಬಗ್ಗೆ ಯಾವ ಮಾಹಿತಿಯನ್ನೂ ಕೊಡುವುದಿಲ್ಲ.

೧೮೦೪ರಲ್ಲಿ ಮೈಸೂರಿನ ಹಂಗಾಮಿ ರೆಸಿಡೆಂಟ್ ವಿಲ್ಕ್ಸ್‌ನ ವರದಿಯಿಂದ[7] ೧೮೦೩ – ೪ರಲ್ಲಿ ಮೈಸೂರಿನಲ್ಲಿ ಸಾಗುವಳಿಯಾಗುತ್ತಿದ್ದ ಖುಷ್ಕಿ ಜಮೀನು ಸುಮಾರು ೮,೧೩,೪೯೧ ಎಕರೆ ಎಂದು ಮೊಟ್ಟ ಮೊದಲ ಬಾರಿಗೆ ನಮಗೆ ಗೊತ್ತಾಗುತ್ತದೆ.

ನೀರಾವರಿ ಪ್ರದೇಶದ ವಿಸ್ತಾರ ಕುರಿತ ಮುಂದಿನ ಮಾಹಿತಿ ಸಿಗುವುದು ೧೮೭೧ರ ಮೈಸೂರು ಮುಖ್ಯ ಕಮಿಷನರ್ ಅವರ ವರದಿಯಲ್ಲಿ.[8] ಈ ವರದಿ ೧೮೩೭ರಿಂದ ೧೮೬೭ರ ಅವಧಿಯಲ್ಲಿ ಖುಷ್ಕಿ ಹಾಗೂ ಬಾಗಾಯತ್ತು ಬೇಸಾಯದ ಪ್ರದೇಶ ಎಷ್ಟಿತ್ತು ಎಂದು ತಿಳಿಸುತ್ತದೆ. ೧೮೦೪ – ೧೮೩೬ರ ಅವಧಿಯ ಮಾಹಿತಿ ಸಿಗುವುದಿಲ್ಲ.

೧೮೩೭ – ೧೮೬೭ ರಲ್ಲಿ ಖುಷ್ಕಿ ಹಾಗೂ ಬಾಗಾಯತು ಬೇಸಾಯದಲ್ಲಿದ್ದ ಸರಾಸರಿ ವಾರ್ಷಿಕ ಪ್ರದೇಶ ವಿಸ್ತಾರ ಹೇಗಿತ್ತು :

೧೮೩೭ – ೩೮ ರಿಂದ ೧೮೪೧ – ೪೨ ೩.೪೧.೦೩೦ ಎಕರೆ
೧೮೪೨ – ೪೩ ರಿಂದ ೧೮೪೬ – ೪೭ ೩.೬೯.೯೫೨ ಎಕರೆ
೧೮೪೭ – ೪೮ ರಿಂದ ೧೮೫೧ – ೫೨ ೪.೧೭.೫೮೬ ಎಕರೆ
೧೮೫೨ – ೫೩ ರಿಂದ ೧೮೫೬ – ೫೭ ೪.೩೨.೦೬೨ ಎಕರೆ
೧೮೫೭ – ೫೮ ರಿಂದ ೧೮೬೧ – ೬೨ ೪.೩೩.೮೦೮ ಎಕರೆ
೧೮೬೨ – ೬೩ ರಿಂದ ೧೮೬೬ – ೬೭ ೫.೦೭.೩೪೫ ಎಕರೆ

೧೮೬೭ – ೬೮ರಿಂದ ೧೮೭೨ – ೭೩ ಹಾಗೂ ೧೮೭೮ – ೭೯ರಿಂದ ೧೮೭೯ – ೮೦ರ ಅವಧಿಗಳಿಗೆ ಖುಷ್ಕಿ ಬಾಗಾಯತು ಬೇಸಾಯದ ಪ್ರದೇಶದ ಪೂರ್ಣ ಮಾಹಿತಿ ಸುಲಭವಾಗಿ ಸಿಗುವುದಿಲ್ಲ. ೧೮೭೩ – ೭೪ರ ಅವಧಿಯಲ್ಲಿ ವಾರ್ಷಿಕ ಸರಾಸರಿ ಪ್ರದೇಶ ೬,೬೦,೬೧೮ ಎಕರೆ ಇತ್ತು.[9]

ಬೇಸಾಯದಲ್ಲಿದ್ದ ಈ ಒಟ್ಟು ವಿಸ್ತಾರದಲ್ಲಿ ಕೆರೆ, ನದಿಕಾಲುವೆ, ಭಾವಿ, ಚಿಲುಮೆ, ಕಾಲುವೆದ್. ಅಡವಿಯ ಹೊಳೆ ಇತ್ಯಾದಿಗಳಿಂದ ನೀರಾವರಿ ಆಗುತ್ತಿದ್ದ ಪ್ರದೇಶವೂ ಸೇರಿದೆ. ಈ ಅವಧಿಯಲ್ಲಿ ನಿರ್ದಿಷ್ಟವಾಗಿ ಕೆರೆ ಅಥವಾ ನದಿ ಕಾಲುವೆಗಳಿಂದ ನೀರಾವರಿ ಆಗುತ್ತಿದ್ದ ಪ್ರದೇಶವನ್ನು ತೋರಿಸುವ ತಪಶೀಲು ವಿವರ ದೊರಕುವುದಿಲ್ಲ. ಕೆರೆ ಹಾಗೂ ನದಿ ಕಾಲುವೆಗಳ ನೀರಾವರಿ ಪ್ರದೇಶದ ಮಾಹಿತಿ ೧೮೮೦ – ೮೧ನೆಯ ವರ್ಷಕ್ಕೆ ಹಾಗೂ ಮುಂದಕ್ಕೆ ಸಿಗುತ್ತದೆ. ೧೮೮೦ – ೮೧ರಿಂದ ಈಚೆಗೆ ಕೆರೆ ಹಾಗೂ ನದಿ ಕಾಲುವೆ ನೀರಾವರಿ ಪ್ರದೇಶವನ್ನು ಪರಿಶೀಲಿಸುವ ಮುನ್ನ ನಾವು ಗಮನಿಸಬೇಕಾದ ಅಂಶ ೧೮೦೪ರಲ್ಲಿ ೮,೧೩,೪೮೧ ಎಕರೆ ಖುಷ್ಕಿ ಬೇಸಾಯ ಇದ್ದುದು. ೧೮೩೭ – ೩೮ ವೇಳೆಗೆ ೩,೪೧,೦೩೦ ಎಕರೆಗೆ ಇಳಿದಿತ್ತು ಎಂಬುದು. ಸುಮಾರು ೩೩ ವರ್ಷದ ಅವಧಿಯಲ್ಲಿ ಇಷ್ಟೊಂದು ದೊಡ್ಡ ವ್ಯಾತ್ಯಾಸ ಏಕೆ ಆಯಿತೋ ವಿವರಿಸುವುದು ಕಷ್ಟ.

ಒಂದು ವಿವರಣೆ ಎಂದರೆ ವಿಲ್ಕ್ಸ್ ಸೂಚಿಸಿರುವ ಅಂಕಿ ಅಂಶಗಳು ಪ್ರತ್ಯಕ್ಷ ಮಾಹಿತಿಯನ್ನು ಆಧರಿಸಿದ್ದಲ್ಲ. ಕಂದಾಯ ದಾಖಲೆಗಳನ್ನು ಆಧರಿಸಿದ ಒಂದು ಅಂದಾಜು ಮಾತ್ರ. ಆ ಕಾಲದಲ್ಲಿ ಭೂಮಿಯನ್ನು ಅಳತೆ ಮಾಡುತ್ತಿದ್ದುದು ಬೀಜ ಬಿತ್ತನೆಯ ಖಂಡುಗದ ಲೆಕ್ಕದಲ್ಲಿ. ಬಿತ್ತನೆಯ ಪ್ರಮಾಣ, ಮಣ್ಣಿನ ಲಕ್ಷಣ, ಭೂ ಮೇಲ್ಮೈಸ್ಥಿತಿ ಇತ್ಯಾದಿಗಳನ್ನು ಅವಲಂಬಿಸಿದಂತೆ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿತ್ತಿತ್ತು. ಅಂದಾಜಿನ ಈ ವ್ಯತ್ಯಾಸವಿದ್ದರೂ ಖುಷ್ಕಿ ಬೇಸಾಯದ ಪ್ರದೇಶ ೫ ಲಕ್ಷ ಎಕರೆಗಳಿಗೆ ಕಡಿಮೆ ಇರಲಿಲ್ಲ ಎನ್ನುವುದು ಸಂಭವನೀಯ. ೧೮೦೪ ರಿಂದ ೧೮೩೭ರ ಅವಧಿಯಲ್ಲಿ ಈ ಪ್ರದೇಶ ಕಡಿಮೆಯಾಗಲು ಪ್ರಾಯಶಃ ೧೮೧೧ರಲ್ಲಿ ಪೂರ್ಣಯ್ಯನ ನಿರ್ಗಮನ ಹಾಗೂ ಮಹಾರಾಜರೇ ಆಡಳಿತವನ್ನು ವಹಿಸಿಕೊಂಡ ನಂತರದ ಅಲಕ್ಷ್ಯ ಹಾಗೂ ಅಸ್ಥಿರ ಪರಿಸ್ಥಿತಿಯೇ ಕಾರಣವಿರಬಹುದು.

೧೮೮೦ ರಿಂದ ೧೯೫೦ ರ ವರೆಗೆ ನೀರಾವರಿ ಅಭಿವೃದ್ಧಿ:

ಕೆರೆಗಳ ಜೀರ್ಣೋದ್ಧಾರವು ಅನೇಕ ಹೊಸ ನೀರಾವರಿ ಕೆರೆ ಕಾಲುವೆಗಳ ರಚನೆಗಳ ಬಗೆಗಿನ ಸಂಯೋಜಿತ ಕಾರ್ಯಕ್ರಮದ ದಿಸೆಯಿಂದಾಗಿ ೧೮೮೦ – ೮೧ರಲ್ಲಿ ೩,೨೨,೯೮೫ ಎಕರೆ ಇದ್ದ ಕಾಲುವೆ ಕೆರೆ ನೀರಾವರಿ ಪ್ರದೇಶವು ೧೯೦೦ – ೦೧ಕ್ಕೆ ೬,೦೫,೯೬೦ ಎಕರೆಗೆ ಹೆಚ್ಚಿತ್ತು. ೧೯೫೦ – ೫೧ರ ವೇಳೆಗೆ ೮,೧೪,೯೨೩ ಎಕರೆಗಳಷ್ಟಾಗಿತ್ತು. ಅನುಬಂಧ – ೧೨ರ ತಃಖ್ತೆಯಲ್ಲಿ ೧೮೮೦ ರಿಂದ ೧೯೫೦ರ ವರೆಗಿನ ಇಡೀ ಅವಧಿಯಲ್ಲಿ ಕೆರೆ ಕಾಲುವೆ ನೀರಾವರಿ ಪ್ರದೇಶದ ಸಾಲಿಯಾನ ವಿವರವನ್ನು ಕೊಡಲಾಗಿತ್ತು.[10]

ಈ ಅಂಕಿ ಅಂಶಗಳನ್ನು ನೋಡಿದರೆ ೧೮೮೦ ರಿಂದ ೧೯೦೦ರ ವೇಳೆಗೆ ಕಾಲುವೆ ಹಾಗೂ ಕೆರೆಗಳ ನೀರಾವರಿ ಪ್ರದೇಶ ಹೆಚ್ಚಿದ್ದು ಕಾಣಬರುತ್ತದೆ. ೧೯೦೦ – ೧೯೩೦ರ ಅವಧಿಯಲ್ಲಿ ಕಾಲುವೆ ಕೆರೆಗಳೆರಡರ ನೀರಾವರಿ ಪ್ರದೇಶದ ವಿಸ್ತರಣೆ ಗಮನಾರ್ಹವಾಗಿ ಹೆಚ್ಚಾಗಿತ್ತು. ಆದರೂ ೧೯೩೦ – ೧೯೫೦ರ ಅವಧಿಯಲ್ಲಿ ಕಾಲುವೆ ನೀರಾವರಿ ಪ್ರದೇಶ ಒಂದು ಸಮನಾಗಿ ವಿಸ್ತರಿಸಿತು. ಕೆರೆ ನೀರಾವರಿ ಪ್ರದೇಶ ಇಳಿಮುಖವಾಯಿತು. ಕೆಳಗಿನ ತಃಖ್ತೆಯಿಂದ ಇದನ್ನು ಸ್ಪಷ್ಟವಾಗಿ ಕಾಣಬಹುದು.

  ನೀರಾವರಿ ಪ್ರದೇಶ ಎಕರೆಗಳಲ್ಲಿ ನೀರಾವರಿ ಪ್ರದೇಶದ
ಹೆಚ್ಚಳ / ಕಾಲುವೆಗಳ ಕೆಳಗೆ
ಇಳಿತ ಎಕರೆಗಳಲ್ಲಿ ಕೆರೆಗಳ ಕೆಳಗೆ
ಕಾಲುವೆಗಳ ಕೆಳಗೆ ಕೆರೆಗಳ ಕೆಳಗೆ
೧೮೮೦ – ೮೧ ೫೯,೭೮೪ ೨,೩೩,೨೦೧    
೧೯೦೦ – ೦೧ ೧,೦೬,೦೪೫ ೪,೯೯,೮೧೫ ೪೬,೨೬೧ (೭೭%) ೨,೬೬,೬೧೪ (೧೦೦%)
೧೯೩೦ – ೩೧ ೧,೬೫,೩೦೭ ೫,೭೭,೩೬೪ ೫೯,೨೬೨ (೫೬%) ೭೭,೫೪೯ (೧೫%)
೧೯೫೦ – ೫೧ ೨,೭೬,೩೭೭ ೫,೩೮,೫೪೬ ೧,೧೧,೦೭೦ (೬೭%) ೩೮,೮೧೮ ( – ೭%)

ಕಾಲುವೆ ಕೆಳಗಿನ ನೀರಾವರಿ ಪ್ರದೇಶದ ಹೆಚ್ಚಳಕ್ಕೆ ಕಾರಣ, ಮೊದಲೆ ಇದ್ದ ನದೀ ನಾಲೆಗಳನ್ನು ವಿಸ್ತರಿಸಿದ್ದು ಹಾಗೂ ಅಭಿವೃದ್ಧಿಪಡಿಸಿದ್ದು ಮತ್ತು ವಾಣೀ ವಿಲಾಸ ಸಾಗರ, ಕೃಷ್ಣರಾಜಸಾಗರ, ಅಂಜನಾಪುರ ಜಲಾಶಯ, ಭದ್ರಾ ಆಣೆಕಟ್ಟುಗಳು, ಕಾಲುವೆಗಳು ಇತ್ಯಾದಿಗಳನ್ನು ನಿರ್ಮಿಸಿದ್ದು. ೧೮೮೦ ರಿಂದ ೧೯೦೦ರ ವರೆಗೆ ಕೆರೆ ನೀರಾವರಿ ಪ್ರದೇಶದಲ್ಲಿ ತೀವ್ರ ಹೆಚ್ಚಳಕ್ಕೆ ಕಾರಣ ಅನೇಕ ಮುಖ್ಯ ಕೆರೆಗಳ ಜೀರ್ಣೋದ್ಧಾರವಾದದ್ದು. ಹಾಗೂ ೧೯೩೦ ರಿಂದ ೧೯೫೦ರ ವರೆಗೆ ಅದ ಇಳಿತಕ್ಕೆ ಕಾರಣ ಪ್ರಾಯಶಃ ಇದ್ದ ಅನೇಕ ಕೆರೆಗಳು ಕೆಲಸಕ್ಕೆ ಬಾರದೆ ಹೋದುದು ಮತ್ತು ಹೊಸ ಕೆರೆಗಳ ನಿರ್ಮಾಣ ಅತ್ಯಲ್ಪವಾದುದು.

೧೮೭೩ರಲ್ಲಿ ಆಗಿನ ಮುಖ್ಯ ಇಂಜಿನಿಯರ್ ಸೂಚಿಸಿದಂತೆ, ಹೊಸ ಕೆರೆಗಳನ್ನು ಕಟ್ಟಲು ಸೂಕ್ತ ಸ್ಥಳಗಳು ಇದ್ದುದು ತೀರ ಕಡಿಮೆ. ಹಳೆಯ ಕೆರೆಗಳ ಜೀರ್ಣೋದ್ಧಾರವೊಂದೇ ಸಾಧ್ಯವಾಗಿದ್ದುದು. ೧೯೦೨ ರಲ್ಲಿ ವಿ.ಪಿ. ಮಾಧವಾರಾಯರು ರಚಿಸಿದ ವರದಿಯಲ್ಲಿ ೬೯೩೫ ಕೆರೆಗಳು ಒಡೆದಿದ್ದವು ಹಾಗೂ ಒಟ್ಟು ೮,೦೫,೩೪೯ ಎಕರೆ ಅಚ್ಚುಕಟ್ಟು ಉಳ್ಳ ೨೨,೦೮೦ ಕೆರೆಗಳು ಚೆನ್ನಾಗಿದ್ದವು ಎಂದು ಹೇಳಿದೆ. ಅದನ್ನು ಈ ಅಂಶದ ಜೊತೆಗೆ ಪರಿಶೀಲಿಸಿದರೆ ಹಿಂದೆ ಇದ್ದ ಕೆರೆಗಳ ಬಗೆಗಿನ ನಿರ್ಲಕ್ಷ್ಯ ಸ್ಪಷ್ಟವಾಗಿ ಒಡಮೂಡುತ್ತದೆ. ೧೯೦೨ – ೧೯೫೦ರ ಸುಮಾರು ೫೦ ವರ್ಷದ ಅವಧಿಯಲ್ಲಿ ಅನೇಕ ಹೊಸ ಕೆರೆಗಳನ್ನು ಕಟ್ಟಲಾಯಿತು. ಆದರೂ ಕೆರೆಗಳ ಕೆಳಗಿನ ನೀರಾವರಿ ಪ್ರದೇಶ ೧೯೦೨ರಲ್ಲಿ ೮,೦೫,೩೪೯ ಎಕರೆ ಇದ್ದುದು ೧೯೫೦ರಲ್ಲಿ ೫,೩೮,೫೪೬ ಎಕರೆಗಳಿಗೆ ಇಳಿದು ಹೋಗಿತ್ತು. ೧೯೦೨ರಲ್ಲಿ ಇದ್ದ ಎಷ್ಟೋ ಕೆರೆಗಳು ನಿರ್ಲಕ್ಷ್ಯದಿಂದಾಗಿ ನಿರುಪಯುಕ್ತವಾಗಿ ಹೋದವು ಎನ್ನುವುದು ಇದರಿಂದ ಸ್ಪಷ್ಟವಾಗಿ ತೋರಿಬರುತ್ತದೆ.

ನೀರಾವರಿ ಕಾಮಗಾರಿಗಳ ವೆಚ್ಚ (೧೮೦೦೧೮೯೧)

ಕೆರೆ ಕಾಲುವೆಗಳ ನಿರ್ಮಾಣ ದುರಸ್ತಿ ಹಾಗೂ ಸಂರಕ್ಷಣೆಗಳ ಮೇಲೆ ಮಾಡಲಾದ ವೆಚ್ಚವನ್ನು ಈಗ ನೋಡೋಣ.

ವಿಲ್ಕ್ಸ್‌ನ ಪ್ರಕಾರ ೧೭೯೯ರಲ್ಲಿ ನೂರಾರು ವರ್ಷಗಳಿಂದ ಒಡೆದು ಹೋಗಿ ನಿರುಪಯುಕ್ತವಾಗಿದ್ದ ಕೆರೆಗಳು ದೇಶದ ಪ್ರತಿಯೊಂದು ಕಡೆಯೂ ಕಾಣಸಿಗುತ್ತಿದ್ದವು. ಮತ್ತು ಅನೇಕ ಕೆರೆಗಳಲ್ಲಿ ಕಾಡು ಬೆಳೆದು ಅವುಗಳು ಇದ್ದುದೇ ಮರೆತುಹೋಗಿತ್ತು. ಇಲ್ಲವೇ ತಿಳಿಯದಾಗಿತ್ತು.[11] ೧೮೦೦ – ೧೮೧೦ರಲ್ಲಿ ದಿವಾನ್ ಪೂರ್ಣಯ್ಯನ ಆಡಳಿತದಲ್ಲಿ ಹಳೆಯ ಕೆರೆಗಳ ಹಾಗೂ ಅಣೆಕಟ್ಟು ನಾಲೆಗಳ ಜೀರ್ಣೋದ್ಧಾರ ಕಾರ್ಯವನ್ನು ನಡೆಸಲಾಯಿತು. ಈ ಅವಧಿಯಲ್ಲಿ ನೀರಾವರಿ ಕಾಮಗಾರಿಗಾಗಿ ಮಾಡಲಾದ ವೆಚ್ಚ ಸಾಲಿಯಾನ ಸರಾಸರಿ ೨,೮೬,೨೫೪ ರೂ.[12]

ಅವಧಿ
ಒಟ್ಟು ರೂ.
೧೭೯೯ – ೧೮೦೦ ೩,೮೬,೬೭೧
೧೮೦೦ – ೧೮೦೧ ೪,೪೮,೯೪೬
೧೮೦೧ – ೧೮೦೨ ೨,೭೮,೧೯೮
೧೮೦೨ – ೧೮೦೩ ೨,೧೭,೭೬೩
೧೮೦೩ – ೧೮೦೪ ೧,೯೦,೮೩೬
೧೮೦೪ – ೧೮೦೫ ೩,೬೯,೩೫೬
೧೮೦೫ – ೧೮೦೬ ೩,೩೬,೦೧೮
೧೮೦೬ – ೧೮೦೭ ೨,೭೬,೩೬೪
೧೮೦೭ – ೧೮೦೮ ೩,೦೦,೭೪೩
೧೮೦೮ – ೧೮೦೯ ೧,೮೯,೪೦೯
೧೮೦೯ – ೧೮೧೦ ೧,೫೩,೩೯೦
  ೩೧,೪೭,೬೯೪

ತನ್ನ ಹನ್ನೊಂದು ವರ್ಷದ ಆಡಳಿತದಲ್ಲಿ ಪೂರ್ಣಯ್ಯ ಸರಾಸರಿ ೨,೮೬,೧೮೪ ರೂ.ಗಳನ್ನು ಅಂದರೆ ಕಂದಾಯದ ಶೇಕಡ ೩.೩೬ರಷ್ಟನ್ನು ನೀರಾವರಿಯ ಕೆಲಸಗಳಿಗೆ ವೆಚ್ಚ ಮಾಡಿದ. ಇದರ ಗಮನಾರ್ಹ ಭಾಗ ಕಾವೇರಿಯ ಅಣೆಕಟ್ಟುಗಳಿಗೆ ಹಾಗೂ ಅಣೆಕಟ್ಟಿನ ನಾಲೆಗಳ ದುರಸ್ತಿಗೆ ವೆಚ್ಚವಾದಂತೆ ತೋರುತ್ತದೆ. ಇದು,“ಈ ಕಾರ್ಯಗಳಿಂದ ಕಂಪನಿಯ ಪ್ರದೇಶಗಳಿಗೆ ಆಗುವ ಹಾನಿಕಾರಕ ಪರಿಣಾಮಗಳ” ಬಗ್ಗೆ ಮದರಾಸು ಸರ್ಕಾರ ೧೮೦೭ರಲ್ಲಿ ಸಲ್ಲಿಸಿದ ಮನವಿಯಿಂದ ಸ್ಪಷ್ಟವಾಗುತ್ತದೆ. (ಈ ಆಕ್ಷೇಪಣೆಯನ್ನು ವಿಲ್ಕ್ಸ್ ಮತ್ತು ಮೆಕೆಂಕಿ ಅವರು ೧೮೦೭ರ ಮಾರ್ಚಿಯಲ್ಲಿ ಸಮರ್ಥವಾಗಿ ತಿರಸ್ಕರಿಸಿದ್ದರು) ಅಣೆಕಟ್ಟು ಕಾರ್ಯಗಳಿಗೆ ವೆಚ್ಚ ಮಾಡಿರಬಹುದಾದ ವೆಚ್ಚವನ್ನು ಗಣನೆಗೆ ತೆಗೆದುಕೊಂಡಲ್ಲಿ ಆಗ ಇದ್ದ ಕೆರೆಗಳ ದುರಸ್ತಿಗಾಗಿ ಮಾತ್ರ ವೆಚ್ಚಮಾಡಿದ್ದು ೧.೫೦ ರಿಂದ ೧.೭೫ ಲಕ್ಷಕ್ಕೆ ಹೆಚ್ಚಿರಲಾರದು.

೧೮೧೨ – ೧೮೩೧ರ ಅವಧಿಯಲ್ಲಿ ಪೂರ್ಣಯ್ಯನ ನಿರ್ಗಮನದ ನಂತರ ಆಡಳಿತ ಮೈಸೂರು ಮಹಾರಾಜರ ಕೈಯಲ್ಲಿದ್ದಾಗ ಕೆರೆ ಅಭಿವೃದ್ಧಿ ಕಾರ್ಯವನ್ನು ನಿರ್ಲಕ್ಷಿಸಲಾಯಿತು. ೧೮೩೧ರಲ್ಲಿ ಮೈಸೂರು ಆಡಳಿತವನ್ನು ಬ್ರಿಟಿಷರು ತಾವೇ ವಹಿಸಿಕೊಂಡರು. ೧೮೩೧ ರಿಂದ ೧೮೫೬ರ ವರೆಗೆ ಕೆರೆಗಳ ಜೀರ್ಣೋದ್ಧಾರ ಹಾಗೂ ದುರಸ್ತಿಗೆ ಮಾಡಲಾದ ಸಾಲಿಯಾನ ವೆಚ್ಚ ಸುಮಾರು ೮೦,೦೦೦ ರೂ, ಇದು ೭೨.೬೭ ಲಕ್ಷ ರೂ ಸರಾಸರಿ ವಾರ್ಷಿಕ ಆದಾಯದ ಶೇ.೧.೧ರಷ್ಟು.[13]

೧೮೩೧ – ೩೨ ರಿಂದ ೧೮೩೫ – ೩೬ ೧,೨೨,೩೧೫
೧೮೩೬ – ೩೭ ರಿಂದ ೧೮೪೦ – ೪೧ ೩,೫೪,೦೭೮
೧೮೪೧ – ೪೨ ರಿಂದ ೧೪೪೫ – ೪೬ ೩,೫೫,೭೨೦
೧೮೪೬ – ೪೭ ರಿಂದ ೧೮೫೦ – ೫೧ ೪,೭೬,೨೪೭
೧೮೫೧ – ೫೨ ರಿಂದ ೧೮೫೫ – ೫೬ ೬,೮೮,೯೩೩
  ರೂ. ೧೯,೯೭,೨೯೩
ಸರಾಸರಿ ೭೯.೮೯೧

೧೮೫೬ರಲ್ಲಿ ಲೋಕೋಪಯೋಗಿ (ಮರಾಮತ್ತು) ಇಲಾಖೆ ರೂಪಿತವಾಯಿತು. ಆನಂತರದಿಂದ ಈ ಕೆಲಸ ಹಿಂದಿನ ಯಾವುದೇ ಕಾಲಕ್ಕಿಂತ ಹೆಚ್ಚಿನ ಗಮನಕ್ಕೆ ಪಾತ್ರವಾಯಿತು. ೧೮೫೬ – ೧೮೭೬ರ ಅವಧಿಯಲ್ಲಿ ಸುಮಾರು ೫೦೦೦ ಕೆರೆಗಳನ್ನು ಜೀರ್ಣೋದ್ಧಾರ ಮಾಡಿದ್ದಾಗಿ ವರದಿಯಾಗಿದೆ. ಅದರ ಸರಾಸರಿ ಸಾಲಿಯಾನ ವೆಚ್ಚ ಸುಮಾರು ರೂ.೧.೫ ಲಕ್ಷ ರೂ.[14]

೧೮೭೭ – ೭೮ ರಿಂದ ೧೮೯೦ – ೯೧ರ ವರೆಗಿನ ಮುಂದಿನ ಅವಧಿಯಲ್ಲಿ ನೀರಾವರಿ ಕಾರ್ಯದ ಸರಾಸರಿ ಸಾಲಿಯಾನ ವೆಚ್ಚ ಹೀಗಿತ್ತು.

೧೮೭೭ – ೭೮ ರಿಂದ ೧೮೮೦ – ೮೧ ೩,೦೨,೧೫೫
೧೮೮೧ – ೮೨ ರಿಂದ ೧೮೮೫ – ೮೬ ೨,೬೪,೨೫೫
೧೮೮೬ – ೮೭ ರಿಂದ ೧೮೯೦ – ೯೧ ೮,೮೨,೦೯೨

ಈ ಅವಧಿಯಲ್ಲಿ ಸರಾಸರಿ ಸಾಲಿಯಾನ ಆದಾಯ ಇದ್ದುದು ರೂ. ೧,೦೩೦,೪೯೬ ನೀರಾವರಿ ವೆಚ್ಚ ಒಟ್ಟು ಆದಾಯದ ಸುಮಾರು ಶೇ.೬.೫ರಷ್ಟಿತ್ತು.[15] ೧೮೯೦ – ೯೧ರ ಮುಂದಿನ ಅವಧಿಗೆ ನಿಖರವಾದ ಅಂಕಿ ಅಂಶಗಳು ಸುಲಭವಾಗಿ ದೊರಕುವುದಿಲ್ಲ. ಆದರೂ ಹಿಂದಿನ ಅವಧಿಗಳಲ್ಲಿನ ಪ್ರವೃತ್ತಿಯು ಮುಂದುವರಿದುದು ಕಾಣಬರುತ್ತದೆ. ಆದರೂ ೧೯೩೮ – ೨೯ರಲ್ಲಿ ಭಾರೀ ನೀರಾವರಿ ಕಾರ್ಯಗಳಿಗೆ ಹಣ ಒದಗಿಸಲು ಕಾಪು ನಿಧಿಯಾಗಿ ವಿಶೇಷವಾಗಿ ನೀರಾವರಿ ಅಭಿವೃದ್ಧಿ ನಿಧಿಯನ್ನು ಸೃಷ್ಟಿಸಲಾಯಿತು.[16]

ಅಂತೆಯೇ ನೀರಾವರಿ ಕಾಮಗಾರಿಗಳ ರಚನೆ ಹಾಗೂ ದುರಸ್ತುಗಳಿಗಾಗಿ ೧೭೯೯ – ೧೮೧೦ ಹಾಗೂ ೧೮೭೭ – ೧೮೯೧ರ ಅವಧಿಯಲ್ಲಿ ಮಹತ್ತರ ಗಮನವೀಯಲಾಯಿತು ಎನ್ನಬಹುದು. ೧೮೧೧ – ೧೮೭೬ರ ಅವಧಿಯಲ್ಲಿ ನೀರಾವರಿಗಳಿಗೆ ನೀಡಿದ ಗಮನ ಹೇಳಿಕೊಳ್ಳು ವಂಥದೇನಲ್ಲ.

 

[1]ಮೆಮಾಯರ್ಸ್ ಆಫ್ ಮೈಸೂರು – ಬೆಂಗಳೂರಿನ ಕರ್ನಾಟಕ ಪತ್ರಾಗಾರದಲ್ಲಿ ಸಂರಕ್ಷಸಿಡಲಾದ ಹಸ್ತಪ್ರತಿ. ಇದು ಕರ್ನಲ್ ಮೆಕೆಂಜಿ ನಡೆಸಿದ ಸಮೀಕ್ಷೆಯ ವರದಿ ಎನ್ನಲಾಗಿದೆ.

[2]ರಿಪೋರ್ಟ್‌ಆನ್ ದಿ ಇಂಟೀರಿಯರ್‌ಅಡ್‌ಮಿನಿಸ್ಟ್ರೇಷನ್‌ – ರಿಸರ್ವ್ಸ್ ಅಂಡ್ ಎಕ್ಸ್‌ಪೆಂಡಿಚರ್ ಆಫ್‌ಗೌರ್ನಮೆಂಟ್ ಆಫ್ ಮೈಸೂರು – ರಿಪೋರ್ಟ್‌ಆಫ್ ವಿಲ್ಕ್ಸ್‌ (ಹಂಗಾಮಿ ರೆಸಿಡೆಂಟ್) ಟು ಗವರ್ನರ್‌ಫೋರ್ಟ್ ಸೆಂಟ್ ಜಾರ್ಜ್‌ಮದರಾಸು ೫ – ೧೨ -೧೮೦೪ ಇದಕ್ಕೆ ಅನುಬಂಧ ಕರ್ನಲ್ ಗ್ರೀನ್‌ನ ವರದಿ.

[3]ಮೈಸೂರು ರಾಜರ ಅಧೀನ ಪ್ರದೇಶಗಳ ಸರ್ಕಾರದ ಕಮಿಷನರ್‌ಅವರ ಕಾರ್ಯದರ್ಶಿಗಳಿಗೆ ಮೈಸೂರು ಮುಖ್ಯ ಇಂಜಿನಿಯರ್‌ಮೇಜರ್ ಆರ್.ಹೆಚ್.ಸ್ಯಂಕಿ ಬರೆದ ೧೯ ನವೆಂಬರ್ ೧೮೬೬ನೇ ದಿನಾಂಕದ ಪತ್ರದ ೩೫ನೆಯ ಪ್ಯಾರಾ.

[4]ಅದೇ ಪ್ಯಾರಾ ನಂ. ೧೨.

[5]ಭಾರತ ಸರ್ಕಾರದ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಕಲಕತ್ತಾ ಇವರಿಗೆ ಮೈಸೂರು ಮುಖ್ಯ ಕಮಿಷನರ್‌ಕಳಿಸಿದ ೪-೩-೧೮೭೧ನೆ ದಿನಾಂಕದ ನಂ ೬೭- ಪತ್ರ. ಇದಕ್ಕೆ ಲಗತ್ತಿಸಿದ ಟಿಪ್ಪಣಿ ನಂ. ೬ರ ತಪಶೀಲು ಬಿ.

5ಅ ೧-೧೦-೧೮೮೪ ರಂದು ಮೈಸೂರು ಪ್ರಜಾಪ್ರತಿನಿಧಿ ಸಭೆಯಲ್ಲಿ ದಿವಾನ್ ಶೇಷಾದ್ರಿ ಅಯ್ಯರ್

[6]ಮೆಮೊರಾಂಡಮ್‌ಆನ್ ಮೈನರ್ ಟ್ಯಾಂಕ್‌ರೆಸ್ಟೊರೇಷನ್‌ಸ್ಕೀಮ್‌, ವಿ. ಮಾಧವರಾವ್, ರೆವಿನ್ಯೂ ಕಮಿಷನರ್‌ಮೈಸೂರು ಸರ್ಕಾರ ೨೭.೧.೧೯೦೨.

[7]ಮೊದಲೆ ಹೆಸರಿಸಿರುವ, ವಿಲ್ಕ್ಸ್‌ನ ವರದಿ.

[8] (ಮೊದಲೆ ಹೆಸರಿಸಿರುವ) ನಂ.೬೭-ಐ ದಿನಾಂಕ ೪-೩-೧೮೭೧ರ ಪತ್ರಕ್ಕೆ ಲಗತ್ತಿಸಿದ ಟಿಪ್ಪಣಿ ನಂ.೩

[9]ಅಡಮಿನಿಸ್ಟ್ರೇಷನ್‌ರಿಪೋರ್ಟ್ ಆಫ್ ಮೈಸೂರು, ೧೮೮೬-೮೭ ರಿಂದ ೧೮೯೦-೯೧ರ ಅವಧಿಗೆ.

[10]ಅನುಬಂಧ ೧೨ ರ ತಃಖ್ತೆಯಲ್ಲಿ (ಅ) ೧೮೮೧-೮೭, ೧೮೮೩-೮೪, ೧೮೮೪-೮೫ ಮತ್ತು ೧೮೮೫-೮೬ನೇ ಸಾಲಿನ ಪ್ರದೇಶಗಳಲ್ಲಿನ ಅಂಕಿಗಳಲ್ಲಿ ತುಮಕೂರು ಜಿಲ್ಲೆಯವು ಸೇರಿಲ್ಲ (ಆ) ೧೮೮೦-೮೧ ರಿಂದ ೧೮೯೦-೯೧ರ ವರೆಗಿನ ಪ್ರದೇಶದ ಮಾಹಿತಿ ೧೮೮೬-೮೭ ರಿಂದ ೧೮೯೦-೯೧ ವರೆಗಿನ ಮೈಸೂರು ಆಡಳಿತ ವರದಿಯಿಂದ ಎತ್ತಿಕೊಂಡವು. (ಇ) ೧೮೯೧-೯೨ ರಿಂದ ೧೮೯೪-೯೫ರ ವರೆಗಿನ ಪ್ರದೇಶ ಮಾಹಿತಿ ೧೮೯೧-೯೨ ರಿಂದ ೧೮೯೪-೯೫ರ ಅವಧಿಯ ಮೈಸೂರು ಆಡಳಿತ ವರದಿಯವು. ಹಾಗೂ ೧೯೦೫-೦೬ ರಿಂದ ೧೯೫೦-೫೧ರ ಅವಧಿಯ ಪ್ರದೇಶ ಮಾಹಿತಿ ಮೈಸೂರು ವಾರ್ಷಿಕ ಬೆಳೆ ಮತ್ತು ಋತುಮಾನ ವರದಿಗಳಿಂದ ಎತ್ತಿಕೊಂಡವು.

[11]ವಿಲ್ಕ್ಸ್‌ವರದಿ (ಮೊದಲೆ ಹೆಸರಿಸಿದ್ದು) ಪು. ೪೬.

[12]೪.೩.೧೮೭೧ರ ಪತ್ರಕ್ಕೆ ಲಗತ್ತಿಸಿದಿ ಟಿಪ್ಪಣೆ ನಂ.೧ರ ತಪಶೀಲು ಏ ಮೇಲಿನ ಅಡಿಟಿಪ್ಪಣೆ ೫ ನೋಡಿ.

[13]ಅದೇ ತಪಶೀಲು ‘ಬಿ’

[14]ಅದಕ್ಕೆ ಲಗತ್ತಿಸಿದ ಟಿಪ್ಪಣೆ ೩

[15]ಅಡ್‌ಮಿನಿಸ್ಟ್ರೇಷನ್ ರಿಪೋರ್ಟ್ ಆಫ್ ಮೈಸೂರು, ೧೮೮೬-೮೭ ರಿಂದ ೧೮೯೦-೯೧ರ ಅವಧಿಗೆ.

[16]ರೆವ್ಯೂ ಆಫ್ ಫೈನಾನ್ಸಸ್ ಆಫ್ ಮೈಸೂರು ಸ್ಟೇಟ್ ೧೯೨೫-೨೬ ರಿಂದ ೧೯೪೦-೪೧ರ ವರೆಗೆ ಮೈಸೂರು ಸರ್ಕಾರ ಪು. ೨೪.