ಸ್ಯಾಂಕಿಯ ನೀರಾವರಿಯ ಕಾರ್ಯಾಭಿವೃದ್ಧಿ ಯೋಜನೆ:

ಜಲಕ್ಷಾಮ ಹಾಗೂ ಬರಗಾಲವನ್ನು ನಿವಾರಿಸಲು ಅಥವಾ ತೀವ್ರತೆಯನ್ನು ತಗ್ಗಿಸಲು ಸಂಸ್ಥಾನವು, ತನ್ನ ನೀರಾವರಿ ಕಾರ್ಯಗಳಲ್ಲಿ ಪೂರ್ಣಗೊಂಡವು ಹಾಗೂ ಮುಂದುವರಿಯುತ್ತಿದ್ದವುಗಳನ್ನು ಪುನರ್ವಿಮರ್ಶಿಸಬೇಕೆಂದು ೧೮೬೬ರಲ್ಲಿ ಭಾರತ ಸರ್ಕಾರ ಆಶಿಸಿತು. ಆಗ ಮೈಸೂರಿನ ಮುಖ್ಯ ಇಂಜಿನಿಯರ್ ಆಗಿದ್ದ ಮೇಜರ್ ಸ್ಯಾಂಕಿ, ‘ಈಗ ಇರುವ ಕೆರೆಕಾಲುವೆಗಳ ದುರಸ್ತಿ ಅಭಿವೃದ್ಧಿ ಅಥವಾ ಪುನರ್ನಿಮಾಣಕ್ಕೆ ಆದ್ಯಗಮವನ್ನು ಕೊಡಬೇಕು’, ಎಂದು ಬಲವಾಗಿ ಪ್ರತಿಪಾದಿಸಿದ.[1] ಆತನ ಪ್ರಕಾರ, “ಈ ಮಹಾಪ್ರದೇಶದಲ್ಲಿ ಹೊಸ ಕೆರೆ ಕಟ್ಟಲು ಸೂಕ್ತ ಸ್ಥಳವನ್ನು ಪತ್ತೆ ಮಾಡಲು ಬಹುಚಾತುರ್ಯ ಬೇಕು’. ಆತ ಮತ್ತೂ ಹೇಳಿದ, ‘ಹೊಸ ಕೆರೆ ಕಟ್ಟಿದರೆದ್ ಅದೇ ತಗ್ಗಿನ ಕೆಳಕ್ಕಿರುವ ಇನ್ನೊಂದು ಕೆರೆಗೆ ನೀರಿನ ಹರಿವುನಿಂತು ಹೋಗುವುದು ಖಚಿತ. ಇದರಿಂದ ಹಿತಾಸಕ್ತಿಗಳ ವ್ಯವಹಾರದಲ್ಲಿ ಕೈಹಾಕಿದಂತಾದೀತು’.[2] ದೊಡ್ಡ ಜನ ಸಮುದಾಯಗಳಿಗೆ ಸಂಬಂಧಿಸಿದ ಸಾಕಷ್ಟು ಮುಖ್ಯವೂ ದೊಡ್ಡವೂ ಆದ ಕೆರೆಗಳ ದುರಸ್ತಿ ಹಾಗೂ ಜೀರ್ಣೋದ್ಧಾರಕ್ಕೆ ಬದಲಾಗಿ ಇಡಿ ಕೆರೆ ವ್ಯವಸ್ಥೆಯ ಬಗ್ಗೆ ವೈಜ್ಞಾನಿಕ ನಿರ್ವಹಣೆಯನ್ನು ರೂಪಿಸಬೇಕು – ಎನ್ನುವುದಕ್ಕೆ ಆತ ಒತ್ತು ಕೊಟ್ಟ.[3]

೧೮೭೧ರಲ್ಲಿ ಸ್ಯಾಂಕಿ ಹೀಗೆ ಬರೆದ: “ಮೈಸೂರಿನ ಕೆರೆಗಳು ಸಾಮಾನ್ಯವಾಗಿ ಜಂಟಿ ಜಲಾಶಯಗಳಲ್ಲಿ ಒಂದರ ಕೆಳಗೆ ಒಂದು ಸಾಲುಸಾಲಾಗಿವೆ. ಮೇಲಿನ ಕೆರೆಗಳ ಹೆಚ್ಚುವರಿ ನೀರು ಕೆಳಗಿನವಕ್ಕೆ ಹೋಗುತ್ತವೆ. ಈ ಸಾಲು ಕೆರೆಗಳ ಕೋಡಿ ತೊರೆಗಳು ಒಂದಕ್ಕೊಂದು ಸಂಗಮವಾಗಿ ಸೇರಿ ಹೆಚ್ಚುವರಿ ನೀರು ಹಾದು ಹೋಗುವ ಹೊಳೆಗಳಾಗುತ್ತವೆ. ಅವುಗಳಿಗೆ ಅಡ್ಡಲಾಗಿಯೇ ಜಲಾಶಯಗಳನ್ನು ಕಟ್ಟಿರುವುದು”.[4]

ಒಂದು ಕೆರೆಯ ಜಾಲದಲ್ಲಿ ಅಂಥ ಹಲವು ಕೆರೆಸಾಲು ಇರುತ್ತಿದ್ದವು. ಒಂದು ಜಾಲದಲ್ಲಿ ೨ ರಿಂದ ೨೦೦ ಅಥವಾ ಅದಕ್ಕೂ ಹೆಚ್ಚು ಕೆರೆಗಳು ಇದ್ದವು. ಅದು ೨ ರಿಂದ ೨೦೦ ಚದರ ಮೈಲು ಪ್ರದೇಶವನ್ನು ಆವರಿಸಿರುತ್ತಿತ್ತು.

ಪ್ರತಿಯೊಂದು ಜಾಲದಲ್ಲಿ ಅತ್ಯಂತ ಎತ್ತರದಲ್ಲಿನ ಕೆರೆಗಳು ಸಾಮಾನ್ಯವಾಗಿ ತುಂಬ ಸಣ್ಣವು. ಅವುಗಳ ಕೆಳಗೆ ಬೇಸಾಯ ಅತ್ಯಲ್ಪ ಅಥವಾ ಇಲ್ಲವೆ ಇಲ್ಲ. ಅವು ಹೂಳನ್ನು ಹಿಡಿದಿಡಲು ಹಾಗೂ ದನಕರುಗಳಿಗೆ ನೀರು ಒದಗಿಸಲು ಇತ್ಯಾದಿಗಳಲ್ಲಿ ಉಪಯುಕ್ತವಾಗಿದ್ದವು. ಅವುಗಳ ಕೆಳಗೆ ಹಳ್ಳಿಯ ಕೆರೆಗಳು ಇರುತ್ತಿದ್ದವು. ಗ್ರಾಮಸ್ಥರಿಗೆ ಅದೇ ಜಲಾಧಾರ ಅವುಗಳ ಕೆಳಗೆ ಬೇಸಾಯವೂ ಇರುತ್ತಿತ್ತು. ಪ್ರತಿಯೊಂದು ಜಾಲದ ಬಹುಪಾಲು ಕೆರೆಗಳು ಈ ಎರಡು ಬಗೆಯವೇ. ಹಳ್ಳಿ ಕೆರೆಯ ಕಂದಾಯದ ವರಮಾನ ೫೦೦ ರೂ. ಮೀರಿದ್ದೇ ಇಲ್ಲ. ಆಗ ತರಿ ಜಮೀನಿಗೆ ಎಕರೆಗೆ ೫ ರೂ. ಕಂದಾಯ ಇತ್ತು ಎಂದು ಲೆಕ್ಕ ಮಾಡಿದರೆ ಹಳ್ಳಿಯ ಕೆರೆಯ ಅಚ್ಚುಕಟ್ಟು ಪ್ರದೇಶ ೧೦೦ ಎಕರೆ ಅಥವಾ ಇನ್ನು ಕಡಿಮೆ ಇರುತ್ತಿತ್ತು. ಪ್ರತಿಯೊಂದು ಜಾಲದಲ್ಲಿಯೂ ೧೦೦೦ ರಿಂದ ೫೦೦೦ ರೂ. ಅಥವಾ ಹೆಚ್ಚಿಗೆ ಕಂದಾಯ ವರಮಾನವುಳ್ಳ ಒಂದು ಅಥವಾ ಹಲವಾರು ಕೆರೆಗಳು ಇದ್ದವು.

ಸ್ಯಾಂಕಿ ಬರೆಯುತ್ತಾರೆ: “ಮೇಲಿನ ಕೆರೆಯನ್ನು ಅಭಿವೃದ್ಧಿ ಪಡಿಸಿದರೆ ಅದರ ಕೆಳಗಿನ ಕೆರೆಯನ್ನು ಕೈಬಿಡುವುದು ಎಷ್ಟೋ ಸಲ ಸಾಧ್ಯ. ಹಿಂದೆ ನೀರಾವರಿ ಆಗುತ್ತಿದ್ದ ಎಲ್ಲ ಜಮೀನನ್ನು, ಜೊತೆಗೆ ಕೈಬಿಡಲಾದ ಕೆರೆಯ ಅಂಗಳವನ್ನು ಮೇಲಿನ ಕೆರೆಯಿಂದಲೇ ನೀರಾವರಿ ಮಾಡುವುದು ಸಾಧ್ಯ. ಹೆಚ್ಚುವರಿ ಅನುಕೂಲವೆಂದರೆ ಸಂರಕ್ಷಿಸಬೇಕಾದ ಕೆರೆ ಒಂದೇ ಒಂದು. ಎರಡಲ್ಲ. ಪ್ರತಿಯೊಂದು ಕೆರೆ ಜಾಲವನ್ನು ಒಂದೇ ಯೋಜನೆಯಾಗಿ ಪರಿಗಣಿಸಬೇಕು. ಒಂದೇ ಆಗಿ ನಿರ್ವಹಿಸಬೇಕು. ಅದನ್ನು ನಿಖರವಾಗಿ ಮೋಜಣಿ ಮಾಡಬೇಕು, ಗುರುತಿಸಬೇಕು. ಎಚ್ಚರಿಕೆಯಿಂದ ಯೋಜನೆಯನ್ನು ರೂಪಿಸಿ, ಅನುಮೋದಿಸಿ ಸಮರ್ಹ ಮೇಲುಸ್ತುವಾರಿಯಲ್ಲಿ ಕಾರ್ಯವನ್ನು ನಿರ್ವಹಿಸಬೇಕು. ಅನಂತರ ಆ ಜಾಲಕ್ಕೆ ಒಳಪಟ್ಟ ಕೆರೆಗಳ ಸಂರಕ್ಷಣೆಯನ್ನು ರೈತರಿಗೇ ವಹಿಸಿಕೊಡಬಹುದು.[5]

ಅಂಥ ಸಮಗ್ರ ಯೋಜನೆಗೆ ಸಿಬ್ಬಂದಿಗಾಗಿ ಹಾಗೂ ನಿರ್ಮಾಣಕಾರ್ಯಕ್ಕಾಗಿ ಆರ್ಥಿಕ ವೆಚ್ಚ ಬೇಕಾಗುತ್ತಿತ್ತು. ೧೯,೨೨೩ ಕೆರೆಗಳ (ಶಿವಮೊಗ್ಗ, ಕಡೂರು ಜಿಲ್ಲೆಯ ಕೆರೆಗಳನ್ನು ಬಿಟ್ಟು) ದುರಸ್ತಿ ಮತ್ತು ಜೀರ್ಣೋದ್ಧಾರದ ವೆಚ್ಚ ಅಂದಾಜು ಸುಮಾರು ೪೮ ಲಕ್ಷ ರೂ. ಆಗಿತ್ತು. ಕಾರ್ಯವನ್ನು ಹನ್ನೆರಡು ವರ್ಷದಲ್ಲಿ ಪೂರೈಸಲು ಉದ್ದೇಶಿಸಲಾಗಿತ್ತು.[6]

ಈ ಪ್ರಸ್ತಾಪದ ಮೇಲೆ ಕಮಿಷನರನ ಕಚೇರಿಗೂ ಭಾರತ ಸರ್ಕಾರಕ್ಕೂ ನಡುವೆ ಪತ್ರ ವ್ಯವಹಾರ ಮೊದಲಾಯಿತು. ಅಂಥ ಯೋಜನೆಯ ಆಡಳಿತ ಕಟ್ಟುನಿಟ್ಟಾಗಿ ಇಂಜಿನಿಯರಿಂಗ್ ಇಲಾಖೆಯ ಕೈಯಲ್ಲಿ ಇರಬೇಕೆ ಅಥವಾ ಕಂದಾಯ ಇಲ್ಲವೆ ಸಿವಿಲ್ ಅಧಿಕಾರಿಗಳ ಅಧೀನದಲ್ಲಿ ಇರಬೇಕೆ ಎಂಬ ಬಗ್ಗೆ ಪತ್ರಗಳ ವಿನಿಮಯ ಸಾಗಿತು. ರೈಲ್ವೆ ನಿರ್ಮಾಣಕ್ಕೆ ಪ್ರಾಮುಖ್ಯತೆ ಕೊಡಬೇಕೆ ಬೇಡವೇ ಎಂಬ ಬಗ್ಗೆಯೂ ಚರ್ಚೆ ಆಯಿತು. ಈ ನಡುವೆ ೧೮೭೬ – ೧೮೭೮ರಲ್ಲಿ ಸಂಸ್ಥಾನದಲ್ಲಿ ತೀವ್ರ ಕ್ಷಾಮ ಸಂಭವಿಸಿತು. ಈ ಘಟನೆಗಳೆಲ್ಲದರ ಸರಮಾಲೆಯ ಪರಿಣಾಮವೆಂದರೆ ಸ್ಯಾಂಕಿ ಮಾಡಿದ ಪ್ರಸ್ತಾಪ ಮೂಲೆಗುಂಪಾದುದು. ೧೮೮೧ರಲ್ಲಿ ಸಂಸ್ಥಾನದ ಆಡಳಿತ ರಾಜರಿಗೆ ಮರಳಿದ ನಂತರ ನೀರಾವರಿ ಸೌಲಭ್ಯಗಳ ಅಭಿವೃದ್ಧಿಯನ್ನು ಸಂಸ್ಥಾನಕ್ಕೆ ಬಿಡಲಾಯಿತು.

ಕೆರೆಗಳ ದುರಸ್ತಿ ಹಾಗೂ ಸಂರಕ್ಷಣೆ:

ಹಿಂದೆ ಕೆರೆಗಳ ಸಂರಕ್ಷಣೆ ಗ್ರಾಮಸಮುದಾಯಕ್ಕೆ ಸೇರಿತ್ತು. ಬ್ರಿಟಿಷರು ೧೮೩೧ರಲ್ಲಿ ರಾಜ್ಯಾಡಳಿತವನ್ನು ವಶಮಾಡಿಕೊಳ್ಳುವುದಕ್ಕೆ ಮೊದಲು ಪದೇ ಪದೇ ನಡೆದ ಯುದ್ಧಗಳಿಂದಾಗಿ ಈ ವ್ಯವಸ್ಥೆಗೆ ಧಕ್ಕೆ ತಗುಲಿತ್ತು. ಬ್ರಿಟಿಷರು ಆಡಳಿತವನ್ನು ಹಿಡಿದ ಮೇಲೆ ಅವರ ಗ್ರಾಮಾಡಳಿತ ವಿಧಾನದ ದೆಸೆಯಿಂದಾಗಿ ಇದು ಮತ್ತಷ್ಟು ಆಘಾತಕ್ಕೆ ಒಳಗಾಯಿತು. ಮೇಲಾಗಿ ಬ್ರಿಟಿಷರು ಗ್ಯಾರಂಟಿಯಾಗಿ ಕಂದಾಯ ತರುತ್ತಿದ್ದ ಭಾರಿ ಕೆರೆಗಳ, ನದಿ ಕಾಲುವೆಗಳ ದುರಸ್ತಿ ಸಂರಕ್ಷಣೆಯ ಮೇಲಷ್ಟೆ ಲಕ್ಷ್ಯವಿಟ್ಟರು. ಅನೇಕ ಸಣ್ಣಪುಟ್ಟ ಕೆರೆಗಳನ್ನು ಅಸಡ್ಡೆ ಮಾಡಿದರು. ಈ ಕಷ್ಟಸ್ಥಿತಿ ಎದುರಿಗೆ ನಿಂತಾಗ ೧೮೬೩ರಲ್ಲಿ ಸಂಸ್ಥಾನಾದ್ಯಾಂತ ಗ್ರಮಾಧಿಕಾರಿಗಳಿಗೆ ಆಜ್ಞೆಯನ್ನು ಮಾಡಲಾಯಿತು. ನೀರಾವರಿ ಕೆರೆಗಳ ಸಣ್ಣಪುಟ್ಟ ದುರಸ್ತಿ ಕೆಲಸಗಳ ಬಗ್ಗೆ ಗ್ರಾಮಸ್ಥರು ತಮ್ಮ ರೂಢಿಯ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಆಜ್ಞೆ ಮಾಡಲಾಯಿತು. ಹಳ್ಳಿಯವರೇ ಅಂಥ ದುರಸ್ತಿ ಕೆಲಸಗಳನ್ನು ಮಾಡಲು ಸಾಧ್ಯವಾಗಲೆಂದು ಕೆರೆಗಳ ದುರಸ್ತಿ ಜೀರ್ಣೋದ್ಧಾರಗಳನ್ನು ಕೈಗೊಳ್ಳುವ ವ್ಯಕ್ತಿಗಳಿಗೆ ತರಿ ಕಂದಾಯದಲ್ಲಿ ೩೦ ವರ್ಷ ರಿಯಾಯಿತಿಯನ್ನು ನೀಡಲಾಯಿತು.

ಮತ್ತೆ ೧೮೭೩ರಲ್ಲಿ ಸರ್ಕಾರ ಜೀರ್ಣೋದ್ಧಾರ ಮಾಡಿದ ಎಲ್ಲ ಕೆರೆಗಳ ಮುಂದಿನ ಸಂರಕ್ಷಣೆಯನ್ನು ಹಳ್ಳಿಯವರಿಗೆ ವಹಿಸಲು ಪ್ರಸ್ತಾಪ ಮಾಡಲಾಯಿತು. ಕೆರೆಯಿಂದ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಲಾಭ ಪಡೆಯುವ ಭೂಹಿಡುವಳಿದಾರರೆಲ್ಲರೂ ಕೆರೆಗಳ ಸಂರಕ್ಷಣೆಗೆ ಬಾಧ್ಯಸ್ಥ ಎನ್ನಲಾಯಿತು. ಹಿಡುವಳಿದಾರರ ಮೇಲೆ ಈ ಕರ್ತವ್ಯವನ್ನು ಹೊರಿಸುವ ಕೆಲಸವನ್ನು ಹಳ್ಳಿಯ ಪಟೇಲನಿಗೆ ವಹಿಸಲಾಯಿತು. ಈ ಸಲುವಾಗಿ ಅಕ್ಟೋಬರ್ ೧೮೭೩ರಲ್ಲಿ ವಿವರವಾದ ನಿಯಮಗಳನ್ನು ರಚಿಸಿ ಹೊರಡಿಸಲಾಯಿತು. ಇವನ್ನು ಈ ಗ್ರಂಥದ ಇನ್ನೊಂದು ಅಧ್ಯಾಯದಲ್ಲಿ ವಿವರವಾಗಿ ವರ್ಣಿಸಲಾಗಿದೆ.

ಜೀರ್ಣೋದ್ಧಾರವಾಗದೆ ಇದ್ದ ಕೆರೆಗಳ ಬಗ್ಗೆ ಯಾವುದೇ ನಿರ್ದಿಷ್ಟ ನಿಯಮಗಳನ್ನು ವಿಧಿಸಲಾಗಲಿಲ್ಲ. ಏಕೆಂದರೆ ಅನೇಕ ವರ್ಷಗಳಿಂದಲೂ ಅಲಕ್ಷ್ಯಕ್ಕೆ ಗುರಿಯಾಗಿದ್ದ ಸಂರಕ್ಷಣೆ ಇಲ್ಲವೆ ದುರಸ್ತಿ ಕಾರ್ಯವನ್ನು ರೈತರು ಈಗ ಮಾಡಬೇಕು ಎನ್ನುವುದು ಸಾಧ್ಯವಿರಲಿಲ್ಲ. ಭಾರತ ಸರ್ಕಾರದೊಡನೆ ಪತ್ರ ವ್ಯವಹಾರ ಮಾಡಿದ ನಂತರ ಯಾವ ಕೆರೆಯಿಂದ ಸರಾಸರಿ ಆದಾಯ ೧೦೦ ರೂ. ಗಿಂತ ಕಡಿಮೆ ಇತ್ತೋ ಅದರ ಜೀರ್ಣೋದ್ಧಾರ ದುರಸ್ತಿ ಅಥವಾ ಸಂರಕ್ಷಣೆಗಾಗಿ, ಸಾರ್ವಜನಿಕ ಹಣವನ್ನು ವೆಚ್ಚ ಮಾಡಬಾರದು ಎಂದು ವಿಧಿಸಲಾಯಿತು. ಇತರ ಕೆರೆಗಳ ವಿಷಯದಲ್ಲಿಯೂ ನಾಶವಾಗಿದ್ದ ಕೆರೆಯ ಅಥವಾ ಬಳಕೆಯಲ್ಲಿ ಇಲ್ಲದಿದ್ದ ಕೆರೆಯ ಜೀರ್ಣೋದ್ಧಾರದಲ್ಲಿ ವೆಚ್ಚದ ಒಂದು ಪ್ರಮಾಣವನ್ನು ಮಾತ್ರ ರೈತರು ಭರಿಸಬೇಕೆಂದೂ ಅವರು ತಮ್ಮ ಪಾಲಿನ ದೇಣಿಗೆ ಸಲ್ಲಿಸುವಂತೆ ಒಪ್ಪಿಸಲು ಯಾವುದೇ ಒತ್ತಾಯವನ್ನು ಮಾಡಬಾರದೆಂದೂ ತೀರ್ಮಾನಿಸಲಾಯಿತು. ಆದರೆ ಮೂರನೆಯ ಎರಡು ಅಥವಾ ನಾಲ್ಕನೆಯ ಮೂರು ಭಾಗದಷ್ಟು ಮಂದಿ ರೈತರು ದೇಣಿಗೆ ಸಲ್ಲಿಸುವುದಾಗಿ ಮುಚ್ಚಳಿಕೆ ಮಾಡಿಕೊಡಲು ಒಪ್ಪಿದಲ್ಲಿ, ಉಳಿದ ಅಲ್ಪಸಂಖ್ಯಾತರು ಬಹುಸಂಖ್ಯಾತರ ಅಭಿಮತಕ್ಕೆ ಸೇರಿಕೊಳ್ಳಬೇಕೆಂದು ಆಜ್ಞೆಯಾಯಿತು. ೧೮೮೪ರಲ್ಲಿ ಮೈಸೂರಿನ ದಿವಾನ್ ಸರ್.ಕೆ. ಶೇಷಾದ್ರಿ ಅಯ್ಯರ್ ಹೀಗೆ ಅಭಿಪ್ರಾಯಪಟ್ಟರು –

“ನಮ್ಮ ಕೆರೆಗಳ ವ್ಯೂಹದ ಯಾವುದೇ ಸುಧಾರಣೆಯೂ ಈ ವಸ್ತು ಸ್ಥಿತಿಯನ್ನು ಸ್ಪಷ್ಟವಾಗಿ ಗುರುತಿಸಿಯೇ ಮೊದಲಾಗಬೇಕು. ಏನೆಂದರೆ ಪ್ರಾಂತ್ಯದಲ್ಲಿರುವ ಎಲ್ಲ ಕೆರೆಗಳ ದುರಸ್ತಿ ಜೀರ್ಣೋದ್ಧಾರವನ್ನು ಕೈಗೆತ್ತಿಕೊಳ್ಳುವುದು ಸರ್ಕಾರದ ಸಾಮರ್ಥ್ಯಕ್ಕೆ ಮೀರಿದ್ದು, ಅಲ್ಲದೆ ಗ್ರಾಮವ್ಯವಸ್ಥೆ ಅಥವಾ ಅದರ ಯಾವ ತುಣುಕು ಊಳಿದಿತ್ತೊ ಅದು ಅಸಂಘಟಿತವಾಗಿ ಹೋದ ಮೇಲೆ ಮತ್ತು ಕೆರೆಗಳ ದುರಸ್ತಿಗಾಗಿ ವಿಶೇಷ ಸುಂಕಗಳನ್ನು ಹೇರಿ ರೈತನನ್ನು ತನ್ನ ಹೊಣೆಯಿಂದ ಬಿಡಿಸಿಯಾದ ಮೇಲೆ ಕೆರೆಗಳ ಭಾರವನ್ನು ಆತನ ಮೇಲೆಯೆ ಹೇರುವುದು ನ್ಯಾಯವಾಗಲಾರದು” [7]

ಶೇಷಾದ್ರಿ ಅಯ್ಯರ್‌ರ ಕೆರೆ ಜೀರ್ಣೋದ್ಧಾರ ಯೋಜನೆ:

೧೮೮೫ರಲ್ಲಿ ದಿವಾನ್ ಶೇಷಾದ್ರಿ ಅಯ್ಯರರು ಕೆರೆಗಳ ಅಂದಿನ ಸ್ಥಿತಿಯ ಬಗ್ಗೆ ಪ್ರಜಾಪ್ರತಿನಿಧಿ ಸಭೆಯಲ್ಲಿ ಮಾತನಾಡಿದ ತರುಣದಲ್ಲೆ ಕೆರೆಗಳ ಜೀರ್ಣೋದ್ಧಾರಕ್ಕಾಗಿ ಒಂದು ಯೋಜನೆಯನ್ನು ಮಂಡಿಸಿದರು. ಇದು ೧೮೮೭ರಲ್ಲಿ ಅಂತಿಮವಾಗಿ ಒಪ್ಪಿಗೆ ಪಡೆಯಿತು. ಇದರ ಪ್ರಕಾರ ೩೦೦ ರೂ. ಹಾಗೂ ಅದಕ್ಕೂ ಕಡಿಮೆ ಕಂದಾಯ ಹುಟ್ಟುವಳಿಯ ಕೆರೆಗಳನ್ನೆಲ್ಲ ಸಣ್ಣ ಕೆರೆಗಳು ಎಂದು ಪರಿಗಣಿಸಿ ಅವುಗಳ ಜೀರ್ಣೋದ್ಧಾರದ ಹೊಣೆ ರೈತರದು ಎನ್ನಲಾಯಿತು. ರೈತರು ತಾವೇ ಮಣ್ಣು ಕೆಲಸವನ್ನು ಮಾಡಬೇಕು. ಸರ್ಕಾರ ಅಗತ್ಯವಾದ ಕಲ್ಲು ಕಟ್ಟಡವನ್ನು ಮಾಡಿಸಿಕೊಡಲು ಒಪ್ಪಿತು. ಅಗತ್ಯವಾದ ಮಟ್ಟಕ್ಕೆ ಕೆರೆಯನ್ನು ಸರಿಪಡಿಸಿದ ನಂತರ ಅದನ್ನು ಮುಂದಿನ ಸಂರಕ್ಷಣೆಗಾಗಿ ೧೮೭೩ರ ನಿಯಮಾನುಸಾರ ರೈತರಿಗೆ ವಹಿಸತಕ್ಕದ್ದು.

೩೦೦ ರೂ.ಗಳಿಗಿಂತ ಹೆಚ್ಚಿನ ವರಮಾನವುಳ್ಳ ಇತರ ಎಲ್ಲ ಕೆರೆಗಳ ಜೀರ್ಣೋದ್ಧಾರವನ್ನೂ ಸರ್ಕಾರವೇ (ಲೋಕೋಪಯೋಗಿ ಇಲಾಖೆ) ರೈತರ ದೇಣಿಗೆಯ ನೆರವಿನಿಂದ ನಿರ್ವಹಿಸಬೇಕೆಂದು ಆಜ್ಞೆಯಾಯಿತು. ಈ ಯೋಜನೆಯಂತೆ ತೃಪ್ತಿಕರವಾದ ಸ್ಥಿತಿಗೆ ತರಬಹುದು ಎಂದು ನಿರೀಕ್ಷಿಸಲಾಯಿತು. ೧೮೯೦ – ೯೧ ಆಡಳಿತ ವರದಿಯ ಪ್ರಕಾರ ಕೆರೆ ಜೀರ್ಣೋದ್ಧಾರ ಯೋಜನೆಯಂತೆ “೮೯೧ ಕೆರೆಗಳ ಕೆಲಸವನ್ನು ಕೈಯತ್ತಿಕೊಳ್ಳಲಾಗಿದೆ. ಹಾಗೂ ೬೬,೦೦೦ ರೂ. ಮೌಲ್ಯದ ಮಣ್ಣು ಕೆಲಸ ರೈತರಿಂದಲೇ ಆಗಿದೆ”. ೧೦೦ ರೂ. ವರಮಾನ ಹಾಗೂ ಗ್ರಾಮ ಸಮುದಾಯಕ್ಕೆ ಪೂರಾ ವಹಿಸಲಾಗಿದ್ದ ಸಣ್ಣ ಕೆರೆಗಳನ್ನು ೧೯೦೪ರ ಕೆರೆ ಜೀರ್ಣೋದ್ಧಾರ ಯೋಜನೆಗೆ ಒಳಪಡಿಸಲಾಯಿತು.

೧೮೭೦ – ೭೧ ಇಸ್ವಿವರಗೆ ೨,೮೩೧ ದೊಡ್ಡ ಹಾಗೂ ಸಣ್ಣ ಕೆರೆಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ. ಇನ್ನೂ ಮಾಡಬೇಕಾದವು ೧೦೧೩ ದೊಡ್ಡ ಕೆರೆಗಳು ಹಾಗೂ ೨೫,೦೧೬ ಸಣ್ಣವು ಇವೆ ಎಂಬುದಾಗಿ ವಿ.ಪಿ. ಮಾಧವರಾಯರು ೧೯೦೨ ರಲ್ಲಿ ಸಣ್ಣ ಕೆರೆಗಳ ಜೀರ್ಣೋದ್ಧಾರ ಯೋಜನೆ ಕುರಿತ ತಮ್ಮ ವರದಿಯಲ್ಲಿ ಸೂಚಿಸಿದ್ದರು.

೧೯೧೪ರಲ್ಲಿ ಕೆರೆ ಜೀರ್ಣೋದ್ದಾರ ಯೋಜನೆಯ ಇಡೀ ಕಾರ್ಯಾಚರಣೆಯನ್ನು ಪುನರ್ವಿಮರ್ಶೆ ಮಾಡಲಾಯಿತು. ೨೫ ವರ್ಷಗಳಲ್ಲಿ ಸುಮಾರು ೨,೫೦೦ ಕೆರೆಗಳ ಜೀರ್ಣೋದ್ಧಾರವಾಗಿದೆ ಹಾಗೂ ೧೯,೫೦೦ ಕೆರೆಗಳನ್ನು ಜೀರ್ಣೋದ್ಧಾರ ಮಾಡಬೇಕಾಗಿದೆ ಎಂದು ಗಮನಿಸಲಾಯಿತು. ಕೆಲಸದ ಪ್ರಗತಿಯನ್ನು ಚುರುಕುಗೊಳಿಸುವ ಉದ್ದೇಶದಿಂದ ಹಳ್ಳಿಯ ಜನ ಮಣ್ಣು ಕಾಮಗಾರಿ ಮಾಡಬೇಕು ಎಂಬ ಹಾಲಿ ಇದ್ದ ವ್ಯವಸ್ಥೆಗೆ ಬದಲಾಗಿ ಅವರು ಜೀರ್ಣೋದ್ಧಾರದ ಪೂರಾ ವೆಚ್ಚದಲ್ಲಿ ಮೂರನೆಯ ಒಂದು ಪಾಲನ್ನು ದೇಣಿಗೆ ನೀಡಬೇಕೆಂದೂ, ಬಾಕಿ ಮೂರನೆಯ ಎರಡು ಪಾಲನ್ನು ಸರ್ಕಾರ ವಹಿಸಿಕೊಳ್ಳಬೇಕೆಂದೂ ಸಲಹೆ ಮಾಡಲಾಯಿತು. ಆ ಕೆಲಸವನ್ನು ಹಳ್ಳಿಯವರಿಗೇ ವಹಿಸಬೇಕೆಂದೂ ಸಲಹೆ ಮಾಡಲಾಯಿತು. ಈ ಕ್ರಮದಿಂದಾಗಿ ಪ್ರತಿ ವರ್ಷ ಸುಮಾರು ೮ ಲಕ್ಷ ರೂ. ವೆಚ್ಚದಲ್ಲಿ ಸುಮಾರು ೧೦೦೦ ಕೆರೆಗಳು ಜೀರ್ಣೋದ್ಧಾರವಾಗುತ್ತವೆ. ಈ ಹಣದಲ್ಲೇ ಸುಮಾರು ೨೬೬ ಲಕ್ಷ ರೂ. ಹಳ್ಳಿಯವರ ಕಾಣಿಕೆಯಾಗಿ ಬರುತ್ತದೆ ಎಂದು ನಿರೀಕ್ಷಿಸಲಾಯಿತು.[8] ಆದರೆ ಆ ನಿರೀಕ್ಷೆ ಪೂರೈಸಲಿಲ್ಲ. ಜೀರ್ಣೋದ್ಧಾರವಾದ ಕೆರೆಗಳ ಸಂಖ್ಯೆ ಹೆಚ್ಚಲಿಲ್ಲ. ಈ ಸೋಲಿಗೆ ಮುಖ್ಯ ಕಾರಣ, ಭೂಹಿಡುವಳಿದಾರರು ತಮ್ಮ ಪಾಲಿನ ಕಾರ್ಯನಿರ್ವಹಣೆಯಲ್ಲಿ ತೋರಿದ ನಿರುತ್ಸಾಹ ಮತ್ತು ಅವರಿಂದ ಕಾರ್ಯ ಮಾಡಿಸುವ ಸ್ಥಿತಿಯಲ್ಲಿ ಇಲ್ಲವೆ ತಾನೇ ನಿರ್ವಹಿಸುವ ಸ್ಥಿತಿಯಲ್ಲಿ ಸರ್ಕಾರ ಇಲ್ಲದಿದ್ದುದು. ೨೬೫೬ ದೊಡ್ಡ ಹಾಗೂ ೨೦,೮೦೩ ಸಣ್ಣ ಕೆರೆಗಳ ಪೈಕಿ ೧೯೩೨ – ೩೨ರಲ್ಲಿ ೨೩೪೬ ದೊಡ್ಡವು ಹಾಗೂ ೪,೭೫೭ ಚಿಕ್ಕವು ಮಾತ್ರ ಜೀರ್ಣೋದ್ಧಾರ ಆಗಿದ್ದವು. ೧೯೪೬ – ೪೭ರಲ್ಲಿ ಜೀರ್ಣೋದ್ದಾರವಾಗಬೇಕಾದ ೧೪,೨೯೯ ಸಣ್ಣ ಕೆರೆಗಳು ಇನ್ನೂ ಉಳಿದಿದ್ದವು. ದೊಡ್ಡ ಕೆರೆಗಳಲ್ಲಿ ಬಹುಪಾಲು ಜೀರ್ಣೋದ್ಧಾರಗೊಂಡಿದ್ದರೂ ಸಣ್ಣ ಕೆರೆಗಳಲ್ಲಿ ಶೇ. ೭೦ರಷ್ಟು ನಿರುಪಯುಕ್ತವಾಗಿಯೇ ಉಳಿದಿದ್ದವು.

ಹೊಸ ಕೆರೆಗಳ ನಿರ್ಮಾಣ ೧೮೮೧೧೯೫೬:

೧೮೮೧ರಲ್ಲಿ ಆಡಳಿತ ರಾಜರಿಗೆ ಮರಳಿದ ನಂತರ ಹಾಲಿ ಇದ್ದ ಕೆರೆಗಳ ಜೀರ್ಣೋದ್ಧಾರಕ್ಕೆ ಪ್ರಧ್ಯಾನ್ಯವಿತ್ತಾದರೂ ಸಾಧ್ಯವಿದ್ದ ಕಡೆಗಳಲ್ಲಿ ಹೊಸ ಕೆರೆಗಳನ್ನು ಕಟ್ಟಲೂ ಕ್ರಮ ಕೈಗೊಳ್ಳಲಾಯಿತು. ಆಗ ಕೈಗೊಳ್ಳಲಾದ ಕೆಲವು ಮುಖ್ಯ ಹಾಗೂ ಭಾರಿ ಕಾಮಗಾರಿ ಇವು.

೧. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಚಿತ್ರಾವತಿಗೆ ಅಡ್ಡಲಾಗಿ ರಾಮಸಮುದ್ರ
೨. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಪಾಪಗ್ನಿಗೆ ಅಡ್ಡಲಾಗಿ ವೆಂಕಟ ಸಾಗರ
೩. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಉತ್ತರ ಪೆನ್ನಾರಿಗೆ ಅಡ್ಡಲಾಗಿ ಶ್ರೀನಿವಾಸ ಸಾಗರ
೪. ಚಳ್ಳಕೆರೆ ತಾಲ್ಲೂಕಿನಲ್ಲಿ ಹಿರೇಹಳ್ಳಕ್ಕೆ ಅಡ್ಡಲಾಗಿ ತಿಪ್ಪಯ್ಯನಕಟ್ಟೆ
೫. ಹಿರಿಯೂರು ತಾಲ್ಲೂಕಿನಲ್ಲಿ ಮೇದರಹಳ್ಳಕ್ಕೆ ಅಡ್ಡಲಾಗಿ ಕೆರೆ
೬. ತುಮಕೂರಿನಲ್ಲಿ ಗರುಡಾಚಲಕ್ಕೆ ಅಡ್ಡಲಾಗಿ ಮಾರೂರು ಕೆರೆ
೭. ಚಿತ್ರದುರ್ಗದಲ್ಲಿ ಜಿಣಿಗೆಹಳ್ಳಕ್ಕೆ ಅಡ್ಡಲಾಗಿ ಕತ್ರಾಳಕೆರೆ
೮. ಚಿತ್ರದುರ್ಗದಲ್ಲಿ ಕಲ್ಲೇಹಳ್ಳಿ ಕೆರೆ
೯. ಚಳ್ಳಕೆರೆ ತಾಲ್ಲೂಕಿನಲ್ಲಿ ಮೀರಾಸಾಬಿಹಳ್ಳಿ ಕೆರೆ
೧೦. ಚಳ್ಳಕೆರೆ ತಾಲ್ಲೂಕಿನಲ್ಲಿ ಪರಶುರಾಮಪುರ ಕೆರೆ
೧೧. ಚಳ್ಳಕೆರೆ ತಾಲೂಕಿನಲ್ಲಿ ಚಿಕ್ಕಮಧುರೆ ಕೆರೆ.
೧೨. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ತಿಮ್ಮನಾಯಕನಹಳ್ಳಿ ಕೆರೆ

ಈ ಎಲ್ಲ ಹೊಸ ಹಾಗೂ ಮೊದಲೆ ಇದ್ದ ಜಲಾಶಯಗಳು ಸಣ್ಣಪುಟ್ಟ ತೊರೆಗಳಿಗೆ ಅಡ್ಡಲಾಗಿ ಕಟ್ಟಿದ್ದವು.ಮಳೆ ಹೋದರೆ ತೊರೆಗಳೂ ಬತ್ತಿ ಹೋಗುತ್ತಿದ್ದವು. ಕಾವೇರಿ, ಹೇಮಾವತಿ, ಭದ್ರಾ, ತುಂಗಾ ಇತ್ಯಾದಿ ಘಟ್ಟಗಳಿಂದ ಪೋಷಿತವಾದ ನದಿಗಳಂತಲ್ಲದೆ ಸಣ್ಣ ತೊರೆಗಳ ಹರಿವು ಸೀಮಿತವಾದದ್ದು, ಅನಿಶ್ಚಿತವಾದುದ್ದು. ಆದ್ದರಿಂದ ಘಟ್ಟದ ನದಿಗಳಿಗೆ ಅಡ್ಡಲಾಗಿ ಜಲಾಶಯಗಳನ್ನು ಕಟ್ಟಲು ಪರಿಶೀಲನೆಯನ್ನು ಕೈಗೊಳ್ಳಲಾಯಿತು. ಚಿತ್ರದುರ್ಗದ ಬಳಿ ವೇದಾವತಿ ನದಿಗೆ ವಾಣೀವಿಲಾಸ ಸಾಗರ (ಮಾರಿಕಣಿವೆ) ಮೈಸೂರಿನ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಕೃಷ್ಣರಾಜಸಾಗರ(ಕನ್ನಂಬಾಡಿ) ಇವುಗಳ ನಿರ್ಮಾಣವನ್ನು ೨೦ನೆಯ ಶತಮಾನದ ಮೊದಲಲ್ಲಿ ಕೈಗೊಳ್ಳಲಾಯಿತು. ವಾಣಿವಿಲಾಸ ಸಾಗರ ಇರುವ ವೇದಾವತಿ ನದಿಗೆ ನೀರು ಬರುವುದು ಬಹುಪಾಲು ಮೈದಾನ ಪ್ರದೇಶದಿಂದ ಹಾಗೂ ಸ್ವಲ್ಪಮಟ್ಟಿಗೆ ಘಟ್ಟಗಳ ಮಳೆಯಿಂದ. ವಿಶಾಲವಾದ ಜಲಾಶಯಕಟ್ಟಲು ಅತ್ಯುತ್ತಮವಾದ ಸ್ಥಳ, ನದಿಯಲ್ಲಿ ಅಣೆಯ ಕೆಳಗೆ ಇದ್ದ ಅಣೆಕಟ್ಟುಗಳಿಗೆ ಖಾಯಂ ಆಗಿ ನೀರು ಒದಗಿಸುವ ಭಾರಿ ಜಲಾಶಯಗಳ ಯಶಸ್ವಿ ನಿರ್ಮಾಣದಿಂದ ಹಾಗೂ ಮುಖ್ಯನದಿಗಳಿಗೆ ಅಡ್ಡಲಾಗಿ ಕಟ್ಟೆಗಳನ್ನು ಕಟ್ಟಿ ಅವುಗಳ ನೀರನ್ನು ಬಳಸಿಕೊಳ್ಳಬೇಕಾದ ಅಗತ್ಯ ಕಂಡು ಬಂದುದರಿಂದ ಭಾರಿ ಜಲಾಶಯಗಳ ಯೋಜನೆಯ ಮೇಲೆ ಒತ್ತು ಕೊಡಲಾಯಿತು. ಆವರೆಗೆ ಚೆನ್ನಗಿರಿ ತಾಲೂಕಿನ ಸೂಳೆಕೆರೆಯೇ ಅತ್ಯಂತ ದೊಡ್ಡ ಕೆರೆಯಾಗಿತ್ತು. ಅದರ ವಿವರವಾದ ವರ್ಣನೆಯನ್ನು ಅನುಬಂಧ – ೨ರಲ್ಲಿ ಕೊಡಲಾಗಿದೆ. ಅದೆ ರೀತಿ ಮೈಸೂರು ಸಂಸ್ಥಾನದಲ್ಲಿ ಅತ್ಯಂತ ಎತ್ತರದ ಕಟ್ಟಿಯಾಗಿದ್ದುದು ಗೌರಿಬಿದನೂರು ತಾಲ್ಲೂಕಿನ ವಾಟದ ಹೊಸಹಳ್ಳಿ ಅಮಾನಿಕೆರೆ. ಅದರ ವಿವರವಾದ ವರ್ಣನೆ ಅನುಬಂಧ – ೭ರಲ್ಲಿದೆ.

೨೦ನೆಯ ಶತಮಾನದ ಮೊದಲ ದಶಕಗಳಲ್ಲಿ ಕಟ್ಟಲಾದ ಅತ್ಯಂತ ಎತ್ತರದ ಮಣ್ಣುಕಟ್ಟೆ ಷಿಕಾರಿಪುರ ತಾಲ್ಲೂಕಿನ ಕುಮದ್ವತಿಗೆ ಅಡ್ಡಲಾಗಿರುವ ಅಂಜನಾಪುರ ಜಲಾಶಯ. ಅದು ನದಿಯ ಪಾತ್ರದಿಂದ ೬೩ ಅಡಿ ಎತ್ತರವಾಗಿತ್ತು. ಕೆರೆ ತುಂಬಿದಾಗ ನೀರಿನ ಹರಿವು ೧.೮೯ ಚದರ ಮೈಲಿ ಇತ್ತು.

ಈ ಶತಮಾನದಲ್ಲಿ ೧೯೫೬ರ ವರೆದ್ಗೆ ಕಟ್ಟಲಾದ ಇತರ ಕೆಲವು ಮುಖ್ಯ ರಚನೆಗಳು ಇವು :

೧. ಕ್ಲೋಸಪೇಟೆ (ರಾಮನಗರ) ತಾಲ್ಲೂಕಿನ ಕೇತೋಹಳ್ಳಿ ಕೆರೆ
೨. ಕಾನಕಾನಹಳ್ಳಿ (ಕನಕಪುರ) ತಾಲ್ಲೂಕಿನ ಮರಳವಾಡಿ ಕೆರೆ
೩. ಬಿಡದಿ ಹತ್ತಿರ ವೃಷಭಾವತಿಗೆ ಅಡ್ಡಲಾಗಿ ಬೈರಮಂಗಲ ಕೆರೆ
೪. ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ
೫. ಬೆಂಗಳೂರು ತಾಲ್ಲೂಕಿನ ಮಾರ್ಕಂಡೇಯ ನದಿಗೆ ಅಡ್ಡಲಾಗಿ ತಿಪ್ಪಗೊಂಡನಹಳ್ಳಿ ಕೆರೆ
೬. ಕೊರಟಗೆರೆ ತಾಲ್ಲೂಕಿನ ತುಂಬಾಡಿ ಕೆರೆ
೭. ಬಂಗಾರಪೇಟೆ ತಾಲ್ಲೂಕಿನಲ್ಲಿ ಮಾರ್ಕಂಡೇಯ ನದಿಗೆ ಅಡ್ಡಲಾಗಿ ರಾಗಿಮಲ್ಲಾಳಹಳ್ಳಿ ಕೆರೆ
೮. ಕುಣಿಗಲ್ಲು ತಾಲ್ಲೂಕಿನ ನಿಡಸಾಲೆ ಕೆರೆ
೯. ಚಿಕ್ಕನಾಯಕಹಳ್ಳಿ ತಾಲ್ಲೂಕಿನ ದಳವಾಯಿ ಕೆರೆ
೧೦. ಕುಣಿಗಲ್ಲು ತಾಲ್ಲೂಕಿನ ಹಾನಮಾಚನಹಳ್ಳಿ ಕೆರೆ
೧೧. ಹೊನ್ನಾಳಿ ತಾಲ್ಲೂಕಿನ ಸವಲಂಗ ಕೆರೆ
೧೨. ಮೊಳಕಾಲ್ಮೂರು ತಾಲ್ಲೂಕಿನ ಪೋಕುರ್ತಿಕೆರೆ
೧೩. ಮೈಸೂರಿನ ಎಣ್ಣೆಹೊಳೆ ಕೆರೆ
೧೪. ಹಾಸನ ತಾಲ್ಲೂಕಿನ ವಡ್ಲಿಗೆ ಅಡ್ಡಲಾಗಿ ಹರಿಗೆ ಕೆರೆ
೧೫. ಕಾನಕಾನಹಳ್ಳಿ (ಕನಕಪುರ) ತಾಲ್ಲೂಕಿನ ಆಲಹಳ್ಳಿ ಕೆರೆ
೧೬. ಕೊರಟಗೆರೆ ತಾಲ್ಲೂಕಿನ ಇರಕಸಂದ್ರ ಕೆರೆ
೧೭. ಗದಿಮಾನಕುಂಟೆ ಕೆರೆ
೧೮. ತುಪ್ಪದ ಹಳ್ಳಿಕೆರೆ
೧೯. ಚೆನ್ನಪಟ್ಟಣ ತಾಲ್ಲೂಕಿನ ಕಣ್ವ ಜಲಾಶಯ
೨೦. ಕುಣಿಗಲ್ಲು ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯ
೨೧. ನಂಜನಗೂಡು ತಾಲ್ಲೂಕಿನ ನುಗು ಜಲಾಶಯ.

೧೯೫೧ಕ್ಕೆ ಮೊದಲು (ಯೋಜನಾ ಕಾಲಕ್ಕೆ ಪೂರ್ವದಲ್ಲಿ) ಮೈಸೂರಿನಲ್ಲಿ ಆರಂಭಿಸಲಾದ ಏಕೈಕ ಭಾರಿ ಜಲಾಶಯ ಕಾರ್ಯವೆಂದರೆ ಲಕ್ಕವಳ್ಳಿ ಬಳಿ ಭದ್ರಾನದಿಗೆ ಅಡ್ಡಲಾಗಿರುವ ಜಲಾಶಯ.

ಮುಂಬೈ ಕರ್ನಾಟಕ:

ನೀರಾವರಿ ಪ್ರದೇಶ

ಈಗ ನಾವು ಬೆಳಗಾಂ, ಬಿಜಾಪುರ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿನ ನೀರಾವರಿ ಪರಿಸ್ಥಿತಿಯನ್ನು ಪರಿಶೀಲಿಸೋಣ. ೧೯೫೬ರಲ್ಲಿ ಮೈಸೂರು ರಾಜ್ಯದಲ್ಲಿ ಈ ಜಿಲ್ಲೆಗಳು ಸೇರ್ಪಡೆ ಆಗುವರೆಗೂ ಇವು ಮುಂಬೈ ಪ್ರಾಂತ್ಯದ ಭಾಗವಾಗಿದ್ದವು.

ಈ ಪ್ರದೇಶದಲ್ಲಿನ ನೀರಾವರಿ ಕುರಿತು ಸಿಗುವಂಥ ಅತ್ಯಂತ ಹಿಂದಿನ ಮಾಹಿತಿಯನ್ನು ಮುಂಬೈ ಪ್ರಾಂತ್ಯದ ಗೆಜೆಟಿಯರುಗಳಿಂದ ಪಡೆಯಲಾಗಿದೆ.[9] ಗೆಜೆಟಿಯರುಗಳ (೧೮೮೪) ಪ್ರಕಾರ ಆಗ ಇದ್ದ ಕೆರೆಗಳ ಸಂಖ್ಯೆ ಹಾಗೂ ಅವುಗಳ ನೀರಾವರಿ ಪ್ರದೇಶ ಹೀಗಿದ್ದವು.

ಬೆಳಗಾಂ ಜಿಲ್ಲೆ – ೧೦೫೫ ಕೆರೆ ಕಾಲುವೆ ಕುಂಟೆಗಳು, ನೀರಾವರಿ ಪ್ರದೇಶ ೧೬,೦೦೦ ಎಕರೆ.

ಧಾರಾವಾಡ ಜಿಲ್ಲೆ – ೨೯೭೯ ಕೆರೆ ಕುಂಟೆಗಳು, ನೀರಾವರಿ ಪ್ರದೇಶ, ೯೩,೭೩೦ ಎಕರೆ.

ಬಿಜಾಪುರ ಜಿಲ್ಲೆ – ೩೨ ಕೆರೆ ಕಾಲುವೆಗಳು, ನೀರಾವರಿ ಪ್ರದೇಶ ೧,೩೭೨ ಎಕರೆ

ಉತ್ತರ ಕನ್ನಡ ಜಿಲ್ಲೆ – ೭,೬೪೭ ಕೊಳಗಳು, ನೀರಾವರಿ ಪ್ರದೇಶದ ಮಾಹಿತಿ ಅಲಭ್ಯ.

ಲಭ್ಯವಿರುವ ಮುಂದಿನ ಮಾಹಿತಿ ನೀರಾವರಿ ಆಯೋಗದ (೧೯೦೧) ವರದಿಯಲ್ಲಿನದು. ಅದರ ಪ್ರಕಾರ ಈ ಪ್ರದೇಶದಲ್ಲಿ ೧೮೯೬ರಲ್ಲಿ ನೀರಾವರಿಯಲ್ಲಿದ್ದ ಪ್ರದೇಶ ೧,೮೪,೮೩೭ ಎಕರೆ, ಆ ಪೈಕಿ ಕೆರೆ ನೀರಾವರಿ ಇದ್ದದ್ದು ೯೪,೫೧೮ ಎಕರೆ, ಅದರಲ್ಲಿನ ಬಹುಭಾಗ (೮೧,೮೪೩ ಎಕರೆ) ಇದ್ದುದು ಧಾರಾವಾಡ ಜಿಲ್ಲೆಯಲ್ಲಿ.[10]

ಈ ನೀರಾವರಿಗೆ ಆಧಾರವಾಗಿದ್ದ ಕೆರೆಗಳ ಸಂಖ್ಯೆ ೭,೯೦೪, ಉತ್ತರ ಕನ್ನಡದಲ್ಲಿ ೪,೬೩೧, ಧಾರಾವಾಡದಲ್ಲಿ ೨,೪೦೪, ಬಿಜಾಪುರದಲ್ಲಿ ೧೦, ಬೆಳಗಾಂನಲ್ಲಿ ೮೫೯ ಕೆರೆಗಳಿದ್ದವು.[11]

ಇದರ ಜೊತೆಗೆ ಜನಕ್ಕೂ ದನಕರುಗಳಿಗೂ ಕುಡಿಯುವ ನೀರನ್ನು ಒದಗಿಸಲು ಮಾತ್ರ ಉಪಯೋಗದಲ್ಲಿದ್ದ ಕೆರೆಗಳು ಇಷ್ಟೇ ಸಂಖ್ಯೆಯಲ್ಲಿದ್ದವು.[12]

ಉತ್ತರ ಕನ್ನಡ ಜಿಲ್ಲೆಯಲ್ಲಿ ನೀರಾವರಿ:

ಉತ್ತರ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯ ಕೆರೆಗಳಿದ್ದರೂ ಪ್ರತಿಯೊಂದು ಕೆರೆಯಿಂದ ನೀರಾವರಿ ಆಗುತ್ತಿದ್ದ ಪ್ರದೇಶ ಸರಾಸರಿ ೧ ಎಕರೆಗೂ ಕಡಿಮೆಯೇ. ಆ ಕೆರೆಗಳು ಬಹುತೇಕ ಸಣ್ಣ ಕೊಳ ಇಲ್ಲವೇ ಕುಂಟೆಗಳ ರೂಪದಲ್ಲಿದ್ದವು. ಬೇಸಿಗೆಯಲ್ಲಿ ಹೊಲಗಳಿಗೆ ಅಡ್ಡಲಾಗಿ ಮಣ್ಣು, ಕಲ್ಲು, ಮರದ ರೆಂಬೆಗಳಿಂದ ಅಡ್ಡಕಟ್ಟೆ ಹಾಕಲಾಗುತ್ತಿತ್ತು. ಅದರಿಂದ ಆಸುಪಾಸಿನ ಭೂಮಿಗೆ ನೀರಾವರಿ ಆಗುತ್ತಿತ್ತು. ಬೇಸಿಗೆಯ ಕೊನೆಯಲ್ಲಿ ಕಟ್ಟೆಗಳನ್ನು ತೆಗೆದು ಹಾಕಲಾಗುತ್ತಿತ್ತು. ಕೆಲವು ಸ್ಥಳಗಳಿಗೆ ದೊಡ್ಡ ಕೊಳ ಅಥವಾ ಕೆರೆಗಳಿಂದಲೂ, ಸಣ್ಣ ಕೊಳ ಅಥವಾ ಕಟ್ಟೆಗಳಿಂದಲೂ ಕಾಲುವೆಗಳ ಮೂಲಕ ನೀರು ಹಾಯಿಸಲಾಗುತ್ತಿತ್ತು.

 

[1]ಮೇಜರ್ ಆರ್ .ಹೆಚ್.ಸ್ಯಾಂಕಿ, ಮುಖ್ಯ ಇಂಜಿನಿಯರ್ ಮೈಸೂರು ಇವರ ಪತ್ರ ದಿನಾಂಕ ೧೯ ನವೆಂಬರ್‌೧೮೬೬, ಪ್ಯಾರಾ ೪. ಮೇಲಿನ ಟಿಪ್ಪಣಿ ೩ ನೋಡಿ.

[2]ಅದೇ ಪ್ಯಾರಾ ೧೨.

[3]ಅದೇ ಪ್ಯಾರಾ ೪೬ ರಿಂದ ೫೩

[4]ಮೈಸೂರಿನ ಮುಖ್ಯ ಕಮಿಷನರ್ ಅವರ ಪತ್ರ ನಂ.೬೭-ಐ ದಿನಾಂಕ ೪-೩-೧೮೭೧ ಪತ್ರಕ್ಕೆ ಲಗತ್ತಿಸಿದ ಟಿಪ್ಪಣೆ ೬ ಪ್ಯಾರಾ ೩ ಮೇಲಿನ ೫ನೇ ಟಿಪ್ಪಣಿ ನೋಡಿ.

[5]ಅದೇ ಪ್ಯಾರಾ ೫

[6]ಅದೇ ಪ್ಯಾರಾ ೮.

[7]೧-೧೦-೧೮೮೪ ರಂದು ಮೈಸೂರು ಪ್ರಜಾಪ್ರತಿನಿಧಿ ಸಭೆಯಲ್ಲಿ ದಿವಾನ್ ಶೇಷಾದ್ರಿ ಅಯ್ಯರ್ ಮಾಡಿದ ಭಾಷಣ

[8]ಮೈಸೂರು ಸರ್ಕಾರದ ರೆವಿನ್ಯೂ ಇಲಾಖೆ ಕಾರ್ಯದರ್ಶಿಗಳ ಸರ್ಕಾರಿ ಆದೇಶ ನಂ.ಆರ್. ೧೨೯೯-೧೩೦೯, ಐ ಆರ್ ೧೫-೫೨-೧, ದಿನಾಂಕ ೮ ಸೆಪ್ಟಂಬರ್ ೧೯೨೨, ಇದರ ಪ್ಯಾರಾ ೧೩.

[9]ಬಾಂಬೆ ಪ್ರಸಿಡೆನ್ಸಿ ಗೆಜಟೆಯರ್ ನಂ ೨೧, ಬೆಳಗಾಂ-೧೮೮೪. ಸಂ. ೨೩, ಬಿಜಾಪುರ ೧೮೮೪. ಸಂ.೨೨, ಧಾರವಾಡ ೧೮೮೪, ಸಂ. ೧೫, ಕೆನರಾ ೧೮೮೩.

[10]ರಿಪೋರ್ಟ್ ಆಫ್ ಇಂಡಿಯನ್ ಇರಿಗೇಷನ್ ಕಮಿಷನ್ ೧೯೦೧-೧೯೦೩, ಭಾಗ ೧, ತಃಖ್ತೆ ನಂ.೧, ಪು. ೩೮೫-೩೮೭.

[11]ಅದೇ ತಃಖ್ತೆ ನಂ ೯, ಪು ೩೮೯

[12]ಅದೇ ತಃಖ್ತೆ ನಂ.೮, ಪು. ೩೯೩