ಧಾರಾವಾಡ ಜಿಲ್ಲೆಯಲ್ಲಿ ನೀರಾವರಿ:

ಉತ್ತರ ಕನ್ನಡದ ಬಹುಮಟ್ಟಿನ ಕೆರೆಗಳು ಸಣ್ಣ ಕೊಳಗಳೇ ಆಗಿದ್ದರಿಂದ ಕೆರೆ ಜಿಲ್ಲೆ ಎಂಬ ಖ್ಯಾತಿಯ ಸ್ಥಾನ ಸಿಗುವುದು ಧಾರವಾಡ ಜಿಲ್ಲೆಗೆ. ಈ ಜಿಲ್ಲೆಯ ಬಹುಪಾಲು ಕೆರೆಗಳು ಇರುವುದು ಹರಿಹರ – ಬೆಳಗಾಂ ರಸ್ತೆಯ ಪಶ್ಚಿಮಕ್ಕೆ. ಈ ಸೀಳು ನಾಡಿಯಲ್ಲಿ ನಿರಂತರ ಮಳೆ ಆಗುತ್ತದೆ. ನೀರಾವರಿ ಕೆರೆ ಕಟ್ಟಲು ಅನುಕೂಲವಾದ ಸ್ಥಳಗಳು ಇಲ್ಲಿವೆ. ಬಹುಪಾಲು ಕೆರೆಗಳು ವಿಜಯನಗರ ಕಾಲದಲ್ಲಿ (೧೩೩೬ – ೧೫೬೫ರಲ್ಲಿ) ಕಟ್ಟಲಾದವು.

೧. ಬಂಕಾಪುರ ತಾಲ್ಲೂಕಿನ ಬುಜ್ಯುಕ ಕೋಣನಕೇರಿಯ ದೊಡ್ಡ ಕೆರೆ ೬೫೪ ಎಕರೆ
೨. ಹಾವೇರಿಯ ಹೆಗ್ಗೆರೆ ೫೧೫ ಎಕರೆ
೩. ಹಿರೇಕೆರೂರಿನ ದೊಡ್ಡ ಕೆರೆ ೭೬೫ ಎಕರೆ
೪. ಕಲಘಟಗಿ ತಾಲ್ಲೂಕಿನ ದೇವಿಕೊಪ್ಪದ ದೊಡ್ಡ ಕೆರೆ ೪೩೩ ಎಕರೆ
೫. ಧಾರಾವಾಡ ತಾಲೂಕಿನ ಮುಗುದದ ಹೊಣವನ ಕೆರೆ ೬೦೩ ಎಕರೆ
೬. ಹಾನಗಲ್ಲು ತಾಲ್ಲೂಕಿನ ಹೊಳೇಕೊಟಿಯ ಆನಿಕೆರೆ ೫೩೭ ಎಕರೆ
೭. ಹಾನಗಲ್ಲು ತಾಲ್ಲೂಕಿನ ನರೇಗಲ್ಲಿನ ಹಿರೇಕೆರೆ ೬೦೨ ಎಕರೆ
೮. ಹಾನಗಲ್ಲು ತಾಲ್ಲೂಕಿನ ತಿಳವಳ್ಳಿಯ ಹಿರೇಕೆರೆ ೮೬೨ ಎಕರೆ

ಈ ಎಂಟು ಕೆರೆಗಳಲ್ಲದೆ ಗದಗು ತಾಲ್ಲೂಕಿನ ಡಂಬಳ ಹಾಗೂ ಹಿರೆಕೇರೂರು ತಾಲ್ಲೂಕಿನ ಮಾಸೂರಿನ ಹಳೆಯ ಕೆರೆಗಳು ತಲಾ ೫೦೦ ಎಕರೆಗೂ ಕಡಿಮೆ ಭೂಮಿಗೆ ನೀರು ಒದಗಿಸುತ್ತಿದ್ದರೂ ಭಾರಿ ಕೆರೆಗಳೇ ಆಗಿದ್ದವು. ೪೦೦೦ ಅಡಿ ಉದ್ದ ೨೫ ಅಡಿ ಎತ್ತರ ಇದ್ದ ಡಂಬಳ ಕೆರೆ ಹೂಳು ತುಂಬಿಹೋಗಿತ್ತು. ೧೮೦೪ – ೮೦ ರ ಅವಧಿಯಲ್ಲಿ ಹಲವು ಬಾರಿ ಅದರ ದುರಸ್ತಿಯಾಗಿತ್ತು. ಶಾಸನಗಳಲ್ಲಿ ಕಂಡು ಬರುವಂತೆ ಈ ಕೆರೆಯನ್ನು ಗೋಣ ಸಮುದ್ರ ಎಂದು ಕರೆಯಲಾಗಿದ್ದು, ೧೧೮೪ರಲ್ಲಿಯೆ ಅಸ್ತಿತ್ವದಲ್ಲಿತ್ತು.

[1]

೧೬ನೆಯ ಶತಮಾನದಲ್ಲಿ ಕಟ್ಟಲಾದುದೆಂದು ನಂಬಲಾದ ಮಗದ ಮಾಸೂರು ಕೆರೆ ಏರಿ ಬಿರುಕು ಬಿಟ್ಟು ನಿರುಪಯುಕ್ತವಾಗಿತ್ತು. ೧೮೬೫ರಲ್ಲಿ ಅದನ್ನು ಸರಿಪಡಿಸಿ ನೀರಾವರಿಯನ್ನು ಆರಂಭಿಸಲಾಯಿತು. ಈ ಕೆರೆಯ ವಿವರವಾದ ವರ್ಣನೆಯನ್ನು ಅನುಬಂಧ – ೪ರಲ್ಲಿ ನೋಡಬಹುದು.

ಇನ್ನು ಒಂದು ಮುಖ್ಯ ಹಳೆಯ ರಚನೆ ಎಂದು ಧರ್ಮ ಕಾಲುವೆಯ ವ್ಯೂಹ. ವರದಾ ನದಿಯ ಉಪನದಿಯಾದ ಧರ್ಮಾ ಹೊಳೆಗೆ ಅಡ್ಡಲಾಗಿ ಕಲ್ಲು ಕಟ್ಟಡದ ಅಣೆಕಟ್ಟನ್ನು ಪ್ರಾಯಶಃ ವಿಜಯನಗರದ ಕಾಲದಲ್ಲಿ ಕಟ್ಟಲಾಗಿದೆ. ಕಟ್ಟೆಯ ಎರಡೂ ದಂಡೆಗಳಿಂದಲೂ ಕಾಲುವೆಗಳು ಹೊರಡುತ್ತವೆ.

ಧಾರಾವಾಡ ಜಿಲ್ಲೆಯಲ್ಲಿ ೧೯೫೬ಕ್ಕೆ ಮೊದಲು ೧೯ನೆಯ ಹಾಗೂ ೨೦ನೆಯ ಶತಮಾನಗಳಲ್ಲಿ ಬರಪರಿಹಾರ ಕಾರ್ಯಗಳಾಗಿ ನಿರ್ಮಿಸಲಾದ ಮಡ್ಲೇರಿ ಹಾಗೂ ಅಸುಂಡಿ ಕೆರೆ ಮುಂದಾತ ಸಣ್ಣ ಕೆರೆಗಳನ್ನು ಬಿಟ್ಟರೆ ಬೇರೆ ಯಾವ ಹೊಸ ಕೆರೆಗಳನ್ನು ಕಟ್ಟಿಲ್ಲ.

ಬಿಜಾಪುರ ಜಿಲ್ಲೆಯಲ್ಲಿ ನೀರಾವರಿ:

೧೯೦೦ – ೦೧ ವರದಿಯಂತೆ ಬಿಜಾಪುರ ಜಿಲ್ಲೆಯಲ್ಲಿ ಕೆಳಗೆ ಹೆಸರಿಸಿರುವ ಕೆರೆಗಳು ಇದ್ದವು.[2]

೧. ಮಮದಾಪುರ ದೊಡ್ಡ ಕೆರೆ ೬೪೫ ಎಕರೆ
೨. ಮಮದಾಪುರ ಸಣ್ಣ ಕೆರೆ ೫೫ ಎಕರೆ
೩. ಕುಮಟಗಿ ಕೆರೆ ೫೫ ಎಕರೆ
೪. ಸಿರೂರು ಕೆರೆ ೧೬ ಎಕರೆ
೫. ಬನಶಂಕರಿ ಕೆರೆ ೪೦ ಎಕರೆ
೬. ನೀಲಗುಂದ ಅರಕೆರೆ ೩ ಎಕರೆ
೭. ತಿಮ್ಮಸಾಗರ ದೊಡ್ಡ ಕೆರೆ ೭೨ ಎಕರೆ
೮. ತಿಮ್ಮಸಾಗರ ಸಣ್ಣ ಕೆರೆ ೩೫ ಎಕರೆ
೯. ಪಾರ್ವತಿ ಕೆರೆ ೩೨ ಎಕರೆ
೧೦. ಪಾರ್ವತಿ ಕೆರೆ ಗಂಜಿಕೆರೆ ೪೪ ಎಕರೆ
೧೧. ಕೆಂದೂರು ಕೆರೆ ೨೫೬ ಎಕರೆ
೧೨. ಗೌಡಂಕಿ ಹೊಂಡ ೧೪ ಎಕರೆ

ಕೆಂದೂರು ಕೆರೆಯನ್ನು ಬಹಮನಿ ದೊರೆಗಳು ಈ ಪ್ರದೇಶವನ್ನು ವಶಪಡಿಸಿಕೊಳ್ಳುವುದಕ್ಕೆ (೧೩೪೭) ಮುನ್ನ ಕಟ್ಟಲಾಯಿತು ಎನ್ನಲಾಗಿದೆ. ಮಮದಾಪುರ ಕೆರೆ ಮುಸ್ಲಿಮ್ ಆಡಳಿತದಲ್ಲಿ ನಿರ್ಮಿತವಾಯಿತು ಎಂದು ತಿಳಿದು ಬಂದಿದೆ.

೧೯ನೆಯ ಶತಮಾನದಲ್ಲಿ ಕಟ್ಟಲಾದ ಒಂದೇ ಒಂದು ಕೆರೆ ಬಾಗಲಕೋಟೆಯ ಬಳಿಯ ಮುಚಕಂಡಿಕೆರೆ (೧೮೮೨). ಅದು ೬೦ ಅಡಿ ಎತ್ತರದ ಕಲ್ಲು ಕಟ್ಟಡದ ಏರಿ. ಅದರ ನೀರಾವರಿ ಪ್ರದೇಶ ೫೪೧೭ ಎಕರೆ. ಇಂಡಿ ತಾಲ್ಲೂಕಿನಲ್ಲಿ ಸಂಗೋಜಿಕೆರೆ ಹಾಗೂ ಮುದ್ದೇಬಿಹಾಳದಲ್ಲಿ ಹುಲ್ಲೂರು ಕೆರೆಗಳ ನಿರ್ಮಾಣವನ್ನು ಬರ ಪರಿಹಾರ ಕ್ರಮವಾಗಿ ನಡೆಸಲಾಯಿತು. ೧೯೫೬ಕ್ಕೆ ಮೊದಲು ಕಟ್ಟಲಾದ ಇನ್ನೊಂದು ಕೆರೆ ನಂದರಗಿ ಕೆರೆ. ಆ ಕೆಲಸವನ್ನು ೧೯೩೪ರಲ್ಲಿ ಬರಪರಿಹಾರ ಕಾರ್ಯವಾಗಿ ನಡೆಸಲಾಯಿತು. ಅದು ೪೨ ಅಡಿ ಎತ್ತರದ ಮಣ್ಣು ಕಟ್ಟೆ.

ಮುಂಬೈ ಕರ್ನಾಟಕದಲ್ಲಿ ನೀರಾವರಿ ಅಭಿವೃದ್ಧಿ (೧೯೦೧೧೯೫೬):

ಬೆಳಗಾಂ, ಧಾರವಾಡ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಹರಿಯುವ ಘಟಪ್ರಭಾ ಮಲಪ್ರಭಾ ಹಾಗೂ ಕೃಷ್ಣಾ ನದಿಗಳ ನೀರನ್ನು ನೀರಾವರಿ ಪ್ರದೇಶವನ್ನು ಹೆಚ್ಚಿಸಲು ಉಪಯೋಗಿಸಿಕೊಳ್ಳಬೇಕೆಂಬ ವಿಚಾರ ಯಾವಾಗಲೂ ತೀವ್ರ ಪರಿಶೀಲನೆಯಲ್ಲಿತ್ತು. ಕಾರ್ಯರೂಪಕ್ಕೆ ಬಂದ ಒಂದೇ ಒಂದು ಯೋಜನೆ ಎಂದರೆ ಗೋಕಾಕದ ಬಳಿ ಘಟಪ್ರಭಾ ನದಿಗೆ ಅಡ್ಡಲಾಗಿ ಧೂಪದಾಳ ಒಡ್ಡು ನಿರ್ಮಿಸಿದ್ದು ಹಾಗೂ ಅಲ್ಲಿಂದ ಸುಮಾರು ೧೭೦೦ ಎಕರೆಗೆ ನೀರು ಒದಗಿಸಲು ಮತ್ತು ಗೋಕಾಕ ಜಲಪಾತದಲ್ಲಿ ವಿದ್ಯುತ್ತನ್ನು ಉತ್ಪಾದಿಸಲು ಅನುಕೂಲವಾಗುವಂತೆ ಗೋಕಾಕ ಗಿರಣಿಗೆ ೬೮ ಕ್ಯೂಸೆಕ್ಸ್ ನೀರು ಒದಗಿಸಲು ಎಡದಂಡೆ ನಾಲೆಯನ್ನು ತಂದುದು.

೧೯೩೬ರ ವೇಳೆಗೆ ಮುಂಬೈ ಕರ್ನಾಟಕದಲ್ಲಿ ಕೆರೆ ಕಾಲುವೆ ಎಲ್ಲದರಿಂದಲೂ ನೀರಾವರಿಗೆ ಒಳಗಾದ ಪ್ರದೇಶ ೧,೬೫,೬೧೭ ಎಕರೆ.[3]

ಗೋಕಾಕ್‌ನಾಲೆ   ೮,೨೯೩ ಎಕರೆ
ಧರ್ಮಾ ನಾಲೆ      ೫,೭೦೩ ಎಕರೆ

೧. ಬೆಳಗಾಂ – ಬಿಜಾಪುರ ಜಿಲ್ಲೆಗಳು ೭೫೦ ಕೆರೆಗಳು ೨೬,೭೯೭ ಎಕರೆ
೨. ಧಾರವಾಡ ಜಿಲ್ಲೆ ೨,೩೪೮ ಕೆರೆಗಳು ೯೦,೩೯೩ ಎಕರೆ
೩. ಉತ್ತರ ಕನ್ನಡ ಜಿಲ್ಲೆ ೩,೬೬೪ ಕೆರೆಗಳು ೪೯,೩೩೨ ಎಕರೆ

 

ಜಿಲ್ಲೆಗಳು ನೀರಾವರಿ ಪ್ರದೇಶ (ಎಕರೆಗಳು)
ಕಾಲುವೆಗಳು
ಕೆರೆಗಳು
ಬೆಳಗಾಂ ೩೩,೨೨೯ ೧೬,೭೬೩
ಬಿಜಾಪುರ ೨,೧೭೮ ೧,೨೬೨
ಧಾರವಾಡ ೭,೯೩೫ ೧,೦೮,೨೦೪
ಉತ್ತರ ಕನ್ನಡ ೧,೨೧೫ ೩೩,೩೮೪

ಹಾಲಿ ಇದ್ದ ಕೆರೆಗಳ ಸಂಖ್ಯೆ ಹಾಗೂ ಅವುಗಳಿಂದ ನೀರಾವರಿ ಪಡೆಯುತ್ತಿದ್ದ ಪ್ರದೇಶಗಳ ಅಂಕಿ ಅಂಶಗಳನ್ನು ನೋಡಿದಲ್ಲಿ ತೀವ್ರ ಇಳಿಮುಖತೆ ಕಂಡು ಬರುತ್ತದೆ. ಇದಕ್ಕೆ ಕಾರಣ ೨೦ನೆಯ ಶತಮಾನದ ಮೊದಲ ವರೆಗೂ ಹಳೆಯ ಕೆರೆಗಳನ್ನು ನಿರ್ಲಕ್ಷಿಸಿದ್ದು ಹಾಗೂ ಯಾವುದೇ ಹೊಸ ನೀರಾವರಿ ಕಾಮಗಾರಿಯನ್ನು ಕೈಗೊಳ್ಳದೆ ಇದ್ದುದು. ಪದೇ ಪದೇ ಬರುತ್ತಿದ್ದ ಬರಗಳಿಗೆ ಪ್ರತಿಯಾಗಿ ರಕ್ಷಣಾ ಕ್ರಮದ ನೀರಾವರಿ ಕೆಲಸಗಳನ್ನು ಕೈಗೊಳ್ಳುವುದರ ಅಗತ್ಯವನ್ನು ನೀರಾವರಿ ಆಯೋಗ(೧೯೦೧) ತನ್ನ ವರದಿಯಲ್ಲಿ ಒತ್ತಿ ಹೇಳಿತ್ತು. ಆನಂತರವೇ ಹೊಸ ಕಾರ್ಯಗಳ ಆರಂಭ ಇಲ್ಲವೆ ಹಾಲಿ ಇದ್ದವುಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಯಿತು. ಲಾಭದಾಯಕವಾಗುವ ನೀರಾವರಿ ಕೆಲಸಗಳನ್ನು ಮಾತ್ರವೇ ಕೈಗೊಳ್ಳುತ್ತಿದ್ದರು, ಬ್ರಿಟಿಷರು ಬರಗಳು ಸಂಭವಿಸಿ ಪರಿಹಾರ ಕಾಮಗಾರಿಗಳ ಅಗತ್ಯ ಬಾರದೆ ಇದ್ದ ಪಕ್ಷದಲ್ಲಿ ಅವರು ಹಳೆಯ ಕೆರೆಗಳ ದುರಸ್ತಿ ಅಥವಾ ಜೀರ್ಣೋದ್ಧಾರವನ್ನು ಗಮನಾರ್ಹ ಮಟ್ಟದಲ್ಲಿ ಕೈಗೊಳ್ಳುತ್ತಿರಲಿಲ್ಲ.

ಕೆರೆಗಳ ಸಂರಕ್ಷಣೆ ಅಥವಾ ದುರಸ್ತಿಗಾಗಿ ವೆಚ್ಚ ಮಾಡಿದ ಹಣ, ವಸೂಲಾದ ಕಂದಾಯಕ್ಕೆ ಹೋಲಿಸಿದರೆ ಅತ್ಯಲ್ಪವಾದುದಾಗಿತ್ತು. ಧಾರವಾಡ ಜಿಲ್ಲೆಯಲ್ಲಿ ೧೮೫೧ಕ್ಕೆ ಕೊನೆಗೊಂಡ ಹನ್ನೊಂದು ವರ್ಷಗಳ ಅವಧಿಯಲ್ಲಿ ವಸೂಲಾದ ಕಂದಾಯ ವಸೂಲಾದ ಮೊತ್ತ ಹತ್ತೂವರೆ ಲಕ್ಷ. ಕೆರೆ ಭಾವಿಗಳ ಮೇಲೆ ಮಾಡಿದ್ದ ವೆಚ್ಚವಾದರೂ ಈ ಕಂದಾಯ ಹಣದ ಕೇವಲ ಶೇ.೦.೨೦ ಮಾತ್ರ. ಬೆಳಗಾಂನಲ್ಲಿ ೧೮೫೦ – ೫೧ಕ್ಕೆ ಕೊನೆಗೊಂಡ ೫ ವರ್ಷಗಳಲ್ಲಿ ಕೆರೆ ಭಾವಿಗಳ ಮೇಲೆ ೩೮೧೧ ರೂ. ವೆಚ್ಚ ಮಾಡಲಾಯಿತು. ಅದೇ ಅವಧಿಯಲ್ಲಿ ವಸೂಲಿ ಆದ ಕಂದಾಯವಾದರೂ ಹನ್ನೆರಡೂವರೆ ಲಕ್ಷ. ಅದೊಂದು “ಏಕಪ್ರಕಾರದ ಉದಾಸೀನತೆ ಹಾಗೂ ಆಶ್ಚರ್ಯಕರ ನಿರ್ಲಕ್ಷ್ಯದ ಕತೆ”. [4]

ಮುಂಬೈ ಪ್ರಾಂತ್ಯದಲ್ಲಿ ಎಲ್ಲ ನೀರಾವರಿ ಕಾಮಗಾರಿಗಳನ್ನು ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಕಾಮಗಾರಿಗಳು ಎಂದು ವಿಂಗಡಿಸಲಾಗಿತ್ತು. ಯಾವ ಕೆಲಸಗಳಿಗೆ ಬಂಡವಾಳ ಮತ್ತು ಕಂದಾಯ ಲೆಕ್ಕಗಳನ್ನು ಇಡಿಸಲಾಗಿತ್ತೋ ಅವು ಮೊದನೆಯ ವರ್ಗಕ್ಕೆ ಸೇರಿದ್ದವು. ಅವು ಬಂಡವಾಳ ಹೂಡಲಾಗಿದ್ದ ಹಾಗೂ ಸರ್ಕಾರಕ್ಕೆ ನಿಯತವಾಗಿ ಕಂದಾಯ ಶೇಖರವಾಗುತ್ತಿದ್ದ ಕೆಲಸಗಳು. ಎರಡನೆಯ ವರ್ಗದವು ಸಣ್ಣವು ಲಾಭದಾಯಕವಲ್ಲದವು. ಅವಕ್ಕೆ ಬಂಡವಾಳ ಹೂಡಿಕೆಯೂ ಇರಲಿಲ್ಲ. ಕಂದಾಯ ಲೆಕ್ಕವೂ ಇರಲಿಲ್ಲ. ಏಕೆಂದರೆ ಬರತಕ್ಕೆ ಕಂದಾಯ ಅನಿಶ್ಚಿತ ಹಾಗೂ ಅಲ್ಪವಾದುದಾಗಿತ್ತು. ದ್ವಿತೀಯ ವರ್ಗದ ನೀರಾವರಿ ಕೆಲಸಗಳನ್ನು ಮುಂಬೈ ನೀರಾವರಿ ಶಾಸನಕ್ಕೆ (೧೮೭೯) ಒಳಪಡಿಸಿದ್ದು ೧೯೧೪ ರಲ್ಲಷ್ಟೆ. ಬಂಡಿ ಜಾಡಿಗಳನ್ನು ತುಂಬುವುದು ಗಿಡ ಬೆಳೆಯುವುದನ್ನು ತಡೆಯುವುದು, ಹೂಳು ಎತ್ತುವುದು ಇತ್ಯಾದಿ ಸಣ್ಣ ಪುಟ್ಟ ದುರಸ್ತು ಕೆಲಸಗಳು ನೀರಾವರಿ ಕೆಲಸಗಳ ಕೆಳಗೆ ಭೂಮಿ ಹೊಂದಿದ್ದ ಹಿಡುವಳಿದಾರರು ಮಾಡಬೇಕಾದ ಅವಶ್ಯಕರ್ತವ್ಯ ಎಂದು ಗೊತ್ತುಪಡಿಸಲಾಯಿತು. ಒಂದು ಕೆಲಸದ ಫಲಾನುಭವಿಗಳು ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ದುರಸ್ತಿ ಕಾರ್ಯದ ಅಂದಾಜಿನ ವೆಚ್ಚದ ಶೇಕಡಾ ೧೦ರಷ್ಟನ್ನು ಕೊಡಲು ಒಪ್ಪಿದಾಗ ಮಾತ್ರ ಸರ್ಕಾರ ಅಂಥ ಎಲ್ಲ ಕೆರೆಗಳ ಸಂರಕ್ಷಣೆ ಹಾಗೂ ದುರಸ್ತಿಯನ್ನು ಮಾಡಿಸುತ್ತಿತ್ತು.

೧೯೩೪ರಲ್ಲಿ ಕೆಳಕಾಣಿಸಿರುವ ಒಂಬತ್ತು ಕಾಮಗಾರಿಗಳನ್ನು ಮಾತ್ರ ಪ್ರಥಮ ದರ್ಜೆಯವು ಎಂದು ಪರಿಗಣಿಸಲಾಗಿತ್ತು. ಉಳಿದ ಕೆರೆಗಳೆಲ್ಲವನ್ನು (೬೭೫೫ ಕೆರೆಗಳು) ಎರಡನೆಯ ದರ್ಜೆಗೆ ಸೇರಿಸಲಾಗಿತ್ತು.[5]

೧. ಮುಚುಕಂದೀ ಕೆರೆ ಬಿಜಾಪುರ ಜಿಲ್ಲೆ
೨. ಗೋಕಾಕ್ ನಾಲೆ ೧ ಘಟ್ಟ ಬೆಳಗಾಂ ಜಿಲ್ಲೆ
೩. ಗಾಡಿಕೆರೆ ಬೆಳಗಾಂ ಜಿಲ್ಲೆ
೪. ಮೆಡ್ಲೇರಿ ಕೆರೆ ಧಾರವಾಡ ಜಿಲ್ಲೆ
೫. ಮದಗ ಕೆರೆ ಧಾರವಾಡ ಜಿಲ್ಲೆ
೬. ಆಸುಂಡಿ ಕೆರೆ ಧಾರವಾಡ ಜಿಲ್ಲೆ
೭. ಡಂಬಳ ಕೆರೆ ಧಾರವಾಡ ಜಿಲ್ಲೆ
೮. ಮಾವಿನಕೊಪ್ಪ ಕೆರೆ ಉತ್ತರ ಕನ್ನಡ ಜಿಲ್ಲೆ

ಬಳ್ಳಾರಿ:

೧೮೦೭ರಲ್ಲಿ ಇದ್ದ ನೀರಾವರಿ:

ಬಳ್ಳಾರಿ ೧೮೦೦ರಲ್ಲಿ ಹೈದರಾಬಾದ್ ನಿಜಾಮ ಈಸ್ಟ್ ಇಂಡಿಯಾ ಕಂಪನಿಗೆ ಒಪ್ಪಿಸಿಕೊಟ್ಟ ಜಿಲ್ಲೆಗಳಲ್ಲಿ ಒಂದು. ೧೯೫೩ರಲ್ಲಿ ಆಂಧ್ರ ರಾಜ್ಯ ನಿರ್ಮಾಣವಾಗಿ ಬಳ್ಳಾರಿ ಮೈಸೂರಿಗೆ ಸೇರ್ಪಡೆ ಆಗುವ ವರೆಗೂ ಅದು ಮದರಾಸು ಪ್ರಾಂತ್ಯದ ಭಾಗವಾಗಿತ್ತು.

೧೮೦೭ರಲ್ಲಿ ಥಾಮಸ್ ಮನ್ರೋ, ನಡೆಸಿದ ಸಮೀಕ್ಷೆಯ ಪ್ರಕಾರ ಬಳ್ಳಾರಿ, ಕಂಪ್ಲಿ, ಹರಪನಹಳ್ಳಿ, ಕೂಡಿಗೆರೆ ಹಾಗೂ ಹೂವಿನ ಹೂಗಳಿ ತಾಲ್ಲೂಕುಗಳಲ್ಲಿ ಬೇಸಾಯದಲ್ಲಿದ್ದ ಭೂಮಿ ೯೩೧,೦೬೭ ಎಕರೆಗಳು, ನೀರಾವರಿಯಲ್ಲಿದ್ದ ಪ್ರದೇಶ ೪೧,೪೧೫ ಎಕರೆ ಮಾತ್ರ.[6]

ಈ ಪ್ರದೇಶಕ್ಕೆ ಬೆಂಬಲವಾಗಿದ್ದ ನೀರಾವರಿ ಕಾಮಗಾರಿಗಳು ಇವು:

  ದುರಸ್ತಿಯಾದವು ನಾದುರಸ್ತಿಯಾದವು ಒಟ್ಟು
ಕೆರೆಗಳು ೨೨೨ ೨೫೫ ೪೭೭
ಭಾವಿಗಳು ೧,೬೩೩ ೧,೦೯೮ ೨,೭೩೧
ನದಿ ನಾಲೆ ಆಣೆ – ಏರಿಗಳು ೧೭೦ ೩೭ ೨೦೭

೧೮೭೦ರಲ್ಲಿನ ಸ್ಥಿತಿ:

೧೮೭೦ರಲ್ಲಿ ಇದ್ದ ಬೇಸಾಯದ ಪ್ರದೇಶ ೧೦,೬೪,೯೨೯ ಎಕರೆ, ಹಾಗೂ ನೀರಾವರಿ ಪ್ರದೇಶ ೪೬,೫೫೪ ಎಕರೆ ನೀರಾವರಿ ಪ್ರದೇಶ ಹೆಚ್ಚಾಗಿದ್ದರೂ ಸಹ ನೀರಾವರಿ ಪ್ರದೇಶದ ಹಾಗೂ ಒಟ್ಟು ಬೇಸಾಯದ ಪ್ರದೇಶದ ಪ್ರಮಾಣ ಪತ್ರ ೧೮೦೭ರಲ್ಲಿ ಇದ್ದ ಮಟ್ಟದಲ್ಲೆ ಇತ್ತು.

೧೮೭೦ ರಲ್ಲಿ ಇದ್ದ ಸಂವಾದಿ ನೀರಾವರಿ ಕೆಲಸಗಳೆಂದರೆ:

ಕೆರೆಗಳು ೨೩೩
ಭಾವಿಗಳು ೪,೭೫೩
ನದಿ ನಾಲೆಗಳು ೩೯
ಚಿಲುಮೆನಾಲೆಗಳು ೧೩೭
ಅಣೆಕಟ್ಟುಗಳು ೧೦೫

೧೮೭೦ರಲ್ಲಿ ೨೦೦ ಕ್ಕೂ ಹೆಚ್ಚು ಎಕರೆ ನೀರಾವರಿ ಇದ್ದ ಕೆರೆಗಳು ಕೇವಲ ೧೫ ಮಾತ್ರ. ಅವುಗಳ ಪಟ್ಟಿ ಹೀಗಿದೆ :

ದರೋಜಿ ಕೆರೆ ೧,೬೩೯ ಎಕರೆ ಹೊಸಪೇಟೆ ತಾಲ್ಲೂಕು
ಕಾಮಲಾಪುರಂ ಕೆರೆ ೪೧೫ ಎಕರೆ
ದಣ್ಣಾಯಕನ ಕೆರೆ ೩೬೧ ಎಕರೆ
ಆವಿನ ಮಡಗು ೨೨೮ ಎಕರೆ
ಕೂಡ್ಲಿಗಿ ಕೆರೆ ೨೮೪ ಎಕರೆ ಕೂಡ್ಲಿಗಿ ತಾಲ್ಲೂಕು
ಕೊಟ್ಟೂರು ಕೆರೆ ೬೧೦ ಎಕರೆ
ಹನ್‌ಸಿ ಕೆರೆ ೪೬೩ ಎಕರೆ
ಉಜ್ಜನಿ ಕೆರೆ ೪೨೬ ಎಕರೆ
ನೀಲಗುಂದ ಕೆರೆ ೩೦೭ ಎಕರೆ ಹರಪನಹಳ್ಳಿ ತಾಲೂಕು
ಹಗ್ರನೂರು ಕೆರೆ ೨೮೯ ಎಕರೆ
ಅರಸ ಕೆರೆ ೨೬೩ ಎಕರೆ
ಬಾಗಳಿ ಕೆರೆ ೨೧೮ ಎಕರೆ
ಮಾರಮ್ಮನ ಹೊಳೆ ಕೆರೆ ೩೩೫ ಎಕರೆ ಹಡಗಲಿ ತಾಲ್ಲೂಕು
ಚಿಂತಲಪುರ ಕೆರೆ ೩೦೬ ಎಕರೆ
ತಿಂಬರಹಳ್ಳಿ ಕೆರೆ ೨೮೨ ಎಕರೆ

ದರೋಜಿ ಕೆರೆಯನ್ನು ಟಿಪ್ಪುವಿನ ಆಳ್ವಿಕೆಯಲ್ಲಿ ಜೀರ್ಣೋದ್ಧಾರ ಮಾಡಲಾಯಿತು ಎನ್ನಲಾಗಿದೆ, ಅದು ವಿನಾ ಉಳಿದ ಎಲ್ಲ ಕೆರೆಗಳೂ ಸಣ್ಣವು. ದರೋಜಿ ಕೆರೆಯ ವಿವರವಾದ ವರ್ಣನೆಯನ್ನು ಅನುಬಂಧ ೫ರಲ್ಲಿ ನೋಡಬಹುದು. ಈಗ ದರೋಜಿ ಕೆರೆಗೆ ನೀರು ಬರುವುದು ತುಂಗಭದ್ರಾ ಎಡದಂಡೆ ಮೇಲುಕಾಲುವೆಯಿಂದ. ನದಿ ಕಾಲುವೆಯಿಂದ ನೀರು ಪಡೆಯುವ ಇನ್ನೊಂದು ಕೆರೆ ಕಾಮಲಾಪುರದ ಕೆರೆ. ಅದಕ್ಕೆ ತುಂಗಭದ್ರಾ ಜಲಾಶಯದಿಂದ ಹೊರಡುವ ರಾಯಕಾಲುವೆಯಿಂದ ನೀರು ಒದಗುತ್ತದೆ.

ಬಹುಪಾಲು ಈ ಕೆರೆಗಳೆಲ್ಲ ಶತಮಾನಗಳ ಹಿಂದಿನವು, ಬಾಗಳಿ ಕೆರೆ ಕಟ್ಟಿಸಿದ್ದು ಕ್ರಿ.ಶ. ೯೩೨ರಲ್ಲಿ. ರಾಷ್ಟ್ರಕೂಟ ದೊರೆ ಇಂದ್ರವಲ್ಲಭನ ಆಳ್ವಿಕೆಯಲ್ಲಿ.[7] ಕೊಟ್ಟೂರು ಕೆರೆ ಕ್ರಿ.ಶ. ೧೧೧೨ರಲ್ಲಿ ಚಾಲುಕ್ಯ ರಾಜ ತ್ರಿಭುವನಮಲ್ಲನ ಆಳ್ವಿಕೆಯಲ್ಲಿ ಇತ್ತೆಂದು ತೋರುತ್ತದೆ.[8]

ಮುಂದಿನ ಅಭಿವೃದ್ಧಿ:

೧೯೫೩ – ೫೪ರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ನೀರಾವರಿ ಪಡೆದಿದ್ದ ಪ್ರದೇಶ ೩೪,೨೫೧ ಎಕರೆ ಮಾತ್ರ.[9]

    ನೀರಾವರಿ ಪ್ರದೇಶ (ಎಕರೆಗಳಲ್ಲಿ)
ಅ) ಕಾಲುವೆಗಳಿಂದ ೧೭,೨೩೪
ಆ) ಕೆರೆಗಳಿಂದ ೧೨,೭೮೮
ಇ) ಭಾವಿಗಳಿಂದ ೭,೮೨೮
೪) ಇತರ ಮೂಲಗಳಿಂದ ೪೦೧
  ಒಟ್ಟು ೩೮,೨೫೧

೧೮೭೦ರಲ್ಲಿ ಕೆರೆ ನೀರಾವರಿ ಪ್ರದೇಶ ೧೮,೮೦೩ ಎಕರೆ ಇದ್ದುದು ೧೯೫೩ರಲ್ಲಿ ೧೨,೭೪೪ ಎಕರೆಗೆ ಇಳಿದಿತ್ತು. ಇದಕ್ಕೆ ಬಹುಮಟ್ಟಿಗೆ ಕಾರಣ ಕೆರೆಗಳ ದುರಸ್ತಿ ಬಗ್ಗೆ ನಿರ್ಲಕ್ಷ, ಹೂಳು ತುಂಬುವುದು, ಕೆರೆ ಅಂಗಳದಲ್ಲಿ ಒತ್ತುವರಿ ಮಾಡಲಾದುದು ಇತ್ಯಾದಿಗಳಿಂದ ಕೆರೆಗಳು ಕೆಲಸಕ್ಕೆ ಬಾರದೆ ಹೋಗುವಂತೆ ಆದುದು. ತುಂಗಭದ್ರಾ ಜಲಾಶಯ ಹಾಗೂ ಅದರ ಕೆಳಗಿನ ನಾಲಾವ್ಯವಸ್ಥೆಗಳ ನಿರ್ಮಾಣದಿಂದ ನೀರಾವರಿ ಪ್ರದೇಶ ವಿಸ್ತಾರಗೊಂಡಿದೆ. ಆದರೆ ಕೆರೆ ನೀರಾವರಿ ಪ್ರದೇಶದಲ್ಲಿ ಮಾತ್ರ ಗಮನಾರ್ಹ ಹೆಚ್ಚಳ ಕಾಣಬಂದಿಲ್ಲ.

 

[1]ಎಸ್‌.ಐ.ಐ. ೧೫, ಭಾಗ ೨ ನಂ. ೫೭

[2]ಇಂಡಿಯರ್ ಇರಿಗೇಷನ್ ಕಮಿಷನ್‌೧೯೦೧-೦೩ ಮಿನಟ್ಸ್ ಆಫ್ ಎವಿಡ್‌ನ್ಸ್‌ಬಾಂಬೆ ಪ್ರಸಿಡೆನ್ಸಿ ಪು. ೩೦೨.

[3]ರಿಪೋರ್ಟ್ ಆಫ್ ದಿ ಇರಿಗೇಷನ್ ಇನ್‌ಕ್ವೈರಿ ಕಮೀಟಿ, ಬೊಂಬಾಯಿ ಸರ್ಕಾರ ೧೯೩೮ ಪು.೮೭.

[4]ಆರ್.ಡಿ.ಜೋಕ್ಸಿ-ಎಕನಾಮಿಕ್ ಲೈಫ್ ಇನ್‌ಬಾಂಬೆ ಕರ್ನಾಟಕ (೧೮೧೩-೧೯೩೪) ಪು. ೭೮ ಎಷ್ಯಾ ಪಬ್ಲಿಷಿಂಗ್ ಹೌಸ್, ಮುಂಬಯಿ ೧೯೬೩.

[5]ರಿಪೋರ್ಟ್ ಆಫ್ ದಿ ಇರಿಗೇಷನ್‌ಇನ್‌ಕ್ವೈರಿ ಕಮಿಟಿ, ಬೊಂಬಾಯಿ, ಸರ್ಕಾರ ೧೯೩೮ ಪು. ೮೭.

[6]ರಿಪೋರ್ಟ್ ಆನ್ ದಿ ಪಾಪ್ಯುಲೇಷನ್ ಎಸ್ಟಿಮೇಟ್ಸ್ ಆಫ್ ಇಂಡಿಯ, ಸೆನ್ಸಸ್ ಆಫ್ ಇಂಡಿಯ ನಂ. ೨-೧೮೦೧-೧೮೧೦ ಪು. ೨೮೫-೯೩.

[7]ಎಸ್.ಇ.ಇ. ೯ (i) ನಂ. ೫೯.

[8]ಎಸ್.ಇ.ಇ.೯ (i) ನಂ. ೧೮೭

[9]ರಿಪೋರ್ಟ್‌ಆನ್ ದಿ ಮೈನರ ಇರಿಗೆಷನ್ ಇನ್ ಮೈಸೂರು ಸ್ಟೇಟ್ – ಕಮಿಟಿ ಆನ್ ಪ್ಲಾನ್ ಪ್ರಾಜಕ್ಟ್ಸ್‌, ಭಾರತ ಸರ್ಕಾರ, ನವದೆಹಲಿ, ಸೆಪ್ಟೆಂಬರ್ ೧೯೫೯ ಅನುಬಂಧ ೧ ಪು. ೨೮.