ಹೈದರಾಬಾದು ಕರ್ನಾಟಕ:

ಹಳೆಯ ಹೈದರಾಬಾದ್ ಸಂಸ್ಥಾನದಲ್ಲಿ ಕೃಷಿಯೋಗ್ಯ ಅಥವಾ ನೀರಾವರಿ ಪ್ರದೇಶದ ಬಗ್ಗೆ ವಿಶ್ವಾಸಾರ್ಹ ಅಂಕಿ ಅಂಶಗಳು ಸಿಗುವುದಿಲ್ಲ. ನೀರಾವರಿ ಆಯೋಗದ ಪ್ರಕಾರ (೧೯೦೦ – ೧೯೦೩)

[1] ಸಂಸ್ಥಾನದಲ್ಲಿ ಇದ್ದ ಸುಮಾರು ೫೩೦ ಲಕ್ಷ ಎಕರೆಗಳ ಒಟ್ಟು ಪ್ರದೇಶದಲ್ಲಿ ೨೩೦ ಲಕ್ಷ ಎಕರೆ ಕೃಷಿಯೋಗ್ಯ ಮತ್ತು ಖಾಲ್ಸಾ (ಸರ್ಕಾರಿ) ಅರಣ್ಯ ಭೂಮಿಯ ಬಗ್ಗೆ ಮಾತ್ರ ಅಂಕಿ ಅಂಶಗಳು ದೊರಕುತ್ತಿವೆ. ಆ ಪೈಕಿ ೨೫ ಲಕ್ಷ ಎಕರೆ ಅರಣ್ಯ ಹಾಗೂ ಸುಮಾರು ೩೦ ಲಕ್ಷ ಎಕರೆ ಕೃಷಿಯೋಗ್ಯ ಪಾಳುಭೂಮಿ ಎಂದು ಪರಿಗಣಿಸಲಾಗಿತ್ತು. ೧೯೦೦ರಲ್ಲಿ ಹಿಡುವಳಿಯಲ್ಲಿದ್ದ ಸುಮಾರು ೧೭೫ ಲಕ್ಷ ಜಮೀನಿನಲ್ಲಿ ೧೦ ಲಕ್ಷ ಎಕರೆ ಅಥವಾ ಶೇ.೬ರಷ್ಟನ್ನು ಮಾತ್ರ ನೀರಾವರಿಯೋಗ್ಯ ಎಂದು ಅಂದಾಜು ಮಾಡಲಾಗಿತ್ತು. ಹಿಡುವಳಿ ಭೂಮಿ ಹಾಗೂ ವಾಸ್ತವವಾಗಿ ನೀರಾವರಿಯಲ್ಲಿದ್ದ ಪ್ರದೇಶಗಳು ಹೀಗಿದ್ದವು.

ಒಣ ಬೇಸಾಯದ ಪ್ರದೇಶ ನೀರಾವರಿ ಯೋಗ್ಯ ಎನ್ನಲಾದ ಪ್ರದೇಶ ಎಕರೆಗಳಲ್ಲಿ ನೀರಾವರಿ ಆಗುತ್ತಿದ್ದ ನಿವ್ವಳ ಪ್ರದೇಶದ ಅಂದಾಜು
ಸಾಮಾನ್ಯ ಮಳೆಯ ವರ್ಷದಲ್ಲಿ ಶುಷ್ಕ ವರ್ಷದಲ್ಲಿ (೧೮೯೯೧೯೦೦)
ಮರಾಠವಾಡ ೮೫,೮೧,೧೬೫ ೨,೩೮,೫೭೨ ೨,೩೫,೪೪೭ ೨,೩೨,೪೩೯
ಕರ್ನಾಟಕ ೪೪,೯೬,೭೨೫ ೬೧,೪೪೦ ೫೮,೪೩೦ ೪೩,೮೮೭
ತೆಲಂಗಾಣ ೪೩,೫೦,೪೩೮ ೭,೦೬,೮೬೮ ೪,೭೯,೦೪೯ ೯೬,೨೯೪
  ,೭೪,೨೮,೩೨೮ ೧೦,೦೬,೮೮೦ ,೭೨,೯೨೬ ,೭೨,೫೯೦

ಕರ್ನಾಟಕ ಜಿಲ್ಲೆಗಳಲ್ಲಿ (ರಾಯಚೂರು, ಗುಲ್ಬರ್ಗಾ, ಬೀದರ್) ನೀರಾವರಿ ಪ್ರದೇಶ ಬಿತ್ತನೆಯಾದ ಪ್ರದೇಶದ ಶೇ.೧.೫ ರಷ್ಟು ಮಾತ್ರ ಇತ್ತು ಎನ್ನುವುದನ್ನು ಈ ಅಂಕಿಗಳು ಸೂಚಿಸುತ್ತವೆ. ಇನ್ನೂ ಒಂದು ಸ್ವಾರಸ್ಯದ ಅಂಶವೆಂದರೆ ಈ ಜಿಲ್ಲೆಗಳಲ್ಲಿ ಶುಷ್ಕವರ್ಷದಲ್ಲಿ ನೀರಾವರಿ ಆಗುತ್ತಿದ್ದ ಪ್ರದೇಶ ಸಾಮಾನ್ಯ ವರ್ಷಗಳಲ್ಲಿ ನೀರಾವರಿ ಆಗುತ್ತಿದ್ದ ಪ್ರದೇಶದ ಶೇ.೮೦ ರಷ್ಟು ಇದ್ದುದು ಆದರೆ ತೆಲಂಗಾಣದಲ್ಲಿ ಕೆರೆಗಳು ನಿಬಿಡವಾಗಿದ್ದರೂ ಶುಷ್ಕ ವರ್ಷದಲ್ಲಿ ನೀರಾವರಿ ಆಗುತ್ತಿದ್ದ ಪ್ರದೇಶ ಸಾಮಾನ್ಯ ವರ್ಷದ ಪ್ರದೇಶದ ಸುಮಾರು ಶೇ.೨ರಷ್ಟು ಮಾತ್ರ ಇತ್ತು. ಕರ್ನಾಟಕ ಜಿಲ್ಲೆಗಳಲ್ಲಿ ನೀರಾವರಿ ಮುಖ್ಯವಾಗಿ ಅವಲಂಬಿಸಿದ್ದುದು ತುಂಗಭದ್ರಾ ನದಿಯ ನಾಲೆಗಳಿಂದ. ಅದಕ್ಕಾಗಿಯೆ ಈ ವ್ಯತ್ಯಾಸ ಈ ಪ್ರದೇಶದಲ್ಲಿ ಇದ್ದ ಕೆರೆಗಳು ಅತ್ಯಲ್ಪ.

ಹೈದರಾಬಾದ್ ಸಂಸ್ಥಾನದಲ್ಲಿ ವಾಸ್ತವವಾಗಿ ನೀರಾವರಿಯಲ್ಲಿದ್ದ ಪ್ರದೇಶಗಳ ಈ ಅಂಕಿಗಳನ್ನು ಆಯೋಗ ಒಟ್ಟು ಕಂದಾಯ ನಿಗದಿಯಾದ ಒಟ್ಟು ಪ್ರದೇಶದಿಂದ, ಕಂದಾಯ ಮಾಫಿಯಾದ ಪ್ರದೇಶಗಳ ಅಂಕಿಯನ್ನು ಕಳೆದೇ ಲೆಕ್ಕಮಾಡಿದ್ದು. ಈ ಪ್ರದೇಶದಲ್ಲಿ ಕೆರೆಗಳನ್ನು ಕಟ್ಟಲು ಸಿಗುತ್ತಿದ್ದ ಸ್ಥಳಗಳು ತೀರ ಕಡಿಮೆ. ಅಷ್ಟೇ ಅಲ್ಲ ಇಡಿ ಪ್ರದೇಶ ನಿರ್ಲಕ್ಷಕ್ಕೆ ಒಳಗಾಗಿತ್ತು.

ಹೈದರಾಬಾದು ಸಂಸ್ಥಾನದ ೧೮೭೪ನೇ ಸಾಲಿನ ಕಂದಾಯ ಆಡಳಿತ ವರದಿಯ ಪ್ರಕಾರ ರಾಯಚೂರು ಜಿಲ್ಲೆಯಲ್ಲಿ ಪ್ರಮುಖವಾದ ಕೆರೆಗಳು ಇದ್ದುದು ಅತ್ಯಲ್ಪ. ಇದ್ದವೆಲ್ಲ ಸಣ್ಣ ಕೆರೆಗಳು. ಒಳ್ಳೆ ಮಳೆಯಾದ ವಿಶೇಷ ವರ್ಷಗಳಲ್ಲಿ ಮಾತ್ರ ತುಂಬುತ್ತಿದ್ದವು. ಬಹುಪಾಲು ಖುಷ್ಕಿ ಬೇಸಾಯ ಆಗುತ್ತಿದ್ದುದು ತುಂಗಭದ್ರಾ ನದಿಯಿಂದ ತೆಗೆಯಲಾಗಿದ್ದ ಹಳೆಯ ನಾಲೆಗಳಿಂದಲೇ. ಬಹುಪಾಲು ಆಣೆಕಟ್ಟೆಗಳು ಕಾಲುವೆಗಳ ನಾದುರಸ್ತಿ ಆಗಿದ್ದವು. ಈಗ ಇರುವ ಈ ಆಣೆಕಟ್ಟು ಕಾಲುವೆಗಳೇ ಅಲ್ಲದೆ, ಇನ್ನೂ ಬಹು ಸಂಖ್ಯೆಯ ಆಣೆಕಟ್ಟುಗಳಿದ್ದವು. ಹಾಗೂ ನದಿಯ ಉದ್ದಕ್ಕೂ ಪ್ರತಿ ಐದು ಮೈಲಿಗೂ ಹಿಂದಿನ ಕಾಮಗಾರಿಗಳ ಗುರುತುಗಳನ್ನು ಕಾಣಬಹುದು.[2]

೧೯೫೬ರಲ್ಲಿ ಈ ಜಿಲ್ಲೆ ಮೈಸೂರು ರಾಜ್ಯದ ಭಾಗವಾದಾಗ ಅಲ್ಲಿ ಇದ್ದ ಕೆರೆ ನೀರಾವರಿ ಪ್ರದೇಶ ೧೦,೫೯೦ ಎಕರೆ ಹಾಗೂ ಕೆರೆಗಳ ಸಂಖ್ಯೆ ೯೫.[3]

ಗುಲ್ಬರ್ಗಾದ ಭೋಸ್ಗಾ ಕೆರೆ ಆ ನಗರಕ್ಕೆ ನೀರು ಒದಗಿಸುವ ಮುಖ್ಯ ಮೂಲ. ಅದೂ ಪ್ರಾಯಶಃ ಒಂದು ದೊಡ್ಡ ನೀರಾವರಿ ಯೋಜನೆ ಆಗಿತ್ತು. ಅದರ ನಾಲೆಗಳು ಗುಲ್ಬರ್ಗಾ ನಗರಕ್ಕೆ ಹಾದು ಬರುವ ದಾರಿಯಲ್ಲಿ ನೀರಾವರಿ ಹಲವಾರು ಕೆರೆಗಳನ್ನು ತುಂಬಿಸುತ್ತಿದ್ದವು ಎಂದು ಹೈದರಾಬಾದ್ ಸಂಸ್ಥಾನದ ೧೮೭೪ನೇ ಸಾಲಿನ ಆಡಳಿತ ವರದಿ ಸೂಚಿಸುತ್ತದೆ. ಕೆರೆಯ ಏರಿ ೨೧೯೫ ಅಡಿ ಉದ್ದವಾಗಿತ್ತು. ಕೆರೆ ತುಂಬಿದಾಗ ನೀರಿನ ಹರಿವು ೩೬೭ ಎಕರೆ, ಸರಾಸರಿ ಆಳ ೨೧ ಅಡಿ. ಆಡಳಿತ ವರದಿ ಮತ್ತೂ ಹೇಳುತ್ತದೆ, ಏರಿಯ ಅಗಲವನ್ನೂ ಹೊರ ಮೈಯ ಇಳಿಜಾರು ಮಟ್ಟವಾಗಿತುವುದನ್ನೂ ಹಾಗೂ ಕಲ್ಲು ಕಟ್ಟಡದಲ್ಲಿ ತೋರಿಸಿರುವ ಎತ್ತರವನ್ನೂ ನೋಡಿದರೆ ಈ ಕೆರೆಯನ್ನು ಪ್ರಾಯಶಃ ಬಹುಮನಿ ಅರಸರು ತಾವು ಬೀದರಿಗೆ ವಲಸೆ ಹೋಗುವ ಮುನ್ನ ಕಟ್ಟಿಸಿರಬೇಕೆನ್ನಬಹುದು. ಆಗ ಕೂಲಿ ಅಗ್ಗವಾಗಿತ್ತು. ಉಪಯುಕ್ತ ಕಾಮಗಾರಿಗಳ ಮೇಲಿನ ವೆಚ್ಚ ಅಮಿತವಾಗಿತ್ತು. ಆದರೆ ೧೮೭೪ರಲ್ಲಿ ಅದು ಒಡಕು ಕೆರೆ ಆಗಿತ್ತು. ಯಾವಾಗ ಒಡೆದಿತ್ತೋ ಎಂಬುದಕ್ಕೆ ಯಾವ ದಾಖಲೆಯೂ ಇಲ್ಲ. ಕೆರೆಯನ್ನು ೧೮೮೭ರಲ್ಲಿ ಜೀರ್ಣೋದ್ಧಾರ ಮಾಡಲಾಯಿತು. ಗುಲ್ಬರ್ಗಾ ನಗರಕ್ಕೂ ಸ್ವಲ್ಪ ಬೇಸಾಯಕ್ಕೂ ಅದು ನೀರು ಒದಗಿಸುತ್ತಿತ್ತು.

ಪೋರಾಪುರಕ್ಕೆ ಆರೇಳು ಮೈಲಿ ಪಶ್ಚಿಮಕ್ಕಿದ್ದ ಬೋನಾಳ ಕೆರೆಯನ್ನು ವರದಿ ಉಲ್ಲೇಖಿಸುತ್ತದೆ. ಹಳೆಯ ಕೆರೆದ್ಯನ್ನು ೧೮೫೬ರಲ್ಲಿ ಕರ್ನಲ್ ಟೈಲರ್ ದೊಡ್ಡದು ಮಾಡಿಸಿದ್ದ. ಅದರ ಜಲಾನಯನ ಪ್ರದೇಶ ಸುಮಾರು ೫೦ ಚದರ ಮೈಲಿ. ಕೆರೆ ತುಂಬಿದಾಗ ನೀರಿನ ಹರಿವು ಎರಡೂವರೆ ಚದರ ಮೈಲಿಗಳು.

ಬೀದರ್ ಜಿಲ್ಲೆಯಲ್ಲಿ ೧೯೩೧ – ೩೬ರಲ್ಲಿ ಬಿತ್ತನೆ ಆದ ಪ್ರದೇಶ ೧೦,೬೬,೭೬೭ ಎಕರೆ ಹಾಗೂ ನೀರಾವರಿಯಾದುದು ೨೭,೨೨೩ ಎಕರೆ. ಅಂದರೆ ಬಿತ್ತನೆ ಪ್ರದೇಶದ ಸುಮಾರು ಶೇ.೨.೫ರಷ್ಟು.[4] ಕೆರೆ ನೀರಾವರಿ ಪ್ರದೇಶ ೩,೧೧೬ ಎಕರೆ ಹಾಗೂ ಭಾವಿ ನೀರಾವರಿ ಪ್ರದೇಶ ೨೩,೭೮೬ ಎಕರೆ ಇದ್ದವು. ಆಗ ಇದ್ದ ಕೆರೆಗಳು ಕೇವಲ ೩೬. ೧೯೫೬ರಲ್ಲಿ ಜಿಲ್ಲೆ ಮೈಸೂರಿನಲ್ಲಿ ವಿಲೀನಗೊಂಡಾಗ ಇದ್ದ ಕೆರೆಗಳ ಸಂಖ್ಯೆಗೆ ಸರಿ ಸುಮಾರು ಹೊಂದಿಕೆಯಾಗುತ್ತದೆ. ೧೯೫೬ರಲ್ಲಿ ೩೧ ಕೆರೆಗಳಿದ್ದವು. ಅವುಗಳ ಕೆಳಗೆ ೩೦೦ ಎಕರೆ ನೀರಾವರಿ ಪ್ರದೇಶವಿತ್ತು.[5]

ಕೊಡಗು:

ಸ್ವಾತಂತ್ರ್ಯ ರಾಜ್ಯವಾಗಿದ್ದ ಕೊಡಗು ೧೮೩೪ರಲ್ಲಿ ಬ್ರಿಟಿಷರ ಆಧೀನವಾಗಿ ಪ್ರತ್ಯೇಕ ಆಡಳಿತ ಘಟಕವಾಯಿತು. ಅದು ೧೯೫೬ರಲ್ಲಿ ಕರ್ನಾಟಕದಲ್ಲಿ ವಿಲೀನಗೊಂಡಿತು.

ಈ ಪ್ರದೇಶದಲ್ಲಿ ಮಳೆ ಯಥೇಚ್ಚ ಹಾಗೂ ಪಶ್ಚಿಮದಲ್ಲಿ ೧೫೦ ಅಂಗುಲಕ್ಕೂ ಮಿಕ್ಕು ಪೂರ್ವದಲ್ಲಿ ೪೦ ಅಂಗುಲದ ವರೆಗೆ ಬೇರೆ ಬೇರೆ ಪ್ರಮಾಣದ್ದಾಗಿದೆ. ಆದ್ದರಿಂದ ಕೊಡಗಿನಲ್ಲಿ ಇದ್ದ ನೀರಾವರಿ ಕಾಮಗಾರಿಗಳು ಅತ್ಯಲ್ಪ. ಈ ಶತಮಾನದ ಅವಧಿಯಲ್ಲಿ ೨೫ ನೀರಾವರಿ ಕಾಮಗಾರಿಗಳು, ಕೆರೆ ಕಾಲುವೆಗಳು ಇದ್ದವು.

೧೯೫೬ರಲ್ಲಿ ನೀರಾವರಿಯಲ್ಲಿದ್ದ ಪ್ರದೇಶ ೧೨,೪೮೮ ಎಕರೆ. ಅದರಲ್ಲಿ ೫,೨೯೫ ಎಕರೆ ಕೆರೆ ಕೆಳಗಿನದು, ೭,೯೯೦ ಎಕರೆ ನಾಲೆಗಳ ಕೆಳಗಿನದು. ೨೦೩ ಎಕರೆ ಕುಂಟೆ ಕಾಲುವೆ ಇತ್ಯಾದಿ ಇತರ ಮೂಲಗಳಿಂದ ನೀರಾವರಿ ಆಗುವಂಥದು. ಭಾವಿಗಳು ಇರಲಿಲ್ಲ. ೨೧೮ ಚಿಕ್ಕ ಕೆರೆಗಳಿದ್ದವು. ಅವುಗಳಿಗೆ ಸರಾಸರಿ ತಲಾ ೩೦ ಎಕರೆ ಅಚ್ಚುಕಟ್ಟು ಭೂಮಿ ಇತ್ತು.[6]

ದಕ್ಷಿಣ ಕನ್ನಡ:

೧೮೯೪ರ ದಕ್ಷಿಣ ಕನ್ನಡ ಜಿಲ್ಲಾ ಕೈಪಿಡಿ, ಜಿಲ್ಲೆಯಲ್ಲಿನ ನೀರಾವರಿ ಪರಿಸ್ಥಿತಿಯನ್ನು ಸಂಕ್ಷಿಪ್ತವಾಗಿ ವಿವರಿಸುತ್ತದೆ. ಅದು ಹೀಗಿತ್ತು:

“ನೈಋತ್ಯ ಮಾರುತದ ಮಳೆಗಾಲದಲ್ಲಿ ಮಳೆ ತಪ್ಪದೆ ಹಾಗೂ ಯಥೇಚ್ಚವಾಗಿ ಬೀಳುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ವಿಶಾಲ ನೀರಾವರಿ ಕಾಮಗಾರಿಯೂ ಇಲ್ಲ. ನೀರನ್ನು ಸಂಗ್ರಹಿಸಿಡುವ ಸೌಕರ್ಯ ಇಲ್ಲದಿದ್ದ ಕಡೆಗಳಲ್ಲಿಯೂ ಒಂದು ಬೆಳೆ ತೆಗೆಯಲು ಮಳೆ ನೀರೆ ಸಾಕಾಗುತ್ತಿತ್ತು. ಅಲ್ಲದೆ ಮಳೆ ನಿಂತ ಮೇಲೆಯೂ ಕೊಂಚ ಕಾಲಹರಿಯುತ್ತಿದ್ದ ಹೊಳೆಗಳು, ಚಿಲುಮೆದ್ಗಳು, ರೈತರು ಕಣಿವೆಗಳ ಅಡಿಗಳಲ್ಲಿನ ಕೆಳಮಟ್ಟದ ಭೂಮಿಯಿಂದ, ಎರಡು ಅಥವಾ ಮೂರು ಬೆಳೆಯನ್ನು ತೆಗೆಯಲು ನೆರವಾಗುತ್ತಿದ್ದವು. ಅಡಕೆ ತೋಟಗಳಿಗೆ ತೋಟ ಇರುವ ಕಣಿವೆಯ ಶಿಖರದಲ್ಲಿ ಸಾಮಾನ್ಯವಾಗಿ ಸಣ್ಣ ಕೆರೆಗಳನ್ನ ಕಟ್ಟಲಾಗುತ್ತದೆ. ಎರಡು ಹಾಗೂ ಮೂರನೆಯ ಭತ್ತದ ಬೆಳೆಗಾಗಿ ಹೊಳೆ ಮತ್ತು ಸಣ್ಣ ನದಿಗಳ ನೀರಿಗೆ ರೈತರು ಅಡ್ಡಗಟ್ಟೆ ಹಾಕುವುದು ರೂಢಿಯಲ್ಲಿದೆ. ಈ ಬಗೆಯ ಸಣ್ಣ ಅಣೆಕಟ್ಟುಗಳು ಜಿಲ್ಲೆಯಾದ್ಯಂತ ಬೇಕಾದಷ್ಟು ಕಾಣಸಿಗುತ್ತವೆ. ಉಪ್ಪಿನಂಗಡಿ ತಾಲೂಕಿನಲ್ಲಿ ಇತರ ಕಡೆಗಿಂತ ಹೆಚ್ಚಿನ ಸಂಖೆಯಲ್ಲಿವೆ. ಕಾಸರಗೋಡು ತಾಲೂಕಿನಲ್ಲಿ ಕಡಿಮೆ ಸಂಖೆಯಲ್ಲಿವೆ. ಈ ಕಟ್ಟೆಗಳನ್ನು ಪ್ರತಿವರ್ಷವೂ ಕಟ್ಟುವುದಕ್ಕಾಗಿ ಬಹುಕಾಲದ ಹಿಂದೆಯೆ ಕಂದಾಯ ನಿಗದಿಯಲ್ಲಿ ಕಟ್ಟು ತಾಯ್ ಎಂಬ ಸಣ್ಣ ರಿಯಾಯಿತಿಯನ್ನು ನೀಡಲಾಗಿತ್ತು. ನೀರಾವರಿ ಸಲುವಾಗಿ ಸರ್ಕಾರ ನೇರವಾಗಿ ಏನೂ ಖರ್ಚುಮಾಡುತ್ತಿರಲಿಲ್ಲ. ಆದರೂ ಚಿಲುಮೆಗಳಿಂದ ನೀರು ಪಡೆಯುತ್ತಿದ್ದ ಅನೇಕ ಸಣ್ಣ ಕೆರೆಗಳನ್ನು ಸರ್ಕಾರಿ ಆಸ್ತಿ ಎಂದೇ ಪರಿಗಣಿಸಲಾಗಿತ್ತು. ನೀರು ಸರಬರಾಜು ಒಂದು ಅಥವಾ ಎರಡು ಹಿಡುವಳಿಗಳಿಗೆ ಇದ್ದಾಗ ಕೆರೆ ಹಿಡುವಳಿಗೆ ಸೇರಿದ್ದು ಎಂದು ಪರಿಗಣಿತವಾಗುತ್ತಿತ್ತು. ಭೂಮಟ್ಟಕ್ಕೆ ಸಮೀಪದಲ್ಲೇ ನೀರು ಸಿಗುವ ಕಡಲ ತೀರಪ್ರದೇಶದಲ್ಲಿ ಭಾರಿ ಸಂಖ್ಯೆಯ ಸಣ್ಣ ಖಾಸಗಿ ಕೆರೆ ಅಥವಾ ಜಲಾಶಯಗಳನ್ನು ಖಾಸಗಿ ಮಾಲೀಕರೇ ತೋಡಿಸುತ್ತಿದ್ದರು.[7]

ಈ ಜಿಲ್ಲೆಯಲ್ಲಿ ೧೯೫೬ – ೫೭ರಲ್ಲಿ ಎಲ್ಲ ಮೂಲಗಳಿಂದಲೂ ನೀರಾವರಿ ಆಗುತ್ತಿದ್ದ ಒಟ್ಟು ಪ್ರದೇಶ ೧,೦೫,೮೭೧ ಎಕರೆ. ಈ ಪೈಕಿ ೧೪,೬೬೧ ಎಕರೆ ಕೆರೆ ಕೆಳಗಿನವು, ೭,೧೨೯ ಎಕರೆ ಭಾವಿಕೆಳಗಿನವು ಮತ್ತು ೮೪,೦೮೧ ಎಕರೆ ಚಿಲುಮೆ ಕಾಲುವೆ ಇತ್ಯಾದಿ ಇತರ ಮೂಲದಿಂದ ನೀರಾವರಿ ಆಗುತ್ತಿದ್ದವು. ಆಗ ಇದ್ದ ಕೆರೆಗಳ ಒಟ್ಟು ಸಂಖ್ಯೆ ೧,೮೪೫, ಆ ಪೈಕಿ ಆರು ಮಾತ್ರ ತಲಾ ೧೦೦ ಎಕರೆಗಿಂತ ಹೆಚ್ಚು ಭೂಮಿಗೆ ನೀರು ಒದಗಿಸುತ್ತಿದ್ದವು. ಉಳಿದ ಕೆರೆಗಳು ತೀರ ಚಿಕ್ಕವು. ಸರಾಸರಿ ತಲಾ ೬ ಎಕರೆಗೂ ಕಡಿಮೆ ಭೂಮಿಗೆ ನೀರು ಒದಗಿಸುವಂಥವು.[8]

೧೯೫೬ ರಿಂದ ಈಚೆಗೆ

ಪೀಠಿಕೆ:

೧೯ನೆಯ ಶತಮಾನದಲ್ಲಿ ಬ್ರಿಟಿಷರು ಮೈಸೂರನ್ನೂ ಕರ್ನಾಟಕದ ಇತರ ಭಾಗಗಳನ್ನೂ ವಶಮಾಡಿಕೊಂಡಾಗ, ಅವರು ಆಗ ಇದ್ದ ಕಾಮಗಾರಿಗಳ ಜೀರ್ಣೋದ್ಧಾರ, ಅಭಿವೃದ್ಧಿ ಹಾಗೂ ವಿಸ್ತರಣೆಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದರು. ಒಂದು ನೀರಾವರಿ ಕಾರ್ಯದ ನಿರ್ಮಾಣ ಅಥವಾ ಜೀರ್ಣೋದ್ಧಾರವನ್ನು ಕೈಗೆತ್ತಿಕೊಳ್ಳುವಾಗ ಅವರು ಹೂಡುತ್ತಿದ್ದ ಮುಖ್ಯ ಪರೀಕ್ಷೆ ಎಂದರೆ ಅದು ಲಾಭದಾಯಕವೆ ಅಥವಾ ಉತ್ಪಾದಕವೇ ಎಂಬುದು. ೧೮೭೬ – ೭೮ರಲ್ಲಿ ಕ್ಷಾಮ ಸಂಭವಿಸಿದಾನಂತರವೇ ರಕ್ಷಣಾತ್ಮಕವಾದ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಗಮನ ನೀಡುವುದು ಆರಂಭವಾಯಿತು. ಅದೇ ಕಾಲಕ್ಕೆ ಖಾಸಗಿ ವ್ಯಕ್ತಿಗಳು ಭಾವಿ ತೋಡಿಸುವುದೇ ಮುಂತಾದ ಕೆಲಸಗಳಿಗೆ ನೆರವು ನೀಡುವ ನೀರಿಯನ್ನು ಯೋಚಿಸಲಾಯಿತು. ಸಾಲ ಕೊಡುವುದು ಹಾಗೂ ಭೂಕಂದಾಯ ನಿಗದಿಯಲ್ಲಿ ರಿಯಾಯಿತಿ – ಇವುಗಳನ್ನು ಜಾರಿಗೆ ತರಲಾಯಿತು.

ಯಾವುದೇ ಕಾರ್ಯವನ್ನು ಮಂಜೂರುಮಾಡುವ ಮುನ್ನ ಆರ್ಥಿಕ ಉತ್ಪಾದನಾ ಪರೀಕ್ಷೆಯಿಂದ ಅದರ ಉಪಯುಕ್ತತೆಯನ್ನು ಗೊತ್ತು ಮಾಡಲಾಗುತ್ತಿತ್ತು. ಕೈಗೆತ್ತಿಕೊಂಡ ಯಾವುದೇ ಯೋಜನೆಯಾಗಲಿ ಅದು ಕಾರ್ಯಾರಂಭ ಮಾಡಿದ ಹತ್ತನೆಯ ವರ್ಷದಲ್ಲಿ ಹೂಡಿದ ಹಣದ ಮೇಲೆ ನಿರ್ದಿಷ್ಟ ಪ್ರಮಾಣದ ಲಾಭ ತರಬೇಕಾಗಿತ್ತು. ಹೂಡಿದ ಹಣ ಎಂದರೆ ಬಂಡವಾಳ ಮೊಬಲಗು ಹಾಗೂ ಆ ವರ್ಷದ ವರೆಗೂ ಅದರ ಮೇಲಿನ ಸುಸ್ತಿ ಬಡ್ಡಿಗಳ ಮೊತ್ತ. ಈ ಮಾನದಂಡವನ್ನು ಪರೀಕ್ಷಿಸಿದ ನೀರಾವರಿ ಆಯೋಗ (೧೯೦೧) ಆರ್ಥಿಕ ಉತ್ಪಾದನಾ ಪರೀಕ್ಷೆಯನ್ನು ಬದಲಾಯಿಸುವ ಅಗತ್ಯ ಇಲ್ಲ ಎಂದು ಪ್ರತಿಪಾದಿಸಿತು. ೧೯೪೭ ರಿಂದ ಈಚೆಗೂ ಈ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಮುಂದುವರಿಯಿತು. ೧೯೪೯ರಲ್ಲಿ ಲಾಭಾಂಶದ ಪ್ರಮಾಣವನ್ನು ಶೇ.೬ ರಿಂದ ಶೇ.೩.೭ಕ್ಕೆ ಇಳಿಸಲಾಯಿತು.[9] ಲಾಭ ಮತ್ತು ವೆಚ್ಚ ಇವುಗಳ ಪ್ರಮಾಣವನ್ನು ಆಧರಿಸಿ ನೀರಾವರಿ ಯೋಜನೆಯ ಉಪಯುಕ್ತತೆಯನ್ನು ಪರೀಕ್ಷಿಸುವ ಮಾನದಂಡವನ್ನು ಸರ್ಕಾರ ಒಪ್ಪಿಕೊಂಡದ್ದು ೧೯೬೪ರಲ್ಲಷ್ಟೆ.

ಉತ್ಪಾದನಾ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಯಿತು. ಲಭ್ಯವಿದ್ದ ಧನ ಮಿತವಾಗಿತ್ತು. ಅಲ್ಲದೆ ಭದ್ರಾ, ತುಂಗಾ, ತುಂಗಭದ್ರಾ, ಹೇಮಾವತಿ, ಕಾವೇರಿ ಮುಂತಾದ ಘಟ್ಟದ ಹೊಳೆಗಳನ್ನು ಬಿಟ್ಟು ಉಳಿದ ಎಲ್ಲ ಹೊಳೆಗಳಿಗೂ ಸ್ಥಳ ಲಭ್ಯವಿದ್ದೆಡೆಗಳಲ್ಲಿ ಆಗಲೆ ಜಲಾಶಯಗಳನ್ನು ನಿರ್ಮಿಸಿಯಾಗಿತ್ತು. ಆದ್ದರಿಂದ ಘಟ್ಟದ ನದಿಗಳ ವಿನಾ ಬೇರೆ ಎಲ್ಲಯೂ ಹೊಸ ಜಲಾಶಯ ನಿರ್ಮಿಸಲು ಆಸ್ಪದ ಇರಲಿಲ್ಲ. ಈ ಘಟ್ಟದ ನದಿಗಳು ಬರಕ್ಕೆ ಹೆಚ್ಚಾಗಿ ಗುರಿಯಾಗಬಹುದಾದ ಪ್ರದೇಶದಲ್ಲಿ ಹಾದು ಹೋಗುತ್ತಿರಲಿಲ್ಲ. ಹಾಗಾಗಿ ಅವುಗಳ ನೀರನ್ನು ಅಂಥ ಪ್ರದೇಶಗಳಿಗೆ ಹಾಯಿಸಲು ಪ್ರಯತ್ನಿಸಿದರೆ ಭಾರಿ ಜಲಾಶಯಗಳನ್ನು ಉದ್ದವಾದ ನಾಲೆಗಳನ್ನು ನಿರ್ಮಿಸಲೇಬೇಕಾಗಿತ್ತು. ಈ ಪರಿಸ್ಥಿತಿಯಿಂದಾಗಿಯೆ ಕರ್ನಾಟಕದ ಮೊಟ್ಟ ಮೊದಲನೆಯ ಭಾರಿ ನೀರಾವರಿ ಯೋಜನೆಯಾದ ಕೃಷ್ಣರಾಜಸಾಗರ ಜಲಾಶಯದ ನಿರ್ಮಾಣವಾಗಬೇಕಾಯಿತು.

ಭಾರಿ ಜಲಾಶಯಗಳ ನಿರ್ಮಾಣ:

೧೯೫೬ರಲ್ಲಿ ಕರ್ನಾಟಕ ರಚನೆಯಾದಾಗ ಮುಂಬೈ ಕರ್ನಾಟಕದ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶಗಳು ಮೈಸೂರು ರಾಜ್ಯದಲ್ಲಿ ವಿಲೀನಗೊಂಡವು. ಆ ಪ್ರದೇಶಗಳಲ್ಲಿ ಬೇಸಾಯ ಬಹುಮಟ್ಟಿಗೆ ಮಳೆ ಆಧಾರಿತವಾಗಿತ್ತು. ನೀರಾವರಿಯಿದ್ದ ಪ್ರದೇಶ ಬೇಸಾಯದ ವಿಸ್ತೀರ್ಣದ ಸಣ್ಣ ಭಾಗವಷ್ಟೇ ಆಗಿತ್ತು. ಮಳೆ ಅಲ್ಪ ಪ್ರಮಾಣದ್ದಾಗಿದ್ದು ಭೂಮಿ ಬಹು ಮಟ್ಟಿಗೆ ಮಟ್ಟಸವಾಗಿತ್ತು. ಆದ್ದರಿಂದ ಕೆರೆಗಳ ನಿರ್ಮಾಣ ಕಾರ್ಯಸಾಧ್ಯವಾಗಿರಲಿಲ್ಲ. ತುಂಗಭದ್ರಾ ಘಟಪ್ರಭಾ ಹಾಗೂ ಮಲಪ್ರಭಾ ಮುಂತಾದ ನದಿಗಳು ಈ ಪ್ರದೇಶದಲ್ಲಿ ಹರಿಯುತ್ತಿದ್ದುದರಿಂದ ಅವುಗಳಿಗೆ ಅಡ್ಡಲಾಗಿ ಸಣ್ಣ ಸಣ್ಣ ಜಲಾಶಯಗಳನ್ನು ನಿರ್ಮಿಸುವುದು ವ್ಯವಹಾರಿಕವಾಗಿರಲಿಲ್ಲ. ಅಲ್ಲದೆ ಈ ನದಿಗಳಿಗೆ ಅಡ್ಡಲಾಗಿ ಸಣ್ಣ ಆಣೆಕಟ್ಟುಗಳನ್ನು ಕಟ್ಟಿದರೆ ಗಮನಾರ್ಹ ಅಚ್ಚುಕಟ್ಟು ಪ್ರದೇಶ ಇರುತ್ತಿರಲಿಲ್ಲ. ಏಕೆಂದರೆ ನಾಲೆಗಳು ನದಿ ಪಕ್ಕದಲ್ಲೇ ಇರಬೇಕಾಗಿತ್ತು. ಈ ನದಿಗಳಿಗೆ ಅಡ್ಡಲಾಗಿ ಭಾರಿ ಜಲಾಶಯಗಳನ್ನು ನಿರ್ಮಿಸಿದಲ್ಲದೆ ಗಮನಾರ್ಹ ಪ್ರಮಾಣದ ಯಾವುದೇ ನೀರಾವರಿಯೂ ಕಾರ್ಯಸಾಧ್ಯವಾಗಿರಲಿಲ್ಲ.

ಘಟಪ್ರಭಾ ಮಲಪ್ರಭಾ ತುಂಗಭದ್ರಾ ಕೃಷ್ಣ ನದಿಗಳಿಗೆ ಅಡ್ಡಲಾಗಿ ಭಾರಿ ಜಲಾಶಯಗಳನ್ನು ನಿರ್ಮಿಸುವುದರ ಸಾಧ್ಯತೆಯನ್ನು ಬ್ರಿಟಿಷರು ೧೯ನೆಯ ಶತಮಾನದ ಉತ್ತರಾರ್ಧದಲ್ಲಿಯೇ ಪರಿಶೀಲಿಸಿದ್ದರು. ಆದರೆ ಅದಕ್ಕೆ ಬೇಕಾಗಿದ್ದ ಅಪಾರ ವೆಚ್ಚದಿಂದ ಹಾಗೂ ನದಿಗಳು ಎರಡು ಮೂರು ರಾಜ್ಯಗಳಲ್ಲಿ ಹರಿಯುತ್ತಿದ್ದುದರಿಂದ ಅವುಗಳನ್ನು ಜಾರಿಗೆ ತರಲಾಗಲಿಲ್ಲ. ೧೯೪೫ರಲ್ಲಿ ಮದರಾಸು ಪ್ರಾಂತ್ಯ ಮತ್ತು ನಿಜಾಂ ಸರ್ಕಾರದ ಜಂಟಿ ಉದ್ಯಮವಾಗಿ ತುಂಗಭದ್ರಾ ಜಲಾಶಯ ರಚನೆ ಆರಂಭವಾಯಿತು. ಆದರೆ ಘಟಪ್ರಭಾ ಮಲಪ್ರಭಾ ಕೃಷ್ಣ ಜಲಾಶಯಗಳಿ ಇನ್ನೂ ಬಹುಕಾಲ ಕಾಯಬೇಕಾಯಿತು. ಅವುಗಳ ನಿರ್ಮಾಣವನ್ನು ಕೈಗೊಂಡಿದ್ದು ೧೯೫೬ರ ನಂತರವೇ. ಶತಮಾನಗಳಿಂದಲೂ ಅಡಿಗಡಿಗೆ ಕ್ಷಾಮಡಾಮರಗಳಿಗೆ ತುತ್ತಾಗುತ್ತಿದ್ದ ಪ್ರದೇಶಗಳು ಹೈದರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ. ಅವುಗಳಿಗೆ ನೀರಾವರಿ ಒದಗಿಸುವ ಉದ್ದೇಶ ಹೊಂದಿದ ಈ ಎಲ್ಲ ಯೋಜನೆಗಳಲ್ಲೂ ಭತ್ತ ಬಿಟ್ಟು ಇತರ ಬೆಳೆಗಳಿಗೆ ನೀರು ಒದಗಿಸುವುದಕ್ಕೆ ಒತ್ತುಕೊಡಲಾಗಿತ್ತು. ಈ ಭಾರಿ ಜಲಾಶಯಗಳ ನಿರ್ಮಾಣದಿಂದ ಎದ್ದ ಪರಿಸರ ಸಮಸ್ಯೆಗಳೇ ಅಲ್ಲದೆ ಇವುಗಳ ನಾಲೆಗಳು ಬಹುದೂರ ಕಪ್ಪುಮಣ್ಣಿನ ಪ್ರದೇಶದಲ್ಲಿ ಹಾದು ಹೋಗಬೇಕಾಗಿತ್ತು. ಅಲ್ಲಿನ ಕಡಿದಾದ ಅಡ್ಡ ಇಳಿಜಾರುಗಳಲ್ಲಿ ಶತಮಾನಗಳಿಂದಲು ನೀರಾವರಿ ಬಗ್ಗೆ ಒಲವು ಇದ್ದಿರಲಿಲ್ಲ. ಹಾಗೂ ನೀರಾವರಿ ಎಂದರೆ ಭತ್ತ ಬೆಳೆಯುವುದು ಎಂಬ ಭಾವನೆ ಬೇರೂರಿತ್ತು. ಲಭ್ಯವಾಗಿರುವ ನೀರನ್ನು ಆದಷ್ಟು ಹೆಚ್ಚು ವಿಸ್ತಾರವಾದ ಪ್ರದೇಶಕ್ಕೆ ಹರಿಯಿಸಬೇಕು ಎನ್ನುವುದು ಯೋಜಕರ ಆಶಯ. ಆದರೆ ನೀರು ಹರಿದು ಹೋಗಲು ಸಾಕಷ್ಟು ಸೌಕರ್ಯ, ಭೂಮಿಯನ್ನು ಮಟ್ಟಗೊಳಿಸುವುದು, ಕೂಡುರಸ್ತೆಗಳು ಹಾಗೂ ಸುಧಾರಿತ ಕೃಷಿ ಪರಿಕರಗಳು ಇವುಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಿಲ್ಲ. ಇದರಿಂದಾಗಿ ಜಲ ಹಾಗೂ ಭೂಮಿ ನಿರ್ವಹಣೆಯ ಅಗಣಿತ ಸಮಸ್ಯೆಗಳು ಹುಟ್ಟಿಕೊಳ್ಳುವಂತಾಗಿದೆ. ಇವುಗಳಿಗೆ ಪರಿಹಾರವನ್ನು ಪಡೆಯಬೇಕಾದರೆ ಭೂ ಹಾಗೂ ಜಲ ನಿರ್ವಹಣೆಯ ಸಮಸ್ಯೆಯ ಪ್ರಾಮಾಣಿಕ ವಿಶ್ಲೇಷಣೆ ಅಗತ್ಯ.

ಭಾರಿ ನೀರಾವರಿ ಯೋಜನೆಗಳಿಗೆ ಪ್ರಾಶಸ್ತ್ಯ ಕೊಡಲಾಗಿದ್ದರೂ ಸಣ್ಣ ಜಲಾಶಯ ಅಥವಾ ಕೆರೆಗಳ ಪರಿಶೀಲನೆ ಹಾಗೂ ನಿರ್ಮಾಣಗಳನ್ನು ಪೂರಾ ಅಸಡ್ಡೆ ಮಾಡಿಲ್ಲ. ಸಣ್ಣ ನೀರಾವರಿ ಕಾಮಗಾರಿಗಳ ಪರಿಶೀಲನೆಗಾಗಿ ೧೯೫೯ರಲ್ಲಿ ಒಂದು ಪ್ರತ್ಯೇಕ ಸಂಘಟನೆಯನ್ನೇ ಸ್ಥಾಪಿಸಲಾಯಿತು.

ಆದರೆ ಈ ಕಾಮಗಾರಿಗಳನ್ನು ನಡೆಸುವುದು ಲೋಕೋಪಯೋಗಿ ಇಲಾಖೆಗೆ ಸೇರಿತ್ತು. ರಸ್ತೆ ಕಟ್ಟಡಗಳೆಲ್ಲದರ ಹೊಣೆಯೂ ಆ ಇಲಾಖೆಯ ಮೇಲೆಯೇ ಇತ್ತು. ಸಣ್ಣ ನೀರಾವರಿ ಕೆರೆಗಳ ನಿರ್ಮಾಣಕ್ಕಾಗಿ ಪ್ರತ್ಯೇಕ ಸಂಘಟನೆ ರಚಿತವಾದುದು ೧೯೮೪ರಲ್ಲಿಯೇ. ಇತ್ತೀಚಿನ ವರೆಗೂ ನೀರಾವರಿ ಕೆಲಸಗಳನ್ನು ಸಣ್ಣವು ಹಾಗೂ ಭಾರಿ ಎಂದು ವರ್ಗೀಕರಣ ಮಾಡುವುದು ಆ ಕೆಲಸದ ಅಂದಾಜುವೆಚ್ಚವನ್ನು ಆಧರಿಸಿತ್ತು. ೨೫ ಲಕ್ಷ ರೂ.ಗಳಿಂತ ಕಡಿಮೆವೆಚ್ಚದ ಕೆಲಸಗಳನ್ನು ಸಣ್ಣ ನೀರಾವರಿ ಕೆಲಸಗಳೆಂದೂ ಪರಿಗಣಿಸಲಾಗಿತ್ತು. ಈಗ ೫,೦೦೦ ಎಕರೆ ಅಥವಾ ಕಡಿಮೆ ಅಚ್ಚುಕಟ್ಟು ಪ್ರದೇಶ ಉಳ್ಳ ಕಾಮಗಾರಿಗಳನ್ನು ಸಣ್ಣ ಕಾಮಗಾರಿಗಳು ಎಂದು ಪರಿಗಣಿಸಲಾಗುತ್ತಿತ್ತು. ೫೦೦೦ ಎಕರೆ ಅಥವಾ ಹೆಚ್ಚಿನ ನೀರಾವರಿ ಪ್ರದೇಶದ ಕಾಮಗಾರಿಗಳನ್ನು ಮಧ್ಯಮ ಹಾಗೂ ಭಾರಿ ನೀರಾವರಿ ಕಾಮಗಾರಿಗಳು ಎಂದು ಪರಿಗಣಿಸಲಾಗುತ್ತಿದೆ. ಸಣ್ಣ ನೀರಾವರಿ ಕಾರ್ಯಗಳ ಪರಿಶೀಲನೆ, ಯೋಜನೆ ಹಾಗೂ ಮಂಜೂರು ಪೂರ್ಣವಾಗಿ ರಾಜ್ಯ ಸರ್ಕಾರಕ್ಕೆ ಸೇರಿದ್ದು. ಇತರ ಎಲ್ಲ ನೀರಾವರಿ ಕಾರ್ಯಗಳ ಬಗ್ಗೆಯೂ ರಾಜ್ಯ ಸರ್ಕಾರ ರೂಪಿಸಿದ ಯೋಜನೆ ಭಾರತ ಸರ್ಕಾರ ಮತ್ತು ಯೋಜನಾ ಆಯೋಗಗಳ ಒಪ್ಪಿಗೆ ಪಡೆಯಬೇಕು. ಸಣ್ಣವು, ದೊಡ್ಡವು ಎಲ್ಲ ನೀರಾವರಿ ಯೋಜನೆಗಳನ್ನು ಪಂಚವಾರ್ಷಿಕ ಯೋಜನೆಗಳ ಅಂಗವಾಗಿಯೇ ಕಾರ್ಯಗತಗೊಳಿಸುವುದು. ಆದರೆ ಯಾವುದೇ ಮಧ್ಯಮ ಅಥವಾ ಭಾರಿ ಯೋಜನೆಯನ್ನು ಪಂಚವಾರ್ಷಿಕ ಯೋಜನೆಗೆ ಸೇರಿಸುವುದು ಯೋಜನಾ ಆಯೋಗದ ಒಪ್ಪಿಗೆಯ ಆಧಾರದ ಮೇಲೆಯೆ. ಸಣ್ಣ ನೀರಾವರಿ ಯೋಜನೆಗಳಿಗೆ ಅಂಥ ನಿರ್ಬಂಧವಿಲ್ಲ. ಯಾವುದೇ ಸಣ್ಣ ಯೋಜನೆಯನ್ನಾಗಲಿ ಅದು ಸೇರಿಸಿಕೊಳ್ಳಬಹುದು.

ಯೋಜನಾ ಅವಧಿಗಳಲ್ಲಿ ನೀರಾವರಿಗೆ ನಿಗದಿಯಾದ ಹಣ ಹಾಗೂ ಅಭಿವೃದ್ಧಿ:

ಹಿಂದಿನ ಅವಧಿಗೆ ಹೋಲಿಸಿದರೆ ಪಂಚವಾರ್ಷಿಕ ಯೋಜನೆಗಳಲ್ಲಿನ ಯೋಜಿತ ಅಭಿವೃದ್ಧಿಯಿಂದ ನೀರಾವರಿ ಕೆಲಸಗಳಿಗೆ ದೊಡ್ಡ ಚಾಲನೆ ದೊರಕಿತ್ತು. ಪ್ರತಿ ಯೋಜನಾ ಅವಧಿಯಲ್ಲೂ ಮಾಡಲಾದ ವೆಚ್ಚ ಕೆಳಕಾಣಿಸಿದಂತಿದೆ.[10]

  ಅವಧಿ ಭಾರಿ ಮತ್ತು ಮಧ್ಯಮ ನೀರಾವರಿಯ ನಿಗದಿವೆಚ್ಚ ಸಣ್ಣ ನೀರಾವರಿಯ ನಿಗದಿ ವೆಚ್ಚ ಒಟ್ಟು ನಿಗದಿ ವೆಚ್ಚ
(ಕೋಟಿ. ರೂ.ಗಳಲ್ಲಿ)
೧. ಯೋಜನಾಪೂರ್ವ ಹಾಗೂ ಪ್ರಥಮ ಯೋಜನೆ ೧೯೫೧ – ೫೬ ೩೭.೨೭ ೪.೧೫ ೪೧.೪೪೨
೨. ದ್ವಿತಿಯ ಯೋಜನೆ ೧೯೫೬ – ೬೧ ೨೯.೮೨ ೫.೦೮ ೩೪.೯೦
೩. ತೃತೀಯ ಯೋಜನೆ ೧೯೬೧ – ೬೬ ೩೩.೯೯ ೧೫.೭೯ ೪೯.೭೮
೪. ವಾರ್ಷಿಕ ಯೋಜನೆ ೧೯೬೬ – ೬೯ ೩೩.೭೪ ೧೩.೧೮ ೪೬.೯೨
೫. ನಾಲ್ಕನೆಯ ಯೋಜನೆ ೧೯೬೯ – ೭೪ ೧೩೯.೦೦ ೨೩.೦೩ ೧೬೨.೦೩
೬. ಐದನೆಯ ಯೋಜನೆ ೧೯೭೪ – ೭೮ ೧೮೮.೩೬ ೩೭.೨೧ ೨೨೫.೫೭
೭. ವಾರ್ಷಿಕ ಯೋಜನೆ ೧೯೭೮ – ೭೯ ೯೦.೧೮ ೧೩.೮೯ ೧೦೪.೦೭
೮. ವಾರ್ಷಿಕ ಯೋಜನೆ ೧೯೭೯ – ೮೦ ೧೦೧.೮೬ ೧೬.೮೨ ೧೧೮.೬೮
೯. ಆರನೆಯ ಯೋಜನೆ ೧೯೮೦.೮೫ ೫೮೩.೭೮ ೯೧.೨೨ ೬೭೫.೦೦
    ,೨೩೮.೦೦ ೨೨೦.೩೭ ,೪೫೮.೩೭

ಯೋಜನಾಬದ್ಧ ಅಭಿವೃದ್ಧಿಗೆ ಸಂವಾದಿಯಾದ ಅವಧಿಯಲ್ಲಿ ವರ್ಷವರ್ಷವೂ ನೀರಾವರಿಯಾಗುವ ಪ್ರದೇಶಗಳ ಅಂಕಿಗಳನ್ನು ನೋಡಿದರೆ ಕಾಲುವೆಯಿಂದ ನೀರಾವರಿಯಾಗುವ ಪ್ರದೇಶ ಒಂದೇ ಸಮನೆ ವಿಸ್ತಾರಗೊಂಡಿರುವುದು ಹಾಗೂ ಕೆರೆಗಳಿಂದ ನೀರಾವರಿಯಾಗುವ ಪ್ರದೇಶ ವಿಸ್ತಾರವಾಗುವುದರಲಿ ಕಡಿಮೆಯಾಗಿರುವುದು ಕಂಡುಬರುತ್ತದೆ.[11]

ಕ್ರಮ ಸಂಖ್ಯೆ ವರ್ಷ ಕಾಲುವೆಗಳಿಂದ (ಎಕರೆಗಳಲ್ಲಿ) ನೀರಾವರಿ ಪ್ರದೇಶ ಕೆರೆಗಳಿಂದ
೧. ೧೯೫೫ – ೫೬ ೩೮೧,೬೫೯ ೭೮೨,೩೦೦
೨. ೧೯೬೦ – ೬೧ ೫೮೨,೧೪೯ ೮೪೮,೬೩೦
೩. ೧೯೬೫ – ೬೬ ೮೯೦,೧೮೮ ೮೦೦,೯೩೪
೪. ೧೯೭೦ – ೭೧ ೧೧೦೮,೨೭೭ ೯೦೧,೧೬೦
೫. ೧೯೭೫ – ೭೬ ೧೨೧೯,೦೪೦ ೧೦೨೫,೭೭೮
೬. ೧೯೮೦ – ೮೧ ೧೩೬೬,೪೬೦ ೯೦೯,೧೫೦
೭. ೧೯೮೫ – ೮೬ ೧೮೩೬,೮೯೦ ೬೦೪,೯೧೦
೮. ೧೯೮೭ – ೮೮ ೧೯೧೩,೭೨೫ ೬೯೫,೦೮೭

 

[1]ಇಂಡಿಯನ್ ಇರಿಗೇಷನ್ ಕಮಿಷನ್, ೧೯೦೧-೦೩ ಭಾಗ ೧, ಪು. ೨೩೭ ಪ್ಯಾರಾ ೬೫೯.

[2]ರೆವಿನ್ಯೂ ಅಡ್‌ಮಿನಿಸ್ಟ್ರೇಷನ್ ರಿಪೋರ್ಟ್ ಹೈದರಾಬಾದ್ ಸ್ಟೇಟ್. ೧೮೭೪ ಪು. ೩೮೧.

[3]ಕ್ರಾಪ್ ಅಂಡ್ ಸೀಸನ್ ರಿಪೋರ್ಟ್ ಆಫ್ ಮೈಸೂರು ಸ್ಟೇಟ್ ೧೯೫೬-೫೭

[4]ಹೈದರಾಬಾದ್ ಡಿಸ್ಟ್ರಿಕ್ಟ್ ಗೆಜಿಟಿಯರ್, ಸಂ. ೧೩೪೦-೧೩೪೫, ಫ್ಲಸ (೧೯೩೧-೩೬ ಕ್ರಿ.ಶ. ) ತಃಖ್ತೆ ೧೪ ಅಗ್ರಿಕಲ್ಚರ್‌, (ಗೆಜಟಿಯರ್ ನಲ್ಲಿ ಕೊಡಲಾದ ಅಂಕಿಗಳು ಇಡಿ ಜಿಲ್ಲೆಗೆ ಸಂಬಂಧಿಸಿದವು. ಈಗ ಕರ್ನಾಟಕದಲ್ಲಿ ಇಲ್ಲದ ಉದ್ಗೀರ್, ಅಹಮದ್‌ಪುರ, ನಿಲಂಗ, ಜಹೀರಾಬಾದ್ ಮತ್ತು ನಾರಾಯಣಖೇಡ ತಾಲ್ಲೂಕುಗಳ ವಿವರಗಳನ್ನು ಬಿಟ್ಟು ಕರ್ನಾಟಕ ಪ್ರದೇಶಗಳನ್ನು ಲೆಕ್ಕಸಲಾಗಿದೆ.)

[5]ರಿಪೋರ್ಟ್ ಆನ್ ದಿ ಮೈನರ್ ಇರಿಗೇಷನ್‌ವರ್ಕ್ಸ್ ಇನ್ ಮೈಸೂರು ಸ್ಟೇಟ್, ಕಮಿಟಿ ಆನ್ ಪ್ಲಾನ್ ಪ್ರಾಜಕ್ಟ್ಸ್‌೧೯೫೯. ಪು.೨ (ಕೆರೆಗಳ ಕೆಳಗಿನ ಪ್ರದೇಶಗಳು ೧೯೫೫-೫೬ ಸಾಲಿನ ಅಂಕಿಗಳಿಂದ ತೀರ ಭಿನ್ನವಾಗಿವೆ. ಆದರೆ ೧೯೫೬-೫೭ರ ಮೈಸೂರು ಬೆಳೆ ಹಾಗೂ ಋತುಮಾನ ವರದಿಯಲ್ಲಿಯೂ ಹೆಚ್ಚು ಕಡಿಮೆ ಅಷ್ಟೆ ಪ್ರದೇಶವನ್ನು ಹೇಳಲಾಗಿದೆ. ೩೨೪ ಎಕರೆ ಆದ್ದರಿಂದ ಒಪ್ಪಿಕೊಳ್ಳಲಾಗಿದೆ.)

[6]ಕ್ರಾಪ್‌ಅಂಡ್ ಸೀಸನ್‌ರಿಪೋರ್ಟ್ ಆಫ್ ಮೈಸೂರು ಸ್ಟೇಟ್, ೧೯೫೬-೫೭.

[7]ಮ್ಯಾನುಯಲ್ ಆಫ್ ಸೌತ್‌ಕೆನರಾ ಡಿಸ್ಟ್ರಕ್ಟ್‌೧೮೯೪ ಪು. ೧೯೭.

[8]ಕ್ರಾಪ್ ಆಂಡ್ ಸೀಸನ್ ರಿಪೋರ್ಟ್ ಆಫ್ ಮೈಸೂರು ಸ್ಟೇಟ್, ೧೯೫೬-೫೭.

[9]ಇರಿಗೇಷನ್ ಕಮಿಷನ್ ರಿಪೋರ್ಟ್ ೧೯೭೨, ಸಂ.೧ ಪು. ೨೫೦.

[10]ಪಬ್ಲಿಕ್ ಇನ್‌ವೆಸ್ಟಮೆಂಟ್‌ಇನ್ ಇರಿಗೇಷನ್ ಇನ್ ಕರ್ನಾಟಕ, ಯೋಜನಾ ಇಲಾಖೆ, ಕರ್ನಾಟಕ ಸರ್ಕಾರ, ಏಪ್ರಿಲ್ ೧೯೮೭ ಪು.೨೫.

[11]೧೯೫೫-೫೬, ೧೯೬೦-೬೧, ೧೯೬೫-೬೬, ೧೯೭೦-೭೧ನೆಯ ಸಾಲಿನ ಪ್ರದೇಶಗಳ ಮಾಹಿತಿಯನ್ನು ಸ್ಟಾಟಿಸ್ಟಿಕಲ್ ಮಾನೋಗ್ರಾಫ್ ವಾಟರ್ ರಿಸೋರ್ಸ್‌‌ಸ್‌ಡೆವಲಪ್‌ಮೆಂಟ್ ಇನ್ ಕರ್ನಾಟಕ, ಇದರಿಂದ ತೆಗೆದುಕೊಳ್ಳಲಾಗಿದೆ (ಮುಖ್ಯ ಇಂಜಿನಿಯರ್‌ಡಬ್ಲ್ಯೂ.ಆರ್.ಡಿ.ಓ. ಬೆಂಗಳೂರು ೧೯೭೫).

೧೯೭೫-೭೬, ೧೯೮೦-೮೧, ೧೯೮೫-೮೬, ಹಾಗೂ ೧೯೮೭-೮೮ನೇ ಸಾಲಿನ ಪ್ರದೇಶದ ಮಾಹಿತಿಯನ್ನು ನಿರ್ದೇಶಕರು ಅಂಕಿ ಅಂಶಗಳು, ಪ್ರಕಟಿಸಿರುವ ಋತುಮಾನ ಹಾಗೂ ಬೇರೆ ವರದಿಗಳಿಂದ ತೆಗೆದುಕೊಳ್ಳಲಾಗಿದೆ.