ಕೆರೆ ನೀರಾವರಿಯ ಅವನತಿ:

೧೯೫೫ – ೫೬ರಿಂದ ೧೯೮೭ – ೮೮ರ ಅವಧಿಯಲ್ಲಿ ಕಾಲುವೆಗಳಿಂದ ನೀರಾವರಿ ಆಗುವ ಪ್ರದೇಶಗಳಲ್ಲಿ ಶೇ.೪೦ರಷ್ಟು ಹೆಚ್ಚಳವಾಗಿದೆ. ಆದರೆ ಕೆರೆ ನೀರಾವರಿ ಪ್ರದೇಶ ಇಳಿಮುಖವಾಗಿದೆ.

ಕೆರೆಗಳಿಂದ ನೀರಾವರಿ ಪಡೆಯುವ ಪ್ರದೇಶದ ಅವನತಿಯನ್ನು ನಾವೀಗ ಪರಿಶೀಲಿಸೋಣ.

೧೯೮೯ ಏಪ್ರಿಲ್ ೧ನೇ ತಾರೀಕಿನಲ್ಲಿ ೨೨,೭೬೫ ಕೆರೆಗಳಿದ್ದವು. ಅವುಗಳ ಅಚ್ಚುಕಟ್ಟು ಪ್ರದೇಶ ೧೫,೨೪,೭೧೭ ಎಕರೆ (ತಲಾ ೧೦ ಎಕರೆಗೂ ಕಡಿಮೆ ಅಚ್ಚುಕಟ್ಟು ಇದ್ದ ೧೩,೭೪೩ ಕೆರೆಗಳನ್ನು ಬಿಟ್ಟು) ಇದಕ್ಕೆ ಪ್ರತಿಯಾಗಿ ಎಲ್ಲ ಕೆರೆಗಳಿಂದಲೂ ನೀರಾವರಿ ಪಡೆಯುತ್ತಿದ್ದ ವಾಸ್ತವ ಪ್ರದೇಶ ೮೧೦,೩೪೦ ಎಕರೆ. ಕೆರೆಗಳ ಕೆಳಗಿನ ಪ್ರದೇಶದ ಶೇ.೫೦ ಭಾಗವು ಮಾತ್ರ ನೀರಾವರಿ ಪಡೆಯುತ್ತಿತ್ತು.

[1]

೧೯೭೬ ಏಪ್ರಿಲ್ ೧ರಂದು ೩೮,೩೯೮ ಕೆರೆಗಳಿದ್ದವು. ಅವುಗಳ ಅಚ್ಚುಕಟ್ಟು ಪ್ರದೇಶ ೧೫,೦೩,೬೪೯ ಎಕರೆ (ಈ ಪೈಕಿ ತಲಾ ೧೦ ಎಕರೆಗಿಂತ ಹೆಚ್ಚು ಅಚ್ಚುಕಟ್ಟು ಪ್ರದೇಶ ಇದ್ದ ೨೨,೬೮೫ ಕೆರೆಗಳ ಕೆಳಗೆ ಒಟ್ಟು ೧೨,೨೬,೨೪೪ ಎಕರೆ ಇದ್ದವು) ಆ ವರ್ಷ ಈ ಎಲ್ಲ ಕೆರೆಗಳಿಂದಲೂ ನೀರಾವರಿ ಆದ ಪ್ರದೇಶ ೧೦,೨೫,೭೭೭ ಎಕರೆ. ಅಂದರೆ ಸುಮಾರು ಶೇ.೬೮ರಷ್ಟು ಪ್ರದೇಶ ನೀರಾವರಿಯಲ್ಲಿತ್ತು.

೧೯೭೬ – ೧೯೮೬ರ ಅವಧಿಯಲ್ಲಿ ಹತ್ತು ಅಥವಾ ಹೆಚ್ಚು ಎಕರೆಗೆ ನೀರಾವರಿ ಒದಗಿಸುತ್ತಿದ್ದ ಕೆರೆಗಳ ಗುಂಪಿಗೆ ೧೦೨,೫೪೩ ಎಕರೆ ಅಚ್ಚುಕಟ್ಟು ಪ್ರದೇಶವನ್ನು ಸೇರಿಸಲಾಯಿತು. ಅಷ್ಟಾದರೂ ವಾಸ್ತವವಾಗಿ ನೀರಾವರಿಯಲ್ಲಿದ್ದ ಪ್ರದೇಶ ಸುಮಾರು ಎರಡು ಲಕ್ಷ ಎಕರೆಗಳಷ್ಟು ಕಡಿಮೆಯಾಯಿತು.

ಕೆಳಗೆ ಕೊಟ್ಟಿರುವ ತಃಖ್ತೆ[2] ಯಿಂದ ಕಾಣಬರುವ ಇನ್ನೊಂದು ಸ್ವಾರಸ್ಯಕರ ಅಂಶವೆಂದರೆ ೧೦ ಎಕರೆ ಅಥವಾ ಹೆಚ್ಚಿಗೆ ಅಚ್ಚುಕಟ್ಟು ಇರುವ ೨೨,೭೬೫ ಕೆರೆಗಳಲ್ಲಿ ೯೭೦,೬೮೭ ಎಕರೆ ಅಚ್ಚುಕಟ್ಟು ಉಳ್ಳ ೧೬,೫೮೧ ಕೆರೆಗಳು ಇರುವುದು ಹಳೆಯ ಮೈಸೂರಿನ ಜಿಲ್ಲೆಗಳಲ್ಲಿಯೆ. ಈ ಭಾಗದಲ್ಲಿ ತಲಾ ಹತ್ತು ಎಕರೆಗೂ ಕಡಿಮೆ ಅಚ್ಚುಕಟ್ಟು ಉಳ್ಳ ೯,೨೫೪ ಕೆರೆಗಳನ್ನು ಇದಕ್ಕೆ ಸೇರಿಸಿದರೆ ಈ ಎಲ್ಲ ೨೫,೮೩೫ ಕೆರೆಗಳ ಒಟ್ಟು ಅಚ್ಚುಕಟ್ಟು ಪ್ರದೇಶ ೧೦,೨೭,೩೦೨ ಎಕರೆ ಆಗುತ್ತದೆ. ಆದರೆ ೧೯೮೮ – ೮೯ರಲ್ಲಿ ಈ ಕೆರೆಗಳ ಕೆಳಗೆ ನೀರಾವರಿ ಆಗುತ್ತಿದ್ದ ಪ್ರದೇಶ ಕೇವಲ ೬೨೪,೭೧೭ ಎಕರೆ. ಅಚ್ಚುಕಟ್ಟಿನ ಸುಮಾರು ಶೇ.೬೦ರಷ್ಟು ಮಾತ್ರ ನೀರಾವರಿಯಲ್ಲಿತ್ತು.

ಹಳೆಯ ಮೈಸೂರು ರಾಜ್ಯದ ಒಂಬತ್ತು ಜಿಲ್ಲೆಗಳನ್ನು ಬಿಟ್ಟು, ಕರ್ನಾಟಕದ ಉಳಿದ ಹತ್ತು ಜಿಲ್ಲೆಗಳಲ್ಲಿ, ತಲಾ ಹತ್ತು ಎಕರೆ ಅಥವಾ ಹೆಚ್ಚಿನ ಅಚ್ಚುಕಟ್ಟು ಇದ್ದ ೬೧೮೪ ಕೆರೆಗಳಿದ್ದವು. ತಲಾ ಹತ್ತು ಎಕರೆಗೆ ಕಡಿಮೆ ಅಚ್ಚುಕಟ್ಟು ಇದ್ದ ೪,೪೮೯ ಕೆರೆಗಳಿದ್ದವು. ಒಟ್ಟಾಗಿ ಈ ೧೦,೬೭೩ ಕೆರೆಗಳಿಗೆ ೫೭೯,೧೨೨ ಎಕರೆ ಅಚ್ಚುಕಟ್ಟು ಇತ್ತು. ೧೯೮೮ – ೮೯ರಲ್ಲಿ, ಈ ಎಲ್ಲ ಕೆರೆಗಳ ಕೆಳಗೆ ನೀರಾವರಿಯಾದ ಪ್ರದೇಶ ಕೇವಲ ೧೮೫,೮೯೨ ಎಕರೆಗಳು. ಅಚ್ಚುಕಟ್ಟಿನ ಶೇಕಡಾ ೩೦ರಷ್ಟು ಮಾತ್ರ ನೀರಾವರಿಯಲ್ಲಿತ್ತು.

(ಹೆಕ್ಟೇರುಗಳಲ್ಲಿ)

ಕ್ರ.ಸಂ. / ಜಿಲ್ಲೆ ೪ ಹೆಕ್ಟೇರು ವರೆಗಿನ ಕೆರೆಗಳು ಇತರ ಕೆರೆಗಳು
ಸಂಖ್ಯೆ ಅಚ್ಚುಕಟ್ಟು ಸಂಖ್ಯೆ ಅಚ್ಚುಕಟ್ಟು
೧. ಬೆಂಗಳೂರು ಗ್ರಾಮಾಂತರ ೪೩೫ ೧,೦೦೨ ೧.೦೬೨ ೩೧.೬೨೦
೨. ಬೆಂಗಳೂರು ನಗರ ೯೮ ೨೨೫ ೪೬೧ ೧೧,೩೭೬
೩. ಬೆಳಗಾಂ ೧೧೭ ೨೩೦ ೬೯೪ ೩೦,೦೪೮
೪. ಬಳ್ಳಾರಿ ೪೨ ೮೫ ೧೯೧ ೧೪,೨೦೮
೫. ಬೀದರ್  –  – ೮೬ ೧೫,೯೮೪
೬. ಬಿಜಾಪುರ  –  – ೧೨೫ ೨೩,೯೭೯
೭. ಚಿಕ್ಕಮಗಳೂರು ೧,೧೨೨ ೧,೯೪೫ ೧,೭೪೪ ೨೭,೧೦೦
೮. ಚಿತ್ರದುರ್ಗ ೧೯ ೩೬೩ ೨೮,೪೨೦
೯. ದಕ್ಷಿಣ ಕನ್ನಡ ೧೦೧ ೩೨೮ ೫೭೮ ೫,೨೬೯
೧೦. ಧಾರವಾಡ ೧,೧೨೮ ೧,೮೨೦ ೨,೦೨೪ ೬೩,೨೨೯
೧೧. ಗುಲಬರ್ಗಾ ೭೬ ೧೪೮ ೪೩೧ ೨೧,೫೩೦
೧೨. ಹಾಸನ ೨,೫೦೨ ೫,೩೨೬ ೩,೦೯೭ ೪೮,೫೧೩
೧೩. ಕೊಡಗು ೪೩೪ ೧,೪೩೪ ೭೧೨ ೧೦,೩೧೦
೧೪. ಕೋಲಾರ ೧,೪೮೯ ೬,೫೬೯ ೨,೭೭೪ ೬೦,೧೪೬
೧೫. ಮಂಡ್ಯ ೨೨೪ ೫೦೯ ೭೪೧ ೨೨,೮೦೭
೧೬. ಮೈಸೂರು ೫೫೯ ೮೫೮ ೮೧೦ ೫೨,೪೮೬
೧೭. ರಾಯಚೂರು ೩೩೨ ೭೧೩ ೩೩೧ ೧೫,೭೯೪
೧೮. ಶಿವಮೊಗ್ಗ ೨,೩೭೬ ೫,೩೩೨ ೩,೯೫೨ ೬೯,೧೭೩
೧೯. ತುಮಕೂರು ೪೪೧ ೮೬೩ ೧,೫೫೭ ೬೩,೪೧೩
೨೦. ಉತ್ತರ ಕನ್ನಡ ೨,೨೫೮ ೨,೮೫೧ ೧,೦೧೨ ೧೬,೧೧೦
  ೧೩,೭೪೩ ೩೦,೨೫೭ ೨೨,೭೬೫ ,೧೧,೫೧೫
  (೭೫,೬೪೨ ಎಕರೆ) (೧೫,೨೮,೭೧೭ ಎಕರೆ)

ಅಷ್ಟು ವಿಸ್ತಾರವಾದ ಅಚ್ಚುಕಟ್ಟು ಪ್ರದೇಶ, ಅದರಲ್ಲೂ ವಿಶೇಷವಾಗಿ ಕರ್ನಾಟಕ ಉತ್ತರದ ಒಣವಲಯದಲ್ಲಿ ನೀರಾವರಿಗೆ ಒಳಪಟ್ಟಿರಲಿಲ್ಲ ಎನ್ನುವುದಕ್ಕೆ ಅನೇಕ ಕೆರೆಗಳ ಜಲಾನಯನ ಪ್ರದೇಶದಲ್ಲಿ ಸಾಕಷ್ಟು ಮಳೆ ಆಗದಿರುವುದೇ ಕಾರಣವಿರಬಹುದು.

ಅಲ್ಲದೆ ಕೆರೆಗಳಲ್ಲಿ ಹೂಳು ತುಂಬಿ ಅವುಗಳ ಜಲಸಂಗ್ರಹಣಾ ಸಾಮರ್ಥ್ಯ ಕಡಿಮೆ ಆಗಿರುವುದೂ ಒಂದು ಮುಖ್ಯ ಅಂಶವಾಗಿರಬಹುದು.

ಮಳೆನೀರು ಹರಿಯುವ ಇಳಿಮೇಡು ಪ್ರದೇಶದ ಅಧ್ಯಯನದ ಅಗತ್ಯ:

೩೬,೫೯೮ ಕೆರೆಗಳ ಕೆಳಗಿನ ಅಚ್ಚುಕಟ್ಟು ಪ್ರದೇಶದಲ್ಲಿ ಶೇ.೫೦ರಷ್ಟು ಮಾತ್ರ ನೀರಾವರಿಯಲ್ಲಿದೆ. ಈ ಸಂಗತಿಯನ್ನು ಗಮನಿಸಿದಲ್ಲಿ ಯಾವುದೇ ಹೊಸ ಕಾಮಗಾರಿಯನ್ನು ನಿರ್ಮಿಸಲು ಕೈಗೆತ್ತಿಕೊಳ್ಳುವುದಕ್ಕೆ ಮೊದಲು ಪ್ರತಿಯೊಂದು ಜಲಾನಯನ (ಇಳಿಮೇಡು) ಪ್ರದೇಶದಲ್ಲಿ ಹಾಲಿ ಇರುವ ಎಲ್ಲ ಕೆರೆಗಳ ಕೂಲಂಕಷವಾದ, ವಿವರವಾದ ಅಧ್ಯಯನ ಮಾಡುವುದು ಅಗತ್ಯ.

ನೀರಿನ ಪರಿಣಾಮಕರವಾದ ಮಿತ ಬಳಕೆಗಾಗಿ ಆರಿಸಿದ ಕೆಲವು ಕೆರೆಗಳ ಪುರ್ನವ್ಯವಸ್ಥೆಗೆ ಹಾಗೂ ಅವುಗಾಳ ಕೆಳಗಿನ ಕಾಲುವೆ ಜಾಲಗಳನ್ನು ಆಧುನಿಕಗೊಳಿಸುವುದಕ್ಕೆ ಒಂದು ಯೋಜನೆಯನ್ನು ರೂಪಿಸುವುದು ಅಗತ್ಯ. ಸಣ್ಣದೂ ದೊಡ್ಡದೂ ಹೊಸ ಜಲಾಶಯ ನಿರ್ಮಿಸಲು ನಮಗೆ ಉಳಿದಿರುವ ಸೂಕ್ತ ಸ್ಥಳಗಳು ತೀರ ಅಲ್ಪ. ಆದ್ದರಿಂದ ಅಂಥ ಅಧ್ಯಯನ ಮತ್ತಷ್ಟು ಅವಶ್ಯಕ. ಅಲ್ಲದೆ ಹೊಸ ಜಾಲಗಳಿಗೆ ಬೇಕಾಗುವ ಅಪಾರ ಬಂಡವಾಳ ಹೂಡಿಕೆಯೂ ಪರಿಮಿತಿ ಹಾಕುವ ಇನ್ನೊಂದು ಅಂಶ. ನಮ್ಮ ಜನಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ತಲವಾರು ಬೇಸಾಯ ಭೂಮಿ ಕುಗ್ಗುತ್ತಿದೆ ಮತ್ತು ನೀರಾವರಿ ಪ್ರದೇಶ ಹೆಚ್ಚಾಗಿದ್ದರೂ ತಲಾವಾರು ಪ್ರದೇಶ ಯಾವುದೇ ಹೆಚ್ಚಳವನ್ನು ತೋರಿಸಿಲ್ಲ. ಕೆಳಗಿನ ತಃಖ್ತೆ[3] ಈ ಅಂಶಗಳನ್ನು ನಿಚ್ಚಳವಾಗಿ ಎತ್ತಿ ತೋರಿಸುತ್ತದೆ.

  ೧೯೬೧ ರಲ್ಲಿ ಇದ್ದಂತೆ ೧೯೮೧ ರಲ್ಲಿ ಇದ್ದಂತೆ
ಜನಸಂಖ್ಯೆ ೨,೩೫,೮೬,೭೭೨ ೩,೭೦,೪೩,೪೫೧
ಬೇಸಾಯದ ಪ್ರದೇಶ (ಎಕರೆಗಳಲ್ಲಿ) ೨,೪೦,೧೯,೩೦೯ ೨,೫೯,೭೭,೩೬೭
ನೀರಾವರಿ ಪ್ರದೇಶ (ಎಕರೆಗಳಲ್ಲಿ) ೨೧,೫೨,೪೮೫ ೩೪,೦೧,೮೩೨
ತಲಾವರು ಬೇಸಾಯ ಪ್ರದೇಶ ೧.೦೧ ೦.೭೦
ತಲಾವಾರು ನೀರಾವರಿ ಪ್ರದೇಶ ೦.೦೯ ೦.೦೯
ಬೇಸಾಯ ಪರದೇಶದಲ್ಲಿನ ನೀರಾವರಿ ಪ್ರದೇಶದ ಶೇಕಡ ಪ್ರಮಾಣ ೮.೯೦ ೧೩.೦೯

೧೯೬೧ ರಿಂದ ೧೯೮೧ ರ ವರೆಗಿನ ಎರಡು ದಶಕಗಳಲ್ಲಿ, ಕರ್ನಾಟಕದ ಜನಸಂಖ್ಯೆ ಮಾತ್ರ ಸುಮಾರು ಶೇ. ೫೭ ರಷ್ಟು ಹೆಚ್ಚಿದೆ. ಆದರೆ ಬೇಸಾಯದ ಪ್ರದೇಶ ಕೇವಲ ಶೇ ೮ ರಷ್ಟು ಮಾತ್ರ ಹೆಚ್ಚಿದೆ ಎನ್ನುವುದನ್ನು ಈ ತಃಖ್ತೆ ಸ್ಪಷ್ಟವಾಗಿ ತೋರಿಸುತ್ತದೆ. ಆದರೆ ನೀರಾವರಿ ಪ್ರದೇಶವೇನೋ ಸುಮಾರು ಶೇ ೫೮ ರಷ್ಟು ಹೆಚ್ಚಿದೆ ಅಂದರೆ, ಹೆಚ್ಚಾದ ಜನ ಸಂಖ್ಯೆಗೆ ನಾವು ಆಹಾರ ಒದಗಿಸಲು ಸಾಧ್ಯವಾಗಿದ್ದರೆ ಅದಕ್ಕೆ ಮುಖ್ಯ ಕಾರಣ ನೀರಾವರಿಗೆ ಒಳಪಡಿಸಲಾದ ಪ್ರದೇಶ ಹೆಚ್ಚಾಗಿರುವುದು. ಜನಸಂಖ್ಯೆ ತೀವ್ರವೇಗದಲ್ಲಿ ಹೆಚ್ಚಾಗುತ್ತಿದೆ. ಭಾರಿ ನೀರಾವರಿ ಯೋಜನೆಗಳ ಹಾಗೂ ಅವುಗಳ ಕಳೆಗಣ ಕಾಲುವೆಗಳ ನಿರ್ಮಾಣ ಹಾಗೂ ಅಭಿವೃದ್ಧಿಯಲ್ಲಿ ಸಮಸ್ಯೆಗಳು ಎದುರಾಗುತ್ತಿವೆ. ಈ ದೃಷ್ಟಿಯಿಂದ ಹಾಲಿ ಇರುವ ಹಳೆಯ ಕೆರೆಗಳ ಪುನರ್‌ವ್ಯವಸ್ಥೆಗೂ ಅವುಗಳ ಕೆಳಗೆ ನೀರಿನ ಮಿತಬಳಕೆಗೂ ನಮ್ಮ ಎಲ್ಲ ಸಾಧನ ಸಂಪತ್ತನ್ನು ಕ್ರೋಢೀಕರಿಸುವುದು ಅವಶ್ಯವಾಗಿದೆ.

 – – – –
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1]ಮೈನರ್ ಇರಿಗೇಷನ್ ಸ್ವಾಟಿಸ್ಟಿಕ್ಸ್ ಆಟ್ ಗ್ಲಾನ್ಸ್, ೧೯೮೯, ಮುಖ್ಯ ಇಂಜನಿಯರ್ ಸಣ್ಣ ನೀರಾವರಿ, ಬೆಂಗಳೂರು.

[2]ಮೈನರ್ ಇರಿಗೇಷನ್ ಸ್ಟಾಟಿಸ್ಟಿಕ್ಸ್ ಆಟ್ ಗ್ಲಾನ್ಸ್‌೧೯೮೯ (ಮೊದಲೆ ಹೆಸರಿಸಿದ್ದು)

[3]ಜನಸಂಖ್ಯಾ ಅಂಕಿಗಳು, ಕರ್ನಾಟಕ ರಾಜ್ಯ ಗೆಜಟಿಯರ್, ಭಾಗ-೧,೧೯೮೨ ಪುಟ ೩೯೨ ನವು.