ಹೂಳು ತೆಗೆಯುವುದು:

ಮಳೆಗಾಲದ ಉರುಬಿನಲ್ಲಿ ಹೊಳೆ ಭಾರಿ ಪ್ರಮಾಣದ ಹೂಳನ್ನು ತರುತ್ತದೆ. ಇದು ನೀರಿನೊಂದಿಗೆ ತೂಬಿನ ಮೂಲಕ ಕಾಲುವೆಗಳಿಗೆ ಸಾಗಿ ಹೋಗುತ್ತದೆ. ಪ್ರವಾಹದ ಬಿರುಸು ಇಳಿದಂತೆ ಹೂಳು ನೀರಿನಿಂದ ಬೇರ್ಪಟ್ಟು ಕಾಲುವೆಯ ಅಡಿಯಲ್ಲಿ ಪದರಗಟ್ಟುತ್ತದೆ. ಮುಂದಿನ ಮಳೆಗಾಲ ಮೊದಲಾಗುವುದಕ್ಕೆ ಮುಂಚೆಯೆ ಇದನ್ನು ತೆಗೆದುಹಾಕಬೇಕು. ನೆರೆಯ ಉಕ್ಕಿನಲ್ಲಿ ನೀರು ಈ ತೊಂದರೆ ಉಂಟು ಮಾಡುತ್ತಿತ್ತು. ಬೇಸಾಯ ಮುಗಿದನಂತರ ಹೊಳೆ ಮೆಲ್ಲನೆ ಹರಿಯುವಾಗ ನೀರನ್ನೆ ನಿವಾರಣೋಪಾಯ ಸಾಧನವಾಗಿ ಮಾಡಿಕೊಳ್ಳಲಾಗುತ್ತಿತ್ತು. ಮೊದಲು ಭಾಗಶಃ ಮಾತ್ರ ತೆರೆದಿದ್ದ ತೂಬನ್ನು ಪೂರ್ಣ ತೆಗೆಯಲಾಗುತ್ತಿತ್ತು. ನೀರು ಕಾಲುವೆಯಲ್ಲಿ ನುಗ್ಗಿ ಬಂದು ಹೂಳನ್ನು ಕೊಚ್ಚಿಕೊಂಡು ಹೋಗುತ್ತಿತ್ತು. ಇದರಿಂದ ಹೂಳು ತೆಗೆಯಲು ಪಡಬೇಕಾಗಿದ್ದ ಎಷ್ಟೊ ಶ್ರಮ ತಪ್ಪುತ್ತಿತ್ತು.

ಕೆರೆಯ ಅಂಗಳದಿಂದಲೂ ಹೂಳು ತೆಗೆಯಲು ಇದೇ ಕ್ರಮವನ್ನು ಅನುಸರಿಸಲಾಗುತ್ತಿತ್ತು. ಆದರೆ ಆರಿಸಿಕೊಳ್ಳುತ್ತಿದ್ದ ಕಾಲ ಬೇರೆ, ಮಳೆಗಾಲದ ಮುಕ್ತಾಯಕ್ಕೆ ಬದಲಾಗಿ ಆರಂಭವನ್ನೆ ಆರಿಸಿಕೊಳ್ಳಲಾಗುತ್ತಿತ್ತು. ಮಳೆ ಆರಂಭವಾಯಿತೊ ಇಲ್ಲವೊ ರೈತರು ಕೆರೆಯಲ್ಲಿ ತೂಬಿನ ತಲೆಯ ಬಳಿ ಸಾಲುಗಟ್ಟಿ ನಿಲ್ಲುತ್ತಿದ್ದರು (ಮಳೆಗಾಲದ ಆರಂಭವಾದ್ದರಿಂದ ನೀರಿನ ಮಟ್ಟ ಕಡಿಮೆ). ಕೆರೆಯಲ್ಲಿ ನೀರು ಬಗ್ಗಡವಾಗುವ ವರೆಗೂ ಚಾಲಾಡುತ್ತಿದ್ದರು. ನೀರಿನ ಜೊತೆಗೆ ಹೂಳು ಆ ಬಗ್ಗಡದಲ್ಲಿ ತೂಬಿನ ಮೂಲಕ ಹೊರಟು ಹೋಗುತ್ತಿತ್ತು. ಇದು ಭಾಗಶಃ ಪರಿಹಾರವಷ್ಟೆ ಆದರೂ ತೂಬಿನಲ್ಲಿ ಹೂಳು ಇರದಂತೆ ಸಹಾಯಕವಾಗಿತ್ತು.

ಕೆರೆಗೆ ನೀರು ತರುವ ಹೊಳೆ ಭಾರಿ ಪ್ರಮಾಣದ ಹೂಳನ್ನು ತಂದಾಗ ಅನುಸರಿಸುತ್ತಿದ್ದ ಉಪಾಯ, ಹೊಳೆಗೆ ಅಡ್ಡಲಾಗಿ ಅಣೆಕಟ್ಟೆಯಂತಹ ಒಂದು ಒರಟುಗಲ್ಲಿನ ಕಟ್ಟೆ ಕಟ್ಟುವುದು, ಇದರ ಪರಿಣಾಮವಾಗಿ ನೀರಿನ ವೇಗ ತಗ್ಗುತ್ತಿತ್ತು. ಹೂಳೂ ಅಲ್ಲೆ ನಿಲ್ಲುತ್ತಿತ್ತು. ಈ ಅಪೇಕ್ಷಣೀಯ ಪರಿಣಾಮವನ್ನು ಮುಂದುವರಿಸಬೇಕಾದಲ್ಲಿ ಕಟ್ಟೆಯನ್ನು ಒಳ್ಳೆ ದುರಸ್ತಿ ಸ್ಥಿತಿಯಲ್ಲಿ ಇಟ್ಟಿರುವುದು ಅಗತ್ಯ. ಹೂಳನ್ನು ದೂರವಿರಿಸುವ ಈ ಉಪಾಯಗಳನ್ನೆಲ್ಲ ಅಸಡ್ಡೆ ಮಾಡಲಾಗಿ ಕೆರೆ ಅಂಗಳಗಳೆಲ್ಲ ಹೂಳಿಗೆ ನೆಲೆಗಳಾದವು.

ಬಹುಪಾಲು ಸಣ್ಣ ಕೆರೆಗಳಿಗೆ ನೀರು ಬರುತ್ತಿದ್ದುದು, ಸುತ್ತಮುತ್ತಲ ದಿಣ್ಣೆಗಳಿಂದ ಹಾಗೂ ಅವುಗಳ ಕೆಳಗೆ ನೀರಾವರಿಯಲ್ಲಿದ್ದ ಭತ್ತದ ಗದ್ದೆ ಅಥವಾ ತೋಟಗಳಿಂದ. ಆದರೆ ಗುಡ್ಡಗಳ ಪಕ್ಕಗಳಿಂದ ಮಳೆಯ ನೀರನ್ನೆಲ್ಲ ಸಾಗಿಸಿಕೊಂಡು ಬರುತ್ತಿದ್ದ ಉದ್ದನೆಯ ಅಂಕುಡೊಂಕಾದ ನಾಲೆಗಳಿಂದ ಅನೇಕ ಕೆರೆಗಳಿಗೆ ಭಾಗಶಃ ನೀರು ಒದಗುತ್ತಿತ್ತು.

ಅಲ್ಲಲ್ಲಿ ಮಳೆಬಿದ್ದಾಗ ಮಾತ್ರ ಹರಿಯುತ್ತಿದ್ದ ನೀರಿನ ಜಾಡು ಅಥವಾ ಸಣ್ಣ ಹೊಳೆಗಳಿಗೆ ಅಡ್ಡಗಟ್ಟೆ ಹಾಕಿ ಅಲ್ಲೇ ನಿಲ್ಲುತ್ತಿದ್ದ ನೀರನ್ನು ಅದೇ ರೀತಿ ಕೆರೆಗಳಿಗಾಗಿ ಬಳಸಿಕೊಳ್ಳಲಾಗುತ್ತಿತ್ತು. ಕೆಲವೊಮ್ಮೆ ಒಂದೇ ಒಂದು ಕೆರೆಗೆ ಇಂಥ ಹಲವು ಬಗೆಗಳಲ್ಲಿ ನೀರು ಒದಗುತ್ತಿತ್ತು. ಅವೆಲ್ಲವನ್ನೂ ಒಳ್ಳೆ ದುರಸ್ತಿಯಲ್ಲಿ ಇಟ್ಟಿರುತ್ತಿದ್ದರು. ಅದೇ ರೀತಿ ನೀರಾವರಿ ಆಗಬೇಕಾದ ಭೂಮಿಯು ಆಗಾಗ ಕೆರೆಯಿಂದ ದೂರ ಇರುತ್ತಿತ್ತು. ಕಾಲುವೆಗಳೆಲ್ಲವನ್ನೂ ಒಳ್ಳೆ ದುರಸ್ತಿಯ ಸ್ಥಿತಿಯಲ್ಲಿ ಇಳಿಸಲಾಗುತ್ತಿತ್ತು. ಏಕೆಂದರೆ ಬೆಳೆಯ ಯಶಸ್ಸಿಗೆ ಅದೇ ಆಧಾರ.

ನಮ್ಮ ಹಿರಿಯರ ವಿವೇಕ ನಾಡಿಗೆ ಅತ್ಯಂತ ಉಪಯುಕ್ತವೂ ಶ್ಲಾಘವೂ ಆದ ಕೆಲವು ಕೆರೆಗಳನ್ನು ನೀಡಿತ್ತು. ಕೆಲವು ಕೆರೆಗಳು ಬೃಹದಾಕಾರದವು, ಅದರೂ ಅವುಗಳಲ್ಲಿ ದಕ್ಷತೆ ಬಾಳಿಕೆ ಎರಡೂ ಅಗತ್ಯಗಳನ್ನು ಜೊತೆಗೂಡಿಸಿಕೊಳ್ಳುವ ಹಿರಿಮೆ ಇತ್ತು.

ಸೋಲಿನ ನಂತರ ಗೆಲವು:

ಅವರ ಎಲ್ಲ ಯೋಜನೆಗಳೂ ಸದಾಕಾಲ ಯಶಸ್ವಿಯಾಗಿದ್ದವು ಎಂದೂ ಭಾವಿಸಬಾರದು. ಅವರ ಎಷ್ಟೊ ಪ್ರಯೋಗಗಳಲ್ಲಿ ಕೆಲವು ಸೋತದ್ದೂ ಉಂಟು. ಉದಾಹರಣೆಗೆ ತುಂಗಭದ್ರೆಗೆ ಅಡ್ಡಲಾಗಿ ಕಟ್ಟಲಾದ ಮೂರು ಕಟ್ಟೆಗಳೂ ಸೋತವು.[1] ಕಾವೇರಿ ಮತ್ತು ಅದರ ಉಪನದಿಗಳ ಮೇಲಣ ಕಟ್ಟೆಗಳ ಬಗ್ಗೆ ರೈಸ್ ಹೇಳುತ್ತಾರೆ:

“ಈಗ ಬಳಕೆಯಲ್ಲಿರುವ ಅಣೆಕಟ್ಟುಗಳೇ ಅಲ್ಲದೆ ಬಹುಶಃ ಅವಕ್ಕೆ ಮೂರರಷ್ಟು ಹೆಚ್ಚಿನ ಸಂಖ್ಯೆಯ ಕಟ್ಟೆಗಳ ಅವಶೇಷಗಳು ನದಿಗಳಲ್ಲಿ ನೀರು ಕಡಿಮೆ ಆದಾಗ ಈಗಲೂ ಗೋಚರವಾಗುತ್ತವೆ. ಕೆಲವು ಕಡೆ ಹಳೆಯ ನಾಲೆಗಳನ್ನು ತೋಡಿದ್ದು ತೋರಿಬರುತ್ತದೆ.

ಇನ್ನು ಕೆಲವು ಕಡೆ ನಾಲೆಗಳನ್ನು ತೋಡಿದಂತೆ ಕಾಣಿಸುವುದಿಲ್ಲ. ಆದ್ದರಿಂದ ಈಗಲೂ ಬಳಕೆಯಲ್ಲಿರುವ ಕಾಮಗಾರಿಗಳ ನಿರ್ಮಾಣದಿಂದ ಫಲಿತವಾದ ಯಶಸ್ಸು ದೊಡ್ಡ ಪ್ರಮಾಣದ ಸೋಲುಗಳ ನಂತರವೇ ಎನ್ನುವುದು ಸ್ಪಷ್ಟ. ಇವು ಸೋಲುಗಳು ಆದರೂ ನಿರ್ಮಾತೃಗಳು ತೋರಿಸಿದ ಛಲ ಕಡಿಮೆ ಗಣನೆಯದೇನಲ್ಲ. ಅದು ಹಿಂದಿನ ಕಾಲದಲ್ಲಿ ನೀರಾವರಿ ಕೆಲಸಗಳಿಗೆ ನೀಡಲಾಗುತ್ತಿದ್ದ ಉನ್ನತ ಮೌಲ್ಯವನ್ನು ತೋರಿಸುತ್ತದೆ.”[2]

ಇಂದಿನ ನಿರ್ಮಾಣ ಸ್ಥಿತಿ:

ಬಹುಪಾಲು ಈ ಕೆರೆಗಳೆಲ್ಲ ಸಣ್ಣ ರಚನೆಗಳು, ಒಂದು ಬೆಳೆಗೆ ಬಳಸುವಂಥವು. ಬೇಸಿಗೆಗಾಗಿ ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸಿ ಇಡುವ ವಿಚಾರ ಅಷ್ಟು ಬಳಕೆಯಲ್ಲಿರಲಿಲ್ಲ. ಬಹುಶಃ ಅಗತ್ಯವೂ ಇರಲಿಲ್ಲ. ಕೆಲವು ಸಂದರ್ಭಗಳಲ್ಲಿ ಮಾತ್ರ ಅವುಗಳನ್ನು ಕಟ್ಟಿದ್ದು ಜನಕ್ಕೂ ಜಾನುವಾರುಗಳಿಗೂ ನೀರು ಒದಗಿಸಲು. ಇವುಗಳದು ನೀರಾವರಿಗೆ ನೀರು ಒದಗಿಸುವುದು ಎರಡನೆಯ ಗುರಿ ಅಷ್ಟೆ. ೧೯ನೆಯ ಶತಮಾನದಲ್ಲಿ ಜನಸಂಖ್ಯೆಯ ಹೆಚ್ಚಳದ ಪರಿಣಾಮವಾಗಿ ಅಗ ಇದ್ದ ಹಳೆಯ ಕೆರೆಗಳ ಜೀರ್ಣೋದ್ಧಾರ ಮಾಡಿ, ಅವುಗಳ ಸಾಮರ್ಥ್ಯವನ್ನು ಹೆಚ್ಚಿಸುವ ಹಾಗೂ ಹೊಸ ರಚನೆಗಳನ್ನು ಕೈಗೊಳ್ಳುವ ಅವಶ್ಯಕತೆಯ ಅರಿವಾಯಿತು. ಅನುಸರಿಸಲಾದ ನಿರ್ಮಾಣ ಹಾಗೂ ವಿನ್ಯಾಸ ವಿಧಾನಗಳು ಹಿಂದಿನ ರೂಢಿ ಹಾಗೂ ಅನುಭವವನ್ನು ಆಧರಿಸಿದ್ದವು.

ಈ ಶತಮಾನದಲ್ಲಿ ಭೂಯಾಂತ್ರಿಕತೆ (ಸಾಯಿಲ್ ಮೆಕ್ಯಾನಿಕ್ಸ್)ಯ ವಿಜ್ಞಾನ ಅಭಿವೃದ್ಧಿಯಾಗಿದೆ. ಮಣ್ಣಿನ ಗುಣಗಳ ತೃಪ್ತಿಕರ ವಿಶ್ಲೇಷಣೆಯ ವಿಧಾನ ತಂತ್ರಗಳು ಉತ್ತಮವಾಗಿವೆ. ಮಣ್ಣನ್ನು ಒತ್ತಿ ಅಡಕಮಾಡಲು ಹಾಗೂ ಅವಶ್ಯವಾದ ಮಣ್ಣನ್ನು ಏರಿಯ ಮೇಲೆ ವೇಗವಾಗಿ ಒಟ್ಟಲು ಯಂತ್ರಸಾಧನೆಗಳು ರೂಪಿತವಾಗಿವೆ. ಅಂತೆಯೇ ಮಣ್ಣು ಏರಿಯ ನಿರ್ಮಾಣ ಒಂದು ಕರಾರುವಾಕ್ಕಾದ ಸುವ್ಯವಸ್ಥಿತವಾದ ಕಾರ್ಯಚರಣೆಯಾಗಿದೆ. ಕಟ್ಟೆ ಕಟ್ಟಲು ಉಪಯೋಗಿಸುವ ಸಾಮಗ್ರಿ ಹಿಂದೆ ಇದ್ದಂತೆಯೇ ಇದೆ. ಆದರೂ ನಿರ್ಮಾಣ ತಂತ್ರ ಮತ್ತು ಬಳಸುವ ಮಣ್ಣಿನ ಗುಣಗಳ ಹಾಗೂ ವರ್ತನೆಯ ಬಗ್ಗೆ ನಿಶ್ಚಿತವಾದ ಜ್ಞಾನ, ಇವು ಹೆಚ್ಚು ದೊಡ್ಡದಾದ ಎತ್ತರವಾದ ಕಟ್ಟೆಗಳ ರಚನೆಯನ್ನು ಹೆಚ್ಚು ಸುರಕ್ಷಿತಗೊಳಿಸಿವೆ, ಕಾರ್ಯಸಾಧ್ಯಗೊಳಿಸಿವೆ.

ಅಣೆಕಟ್ಟುಗಳು:

ಈ ಅಧ್ಯಯನ ಮೂಲತಃ ಕೆರೆನಿರ್ಮಾಣಕ್ಕೆ ಸಂಬಂಧಿಸಿದ್ದು. ಅದರೂ ನಮ್ಮ ಪೂರ್ವಿಕರು ಕಟ್ಟಿದ ರೀತಿಯಲ್ಲಿ ಅಣಿಕಟ್ಟುಗಳ ನಿರ್ಮಾಣವನ್ನು ಪರಿಶೀಲಿಸುವುದು ಅಪೇಕ್ಷಣೀಯ. ಏಕೆಂದರೆ ಲಭ್ಯವಿದ್ದ ಸಾಮಗ್ರಿಗಳಿಂದಲೇ ಹೊಳೆಗೆ ಅಡ್ಡಗಟ್ಟಿ ನಿರ್ಮಿಸುವುದನ್ನು ಅವರು ಹೇಗೆ ನಿಭಾಯಿಸಿದರು ಎಂಬುದರ ಬಗ್ಗೆ, ಅದರಿಂದ ನಮಗೆ ಒಂದು ಕಲ್ಪನೆ ದೊರಕುತ್ತದೆ. ಹೊಳೆಯ ಪ್ರವಾಹಜಲವನ್ನು ಕಾಲುವೆಗಳ ಮೂಲಕ ಪಕ್ಕದ ದಡಗಳಲ್ಲಿನ ಭೂಮಿಗೆ ತಿರುಗಿಸಲು ಅನುಕೂಲವಾಗುವಂತೆ ಅದಕ್ಕೆ ಅಡ್ಡವಾಗಿ ಕಟ್ಟಲಾದ ಅಡ್ಡಗಟ್ಟೆಯೇ ಅಣೆಕಟ್ಟು, ತೀವ್ರ ಇಳಿಜಾರಿನ ಭೂಪ್ರದೇಶ ಹಾಗೂ ನದಿಯ ಪಾತ್ರದ ಅತಿ ಕಡಿಮೆ ಇಳಿಜಾರು ಇವುಗಳಿಂದಾಗಿ, ನದಿಗೆ ಜೋಡಿಸುತ್ತಿದ್ದ ನಾಲೆಗಳ ಸುತ್ತಲಿನ ನೀರಾವರಿ ಭೂಮಿ ತುಂಬ ಕಡಿಮೆ ವಿಸ್ತಾರದ್ದಾಗಿತ್ತು.

ತುಂಗಭದ್ರೆ ಮತ್ತು ಕಾವೇರಿ ಮೇಲಣ ಈ ಅನೆಕಟ್ಟುಗಳು ಕಲ್ಲು ಗುಂಡುಗಳ ರಾಶಿಯೇ ಆಗಿದ್ದವು. ದೊಡ್ಡ ಬಂಡೆಗಳ ನಡುವಣ ಸುಂದುಗಳನ್ನು ಸಣ್ಣ ಹಾಗೂ ದಪ್ಪ ಗುಂಡು ಕಲ್ಲುಗಳಿಂದ ತುಂಬಲಾಗುತ್ತಿತ್ತು. ಕಲ್ಲುಗಳು ಚೆನ್ನಾಗಿ ಕಡೆಯಲಾದವು. ನಿಯತವಾದ ಸಾಲುಗಳಲ್ಲಿ ಜೋಡಿಸಲಾಗುತ್ತಿತ್ತು. ಪ್ರತಿಸಾಲು ಅದರ ಮೇಲಿನದಕ್ಕಿಂತ ಸುಮಾರು ೨ – ೫ ಅಡಿ ಮುಂಚಾಚಿರುತ್ತಿತ್ತು. ಪ್ರವಾಹಕಾಲದಲ್ಲಿ ಅಣೆಕಟ್ಟಿನ ಮೇಲೆ ಹರಿಯುವ ನೀರಿನ ಆಳವನ್ನು ಕಡಿಮೆ ಮಾಡುವುದು ಹಾಗೂ ಇತರ ಕಾಲಗಳಲ್ಲಿ ಹೊಳೆಯನ್ನು ನೇರವಾಗಿ ಕಾಲುವೆಗೆ ಬಿಡುವ ಉದ್ದೇಶದಿಂದ ಅಣೆಕಟ್ಟನ್ನು ಡೊಂಕಾದ ಗೆರೆಯಲ್ಲಿ ಕಟ್ಟಲಾಗುತ್ತಿತ್ತು.

ಹಿಂಬದಿಯ ಇಳಿಜಾರು ಹಾಗೂ ಅಣೆಕಟ್ಟಿನ ಕಲ್ಲುಕಟ್ಟಡದ ಹೊದಿಕೆ ‘ಸೂಜಿಕಟ್ಟು’ ಎಂಬ ಅದರ ಹೆಸರೇ ಸೂಚಿಸುವಂತೆ ಸೂಕ್ಷ್ಮವಾದ ಸೂಜಿ ಕೆಲಸದಂಥ ಕಲ್ಲು ಕೆಲಸವಾಗಿರುತ್ತಿತ್ತು. ಅಣೆಕಟ್ಟಿನ ಒಡಲು ಅಥವಾ ಹೃದಯ ಭಾಗಕ್ಕೆ “ನಾರಾಯಣಕಟ್ಟು” ಎಂದು ಹೆಸರು. ಅದು ಭಾರಿ ಕಲ್ಲುಗಳಿಂದ ಆದುದು. ಅತಿ ದೊಡ್ಡ ಕಲ್ಲನ್ನು ತಲೆಯ ಮೇಲೆ ಟೋಪಿಕಲ್ಲಾಗಿ ಇರಿಸಲಾಗುತ್ತಿತ್ತು.[3]

ತುಂಗಭದ್ರೆಗೆ ಅಡ್ಡಲಾಗಿ ವಿಜಯನಗರದ ಅರಸರು ಅನೇಕ ಅಣೆಕಟ್ಟುಗಳನ್ನು ಕಟ್ಟಿಸಿದ್ದಾರೆ. ಅವುಗಳಲ್ಲಿ ಹನ್ನೆರಡು ಇನ್ನೂ ಇವೆ. ಮೂರು ಅಣೆಗಳು ತುಂಗಭದ್ರಾ ಜಲಾಶಯದಲ್ಲಿ ಮುಳುಗಡೆಯಾಗಿವೆ. ಆ ಅಣೆಕಟ್ಟುಗಳಿಂದ ನೀರಾವರಿಯಾಗುತ್ತಿದ್ದ ಪ್ರದೇಶ ಜಲಾಶಯದಿಂದಲೇ ನೇರವಾಗಿ ನೀರು ಪಡೆಯುತ್ತಿವೆ. ಈ ಅಣೆಗಳ ಸ್ಥಳದ ಅಯ್ಕೆ ಅತ್ಯಂತ ವಿವೇಚನಾಪೂರ್ಣವಾಗಿತ್ತು.

ಕಾಲುವೆಗಳನ್ನು ಪುರ್ಣ ಕೌಶಲದಿಂದ ರೂಪಿಸಲಾಗಿದೆ. ಭಾರಿ ಬಂಡೆಗಳನ್ನು ಒರಟುಕಲ್ಲುರಾಶಿಗಳನ್ನು ಒಂದರ ಮೇಲೊಂದರಂತೆ ಗಾರೆ ಸಿಮೆಂಟು ಏನೂ ಇಲ್ಲದೆ ಒಟ್ಟಿ, ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಕೆಲವು ಅಣೆಗಳಲ್ಲಿ ಕಲ್ಲುಗಳನ್ನು ಒಗ್ಗೂಡಿಸಿ ಇಡಲು ಕಲ್ಲು ಹಿಡಿಗೈಗಳನ್ನು ಗೂಟಗಳನ್ನು ಉಪಯೋಗಿಸಲಾಗಿದೆ. ಕೆಲವು ಅಣೆಗಳಲ್ಲಿ ಕಲ್ಲು ಹಿಡಿಕೈಗಳಿಗೆ ಬದಲಾಗಿ ಕಬ್ಬಿಣದ ಹಿಡಿಕೈಗಳನ್ನು ಬಳಸಲಾಗಿದೆ. ಹಂಪೆಯ ಬಳಿಯ ತುರ್ತು ಅಣೆಕಟ್ಟು ವಿನಾ ಬೇರೆ ಯಾವುದೂ ನದಿಗೆ ಅಡ್ಡನೇರವಾಗಿ ಕಟ್ಟಲಾಗಿಲ್ಲ. ಅಣೆಗಳು ಕರ್ಣರೇಖೆಯಲ್ಲಿವೆ ಅಥವಾ ಅಂಕು ಡೊಂಕಾಗಿವೆ. ನದಿಯ ಪಾತ್ರದಲ್ಲಿನ ಕಲ್ಲು ದಿಣ್ಣೆಗಳನ್ನು, ಸಣ್ಣ ದ್ವೀಪಗಳನ್ನು ಅಥವಾ ನದಿಯಲ್ಲಿರುವ ಭಾರಿ ಬಂಡೆಗಳನ್ನು ತಳಪಾಯವಾಗಿ ಬಳಸಿಕೊಂಡು ಅಣೆಗಳನ್ನು ಹೀಗೆ ಡೊಂಕುಡೊಂಕಾಗಿ ಕಟ್ಟಲಾಗಿದೆ.[4]

ಅಂಥ ನಿರ್ಮಾಣದ ಸ್ಥಿರತೆಗೆ ಆಧಾರ, ಸಾಮಗ್ರಿಗಳ ಗಾತ್ರ ಹಾಗೂ ಸ್ಥಾನ ಅಗಿತ್ತೇ ವಿನಾ ಕಾಮಗಾರಿಯ ಸಮರೂಪ ಮತ್ತು ಸುಸಂಬದ್ಧತೆ ಅಲ್ಲ ಎನ್ನಲಾಗಿದೆ. ಈ ಅಣಿಕಟ್ಟುಗಳನ್ನು ಕಲ್ಲುಕಟ್ಟೆ ಅಥವಾ ಗೋಡೆಗಳಂತೆ ಕಟ್ಟಲಾಗಿದ್ದು, ಭಾರಿ ಪ್ರವಾಹ ಬಂದಾಗ ನೀರು ಅವುಗಳ ಮೇಲೆ ಹರಿದುಹೋಗುತ್ತಿತ್ತು. ದೊಡ್ಡ ಹೊಳೆಗಳ ಮೇಲೆ ಪ್ರವಾಹದ ನೀರು ಮೇಲೆ ಹರಿಯುವುದನ್ನು ತಡೆದು ಕೊಳ್ಳುವಂಥ ಯಾವುದೇ ಪಕ್ಕಾ ನಿರ್ಮಾಣವು ಖಂಡಿತವಾಗಿಯೂ ಭಾರಿಯಾದದು ಹಾಗೂ ದುಬಾರಿಯಾದುದು. ಬಹುಶಃ ಹಣಕಾಸಿನ ಎಣಿಕೆ ಹಾಗೂ ಕಟ್ಟೆಯ ಮೇಲೆ ನೀರು ಹರಿದಾಗಲೆಲ್ಲ ಆಗುತ್ತಿದ್ದ ಬಿರುಕುಗಳನ್ನು ಸಕಾಲದಲ್ಲಿ ಸರಿಪಡಿಸುವ ಸಾಧ್ಯತೆ, ಇವುಗಳನ್ನು ಅಪೇಕ್ಷಣೀಯವೆಂದು ಭಾವಿಸಲಾಗುತ್ತಿತ್ತು. ಅಲ್ಲದೆ ಅಂಥ ರಚನೆಗಳು ಕೆಲವು ಕಡೆಗಳಲ್ಲಿ ಒಡೆದಿದ್ದರೂ ಇತರ ಕಡೆಗಳಲ್ಲಿ ಇಂದಿಗೂ ಎಲ್ಲ ಪ್ರವಾಹಗಳನ್ನು ತಡೆದುಕೊಂಡು ನಿಂತಿವೆ.

ಈ ರಚನೆಗಳಲ್ಲಿ ಅಡಿಗಡಿಗೆ ತೋರಿಸಲಾಗುವ ಇನ್ನೊಂದು ದೋಷವೆಂದರೆ ಅವುಗಳಲ್ಲಿ ಸೋರಿಕೆ ಇದ್ದು, ಬೇಸಿಗೆಯಲ್ಲಿ ನೀರೆಲ್ಲ ಸೋರಿಹೋಗುತ್ತಿತ್ತು ಎನ್ನುವುದು. ಬಹುಶಃ ಹಾಗೇ ಇರಲಿ ಎಂಬ ಉದ್ದೇಶವಿತ್ತೊ ಏನೊ. ಕೆಳ ಭಾಗದ ಜನ ಜಾನುವಾರುಗಳ ಅಗತ್ಯಗಳಿಗಾಗಿ ಹಾಗೆ ಬೇಸಿಗೆಯಲ್ಲಿ ನೀರನ್ನು ಹೋಗಗೊಡುತ್ತಿದ್ದರು. ಅಲ್ಲದೆ ಹೂಳು ಮರಳು ಸಹ ಸಂದಿಗಳಲ್ಲಿ ಸೋಸಿಹೋಗಿ ನದಿಯ ಪಾತ್ರದಲ್ಲಿ ಹೂಳು ಇರದಂತೆ ಇಡಲು ಸಹಾಯಕವಾಗುತ್ತಿತ್ತು.

ಈ ಅಣೆಕಟ್ಟುಗಳಿಂದ ಹೊರಡುತ್ತಿದ್ದ ನಾಲೆಗಳಿಗೆ ಸಾಮಾನ್ಯವಾಗಿ ಮೇಲು ಕಾಲುವೆಗಳು ಇರಲಿಲ್ಲ. ಪಕ್ಕದ ಎತ್ತರದ ನೆಲದಿಂದ ಅಡ್ಡ ಮೋರಿಯನ್ನು ನಾಲೆಗೆ ಬಿಡಲಾಗುತ್ತಿತ್ತು. ಈ ಮೋರಿ ಕಾಲುವೆಗಳಿಗೆ ಅಡ್ಡಲಾಗಿ ಕಟ್ಟಿದ ಒರಟುಗಲ್ಲಿನ ಹೂಳು ಕಟ್ಟೆಗಳು, ಹೂಳು ಅಣೆಕಟ್ಟು ನಾಲೆಗಳಿಗೆ ಬರದಂತೆ ತಡೆಹಿಡಿಯುತ್ತಿದ್ದವು. ನಾಲೆಗೆ ಬರುತ್ತಿದ್ದ ಹೆಚ್ಚುವರಿ ನೀರನ್ನು ಒರಟುಗಲ್ಲು ಕಟ್ಟಡದ ಸಂದುಗಳಿಂದ ಸೋರಿಹೋಗಲು ಬಿಡಲಾಗುತಿತ್ತು. ಅಡ್ಡ ಮೋರಿಗಳಿಂದ ಬಂದು ನಾಲೆಗಳಲ್ಲಿ ಸೇರಿಕೊಳ್ಳುತ್ತಿದ್ದ ಹೂಳನ್ನು ಕೆಳಮಟ್ಟದಲ್ಲಿ ಅನುಕೂಲಕರವಾದ ಕಡೆಗಳಲ್ಲಿ ಕಟ್ಟಿದ ಹೊರ ಕಂಡಿಗಳ ಮೂಲಕ ಕೊಚ್ಚಿ ಹಾಕಲಾಗುತ್ತಿತ್ತು.

ಅಲ್ಲದೆ ಶೇಖರವಾದ ಹೂಳನ್ನು ತೆಗೆದುಹಾಕುವುದು ಅಣಿಕಟ್ಟು ಕಾಲುವೆ ಕೆಳಗಿನ ಫಲಾನುಭವಿಗಳ ಕರ್ತವ್ಯ ಎಂದು ಭಾವಿಸಲಾಗಿತ್ತು. ಹೂಳು ತೆಗೆಯುವುದರ ಜೊತೆಗೆ ಕಾಲಕಾಲಕ್ಕೆ ಕಳೆಗಳನ್ನು ತೆಗೆದು ಹಾಕುವುದಕ್ಕೂ ಫಲಾನುಭವಿಗಳು ಗಮನವೀಯಬೇಕಾಗಿತ್ತು. ಅಂಥದೊಂದು ವ್ಯವಸ್ಥೆ ರೂಢಿಯಲ್ಲಿತ್ತು. ಎಂಬುದನ್ನು ಚಳ್ಳಕೆರೆ ತಾಲ್ಲೂಕಿನ ರೇಕಲಗೆರೆ ನಾಲೆ ಸಂಬಂಧವಾಗಿ ಸೆಪ್ಟೆಂಬರ್ ೧೮೯೦ರಲ್ಲಿ ಮೈಸೂರು ಸರ್ಕಾರ ಹೊರಡಿಸಿದ ಆಜ್ಞೆಯೊಂದರಿಂದ ಕಾಣಬಹುದು. ಸಂಬಂಧಪಟ್ಟ ಹಳ್ಳಿಗಳಿಗೂ ನಾಲೆ ಸುಮಾರು ೮ ರಿಂದ ೧೯ ಮೈಲಿ ದೂರ ಇದ್ದಿತಾಗಿ, ಈ ನಾಲೆಯಿಂದ ನೀರು ಪಡೆಯುತ್ತಿದ್ದ ರೈತರಿಗೆ ಹೂಳು ತೆಗೆಯುವ ಕರ್ತವ್ಯದಿಂದ ವಿನಾಯಿತಿ ನೀಡಲಾಗಿತ್ತು. ಆದರೆ ಅದಕ್ಕೆ ಪ್ರತಿಯಾಗಿ ಲೋಕೋಪಯೋಗಿ ಇಲಾಖೆಯು ಹೂಳು ತೆಗೆಸುವ ಕಾರ್ಯದ ಸಲುವಾಗಿ ಆ ರೈತರ ಮೇಲೆ ಎಕರೆಗೆ ಸಾಲಿಯಾನ ಎಂಟು ಆಣಿ (ಅರ್ಧ ರೂಪಾಯಿ) ಸುಂಕವನ್ನು ವಿಧಿಸಲಾಗುತ್ತಿತ್ತು.[5]

ಸಂರಕ್ಷಣೆ

ಸಂರಕ್ಷಣೆಯ ಮಹತ್ವ:

ಪ್ರತಿಯೊಂದು ನೀರಾವರಿ ಕಾಮಗಾರಿಯೂ ನಿರ್ದಿಷ್ಟ ಅವಧಿಗೆ ಮಾತ್ರ ಉಪಯುಕ್ತವಾಗಿರುತ್ತದೆ. ಸೂಕ್ತವೂ ಸಕಾಲಿಕವೂ ಅದ ಸಂರಕ್ಷಣೆ ಹಾಗೂ ದುರಸ್ತಿಗಳಿಂದ ಈ ಅವಧಿಯನ್ನು ಹೆಚ್ಚಿಸಲು ಸಾಧ್ಯ. ಅಂಥ ಪ್ರಯತ್ನಗಳ ಅಭಾವದ ಪರಿಣಾಮವಾಗಿ ಕೆರೆ ಹೂಳಿನಿಂದ ತುಂಬಿ ಹೋಗುತ್ತದೆ ಅಥವಾ ಅದರ ಏರಿ ದುರ್ಬಲವಾಗಿ, ಒಡೆದು ಹೋಗುತ್ತದೆ. ಇಲ್ಲವೆ ಕರೆಯಲ್ಲಿ ನಿಲ್ಲುವ ನೀರು ಒಡಕು ತೂಬುಗಳಲ್ಲಿ ಸೋರಿ ಹೋಗುತ್ತದೆ. ನೀರಾವರಿ ಕಾಲುವೆ ಅಸಡ್ಡೆಗೆ ಗುರಿಯಾದರೆ ಈ ಎಲ್ಲ ದುಷ್ಪರಿಣಾಮಗಳು ಅದಕ್ಕೂ ಅಷ್ಟೇ ಮಟ್ಟಿಗೆ ಸಂಭವಿಸುತ್ತವೆ. ನೀರಾವರಿ ಕಾರ್ಯದ ಸೂಕ್ತ ಸಂರಕ್ಷಣೆ ಅದರ ನಿರ್ಮಾಣದಷ್ಟೆ ಮುಖ್ಯ. ಇದನ್ನು ನಮ್ಮ ಹಿರಿಯರು ಕಂಡುಕೊಂಡಿದ್ದರು. ಅವರು ನಿರ್ಮಾಣಕ್ಕಿಂತಲೂ ಸಂರಕ್ಷಣೆಗೆ ಹೆಚ್ಚು ಮಹತ್ವವನ್ನು ಕೊಟ್ಟಿದ್ದರು. ಹಳೆಯ ಕೆಲಸವನ್ನು ಸಂರಕ್ಷಿಸುವುದು ಹೊಸದೊಂದನ್ನು ಕಟ್ಟುವುದಕ್ಕಿಂತ ಹೆಚ್ಚು ಶ್ಲಾಘನೀಯ ಎನ್ನುತ್ತಿದ್ದರು.

ಸಂರಕ್ಷಣೆಗೆ ನೀಡಲಾಗಿದ್ದ ಮಹತ್ವ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ವಿಧಿಸಲಾಗಿರುವ ನಿಯಮಗಳಿಂದ ಸ್ಪಷ್ಟವಾಗುತ್ತದೆ. ಕಂದಾಯ ಮಾಫಿ ಕುರಿತು ಹೇಳುತ್ತ ಅರ್ಥಶಾಸ್ತ್ರ ಹೀಗೆನ್ನುತ್ತದೆ. “ಕೆರೆ ಇತ್ಯಾದಿಗಳ ಕೆಳಗೆ ಬೇಸಾಯಮಾಡುವ ವ್ಯಕ್ತಿಗಳು ಅಥವಾ ಯಾವುದೇ ರೀತಿಯ ಕಂದಾಯವೂ ಇಲ್ಲದೆ ಅಂಥ ಭೂಮಿಯನ್ನು ಅನುಭವಿಸಲು ಅನುಮತಿ ಪಡೆದ ವ್ಯಕ್ತಿಗಳು ಕೆರೆ ಇತ್ಯಾದಿಗಳನ್ನು ಒಳ್ಳೆಯ ದುರಸ್ತಿಯಲ್ಲಿ ಇಟ್ಟಿರಬೇಕು. ಇಲ್ಲವಾದರೆ ಅವರಿಗೆ ನಷ್ಟದ ಎರಡರಷ್ಟು ಜುಲ್ಮಾನೆಯ ಶಿಕ್ಷ ವಿಧಿಸಬೇಕು.[6] ಸಂರಕ್ಷಣೆಗೆ ಮಹತ್ವ ಕೊಟ್ಟುದು ಮಾತ್ರವಲ್ಲ ನೀರಾವರಿ ಕೆಲಸದ ಸಂರಕ್ಷಣೆಯ ಜವಾಬ್ದಾರಿ, ಆ ಕೆಲಸದಿಂದ ಫಲಾನುಭವ ಪಡೆಯುವ ವ್ಯಕ್ತಿಗಳ ಮೇಲೆ ಮಾತ್ರವೇ ಇರತಕ್ಕದ್ದು ಎನ್ನುವುದು ಅಂಗೀಕೃತ ನೀತಿಯಾಗಿತ್ತು.

ಸಾಮಾನ್ಯ ಸಂರಕ್ಷಣಾ ಕ್ರಮಗಳು :

ಸಾಮಾನ್ಯವಾಗಿ ಕೆರೆಯ ಸಂರಕ್ಷಣೆ ಹೀಗಿರುತ್ತದೆ :

೧. ಕೆರೆ ಅಂಗಳ ಹಾಗೂ ನಾಲೆಯ ತಳದಿಂದ ಕಾಲಕಾಲಕ್ಕೆ ಹೂಳು ತೆಗೆಯುವುದು.

೨. ಮಳೆಯಿಂದಾಗಲಿ ಇತರ ಕಾರಣಗಳಿಂದಾಗಲಿ ಮಣ್ಣು ಕಟ್ಟೆಗೆ ಎಲ್ಲಿಯಾದರೂ ಹಾನಿಯಾಗಿದ್ದಲ್ಲಿ ಮಣ್ಣು ಕೆಲಸಮಾಡಿ ಅದನ್ನು ಸರಿಪಡಿಸುವುದು.

೩. ತೂಬು, ಕೋಡಿಗಳಿಗೆ ಏನಾದರೂ ಹಾನಿಯಾಗಿದ್ದರೆ ಕಾಲಕಾಲಕ್ಕೆ ಅದನ್ನು ದುರಸ್ತಿಮಾಡುವುದು.

೪. ಜಲಾನಯನ ಪ್ರದೇಶ ಒತ್ತುವರಿಯಾಗದಂತೆ ಇಟ್ಟುಕೊಳ್ಳುವುದು.

೫. ಕೆರೆಯಾಳಕ್ಕೆ ಹರಿದು ಬರುವ ಹೂಳನ್ನು ತಡೆಯಲು ವ್ಯವಸ್ಥೆಮಾಡುವುದು.

ಸಂರಕ್ಷಣಾ ಕ್ರಮಗಳನ್ನು ನಡೆಸಲು ವ್ಯವಸ್ಥೆ:

ಹಿಂದೆ ಕೆರೆ ಅಥವಾ ನಾಲೆಯ ಸಂರಕ್ಷಣೆ ಮುಖ್ಯವಾಗಿ ಗ್ರಾಮ ಸಮುದಾಯದ ಹೊಣೆ ಆಗಿತ್ತು. ಫಲಾನುಭವಿಗಳು ಆ ಸಮುದಾಯದ ಪ್ರಮುಖ ಭಾಗವಾಗಿದ್ದರು. ಅವರು ಈ ಕೆಲಸವನ್ನು ಹಳ್ಳಿಯ ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ತಂಡಕ್ಕೆ ವಹಿಸುತ್ತಿದ್ದರು. ಆತ ಅಥವಾ ಅವರು ಸಂರಕ್ಷಣಾಕಾರ್ಯವನ್ನು ನಡೆಸುವ ಸಲುವಾಗಿ ಅವರಿಗೆ ಕೆಲವು ಭೂಮಿಗಳನ್ನು ಬಿತ್ತುವಟ್ಟ ಅಧವಾ ದಶವಂದವಾಗಿ ನೀಡುತ್ತಿದ್ದರು. ಇಲ್ಲವೆ ಕಂದಾಯದಲ್ಲಿ ರಿಯಾಯಿತಿ ನೀಡುತ್ತಿದ್ದರು. ಭಾರಿ ನೀರಾವರಿ ಕಾರ್ಯಗಳಲ್ಲಿ ದುರಸ್ತಿ ಕಾರ್ಯವನ್ನು ನಡೆಸುವುದಕ್ಕಾಗಿ ಕೆಲವು ಸ್ಥಳೀಯ ತೆರಿಗೆಗಳ ಬಳಕೆಯ ಸೌಲಭ್ಯವನ್ನು ಸ್ಥಳೀಯ ಸಂಸ್ಥೆಗಳಿಗೆ ದೊರೆಗಳು ನೀಡುತ್ತಿದ್ದರು. ದುರಸ್ತಿ ಕಾರ್ಯಗಳನ್ನು ನಡೆಸಲು ಸ್ಥಳೀಯ ಸಂಸ್ಥೆಗಳಿಗೆ ನಗದು ಅನುದಾವನ್ನು ಕೊಡಲು ಆಗುತ್ತಿತ್ತು. ಇನ್ನೂ ಕೆಲವು ಕಡೆಗಳಲ್ಲಿ (ಸರ್ಕಾರಿ) ಭೂಮಿಯನ್ನು ನೀಡಲಾಗುತ್ತಿತ್ತು. ಕೆಲವು ಸಂಧರ್ಭಗಳಲ್ಲಿ ಕೆರೆ ಸಂರಕ್ಷಣೆಗಾಗಿ ಬಂಡಿಗಳನ್ನು ಭೂಮಿಯನ್ನು ಕೊಡಲಾಗುತ್ತಿತ್ತು. ಬಂಡಿಗಳನ್ನು ಕೊಡುತ್ತಿದ್ದುದು ಕೆರೆಯಿಂದ ಮತ್ತು ಕೆರೆ ಮಣ್ಣನ್ನು ಸಾಗಿಸುವುದಕ್ಕೆ.

ಶಾಸನಗಳ ಸಾಕ್ಷ್ಯ:

ಸಂರಕ್ಷಣೆ ಹಾಗೂ ದುರಸ್ತಿ ಕಾರ್ಯಗಳಿಗೆ ನೀಡಲಾಗಿದ್ದ ಮಹತ್ವವನ್ನು ಸೂಚಿಸುವ ಅನೇಕ ಶಾಸನಗಳಿವೆ. ಕುರ್ತುಕೋಟಿ, ಮಿರ್ಲೆ, ಸಿರೂರು ಮತ್ತು ತೊಣ್ಣೂರು ಶಾಸನಗಳು ಸಂರಕ್ಷಣೆ ದುರಸ್ತಿಗಳಿಗಾಗಿ ಕೆಲವು ಸ್ಥಳೀಯ ತೆರಿಗೆಗಳನ್ನು ನೀಡಿದ್ದನ್ನು ದಾಖಲುಮಾಡಿವೆ.

ಕದಲಗೆರೆಯ ಕೆರೆಯ ಹಿತಕ್ಕಾಗಿ ಜುಲ್ಮಾನೆಗಳಿಂದ ಬರುವ ಹಣವನ್ನು ಕುರ್ತುಕೋಟಿ ಅಗ್ರಹಾರದ ಮಹಾಜನರಿಗೆ ನೀಡಿದ್ದು ಗದಗ ತಾಲ್ಲೂಕಿನ ಆರನೆಯ ವಿಕ್ರಮಾದಿತ್ಯನ ಕಾಲದ ಕುರ್ತಕೋಟಿ ಶಾಸನದಲ್ಲಿ (೧೦೮೨)ದಾಖಲಾಗಿದೆ.[7] ಗೋಣ ಸಮುದ್ರ ಎಂಬ ಸ್ಥಳಿಯ ಕೆರೆಯ ಅಂಗಳದಿಂದ ಹೂಳು ಎತ್ತಲು ಹಾಗೂ ತೂಬಿನ ಕಲ್ಲು ಮತ್ತು ಮರಗಳನ್ನು ದುರಸ್ತಿಮಾಡಲು ದೇವರಿಗೆಂದು ಕಂದಾಯವಿಲ್ಲದೆ ಬೆಟ್ಟದ ಭೂಮಿಯನ್ನು ಬಿಟ್ಟು ಉಳಿದ ಎಲ್ಲ ತೋಟಗಳಿಂದಲೂ ವಸೂಲಾಗುವ ಕಂದಾಯದ ಹಣವನ್ನು ನೀಡಲಾಯಿತು ಎನ್ನುವುದನ್ನು ಧಾರವಾಡ ಜಿಲ್ಲಾ ಮುಂಡರಗಿ ತಾಲ್ಲೂಕಿನ ಡಂಬಳ ಶಾಸನ(೧೧೮೪) ದಾಖಲು ಮಾಡುತ್ತದೆ.[8]೧೩ನೆಯ ಶತಮಾನದಲ್ಲಿ ಹೊಯಿಸಳ ರಾಜ ನರಸಿಮಹ, ಹರವುನಾಲೆಯ ವಾರ್ಷಿಕ ದುರಸ್ತಿಗಾಗಿ ತೊಣ್ಣೂರು ಅಗ್ರಹಾರದ ಮಹಾಜನರಿಗೆ ಹೊಳೆಯ ಸುಂಕದಿಂದ ೬೪ ಗದ್ಯಾಣಗಳನ್ನು ನೀಡಿದ.[9]

ಕಾರ್ಯ, ಹೊಸಹಳ್ಳಿ, ಬೆಳತೂರು, ಅರಸೀಬೀದಿ ಹಾಗೂ ಬೆಳವಂಕಿ ಶಾಸನಗಳು ಸಂರಕ್ಷಣಾ ಕಾರ್ಯಕ್ಕಾಗಿ ನಗದು ದಾನ ಇಲ್ಲವೆ ಭೂಮಿ ದಾನ ಮಾಡಿದ್ದನ್ನು ದಾಖಲುಮಾಡಿವೆ. ನಾಗವರ್ಮ ಕಟ್ಟಿಸಿದ ದೇವಿಕೆರೆ ಹಾಗೂ ಪೆರಿಯ ಕೆರೆಗಳ ಸಂರಕ್ಷಣೆಗಾಗಿ ನಾಲ್ಕು ಖಂಡುಗ ಭೂಮಿಯನ್ನು ಬಿತ್ತುವಟ್ಟವೆಂದು ದಾನಮಾಡಿದ್ದನ್ನು ಕ್ರಿ.ಶ. ೯೬೮ರ ಕಾರ್ಯ ಶಾಸನ(ನಂಜನಗೂಡು) ದಾಖಲಿಸುತ್ತದೆ.[10] ಸೊಮವಾರಪೇಟೆಯ (ಕೊಡಗು) ಕ್ರಿ.ಶ ೧೦೭೦ ರ ಹೊಸಹಳ್ಳಿ ಶಾಸನ ಗೌರಾಳಿ ಕೆರೆಯ ಸಂರಕ್ಷಣೆಗಾಗಿ ೪೦ ಗದ್ಯಾಣಗಳನ್ನು ದಾನವಿತ್ತುದನ್ನು ದಾಖಲು ಮಾಡುತ್ತದೆ.[11] ಬ್ರಹ್ಮಪುರಿಯ ಮಹಾಜನರಿಗೆ ಮಾರಿಯಬ್ಬೆಯ ಕೆರೆಯ ಕೆಳಗೆ ಕೆಲವು ಭೂಮಿಗಳನ್ನು ನೀಡಿದ್ದನ್ನು ಹುನಗುಂದ ತಾಲ್ಲೂಕಿನ ಅರಸೀಬೀದಿ ಶಾಸನ(ಕ್ರಿ. ಶ. ೧೦೮೭) ದಾಖಲಿಸಿದೆ. ಪ್ರಾಯಶಃ ಅದು ಕೆರೆಯ ಸಂರಕ್ಷಣೆಗಾಗಿಯೆ ಇರಬೇಕು.[12] ಒಂದು ಕೆರೆಯ ಸಂರಕ್ಷಣೆಗಾಗಿ ಹತ್ತು ಖಂಡುಗ ಭೂಮಿಯನ್ನು ದಾನವಿತ್ತುದು ಬೆಳತೂರು (ಹೆಗ್ಗಡದೇವನಕೋಟೆ) ಶಾಸನದಲ್ಲಿ ದಾಖಲಾಗಿದೆ.[13] ಬೆಳವಣಿಕೆಯ (ರೋಣ) ಪಳಗೆಯ ಚಾವುಂಡಮಯ್ಯ ಹಾಗೂ ಆತನ ಹೆಂಡತಿ ಶಾಂತಿಕಬ್ಬೆ ತಾವು ಕಟ್ಟಿಸಿದ ಮುತ್ತಲಗೆರೆಯ ಸಂರಕ್ಷಣೆಗಾಗಿ ಭೂಮಿಯನ್ನು ನೀಡಿದರು.[14]

ಸಂರಕ್ಷಣಾಕಾರ್ಯಕ್ಕಾಗಿ ಬಂಡಿಗಳನ್ನು ನೀಡಿದ ವಿಶಿಷ್ಟ ಕ್ರಮವನ್ನು ಹೊಳೆನರಸೀಪುರ ಹಿರೆನಲ್ಲೂರು ಹಾಗೂ ಬೊಳೇಕ್ಯಾತನಹಳ್ಳಿ ಶಾಸನಗಳಲ್ಲಿ ದಾಖಲು ಮಾಡಲಾಗಿದೆ. ಕೆರೆಯ ನಿರ್ಮಾಣದ ಸಲುವಾಗಿ ಬಂಡಿ ಸಾಮಗ್ರಿ, ಕೂಲಿ, ಬಂಡಿ ಹೊದೆಯುವವ, ಬಂಡಿಗಳಿಗಾಗಿ, ಕೆರೆ ತೋಡುವ ಕೆಲಸದ ಮೇಲುಸ್ತುವಾರಿಗಾಗಿ, ಎರಡು ತೂಬುಗಳನ್ನು ಕಟ್ಟಿದ ಕಲ್ಲು ಕೆಲಸದವನಿಗಾಗಿ ಹಾಗೂ ಇತರೆ ಸಾದಿಲವಾರು ವೆಚ್ಚಕ್ಕಾಗಿ ಮಹಾಪ್ರಧಾನ ಮಾದಿಗದೇವ ದಣ್ಣಾಯಕ ೨೨೦೦ ಗದ್ಯಾಣಗಳನ್ನು, ೮ ಪಣಗಳನ್ನು ಖರ್ಚುಮಾಡಿದ ಎಂದು ಕ್ರಿ.ಶ ೧೨೩೨ ರ ಹೊಳೆನರಸೀಪುರ (ಹಾಸನ) ಶಾಸನ ಹೇಳುತ್ತದೆ. ಬಂಡಿಗಳ ಸಂರಕ್ಷಣೆಗಾಗಿಯೆ ೮೦೦ ಗದ್ಯಾಣಗಳನ್ನು ನಿಗದಿಮಾಡಿದ್ದು ಕೆರೆ ನಿರ್ಮಾಣಕಾಲದಲ್ಲಿಯೇ ಅದರ ಸಂರಕ್ಷಣೆಯ ಬಗ್ಗೆಯೂ ಯೊಚಿಸಲಾಗಿತ್ತು ಎನ್ನುವುದನ್ನು ನಿಚ್ಚಳವಾಗಿ ತೋರಿಸುತ್ತದೆ.[15] ಒಂದು ಕೆರೆಯ ದುರಸ್ತಿಗೆ ಮಣ್ಣು ಸಾಗಿಸಲು ಮಾದಿರಾಜನೆಂಬಾತ ಬಂಡಿಯೊಂದನ್ನು ನೀಡಿದ್ದನ್ನು ಕ್ರಿ.ಶ ೧೨೦೭ರ ಹಿರೇನೆಲ್ಲೂರು(ಕಡೂರು) ಶಾಸನ ದಾಖಲು ಮಾಡಿದೆ.[16] ಅರಕಲಗೂಡಿನ ಬೊಳೇಕ್ಯಾತನಹಳ್ಳಿ ಶಾಸನದಲ್ಲಿ (೧೩೭೧) ಕೆರೆಯ ಸಲುವಾಗಿ ಬಂಡಿಗಳನ್ನು ಇಟ್ಟುಕೊಳ್ಳಲು ಹಳ್ಳಿಯ ಕೆಲವು ಮಂದಿಗೆ ಭೂಮಿಯನ್ನು ತೆರಿಗೆಗಳನ್ನು ಇತ್ತುದು ದಾಖಲಾಗಿದೆ. ಕೆಲವು ಸುಂಕಗಳನ್ನು ಮಾಫಿಮಾಡಲಾಯಿತು. ಬಂಡಿಗಳಿಗೆ ಬೇಕಾದ ಕೋಣ, ಮರ (ಕಿರುಮುಟ್ಟು), ಕಬ್ಬಿಣ, ಹಾಗೂ ಕೀಲೆಣ್ಣೆಗಳ ವೆಚ್ಚವನ್ನು ದಾನಪಡೆದವರೇ ತಮ್ಮ ಸ್ವಂತ ಹಣದಿಂದ ನಿಭಾಯಿಸಬೇಕೆಂದು ಶಾಸನ ನಿಗದಿಮಾಡುತ್ತದೆ.[17]

ಕೆರೆಗಳ ಸಂರಕ್ಷಣೆಗಾಗಿ ಭೂಮಿ, ಹಣ ನೀಡುವುದನ್ನು ಈ ಶಾಸನಗಳು ತಿಳಿಸುತ್ತದೆ. ಇಷ್ಟೇ ಅಲ್ಲದೆ ೧೫ನೆಯ ಶತಮಾನದ ಮಿರ್ಲೆ ಶಾಸನ ಹಂಪಾಪುರದ ಮಹಾಜನರು ತಮ್ಮ ಹಳ್ಳಿಯ ನಾಲೆ ಎಂಟು ಹತ್ತು ಕಡೆಗಳಲ್ಲಿ ಒಡೆದು ಹೋಗಿದ್ದಾಗ ಅದನ್ನು ಸರಿಪಡಿಸಲು ತಮಗೆ ಶಕ್ತಿಯಿಲ್ಲದೆ, ನಾಲೆಯ ಸಂರಕ್ಷಣೆಯ ಕೆಲಸವನ್ನು ಹಳ್ಳಿ ಹಿರಿಯೂರಿನ ಗೌಂಡಪ್ರಜೆಗಳಿಗೆ ವಹಿಸಲು ತೀರ್ಮಾನಿಸಿದರು ಎಂದು ತಿಳಿಸುತ್ತದೆ. ಆ ಸಲುವಾಗಿ, ಅವರು ಒಂದು ಮನೆ. ೧೨ ಖಂಡು ತರಿ ಭೂಮಿ, ಹಾಗೂ ೧೫೦ ಕಂಬ ಖುಷ್ಕಿ ಭೂಮಿಗಳನ್ನು ಮಾರಿದರು.[18](ಈ ಮಾರಾಟ ನಾಲೆ ಸಂರಕ್ಷಣೆಗಷ್ಟೆ ಅಲ್ಲ. ತಮ್ಮ ಊರಿನಲ್ಲಿ ಒಂದು ಛತ್ರವನ್ನು ಕಟ್ಟಿಸಲೂ ಕೂಡ). ಈ ಶಾಸನ ನಮಗೆ ಸ್ಪಷ್ಟವಾಗಿ ಹೇಳುತ್ತದೆ, ನೀರಾವರಿ ಕೆಲಸದ ಸಂರಕ್ಷಣೆ ಹಾಗೂ ದುರಸ್ತಿ ಕಾರ್ಯ ಗ್ರಾಮಸಮುದಾಯದ ಸದಸ್ಯರ ಆದ್ಯ ಜವಾಬ್ದಾರಿ ಎಂದು ಪರಿಗಣಿತವಾಗಿತ್ತು ಮತ್ತು ಈ ಸಂಬಂಧವಾಗಿ ಅವರು ತಮ್ಮ ಕರ್ತವ್ಯವನ್ನು ನಿಭಾಯಿಸಲು ಅಶಕ್ತರಾಗಿದ್ದರೆ ಅದನ್ನು ಇತರರಿಗೆ ವಹಿಸಲಾಗುತ್ತಿತ್ತು.

ಒಂದು ಕೆರೆಯ ಸಂರಕ್ಷಣೆಗಾಗಿ ಇದ್ದ ಪೂರಾ ವ್ಯವಸ್ಥೆಯನ್ನು ವಿವರವಾಗಿ ತಿಳಿಸುವ ಇನ್ನೊಂದು ಸ್ವಾರಸ್ಯಕರ ಶಾಸನ ಮುಳುಬಾಗಿಲು ತಾಲ್ಲೂಕಿನ ಕ್ರಿ. ಶ. ೧೪೯೬ರ ರಾಜಗುಂಡ್ಲಹಳ್ಳಿ ಶಾಸನ.[19] ಆ ಶಾಸನ, ಕೆರೆಯ ನಿರ್ಮಾತೃವಿಗೂ ಕೆರೆ ಕೆಳಗಿನ ಪ್ರಧಾನ ಫಲಾನುಭವಿಗೂ (ದೇವಾಲಯ) ನಡುವೆ ಅದ ಒಪ್ಪಂದ. ಅದು ಹೀಗೆನ್ನುತ್ತದೆ:

“ಗುಂಡ್ಲನಹಳ್ಳಿ ಹಳೆಯ ಕೆರೆಯ ಪಶ್ಚಿಮಕ್ಕೆ ಮಾವಿನಹಳ್ಳದಲ್ಲಿ ನೀವು ಹಣ ವ್ಯಯಿಸಿ ಕನ್ನೆಗೆರೆ(ಹೊಸ ಕೆರೆ)ಯನ್ನು ಕಟ್ಟಿಸಿದ್ದರ ಸಲುವಾಗಿ ಅವುಗಳ ಹುಟ್ಟುವಳಿಯಲ್ಲಿ ನಾಲ್ಕು ಭಾಗ ಅಕ್ಕಿಯನ್ನು ನೀವು ಸುಂಕವಿಲ್ಲದೆ ಅನುಭವಿಸಬಹುದು. ಈ ನಾಲ್ಕು ಭಾಗಗಳು ಮುಗಿದ ಮೇಲೆ ಈ ಕೆರೆಯ ಕೆಳೆಗೆ ಮಾಡಲಾಗುವ ಭತ್ತದ ಗದ್ದೆಗಳಲ್ಲಿ ಹತ್ತರಲ್ಲಿ ಮೂರರಷ್ಟನ್ನು ದಶವಂದವಾಗಿ, ಕಟ್ಟುಕೊಡಿಗೆಯಾಗಿ ನಿಮಗೆ ನೀಡುತ್ತೇವೆ. ಉತ್ತಮ, ಮಧ್ಯಮ ಹಾಗೂ ಅಧಮ ಭೂಮಿಯನ್ನು ಕಲ್ಲು ನೆಡಸಿ, ವಿಂಗಡಿಸಿಕೊಡುತ್ತೇವೆ. ಅಲ್ಲದೆ ಈಗ ರಾಗಿ ಬೇಸಾಯದಲ್ಲಿರುವ ಖುಷ್ಕಿ ಭೂಮಿಯನ್ನು ಈ ಕೆರೆಯ ಕಟ್ಟುಕೊಡಿಗೆ ಮಾನ್ಯವಾಗಿ ನೀಡುತ್ತೇವೆ. ಒಂದು ಖಂಡುಗ ಭೂಮಿಯನ್ನು ನಿಮಗೆ ಕಟ್ಟುಕೊಡಿಗೆ ಮಾನ್ಯವಾಗಿ ಕೊಡುತ್ತೇವೆ.

“ನೀವು ಕಟ್ಟುವ ಕೆರೆಗೆ ಏನಾದರೂ ಹಾನಿ ಉಂಟಾದಲ್ಲಿ ನೀವು ನಿಮ್ಮ ಪಾಲಿನ ನಾಲ್ಕು ಭಾಗ ಮಾನ್ಯದಿಂದ ಸರಿಮಾಡಿಸಬೇಕು. ಅದೂ ಮುಗಿದ ಮೇಲೆ, ಯಾವುದೇ ಸಣ್ಣ ದೋಷವು ಉಂಟಾದರೆ ನಾವು ನಿಮ್ಮ ದಸವಂದವೂ ಸೇರಿದಂತೆ ಕೆರೆಯ ಮೇಲೆ ಹಣವನ್ನೂ ಭತ್ತದ ಗದ್ದೆಗಳಿಂದ ಧಾನ್ಯವನ್ನೂ ವಸೂಲು ಮಾಡಿ ಅದರಿಂದ ಕೆರೆಯನ್ನು ದುರಸ್ತಿ ಮಾಡಿಸುತ್ತೇವೆ.

“ನಿಮ್ಮ ಕಟ್ಟುಕೊಡಿಗೆಯ ಭತ್ತದ ಖುಷ್ಕಿ ಭೂಮಿ ಹಾಗೂ ಒಣ ಬಯಲುಗಳಲ್ಲಿ ನಮ್ಮ ದೇವಾಲಯದ ಸಲುವಾಗಿ ನಾನಾ ಬಾಬಿನ ಯಾವುದೇ (ನಿರ್ದಿಷ್ಟ) ಪಾವತಿಯೂ ಆಗಿಲ್ಲ.

“ಈ ಕಟ್ಟುಕೊಡಿಗೆ ಭತ್ತದ ಗದ್ದೆ ಹಾಗೂ ಹೊಲಗಳನ್ನು ನಿಮಗೆ ವಂಶಪಾರಂಪರ್ಯವಾಗಿ ಹಾಗೂ ಮುಂದಿನವರಿಗೆ ಬಿಟ್ಟುಕೊಡುವ ಇಲ್ಲವೆ ಮಾರುವ ಹಕ್ಕು ಸಮೇತ ನೀಡಲಾಗಿದೆ.”

ಕೆರೆ ನಿರ್ಮಾಣದ ಪರಿಹಾರವಾಗಿ ಮಾತ್ರವಲ್ಲ, ಅದನ್ನು ಒಳ್ಳೆಯ ದುರಸ್ತಿಯಲ್ಲಿ ಇಡುವ ಸಲುವಾಗಿ ಕೆರೆಯ ನಿರ್ಮಾತೃವಿಗೆ ಕೆರೆಯಿಂದ ನೀರಾವರಿ ಆಗುವ ಭೂಮಿಯ ಹುಟ್ಟುವಳಿಯಲ್ಲಿನ ನಾಲ್ಕು ಭಾಗ ಅಕ್ಕಿಯನ್ನು ದಶವಂದವಾಗಿಯೂ, ತರಿ ಹಾಗೂ ಖುಷ್ಕಿ ಭೂಮಿಯ ಹತ್ತರಲ್ಲಿ ಮೂರರಷ್ಟನ್ನು ಕಟ್ಟುಕೊಡಿಗೆ ಮಾನ್ಯವಾಗಿಯೂ ಈ ಶಾಸನ ನೀಡುತ್ತದೆ. ಕೆರೆ ಸಂರಕ್ಷಣೆಯಲ್ಲಿ ತಪ್ಪಿದಲ್ಲಿ ನಿರ್ಮಾತೃ ತನಗೆ ಬಂದ ದಾನಗಳಿಂದ, ದುರಸ್ತಿ ಕಾರ್ಯಕ್ಕೆ ಹಣ ಕೊಡಲು ಬಾಧ್ಯಸ್ಥನಾಗಿರಬೇಕಾಗುತ್ತದೆ.

 

[1]ಡಬ್ಲ್ಯೂ ಫ್ರಾನ್ಸಿಸ್. ಮದ್ರಾಸ್ ಡಿಸ್ಟ್ರಿಕ್ ಗೆಜೆಟಿಯರ್ – ಬಳ್ಳಾರಿ ಪು.೯೦-೧೯೦೪.

[2]ರೈಸ್. ೨ ಸಂ.೧ ಪು. ೭೩೮.

[3]ಮೇಜರ್ ಆರ್.ಹೆಚ್. ಸ್ಯಾಂಕಿಯ ಪತ್ರ ದಿನಾಂಕ ೧೯.೧೧.೧೮೬೬ ಪ್ಯಾರ ೬೭ (ಮೊದಲನೆ ಉಲ್ಲೇಖಿಸಿದ್ದು)

[4]ಡಬ್ಲ್ಯೂ ಫ್ರಾನ್ಸಿಸ್. ಪು. ೯೧-೯೩ (ಮೊದಲೆ ಉಲ್ಲೇಖಿಸಿದ್ದು)

[5]ಮೈಸೂರು ಸರ್ಕಾರದ ಆದೇಶ ಸಂ. ೩೩೬೭-೬೯-೧೧೬೯ ದಿನಾಂಕ ೨೬-೯-೧೯೮೦)

[6]ಅರ್ಥಶಾಸ್ತ್ರ – ಅಧ್ಯಾಯ ೯ ಮೂರನೆಯ ಸಂಪುಟ ಪು. ೧೯೫

[7]ಎಸ್.ಐ.ಐ. ೧೧ (i) ೧೨೭

[8]ಎಸ್.ಐ.ಐ. ೧೫-(ii)-೫೭

[9]ಇ.ಸಿ. ೬ (ಆರ್) ಶ್ರೀರಂಗಪಟ್ಟಣ – ೫೬

[10]ಇ.ಸಿ.೩ (ಆರ್) ನಂಜನಗೂಡು ೨೮೨

[11]ಇ.ಸಿ.೧ (ಆರ್) ಕೂರ್ಗ – ೪೮

[12]ಎಸ್.ಐ.ಐ. ೧೧. (i).೧೩೫

[13]ಇ.ಸಿ. ೩ (ಆರ್) ಹೆಗ್ಗಡೆದೇವನಕೋಟೆ – ೧೦೭

[14]ಎಸ್.ಐ.ಐ.೧೧ (ii). ೧೫೧.

[15]ಇ.ಸಿ.೮ (ಆರ್) ಹೊಳೇನರಸೀಪುರ – ೪೨

[16]ಇ.ಸಿ.೬ ಕಡೂರು ೧೩೪

[17]ಇ.ಸಿ.೮ (ಆರ್) ಅರಕಲಗೂಡು ೧೧

[18]ಇ.ಸಿ.೫ (ಆರ್) ಮೈಸೂರು ೯೨

[19]ಇ.ಸಿ. ೧೦. ಮುಳುಬಾಗಿಲು ೧೭೨.