ಕೆರೆ ಪಂಚಾಯಿತಿ ಶಾಸನ : ೧೯೧೧ :

ಈ ನಿಯಮಗಳಿದ್ದರೂ ಹಳ್ಳಿಯವರಲ್ಲಿ ಸಾಮುದಾಯಿಕ ಭಾವನೆ ಮಾಯವಾಗಿದ್ದರಿಂದ ಹಾಗೂ ನಿಯಮಗಳನ್ನು ಜಾರಿ ಮಾಡಲು ನಿಯುಕ್ತರಾಗಿದ್ದ ಅಧಿಕಾರಿಗಳ ಆಲಸ್ಯದಿಂದ ಕೆರೆಗಳ ಸಂರಕ್ಷಣೆ ಅಲಕ್ಷ್ಯಕ್ಕೆ ಒಳಗಾದುದು ಗಮನಕ್ಕೆ ಬಂತು. ತಮ್ಮ ಕೆರೆಯ ಸಂರಕ್ಷಣೆಗೆ ಬೇಕಾದ ಕ್ರಮಗಳಲ್ಲಿ ಹಳ್ಳಿಯ ಜನರ ಸಹಕಾರವನ್ನು ಪಡೆಯಲು ಅವರ ಮಾತಿಗೂ ಅವಕಾಶ ಕೊಡುವುದು, ಆ ಉದ್ದೇಶಕ್ಕಾಗಿ ಗೊತ್ತುಮಾಡಿ ಇರಿಸಲಾದ ಹಣವನ್ನು ವ್ಯಯಿಸಿ ಕೆಲಸವನ್ನು ಮಾಡಲು ಅಧಿಕಾರಿ ನೀಡುವುದು ಇದಕ್ಕೆ ಪರಿಹಾರ ಎಂದು ಸರ್ಕಾರ ಭಾವಿಸಿತು. ಇದರಿಂದ ಈ ಕೆಲಸ ಸರ್ಕಾರಕ್ಕೆ ಮಾತ್ರ ಕಾಳಜಿ ಇರುವಂಥದಲ್ಲ ಎಂದು ಆ ಜನ ಭಾವಿಸಿಯಾರು. ಈ ಉದ್ದೇಶದಿಂದ ಸರ್ಕಾರ ೧೯೧೧ರಲ್ಲಿ ಕೆರೆ ಪಂಚಾಯಿತಿ ಶಾಸನವನ್ನು ಮಾಡಿತು.

ಈ ಶಾಸನದ ಪ್ರಕಾರ ಹಳ್ಳಿಯಲ್ಲಿ ಕೆರೆ ಕೆಳಗಿನ ತರಿ ಭೂಮಿಯಲ್ಲಿ ಅರ್ಧಕ್ಕೆ ಕಡಿಮೆ ಇಲ್ಲದಷ್ಟು ಒಟ್ಟು ಹಿಡುವಳಿ ಉಳ್ಳಂಥ ರೈತರ ಪೈಕಿ ಮೂರನೆಯ ಎರಡಕ್ಕೆ ಕಡಿಮೆ ಇಲ್ಲದಷ್ಟು ಮಂದಿ ಒಪ್ಪಿದಲ್ಲಿ ಅಲ್ಲಿ ಒಂದು ಕೆರೆ ಪಂಚಾಯಿತಿಯನ್ನು ರಚಿಸತಕ್ಕದ್ದು. ಪಂಚಾಯಿತಿಯಲ್ಲಿ ಹಳ್ಳಿಯ ಪಟೇಲ, ಶ್ಯಾನಭೋಗ ಹಾಗೂ ರೈತರಿಂದ ಆರಿಸಲಾದ ಸುಮಾರು ಮೂವರು ಅಥವಾ ಹೆಚ್ಚಿಗೆ ಸದಸ್ಯರು ಇರತಕ್ಕದ್ದು. ಚುನಾಯಿತ ಸದಸ್ಯರಲ್ಲಿ ನಾಲ್ಕರಲ್ಲಿ ಒಂದರಷ್ಟು ಮಂದಿ, ತರಿ ಅಥವಾ ಬಾಗಾಯತು ಜಮೀನು ಹೊಂದದೆ ಇರುವ ರೈತರು ಹಾಗೂ ಉಳಿದ ಸದಸ್ಯರು ತರಿ ಅಥವಾ ಭಾಗಯತು ಜಮೀನು ಉಳ್ಳವರು ಆಗಿರತಕ್ಕದ್ದು. ಚುನಾಯಿತ ಸದಸ್ಯರ ಅಧಿಕಾರದ ಅವಧಿ ಮೂರುವರ್ಷ. ಹಳ್ಳಿಯ ಪಟೇಲನೇ ಪಂಚಾಯಿತಿಯ ಅಧ್ಯಕ್ಷ.

ಪಂಚಾಯಿತಿ ಕೆಳಕಾಣಿಸಿರುವ ಬಾಬುಗಳಿಂದ ಆದ ನಿಧಿಯನ್ನು ನಿಯಂತ್ರಿಸತಕ್ಕದ್ದು.

ಅ) ತಮಗೆ ವಹಿಸಿದ ಕೆಲಸವನ್ನು ನಿರ್ವಹಿಸಲು ವಿಫಲರಾದ ಅಥವಾ ತಮ್ಮ ಪಾಲಿನ ಶ್ರಮವನ್ನು ಹಣ ಪಾವತಿಗಾಗಿ ಪರಿವರ್ತಿಸಲು ಬಯಸುವ ರೈತರಿಂದ ವಸೂಲಿ ಮಾಡಿದ ಮೊಬಲಗು.

ಆ) ಕೆರೆಯಲ್ಲಿ ಮೀನು ಹಿಡಿಯುವ ಹಕ್ಕು, ಕೆರೆ ಅಂಗಳದಲ್ಲಿ ದನಕರುಗಳನ್ನು ಮೇಯಿಸುವ ಹಕ್ಕು, ಕೆರೆ ಏರಿಯ ಮೇಲಿನ ಹುಲ್ಲನ್ನು ಕುಯಿದು ಒಯ್ಯುವ ಹಕ್ಕು ಹಾಗೂ ಕೆರೆಯಲ್ಲಿ ಅದರ ಏರಿಯಲ್ಲಿ ಇರುವ ಮರಗಳ ಉತ್ಪನ್ನವನ್ನು ಒಯ್ಯುವ ಹಕ್ಕು ಇವುಗಳ ಬಿಕರಿಯಿಂದ ಬಂದ ಮೊಬಲಗು.

ಇ)ಕೆರೆ ಅಂಗಳದಲ್ಲಿ ತಾತ್ಕಾಲಿಕವಾಗಿ ಅಲ್ಪಕಾಲಿನ ಬೆಳೆಗಳನ್ನು ಬೆಳೆಯುವುದಕ್ಕೆ ನೀಡುವ ಅವಕಾಶಕ್ಕಾಗಿ ಪಡೆಯುವ ಬಾಡಿಗೆ ಹಣ ಅಥವಾ ಉತ್ಪನ್ನದ ಪಾಲು.

ಈ) ಸರ್ಕಾರ ನೀರಾವರಿ ಸುಂಕನಿಧಿಯಿಂದ ನೀಡುವ ಅನುದಾನ.

ಉ) ಪಂಚಾಯಿತಿ ಬಯಸಿದಲ್ಲಿ ಕೆರೆಯ ಜೀರ್ಣೋದ್ಧಾರ ಅಥವಾ ಅಭಿವೃದ್ಧಿಗೆ ಸರ್ಕಾರ ಕೊಡುವ ಮಂಗಡ ಹಣ.

ಊ) ಸರ್ಕಾರ ಪಂಚಾಯಿತಿಗೆ ನೀಡಬಹುದಾದ ಇತರ ಯಾವುದೇ ಅನುದಾನ ಅಥವಾ ಸಾಲ.

ಕೆರೆಯಿಂದ ನೀರು ಬಿಡುವುದನ್ನು ನಿಯಂತ್ರಿಸುವ ಅಧಿಕಾರ ಪಂಚಾಯಿತಿಗೆ ಇತ್ತು. ಅಲ್ಲದೆ ಯಾವುದೇ ವರ್ಷದಲ್ಲಿ ಕೆರೆಯಲ್ಲಿ ಸಿಗುವ ನೀರಿನ ಪ್ರಮಾಣವನ್ನು ನೋಡಿಕೊಂಡು ಎಷ್ಟು ಭೂಮಿಯಲ್ಲಿ ತರಿ ಬೆಳೆ ಇಡಬೇಕು, ಎಷ್ಟರಲ್ಲಿ ಕಬ್ಬು ಬೆಳೆಯಬಹುದು ಎಂಬುದನ್ನು ಗೊತ್ತುಮಾಡಲು ಪಂಚಾಯಿತಿಗೆ ಅಧಿಕಾರ ನೀಡಲಾಗಿತ್ತು. ಕೆರೆ ಪಂಚಾಯಿತಿ ಅಸ್ತಿತ್ವಕ್ಕೆ ಬಂದ ಮೇಲೆ ೧೮೭೩ ಹಾಗೂ ೧೯೦೪ ನಿಯಮಗಳಲ್ಲಿ ವಿಧಿಸಿದಂತೆ ಎಲ್ಲ ಕೆರೆಗಳ ಸಂರಕ್ಷಣೆ ಕುರಿತಂತೆ ರೈತರ ಮೇಲೆ ಇದ್ದ ಸಾಂಪ್ರದಾಯಿಕ ಹೊಣೆಗಾರಿಕೆಯ ಚಾಲನೆಯು ಪಂಚಾಯಿತಿಯ ಪಾಲಿಗೆ ಬಂತು.

೧೯೧೩ – ೧೪ರಲ್ಲಿ ಕೆಳಕಾಣಿಸಿರುವ ಮೂವತ್ತು ಕೆರೆ ಪಂಚಾಯಿತಿಗಳು ಇದ್ದವು.

[1]
ಕ್ರ.ಸಂ. ಜಿಲ್ಲೆ ತಾಲೂಕು ಕೆರೆ
೧. ಬೆಂಗಳೂರು ದೊಡ್ಡಬಳ್ಳಾಪುರ ಮಧುರೆ ಕೆರೆ
೨. ಬೆಂಗಳೂರು ಮಾಗಡಿ ಕೆಂಪಸಾಗರ
೩. ಬೆಂಗಳೂರು ಬೆಂಗಳೂರು ಬೆಳಂದೂರು ಹಾಗೂ ವರ್ತೂರುಕೆರೆ
೪. ಕೋಲಾರ ಕೋಲಾರ ಕೋಡಿಕಣ್ಣೂರು
೫. ಕೋಲಾರ ಮಾಲೂರು ಹೊಂಗನಹಳ್ಳಿ ಜಂಬುಕೆರೆ
೬. ಕೋಲಾರ ಗುಡಿಬಂಡೆ ಬೈರಸಂದ್ರ ಕೆರೆ
೭. ತುಮಕೂರು ಮಧುಗಿರಿ ಸಿದ್ಧಾಪುರ ಕೆರೆ
೮. ತುಮಕೂರು ತುಮಕೂರು ಬೆಳ್ಳಾವಿ ಕೆರೆ
೯. ತುಮಕೂರು ತುಮಕೂರು ಹೊನ್ನುಡಿಕೆ ಕೆರೆ
೧೦. ತುಮಕೂರು ಕೊರಟಗೆರೆ ಅಗ್ರಹಾರ ಕೆರೆ
೧೧. ತುಮಕೂರು ಪಾವಗಡ ಪಾಲವಳ್ಳಿ ಕೆರೆ
೧೨. ತುಮಕೂರು ತಿಪಟೂರು ನೊಣವಿನಕೆರೆ
೧೩. ತುಮಕೂರು ತುರುವೆಕೆರೆ ಮಾಯಸಂದ್ರ ಕೆರೆ
೧೪. ತುಮಕೂರು ತುರುವೆಕೆರೆ ಸೂಳೆಕೆರೆ
೧೫. ಮೈಸೂರು ಕೃಷ್ಣರಾಜಪೇಟೆ ದೇವಿರಮ್ಮಣ್ಣಿಕೆರೆ
೧೬. ಮೈಸೂರು ಗುಂಡ್ಲುಪೇಟೆ ವಿಜಯಪುರ ಅಮಾನಿ ಕೆರೆ
೧೭. ಹಾಸನ ಹಾಸನ ಸಣ್ಣಕೆರೆ
೧೮. ಹಾಸನ ಚನ್ನರಾಯಪಟ್ಟಣ ಹಿರೀಸಾವೆ ಕೆರೆ
೧೯. ಹಾಸನ ಹೊಳೆನರಸೀಪುರ ಇಚ್ಚನಹಳ್ಳಿ ದೊಡ್ಡಕೆರೆ
೨೦. ಶಿವಮೊಗ್ಗ ಶಿಕಾರಿಪುರ ತಾವರೆಕೆರೆ
೨೧. ಶಿವಮೊಗ್ಗ ಚನ್ನಗಿರಿ ದೊಡ್ಡಕೆರೆ ಆವಿನಮಡು ಹಾಗೂ ಸುಬ್ಬರಾಯನ ಕಟ್ಟೆ
೨೨. ಶಿವಮೊಗ್ಗ ಸೊರಬ ಬೆಂಡೆಕೆರೆ
೨೩. ಶಿವಮೊಗ್ಗ ಸೊರಬ ತೋಟದಕೆರೆ
೨೪. ಶಿವಮೊಗ್ಗ ಕುಂಸಿ ಹೊಸಕೆರೆ
೨೫. ಶಿವಮೊಗ್ಗ ಶಿವಮೊಗ್ಗ ನಿಡಿಗೆಹಳ್ಳಿಯ ದೊಡ್ಡಕೆರೆ ಹಾಗೂ ಹುಚ್ಚಮ್ಮನ ಕೆರೆ
೨೬. ಚಿಕ್ಕಮಗಳೂರು ಚಿಕ್ಕಮಗಳೂರು ಮಾಗಡಿ ಕೆರೆ
೨೭. ಚಿಕ್ಕಮಗಳೂರು ಕಡೂರು ಸಿಂಗಟಗೆರೆ
೨೮. ಚಿತ್ರದುರ್ಗ ಚಳ್ಳಕೆರೆ ಪರಶುರಾಮಪುರ ಕೆರೆ
೨೯. ಚಿತ್ರದುರ್ಗ ಹೊಳಲಕೆರೆ ಅಂದನೂರು ಕೆರೆ
೩೦. ಚಿತ್ರದುರ್ಗ ಹೊಳಲಕೆರೆ ಹಿರೇಕೆರೆ

ಮುಂದೆ ವರ್ಷವರ್ಷವೂ ಹೆಚ್ಚು ಹೆಚ್ಚು ಇಂಥ ಪಂಚಾಯಿತಿಗಳನ್ನು ಮಂಜೂರು ಮಾಡಲಾಯಿತು. ೧೯೧೯ – ೨೦ರಲ್ಲಿ ೧೦೯ ಇಂಥ ಪಂಚಾಯಿತಿಗಳು ಇದ್ದವು. ೧೯೩೪ – ೩೫ತಲ್ಲಿ ೧೨೭ ಕೆರೆ ಪಂಚಾಯಿತಿಗಳಿದ್ದವು. ಇವುಗಳಲ್ಲಿ ಏಳುಮಾತ್ರ ಚುರುಕಾಗಿ ಕೆಲಸ ಮಾಡುತ್ತಿದ್ದವು. ಎಲ್ಲೋ ಕೆಲವೇ ಕೆಲವು ಪಂಚಾಯಿತಿಗಳು ಮಾತ್ರ ನಿಧಿ ಶೇಖರಣೆ ಮಾಡಿ, ನೀರಿನ ಹಂಚಿಕೆ, ಕೆರೆ ಏರಿಗಳ ಕಳೆಗಿಡಗಳ ನಿರ್ನಾಮ ಮತ್ತಿತರ ದುರಸ್ತಿ ಕಾರ್ಯಗಳಲ್ಲಿ ಆಸಕ್ತಿ ವಹಿಸಿದರು ಎನ್ನಲಾಗಿದೆ. ಕೆಲವು ಕೆರೆ ಪಂಚಾಯಿತಿಗಳು ತಮಗೆ ವಹಿಸಲಾಗಿದ್ದ ಕರ್ತವ್ಯಗಳನ್ನು ನಿರ್ವಹಿಸದೆ ಹೋದುದರಿಂದ ಅವುಗಳನ್ನು ರದ್ದು ಮಾಡಲಾಯಿತು. (ಮಾರ್ಚಿ ೧೯೧೫ರಲ್ಲಿ ರಚಿತವಾದ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಪಂಚಾಯಿತಿ ಜನರಿ ೧೯೩೬ರಲ್ಲಿ ರದ್ದಾಯಿತು.[2])

ಕೆರೆ ಪಂಚಾಯಿತಿ ವೈಫಲ್ಯ :

ರೈತರಲ್ಲಿ ಸಹಕಾರದ ಕೊರತೆಯೋ ಅಥವಾ ರೂಢಿಯ ಸಂರಕ್ಷಣಾ ಕ್ರಮಗಳನ್ನು ಜಾರಿಮಾಡುವುದರಲ್ಲಿ ಪಟೇಲ ಅಥವಾ ಶ್ಯಾನುಭೋಗರ ಉತ್ಸಾಹದ ಅಭಾವವೋ, ಇಲ್ಲವೆ ಇನ್ನಾವ ಕಾರಣಕ್ಕೋ ಕೆರೆ ಪಂಚಾಯಿತಿಗಳು ಕೆಲಸಮಾಡುವುದರಲ್ಲಿ ಸೋತು ಮೃತಪ್ರಾಯವಾದವು. ರೂಢಿಯ ಕರ್ತವ್ಯಗಳನ್ನು ಜಾರಿಮಾಡುವುದು ಪಟೇಲ ಅಥವಾ ಹಳ್ಳಿಯ ಮುಖ್ಯಸ್ಥನಿಗೆ ಸಾಧ್ಯವಾಗಲಿಲ್ಲ. ಏಕೆಂದರೆ ಆತ ಹೆಸರಿಗೆ ಮಾತ್ರ ಊರಿಗೆ ತಲೆಯಾಳು, ಸರ್ಕಾರಿ ಸಂಬಳದ ಒಬ್ಬ ಚಾಕರ ಎನ್ನುವ ಸ್ಥಿತಿಯನ್ನು ಮುಟ್ಟಿದ್ದ, ಪಟೇಲ ಗ್ರಾಮವಾಸಿಯಾಗಿರಲಿಲ್ಲ. ಹತ್ತಿರದ ನಗರ ಕೇಂದ್ರದಲ್ಲಿ ವಾಸಿಸುತ್ತಿದ್ದ. ಹಳ್ಳಿಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ವರ್ಗಗಳು ಅಥವಾ ಗುಂಪುಗಳು ಹುಟ್ಟಿಕೊಂಡು, ಮುಖ್ಯಸ್ಥನಿಗೆ ತನ್ನ ಆಜ್ಞೆಯನ್ನು ಜಾರಿ ಮಾಡುವುದು ಸಾಧ್ಯವಾಗದೆ ಹೋಯಿತು. ಅಲ್ಲದೆ, ನಗರ ಕೇಂದ್ರದಲ್ಲಿ ಜನಸಂಖ್ಯೆ ಅಪಾರ ಬೆಳೆಯಿತು. ಆರ್ಥಿಕ ಸಾಮಾಜಿಕ ಘನತೆ ಹಾಗೂ ಅಧಿಕಾರ ಹೆಚ್ಚಾಯಿತು. ಇದರಿಂದಾಗಿ ಬಹುಪಾಲು ಭಾರಿ ಹಾಗೂ ಶ್ರೀಮಂತ ಜಮೀನುದಾರರು ತಮ್ಮ ಭೂಮಿಗಳ ಯೋಗಕ್ಷೇಮವನ್ನು ತಮ್ಮ ನಂಬಿಗಸ್ಥ ಆಳುಗಳ ಕೈಗೆ ವಹಿಸಿ, ತಾವು ನಗರಪ್ರದೇಶಗಳಿಗೆ ಹೊರಟು ಹೋದರು. ಇವೆಲ್ಲದರಿಂದ ಹಾಗೂ ಇನ್ನೊ ಅನೇಕ ಕಾರಣಗಳಿಂದಾಗಿ ಬಹುಶಃ ರೂಢಿಯ ಕರ್ತವ್ಯಗಳು ಮೂಲೆಗುಂಪಾದವು.

ಸಂರಕ್ಷಣೆ ಸರ್ಕಾರದ ವಶಕ್ಕೆ :

ಕೆರೆಗಳ ಸಂರಕ್ಷಣೆ ಹಾಗೂ ಅಂಥ ಇನ್ನಿತರ ಕೆಲಸಗಳ ಬಗ್ಗೆ ಪ್ರತಿಯೊಬ್ಬ ಹಳ್ಳಿಯವನೂ ತನ್ನ ರೂಢಿಯ ಕರ್ತವ್ಯವನ್ನು ನಿರ್ವಹಿಸುವಂತೆ ಮಾಡುವುದು ಸಾಧ್ಯವಿಲ್ಲ ಎಂದು ತಿಳಿದುಬಂದಿತೊ ಏನೋ, ಸರ್ಕಾರ ೧೯೩೨ರ ಮೈಸೂರು ನೀರಾವರಿ ಶಾಸನದಲ್ಲಿ ಒಂದು ಕಟ್ಟುಪಾಡನ್ನು ಸೇರಿಸಿತು. ತನ್ನ ಕರ್ತವ್ಯವನ್ನು ಶ್ರಮ ರೂಪದಲ್ಲಿ ನಿರ್ವಹಿಸಲು ಅಗದಂಥವರೆಲ್ಲ ಅದನ್ನು ಹಣದ ರೂಪದಲ್ಲಿ ಗಣನೆಮಾಡಿ ಸಲ್ಲಿಸಬಹುದು ಎಂಬುದನ್ನು ಸೇರಿಸಿತು. ಅದರೆ ಅಂಥ ಸುಂಕವನ್ನು ವಿಧಿಸಲು ಕೆರೆ ಕೆಳಗಿನ ಜನರಲ್ಲಿ ಮೂರನೆಯ ಎರಡು ಭಾಗ ಜನರು ಒಪ್ಪಿಗೆ ಅಗತ್ಯ ಎಂದು ಗೊತ್ತು ಮಾಡಲಾಯಿತು.

ಈ ಎಲ್ಲ ಕ್ರಮಗಳೂ ಕೆರೆಗಳ ಸುಸ್ಥಿತಿಯ ಬಗ್ಗೆ ಅಪೇಕ್ಷಿತ ಫಲವನ್ನು ನೀಡದೇ ಹೋದವು. ಭೂಮಿಗೆ ಒಳ್ಳೆಯ ನೀರಾವರಿ ಒದಗಿಸುವ ಉದ್ದೇಶದಿಂದ ಸರ್ಕಾರವೇ ಅಂಥ ಕೆರೆಗಳ (ಸಣ್ಣ ನೀರಾವರಿ ಕೆರೆಗಳು) ಪೂರಾ ಜವಾಬ್ದಾರಿಯನ್ನು ತಾನೆ ವಹಿಸಿಕೊಳ್ಳಲು ಒಪ್ಪಿತು. ೧೯೫೨ರಲ್ಲಿ ೧೯೩೨ರ ಮೈಸೂರು ನೀರಾವರಿ ಶಾಸನಕ್ಕೆ ಒಂದು ಕಲಮನ್ನು ಸೇರಿಸಲಾಯಿತು. ಅಂದರೆ ಯಾವ ಕೆರೆಗಳ ಸಂರಕ್ಷಣೆಯನ್ನು ಸರ್ಕಾರ ವಹಿಸಿಕೊಳ್ಳುವುದೋ ಅವುಗಳಿಂದ ಲಾಭ ಪಡೆಯುವ ಪ್ರದೇಶದ ಪ್ರತಿಯೊಬ್ಬ ಹಿಡುವಳಿದಾರನೂ ನಿಗದಿಯಾದ ಭೂಕಂದಾಯದ ಜೊತೆಗೆ ಎಕರೆಗೆ ಸಾಲಿಯಾನ ಮೂರು ರೂಪಾಯಿಗಳನ್ನು ಸಂರಕ್ಷಣಾ ಸುಂಕವಾಗಿ ಸರ್ಕಾರಕ್ಕೆ ಕೊಡಬೇಕು ಎಂದಾಯಿತು.

೧೯೬೫ರ ನೀರಾವರಿ ಶಾಸನದಲ್ಲಿ ೧೯೩೨ರ ಶಾಸನದಲ್ಲಿ ಹೇಳಲಾಗಿದ್ದ ಸಣ್ಣ ನೀರಾವರಿ ಎಂಬ ಶಬ್ದವನ್ನು ಕೈಬಿಡಲಾಯಿತು. ಯಾವುದೇ ವ್ಯಕ್ತಿಯಾಗಲಿ ಇಲ್ಲವೇ ವ್ಯಕ್ತಿಗಳ ಕೂಟವಾಗಲಿ ನಿರ್ವಹಿಸುತ್ತಿದ್ದ ಯಾವುದೇ ನೀರಾವರಿ ಕಾರ್ಯದ ಸಂರಕ್ಷಣೆಯನ್ನಾದರೂ ಸರ್ಕಾರ ವಶಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಯಿತು. ೧೯೬೫ರಿಂದ ಈಚೆಗೆ ಯಾವುದೇ ನೀರಾವರಿ ಕಾರ್ಯದ ಸಂರಕ್ಷಣೆಯನ್ನು ವಹಿಸಿಕೊಂಡ ಬಗ್ಗೆ ಸರ್ಕಾರದ ಆಜ್ಞೆಯಾಗಿಲ್ಲ. ಅಂದರೆ ಎಲ್ಲಾ ನೀರಾವರಿ ಕಾಮಗಾರಿಗಳ ಸಂರಕ್ಷಣೆಯ ಸರ್ಕಾರದ ವಶದಲ್ಲಿತ್ತು ಎನ್ನಬಹುದು.

ಇಂದಿನ ಸ್ಥಿತಿ :

೧೯೮೭ರಲ್ಲಿ ಜಿಲ್ಲಾ ಪರಿಷತ್ತುಗಳು ರೂಪುಗೊಳ್ಳುವುದಕ್ಕೆ ಮೊದಲು ಹತ್ತು ಎಕರೆ ಅಥವಾ ಕಡಿಮೆ ನೀರಾವರಿ ಯೋಗ್ಯ ಅಚ್ಚುಕಟ್ಟು ಉಳ್ಳ ಎಲ್ಲ ಕೆರೆಗಳನ್ನು ಪಂಚಾಯಿತಿಗಳು ಅಥವಾ ಸ್ಥಳೀಯ ಸಂಸ್ಥೆಗಳು ಸರ್ಕಾರ ಕೊಡಮಾಡುತ್ತಿದ್ದ ಅನುದಾನದಿಂದ ಸಂರಕ್ಷಿಸುತ್ತಿದ್ದವು. ಇತರ ಎಲ್ಲ ಕೆರೆಗಳನ್ನು ಲೋಕೋಪಯೋಗಿ ಇಲಾಖೆ ಸಂರಕ್ಷಿಸುತ್ತಿತ್ತು. ಸಂರಕ್ಷಣೆಯ ಅನುದಾನವನ್ನು ನಿಗದಿಮಾಡಲು ಯಾವುದೇ ನಿರ್ದಿಷ್ಟ ಅಳತೆಗೋಲು ಇರಲಿಲ್ಲ. ಕೆಲವು ಕೆರೆಗಳಿಗೆ ನಿರ್ದಿಷ್ಟ ಅನುದಾನವಿತ್ತು. ಉಳಿದವು ಬಹುತೇಕ ಅಲಕ್ಷ್ಯಕ್ಕೆ ಪಕ್ಕಾಗಿದ್ದವು. ಎಂಟನೆಯ ಧನ ಆಯೋಗಕ್ಕೆ ರಾಜ್ಯ ಒದಗಿಸಿದ ಮಾಹಿತಿಯಂತೆ ಕೆರೆಗಳ ಸಂರಕ್ಷಣೆ ಹಾಗೂ ದುರಸ್ತಿಗಳಿಗೆ ಒದಗಿಸಲಾದ ಹಣ ಪ್ರತಿ ಎಕರೆಗೆ ಕೇವಲ ಸುಮಾರು ಇಪ್ಪತ್ತು ರೂಪಾಯಿ. ಇದರಲ್ಲಿ ಸೌದಿ ಮುಂತಾದ ಸಿಬ್ಬಂದಿಯವರ ಸಂಬಳವೂ ಸೇರಿತ್ತು. ಆದ್ದರಿಂದ ಕೆರೆಗಳ ದುರಸ್ತಿಗಾಗಿ ಆಗುತ್ತಿದ್ದ ವಾಸ್ತವ ವೆಚ್ಚ ತೀರ ನಗಣ್ಯ ವಾದುದಾಗಿತ್ತು.

ಜಿಲ್ಲಾ ಪರಿಷತ್ತುಗಳು ರೂಪುಗೊಂಡ ಮೇಲೆ ೫೦೦೦ ಅಥವಾ ಕಡಿಮೆ ಎಕರೆ ನೀರಾವರಿ ಯೋಗ್ಯ ಅಚ್ಚುಕಟ್ಟು ಉಳ್ಳ ಕೆರೆಗಳ ಸಂರಕ್ಷಣೆಯನ್ನು ಪರಿಷತ್ತಿಗೆ ವಹಿಸಲಾಗಿದೆ. ಇತರ ಭಾರಿ ಕೆರೆಗಳು ಮಾತ್ರ ಸರ್ಕಾರದಿಂದ ರಕ್ಷಿತವಾಗಿವೆ.[3] ಸಂರಕ್ಷಣೆಯ ಅನುದಾನದಲ್ಲೇನೊ ಎಕರೆಗೆ ನಲವತ್ತು ರೂಪಾಯಿಗಳನ್ನು ಒದಗಿಸಲಾಗಿದೆ. ಆದರೆ ಸಿಬ್ಬಂದಿಯ ವೇತನ ಶ್ರೇಣಿಯ ಬಗ್ಗೆ ಯಾಗಲಿ ಅಥವಾ ಮಾಡಬೇಕಾದ ದುರಸ್ತಿಯ ಲಕ್ಷಣದ ವಿಷಯದಲ್ಲಿಯಾಗಲಿ ಯಾವ ನಿರ್ದಿಷ್ಟ ಪ್ರಮಾಣವೂ ಇಲ್ಲ. ಆಗುವ ವೆಚ್ಚವೆಲ್ಲ ಬಹುಪಾಲು ಸಿಬ್ಬಂದಿಯ ಸಂಬಳಕ್ಕೆ ಕಾಲಕಾಲದ ದುರಸ್ತಿಗಳಿಗೆ ಆಗುವ ವೆಚ್ಚ ತೀರ ಅಲ್ಪ.

ಜನರ ಪಾಲುದಾರಿಕೆ ಅಗತ್ಯ :

ಕೆರೆಗಳ ಬಗೆಗಿನ ಇಂದಿನ ಅಲಕ್ಷ್ಯಕ್ಕೆ ಮುಖ್ಯಕಾರಣವೆಂದರೆ ಗ್ರಾಮಸಮುದಾಯದಲ್ಲಿ ಈ ಕೆರೆ ತಮಗೆಲ್ಲರಿಗೂ ಸೇರಿದ ಆಸ್ತಿ ಅಥವಾ ತಮಗೆ ಸೇರಿದ ಸಂಪನ್ಮೂಲ ಎಂಬ ಭಾವನೆ ಇಲ್ಲದಿರುವುದು. ಕೆರೆ ಎನ್ನುವುದು ಸರ್ಕಾರಕ್ಕೆ ಸೇರಿದೆ, ಸರ್ಕಾರ ಸಂರಕ್ಷಿಸುವ ಹಾಗೂ ದುರಸ್ತಿ ಮಾಡುವ ಒಂದು ಬಾಬು ಎನಿಸಿಹೋಗಿದೆ.

ಹಿಂದೆ ಕೆರೆಯ ಸಂರಕ್ಷಣೆಯು ಸಾಮಾನ್ಯವಾಗಿ ಜನತೆಯಿಂದ ಬಿತ್ತುವಟ್ಟ ದಶವಂದ ಹಾಗೂ ಕಟ್ಟುಕೊಡಿಗೆಳನ್ನು ಪಡೆಯುತ್ತಿದ್ದ ಕೆರೆ ನಿರ್ಮಾತೃವಿನ ಹೊಣೆಯಾಗಿತ್ತು ಎನ್ನುವುದನ್ನು ನಾನಾ ಶಾಸನಗಳು ಹಾಗೂ ಬುಕಾನನ್ನನ ಟಿಪ್ಪಣಿಗಳು ಸೂಚಿಸುತ್ತವೆ. ಕೆರೆಯ ಸಂರಕ್ಷಣೆಯನ್ನು ನಿರ್ಮಾತೃ ಅಸಡ್ಡೆ ಮಾಡಿದಲ್ಲಿ ಸಾಮಾನ್ಯವಾಗಿ ಬೇರೆ ಯಾವನಾದರೂ ವ್ಯಕ್ತಿ ಅದರ ದುರಸ್ತಿಯನ್ನೂ ಜೀರ್ಣೋದ್ಧಾರವನ್ನೂ ಒಂದು ಪುಣ್ಯ ಕಾರ್ಯವೆಂದು ಭಾವಿಸಿ ವಹಿಸಿಕೊಳ್ಳುತ್ತಿದ್ದ. ಇದಕ್ಕಾಗಿ ಆತನಿಗೆ ಹೊಸ ಕಟ್ಟುಕೊಡಿಗೆ ದತ್ತವಾಗುತ್ತಿತ್ತು.

ಕೆರೆಯ ಸಂರಕ್ಷಣೆ ಕೆರೆಯ ಕೆಳಗೆ ಭೂಮಿಯನ್ನು ಹೊಂದಿದ್ದ ಕೊಡಿಗೆದಾರನ ಹೊಣೆಯಾಗಿತ್ತು. ಕೆರೆ ಸಂರಕ್ಷಣೆಯ ಹೊಣೆಯನ್ನು ಅದರ ಫಲಾನುಭವಿಯಾದ ಒಬ್ಬನೇ ವ್ಯಕ್ತಿಗೆ ವಹಿಸಿದ್ದು, ಆದರ್ಶಪ್ರಾಯ ವ್ಯವಸ್ಥೆಯಾಗಿತ್ತು. ಕೆರೆಯ ಸುಸ್ಥಿತಿಯಲ್ಲಿ ಕೊಡಿಗೆ ದಾರನಿಗೂ ಆಸಕ್ತಿ ಇತ್ತು. ಹಾಗಾಗಿ ಆತ ಕೆಲಸವನ್ನು ಚೆನ್ನಾಗಿ ಯೋಚನೆ ಮಾಡಿ, ಸಮಗ್ರವೂ ದಕ್ಷವೂ ಆದ ರೀತಿಯಲ್ಲಿ ನಡೆಸಬಹುದಾಗಿತ್ತು. ನಮ್ಮ ಕೆರೆಗಳ ಅಲಕ್ಷ್ಯ ಬಹುಶಃ ಕಟ್ಟುಕೊಡಿಗೆ ವ್ಯವಸ್ಥೆಯನ್ನು ನಾವು ಕೈಬಿಟ್ಟುದರ ಪರಿಣಾಮ. ಅಂಥ ವ್ಯವಸ್ಥೆ ಬಹುತೇಕ ಒಂದುಹಳ್ಳಿಯ ಅನುಭೋಗಕ್ಕೆ ಇದ್ದ ಕೆರೆಗೆ ಮಾತ್ರ ಸೀಮಿತವಾಗಿತ್ತು. ಅನೇಕ ಹಳ್ಳಿಗಳ ಅನುಭೋಗಕ್ಕೆ ಒದಗುವಂಥ ಭಾರಿ ಕೆರೆಗಳನ್ನು ಸರ್ಕಾರ ನಿರ್ಮಿಸಿದಾಗ ಸಂರಕ್ಷಣೆಗಾಗಿ ಸೂಕ್ತ ವ್ಯವಸ್ಥೆ ರೂಪಿತವಾಗಲಿಲ್ಲ. ಇದೂ ಸಾಧ್ಯವಿದೆ.

ನಮ್ಮ ಕರೆಗಳ ಸಂರಕ್ಷಣೆ ಅಲಕ್ಷ್ಯಕ್ಕೆ ಗುರಿಯಾಗಲು ಇನ್ನೂ ಒಂದು ಕಾರಣ ಅಂದರೆ, ಪ್ರವಾಹಗಳಿಂದ ಕೆರೆಯ ಏರಿ ಅಡಿಗಡಿಗೆ ಒಡೆದುಹೋಗುವುದು ಮತ್ತು ಅದನ್ನು ಮೂಲ ಸ್ಥಿತಿಗೆ ತರಲು ಸಾಕಾಗುವಷ್ಟು ಸಂಪನ್ಮೂಲ ಕಟ್ಟುಕೊಡಿಗೆದಾರನಲ್ಲಿ ಇಲ್ಲದಿರುವುದು ಅಥವಾ ಕೆರೆಯೊಳಕ್ಕೆ ಬರುವ ನೀರಿನಲ್ಲಿ ಅಡಿಗಡಿಗೆ ಕೊರತೆಯುಂಟಾಗಿ, ಕೊಡೆಗೆದಾರನ ಭತ್ತದ ಬೆಳೆಗೆ ಅನುಕೂಲವಾಗುವಂತೆ ಸಾಕಷ್ಟು ನೀರು ಅವನ ಜಮೀನಿಗೆ ಒದಗದೆ ಹೋಗುವುದು. ಬಹು ದೀರ್ಘಕಾಲ ಅಂಥ ಅಲಕ್ಷ್ಯ ಮುಂದುವರಿದಾಗ, ಕೊಡಿಗೆದಾರ ಯಾವುದೇ ದುರಸ್ತಿ ನಡೆಸುವುದೂ ಕಷ್ಟವಾಯಿತು.

ಕೊಡಿಗೆದಾರನಿಗೆ ಒಂದಿಷ್ಟು ಭೂಮಿಯನ್ನು ಮಾನ್ಯವಾಗಿ (ಕಂದಾಯವಿಲ್ಲದೆ) ಕೊಡುವುದು ಕೆರೆಯ ಸಂರಕ್ಷಣೆಯ ಒಳ್ಳೆಯ ಎಣಿಕೆಯ ಹಾಗೂ ಸಾಕೆನಿಸುವ ವ್ಯವಸ್ಥೆಯಾಗಿತ್ತು. ಉದಾಹರಣೆಗೆ ನೂರು ಎಕರೆ ಅಚ್ಚುಕಟ್ಟು ಉಳ್ಳ ಒಂದು ಕೆರೆಯ ಕೆಳಗೆ ಹತ್ತು ಎಕರೆ ಭತ್ತದ ಗದ್ದೆಯನ್ನು ಮಾನ್ಯವಾಗಿ ಕೊಟ್ಟಿದೆ ಮತ್ತು ಅದರಿಂದ ಎಕರೆಗೆ ಹತ್ತು ಕ್ವಿಂಟಾಲು ಭತ್ತ ಉತ್ಪತ್ತಿ ಇದೆ ಎಂದು ಇಟ್ಟುಕೊಳ್ಳೋಣ. (ಕ್ವಿಂಟಾಲ್ ಗೆ ೨೦೦ ರೂ ನಂತೆ) ಹತ್ತು ಎಕರೆಯ ಭತ್ತದ ಹುಟ್ಟುವಳಿಯಲ್ಲಿ ಆತ ಸರ್ಕಾರಕ್ಕೆ ಬಾಡಿಗೆಯಾಗಿ ಪಾವತಿ ಮಾಡುತ್ತಿದ್ದ ಮೊತ್ತ ೧೦ ಸಾವಿರ ರೂಪಾಯಿ ಆಯಿತು (ಅರ್ಧಭಾಗವನ್ನು ಸರ್ಕಾರಕ್ಕೆ ಕೊಡುತ್ತಿದ್ದುದು). ಅಂದರೆ ಅಚ್ಚುಕಟ್ಟು ಪ್ರದೇಶದ ಪ್ರತಿ ಎಕರೆಗೆ ೧೦೦ ರೂ ಆಗುತ್ತದೆ. ಸರ್ಕಾರ ಈಗ ವೆಚ್ಚ ಮಾಡುವ ೪೦ ರೂಗಳಿಗೆ ಹೋಲಿಸಿದರೆ ಇದು ಸಾಕಷ್ಟು ಮೊಬಲಗು.

ಪ್ರಾಚೀನ ವ್ಯವಸ್ಥೆಯಾದ ಕಟ್ಟುಕೊಡಿಗೆ ಶಿಥಿಲಗೊಂಡು ರದ್ದಾಗಿ ಹೋಯಿತು. ಹಳ್ಳಿಯ ಮುಖ್ಯಸ್ಥ ಅಥವಾ ಗೌಡನ ಪಾರಂಪರಿಕ ಅಧಿಕಾರ ಕರಗಿಹೋಯಿತು. ಇದರಿಂದಾಗಿ ಕೆರೆ ಸಂರಕ್ಷಣೆಯ ಪ್ರಾಚೀನ ವ್ಯವಸ್ಥೆಯ ಬದಲಿಗೆ ಕೆರೆಗಳ ನಿರ್ವಹಣೆ ಸರಕಾರದ್ದೇ ಎಂದಾಯಿತು.

ಸಾವಿರಾರು ಹಳ್ಳಿಗಳಲ್ಲಿ ಅಷ್ಟೇ ಸಂಖ್ಯೆಯಲ್ಲಿ ಇರುವ ಕೆರೆಗಳ ಸಂರಕ್ಷಣೆ ಯಾವುದೇ ಕಾರ್ಯ ತಂಡಕ್ಕೂ ದುಸ್ತರವಾದ ಕಾರ್ಯವೇ ಆಗಿತ್ತು. ಇಂದಿಗೂ ಆಗಿದೆ (ಕೆರೆಗಳ ಸಂಖ್ಯೆಯನ್ನು, ಕ್ರಮಿಸಿಬೇಕಾದ ದೂರಗಳನ್ನು ನೋಡಿದರೆ ಒಂದು ಜಿಲ್ಲೆಯಲ್ಲಿರುವ ಎಲ್ಲ ಕೆರೆಗಳನ್ನು ವರ್ಷಕ್ಕೆ ಒಂದು ಸಲವಾದರೂ ಒಬ್ಬಾತ ತನಿಖೆ ಮಾಡುವುದು ಅಸಾಧ್ಯ.)

ಕೆರೆಯ ಸಂರಕ್ಷಣೆ ಹಾಗೂ ಜಲಾನಯನ ಭೂಮಿ ಮತ್ತು ಅಚ್ಚುಕಟ್ಟುಪ್ರದೇಶಗಳ ನಿರ್ವಹಣೆಗಾಗಿ ಸ್ಥಳೀಯ ಜನರು ತಾವೆ ಒಂದು ಸಂಘವನ್ನು ಕಟ್ಟಿಕೊಳ್ಳಲು ಪ್ರೋತ್ಸಾಹಿಸುವುದು ಸಮಸ್ಯೆಗೆ ಒಂದು ಯೋಗ್ಯ ಪರಿಹಾರ ವಾದೀತು. ಜಲಾನಯನ ಪ್ರದೇಶದಲ್ಲಿ ಕಾಡು ಬೆಳೆಸುವುದು, ಕೆರೆ ಅಂಗಳದಲ್ಲಿ ಮೀನುಗಾರಿಕೆ ಅಭಿವೃದ್ಧಿ ಹಾಗೂ ಅಚ್ಚುಕಟ್ಟು ಪ್ರದೇಶದಲ್ಲಿ ಭೂಸಂರಕ್ಷಣೆ – ಈ ಕೆಲಸಗಳನ್ನು ಕೆರೆ ಸಂರಕ್ಷಣಾ ಕಾರ್ಯಕ್ಕೆ ಸಂಯೋಜಿಸಿ ಆರ್ಥಿಕವಾಗಿ ಸಾಧ್ಯವಾಗಬಲ್ಲ ಚೌಕಟ್ಟನ್ನು ನಿರ್ಮಿಸಬಹುದು. ಅಂಥ ಕೆಲಸವನ್ನು ೧೯೧೧ರ ಕೆರೆ ಪಂಚಾಯಿತಿ ನಿಯಮಗಳಲ್ಲಿ ಉದ್ದೇಶಿತವಾದ ರೀತಿಯಲ್ಲಿಯೇ ಹಳ್ಳಿಯ ಸಂಘ ಅಥವಾ ಪಂಚಾಯಿತಿಗೆ ವಹಿಸಬಹುದು. ನೀರಿನ ನಿಯಂತ್ರಣಕ್ಕೆ ಹಳ್ಳಿಯವರಲ್ಲಿ ಒಬ್ಬ ನೀರುಗಂಟಿ ಅಥವಾ ಸೌದಿಯನ್ನು ಪಂಚಾಯಿತಿ ನೇಮಿಸಬಹುದು. ಹಿಂದಿನ ಕಾಲದ ಹಾಗೆ ಹುಟ್ಟುವಳಿಯಲ್ಲಿ ಒಂದು ಪಾಲನ್ನು ಸೌದಿಗೆ ಭತ್ಯವಾಗಿ ಕೊಡಬಹುದು. ಈ ಸಲಹೆಯನ್ನು ಕೊನೆಯ ಅಧ್ಯಾಯದಲ್ಲಿ ದೀರ್ಘವಾಗಿ ವಿವರಿಸಲಾಗಿದೆ.

 – – – –
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)


 

[1]ರೆವಿನ್ಯೂ ಅಡ್‌ಮಿನಿಸ್ಟ್ರೇಷನ್‌ರಿಪೋರ್ಟ್‌ಮೈಸೂರು ಸರ್ಕಾರ ೧೯೧೩-೧೪.

[2]ಸರ್ಕಾರಿ ಆದೇಶ ನಂ.ಆರ್.೪೨೨೯ ಎಲ್.ಆರ್. ೨೩೦-೩೫-೨ ದಿನಾಂಕ ೧೬ನೇ ಜನವರಿ ೧೯೩೬.

[3]೧೨೦ ಎಕರೆ ಅಚ್ಚಕಟ್ಟು ಉಳ್ಳ ಕಾಮಗಾರಿಗಳ ಬಗ್ಗೆ ಮಾತ್ರ ಆಡಳಿತಾತ್ಮಕ ಅಧಿಕಾರ