ಜಲ ನಿರ್ವಹಣೆ

ಪೀಠಿಕೆ :

ನೀರಾವರಿ ಕಾಮಗಾರಿಯಿಂದ ಸೂಕ್ತವಾಗಿ ನೀರನ್ನು ನಿಯಂತ್ರಿಸುವುದು ಜಲ ನಿರ್ವಹಣೆಯ ಒಂದು ಮುಖ್ಯಾಂಶ. ಕೌಟಿಲ್ಯನ ಅರ್ಥಶಾಸ್ತ್ರ ವಿಧಿಸುತ್ತದೆ: “ಕೆರೆಯ ತೂಬಿನಿಂದ ಅಲ್ಲದೆ ಬೇರೆ ಎಲ್ಲಿಂದಲಾದರೂ ಕೆರೆಯ ನೀರನ್ನು ಆಚೆಗೆ ಬಿಟ್ಟರೆ, ಅಂಥ ವ್ಯಕ್ತಿಗಳು ಆರಪಣ ದಂಡ ತರಬೇಕು. ಕೆರೆಯ ತೂಬಿನಿಂದ ಹರಿಯುವ ನೀರಿಗೆ ಗೊತ್ತು ಗುರಿಯಿಲ್ಲದೆ ಅಡ್ಡಿ ಮಾಡುವವರೂ ಅಷ್ಟೇ ದಂಡ ತೆರಬೇಕು”.

[1]

ಜಲನಿಯಂತ್ರಣ ಎಂದರೆ ಫಲಾನುಭವಿಗಳೆಲ್ಲರೂ ಕೆರೆಯಲ್ಲಿ ಶೇಖರಿಸಿದ ನೀರನ್ನು ಗರಿಷ್ಠ ಪ್ರಮಾಣದ ಉತ್ಪನ್ನ ದೊರೆಯುವಂತೆ ಸೂಕ್ತವಾಗಿ ಬಳಕೆಯಾಗುವ ರೀತಿಯಲ್ಲಿ ಉಪಯೋಗಿಸುವುದು. ಎಲ್ಲ ಫಲಾನುಭವಿಗಳ ನಡುವೆಯೂ ಪರಸ್ಪರ ಅರಿವು ಇದ್ದಲ್ಲಿ, ಅಂಥ ನಿಯಂತ್ರಣ ಅತ್ಯುತ್ತಮವಾಗಿ ಸಾಧಿತವಾಗುತ್ತದೆ. ಕೆರೆಯಲ್ಲಿ ನೀರು ಕಡಿಮೆಯಾದಾಗ, ಜಲನಿರ್ವಹಣೆಗೆ ಪ್ರಾಮುಖ್ಯತೆ ಬರುತ್ತದೆ. ಅಂಥ ಸಂದರ್ಭದಲ್ಲಿ ನೀರಾವರಿ ಪ್ರದೇಶವನ್ನು ಮಿತಗೊಳಿಸುವುದು ಅಥವಾ ಕಡಿಮೆ ನೀರಾವರಿಯ ಬೆಳೆಗಳನ್ನು ಇಡುವುದು ಸಾಮಾನ್ಯವಾಗಿ ಅನುಸರಿಸಲಾಗುವ ಕ್ರಮಗಳು.

ಕುನಾಲ ಜಾತಕದಲ್ಲಿ ಹೀಗೆ ಹೇಳಿದೆ – “ಶಾಕ್ಯ ಹಾಗೂ ಕೋಲಿಯ ಬಣಗಳು ಕಪಿಲವಸ್ತು ಮತ್ತು ಕೋಲಿಯ ಪಟ್ಟಣಗಳ ನಡುವೆ ಹರಿಯುತ್ತಿದ್ದ ರೋಹಿಣಿ ನದಿಗೆ ಒಂದು ಅಡ್ಡ ಗಟ್ಟೆಯನ್ನು ನಿರ್ಮಿಸಿದರು. ಈ ಕಟ್ಟೆಯ ನೀರನ್ನು ಬೇಸಾಯಕ್ಕೆ ಬಳಸುತ್ತಿದ್ದರು. ಜೇಠಮೂಲ (ಜ್ಯೇಷ್ಠ)ಮಾಸದಲ್ಲಿ ಪೈರುಗಳು ಸೊರಗಹತ್ತಿದಾಗ ಎರಡೂ ಪಟ್ಟಣಗಳ ಶ್ರಮಿಕರು ಸಭೆ ಸೇರಿದರು. ಆಗ ಕೋಲಿಯರು ಹೇಳಿದರು. “ನೀರನ್ನು ಎರಡೂ ಕಡೆಗೂ ಹಾಯಿಸಿಕೊಂಡರೆ ಇದು ಸಾಕಾಗುವುದಿಲ್ಲ. ಒಂದು ಸಲ ಮಾತ್ರ ನೀರು ಹಾಯಿಸಿದರೆ ಸಾಕು. ನಮ್ಮ ಪೈರು ಹುಲುಸಾಗುತ್ತದೆ. ನಮಗೆ ನೀರು ಕೊಡಿ[2]”. ನೀರಿನ ಸರಬರಾಜು ಕಡಿಮೆಯಾಗಿದ್ದಾಗ ನೀರನ್ನು ಒದಗಿಸಬೇಕಾದ ಪ್ರದೇಶವನ್ನು ಮಿತಗೊಳಿಸುವುದು ಇಲ್ಲಿ ಅನುಸರಿಸಲಾದ ಕ್ರಮ.

ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಜೋಡಮಪಲ್ಲಿಯ ದೊಡ್ಡಕೆರೆ ಮತ್ತು ಮಾನುಗನೆಕುಂಟೆ ಕೆಳಗೆ ಕೆರೆ ಅರ್ಧದಷ್ಟೊ ಮೂರನೆಯ ಒಂದೋ ಇಲ್ಲ ನಾಲ್ಕನೆಯ ಒಂದರಷ್ಟೋ ಮಾತ್ರ ತುಂಬಿದಾಗ ರೈತರು ಅದೇ ಪ್ರಮಾಣದಲ್ಲಿ ಅಚ್ಚುಕಟ್ಟಿನ ತಲೆಭಾಗದ ಭೂಮಿಯಲ್ಲಿ ಮಾತ್ರ ಬೆಳೆ ಇಡುತ್ತಾರೆ. ಇಲ್ಲಿನ ಸ್ವಾರಸ್ಯವೆಂದರೆ ತಲೆಭಾಗದ ಕೆಳಗಿನವರೂ ಸೇರಿದಂತೆ ಎಲ್ಲ ರೈತರು ತಮಗೆ ಕೆರೆ ಕೆಳಗೆ ಇರುವ ಭೂಮಿಯ ಪ್ರಮಾಣಕ್ಕೆ ಅನುಗುಣವಾದ ಹಾಗೂ ಕೆರೆಯಲ್ಲಿ ಸಿಗುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ತಲೆಭಾಗದ “ದಾಮಾಸಿ” ಅಚ್ಚುಕಟ್ಟಿನ ಬೇಸಾಯದಲ್ಲಿ ಭಾಗವಹಿಸಿತ್ತಾರೆ.[3] ಇರುವ ನೀರಿನ ಹಂಚಿಕೆ ಹಾಗೂ ನೀರಾವರಿ ಭೂಮಿಯ ಹಂಚಿಕೆಯ ಈ ಪದ್ಧತಿ ಬಹುಕಾಲದಿಂದಲೂ ನಡೆದುಕೊಂಡು ಬಂದಿದೆ ಎನ್ನಲಾಗಿದೆ.

ಶಾಸನಗಳ ಸಾಕ್ಷ್ಯ :

ಕೃಷ್ಣರಾಜಪೇಟೆ ತಾಲ್ಲೂಕಿನ ಭೈರಾಪುರ ಶಾಸನ (೧೩೧೨) ಹೀಗೆ ಹೇಳುತ್ತದೆ. “ಐದು ಖಂಡುಗ ತರಿ ಭೂಮಿಯನ್ನು ಮಾರಿದಾಗ ಆ ತಾಕು ಹಾಲಿ ಇದ್ದ ಕಟ್ಟೆಯಿಂದ ನೀರನ್ನು ಪಡೆಯುತ್ತದೆ, ಹಾಗೂ ಒಂದು ವೇಳೆ ಸಾಲದೆ ಹೋದಲ್ಲಿ ಬೇರೊಂದು ಕೆರೆಯಿಂದ ನಿಗದಿಯಾದ ಸರದಿ ಮೇರೆಗೆ ನೀರನ್ನು ಒದಗಿಸಲು ಏರ್ಪಾಟು ಮಾಡಲಾಗುವುದು, ಎಂದು ಒಪ್ಪಲಾಗಿತ್ತು.” [4] ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ನೀರು ಹಂಚಿಕೆಯನ್ನು ಸರದಿ ಕ್ರಮಾನುಸಾರ ಮಾಡಲಾಗುತ್ತಿತ್ತು ಅನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಆ ಕ್ರಮವೇ ಈಗ ಜಲನಿರ್ವಹಣೆಯ ದಕ್ಷವ್ಯವಸ್ಥೆ ಎಂದು ಪರಿಗಣಿತವಾಗಿದೆ.

ಮುಳುಬಾಗಿಲು ತಲ್ಲೂಕಿನ ರಾಜಗುಂಡ್ಲಹಳ್ಳಿ ಶಾಸನ (೧೪೯೬) ಮೊದಲೇ ಉದ್ಧೃತವಾದುದು. ಒಂದು ದೇವಸ್ಥಾನಕ್ಕೂ ಒಬ್ಬ ಕೆರೆ ನಿರ್ಮಾತೃವಿಗೂ ಆದ ಒಪ್ಪಂದ. ಒಪ್ಪಂದದ ಪ್ರಕಾರ ನಿರ್ಮಾತೃವಿಗೆ ಕೊಡಲಾದ ದಶವಂದ ಭೂಮಿಗೆ ಒದಗುವಷ್ಟು ತನ್ನ ಸರದಿಯಂತೆ ಪಡೆಯತಕ್ಕದ್ದು ಎನ್ನುತ್ತದೆ, ಶಾಸನ. [5] ಮಧ್ಯಕಾಲೀನ ಯುಗದಲ್ಲಿಯೂ ಕೆರೆಗಳ ಕೆಳಗೆ ದಕ್ಷವಾದ ಜಲನಿರ್ವಹಣೆ ಚೆನ್ನಾಗಿ ರೂಢವಾಗಿತ್ತು ಎನ್ನುವುದನ್ನು ಈ ಶಾಸನಗಳು ಸೂಚಿಸುತ್ತವೆ.

ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿಯ ಓಬಲಾಪುರದಲ್ಲಿ ದಿನಾಂಕವಿಲ್ಲದ ಒಂದು ಶಾಸನ, ನಾರಾಯಣಘಟ್ಟದ ಮಹಾಜನರಿಗೂ ಮಧುಸೂದನ ದೇವಸ್ಥಾನದ ಅಧಿಕಾರಿಗಳಿಗೂ ಒಂದು ಒಪ್ಪಂದ ಅದುದನ್ನು ತಿಳಿಸುತ್ತದೆ. ಅದರಂತೆ ಚಿಕ್ಕಕೆರೆ ಕೆಳಗಿನ ದೇವಾಸ್ಥಾನದ ಭೂಮಿಯನ್ನು ಅದೇ ಕೆರೆಯ ನೀರಿನಿಂದ ಮಾತ್ರ ಕೃಷಿ ಮಾಡಬೇಕಾಗಿತ್ತು. ನಾರಾಯಣ ಘಟ್ಟದಕೆರೆ ನೀರಿನಿಂದಲ್ಲ, ಈ ರೀತಿ ನಾರಾಯಣಘಟ್ಟ ಕೆರೆಯ ನೀರನ್ನು ಮಹಾಜನರು ಮಾತ್ರ ಬಳಸಲು ಒಪ್ಪಿದ್ದಕ್ಕಾಗಿ ಅವರು ದೇವಾಸ್ಥಾನಕ್ಕೆ ಒಂದು ಗದ್ಯಾಣ ವಾರ್ಷಿಕ ಸುಂಕವನ್ನು ನೀಡಲು ವಚನವಿತ್ತರು. [6] ಸಾಲು ನೀರಾವರಿ ಕಾಮಗಾರಿಗಳು ರೂಢಿಯಲ್ಲಿದ್ದವು, ಹಾಗೂ ಲಭ್ಯವಾದ ನೀರನ್ನೆಲ್ಲ ಬಳಸಲು ಸಹಾಯಕವಾಗಿದ್ದವು – ಎನ್ನುವುದನ್ನು ಈ ಶಾಸನ ತಿಳಿಸುತ್ತದೆ.

ಹಿಂದೆಯೆ ಉದ್ದರಿಸಲಾದ ಅರಕಲಗೂಡು ತಾಲ್ಲೂಕಿನ ರುದ್ರಪಟ್ಟಣ ಶಾಸನ ಕೆರೆಯ ಕಾಲುವೆಯ ಕೆಲವು ಹಳ್ಳಿಗಳನ್ನು ಹಾದು ಹೋಗಬೇಕಾದುದರಿಂದ, ಕಾಲುವೆ ಪಕ್ಕಗಳಲ್ಲಿ ಕಲ್ಲು ಕಟ್ಟಿಸಲು ಆಜ್ಞೆಯಾಗಿತ್ತು. ಎಂದು ಹೇಳುತ್ತದೆ. [7] ನೀರಾವರಿ ಕಾಲುವೆಗಳು ಹಳ್ಳಿಗಳ ಮೂಲಕ ಹಾದು ಹೋದಾಗ ಅವುಗಳಿಂದ ಜಿನುಗಿದ ನೀರಿನಿಂದ ಕಾಲುವೆ ಕೆಳಗಿದ್ದ ಮನೆಗಳಿಗೆ, ಹಗೇವುಗಳಿಗೆ ಹಾನಿ ಆಗದಿರಲಿ ಎಂದು ಕಾಲುವೆಗಳಿಗೆ ಉದ್ದಕ್ಕೂ ಕಲ್ಲು ಪದರ ಕಟ್ಟಿಸಲಾಗುತ್ತಿತ್ತು ಎನ್ನುವುದನ್ನು ಇದು ತೋರಿಸುತ್ತದೆ.

೧೮೦೦ರಲ್ಲಿ ಬುಕಾನನ್ ನೋಡಿದಂತೆ ಜಲನಿರ್ವಹಣೆ :

ಬುಕಾನನ್ ಪ್ರಕಾರ, ಜೂನ್ ಕೊನೆಯಲ್ಲಿ ಅಂದರೆ ಬೇಸಾಯಕಾಲ ಆರಂಭವಾಗುವಾಗ ರೈತರು ಕೆರೆಯಲ್ಲಿ ಸಿಗಬಹುದಾದ ನೀರಿನ ಪ್ರಮಾಣವನ್ನು ಅಂದಾಜುಮಾಡುತ್ತಿದ್ದರು. ಇಡೀ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆಯಲು ನೀರು ಸಾಕಷ್ಟು ಇಲ್ಲವಾಗಿದ್ದಲ್ಲಿ ಜೋಳ ಅಥವಾ ರಾಗಿ ಬೆಳೆ ಇಡುತ್ತಿದ್ದರು ಮತ್ತು ಕೆರೆಯಲ್ಲಿ ಲಭ್ಯವಾಗುವ ನೀರಿನ ಪ್ರಮಾಣವನ್ನು ನೊಡಿಕೊಂಡು ಎಷ್ಟು ಸಾಧ್ಯವೋ ಅಷ್ಟು ಭೂಮಿಯಲ್ಲಿ ಭತ್ತವನ್ನು ಎರಡನೆಯ ಬೆಳೆಯಾಗಿ ಇಡುತ್ತಿದ್ದರು.[8]

ಭತ್ತದ ಗದ್ದೆಗಳು ಮಟ್ಟಸವಾದ ತಾಕುಗಳಾಗಿದ್ದು ಸುತ್ತಲೂ ಬದುಗಳಿರುತ್ತಿದ್ದವು. ಭೂಮಿಯ ಇಳಿಮೇಡಿನಿಂದಾಗಿ ಈ ತಾಕುಗಳೂ ಆಕಾರದಲ್ಲಿ ಅಂಕುಡೊಂಕಾಗಿಯೂ ಸಣ್ಣದಾಗಿಯೂ ಇರುತ್ತಿದ್ದವು. [9] ಬೇಸಾಯಗಾರ ತನ್ನ ಭೂಮಿಗೆ ಕಾಲುವೆಗಳನ್ನು ತೋಡಿಕೊಂಡು ನೀರಾವರಿ ಕಾಲುವೆಯಿಂದ ನೀರನ್ನು ಹಾಯಿಸಿಕೊಳ್ಳುತ್ತಿದ್ದ. ಬೇಕಾದಾಗ ತನ್ನ ಕಾಲುವೆಗಳಲ್ಲಿ ನೀರು ತುಂಬಿಸುತ್ತಿದ್ದ. ಕಾಲುವೆಯ ತಲೆ ಭಾಗದಲ್ಲಿ ಮಣ್ಣು ಒಟ್ಟಿ ಸರಬರಾಜನ್ನು ನಿಲ್ಲಿಸುತ್ತಿದ್ದ.

ಕೆರೆಯನ್ನು ಕಟ್ಟಿಯಾದ ಮೇಲೆ ರೈತರು ತಮ್ಮ ಭೂಮಿಗಳಿಗೆ ನೀರು ಹಾಯಿಸಲು ಕಾಲುವೆಗಳನ್ನು ರಚಿಸುತ್ತಿದ್ದರು, ಎಂದು ಸೂಚಿಸುತ್ತಾನೆ ಬುಕಾನನ್. [10] ಬಹುಶಃ ಇವು ಭೂಮಿಯ ತಾಕುಗಳ ಕಾಲುವೆಗಳನ್ನು, ದೊಡ್ಡ ಕೆರೆಗಳ ಮುಖ್ಯನಾಲೆಯನ್ನು ನಿರ್ಮಾತೃವೇ ಕಟ್ಟಿಸುತ್ತಿದ್ದ. ಏಕೆಂದರೆ ಅದಕ್ಕೆ ಬೇರೆ ಬೇರೆ ಹಿಡುವಳಿದಾರರ ಭೂಮಿಗಳಲ್ಲಿ ಅಗಿಯ ಬೇಕಾಗುತ್ತಿತ್ತು.

ಬುಕಾನನ್ ವರ್ಣಿಸಿರುವ ಇನ್ನೊಂದು ಸ್ವಾರಸ್ಯಕರ ಅಂಶವೆಂದರೆ ಬಾಗಾಯತು ಅಥವಾ ಕಬ್ಬಿನಗದ್ದೆ ತಾಕಿನ ನೀರು ಹಂಚಿಕೆ ವ್ಯವಸ್ಥೆಯ ರಚನೆ(ಲೇಔಟ್). ಮುಖ್ಯ ನಾಲೆಗಳಿಂದ ಲಂಬವಾಗಿ ೨೨ ಮೊಳಗಳ ಅಂತರದಲ್ಲಿ ಸರಬರಾಜು ಕಾಲುವೆಗಳನ್ನು ತೋಡಲಾಗುತ್ತಿತ್ತು. ಹೆಚ್ಚುವರಿಯಾಗುವ ನೀರನ್ನು ಆಚೆಗೆ ಸಾಗಿಸಲು, ಸರಬರಾಜು ಕಾಲುವೆಗಿಂತ ಆಳವಾಗಿ ಹಾಗೂ ಅವಕ್ಕೆ ಸಮಾನಾಂತರವಾಗಿ, ಬಚ್ಚಲು ಕಾಲುವೆಗಳನ್ನು ತೋಡಲಾಗುತ್ತಿತ್ತು. ಆ ಬಚ್ಚಲು ಕಾಲುವೆಗಳು ಮುಂದೆ ಒಂದು ಮುಖ್ಯ ಕಾಲುವೆಗೆ ಸೇರುತ್ತಿದ್ದವು. [11]

ಅಲ್ಲದೆ ಶ್ರೀರಂಗಪಟ್ಟಣ ಹಾಗೂ ಅದರ ಸುತ್ತಮುತ್ತ ಒಂದೇ ಭೂಮಿಯಲ್ಲಿ ಕಬ್ಬನ್ನೇ ಮತ್ತೆ ಮತ್ತೆ ಹಾಕುತ್ತಿರಲಿಲ್ಲ. ನಡುವೆ ಮೂರು ಭತ್ತದ ಬೆಳೆಯಿಟ್ಟು ನಂತರವೇ ಕಬ್ಬಿನ ಬೆಳೆ ಇಡುತ್ತಿದ್ದುದು. [12] ಮದ್ದೂರಿನಲ್ಲಿ ಕಬ್ಬಿನ ಬೆಳೆಯ ನಂತರ ಹುಚ್ಚೆಳ್ಳು, ಆಮೇಲೆ ಭತ್ತ, ಆ ಮೇಲೆ ಮತ್ತೆ ಕಬ್ಬು ಹೀಗೆ ಬೆಳೆಯಲಾಗುತ್ತಿತ್ತು. [13]

ನೀರು ನಿಂತು ಜಮೀನು ಚೌಗು ಆಗದಂತೆ ಸಾಕಷ್ಟು ಗಮನ ನೀಡಲಾಗುತ್ತಿತ್ತು, ಎನ್ನುವುದನ್ನು ಇದೆಲ್ಲ ಸ್ಪಷ್ಟವಾಗಿ ಸೂಚಿಸುತ್ತದೆ.

ಕಬ್ಬಿನ ಗದ್ದೆಯ ಆಕಾರ ರಚನೆ – ಫ್ರಾನ್ಸಿಸ್ ಬುಕಾನನ್ ನೋಡಿದಂತೆ.

03_267_KKN-KUH

ಸೂಚಿ :

೧. ಮುಖ್ಯನಾಲೆ
೨. ಸರಬರಾಜು ನಾಲೆ
೩. ಮುಖ್ಯ ಬಚ್ಚಲು ನಾಲೆ
೪. – ೫ ಕಬ್ಬಿನ ಗದ್ದೆ
೬. ಹೆಚ್ಚುವರಿ ನೀರು ಹೋಗಲು ಕಾಲುವೆಗಳು
೭. ಪ್ರತಿಯೊಂದು ಗದ್ದೆಯ ಉಪವಿಭಾಗ
೮. ಗದ್ದೆಯ ಸರಬರಾಜು ನಾಲೆ
೯. ಗದ್ದೆಯ ಬದುಗಳು

ಜಲನಿರ್ವಹಣೆಗಾಗಿ ಸಂಘಟನೆ :

ಜಲನಿರ್ವಹಣೆಗಾಗಿ ಮಾಡಲಾಗುತ್ತಿದ್ದ ಸಂಘಟನೆಯನ್ನು ಈ ಪರಿಶೀಲಿಸೋಣ. ಪ್ರತಿಯೊಂದು ಹಳ್ಳೀಯಲ್ಲೂ ಹನ್ನೆರಡು ಅಧಿಕಾರಿಗಳಿದ್ದರು. ವಿಜಯನಗರದ ಕಾಲದಲ್ಲಿ ಅವರನ್ನು ಆಯಗಾರರು ಎನ್ನುತ್ತಿದ್ದರು. ಆಯಗಾರರು ಇವರು :

ಶ್ಯಾನುಭೋಗ – ಲೆಕ್ಕಿಗ
ಕಮ್ಮಾರ – ಮುಖ್ಯಸ್ಥ
ಬಡಗಿ – ಮರಗೆಲಸದವ
ಅಗಸ – ಮಡಿವಾಳ
ಪಂಚಾಂಗಿ – ಪಂಚಾಂಗ ಹೇಳುವಾತ
ನಾಯಿಂದ – ಕ್ಷೌರಿಕ
ಮಾದಿಗ – ಚಪ್ಪಲಿ ಹೊಲಿಯುವಾತ
ಅಕ್ಕಸಾಲಿ – ಚಿನ್ನ ಬೆಳ್ಳಿ ಕೆಲಸದವ
ನೀರುಗಂಟಿ – ಕೆರೆಗಳ ಕಾವಲಿನಾಳು
ತಳಾರಿ – ಹಳ್ಳಿಯ ಕಾವಲಿನಾಳು
ಕುಂಬಾರ – ಮಡಿಕೆ ಮಾಡುವವ

ಈ ಹನ್ನೆರಡು ಮಂದಿಯ ಗ್ರಾಮ ಸೇವಕರು. ಅವರ ಅಧಿಕಾರ ವಂಶಪಾರಂಪರ್ಯವಾಗಿ ತಂದೆಯಿಂದ ಮಗನಿಗೆ ಹೋಗುತ್ತಿತ್ತು. ತಮಗೆ ಕಷ್ಟ ಉಂಟಾದಾಗ ತಮ್ಮ ಹುದ್ದೆಯನ್ನು ವಿಕ್ರಯಿಸಿಸುವ ಇಲ್ಲವೇ ಅಡವಿಡುವ ಅಧಿಕಾರ ಅವರಿಗಿತ್ತು. ಅವರಿಗೆ ರೈತರು ತಮ್ಮ ಹಳ್ಳಿಯಲ್ಲಿ ಬೆಳೆದ ಧಾನ್ಯದಲ್ಲಿ ಒಂದು ಪಾಲನ್ನು ಕೊಡುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಅವರಿಗೆ ಮಾನ್ಯದ ಭೂಮಿಯೂ ಇರುತ್ತಿತ್ತು.

ನೀರುಗಂಟಿಯ ಕೆಲಸ ಕೆರೆಯನ್ನು ನೋಡಿಕೊಳ್ಳುವುದು, ಅಗತ್ಯವಾದಾಗ ಕೆರೆಯ ತೂಬನ್ನು ಅದಕ್ಕಾಗಿ ಜೋಡಿಸಿದ್ದ ಬಂಡೆಗಳಿಂದ ಮುಚ್ಚುವುದು. ಚಳ್ಳಿಗಾಲದಲ್ಲಿ ಆತ ಕೆರೆಯಲ್ಲಿ ನೀರನ್ನು ಉಳಿಸಲು ಏರಿಯ ಮೇಲೆ ಎಚ್ಚರದಿಂದನಿಗಾ ಇಡತಕ್ಕದ್ದು, ಹಳ್ಳಿಯ ರೈತರಿಗೆ ಅವರ ಬೆಳೆಗೆ ಅಗತ್ಯವಾದ ನೀರನ್ನು ಹಂಚಿಕೆಮಾಡುವುದು ಅವನ ಕರ್ತವ್ಯ. ನೀರು ಕಡಿಮೆ ಆಗಿಹೋದಾಗ ತಾನು ನೀರನ್ನು ಕಳ್ಳತನದಲ್ಲಿ ವಿಲೇ ಮಾಡುತ್ತಿದ್ದ ಎಂಬ ಶಂಕೆ ಬಾರದಿರಲಿ ಎಂದು ಆತ ವ್ಯವಸ್ಥಾಪಕರಿಗೆ ಲೆಕ್ಕ ಒಪ್ಪಿಸುತ್ತಿದ್ದ. ಈ ಕರ್ತವ್ಯ ಪಾಲನೆಗಾಗಿ ಆತ ಹೊರೆ ಹುಲ್ಲು ಹಾಗೂ ಮೂರಾಭತ್ತವನ್ನೂ ಪಡೆಯುತ್ತಿದ್ದ. ಹೊರೆಹುಲ್ಲು ಎಂದರೆ ಒಂದು ಅಥವಾ ಹೆಚ್ಚು ಹುಲ್ಲಿನ ಕಂತೆಗಳೂ ಮೂರಾಭತ್ತ ಎಂದರೆ ಬೆಳೆದ ಭತ್ತದಲ್ಲಿ ಒಂದು ಪಾಲು ಎಂದು ತೋರುತ್ತದೆ. [14] ಪ್ರತಿಯೊಂದು ಖಂಡುಗ ಅಥವಾ ೧೯೨೦ ಸೇರು ಹುಟ್ಟುವಳಿಗೂ ನೀರುಗಂಟಿಗೆ ೨೪ ಸೇರು ಸಂದಾಯವಾಗುತ್ತಿತ್ತು. ಅಂದರೆ ಸುಮಾರು ಶೇ ೧.೨೫ ಎನ್ನುತ್ತಾನೆ ಬುಕಾನನ್ ತನ್ನ ದಿನಚರಿಯಲ್ಲಿ. [15] ಆತ ಮತ್ತೂ ಹೇಳುತ್ತಾನೆ : ೧೫೦ ಖಂಡುಗ ಭೂಮಿಯನ್ನು ನಿರ್ವಹಿಸಲು ಆರು ನೀರುಗಂಟಿಗಳು ಸಾಕಾಗುತ್ತಿತ್ತು. ಅಂದರೆ ಪ್ರತಿಯೊಬ್ಬನಿಗೂ ಸುಮಾರು ಒಂದು ನೂರು ಎಕರೆ. [16] ಎಕರೆಗೆ ಹುಟ್ಟುವಳಿ ೧೩ಕ್ವಿಂಟಾಲು ಭತ್ತ ಮತ್ತು ಭತ್ತದ ಬೆಲೆ ಕ್ವಿಂಟಾಲಿಗೆ ೨೦೦ ರೂಪಾಯಿ ಎಂದು ಇಟ್ಟುಕೊಂಡೆರೆ ಪ್ರತಿಯೊಬ್ಬ ನೀರುಗಂಟಿಯ ಪಾಲು ಐದು ತಿಂಗಳ ಒಂದು ಬೆಳೆ ಕಾಲಕ್ಕೆ ಸುಮಾರು ೩೨೫೦ರೂ ಆಗುತ್ತದೆ.

ಈ ಭತ್ಯ ಹಾಗೂ ಹುಲ್ಲಿನ ಪಾಲು ಸೇರಿ ಕೆರೆಯ ನೀರಿನ ಸೂಕ್ತ ನಿರ್ವಹಣೆಗೆ ನ್ಯಾಯಯುಕ್ತ ವ್ಯವಸ್ಥೆ ಆಗಿತ್ತು. ಬ್ರಿಟಿಷರ ಕಾಲದಲ್ಲಿ ಗ್ರಾಮವ್ಯವಸ್ಥೆ ನಶಿಸಿ ಹೋದುದು ನಮ್ಮ ಪ್ರಾಚೀನವಾದ ದಕ್ಷವಾದ ಕೆರೆ ವ್ಯವಸ್ಥೆಯ ಅಲಕ್ಷ್ಯವನ್ನು ಪೂರ್ಣಗೊಳಿಸಿತು.

ಪಾರಂಪರಿಕ ಗ್ರಾಮಾಧಿಕಾರಿಗಳು ರದ್ದಾಗಿ ಹೋಗಿ, ಕೆರೆ ನೀರಿನ ನಿರ್ವಹಣೆಯನ್ನು ನೀರಾವರಿ ಇಲಾಖೆ ನೇಮಿಸಿರುವ ಸೌದಿಗಳಿಗೆ ವಹಿಸಲಾಗಿದ್ದರೂ, ಕೆಲವು ಹಳೆಯ ದೊಡ್ಡ ಕೆರೆಗಳಲ್ಲಿ ನೀರುಗಂಟಿ ವ್ಯವಸ್ಥೆ ಇನ್ನೂ ರೂಡಿಯಲ್ಲಿದೆ. ಕೋಲಾರ ಜಿಲ್ಲೆಯ ರಾಮಸಾಗರ ಕೆರೆಗೆ ನಾವು ಹೋದಾಗ ಇದು ಗಮನಕ್ಕೆ ಬಂತು. ಹಳ್ಳಿಯೇ ನೀರುಗಂಟಿಗಳನ್ನು ಅನೌಪಚಾರಿಕೆವಾಗಿ ನೇಮಿಸಿಕೊಳ್ಳುತ್ತದೆ. ಮತ್ತು ಅವರಿಗೆ ಹಿಂದಿನಂತೆಯೆ ಹಳ್ಳಿಯ ಉತ್ಪನ್ನದಲ್ಲಿ ಪಾಲು ದೊರೆಯುತ್ತದೆ. ಪ್ರಾಯಶಃ ಗ್ರಾಮ ಸಮುದಾಯವೇ ನೀರುಗಂಟಿಗಳನ್ನು ಔಪಚಾರಿಕವಾಗಿ ನೇಮಿಸಿಕೊಳ್ಳೂವ ಹಳೆಯ ಪದ್ಧತಿಗೆ ಮತ್ತೆ ಜೀವ ಕೊಡುವುದು ಹಾಗೂ ಅವರ ಸೇವೆಗೆ ಉತ್ಪನ್ನದಲ್ಲಿ ಪಾಲು ಕೊಡುವುದು ಮತ್ತು ಸಾಕಷ್ಟು ಅಧಿಕಾರವನ್ನು ನೀಡುವುದು ನಮ್ಮ ಕೆರೆಗಳ ಜಲನಿರ್ವಹಣೆಯಲ್ಲಿ ಅತ್ಯಗತ್ಯವಾದ ಒಂದು ಸುಧಾರಣೆ ಆದೀತು.

ಹಣಕಾಸು

ಪೀಠಿಕೆ :

೧೯ನೆಯ ಶತಮಾನದ ಕೊನೆಯಲ್ಲಿ ಕರ್ನಾಟಕದಲ್ಲಿ ಕನಿಷ್ಟ ೪೫,೦೦೦ ಕೆರೆಗಳಿದ್ದವು. [17] ಕೆಲವು ದೊಡ್ಡವು. ಬಹುಪಾಲು ಸಣ್ಣವು. ಅವೆಲ್ಲ ಶತಮಾನಗಳ ಹಿಂದೆ ಕಟ್ಟಲ್ಪಟ್ಟಿದ್ದವು. ಎಲ್ಲವೂ ಒಂದೇ ಕಾಲದಲ್ಲಿ ಕಟ್ಟಲಾದುವಲ್ಲ. ಅವು ಶತಮಾನಗಳ ಕಾಲದ ಉದ್ದಕ್ಕೂ ನಡೆದ ಅಭಿವೃದ್ಧಿ ಕಾರ್ಯದ ಅವಶೇಷಗಳು – ಈ ಎಲ್ಲ ಕೆರೆಗಳಿಗೆ ಒಟ್ಟು ಒಂದು ನೂರು ಮಿಲಿಯನ್ (ಹತ್ತು ಕೋಟಿ) ರೂಪಾಯಿ ಬಂಡವಾಳ ತೊಡಿಗಲಾಗಿತ್ತು. [18] ಆ ಕಾಲದಲ್ಲಿ ನೀರಾವರಿ ಕೆರೆಗಳ ಮೇಲೆ ಅಷ್ಟು ಪ್ರಮಾಣದ ಬಂಡವಾಳ ಹೂಡಿಕೆ ಅದು ದೀರ್ಘಕಾಲಕ್ಕೆ ಹರಡಿದ್ದರೂ ಸಹ, ಮಹತ್ಸಾಧನೆಯ ಸರಿ.

ಸಾರ್ವಜನಿಕರ ಹೂಡಿಕೆ:

ಕೆರೆ ನಿರ್ಮಾಣದಲ್ಲಿ ಬಂಡವಾಳವನ್ನು ಹೂಡಿದ್ದು ದೊರೆಯೇ ಅಥವಾ ಖಾಸಗಿ ವ್ಯಕ್ತಿಗಳೇ ಎನ್ನುವುದರ ಪರಿಶೀಲನೆಯೂ ಸ್ವಾರಸ್ಯವಾದುದು. ದೊರೆ ಅಥವಾ ಸರಕಾರ ಮಾಡಿದ ಹೂಡಿಕೆಯನ್ನು ತನ್ನ ಆಧಿಪತ್ಯದ ಸಂಪತ್ತನ್ನು ಹೆಚ್ಚಿಸುವ ಏಕಮಾತ್ರ ಉದ್ದೇಶದಿಂದ ಮಾಡಿದ ಸಾರ್ವಜನಿಕ ಹೂಡಿಕೆ ಎಂದೇ ಪರಿಗಣಿಸಬೇಕಾಗುತ್ತದೆ. ಅಂಥ ಸಂಪದಭಿವೃದ್ಧಿ ರಾಜ್ಯ ಭಂಡಾರಕ್ಕೆ ಹೆಚ್ಚುವರಿ ಆದಾಯವನ್ನು ತರಬಹುದು. ಆದರೂ ಬಂಡವಾಳ ಹೂಡಿಕೆಗೆ ಗುರಿ ಕೇವಲ ಲಾಭ ಗಳಿಸುವ ಉದ್ಯಮವಾಗುವುದಷ್ಟೆ ಎನ್ನುವಂತಿರಲಿಲ್ಲ. ಅದು ಪ್ರಭುತ್ವದ ನೀತಿಯಾಗಿತ್ತು ಎನ್ನುವುದನ್ನು ವಿಜಯನಗರದ ಮಹಾಸಾಮ್ರಾಟ ಕೃಷ್ಣದೇವರಾಯನ ಮೇರುಕೃತಿ ಆಮುಕ್ತಮಾಲ್ಯದದಲ್ಲಿ ನಿಚ್ಚಳವಾಗಿ ಕಾಣಬಹುದು. ಕೆರೆಗಳನ್ನು ನೀರಾವರಿ ಕಾಲುವೆಗಳನ್ನು ರಚಿಸಿ ಕೃಷಿಕರಿಗೆ ತೆರಿಗೆ ಹಾಗೂ ಸೇವೆಗಳಲ್ಲಿ ಒತ್ತಾಸೆ ತೋರಿದರೆ ಮಾತ್ರ, ರಾಜ್ಯದ ಸಂಪತ್ತು ಹೆಚ್ಚುತ್ತದೆ ಎಂದು ಹೇಳುತ್ತಾನೆ ಕೃಷ್ಣದೇವಾರಾಯ.[19]

ರಾಜರುಗಳು ಮಾಡುತ್ತಿದ್ದ ಬಹುಪಾಲು ಹಣ ಹೂಡಿಕೆಯಲ್ಲಿ ಮುಖ್ಯವಾದ ಹೊಳೆಗಳಿಗೆ ಅಡ್ಡಲಾಗಿ ಅಣೆಕಟ್ಟುಗಳನ್ನು ಕಟ್ಟುವುದಕ್ಕೆ ಇರುತ್ತಿತ್ತು ಎನ್ನುವುದು ನಾನಾ ಶಾಸನಗಳಿಂದ ಕಾಣಬರುತ್ತದೆ. ತುಂಗಭದ್ರ ಕಾವೇರಿ ಹಾಗೂ ಹೇಮಾವತಿ ಅಣೆಕಟ್ಟುಗಳು ಇದಕ್ಕೆ ಸಾಕ್ಷಿ. ಇವುಗಳಲ್ಲಿ ಕೆಲವು ಅಣೆಕಟ್ಟುಗಳನ್ನು ರಾಜರು ಕಟ್ಟಿಸಿದ್ದು. ಮುಖ್ಯವಾಗಿ ತಮ್ಮ ಅರಮನೆಗೂ ರಾಜಧಾನಿಗೂ ನೀರು ಒದಗಿಸಲೆಂದೇ, ನೀರಾವರಿ ಅವುಗಳ ಹೆಚ್ಚುವರಿ ಲಾಭವಾಗಿತ್ತು. ಇನ್ನು ಕೆಲವನ್ನು ನೀರಾವರಿ ಉದ್ದೇಶಕ್ಕಾಗಿಯೆ ಕಟ್ಟಿಸಲಾಗಿತ್ತು. ಅಂಥ ಆಣೆಗಳ ನಿರ್ಮಾಣಕ್ಕೆ ಬೇಕಾಗುತ್ತಿದ್ದ ಸಂಪನ್ಮೂಲ ಹಾಗೂ ಸಂಘಟನೆಯ ಪ್ರಮಾಣ ರಾಜನಿಗೆ ಮಾತ್ರ ಸಾಧ್ಯವಾಗುವಷ್ಟು ಇರುತ್ತಿತ್ತು. ಅದೇ ಕಾರಣಕ್ಕಾಗಿಯೇ ಸ್ಥಳೀಯ ಜನತೆ ನಿಭಾಯಿಸಲು ಆಗದಂಥ ಭಾರಿ ಕೆರೆಗಳನ್ನು ಮಾತ್ರ ದೊರೆಗಳು ಕಟ್ಟಿಸುತ್ತಿದ್ದುದು, ಸಾರ್ವಜನಿಕ ಹಣ ಹೂಡಿಕೆಯ ಬಹುಪಾಲು ಭಾರಿ ಕೆಲಸಗಳಿಗಷ್ಟೇ ಸೀಮಿತವಾಗಿರುತ್ತಿತ್ತು.

ಖಾಸಗಿ ಬಂಡವಾಳ ಹೂಡಿಕೆ :

೧೯೦೨ರಲ್ಲಿ ಮೈಸೂರು ಸಂಸ್ಥಾನದಲ್ಲಿ ಇದ್ದವು ಸುಮಾರು ೨೨,೦೦೦ ಕೆರೆಗಳು. ಅವುಗಳಲ್ಲಿ ೧,೦೦೦ ಎಕರೆ ಅಥವಾ ಹೆಚ್ಚಿನ ನೀರಾವರಿ ಇದ್ದ ದೊಡ್ಡ ಕೆರೆಗಳು ೨೬ ಮಾತ್ರ. ಉಳಿದ ಕೆರೆಗಳು ಸಣ್ಣವು. ಅವುಗಳಲ್ಲಿ ಬಹುಪಾಲಂತೂ ತೀರ ಸಣ್ಣವು. ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬಕ್ಕೆ ಸೇರಿದ ಭೂಮಿಗಷ್ಟೇ ನೀರಾವರಿ ಒದಗಿಸುತ್ತಿದ್ದವು. ಅವುಗಳಿಗಿಂತ ದೊಡ್ಡದಾಗಿದ್ದ ಕೆರೆಗಳಿಂದ ಒಂದು ಹಳ್ಳಿ ಅಥವಾ ಅಕ್ಕಪಕ್ಕದ ಎರಡು ಹಳ್ಳಿಗಳ ಹಿತಾಸಕ್ತಿ ಸಲ್ಲುತ್ತಿತ್ತು. ಒಂದೊಂದೇ ಹಳ್ಳಿಗೆ ಸಾಕಾಗುತ್ತಿದ್ದ ಕೆರೆಗಳು ಬಹುಮಟ್ಟಿಗೆ ಖಾಸಗಿ ವ್ಯಕ್ತಿಗಳಿಂದ ನಿರ್ಮಿತವಾಗುತ್ತಿದ್ದವು.

ಅವುಗಳನ್ನು ಕಟ್ಟಿಸುತ್ತಿದ್ದುದು ಬಹುಮಟ್ಟಿಗೆ ಶ್ರೀಮಂತ ವ್ಯಾಪಾರಿಗಳು, ಇಲ್ಲವೆ ಪ್ರಬಲ ಪಾಳೆಯಗಾರರು. ಕೆಲವು ಕೆರೆಗಳನ್ನು ದೇವಾಸ್ಥಾನಗಳೂ ತಮ್ಮ ನಿಧಿಯಿಂದ ಕಟ್ಟಿಸುತ್ತಿದ್ದವು. ಅಲ್ಲದೆ ಬಹುಮಟ್ಟಿಗೆ ಪುಣ್ಯ ಸಂಪಾದನೆಗಾಗಿ ಕೆಲವೊಮ್ಮೆ ಕೆರೆಗಳನ್ನು ತಮ್ಮ ಹತ್ತಿರದ ಅಥವಾ ಪ್ರಿಯಬಂಧುಗಳ ನೆನಪಿಗಾಗಿ ಕಟ್ಟಿಸಲಾಗುತ್ತಿತ್ತು. ಕಟ್ಟಿ ಮತ್ತು ತತ್ಸಂಬಂಧಿತ ಕೆಲಸಗಳ ವೆಚ್ಚವನ್ನು ನೋಡಿದರೆ ಕೆರೆ ನಿರ್ಮಾಣವನ್ನು ಲಾಭದೃಷ್ಟಿಯಿಂದ ಕೈಗೆತ್ತಿಕೊಳ್ಳುವುದು ಸಾಧ್ಯವಿರಲಿಲ್ಲ. [20] ಜನಕ್ಕೂ ದನಕ್ಕೂ ನೀರು ಒದಗಿಸಲು ಕೆರೆಗಳು ಬೇಕು. ಅವನ್ನು ಧರ್ಮ ಕಾರ್ಯವೆಂದು ಕಟ್ಟಿಸಲಾಗುತ್ತಿತ್ತು.

ಕೆಲವು ಚರಿತ್ರಕಾರರು ಹೇಳುತ್ತಾರೆ, ವ್ಯಕ್ತಿಗಳು ಮಾಡುತ್ತಿದ್ದ ಹಣ ಹೂಡಿಕೆ ಕೆರೆಯಿಂದ ನೀರಾವರಿ ಪಡೆಯುವ ಭೂಮಿಯಲ್ಲಿ ಒಂದು ಪಾಲಿನ ಆದಾಯದ ದೀರ್ಘಕಾಲೀನ ಹಕ್ಕುನ್ನು ಪಡೆಯಲೆಂದು ಮಾಡಿದ “ಅಭಿವೃದ್ಧಿ ಸ್ವರೂಪದ ಹೂಡಿಕೆಯ” ರೀತಿಯದಾಗಿತ್ತು ಎಂದು. [21] ನಿರ್ಮಾತೃವೇನೊ ದಶವಂದ ಅಥವಾ ಕಟ್ಟುಕೊಡಿಗೆಯಿಂದ ಕೆಲವು ಆದಾಯದ ಹಕ್ಕು ಪಡೆಯುತ್ತಿದ್ದ. ಆದರೆ ಅದಕ್ಕೆ ಪ್ರತಿಯಾಗಿ ಕೆರೆ ಸಂರಕ್ಷಣೆಗೆ ಆತ ಹೊಣೆಗಾರನಾಗಿರುತ್ತಿದ್ದ. ಅಂಥ ಕೆರೆಗಳ ನೀರಾವರಿ ಪ್ರದೇಶ ಸಣ್ಣದು. ಕೆರೆ ತುಂಬಲಿ ಬಿಡಲಿ ಬೇಸಾಯದ ಉತ್ಪನ್ನದಿಂದ ಆದಾಯ ಬರಲಿ ಬಾರದಿರಲಿ, ಕೆರೆಯನ್ನು ಸಂರಕ್ಷಿಸುವ ಹೊಣೆಯಂತೂ ಆತನ ಮೇಲೆಯೆ ಇರುತಿತ್ತು. ಈ ದೃಷ್ಟಿಯಿಂದ ನೋಡಿದಲ್ಲಿ ತನ್ನ ಹಣ ಹೂಡಿಕೆಗೆ ಆತ ಪಡೆಯುತ್ತಿದ್ದ ಲಾಭಾಂಶ ಅಲ್ಪವಾದುದೇ. ವ್ಯಕ್ತಿಗಳು ಕೆರೆ ನಿರ್ಮಾಣಕ್ಕಾಗಿ ಮಾಡುತ್ತಿದ್ದ ಬಂಡವಾಳ ಹೂಡಿಕೆ ಅವರಿಗೆ ಕೆರೆಗಳಿಗೆ ಒಂದಷ್ಟು ಭೂಮಿಯನ್ನು ದೊರಕಿಸಿಕೊಡುತ್ತಿತ್ತು. ಅದರೂ ಹಣ ಹೂಡಿಕೆ ಬಹುಮಟ್ಟಿಗೆ ಆಗುತ್ತಿದುದು ಸಾರ್ವಜನಿಕ ಮನ್ನಣೆಯನ್ನು ಘನತೆಯನ್ನು ಪಡೆಯಲೆಂದೇ.

ಅವನತಿ :

ಹೊಸ ಕೆರೆಗಳ ನಿರ್ಮಾಣದ ಅಂಥ ಚಟುವಟಿಕೆ ೧೦ ರಿಂದ ೧೬ ನೆಯ ಶತಮಾನದ ಅವಧಿಯಲ್ಲಿ ಪ್ರಮುಖವಾಗಿದ್ದಂತೆ ಕಂಡು ಬರುತ್ತದೆ. ಮುಂದಿನ ಇನ್ನೂರು ವರ್ಷಗಳಲ್ಲಿ ಹೊಸ ಕೆರೆಗಳ ನಿರ್ಮಾಣದ ಭರಾಟೆಯ ಬಗ್ಗೆ ಯಾವುದೇ ಸಾಕ್ಷ್ಯವನ್ನು ನಾವು ಕಾಣುವುದಿಲ್ಲ. ಕೆರೆಗಳನ್ನು ಕಟ್ಟಲು ಸೂಕ್ತವಾದ ಸ್ಥಳಗಳೆಲ್ಲ ಆಗಲೆ ಮುಗಿದು ಹೋಗಿದ್ದುದರಿಂದಲೊ ಅಥವಾ ಮೇಲಿಂದ ಮೇಲೆ ನಡೆದ ಯುದ್ಧಗಳಿಂದಲೋ ಮತ್ತು ಆ ಯುದ್ದಗಳಿಂದಾದ ವಿಧ್ವಂಸಕೃತ್ಯಗಳಿಂದಲೋ, ವ್ಯಕ್ತಿಗಳು ಸಮುದಾಯದ ಒಳಿತಿಗಾಗಿ ಕೆರೆಗಳನ್ನು ಕಟ್ಟಿಸುವ ಪರಂಪರೆ ಇಳಿಮುಖವಾಗಿತ್ತು. ಅಥವಾ ನಷ್ಟವೇ ಆಗಿತ್ತು. ೧೯ನೆಯ ಶತಮಾನದಲ್ಲಿ ರಂಗಪ್ರವೇಶ ಮಾಡಿದ ಬ್ರಿಟಿಷರು ಆಗ ಇದ್ದ ಪರಂಪರೆಯನ್ನು ಪ್ರೋತ್ಸಾಹಿಸಲಿಲ್ಲ. ಒತ್ತಾಸೆ ಕೊಡಲಿಲ್ಲ. ರೈತವಾರಿ ಪದ್ಧತಿ ಜಾರಿಗೆ ಬಂತು. ಗ್ರಾಮಾಧಿಕಾರಿಗಳ ವ್ಯವಸ್ಥೆ ರದ್ದಾಯಿತು. ಇದರಿಂದ ಸಾಂಪ್ರದಾಯಿಕ ಭಾರತೀಯ ಗ್ರಾಮದ ಅವನತಿ ಆಯಿತು. ೧೭ – ೧೮ನೆಯ ಶತಮಾನಗಳಲ್ಲಿ, ಅಲಕ್ಷ್ಯಕೊಕ್ಕಳಗಾರಿದ್ದ ಕೆರೆಗಳ ಜೀರ್ಣೋದ್ದಾರ ಗ್ರಾಮ ಸಮುದಾಯದ ಸಾಮರ್ಥ್ಯಕ್ಕೆ ಮೀರಿದ್ದಾಗಿತ್ತು. ಆನರು ಅಂಥ ಚಟುವಟುಕೆಯಲ್ಲಿ ಆಸಕ್ತಿ ಕಳೆದುಕೊಂಡಿದ್ದರು. ಪುಣ್ಯ ಸಂಪಾದಿಸಬೇಕೆಂಬ ಸಾಂಪ್ರದಾಯಿಕ ವಿಚಾರವು ಪಾಶ್ಚಿಮಾತ್ಯ ಪ್ರಭಾವದ ಆರಂಭದಿಂದಾಗಿ ಮರೆಯಾಗಿತ್ತು. ಸಾರ್ವಜನಿಕ ಕಾರ್ಯಗಳ ನಿರ್ಮಾಣವೆಲ್ಲ ಸರ್ಕಾರದ ಜವಾಬ್ದಾರಿ ಎಂಬ ಭಾವನೆ ಮೂಡುತ್ತಿತ್ತು.

ಬ್ರಿಟಿಷ್ ಸರ್ಕಾರವೂ ಕೂಡ ಎಲ್ಲ ನದಿಗಳನ್ನು ನೈಸರ್ಗಿಕವಾಗಿ ಹರಿಯುವ ನಾಲೆಗಳು, ಹೊಳೆಗಳು ಹಾಗೂ ಎಲ್ಲೆಲ್ಲಿ ತಾನೆ ತಾನಾಗಿ ನೀರು ಶೇಖರವಾಗುತ್ತಿತ್ತೋ ಆ ತಟಾಕಗಳು ಎಲ್ಲದರ ನೀರನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಬಳಸುವ ಹಾಗೂ ನಿಯಂತ್ರಿಸುವ ಅಧಿಕಾರವನ್ನು ನಾನಾ ಕಾನೂನುಗಳಲ್ಲಿ ನಿಯಾಮಕ ಮಾಡಿತು. [22] ಖಾಸಗಿ ವ್ಯಕ್ತಿಯಾಗಲಿ ಉದ್ಯಮಶೀಲನಾಗಲಿ ಸರ್ಕಾರದ ಅನುಮತಿ ಇಲ್ಲದೆ ಕೆರೆ ಕಟ್ಟಲಾಗುತ್ತಿರಲಿಲ್ಲ.

ಈಸ್ಟ್ ಇಂಡಿಯಾ ಕಂಪನಿ ಮುಖ್ಯವಾಗಿ ವ್ಯಾಪಾರಿ ಸಂಸ್ಥೆ, ಅದಕ್ಕಾಗಲಿ ಮುಂದೆ ಬ್ರಿಟಿಷ್ ಸರ್ಕಾರಕ್ಕಾಗಲಿ ಆಸಕ್ತಿ ಇದ್ದುದು ತಮಗೆ ಸಾಕಷ್ಟು ವರಮಾನ ತಂದುಕೊಡಬಲ್ಲಂಥ ಅಥವಾ ಲಾಭದಾಯಕವಾಗುವಂಥ ನೀರಾವರಿ ಕೆಲಸಗಳಲ್ಲಿ ಮಾತ್ರ, ಬೇಸಾಯ ಕಾಲದಲ್ಲಿ ಯಾವ ಮುಖ್ಯ ನದಿಗಳಲ್ಲಿ ಖಾತರಿಯಾಗಿ ಪ್ರವಾಹ ಬರುತ್ತಿತ್ತೋ ಅಂಥ ನದಿಗಳ ಮೇಲಣ ಅಣೆಕಟ್ಟುಗಳನ್ನು ಕಾಲುವೆಗಳನ್ನು ಅವರು ಅಭಿವೃದ್ಧಿಗೊಳಿಸಿದರು. ಸಣ್ಣ ಪ್ರಮಾಣದ ಜಲಾನಯನ ಭೂಮಿಯಲ್ಲಿ ಹರಿದು ಬರುವ ನೀರನ್ನು ಆಧರಿಸಿದ್ದ ಸಣ್ಣ ಕೆರೆಗಳು ಮಳೆ ವಿಫಲವಾದಾಗ ತಾವೂ ವಿಫಲಗೊಂಡವು. ಅಂಥ ಕೆರೆಗಳ ಆದಾಯ ಅನಿಶ್ಚಿತವಾಗಿತ್ತು. ಅಂತೆಯೆ ಅವು ನಿರ್ಲಕ್ಷ್ಯಕ್ಕೆ ಒಳಗಾದವು. ಹೂಡಿದ ಬಂಡವಾಳದ ಮೇಲೆ ನಿಶ್ಚಿತವಾದ ವರಮಾನ ನೀಡುವಂತೆ ಕೆರೆಗಳ ನಿರ್ಮಾಣವನ್ನು ಮಾತ್ರ ಕೈಗೆತ್ತಿಕೊಳ್ಳಲಾಯಿತು.

ಕೆರೆಗಳು ಮತ್ತಿತರ ಅಂಥದೇ ಸಾರ್ವಜನಿಕ ಕಾರ್ಯಗಳ ನಿರ್ಮಾಣಕ್ಕೆ ಸರ್ಕಾರದ ಸಾಮಾನ್ಯ ಸಂಪನ್ಮೂಲಗಳಿಂದ ಹಣ ಒದಗಿಸಲಾಗುತ್ತಿತ್ತು. ಹೊಸ ಆಸ್ತಿಗಳಿಂದ ಬರುವ ವರಮಾನದಿಂದ ಗಳಿಕೆ ಬರುವ ನಿರೀಕ್ಷೆಯಿದ್ದಂಥ ಸಾರ್ವಜನಿಕ ಕಾರ್ಯಗಳಿಗೆ ಸಾರ್ವಜನಿಕರಿಂದ ಸಾಲ ಪಡೆದು, ಹಣ ಒದಗಿಸುವುದನ್ನು ಯೋಚಿಸಲಾದುದು, ಈ ಶತಮಾನದ ಮೊದಲಲ್ಲಷ್ಟೆ.

ಜನತೆಯ ಕೊಡುಗೆ :

ನೀರಾವರಿ ಯೋಜನೆಗಳಿಗೆ ಹಣ ಒದಗಿಸಲು ಸಾರ್ವಜನಿಕರ ಕೊಡುಗೆಗಳನ್ನು ಪಡೆಯುವ ವಿಧಾನವನ್ನು ೧೮೮೮ರ ಸುಮಾರಿನಲ್ಲಿ ಮೈಸೂರು ಸರ್ಕಾರ ಯೋಚಿಸಿತು. ತನ್ನ ಭೂಮಿಯ ಮೌಲ್ಯವನ್ನು ಹೆಚ್ಚಿಸುವಂಥ ದೊಡ್ಡ ನೀರಾವರಿ ಕಾರ್ಯವನ್ನು ಸರ್ಕಾರ ಕೈಗೆತ್ತಿಕೊಂಡಾಗ ನೀರಾವರಿಯಿಂದ ಭೂಮಿಗೆ ಒದಗುವ ಮೌಲ್ಯದ ತಕ್ಕಷ್ಟು ಪಾಲಿಗೆ ಪ್ರಭುತ್ವಕ್ಕೂ ಹಕ್ಕು ಉಂಟು ಎಂದು ಸರ್ಕಾರ ವಿಧಿಸಿತು. ನೀರಾವರಿಯಿಂದಾಗಿ ಭೂಮಿಯ ಮೌಲ್ಯದಲ್ಲಿ ಆಗುವ ವೃದ್ದಿಯ ಒಂದು ಪಾಲನ್ನು ಫಲಾನುಭವಿ ಸರ್ಕಾರಕ್ಕೆ ಕೊಡಬೇಕಾಯಿತು.

ನೀರಾವರಿ ಕಾರ್ಯದಿಂದ ಲಾಭ ಪಡೆಯುವ ಹಿಡುವಳಿದಾರರು ಪ್ರತಿ ಎಕರೆಗೂ ನೀಡಬೇಕಾದ ಕೊಡುಗೆ, ಒಂದು ಎಕರೆ ಖುಷ್ಕಿ ಭೂಮಿಯ ಹಾಗೂ ಒಂದು ಎಕರೆ ತರಿ ಭೂಮಿಯ ಮಾರುಕಟ್ಟೆ ಮೌಲ್ಯದ ಅಂತರ ಏನುಂಟೊ ಅದರ ಮೂರನೆಯ ಒಂದರಿಂದ ಹಿಡಿದು ಐದನೆಯ ಒಂದು ಪಾಲಿನಷ್ಟ ರವರೆಗೆ ಇರತಕ್ಕದ್ದು ಎಂದು ಕಲ್ಪಿಸಲಾಯಿತು. ನೀರಾವರಿ ಕೆಲಸ ಮುಕ್ತಾಯವಾದ ಮೇಲೆ ತರಿಯಾಗಲಿರುವ ಪ್ರತಿ ಎಕರೆ ಖುಷ್ಕಿ ಭೂಮಿಗೂ ನಿರ್ದಿಷ್ಟ ಕೊಡುಗೆಯನ್ನು ಸರ್ಕಾರಕ್ಕೆ ಸಲ್ಲಿಸಲು ಬದ್ದರಾಗಿರುವುದಾಗಿ ಹಿಡುವಳಿದಾರರು ಒಂದು ಮುಚ್ಚಳಿಕೆ(ಒಪ್ಪಂದ)ಯನ್ನು ಬರೆದು ಕೊಡಬೇಕಾಗಿತ್ತು. ಅಚ್ಚುಕಟ್ಟು ಪ್ರದೇಶದ ಆರರಲ್ಲಿ ಐದು ಭಾಗಕ್ಕೆ ಕಡಿಮೆ ಇಲ್ಲದಂತೆ ಹಿಡುವಳಿದಾರರು ಮುಚ್ಚಳಿಕೆಯನ್ನು ಬರೆದು ಕೊಟ್ಟಲ್ಲಿ ಹಾಗೂ ಉಳಿದ ಪ್ರದೇಶದ ಹಿಡುವಳಿದಾರರು ಕೊಡದೆ ಹೋದಲ್ಲಿ, ಆಗ ಅಂಥ ನಿರಾಕರಣೆಯಿಂದಾಗಿ ಆ ಕಾರ್ಯಾವನ್ನು ಕೈಬಿಡಬೇಕೇ ಅಥವಾ ಅಂಥ ಹಿಡುವಳಿದಾರರು ಸಮುದಾಯದ ಒಳಿತಿನ ಸಲುವಾಗಿ, ತಮ್ಮ ಪಾಲಿನ ಕೊಡುಗೆಯನ್ನು ಒಂದೆ ಕಂತಿನಲ್ಲೊ ಇಲ್ಲವೇ ೭ – ೮ ವಾರ್ಷಿಕ ಕಂತುಗಳಲ್ಲೋ ಕೊಡುವಂತೆ ಸರ್ಕಾರ ಒತ್ತಾಯ ಮಾಡಬೇಕೇ ಅಥವಾ ತರಿ ಕಂದಾಯವನ್ನು ನಿರ್ದಿಷ್ಟ ವರ್ಷಗಳ ಕಾಲ ತಾತ್ಕಾಲಿಕವಾಗಿ ಹೆಚ್ಚಿಸಬೇಕೇ ಎನ್ನುವುದನ್ನು ಸರ್ಕಾರ ತೀರ್ಮಾನಿಸಬೇಕಾಗಿತ್ತು. ೨೫೦೦೦ ರೂ ಗಳಿಗೆ ಮೀರುವಂಥ ವೆಚ್ಚದ ಕಾರ್ಯಗಳ ಬಗ್ಗೆ ಮಾತ್ರ ಅಂಥ ಕೊಡುಗೆಯ ಪಾವತಿಯನ್ನು ಆಲೋಚಿಸಲಾಗಿತ್ತು. ೨೫೦೦೦ರೂ. ಗಳಿಗಿಂತ ಕಡಿಮೆ ವೆಚ್ಚದ ಕಾರ್ಯಗಳ ಬಗ್ಗೆ ಕೊಡುಗೆಗಳನ್ನು ಕೇಳಬಾರದೆಂದೂ ನಮೂದಿಸಲಾಗಿತ್ತು. ಅಂಥ ಕೆಲಸಗಳಿಂದ ಬರಬಹುದಾದ ಹೆಚ್ಚುವರಿ ಆದಾಯ, ಆ ಕೆಲಸ ಆಸುಪಾಸಿಗೆ ನೀಡಬಹುದಾದ ಪರಿಹಾರ, ಹಾಗೂ ಅನುದಾಯಗಳ ಲಭ್ಯತೆ ಇವುಗಳನ್ನೆಲ್ಲ ಪರಿಶೀಲಿಸಿದ ಮೇಲೆಯೇ ಅಂಥ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಗೊತ್ತು ಮಾಡಲಾಗಿತ್ತು. ಆದರೂ, ಸ್ವಯಂ ಪ್ರೇರಿತ ಕೊಡುಗೆಗಳ ವಾಗ್ದಾನ ಬಂದು ಮುಚ್ಚಳಿಕೆಗಳನ್ನು ಬರೆದು ಕೊಟ್ಟ ಪಕ್ಷದಲ್ಲಿ ಅಂಥ ಕೆಲಸಗಳಿಗೆ ಪರಿಶೀಲನೆ ಹಾಗೂ ಮುಂಜೂರಾತಿಯಲ್ಲಿ ಆದ್ಯತೆ ದೊರಕುವ ಸಂಭವಿತ್ತು.

ಈ ತತ್ವಗಳ ಆಧಾರದ ಮೇಲೆ ಸರ್ಕಾರ ಅನೇಕ ಕಾರ್ಯಗಳನ್ನು ನಿರ್ವಹಿಸಿತು. ಒಂದು ನೀರಾವರಿ ಕೆಲಸದಿಂದ ಫಲಾನುಭವ ಪಡೆಯುವ ಹಿಡುವಳಿದಾರರು ಕೊಡುಗೆ ಅಥವಾ ನೀರುಸುಂಕ ಅಥವಾ ಎರಡನ್ನೂ ಪಾವತಿಮಾಡಲು ಆಶ್ವಾಸನೆ ನೀಡದಿದ್ದರೆ ಅಂಥ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾದು ಎಂದು ಸರ್ಕಾರ ಭಾವಿಸಿದಲ್ಲಿ ನಿರ್ದಿಷ್ಟ ಅಧಿಕಾರಿಯೊಬ್ಬ ಅಥವಾ ಡೆಪ್ಯೂಟಿಕಮಿಷನರ್ ತನಿಖೆಯನ್ನು ನಡೆಸಬೇಕು ಹಾಗೂ ಕನಿಷ್ಟ ಮೂರರಲ್ಲಿ ಎರಡರಷ್ಟು ಮಂದಿ ಹಿಡುವಳಿದಾರರು ಉದ್ದೇಶಿತ ಕಾಣಿಕೆ ಹಣ ಅಥವಾ ನೀರು ಸುಂಕ ಅಥವಾ ಎರಡನ್ನೂ ಸಲ್ಲಿಸುವುದಾಗಿ ಬರೆದುಕೊಟ್ಟಲ್ಲಿ ಆ ಅಧಿಕಾರಿ ಸರ್ಕಾರಕ್ಕೆ ಒಂದು ವರದಿಯನ್ನು ಸಲ್ಲಿಸಬೇಕು, ಆ ವರದಿಯನ್ನು ಆಧರಿಸಿ ಸರ್ಕಾರ ಆ ಯೋಜನೆಯನ್ನು ಕೈಬಿಡಬಹುದು ಇಲ್ಲವೇ ಅಗತ್ಯವೆನಿಸಿದ ಮಾರ್ಪಾಡುಗಳೊಡನೆ ಕೈಗೆತ್ತಿಕೊಳ್ಳಬಹುದು. ಆ ಹಿಡಿವಳಿದಾರರು ಕೊಡಬೇಕಾದ ಕಾಣಿಕೆಯ ಮೊತ್ತ ಆ ಪ್ರದೇಶದಲ್ಲಿನ ತರಿ ಮತ್ತು ಖುಷ್ಕಿ ಭೂಮಿಯ ಮೌಲ್ಯದ ವ್ಯತ್ಯಾಸದಲ್ಲಿ ಮೂರನೆಯ ಒಂದು ಪಾಲಿಗಿಂತ ಹೆಚ್ಚು ಇರಬಾರದು. ನೀರಾವರಿ ಕಾರ್ಯ ಪೂರ್ಣವಾದ ನಂತರ ಕಾಣಿಕೆ ಹಣವನ್ನು ಕಂದಾಯ ಬಾಕಿಯಂತೆ ವಸೂಲು ಮಾಡತಕ್ಕದ್ದು. ೧೯೩೨ರ ಮೈಸೂರು ನೀರಾವರಿ ಶಾಸನದಲ್ಲಿ ಈ ರೀತಿ ವಿಧಿಸಲಾಯಿತು.

ಸರ್ಕಾರ ಕೊಡಮಾಡುವ ನೀರಾವರಿ ಸೌಲಭ್ಯದಿಂದಾಗಿ ರೈತನ ಭೂಮಿಯ ಮೌಲ್ಯ ಹೆಚ್ಚಿದಾಗ ಆ ಹೆಚ್ಚುವರಿಯ ಒಂದು ಭಾಗವನ್ನು ಆತನಿಂದ ಕಾಣಿಕೆಯಾಗಿ ಪಡೆಯಬೇಕು ಎಂಬ ವಿಚಾರ ತನ್ನ ಆಸ್ತಿಯ ಅಭಿವೃದ್ಧಿಯಲ್ಲಿ ರೈತನೂ ಒಳಗೊಳ್ಳುವಂತೆ ಮಾಡುವುದರಲ್ಲಿ ಹಾಗೂ ಪ್ರಾಯಶಃ ನೀರಾವರಿ ಕಾರ್ಯದ ನಿರ್ಮಾಣದಲ್ಲಿ ತನಗೂ ಪಾಲು ಇದೆ, ಎಂಬ ಭಾವನೆಯನ್ನು ಅವನಲ್ಲಿ ಉಂಟುಮಾಡುವದರಲ್ಲಿ ಇದೊಂದು ವಾಸ್ತವಿಕ ವಿಶಿಷ್ಟ ಪ್ರಯತ್ನವಾಗಿತ್ತು.

೧೯೫೪ರಲ್ಲಿ ಮೈಸೂರು ಸರ್ಕಾರ ನೀರು ಸುಂಕ ಹಾಗೂ ಕೊಡುಗೆಯ ಪ್ರಮಾಣಗಳ ಪ್ರಶ್ನೆಯನ್ನು ಪರಿಶೀಲಿಸಲು ಒಂದು ಸಮಿತಿಯನ್ನು ರಚಿಸಿತು (ಕೃಷಿಮಂತ್ರಿ ನಾಗನಗೌಡರ ಅಧ್ಯಕ್ಷತೆಯಲ್ಲಿ) ಆ ಸಮೀತಿ ಹೀಗೆ ಶಿಫಾರಸ್ಸುಮಾಡಿತು.

“ಒಂದು ನೀರಾವರಿ ಯೋಜನೆಯ ಜಾರಿಯ ಫಲವಾಗಿ ಭೂಮೌಲ್ಯದಲ್ಲಿ ಆಗಬಹುದಾದ ಹೆಚ್ಚಳದ ಅರ್ಧಕ್ಕೆ ಕಡಿಮೆ ಇಲ್ಲದ ಮೊಬಲಗಳನ್ನು ಕೊಡುಗೆಯಾಗಿ ವಸೂಲುಮಾಡುವುದು ನ್ಯಾಯಯುತವಾಗಿದೆ. ಕೊಡುಗೆ ಹಣ ವಿಧಿಸಿದ್ದರಿಂದ ವಸೂಲಾಗುವ ಮೊಬಲಗಳನ್ನು ನೀರಾವರಿ ಯೋಜನೆಯ ನಿರ್ಮಾಣಕ್ಕಾದ ವೆಚ್ಚಕ್ಕೆ ಎತ್ತಿರಬಹುದಾದ ಸಾಲವನ್ನು ಮರುಪಾವತಿಮಾಡಲು ಮೀಸಲು ಇಡತಕ್ಕದ್ದು.”

“ಪ್ರತಿಯೊಂದು ಯೋಜನೆಯಲ್ಲೂ ಅದರ ಪರಿಮಿತಿಯಲ್ಲಿ ಅನ್ವಯಿಸಬಹುದಾದ ಸುಂಕಗಳ ಉಚಿತ ನಿಷ್ಕರ್ಷೆಗೆ ಹಾಗೂ ಈ ಬಗೆಯ ಕಂದಾಯ ವಿಧಿಸುವಿಕೆಯ ಆಧಾರವನ್ನು ರೈತರು ಅರ್ಥಮಾಡಿಕೊಳ್ಳುವುದಕ್ಕೆ ನೆರವಾಗುವಂತೆ ನಾನಾ ಬಗೆಯ ನೀರಾವರಿ ಕಾಮಗಾರಿಗಳಿಗೆ ಸಂಬಂಧಿಸಿದ ಕೊಡುಗೆಗಳನ್ನು ಹಾಗೂ ಕನಿಷ್ಠ ದರಗಳನ್ನು ಸೂಚಿಸಬೇಕು.” ಈ ದೃಷ್ಟಿಯನ್ನು ತಳೆದಿತ್ತು ಸಮಿತಿ.

ಸಮಿತಿಯ ಈ ಶಿಫಾರಸ್ಸುಗಳನ್ನು ೧೯೫೭ರ ಮೈಸೂರು ನೀರಾವರಿ ಶಾಸನ (ಅಭಿವೃದ್ಧಿ ಕೊಡುಗೆ ಹಾಗೂ ನೀರುಸುಂಕ ವಿಧಿಸುವಿಕೆ) ದಲ್ಲಿ ಅಳವಡಿಸಲಾಯಿತು. ನೀರಾವರಿ ಕಾರ್ಯ ನಿರ್ಮಾಣದ ಆರಂಭಕ್ಕೆ ಮುನ್ನ ಇದ್ದ ಭೂಮಿಯ ಮಾರುಕಟ್ಟೆ ಬೆಲೆ ಹಾಗೂ ಕಾರ್ಯ ಪೂರ್ಣವಾದ ನಂತರದ ಮಾರುಕಟ್ಟೆ ಬೆಲೆ ಇವೆರಡರ ವ್ಯತ್ಯಾಸದ ಅರ್ಧದಷ್ಟು ಇರಬೇಕು ಅಭಿವೃದ್ಧಿ ಕೊಡುಗೆ ? ಎಚಿದು ಗೊತ್ತು ಮಾಡಲಾಯಿತು. ಅಂಥ ಅಭಿವೃದ್ಧಿ ಕೊಡುಗೆಗೆ ಎಕರೆಗೆ ೫೦೦ ರೂ. ಗಳ ಗರಿಷ್ಟ ಮಿತಿನ್ನು ಗೊತ್ತು ಮಾಡಲಾಯಿತು. ಇದನ್ನು ೧೯೭೪ ರಲ್ಲಿ ಎಕರೆಗೆ ೧೫೦೦ ರೂ. ಗೆ ಹೆಚ್ಚಿಸಲಾಯಿತು. ಆದರೂ ಒಂದು ನೂರು ಎಕರೆಗಿಂತ ಹೆಚ್ಚು ಭೂಮಿಗೆ ನೀರಾವರಿ ಒದಗಿಸಲಾಗದಂಥ ಕಾರ್ಯಗಳ ಬಗ್ಗೆ, ಯಾವುದೇ ಅಭಿವೃದ್ದಿ ಕೊಡುಗೆಯನ್ನು ವಿಧಿಸುವಂತಿರಲಿಲ್ಲ.

ಕೊಡುಗೆಯನ್ನು ವಿಧಿಸುವುದನ್ನು ಮೊದಲು ಆಲೋಚಿಸಿ ಜಾರಿಗೆ ತಂದಾಗ ಅದು, ಒಂದು ನೀರಾವರಿ ಕಾಮಗಾರಿಯನ್ನು ಕಟ್ಟುವುದರಲ್ಲಿ ಹಿಡುವಳಿದಾರರು ಪಾಲುಗೊಳ್ಳಲು ತಾವಾಗಿಯೇ ಮಾಡಿದ ಒಪ್ಪಂದದ ರೂಪದಲ್ಲಿತ್ತು. ಅದರೆ ೧೯೫೭ರಲ್ಲಿ ವಿಧಿಸಿದ ಮೊಬಲಗಿನಲ್ಲಿ ಸ್ವಯಂಪ್ರೇರಣೆಯ ಲಕ್ಷಣ ಏನೂ ಉಳಿದಿರಲ್ಲಿಲ್ಲ. ಕೊಡುಗೆ ಕಂದಾಯದ ರೂಪವನ್ನೇ ತಳೆಯಿತು. ಇತರ ಯಾವುದೇ ತೆರಿಗೆಯಂತೆಯೇ ಇದರ ಹೇರುವಿಕೆಯೂ ಅಶಾಂತಿ ಹಿಂದೆಗಳನ್ನು ಉಂಟುಮಾಡಿತು. ಕೊನೆಗೆ ಯಾವುದೇ ಅಭಿವೃದ್ಧಿ ಕಾಣಿಕೆಯನ್ನು ವಿಧಿಸಬಾರದು ಎಂದು ೧೯೮೦ರಲ್ಲಿ ಸರ್ಕಾರಿ ಆದೇಶ ಹೊರಟಿತು. ಅಭಿವೃದ್ದಿ ಕಾಣಿಕೆ ಹಾಗೂ ನೀರುಸುಂಕ ಶಾಸನ ತಿದ್ದುಪಡಿಯಾಗಿಲ್ಲ. ಆದರೂ ಸರ್ಕಾರದ ಆಜ್ಞೆ ಜಾರಿಯಲ್ಲಿದೆ. ಯಾವುದೇ ನೀರಾವರಿ ಕಾರ್ಯಕ್ಕೂ ಕಾಣಿಕೆಯನ್ನು ವಿಧಿಸಲಾಗುತ್ತಿಲ್ಲ. ಇದು ತುಂಬ ಅನ್ಯಾಯವಾದುದು. ಅಭಿವೃದ್ದಿ ತೆರಿಗೆಯನ್ನು ಮತ್ತೆ ಜಾರಿ ಮಾಡಬೇಕು. ಅದನ್ನು ಫಲಾನುಭವಿಗಳ ಸಹಯೋಗದ ಮೊದಲನೆಯ ಹೆಜ್ಜೆಯನ್ನಾಗಿ ಮಾಡಬೇಕು.

 

[1]ಅರ್ಥಶಾಸ್ತ್ರ – ಸಂಪುಟ ೩, ಅಧ್ಯಾಯ ೯ ಪು. ೧೯೬

[2]ಎಂ.ಎಸ್. ರಾಂಧವಾ – ಹಿಸ್ಟರಿ ಆಫ್ ಅಗ್ರಿಕಲ್ಚರ್ ಇನ್ ಇಂಡಿಯಾ, ಸಂಪುಟ ೧, ಪು. ೩೬೨

[3]ವಾಮನ ಸಂ. ೫ ನಂ.೩. ಜುಲೈ ೧೯೮೫.

[4]ಇ.ಸಿ. ೬ (ಆರ್). ಕೃಷ್ಣರಾಜಪೇಟೆ ೯೬

[5]ಇ.ಸಿ.೧೦ ಮುಳಬಾಗಿಲು ೧೭೨

[6]ಎಂ.ಎ.ಆರ್. ೧೯೩೦-೩೧

[7]ಇ.ಸಿ.೮. (ಆರ್) ಅರಕಲಗೂಡು ೧೦೭

[8]ಬುಕಾನನ್ ಸಂ.೧. ಪು. ೨೮೩

[9]ಅದೇ ಪು. ೮೪

[10]ಅದೇ ಪು. ೨೭೯

[11]ಅದೇ ಪು. ೨೯೨

[12]ಅದೇ ಪು. ೯೮

[13]ಅದೇ ಪು. ೧೪೧

[14]ರೈಸ್ ೨ ಸಂ.೧ ಪು. ೫೮೦-೮೧

[15]ಬುಕಾನನ್ (ಮೊದಲೇ ಪ್ರಸ್ಥಾಪಿಸಿದ್ದು) ಪು. ೪೧೪

[16]ಅದೇ ಪು. ೨೮೨.

[17]ಮೈಸೂರ್ ಸಂಸ್ಥಾನದಲ್ಲಿ ಕೆರಗಳು ೧೮೭೧ ರಲ್ಲಿ ೩೬, ೨೬೬, ಧಾರವಾಡ ಜಿಲ್ಲೆಯಲ್ಲಿ ೧೮೮೪ ರಲ್ಲಿ, ೩೧೫೦, ಬೆಳಗಾಂ ಜಿಲ್ಲೆಯಲ್ಲಿ ೬೬೩, ಬಿಜಾಪುರ ಜಿಲ್ಲೆಯಲ್ಲಿ ೧೨, ಉತ್ತರ ಕನ್ನಡ ಜಿಲ್ಲೆಯಲ್ಲಿ ೪,೬೩೧, ಬಳ್ಳಾರಿ ಜಿಲ್ಲೆಯಲ್ಲಿ ೨೩೩ ಹೈದರಾಬಾದ್‌ಉ ಕರ್ನಾಟಕದಲ್ಲಿ ೭೦೦ ಒಟ್ಟು ೪೫,೬೫೫

[18]೧೮೭೧ ರಲ್ಲಿ ಸ್ಯಾಂಕಿ ಅಂದಾಜು ಮಾಡಿದಂತೆ ಮೈಸೂರು ಸಂಸ್ಥಾನದ ೧೯೨೨೨ ಕೆರೆಗಳ ದುಸ್ತಿಯ ಅಂದಾಜು ವೆಚ್ಚ ಸುಮಾರು ೪೮ ಲಕ್ಷ. ಸ್ಥೂಲವಾಗಿ ಒಂದು ಕೆರೆ ದುರಸ್ತಿ ವೆಚ್ಚ ಸರಾಸರಿ ರೂ. ೨೫೦ ರೂ. ಕೆರೆ ನಿರ್ಮಾಣ ವೆಚ್ಚ ದುರಸ್ತಿ ವೆಚ್ಚಕ್ಕೆ ಹತ್ತು ಪಟ್ಟು ಎಂದು ಇಟ್ಟುಕೊಂಡರೆ ಅದು ಒಂದು ಕೆರೆಗೆ ೨೫೦೦ ರೂ. ಆದೀತು. ೧೮೭೧ ರಲ್ಲಿ ಸುಮಾರು ೪೫೦೦೦ ಕೆರೆಗಳ ಬೆಲೆ ಸುಮಾರು ೧೧೨೫ ಲಕ್ಷ ರೂ. ಆದೀತು.

[19]ಆಮುಕ್ತ ಮಾಲ್ಯದಕಾಂಡ.೬ ಪದ್ಯ ೨೩೬

[20]ಥಾಮಸ್ ಮನ್‌ರೋನ ೩೧ ಡಿಸೆಂಬರ್ ೧೮೨೪ ನೇ ತೇದಿಯ ವರದಿ ಕೇಂಬ್ರಿಜ್ ಎಕನಾಮಿಕ್ ಹಿಸ್ಟರಿ ಆಫ್ ಇಂಡಿಯಾ ಸಂ. ೨. ಪುಟ ೩೬೫ ರಲ್ಲಿ ಉಲ್ಲೇಖವಾದುದು ೧೯೮೯ (ಓರಿಯಂಟ್ ಲಾಂಗಮನ್ಸ್) “ಸತ್ಕಾರ್ಯ ಎಂದು ಅಥವಾ ತಮ್ಮ ಹೆಸರು ಮುಂದಿನ ಪೀಳಿಗೆಗೆ ತಿಳಿಯಲಿ ಎಂದು ಕೆರೆಗಳನ್ನು ಕಟ್ಟಿಸುವುದು ದೇಶೀಯ ನಾಯಕರಿಗೆ ಪ್ರಿಯವಾಗಿತ್ತು. ಮೇಲಿಂದ ಮೇಲೆ ಅವರು ಹಾಗೆ ಕಟ್ಟಿಸುತ್ತಿದ್ದರು. ಭೂಮಿಯಿಂದ ಏನು ಲಾಭ ಬರುವುದೋ ಅದಕ್ಕಿಂತ ಹೆಚ್ಚು ವೆಚ್ಚದಲ್ಲಿ ಕಟ್ಟಿಸುತ್ತಿದ್ದರು. ಏಕೆಂದರೆ ಪ್ರವಾಹ ಬಂದು ಅವು ಒಡೆದು ಹೋದಾಗ ಆ ನಾಯಕರ ಉತ್ತರಾಧಿಕಾರಿಗಳು ಅವುಗಳನ್ನು ದುರಸ್ತಿಮಾಡುವುದು ಯೋಗ್ಯ ಎಂದು ಯಾವಾಗಲೂ ಭಾವಿಸುತ್ತಿರಲಿಲ್ಲ”

[21]ಕೆಂಬ್ರಿಜ್ ಎಕಾನಾಮಿಕ್ ಹಿಸ್ಟರಿ ಆಫ್ ಇಂಡಿಯಾ ಸಂ. ೧. ಪುಟ. ೧೧೪ ತದ್ವಿರುದ್ಧ ಅಭಿಪ್ರಾಯಕ್ಕೆ ಮೇಲಿನ ಅಡಿಟಿಪ್ಣಿಯನ್ನು ನೋಡಿ.

[22]ನಾರ್ದನ್ ಇಂಡಿಯ ಕೆನಾಲ್ ಅಂಡ್ ಡ್ರೈನೇಜ್ ಆಕ್ಟ್ ೧೮೭೩- ಪೀಠಿಕೆ