ಇತಿಹಾಸ ಪೂರ್ವಕಾಲದಿಂದ ಇಂದಿನ ವರೆಗೆ ಕರ್ನಾಟಕದಲ್ಲಿ ಕಟ್ಟಲಾಗಿರುವ ಕೆರೆಗಳನ್ನು ಕುರಿತ “ಕರ್ನಾಟಕದಲ್ಲಿ ಕೆರೆ ನೀರಾವರಿ” ಹೆಸರಿನ ಈ ಗ್ರಂಥ ಅತ್ಯಂತ ಉಪಯುಕ್ತವೆನಿಸಿದೆ. ಈ ಅಧ್ಯಯನ ತೋರಿಸಿಕೊಡುವ ಹಾಗೆ, ಕೆರೆಗಳು ದಕ್ಷಿಣ ಭಾರತದ ವಿಶಿಷ್ಟ ಲಕ್ಷಣ. ಹೀಗಾಗಿ ಕೆರೆಗಳ ನಿರ್ಮಾಣದಲ್ಲಿ, ಸಂರಕ್ಷಣೆಯಲ್ಲಿ ಹಾಗೂ ಜಲನಿರ್ವಹಣೆಯಲ್ಲಿ ಇಲ್ಲಿಯ ಗ್ರಾಮಸಮುದಾಯಕ್ಕೆ ಜೀವಂತ ಆಸಕ್ತಿ ಇದ್ದಿತು. ಈ ಆಸಕ್ತಿಯನ್ನು ಅಸ್ತಿತ್ವಕ್ಕೆ ತಂದ ಹಳೆಯ ಸಾಂಪ್ರದಾಯಿಕ ರೂಢಿಗಳ ಈ ಅಧ್ಯಯನವು ಆಧುನಿಕ ಕಾಲದಲ್ಲಿ ಸರಿಸುಮಾರು ಇಂಥವೇ ಉದ್ದೇಶಗಳಿಗೆ ಪ್ರೇರಣೆ ನೀಡುತ್ತದೆ.

ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳನ್ನು ಉತ್ತಮವಾಗಿ ಕಾರ್ಯಗತಗೊಳಿಸುವಲ್ಲಿ ಜನರು, ಸಹಕಾರಿ ಸಂಘಟನೆ ಹಾಗೂ ಸಂಸ್ಥೆಗಳ ರೂಪದಲ್ಲಿ ಇಂದು ದುಡಿಯುತ್ತಲಿದ್ದಾರೆ. ಇದನ್ನು ಜಲಪ್ರಪಂಚಕ್ಕೂ ವಿಸ್ತರಿಸಿಕೊಂಡು ಜಲಸಂಗ್ರಹಣೆ, ಅದರ ನಿರ್ವಹಣೆ, ಭೂಜಲ ಮಟ್ಟದ ರಕ್ಷಣೆ, ಕುಡಿಯುವ ನೀರು ಪೂರೈಕೆ ದಿಸೆಗಳಲ್ಲಿ ಅವರು ಆಸಕ್ತರಾಗಿದ್ದಾರೆ. ಇಂಥ ಸಂದರ್ಭದಲ್ಲಿ ನಮ್ಮ ಪ್ರಾಚೀನ ಮಾದರಿಗಳು ಪಾಠವಾಗಿ ಪರಿಣಮಿಸುತ್ತವೆ. ಈ ಉದ್ದೇಶದಿಂದ ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಇಲಾಖೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಮೂಲಕ ಈ ಪುಸ್ತಕವನ್ನು ಪ್ರಕಟಮಾಡಿಸಿದೆ.

ಪ್ರಾಚೀನ ಕಾಲದಲ್ಲಿ ಪ್ರಜೆಗಳು ಮತ್ತು ರಾಜರು ಕೆರೆಗಳನ್ನು ತೃಪ್ತಿಕರವಾಗಿ ಕಟ್ಟುತ್ತಿದ್ದರು. ಹಾಗೂ ಸಂರಕ್ಷಿಸುತ್ತಿದ್ದರು. (ತುಂಗಭದ್ರಾ, ಕಾವೇರಿ ನದಿಗಳ ಮೇಲೆ ವಿಜಯನಗರದ ಅರಸು ಕಟ್ಟಿಸಿದ ನೀರಾವರಿ ಕಾಮಗಾರಿಗಳನ್ನು ಜನ ಇನ್ನೂ ಬಳಸುತ್ತಲಿದ್ದಾರೆ). ಅಲ್ಲಿಂದ ಮುಂದೆ ನಮ್ಮನ್ನು ಆಳಿದ ಬ್ರಿಟಿಷರು ದೊಡ್ಡ ಹಾಗೂ ಫಲದಾಯಕ ಜಲಾಶಯಗಳ ಜೀರ್ಣೋದ್ಧಾರದ ಕಡೆಗೆ ಹೆಚ್ಚು ಗಮನ ಹರಿಸುವಲ್ಲಿ, ಹಳ್ಳಿಯ ಸಣ್ಣಕೆರೆಗಳು ತೀರ ಅಲಕ್ಷ್ಯಕ್ಕೆ ಗುರಿಯಾದವು. ಹೀಗಾಗಿ ಗ್ರಾಮ ಸಮುದಾಯಗಳಲ್ಲಿದ್ದ ಜಲಾಶಯಗಳು ಮಾಯವಾಗುತ್ತ ನಡೆದುವಲ್ಲದೆ, ಕೆರೆಗಳ ಹೂಳು ತೆಗೆಯುವುದೂ ಸೇರಿದಂತೆ ಅನೇಕ ಸಾಂಪ್ರದಾಯಿಕ ರೂಢಿಗಳು ತಪ್ಪಿಹೋದವು.

ನೂತನ ಸರ್ಕಾರ ರಚನೆಯಾದ ನಂತರ ಸಣ್ಣ ನೀರಾವರಿ ಇಲಾಖೆಗೆ ವಿಶೇಷವಾದ ಪ್ರಾಮುಖ್ಯತೆಯನ್ನು ನೀಡಲಾಗಿದ್ದು, ಹಳೆಯ ಕೆರೆಗಳ ಹೂಳು ತೆಗೆಯುವುದು, ದುರಸ್ತಿ ಮಾಡುವುದರೊಂದಿಗೆ, ಹೊಸ ಕೆರೆಗಳ ನಿರ್ಮಾಣ ಮುಂತಾದ ಕಾಮಗಾರಿಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಣ್ಣ ನೀರಾವರಿ ಇಲಾಖೆಯು ತನ್ನ ವ್ಯಾಪ್ತಿಯ ಕೆರೆಗಳಿಗಾಗಿ ‘ನೀರಾವರಿ ಬಳಕೆದಾರರ ಸಹಕಾರ ಸಂಘ’ಗಳನ್ನು ಸಂಘಟಿಸಿ, ನೋಂದಾಯಿಸುವ ಕಾರ್ಯ ಈಗಾಗಲೇ ಪ್ರಗತಿಯಲ್ಲಿದೆ. ಗ್ರಾಮೀಣ ಕೆರೆಗಳ ಪುನರ್ಶಚೇತನ ಕಾರ್ಯಕ್ರಮದ ಜೊತೆಗೆ ನಗರ ಕೆರೆಗಳ ಸಂರ‍ಕ್ಷಣಾ ಕಾರ್ಯಕ್ರಮಗಳ ಬಗೆಗೂ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿದ್ದು, ಪ್ರವಾಸೋದ್ಯಮ ಇಲಾಖೆಯ ಹಾಗೂ ಹುಡ್ಕೋ ಸಂಸ್ಥೆಯ ಆರ್ಥಿಕ ಸಹಾಯದಿಂದ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಕೆರೆಗಳ ಅಭಿವೃದ್ಧಿಗೆ ವಿಶ್ವಬ್ಯಾಂಕ್‌ನಿಂದ ಅನುದಾನ ಪಡೆಯುವ ನಿಟ್ಟಿನಲ್ಲಿ ಹಾಗೂ ಮೇಲೆ ನಮೂದಿಸಿರುವ ಎಲ್ಲ ಕಾರ್ಯಕ್ರಮಗಳನ್ನು ಸಾರ್ಥಕಗೊಳಿಸುವಲ್ಲಿ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳ ವೈಯಕ್ತಿಕ ಆಸಕ್ತಿ ಹಾಗೂ ವಿಶೇಷ ಕಳಕಳಿ ಬೆಂಬಲವಾಗಿದೆ – ಎಂಬ ಅಂಶವನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ.

ಜನಸಂಖ್ಯೆಯ ಹೆಚ್ಚಳ ಹಾಗೂ ಗಾಬರಗೊಳಿಸುವಂಥ ಅರಣ್ಯ ನಾಶಗಳ ಕಾಲದಲ್ಲಿ ಭೂಜಲ ಮಟ್ಟದ ರಕ್ಷಣೆ ಅತ್ಯಂತ ಮಹತ್ವದ್ದು. ಅಂತರ್ಜಲವನ್ನು ಮತ್ತೆ ತುಂಬಸಿ, ಭೂಜಲ ಮಟ್ಟವನ್ನು ರಕ್ಷಿಸುವಲ್ಲಿ ಹೊಸ ಇಂಗುಕೊಳಗಳಷ್ಟೇ ಹಳೆಯ ಕೆರೆಗಳ ಜೀರ್ಣೋದ್ಧಾರವೂ ಪರಿಣಾಮಕಾರಿ. ಈ ಅಧ್ಯಯನದ ಪೀಠಿಕೆಯಲ್ಲಿ ಹೇಳಿರುವಂತೆ ಈಗ ಪರಿಸ್ಥಿತಿ ತುಂಬ ಕೆಟ್ಟಿದೆ. ಭೂಜಲಮಟ್ಟ ನೆಲಕ್ಕಿಂತ ನೂರಾರು ಅಡಿ ಆಳಕ್ಕೆ ಇಳಿದಿದೆ. ಈ ಮೊದಲ ಬಾವಿಗಳಲ್ಲಿ ಕೈಗೆ ಸಿಗುತ್ತಿಲಿದ್ದ ಭೂಜಲ ಮಟ್ಟ ಈಗ ಕೊಳವೆ ಭಾವಿಗಳಿಗೂ ದುರ್ಲಭವಾಗುತ್ತಿದೆ. ಇದು ಹೇಗೆ ಆಯಿತು? ಈ ಸ್ಥಿತಿಯನ್ನು ಸುಧಾರಿಸಲು ಈಗ ಏನು ಮಾಡಬಹುದು? ಎಂಬುದು ನಮ್ಮ ಅನ್ವೇಷಣೆಯ ಉದ್ದೇಶ. ಇದಕ್ಕೆ ನಮ್ಮ ಹಿರಿಯರ ಜಲನಿರ್ಮಿತಿಗಳು, ಇದಕ್ಕೆ ಸಂಬಂಧಪಟ್ಟ ಜ್ಞಾನಗಳು ಪ್ರಯೋಜನವಾಗುವುದೆಂಬ ದೃಢ ನಂಬಿಕೆಯಿಂದ ಈ ಪುಸ್ತಕ ಪ್ರಕಟನೆಗೆ ನಮ್ಮ ಇಲಾಖೆ ಮುಂದುಬಂದಿದೆ.

ಹಂಪಿಯ ಕನ್ನಡ ವಿಶ್ವವಿದ್ಯಾಲಯ, ನಮ್ಮ ಪರಂಪರಾಗತ ಜ್ಞಾನ – ಕ್ರಿಯೆಗಳ ಅಧ್ಯಯನ ಮತ್ತು ಅನ್ವಯಿಕತೆಗಳ ಮೇಲೆ ತನ್ನ ಶಕ್ತಿಯನ್ನು ಕೇಂದ್ರೀಕರಿಸುವ ಉನ್ನತ ಶಿಕ್ಷಣ ಸಂಸ್ಥೆಯಾಗಿದೆ. ಸಂಸ್ಕೃತಿ ಅಭ್ಯಾಸಿಗಳಾದ ಕುಲಪತಿ ಡಾ. ಎಂ.ಎಂ. ಕಲಬುರ್ಗಿಯವರಿಂದಾಗಿ ಈ ಕೇಂದ್ರೀಕರಣಕ್ರಿಯೆ ಇನ್ನೂ ಗಾಢವಾಗುವುತ್ತಿರುವುದನ್ನು ಮನಗಂಡು, ನಾವು ಈ ಹೊಣೆಯನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ವಹಿಸಿಕೊಟ್ಟೆವು. ಅಚ್ಚುಕಟ್ಟಾಗಿ ಈ ಕೆಲಸವನ್ನು ಪೂರೈಸಿದ ಕನ್ನಡ ವಿಶ್ವವಿದ್ಯಾಲಯಕ್ಕೆ, ಈ ಕೃತಿ ಲೇಖಕರಿಗೆ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ.

 – ಎಸ್. ಕುಮಾರ ಬಂಗಾರಪ್ಪ
ಸಣ್ಣ ನೀರಾವರಿ ರಾಜ್ಯ ಸಚಿವರು, ಕರ್ನಾಟಕ ಸರ್ಕಾರ