ಪೀಠಿಕೆ :

ಈವರೆಗೆ ನಾವು ಅತಿ ಪ್ರಾಚೀನ ಕಾಲದಿಂದ ಇವೊತ್ತಿನ ವರೆಗಿನ ಕೆರೆ ನೀರಾವರಿಯ ಇತಿಹಾಸವನ್ನು ಗುರುತಿಸಿದ್ದೇವೆ. ಹಿಂದಿನಕಾಲದಲ್ಲಿ ಹಾಗೂ ಈಗ ಆ ಕೆಲಸಗಳ ನಿರ್ಮಾಣ ಹಾಗೂ ಸಂರಕ್ಷಣೆಗಾಗಿ ಮತ್ತು ನಿರ್ವಹಣೆಗಾಗಿ ಅನುಸರಿಸಲಾದ ಕ್ರಮಗಳು. ಅವುಗಳ ನಿರ್ವಹಣೆಗಾಗಿ ಮಾಡಲಾದ ವ್ಯವಸ್ಥೆಗಳು, ಅವುಗಳಲ್ಲಿ ನೀರು ಹಂಚಿಕೆಯ ವಿಧಾನ, ನಿರ್ಮಾಣದ ವೆಚ್ಚ ಹಾಗೂ ಫಲಾನುಭವಿಗಳಿಗೆ ವಿಧಿಸಬೇಕಾದ ನೀರು ತೆರಿಗೆ ದರಗಳು – ಇವುಗಳನ್ನೆಲ್ಲ ತಿಳಿದುಕೊಳ್ಳದೆ ಇದ್ದರೆ ಅಧ್ಯಯನ ಪೂರ್ಣವಾಗುವುದಿಲ್ಲ. ನೀರಾವರಿ ಆಡಳಿತದ ಈ ಅಧ್ಯಯನ, ಹಿಂದಿನ ವಿಧಾನಗಳಿಂದ ನಾವು ಪಾಠಗಳನ್ನು ಅರಿಯಲು ಸಹಾಯಕವಾಗುತ್ತದೆ. ಮೊದಲು ನಾವು ನಿರ್ಮಾಣ ವಿಧಾನಗಳನ್ನು ತಿಳಿದುಕೊಳ್ಳೋಣ.

ನಮ್ಮ ಹಿಂದಿನವರು ಕಟ್ಟಿದ ಬಹುಪಾಲು ಕೆರೆಗಳು ಸಣ್ಣ ಸಣ್ಣವು. ಅವುಗಳಲ್ಲಿ ಅನೇಕ ಕೈಬಿಟ್ಟು ಹೋಗಿವೆ ಇಲ್ಲವಾಗಿವೆ. ಕಾಲಕಾಲಕ್ಕೆ ದುರಸ್ತಿಯಾದ ಹಾಗೂ ಜೀರ್ಣೋದ್ಧಾರವಾದಂಥ ಕೆಲವು ದೊಡ್ಡ ಕೆರೆಗಳು ಉಳಿದುಕೊಂಡಿವೆ. ಅವು ಸಹ ಕಳೆ ಹೂಳು ತುಂಬಿಕೊಂಡು ಅಸಡ್ಡೆಗೆ ಒಳಗಾಗಿವೆ. ಭಾರಿ ನೀರಾವರಿ ಕಾಲುವೆ ವ್ಯೂಹದ ಅಚ್ಚುಕಟ್ಟು ಪ್ರದೇಶಗಳಲ್ಲಿರುವ ಕೆರೆಗಳಾದರೂ ಆ ಕಾಲುವೆ ವ್ಯೂಹದಿಂದ ಪ್ರತ್ಯಕ್ಷವಾಗಿಯೊ ಪರೋಕ್ಷವಾಗಿಯೊ ಹರಿದು ಬರುವ ಜಲಪ್ರವಾಹದ ದೆಸೆಯಿಂದಾಗಿ ಇನ್ನೂ ಉಪಯುಕ್ತವಾಗಿವೆ. ಕೆರೆ, ಏರಿ ಇತ್ಯಾದಿಗಳ ವಿನ್ಯಾಸ ಹಾಗೂ ರಚನೆ ಬಗ್ಗೆ ನಿರ್ಮಾಪಕರಿಗೆ ಇದ್ದ ಜ್ಞಾನಕ್ಕೆ ಸಾಕ್ಷಿಯಾಗಿವೆ, ಇನ್ನೂರು ಮುನ್ನೂರು ವರ್ಷಗಳಿಂದಲೂ ಬಳಕೆಯಲ್ಲಿರುವ ಇವು ಹಾಗೂ ಇಂಥ ಇತರ ಕೆರೆಗಳು,

ಶಾಸನಗಳ ಸಾಕ್ಷ್ಯ :

ತುಂಗಭದ್ರಾ, ಕಾವೇರಿ, ಹೇಮಾವತಿ ಮತ್ತಿತರ ದೊಡ್ಡ ನದಿಗಳಿಗೆ ಅಡ್ಡಲಾಗಿ ಯಾವ ಜಲಾಶಯಗಳು ಇದ್ದವು ಎನ್ನುವುದನ್ನು ನಾನಾ ಶಾಸನಗಳ ಅಧ್ಯಯನಗಳು ಸೂಚಿಸುವುದಿಲ್ಲ. ಬಹುಪಾಲು ಜಲಾಶಯಗಳೆಲ್ಲ ಸಣ್ಣ ಪುಟ್ಟ ಹೊಳೆಗಳಿಗೆ ಕಟ್ಟಲಾದ ಕೆರೆ ಅಥವಾ ಏರಿಗಳೇ. ಬಹುಮಟ್ಟಿಗೆ ಅವೆಲ್ಲ ಮಣ್ಣಿನ ಕಟ್ಟೆಗಳು. ಅವುಗಳಿಂದ ಒಂದೊ ಎರಡೊ ನಾಲೆಗಳು ಹೊರಡುತಿದ್ದವು. ಆಂಧ್ರಪ್ರದೇಶದ ಕಡಪಾ ಜಿಲ್ಲೆ ಬದವೇಲು ತಾಲ್ಲೂಕಿನ ಪೊರುಮಾಮಿಲ್ಲ ಶಾಸನವನ್ನು ಬಿಟ್ಟರೆ ಕೆರೆ ಏರಿಗಳ ಉದ್ದ, ಎತ್ತರ ಅಥವಾ ಕೆರೆ ನಿರ್ಮಾಣಕ್ಕೆ ತೆಗೆದುಕೊಂಡ ಕಾಲ ಇತ್ಯಾದಿ ಯಾವುದರ ವಿವರಗಳನ್ನು ಬೇರೆ ಯಾವ ಶಾಸನವೂ ಕೊಡುವುದಿಲ್ಲ.

ಪೊರುಮಾಮಿಲ್ಲ ಕೆರೆ :

ಕೆರೆಯನ್ನು ಹೇಗೆ ಕಟ್ಟುಲಾಗುತ್ತಿತ್ತು, ಅದರ ಲಕ್ಷಣಗಳೇನು ಎಂಬ ಬಗ್ಗೆ ಕೊಂಚ ವಿವರವಾಗಿ ವರ್ಣಿಸುವುದಕ್ಕೆ ಲಭ್ಯವಿರುವ ಏಕೈಕ ಶಾಸನವೆಂದರೆ ವಿಜಯನಗರದ ಅರಸ ಭಾಸ್ಕರನ ಕ್ರಿ.ಶ. ೧೩೬೯ರ ಪೊರುಮಾಮಿಲ್ಲ ಶಾಸನ.[1] ಈ ಕೆರೆಯ ಹೆಸರು ಅನಂತರಾಜ ಸಾಗರ. ನಾಲ್ಕು ನೈಸರ್ಗಿಕ ಗುಡ್ಡಗಳನ್ನು ಮೂರು ಮೋಟಾದ ಮಣ್ಣು ಆಣೆಗಳಿಂದ ಕೂಡಿಸಿ ಇದನ್ನು ನಿರ್ಮಿಸಲಾಗಿದೆ. ಅಣೆಯ ಉದ್ದ ೪,೫೦೦ ಅಡಿ. ಗುಡ್ಡಗಳನ್ನು ಸೇರಿಸಿದರೆ ಒಟ್ಟು ಉದ್ದ ಸುಮಾರು ೧೪,೦೦೦ ಅಡಿ. ಅತ್ಯಂತ ಆಳವ ಭಾಗದಲ್ಲಿ ಏರಿ ಮೇಲುಗಡೆ ಸುಮಾರು ೧೨ ಅಡಿ ಅಗಲ ಹಾಗೂ ಬುಡದಲ್ಲಿ ೧೫೦ ಅಡಿ ಅಗಲವಾಗಿದೆ. ಅದರ ಎತ್ತರ ಸುಮಾರು ೩೩ ಅಡಿ. ಏರಿಯ ಈಗಿನ ಅಳತೆಗಳು, ಅದರ ನಿರ್ಮಾಣದ ಬಹುಕಾಲದ ನಂತರ ಆದ ಸೇರ್ಪಡೆಗಳನ್ನು ಸೂಚಿಸಲೂಬಹುದು. ಗುಡ್ಡಗಳ ಭಾಗಗಳೂ ಸೇರಿದಂತೆ ಏರಿಯ ಉದ್ದ ೫,೦೦೦ ರೇಖಾದಂಡಗಳು, ಅಗಲ ಹಾಗೂ ಎತ್ತರ ಎಂಟು ಹಾಗೂ ಏಳು ರೇಖಾದಂಡಗಳು ಎನ್ನುವ ಶಾಸನ ವಾಕ್ಯವೇ ಇದಕ್ಕೆ ಸಾಕ್ಷಿ. ಏರಿಯ ವಾಸ್ತವವಾದ ಉದ್ದ ೧೪,೦೦೦ ಅಡಿ. ಶಾಸನಗಳಲ್ಲಿ ಹೆಳಲಾದುದು ೫,೦೦೦ ರೇಖಾದಂಡಗಳು. ಇದರಿಂದ ಶಾಸನದಲ್ಲಿ ಹೇಳಿರುವ ಒಂದು ರೇಖಾದಂಡ ಸುಮಾರು ೫ ಅಡಿ ಇದ್ದರಬೇಕು ಎನ್ನಬಹುದು. ರೇಖಾದಂಡದ ಈ ಅಳತೆಯನ್ನು ಅನುಸರಿಸಿದರೆ ಶಾಸನದಲ್ಲಿ ವಿವರಿಸಿರುವ ಏರಿಯ ಅಗಲ ೨೪ ಅಡಿ, ಎತ್ತರ ೨೧ ಅಡಿ ಅಗುತ್ತದೆ. ೨೧ ಅಡಿ ಎತ್ತರ ಕಟ್ಟೆಯ ಅಗಲ ೨೪ ಅಡಿ ಇದ್ದರೆ ಅದು ಕಟ್ಟಯ ಬುಡದ ಅಗಲವಾಗಲಾರದು. ಅದು ಏನಿದ್ದರೂ ಕಟ್ಟೆಯ ಮೇಲು ಭಾಗದ ಅಗಲವಷ್ಟೇ. ಕಟ್ಟೆಯ ಈಗಿನ ಮೇಲು ಅಗಲ ೧೨ ಅಡಿ. ಅದು ಕಟ್ಟಿಯನ್ನು ಮೊದಲಿನ ೨೧ ಅಡಿಗಳಿಂದ ಈಗಿನ ೩೩ ಅಡಿಗಳಿಗೆ ಎತ್ತರಿಸಿದ್ದರಿಂದ ಅಲ್ಲದೆ ಶಾಸನದಲ್ಲಿ ಕೊಟ್ಟಿರುವಂತೆ ಏರಿಯ ಮೂಲ ಅಳತೆಗಳನ್ನು ಅನುಸರಿಸಿದರೆ, ಏರಿಗೆ ಕೊಡಲಾಗಿರುವ ಪಾರ್ಶ್ವ ಇಳಿಜಾರು ಸಮಮಟ್ಟ ೨ ಕ್ಕೆ ಲಂಬಮಟ್ಟ ೧ ಎಂದಾಗುತ್ತದೆ. ಏರಿಯ ಎತ್ತರವನ್ನು ಹೆಚ್ಚಿಸಿದಾಗ ಈಗಿರುವ ಸಮ ಮಟ್ಟ ೩ ಕ್ಕೆ ಲಂಬ ಮಟ್ಟ ೧ ರಂತೆ ಮಾರ್ಪಾಟಾಗಿರಬೇಕು. ಈಗಿರುವ ಇಳಿಜಾರಿಗೆ ಹೋಲಿಸಿದಲ್ಲಿ ಮೊದಲಿನ ಇಳಿಜಾರು ಹೆಚ್ಚು ಮಟ್ಟಸವಾಗಿತ್ತು.

ಒಳ್ಳೆಯ ಕೆರೆಯ ಮಾನದಂಡಗಳು :

ಒಂದು ಕೆರೆಯನ್ನು ಕಟ್ಟಲು ಹನ್ನೆರಡು ಅಗತ್ಯಗಳನ್ನು ಅಥವಾ ಸಾಧನಗಳನ್ನು ಪೂರೈಸಬೇಕು ಎಂದು ಶಾಸನ ವಿವರಿಸುತ್ತದೆ. ಅಂಥ ಕೆಲಸಗಳಲ್ಲಿ ಆರು ಬಗೆಯ ದೋಷಗಳು ಆಗದಂತೆ ಎಚ್ಚರ ವಹಿಸಬೇಕೆಂದೂ ಹೇಳುತ್ತದೆ.

ಈ ಶಾಸನದ ಪ್ರಕಾರ, ಒಂದು ಒಳ್ಳೆಯ ಕೆರೆಯ ನಿರ್ಮಾಣಕ್ಕೆ ಇರಬೇಕಾದ ಹನ್ನೆರಡು ಅಗತ್ಯಗಳು ಇವು.

೧. ಧರ್ಮಶೀಲನೂ ಶ್ರೀಮಂತನೂ, ಸುಖಿಯೂ, ಹಾಗೂ ಶಾಶ್ವತ ಸಂಪತ್ತು ಅಥವಾ ಕೀರ್ತಿಯನ್ನು ಬಯಸುವವನೂ ಆದ ದೊರೆ.

೨. ಜಲಶಾಸ್ತ್ರ (ಪಾಠಸ್ ಶಾಸ್ತ್ರ) ಪಾರಂಗತನಾದ ಬ್ರಾಹ್ಮಣ.

೩. ಗಟ್ಟಿ ಜೇಡಿಮಣ್ಣಿನಿಂದ ಕೂಡಿದ ಭೂಮಿ.

೪. ಸಿಹಿ ನೀರನ್ನು ತರುವ ನದಿ, ತನ್ನ ಮೂಲದಿಂದ ಮೂರು ಯೋಜನೆ ದೂರದಲ್ಲಿರುವಂಥದು.

೫. ಏರಿಗೆ ತಗುಲಿದಂತಿರುವ ಬೆಟ್ಟದ ಭಾಗಗಳು.

೬. ಈ ಬೆಟ್ಟಗಳ ಭಾಗಗಳ ನಡುವೆ ಕಟ್ಟಿದ ಬಿಗಿಯಾದ ಕಲ್ಲು ಗೋಡೆಯ ಏರಿ, ಅತಿ ಉದ್ದವಲ್ಲದ್ದು ಆದರೆ ಭದ್ರವಾದದ್ದು.

೭. ಫಲವೀಯುವ ಭೂಮಿಯಿಂದ(ಫಲ – ಸ್ಥಿರ) ಹೊರ ಮೂಖವಾಗಿರುವ ಎರಡು ಕೊನೆಗಳು(ಶೃಂಗ)

೮. ವಿಸ್ತಾರವೂ ಆಳವೂ ಆದ ಕೆರೆ ಅಂಗಳ.

೯. ನೇರವಾದ ಉದ್ದನೆಯ ಕಲ್ಲು ಇರುವ ಕಲ್ಲುಗಣಿ.

೧೦. ಸಮತಟ್ಟಾದ ಫಲಭರಿತ ಮರಗಳಿಂದ ಕೂಡಿದ ನೆರೆಯ ಭೂಮಿ (ಅಚ್ಚು ಕಟ್ಟು)

೧೧. ಬೆಟ್ಟದ ಸ್ಥಾನದಿಂದಾಗಿ (ಅಡವಿಸ್ಥಾನ) ಬಲವಾದ ಸುಳಿಗಾಳಿ ಇರುವ (ಬ್ರಹ್ಮ) ಜಲ ಹಿರಿವು (ತೂಬು) ಹಾಗೂ

೧೨. ಕೆರೆ ನಿರ್ಮಾಣದಲ್ಲಿ ಕುಶಲರಾದ ಕೆಲಸಗಾರರ ತಂಡ,
ಸಂಭವಿಸದಂತೆ ಎಚ್ಚರವಾಗಿರಬೇಕಾದ ಆರು ದೋಷಗಳು ಹೀಗಿವೆ.
೧. ಕಟ್ಟೆಯಿಂದ ನೀರು ಜಿನುಗುವಿಕೆ.
೨. ಕ್ಷಾರೀಯ ಮಣ್ಣು
೩. ಎರಡು ರಾಜ್ಯಗಳ ಸರಹದ್ದಿನಲ್ಲಿ ಕೆರೆ ಇರುವಿಕೆ.
೪. ಕೆರೆ ಅಂಗಳದ ನಡುವಿನ ದಿಬ್ಬ (ಕೂರ್ಮ)
೫. ಅತ್ಯಲ್ಪ ಜಲಲಭ್ಯತೆ ಹಾಗೂ ವಿಸ್ತಾರವಾದ ಅಚ್ಚುಕಟ್ಟು
೬. ಅಲ್ಪ ಭೂಮಿ, ಮತ್ತು ಅತಿಯಾದ ನೀರು.

ಗಟ್ಟಿಯಾದ ಅಭೇದ್ಯವಾದ ಜೇಡಿಮಣ್ಣಿನ ನೆಲಗಟ್ಟಿನ ಮೇಲೆ ಏರಿಗಳನ್ನು ನಿರ್ಮಿಸುವುದು ಹಾಗೂ ಏರಿಯ ತುದಿಗಳಲ್ಲಿ ತೂಬುಗಳನ್ನು ಕಟ್ಟಿ ಹೆಚ್ಚುವರಿ ನೀರು ಹೊರಹೋಗಲು ವ್ಯವಸ್ಥೆಮಾಡುವುದು ಚೆನ್ನಾಗಿ ತಿಳಿದಿತ್ತು ಎಂದು ಈ ಶಾಸನದಲ್ಲಿನ ನಾನಾ ಹೇಳಿಕೆಗಳಿಂದ ಊಹಿಸಬಹುದು. ಕೆರೆಗೆ ಸಾಕಷ್ಟು ಜಲಾನಯನ ಭೂಮಿ ಇರಬೇಕು (ಮೂರು ಯೋಜನ). ನೀರಾವರಿಗೆ ಬಳಸುವ ನೀರು ಕುಡಿಯಲು ಯೋಗ್ಯವಾಗಿರಬೇಕು. ಹಾಗೂ ಕೆರೆಯ ಅಚ್ಚುಕಟ್ಟು ಪ್ರದೇಶ ಸಮತಟ್ಟಾಗಿ ಫಲವತ್ತಾಗಿರಬೇಕು. ಈ ಬಗ್ಗೆಯೂ ಎಚ್ಚರ ವಹಿಸಲಾಗುತ್ತಿತ್ತು ಎನ್ನುವುದನ್ನು ಕಾಣಬಹುದು. ಏರಿಯಿಂದ ನೀರು ಜಿನುಗದಂತೆ ಸಾಕಷ್ಟು ಕ್ರಮ ಕೈಗೊಳ್ಳಲಾಗುತ್ತಿತ್ತು ಎನ್ನುವುದೂ ಸ್ಪಷ್ಟ. ಆದರೆ ಕಣಿವೆ ಪಾರ್ಶ್ವದಲ್ಲಿ ಏರಿಯನ್ನು ಹೇಗೆ ಮುಚ್ಚುತ್ತಿದ್ದರು ಎಂಬುದು ಸ್ಪಷ್ಟವಾಗುವುದಿಲ್ಲ. ಆದರೂ ೨೫ – ೩೦ ಅಡಿಯ ಮಣ್ಣುಕಟ್ಟೆಯನ್ನು ಅಷ್ಟು ಉದ್ದವಾಗಿ ಕಟ್ಟುವ ತಂತ್ರ ಹಾಗೂ ಎರಡು ಮಳೆಗಾಲಗಳ ಅವಧಿ ಪೂರಾ ಇರುತ್ತಿದ್ದ ನಿರ್ಮಾಣಕಾಲದಲ್ಲಿ ನದಿಯ ದಿಕ್ಕನ್ನು ಬದಲಾಯಿಸುವಿಕೆ(ನಿರ್ಮಾಣ ಎರಡು ವರ್ಷಗಳಲ್ಲಿ ಮುಗಿಯಿತು ಎನ್ನುತ್ತದೆ ಶಾಸನ) ಚೆನ್ನಾಗಿ ತಿಳಿದಿತ್ತು ಮತ್ತು ಸಾಕಷ್ಟು ಕುಶಲಕರ್ಮಿಗಳು ಸಿಗುತ್ತಿದ್ದರು ಎನ್ನುವುದಂತೂ ನಿಶ್ಚಿತ.

ನಿರ್ಮಾಣ ಸಂಘಟನೆ :

ಕುಶಲರಲ್ಲದ ಕೂಲಿಗಳನ್ನು ಮಣ್ಣುಕೆಲಸಕ್ಕೂ, ಕಲ್ಲು ಕೆಲಸಗಾರರನ್ನು ತೂಬು ರಚನೆಗೂ ನೇಮಿಸಿಕೊಂಡು ಕೆರೆಗಳನ್ನು ಕಟ್ಟಲಾಗುತ್ತಿತ್ತು ಎಂದು ಶಾಸನಗಳಿಂದ ತಿಳಿದುಬರುತ್ತದೆ. ರಾಜಗುಂಡಲಹಳ್ಳಿ ಕೆರೆಗೆ ಹೇರಳವಾಗಿ ಮಣ್ಣು ಒಡ್ಡು ಹಾಗೂ ಇಟ್ಟಿಗೆ ಮತ್ತು ಒಳ್ಳೆ ಗಾರೆಯಿಂದ ಭದ್ರಗೊಳಿಸಲಾದ ಕಲ್ಲುತೂಬು ಇದ್ದವು.[2] (೧೪೯೬) ನರಸಿಂಹಪುರದ ಕೆರೆ[3] ನಿರ್ಮಾಣದ ವೆಚ್ಚದಲ್ಲಿ, ಬಂಡಿ ಸಾಮಾನುಗಳು, ಕೂಲಿ, ಬಂಡಿ ಹೊಡೆಯುವವ, ಕೆರೆಗೆ ಬಂಡಿಗಳು. ಮಣ್ಣು ಅಗೆತ ಮೇಲೆ ಉಸ್ತುವಾರಿಯ ಸೇನಬೋವ (ಲೆಕ್ಕಿಗ), ಎರಡು ತೂಬುಗಳನ್ನು ಕಟ್ಟುತಿದ್ದ ಕಲ್ಲುಕಟ್ಟಡದ ಆಳು, ಹಾಗೂ ಇತರ ಕೆಲವು ಸಾದಿಲವಾರು ಬಾಬುಗಳ ವೆಚ್ಚವೂ ಸೇರಿದ್ದವು. ಮಾಲೂರು ತಾಲ್ಲೂಕಿನ ಟೇಕಲ್ ಶಾಸನ[4] (೧೪೭೫) ಕೆರೆ ಒಡೆದುದನ್ನೂ ಅದನ್ನು ಮತ್ತೆ ಕಟ್ಟಲು ಸ್ಥಳೀಯ ಕಲ್ಲು ಕೆಲಸದವನಿಗೆ ಹೇಳಿದುದನ್ನೂ ತಿಳಿಸುತ್ತದೆ. ಪೆನ್ನಾರ್ ಹೊಳೆಯನ್ನು ಪೆನುಗೊಂಡೆಗೆ ತಿರುಗಿಸುವ ಕೆಲಸವನ್ನು ದಶವಿದ್ಯಾಚಕ್ರವರ್ತಿಯೂ, ಜಲಸೂತ್ರನೂ (ನೀರಾವರಿ ಇಂಜನಿಯರ್) ಆಗಿದ್ದ ಸಿಂಗಯ್ಯ ಭಟ್ವ ಮಾಡಿದ ಎಂದು ಗೌರಿಬಿದನೂರು ತಾಲ್ಲೂಕಿನ ಕಲ್ಲೂಡಿ ಶಾಸನ[5] (೧೩೮೮) ಹೇಳುತ್ತದೆ. ಸೊರಬ ಶಾಸನದ[6] (೧೧೫೯) ಪ್ರಕಾರ ಬೀರಿಸೆಟ್ಟಿ ಎಂಬಾತ ತಜ್ಞರ ಪರಿಶೀಲನೆಯಾದ ಮೇಲೆ (ಸಿದ್ಧರ ಶೋಧನದಿಂದ) ಕೆರೆಯನ್ನು ಕಟ್ಟಿದ.

ಅಂತೆಯೆ ಪ್ರತಿಯೊಂದು ಪ್ರದೇಶದಲ್ಲಿಯೂ ಕೆರೆಯನ್ನು ಕಟ್ಟುವ ಮಣ್ಣು ಒಡ್ಡರು, ಕಲ್ಲು ಒಡ್ಡರು ಮುಂತಾದ ಅನುಭವಿಗಳು ಕುಶಲಿಗಳು ಆದ ಕಸಬುದಾರರಿದ್ದರು. ಹಾಲಿ ಇರುವ ಕೆರೆಗಳನ್ನು ನೋಡಿದರೆ ಕೆರೆಗಳ ಸ್ಥಾನ ನಿರ್ದೇಶ, ಕಾಲುವೆ ವ್ಯೂಹಗಳ ಸಾಲು ಜೋಡಣೆ ಇವೆಲ್ಲವೂ ಆಕಾಲದಲ್ಲಿ ಲಭ್ಯವಿದ್ದ ಸಿವಿಲ್ ಇಂಜನಿಯಾರಿಂಗ್ ಜ್ಞಾನ ಹಾಗೂ ಅನುಭವ ನೈಪುಣ್ಯಗಳನ್ನು ಕೊಂಡಾಡುತ್ತವೆ. ಅದರೆ ಈಗ ಇರುವಂತೆ ನೀರಾವರಿ ಕೆಲಸಗಳ ಪರಿಶೀಲನೆ ರಚನೆ ಹಾಗೂ ಸಂರಕ್ಷಣೆಯನ್ನು ಕೈಗೊಳ್ಳಲು ಯಾವುದೇ ನಿರ್ದಿಷ್ಟ ಇಲಾಖೆ ಇದ್ದುದರ ಬಗ್ಗೆ ಯಾವ ಶಾಸನವು ತಿಳಿಸುವುದಿಲ್ಲ.

೧೮ನೆಯ ಶತಮಾನದ ಹೈದರಾಲಿ ಮತ್ತು ಟಿಪ್ಪು ಅವರ ಅಳ್ವಿಕೆಯಲ್ಲಿಯೂ ಸಹ ನೀರಾವರಿ ಕೆಲಸಗಳ ನಿರ್ವಹಣೆಗೆ ಪ್ರತ್ಯೇಕ ಸರ್ಕಾರಿ ಇಲಾಖೆ ಇರಲಿಲ್ಲ. ೧೮೩೪ರಲ್ಲಷ್ಟೆ ಮೈಸೂರು ಸಂಸ್ಥಾನದಲ್ಲಿ ಮರಾಮತ್ ಸೂಪರಿಂಟೆಂಡೆಂಟ್ ಹುದ್ದೆಯನ್ನು ಸೃಜಿಸಲಾದದ್ದು ಮತ್ತು ೧೮೫೬ ರಲ್ಲಿ ಲೋಕೋಪಯೋಗಿ ಇಲಾಖೆ ರಚನೆಯಾದದ್ದು. [7] ಅದಕ್ಕೆ ಹಿಂದೆ ಸಣ್ಣ ನೀರಾವರಿ ಕೆಲಸಗಳ ನಿರ್ಮಾಣ ಹಾಗೂ ಸಂರಕ್ಷಣೆ ಕೇವಲ ಸ್ಥಳೀಯ ಜನತೆಯ ಜವಾಬ್ದಾರಿಯಾಗಿತ್ತು. ತುಂಗಭದ್ರ, ಕಾವೇರಿ ಅಣಿಕಟ್ಟುಗಳು, ಮದಗ – ಮಾಸೂರು ಕೆರೆ ಇತ್ಯಾದಿ ಭಾರಿ ಕೆಲಸಗಳನ್ನು ಕೇಂದ್ರಪ್ರಭುತ್ವ ತನ್ನ ಸಂಪನ್ಮೂಲ ಹಾಗೂ ಸಿಬ್ಬಂದಿವರ್ಗದಿಂದ ನಿಭಾರಿಸುತ್ತಿತ್ತು. ಅದು ಕೋಟೆ ಕೊತ್ತಳ ದೇವಾಲಯಗಳನ್ನು ನಿರ್ಮಿಸುತ್ತಿತು.

ಏರಿಯ ವಿನ್ಯಾಸ :

ಈ ಎಲ್ಲ ನೀರಾವರಿ ಕೆಲಸಗಳಲ್ಲಿಯೂ ಧೈರ್ಯ ಹಾಗೂ ರಚನಾಕೌಶಲ ವ್ಯಕ್ತವಾಗುತ್ತವೆ. ಕುಮುದ್ವತಿ ಮೇಲಿನ ಮದಗ ಮಾಸೂರು ಕೆರೆಯ ಏರಿ, ಬುಡದಲ್ಲಿ ಸುಮಾರು, ೮೦೦ ಅಡಿ ಅಗಲವಾಗಿದೆ. ಸುಮಾರು ೧೦೦ ಅಡಿ ಎತ್ತರವಾಗಿದೆ. ಪಾಲಾರು ನದಿಯ ರಾಮಸಾಗರದ ಕಟ್ಟೆ ಬುಡದಲ್ಲಿ ಸುಮಾರು ೧೫೦ ಅಡಿ ಅಗಲವಿದೆ. ೪೫ ಅಡಿ ಎತ್ತರವಿದೆ. ಈ ಕೆರೆಗಳು ವಿಜಯನಗರ ಕಾಲಕ್ಕೆ ಸೇರಿದವು. ಆ ಹಿಂದೆ ಕಟ್ಟಿದ ಕೆರೆಗಳೂ ಇಂಥವೇ ಆಗಿದ್ದಿರಬೇಕು. ಇಂದಿನ ವಿನ್ಯಾಸ ಮಾನದಂಡ ಪ್ರಕಾರವಾಗಿಯೂ ಕಟ್ಟೆಗಳ ಅಳತೆಗಳು ತುಂಬ ಪರಿಮಿತವಾದವು ಎನ್ನಲು ಬರುವುದಿಲ್ಲ.

ಆದರೂ ಕೋಡಿಯ ಸಾಮರ್ಥ್ಯವನ್ನು ಹೇಗೆ ನಿರ್ಧರಿಸುತ್ತಿದ್ದರು ಹಾಗೂ ಕಟ್ಟೆಯಲ್ಲಿ ನೀರು ಸೋರಿಹೋಗದಂತೆ ಹೇಗೆ ಮಾಡುತ್ತಿದ್ದರು ಎನ್ನುವುದು ಸ್ಪಷ್ಟವಾಗಿಲ್ಲ. ಆ ಕಾಲದ ಕೆಲವು ಹಳೆಯ ಕೆರೆಗಳು ಈಗ ಇಲ್ಲ. ಇದರಿಂದಾಗಿ ಬಹುಶಃ ಕೋಡಿಯ ಸಾಮರ್ಥ್ಯ ಸಾಲದಾಗಿದ್ದು ಕೆರೆಗಳು ಒಡೆದುಹೋಗಿ ನಿರುಪಯುಕ್ತವಾದವು ಎಂದು ನಾವು ಹೇಳಬಹುದು. ಹರಿದ್ರಾ ಕಟ್ಟೆ ೧೪ ವರ್ಷಗಳಲ್ಲಿಯೆ ಒಡೆದು ಹೋಯಿತು. ಅದನ್ನು ಮತ್ತೆ ಕಟ್ಟಬೇಕಾಯಿತು. [8] ಮದಗ ಮಾಸೂರು ಕೆರೆ ಸಹ ೧೮೬೨ರಲ್ಲಿ ಪುನರ್ನಿರ್ಮಿತವಾದಾಗ, ಒಡೆದ ಸ್ಥಿತಿಯಲ್ಲಿ ಇತ್ತು. ಹಳೆಯ ಕೆರೆಗಳು ಒಡೆದುದು ಮಾತ್ರವಲ್ಲದೆ ಹೂಳು ತುಂಬುವುದು, ಕಟ್ಟೆ ನೀರನ್ನು ಹಿಡಿದಿಡಲು ಆಗದೆ ಹೋದುದು, ಈ ಕಾರಣಗಳಿಂದಾಗಿಯೂ ಅವು ಇಲ್ಲವಾಗಿರಬಹುದು. ಅಲ್ಲದೆ ಎರಡು ಮೂರು ವರ್ಷ ಸಾಲಾಗಿ ಮಳೆ ವಿಫಲವಾಗಿ, ಕೆರೆಗಳಿಗೆ ನಾದುರಸ್ತು ಸ್ಥಿತಿ ಉಂಟಾಗಿರಬಹುದು. ಪ್ರಾಯಶಃ ಮಳೆಗಾಲದ ಬೆಳೆಗಳನ್ನು ತೆಗೆಯಲು ಕೆರೆಯಂಗಳವನ್ನು ಒತ್ತುವರಿ ಮಾಡಿದ್ದರಿಂದ ಕೆರೆಗಳ ಏರಿಗಳನ್ನು ಬೇಕೆಂದೇ ಒಡೆದು ಹಾಕಿರಬಹುದು. ನಂಬಲರ್ಹವಾದ ವಿವರ ಇಲ್ಲವಾಗಿ, ವಿನ್ಯಾಸದ ಅಂಶದ ಬಗ್ಗೆ ನಾವು ಕತ್ತಲಲ್ಲಿ ಇದ್ದೇವೆ.

ಕೆರೆಗಳ ಸಾಮರ್ಥ್ಯ :

ಒಂದು ಕೆರೆಯ ಸಾಮರ್ಥ್ಯ ಬಹುಮಟ್ಟಿಗೆ ಅದರ ಕೆಳಗೆ ನೀರಾವರಿ ಪಡೆಯುವ ಪ್ರದೇಶಕ್ಕೆ ಅನುಗುಣವಾಗಿರುತ್ತದೆ. ಈ ಅಂಶದ ಬಗ್ಗೆ ಶಾಸನಗಳು ಯಾವುದೇ ಮಾಹಿತಿ ನೀಡುವುದಿಲ್ಲ. ಕೆರೆಯ ನಿರ್ಮಾಣ ಹಾಗೂ ಸಂರಕ್ಷಣೆಯ ಸಲುವಾಗಿ ‘ಬಿತ್ತುವಟ್ಟು’ ಎಂಬ ದಾನವಿತ್ತ ಭೂಮಿಯಿಂದ ನಾವು ಪರೋಕ್ಷವಾಗಿ ಊಹಿಸಬಹುದು. ಹತ್ತರಲ್ಲಿ ಒಂದು ಪಾಲಿನಷ್ಟು ಭೂಮಿಯನ್ನು ಬಿತ್ತುವಟ್ಟಾಗಿ ನೀಡಲಾಯಿತು – ಎಂದು ಸೋಮಸಮುದ್ರ ಶಾಸನ (೯೯೮) ಸೂಚಿಸುತ್ತದೆ. [9] ಆದರೆ ಕೆಲವೇ ಸಂದರ್ಭಗಳನ್ನು ಬಿಟ್ಟರೆ ಬಿತ್ತುವಟ್ಟಾಗಿ ಇತ್ತ ಭೂಮಿಯ ವಿಸ್ತಾರ ಶಾಸನಗಳಲ್ಲಿ ದಾಖಲಾಗಿಲ್ಲ.

“ಕೆರೆಯ ಮೊದಲನೆಯ ಕಟ್ಟೆಯ ಕೆಳಗೆ ೪ ಖಂಡುಗ ತರಿ ಭೂಮಿಯನ್ನು, ಸಣ್ಣ ಕೆರೆಯ ಕೆಳಗಿನ ಅಸದಗಟ್ಟ ಎಂಬ ಹೂತೋಟದ ಮೊದಲನೆಯ ಏರಿಯ ಕೆಳಗೆ ಒಂದು ಖಂಡುಗ ತರಿ ಭೂಮಿಯನ್ನು” ದಾನವಿತ್ತುದಾಗಿ ಪುಮಗಾಮೆ ಶಾಸನ (೧೧೩೯) [10] ಸೂಚಿಸುತ್ತದೆ. ದಾನಭೂಮಿ ಕೆರೆ ಕೆಳಗಿನ ಪ್ರದೇಶದ ಹತ್ತರಲ್ಲಿ ಒಂದು ಭಾಗದಷ್ಟು ಇತ್ತು ಎಂದು ಇಟ್ಟುಕೊಂಡರೆ ದೊಡ್ಡ ಕೆರೆ ೪೦ ಖಂಡುಗ ಭೂಮಿಗೂ, ಸಣ್ಣ ಕೆರೆ ೧೦ ಖಂಡುಗ ಭೂಮಿಗೂ, ನೀರಾವರಿ ಒದಗಿಸುತ್ತಿತ್ತು ಎಂದು ಊಹಿಸಬಹುದು.

ನೀರಾವರಿ ಭೂಮಿ ಸೂಚಿತವಾಗಿರುವುದು ಬಹುಮಟ್ಟಿಗೆ ಖಂಡುಗ ಅಥವಾ ಮತ್ತರು ಅಥವಾ ಸಲಗೆಗಳ ಪ್ರಮಾಣದಲ್ಲಿಯೆ, ಒಂದು ಖಂಡುಗ ಭೂಮಿ ಎಂದರೆ ಒಂದು ಖಂಡುಗ ಬೀಜದ ಬಿತ್ತನೆಗೆ ಬೇಕಾಗುವ ವಿಸ್ತಾರ. ಖಂಡುಗ ಶಬ್ದವನ್ನು ಸಾಮಾನ್ಯವಾಗಿ ಬಳಸಲಾಗಿರುವುದು ಭತ್ತದ ಗದ್ದೆಗಳ ವಿಷಯದಲ್ಲಿ. ಭತ್ತನ್ನು ಯಾವಾಗಲೂ ಹೊಟ್ಟು ಸಹಿತ ಸಂಗ್ರಹಿಸಿಡುವುದು ಹಗೇವುಗಳಲ್ಲಿ. “ಈ ಹಗೇವುಗಳು ಸುಮಾರು ೧೫ ರಿಂದ ೩೦ ಖಂಡುಗ ಅಥವಾ ೮೩.೫ ರಿಂದ ೧೬೭ ಆಂಗ್ಲ ಬುಷಲುಗಳಷ್ಟು ಭತ್ತವನ್ನು ಹಿಡಿಸುತ್ತವೆ.” ಸರಾಸರಿ ಒಂದು ಎಕರೆಯಲ್ಲಿ ಬಿತ್ತನೆಗೆ ೧.೨೫ ಬುಷಲ್ ಬೀಜ ಬೇಕಾಗುತ್ತದೆ. [11] ಆದ್ದರಿಂದ ಒಂದು ಖಂಡುಗ ತರಿ ಭೂಮಿ ಸುಮಾರು ೪ – ೫ ಎಕರೆಗಳಿಗೆ ಸಮ ಎಂದು ಊಹಿಸಬಹುದು. ಮತ್ತರು ಸಹ ಇಷ್ಟೆ ವಿಸ್ತಾರದ್ದು ಎಂದು ಊಹಿಸಬಹುದು. [12] ಆದರೆ ಇದನ್ನು ಎಲ್ಲ ಸ್ಥಳಗಳಿಗೂ ಎಲ್ಲ ಸಂದರ್ಭಗಳಿಗೂ ಅನ್ವಯಿಸಲು ಆಗುವುದಿಲ್ಲ. ಬೀಜದ ಲಕ್ಷಣ ಗುಣ ಹಾಗೂ ಮಣ್ಣಿನ ಸ್ಥಿತಿ ಲಕ್ಷಣಗಳು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರಬಹುದು. ಒಣಭೂಮಿಯಲ್ಲಿ ಒಂದು ಖಂಡುಗ ಬೀಜ ೬೪೦೦೦ ಚ. ಗಜ ಭೂಮಿಗೆ (೧೨ ಎಕರೆ ೮ ಕುಂಟೆ) ಬಿತ್ತಲು ಸಾಕಾಗುತ್ತದೆ. ತರಿ ಅಥವಾ ಬಾಗಾಯತು ಭೂಮಿಯಲ್ಲಿ ಒಂದು ಖಂಡುಗ ಬೀಜವನ್ನು ೧೦೦೦೦ ಚ. ಗಜಕ್ಕೆ (೨ ಎಕರೆ ೨ ಗುಂಟೆ) ಮಾತ್ರ ಬಿತ್ತಬಹುದು ಎನ್ನುತ್ತಾರೆ ರೈಸ್12ಎ ಶ್ರೀರಂಗಪಟ್ಟಣದ ಸಮೀಪದಲ್ಲಿ ಒಂದು ಖಂಡುಗ ಭತ್ತದ ಗದ್ದೆ ಸುಮಾರು ೬.೨ ಎಕರೆಗೆ ಸಮ ಎನ್ನುತ್ತಾನೆ ಬುಕಾನನ್, ತನ್ನ ಕರ್ನಾಟಕ ಪ್ರವಾಸದ ಬಖೈರಿನಲ್ಲಿ,[13] ಆದ್ದರಿಂದ ೪ ರಿಂದ ೫ ಎಕರೆ ತರಿ ಭೂಮಿ ಒಂದು ಖಂಡುಗಕ್ಕೆ ಸಮ ಎಂದು ಭಾವಿಸುವುದು ಯುಕ್ತವೆನಿಸುತ್ತದೆ. ಶಾಸನಗಳಲ್ಲಿ ಕಾಣಸಿಗುವ ಇನೊಂದು ಅಂಶವೆಂದರೆ ಕೃಷಿಕರು ತಮ್ಮ ಭೂಮಿಗಳಲ್ಲಿ ಸಿಗುವ ನೀರನ್ನು ಹಿಡಿದಿಡಲು ಸಣ್ಣ ಸಣ್ಣ ಹೊಂಡಗಳನ್ನು ತೋಡಿಕೊಳ್ಳುತ್ತಿದ್ದುದು. ಆನೆಹಳ್ಳಿಯ(೧೨೧೮) ಸರಹದ್ದಿನ ಚೆಕ್ಕುಬಂದಿ ಹೀಗಿದೆ : “ಆಗ್ನೇಯಕ್ಕೆ ಕಾಳಮ್ಮ ಕೆರೆಯ ಪಶ್ಚಿಮ ಕೋಡಿ, ವಾಯುವ್ಯಕ್ಕೆ ಕೇಶಿಯಣ್ಣನ ಕೆರೆಯ ಒಳಾಂಚು, ದಕ್ಷಿಣಕ್ಕೆ ಸಿರಿಯ ಬೋವನೆ ಹೊಂಡದ ದಂಡೆ. ಇವು ಸರಹದ್ದುಗಳು”.[14]

ಕೆರೆಗಳ ಇತರ ಅಂಶಗಳು :

ಸಣ್ಣ ಕೆರೆಗಳಲ್ಲಿ ನೀರಾವರಿಗೆ ನೀರನ್ನು ಹೊರಬಿಡಲು ಇದ್ದ ಮಾರ್ಗವೆಂದರೆ, ಮಣ್ಣು ದಂಡೆಯಲ್ಲಿ ಮಾಡಿದ ಒಂದು ಸೀಳು. ನೀರು ಬೇಕಾದಾಗ ಸೀಳನ್ನು ತೆಗೆಯುವುದು, ಬೇಡವಾದಾಗ ಮಣ್ಣು ತುಂಬಿ ಮುಚ್ಚುವುದು. ಪ್ರಾಯಶಃ ಕೆರೆಯ ಸಾಮರ್ಥ್ಯವನ್ನು ಹೆಚ್ಚಿಸಿದಾಗ ಅಥವಾ ದಂಡೆಯ ಅಂಥ ತಾತ್ಕಾಲಿಕ ಸೀಳುಗಳು ಸರಿಯಾಗಿ ಕೆಲಸಮಾಡದೆ ಹೋದಾಗ, ತೂಬನ್ನು ಕಟ್ಟಲಾಯಿತು. ವಡಿಗೇನಹಳ್ಳಿ ಕೆರೆಯ ತೂಬು[15] (೧೩೭೮)ಹಾಗೂ ಅಗರದ ಕೆರೆ (೮೭೦)[16] ತೂಬುಗಳನ್ನು ಕಟ್ಟಿದ್ದು ಕೆರೆಗಳನ್ನು ಕಟ್ಟಿದ ಎಷ್ಟೊ ಕಾಲದ ನಂತರ.

ಬಸವಣ್ಣ ಎಂಬಾತ ಕೆರೆಯನ್ನು ವಿಸ್ತಾರಗೊಳಿಸಿದ ಹಾಗೂ ಕಲ್ಲು ಕಟ್ಟೆಯನ್ನು ಕಟ್ಟಿಸಿದ ಎಂದು ನುಗ್ಗೆಹಳ್ಳಿ ಶಾಸನ[17]ಹೇಳುತ್ತದೆ. ಕಲ್ಲುಕಟ್ಟೆ ಎಂದರೆ ಏರಿಯ ಕಲ್ಲು ಕಟ್ಟಡವೇ ಇರಬೇಕು. ಕೆರೆಯ ಗಾತ್ರ ಹೆಚ್ಚಾದಾಗ ನೀರಿನ ಹರವು ವಿಸ್ತಾರವಾಯಿತು. ಅಂತೆಯೇ ದೊಡ್ಡ ಕೆರೆಗಳಿಗೆ ಕಲ್ಲು ಕಟ್ಟಡ ಒದಗಿಸಲಾಯಿತು. ಅರಳುಗುಪ್ಪೆ ಕೆರೆಯನ್ನು (೧೦೯೧)ಕಲ್ಲಿನಿಂದಲೇ ಕಟ್ಟಲಾಯಿತು. ಎನ್ನುತ್ತದೆ ಶಾಸನ.[18] ಅಂದರೆ ಕಲ್ಲು ಕಟ್ಟೆಯನ್ನೆ ನಿರ್ಮಿಸಲಾಯಿತು ಅಥವಾ ಹೊರಮುಖದ ಕಲ್ಲುಕಟ್ಟಡ ಒಳ್ಳೆ ಭದ್ರವಾಗಿ ಕಟ್ಟಿದ ಕಟ್ಟಡವಾಗಿತ್ತು. ಕೆರೆ ದೊಡ್ಡದಾಗಿತ್ತು ಎಂದು, ಇವೆರಡರಿಂದಲೂ ನಾವು ಊಹಿಸಬಹುದು.

ದಾಖಲೆ ಪತ್ರಗಳ ಸಾಕ್ಷ್ಯ :

ಶಾಸನಗಳಲ್ಲಿನ ಮಾಹಿತಿಯ ಈ ಕೊರತೆಯನ್ನು ಮೈಸೂರಿನ ಮುಖ್ಯ ಇಂಜನಿಯರುಗಳಾಗಿದ್ದ ಕರ್ನಲ್ ಚಾರ್ಲ್ಸ್ ಹಾಗೂ ಮೇಜರ್ ಸ್ಯಾಂಕಿ ಅವರು ತಮ್ಮ ವರದಿಗಳಲ್ಲಿ[19] ೧೯ನೆಯ ಶತಮಾನಕ್ಕೂ ಹಿಂದೆ ನಿರ್ಮಿಸಲಾದ ಕೆರೆಗಳ ಬಗ್ಗೆ ಕೊಟ್ಟಿರುವ ವರ್ಣನೆ ಬಹು ಮಟ್ಟಗೆ ತುಂಬಿಕೊಡುತ್ತದೆ.

ಅವರ ವರದಿಗಳ ಪ್ರಕಾರ ಆಗ ಬಹುತೇಕ ಕೆರೆಗಳ ಉದ್ದ ಒಂದರಿಂದ ಒಂದೂವರೆ ಮೈಲಿ ಇರುತ್ತಿತ್ತು. ಅಲ್ಲೊಂದು ಇಲ್ಲೊಂದು ಕೆರೆ ವಿನಾ ಉಳಿದ ಎಲ್ಲಕ್ಕೂ ಒರಟುಗಲ್ಲಿನ ಕಲ್ಲು ಕಟ್ಟಡ ಇತ್ತು. ಅದರ ಇಳಿಜಾರು ಸಮತಲದ ಒಂದು ಪ್ರಮಾಣಕ್ಕೆ ಲಂಬ ಎರಡು ಪ್ರಮಾಣದಲ್ಲಿರುತ್ತಿತ್ತು. ಕಲ್ಲುಕಟ್ಟಡದ ಎದುರುವರಸೆಯ ದಪ್ಪ ಒಂದು ಗಜದಿಂದ ಅರ್ಧಗಜದ ವರೆಗೂ ಇರುತ್ತಿತ್ತು. ಮುಂಭಾಗದ ದೊಡ್ಡ ಕಲ್ಲುಗಳ ಕಟ್ಟಡದ ದಪ್ಪಕ್ಕೆ ಸಮವಾಗಿರುವಂತೆ ಹಿಂಭಾಗಕ್ಕೆ ಬಿಡಿ ಕಲ್ಲುಗುಂಡುಗಳನ್ನು ಜೋಡಿಸಲಾಗುತ್ತಿತ್ತು. ಒಮ್ಮೊಮ್ಮೆ ಏರಿಯ ಹಿಂಬದಿಯ ಇಳಿಜಾರಿನಲ್ಲೂ ಕಡಿಮೆ ಅಳತೆಯ ಕಟ್ಟಡ ಇರುತ್ತಿತ್ತು.

ಮಣ್ಣು, ಏರಿಯ ಅಗಲ – ಎತ್ತರಕ್ಕೆ ತಕ್ಕ ಪ್ರಮಾಣದಲ್ಲಿರುತ್ತಿತ್ತು, ಏರಿಯ ನಡು ಭಾಗದಲ್ಲಿ ಅತ್ಯಂತ ಹೆಚ್ಚು ಅಗಲವಾಗಿರುತ್ತಿತ್ತು. ಸಾಧಾರಣ ಒಂದು ಏರಿಯ ಅಗಲ ತಲೆಯಲ್ಲಿ ೧೨ ಅಡಿ, ಬುಡದಲ್ಲಿ ೬೦ ಅಡಿ ಹಾಗೂ ಎತ್ತರ ೧೮ ಅಡಿ ಇರುತ್ತಿತ್ತು. ಈ ಅಳತೆಗಳಿಗೆ ಮೀರಿದ ಕೆಲವು ಕೆರೆಗಳು ಇದ್ದುದೂ ಉಂಟು.

ತೂಬುಗಳು :

ಒಂದೊಂದು ಕೆರೆಗೂ ಒಂದು ಅಥವಾ ಎರಡು ತೂಬು ಇರುತ್ತಿದ್ದವು. ಕೆಲವೊಮ್ಮೆ ಮೂರು ಇದ್ದುದೂ ಉಂಟು. ಅವುಗಳಿಂದ ನೀರನ್ನು ಜಮೀನಿಗೆ ಬಿಡಲಾಗುತ್ತಿತ್ತು. ತೂಬು ಇರುತ್ತಿದ್ದುದು ಸಾಮಾನ್ಯವಾಗಿ ಕೆರೆಯ ಅಂಗಳದ ಮಟ್ಟದಲ್ಲೆ. ಆದರೆ ನೀರಾವರಿ ಯಾಗಬೇಕಾದ ಯಾವುದೇ ಭೂಮಿ ಆ ಮಟ್ಟಕ್ಕಿಂತ ಮೇಲೆ ಇದ್ದಲ್ಲಿ ಇನ್ನೂ ಒಂದೋ ಎರಡೋ ತೂಬುಗಳನ್ನು ತದನುಗುಣವಾದ ಮಟ್ಟದಲ್ಲಿ ಇಡಲಾಗುತ್ತಿತ್ತು. ಕೆರೆ ತೂಬು ದೊಡ್ಡದೂ ದೃಢವೂ ಆಗಿದ್ದು ದುಬಾರಿಯ ಕೆಲಸವೇ ಆಗಿರುತ್ತಿತ್ತು. ಅದರಲ್ಲಿ ೨ ಅಡಿ ಚದರ ಇಟ್ಟಿಗೆ ಅಥವಾ ಕಲ್ಲಿನ ತೊಟ್ಟಿ, ಮರಳು ಬಾರದಂತೆ ಒಂದು ಗಜ ಎತ್ತರವಾಗಿ ಇರುತ್ತಿತ್ತು. ಅದರ ಬಿರಡೆಯನ್ನು ಕೆರೆ ನೀರಿನ ಮಟ್ಟಕ್ಕಿಂತ ಮೇಲಿನ ವರೆಗೂ ಇರುವಂಥ ಒಂದು ಉದ್ದನೆಯ ಗಳುವಿಗೆ ಜೋಡಿಸಲಾಗಿರುತ್ತಿತ್ತು. ೯ ಅಂಗುಲ ಅರ್ಧಗಜ ಚದರದ ಅಳತೆಯ ಎರಡು ಅಥವಾ ನಾಲ್ಕು ಲಂಬ ಕಲ್ಲು ಕಂಬಗಳು ಅದನ್ನು ಸ್ವಸ್ಥಾನದಲ್ಲಿ ಹಿಡಿದಿಟ್ಟಿರುತ್ತಿದ್ದವು. ಆ ಕಂಬಗಳಿಗೆ ತಲೆಯಲ್ಲಿ ಒಂದು, ನಡುವೆ ಒಂದು ಹೀಗೆ ಎರಡು ಸಮತಲದ ಅಡ್ಡ ಕಲ್ಲುಗಳು ಇರುತ್ತಿದ್ದವು. ಬಿರಡೆಯ ಕೊಂತವೊಂದು ಮೂರು ಅಡ್ಡಕಲ್ಲುಗಳಲ್ಲಿನ ರಂಧ್ರದೊಳಗಿಂದ ಹಾದು ಹೋಗುತ್ತಿತ್ತು. ಬೇಕಾದಾಗ ಬಿರಡೆಯನ್ನು ಎತ್ತಲು ಹಾಗೂ ನೀರು ಹರಿಯುವುದನ್ನು ನಿಯಂತ್ರಿಸಲು ಕೊಂತವನ್ನು ಒಂದು ದಪ್ಪ ಸರಪಳಿ ಹಾಗೂ ಗೂಟದ ನೆರವಿನಿಂದ ಚಲಿಸಲಾಗುತ್ತಿತ್ತು. ನೀರು ಹಾಯುವುದನ್ನು ತಡೆಯಲು ಬಿರಡೆಯನ್ನು ಕೆಳಗಿಳಿಸಿದಾಗ, ಅದರ ಮೇಲುಪಾರ್ಶ್ವದ ಮೇಲಿರುವ ನೀರಿನ ಒತ್ತಡ ಬಿರಡೆಯನ್ನು ಸಾಕಷ್ಟು ಬಿಗಿಯಾಗಿ ಹಿಡಿದು ಇರಿಸುತ್ತಿತ್ತು.

ಏರಿಯ ಹಿಂಬದಿಯಲ್ಲಿ ಸುಮಾರು ಅದೇ ಅಳತೆಯ ಇನ್ನೊಂದು ತೊಟ್ಟಿಯನ್ನು ಸಾಮಾನ್ಯವಾಗಿ ಇಟ್ಟಿಗೆ ಗಾರೆಗಳಿಂದ ಕಟ್ಟಲಾಗುತ್ತಿತ್ತು. ತೊಟ್ಟಿಯ ಮೂರು ಪಾರ್ಶ್ವಗಳಲ್ಲಿ ಚೌಕಾಕಾರದ ಕಂಡಿಗಳಿದ್ದು, ಬೇಕಾದ ದಿಕ್ಕಿಗೆ ನೀರನ್ನು ಬಿಡುವಂತೆ ಅವುಗಳಿಗೆ ಬಾಗಿಲು ಇರುತ್ತಿದ್ದವು. ಎರಡು ತೊಟ್ಟಿಗಳಿಗೂ ನಡುವೆ ಏರಿಗೆ ಅಡ್ಡಲಾಗಿ ಒಂದು ಸುರಂಗ ಇರುತ್ತಿತ್ತು. ಏರಿಯ ಅಗಲಕ್ಕೆ ಅನುಗುಣವಾಗಿಅದರ ಉದ್ದ ಸಾಮಾನ್ಯವಾಗಿ ೧೦ ರಿಂದ ೩೦ ಅಥವಾ೪೦ ಗಜ. ನೀರು ಹಾಯುವ ಸುರಂಗದ ಒಳ ಅಳತೆ ಸುಮಾರು ೨.೫ ಅಡಿ. ಎತ್ತರ, ೨ ಅಡಿ ಅಗಲ, ಒಳಗೆ ಏನಾದರೂ ಅಡಚಣೆ ಆದಲ್ಲಿ ಒಬ್ಬ ಹುಡಗ ಒಳಗೆ ಹೋಗಿ ಅದನ್ನು ತೆಗೆದುಹಾಕಲು ಅಥವಾ ಸುರಂಗದ ಸ್ಥಿತಿಯನ್ನು ಪರಿಶೀಲಿಸಲು ಅನುಕೂಲವಾಗುವಂತೆ ಸುರಂಗದ ಒಳ ಅಳತೆ ಇರುತ್ತಿತ್ತು. ಸುರಂಗದ ಒಳ ಭಾಗ ಸಾಮಾನ್ಯವಾಗಿ ಆಯಾಕಾರದ್ದು. ೬ ರಿಂದ ೯ ಅಂಗುಲ ದಪ್ಪದ ಕಲ್ಲುಚಪ್ಪಡಿಗಳ ಗೋಡೆ ಇರುತ್ತಿತ್ತು.

ಕೋಡಿ:

ಪ್ರತಿಯೊಂದು ಕೆರೆಯಲ್ಲೂ, ತೂಬಿನ ಜೊತೆಗೆ ಕಲ್ಲುಕಟ್ಟಡದ ಕೋಡಿಯೂ ಇರುತ್ತಿತ್ತು. ಅದರ ಮೂಲಕ ಕೆರೆಯಲ್ಲಿನ ಹೆಚ್ಚುವರಿ ನೀರು ಕೆಳಗಣ ಇತರ ಕೆರೆಗಳಿಗೆ ಹರಿದುಹೋಗುತ್ತಿತ್ತು. ಕೋಡಿಗಳ ಅಗಲ ೧೦ ರಿಂದ ೧೦೦ ಗಜದ ವರೆಗೂ ಇರುತ್ತಿತ್ತು. ಬಲವಾದ ಕಟ್ಟಡ ಇಲ್ಲವಾದರೆ ಕೋಡಿಯ ಮೇಲೆ ಹರಿಯುವ ನೀರಿನ ರಭಸಕ್ಕೆ ಎಲ್ಲವೂ ಕೊಚ್ಚಿಕೊಂಡು ಹೋಗುವುದು ಆದ್ದರಿಂದ ಕೋಡಿಗಳನ್ನು ಸುತ್ತಮುತ್ತ ಸಿಗುವ ಅತ್ಯಂತ ಭಾರಿ ಆಕಾರದ ಒರಟುಕಲ್ಲುಗಳಿಂದ ಭದ್ರಗೊಳಿಸಲಾಗುತ್ತಿತ್ತು.

ಕೋಡಿಗಳ ಆಕಾರ ಸಾಮಾನ್ಯವಾಗಿ ಚೌಕ. ಉದ್ದ ಎಷ್ಟೊ ಅಗಲವೂ ಅಷ್ಟು. ಮುಂಭಾಗದಲ್ಲಿ ಒಂದು ಮಜುಬೂತಾದ ಕಲ್ಲು ಗೋಡೆ. ಒಂದರಿಂದ ಎರಡು ಅಥವಾ ಮೂರು ಅಡಿ ಆಳದ ಗೋಡೆ. ಮಣ್ಣಿನ ಗುಣಕ್ಕೆ ತಕ್ಕಂತೆ ಅದರ ಆಳ, ಅದಕ್ಕೆ ಅನುಗುಣವಾಗಿ ದಪ್ಪ. ಅದಕ್ಕೆ ಒಂದೂವರೆ ಗಜ ಮುಂಚಾಚುವಂತೆ ದೊಡ್ಡ ಕಲ್ಲುಗಳು. ಗೋಡೆಯ ತಲೆಯ ಭಾಗಕ್ಕೆ ಒಂದೊಂದು ಗಜಕ್ಕೆ ಒಂದರಂತೆ ಬಲವಾಗಿ ಜೋಡಿಸಲಾದ ಕಲ್ಲುಗಳು. ಒಂದಷ್ಟುಗಳು ಹುಲ್ಲು ಹಾಗೂ ಹುಲ್ಲಿನ ಹೆಪ್ಪುಗಳನ್ನು ರೈತರು ಕಲ್ಲು ಕಂಬಗಳ ಮುಂದೆ ಒಟ್ಟಿ, ಮಳೆಗಾಲವಾದ ಮೇಲೆಯೂ ಕೆರೆಯಲ್ಲಿ ಸಾಮನ್ಯ ಮಟ್ಟಕ್ಕಿಂತ ಸುಮಾರು ಎರಡು ಅಡಿ ಎತ್ತರವಾಗಿಯೇ ನೀರನ್ನು ತಡೆದಿಡಲು ಸಾಧ್ಯವಿತ್ತು. ಹಾಗೂ ಹೆಚ್ಚು ಕಾಲವು ನೀರನ್ನು ತಡೆಹಿಡಿಯಬಹುದಾಗಿತ್ತು. ಕೋಡಿಯ ಪಕ್ಕಗಳಲ್ಲಿ ಪಾರ್ಶ್ವಗೊಡೆಗಳ ರಕ್ಷಣೆ ಇರುತ್ತಿತ್ತು. ಅವು ಒಂದರಿಂದ ಎರಡು ಗಜ ಎತ್ತರ ಒರಟುಗಲ್ಲು ಅಥವಾ ಇಟ್ಟಗೆಯ ಗೋಡೆಗಳು. ಕಮರಿಯ ಗೋಡೆಯ ಬಳಿ ಪರಸ್ಪರ ಸೇರುವಂತೆ ಮೇಲೆ ಹಾಗೂ ಕೆಳಗೆ ಅಗಲವಾಗಿದ್ದು ಸುರಂಗದ ಹಾಗೆಯೆ ಇರುತ್ತಿದ್ದವು. ಕೋಡಿಯ ಗೋಡೆಯ ಕೆಳಪಾರ್ಶ್ವಕ್ಕೆ (ಹೊರಪಾರ್ಶ್ವ) ಕಲ್ಲುಗಳನ್ನು ಸೂಕ್ತವಾದ ತಳಹದಿಯ ಮೇಲೆ ಇಳಿಜಾರಾದ ಹೊದಿಕೆಯಂತೆ ಕೋಡಿಯ ತಲೆಯಿಂದ ಕಂದರದ ಅಡಿಯ ವರೆಗೂ ಜೋಡಿಸಲಾಗುತ್ತಿತ್ತು. ಇದರಿಂದ ನೀರಿನ ರಭಸ ತಗ್ಗುತ್ತಿತ್ತು. ಅಂಥ ವ್ಯವಸ್ಥೆ ಸಾಧ್ಯವಿಲ್ಲದ ಕಡೆಗಳಲ್ಲಿ ಕೋಡಿಯ ಗೋಡೆಯ ಬುಡದಲ್ಲಿ (ಅದರ ಎತ್ತರ ಎಷ್ಟೇ ಇರಲಿ) ಒಂದು ಮಟ್ಟಸವಾದ ನೆಲಗಟ್ಟನ್ನು ನಿರ್ಮಿಸಲಾಗುತ್ತಿತ್ತು. ನೀರು ತೆರೆ ತೆರೆಯಾಗಿ ಹರಿದು ಹೋಗುವಂತೆ ಮಜಬೂತಾದ ಕಬ್ಬಿಣದ ಹಿಡಿಗೈ (ಕ್ಲಾಂಪ್) ಗಳನ್ನು ಮೆಟ್ಟಿ, ಕಡೆದ ಕಲ್ಲುಗಳಿಂದ ಒಳ್ಳೆ ಭದ್ರವಾದ ಜಗಲಿ ನಿರ್ಮಿಸಲು ಎಚ್ಚರವಹಿಸಲಾಗುತ್ತಿತ್ತು.

ಕೆಲವು ಸಲ ಕೋಡಿ ಕೆಳಗಿಣ ಹಳ್ಳದಲ್ಲಿ ಒರಟುಗಲ್ಲಿನ ಇನ್ನೊಂದು ಸಣ್ಣ ಕಟ್ಟೆಯನ್ನು ಕಟ್ಟಲಾಗುತ್ತಿತ್ತು. ಆ ಕಟ್ಟೆಯಿಂದ ಇನ್ನೊಂದು ನೀರಾವರಿ ಕಾಲುವೆಯೂ ಹೊರಡುತ್ತಿತ್ತು. ಕೆರೆಗೆ ಭದ್ರ ಎನಿಸಬಹುದಾದ ಅತ್ಯಂತ ಹೆಚ್ಚಿನ ಮಟ್ಟದ ನೀರನ್ನು ಕೋಡಿ ತಡಹಿಡಿದಿಡುತ್ತಿತ್ತು. ಕೆಳಗಿನ ಕಟ್ಟೆಯಾದರೂ ಕೋಡಿಯಿಂದ ಬಂದ ಹೆಚ್ಚುವರಿ ನೀರನ್ನು ನಷ್ಟವಾಗಿ ಹೋಗದಂತೆ ಹಿಡಿದಿಡುತ್ತಿತ್ತು.

ವರ್ಷದಲ್ಲಿ ೧೦ – ೧೫ ದಿನ ಕೋಡಿಯ ಮೇಲೆ ಅಪಾರ ನೀರು ಹರಿದು ಬರುತ್ತಿದ್ದುದರಿಂದ ಕೆಳಗಿನ ಕಟ್ಟೆಗೆ ಅದರ ರಭಸದಿಂದ ಭಾರಿ ಹೊಡೆತ ಬೀಳುತ್ತಿತ್ತು. ಆದ್ದರಿಂದ ಕಟ್ಟೆಯ ನಿರ್ಮಾಣ ಬಲವಾಗಿರಬೇಕಾಗಿತ್ತು. ನದಿಯ ಅಣಿಕಟ್ಟುಗಳಂತೆಯೆ ಕೋಡಿ ಕಟ್ಟೆಗಳನ್ನು ಎಚ್ಚರದಿಂದ ನಿರ್ಮಿಸಲಾಗುತ್ತಿತ್ತು.

 

[1]ಐ. ೧೪ ಜುಲೈ ೧೯೪೭-೪

[2]ಇ.ಸಿ.೧೦ ಮುಳಬಾಗಿಲು ೧೭೨.

[3]ಇ.ಸಿ.೮ (ಆರ್) ಹೊಳೇನರಸೀಪುರ-೪೨

[4]ಇ.ಸಿ. ೧೦ ಮಾಲೂರು ೩೦.

[5]ಇ.ಸಿ.೧೦. ಗೌರಿಬಿದನೂರು-೬.

[6]ಇ.ಸಿ.೮ ಸೊರಬ – ೩೨೮.

[7]ರೈಸ್. ೧ ಸಂ. ೧ ಪು. ೬೩೦

[8]ಇ.ಸಿ. ೧೧ ದಾವಣಗೆರೆ ೨೩

[9]ಎಂ.ಎ.ಆರ್. ೧೯೩೧-೪೨.

[10]ಇ.ಸಿ.೫ (ಆರ್) ಹಾಸನ ೮೮

[11]ರೈಸ್.೧.ಸಂ.೧. ಪು. ೧೦೫

[12]ಮಟ್ಟರ್ ೩-೭೫ ಎಕರೆಗೆ ಸಮ ಎನ್ನುತ್ತಾರೆ ಎಸ್.ರಾಜೇಂದ್ರಪ್ಪ ಕ್ಯೂ. ಜಿ.ಎಂ.ಎಸ್. ೩೩ ಪು. ೨೮ ರಲ್ಲಿ.

12ಎ ರೈಸ್ ೨ ಸಂ.೧. ಪು. ೮೧೦

[13]ಫ್ರಾನ್ಸಿಸ್ ಬುಕಾನನ್ ಸಂ.೧ ಪು. ೮೯.

[14]ಇ.ಸಿ. ೮ (ಆರ್‌) ಹಾಸನ – ೬೧.

[15]ಇ.ಸಿ.೧೦. ಚಿಂತಾಮಣಿ-೬೮.

[16]ಇ.ಸಿ.೧೧ ಬೆಂಗಳೂರು – ೭೯.

[17]ಇ.ಸಿ.೫ ಚೆನ್ನರಾಯಪಟ್ಟಣ – ೨೩೭.

[18]ಇ.ಸಿ.೧೨ ತಿಪಟೂರು ೫೭.

[19]ಮೇಜರ್ ಆರ್.ಹೆಚ್. ಸ್ಯಾಂಕಿ ಮುಖ್ಯ ಇಂಜಿನಿಯರ್‌, ಮೈಸೂರು ರಾಜರ ಕಮಿಷನರ್‌. ಆಫ್ ಟೆರಟಿರೀಸ್ ಅವರ ಕಾರ್ಯದರ್ಶಿಗೆ ಬರೆದ ಪತ್ರ ನಂ. ೩೮೨೮/೫೦೭ ದಿನಾಂಕ ೧೯-೧೧ ೧೮೬೬ ಪ್ಯಾರಾ ೪೨.