ಫ್ರಾನ್ನಿಸ್ ಬುಕಾನನ್ನನ ಅಭಿಪ್ರಾಯೋಕ್ತಿ :

೧೮ನೆಯ ಶತಮಾನದ ಕೊನೆಯಲ್ಲೂ ಇಂಥದೊಂದು ವ್ಯವಸ್ಥೆ ರೂಢಿಯಲ್ಲಿತ್ತು ಎನ್ನುವುದು ೧೮೦೦ರಲ್ಲಿ ಮೈಸೂರಿನಲ್ಲಿ ಪ್ರವಾಸಮಾಡಿದ ಫ್ರಾನ್ಸಿಸ್ ಬುಕಾನನ್ನನ ಅಭಿಪ್ರಾಯೋಕ್ತಿಗಳಿಂದ ತಿಳಿದುಬರುತ್ತದೆ. ಆತ ಹೇಳುತ್ತಾನೆ ? ಕೋಲಾರ ಸೀಮೆಯಲ್ಲಿ ನೀರಾವರಿ ಆಗುವುದು ಬಹುಮಟ್ಟಿಗೆ ಜಲಾಶಯಗಳಿಂದಲೆ ಯಾವುದೇ ಶ್ರೀಮಂತ ಒಂದು ಜಲಾಶಯವನ್ನೂ ಅಥವಾ ಕೆರೆಯನ್ನು ಕಟ್ಟಿಸಿದಾಗ ಅವನಿಗೆ ಹಾಗೂ ಅವನ ಉತ್ತರಾಧಿಕಾರಿಗಳಿಗೆ ಕೆರೆ ನೀರು ಒದಗಿಸುವ ಭೂಮಿಯ ಹತ್ತನೆಯ ಒಂದು ಪಾಲನ್ನು ಕಂದಾಯ ವಿಲ್ಲದೆ ಕೊಡುವುದು ರೂಢಿಯಾಗಿತ್ತು. ಅಲ್ಲದೆ, ಹಾಗೆ ನೀರಾವರಿಯಾದ ಪ್ರತಿ ಖಂಡುಗ ಭೂಮಿಗೂ ನಿರ್ಮಾತೃ ಆರು ಸೇರು ರಾಗಿ ಬಿತ್ತನೆಯ ಭೂಮಿಯನ್ನು ಕಂದಾಯ ವಿಲ್ಲದೆ ಪಡೆಯುವ ಹಕ್ಕನ್ನು ಹೊಂದಿದ್ದ. ಇದು ಪ್ರತಿ ೧,೦೦೦ ಎಕರೆ ನೀರಾವರಿ ಭೂಮಿಗೆ ಸುಮಾರು ೧೪೬ ಎಕರೆ ಖುಷ್ಕಿ ಭೂಮಿಯಷ್ಟು ಆಗುತ್ತಿತ್ತು. ಆತ ಇವುಗಳನ್ನು ಅನುಭವಿಸುತ್ತಿದ್ದ ವರೆಗೂ ಕೆರೆಯ ದುರಸ್ತಿ ಅವನಿಗೆ ಕಡ್ಡಾಯವಾಗಿತ್ತು. ಕೆರೆ ಭಾರಿಯೂ ವಿಸ್ತಾರವೂ ಆಗಿದ್ದಲ್ಲಿ ಅದನ್ನು ಕಟ್ಟಿದಾತನಿಗೆ ಹಾಗೂ ಆತನ ಉತ್ತರಾಧಿಕಾರಿಗಳಿಗೆ ಕೆರೆಯಿಂದ ನೀರಾವರಿಯಾಗುವ ಭೂಮಿಯಲ್ಲಿ ಕಾಲುಭಾಗ ಸಿಗುತ್ತಿತ್ತು. ಆದರೆ ಖುಷ್ಕಿ ಭೂಮಿ ಸಿಗುತ್ತಿರಲಿಲ್ಲ. ಮೂಲ ನಿರ್ಮಾತೃವಿನ ವಂಶ ನಿಂತು ಹೋದಲ್ಲಿ ಆ ಮಾನ್ಯದ ಭೂಮಿಯನ್ನು ಸರಕಾರವೇ ವಹಿಸಿಕೊಳ್ಳುತ್ತಿತ್ತು. ಕೆರೆಯನ್ನು ದುರಸ್ತಿಯಲ್ಲಿ ಇಟ್ಟಿರುತ್ತಿತ್ತು.[1]

ಬಿತ್ತುವಟ್ಟ, ದಶವಂದ ಕಟ್ಟುಕೊಡಿಗೆ :

ಶಾಸನಗಳಲ್ಲಿ ಬಿತ್ತುವಟ್ಟ, ದಶವಂದ, ಕಟ್ಟುಕೊಡಿಗೆ ಈ ಶಬ್ದಗಳು ನಮಗೆ ಸಿಗುತ್ತವೆ. ಇವುಗಳ ಅರ್ಥವೇನು. ಈಗ ನೋಡೋಣ.

ಕೆರೆಯ ನಿರ್ಮಾಣ, ಅದರ ಸಂರಕ್ಷಣೆಯ ಕೆಲಸ ಮಾಡಿದ್ದಕ್ಕಾಗಿ, ಕಟ್ಟಿದ ವ್ಯಕ್ತಿ ಅಥವಾ ವ್ಯಕ್ತಿಗಳಿಗೆ ಭೂಮಿಯನ್ನು ದಾನವೀಯುವುದಕ್ಕೆ ಬಿತ್ತುವಟ್ಟ ಎಂದು ಅರ್ಥಮಾಡಲಾಗಿದೆ. ದಾನವಿತ್ತ ಭೂಮಿ ಯಾವಾಗಲೂ ಆ ಕೆರೆಯ ನೀರಿನಿಂದಲೇ ನೀರಾವರಿ ಆಗುತ್ತಿದ್ದ ಭೂಮಿ. ಹತ್ತನೆಯ ಒಂದು ಪಾಲು ಭೂಮಿಯೇ (ದಶ್ಯವ) “ಬಿತ್ತುವಟ್ಟ” ಎಂದು ಕ್ರಿ.ಶ. ೯೯೩ರ ಸೋಮಸಮುದ್ರ ಶಾಸನ ಸೂಚಿಸುತ್ತದೆ.[2] ಇತರ ಶಾಸನಗಳಲ್ಲಿ ನೀಡಲಾದ ಭೂಮಿಯ ವಿಸ್ತಾರ ಸೂಚಿತವಾಗಿದೆ. ಆದರೆ ಅದು ಅಚ್ಚುಕಟ್ಟು ಭೂಮಿಯಲ್ಲಿ ಎಷ್ಟು ಪ್ರಮಾಣದ್ದು ಎಂಬುದನ್ನು ಹೇಳುವುದಿಲ್ಲ. ಅದರೂ ಅರಣಿ ಶಾಸನದಲ್ಲಿ ಯಾವುದೇ ಭೂಮಿದಾನದ ಉಲ್ಲೇಖೆಲ್ಲ ಮತ್ತು ಬಿತ್ತುವಟ್ಟ ಎಂದರೆ ಕೆರೆಯ ಸಂರಕ್ಷಣೆಗಾಗಿ ಹುಟ್ಟುವಳಿಯ ಒಂದು ಭಾಗವನ್ನು ನೀಡುವುದು ಎಂದು ಅರ್ಥಮಾಡಲಾಗಿದೆ.[3] ರೈಸ್‌ನ ಪ್ರಕಾರ ಅದು[4] “ಬಿತ್ತು ಅಂದರೆ ಬೀಜ ಬಿತ್ತುವಿಕೆ ಅಥವಾ ಬೇಸಾಯದ ಮೇಲಿನ ವಟ್ಟ ಎಂದರೆ ಸೋಡಿ ಅಥವಾ ರಿಯಾಯತಿ ಎಂದಿರಬಹುದು. ಅದ್ದರಿಂದ ಬಿತ್ತುವಟ್ಟ ಎಂದರೆ ಕೆರೆಯ ನಿರ್ಮಾಣ ಅಥವಾ ಸಂರಕ್ಷಣೆಯ ಕಾರ್ಯಕ್ಕೆ ಪ್ರತಿಫಲವಾಗಿ ಕೆರೆಯ ಕೆಳಗೆ ಕೊಂಚ ಭೂಮಿಯನ್ನು ಕಡಿಮೆ ಕಂದಾಯದ ಮೇಲೆ ನೀಡುವುದು ಎಂದು ಅರ್ಥೈಸಬಹುದು.

ಬಿತ್ತುವಟ್ಟದ ಹಾಗೆಯೆ ‘ದಶವಂದ’ವೂ ಕೆರೆಯ ದುರಸ್ತಿ ಅಥವಾ ನಿರ್ಮಾಣಕ್ಕಾಗಿ ನೀಡಲಾಗುವ ಭೂಮಿಯನ್ನು ಸೂಚಿಸಲು ಸಾಮಾನ್ಯವಾಗಿ ಬಳಸುವ ಶಬ್ದ. ರೈಸ್‌ನ ಪ್ರಕಾರ[5] ಅದರ ಅರ್ಥ, ಒಬ್ಬಾತ ಕೆರೆಯನ್ನು ನಿರ್ಮಿಸಿದ ಅಥವಾ ದುರಸ್ತಿಮಾಡಿದರ ಪ್ರತಿಫಲವಾಗಿ ಸಾಮಾನ್ಯ ಕಂದಾಯದ ಹತ್ತನೆಯ ಒಂದರಷ್ಟು ಕಂದಾಯಕ್ಕೆ ಭೂಮಿಯನ್ನು ಆತನಿಗೆ ನೀಡುವುದು. ಕೆರೆಗೋಡು ಶಾಸನ ದಶವಂದ ಸುಂಕದ ನೀಡಿಕೆಯನ್ನು ಪ್ರಸ್ತಾಪಿಸುತ್ತೆ.[6] ಹಿಂದಿನ ಹೈದರಾಬಾದು ಸಂಸ್ಥಾನದಲ್ಲಿ ೨೦ನೆಯ ಶತಮಾನದ ಮೊದಲಲ್ಲಿ ದಸ್ತಬಂದ್ ಪದ್ಧತಿ ಜಾರಿಯಲ್ಲಿತ್ತು. ಕೆರೆಯ ಸಂರಕ್ಷಣೆ ಮಾಡುತ್ತಿದ್ದ ವ್ಯಕ್ತಿಗೆ ಪ್ರತಿಫಲವಾಗಿ ಭೂಕಂದಾಯದ ಹತ್ತರಲ್ಲಿ ಒಂದು ಪಾಲನ್ನು ನೀಡುವುದು ಎಂದು ಅದರ ಅರ್ಥ.[7] ಆದರೆ ನಕ್ಕೇರಹಾಳು ಶಾಸನ ದಶವಂದದ ಪಾವತಿಯ ನಿಷ್ಕರ್ಷೆಯನ್ನು ದಾಖಲು ಮಾಡುತ್ತದೆ.[8] ಅದರ ಅರ್ಥ ಹಣದ ರೂಪದಲ್ಲಾಗಲಿ ವಸ್ತುರೂಪದಲ್ಲಾಗಲಿ ಹುಟ್ಟುವಳಿಯ ಹತ್ತನೆಯ ಒಂದರಷ್ಟನ್ನು ಅಥವಾ ನಿರ್ದಿಷ್ಟ ಪಾಲನ್ನು ಸಲ್ಲಿಸಬೇಕೆಂಬ ಷರತ್ತಿನ ಮೇಲೆ ಭೂಮಿಯನ್ನು ನೀಡುವುದು. ಬಿತ್ತುವಟ್ಟದಂತೆಯೇ ದಶವಂದವೂ ಭೂಮಿದಾನ ಅಥವಾ ಕಂದಾಯದಲ್ಲಿ ರಿಯಾಯಿತಿ ಅಥವಾ ಹಳೆಯ ಹೈದರಾಬಾದು ಸಂಸ್ಥಾನದಲ್ಲಿದ್ದಂತೆ ಭೂಕಂದಾಯದ ಹತ್ತನೆಯ ಒಂದರಷ್ಟು ನೀಡಿಕೆಯನ್ನು ಸೂಚಿಸುತ್ತದೆ.

ಕೊಡಿಗೆ ಅಥವಾ ಕಟ್ಟುಕೊಡಿಗೆ ಇನ್ನೊಂದು ಸಾಮಾನ್ಯ ಬಳಕೆಯ ಶಬ್ದ – ಬಿತ್ತುವಟ್ಟ ಹಾಗೂ ದಶವಂದಗಳ ಹಾಗೆಯೆ ಇದೂ ಕೊಡುಗೆ ಅಥವಾ ಕೊಡಿಗೆ ಬಹುಮಾನ ಅಥವಾ ದಾನ. ಕೆರೆಯ ಜೀರ್ಣೋದ್ಧಾರ ಇಲ್ಲವೆ ನಿರ್ಮಾಣ ಅಥವಾ ಅದನ್ನು ಸುಸ್ಥಿತಿಯಲ್ಲಿ ರಕ್ಷಿಸಿದ ಸೇವೆಗಾಗಿ ನೀಡಲಾದ ಭೂಮಿದಾನ. ಕೊಡಿಗೆ ಭೂಮಿಗಳು ಮುಂದೆ ಇನಾಂ ಭೂಮಿಗಳೆಂದು ಪರಿಗಣಿತವಾದವು. ಅವು ಕಂದಾಯವಿಲ್ಲದೆ ಅಥವಾ ಅಲ್ಪ ಕಂದಾಯದ ಮೇಲೆ ನೀಡಲಾದ ದಾನ ಭೂಮಿಗಳು. ಕೆರೆ ದುರಸ್ತಿ ಕೈಗೊಂಡಿದ್ದಕ್ಕೆ ‘ಕೆರೆಬಂದಿ’ ಹಾಗೂ ‘ಕೆರೆ ಕೂಲಿಗೆ’ ಇನಾಂಗಳು ಇದ್ದುದೂ ಕಂಡುಬರುತ್ತದೆ.[9]

ಟಿಪ್ಪು ಸುಲ್ತಾನನ ಕಾಲದಲ್ಲಿ ಸಂರಕ್ಷಣೆ :

೧೭೮೮ರಲ್ಲಿ ಟಿಪ್ಪು ಸುಲ್ತಾನನು ಹೊರಡಿಸಿದ ಕಂದಾಯ ಆದೇಶಗಳಿಂದಲೂ ಕೆರೆಗಳ ಕಾಲಕಾಲದ ಸಂರಕ್ಷಣೆಗೆ ನೀಡಿದ್ದ ಮಹತ್ವವನ್ನು ಕಾಣಬಹುದು. (ರೈಸ್ ಪ್ರಕಾರ, ಈ ಆದೇಶಗಳು ಚಿಕ್ಕದೇವರಾಯ ಹೊರಡಿಸಿದವೇ – ೧೬೭೨ – ೧೭೦೪, ಅವೇ ಸುಲ್ತಾನ ಮರುಪ್ರಕಟಣೆ ಮಾಡಿದ್ದು).[10]….[11] ಸ್ಥಳೀಯರೇ ಕಟ್ಟಿ, ಇನಾಂ ಕಟ್ಟುಕೊಡಿಗೆಯಾಗಿ ಇಟ್ಟುಕೊಂಡಿದ್ದ ಕೆರೆಗಳನ್ನು ಇನಾಂದಾರರೇ ಸಂರಕ್ಷಿಸಬೇಕಾಗಿತ್ತು. ಅವರೇ ಕೆರೆಯಿಂದ ಹೂಳನ್ನು ಅಗೆದು ತೆಗೆದು ಏರಿಗೆ ಬಳಸಬೇಕಾಗಿತ್ತು. ಹಾಳು ಬಿದ್ದ ಕೆರೆಗಳ ದುರಸ್ತಿ ಮಾಡಲು ಇನಾಂದಾರನಲ್ಲಿ ಸಾಧನ ಇಲ್ಲದಿದ್ದರೆ ಅದನ್ನು ಸರ್ಕಾರ ಮಾಡಬೇಕಾಗಿತ್ತು ಮತ್ತು ದುರಸ್ತಿಯ ವೆಚ್ಚಕ್ಕೆ ಅನುಗುಣವಾಗಿ ವಾರ್ಷಿಕ ಕಂದಾಯವನ್ನು ಇನಾಂದಾರನ ಮೇಲೆ ಹಾಕಬೇಕಾಗಿತ್ತು.

ಸರ್ಕಾರವೇ ನಿರ್ಮಿಸಿದ ಕೆರೆಗಳ ಬಗ್ಗೆ ಅಮಲದಾರ, ಮುತ್ಸದ್ದಿ, ಹಾಗೂ ಹರಕಾರ ಮುಂತಾದ ಕಂದಾಯ ಅಧಿಕಾರಿಗಳು ತಾವೇ ಹೋಗಿ ಕೆರೆಗಳನ್ನು ಪರಿಶೀಲಿಸಬೇಕು ಮತ್ತು ದುರಸ್ತಿ ಮಾಡಸುವುದರಲ್ಲೂ ಅವುಗಳಿಂದ ಸರ್ಕಾರಕ್ಕೆ ಸಿಗುವ ಲಾಭ ಮತ್ತು ಉತ್ಪನ್ನದ ಹೆಚ್ಚಳ ಇವುಗಳ ಬಗ್ಗೆ ವಿಶೇಷ ಗಮನ ನೀಡಬೇಕು ಎಂದು ಈ ಆದೇಶಗಳಲ್ಲಿ ವಿಧಿಸಲಾಗಿತ್ತು. ಮಣ್ಣನ್ನು ಏರಿಯ ಮೇಲಕ್ಕೆ ಸಾಗಿಸಲು ಎಮ್ಮೆಗಳನ್ನು ಬಳಸಬೇಕು ಮತ್ತು ಏರಿಯ ಸುತ್ತ ಪ್ರತಿನಿತ್ಯವೂ ಹಾಕಲಾದ ಮಣ್ಣಿನ ಪ್ರಮಾಣದ ಲೆಕ್ಕವನ್ನು ಶಾನುಭೋಗ (ಗ್ರಾಮಲೆಕ್ಕಿಗ) ಇಡಬೇಕು ಎನ್ನುವ ಅಪ್ಪಣೆಯಿಂದ ಅಂಥ ದುರಸ್ತಿ ವರ್ಷಪ್ರತಿ ನಡೆಯುತ್ತಿತ್ತು ಎನ್ನುವುದು ಸ್ಪಷ್ಟವಾಗುತ್ತದೆ.[12]

ಸಂರಕ್ಷಣೆಯ ಅವನತಿ :

ಕೆರೆಗಳ ಸೂಕ್ತ ಸಂರಕ್ಷಣೆಗಾಗಿ ಇಂಥ ಪ್ರೋತ್ಸಾಹ ಕ್ರಮ ಹಾಗೂ ಆದೇಶಗಳಿದ್ದರೂ ಮೇಜರ್ ವಿಲ್ಕ್ಸ್ ವರದಿಯಂತೆ ೧೭೯೯ರಲ್ಲಿ, “ಅತ್ಯಂತ ಶೋಚನೀಯ ದುಸ್ಥಿತಿಯಿತ್ತು. ಇನ್ನೂರು ಮುನ್ನೂರು ವರ್ಷಗಳಿಂದಲೂ ಒಡೆದುಹೋಗಿದ್ದ ಕೆರೆಗಳು ದೇಶದ ಎಲ್ಲ ಕಡೆಗಳಲ್ಲೂ ಕಾಣಿಸಿಗುತ್ತದ್ದವು. ಇನ್ನೂ ಏಷ್ಟೋ ಕೆರೆಗಳಲ್ಲಿ ಕಾಡು ಬೆಳದು ಮರೆತೇ ಹೋಗಿದ್ದವು ಅಥವಾ ಜನಕ್ಕೆ ಗೊತ್ತೇ ಇರಲಿಲ್ಲ.” ಈ ವರ್ಣನೆ ತುಂಬ ಬೇಕಾಬಿಟ್ಟಿ ಎನಿಸಿದರೂ ಪ್ರಾಯಶಃ ಬಹುಮಟ್ಟಿಗೆ ವಾಸ್ತವವಾದುದೇ.

ಹಿಂದಿನ ಕಾಲದಲ್ಲಿ ಹಳ್ಳಿಯ ಸಮುದಾಯದಲ್ಲಿ ಬಂಧುಬಳಗದವರೇ ಇರುತ್ತಿದ್ದರು. ಸಾಮಾನ್ಯವಾಗಿ ಗ್ರಾಮದ ಕೃಷಿಕ ಸಮುದಾಯ ಬೇಸಾಯಮಾಡುತ್ತಿತ್ತು. ಆ ಪೈಕಿ ಬಹುಜನಕ್ಕೆ ನೀರಾವರಿ ಭೂಮಿಯಲ್ಲಿ ಪಾಲು ಇರುತ್ತಿತ್ತು. ಆದ್ದರಿಂದ ಕೆರೆಗಳನ್ನು ಕಾರ್ಯದಕ್ಷವಾಗಿ ಒಳ್ಳೆ ದುರಸ್ತಿಯಲ್ಲಿ ಇರಿಸುವುದರಲ್ಲಿ ಅವರ ಹಿತದೃಷ್ಟಿಯೇ ಇರುತ್ತಿತ್ತು. ಕಾಲ ಸರಿದಂತೆ ಪ್ರವಾಹಗಳು ಏರಿಗಳನ್ನು ಹಾಳುಮಾಡಿದವು. ಬರ, ಯುದ್ಧಗಳು ಹಳ್ಳಿಯ ಸಮುದಾಯಗಳನ್ನು ಕರಗಿಸಿದವು. ದೊರೆಗಳು ತಮ್ಮ ಯುದ್ಧಗಳ ವೆಚ್ಚಕ್ಕಾಗಿ ಭಾರವಾದ ಇಲ್ಲವೆ ದಮನಕಾರಿಯಾದ ತೆರಿಗೆಗಳನ್ನು ವಿಧಿಸಿದರು. ಬಹುಶಃ ಈ ಎಲ್ಲ ಅಂಶಗಳಿಂದಲೂ ಹಳ್ಳಿಗರು ಕೆರೆಗಳನ್ನು ಅಸಡ್ಡೆ ಮಾಡುವಂತೆ ಆಯಿತು. ೧೯ನೆಯ ಶತಮಾನದ ಆದಿಯಲ್ಲಿ ಟಿಪ್ಪುವಿನ ಪತನಾನಂತರ ಮೈಸೂರು ಸಂಸ್ಥಾನವನ್ನು ಬ್ರಿಟಿಷರು ಸ್ವಾಧೀನ ಮಾಡಿಕೊಂಡಾಗ ಸಂಸ್ಥಾನದ ಸರ್ಕಾರ ಬ್ರಿಟಿಷರ ಸೇನೆಯ ವೆಚ್ಚಕ್ಕೆ ವಾರ್ಷಿಕ ಪೊಗದಿ ಸಲ್ಲಿಸಬೇಕಾಯಿತು. ಯಾವಾಗಲೂ ರಾಜ್ಯದ ಮುಖ್ಯ ಆದಾಯಮೂಲ ಭೂಮಿಯಷ್ಟೆ. ಆಹಾರೋತ್ಪಾದನೆಯನ್ನು ಹೆಚ್ಚಿಸುವುದಕ್ಕೆ ಅಷ್ಟೇ ಅಲ್ಲ, ನೀರಾವರಿ ಬೇಸಾಯದ ಭೂಮಿಯಿಂದ ಹೆಚ್ಚಿನ ಕಂದಾಯ ಬರುವುದಕ್ಕಾಗಿ, ನೀರಾವರಿ ಕಾರ್ಯಗಳನ್ನು ಜೀರ್ಣೋದ್ಧಾರ ಮಾಡಲು ಹಾಗೂ ದುರಸ್ತಿಮಾಡಲು ಸರ್ಕಾರ ಸರ್ವಪ್ರಯತ್ನ ಮಾಡಿತು. ಸಂಸ್ಥಾನ ಬ್ರಿಟಿಷ್ ಆಡಳಿತಕ್ಕೆ ನೇರವಾಗಿ ಒಳಗಾದ ಮೇಲೆ ನೀರಾವರಿ ಕೆಲಸಗಳ ದುರಸ್ತಿಗಾಗಿ ನೀರಾವರಿ ಸುಂಕವನ್ನು ವಿಧಿಸಲಾಯಿತು. ದಿವಾನ್ ಶೇಷಾದ್ರಿ ಆಯ್ಯರ್(೧೮೯೪) ಅವರ ಮಾತಿನಲ್ಲಿ ಹೇಳುವುದಾದರೆ,

“ಕೆರೆಗಳ ಸಂರಕ್ಷಣೆಯಲ್ಲಿ ಸರ್ಕಾರದ ಜವಾಬ್ದಾರಿಗೆ ವಿಪರೀತ ಪ್ರಾಮುಖ್ಯತೆ ಕೊಡಲಾಯಿತು. ರೈತರ ಹೊಣೆಯನ್ನು ಪೂರ್ಣ ಅಲಕ್ಷ್ಯ ಮಾಡಲಾಯಿತು. ತನ್ನ ಬಂಡವಾಳಕ್ಕೆ ಸಾಕಷ್ಟು ಲಾಭ ಸಿಗುವ ಸಂಭವ ಇಲ್ಲವಾದರೆ ಕೆರೆಗಳ ನಿರ್ವಹಣೆಯನ್ನು ತನ್ನ ದುಬಾರಿ ಕಾರ್ಯವ್ಯವಸ್ಥೆ ವಹಿಸಿಕೊಳ್ಳುವುದು ಅಸಾಧ್ಯ ಎಂದು ಸರ್ಕಾರಕ್ಕೆ ತೋರಿತು. ಆಗ ಬಹುಪಾಲು ಕೆರೆಗಳನ್ನು ರೈತರೇ ವಹಿಸಿಕೊಳ್ಳಬೇಕೆಂದು ಹೇಳಿತು. ಆದರೆ ಆ ವೇಳೆಗೆ ರೈತ ಸಾರ್ವಜನಿಕ ಉಪಯೋಗದ ಕಾರ್ಯಗಳಿಗೆ ಕಾಣಿಕೆ ನೀಡುವ ರೂಢಿಯನ್ನೆಲ್ಲ ಕಳೆದುಕೊಂಡಿದ್ದ. ಅಲ್ಲದೆ ಸಿವಿಲ್ ಅಧಿಕಾರಿಗಳು ರೈತರ ಹೊಣೆಗಾರಿಕೆಯನ್ನು ಪರಿಣಾಮಕಾರಿ ರೀತಿಯಲ್ಲಿ ಜಾರಿಮಾಡಿಸುವ ಸ್ಥಿತಿಯಲ್ಲಿ ಇರಲಿಲ್ಲ. ರೈತರು ಸಂರಕ್ಷಿಸ ಬೇಕಾದುದಕ್ಕೆ ಕೊಡಮಾಡಲಾಗಿದ್ದ ನಾನಾ ಇನಾಂಗಳು ಸವಲತ್ತುಗಳೂ ಕೊಚ್ಚಿಹೋಗಿದ್ದವು. ಸರ್ಕಾರ ತಾನೆ ಕೆಲಸವನ್ನು ಮಾಡಿಸುವುದು ಎಂಬ ತಿಳುವಳಿಕೆ ಮೇರೆಗೆ ಸುಂಕಗಳನ್ನು ವಿಧಿಸಲಾಗಿತ್ತು”.[13]

“ನಮ್ಮ ಕೆರೆಗಳು ವ್ಯೂಹವ್ಯವಸ್ಥೆಯ ಸುಧಾರಣೆ ಈ ವಾಸ್ತವಾಂಶದ ನಿಚ್ಚಳ ಅರಿವಿನಿಂದ ಆರಂಭವಾಗಬೇಕು. ಏನೆಂದರೆ ಪ್ರಾಂತ್ಯದಲ್ಲಿನ ಎಲ್ಲ ಕೆರೆಗಳ ದುರಸ್ತಿ ಹಾಗೂ ಸಂರಕ್ಷಣೆಯನ್ನು ಆಖೈರಾಗಿ ಲಾಭದಾಯಕ ರೀತಿಯಲ್ಲಿ ನಿರ್ವಹಿಸುವುದು ಸರ್ಕಾರದ ಸಾಮರ್ಥ್ಯಕ್ಕೆ ಮೀರಿದ್ದು. ಅಲ್ಲದೆ ಗ್ರಾಮ ವ್ಯವಸ್ಥೆ ಅಥವಾ ಅದರ ಅಂಶ ಏನು ಉಳಿದಿತ್ತೊ ಅದು ಮುರಿದು ಹೋಗಿದೆಯಾಗಿ ಮತ್ತು ಕೆರೆ ದುರಸ್ತಿಗಾಗಿ ವಿಶೇಷ ಸುಂಕಗಳನ್ನು ವಿಧಿಸಿ ರೈತನನ್ನು ಹೊಣೆಗಾರಿಕೆಯಿಂದ ಬಿಡಿಸಿದ ಮೇಲೆ ಮತ್ತೆ ಈಗ ರೈತನಿಗೆ ಭಾರವನ್ನು ಹೇರುವುದು ನ್ಯಾಯವಾಗಲಾರದು.”[14]

ಹಳ್ಳಿಯ ಮುಖ್ಯಸ್ಥನ ಪಾತ್ರ :

ಹಿಂದೆ ಗ್ರಾಮದ ಮುಖ್ಯಸ್ಥನಾದ ಪಟೇಲ ಹಳ್ಳಿಯ ಮೇಲೆ ಪೂರಾ ಅಧಿಕಾರವನ್ನು ಹೊಂದಿದ್ದ ಮತ್ತು ತಕ್ಕಷ್ಟು ಸ್ಥಿತಿವಂತನೂ ಆಗಿದ್ದ. ಕೆರೆ ಕೆಳಗೆ ತನಗೂ ಜಮೀನು ಇದ್ದುದರಿಂದ ಆತ ಕೆರೆ ಒಳ್ಳೆ ದುರಸ್ತಿಯಲ್ಲಿ ಇರುವಂತೆ ಎಚ್ಚರವಹಿಸುತ್ತಿದ್ದ.

ರೈಸ್ ಪ್ರಕಾರ ೧೬೫೪ರಲ್ಲಿ ಕಂಠೀರವ ನರಸರಾಜ, ಪಟೇಲರ ಇನಾಂಗಳನ್ನು ಕಡಿಮೆ ಮಾಡಿ ಅವರ ಅಧಿಕಾರಗಳಿಗೆ ಪ್ರಹಾರಮಾಡಿದ. ಅವರ ಭತ್ಯಗಳನ್ನು ಚಿಕ್ಕದೇವರಾಜ (೧೬೭೨) ಕೊಂಚ ಮಟ್ಟಿಗೆ ಮತ್ತೆ ಕೊಡಿಸಿದ. ಅದರೆ ಅವನ ಮಗನು ಉತ್ತರಾಧಿಕಾರಿಯೂ ಅದ ಕಂಠೀರವ ರಾಜ, ಪಟೇಲರ ಪಾಲುಗಳನ್ನು ಮುಟ್ಟು ಗೋಲು ಹಾಕಿಕೊಂಡ. ಪಟೇಲರ ಭತ್ಯಗಳನ್ನು ಹಿಂದಿರುಗಿಸಲು ಹೈದರಾಲಿ ಏನೂ ಕ್ರಮ ಕೈಗೊಳ್ಳಲಿಲ್ಲ. ಟಿಪ್ಪುಸುಲ್ತಾನನ ಆಳ್ವಿಕೆಯಲ್ಲಿ ಅವರ ಇನಾಂ ಭೂಮಿಗಳ ಮೇಲೆ ಕಂದಾಯವನ್ನು ವಿಧಿಸಲಾಯಿತು.

“ಪಟೇಲರ ಅವನತಿ ೧೮೦೦ರಲ್ಲಿ ಪೂರ್ಣಯ್ಯನಿಂದ ಪೂರ್ಣವಾಗಿ ಆಯಿತು. ಆತನ ಆಳ್ವಿಕೆಯವರೆಗೂ, ಪಟೇಲರ ಇನಾಂಗಳನ್ನು ಸ್ವಾಧೀನ ಪಡಿಸಿಕೊಂಡಿದ್ದರೂ ಅದನ್ನು ನಮೂದು ಮಾಡಲಾಗುತ್ತಿತ್ತು. ಇದರಿಂದ ಅವುಗಳನ್ನು ಮೂಲ ಅನುಭೋಗಸ್ಥರಿಗೆ ವಾಪಸುಮಾಡುವುದು ಸುಲಭವಾಗಿತ್ತು. ಆದರೆ ಪೂರ್ಣಯ್ಯ, ಈ ಎಲ್ಲ ಭತ್ಯಗಳನ್ನು ನಾಡಿನ ಒಟ್ಟು ಆದಾಯದಲ್ಲಿ ಸೇರಿಸಿಬಿಟ್ಟು, ಅಂಥ ನಿರೀಕ್ಷೆಗಳನ್ನು ಒಂದೇಟಿಗೆ ತೊಡೆದು ಹಾಕಿದ.[15] ಇದೇ ಅವಸ್ಥೆ ಮುಂದಿನ ಮಹಾರಾಜರುಗಳ ಕಾಲದಲ್ಲಿ ಮುಂದುವರಿಯಿತು.

ಬ್ರಿಟಿಷರ ಕಾಲದಲ್ಲಿ ಬೇಸಾಯ ಸಮಯದಲ್ಲಿ ಶೇಕದಾರ ತನ್ನ ವಲಯದಲ್ಲಿನ ಹಳ್ಳಿಗಳಿಗೆ ಪ್ರವಾಸ ಹೋಗಿ ಶ್ಯಾನುಭೋಗರಿಗೆ ಕಂದಾಯ ನಿಗದಿ ಬಗ್ಗೆ ತಿಳುವಳಿಕೆಯನ್ನು ಸೂಚನೆಗಳನ್ನು ಕೊಡುತ್ತಿದ್ದ. ಕೆರೆಗಳ ಕೆಳಗಿನ ಭೂಮಿಯ ವಿಚಾರದಲ್ಲಿ, ಕಬ್ಬಿನ ಸಾಗುವಳಿ ಎಷ್ಟರಲ್ಲಿ, ಭತ್ತ ಎಷ್ಟರಲ್ಲಿ ಎನ್ನುವುದನ್ನು ಕೇಳಿ ತಿಳಿದುಕೊಳ್ಳತ್ತಿದ್ದ. ಒಂದು ವೇಳೆ ಸರ್ಕಾರಿ ಭೂಮಿಯನ್ನೆಲ್ಲ ಪೂರಾ ತರಿ ಬೇಸಾಯಕ್ಕೆ ತರಲು ನೀರು ಸಾಲದೆ ಹೋದ ಪಕ್ಷದಲ್ಲಿ ಯಾವ ಭೂಮಿ ಪೂರಾ ಅಥವಾ ಭಾಗಶಃ ನೀರಾವರಿ ಇಲ್ಲದೆ ಇರುವುದೊ ಅಲ್ಲಿ ಅತ್ಯಂತ ಹೆಚ್ಚು ಲಾಭ ನೀಡುವ ಒಣ ಬೆಳೆಯನ್ನು ಇಡಲು ಏರ್ಪಡಿಸುತ್ತದ್ದ. ತನ್ನ ತಾಲ್ಲೂಕಿನಲ್ಲಿನ ಕೆರೆಗಳನ್ನು ಹೊಳೆಗಳ ದಂಡೆಗಳನ್ನು ತನಿಖೆಮಾಡುವುದು ಹಾಗೂ ಅವುಗಳ ಸ್ಥಿತಿಗಳನ್ನು ಅಧೀಕ್ಷಕನಿಗೆ(ಸೂಪರಿಂಟೆಂಡೆಂಟ್)ಸದಾ ತಿಳಿಸುತ್ತಿರುವುದು ಅಮಲದಾರನ ಒಂದು ಮುಖ್ಯ ಕರ್ತವ್ಯವಾಗಿತ್ತು. ಅಮಲದಾರರು ತಾಲ್ಲೂಕು ಕಂದಾಯ ನಿರ್ಣಯವನ್ನು ಮುಗಿಸಿಯಾದ ಮೇಲೆ ಸಾಮಾನ್ಯವಾಗಿ ಅಧೀಕ್ಷಕ, ನವೆಂಬರ್ ಆದೂಡನೆ ಸಾಧ್ಯವಾದಷ್ಟು ಶೀಘ್ರದಲ್ಲಿ ತನ್ನ ಜಮಾಬಂದಿ ಪ್ರವಾಸ ಕೈಗೊಳ್ಳುತ್ತಿದ್ದ. ಪ್ರತಿಯೊಬ್ಬ ರೈತನ ಹಿಡುವಳಿ ಬಗ್ಗೆ ಆ ಮೊದಲೆ ಸಿದ್ದ ಪಡಿಸಿದ್ದ ಪಟ್ಟಾಗಳನ್ನು ರೈತರಿಗೆ ಆಗ ವಿತರಿಸಲಾಗುತ್ತಿತ್ತು.

ಈ ಪಟ್ಟಾ ವಿತರಣೆ ಪದ್ಧತಿಯಿಂದ ಪ್ರತಿಯೊಬ್ಬ ಕಂದಾಯದಾರನಿಗೂ ಅಧೀಕ್ಷಕನ ವೈಯಕ್ತಿಕ ಸಂಪರ್ಕ ಉಂಟಾಗುತ್ತಿತ್ತು. ಮತ್ತು ತಮ್ಮ ತಮ್ಮ ಪಟ್ಟಾಗಳನ್ನು ಪಡೆಯಲು ಎಲ್ಲರೂ ಬರಬೇಕಾಗಿದ್ದರಿಂದ ಪ್ರತಿಯೊಬ್ಬನಿಗೂ ತನ್ನ ಕುಂದು ಕೊರತೆ ಏನಿದ್ದರೂ ಅದಕ್ಕೆ ಪರಿಹಾರವನ್ನು ಪಡೆಯಲು ಅವಕಾಶವಾಗುತ್ತಿತ್ತು.

ಪಟೇಲ ಅಥವಾ ಶ್ಯಾನುಭೋಗರ ಇನಾಂಗಳ ಖೋತಾ ಹಾಗೂ ಸರ್ಕಾರವೇ ನೇರವಾಗಿ ನಡೆಸಿದ ಕಂದಾಯ ನಿಗದಿ ಇವುಗಳಿಂದ ಹಳ್ಳಿಯಲ್ಲಿ ಪಟೇಲನ ಘನತೆಗೂ ಸ್ಥಾನಕ್ಕೂ ಚ್ಯುತಿ ಉಂಟಾಯಿತು. ಆತ ಕೇವಲ ಸರ್ಕಾರದ ಸಂಬಳದ ನೌಕರರ ಮಟ್ಟಕ್ಕೆ ಇಳಿದುಬಿಟ್ಟ. ಹಳ್ಳಿಗರನ್ನು ಕೆರೆ ರಿಪೇರಿ ಕೆಲಸ ಕೈಗೊಳ್ಳುವಂತೆ ಒತ್ತಾಯಿಸಲಾರದೆ ಹೋದ. ಅಂಥ ಕೆಲಸಗಳನ್ನು ಮಾಡುವುದರಲ್ಲಿ ವ್ಯಯಕ್ತಿಕ ಉತ್ಸಾಹವನ್ನು ಅಥವಾ ಆಸಕ್ತಿಯನ್ನು ಸಹ ಕಳೆದುಕೊಂಡ. ಬ್ರಿಟಿಷರು ಜಾರಿಗೆ ತಂದ ವ್ಯವಸ್ಥೆ ಹಳೆಯ ವ್ಯವಸ್ಥೆಯ ಸರ್ವಾಧಿಕಾರಿ ಅಥವಾ ಕೆಲವೊಮ್ಮೆ ದಮನಕಾರಿ ನಿರ್ವಹಣೆಯನ್ನು ತೊಡೆದು ಹಾಕಿತು. ಆದರೂ ಅದು ಹಳ್ಳಿಯ ಸಾಮುದಾಯಕ ಹಿತಾಸಕ್ತಿಯ ಬುಡಕ್ಕೆ ಏಟುಹಾಕಿತು. ಹಳ್ಳಿಯ ಕೆರೆಗಳ ಸಂರಕ್ಷಣೆಯ ಜವಾಬ್ದಾರಿಯನ್ನು ಗ್ರಾಮ ಸಮುದಾಯದಿಂದ ಸರ್ಕಾರಕ್ಕೆ ವರ್ಗಾಯಿಸಿತು.

ಬ್ರಿಟಿಷರು ಅನುಸರಿಸಿದ ವಿಧಾನಗಳು :

ಎಲ್ಲ ಕೆರೆಗಳ ದುರಸ್ತಿ ಅಥವಾ ಜೀರ್ಣೋದ್ಧಾರವನ್ನು ನಿರ್ವಹಿಸುವುದು ಕಷ್ಟದ ಕೆಲಸವಾಯಿತಾದ್ದರಿಂದ ೧೮೬೩ರಲ್ಲಿ ಮೈಸೂರು ಮುಖ್ಯ ಕಮಿಷನರ್ ಒಂದು ಘೋಷಣೆಯನ್ನು ಹೊರಡಿಸಿದ.[16] ಅದರಂತೆ ಬಹುಕಾಲದಿಂದ ನಿರುಪಯುಕ್ತವಾಗಿದ್ದ ಕೆರೆಯ ದುರಸ್ತಿ ಅಥವಾ ಜೀರ್ಣೋದ್ಧಾರವನ್ನು ಕೈಗೊಳ್ಳುವ ಖಾಸಗಿ ವ್ಯಕ್ತಿ ಕೆಳಕಾಣಿಸಿರುವ ರಿಯಾಯಿತಿ ದರದ ಮೇಲೆ ಭೂಮಿ ಇಟ್ಟುಕೊಳ್ಳಲು ಅನುಮತಿ ನೀಡಲಾಯಿತು.

ಅ) ತಾಲ್ಲೂಕಿನ ಸರಾಸರಿ ತರಿ ಕಂದಾಯದಲ್ಲಿ ಕಾಲುಭಾಗ ಕಡಿಮೆ ಅಥವಾ

ಆ) ಆ ವ್ಯಕ್ತಿಯ ಸ್ವಂತ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ಚಾಲ್ತಿಯಲ್ಲಿರುವ ಖುಷ್ಕಿ ಭೂಮಿಯ ಗರಿಷ್ಠ ದರ.ಅಥವಾ

ಇ) ಶ್ರಯ ಅಥವಾ ಕೌಲು ಪದ್ಧತಿಯಂತೆ ಕೆಲವು ಸಾಲುವರ್ಷಗಳಲ್ಲಿ ಗರಿಷ್ಠ ಕಂದಾಯದ ದರವಾಗುವಂತೆ ಇದ್ದ ತಾಲ್ಲೂಕಿನ ಸರಾಸರಿ ತರಿ ಕಂದಾಯ.

೧೮೭೧ರಲ್ಲಿ ಹೊರಡಿಸಲಾದ ಇನ್ನೊಂದು ಆಜ್ಞೆಯಲ್ಲಿ. ೧೮೭೧ಕ್ಕೆ ಮೊದಲು ಕೈಗೊಂಡಿದ್ದ ಕಾರ್ಯಗಳ ಬಗ್ಗೆ. ಈ ರಿಯಾತಿಗಳನ್ನು ಮೂವತ್ತು ವರ್ಷಕ್ಕೆ ಮೀರದ ಅವಧಿಗೆ ಮಿತಗೊಳಿಸಲಾಯಿತು.[17] ಮತ್ತೆ ೧೮೭೬ರಲ್ಲಿ ಇನ್ನೊಂದು ಆಜ್ಞೆ ಹೊರಡಿಸಿ, ಕೆಲಸದ ನಿರ್ಮಾತೃ ಅಥವಾ ದುರಸ್ತಿದಾರನಲ್ಲದೆ ಬೇರೆಯವರ ಸ್ವಾಧೀನದಲ್ಲಿದ್ದ ಸರ್ಕಾರಿ ಭೂಮಿಗಳಿಗೆ ಸ್ವಾಧೀನದಾರರಿಂದ ಪೂರ್ಣ ಕಂದಾಯವನ್ನು ವಸೂಲು ಮಾಡಿ, ಅದರಲ್ಲಿ ಕಾಲುಭಾಗವನ್ನು ನಿರ್ಮಾಣ ಅಥವಾ ದುರಸ್ತಿ ಮಾಡಿಸಿದ ವ್ಯಕ್ತಿಗೆ ಕೊಡತಕ್ಕದ್ದು ಎಂದು ಸೂಚಿಸಲಾಯಿತು. ಇನಾಂ ಜಮೀನುಗಳ ಬಗ್ಗೆ ವಿಧಿಸಿದ ಸುಂಕದ ನಾಲ್ಕನೆಯ ಒಂದು ಭಾಗವನ್ನು ನಿರ್ಮಾತೃವಿಗೆ ಕೊಡಲಾಗುವುದು ಎಂದು ನಿಗದಿಮಾಡಲಾಯಿತು.[18]

ಆದರೂ ಕೆರೆ ದುರಸ್ತಿಯ ಸ್ಥಿತಿ ಅಷ್ಟೇನೂ ಪ್ರೋತ್ಸಾಹದಾಯಕವಾಗಲಿಲ್ಲ. ಆದ್ದರಿಂದ ೧೮೬೩ರ ಘೋಷಣೆಗೆ ಅನುಸಾರವಾಗಿ ನಿರ್ಮಿತವಾದ ಇಲ್ಲವೆ ದುರಸ್ತಿಯಾದ ಕೆರೆಗಳ ಬಗ್ಗೆ ತರಿ ಕಂದಾಯದ ನಾಲ್ಕನೆಯ ಒಂದು ಭಾಗದ ರಿಯಾಯಿತಿಯನ್ನು ಖಾಯಂ ರಿಯಾಯಿತಿಯಾಗಿ ನೀಡಲಾಗುವುದು ಎಂದು ೧೮೮೪ ರಲ್ಲಿ ಸಾರಲಾಯಿತು.[19]

ಭೂ ಹಿಡುವಳಿದಾರರಿಂದ ಕೆರೆಗಳ ಸಂರಕ್ಷಣೆ :

ಈ ಮಧ್ಯ ೧೮೭೩ರಲ್ಲಿ ಸಂಸ್ಥಾನದಲ್ಲಿ ಇದ್ದ ಸಾವಿರಾರು ಕೆರೆಗಳ ದುರಸ್ತಿ ಹಾಗೂ ಸಂರಕ್ಷಣೆಯನ್ನು ವಹಿಸಿಕೊಳ್ಳುವುದು ಸರ್ಕಾರಕ್ಕೆ ಅಸಾಧ್ಯ ಎಂದು ತಿಳಿದು ಬಂದಿತು. ಅಂತೆಯೇ ಯಾವ ಕೆರೆಗಳು ಆಗಲೇ ದಕ್ಷ ದುರಸ್ತಿ ಸ್ಥಿತಿಯಲ್ಲಿ ಇದ್ದವೊ ಅಥವಾ ಅವಶ್ಯಮಟ್ಟಕ್ಕೆ ಜೀರ್ಣೋದ್ಧಾರ ಮಾಡಲ್ಪಟ್ಟಿದ್ದವೋ ಅಂಥ ಕೆರೆಗಳನ್ನು ಹಳ್ಳಿಯವರಿಗೆ ವಹಿಸುವುದು ಅಗತ್ಯ ಎಂದು ಭಾವಿಸಲಾಯಿತು. ಇದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೆಲವು ನಿಯಮಗಳನ್ನು ಘೋಷಿಸಲಾಯಿತು.[20]

ಈ ನಿಯಮಗಳನ್ನು ಜಾರಿಮಾಡುವುದುನ್ನು ಆಯಾ ಕೆರೆಗಳಿಗೆ ಸಂಬಂಧಿಸಿದ ಹಳ್ಳಿಗಳ ಪಟೇಲರಿಗೆ ವಹಿಸಲಾಯಿತು. ಈ ಕೆಲಸದಲ್ಲಿ ಆಯಾ ಹೋಬಳಿಯ ಶೇಕ್ದಾರನು ಪಟೇಲನಿಗೆ ಸಹಾಯಮಾಡಬೇಕಾಗಿತ್ತು. ಕೆರೆಗಳ ಸಂರಕ್ಷಣೆಗೆ ಹೊಣೆಗಾರರೆನಿಸಿಕೊಂಡವರು ಹಳ್ಳಿಯಲ್ಲಿನ ಖುಷ್ಕಿ ಅಥವಾ ತರಿ ಭೂಮಿ ಉಳ್ಳಂಧ ಪಟ್ಟಿದಾರರು, ಶಿಖ್ಮಿದಾರರು, ಇನಾಂದಾರರು, ಮತ್ತು ಕೆರೆಯಿಂದ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಪ್ರಯೋಜನ ಪಡೆಯುತ್ತಿದ್ದ ಇವರೆಲ್ಲರೂ, ಅಂಥ ಪ್ರತಿಯೊಬ್ಬ ವ್ಯಕ್ತಿಯೂ ಹಳ್ಳಿಗೆ ಸೇರಿದ ತನ್ನ ಭೂಮಿ ಮನೆ ಅಥವಾ ಇತರ ಆಸ್ತಿಗಳ ಮೇಲೆ ಸರ್ಕಾರಕ್ಕೆ ಸಲ್ಲಿಸುತ್ತಿದ್ದ ಕಂದಾಯದ ಮೊಬಲಗನ್ನು ಅನುಸರಿಸಿ ವ್ಯಕ್ತಿಗಳು ಮಾಡಬೇಕಾಗಿದ್ದ ಕೆಲಸದ ಪ್ರಮಾಣವನ್ನು ಪಟೇಲ ಮತ್ತು ಶೇಕ್ದಾರರು ತೀರ್ಮಾನಿಸಬೇಕಾಗಿತ್ತು.

ಕೆರೆಗಳಿಗೆ ಮತ್ತು ಅವುಗಳ ಕೆಳಗಿನ ಉಪಕಾರ್ಯಗಳಿಗೆ ಸಂಬಂಧಿಸಿದ ಸಾಮಾನ್ಯ ಮಣ್ಣು ಕೆಲಸ ಹಾಗೂ ಎಲ್ಲ ಬಗೆಯ ದುರಸ್ತಿ ಇವು ಕೆರೆ ಸಂರಕ್ಷಣೆಯಲ್ಲಿ ಸೇರುತ್ತಿದ್ದ ಕಾರ್ಯಗಳು. ಗೊತ್ತುಮಾಡಿದ ಅವಧಿಗಳಲ್ಲಿ ಗ್ರಾಮಾಧಿಕಾರಿಗಳು ಕೆಲಸಗಳನ್ನು ನಡೆಸಬೇಕಾದುದು ನಿಯಮವಾಗಿತ್ತು. ಆದರೆ ಅಗತ್ಯವಾದಾಗ ಒಡನೆಯ ದುರಸ್ತಿ ಮಾಡಬೇಕಾಗಿತ್ತು. ಯಾವುದೇ ವ್ಯಕ್ತಿ ತನ್ನ ಹೊಣೆಯನ್ನು ನಿರ್ವಹಿಸಿದೆ ಹೋದಲ್ಲಿ ಆತ ಮಾಡಬೇಕಾಗಿದ್ದ ಕಾರ್ಯಭಾಗವನ್ನು ಕೂಲಿಕೊಟ್ಟು ಮಾಡಿಸಲು ಗ್ರಾಮಾಧಿಕಾರಿಗಳಿಗೆ ಅಧಿಕಾರವಿತ್ತು. ಅದು ಕಡ್ಡಾಯವೂ ಆಗಿತ್ತು. ಆ ಕೂಲಿ ವೆಚ್ಚವನ್ನು ಕೆಲಸ ಬಾಕಿ ಉಳಿಸಿದವನಿಂದ ಕಂದಾಯ ಸುಸ್ತಿಯಂತೆ ವಸೂಲು ಮಾಡಬೇಕಾಗಿತ್ತು.

ಪ್ರತಿಯೊಂದು ಕೆರೆಯನ್ನು, ಅದಕ್ಕೆ ನಿಗದಿಮಾಡಿದ ಮಟ್ಟಕ್ಕೆ ಸರಿಯಾಗಿ ಸಂರಕ್ಷಣೆ ಮಾಡುವಂತೆ ನೋಡಿಕೊಳ್ಳುವುದು ಪಟೇಲನ ಆದ್ಯ ಜವಾಬ್ದಾರಿಯಾಗಿತ್ತು. ಇದು ನಡೆದಿದೆಯೇ ಎನ್ನುವುದನ್ನು ಪ್ರತಿಯೊಂದು ಪ್ರಸಂಗದಲ್ಲೂ ತನಿಖೆ ಮಾಡಿ ಖಾತರಿ ಮಾಡಿ ಕೊಳ್ಳುವುದು ಶೇಕ್ದಾರನ ಕರ್ತವ್ಯವಾಗಿತ್ತು. ಪ್ರತಿವರ್ಷವೂ ಡಿಸೆಂಬರ್ – ಮಾರ್ಚಿ ತಿಂಗಳ ನಡುವೆ ತಾಲ್ಲೂಕಿನ ಪ್ರತಿಯೊಂದು ಕೆರೆಯನ್ನು ಅಮಲದಾರನೇ ಖುದ್ದಾಗಿ ತಪ್ಪದೆ ವಿಶೇಷವಾಗಿ ತನಿಖೆ ಮಾಡಬೇಕಾಗಿತ್ತು. ಹಾಗಿಲ್ಲವಾದರೆ ಅಮಲದಾರನು ಸದರಿ ಕೆಲಸಕ್ಕೆ ವಿಶೇಷವಾಗಿ ನಿಯುಕ್ತಿಗೊಳಿಸಿದ ಪೇಷ್ಕಾರ, ಶಿರಸ್ತೇದಾರ ಅಥವಾ ತಾಲ್ಲೂಕು ಮೇಸ್ತ್ರಿ ತನಿಖೆ ಮಾಡಬೇಕಾಗಿತ್ತು. ಅಂಥ ತನಿಖೆಯ ಫಲಿತಾಂಶವನ್ನು ನಿಗದಿಯಾದ ದಫ್ತರದಲ್ಲಿ (ರಿಜಿಸ್ಟರ್) ದಾಖಲು ಮಾಡಬೇಕಾಗಿತ್ತು. ತನಿಖೆಯಲ್ಲಿ ಏನಾದರೂ ಕೆರೆ ಸರಿಯಾದ ಮಟ್ಟಕ್ಕೆ ಇಲ್ಲದೆ ಇದ್ದುದು ಕಂಡುಬಂದಲ್ಲಿ ಏಪ್ರಿಲ್‌ಗೆ ಮೊದಲು ಎರಡನೆಯ ತನಿಖೆ ಮಾಡಬೇಕಿತ್ತು. ಆ ವೇಳೆಗೆ ದುರಸ್ತಿ ಕಾರ್ಯವನ್ನು ಮಾಡಿರಬೇಕಾಗಿತ್ತು. ಅದು ತಪ್ಪಿದಲ್ಲಿ ಅಮಲದಾರನೇ ದುರಸ್ತಿ ಕಾರ್ಯವನ್ನು ಮಾಡಿಸಿ, ವೆಚ್ಚವನ್ನು ತಮ್ಮ ಕೆಲಸ ನಿರ್ವಹಿಸದ ಬಾಕಿದಾರರಿಂದ ಕಂದಾಯ ಬಾಕಿಯಂತೆ ವಸೂಲುಮಾಡಬೇಕಾಗಿತ್ತು.

ದಫ್ತರದ ಪ್ರತಿಯೊಂದನ್ನು ಅಮಲದಾರ ಜಿಲ್ಲಾ ಕಂದಾಯ ಅಧಿಕಾರಿಗೆ ಜೂನ್ ಒಂದರ ಒಳಗೆ ರವಾನಿಸಬೇಕಾಗಿತ್ತು. ಆ ತಾರೀಕಿನ ವೇಳೆಗೆ ಎಲ್ಲಾ ಕೆರೆಗಳ ದುರಸ್ತಿ ಕಾರ್ಯವೂ ಪೂರೈಸಿರಬೇಕಾಗಿತ್ತು.

ಆಯಾ ಉಪವಿಭಾಗಗಳ ಸಹಾಯಕ ಕಮಿಷನರುಗಳು ಜಮಾಬಂದೀ ಹಾಗೂ ಇತರ ಸೂಕ್ತ ಸಂದರ್ಭಗಳಲ್ಲಿ ಅದಷ್ಟು ಸಂಖ್ಯೆ ಕೆರೆಗಳನ್ನು ಖುದ್ದಾಗಿ ತನಿಖೆಮಾಡಿ ವರದಿಯ ನಿಖರತೆಯನ್ನು ಪರೀಕ್ಷೆಮಾಡಿ ಕೆರೆ ದಫ್ತರದಲ್ಲಿ ತನಿಖೆಯ ತಾರೀಕನ್ನು ತಮ್ಮ ಟಿಪ್ಪಣಿಗಳನ್ನು ದಾಖಲು ಮಾಡಬೇಕಾಗಿತ್ತು. ಅವರ ತನಿಖೆಯ ಫಲಿತಾಂಶವು ಡೆಪ್ಯೂಟಿ ಕರ್ಮಿಷನರಿಗೆ ವರದಿ ಮಾಡಬೇಕಾಗಿತ್ತು.

ಡೆಪ್ಯೂಟಿ ಕಮೀಷನರ ಇಂಥದೇ ಕೆಲಸಗಳನ್ನು ಮಾಡಬೇಕಾಗಿತ್ತು. ಈ ನಿಯಮಗಳನ್ನು ಪೂರ್ಣವಾಗಿ ಹಾಗೂ ಜಾಣ್ಮೆಯಿಂದ ಪಾಲಿಸಲಾಗಿದೆ. ಕೇವಲ ಕಾಟಾಚಾರವಾಗಿ ಅಲ್ಲ ಎಂಬುದನ್ನು ನೋಡಿಕೊಳ್ಳುವುದಕ್ಕೆ ಆತ ಜವಾಬ್ದಾರನಾಗಿರುತ್ತಿದ್ದ.

ಲೋಕೋಪಯೋಗಿ ಇಲಾಖೆಯ ಇಂಜನಿಯರ್ ದರ್ಜೇಯ ಅಧಿಕಾರಿ, ನಡೆಸಲು ಆಜ್ಞೆ ಮಾಡಿದ ಯಾವುದೇ ಕೆರೆಯ ಏನೇ ಕೆಲಸವನ್ನು ಅದೇ ಅಧಿಕಾರಿಯ ಜವಾಬ್ದಾರಿಯ ಮೇಲೆಯೇ ನಡೆಸಬೇಕಾಗಿತ್ತು. ಸದರಿ ಕಾರ್ಯದ ಯಾವುದೇ ಭಾಗ ರೈತರ ಕರ್ತವ್ಯ ಭಾಗವಾಗಿರದ ಇದ್ದಲ್ಲಿ ಅದರ ಮಂಜುರಾತಿಯ ಇಸ್ತಿಹಾರವನ್ನು (ನೋಟಿಫಿಕೇಷನ್) ಅಮಲದಾರ ಸೂಕ್ತ ಮಾರ್ಗದ್ವಾರಾ ಸಲ್ಲಿಸಬೇಕಾಗಿತ್ತು. ಕೆಳದರ್ಜೆಯ ಒಬ್ಬ ಲೋಕೋಪಯೋಗಿ ಅಧಿಕಾರಿಗೆ ಯಾವುದೇ ಕೆಲಸ ಅಗತ್ಯವೆಂದು ಎನಿಸಿದಲ್ಲಿ ಆತ ಅದನ್ನು ತನ್ನ ಇಲಾಖೆಯ ಮೇಲಧಿಕಾರಿಗೆ ಯಾವುದೇ ವಿಳಂಬವಿಲ್ಲದೆ ವರದಿಮಾಡಬೇಕಾಗಿತ್ತು. ತುರ್ತುಸ್ಥಿತಿಯಲ್ಲಿ ಅಮಲದಾರನಿಗೂ ನೇರವಾಗಿ ವರದಿ ಮಾಡಬೇಕಾಗಿತ್ತು.

ಸಹಾಯಕ ಕಮೀಷನರನ ತನಿಖಾ ವರದಿ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕಾಗಿತ್ತು.

ಅ) ಏರಿ ಮಟ್ಟಸಮವಾಗಿದೆಯೆ, ಪೂರಾ ಅಗಲವಾಗಿದೆಯೆ, ಕಾಡು ಗಿಡ ಕಳೆಗಳಗಳು ಇರಲಿಲ್ಲವೆ, ಡೊಗರುಗಳು ಇರಲಿಲ್ಲವೆ.

ಆ) ಇಳಿಜಾರು ಪೂರ್ಣವಾಗಿದೆಯೆ, ಬಂಡಿಜಾಡಿನಲ್ಲಿ ಮುಕ್ತವಾಗಿದೆಯೆ, ಹುಲ್ಲು ಹಾಸು ಚೆನ್ನಾಗಿದೆಯೆ ಅಥವಾ ಚೆನ್ನಾಗಿಲ್ಲವೆ.

ಇ) ಹೊರಮುಖದ ಕಲ್ಲುಕಟ್ಟಡ ಸುಸ್ಥಿತಿಯಲ್ಲಿದೆಯೇ

ಉ) ಕೋಡಿ ಪೂರ್ಣವಾಗಿ ಭದ್ರವಾಗಿದೆಯೆ, ರಂಧ್ರಗಳಿಲ್ಲದೆ ಇದೆಯೆ.

ಅನೇಕ ಕೆರೆಗಳನ್ನು ಅಗತ್ಯವಾದ ಮಟ್ಟಕ್ಕೆ ದುರಸ್ತಿ ಮಾಡಿ ಸುಸ್ಥಿತಿಗೆ ತಂದು ಮುಂದಿನ ರಕ್ಷಣೆಗೆ ರೈತರಿಗೆ ವಹಿಸಿಕೊಡಬೇಕೆಂದು ಸರ್ಕಾರ ಮಾಡಿದ ಪ್ರಯತ್ನಗಳು ಎಷ್ಟೋ ಇದ್ದರೂ ಕೆರೆಗಳ ಸಂರಕ್ಷಣೆಯನ್ನು ರೈತರು ಅಲಕ್ಷ್ಯಮಾಡಿದರು. ಸಂರಕ್ಷಣಾ ನಿಯಮಗಳನ್ನು ಜಾರಿಗೊಳಿಸುವುದರಲ್ಲಿ ಕಂದಾಯ ಅಧಿಕಾರಿಗಳು ವಿಫಲರಾದರು. ಈ ಅಲಕ್ಷ್ಯದ ಸಲುವಾಗಿ ಕೆರೆಗಳನ್ನು ಪೂರ್ಣ ವಿನಾಶದಿಂದ ಉಳಿಸಲು ಸರ್ಕಾರವೇ ಜೀರ್ಣೋದ್ಧಾರ ಮಾಡುವುದು ಅಗತ್ಯವಾಯಿತು. ಅನೇಕ ವರ್ಷಗಳಿಂದಲೂ ಸಂರಕ್ಷಣೆಯ ಒಟ್ಟು ಅಲಕ್ಷ್ಯದ ಫಲವಾಗಿ ಅಗತ್ಯವಾದ ಮಣ್ಣು, ಕೆಲಸದ ವೆಚ್ಚಕ್ಕೆ ರೈತರು ಹೊಣೆಗಾರರೆ? ಎಂಬ ಪ್ರಶ್ನೆಗಳು ಎದ್ದವು.

ಇಡೀ ವಿಷಯದ ಬಗ್ಗೆ ತೃಪ್ತಿಕರವಾಗಿ ನಿರ್ವಹಿಸಲು ಸರ್ಕಾರಕ್ಕೆ ಸಹಾಯಕವಾಗಲೆಂದು ಈ ಎಲ್ಲ ಅಂಶಗಳನ್ನು ಪರಿಶೀಲಿಸಲು ಒಂದು ಸಮಿತಿಯನ್ನು ನೇಮಿಸಲಾಯಿತು. ಸಮಿತಿಯ ವರದಿಯ ಆಧಾರದ ಮೇಲೆ ೧೯೦೪ರಲ್ಲಿ ಮೈಸೂರು ಸರ್ಕಾರ ಹೊರಡಿಸಿದ ಆಜ್ಞೆಯಲ್ಲಿ ಈ ಕೆಳಕಾಣಿಸಿರುವ ಕ್ರಮಗಳನ್ನು ಸಲಹೆಮಾಡಲಾಗಿತ್ತು.[21]

ಅ) ಸಂರಕ್ಷಣೆಯನ್ನು ಅಲಕ್ಷ್ಯಿಸಿದ್ದರಿಂದ ಹಾಳುಬಿದ್ದಿರುವ ಕೆರೆಗಳ ದುರಸ್ತಿ ಬಗ್ಗೆ ರೈತರ ಹೊಣೆಗಾರಿಕೆಯನ್ನು ಕೆರೆಯ ಅಚ್ಚುಕಟ್ಟಿನ ಭೂಮಿಯ ಸಾಲಿಯಾನ ಕಂದಾಯಕ್ಕೆ ಮಿತಗೊಳಿಸಬೇಕು.

ಆ) ಮಣ್ಣು ಕೆಲಸವನ್ನು ರೈತರು ಮಾಡಬೇಕು. ಕಲ್ಲು ಕಟ್ಟಡದ ಕೆಲಸವನ್ನು ಸರ್ಕಾರ ಮಾಡಿಸಬೇಕು ಎನ್ನುವುದು ಸಾಮಾನ್ಯ ನಿಯಮ, ಆದರೂ ಆಗಬೇಕಾದ ಮಣ್ಣು ಕೆಲಸ ರೈತರ ಮೇಲೆ ಅತಿಯಾದ ಭಾರವಾಗುವಷ್ಟು ಇದೆ ಎನಿಸಿದಲ್ಲಿ ಡೆಪ್ಯೂಟಿ ಕಮೀಷನರರು ಸರ್ಕಾರದ ಒಪ್ಪಿಗೆ ಪಡೆದು ನಿಯಮವನ್ನು ತನ್ನ ವಿಶೇಷ ವಿವೇಚನೆಯ ಮೇರೆಗೆ ಸಡಿಲಿಸಬಹುದು.

ಇ) ೩೦೦ ಹಾಗೂ ಕಡಿಮೆ ರೂಪಾಯಿ ಅಚ್ಚುಕಟ್ಟು ಉಳ್ಳ ಕೆರೆಯ ಅಭಿವೃದ್ಧಿಗೆ ಹೆಚ್ಚು ಅನುದಾನ.

ಈ) ೧೦೦ ರೂ ಅಚ್ಚುಕಟ್ಟಿನ ಕೆರೆ ಹಾಗೂ ೧೦೦ ರೂ ಗಿಂತ ಹೆಚ್ಚು ಅಚ್ಚುಕಟ್ಟಿನ ಕೆರೆ ಎಂಬ ವ್ಯತ್ಯಾಸವನ್ನು ತೆಗೆದು ಹಾಕಿ. ಸಣ್ಣ ನೀರಾವರಿ ಕೆರೆಗಳು ಎಂದು ವರ್ಗೀಕರಿಸಲಾದ ಎಲ್ಲವನ್ನು ಒಂದೇ ರೀತಿಯಲ್ಲಿ ಪರಿಗಣಿಸಲಾಯಿತು.

ರೈತರು ಮಾಡಬೇಕಾದ ಸಂರಕ್ಷಣಾ ಕಾರ್ಯಗಳನ್ನು ಕೆಳಕಾಣಿಸಿರುವಂತೆ ಸ್ಪಷ್ಟವಾಗಿ ನಿಯಮಿಸಲಾಯಿತು.

ಅ) ಏರಿಯನ್ನು ನಿರ್ದಿಷ್ಟ ಪ್ರಮಾಣದ ತುಳಿತದಿಂದ ಕೆರೆ ಏರಿಯ ಮೇಲೆ ಹಾಗೂ ನಾಲೆಗಳ ದಂಡೆಗಳ ಮೇಲೆ ಉಂಟಾಗಿರುವ ಕೊರಕಲು ಅಥವಾ ಇತರ ಏರುಪೇರುಗಳನ್ನು ತುಂಬಿ ಸರಿಮಾಡಬೇಕು.

ಇ) ಏರಿಗಳ ಮೇಲೆ ಪಾಪಾಸುಕಳ್ಳಿ ಮುಂತಾದ ಕಾಡುಗಿಡಗಳು, ಅಪಾಯಕರ ಕಳೆಗಳು ಬೆಳೆಯುವುದನ್ನು ತೆಗೆದುಹಾಕಬೇಕು.

ಉ) ಕೆರೆ ಏರಿಗಳ ಮೇಲಿನ ಕುರುಚಲು ಗಿಡಗಳು ಅಪಾಯಕಾರಿಯಾಗಿದ್ದಲ್ಲಿ ತೆಗೆದು ಹಾಕಬೇಕು.

ಊ) ಕೆರೆಯ ತೂಬುಗಳಲ್ಲಿ ಹಾಗೂ ಅಲ್ಲಿಂದ ಹೊರಡುವ ಎಲ್ಲ ಕಾಲುವೆಗಳಲ್ಲಿ ನೀರು ಹರಿಯಲು ಅಡ್ಡವಾಗಿರುವ ಪದಾರ್ಥ ಸಂಗ್ರಹವನ್ನು ತೆಗೆದುಹಾಕಬೇಕು. ಸಣ್ಣ ಪುಟ್ಟ ಹಾಗೂ ಶಾಖಾ ನಾಲೆಗಳ ಮಣ್ಣು ಕಟ್ಟೆಗಳನ್ನು ಚೊಕ್ಕಟಮಾಡಿ ಸರಿಪಡಿಸಬೇಕು.

ಋ) ಕೆರೆಗೆ ನೀರು ತರುವ ತೊರೆಗಳನ್ನು ಸುಸ್ಥಿತಿಯಲ್ಲಿ ಇಟ್ಟಿರಬೇಕು.

ಎ) ಮಳೆಗಾಲದಲ್ಲಿ ಎಲ್ಲಾ ಕೆರೆಗಳ ಏರಿಗಳ ಮೇಲೂ ನಿಗಾ ಇಟ್ಟಿರಬೇಕು. ನೀರಿನ ಅಲೆಗಳ ಹೊಡೆತಕ್ಕೆ ಸಿಕ್ಕಿದ ಏರಿಯ ಭಾಗಗಳಲ್ಲಿ ಹುಲ್ಲುಹಾಸು ಹಾಕಬೇಕು. ತೂಬುಗಳನ್ನು ತೆಗೆಯುವುದಕ್ಕೂ ಮುಚ್ಚುವುದಕ್ಕೂ ಸಹಾಯವಾಗುವಂತೆ ಇಟ್ಟಿರಬೇಕು ಮತ್ತು

ಏ) ಬಿರಕು ಮತ್ತಿತರ ಆಕಸ್ಮಿಕ ಅನಾಹುತಗಳನ್ನು ತಡೆಯಲು ಎಲ್ಲ ಸಣ್ಣ ಪುಟ್ಟ ಕೆಲಸ ಮಾಡಬೇಕು.

ನೀರು ಒದಗಿಸುವ ಹಾಗೂ ನೀರು ಹಂಚಿಕೆಯ ನಾಲೆಗಳ ಉಪಕಾರ್ಯಗಳ ಸ್ಥಿತಿ ಕುರಿತಂತೆಯೂ ಒಂದು ಹೆಚ್ಚುವರಿ ಕೆಲಸವನ್ನು ತನಿಖಾ ವರಿದಯಲ್ಲಿ ಸೇರಿಸಬೇಕು. (ಆದರೆ ಕೆರೆಯ ಅಂಗಳದಿಂದ ಹೂಳನ್ನು ತೆಗೆಯುವ ಬಗ್ಗೆ ಯಾವ ಸೂಚನೆಯೂ ಈ ನಿಯಮಾವಳಿಯಲ್ಲಿ ಕಾಣಸಿಗುವುದಿಲ್ಲ. ಇದನ್ನು ಅಲಕ್ಷಿಸಿರುವಂತೆ ತೋರುತ್ತದೆ.)

 

[1]ಫ್ರಾನ್ಸಿಸ್‌. ಬುಕಾನನ್ ಸಂ.೧ ಪು.೨೭೯

[2]ಇ.ಸಿ.೪ (ಆರ್) ಚಾಮರಾಜನಗರ-೪೦೪

[3]ಇ.ಸಿ.೭ (ಆರ್) ನಾಗಮಂಗಲ-೯೯

[4]ಇ.ಸಿ. ೪ ಪೀಠಿಕೆ ಪು.೧೨.

[5]ಇ.ಸಿ.೪ ಪೀಠಿಕೆ ಪು.೧೨

[6]ಇ.ಸಿ.೭ (ಆರ್) ಮಂಡ್ಯ ೩೮.

[7]ನೀರಾವರಿ ಕಮಿಷನ್ ೧೯೦೧-೦೩ ಸೆಲೆಕ್ಟಡ್ ಎವಿಡೆನ್ಸ್ ಪು. ೩೩೭.

[8]ಎಸ್.ಐ.ಐ.೯ (ii) – ೬೭೬.

[9]ಕೊಡಿಗೆ ಇನಾಂಗಳನ್ನು ತೆರಿಗೆಗಳಿಂದ ಮುಕ್ತಮಾಡಿರುವುದರ ಬಗೆಗಿನ ದಾಖಲೆಗಳು ೧೯೧೧.

ಮೈಸೂರು ಸರ್ಕಾರದ ಆದೇಶ ನಂ. ೯೬೨೦ ರೆವಿನ್ಯೂ ೪೩. ದಿನಾಂಕ. ೨೦ನೆಯ ಡಿಸೆಂಬರ್ ೧೮೭೬.

[10]ರೈಸ್.೨ ಸಂ. ೧ ಪು. ೫೯೯

[11]ಮತ್ತು ೫೧. ನಿಖಿಲಾಸ್. ಗುಹ – ಪ್ರಿಬ್ರಿಟಿಷ್ ಸ್ಟೇಟ್ ಸಿಸ್ಟಂ ಇನ್ ಸೌತ್ ಇಂಡಿಯಾ – ಮೈಸೂರು ೧೭೬೧-೧೭೯೯ ರತ್ನ ಪ್ರಕಾಶನ ೧೯೮೫ ಪು. ೭-೩೬.

[12] “

[13]ಮತ್ತು ೫೪. ಪ್ರಜಾಪ್ರತಿನಿಧಿ ಸಭೆಯ ದಸರಾ ಅಧಿವೇಶನದಲ್ಲಿ ದಿವಾನರ ಭಾಷಣ. ೧.೧೦.೧೮೮೪.

[14] “

[15]ರೈಸ್. ೨ ಸಂ. ೧ ಪು. ೬೩೭-೯

[16]ಮೈಸೂರು ಚೀಫ್ ಕಮೀಷನರ್‌ಅವರ ಉದ್ಘೋಷಣೆ ಇದನಾಂಕ ೧೩ ಜುಲೈ ೧೮೬೩.

[17]ಮೈಸೂರು ಚೀಫ್ ಕಮೀಷನರ್‌ಅವರ ಪ್ರಕಟಣೆ ನಂ. ೩೬೬ ದಿನಾಂಕ ೨೩ ಡಿಸೆಂಬರ್ ೧೮೭೧

[18]ಮೈಸೂರು ಚೀಫ್ ಕಮಿಷನರ್ ಅವರ ನಡಾವಳಿಕೆಗಳು ನಂ. ೭೯೦೫ ಆರ್. ೨೩೯. ದಿನಾಂಕ ೧೪ನೇ ನವೆಂಬರ್ ೧೮೭೬.

[19]ಮೈಸೂರು ದಿನವಾರ ಭಾಷಣ ಅಕ್ಟೋಬರ್ ೧೮೮೪. (ಮೊದಲೇ ಉಲ್ಲೇಖಿಸಿದ್ದು)

[20]ಮೈಸೂರು ಚೀಫ್ ಕಮಿಷನರ್ ಅವರ ಪ್ರಕಟಣೆ ದಿನಾಂಕ ೨ ಅಕ್ಟೋಬರ್ ೧೮೭೩.

[21]ಸರ್ಕಾರಿ ಆದೇಶ ಸಂ. ೫೨೫೧-೬೧ ಡಿಗ್ರಿ ೬೨೬-೦೩-೬ ದಿನಾಂಕ ೧೫ನೇ ಡಿಸೆಂಬರ್ ೧೯೦೪.