ನೀರಿನ ಕರಗಳು :

ಅತಿಪ್ರಾಚೀನ ಸಾಕ್ಷ್ಯ : ಎಲ್ಲ ಭೂಮಿಗಳ ಮೇಲೆಯೂ ಉತ್ಪನ್ನದ ಆರನೆಯ ಒಂದು ಭಾಗವನ್ನು (ಷಡ್ಭಾಗ)ಕರವಾಗಿ ವಸೂಲುಮಾಡಲು ಪ್ರಭುತ್ವಕ್ಕೆ ಹಕ್ಕು ಉಂಟು ಹಾಗೂ ಅಂಥ ಭೂಮಿ ನೀರಾವರಿಯಲ್ಲಿದ್ದರೆ ಉತ್ಪನ್ನದ ಹೆಚ್ಚಿನ ಪಾಲನ್ನು ಪಡೆಯಲು ಪ್ರಭುತ್ವಕ್ಕೆ ಹಕ್ಕು ಉಂಟು – ಎಂದು, ಕೌಟಿಲ್ಲಯ ಅರ್ಥಶಾಸ್ತ್ರ ಸೂಚಿಸುತ್ತದೆ.

“ಯಾರು ದೈಹಿಕ ಶ್ರಮದಿಂದ ಭೂಮಿಗೆ ನೀರು ಒದಗಿಸಿ ಬೇಸಾಯ ಮಾಡುತ್ತಾರೆಯೋ ಅವರು ಉತ್ಪನ್ನದ ಐದರಲ್ಲಿ ಒಂದು ಪಾಲನ್ನು ನೀರು ಕರವಾಗಿ (ಉದಕಭಾಗ) ತೆರಬೇಕು. ಹೆಗಲಮೇಲೆ ನೀರು ಹೊತ್ತು ಬೇಸಾಯ ಮಾಡುವವರು ಉತ್ಪನ್ನದ ಕಾಲುಭಾಗ ತೆರಬೇಕು. ಏತದ ಬೇಸಾಯಗಾರರು ಮೂರನೆಯ ಒಂದು ಭಾಗವನ್ನು, ನದಿ ತಟಾಕ ಕೆರೆ ಹಾಗೂ ಬಾವಿಗಳಿಂದ ನೀರು ಎತ್ತುವವರು ಉತ್ಪನ್ನದ ಮೂರನೆಯ ಒಂದು ಅಥವಾ ನಾಲ್ಕನೆಯ ಒಂದು ಭಾಗವನ್ನು ತೆರಬೇಕು”. [1]

ನೀರಾವರಿಯ ಭಿನ್ನ ಭಿನ್ನ ರೀತಿಗಳಿಗೆ ಬೇರೆ ಬೇರೆ ದರದ ತೆರಿಗೆ ಗೊತ್ತುಮಾಡಿದ್ದರಲ್ಲಿನ ಆಧಾರತರ್ಕವೇನೋ ಸ್ಪಷ್ಟವಿಲ್ಲ, ಅಲ್ಲದೆ ಪ್ರಭುತ್ವ ನಿರ್ಮಿಸುವ ಅಥವಾ ಖಾಸಗಿ ವ್ಯಕ್ತಿಗಳು ಮಾಡಿಸುವ ನೀರಾವರಿ ಕಾಮಗಾರಿಗಳಲ್ಲಿ ಯಾವುದೇ ವ್ಯತ್ಯಾಸವನ್ನೂ ಮಾಡಿಲ್ಲ. ನೀರಾವರಿ ಕಾರ್ಯದ ನಿರ್ಮಾಣ ಅಥವಾ ಸಂರಕ್ಷಣೆಗಾಗಿ ಮಾಡಲಾದ ಹೂಡಿಕೆಯ ಸಂಪನ್ಮೂಲ ಏನೇ ಇರಲಿ, ನೈಸರ್ಗಿಕ ನದಿ ತಟಾಕ ಕೆರೆ ಹಾಗೂ ಭಾವಿಗಳಿಂದ ನೀರನ್ನು ಬಳಸುವುದಕ್ಕೆ ಅಧಿಕ ತೆರಿಗೆ ಹೇರುವ ಅಧಿಕಾರ ಪ್ರಭುತ್ವಕ್ಕೆ ಇತ್ತು ಎಂದು ಊಹಿಸಬೇಕಾಗಿದೆ. ಅಂದರೆ ಭೂಮಿಯ ಮೇಲಿನ ಅಥವಾ ಭೂಮಿಯ ಒಳಗಿನ ಎಲ್ಲ ಜಲದ ಮೇಲೆಯೂ ಪ್ರಭುತ್ವಕ್ಕೆ ಇದ್ದ ಪರಮಾಧಿಕಾರವನ್ನು ಅರ್ಥಶಾಸ್ತ್ರ ಸಾರಿ ಹೇಳುತ್ತದೆ. ಮತ್ತು ಅಂಥ ನೀರಿನ ಬಳಕೆಗೆ ತೆರಿಗೆ ಹೇರುವುದಕ್ಕೆ ಪ್ರಭುತ್ವಕ್ಕೆ ಅವಕಾಶ ನೀಡುತ್ತದೆ.

ಆದರೂ ಅಂಥ ಹಕ್ಕನ್ನು ಜಾರಿ ಮಾಡುವುದು ಬಲಾತ್ಕಾರದಿಂದ ಆಗಬಾರದು ಹಾಗೂ ಅಂಥ ಅಧಿಕ ತೆರಿಗೆ ಬೇಸಾಯಗಾರನಿಗೆ ತೊಂದರೆ ಉಂಟುಮಾಡಬಾರದು ಎನ್ನುವುದನ್ನು ಕಾಣಬಹುದು. ಅರ್ಥಶಾಸ್ತ್ರ ಹೇಳುತ್ತದೆ :

“ವಾಯುಶಕ್ತಿಯಿಂದ ಅಥವಾ ಎತ್ತುಗಳ ನೆರವಿನಿಂದ ಇಲ್ಲವೆ ಕೆರೆಗಳ ಕೆಳಗೆ ಭೂಮಿ ಉದ್ಯಾನ ಹೂತೋಟಗಳಲ್ಲಿ ಅಥವಾ ಇನ್ನಾವುದೇ ನೀರಾವರಿ ವಿಧಾನದಲ್ಲಿ ಬೆಳೆಯಲಾದ ಬೆಳೆಗಳಲ್ಲಿ ಬೇಸಾಯಗಾರನಿಗೆ ತೊಂದರೆ ಆಗದಷ್ಟು ಪ್ರಮಾಣದ ಉತ್ಪನ್ನವು ಪ್ರಭುತ್ವಕ್ಕೆ ಕೊಡಬಹುದು” [2]

ಹೊಸ ಕಾಮಗಾರಿಯ ಬಗ್ಗೆ ಅಂಥ ತೆರಿಗೆಯನ್ನು ಐದು ವರ್ಷಕಾಲ ಮನ್ನಾ ಮಾಡತಕ್ಕದ್ದು ಎಂದು ಅದೇ ಶಾಸ್ತ್ರ ವಿಧಿಸುತ್ತದೆ.

“ಕೆರೆ ತಟಾಕಾದಿ ಹೊಸ ಕಾಮಗಾರಿಗಳ ರಚನೆಯ ವಿಷಯದಲ್ಲಿ (ಅವುಗಳ ಕೆಳಗಿನ ಭೂಮಿಯ ಮೇಲಿನ) ತೆರಿಗೆಗಳನ್ನು ಐದು ವರ್ಷ ಮನ್ನಾಮಾಡತಕ್ಕದ್ದು” [3]

ಪೂರಾ ಹೊಸ ಭೂಮಿಯನ್ನು ನೀರಾವರಿಗೆ ಅಭಿವೃದ್ದಿಪಡಿಸಲು ಕನಿಷ್ಠ ಐದು ವರ್ಷಬೇಕಾಗುತ್ತದೆ ಮತ್ತು ನೀರಾವರಿಯಾದ ಭೂಮಿಯ ಮೇಲಿನ ಅಧಿಕ ತೆರಿಗೆಯು ಬೇಸಾಯಕ್ಕೆ ನೀರನ್ನು ಬಳಸಿದ್ದರ ಮೇಲಿನ ಸುಂಕವನ್ನು ಒಳಗೊಂಡಿತ್ತು ಎಂದು ಒಪ್ಪಲಾದುದು ಸ್ಪಷ್ಟವಾಗುತ್ತದೆ.

ಶಾಸನಗಳ ಸಾಕ್ಷ್ಯ :

ಅರ್ಥಶಾಸ್ತ್ರದಲ್ಲಿ ಕೊಡಮಾಡಿದ ಮಾರ್ಗದರ್ಶನ ಸೂತ್ರಗಳನ್ನೇ ಸಾಮಾನ್ಯವಾಗಿ ಎಲ್ಲ ದೊರೆಗಳು ಪಾಲಿಸುತ್ತಿದ್ದರು ಎಂದು ಶಾಸನಗಳು ಸೂಚಿಸುತ್ತವೆ. ಎಂಟನೆಯ ಶತಮಾನಕ್ಕೆ ಸಂಬಂಧಿಸಿದ ಗಂಗರಾಜ ಒಂದನೆಯ ಮಾಧವನ ನಂದಿಶಾಸನದಲ್ಲಿ ಪೂಸೂರು ಕೆರೆ ಕೆಳಗೆ ಹತ್ತು ಖಂಡುಗ ಭೂಮಿ ದಾನವಿತ್ತುದು ದಾಖಲಾಗಿದೆ. ಭೂದಾನ ಪಡೆದಾತ ಉತ್ಪನ್ನದ ಆರನೆಯ ಒಂದು ಭಾಗವನ್ನು ಸುಂಕವಾಗಿ ತೆತ್ತು (ಅರುತೊಂಡಿ) ಕೃಷಿ ಮಾಡಬೇಕಾಗಿತ್ತು. [4]

ತಳವಾರೆಯೆಂಬಲ್ಲಿ ಒಂದು ಅಣೆಯನ್ನು ಕಟ್ಟಿಸಿದ್ದನ್ನು ಪರಿಗಣಿಸಿ ಕಾಸಿಗ ಎಂಬಾತ ಮೊದಲನೆಯ ವರ್ಷ ಒಂದು ಆಣೆಯನ್ನು ಎರಡನೆಯ ವರ್ಷ ಪತ್ತೊಂದಿ (ಹತ್ತರಲ್ಲಿ ಒಂದು)ಯನ್ನು, ಮೂರನೆಯ ವರ್ಷ ಏಳಳವಿಯನ್ನು (ಏಳರಲ್ಲಿ ಒಂದು) ಅಲ್ಲಿಂದಾಚೆಗೆ ಐದಳವಿಯನ್ನು (ಐದರಲ್ಲಿ ಒಂದು ಪಾಲು) ಸುಂಕವನ್ನು ಕೊಡಲು ಅನುಮತಿಯೀಯ ಲಾಯಿತು – ಎಂದು ಸತ್ಯಕಾಮ ಪೆರುಮಾಡಿಯ (ಕ್ರಿ.ಶ. ೯೦೫) ರಾಮಪುರ ಶಾಸನ ತೋರಿಸುತ್ತದೆ. [5]

ಅಡವಿ ತಾಕುಗಳ ಹಾಗೂ ಒಣ ಬೆಳೆಗಳನ್ನು ಬೆಳೆಯುವ ಭೂಮಿಗಳ ಉತ್ಪನ್ನದಲ್ಲಿ ಐದನೆಯ ಒಂದು ಪಾಲನ್ನು, ಕೆರೆ ಕೆಳಗೆ ಇರುವ ಭೂಮಿಯ ಉತ್ಪನ್ನದಲ್ಲಿ ಮೂರನೆಯ ಒಂದು ಪಾಲನ್ನು ಪ್ರಭುತ್ವದ ಭಾಗವಾಗಿ ಕೊಡಬೇಕು ಎನ್ನುತ್ತದೆ. ಆವನಿ ಶಾಸನ. [6] ಪೊಳಲಸೆಟ್ಟಿ ಎಂಬಾತ ಒಂದು ಕೆರೆಯನ್ನು ಕಟ್ಟಿಸಿದ, ಅದಕ್ಕಾಗಿ ಕದೇರುವಿನ ರೈತರು ಗಾವುಂಡರೂ ಅವನಿಗೆ ೩೫ ಖಂಡುಗ ಭೂಮಿಯನ್ನು ದಾನವಿತ್ತರು. ಆ ಪೈಕಿ ೫ ಖಂಡುಗ ಭೂಮಿಯನ್ನು ಆತ ಪತ್ತೊಂದಿ (ಹತ್ತರಲ್ಲಿ ಒಂದು ಪಾಲು) ತೆತ್ತಮೇಲೆ ಅನುಭವಿಸಬಹುದು – ಹೀಗೆನ್ನುತ್ತದೆ ಮದ್ದೂರು ತಾಲ್ಲೂಕಿನ ತಾಯಲೂರು ಶಾಸನ. [7] ೨೦ ಹೊನ್ನು ಸುಂಕವನ್ನು ಕಳೆದುಕೊಳ್ಳಬಹುದು ಎಂಬ ಷರತ್ತಿ ಮೇಲೆ ೧೦೦ ಹೊನ್ನು ಆದಾಯವಿರುವ ಭೂಮಿಯ ಪಾಲನ್ನು ದಾನಕೊಟ್ಟುದು ತೀರ್ಥಹಳ್ಳಿ ತಾಲ್ಲೂಕಿನ ಬೆಟ್ಟಮಕ್ಕಿ ಶಾಸನ (ಕ್ರಿ.ಶ೧೩೬೨) ದಲ್ಲಿ ಸೂಚಿತವಾಗಿದೆ. [8] ಅಂದರೆ ಭೂಮಿಯ ಉತ್ಪನ್ನದ ಬೆಲೆಯ ಐದರಲ್ಲಿ ಒಂದರಷ್ಟನ್ನು ಸುಂಕವಾಗಿ ಕಳೆದುಕೊಳ್ಳಲಾಗುತ್ತಿತ್ತು.

ಕೃಷಿ ಉತ್ಪನ್ನದ ಒಂದುಭಾಗವನ್ನು ದವಸದ ರೂಪದಲ್ಲಿಯೋ ಇಲ್ಲವೇ ಉತ್ಪನ್ನದ ಮೌಲ್ಯದ ಲೆಕ್ಕದಲ್ಲಿಯೋ ಸುಂಕವಾಗಿ ಪಡೆಯಲಾಗುತ್ತಿತ್ತು ಎನ್ನುವುದು ಈ ಶಾಸನಗಳಿಂದ ಸ್ಪಷ್ಟವಾಗುತ್ತದೆ. ಅಲ್ಲದೆ ರಾಮಪುರ ಶಾಸನದಲ್ಲಿ ನೋಡಿದ ಹಾಗೆ ಹೊಸ ಕೆರೆಗಳನ್ನು ನಿರ್ಮಾಣ ಮಾಡಿದ್ದಕ್ಕೆ ಪ್ರತಿಯಾಗಿ ಕೆರೆ ಕೆಳಗಿನ ಭೂಮಿಯ ಮೇಲೆ ಆರಂಭಕಾಲದಲ್ಲಿ ಕಡಿಮೆ ದರದಲ್ಲಿ ಸುಂಕ ವಿಧಿಸಲಾಗುತ್ತಿತ್ತು ಎನ್ನುವುದೂ ಸ್ಪಷ್ಟ. ನೀರಾವರಿ ಭೂಮಿಯ ಮೇಲೆ ಸಾಮಾನ್ಯ ಸುಂಕ ಉತ್ಪನ್ನದ ಹತ್ತನೆಯ ಒಂದು ಪಾಲಿನಿಂದ ಹಿಡಿದು ಐದನೆಯ ಒಂದು ಪಾಲಿನ ವರೆಗೂ ಇರುತ್ತಿತ್ತು. ಆದರೆ ಪ್ರಭುತ್ವವೇ ಕಟ್ಟಿಸಿದ ನೀರಾವರಿ ಕಾಮಗಾರಿಯಿಂದ ನೀರು ಸರಬರಾಜಾದಾಗ ಯಾವುದಾದರೂ ಪ್ರತ್ಯೇಕ ಇಲ್ಲವೆ ಹೆಚ್ಚುವರಿ ಕರವು ವಸೂಲು ಮಾಡಲಾಗುತ್ತಿತ್ತೆ? ಎಂಬ ಬಗ್ಗೆ ಶಾಸನಗಳು ಏನೂ ಹೇಳುವುದಿಲ್ಲ. ತೊಣ್ಣೂರು ಶಾಸನ (ಕ್ರಿ.ಶ. ೧೩ನೇಯ ಶತಮಾನ) ಹೊಳೆಯ ಸುಂಕವನ್ನು ಉಲ್ಲೇಖಿಸುತ್ತದೆ. [9] ಅದು ಬಹುಶಃ ದೋಣಿ ಪ್ರಯಾಣದ ಶುಲ್ಕವಾಗಿತ್ತು. ನೀರಾವರಿ ಕರ ಅಲ್ಲ ಎಂದು ತೋರುತ್ತದೆ.

೧೯ನೆಯ ಶತಮಾನಕ್ಕೆ ಸಂಬಂಧಿಸಿದ ಸಾಕ್ಷ್ಯ :

ನಿರ್ದಿಷ್ಟವಾದ ನೀರು/ನೀರಾವರಿ ಸುಂಕ ವಿಧಿಸಿದ್ದನ್ನು ಕುರಿತು ಅತಿಪ್ರಾಚೀನ ಪ್ರಸ್ತಾಪ ೧೮೧೩ಕ್ಕೆ ಸಂಬಂಧಿಸಿದ್ದು. [10] ಮೈಸೂರಿನ ಮಟ್ಟಗೋಡೆ ಒಂದು ಜೋಡಿ ಗ್ರಾಮ. ಕ್ರಿ.ಶ. ೧೮೧೧ಕ್ಕೆ ಮೊದಲೇ ನರಸಿಂಹಭಟ್ಟ ಎಂಬವರಿಗೆ ದಾನಕೊಟ್ಟದ್ದು. ೧೮೧೧ರಲ್ಲಿ ಕೃಷ್ಣರಾಜಕಟ್ಟೆನಾಲೆಯನ್ನು ಕಟ್ಟಿಸಲಾಯಿತು. ೧೮೧೩ ಜೂನನಲ್ಲಿ ಮೈಸೂರು ಮಹಾರಾಜರು ಒಂದು ಸನ್ನದನ್ನು ಹೊರಡಿಸಿ ೨೯.೫೦ ಪಗೋಡಾ ಜೋಡಿಯಾ (ಕಂದಾಯ) ಜೊತೆಗೆ, ನಾಲೆಯಿಂದ ಪಡೆದ ಹೆಚ್ಚುವರಿ ಪ್ರಯೋಜನಕ್ಕಾಗಿ ೧೫ – ೫೦ ಪಗೋಡಗಳನ್ನು ಜೋಡಿದಾರರಿಂದ ವಸೂಲುಮಾಡಬೇಕೆಂದು ಆದೇಶವಿತ್ತರು. ಜೋಡಿ ಹೆಚ್ಚು ಮಾಡಿದ್ದು ನೀರಿನ ಮೌಲ್ಯದ ಸಲುವಾಗಿ. ತನ್ನ ವೆಚ್ಚದಲ್ಲಿ ಒದಗಿಸಿದ ನೀರಾವರಿ ಪಡೆದ ಭೂಮಿಗಳ ಮೇಲೆ ಭೂಕಂದಾಯದ ಜೊತೆಗೆ ನೀರು ಕಂದಾಯ ನೀರುದರವನ್ನೂ ವಿಧಿಸುವ ಹಕ್ಕು ಸರ್ಕಾರಕ್ಕೆ ಇತ್ತು ಎನ್ನುವುದನ್ನು ಇದು ತೋರಿಸುತ್ತದೆ. ನೀರು ಸುಂಕ (ನೀರಾವರಿ ತೆರಿಗೆ) ಬಾಬನ್ನು ೧೮೬೩ – ೬೪ರಲ್ಲಿ ಸರ್ವೇ ಮತ್ತು ಸೆಟಲ್‌ಮೆಂಟ್ ಕಮಿಷನರ್ ಮೈಸೂರಿನಲ್ಲಿ ಮಾಡಿದ ತೆರಿಗೆ ಅಂದಾಜಿನಲ್ಲಿ ಸೇರಿಸಲಾಯಿತು. ರೈತ ತನ್ನದೇ ವೆಚ್ಚದಲ್ಲಿ ನಿರ್ಮಿಸಿದ ಭಾವಿ ಅಥವಾ ನೀರಿನ ಕಾಲುವೆಗಳಿಂದ ಮಾತ್ರ ನೀರಾವರಿಗೆ ಒಳಪಡಿಸಿದ ಭೂಮಿಗೆ ನೀರು ಸುಂಕವನ್ನು ವಿಧಿಸುವಂತಿರಲಿಲ್ಲ ಎನ್ನುವುದು ೧೮೭೦ರಲ್ಲಿ ಪ್ರಕಟಿಸಲಾದ ಸರ್ವೆಗ್ಯಾರಂಟಿ ಸ್ಪಷ್ಟವಾಗಿ ಸೂಚಿಸುತ್ತದೆ.

ನೀರಾವರಿ ಮೇಲು ತೆರಿಗೆ :

೧೮೬೮ರಲ್ಲಿ ಮೈಸೂರು ಸರ್ಕಾರ ಒಂದು ತೀರ್ಮಾನವನ್ನು ಕೈಗೊಂಡಿತು. ಎಲ್ಲ ನೀರಾವರಿ ಭೂಮಿಯ ಕಂದಾಯವನ್ನು ಅಂದಾಜಿನ ಪ್ರತಿಯೊಂದು ರೂಪಾಯಿಗೂ ಒಂದು ಆಣೆ ನೀರಾವರಿ ಮೇಲು ತೆರಿಗೆಯನ್ನು (ಸೆಸ್) ಹಾಕತಕ್ಕದ್ದು. ಈ ಹಣವನ್ನು ಕೆರೆಗಳ ಸಂರಕ್ಷಣೆಯನ್ನು ಉಳಿದು ಇತರ ದುರಸ್ತಿ ಅಭಿವೃದ್ಧಿ ಹಾಗೂ ಪುನರ್ನಿಮಾಣಗಳಿಗಾಗಿ ಮಾತ್ರ ಉಪಯೋಗಿಸತಕ್ಕದ್ದು. ನೀರಾವರಿ ಇಲಾಖೆಯ ಸಂರಕ್ಷಣೆಯಲ್ಲಿದ್ದ ಕೆರೆಗಳು ಮತ್ತಿತರ ನೀರಾವರಿ ಕಾರ್ಯಗಳು ಇದಕ್ಕೆ ಹೊರತಾಗಿದ್ದವು. ಉದಾಹರಣೆಗೆ, ಮೈಸೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಕಾವೇರಿ ಮತ್ತು ಹೇಮಾವತಿ ನದಿಗಳಿಂದ ಹೊರಡುವ ನೀರಾವರಿ ಕಾಲುವೆಗಳು ಹಾಗೂ ದೊಡ್ಡ ಊರುಗಳ ಬಳಿ ಇದ್ದ ಭಾರಿ ಕೆರೆಗಳು ನೀರಾವರಿ ಇಲಾಖೆಯ ಹತೋಟಿಗೆ ಸೇರಿದ್ದವು. ಮಲೆನಾಡು ತಾಲ್ಲೂಕುಗಳಲ್ಲಿ ತರಿ ಬೇಸಾಯ ಬಹುಪಾಲು ನಡೆಯುವುದು ನೈಸರ್ಗಿಕ ಹೊಳೆಗಳಿಂದ ಚಿಲುಮೆಗಳಿಂದ. ಅಲ್ಲಿ ನೀರಾವರಿ ಕೆರೆಗಳನ್ನು ನಿರ್ಮಿಸುವ ಪ್ರಮೇಯ ಇರಲಿಲ್ಲ. ಹಾಗಾಗಿ ನೀರಾವರಿ ಮೇಲು ತೆರಿಗೆ ವಿಧಿಸಿದ್ದಕ್ಕೆ ಅಲ್ಲಿನ ಜನರಲ್ಲಿ ಅತೃಪ್ತಿ ಉಂಟಾಯಿತು. ಲ೧೮೭೭ ರಲ್ಲಿ ನೀರಾವರಿ ಮೇಲು ತೆರಿಗೆಯನ್ನು ಪ್ರತ್ಯೇಕವಾಗಿ ವಿಧಿಸುವುದನ್ನು ರದ್ದುಮಾಡಲಾಯಿತು. ೧೮೭೫ರ ಫೆಬ್ರವರಿಯಲ್ಲಿ ಪ್ರಕಟಣೆ ಹೊರಸಿಡಿದ ನಂತರ ಯಾವ ಹಳ್ಳಿಗಳಲ್ಲಿ ಕಂದಾಯ ನಿರ್ಣಯ ಆಗಿತ್ತೋ, ಅಲ್ಲಿನ ತರಿ ಜಮೀನುಗಳ ಸಾಮಾನ್ಯ ಕಂದಾಯಕ್ಕೆ ಮೇಲು ತೆರಿಗೆಗೆ ಸಮಾನಾದ ಒಟ್ಟು ಮೊತ್ತವನ್ನು ಸೇರಿಸಿ ಕಂದಾಯದ ಜೊತೆಗೆ ವಸೂಲಿ ಮಾಡಲಾಯಿತು. ೧೮೭೫ ಫೆಬ್ರವರಿಗೆ ಮೊದಲೇ ಕಂದಾಯ ನಿರ್ಣಯ ಆಗಿದ್ದ ತಾಲ್ಲೂಕು ಹಳ್ಳಿಗಳ ಬಗ್ಗೆ ನೀರಾವರಿ ಮೇಲುತೆರಿಗೆಯನ್ನು ಪ್ರತ್ಯೇಕವಾಗಿ ವಿಧಿಸುವುದನ್ನು ರದ್ದುಮಾಡಲಿಲ್ಲ. ಈ ಮೊಬಲಗನ್ನು(ಕಂದಾಯದ ೧/೧೭ ರಷ್ಟು) ಕಂದಾಯ ನಿರ್ಣದ ಅಧಿಕಾರಿ (ಸೆಟಲ್ ಮೆಂಟ್ ಅಧಿಕಾರಿ) ತಾಲ್ಲೂಕಿನ ವಾರ್ಷಿಕ ಕಂದಾಯದಿಂದ ಹೊರಗೆ “ಜಿಲ್ಲಾ ನೀರಾವರಿ ನಿಧಿ” ಎಂಬುದಾಗಿ ಇರಿಸಿದ. ಇದನ್ನು ಜಿಲ್ಲಾ ಸಮಿತಿ ತಾಲ್ಲೂಕಿನ ನೀರಾವರಿ ಕಾಮಗಾರಿಗಳ ದುರಸ್ತಿ ಅಭಿವೃದ್ಧಿ ಹಾಗೂ ಪುನರ್ ನಿರ್ಮಾಣಗಳಿಗೆ ವ್ಯಯಿಸಬೇಕಾಗಿತ್ತು. [11]

(ಆಡಳಿತ ವರದಿಯ ಪ್ರಕಾರ ೧೮೬೨ – ೬೩ರಲ್ಲಿ ತರಿ ಭೂಮಿಯ ಸರಾಸರಿ ಕಂದಾಯ ಎಕರೆಗೆ ರೂ. ೫ – ೧೨ – ೦ ಇತ್ತು. ನಿರ್ಣೀತ ಕಂದಾಯದ ಪ್ರತಿ ರೂಪಾಯಿಗೂ ಒಂದಾಣೆಯಂತೆ ನೀರಾವರಿ ಮೇಲು ಸುಂಕ ಒಂದು ಎಕರೆಗೆ ತರಿ ಭೂಮಿಗೆ ಆರು ಆಣೆ ಆಗುತ್ತಿತ್ತು).

ಮಲೆನಾಡು ತಾಲ್ಲೂಕುಗಳಲ್ಲಿ ನೀರಾವರಿ ಕಾರ್ಯಗಳಿಗೆ ಮೊಬಲಗನ್ನು ತೆಗೆದಿರಿಸಿದ ಮೇಲೆ ಬಾಕಿ ಹಣವನ್ನು ರಸ್ತೆ ನಿರ್ಮಾಣ ಹಾಗೂ ದುರಸ್ತಿಗಳಿಗೆ ಬಳಸಬೇಕಾಗಿತ್ತು. ಅಂಥ ಹಣವನ್ನು ತಾಲ್ಲೂಕಿನ ಸ್ಥಳೀಯ ನಿಧಿಗೆ ಸಹಾಯಕ ಅನುದಾನ ಎಂದು ಪರಿಗಣಿಸಬೇಕಾಗಿತ್ತು. (ಎಲ್ಲ ಭೂಮಿಯ ಕಂದಾಯದ ಪ್ರತಿ ರೂಪಾಯಿನ ಮೇಲೆಯೂ ವಿಧಿಸುತ್ತಿದ್ದ ಒಂದಾಣೆ ಕರವೇ ಸ್ಥಳೀಯ ನಿಧಿ. ಅದನ್ನು ರಸ್ತೆ ನಿರ್ಮಾಣ ಹಾಗೂ ದುರಸ್ತಿ, ಶಿಕ್ಷಣದ ಉದ್ದೇಶ ಮುಂತಾದ ಸ್ಥಳೀಯ ಅಗತ್ಯಗಳಿಗೆ ಬಳಸಬೇಕಾಗಿತ್ತು.)

೧೮೬೪ರಲ್ಲಿ ಹೊರಡಿಸಲಾದ ಆಜ್ಞೆಯಂತೆ ಇನಾಂ ಭೂಮಿಗಳಲ್ಲಿ ಹಾಗೂ ಹಾಸನ ಜಿಲ್ಲೆಗಳಲ್ಲಿನ ನದಿಗಳ ಕಾಲುವೆಗಳಿಂದ ನೀರಾವರಿಯಾಗುತ್ತಿದ್ದ ಭೂಮಿಗಳಲ್ಲಿ ಕಂದಾಯ ನಿರ್ಣಯ ಆಗದೆ ಇದ್ದಕಡೆ ಒಂದು ಖಂಡಿ ಭೂಮಿಗೆ ಅರ್ಧ ರೂಪಾಯಿ ನೀರಾವರಿ ಮೇಲು ತೆರಿಗೆಯನ್ನು ವಿಧಿಸಬಹುದಾಗಿತ್ತು.

ನೀರಾವರಿಯ ಮೇಲು ತೆರಿಗೆ ನಿಧಿ :

ನೀರಾವರಿ ಮೇಲು ತೆರಿಗೆ ಹಾಗೂ ತತ್ಸಮನಾದ ಒಟ್ಟು ಮೊತ್ತಗಳ ವಸೂಲಿಯಿಂದ ರಚಿತವಾದ ನೀರಾವರಿ ಮೇಲು ತೆರಿಗೆ ನಿಧಿಯನ್ನು ಈ ಬಾಬುಗಳಿಗೆ ಬಳಸಲಾಯಿತು.

೧. ಪ್ರತಿ ತಾಲ್ಲೂಕಿನಲ್ಲಿರುವ ಕೆರೆಗಳ ತನಿಖೆಗೆ ಸೂಕ್ತ ಸಿಬ್ಬಂದಿಯನ್ನು ಇರಿಸುವುದು.

೨. ಗೊತ್ತಾದ ಮಟ್ಟಕ್ಕೆ ತಂದು, ರೈತರ ಸಂರಕ್ಷಣೆ ವಹಿಸಲಾಗಿದ್ದ ಕೆರೆಗಳ ಕಟ್ಟಡ ಭಾಗದ ದುರಸ್ತಿ

೩. ರೈತರ ನಿರ್ವಹಣಾ ಸಾಮರ್ಥ್ಯಕ್ಕೆ ಮೀರಿದ ಇತರ ಅತ್ಯಗತ್ಯ ಕೆರೆ ದುರಸ್ತಿ

೪. ನೀರಾವರಿ ಇಲಾಖೆಯ ಸಂರಕ್ಷಣೆಯಲ್ಲಿದ್ದ ನಾಲೆಗಳ ದುರಸ್ತಿ

ನಿಧಿಯನ್ನು ಆದಷ್ಟುಮಟ್ಟಿಗೆ ಆಯಾ ತಾಲ್ಲೂಕಿನ ಕೆರೆಗಳ ಮೇಲೆಯೆ ವ್ಯಯಿಸಬೇಕಾಗಿತ್ತು. ಮತ್ತು ನೆರೆಯ ತಾಲ್ಲೂಕುಗಳಲ್ಲಿನ ಅದೇ ಸಾಲಿನ ಕೆರೆಗಳಿಗಾಗಿಯೂ ಜಿಲ್ಲೆಯ ನೀರಾವರಿ ಕಾರ್ಯಗಳಿಗೆ ಸಂಬಂಧಿಸಿದ ಯಾವುದೇ ಸಾಧಾರಣ ಉದ್ದೇಶಕ್ಕಾಗಿಯೂ ನಿಧಿಯನ್ನು ಹೊರಳಿಸಲು ಜಿಲ್ಲಾ ಸಮಿತಿಗೆ ಅಧಿಕಾರವಿತ್ತು. [12] ನೀರಾವರಿ ಮೇಲು ತೆರಿಗೆ ರಚನೆಗೆ ಮೊದಲು ಕೆರೆಗಳ ದುರಸ್ತಿಗಳನ್ನೆಲ್ಲ ಸರ್ಕಾರದ ಸಾಮಾನ್ಯ ಆದಾಯದಿಂದಲೇ ನಡೆಸಲಾಗುತ್ತಿತ್ತು.

೧೮೬೪ಕ್ಕೆ ಮೊದಲು ಎಲ್ಲ ನೀರಾವರಿ ಕಾರ್ಯಗಳ ಸಂರಕ್ಷಣೆ ಹಾಗೂ ನಿರ್ವಹಣೆಯನ್ನು ಕಂದಾಯ ಅಧಿಕಾರಿಗಳೇ ನಡೆಸುತ್ತಿದ್ದರು. ೧೮೬೪ರಲ್ಲಿ ಮೈಸೂರು ಹಾಸನ ಜಿಲ್ಲೆಗಳಲ್ಲಿನ ಭಾರಿ ನದಿ ನಾಲೆಗಳ ಸಂರಕ್ಷಣೆ ಹಾಗೂ ನಿರ್ವಹಣೆಗಾಗಿ ರಕ್ಷಕ ಸಿಬ್ಬಂದಿ (ಕನಸರ್‌ವನ್ಸಿ ಎಸ್ಟಾಬ್ಲಿಷಮೆಂಟ್) ಎಂಬ ಒಂದು ಸಣ್ಣ ಇಂಜನಿಯರಿಂಗ್ ಘಟಕವನ್ನು ರಚಿಸಲಾಯಿತು.

ಆದರೆ ಈ ರಚನೆಯ ಅಧಿಕಾರಿಗಳು ಕೆಲಸಮಾಡುತ್ತಿದ್ದುದು ಕಂದಾಯ ಇಲಾಖೆಯ ನಿಯಂತ್ರಣದಲ್ಲಿ. ಸೂಪರಿಂಟೆಂಡಿಗ್ ಇಂಜನಿಯರ್ ಅವರ ಅಧೀನದಲ್ಲಿ ಒಂದು ಪ್ರತ್ಯೇಕ ನೀರಾವರಿ ಇಲಾಖೆ ರೂಪಿತವಾದುದು ೧೮೭೨ರಲ್ಲಿ. [13] ನೀರಾವರಿ ಮೇಲು ತೆರಿಗೆ ನಿಧಿಯನ್ನು ರಚಿಸಿದ ಮೇಲೆ ಒಂದು ಪ್ರಶ್ನೆ ಎದ್ದಿತು. ಈ ನಿಧಿಯಿಂದ ನಡೆಯುವ ದುರಸ್ತಿ ಕೆಲಸ ಜಿಲ್ಲಾ ಇಂಜನಿಯರ್ ಅವರ ಹತೋಟಿಯಲ್ಲಿರಬೇಕೇ ಅಥವಾ ಡೆಪ್ಯೂಟಿ ಕಮಿಷನರ್ ಕೈಯಲ್ಲಿರಬೇಕೇ ಎಂದು ಚರ್ಚೆ ಸಮಲೋಚನೆಗಳ ನಂತರ ಹೀಗೆ ಒಪ್ಪಲಾಯಿತು. ಜಿಲ್ಲಾ ನಿಧಿಯ ಕೆಲಸಗಳೆಲ್ಲವೂ ಜಿಲ್ಲಾ ಇಂಜನಿಯರ್ ಅಧೀನದಲ್ಲಿರಬೇಕು. ಆದರೆ ಜಿಲ್ಲೆಯ ಮುಖ್ಯಸ್ಥನೂ ಜಿಲ್ಲಾ ನಿಧಿಯ ಅಧ್ಯಕ್ಷನೂ ಆದ ಡೆಪ್ಯೂಟಿ ಕಮೀಷನರ್ ಜಿಲ್ಲಾ ನಿಧಿಯಿಂದ ಮಾಡಿಸಬೇಕಾದ ಕೆಲಸಗಳು ಯಾವುವು? ಎಂಬುದನ್ನು ನಿರ್ಧರಿಸತಕ್ಕದ್ದು. ಕಾರ್ಯಗಳಿಗೆ ಸಂಬಂಧಿಸಿದ ಎಲ್ಲಾ ಅಂದಾಜುಗಳೂ ಪ್ರಗತಿಯ ವರದಿಗಳೂ ಅವನಿಗೆ ಬರತಕ್ಕದ್ದು. [14]

ಜಿಲ್ಲಾ ಇಂಜನಿಯರ್ ತನ್ನ ತಾಂತ್ರಿಕತೆಯಿಂದಾಗಿ ತನ್ನ ಇಲಾಖೆಯ ಮುಖ್ಯಸ್ಥನಿಗೆ ಅಧೀನನಾಗಿದ್ದ. ಹಾಗಾಗಿ ನೀರಾವರಿ ಮೇಲು ತೆರಿಗೆಯ ನಿರ್ವಹಣೆ ಇಬ್ಬರ ಹತೋಟಿಗೆ ಒಳಗಾಯಿತು. ಆದ್ದರಿಂದ ೧೯೦೮ ಸೆಪ್ಟಂಬರ್‌ನಲ್ಲಿ ಸರ್ಕಾರ ಹೀಗೆ ಅಜ್ಞೆ ಮಾಡಿತು – ನಿಧಿಯ ನಿರ್ವಹಣೆ ಲೋಕೋಪಯೋಗಿ ಇಲಾಖೆಯಲ್ಲಿ ಮುಂದುವರಿಯುತ್ತದೆ, ಆದರೆ ಜಿಲ್ಲಾ ಕಾಮಗಾರಿಗಳಿಗೆ ನ್ಯಾಯಯುತವಾದ ಅಂದಾಜು ರೂಪಿಸುವಾಗ ಕೆಳಕಾಣಿಸಿರುವ ವಿಧಾನವನ್ನು ಅನುಸರಿಸಬೇಕು. [15]

೧. ಆಯಾ ವರ್ಷದಲ್ಲಿ ಕೈಗೆತ್ತಿಕೊಳ್ಳಬೇಕಾದ ಸ್ಥಳೀಯ ಕೆಲಸಗಳ ಕಾರ್ಯಕ್ರಮ ಪಟ್ಟಿಯೊಂದನ್ನು ಅಂದಾಜು ಪಟ್ಟಿಯ ರೀತಿಯಲ್ಲಿ ತಾಲ್ಲೂಕು ಬೋರ್ಡುಗಳು ರಚಿಸಿ ಜಿಲ್ಲಾ ಬೋರ್ಡುಗಳಿಗೆ ಸಲ್ಲಿಸಬೇಕು.

೨. ಜಿಲ್ಲಾ ಬೋರ್ಡುಗಳಲ್ಲಿ ಈ ಕಾರ್ಯಕ್ರಮ ಪಟ್ಟಿಗಳನ್ನು ಪರಿಶೀಲಿಸಿ, ವಾರ್ಷಿಕ ಜಿಲ್ಲಾ ಅಂದಾಜನ್ನು ತಯಾರಿಸಿ, ರೆವಿನ್ಯೂ ಕಮಿಷನರಿಗೆ ಸಲ್ಲಿಸಬೇಕು.

೩. ರೆವಿನ್ಯೂ ಕಮಿಷನರುಗಳು ಅವುಗಳನ್ನು ಪರಿಶೀಲಿಸಿ, ಲಭ್ಯ ಹಣಕಾಸನ್ನು ಗಮನದಲ್ಲಿರಿಸಿಕೊಂಡು, ಮುಖ್ಯ ಇಂಜನಿಯರ್ ರೊಡನೆ ಪರ್ಯಾಲೋಚಿಸಿ, ಅವಶ್ಯವಾದರೆ ಮಾರ್ಪಾಟು ಮಾಡಿ, ಇಡೀ ಸಂಸ್ಥಾನಕ್ಕೆ ಸಮಗ್ರ ಅಂದಾಜನ್ನು ಮಂಜೂರಾತಿಗಾಗಿ ಸರ್ಕಾರಕ್ಕೆ ಸಲ್ಲಿಸಬೇಕು.,

ಈ ಮಾರ್ಗದರ್ಶಕ ಸೂಚನೆಗಳಿದ್ದರೂ ಸ್ಥಿತಿಗತಿ ಸುಧಾರಿಸಲಿಲ್ಲ. ಕೆಲವು ಜಿಲ್ಲೆಗಳಲ್ಲಿ ಅಲ್ಲಿ ವಸೂಲಾದ ಆದಾಯಕ್ಕಿಂತಲ್ಲೂ ವೆಚ್ಚವೇ ಹೆಚ್ಚು ಆಗುತ್ತಿತ್ತು. ಉಳಿದ ಜಿಲ್ಲೆಗಳಲ್ಲಿ ವೆಚ್ಚ ಆದಾಯಕ್ಕಿಂತ ಕಡಿಮೆ ಆಗುತ್ತಿತ್ತು. ಆದ್ದರಿಂದ ಈ ವಿಷಯವನ್ನು ಪರಿಶೀಲಿಸಿ ನೀರಾವರಿ ಮೇಲುತೆರಿಗೆ ನಿಧಿಯಿಂದ ಆಗುತ್ತಿದ್ದ ವೆಚ್ಚದ ನಿಯಂತ್ರಣಕ್ಕೆ ಸೂಕ್ತ ಸಲಹೆಗಳನ್ನು ರೂಪಿಸಲು ಸರ್ಕಾರ ಒಂದು ಸಮಿತಿಯನ್ನು ನೇಮಿಸಿತು. ಈ ಸಮಿತಿಯ ವರದಿಯನ್ನು ಆಧರಿಸಿ ಸರ್ಕಾರ ೧೯೧೪ ಸೆಪ್ಟೆಂಬರ್‌ನಲ್ಲಿ ಕೆಳಕಾಣಿಸಿದಂತೆ ಇನ್ನಷ್ಟು ನಿಯಮಗಳನ್ನು ವಿಧಿಸಿತು. [16]

೧. ಒಂದು ಜಿಲ್ಲೆಯಲ್ಲಿ ಪ್ರತಿವರ್ಷ ಸಂಗ್ರಹವಾಗುವ ಒಟ್ಟು ಮೊತ್ತದಲ್ಲಿ ಶೇ ೭೫ ರಷ್ಟುನ್ನು ಅದೇ ಜಿಲ್ಲೆಯ ವೆಚ್ಚಕ್ಕಾಗಿ ತೆಗೆದಿಡಬೇಕು. ಬಾಕಿ ಶೇ. ೨೫ರಷ್ಟು ಹಣವನ್ನು ಒಂದು ಸಾಮಾನ್ಯ ನಿಧಿಯಾಗಿ ಇರಿಸಬೇಕು. ಜಿಲ್ಲೆಯ ಸಾಮಾನ್ಯ ನಿಧಿಯ ಜೊತೆಗೆ ಅಸಾಧಾರಣ ಸಂದರ್ಭಗಳಲ್ಲಿ ಅಗತ್ಯ ಬಿದ್ದಾಗ ಹೆಚ್ಚುವರಿ ದ್ರವ್ಯವಾಗಿ ಬಳಸಲು ಇದನ್ನು (ಶೇ ೨೫) ಬಳಸಬೇಕು.

ಪ್ರತಿಯೊಂದು ತಾಲ್ಲೂಕಿನಲ್ಲಿಯೂ ಆಗಬೇಕಾದ ತುರ್ತು ಹಾಗೂ ಮುಖ್ಯ ಕಾರ್ಯಗಳ ತ್ರೈವಾರ್ಷಿಕ ಕಾರ್ಯಕ್ರಮವೊಂದನ್ನು ಅಮಲದಾರ ತಾಲ್ಲೂಕು ಬೋರ್ಡಿನ ಜೊತೆಗೆ ಪರ್ಯಾಲೋಚಿಸಿ ಸಿದ್ಧಪಡಿಸಿ ಡೆಪ್ಯೂಟಿ ಕಮಿಷನರ್‌ಗೆ ಸಲ್ಲಿಸಬೇಕು. ಆತ (ಡೆಪ್ಯೂಟಿ ಕಮಿಷನರ್) ಕಾರ್ಯವಾಹಿ ಇಂಜನಿಯರ್ ಹಾಗೂ ಜಿಲ್ಲಾ ಬೋರ್ಡ್ ಜೊತೆ ಪರ್ಯಾಲೋಚಿಸಿ ಇದನ್ನು ಅನುಮೋದಿಸುತ್ತಾನೆ.

೩. ಸಿಬ್ಬಂದಿ ಉಪಕರಣ ಹಾಗೂ ಯಂತ್ರಸ್ಥಾವರಗಳಿಗಾಗಿ ನೀರಾವರಿ ಮೇಲು ತೆರಿಗೆ ನಿಧಿಯಲ್ಲಿ ಶೇ ೧೮ರಷ್ಟನ್ನು ಖರ್ಚುಹಾಕುತ್ತಿದ್ದುದನ್ನು ಮನ್ನಾ ಮಾಡಬೇಕು. ಈ ಹಣವನ್ನು ಸರ್ಕಾರದ ಸಾಮಾನ್ಯ ನಿಧಿಯಿಂದಲೇ ಒದಗಿಸಬೇಕು.

೪. ಕೆರೆ ಅಣೆಕಟ್ಟು ಇತ್ಯಾದಿಗಳು ಒಡೆದು ಹೋದಲ್ಲಿ ಹಾಗೂ ಭಾರಿ ಅಪಾಯಕ್ಕೆ ಒಳಗಾದಲ್ಲಿ ಮಾಡಬೇಕಾದ ವಿಶೇಷ ದುರಸ್ತಿ ವೆಚ್ಚವನ್ನು ಸರ್ಕಾರಿ ನಿಧಿಯ ಖರ್ಚಿನಲ್ಲಿ ಸೇರಿಸಬೇಕು. ನೀರಾವರಿ ಮೇಲು ತೆರಿಗೆ ನಿಧಿಯನ್ನು ಸಾಮಾನ್ಯ ದುರಸ್ತಿಗಳಿಗೆ ಮಾತ್ರ ಬಳಸಬೇಕು. ಹಾಗೂ

೫. ಮೈಸೂರು, ಹಾಸನ ಜಿಲ್ಲೆಗಳಲ್ಲಿ ನದಿಕಾಲುವೆಗಳ ಸಂರಕ್ಷಣೆಯ ವೆಚ್ಚದಲ್ಲಿ ನಿರ್ದಿಷ್ಟ ಪಾಲನ್ನು (ಪ್ರತಿ ಸಂದರ್ಭದಲ್ಲೂ ಸರ್ಕಾರ ನಿರ್ಧರಿಸುವಂತೆ) ಸರ್ಕಾರದ ನಿಧಿಯಿಂದ ವ್ಯಯಿಸಬೇಕು. ಉಳಕೆ ವೆಚ್ಚವನ್ನು ಮಾತ್ರ ನೀರಾವರಿ ಮೇಲುತೆರಿಗೆ ನಿಧಿಗೆ ಖರ್ಚುಹಾಕಬೇಕು.

೧೯೧೫ರಲ್ಲಿ ೧೯೧೬ – ೧೭ನೆಯ ಸಾಲಿನ ನೀರಾವರಿ ಮೇಲು ತೆರಿಗೆ ನಿಧಿಯ ಅಂದಾಜು ಪಟ್ಟಿಯನ್ನು ಅನುಮೋದಿಸುವಾಗ ಮೈಸೂರು ಹಾಸನ ಜಿಲ್ಲೆಗಳ ನದಿ ನಾಲೆಗಳ ಸಂರಕ್ಷಣೆಗೆ ಸರ್ಕಾರ ನಿಧಿಯ ಕೊಡುಗೆಯನ್ನು ಶೇ ೪೦ ಎಂದು ಗೊತ್ತುಮಾಡಲಾಯಿತು.

೧೯೧೯ರಲ್ಲಿ ಮೈಸೂರು ಚಿತ್ರದುರ್ಗ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಗಳಲ್ಲಿಯೇ ಬಳಸಬೇಕಾದ ನೀರಾವರಿ ಮೇಲುತೆರಿಗೆ ನಿಧಿಯ ಶೇಕಡ ೭೫ ಮಿತಿಯನ್ನು ೯೫ಕ್ಕೆ ಏರಿಸಲಾಯಿತು. ಅಲ್ಲದೆ ಮೈಸೂರು ಹಾಸನ ಜಿಲ್ಲೆಗಳ ನದಿ ಕಾಲುವೆಗಳ ಮತ್ತು ವಾಣೀವಿಲಾಸ ಸಾಗದ ಸಂರಕ್ಷಣೆಗೆ ಸರ್ಕಾರದ ನಿಧಿಯ ಕೊಡುಗೆಯನ್ನು ಶೇ ೪೦ ರಿಂದ ೬೦ಕ್ಕೆ ಏರಿಸಲಾಯಿತು.

ಸಂರಕ್ಷಣಾ ಮೇಲುತೆರಿಗೆ :

ನೀರಾವರಿ ಮೇಲುತೆರಿಗೆಯನ್ನು ಮುಖ್ಯವಾಗಿ ನೀರಾವರಿ ಕೆಲಸಗಳ ದುರಸ್ತಿ ಹಾಗೂ ಜೀರ್ಣೋದ್ಧಾರಕ್ಕೆ ಮಾತ್ರ ಉಪಯೋಗಿಸಬೇಕಾಗಿತ್ತು, ಕೆರೆಯ ಸಾಮಾನ್ಯ ಸಂರಕ್ಷಣೆಗಲ್ಲ. ಸಾಮಾನ್ಯ ಸಂರಕ್ಷಣೆದಯ ಕೆಲಸ ಬೇಸಾಯಗಾರ ತನ್ನ ಖರ್ಚಿನಲ್ಲಿಯೆ ಮಾಡಬೇಕಾದ ಮಾಮೂಲು ಜವಾಬ್ದಾರಿ ಎಂದು ಪರಿಗಣಿತವಾಗಿತ್ತು. ಹೀಗಾಗಿ ಸಣ್ಣ ಕೆರೆಗಳ ಸಂರಕ್ಷಣೆ ಅಸಡ್ಡಗೆ ಗುರಿಯಾಯಿತು. ಮತ್ತು ನೀರಾವರಿ ಮೇಲುತೆರಿಗೆ ನಿಧಿಯನ್ನು ಭಾರಿ ಕೆರೆಗಳ ದುರಸ್ತಿಗಳಿಗೆ ವ್ಯಯಿಸುವಂತಾಯಿತು. ಕೆಲವೊಮ್ಮೆ ಹೊಸ ಕೆರೆಗಳ ನಿರ್ಮಾಣಕ್ಕೂ ವೆಚ್ಚವಾಗುವಂತಾಯಿತು. ಅನೇಕ ಭಾರಿಕೆರೆ ಅಥವಾ ಜಲಾಶಯಗಳ ನಿರ್ಮಾಣದಿಂದಾಗಿ ಅಂಥ ಕಾಮಾಗಾರಿಗಳ ಸಂರಕ್ಷಣೆಯ ಸಲುವಾಗಿ ಪ್ರತ್ಯೇಕ ತೆರಿಗೆ ವಿಧಿಸುವುದು ಅಗತ್ಯ ಎಂದು ತೋರಿಬಂತು. ೧೯೩೨ರ ನೀರಾವರಿ ಶಾಸನವನ್ನು ೧೯೫೨ರಲ್ಲಿ ತಿದ್ದುಪಡಿ ಮಾಡಿ, ಎಕರೆಗೆ ಸಾಲಿಯಾನ ಮೂರು ರೂ. ಗಳಿಗೆ ಮೀರದಂತೆ ಸಂರಕ್ಷಣಾ ಮೇಲುತೆರಿಗೆ ವಿಧಿಸಲು ಅವಕಾಶ ಕಲ್ಪಿಸಲಾಯಿತು. ೧೯೬೫ರ ಕರ್ನಾಟಕ ನೀರಾವರಿ ಶಾಸನದಲ್ಲಿ ಈ ತೆರಿಗೆಯನ್ನು ನಾಲ್ಕು ರೂಪಾಯಿಗಳಿಗೆ ಹೆಚ್ಚಿಸಲಾಯಿತು. ಮತ್ತು ಎಲ್ಲ ನೀರಾವರಿ ಕಾಮಗಾರಿಗಳಿಗೂ ಅನ್ವಯಿಸಲಾಯಿತು. ಸಂರಕ್ಷಣಾ ಮೇಲು ತೆರಿಗೆಯ ಮೊತ್ತವನ್ನು ನಿರ್ಧರಿಸಲು ಬೇಕಾದ ನಿಯಮಗಳನ್ನು ೧೯೭೨ರಲ್ಲಿ ಸರ್ಕಾರ ರಚಿಯಿಸಿತು. ಆದರೆ ಈ ನಿಯಮಗಳಂತೆ ಯಾವುದೇ ಸಂರಕ್ಷಣಾ ಮೇಲು ತೆರಿಗೆಯನ್ನು ವಿಧಿಸಿಲ್ಲ ಎಂದು ತಿಳಿದು ಬಂದಿದೆ.

ನೀರು ತೆರಿಗೆ :

ಹೊಸ ನೀರಾವರಿ ಕಾಮಗಾರಿಗಳನ್ನು ನಿರ್ಮಿಸಿದಾಗ ಅಥವಾ ಹಳೆಯನ್ನು ಅಭಿವೃದ್ಧಿ ಪಡಿಸಿದಾಗ ಮತ್ತು ಕಂದಾಯ ನಿಷ್ಕರ್ಷೆಯಲ್ಲಿ ನೀರಿನ ಬಳಕೆ ಬಗ್ಗೆ ಪ್ರಸ್ತಾಪ ಇಲ್ಲದಿದ್ದಾಗ ಪ್ರತ್ಯೇಕ ನೀರು ತೆರಿಗೆಯನ್ನು ಸರ್ಕಾರ ವಿಧಿಸಿತು. ಈ ತೆರಿಗೆಯ ಪ್ರಮಾಣವನ್ನು ಕಾಲಕಾಲಕ್ಕೆ ಪುನರ್ವಿಮರ್ಶೆ ಮಾಡಲಾಯಿತು. ಉದಾಹರಣೆಗೆ ಕೃಷ್ಣರಾಜಸಾಗರ ನಾಲೆಗಳ ಬಗ್ಗೆ ಮೊದಲಿನ ಆರು ವರ್ಷಗಳ ನಂತರ ೧೯೨೫ರಲ್ಲಿ ತೆರಿಗೆಯನ್ನು ಪುನರ್ವಿಮರ್ಶಿಸಲಾಯಿತು. [17] ಈ ಹೊಸ ನಾಲೆಗಳ ಕೆಳಗೆ ತರಿ ಬೇಸಾಯ ನೆಲೆಗೊಳ್ಳಲು ಆರು ವರ್ಷ ಬೇಕಾಗುತ್ತದೆ ಎಂದು ಭಾವಿಸಲಾಯಿತು. ನೀರು ತೆರಿಗೆ ಹತ್ತು ವರ್ಷಗಳ ಅವಧಿಯ ನಂತರ ಪುನರ್ವಿಮರ್ಶೆಯಾಗಬೇಕು ಹಾಗೂ ಅಲ್ಲಿಂದಾಚೆಗೆ ಹದಿನೈದು ವರ್ಷಗಳಿಗೆ ಕಡಿಮೆ ಇಲ್ಲದ ಅಂತರಗಳಲ್ಲಿ ಪುನರ್ವಿಮರ್ಶೆಯಾಗಬೇಕು? ಎಂದು ೧೯೩೨ರ ಮೈಸೂರು ನೀರಾವರಿ ನಿಯಂತ್ರಣ ಶಾಸನದಲ್ಲಿ ವಿಧಿಸಲಾಯಿತು.

ಇಂದಿನ ಸ್ಥಿತಿ :

೧೯೫೭ರಲ್ಲಿ ನೀರು ತೆರಿಗೆಯನ್ನು ವಿಧಿಸಲು ಪ್ರತ್ಯೇಕ ಶಾಸನವನ್ನೇ ಮಾಡಲಾಯಿತು. ನೀರು ತೆರಿಗೆ ಎನ್ನುವುದು ನೀರಾವರಿಗಾಗಿ ಸರ್ಕಾರ ನೀರು ಒದಗಿಸುವುದಕ್ಕೆ ವಿಧಿಸುವಂಥ ಶುಲ್ಕ ಎಂದು ಪರಿಗಣಿಸಲಾಯಿತು. ೧೦೦ ಎಕರೆ ಹಾಗೂ ಹೆಚ್ಚಿನ ನೀರಾವರಿ ಯೋಗ್ಯ ಭೂಮಿ ಉಳ್ಳ ನೀರಾವರಿ ಕಾಮಗಾರಿಗಳಿಗಾಗಿ ನೀರು ತೆರಿಗೆಯ ಪ್ರತ್ಯೇಕ ಶ್ರೇಣಿಯನ್ನು ನಿಗದಿಮಾಡಲಾಯಿತು. ಮುಂದೆ ಇದನ್ನು ಮಾರ್ಪಡಿಸಿ ಎಲ್ಲ ನೀರಾವರಿ ಕಾಮಗಾರಿಗಳಿಗೂ ಏಕರೀತಿಯ ನೀರು ತೆರಿಗೆಯನ್ನು ಗೊತ್ತುಮಾಡಲಾಯಿತು. ಮಲೆನಾಡ ಪ್ರದೇಶವು ನೀರಾವರಿ ಕಾಮಗಾರಿಯಿಂದ ಒದಗುವ ನೀರನ್ನೇ ನೆಚ್ಚಿ ಕೊಂಡಿರುತ್ತದೆ. ಆದರೆ ಮಲೆನಾಡು ಪ್ರದೇಶದಲ್ಲಿ ನೀರಿಗಾಗಿ ನೀರಾವರಿ ಕಾಮಗಾರಿಗಳನ್ನು ಅವಲಂಬಿಸುವುದು ಸೀಮಿತ ಪ್ರಮಾಣದಲ್ಲಿ ಮಾತ್ರ. ಆದ್ದರಿಂದ ಮಲೆನಾಡು ಸೀಮೆಯಲ್ಲಿ ಬೆಳೆಯುವ ಭತ್ತದ ಬೆಳೆಯ ಬಗ್ಗೆ ಕೊಂಚ ಮಾರ್ಪಾಟನ್ನು ಮಾಡಲಾಯಿತು. ಸಾಲಿಯಾನ ೧೨೫೨ ಮಿ.ಮೀ ಮಳೆ ಆಗುವ ಪ್ರದೇಶಗಳಲ್ಲಿ ಭತ್ತದ ಬೆಳಗೆ ಎಕರೆಗೆ ೨೦ ರೂ. ಇತರ ಪ್ರದೇಶಗಳಲ್ಲಿ ಭತ್ತದ ಬೆಳೆಗೆ ಎಕರೆಗೆ ೩೦ರೂ. ನೀರು ತೆರಿಗೆಯನ್ನು ಗೊತ್ತು ಮಾಡಲಾಯಿತು.

ನಾನಾ ಬೆಳೆಗಳ ಮೇಲಿನ ಈ ನೀರು ತೆರಿಗೆಯನ್ನು ಕಾಲಕಾಲಕ್ಕೆ ಹೆಚ್ಚಿಸಲಾಯಿತು. ೧೯೮೮ ಅಕ್ಟೋಬರ್‌ನಲ್ಲಿ ಗೊತ್ತುಮಾಡಲಾದ ಇತ್ತೀಚಿನ ನೀರು ತೆರಿಗೆಯು ಈಗಾಗಲೇ ಮತ್ತೆ ಬದಲಾಗಿದೆ. ೧೦೦ ಎಕರೆ ವರೆಗೆ ನೀರಾವರಿಯೋಗ್ಯ ಭೂಮಿ ಉಳ್ಳ ನೀರಾವರಿ ಕಾಮಗಾರಿಗಳ ಬಗ್ಗೆ ಯಾವ ನೀರು ತೆರಿಗೆಯನ್ನೂ ವಿಧಿಸುವಂತಿಲ್ಲ. ೧೦೦ ರಿಂದ ೫೦೦೦ ಎಕರೆ ನೀರಾವರಿ ಯೋಗ್ಯ ಭೂಮಿ ಇರುವ ನೀರಾವರಿ ಕಾಮಗಾರಿಗಳಿಗೆ ೫೦೦೧ ಎಕರೆ ನೀರಾವರಿ ಯೋಗ್ಯ ಭೂಮಿ ಉಳ್ಳ ಕಾಮಗಾರಿಗಳಿಗೆ ವಿಧಿಸಲಾಗುವ ತೆರಿಗೆಯ ಅರ್ಧದಷ್ಟು ಮಾತ್ರ ವಿಧಸಿಬೇಕೆಂದು ಸಲಹೆ ಮಾಡಲಾಗಿದೆ.

ಶೇಕಡ ೯೦ಕ್ಕೂ ಹೆಚ್ಚಿನ ಕೆರೆಗಳಿಗೆ ೧೦೦ ಎಕರೆ ಅಥವಾ ಕಡಿಮೆ ನೀರಾವರಿ ಯೋಗ್ಯ ಭೂಮಿ ಇದೆ. ಆದ್ದರಿಂದ ಅಂಥ ಕೆರೆಗಳ ಕೆಳಗಿನ ಯಾವುದೇ ರೈತರೂ ನೀರು ತೆರಿಗೆಯನ್ನು ಕೊಡಬೇಕಾಗಲಾರದು. ೧೦೧ ರಿಂದ ೫೦೦೦ ಎಕರೆಗಳಷ್ಟು ನೀರಾವರಿಯೋಗ್ಯ ಭೂಮಿ ಉಳ್ಳ ಕೆಲವೇ ಕೆಲವು ಕೆರೆಗಳ ಬಗ್ಗೆ ವಿಧಿಸಬಹುದಾದ ನೀರು ತೆರಿಗೆ ಕಬ್ಬಿನ ಬೆಳೆಗೆ ಎಕರೆಗೆ ೨೦೦ ರೂ. ಭತ್ತ ಹಾಗೂ ಬಾಗಾಯತು ಬೆಳೆಗೆ ೫೦ ರೂ. ಇತರ ಎಲ್ಲ ನೀರಾವರಿ ಬೆಳೆಗಳಿಗೂ ತೆರಿಗೆ ೫೦ ರೂ ಗಳಿಗಿಂತ ಕಡಿಮೆ.

ಕೆರೆಗಳಲ್ಲಿ ಶೇಕಡಾ ೯೦ಕ್ಕೂ ಹೆಚ್ಚಿನವುಗಳ ಬಗ್ಗೆ ನೀರು ತೆರಿಗೆಯನ್ನಾಗಲಿ ಅಥವಾ ಸಂರಕ್ಷಣಾ ಮೇಲುತೆರಿಗೆಯನ್ನಾಗಲಿ ವಿಧಿಸದೆ ಹೋದಲ್ಲಿ ಆ ಕೆರೆಗಳನ್ನು ಸಂರಕ್ಷಿಸುವುದು ಸರ್ಕಾರಕ್ಕೆ ಆಗಲಿ ಅಥವಾ ಇನ್ನಿತರ ಸ್ಥಳೀಯ ಸಂಸ್ಥೆಗೆ ಆಗಲಿ ಕಷ್ಟವಾಗುವುದು, ಖಂಡಿತ. ಕ್ಷಿಪ್ರದಲ್ಲಿಯೆ ಆ ಕೆರೆಗಳೆಲ್ಲ ಕಾಡುಗಿಡಗಳಿಂದ ಮುಚ್ಚಿ ಹೋಗಬಹುದು. ಆದರೆ ಹಿಂದೆಯೆ ಸಂರಕ್ಷಣಾ ಪ್ರಶ್ನೆಯನ್ನು ಚರ್ಚಿಸುವಾಗ ಸೂಚಿಸಿರುವಂತೆ ಕೆರೆಗಳ ಸಂರಕ್ಷಣೆ ಹಾಗೂ ದುರಸ್ತಿಯ ಜವಾಬ್ದಾರಿಯನ್ನು ಆಯಾ ಕೆಳಗಿನ ರೈತರಿಗೆ ಪೂರಾ ಬಿಟ್ಟು ಬಿಡುವುದು ನ್ಯಾಯಯುತವಾದೀತು.

 

[1]ಅರ್ಥಶಾಸ್ತ್ರ ಸಂ. ೨ ಅಧ್ಯಾಯ ೨೪ ಪು. ೧೩೧

[2]ಅದೇ ಸಂ. ೩ ಅಧ್ಯಾಯ ೯ ಪು. ೧೯೫.

[3]ಅದೇ.

[4]ಡಾ. ಕೆ.ವಿ.ರಮೇಶ, ಇನ್‌ಸ್ಕ್ರಿಪ್ಷನ್ ಆಫ್‌ ವೆಸ್ಟರ್ನ್ ಗಂಗಾಸ್ ಪು. ೭ ರಿಂದ ೯, ದೆಹಲಿ ೧೯೮೯

[5]ಇ.ಸಿ. ೬ (ಆರ್), ಶ್ರೀರಂಗಪಟ್ಟಣ ೮೫.

[6]ಇ.ಸಿ. ೧೦ ಮುಳುಬಾಗಿಲು – ೪೯ (ಎ)

[7]ಇ.ಸಿ. ೭ (ಆರ್) ಮದ್ದೂರು ೫೬.

[8]ಇ.ಸಿ.೮. ತೀರ್ಥಹಳ್ಳಿ ೨೦

[9]ಇ.ಸಿ.೬ (ಆರ್) ಶ್ರೀರಂಗಪಟ್ಟನ ೫೬

[10]ರೆವಿನ್ಯೂ ಮ್ಯಾನುಯಲ್ ೧೯೧೧ ಪು. ೫೫೧ ಮೈಸೂರು ಸರ್ಕಾರ

[11]ಮೈಸೂರು ಚೀಫ್‌ ಕಮಿಷನರ್ ಅವರ ನೋಟಿಫಿಕೇಷನ್‌ ನೊ. ೩೪೧ ತಾ. ೧೧-೨-೧೮೭೫

[12]ಮೈಸೂರು ಚೀಫ್‌ ಕಮಿಷನರ್ ಅವರ ನೋಟಿಫಿಕೇಷನ್‌, ತಾ ೭.೫.೧೮೭೫, ನಂ. ೬೨.

[13]ಮೈಸೂರು ಅಟ್ಲಾಸ್ ೧೯೦೨

[14]ಜಿ.ಓ.ನಂ ೧೮೧೭-೩೧ ತಾ. ೨೩ ನೇ ಮೇ ೧೮೭೯. ರೆವಿನ್ಯೂ ಮ್ಯಾನುಯಲ್ ೧೯೧೧ ಪು. ೫೬೦ ಮೈಸೂರು ಸರ್ಕಾರ

[15]ಜಿ.ಓ.ನಂ. ಆರ್./೨೦೮೬-೯೬ ಎಲ್.ಆರ್. ೫೮೫-೦೭-೧೧ ತಾ. ೨೪ ನೇ ಸೆಪ್ಟೆಂಬರ್ ೧೯೦೮.

[16]ಜಿ.ಓ.ನಂ. ಆರ್. ೨೧೫೭-೬೮ ಎಲ್.ಆರ್. ೬೩೦-೧೩-೪ ತಾ. ೧೨ ಸೆಪ್ಟೆಂಬರ್ ೧೯೧೪.

[17]ಜಿ.ಓ.ನಂ. ಆರ್. ೬೮೯೪-೯೯ ಎಲ್.ಆರ್. ೧೨-೨೪-೨೦ ತಾ. ೨೦ ಮೇ ೧೯೨೫.