ನಮ್ಮ ಕೆರೆವ್ಯವಸ್ಥೆಯ ಪುನರುಜ್ಜೀವನ ಅಗತ್ಯ:

ಈ ವರಗೆ ನಾವು ಆದಿಯಿಂದ ಹಿಡಿದು ಇಂದಿನ ವರೆಗೂ ಕರ್ನಾಟಕದ ಕೆರೆ ನೀರಾವರಿಯ ಇತಿಹಾಸವನ್ನು ಗುರುತಿಸಿದ್ದೇವೆ. ನಮ್ಮ ಜಲಸಂಪನ್ಮೂಲವನ್ನು ರಕ್ಷಿಸುವ ವಿಶಿಷ್ಟ ಕೌಶಲದ ವಿಧಾನವಾದ ಕೆರೆವ್ಯವಸ್ಥೆ ಒಂದು ಕಾಲಕ್ಕೆ ನಾಡಿನ ಹೆಮ್ಮ ಆಗಿತ್ತು. ಬರುಬರುತ್ತ ಹೇಗೆ ಅನುಪಯುಕ್ತ ಸ್ಥಿತಿಗೆ ಬಂದು, ಅಸಡ್ಡಗೆ ಗುರಿಯಾಯಿತು ಎನ್ನುವುದನ್ನು ನಾವು ನೋಡಿದ್ದೇವೆ. ಈ ಹಳೆಯ ವ್ಯವಸ್ಥೆಗೆ ಹೇಗೆ ಮತ್ತೆ ಜೀವ ತುಂಬಬಹುದು, ಇದರ ಹಿಂದಿನ ಕಾರ್ಯನಿರ್ವಹಣೆಯಿಂದ ನಾವು ಏನು ಪಾಠ ಕಲಿಯಬಹುದು ಎಂಬುದನ್ನು ಕೆರೆವ್ಯವಸ್ಥೆಯ ಉನ್ನತಿ – ಅವನತಿಗಳ ಈ ಕತೆಯ ಅಂತ್ಯದಲ್ಲಿ ನಾವು ಪರಿಶೀಲಿಸಬಹುದು. ಕೆರೆವ್ಯವಸ್ಥೆಯ ಇಂದಿನ ಸ್ಥಿತಿಯನ್ನು ಸಂಕ್ಷೇಪವಾಗಿ ವಿಶ್ಲೇಷಿಸಿ ಅದರ ಪುನುರುಜ್ಜೀವನಕ್ಕಾಗಿ ಕೆಲವು ಸಲಹೆಗಳನ್ನು ಮಾಡಲು ಕೆಳಗೆ ಪ್ರಯತ್ನಿಸಲಾಗಿದೆ.

ಮೈಸೂರನ್ನು ಸ್ವಾಧೀನ ಪಡಿಸಿಕೊಂಡ ಹೊಸದರ ಬ್ರಿಟಿಷ್ ರೆಸಿಡೆಂಟ್ ೧೮೦೩ರಲ್ಲಿ ಮೈಸೂರು ಸಂಸ್ಥಾನದಲ್ಲಿನ ಬೇಸಾಯ ಅಂದರೆ ನೀರಾವರಿಯ ಪ್ರದೇಶ ೮,೧೩,೪೯೧ ಎಕರೆ ಇತ್ತು ಎಂದು ವರದಿ ಮಾಡಿದ್ದ. ಆಗಿನ ಅಂದಾಜು ಜನಸಂಖ್ಯೆ ಸುಮಾರು ೨೧,೭೧,೨೫೪. ಅಲ್ಲಿಂದ ಸುಮಾರು ಒಂದು ನೂರುವರ್ಷದಲ್ಲಿ ಜನಸಂಖ್ಯೆ ಎರಡು ಪಟ್ಟಿಗೂ ಹೆಚ್ಚಾಗಿತ್ತು. ೫೫,೩೯,೩೯೯ರ ಅಂಕೆಯನ್ನು ಮುಟ್ಟಿತ್ತು. ಆದರೆ ನೀರಾವರಿ ಪ್ರದೇಶ ಮಾತ್ರ ಶೇಕಡಾ ಹತ್ತರಷ್ಟು ಹೆಚ್ಚಿರಲಿಲ್ಲ. ೮,೯೧,೫೧೦ ಎಕರೆ ಇತ್ತು. ೧೮೦೩ರಲ್ಲಿ ನೀರಾವರಿ ಪ್ರದೇಶ ತಲೆಗೆ ೦.೩೭ ಎಕರೆ ಇದ್ದುದ್ದು ೧೯೦೧ರಲ್ಲಿ ೦.೧೫ ಎಕರೆಗೆ ಇಳಿದಿತ್ತು. ಅಂದರೆ ಒಂದುನೂರು ವರ್ಷದಲ್ಲಿ ಶೇ ೫೦ಕ್ಕೂ ಹೆಚ್ಚು ಇಳಿದಿತ್ತು.

ಮುಂದಿನ ೫೦ ವರ್ಷಗಳಲ್ಲಿ ಅಂದರೆ ೧೯೫೧ರ ವೇಳೆಗೆ ಮೈಸೂರು ಸಂಸ್ಥಾನದ ಜನ ಸಂಖ್ಯೆ ತ್ರೀವ್ರವಾಗಿ ಹೆಚ್ಚಿ ೨೮,೫೪,೮೩೫ ಆಗಿತ್ತು. ನೀರಾವರಿ ಪ್ರದೇಶವಾದರೂ ಶೇಕಡಾ ೧೫ಕ್ಕೂ ಕಡಿಮೆ ಪ್ರಮಾಣದಲ್ಲಿ ಹೆಚ್ಚಿ ೧೦,೧೭.೧೯೭ ಎಕರೆ ಆಗಿತ್ತು. ಪ್ರತಿ ವ್ಯಕ್ತಿಯ ಸರಾಸರಿ ನೀರಾವರಿ ಪ್ರದೇಶ ೦.೧೨. ಎಕರೆಗೆ ಇಳಿದಿತ್ತು. ೧೯೦೨ರಲ್ಲಿ ಸುಮಾರು ೮,೦೫,೦೦೦ ಎಕರೆ ಅಚ್ಚುಕಟ್ಟು ಉಳ್ಳ ಸುಮಾರು ೨೨,೦೦೦ ಕೆರೆಗಳು ಚಾಲ್ತಿಯಲ್ಲಿ ಇದ್ದವು ಮತ್ತು ಸುಮಾರು ೭,೦೦೦ ಕೆರೆಗಳು ಒಡೆದು ಹೋಗಿದ್ದವು. ಇಷ್ಟಾದರೂ ೧೯೫೧ರ ವೇಳೆಗೆ ಕೆರೆಗಳ ಕೆಳಗೆ ನೀರಾವರಿ ಆಗುತ್ತಿದ್ದ ಪ್ರದೇಶ ೫,೩೮,೦೦೦ ಎಕೆರೆಗೆ ಇಳಿದಿತ್ತು. ಅಂದರೆ ೧೯೦೨ರಲ್ಲಿ ಚಾಲ್ತಿಯಲ್ಲಿದ್ದ ಬಹುಪಾಲು ಕೆರೆಗಳು ನಿರುಪಯುಕ್ತವಾಗಿ ಹೋಗಿದ್ದುದು ಸ್ಪಷ್ಟ.

೧೯೫೬ರ ನಂತರದ ಅವಧಿಯಲ್ಲಿನ ನೀರಾವರಿಯ ಅಭಿವೃದ್ಧಿಯನ್ನು ಗುರುತಿಸುತ್ತ, ನಾವು ಆಗಲೇ ನೋಡಿದ್ದೇವೆ, ೧೯೮೧ ರಲ್ಲಿ ನೀರಾವರಿ ಪ್ರದೇಶ ತಲಾ ೦.೦೯ ಎಕರೆ ಇತ್ತು ಎಂದು. ೧೯೬೧ರಲ್ಲಿ ನೀರಾವರಿ ಪ್ರದೇಶ ಸುಮಾರು ೨೨.೯೯ ಲಕ್ಷ ಎಕರೆ ಇದ್ದುದು ೧೯೨೧ – ೮೧ ಅವಧಿಯಲ್ಲಿ ಸುಮಾರು ಶೇ ೫೦ ರಷ್ಟು ಹೆಚ್ಚಿ ೧೯೮೧ರಲ್ಲಿ ಸುಮಾರು ೩೪.೦೨ ಲಕ್ಷ ಎಕರೆಯಷ್ಟು ಇದ್ದರೂ, ಸರಾಸರಿ ಪ್ರತಿ ವ್ಯಕ್ತಿಯ ನೀರಾವರಿ ಪ್ರದೇಶದ ಪ್ರಮಾಣ ಕುಸಿದಿತ್ತು.

ಗುರುತಿಸಲಾದ ಇನ್ನೊಂದು ಸ್ವಾರಸ್ಯಕರ ಅಂಶ ಏನೆಂದರೆ ೧೯೮೯ರಲ್ಲಿ ರಾಜ್ಯದಲ್ಲಿ ಹಾಲಿ ಇದ್ದ ೩೬೪೦೪ ಕೆರೆಗಳಿಗೆ ಸುಮಾರು ೧೬ ಲಕ್ಷ ಎಕರೆ ಅಚ್ಚುಕಟ್ಟು ದಾಖಲಾಗಿತ್ತು. ಅದರೆ ನೀರಾವರಿ ಅಗುತ್ತಿದ್ದುದು ೮ ಲಕ್ಷ ಎಕರೆ ಮಾತ್ರ.

ಕೆರೆಗಳ ಉದ್ದೇಶಿತ ಸಾಮರ್ಥ್ಯದ ಶೇಕಡಾ ೫೦ ಭಾಗ ಮಾತ್ರ ನೀರಾವರಿಗೆ ಒಳಪಟ್ಟಿತ್ತು. ಬಹುಶಃ ಹೂಳು ತುಂಬಿ ಹಾಗೂ ಒತ್ತುವರಿಗೆ ಗುರಿಯಾಗಿ ಬಹುಸಂಖ್ಯೆ ಕೆರೆಗಳು ಅನುಪಯುಕ್ತವಾಗಿ ಹೋಗಿದ್ದವು ಅಥವಾ ತಮ್ಮ ಜಲಸಂಗ್ರಹಣ ಸಾಮರ್ಥ್ಯವನ್ನು ನೀಗಿಕೊಂಡಿದ್ದವು. ನೀರಾವರಿ ಪ್ರದೇಶ ಕುರಿತ ಈ ಎಲ್ಲ ಅಂಕಿ ಅಂಶಗಳೂ ನಮ್ಮ ಕೆರೆಗಳ ಬಗೆಗಿನ ನಿರ್ಲಕ್ಷ್ಯ ಸ್ಥಿತಿಯನ್ನು ತೆರೆದು ತೋರಿಸುತ್ತದೆ. ಒಂದಾನೊಂದು ಕಾಲದಲ್ಲಿ ಕರ್ನಾಟಕ “ತುಂಬಿ ಹರಿಯುವ ಕಾಲುವೆಗಳಿಂದ ತೋಪುಗಳಿಂದ ಕಡಲಿನಂಥ ಕೆರೆಗಳಿಂದ ಸುತ್ತುವರಿದ ಪೈರು ಪಚ್ಚೆಗಳಿಂದ ಜನಸಮೂಹದಿಂದ ಭವ್ಯ ದೇವಾಲಯಗಳಿಂದ ಶ್ರೀಮಂತವಾಗಿತ್ತು”. ಇಂದು ಅದು ಹಸಿದ ಜನಕೋಟಿಯಿಂದ ತುಂಬಿದ ನಾಡಾಗಿದೆ. ಆ ಜನಸ್ತೋಮಕ್ಕೆ ಅನ್ನ ನೀಡಲು ಸಾಲದಷ್ಟು ಅತ್ಯಲ್ಪ ನೀರಾವರಿ ಪ್ರದೇಶದ ನಾಡಾಗಿದೆ.

೧೯೫೧ರ ನಂತರ ಅನೇಕ ಭಾರಿ ಜಲಾಶಯಗಳನ್ನು, ನೀರಾವರಿ ಜಾಲಗಳನ್ನು ಅನೇಕ ಮಧ್ಯಮ ಗಾತ್ರದ ಹಾಗೂ ಸಣ್ಣ ನೀರಾವರಿ ಕೆರೆಗಳನ್ನು ನಿರ್ಮಿಸಿರುವುದೇನೂ ದಿಟವೇ. ೧೯೮೯ರಲ್ಲಿ ಈ ಎಲ್ಲ ಮೂಲಗಳಿಂದ ನೀರಾವರಿಯುಗುತ್ತಿದ್ದ ಭೂಮಿ ಸುಮಾರು ೫೨.೨೯ ಲಕ್ಷ ಎಕರೆ ಇತ್ತು,. ಇದೇನೊ ದೊಡ್ಡ ಸಾಧನೆಯೆ ಸರಿ. ಆದರೆ ಜನಸಂಖ್ಯೆ ೧೯೮೧ರಲ್ಲಿ ೩೭೦.೪೩ ಲಕ್ಷ ಇತ್ತು. ನಿರಂತರ ಹೆಚ್ಚುತ್ತಿರುವ ಜನಸಂಖ್ಯೆಗೆ ಹೋಲಿಸಿದಲ್ಲಿ ನಮ್ಮ ಜಲ ಮೂಲಗಳ ಬಳಕೆ ಸಾಕಷ್ಟು ಇಲ್ಲ.

ವೇಗವಾಗಿ ಬೆಳೆಯುತ್ತಿರುವ ನಮ್ಮ ಜನಸಂಖ್ಯೆಗೆ ಕನಿಷ್ಠ ಪ್ರಮಾಣದ ಆಹಾರದ ಅಗತ್ಯವನ್ನಾದರೂ ನಾವು ಪೂರೈಸಬೇಕಾದಲ್ಲಿ ನೀರಾವರಿ ಪ್ರದೇಶದ ಇನ್ನಷ್ಟು ವಿಸ್ತರಣೆ ಹಾಗೂ ಕೃಷಿ ಉತ್ಪಾದಕತೆಯ ಮಟ್ಟದ ಹೆಚ್ಚಳ ಅತ್ಯಗತ್ಯ. ನಮ್ಮ ಕೃಷಿ ಯದ್ವಾತದ್ವಾ ಬೀಳುವ ಮಳೆಯನ್ನೇ ನೆಚ್ಚಿಕೊಂಡಿದ್ದು, ಕೆರೆ, ಕಟ್ಟೆ, ಕೊಳ, ಭಾವಿಗಳಲ್ಲಿ ಮಳೆಯ ನೀರನ್ನು ಸಂಗ್ರಹಿಸಿಡುವುದರ ಮೇಲೆಯೆ ನಿಂತದ್ದು. ನಮ್ಮ ಬಹುಪಾಲು ಭಾರಿ ನದಿಗಳಿಗೆಲ್ಲ ಆಗಲೇ ದೊಡ್ಡ ಜಲಾಶಯಗಳನ್ನು ಕಟ್ಟಲಾಗಿದೆ. ಇನ್ನು ಯಾವುದೇ ಹೊಸ ಭಾರಿ ಜಲಾಶಯ ಕಟ್ಟಲೂ ಸೂಕ್ತ ಸ್ಥಳ ಇಲ್ಲವೆ ಇಲ್ಲ ಎನ್ನಬಹುದು. ಅಂತೆಯೆ ನಮಗೆ ಉಳಿದಿರುವ ಒಂದು ಪರ್ಯಾಯ ಮಾರ್ಗ, ನಮ್ಮ ಎಲ್ಲಾ ಸಣ್ಣ ಹೊಳೆಗಳನ್ನು ಅಭಿವೃದ್ಧಿಪಡಿಸುವುದು. ಇಲ್ಲಿಯು ಸಹ ಸಾಧ್ಯವಿರುವ ಎಲ್ಲಾ ಸ್ಥಳಗಳಲ್ಲೂ ಕೆರೆಗಳನ್ನು ಕಟ್ಟಿರುವುದು ಹಾಗೂ ಹೊಸ ಕೆರೆಗಳನ್ನು ಕಟ್ಟಲು ಸ್ಥಳಗಳು ಅತ್ಯಲ್ಪವಾಗಿರುವುದು. ಈ ಪರಿಸ್ಥಿತಿ ನಮ್ಮ ಎದುರಿಗೆ ನಿಲ್ಲುತ್ತದೆ. ನಮ್ಮ ಮುಂದಿನ ಆಯ್ಕೆ ಎಂದರೆ ಮಳೆಯ ನೀರು ನಿಲ್ಲುವಂಥ ಹಳ್ಳಗಳನ್ನು ಬಳಸಿಕೊಂಡು ಚಿಕ್ಕಕೆರೆ ಅಥವಾ ಕುಂಟೆಗಳನ್ನು ನಿರ್ಮಿಸುವುದು, ಕೆರೆ ಕಟ್ಟಲು ಸಾಧ್ಯವಿಲ್ಲದ ಸಣ್ಣ ತೊರೆಗಳಿಗೆ ಮೋಟು ಅಣೆಗಳನ್ನು ಕಟ್ಟಬಹುದು. ಅವು ಅಕ್ಕಪಕ್ಕದ ನಾಡಿನಲ್ಲಿ ಜಲಮಟ್ಟವನ್ನು ಹೆಚ್ಚಿಸಲು ಸಹಾಯಕವಾಗುವಂತೆ ನೀರು ಜಿನುಗುವ ಹೊಂಡಗಳಾಗಬಹುದು. ಹೊಲಗಳಲ್ಲಿ ಕಟ್ಟಿದ ಸಣ್ಣ ಏರಿಗಳು ಮಳೆ ನೀರನ್ನು ತಡೆಹಿಡಿದು ಹೊಲದಲ್ಲಿ ತೇವ ಉಳಿಯುವಂತೆ ಮಾಡಬಲ್ಲವು. ಹೊಲದ ಬದುಗಳಲ್ಲಿ ಉದ್ದಕ್ಕೂ ಮರಗಳನ್ನು ಬೆಳೆಸಿದರೆ ಮಣ್ಣು ಕೊಚ್ಚುವುದು ತಪ್ಪುತ್ತದೆ. ಅಲ್ಲದೆ ಹೊಲಗಳಲ್ಲಿ ತೇವ ಉಳಿಯಲೂ ನೆರವಾಗುತ್ತದೆ. ಮಳೆನೀರಿನ ಸದುಪಯೋಗಕ್ಕಾಗಿ ಇವು ಹಾಗೂ ಇಂಥ ಅನೇಕ ಕ್ರಮಗಳು ನಮ್ಮ ದೇಶದಲ್ಲಿ ಬಳಕೆಯಲ್ಲಿದ್ದವು. ನಮ್ಮ ಗ್ರಾಮಸಮುದಾಯ ಪದ್ಧತಿ ಹಾಗೂ ಆ ಪದ್ಧತಿಯ ಹಿಂದಿನ ಸಮುದಾಯದ ಭಾವನೆ ಕಣ್ಮರೆಯಾಗಿ ಹೋಯಿತು. ಇದರಿಂದಾಗಿ ಮಣ್ಣಿನ ಉತ್ಪಾದಕತೆಯನ್ನು ಹೆಚ್ಚಿಸಲು ಮಳೆ ನೀರು ಸಂಗ್ರಹಾವಾಗುವಂತೆ ಹಾಗೂ ಪ್ರಕೃತಿಕ ಸಂಪನ್ಮೂಲಗಳ ಬಳಕೆಯಾಗುವಂತಹ ಕೆರೆ ಮತ್ತಿತರ ಕ್ರಮಗಳು ನಷ್ಟವಾಗಿ ಹೋಗಿವೆ.

ಒಡೆದು ಹೋಗಿ ಅಥವಾ ಹೂಳು ತುಂಬಿಕೊಂಡು ನೀರನ್ನು ಹಿಡಿದಿಡಲು ಸಾಧ್ಯವಿಲ್ಲದಿರುವ ನಮ್ಮ ಎಲ್ಲ ಕೆರೆಗಳನ್ನು ಜೀರ್ಣೋದ್ಧಾರ ಮಾಡಬೇಕು. ಇದು ನಮ್ಮ ಜಲ ಸಂಪನ್ಮೂಲಗಳ ಪುನರ್ನಿಮಾಣದಲ್ಲಿ ಮೊದಲನೆಯ ಹೆಜ್ಜೆ.

ಅಂಥ ಎಲ್ಲ ಕೆರೆಗಳನ್ನು ಅವುಗಳ ಮೂಲ ಸಾಮರ್ಥ್ಯದ ಮಟ್ಟಕ್ಕೆ ಜೀರ್ಣೋದ್ಧಾರ ಮಾಡಿದಲ್ಲಿ ಕನಿಷ್ಠ ಬಂಡವಾಳದಿಂದಲೇ ಕೆರೆಗಳ ಕೆಳಗಿನ ನೀರಾವರಿ ಪ್ರದೇಶ ವಿಸ್ತಾರಗೊಳ್ಳುತ್ತದೆ. ಮತ್ತು ನಮ್ಮ ಕೃಷಿ ಉತ್ಪಾದನೆ ಹೆಚ್ಚುತ್ತದೆ. ಕೃಷಿ ಉತ್ಪಾದನೆ ಹೆಚ್ಚುವುದು ಮಾತ್ರವಲ್ಲ ಕೆರೆಗಳಲ್ಲಿ ಮೀನುಗಾರಿಕೆಯ ಅಭಿವೃದ್ಧಿಗೂ ಸಹಾಯಕವಾಗುತ್ತದೆ. ಕೆರೆಗಳಲ್ಲಿನ ಜಲಸಂಗ್ರಹ ಹಳ್ಳಿಯ ಭಾವಿಗಳಲ್ಲಿನ ನೀರಿನ ಮಟ್ಟವನ್ನು ಉತ್ತಮವಾಗಿಸುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಕೆರೆಗಳು ಹಳ್ಳಿಗಳ ಅರ್ಥವ್ಯವಸ್ಥೆಯನ್ನೇ ಅಭಿವೃದ್ಧಿ ಮಾಡುತ್ತವೆ.

ಜಲಾನಯನ ಭೂಮಿಯ ಅಭಿವೃದ್ಧಿ :

ಆದರೆ ಅಲ್ಲೊಂದು ಇಲ್ಲೊಂದು ಕೆರೆಯ ಜೀರ್ಣೋದ್ಧಾರಕ್ಕೆ ಕೈಹಾಕುವ ಮುನ್ನ ಪ್ರತಿಯೊಂದು ಜಲಾನಯನ ಭೂಮಿಯ ವಿವರವಾದ ಸಮೀಕ್ಷೆ ಮಾಡುವುದು ಹಾಗೂ ಕೆರೆಗಳ ಜೀರ್ಣೋದ್ಧಾರ ದುರಸ್ತಿ, ಅಥವಾ ಪುನರ್ ನಿರ್ಮಾಣಕ್ಕೆ ನಿಕರವಾದ ಕಾರ್ಯಯೋಜನೆಯನ್ನು ರೂಪಿಸುವುದು ಅಗತ್ಯ. ಅಂಥ ಯೋಜನೆ ಏರಿಯ ಜೀರ್ಣೋದ್ಧಾರ ಹಾಗೂ ಕೆರೆಯ ಅಂಗಳದಿಂದ ಹೂಳು ತೆಗೆಯುವುದು ಇಷ್ಟಕ್ಕೆ ಸೀಮಿತವಾಗಬಾರದು. ಜೊತೆಗೆ ಕೆರೆಗೆ ಹೂಳನ್ನು ತುಂಬುವ ಮಣ್ಣು ಕೊಚ್ಚುವಿಕೆಯನ್ನು ಕಡಿಮೆ ಮಾಡಲು ಜಲಾನಯನ ಭೂಮಿಯ ಅಭಿವೃದ್ಧಿಗೂ ಅಷ್ಟೇ ಗಮನವೀಯಬೇಕು. ಕಣಿವೆ(ಕೊಳ್ಳೆ)ಗಳಲ್ಲಿ ತಡೆಕಟ್ಟೆಗಳು, ಗುಡ್ಡಗಳ ಇಳಿಜಾರುಗಳಲ್ಲಿ ಕಾಡು ಬೆಳೆಸುವಿಕೆ, ರಸ್ತೆ ಪಕ್ಕದಲ್ಲಿ ಹಾಗೂ ಕಣಿವೆಗಳ ದಡಗಳಲ್ಲಿ ಮರ ಬೆಳೆಸುವುದು, ಇವೆಲ್ಲ ಅಂಥ ಯೋಜನೆಯ ಕೆಲವು ಮುಖ್ಯ ಅಂಶಗಳಾಗಬೇಕು. ಮಣ್ಣನ್ನು ಹಾಗೂ ಜಲಸಂಗ್ರಹಣೆಯನ್ನು ಉತ್ತಮಗೊಳಿಸುವ ಅಂಥ ಎಲ್ಲ ಕ್ರಮಗಳು ಜಲಾನಯನ ಭೂಮಿಯ ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಬೇಕು.

ಅಚ್ಚುಕಟ್ಟು ಪ್ರದೇಶದಲ್ಲಿ ಈಗ ಇರುವ ಜಲವಿತರಣೆಯ ಪದ್ದತಿಯ ಪರಿಶೀಲನೆ, ಜಲ ಸಂಗ್ರಹಕ್ಕಾಗಿ ಸ್ಥಳಗಳನ್ನು ಗುರುತಿಸುವಿಕೆ ಹಾಗೂ ಜನತೆಯ ಸಮಾಜಿಕ ಆರ್ಥಿಕ ಅಗತ್ಯಗಳ ಅರಿವು ಇವುಗಳ ಬಗ್ಗೆಯೂ ಅಷ್ಟೇ ಗಮನ ನೀಡಬೇಕಾಗುತ್ತದೆ. ನೀರಾವರಿ ವ್ಯವಸ್ಥೆಯ ಅಭಿವೃದ್ಧಿ ಜಲಾನಯನ ಭೂಮಿಯ ಸಮಗ್ರ ಅಭಿವೃದ್ಧಿ ಕ್ರಮಗಳಲ್ಲಿ ಒಂದಾಗಬೇಕು. ಅಂಥ ಯೋಜನೆಯನ್ನು ಆರು ತಿಂಗಳ ನಿಗದಿತ ಕಾಲದಲ್ಲಿ ಕೇವಲ ಈಗಿನ ಸರ್ಕಾರಿ ಸಂಸ್ಥೆಗಳಿಂದ ತೃಪ್ತಿಕರವಾಗಿ ಮುಗಿಸಲು ಸಾಧ್ಯವಿಲ್ಲ. ಇಂಥ ಕೆಲಸಗಳಲ್ಲಿ ಪರಿಣಿತಿ ಪಡೆದಿರುವ ಇತರ ಸರ್ಕಾರೇತರ ಸಂಸ್ಥೆಗಳನ್ನು ಈ ಕೆಲಸದಲ್ಲಿ ತೊಡಗಿಸಬೇಕು. ಇಡೀ ರಾಜ್ಯವನ್ನು ಹಲವು ಅಣು ಹಾಗೂ ಬೃಹತ್ ಜಲಾನಯನ ಪ್ರದೇಶಗಳಾಗಿ ವಿಂಗಡಿಸಿ, ಪ್ರತಿಯೊಂದು ಪ್ರದೇಶದ ಬಗ್ಗೆಯೂ ಪರಿಶೀಲನೆಯನ್ನು ನಡೆಸಬಹುದು. ಅಂಥದು ಕಾಲಮಿತಿಯಲ್ಲಿ ನಡೆಯಬೇಕಾದ ಕಾರ್ಯ. ಅದರಲ್ಲಿ ತಜ್ಞರ ಸಹಯೋಗ ಅಗತ್ಯ. ಆದ್ದರಿಂದ ಅದಕ್ಕೆ ಸಾಕಷ್ಟು ಹಣ ಒದಗಿಸಬೇಕಾಗುತ್ತದೆ.

ಅಂಥ ಪರಿಶೀಲನಾ ಕಾರ್ಯವನ್ನು ಈಗ ನಾನಾ ಸರ್ಕಾರೇತರ ಸಂಸ್ಥೆಗಳು ಮಿತ ಪ್ರಮಾಣದಲ್ಲಿ ಮಾಡುತ್ತಿವೆ. ಅಲ್ಲದೆ ಅವುಗಳಲ್ಲಿ ಬಹುಪಾಲು ಪ್ರಯತ್ನಗಳಲ್ಲಿ ಜಲಾನಯನ ಭೂಮಿಯ ಸಮಗ್ರ ಅಭಿವೃದ್ಧಿಯ ದೃಷ್ಟಿ ಇಲ್ಲ. ಕೆಲವು ಪ್ರಯತ್ನಗಳ ಗುರಿ ಕೆರೆಗಳ ಹೂಳು ತೆಗೆಯುವುದು. ಕೆಲವಕ್ಕೆ ರೇಷ್ಮೆ ಗಾರಿಕೆಯ ಅಭಿವೃದ್ಧಿಯ ಉದ್ದೇಶ. ಇನ್ನು ಕೆಲವಕ್ಕೆ ಗ್ರಾಮೋದ್ಯೋಗ ಸ್ಥಾಪನೆಯ ಗುರಿ. ಗ್ರಾಮಾಭಿವೃದ್ಧಿಯ ಈ ಎಲ್ಲಾ ಅಂಶಗಳನ್ನೂ ಗ್ರಾಮದ ಪೂರ್ಣ ಅಭಿವೃದ್ಧಿಯಲ್ಲಿ ಏಕೀಕೃತ ಗೊಳಿಸಬೇಕು. ಅಲ್ಲದೆ ಈಗ ಅಂಥ ಎಲ್ಲ ಅಭಿವೃದ್ಧಿ ಯೋಜನೆಗಳನ್ನು ಒಂದು ಹಳ್ಳಿ ಅಥವಾ ಒಂದು ತಾಲ್ಲೂಕನ್ನು ಘಟಕವಾಗಿ ಇಟ್ಟುಕೊಂಡು ರೂಪಿಸಲಾಗುತ್ತಿದೆ.

ನಮ್ಮ ಬೇಸಾಯದ ಉತ್ಪತ್ತಿ ಹೆಚ್ಚಬೇಕಾದರೆ ಅಂಥ ಎಲ್ಲ ಯೋಜನೆಗಳಿಗೂ ಜಲಾನಯನ ಪ್ರದೇಶ ಘಟಕವಾಗಬೇಕು. ಏಕೆಂದರೆ ನಮ್ಮ ಬೇಸಾಯದ ಅಭಿವೃದ್ಧಿಗೆ ಜಲಮೂಲವೇ ಪ್ರಥಮ ಪರಿಕರ. ಆದ್ದರಿಂದಲೇ ಪ್ರತಿಯೊಂದು ಜಲಾನಯನ ಪ್ರದೇಶದ ಅಭಿವೃದ್ಧಿಗೂ ಯೋಜನೆ ಅಗತ್ಯವಾಗಿದೆ. ಜಲಾನಯನ ಪ್ರದೇಶವನ್ನು ಘಟಕವಾಗಿ ಮಾಡಿಕೊಳ್ಳುವ ಈ ತತ್ವದ ಮೇಲೆಯೆ ಪ್ರಾಚೀನ ಕಾಲದಲ್ಲಿ ದಕ್ಷಿಣ ಭಾರತದಲ್ಲಿ “ನಾಡು”ಗಳನ್ನು ರೂಪಿಸಿರುತ್ತಿದ್ದುದು.

ಪ್ರತಿಯೊಂದು ಅಣು ಹಾಗೂ ಬೃಹತ್ ಜಲಾನಯನ ಪ್ರದೇಶಕ್ಕೂ ಯೋಜನೆ ಸಿದ್ಧವಾದ ಮೇಲೆ ಇಡೀ ರಾಜ್ಯಕ್ಕೆ ಒಂದು ಸಮಗ್ರ ಯೋಜನೆಯನ್ನು ನಿಷ್ಕರ್ಪಿಸುವುದು ಸಾಧ್ಯ. ಆಗ ಪ್ರತಿಯೊಂದು ಜಲಾನಯನ ಪ್ರದೇಶದ ಅಭಿವೃದ್ಧಿಯನ್ನು ಜಿಲ್ಲಾ ಪರಿಷತ್ತಿಗೆ ವಹಿಸಬಹುದು. ಯಾವ ಮಂಡಲಪಂಚಾಯಿತಿಯ ವ್ಯಾಪ್ತಿಯಲ್ಲಿ ಆ ಯೋಜನೆ ಬರುವುದೋ ಆ ಪಂಚಾಯಿತಿಯ ಮೂಲಕ ಯೋಜನೆಯನ್ನು ಕಾರ್ಯಗತ ಮಾಡಬಹುದು. ೧೯೮೩ರ ಕರ್ನಾಟಕ ಪಂಚಾಯಿತಿ ಶಾಸನದಲ್ಲಿ ಒಂದು ಜಿಲ್ಲೆಯ ಮೇರೆಯನ್ನು ಮೀರದಷ್ಟು ಅಚ್ಚುಕಟ್ಟು ಉಳ್ಳ ಮಧ್ಯಮ ಹಾಗೂ ಸಣ್ಣ ನೀರಾವರಿ ಕಾಮಗಾರಿಗಳ ನಿರ್ಮಾಣ ಜೀರ್ಣೋದ್ಧಾರ ಹಾಗೂ ಸಂರಕ್ಷೆಗಳು ಜಿಲ್ಲಾ ಪರಿಷತ್ತಿನ ಒಂದು ಕೆಲಸ ಎಂದು ಅವಕಾಶ ಕಲ್ಪಿಸಲಾಗಿದೆ. ಗೃಹ ಬಳಕೆಗಾಗಿ ನೀರನ್ನು ಒದಗಿಸಲು ಭಾವಿ, ಕೊಳ ಹಾಗೂ ಕೆರೆಗಳನ್ನು ನಿರ್ಮಿಸುವುದು, ದುರಸ್ತಿ ಮಾಡುವುದು ಹಾಗೂ ಸಂರಕ್ಷಿಸುವುದನ್ನು ಮಂಡಲ ಪಂಚಾಯಿತಿಗಳಿಗೆ ವಹಿಸಲಾಗಿದೆ. ನೀರಾವರಿ ಕಾಮಗಾರಿಗಳ ಬಗ್ಗೆ ಆ ರೀತಿಯ ಜವಾಬ್ದಾರಿಯನ್ನು ಮಂಡಲಗಳಿಗೆ ವಹಿಸಿಲ್ಲ. ಮಂಡಲಗಳ ವ್ಯಾಪ್ತಿಯನ್ನು ಮೀರದಷ್ಟು ಅಚ್ಚುಕಟ್ಟು ಉಳ್ಳ ಎಲ್ಲ ಸಣ್ಣ ನೀರಾವರಿ ಸಂರಕ್ಷಣೆಯ ಹೊಣೆಯನ್ನು ಮಂಡಲಗಳಿಗೆ ವಹಿಸುವುದು ಅಪೇಕ್ಷೆಣೀಯ. ಅಂಥ ಕ್ರಮ ಪರಿಣಾಮಕಾರಿ ವಿಕೇಂದ್ರಿಕರಣವನ್ನು ಉಂಟು ಮಾಡುವುದಲ್ಲದೆ ಕೃಷಿ ಅಭಿವೃದ್ಧಿಯಲ್ಲಿ ಮಂಡಲಗಳು ಚುರುಕಾಗಿ ಪಾಲುಗೊಳ್ಳಲು ಇಂಬುಗೊಡುತ್ತದೆ.

ಈ ಎಲ್ಲ ಕೆಲಸಗಳನ್ನು ಮಂಡಲ ಪಂಚಾಯಿತಿ ಮೂಲಕವೇ ಕಾರ್ಯಗತ ಮಾಡುವುದು ಅಪೇಕ್ಷಣೀಯ ಎಂದು ನೋಡಿದ್ದಾಯಿತು. ಇನ್ನು ಮುಂದಿನ ಮುಖ್ಯ ಕೆಲಸ ಅದಕ್ಕೆ ಸಂಪನ್ಮೂಲವನ್ನು ಕಂಡುಹಿಡಿಯುವುದು. ಅಂಥ ಕೆಲಸಗಳಿಗೆ ವಿಶ್ವಬ್ಯಾಂಕ್ ಮುಂತಾದ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಸಾಲದ ನೆರೆವನ್ನು ಪಡೆದುಕೊಳ್ಳಲು ನಮ್ಮ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಾಮಾನ್ಯವಾಗಿ ಹಾತೊರೆಯುತ್ತವೆ. ಅಂಥ ನೆರವಿನಿಂದ ಅತ್ಯಗತ್ಯವಾದ ಹಾಗೂ ಕೊರೆತೆಯಿರುವ ವಿದೇಶಿ ವಿನಿಮಯ ನಮಗೆ ಲಭಿಸಬಹುದು. ಅದರೂ ನಮ್ಮದೇ ಸಂಪನ್ಮೂಲಗಳನ್ನು ಆಧರಿಸಿ ನಮ್ಮ ಯೋಜನೆಗಳನ್ನು ರೂಪಿಸುವುದು ಅತ್ಯಂತ ಅಪೇಕ್ಷಣೀಯ. ಏಕೆಂದರೆ ಸಾಲಕೊಡುವ ಸಂಸ್ಥೆಗಳು ಸಾಮಾನ್ಯವಾಗಿ ನಿರ್ಮಾಣ ಹಾಗೂ ನಿರ್ವಹಣೆಗೆ ತಮ್ಮದೇ ಆದ ಕಟ್ಟುಪಾಡುಗಳನ್ನು ವಿಧಿಸುತ್ತವೆ. ಅವು ನಮ್ಮ ಸ್ಥಳೀಯ ಪರಿಸ್ಥಿತಿಗಳಿಗೆ ಹೊಂದದೇ ಇರಬಹುದು.

ಆದ್ದರಿಂದ ಬ್ರಿಟಿಷರು ಬರುವುದಕ್ಕಿಂದ ಮೊದಲು ನಮ್ಮ ದೇಶದಲ್ಲಿ ಯಾವ ವ್ಯವಸ್ಥೆ ಇತ್ತೊ ಅದನ್ನು ಸೂಕ್ತ ಮಾರ್ಪಾಡುಗಳೊಂದಿಗೆ ಅನುಸರಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬಹುದು.

ನಮ್ಮ ಕೆರೆ ವ್ಯವಸ್ಥೆಯ ಅಭಿವೃದ್ಧಿ :

ನಮ್ಮ ದೇಶದಲ್ಲಿ ಬ್ರಿಟಿಷರ ಆಳ್ವಿಕೆ ಜಾರಿಗೆ ಬರುವುದಕ್ಕೆ ಮೊದಲು ಹತ್ತೊಂಬತ್ತನೆಯ ಶತಮಾನದಲ್ಲಿ ನಮ್ಮ ಕೆರೆ ವ್ಯವಸ್ಥೆಯ ನಿರ್ಮಾಣ ಹಾಗೂ ನಿರ್ವಹಣೆ ಸ್ಥಳೀಯ ಗ್ರಾಮ ಸಮುದಾಯದ ಕೈಯಲ್ಲಿ ಇತ್ತು ಎನ್ನುವುದನ್ನು ನಾವು ನೋಡಿದ್ದೇವೆ. ವಿಶೇಷ ಸಂದರ್ಭಗಳಲ್ಲಿ ಮಾತ್ರ – ಭಾರಿ ಕೆರೆಗಳು ಅಥವಾ ದೊಡ್ಡ ನದಿಗಳ ಅಣೆಕಟ್ಟುಗಳು ಮುಂತಾದ ಭಾರಿ ಹಣಹೂಡಿಕೆಯ ಸಂದರ್ಭಗಳಲ್ಲಿ ಮಾತ್ರ ? ದೊರೆ ಅಥವಾ ರಾಜ ಪ್ರವೇಶಿಸುತ್ತಿದ್ದ. ಬ್ರಿಟಿಷ್ ಪ್ರಭುತ್ವ ತನ್ನ ಸಂಬಳದ ಸಿಬ್ಬಂದಿ ಮೂಲಕ ಗ್ರಾಮಾಡಳಿತವನ್ನು ತಾನೇ ಕೈವಶ ಮಾಡಿಕೊಂಡಿತ್ತು. ಮತ್ತು ಗ್ರಾಮ ಸೇವಕರು ಹಾಗೂ ಗ್ರಾಮ ಸಮುದಾಯಗಳ ನಡುವಣ ಸಾಂಪ್ರದಾಯಿಕ ಸಂಬಂಧಗಳನ್ನು ಬ್ರಿಟಿಷರು ಕಡಿದು ಹಾಕಿದರು. ಬಹುತೇಕ ಈ ಕಾರಣಗಳಿಂದಾಗಿ ಸ್ಥಳೀಯ ಗ್ರಾಮಸಮುದಾಯವೇ ನೀರಾವರಿಯನ್ನು ನಿರ್ವಹಿಸುತ್ತಿದ್ದ ಪದ್ಧತಿ ಮಾಯವಾಯಿತು.(ಸ್ವಾತಂತ್ರ್ಯ ಬಂದ ಮೇಲೆಯೂ ಸರ್ಕಾರ ತನ್ನ ನೌಕರ ವರ್ಗಾ ವರ್ಗೀಯ ನೀತಿಯಲ್ಲಿ ಬ್ರಿಟಿಷರ ಪದ್ಧತಿಯನ್ನೆ ಮುಂದುವರಿಸುತ್ತಿರುವುದು ಗಮನಾರ್ಹ)

ಕೆರೆಗಳ ನಿರ್ಮಾಣ :

ಬ್ರಿಟಿಷರಿಗೆ ಪೂರ್ವಕಾಲದಲ್ಲಿ ಹೊಸ ಕೆರೆಯ ನಿರ್ಮಾಣ ಅಥವಾ ಹಳೆಯದರ ಜೀರ್ಣೋದ್ಧಾರ ಒಂದು ಪುಣ್ಯದ ಕೆಲಸ ಎನಿಸಿಕೊಂಡಿತ್ತು. ಕೆರೆ ಕಟ್ಟಿಸುತ್ತಿದ್ದವನು ಸಾಮಾನ್ಯವಾಗಿ ಸ್ಥಳೀಯ ನಾಯಕ, ಶ್ರೀಮಂತ, ವರ್ತಕ ಇಲ್ಲವೆ ಸ್ಥಳೀಯ ಉದ್ಯಮಿ. ಬಹುಪಾಲು ಸಂದರ್ಭಗಳಲ್ಲಿ ನಿರ್ಮಾತೃವಿಗೆ ಕೆರೆ ಕೆಳಗೆ ಒಂದಷ್ಟು ಭೂಮಿಯನ್ನು ಕೊಡಲಾಗುತ್ತಿತ್ತು. ಕೆರೆಯ ಸಂರಕ್ಷಣೆ ಅವನ ಕೆಲಸವಾಗಿತ್ತು. ಅಂಥ ದಾನ ಸಾಮಾನ್ಯವಾಗಿ ವಂಶಪಾರಂಪರ್ಯವಾಗಿತ್ತು. ಆತ ರಿಯಾಯಿತಿದರದ ಕಂದಾಯದ ಮೇಲೆ ಭೂಮಿಯಲ್ಲಿ ಸಾಗುವಳಿ ಮಾಡಲು ಅವಕಾಶವಿತ್ತು. ಪ್ರಾಯಶಃ ಆ ಕಾಲದಲ್ಲಿ ಊರೊಟ್ಟಿನ ಆಸ್ತಿಯಾದ ಒಂದಷ್ಟು ಕೃಷಿಯೋಗ್ಯ ಭೂಮಿ ಇರುತ್ತಿತ್ತು. ಇಂದು ಊರೊಟ್ಟಿನ ಆಸ್ತಿಯಾಗಿ ಲಭ್ಯವಿರುವ ಕೃಷಿಯೋಗ್ಯ ಭೂಮಿ ಇಲ್ಲವೇ ಇಲ್ಲ ಎನ್ನಬಹುದು.

ಕೆರೆಯ ನಿರ್ಮಾತೃ ಸಮುದಾಯಕ್ಕೆ ಮಾಡಿದ ಸೇವೆಯನ್ನು ಪರಿಗಣಿಸಿ, ಆತನಿಗೆ ಕೆರೆ ಕೆಳಗೆ ಭೂಮಿಯನ್ನು ದಾನಕೊಡುವುದು ಹಾಗೂ ಕೆರೆಯ ಸಂರಕ್ಷಣೆಗೆ ಆತನನ್ನು ಜವಾಬ್ದಾರನನ್ನಾಗಿ ಮಾಡುವುದು – ಈ ಪ್ರಾಚೀನ ಪದ್ಧತಿ ಆದರ್ಶಪ್ರಾಯವಾಗಿತ್ತು. ಹಿಂದೆ ಶತಮಾನಗಳ ಕಾಲ ಚೆನ್ನಾಗಿ ನಡೆಯಿತು. ಕೆರೆಯ ರಚನೆಯಲ್ಲಿ ಹಾಗೂ ಸಂರಕ್ಷಣೆಯಲ್ಲಿ ಗ್ರಾಮಸಮುದಾಯವನ್ನು ಒಳಗೊಳಿಸಲಾಗುತ್ತಿತ್ತು. ಕೆರೆ ಕಟ್ಟಿಸಿದವನಿಗೆ ಸಮುದಾಯದಿಂದ ಕೆರೆಯ ಕೆಳಗೆ ಭೂಮಿ ದಾನವಾಗಿ ದೊರೆಯುತ್ತಿತ್ತು. ಆತ ಕೆರೆಯ ಫಲಾನುಭವಿ ಆಗುತ್ತಿದ್ದ. ಆತ ಗ್ರಾಮ ಸಮುದಾಯದ ಭಾಗವೂ ಆಗಿದ್ದು, ತನ್ನ ಹಿತದೃಷ್ಟಿಯಿಂದಲೇ ಕೆರೆಯ ಸುಸ್ಥಿತಿಯಲ್ಲಿ ಆಸಕ್ತನಾಗಿರುತ್ತಿದ್ದ. ಅದೇ ಪದ್ಧತಿಯನ್ನು ನಮ್ಮ ಇಂದಿನ ಸಮಾಜಿಕ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯವಾದ ಮಾರ್ಪಾಟುಗಳೊಂದಿಗೆ ಮತ್ತೆ ನಾವು ಜಾರಿಗೆ ತರಲು ಸಾಧ್ಯವೇ?

ಹಿಂದೆ ಇದ್ದಂತೆಯೆ ಈಗಲೂ ಕೆರೆಯ ನಿರ್ಮಾಣ ಅಥವಾ ಪುನರ್ ನಿರ್ಮಾಣವನ್ನು ಸ್ಥಳೀಯ ಉದ್ಯಮಶೀಲನಿಗೆ ವಹಿಸಿಕೊಡಬಹುದು. ಅದಕ್ಕಾಗಿ ಆತನಿಗೆ ಕೆರೆಯ ಕೆಳಗೆ ಭೂಮಿಯನ್ನು ಕೊಡಬಹುದು. ಒಂದು ವೇಳೆ ಸಾಮೂಹಿಕ ಅಥವಾ ಸರ್ಕಾರಿ ಭೂಮಿ ಇಲ್ಲವಾದರೆ, ನೀರಾವರಿಯಿಂದ ಲಾಭ ಪಡೆಯುವ ಹಿಡುವಳಿದಾರರು ತಮ್ಮ ಭೂಮಿಗೆ ಪಡೆದ ನೀರಾವರಿಯ ಲಾಭಕ್ಕೆ ಪ್ರತಿಯಾಗಿ ತಮ್ಮ ಭೂಮಿಯಲ್ಲಿ ಸುಮಾರು ಮೂರನೆಯ ಒಂದು ಪಾಲನ್ನು ಬಿಟ್ಟುಕೊಡುವಂತೆ ತಾಕೀತು ಮಾಡಬಹುದು. ಅವರು ಹೀಗೆ ಭೂಮಿಯನ್ನು ಬಿಟ್ಟುಕೊಟ್ಟಿದ್ದಕ್ಕೆ ಅವರಿಗೆ ಐದೋ, ಹತ್ತೊ ವರ್ಷ ನೀರು ಕಂದಾಯದಲ್ಲಿ ರಿಯಾಯಿತಿ ತೋರಿಸಬಹುದು. ಹೆಚ್ಚು ಭೂಮಿ, ಉದಾಹರಣೆಗೆ ಹತ್ತು ಎಕರೆಗೆ ಹೆಚ್ಚು ಭೂಮಿ ಇರುವವರಿಂದ ಅಂಥ ಭೂಮಿಯನ್ನು ಪಡೆಯಬಹುದು. ಹಳೆಯ ಕೆರೆಯ ಪುನರ್ ನಿರ್ಮಾಣದಲ್ಲಿ ಹಾಲಿ ಇರುವ ನಾಲಾ ವ್ಯವಸ್ಥೆಯನ್ನು ವಿಸ್ತರಿಸಬಹುದು ಮತ್ತು ಅದರಿಂದ ಹೊಸದಾಗಿ ನೀರಾವರಿಗೆ ಬರುವ ಭೂಮಿಯ ಬಗ್ಗೆ ಅದೇ ವಿಧಾನವನ್ನು ಅನುಸರಿಸಬಹುದು.

ಕೃಷ್ಣರಾಜಸಾಗರ ಯೋಜನೆಯಲ್ಲಿ ಜಲಾಶಯದಲ್ಲಿ ಮುಳುಗಡೆ ಆದ ಜಮೀನಿನ ಮಾಲಿಕ ಕುಟುಂಬಳಿಗೆ ಭೂಮಿ ಒದಗಿಸಲು, ಹಿಡುವಳಿದಾರರಿಂದ ಭೂಮಿ ಪಡೆಯುವ ಇದೇ ಕ್ರಮವನ್ನು ಯಶಸ್ವಿಯಾಗಿ ಅನುಸರಿಸಲಾಯಿತು.

ಇಂಥ ಸಂದರ್ಭಗಳಲ್ಲೆಲ್ಲ ಕೆರೆಯ ನಿರ್ಮಾತೃವಿಗೆ ಕೊಡಬಹುದಾದ ಭೂಮಿ ಕೆರೆ ಕೆಳಗಿನ ಅಚ್ಚುಕಟ್ಟು ಪ್ರದೇಶದ ಹತ್ತನೆಯ ಒಂದರಷ್ಟು ಇರಬಹುದು.ಹಾಗೆ ಕೊಡಲಾದ ಭೂಮಿಗೆ ನಿರ್ದಿಷ್ಟ ಅವಧಿಗೆ ರಿಯಾಯಿತಿ ದರದಲ್ಲಿ ನೀರು ಕಂದಾಯ ವಿಧಿಸಬಹುದು.

ಕೆರೆಗಳಿಗೆ ಭೂಮಿಯನ್ನು ಕೊಡುವುದಕ್ಕೆ ಪರ್ಯಾಯವಾಗಿ ಹೀಗೂ ಮಾಡಬಹುದು. ಕೆರೆಯ ಸಂರಕ್ಷಣೆಯ ಹೊಣೆಯನ್ನು ಕೆರೆಯ ನಿರ್ಮಾತೃವಿಗೆ ವಹಿಸುವುದು. ಆತ ಕೆರೆಯ ಹೊರಗಂಡಿಯಲ್ಲಿ ನೀರನ್ನು ಅಳತೆ ಪ್ರಕಾರ ಹೊರಬಿಟ್ಟು ಅದಕ್ಕೆ ಒಂದಿಷ್ಟು ಶುಲ್ಕ ವಸೂಲಿಮಾಡಿಕೊಳ್ಳಲು ಆತನಿಗೆ ಅನುಮತಿ ಕೊಡುವುದು. ಆ ಶುಲ್ಕ ಕೆರೆಯ ನಿರ್ಮಾಣ ಸಂರಕ್ಷಣೆ ಇತ್ಯಾದಿಗಳ ವೆಚ್ಚವನ್ನು ಆಧರಿಸಿ ಜಿಲ್ಲಾ ಪರಿಷತ್ತು ಗೊತ್ತುಮಾಡುವ ಪ್ರಮಾಣದಲ್ಲಿರಬೇಕು. ಸುಮಾರು ೨೦ ಅಥವಾ ೨೫ ವರ್ಷಗಳ ನಂತರ ನಿರ್ಮಾತೃ ಕೆರೆ ಹಾಗೂ ಅದರ ನೀರಿನ ಮೇಲಿನ ಈ ಹಕ್ಕನ್ನು ಬಿಟ್ಟುಕೊಡಬೇಕು ಮತ್ತು ಅದು ಮಂಡಲ ಪಂಚಾಯಿತಿಯ ಸ್ವತ್ತಾಗಬೇಕು.

ನಮ್ಮ ಏಕಮಾತ್ರ ಉದ್ದೇಶವೇ ಗ್ರಾಮ ಸಮುದಾಯ ಭಾವನೆಯನ್ನು ಸೃಷ್ಟಿಸುವುದು, ಮತ್ತೆ ಸ್ಥಾಪಿಸುವುದು. ಆದ್ದರಿಂದ ಕೆರೆಯ ನಿರ್ಮಾಣ ಅಥವಾ ಪುನರ್ ನಿರ್ಮಾಣ ಕಾರ್ಯವನ್ನು ಮಂಡಲ ಪಂಚಾಯಿತಿಗೆ ಇಲ್ಲವೆ ಸ್ಥಳೀಯ ಸಂಸ್ಥೆಗೆ ವಹಿಸಿಕೊಡುವುದು ಅಪೇಕ್ಷಣೀಯ ೧೦೦೦ ಎಕರೆ ಅಥವಾ ಕಡಿಮೆ ಕೃಷಿಯೋಗ್ಯ ಅಚ್ಚುಕಟ್ಟು ಪ್ರದೇಶ ಉಳ್ಳ ಕಾಮಗಾರಿಗಳನ್ನು ಮಂಡಲ ಪಂಚಾಯಿತಿ ಕಾರ್ಯಗತಗೊಳಿಸಬಹುದು.

ದೊಡ್ಡ ಕಾಮಗಾರಿಗಳನ್ನು ಜಿಲ್ಲಾ ಪರಿಷತ್ತು ಕಾರ್ಯಗತಗೊಳಿಸಬಹುದು. ಈ ಸ್ಥಳೀಯ ಸಂಸ್ಥೆಗಳು ವಾಣಿಜ್ಯ ಬ್ಯಾಂಕುಗಳಿಂದ ಅಗತ್ಯವಾದ ಹಣವನ್ನು ಪಡೆದು ಕೆಲಸಗಳನ್ನು ನಿರ್ವಹಿಸಬಹುದು. ಅದಕ್ಕೆ ರಾಜ್ಯ ಸರ್ಕಾರ ಜಾಮೀನು ನೀಡಬಹುದು. ಕೆರೆ ಕಟ್ಟಿದ ೧೦ ರಿಂದ ೧೫ ವರ್ಷಗಳ ಅವಧಿಯಲ್ಲಿ ಫಲಾನುಭವಿಗಳಿಂದ ಅಗತ್ಯವಾದ ನೀರು ಕಂದಾಯವನ್ನು ವಸೂಲು ಮಾಡಿ ಸಾಲವನ್ನು ಹಿಂದಿರುಗಿಸಬಹುದು. ತಮ್ಮ ಆಸ್ತಿಯ ರಚನೆಯಲ್ಲಿ ಜನಸಮುದಾಯ ಪಾಲುಗೊಳ್ಳುವ ಭಾವನೆಯನ್ನು ಸೃಷ್ಟಿಸುವುದು ಅಗತ್ಯ. ಆದ್ದರಿಂದ ವೆಚ್ಚದ ಶೇಕಡಾ ಹತ್ತರಷ್ಟನ್ನು ಇಡೀ ಗ್ರಾಮ ಸಮುದಾಯವೇ ವಸ್ತು ರೂಪದಲ್ಲಿಯೋ ಹಣದ ರೂಪದಲ್ಲಿಯೋ ಕಾಣಿಕೆ ನೀಡಬೇಕು ಎಂಬುದು ನಮ್ಮ ಸಲಹೆ. ಇನ್ನೊಂದು ಶೇಕಡಾ ೧೦ ಭಾಗವನ್ನು ಪ್ರತಿಯೊಂದು ಕುಟುಂಬವೂ ಸ್ವಯಂ ಪ್ರೇರಿತವಾದ ಸೇವಾರೂಪದಲ್ಲಿ ಸಲ್ಲಿಸಬಹುದು. ಊಳಿದ ಶೇಕಡಾ ೮೦ರಲ್ಲಿ ಅರ್ಧ ಭಾಗ ರಾಜ್ಯ ಸರ್ಕಾರದಿಂದ ಬರಬೇಕು. ಇನ್ನು ಅರ್ಧ ಭಾಗವನ್ನು ಬ್ಯಾಂಕಿನಿಂದ ಸಾಲವಾಗಿ ಪಡೆಯಬೇಕು. ಒಂದು ನೀರಾವರಿ ಕಾರ್ಯದ ವೆಚ್ಚಕ್ಕೆ ಫಲಾನುಭವಿಗಳೇ ಕಾಣಿಕೆ ನೀಡುವ ಅಂಥ ವ್ಯವಸ್ಥೆಯನ್ನು ಮಹಾರಾಷ್ಟ್ರದ ಪುರಂದರ ತಾಲ್ಲೂಕಿನ ಪಾನಿ ಪಂಚಾಯಿತಿ ಚಳುವಳಿಯಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ನೀರಾವರಿ ಕಾರ್ಯವನ್ನು ಕೈಗೆತ್ತಿಕೊಳ್ಳಲು ಫಲಾನುಭವಿಗಳು ಕಾಣಿಕೆ ನೀಡುವು ಪದ್ಧತಿ ಮೈಸೂರು ಸಂಸ್ಥಾನದಲ್ಲಿ ಹಿಂದೆ ಇತ್ತು.

ನಮ್ಮ ಕೆರೆಗಳ ಪುನರ್‌ನಿರ್ಮಾಣದ ಮುಖ್ಯ ಕೆಲಸವೆಂದರೆ ತುಂಬಿಕೊಂಡಿರುವ ಹೂಳನ್ನು ಕೆರೆಯಿಂದ ತೆಗೆದುಹಾಕುವುದು. ಹೂಳನ್ನೇ ಹಾಲಿ ಏರಿಯನ್ನು ಬಲಪಡಿಸಲು ಬಳಸಬಹುದು, ನಯವಾದ ಹೂಳನ್ನು ಗೊಬ್ಬರವಾಗಿ ಉಪಯೋಗಿಸಬಹುದು. ಒಳ್ಳೆಯ ಜೇಡಿಮಣ್ಣನ್ನು ಇಟ್ಟಿಗೆ ಹೆಂಚುಗಳನ್ನು ಮಾಡಲು ಉಪಯೋಗಿಸಬಹುದು. ಬಹುಪಾಲು ಹೂಳಿನಿಂದ ಹಳ್ಳಿಯಲ್ಲಿನ ತಗ್ಗು ಪ್ರದೇಶಗಳನ್ನು ಮುಚ್ಚಿ ಮಟ್ಟ ಮಾಡಬಹುದು. ಈ ಎಲ್ಲ ಕೆಲಸಗಳಿಂದ ಕೂಡಿ ಬರುವ ಹಣವನ್ನು ಪಂಚಾಯಿತಿಗಳು ತಮ್ಮ ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಬಹುದು.

ನಮ್ಮ ಕೆರೆಗಳ ಸಂರಕ್ಷಣೆ ಹಾಗೂ ನಿರ್ವಹಣೆ :

ಪುನರ್ ನಿರ್ಮಾಣ ಆದ ಮೇಲೆ ಮುಂದಿನ ಘಟ್ಟವೆಂದರೆ ಕೆರೆಯ ಸುಸ್ಥಿಯ ಸಂರಕ್ಷಣೆ. ಹಿಂದೆ ಇದ್ದ ಹಾಗೆಯೆ, ಕೆರೆ ಕೆಳಗೆ ಭೂಮಿದಾನ ಪಡೆದು, ಕೆರೆಯ ನಿರ್ಮಾತೃವನ್ನೇ ಕೆರೆ ಹಾಗೂ ಅದರ ಕೆಳಗಿನ ಕಾಲುವೆ ವ್ಯವಸ್ಥೆಯ ಸಂರಕ್ಷಣೆಗೆ ಜವಾಬ್ದಾರನನ್ನಾಗಿ ಮಾಡಬಹುದು. ಈ ಸಂರಕ್ಷಣಾ ಕಾರ್ಯಕ್ಕಾಗಿ ಆತನಿಗೆ ಅಚ್ಚುಕಟ್ಟು ಪ್ರದೇಶದ ಉತ್ಪನ್ನದ ಹತ್ತನೆಯ ಒಂದು ಪಾಲನ್ನು ಕೊಡಬಹುದು. ಅಂಥ ಫಲಾನುಭವಿಗೆ ಕೆರೆಯ ಸುಸ್ಥಿತಿ ಬಗ್ಗೆ ಕಾಳಜಿ ಇರುತ್ತದೆ. ಅದರಿಂದ ಈ ವ್ಯವಸ್ಥೆಯಿಂದ ಆತ ಕೆರೆಯನ್ನು ಚೆನ್ನಾಗಿ ಸಂರಕ್ಷಿಸುವದೇನೂ ಖಂಡಿತವೇ. ಅದರೂ ನಮ್ಮ ಇಂದಿನ ಗ್ರಾಮ ಸಮಾಜದ ಛಿದ್ರಗಳಲ್ಲಿ, ಜಾತಿ ಗುಂಪುಗಳಲ್ಲಿ ಸರ್ವಸಾಮಾನ್ಯವಾದ ಸಾಮುದಾಯಿಕ ಹಿತಾಸಕ್ತಿಯನ್ನು ಬೆಳಸುವುದಕ್ಕೆ ಈ ಕ್ರಮ ಪರಿಣಾಮಕಾರಿಯಾಗಲಾರದು.

ಅಲ್ಲದೆ ಕೆರೆಯ ಸಂರಕ್ಷಣೆ, ಸುಸ್ಥಿತಿ ಮಾತ್ರವಲ್ಲ, ಅದರ ನೀರಿನ ಸೂಕ್ತ ನಿರ್ವಹಣೆಯೂ ಅಷ್ಟೆ ಮುಖ್ಯವಾದುದು. ಜಲನಿರ್ವಹಣೆಯಲ್ಲಿ ಕೆರೆ ಕೆಳಗಿನ ಹಿಡುವಳಿದಾರರೆಲ್ಲರೂ ಸೇರಬೇಕಾದುದು ಅವಶ್ಯ. ಅದು ಒಂದು ಸಹಕಾರಿ ಪ್ರಯತ್ನವಾಗಬೇಕು. ನೀರಿನ ಹಂಚಿಕೆ ನಿಷ್ಪಕ್ಷಪಾತವಾಗಿ ವಿಶ್ವಸನೀಯವಾಗಿ ಇರುವಂತೆ ಎಲ್ಲ ರೈತರಿಗೂ ಒಂದು ಸಾಮಾನ್ಯ ನಿಲುವು ಇರಬೇಕಾಗುತ್ತದೆ. ಬೆಳೆಯ ಆಯ್ಕೆ, ಬಿತ್ತನೆ ಕಾಲ, ನೀರು ಒದಗುವುದನ್ನು ಅನುಸರಿಸಿ ನೀರಿನ್ನು ಬಿಡುವ ಕಾರ್ಯಕ್ರಮ, ಇತ್ಯಾದಿಗಳಲ್ಲಿ ಸಾಮಾನ್ಯ ನಿಲುವು ಅಗತ್ಯ.

ಹಾಗೆ ಪಾಲುದಾರಿ ನಿರ್ವಹಣೆ ನಮ್ಮ ದೇಶದಲ್ಲಿ ಬಹುಕಾಲದಿಂದಲೂ ಜಾರಿಯಲ್ಲಿದೆ. ದಾಮಾಶಿಯಂಥ ವಿಶಿಷ್ಟವಾದ ಪದ್ಧತಿ ಕೋಲಾರ ಜಿಲ್ಲೆಯಲ್ಲಿ ಇಂದಿಗೂ ಇದೆ. ಇದನ್ನು ಇದೇ ಗ್ರಂಥದಲ್ಲಿ ಬೇರೆ ಕಡೆ ವಿವರವಾಗಿ ವರ್ಣಿಸಲಾಗಿದೆ. ಈ ಶತಮಾನದ ಆದಿ ಭಾಗದಲ್ಲಿ ಮೈಸೂರು ಸಂಸ್ಥಾನದಲ್ಲಿ ಕೆರೆ ಪಂಚಾಯಿತಿ ವ್ಯವಸ್ಥೆಯನ್ನು ರೂಪಿಸಿ ಕಾರ್ಯಗತ ಗೊಳಿಸಲಾಗಿತ್ತು. ಆದರೆ ಆ ಪಂಚಾಯಿತಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲಿಲ್ಲ. ಸೋತು ಹೋದವು. ಪ್ರಾಯಶಃ ಸೂಕ್ತ ಪ್ರೇರಣೆಯ ಕೊರೆತೆ ಇತ್ತೋ ಏನೋ. ಈ ಕೆರೆ ಪಂಚಾಯಿತಿಗಳ ಅಧಿಕಾರ ಹಾಗೂ ಕೆಲಸಗಳನ್ನು ಬೇರೆ ಕಡೆ ವಿವರಿಸಲಾಗಿದೆ. ಓದುಗರು ಅವನ್ನು ನೊಡಬಹುದು.

ಮಹಾರಾಷ್ಟ್ರದಲ್ಲಿ ಜಲವಿತರಣೆ ಹಾಗೂ ನೀರಾವರಿ ವ್ಯವಸ್ಥೆಯ ಸಂರಕ್ಷಣೆಗಾಗಿ ಫಡ್ ಪದ್ಧತಿ ೨೦೦ ವರ್ಷಗಳಿಗೂ ಹಿಂದಿನಿಂದ ಜಾರಿಯಲ್ಲಿದೆ. ಆ ಪದ್ಧತಿಯಲ್ಲಿ ನೀರಾವರಿಯ ನಿರ್ವಹಣೆಯನ್ನು, ಎಲ್ಲ ರೈತರು ಆರಿಸಿದ ಪಂಚರ ಸಮಿತಿ ನಡೆಸುತ್ತದೆ. ಸಂರಕ್ಷಣೆ ನಡೆಯುವುದು ಸಮುದಾಯದ ಪ್ರಯತ್ನದಿಂದ ಮತ್ತು ಜಲನಿರ್ವಹಣಾ ಸಿಬ್ಬಂದಿಗೆ ವೇತನಕೊಡುವುದು ಫಸಲಿನ ಒಂದು ಪಾಲಿನ ರೂಪದಲ್ಲಿ. ನೀರುಗಂಟಿಗಳ ಮೂಲಕ ಜಲ ವಿತರಣೆ ಮಾಡುತ್ತಿದ್ದ ಅಂಥದೇ ವ್ಯವಸ್ಥೆ ಕರ್ನಾಟಕದಲ್ಲಿಯೂ ಇತ್ತು, ಕೆಲವು ಒಳನಾಡಿನ ಹಳ್ಳಿಗಳಲ್ಲಿ ಈಗಲ್ಲೂ ಇದೆ. ಫಡ್ ಪದ್ದತಿಯ ಮೇಲೆ ಒಂದು ಸಂಕ್ಷಿಪ್ತ ಟಿಪ್ಪಣಿಯನ್ನು ಅನುಬಂಧ – ೧೨ರಲ್ಲಿ ನೋಡಬಹುದು.

ಗುಜಾರಾತಿನಲ್ಲಿ ಕಾಕ್ರಪಾರ ಯೋಜನೆಯಲ್ಲಿ ರೈತರು ತಮ್ಮದೇ ಸಹಕಾರ ಸಂಘವನ್ನು ಮಾಡಿಕೊಂಡಿದ್ದಾರೆ. ನೀರನ್ನು ಸಗಟಾಗಿ ಸಹಕಾರ ಸಂಘಕ್ಕೆ ಮಾರಲಾಗುತ್ತದೆ. ಹೊರ ಕಂಡಿಯಲ್ಲಿ ಬಿಡಲಾದ ನೀರಿನ ಪ್ರಮಾಣದ ಆಧಾರದ ಮೇಲೆ ನೀರು ದರವನ್ನು ವಿಧಿಸಲಾಗುವುದು. ರೈತರಲ್ಲಿ ಪರಿಣಾಮಕರವಾಗಿ ಜಲ ವಿತರಣೆಯಾಗುವುದು ಸಹಕಾರ ಸಂಘದ ಹೊಣೆ. ಇಡೀ ಕಾಲುವೆ ವ್ಯವಸ್ಥೆಯನ್ನು ಸಹಕಾರ ಸಂಘವೇ ನೋಡಿಕೊಳ್ಳುತ್ತದೆ. ಸರ್ಕಾರ ನಿಗದಿಮಾಡುವ ದರದಲ್ಲಿ ಸಂಘ ನೀರು ದರವನ್ನು ವಿಧಿಸಿ ವಸೂಲು ಮಾಡುತ್ತದೆ. ಈ ಪದ್ಧತಿಯ ವಿವರಗಳನ್ನು ಅದು ನಡೆಯುವ ಬಗ್ಗೆ ಟಿಪ್ಪಣಿಯನ್ನು ಅನುಬಂಧ – ೧೪ರಲ್ಲಿ ಕೊಡಲಾಗಿದೆ.

ಮಧ್ಯಪ್ರದೇಶದಲ್ಲಿ ತಾವಾ ಯೋಜನೆಯಲ್ಲಿ ಸಿಂಚಾಯಿ(ನೀರಾವರಿ) ಪಂಚಾಯಿತಿಗಳನ್ನು ರಚಿಸಲಾಗಿದೆ. ನೀರಿನ ನಿರ್ವಹಣೆ ಹಾಗೂ ಹಂಚಿಕೆಯನ್ನು ಅವುಗಳಿಗೆ ವಹಿಸಲಾಗಿದೆ. ನೀರಾವರಿ ವ್ಯವಸ್ಥೆಯ ಸಂರಕ್ಷಣೆ ಸರ್ಕಾರದ ಕೈಯಲ್ಲೇ ಇದೆ. ಪಂಚಾಯಿತಿಗಳು ನೀರಾವರಿ ಸುಂಕಗಳನ್ನು ವಸೂಲು ಮಾಡಿ ಸರ್ಕಾರದ ಖಜಾನೆಗೆ ಜಮಾ ಮಾಡುತ್ತವೆ. ಈ ಪಂಚಾಯಿತಿಗಳ ಬಗ್ಗೆ ಒಂದು ಸಂಕ್ಷಿಪ್ತ ಟಿಪ್ಪಣಿಯನ್ನು ಅನುಬಂಧ – ೧೫ರಲ್ಲಿ ನೋಡಬಹುದು.

ಕರ್ನಾಟಕದಲ್ಲಿ ಜಿಲ್ಲಾ ಪರಿಷತ್ತುಗಳನ್ನು ಮಂಡಲ ಪಂಚಾಯಿತಿಗಳನ್ನು ೧೯೮೭ರಲ್ಲಿ ರಚಿಸಲಾಯಿತು. ಜಿಲ್ಲೆಯ ಸರಹದ್ದನ್ನು ಮೀರದಂಥ ಅಚ್ಚುಕಟ್ಟು ಉಳ್ಳ ಹಾಗೂ ಸಣ್ಣ ನೀರಾವರಿ ಕಾಮಗಾರಿಗಳ ನಿರ್ಮಾಣ, ಜೀರ್ಣೋದ್ಧಾರ ಹಾಗೂ ಸಂರಕ್ಷಣೆಗಳ ಅಧಿಕಾರವನ್ನು ಜಿಲ್ಲಾ ಪರಿಷತ್ತುಗಳಿಗೆ ವಹಿಸಿಕೊಡಲಾಗಿದೆ. ೫೦೦೦ ಎಕರೆ ಅಚ್ಚುಕಟ್ಟು ಉಳ್ಳ ಕಾಮಗಾರಿಯನ್ನು ಸಣ್ಣ ಪ್ರಮಾಣದ ನೀರಾವರಿ ಕಾಮಗಾರಿ ಎಂದು ಪರಿಗಣಿಸಲಾಗಿದೆ. ಸಾರ್ವಜನಿಕ ಹಾಗೂ ಖಾಸಗಿ ಬಳಕೆಗಾಗಿ ನೀರನ್ನು ಒದಗಿಸಲು ಮಂಡಲ ಪಂಚಾಯಿತಿಗಳಿಗೆ ವ್ಯಾಪಕವಾದ ಅಧಿಕಾರವನ್ನು ನೀಡಲಾಗಿದೆ. ಹಿಂದೆಯೆ ಹೇಳಿದಂತೆ ನೀರಾವರಿ ವಿಷಯದಲ್ಲಿ ಇಂಥ ಅಧಿಕಾರವನ್ನು ಕೊಟ್ಟಿಲ್ಲ. ೧೯೬೫ರ ಕರ್ನಾಟಕ ನೀರಾವರಿ ಶಾಸನ ೪೩ನೆಯ ಅನುಚ್ಛೇದದಲ್ಲಿ ನೀರಾವರಿ ಪಂಚಾಯಿತಿ ಹಾಗೂ ನೀರಾವರಿ ಶಾಸನ ೪೩ನೆಯ ಅನುಚ್ಛೇದದಲ್ಲಿ ನೀರಾವರಿ ಪಂಚಾಯಿತಿ ಹಾಗೂ ನೀರಾವರಿ ಮಂಡಲಿ (ಬೋರ್ಡ್) (ಒಂದು ಅಥವಾ ಹೆಚ್ಚು ಹಳ್ಳಿಗಳಿಗೆ) ಗಳನ್ನು ರಚಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಅಂಥ ಯಾವುದೇ ಪಂಚಾಯಿತಿಯನ್ನಾಗಲಿ ಮಂಡಲಿಯನ್ನಾಗಲಿ ರಚಿಸಿಲ್ಲ ಮತ್ತು ಅವುಗಳ ಕಾರ್ಯನಿರ್ವಹಣೆಗೆ ಯಾವುದೇ ನಿಯಮವನ್ನು ರೂಪಿಸಿಲ್ಲ.

ಬಹುಪಾಲು ಸಣ್ಣ ನೀರಾವರಿ ಕಾಮಗಾರಿಗಳಿಗೆ ಇರುವ ಅಚ್ಚುಕಟ್ಟು ನೂರು ಎಕರೆಗೂ ಕಡಿಮೆಯೆ. ಸಾಮಾನ್ಯವಾಗಿ ಅವು ಮಂಡಲ ಪಂಚಾಯಿತಿಯ ವ್ಯಾಪ್ತಿಯಲ್ಲಿ ಇವೆ. ಅಂಥ ಕಾಮಗಾರಿಗಳ ನಿರ್ಮಾಣ ಅಥವಾ ಸಂರಕ್ಷಣೆಯನ್ನು ಜಿಲ್ಲಾ ಪರಿಷತ್ತಿಗೆ ವಹಿಸಿರುವುದರಿಂದ ಮಂಡಲ ಪಂಚಾಯಿತಿಗೆ ಅವುಗಳ ಮೇಲೆ ಯಾವ ಹತೋಟಿಯೂ ಇಲ್ಲ. ಆಗಲೆ ಸಲಹೆ ಮಾಡಿರುವಂತೆ ಹಾಲಿ ಇರುವ ಶಾಸನ ಕಲಮುಗಳನ್ನು ಸೂಕ್ತವಾಗಿ ತಿದ್ದುಪಡಿಮಾಡಿ ಮಂಡಲ ಪಂಚಾಯತಿಗಳಿಗೆ ತಮ್ಮ ವ್ಯಾಪ್ತಿಯಲ್ಲಿರುವ ನೀರಾವರಿ ಕಾಮಗಾರಿಗಳ ಬಗ್ಗೆ ಅಗತ್ಯವಾದ ಕರ್ತವ್ಯ ಹಾಗೂ ಹೊಣೆಗಳನ್ನು ವಹಿಸಿಕೊಡುವುದು ಅವಶ್ಯ.

ನೀರಾವರಿ ಪಂಚಾಯಿತಿಗಳು :

೧೯೮೩ರ ಜಿಲ್ಲಾ ಪರಿಷತ್ತು, ಮಂಡಲ ಪಂಚಾಯಿತಿ ಶಾಸನದ ಪ್ರಕಾರ ಒಂದು ಮಂಡಲದಲ್ಲಿ ಹತ್ತು ಸಾವಿರಕ್ಕೆ ಕಡಿಮೆ ಇಲ್ಲದೆ ಹದಿನೈದು ಸಾವಿರಕ್ಕೂ ಮೀರದ ಪ್ರಜಾಸಂಖ್ಯೆ ಉಳ್ಳ ಒಂದು ಹಳ್ಳಿ ಅಥವಾ ಹಳ್ಳಿಗಳ ಗುಂಪು ಇರುತ್ತದೆ. ಅಲ್ಲದೆ ಮಂಡಲದಲ್ಲಿ ನೂರು ಮಂದಿ ಪ್ರಜೆಗಳಿಗೆ ಒಬ್ಬ ಸದಸ್ಯ ಇರುತ್ತಾನೆ. ಮಂಡಲದಲ್ಲಿನ ಪ್ರತಿಯೊಂದು ಹಳ್ಳಿಗೂ ಒಂದು ಗ್ರಾಮ ಸಭೆಯನ್ನು ಯೋಜಿಸಲಾಗಿದೆ. ನಮ್ಮ ಬಹುಪಾಲು ಕೆರೆಗಳು ಸಣ್ಣ ಹಳ್ಳಿಕೆರೆಗಳು. ಕೆಲವು ಹಳ್ಳಿಗಳಲ್ಲಿ ಒಂದಕ್ಕಿಂತ ಹೆಚ್ಚಿನ ಕೆರೆಗಳು ಇವೆ. ಇನ್ನು ಕೆಲವು ಕಡೆ ಒಂದು ಕೆರೆ ಒಂದು ಹಳ್ಳಿಗೂ ಮೀರಿ ಇರಬಹುದು. ಪ್ರತಿಯೊಂದು ಮಂಡಲದಲ್ಲಿಯೂ ಒಂದಕ್ಕಿಂತ ಹೆಚ್ಚು ಕೆರೆಗಳು ಇರಬಹುದು. ತನ್ನ ವ್ಯಾಪ್ತಿಯಲ್ಲಿರುವ ಎಲ್ಲ ಕೆರೆಗಳನ್ನು ಮಂಡಲವೆ ಚೆನ್ನಾಗಿ ಸಂರಕ್ಷಿಸಿ ನಿರ್ವಹಿಸುತ್ತದೆ ಎಂದು ನಿರೀಕ್ಷಿಸುವುದು ವಾಸ್ತವಿಕವಾಗಲಾರದು. ಅಲ್ಲದೆ ಅದು ಕೆರೆ ಕೆಳಗಿನ ಫಲಾನುಭವಿಗಳನ್ನೇ ಕೆರೆಯ ದಕ್ಷ ಸಂರಕ್ಷಣೆ ಹಾಗೂ ನಿರ್ವಹಣೆಗೆ ಹೊಣೆಗಾರರನ್ನಾಗಿ ಮಾಡಬೇಕೆಂಬ ಉದ್ದೇಶಕ್ಕೆ ಪೂರಾ ವಿರುದ್ಧವಾಗುತ್ತದೆ.

ಆದ್ದರಿಂದ, ಪ್ರತಿಯೊಂದು ನೀರಾವರಿ ಕೆರೆ ಅಥವಾ ಕಾಮಗಾರಿಗೂ ಒಂದು ನೀರಾವರಿ ಪಂಚಾಯಿತಿಯನ್ನು ರಚಿಸುವುದು ಅಗತ್ಯ. ಆ ಪಂಚಾಯಿತಿ, ಸಂಬಂಧಪಟ್ಟ ಮಂಡಲ ಪಂಚಾಯಿತಿಗಳ ನಿರ್ದೇಶನದಲ್ಲಿ ಕೆಲಸ ಮಾಡಬೇಕು. ನೀರಾವರಿ ಪಂಚಾಯಿತಿ ನೀರಾವರಿ ಪಡೆಯುವ ರೈತರಿಂದ ಆಯ್ಕೆ ಮಾಡಲ್ಪಟ್ಟ ಸಂಸ್ಥೆ ಆಗಬೇಕು. ಸದಸ್ಯರ ಸಂಖ್ಯೆ ಐದು ಅಥವಾ ಏಳು ಇರಬೇಕು. ಪ್ರತಿಯೊಂದು ಎರಡು ವರ್ಷಕ್ಕೆ ಒಮ್ಮೆ ಆಯ್ಕೆ ನಡೆಯಬೇಕು. ನೀರಾವರಿ ಕಾಲದ ಮೊದಲಿನಲ್ಲಿ, ಕೊನೆಯಲ್ಲಿ ಹಾಗೂ ನಡುವೆ ಒಮ್ಮೆ ಪಂಚಾಯಿತಿ ಸಭೆ ಸೇರಬೇಕು. ಅದು ಕೆರೆಯಲ್ಲಿ ಲಭ್ಯವಿರುವ ನೀರನ್ನು ಲೆಕ್ಕಮಾಡಿ ಅನುಸರಿಸಬಹುದಾದ ಬೆಳೆಯ ರೀತಿಯನ್ನೂ, ನೀರಿನ ಲಭ್ಯತೆಗೆ ಅನುಗುಣವಾಗಿ ನೀರು ಒದಗಿಸುವ ಕ್ರಮವನ್ನೂ ಸಹಮತದ ಮೇಲೆ ಯೋಜಿಸಬೇಕು. ಮತ್ತು ಎಲ್ಲ ನೀರಾವರಿದಾರರಿಗೂ ತನ್ನ ತೀರ್ಮಾನವನ್ನು ತಿಳಿಸಬೇಕು. ಜಲ ಪೂರೈಕೆಯ ಕ್ರಮ ಹೇಗೆ ನಡೆಯುತ್ತದೆ ಎನ್ನುವುದನ್ನು ಎಚ್ಚರಿಕೆಯಿಂದ ಗಮನಿಸಬೇಕು. ನಡುನಡುವೆ ವಿಮರ್ಶಿಸಬೇಕು. ಕಾಲದ ಕೊನೆಯಲ್ಲಿ ಜಲಸಂಗ್ರಹವನ್ನು ನೋಡಿಕೊಂಡು ಸಾಧ್ಯವಾದರೆ ಎರಡನೆಯ ಬೆಳೆಯ ಯೋಜನೆ ಮಾಡಬೇಕು. ಬೆಳೆಯ ರೀತಿಯನ್ನೂ, ನೀರಾವರಿ ಒದಗಿಸಬೇಕಾದ ಭೂವಿಸ್ತಾರವನ್ನೂ ತೀರ್ಮಾನಿಸಬೇಕು. ಸಂದೇಹ ಬಂದಾಗ ಅದು ಜಿಲ್ಲಾ ಪರಿಷತ್ತಿನಲ್ಲಿ ಕೆಲಸಮಾಡುವ ಕೃಷಿ ಹಾಗೂ ನೀರಾವರಿ ತಜ್ಞರ ಸಲಹೆಯನ್ನು ಪಡೆಯಬೇಕು. ಆಮೀನುಗಳಿಗೆ ಸೂಕ್ತವಾದ ಜಲನಿಯಂತ್ರಣ ಹಾಗೂ ಹಂಚಿಕೆಯ ಸಲುವಾಗಿ ಪಂಚಾಯಿತಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು. ಅವರ ವೇತನ ಪ್ರತಿಯೊಂದು ಜಮೀನಿನ ಉತ್ಪನ್ನದಲ್ಲಿ ನಿಗದಿಯಾದ ಪಾಲಿನ ರೂಪದಲ್ಲಿರಬೇಕು. ಅಂಥ ಸಿಬ್ಬಂದಿ ಹಿಂದಿನ ಕಾಲದಲ್ಲಿ ನೀರುಗಂಟಿ ಎನಿಸಿಕೊಳ್ಳುತ್ತಿದ್ದವರು, ಪ್ರತಿ ೧೦೦ ಎಕರೆ ಅಚ್ಚುಕಟ್ಟೆಗೂ ಒಬ್ಬನಂತೆ ನೇಮಿತನಾಗಬಹುದು. ಮತ್ತು ಹಿಂದಿನ ಹಾಗೆಯೆ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವರಿಗೆ ಇದು ಮೀಸಲಾಗಬೇಕು. ನೀರಾವರಿದಾರರು ತಮ್ಮ ಭೂಮಿಯ ಹೊರಕಂಡಿಯ ವರೆಗೂ ಕಾಲುವೆ ಜಾಲವನ್ನು ಸಂರಕ್ಷಿಸಬೇಕು. ಅದಕ್ಕೆ ತಪ್ಪುವುದನ್ನು ಅಪರಾಧವೆಂದು ಪರಿಗಣಿಸಬೇಕು. ನಾಲೆಯ ಕಲ್ಲುಕಟ್ಟಡವನ್ನು ಪಂಚಾಯಿತಿ ಸಂರಕ್ಷಿಸಬೇಕು.

ಕೆರೆ ಅಂಗಳದಲ್ಲಿ ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸುವ ಅಧಿಕಾರ ಪಂಚಾಯಿತಿಗೆ ಇರಬೇಕು. ಉತ್ಪನ್ನವನ್ನು ಜಿಲ್ಲಾ ಪರಿಷತ್ತಿನ ಮುಖಾಂತರ ಮಾರಾಟ ಮಾಡಬೇಕು. ಜಲ ವಿಸ್ತಾರದ ಸರಹದ್ದಿನ ಉದ್ದಕ್ಕೂ ಪಂಚಾಯಿತಿಯು ಹಣ್ಣಿನ ಮರಗಳನ್ನು ಬೆಳೆಸಬೇಕು. ಕಾಲಕಾಲಕ್ಕೆ ಕೆರೆಯ ಹೂಳನ್ನು ತೆಗೆಯುವುದುಕ್ಕೂ ಮತ್ತು ಅದನ್ನು ಇಟ್ಟಿಗೆ ಹೆಂಚು ಇತ್ಯಾದಿಗಳನ್ನು ಮಾಡಲು ಬಳಸುವುದಕ್ಕೂ ಉತ್ತೇಜನ ಕೊಡಬೇಕು. ಈ ಎಲ್ಲ ಮೂಲಗಳಿಂದ ಬರುವ ಆದಾಯ ಹಾಗೂ ನೀರಾವರಿದಾರರಿಂದ ವಸೂಲುಮಾಡುವ ನೀರು ಕಂದಾಯದ ಹಣವನ್ನು ಕೆರೆ ಏರಿ ಹಾಗೂ ಕೆರೆಗೆ ನೀರು ಬರುವ ಹಳ್ಳಗಳನ್ನು ಕಾಲಕಾಲಕ್ಕೆ ಸಂರಕ್ಷಿಸುವ ಕಾರ್ಯಕ್ಕೆ ವಿನಿಯೋಗಿಸಬೇಕು.

ಏರಿಗೆ ಮಣ್ಣು ಒಟ್ಟಿ ಸಂರಕ್ಷಿಸಲು ಸಹಾಯಕವಾಗುವುದಕ್ಕೆ ಪಂಚಾಯಿತಿಯ ಕೆರೆಯ ಗಾತ್ರಕ್ಕೆ ಅನುಗುಣವಾಗಿ ಒಂದೋ ಎರಡೋ ಎತ್ತಿನ ಬಂಡಿಗಳನ್ನು ಹಾಗೂ ಟ್ರಾಕ್ಟರನ್ನು ಇಟ್ಟುಕೊಳ್ಳಬೇಕಾಗುತ್ತದೆ. ಈ ಸಲಕರಣೆಗಳು ಪಂಚಾಯಿತಿಗೆ ಸೇರಿರಬೇಕು. ಇವುಗಳನ್ನು ಪಡೆಯುವ ವೆಚ್ಚಕ್ಕೆ ಎಲ್ಲ ನೀರಾವರಿದಾರರೂ ಹಾಗೂ ಇಡೀ ಹಳ್ಳಿಯೂ ಕಾಣಿಕೆ ನೀಡಬೇಕು. ಬಂಡಿಗಳಿಗೆ ಟ್ರಾಕ್ಟರ್‌ಗೆ ಕೆರೆ ಕೆಲಸ ಇಲ್ಲದಿದ್ದಾಗ ಅವನ್ನು ನೀರಾವರಿದಾರರು ಬಾಡಿಗೆಗೆ ಪಡೆಯಬಹುದು ಮತ್ತು ಅದರಿಂದ ಆದಾಯ ವಸೂಲಾಗಬಹುದು. ಪಂಚಾಯಿತಿ ಸ್ಥಳೀಯವಾಗಿ ಸಂಪನ್ಮೂಲಗಳನ್ನು ರೂಢಿಸಿಕೊಂಡು ಇಡೀ ಗ್ರಾಮದ ಅಭಿವೃದ್ಧಿಗಾಗಿ ಅವನ್ನು ಬಳಸಬೇಕು. ಅಂಥ ಎಲ್ಲ ವಿಷಯಗಳಲ್ಲಿಯೂ ಜಿಲ್ಲಾ ಪರಿಷತ್ತು ಮಂಡಲ ಪಂಚಾಯಿತಿಯೂ ಕೆರೆಯ ಪಂಚಾಯಿತಿಗೆ ನೆರವು ನೀಡಬೇಕು. ನೀರಾವರಿ ಪಂಚಾಯಿತಿಯ ಅಧ್ಯಕ್ಷ ಹಾಗೂ ಸದಸ್ಯರಿಗೆ ಮಂಡಲ ಪಂಚಾಯಿತಿಯಲ್ಲಿ ಪ್ರಾತಿನಿಧ್ಯ ಇರಬೇಕು. ಅವರ ಹಳ್ಳಿಗೆ ಸಂಬಂಧಿಸಿದ ಎಲ್ಲ ವಿಷಯಗಳಲ್ಲಿಯೂ ಅವರ ವಿಚಾರಗಳಿಗೆ ಸೂಕ್ತವಾದ ಮನ್ನಣೆ ಇರಬೇಕು.

ಈ ಶತಮಾನದ ಮೊದಲಿನಲ್ಲಿ ಮೈಸೂರಿನಲ್ಲಿ ಸ್ಥಾಪಿತವಾಗಿದ್ದ ಕೆರೆ ಪಂಚಾಯತಿಗಳು ವಿಫಲವಾದವು. ಈಗ ಅಂಥದೇ ವ್ಯವಸ್ಥೆ ಸಫಲವಾಗುವುದು ಹೇಗೆ ನಿಶ್ಚಿತ? ಎನ್ನಬಹುದು. ಕೆರೆ ಪಂಚಾಯಿತಿಗಳು ಸೋತದ್ದಕ್ಕೆ ಕಾರಣ, ಫಲಾನುಭವಿಗಳಲ್ಲಿ ಜಾಗೃತಿಯ ಅಭಾವ ಹಾಗೂ ಆಡಳಿತಗಾರರಲ್ಲಿ ಪಂಚಾಯಿತಿ ಅಭಿವೃದ್ಧಿ ಬಗ್ಗೆ ಇದ್ದ ನೀರಾಸಕ್ತಿ ಮತ್ತು ಕೆರೆ ನೀರಾವರಿಯ ಏಳಿಗೆ ಕುರಿತು ತಾತ್ಸಾರದ ದೃಷ್ಟಿ. ಬ್ರಿಟಿಷ್ ಆಳ್ವಿಕೆಯಿಂದ ಬಿಡುಗಡೆ ಹೊಂದಿ ಸುಮಾರು ಐವತ್ತು ವರ್ಷ ಆಗಿದೆ. ಈಗ ನಮಗೆ ಅರಿವಾಗುತ್ತಿದೆ, ಅಭಿವೃದ್ಧಿ ಕಾರ್ಯ ಸಫಲವಾಗುವುದು ಸಂಬಂಧಪಟ್ಟ ಜನ ಅದರಲ್ಲಿ ನೇರವಾಗಿ ಮತ್ತು ಪೂರ್ಣವಾಗಿ ಒಳಗೊಂಡಾಗ ಮಾತ್ರ ಎಂದು. ಅಲ್ಲದೆ ತಮ್ಮ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳನ್ನು ತಾವೇ ರೂಪಿಸಿ ನಿರ್ವಹಿಸಿದರೆ ಮಾತ್ರ ತಮ್ಮ ಹಿತಸಾಧನೆ ಉತ್ತಮವಾಗಿ ಆದೀತು ಎಂದೂ ಜನ ಅರಿತಿದ್ದಾರೆ. ಇದೆಲ್ಲವನ್ನೂ ಗಮನದಲ್ಲಿ ಇರಿಸಿಕೊಂಡೇ ನಮಗೆ ಅನಿಸುತ್ತದೆ, ನಮ್ಮ ಕೆರೆಗಳ ನಿರ್ಮಾಣ ಸಂರಕ್ಷಣೆ ಹಾಗೂ ನಿರ್ವಹಣೆಗೆ ನೀರಾವರಿ ಪಂಚಾಯಿತಿಗಳ ಸೃಷ್ಟಿಯೇ ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು.

ಎಲ್ಲ ಕೆರೆಗಳೂ ಜೀರ್ಣೋದ್ಧಾರವಾಗಿ ಅವುಗಳಲ್ಲಿ ನೀರು ಶೇಖರವಾದಾಗ ಕೆರೆಯ ಆಸುಪಾಸಿನಲ್ಲಿ ಅಂತರ್ಜಲದ ಮಟ್ಟ ಏರುವುದು ಖಂಡಿತ. ಈಗ ಇರುವ ಭಾವಿಗಳಲ್ಲೂ ನೀರಿನಮಟ್ಟ ಏರುತ್ತದೆ. ಆ ನೀರನ್ನು ಒಣಭೂಮಿಯಲ್ಲಿ ಮಳೆ ನೀರಿನಿಂದ ಮಾಡುವ ಬೇಸಾಯಕ್ಕೆ ಜೊತೆಗೂಡಿಸಿಕೊಳ್ಳಲೂಬಹುದು. ಪ್ರದೇಶದ ಜಲ – ಭೂ – ವೈಜ್ಞಾನಿಕ ಸ್ಥಿತಿಯನ್ನು ಸೂಕ್ತವಾಗಿ ಅಂದಾಜು ಮಾಡಿದರೆ, ಅನೇಕ ಹೊಸ ಭಾವಿಗಳನ್ನು ತೋಡಲಾರಂಭಿಸುವುದು ಸಾಧ್ಯವಾದೀತು.

ನಮ್ಮ ಸಲಹೆಗಳ ಸಾರಂಶವನ್ನು ಹೀಗೆ ಹೇಳಬಹುದು :

ನಾನಾ ಅಣು ಹಾಗೂ ಬೃಹತ್ ಜಲಾನಯನ ಭೂ ಪ್ರದೇಶಗಳ ಅಭಿವೃದ್ಧಿಗಾಗಿ ಒಂದು ವ್ಯಾಪಕ ಯೋಜನೆಯನ್ನು ರೂಪಿಸಬೇಕು. ನಮ್ಮ ಕೆರೆಗಳ ನಿರ್ಮಾಣ ಹಾಗೂ ಪುನರ್ ನಿರ್ಮಾಣವನ್ನು ಸ್ಥಳೀಯ ಉದ್ಯಮಿಗೆ ವಹಿಸಬೇಕು. ಆತನ ನಿರ್ಮಾಣಕಾರ್ಯಕ್ಕೆ ಪ್ರತಿಯಾಗಿ ಆತನಿಗೆ ಸಮುದಾಯ ಭೂಮಿಯನ್ನು ದಾನ ಕೊಡಬಹುದು ಅಥವಾ ನಿರ್ದಿಷ್ಟ ಅವಧಿಯಲ್ಲಿ ನೀರು ಕಂದಾಯ ವಿಧಿಸಲು ಆತನಿಗೆ ಅವಕಾಶಕೊಡಬಹುದು. ಇದಕ್ಕೆ ಪರ್ಯಾಯವಾಗಿ ಗ್ರಾಮ ಸಮುದಾಯವೇ ಭಾಗಶಃ ನಗದು ರೂಪದಲ್ಲಿ ಭಾಗಶಃ ಸ್ವಯಂಸೇವಾಕಾರ್ಯ ರೂಪದಲ್ಲಿ, ಹಾಗೂ ಭಾಗಶಃ ಬ್ಯಾಂಕಿನಿಂದ ಸಾಲ ತೆಗೆದು ಭರಿಸಬೇಕು. ನೀರಾವರಿಯ ಸಂರಕ್ಷಣೆ ಹಾಗೂ ನಿರ್ವಹಣೆ ನೀರಾವರಿ ಪಂಚಾಯಿತಿಯ ಜವಾಬ್ದಾರಿಯಾಗಿರಬೇಕು. ಅದು ಮಂಡಲ ಪಂಚಾಯಿತಿಯ ಮಾರ್ಗದರ್ಶನದಲ್ಲಿ ಕೆಲಸಮಾಡಬೇಕು. ಇದಕ್ಕಾಗಿ ಈಗಿನ ಪಂಚಾಯಿತಿ ಶಾಸನವನ್ನು ಸೂಕ್ತವಾಗಿ ತಿದ್ದುಪಡಿ ಮಾಡಬೇಕು.