೧೪. ಗುಜರಾತಿನ ಕಾಕ್ರಾಪಾರ ಒಡ್ಡು ಹಾಗೂ ಕಾಲುವೆ ಯೋಜನೆಯ ಅಚ್ಚುಕಟ್ಟು ಪ್ರದೇಶದ ಮೋಹಿನಿ ಜಲ ಸಹಕಾರ ಸಂಘದ ಒಂದು ಟಿಪ್ಪಣೆ :

(ಪ್ರಸ್ತಾಪ – ಸೂರತ್ ನೀರಾವರಿ ವಲಯ; ಸೂರತ್, ಗುಜರಾತ್ ಸರ್ಕಾರ ಹಾಗೂ ಸೂರತ್ ಕಾಲುವೆ ವಿಭಾಗ, ಸೂರತ್ ಅವರು ಸಿದ್ಧಪಡಿಸಿದ ಟಿಪ್ಪಣಿ, ಮಾರ್ಚಿ ೧೯೮೪)

೧. ಪೀಠಿಕೆ :

ಜೀವನದ ಯಾವುದೇ ಕ್ಷೇತ್ರದಲ್ಲಿಯೂ ಸಹಕಾರ ಇಡಿ ಸಮಾಜದ ಕ್ಷೇಮಸಾಧನೆಗೆ ಸಹಾಯಕ. ನೀರಾವರಿ ಯೋಜನೆಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ಜಲ ಸಹಕಾರ ಸಂಘಗಳನ್ನು ರಚಿಸುವುದು ಅಚ್ಚುಕಟ್ಟು ಸುಧಾರಣೆಗಳನ್ನು ಉಂಟು ಮಾಡಬಲ್ಲದು. ಆದ್ದರಿಂದ ಅಂಥ ಸಹಕಾರ ಸಂಘಗಳನ್ನು ಸಂಬಂಧಪಟ್ಟವರೆಲ್ಲರೂ ಪ್ರೋತ್ಸಾಹಿಸಬೇಕು.

೨. ನೀರಾವರಿಯಲ್ಲಿ ಸಹಕಾರ ಸಂಘಗಳ ಪಾತ್ರ :

ಖಾಸಗಿ ಕ್ಷೇತ್ರದಲ್ಲಿ ಸಣ್ಣ ಸಣ್ಣ ನೀರಾವರಿ ಯೋಜನೆಗಳನ್ನು ನಡೆಸುವಂಥ ಯಶಸ್ವಿ ಜಲ ಸಹಕಾರ ಸಂಘಗಳು ಅನೇಕ ಇವೆ. ಆದರೆ ಸರ್ಕಾರಿ ಸ್ವಾಮ್ಯದ ನೀರಾವರಿ ಯೋಜನೆಗಳು ಜಲನಿರ್ವಹಣೆಯನ್ನು ಅಂಥ ಜಲ ಸಹಕಾರ ಸಂಘಗಳ ಮೂಲಕ ನಡೆಸಬೇಕೆಂಬ ವಿಚಾರ ಕೇವಲ ಈಚಿನದು, ಮೇಲಾಗಿ ರಾಷ್ಟ್ರಜೀವನದ ಎಲ್ಲ ರಂಗಗಳಲ್ಲೂ ಆಗುತ್ತಿರುವ ತ್ವರಿತ ಅಭಿವೃದ್ಧಿಯ ಸಂದರ್ಭದಲ್ಲಿ ಅದು ಅಗತ್ಯಾಧಾರಿತವಾದುದು. ನೀರಾವರಿ ಯೋಜನೆಗಳ ಲಾಭಗಳು ಚೆನ್ನಾಗಿ ತಿಳಿದದ್ದೆ. ಈಗ ಹೊಸ ಯೋಜನೆಗಳ ನಿರ್ಮಾಣಕ್ಕಿಂತ ಈಗಾಗಲೆ ಪೂರ್ಣಗೊಂಡಿರುವ ಯೋಜನೆಗಳ ಕಾರ್ಯ ನಿರ್ವಾಹಕ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೆ ಪ್ರಾಶಸ್ತ್ಯ ನೀಡಲು ಸಕಾಲವಾಗಿದೆ. ಈ ನಿಟ್ಟಿನಲ್ಲಿ ಜಲ ಸಹಕಾರ ಸಂಘಗಳಿಗೆ ಮಹತ್ವದ ಪಾತ್ರವಿದೆ.

೩. ಸಾಂಪ್ರದಾಯಿಕ ಜಲ ನಿರ್ವಹಣೆ ಹಾಗೂ ಅದರ ಕೆಲವು ಇತಿಮಿತಿಗಳು :

ನೀರಾವರಿ ಜಲಾಶಯಗಳಲ್ಲಿ ಸಂಗ್ರಹವಾದ ನೀರನ್ನು ಕಾಲುವೆಗಳ ಹಾಗೂ ಜಮೀನು ಕಾಲುವೆಗೆ ಸಂಕೀರ್ಣಜಾಲ ಮುಖಾಂತರ ಅಚ್ಚುಕಟ್ಟು ಪ್ರದೇಶಕ್ಕೆ ಸಾಗಿಸಲಾಗುತ್ತದೆ. ರೈತರು ವ್ಯಯುಕ್ತಿಕವಾಗಿ ನೀರನ್ನು ಕೇಳುತ್ತಾರೆ. ಪೂರ್ಣ ನಿಗದಿತ ನಿಯಮಗಳು ಹಾಗೂ ವಿಧಾನಗಳಿಗೆ ಅನುಸಾರವಾಗಿ ನೀರನ್ನು ಪಡೆಯುತ್ತಾರೆ. ಅಂಥ ನಿಯಮ ವಿಧಾನಗಳಲ್ಲಿ ಕಾಲುವೆ ಜಾಲದ ಒಂದು ಹೊರಗಂಡಿಯಿಂದ ನೀರು ಪಡೆಯುವ ರೈತರೆಲ್ಲರಲ್ಲಿ ಸಹಕಾರ ಇದೆ ಎಂದು ಭಾವಿಸಕೊಳ್ಳಲಾಗುತ್ತದೆ. ಅಂಥ ಸಹಾಕಾರ ಇಲ್ಲದೆ ಹೋದಲ್ಲಿ ಪ್ರತಿಯೊಬ್ಬ ರೈತನ ಅಗತ್ಯಕ್ಕೆ ತಕ್ಕಂತೆ ನೀರನ್ನು ನ್ಯಾಯಯುತವಾಗಿ ಹಂಚುವುದು ಕಷ್ಟವಾಗುತ್ತದೆ. ಕೆಲವೊಮ್ಮೆ ಅಚ್ಚುಕಟ್ಟು ಪ್ರದೇಶದ ತುದಿಯಲ್ಲಿರುವ ರೈತರು ತೊಂದರೆಗೆ ಸಿಗಬೇಕಾಗುತ್ತದೆ. ಏಕೆಂದರೆ ಮೇಲುಭಾಗದ ರೈತರು ಕಿತ್ತಾಡಿ ಅಚ್ಚುಕಟ್ಟಿನ ತುದಿಯ ಜಮೀನುಗಳಿಗೆ ತಮ್ಮ ಜಮೀನಿನ ಮೂಲಕ ನೀರು ಹಾಯ ಬಿಡುವುದಿಲ್ಲ. ಬಹಳ ಪ್ರಚಾರ ಪಡೆದ ಸರದಿ ಮೇರೆಗಿನ ಜಲ ವಿತರಣಾ ವ್ಯವಸ್ಥೆಯಲ್ಲಿ ಎಲ್ಲ ರೈತರಲ್ಲಿಯೂ ಸೌಹಾರ್ದ, ಸಹಕಾರಗಳಿಲ್ಲದೆ ತುದಿಯ ರೈತರು ಕಷ್ಟಕ್ಕೆ ಒಳಗಾಗುತ್ತಾರೆ.

ಸಾಂಪ್ರದಾಯಿಕ ಜಲವಿತರಣೆಯ ಇನ್ನೊಂದು ಮಿತಿ ನೀರಾವರಿ ನೀರಿಗೆ ಶುಲ್ಕ ವಿಧಿಸುವ ವಿಧಾನಕ್ಕೆ ಸಂಬಂಧಿಸಿದ್ದು. ಪ್ರತಿಯೊಬ್ಬ ರೈತನಿಗೂ ಒದಗಿಸಲಾಗುವ ನೀರಿನ ಪ್ರಮಾಣವನ್ನು ಅಳೆಯುವುದು ಪ್ರಸ್ತುತ ಸಾಧ್ಯವೇ ಇಲ್ಲ. ಅದರಿಂದಾಗಿ ನೀರಿನ ಕಂದಾಯಕ್ಕೂ ನೀರಿನ ಸರಬರಾಜಿನ ಪ್ರಮಾಣಕ್ಕೂ ನೇರ ಸಂಬಂಧವೇ ಇರುವುದಿಲ್ಲ. ಆದ್ದರಿಂದ ಬೆಳೆ ಪ್ರದೇಶ ಹಾಗೂ ಕಾಲಗಳಿಗೆ ಅನುಗುಣವಾಗಿ ನೀರು ಕಂದಾಯ ವಿಧಿಸುವ ಕ್ರಮವನ್ನು ನಾಲೆಗಳ ಅಧಿಕಾರಿಗಳು ಅನುಸರಿಸುತ್ತಾರೆ. ಈ ಪದ್ಧತಿಯಿಂದಾಗಿ ರೈತರು ಬೆಳೆಗೆ ಬೇಕಾದುದಕ್ಕಿಂತ ಹೆಚ್ಚು ನೀರನ್ನು ಬಳಸುತ್ತಾರೆ. ಇದರಿಂದ ಅಮೂಲ್ಯವಾದ ನೀರು ಪೋಲಾಗುತ್ತದೆ. ಮತ್ತು ಅವರ ಅಮೂಲ್ಯವಾದ ಭೂಮಿಯೂ ಕಾಲಕ್ರಮದಲ್ಲಿ ಹಾಳಾಗುತ್ತದೆ. ಜಲ ಸಹಕಾರ ಸಂಸ್ಥೆಗಳು ಈ ತೊಂದರೆಗೂ ಪರಿಹಾರ ಒದಗಿಸುತ್ತವೆ. ಏಕೆಂದರೆ ಅವುಗಳಲ್ಲಿ ನೀರನ್ನು ಸಹಕಾರ ಸಂಘಗಳಿಗೆ ಮಾರಬಹುದು ಮತ್ತು ಸರಬರಾಜು ಸ್ಥಳದಲ್ಲಿ ಅಳತೆ ಮಾಡಿದ ಜಲಪ್ರಮಾಣದ ಪ್ರಕಾರವಾಗಿ ಕಂದಾಯವನ್ನು ವಿಧಿಸಬಹುದು. ಈ ನೀರನ್ನು ನ್ಯಾಯಯುತವಾಗಿ ದಕ್ಷವಾಗಿ ರೈತರಲ್ಲಿ ಹಂಚುವ ಹೊಣೆ ಸಹಕಾರ ಸಂಘದ ಮೇಲಿರುತ್ತದೆ.

೪. ಗುಜರಾತಿನ ಕಾಕ್ರಾಪಾರ ನೀರಾವರಿ ಯೋಜನೆಯೆ ಅಚ್ಚುಕಟ್ಟು ಪ್ರದೇಶದಲ್ಲಿನ ಮೋಹಿನಿ ಜಲ ಸಹಕಾರ ಸಂಘ :

ಕಾಕ್ರಾಪಾರ ಗುಜರಾತಿನ ಅತ್ಯಂತ ದೊಡ್ಡ ಪೂರ್ಣಗೊಂಡ ನೀರಾವರಿ ಯೋಜನೆ. ದಕ್ಷಿಣ ಗುಜರಾತಿನಲ್ಲಿ ತಪತಿ ನದಿಗೆ ಅಡ್ಡಲಾಗಿ ಕಾಕ್ರಾಪಾರ ಎಂಬ ಹಳ್ಳಿಯಲ್ಲಿ ಕಟ್ಟಿರುವ ಒಡ್ಡಿನಿಂದ ಯೋಜನೆಯ ನಾಲಾ ವ್ಯೂಹ ಹೊರಟು, ಸುಮಾರು ಎರಡು ಲಕ್ಷ ಹೆಕ್ಟೇರು ಜಮೀನಿಗೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ. ಕಾಕ್ರಾಪಾರ ಒಡ್ಡಿಗೆ ಸುಮಾರು ೩೨ ಕಿ.ಮೀ. ಮೇಲಕ್ಕೆ ಅದೇ ತಪತಿ ನದಿಗೆ ೧೯೭೨ರಲ್ಲಿ ಉಕಾಯಿ ವಿವಿಧೋದ್ಧೇಶ ಜಲಾಶಯವನ್ನು ಪೂರ್ಣಗೊಳಿಸಲಾಯಿತು.

ರಾಜ್ಯ ಸರ್ಕಾರ ಪ್ರೋತ್ಸಾಹದಿಂದ ಮೋಹಿನಿ ಜಲ ಸಹಕಾರ ಸಂಘವನ್ನು ೧೯೬೧ರ ರಾಜ್ಯ ಸಹಕಾರ ಸಂಘಗಳ ಶಾಸನದಡಿಯಲ್ಲಿ ೧೯೭೮ ಸೆಪ್ಟೆಂಬರ್‌ನಲ್ಲಿ ನೋಂದಾಯಿಸಲಾಯಿತು. ಅದು ೧೯೭೯ರ ಮಾರ್ಚಿನಲ್ಲಿ ಸೂರತ್ ಜಿಲ್ಲೆಯ ಚೂರಾಸಿ ತಾಲ್ಲೂಕಿನ ಮೋಹಿನಿ ಗ್ರಾಮದಲ್ಲಿನ ತನ್ನ ಕೇಂದ್ರ ಕಚೇರಿಯಿಂದ ಚುರುಕಾಗಿ ಕಾರ್ಯರಂಭ ಮಾಡಿತು. ಕಾಕ್ರಾಪಾರ ನಾಲಾವ್ಯೂಹದ ನಾಲ್ಕು ಜಲಮಾರ್ಗಗಳು ಹಾಗೂ ಬೇಸ್ತಾನ ಮೀನಾರಿನ ಎರಡು ನೇರ ಹೊರಗಂಡಿಗಳಿಂದ ನೀರಾವರಿ ಸೌಲಭ್ಯ ಪಡೆಯುವ ಸುಮಾರು ಐನೂರು ಹೆಕ್ಟೇರು ಅಚ್ಚುಕಟ್ಟು ಪ್ರದೇಶವನ್ನು ಸಂಘಕ್ಕೆ ವಹಿಸಲಾಯಿತು. ಸಂಘಕ್ಕೆ ವಹಿಸಲಾಗಿರುವ ಪ್ರದೇಶದಲ್ಲಿ ತದನುಗುಣವಾದ ಕೃಷಿಯೋಗ್ಯ ಪ್ರದೇಶ ಸುಮಾರು ೪೭೫ ಹೆಕ್ಟೇರುಗಳು.

ಮೋಹಿನಿ ಜಲ ಸಹಕಾರ ಸಂಘದ ನಿಯಮಾವಳಿ ಹಾಗೂ ಉದ್ದೇಶಗಳ ಮುಖ್ಯಾಂಶಗಳು:

ಅ) ಸಹಕಾರ ಮತ್ತು ಸ್ವಾವಲಂಬನ ಭಾವನೆಯನ್ನು ಬೆಳೆಸುವುದು.

ಆ) ನ್ಯಾಯಯುತವಾಗಿ ಹಾಗೂ ಸದಸ್ಯರ ಅಗತ್ಯಾನುಸಾರವಾಗಿ ಜಲ ನಿರ್ವಹಣೆ.

ಇ) ನಾಲಾವ್ಯೂಹದ ಹೊರಗಂಡಿಗಳ ಹಾಗೂ ಜಮೀನು ಕಾಲುವೆಗಳ ದಕ್ಷ ಕಾರ್ಯಚರಣೆ ಹಾಗೂ ಸಂರಕ್ಷಣೆ.

ಈ) ಸದಸ್ಯರಿಗೆ ಸುಧಾರಿತ ಕೃಷಿ ನಿರ್ವಹಣಾ ತಂತ್ರಗಳಲ್ಲಿ ಶಿಕ್ಷಣ ನೀಡುವುದು.

ಉ) ಕೃಷಿಕಾರ್ಯಗಳಿಗೆ ಬೇಕಾದ ಸಲಕರಣೆಗಳನ್ನು ಕೊಳ್ಳುವುದು.

ಊ) ಪ್ರತಿಯೊಬ್ಬ ರೈತನಿಗೂ ಸಕಾಲಕ್ಕೆ ನೀರು ದೊರಕುವಂತೆ ಸದರಿ ಪ್ರಕಾರ ನೀರು ಹಂಚಿಕೆಯ ವ್ಯವಸ್ಥೆಯನ್ನು ಜಾರಿ ಮಾಡುವುದು.

ಋ) ರಾಜ್ಯ ಸರ್ಕಾರ ಗೊತ್ತುಪಡಿಸಿದ ದರದಲ್ಲಿ ನೀರು ಕಂದಾಯವನ್ನು ನಿಗದಿಮಾಡಿ ಸದಸ್ಯರಿಂದ ವಸೂಲು ಮಾಡುವುದು.

ೠ) ಯಾವುದೇ ಸದಸ್ಯನಿಂದಲೂ ನೀರು ಪೋಲಾಗದಂತೆ ನೋಡಿಕೊಳ್ಳುವುದು.

ಎ) ತಲಾ ೫೦ ರೂಗಳ ಷೇರುಗಳ ಮೂಲಕ ೫೦ ಸಾವಿರ ರೂ.ಗಳ ಕಾರ್ಯೋಪಯೋಗಿ ಬಂಡವಾಳ ರೂಢಿಸುವುದು.

ಏ) ತನ್ನ ಕ್ಷೇತ್ರದ ಎಲ್ಲ ರೈತರನ್ನೂ ಸದಸ್ಯರಾಗಿ ಸೇರಿಸಿಕೊಳ್ಳುವುದು.

ಐ) ಸಂಘದ ಹಾಗೂ ಅದರ ಸದಸ್ಯರ ಕ್ಷೇಮಾಭಿವೃದ್ಧಿಗೆ ಇತರ ಕಾರ್ಯಗಳನ್ನು ನಡೆಸುವುದು.

ಮೋಹಿನಿ ಜಲ ಸಂಘದ ಬೆಳವಣಿಗೆ ಹಾಗೂ ಚಟುವಟಿಕೆಗಳು :

ಮೊದಲನೆಯ ವರ್ಷ ಅಂದರೆ ೧೯೭೮ – ೭೯ರಲ್ಲಿ ಸಂಘ ಆರಂಭವಾದುದು ಕೇವಲ ೧೪೫ ಸದಸ್ಯರು ಹಾಗೂ ೭೯೦೦ ರೂ ಬಂಡವಾಳದಿಂದ. ಆ ವರ್ಷವೇ

ಅ) ನಾಲೆಗಳ ಹಂಚಿಕೆ ಜಾಲವನ್ನು ಜೀರ್ಣೋದ್ಧಾರ ಮಾಡಲಾಯಿತು.

ಆ) ಹೆಚ್ಚುವರಿ ಹೊರಗಂಡಿಗಳನ್ನು ಒದಗಿಸಲಾಯಿತು.

ಇ) ಜಲಮಾರ್ಗಗಳ ದುರ್ಬಲ ಸ್ಥಾನಗಳನ್ನು ಭದ್ರಪಡಿಸಲಾಯಿತು.

ಈ) ಸರ್ಕಾರದ ಸ್ಥಳೀಯ ಅಧಿಕಾರಗಳೊಂದಿಗೆ ಎಲ್ಲ ವಿಷಯಗಳ ಬಗ್ಗೆಯೂ ಸುಸೂತ್ರವಾದ ಪರಸ್ಪರ ಕ್ರಿಯೆಗೆ ಎಲ್ಲ ಪ್ರಾರಂಭಿಕ ವಿಧಾನಗಳನ್ನು ರೂಪಿಸಲಾಯಿತು.

ಹೀಗೆ ಈ ಸಂಘಕ್ಕೆ ವಹಿಸಲಾದ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಹಂಚಿಕೆ. ನೀರು ಕಂದಾಯ ನಿಗದಿ ಹಾಗೂ ವಸೂಲಿ ಮತ್ತು ನಾಲಾವ್ಯೂಹದ ಚಾಲನೆ ಹಾಗೂ ಸಂರಕ್ಷಣೆ ಇವೆಲ್ಲದರ ಜವಾಬ್ದಾರಿಯನ್ನು ಸಂಘ ತನ್ನ ಮೊದಲನೆಯ ವರ್ಷದಲ್ಲಿಯೇ ಸರ್ಕಾರದಿಂದ ಪೂರ್ಣವಾಗಿ ವಹಿಸಿಕೊಂಡಿತ್ತು. ತನ್ನ ದಕ್ಷ ನಿರ್ವಹಣೆಯಿಂದಾಗಿ ಸಂಘ ೧೭೦೦೦ ರೂ ನಿವ್ವಳ ಲಾಭವನ್ನು ಗಳಿಸಿತು.

ಎರಡನೆಯ ವರ್ಷ(೧೯೭೯ – ೮೦) ಸದಸ್ಯತ್ವ ೧೪೫ ರಿಂದ ೧೬೧ಕ್ಕೆ ಏರಿತು. ಷೇರು ಬಂಡವಾಳ ೯೦೦೦ ರೂಗೆ ಏರಿತು. ತನ್ನ ಸದಸ್ಯರು ಶೀಘ್ರವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಕೃಷಿ ಕಾರ್ಯಗಳನ್ನು ನಡೆಸಲು ಅನುವಾಗುವಂತೆ ಸಂಘ ಒಂದು ಟ್ರಾಕ್ಟರನ್ನು ಇನ್ನಿತರ ಸಲಕರಣೆಗಳನ್ನು ಕೊಂಡುಕೊಂಡಿತು. ಅದಲ್ಲದೆ ತನ್ನ ಸದಸ್ಯರಿಂದ ಹಿಂದೆ ಸರ್ಕಾರಕ್ಕೆ ಬರಬೇಕಾಗಿದ್ದ ಬಾಕಿ ನೀರು ಕಂದಾಯದ ಬಹುಭಾಗವನ್ನು ವಸೂಲುಮಾಡಿಕೊಟ್ಟಿತ್ತು. ಮುಂಗಡವಾಗಿ ನೀರು ಕಂದಾಯವನ್ನು ಪಾವತಿಮಾಡುವುದು ಹಾಗೂ ಅಂಥ ಮುಂಗಡ ಪಾವತಿಗೆ ಪ್ರೋತ್ಸಾಹಕರವಾಗಿ ಕೊಂಚ ರೀಯಾಯಿತಿ ತೋರಿಸುವುದು, ಈ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿ ಮಾಡಲಾಯಿತು. ಈ ರಿಯಾಯಿತಿಗಳು ಹಾಗೂ ಟ್ರಾಕ್ಟರ್ ಇತ್ಯಾದಿಗಳ ಖರೀದಿಗಳಾದರೂ ಸಂಘ ಸುಮಾರು ಸಾವಿರ ರೂ. ಗಳ ನಿವ್ವಳ ಲಾಭ ಪಡೆಯುತ್ತಲೇ ಇತ್ತು. ಇದಕ್ಕೆ ಕಾರಣ ನೀರಾವರಿ ಪಡೆಯುವ ಪ್ರದೇಶದ ವಿಸ್ತರಣೆ ಹಾಗೂ ಒಟ್ಟಾರೆ ದಕ್ಷವಾದ ನಿರ್ವಹಣೆ.

ಮೂರನೆಯ ವರ್ಷ ೧೯೮೦ – ೮೧ ಸಂಘದ ಸದಸ್ಯತ್ವ ೧೮೧ಕ್ಕೆ ಹೆಚ್ಚಿತ್ತ. ಷೇರು ಬಂಡವಾಳ ೧೦,೦೦೦ ಆಯಿತು. ಆ ವರ್ಷವೂ ಸಂಘ ಸುಮಾರು ೬೦೦೦ ನಿವ್ವಳ ಲಾಭ ಪಡೆಯಿತು. ಹಿಂದಿನ ವರ್ಷ ಖರೀದಿಸಿದ್ದ ಟ್ರಾಕ್ಟರು ೨೧೫೦೦ ನಿವ್ವಳ ಲಾಭ ಸಂಪಾದಿಸಿತು. ಸಂಘ ತನ್ನ ಸದಸ್ಯರಿಗಾಗಿ ನವಸಾರಿಯ ಕೃಷಿ ವಿಶ್ವವಿದ್ಯಾನಿಲಯ ಮಾಹಿ ಯೋಜನೆ ಹಾಗೂ ಕೈರಾ ಜಿಲ್ಲೆಯ ಅನಂದರ ಅಮುಲ್ ಡೈರಿಗೆ ಶೈಕ್ಷಣಿಕ ಪ್ರವಾಸವನ್ನು ವ್ಯವಸ್ಥೆಮಾಡಿತು. ಆ ವರ್ಷವೂ ನೀರಾವರಿ ಪ್ರದೇಶ ಗಣನೀಯವಾಗಿ ಹೆಚ್ಚಿತ್ತು.

ಮುಂದಿನ ವರ್ಷ ಅಂದರೆ ೧೯೮೦ – ೮೧ರಲ್ಲಿ ಹಾಗೂ ೧೯೮೨ – ೮೩ರಲ್ಲಿ ಸದಸ್ಯತ್ವ ೧೮೧ ರಿಂದ ೨೦೩ಕ್ಕೆ ಏರಿತು. ಷೇರು ಬಂಡವಾಳವೂ ೧೧೧೦೦ ರೂಗೆ ಏರಿತು. ೧೯೮೧ – ೮೨ ರಲ್ಲಿ ಸಂಗ ೧೦,೪೦೩ ರೂ ನಿವ್ವಳ ಲಾಭ ಗಳಿಸಿತು. ಯಂತ್ರಗಳಿಂದಲೂ ಲಾಭ ದೊರಕಿತು.

೧೯೮೨ – ೮೩ರಲ್ಲಿ ಸಂಘಕ್ಕೆ ೭೩೩೧ ರೂ ನಿವ್ವಳ ಲಾಭ ಹಾಗೂ ಯಂತ್ರಗಳಿಂದ ೩೬೪ ರೂ ಲಾಭ ಬಂತು. ಹೀಗೆ ಮೋಹಿನಿ ಜಲ ಸಹಕಾರ ಸಂಘ ಪ್ರಚಂಡವೂ ವಿಸ್ತೃತವೂ ಆದ ಪ್ರಭಾವವನ್ನು ಉಂಟುಮಾಡಿದೆ. ಅದರೆ ಹೆಸರು ಖ್ಯಾತಿಗಳು ಇಡಿ ರಾಜ್ಯದಲ್ಲಿ ಮಾತ್ರವಲ್ಲ ಒಟ್ಟಾರೆ ಇಡಿ ದೇಶದ ನೀರಾವರಿ ಕ್ಷೇತ್ರದ ಪೂರಾ ಹಬ್ಬಿವೆ.

ನೀರನ್ನು ಸರ್ಕಾರ ಸಂಘಕ್ಕೆ ಸಗಟಾಗಿ ಒದಗಿಸಿತು. ಹತ್ತು ಸಾವಿರ ಲೀಟರುಗಳಿಗೆ ೨೫ ಪೈಸೆ ದರದಂತೆ ಪ್ರಮಾಣಕ್ಕೆ ಅನುಸಾರವಾಗಿ ಶುಲ್ಕ ವಿಧಿಸಿತು.

೧ – ೪ – ೮೩ರ ಯುಟಿಆರ್ : ೧೦೮೩ : ೬: ಪಿ ಪತ್ರದಂತೆ ಪ್ರಕಾರ ಸರ್ಕಾರ ನೀರು ದರವನ್ನು ಜೂನ್ ೧೯೮೪ ರಿಂದ ಹತ್ತುಸಾವಿರದ ಲೀಟರಿಗೆ ೨೫ ಪೈಸೆಯಿಂದ ೩೦ ಪೈಸೆಗೆ ಏರಿಸಿತು.

ಸಂಘವಾದರೂ ಕಾಲಕಾಲಕ್ಕೆ ಸರ್ಕಾರ ಗೊತ್ತುಮಾಡಿದ ಜಾರಿಯಲ್ಲಿರವ ದರದಂತೆ ಬೆಳೆಪ್ರದೇಶ ಹಾಗೂ ಕಾಲಕ್ಕೆ ಅನುಗುಣವಾಗಿ ಸದಸ್ಯರಿಗೆ ಶುಲ್ಕವನ್ನು ವಿಧಿಸಿತು.

ಸಂಘ ರಚಿತವಾಗುವುದಕ್ಕೆ ಹಿಂದೆ ಅದರ ಅಚ್ಚುಕಟ್ಟಿನಲ್ಲಿ ಎಲ್ಲ ಕಾಲಗಳಲ್ಲೂ ನೀರಾವರಿ ಪಡೆಯುತ್ತಿದ್ದ ಒಟ್ಟ ಪ್ರದೇಶ ೪೫೦ ಹೆಕ್ಟರುಗಳು ಮಾತ್ರ. ಇದು ೧೯೭೯ – ೮೦ ರಿಂದ ೧೯೮೨ – ೮೩ ಈ ಕಳೆದ ನಾಲ್ಕು ವರ್ಷಗಳಲ್ಲಿ ಶೇಕಡಾ ೧೦೦ ರಷ್ಟು ಹೆಚ್ಚಿದೆ ಎನ್ನುವುದನ್ನು ಗಮನಿಸಬೇಕಾದುದು. ಇದು ಮಹಾತ್ಸಾಧನೆ. ಏಕೆಂದರೆ ರಾಜ್ಯ ಸರ್ಕಾರದಿಂದ ಸಂಘ ಪಡೆಯುವ ಅಲ್ಪ ಪ್ರಮಾಣದ ನಿರ್ವಹಣಾ ಸಹಾಯ ಹಾಗೂ ನೀರು ಕಂದಾಯದಲ್ಲಿ ಸಹಾಯಕ ರೀಯಾಯಿತಿ ಇವುಗಳಿಗೆ ಹೋಲಿಸಿದರೆ ರಾಷ್ಟ್ರದ ಆದಾಯವನ್ನು ನೇರವಾಗಿ ಹೆಚ್ಚಿಸುವಂಥ ಹೆಚ್ಚು ಕೃಷಿ ಉತ್ಪಾದನೆಯ ಮೌಲ್ಯ ತುಂಬ ದೊಡ್ಡದು. ಈ ರಿಯಾಯಿತಿಗಳಿಗೆ ಪ್ರತಿಯಾಗಿ ಸಂಘಕ್ಕೆ ವಹಿಸಿಕೊಟ್ಟ ಪ್ರದೇಶದ ನಾಲಾವ್ಯೂಹದ ಚಾಲನಾ ಸಂರಕ್ಷಣೆ, ದುರಸ್ತಿ ಇವುಗಳಿಗೆ ಆಗಿಂದಾಗ್ಗೆ ಮಾಡಬೇಕಾದ ವೆಚ್ಚ ಸರ್ಕಾರಕ್ಕೆ ಉಳಿತಾಯವಾಯಿತು.

ಭೇಸ್ತಾನ ಮೈನಾರ್‌ನಲ್ಲಿ ದೆಲಾಡದ ಗ್ರಾಮ ಹಾಗೂ ಮೋಹಿನಿ ಗ್ರಾಮದಲ್ಲಿ ಹರಡಿರುವ ೪೪ – ೨೦ ಹೆಕ್ಟೇರು ನಾಲಾ ಅಚ್ಚುಕಟ್ಟು ಪ್ರದೇಶವಿದೆ. ಇದನ್ನು ತನ್ನ ಪ್ರದೇಶಕ್ಕೆ ಸೇರಿಸಿಕೊಡಬೇಕೆಂದು ಸಂಘ ಕೇಳಿತು. ಆ ಕೇಳಿಕೆಯಂತೆ ಭೇಸ್ತಾನ ಮೈನರ್ ಪ್ರದೇಶವನ್ನೂ ೧೬ – ೨ – ೮೩ ರಂದು ಸಂಘದ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿಸಲಾಗಯಿತು. ಅದರಂತೆ, ನೀರನ್ನು ೧೯೮೩ – ೮೪ರ ಬೇಸಿಗೆಯಿಂದ ಜಲಮಾರ್ಗದಲ್ಲಿ ಒದಗಿಸಲಾಗುತ್ತಿದೆ ಮತ್ತು ಸಂಘದಿಂದ ನೀರಿನ ದರವನ್ನು ವಸೂಲುಮಾಡಲಾಗುತ್ತಿದೆ.

ಮೊದಲು ಮೂರು ವರ್ಷ ರಾಜ್ಯ ಸರ್ಕಾರ ಸಂಘಕ್ಕೆ ಒಬ್ಬ ನಿರ್ವಾಹಕ, ಒಬ್ಬ ಮೇಸ್ತ್ರಿ ಹಾಗೂ ಇಬ್ಬರು ಗುಮಾಸ್ತರು ಒದಗಿಸಿತ್ತು. ಅಲ್ಲದೆ ಮೊದಲ ಮೂರು ವರ್ಷ ಏನಾದರೂ ನಷ್ಟ ಅದರೆ ಭರ್ತಿ ಮಾಡಿಕೊಡುವುದಾಗಿಯೂ ಒಪ್ಪಿತ್ತು. ಮತ್ತೆ ಎಲ್ಲ ಬೆಳೆಗಳಿಗೂ ಏಕಪ್ರಕಾರವಾಗಿ ಹತ್ತು ಸಾವಿರದ ಲೀಟರ್ ನೀರಿಗೆ ೩೦ ಪೈಸೆ ದರವನ್ನು ಸಂಘಕ್ಕೆ ವಿಧಿಸಿತ್ತು. ಹಾಗೂ ಸರ್ಕಾರ ಅಗ್ಗಿಂದಾಗ್ಗೆ ನೀರಾವರಿ ಪ್ರದೇಶಕ್ಕೆ ಅನುಗುಣವಾಗಿ ನಾನಾ ಬೆಳೆಗಳಿಗೆ ಗೊತ್ತು ಮಾಡುವ ಬೇರೆ ಬೇರೆ ದರದಲ್ಲಿ ಸಂಘ ತನ್ನ ಸದಸ್ಯರಿಂದ ಕಂದಾಯವನ್ನು ಪಡೆಯಲು ಅನುಮತಿಯಿತ್ತಿತ್ತು. ಸಂಘದಲ್ಲಿ ಕಬ್ಬು ಹಾಗೂ ಬೇಸಿಗೆಯಲ್ಲಿ ನೆಲಗಡಲೆಯಂಥ ಹಣದ ಬೆಳೆಗಳ ಪ್ರಮಾಣ ಹೆಚ್ಚಾಗಿತ್ತು. ಈ ಬೆಳೆಗಳಿಗೆ ಪ್ರದೇಶಾನುಸಾರ ಕಂದಾಯ ಅಧಿಕ. ಅದರಿಂದಾಗಿ ನೀರುಕಂದಾಯದಲ್ಲಿ ಸಂಘ ಕೊಂಚ ಲಾಭಗಳಿಸಲು ಸಾಧ್ಯವಾಯಿತು. ನೀರನ್ನು ದಕ್ಷವಾಗಿ ಹಾಗೂ ಪೋಲಾಗದಂತೆ ಬಳಸುವುದು ಮೋಹಿನಿ ಜಲ ಸಹಕಾರ ಸಂಘದ ಯಶಸ್ವಿನ ಕಥೆಗೆ ಕಾರಣಾಂಶ.

ಆಗಲೇ ಹೇಳಿರುವಂತೆ ಸರ್ಕಾರ ಜೂನ್ ೧೯೮೪ ರಿಂದ ಒದಗಿಸುವ ನೀರಿಗೆ ಕಂದಾಯವನ್ನು ೨೫ ಪೈಸೆಯಿಂದ ೩೦ ಪೈಸೆಗೆ ಹೆಚ್ಚಿಸಿದೆ.

೫. ಮುಕ್ತಾಯ : ಎಲ್ಲ ಬಗೆಯ ನೀರಾವರಿ ಯೋಜನೆಗಳ ಅಚ್ಚುಕಟ್ಟು ಪ್ರದೇಶಗಳಲ್ಲಿಯೂ ಜಲ ಸಹಕಾರ ಸಂಘಗಳಿಗೆ ಭರವಸೆಯ ಭವಿಷ್ಯವಿದೆ. ನ್ಯಾಯಯುತವಾಗಿ ನೀರಾವರಿ ಜಲ ವಿತರಣೆ ಮಾಡುವುದು ಸ್ವಲ್ಪ ಕ್ಲಿಷ್ಟ ಸಮಸ್ಯೆಯೆ. ಇದಕ್ಕೆ ಸಹಕಾರ ಸಂಘ ಆದರ್ಶಯುತ ಪರಿಹಾರವನ್ನೂ ನೀಡುತ್ತದೆ. ಸರದಿ ಮೇರೆಗೆ ನೀರು ಹಂಚುವಿಕೆಯ ಶಿಸ್ತು ಹಾಗೂ ಗಾತ್ರಕ್ಕೆ ಅನುಗುಣವಾಗಿ ಸಗಟಾಗಿ ನೀರನ್ನು ಒದಗಿಸುವ ಶಿಸ್ತುಗಳನ್ನು ಜಾರಿಮಾಡುವುದನ್ನು ಇದು ಸುಲಭಗೊಳಿಸುತ್ತದೆ. ನೀರಾವರಿ ಯೋಜನೆಗಳ ಲಾಭವನ್ನು ಆದಷ್ಟು ಹೆಚ್ಚಿಸುವುದು, ತನ್ಮೂಲಕ ಮುಂಬರುವ ದಿನಗಳಲ್ಲಿ ಸಾಮಾಜಿಕ ಜೀವನದ ಒಟ್ಟಾರೆ ಸ್ಥಿತಿ ಒಳತಿನಿಂದ ಹೆಚ್ಚು ಒಳಿತಿಗೆ ಅಲ್ಲಿಂದ ಗರಿಷ್ಠ ಒಳಿತಿಗೆ ವೃದ್ಧಿಸುವಂತೆ ಮಾಡುವುದು. ಈ ನಿಟ್ಟಿನಲ್ಲಿ ಜಲ ಸಹಕಾರ ಸಂಘಗಳು ತುಂಬ ವೇಗವಾಗಿ ಹಾಗೂ ಹೆಚ್ಚು ಸಂಖ್ಯೆಯಲ್ಲಿ ಬೆಳೆಯುವಂತೆ ಪ್ರೋತ್ಸಾಹಿಸಬೇಕು.

೧೫. ಟಾವಾ ಯೋಜನೆಯ (ಮಧ್ಯ ಪ್ರದೇಶ) ಸಿಂಚಾಯಿ ಪಂಚಾಯಿತಿಗಳ ಕಾರ್ಯ ರೀತಿಯ ಬಗ್ಗೆ ಸಂಕ್ಷಿಪ್ತ ಟಿಪ್ಪಣಿ.

(ಪ್ರಸ್ತಾಪ : ಟಾವಾ ಯೋಜನೆಯ (ಮ.ಪ) ಕಮಿಷನರ್ ಹಾಗೂ ಪದನಿಮಿತ್ತ ಕಾರ್ಯದರ್ಶಿ ಶ್ರೀಮತಿ ಶಶಿ ಜೈನ್ ಅವರ ಪತ್ರ ನಂ. ಪಿ.ಆರ್.ಆರ್.:೧೧:೮೬:೬೫೩೫ ದಿನಾಂಕ ೧೨ – ೬ – ೮೬ ಇದಕ್ಕೆ ಲಗತ್ತಿಸಿದ ಸಿಂಚಾಯಿ ಪಂಚಾಯಿತಿ ಕುರಿತ ಟಿಪ್ಪಣಿ)

ಇಡೀ ಮಧ್ಯಪ್ರದೇಶದಲ್ಲಿ ಇರುವ ಎಲ್ಲ ನೀರಾವರಿ ಯೋಜನೆಗಳಿಗೂ ಅನ್ವಯಿಸುವ ಮಧ್ಯಪ್ರದೇಶ ನೀರಾವರಿ ಶಾಸನದಲ್ಲಿ ಸಿಂಚಾಯಿ ಪಂಚಾಯಿತಿಗಳ ರಚನೆಗೆ ಅವಕಾಶವಿದೆ. ೩ – ೪ ಹಳ್ಳಿಗಳ ಸುತ್ತ ಆವರಿಸಿರುವ ಪ್ರತಿ ಸುಮಾರು ೪೦೦ ಹೆಕ್ಟೇರು (೧೦೦೦ ಎಕರೆ) ನೀರಾವರಿ ಪ್ರದೇಶಕ್ಕೂ ಒಂದು ಪಂಚಾಯಿತಿಯನ್ನು ರಚಿಸಲಾಗುತ್ತದೆ.

ಟಾವಾ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿ ೫ ನೀರಾವರಿ ವಿಭಾಗಗಳ ಪೈಕಿ ೨ ರಲ್ಲಿ ಈ ಪಂಚಾಯಿತಿಗಳು ಪೂರಾ ರಚಿತವಾಗಿವೆ. ಇವುಗಳ ಸಂಖ್ಯೆ ೧೨೪. ಇತರ ೨ ವಿಭಾಗಗಳಲ್ಲಿ ೭೯ ಪಂಚಾಯಿತಿಗಳಿಗೆ ಚುನಾವಣೆ ನಡೆದಿದೆ. ಕಲೆಕ್ಟರ್(ಜಿಲ್ಲಾಧಿಕಾರಿ) ಅನುಮತಿ ದೊರೆತ ಕೂಡಲೆ ಅವುಗಳನ್ನು ರಚಿಸಲಾಗುವುದು. ಐದನೆಯ ವಿಭಾಗದಲ್ಲಿ ನಿರ್ಮಾಣಕಾರ್ಯ ಮುಂದುವರೆದಿದೆ. ಈ ವರೆಗೆ ಉಂಟಾಗಿರುವ ನೀರಾವರಿ ಸಾಮಾರ್ಥ್ಯ ಅತ್ಯಲ್ಪ. ಈ ಪರಿಮಿತ ಪ್ರದೇಶಗಳಿಗೆ ಸಿಂಚಾಯಿ ಪಂಚಾಯಿತಿಗಳನ್ನು ಈ ವರ್ಷ ರಚಿಸಲಾಗುವುದು.

ಆಯಾ ಪ್ರದೇಶದ ಫಲಾನುಭವಿ ರೈತರೆಲ್ಲರೂ ಆಯಾ ಸಿಂಚಾಯ ಪಂಚಾಯಿತಿಗಳ ಪಂಚರನ್ನು ಆರಿಸುವ ಮತದಾರರು. ಈ ಪಂಚಾಯಿತಿಗಳಲ್ಲಿ ಸಾಮಾನ್ಯವಾಗಿ ೫ – ೭ ಸದಸ್ಯರು ಇರುತ್ತಾರೆ. ಮೊದಲನೆಯ ೧೦೦ ಫಲಾನುಭವಿಗಳಿಗೆ ಮೂವರು ಸದಸ್ಯರು ಆಯ್ಕೆಯಾಗುತ್ತಾರೆ. ಮುಂದಿನ ಪ್ರತಿ ೧೦೦ ಫಲಾನುಭವಿಗಳಿಗೆ ಒಬ್ಬರು ಆಯ್ಕೆಯಾಗುತ್ತಾರೆ ಈ ಆಯ್ಕೆ ಕೆಲಕ್ಟರ್‌ರ ಒಪ್ಪಿಗೆಗೆ ಒಳಪಟ್ಟಿದೆ. ಸದಸ್ಯರನ್ನು ನಾಮಕರಣ ಮಾಡುವ ಅಧಿಕಾರ ಕಲೆಕ್ಟರನಿಗೆ ಉಂಟು. ಅಲ್ಲದೆ ಲಿಖಿತ ಆತ ಲಿಖಿತ ಕಾರಣಗಳಿಗಾಗಿ ಯಾವುದೇ ಸದಸ್ಯನನ್ನು ವಜಾ ಮಾಡಬಹುದು. ಅಥವಾ ಯಾವುದೇ ಪಂಚಾಯಿತಿಯನ್ನು ವಿಸರ್ಜಿಸಬಹುದು. ಪಂಚಾಯಿತಿಯ ಸದಸ್ಯರು ತಮ್ಮಲ್ಲಿ ಒಬ್ಬ ಸರಪಂಚನನ್ನು ಚುನಾಯಿಸುತ್ತಾರೆ.

ಸಿಂಚಾಯಿ ಪಂಚಾಯಿತಿಯ ಅವಧಿ ಹೊಸ ಪಂಚಾಯಿತಿಯ ಆಯ್ಕೆಗೆ ಒಳಪಟ್ಟು ಮೂರು ವರ್ಷ. ಈ ಅವಧಿಯನ್ನು ಮತ್ತೆ ಮೂರು ವರ್ಷ ವಿಸ್ತರಿಸಲು ಕಲೆಕ್ಟರನಿಗೆ ಅಧಿಕಾರವಿದೆ.

ನೀರಾವರಿ ನೀರಿನ ಕ್ರಮಬದ್ಧ ನಿರ್ವಹಣೆ ಹಾಗೂ ವಿತರಣೆಯ ಜವಾಬ್ದಾರಿಯನ್ನು ಸಿಂಚಾಯಿ ಪಂಚಾಯಿತಿಗಳಿಗೆ ವಹಿಸಲಾಗಿದೆ. ವಾರಾಬಂದಿ ಹಾಗೂ ಒಸರಬಂದಿಗಳ (ಸರದಿ ಪ್ರಕಾರ ವಾರದ ನಿರ್ದಿಷ್ಟ ದಿನದಲ್ಲಿ ನೀರು ಸರಬರಾಜು) ಮೂಲಕ ನೀರಿನ ಬಗೆಗೆ ಶಿಸ್ತನ್ನು ಯಶಸ್ವಿಯಾಗಿ ಜಾರಿಗೆ ತರುವುದು ನೀರಾವರಿ ಪಂಚಾಯಿತಿಗಳಿಗೆ ವಹಿಸಲಾಗಿರುವ ಒಂದು ಮುಖ್ಯ ಜವಾಬ್ದಾರಿ. ಜಲಮಾರ್ಗಗಳ ರಚನೆಯ ಏರ್ಪಾಡು, ನೀರಾವರಿ ಮಾಪನ (ಆಳತೆ)ದ ದಾಖಲೆ ಹಾಗೂ ತನಿಖೆ ಮತ್ತು ಭೂಮಿ ಹಾಗೂ ನೀರಿನ ವಿವಾದಗಳು ಇತ್ಯರ್ಥ – ಇವುಗಳಲ್ಲಿ ಪಂಚಾಯಿತಿಗಳು ನೀರಿನ ಇಲಾಖೆಗೆ ನೆರವಾಗಬೇಕು. ಜಲಮಾರ್ಗಗಳಿಗೆ ಅಗತ್ಯವಾದ ದುರಸ್ತಿಗಳನ್ನು ಅವು ಮಾಡಿಸಬೇಕು. ಮೇಲಾಗಿ ಸಿಂಚಾಯಿ ಪಂಚಾಯಿತಿಗಳ ಒಂದು ಮುಖ್ಯ ಜವಾಬ್ದಾರಿ ಎಂದರೆ ನೀರಾವರಿ ಕಂದಾಯವನ್ನು ವಸೂಲುಮಾಡುವುದು ಮತ್ತು ಅದನ್ನು ತಡವಿಲ್ಲದೆ, ಯಾವುದೇ ಸಂದರ್ಭದಲ್ಲೂ ವಸೂಲಿಯಾದ ೧೪ ದಿನಗಳ ಒಳಗಾಗಿ ಖಜಾನೆಗೆ ಜಮಾ ಮಾಡುವುದು. ಕಾಲುವೆ ದಾರಿಗಳ ಮೇಲೆ ಒತ್ತು ಆಗುವುದನ್ನು ಪತ್ತೆ ಮಾಡುವುದರಲ್ಲಿ ಹಾಗೂ ತಡೆಯುವುದರಲ್ಲಿ ಮತ್ತು ನೀರಾವರಿ ಕಾಮಗಾರಿಗಳಿಗೆ ಆಗುವ ಯಾವುದೇ ಉದ್ದೇಶಪೂರಿತ ಹಾನಿ ಕುರಿತು ವರದಿ ಮಾಡುವುದರಲ್ಲಿ ಸಹ ಪಂಚಾಯಿತಿ ಸಹಾಯ ಮಾಡಬೇಕು.

ಸಿಂಚಾಯಿ ಪಂಚಾಯಿತಿಗಳು ತಮ್ಮ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ನಿರ್ದಿಷ್ಟ ಅಪರಾಧಗಳಿಗೆ ೧೫೦ರೂ ವರೆಗೆ ದಂಡ ವಿಧಿಸುವ ಅಧಿಕಾರವನ್ನು ಪಡೆದಿದೆ. ಉದಾಹರಣೆಗೆ ನೀರಾವರಿ ಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಯಲು ಅಡ್ಡಿಮಾಡುವುದು, ನೀರನ್ನು ತಿರುಗಿಸಿಕೊಳ್ಳುವುದು ಇಲ್ಲವೆ ಪೋಲು ಮಾಡುವುದು, ಮಾಪನ (ಅಳತೆ ಮಾಡುವ) ಸಾಧನಗಳಂಥ ಖಾಯಂ ಸ್ಥಾನಗಳಿಗೆ ಹಾನಿ ಮಾಡುವುದು, ಕಾಲುವೆ ಬದುಗಳ ಮೇಲೆ ದನಗಳನ್ನು ಮೇಯಿಸುವುದು ಇತ್ಯಾದಿ. ಇದಲ್ಲದೆ ನೀರಾವರಿ ಬಾಕಿ ವಸೂಲಿಗೆ ಪ್ರೋತ್ಸಾಹನಾರ್ಥವಾಗಿ ಪಂಚಾಯಿತಿಗಳಿಗೆ ಕಮಿಷನ್ (ದಳ್ಳಾಳಿ) ಸಹ ಕೊಡಲಾಗುವುದು. ಇದರ ದರ ವಸೂಲಿ ಮೊದಲನೆಯ ೧೦೦೦ ರೂ. ೩೦ ರೂ ಮತ್ತು ಅದಕ್ಕಿಂತ ಹೆಚ್ಚಿನ ವಸೂಲಿ ಪ್ರತಿ ೧೦೦೦ ರೂ ಗೆ ೨೦ ರೂ. ಈ ಕಮಿಷನ್ ಹಣವನ್ನು ಬಾಕಿ ವಸೂಲಿಯಲ್ಲಿ ಯಾರೂ ನೆರವಾಗುವುದರೋ ಆ ಸರಪಂಚ ಹಾಗೂ ಇತರ ಪಂಚಾಯಿತಿ ಸದಸ್ಯರಿಗೆ ೨:೧ ಪ್ರಮಾಣದಲ್ಲಿ ಹಂಚಬೇಕು.

ಪಂಚಾಯಿತಿಗಳ ಆಡಳಿತ ಲೇಖನಸಾಮಗ್ರಿ ಇತ್ಯಾದಿ ಸಾದಿಲವಾರು ವೆಚ್ಚಕ್ಕಾಗಿ ನೀರಾವರಿ ಪ್ರದೇಶದ ಪ್ರತಿ ಎಕರೆಗೆ ೯ ಪೈಸೆಯಂತೆ ಆಡಳಿತ ಕಮಿಷನ್ ಸಹ ಕೊಡಲ್ಪಡುತ್ತದೆ. ಪಂಚಾಯಿತಿಯ ಜುಲ್ಮಾನೆ ಹಣವನ್ನು ಕಾಲುವೆ ಸಂರಕ್ಷಣೆ ಇತ್ಯಾದಿ ಮುಖ್ಯಕಾರ್ಯಗಳಿಗೆ ಬಳಸಬಹುದು.

ಸಿಂಚಾಯಿ ಪಂಚಾಯಿತಿಗಳನ್ನು ಬಲಪಡಿಸುವ ಉದ್ದೇಶವಿದೆ. ವಾಸ್ತವವಾಗಿ, ನೀರಾವರಿ ಶಾಸನದಲ್ಲಿ ಕಲ್ಪಿಸಲಾದ ಅವಕಾಶಗಳ ಪ್ರಕಾರ ತಮ್ಮ ಜವಾಬ್ದಾರಿಗೆ ಸೇರಿದ ಪ್ರದೇಶಗಳಲ್ಲಿ ಪಂಚಾಯಿತಿಗಳನ್ನು ಬಲಗೊಳಿಸುವ ಉದ್ದೇಶವೂ ಇದೆ. ಅವು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಪರಿಣಾಮಕಾರಿಯಾಗಲೆಂದು ಪ್ರಾರಂಭಿಕವಾಗಿ ವಾರಾಬಂದಿ ಪ್ರದೇಶದಲ್ಲಿ ಹೊರಗಂಡಿಯ ಮಟ್ಟಕ್ಕಿಂತ ಕೆಳಕ್ಕೆ ಜಲವಿತರಣೆಯ ಪೂರಾ ಹೊಣೆಯನ್ನು ಪಂಚಾಯಿತಿಗಳಿಗೆ ವಹಿಸಲು ತೀರ್ಮಾನಿಸಲಾಗಿದೆ. ೧೯೮೬ – ೮೭ನೆಯ ಸಾಲಿಗೆ ೬೦ ಸಾವಿರ ಹೆಕ್ಟೇರುಗಳಲ್ಲಿ ವಾರಾಬಂದಿಯನ್ನು ಜಾರಿಗೆ ತರುವ ಕಾರ್ಯಕ್ರಮವನ್ನು ಎತ್ತಿಕೊಳ್ಳಲಾಗುತ್ತಿದೆ. ಹಿಂದಿನ ವರ್ಷ ಇದು ೭೫೦೦ ಹೆಕ್ಟೇರುಗಳು ಇತ್ತು. ವಾರಾಬಂದಿಯ ಪ್ರಾಮುಖ್ಯತೆಯನ್ನು ಹಾಗೂ ಅದನ್ನು ಆರಂಭಿಸಿ ಆಚರಣೆಗೆ ತರುವುದಕ್ಕೆ ಬೇಕಾದ ವೈಧಾನಿಕ ಅಗತ್ಯಗಳನ್ನು ಪಂಚಾಯಿತಿಗಳು ಅರ್ಥಮಾಡಿಕೊಳ್ಳಲು ನೆರವಾಗುವ ಉದ್ದೇಶದಿಂದ ತರಬೇತಿ ಕಾರ್ಯಕ್ರಮವೊಂದನ್ನು ರಚಿಸಲಾಗುತ್ತಿದೆ. ನೀರಾವರಿ ಕ್ಷೇತ್ರ ಸಿಬಂದಿ ಹಾಗೂ ಕೃಷಿ ಇಲಾಖೆಯ ಸಿಬ್ಬಂದಿಗಳೊಂದಿಗೆ ಸಿಂಚಾಯಿ ಪಂಚಾಯಿತಿಗಳ ಎಲ್ಲ ಪಂಚರಿಗೂ ತರಬೇತಿ ನೀಡುವುದು ಅದರಲ್ಲಿ ಸೇರಿರುತ್ತದೆ.