ಅನುಬಂಧಗಳಲ್ಲಿ ಹೇಳಿರುವ ಕೆರೆಗಳ ಸ್ಥಳಗಳ ನಕ್ಷೆ

04_267_KKN-KUHಕರ್ನಾಟಕದಲ್ಲಿ ಕೆರೆ ನೀರಾವರಿ

೧. ಮೋತಿ ತಲಾಬ್ (ತೊಣ್ಣೂರು ಕೆರೆ) :

ಶ್ರೀರಂಗಪಟ್ಟಣದ ಬಳಿ ತೊಣ್ಣೂರು ಗ್ರಾಮದಲ್ಲಿರುವ ಮೋತಿ ತಲಾಬ್ ಕರ್ನಾಟಕದಲ್ಲಿ ಎರಡನೆಯ ಅತಿಪ್ರಾಚೀನ ಭಾರಿ ಕೆರೆ. ಹನ್ನೊಂದನೆಯ ಶತಮಾನದ ಸುಮಾರಿನಲ್ಲಿ ಮಹಾ ಶ್ರೀವೈಷ್ಣವ ಸಂತ ಶ್ರೀರಾಮಾನುಜಾಚಾರ್ಯರ ಕಾಲದಲ್ಲಿ ಕಟ್ಟೆಯ ನಿರ್ಮಾಣವನ್ನು ಕೈಗೊಳ್ಳಲಾಯಿತು ಎಂಬ ನಂಬಿಕೆ ಇದೆ.

ಯಾದವನದಿ ಮತ್ತು ಇನ್ನೊಂದು ಬೆಟ್ಟದ ಹೊಳೆಗಳ ನಡುವಿನ ಕಣಿವೆಗೆ ಅಡ್ಡಲಾಗಿ ಒಂದು ಕಟ್ಟೆಯನ್ನು ಕಟ್ಟಿ ಇದನ್ನು ನಿರ್ಮಿಸಲಾಗಿದೆ. ಕಟ್ಟೆ ನದಿಯ ಅಡಿಯಿಂದ ಸುಮಾರು ೮೦ ಅಡಿ ಎತ್ತರವಿದೆ. ಅದರ ಉದ್ದ ಸುಮಾರು ೫೦೦ ಅಡಿ. ಸಾಮಾನ್ಯವಾಗಿ ಹಳೆಯ ಕಟ್ಟೆಗಳು ಇರುವಂತೆ ಈ ಕಟ್ಟೆ ನೇರವಾಗಿಲ್ಲ. ಹೊಳೆಗೆ ಅಭಿಮುಖವಾಗಿ ಬಾಗಿದೆ. ಇತರ ಕಟ್ಟೆಗಳು ತಲೆಭಾಗದಲ್ಲಿ ಬಹಳ ಅಗಲವಾಗಿರುತ್ತವೆ. ಆದರೆ ಈ ಕಟ್ಟೆ ತಲೆಭಾಗದಲ್ಲಿ ಕೇವಲ ೫೦ ಅಡಿ ಅಗಲವಿದೆ. ಅಡಿಯಲ್ಲಿ ಸುಮಾರು ೪೫೦ ಅಡಿ ಅಗಲವಿದೆ. ಅದರ ಜಲಸಂಗ್ರಹಣ ಸುಮಾರು ೧೮,೦೦೦ ಎಕರೆ. ಅಡಿಗಳಷ್ಟು ಭಾರಿ. ಇದಕ್ಕೆ ಹೋಲಿಸಿದರೆ ನೀರಾವರಿ ಭೂಮಿ ಕೇವಲ ೮೦೦ ಎಕರೆ. ಇದಕ್ಕೆ ಕಾರಣ ತೂಬಿನ ಬಾಗಿಲಿನ ಅಡಿ ಕೆರೆ ಅಂಗಳದ ಮಟ್ಟಕ್ಕಿಂತ ೪೫ ಅಡಿ ಮೇಲೆ ಇರುವುದು ಮತ್ತು ಆ ಬಾಗಿಲಿನ ಮಟ್ಟದಿಂದ ಮೇಲು ಭಾಗಕ್ಕೆ ಲಭ್ಯವಿರುವ ಜಲಸಂಗ್ರಹಣೆ ಕೇವಲ ಸುಮಾರು ೨೫ ಅಡಿಮಾತ್ರ. ಜಲಸಂಗ್ರಹದ ಮೂರನೆಯ ಎರಡಕ್ಕೂ ಹೆಚ್ಚಿನ ಪಾಲು ಬಾಗಿಲಿನ ಕೆಳಕ್ಕೆ ಇರುವುದು. ದಖನ್ನಿನ ಸುಬೇದಾರನ ಮಗ ನಾಸಿರ್ ಜಂಗ್ ೧೭೪೬ರಲ್ಲಿ ಈ ಕೆರೆಗೆ ಭೇಟಿಕೊಟ್ಟಿದ್ದನಂತೆ ಆಗ ಇದರ ಸ್ಫಟಿಕ ನಿರ್ಮಲ ನೀರನ್ನು ನೋಡಿ, ಇದಕ್ಕೆ ಮೋತಿ ತಲಾಬ್, ಮುತ್ತಿನ ಕೆರೆ, ಎಂದು ಹೆಸರು ಕೊಟ್ಟನಂತೆ೧.

ಒಂದು ಗುಡ್ಡವನ್ನು ಕಡಿದು ನಾಲೆಯನ್ನು ಮಾಡಲಾಗಿದೆ. ಇದೇ ನಾಲೆಗೆ ಕೋಡಿಯ ನೀರನ್ನೂ ನೀರಾವರಿ ನೀರನ್ನೂ ಬಿಡಲಾಗುವುದು. ಇದು ಈ ಕಟ್ಟೆಯ ಒಂದು ವಿಶೇಷ ಲಕ್ಷಣ. ಈ ನಾಲೆಗೆ ನೀರಾವರಿ ತೂಬಿನಿಂದ ಬರುವ ನೀರನ್ನು ಬಾಗಿಲಿನಿಂದ ನಿಯಂತ್ರಿಸಲಾಗುತ್ತದೆ. ಕಟ್ಟೆ ತುಂಬಿದಾಗ, ಹೆಚ್ಚುವರಿ ನೀರು ತೂಬಿನ ಮೇಲು ಭಾಗದ ಕಟ್ಟೆಯಿಂದ ತೂರಿಕೊಂಡು ನಾಲೆಗೆ ಹರಿದು ಬರುತ್ತದೆ. ಮತ್ತು ಗುಡ್ಡದಿಂದ ಕೊಂಚ ದೂರದಲ್ಲಿ ನಾಲೆ ಎರಡಾಗಿ ಒಡೆಯತ್ತದೆ. ಎಡ ಸೀಳು ನೀರಾವರಿ ಕಾಲುವೆಯ ಬಲ ಸೀಳನ್ನು ಕಲ್ಲುಕಟ್ಟಿದ ಬಯಲು ನಾಲೆಗಳ ಮೂಲಕ ಕೆರೆ ಕೆಳಗಿನ ನದಿ ಕಣಿವೆಗೆ ಬಿಡಲಾಗಿದೆ. ಇಂಥ ಅಪರೂಪದ ವ್ಯವಸ್ಥೆ ಸಾಧ್ಯವಾಗಿರುವುದಕ್ಕೆ ಕಾರಣ, ಈ ಕೆರೆಯಲ್ಲಿ ಜಲಸಂಗ್ರಹಣ ನದಿಯಿಂದ ಬರುವ ನೀರಿನ ಪ್ರಮಾಣಕ್ಕೆ ಎರಡರಷ್ಟಕ್ಕೂ ಹೆಚ್ಚು ಇರುವುದು ಮತ್ತು ಕೆರೆ ಕೋಡಿ ಬೀಳುವುದು ತೀರ ವಿರಳ.

ಹೊಯ್ಸಳರ ಕಾಲದಲ್ಲಿ ಮೊದಲು ಕಟ್ಟಿಸಲಾದ ಕಟ್ಟೆಯನ್ನು ಟಿಪ್ಪುಸುಲ್ತಾನನ ಕಾಲದಲ್ಲಿ ಪುನರ್ ರೂಪಸಿ ದುರಸ್ತಿ ಮಾಡಲಾಯಿತು ಎಂದು ಸ್ಥಳ ಪ್ರತೀತಿ ಹೇಳುತ್ತದೆ.

“ಮೆಟ್ಟುಲು ಹಾಗೂ ಕಟ್ಟೆಗೆ ಬಳಸಲಾಗಿರುವ ಕಲ್ಲುಗಳ ಸೂಕ್ಷ್ಮವಾದ ಪರಿಶೀಲನೆ ಈ ದೃಷ್ಟಿಯನ್ನು ಸಮರ್ಥಿಸುತ್ತದೆ. ಏಕೆಂದರೆ ಮೆಟ್ಟಲುಗಳಿಗೆ ಅನೇಕ ಹಳೆಯ ದೇವಾಲಯಗಳ ದ್ವಾರಸ್ತಂಭಗಳನ್ನು ಬಳಸಲಾಗಿದೆ. ಬೃಂದಾವನದ ಬಳಿಯ ಬಾಗಲವಾಡದ ಭಾಗಗಳ ಸಮುಹವೊಂದರಲ್ಲಿ ಚಾಲುಕ್ಯ ಅಥವಾ ಹೊಯ್ಸಳಯುಗದ ಮೇಲಣ ಶಾಸನಗಳ ಎರಡು ತುಣುಕುಗಳು ಕಾಣ ಬಂದಿವೆ ಮತ್ತು ನಾಲ್ಕು ಕೆತ್ತನೆ ಮಾಡಿದ ಕಲ್ಲು ಇವೆ. ಎರಡಂತೂ ಸೂಕ್ಷ್ಮವಾಗಿ ಕೆತ್ತನೆಮಾಡಿದವು. ಒಂದರಲ್ಲಿ ಗಜೇಂದ್ರಮೋಕ್ಷದ ಕತೆ ಇದೆ. ಇನ್ನೊಂದರಲ್ಲಿ ಸಳ ಹುಲಿಯೊಂದಿಗೆ ಕಾದುವ ದೃಶ್ಯ ಇದೆ. ಈ ಎರಡನೆಯದು ಯಾವುದೋ ಶಿಥಿಲಗೊಂಡ ದೇವಾಲಯದಿಂದ ಅಥವಾ ಹಳೆಯ ಕಟ್ಟಡದಿಂದ ತಂದ ಭಾಗ. ಕಟ್ಟೆ ಹೊಯ್ಸಳರ ಕಾಲದಲ್ಲಿ ಕಟ್ಟಿದ್ದನ್ನು ಇದು ಸಮರ್ಥಿಸುತ್ತದೆ. ಹುಲಿಕಾಳಗ ಪ್ರಿಯಾನಾಗಿದ್ದ, ಟಿಪ್ಪು, ಪ್ರಾಯಶಃ ಇದನ್ನು ತನ್ನ ಪುನರ್ ನಿರ್ಮಾಣದ ಕುರುಹಾಗಿ ಎದ್ದು ಕಾಣುವಂತೆ ಜೋಡಣೆ ಮಾಡಿಸಿರಬೇಕು೨”.

ಪೂರ್ಣಯ್ಯ ಸಹ ಈ ಕೆರೆಯನ್ನು ೧೮೦೦ ರಲ್ಲಿ ದುರಸ್ತಿ ಮಾಡಿಸಿದನೆಂದು ತೋರುತ್ತದೆ. ಆತನ ಪ್ರಕಾರ ಹಲವಾರು ವರ್ಷಗಳಿಂದಲೂ ಹಾಳುಬಿದ್ದಿದ್ದ ಈ ಕೆರೆಯನ್ನು ಅತ್ಯಂತ ಭದ್ರವಾಗಿ ಪುನರ್ ನಿರ್ಮಿಸಲಾಗಿದೆ ಮತ್ತು ಈಗ ಅದರಲ್ಲಿ ಸುಮಾರು ಹನ್ನೆರಡು ಆಳು ಪ್ರಮಾಣದ ನೀರು ಇದೆ೩ (ಸುಮಾರು ಅರವತ್ತು ಅಡಿ ಆಳ). ಇದರ ಅರ್ಥ ಟಿಪ್ಪು ಮೊದಲು ಮೋತಿ ತಲಾಬ್ ಕಟ್ಟೆಯನ್ನು ದುರಸ್ತಿಮಾಡಿ ಜೀರ್ಣೋದ್ಧಾರ ಮಾಡಿಸಿದ್ದರೂ, ಮುಂದೆ ಶತ್ರುಗಳಿಗೆ ಕೆರೆಯ ನೀರಿನ ಲಾಭ ಸಿಗಬಾರದು ಎಂದು ಇದನ್ನು ತಾನೆ ಒಡೆಸಿದ.

ಈ ಏರಿಯ ಇನ್ನೊಂದು ಸ್ವರಸ್ಯಕರ ಅಂಶವೆಂದರೆ ಮೆಟ್ಟಲು ಮೆಟ್ಟಲಾದ ಹೊರ ಮೈ ಕಲ್ಲು ಕಟ್ಟಡ, ವಾಟದ ಹೊಸಹಳ್ಳಿ ಕೆರೆಯ ಹಾಗೆಯೆ ಇದೆ. ಆದರೆ ಮೋತಿ ತಲಾಬಿನ ಕೆಲಸ ಆ ಇನ್ನೊಂದು ಕೆರೆಯಲ್ಲಿನಷ್ಟು ಸೊಗಸಾದುದಲ್ಲ. ಈ ಎರಡು ಕೆರೆಗಳು ಒಂದೇ ಕಾಲದಲ್ಲಿ ನಿರ್ಮಿತವಾಗಿರಬಹುದೇ? ಹಾಗೂ ಅಕ್ಕಪಕ್ಕದ ಗುಡ್ಡಗಳಲ್ಲಿ ಒಳ್ಳೆಯ ಕಲ್ಲು ಸುಲಭವಾಗಿ ಸಿಗುತ್ತಿದ್ದರಿಂದ ಈ ರಚನಾ ಮಾದರಿಯನ್ನು ಅನುಸರಿಸಲು ಸಾಧ್ಯವಾಯಿತೇ?

ಆಧಾರಗಳು :

೧. ರೈಸ್. ೨ನಂ. ೨ಪು. ೨೭೪

೨. ಮೈಸೂರು ಆರ್ಕಿಯಲಾಜಿಕಲ್ ರಿಪೋರ್ಟ್ ೧೯೩೯ – ಪು.೨೯

೩. ಸಿ.ಹಯವದನರಾವ್, ಮೈಸೂರು ಗೆಜೆಟಿಯರ್ ೧೯೩೦ ಸಂ. ೨ ಭಾಗ ೪ ಪು. ೨೭೯೬

೨. ಶಾಂತಿಸಾಗರ ಅಥವಾ ಸೂಳೆಕೆರೆ :

ಶಾಂತಿ ಸಾಗರ ಕರ್ನಾಟಕದ ಅತ್ಯಂತ ದೊಡ್ಡದಾದ ಹಳೆಯ ಕೆರೆ. ದಾವಣಗೆರೆ ಜಿಲ್ಲೆಯ ಚೆನ್ನಗಿರಿಗೆ ಸುಮಾರು ೧೨ ಮೈಲು ದೂರದಲ್ಲಿದೆ. ಇತ್ತೀಚಿನ ವರೆಗೂ ಸೂಳೆಕೆರೆ ಎಂದೇ ಸುಪ್ರಸಿದ್ದವಾಗಿತ್ತು. ಈ ಕೆರೆಯನ್ನು ಹನ್ನೊಂದು ಅಥವಾ ಹನ್ನೆರಡನೆಯ ಶತಮಾನದಲ್ಲಿ ಐತಿಹ್ಯದ ವೀರಸ್ತ್ರೀ ಶಾಂತವ್ವ ಎಂಬಾಕೆ ನಿರ್ಮಿಸಿದಳೆಂದು ನಂಬಲಾಗಿದೆ. ಈ ಕೆರೆಯ ಏರಿ ಅಷ್ಟೇನೂ ಉದ್ದವಿಲ್ಲ. ಕೇವಲ ೧೧೦೦ ಅಡಿ. ಅಷ್ಟು ಎತ್ತರವೂ ಇಲ್ಲ. ೬೦ ಅಡಿ ಮಾತ್ರ. ಇದರ ಮಹತ್ವ ಇರುವುದು ಸುಮಾರು ಹತ್ತು ಚದುರ ಮೈಲಿ ನಿಲ್ಲುವ ಅಪಾರ ವಿಸ್ತಾರದಲ್ಲಿ. ಸುಮಾರು ೪೦ ಮೈಲಿ ಸುತ್ತಳತೆಯ ವಿಸ್ತಾರದಲ್ಲಿ, ಎರಡೂ ಗುಡ್ಡಗಳ ನಡುವಿನ ಕಿರಿದಾದ ಕಣಿವೆಯಲ್ಲಿರುವ ಕೆರೆಯ ವಿಶಾಲವಾದ ಪ್ರಶಾಂತವಾದ ನೀರಿನ ಹರವು ಸುಂದರ ದೃಶ್ಯ. ಅಂತೆಯೆ ಶಾಂತಿಯ ಸಾಗರ ಹೆಸರು ಬಂದಿರಬಹುದು. ನಿರ್ಮಾತೃ ಶಾಂತವ್ವನ ಹೆಸರಿನಲ್ಲಿಯಾದರೂ ಶಾಂತಿಯ ಸಾಗರ ಎಂಬ ಅರ್ಥವೂ ಸಲ್ಲುತ್ತದೆ.

ಮೂರನೆಯ ಅಧ್ಯಾಯದಲ್ಲಿ ಹೇಳಿದಂತೆ, ಶಾಂತಿಸಾಗರವನ್ನು ಕಟ್ಟಲಾಗಿರುವ ಹೊಳೆ ಅಂದರೆ ಹರಿದ್ರಾನದಿಯ ಮೇಲೆಯೇ, ಶಾಂತಿ ಸಾಗದಿಂದ ಸುಮಾರು ೩೫ ಮೈಲಿ ಕೆಳಗೆ ಹರಿಹರದಲ್ಲಿ ೧೫ನೆಯ ಶತಮಾನದಲ್ಲಿ ಒಂದು ಕಟ್ಟೆಯನ್ನು ಕಟ್ಟಲಾಯಿತು. ಅದು ಕಟ್ಟಿದ ಹದಿನಾಲ್ಕು ವರ್ಷಗಳಲ್ಲಿ ಒಡೆದು ಹೋಯಿತು. ಮತ್ತೆ ಕಟ್ಟಲಾಯಿತು. ಅದು ಈಗ ಇಲ್ಲ. ಪ್ರಾಯಶಃ ಪುನರ್ನಿರ್ಮಿತ ಕಟ್ಟೆಯೂ ಒಡೆದು ಕೊಚ್ಚಿಹೋಗಿರಬೇಕು. ಇದಕ್ಕೆ ಪ್ರತಿಯಾಗಿ ಮಣ್ಣಿನ ಕಟ್ಟೆಯಾದ ಶಾಂತಿಸಾಗರ ಇಂದಿಗೂ ನಿಂತಿದೆ. ಅಪಾರ ಪ್ರವಾಹಗಳನ್ನು ತಡೆದುಕೊಂಡು ನಿಂತಿದೆ. ಇದು ಕಟ್ಟೆಯ ಉತ್ತಮ ನಿರ್ಮಾಣಕ್ಕೂ ಅದರ ೨೦೦ ಅಡಿ ಉದ್ದದ ಕೋಡಿಯ ದಕ್ಷ ಕಾರ್ಯನಿರ್ವಹಣೆಗೂ ಸಾಕ್ಷಿ.

ಕೆರೆಯ ಎರಡೂ ಪಕ್ಕಗಳಿಂದ ಒಂದೊಂದು ನಾಲೆ ಹೊರಡುತ್ತವೆ. ಎಡೆದಂಡೆ ನಾಲೆಯ ಉದ್ದ ಸುಮಾರು ೧೦ ಮೈಲಿ, ಅದನ್ನು ಬಸವನಾಲೆ ಎನ್ನುತ್ತಾರೆ. ಅದು ಸುಮಾರು ೧೮೦೦ ಎಕರೆಗಳಿಗೆ ನೀರು ಒದಗಿಸುತ್ತದೆ. ಬಲದಂಡೆ ನಾಲೆ ಸುಮಾರು ೨೨ ಮೈಲಿ ಉದ್ದವಿದೆ. ಅದರ ಹೆಸರು ಸಿದ್ಧನಾಲೆ. ಅದರಿಂದ ಸುಮಾರು ೩೫೦೦ ಎಕರೆಗೆ ನೀರಾವರಿ ಆಗುತ್ತದೆ. ನೀರಾವರಿ ನಾಲೆಗಳು ಹೊರಡುವ ಕಡೆ ಕೆರೆ ಎರಿಯಲ್ಲಿ ಇರುವ ತೂಬುಗಳು ಭಾರಿ ಆಕಾರದ ಕಲ್ಲುಕಟ್ಟಡದ ಸುರಂಗಗಳು. ಅವುಗಳಲ್ಲಿ ಒಬ್ಬ ಆಳು ಸಾಲೀಸಾಗಿ ಹಾದು ಹೋಗಬಹುದು. ಬಹುಕಾಲ ಈ ನಾಲೆಗಳು ಬಳಕೆಯಲ್ಲಿ ಇರಲಿಲ್ಲ. ೧೮೬೪ – ೬೫ರ ಅವಧಿಯಲ್ಲಿ ನಾಲೆಗಳನ್ನು ದುರಸ್ತಿ ಮಾಡಲಾಗಿ, ಭತ್ತ ಕಬ್ಬು, ಬೇಸಾಯ ಆರಂಭವಾಯಿತು. ಭದ್ರಾಯೋಜನೆ ಆಗಿ ಅದರ ಬಲದಂಡೆಯ ನಾಲಾ ವ್ಯೂಹದಿಂದ ನಿರಂತರವಾಗಿ ನೀರು ಬರುತ್ತದೆ. ಅಲ್ಲದೆ ಶಾಂತಿಸಾಗರದಿಂದ ಸುಮಾರು ೧೦ ರಿಂದ ೧೨ ಮೈಲಿ ಕೆಳಕ್ಕೆ ನದಿಗೆ ಮೂರು ಕಡೆ ಸಣ್ಣ ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಇದರಿಂದಾಗಿ ಈ ಎಲ್ಲ ಕಾಲುವೆಗಳು (ಅಣೆಕಟ್ಟಿನ ಕಾಲುವೆಗಳು ಹಾಗೂ ಕೆರೆಯ ಕಾಲುವೆಗಳು) ಕೆಳಗಿನ ಸುಮಾರು ೭೦೦೦ ಎಕರೆ ಅಚ್ಚುಕಟ್ಟು ಪ್ರದೇಶ ಭತ್ತ ಕಬ್ಬಿನ ಗದ್ದೆಗಳ ಸೊಂಪಾದ ನೋಟವಾಗಿದೆ.

ಈ ಕೆರೆಯ ಏರಿಯ ಬಲತುದಿಯಲ್ಲಿ ಒಂದು ಸಿದ್ದೇಶ್ವರ ಗುಡಿ ಇದೆ. ಅದರ ಮುಂಭಾಗದಲ್ಲಿ ಕೆಲವು ವಿರೂಪಗೊಂಡ ಶಾಸನಗಳು ಇವೆ. ಅವುಗಳಲ್ಲಿ ಒಂದು ೧೬ನೆಯ ಶತಮಾನದದ ವಿಜಯನಗರದ ಕಾಲವೆಂದು ತೋರುತ್ತದೆ.

ಆಧಾರಗಳು :

ರೈಸ್.ಸಂ.೨ ಪು. ೪೮೧ – ೮೨.

೩. ರಾಮಸಾಗರ :

ಕೋಲಾರದಿಂದ ಸುಮಾರು ೨೦ ಮೈಲಿಯಲ್ಲಿರುವ ರಾಮಸಾಗರ ಕರ್ನಾಟಕದಲ್ಲಿ ಪಾಲಾರು ನದಿಗೆ ಅಡ್ಡವಾಗಿ ಇರುವ ಕೊನೆಯ ಕೆರೆ. ಸುಮಾರು ಐದು ಮೈಲಿ ಕೆಳಗೆ ನದಿಯು ಕೋಲಾರ ಜಿಲ್ಲೆಯನ್ನು ಬಿಟ್ಟು, ತಮಿಳುನಾಡಿನ ಉತ್ತರ ಆರ್ಕಾಟು ಜಿಲ್ಲೆಯನ್ನು ಪ್ರವೇಶಿಸುತ್ತದೆ.

ಈ ಕೆರೆ ಚೋಳರ ಕಾಲದಲ್ಲಿ ನಿರ್ಮಿತವಾದುದು ಎನ್ನಲಾಗಿದೆ. ಆದರೆ ೩ನೆಯ ಅಧ್ಯಾಯದಲ್ಲಿ ಹೇಳಿದಂತೆ ಕೆರೆಯನ್ನು ಬುಕ್ಕರಾಯನ ಕಾಲದಲ್ಲಿ ಕಟ್ಟಿದ್ದು ಎಂದು ರಾಮಸಾಗದಲ್ಲಿನ ಶಾಸನವೇ ಹೇಳುತ್ತದೆ. ಮುರಾರಜಿ ಹಿಂದೂರಾವ್ ಘೋರ್ಪಡೆ (೧೭೫೧ – ೧೭೮೨) ಆಳ್ವಿಕೆಯಲ್ಲಿ ಕೆರೆ ಒಡೆಯಿತೆಂದು ತೋರುತ್ತದೆ. ಅವನು ಅದನ್ನು ಸರಿಪಡಿಸಿ ಹಿಂದಿನ ಬುಕ್ಕಸಾಗರ ಎಂಬ ಹೆಸರನ್ನೇ ಮತ್ತೆ ಇಟ್ಟ. ಕೆರೆ ಏರಿ ಮತ್ತೆ ಒಡೆದ ಸ್ಥಿತಿಯಲ್ಲಿದ್ದಾಗ ದಿವಾನ್ ಪೂರ್ಣಯ್ಯ(೧೮೦೦ – ೧೮೧೧)ಅದನ್ನು ಜೀರ್ಣೋದ್ಧಾರಮಾಡಿ, ರಾಮಸಾಗರ ಎಂದು ಹೆಸರು ಬದಲಾಯಿಸಿದ. ೧೯೦೩ರಲ್ಲಿ ಜಲಾನಯನ ಭೂಮಿಯಲ್ಲಿ ಅಸಾಮಾನ್ಯವಾಗಿ ಹೆಚ್ಚು ಮಳೆಬಿದ್ದು ಹೊಳೆಯ ಮೇಲುಭಾಗದಲ್ಲಿ ಅನೇಕ ದೊಡ್ಡ ಕೆರೆಗಳು ಒಡೆದುದರಿಂದ ರಾಮಸಾಗರ ಕಟ್ಟಿ ಮೂರು ಕಡೆ ಒಡೆದುಹೋಯಿತು. ಅದರಿಂದ ಅಪಾರ ಹಾನಿ ಸಂಭವಿಸಿತು. ಉತ್ತರ ಆರ್ಕಾಟು ಜಿಲ್ಲೆಯ ವಾಣಿಯಂಬಾಡಿ ಊರಿನ ಒಂದು ಭಾಗ ತ್ರೀವ್ರ ಹಾನಿಗೆ ಒಳಗಾಯಿತು. ರಾಮಸಾಗರ ಕೆರೆಯ ಎರಡೂ ಕಡೆಯ ನೀರಾವರಿ ನಾಲೆಗಳ ಆರಂಭ ಭಾಗಗಳೂ ಕೊಚ್ಚಿಹೋದವು.

ರಾಮಸಾಗರ ಏರಿ ತಲೆಭಾಗದಲ್ಲಿ ೧೨ ಅಡಿ ಅಗಲವಿದೆ. ಪಕ್ಕ ಇಳಿಜಾರು ಒಂದು ಲಂಬರೇಖೆಗೆ ಎರಡು ಸಮತಲ ರೇಖೆಯಷ್ಟು. ಎತ್ತರ ೩೦ ರಿಂದ ೬೦ ಅಡಿ ವರೆಗೆ. ಏರಿ ನೇರವಾಗಿಲ್ಲ. ನದಿಯ ಕಡೆಗೆ ಚಾಚಿ ಬಾಗಿದೆ. ಕೆರೆ ತುಂಬಿದಾಗ ನೀರಿನ ಹರವು ಆರು ಮೈಲಿ ಉದ್ದ ಇದ್ದು, ಸುಮಾರು ಎರಡು ಚದರ ಮೈಲಿಯಷ್ಟು ಅಗಲವಾಗಿರುತ್ತದೆ. ಇದು ಪಾಲಾರು ನದಿಯ ಕೊನೆಯ ಕೆರೆ. ಕೆರೆಗಳ ಸಾಲಿನಲ್ಲಿ ಸಾವಿರನೆಯದು. ಆದ್ದರಿಂದ ಇದು ತುಂಬುವುದು ಮೇಲಿನ ಕೆರೆ ಕೋಡಿ ಬಿದ್ದ ನಂತರವೇ. ಸುಮಾರು ೫೦ ಮೈಲಿ ಉದ್ದವಾಗಿರುವ ಹಾಗೂ ಸುಮಾರು ೮೦೦ ಚದರ ಮೈಲಿ ನೀರು ಬಸಿಯುವ ಪ್ರದೇಶ ಉಳ್ಳ ಈ ಕೆರೆಗಳ ಸಾಲು ಅಸಾಧಾರಣವಾದುದು. ಪಾಲಾರು ನದಿಯ ಉಗಮದಿಂದ ರಾಮಸಾಗರದ ವರೆಗೆ ನದಿಯ ಮೇಲೆ ರಾಮಸಾಗರಕ್ಕೆ ಮೊದಲು ೯೯೯ ಕೆರೆಗಳಿವೆ. ಅವುಗಳಲ್ಲಿ ಕೆಲವು ಚಿಕ್ಕವು. ಸೋಮಾಂಬುಧಿ, ಜನ್ನಘಟ್ಟ, ಮುದವಳ್ಳಿ, ಚಿಲ್ಲಪಳ್ಳಿ, ಮಣಿಘಟ್ಟ, ಹೊಳಲೆ, ಬೇತಮಂಗಳ ಮುಂತಾದವು ದೊಡ್ಡ ಕೆರೆಗಳು. ಪಾಲಾರುನದಿಯ ಜಲಾನಯನ ಭೂಮಿಯ ಪ್ರತಿ ಚದುರ ಮೈಲಿಗೂ ಕನಿಷ್ಟ ಒಂದು ಕೆರೆ ಇದೆ. ಆ ಪ್ರದೇಶದಲ್ಲಿ ನದಿಯ ನೀರನ್ನು ಜನ ಹಾಗೂ ದನಗಳ ಪ್ರಯೋಜನಕ್ಕಾಗಿ ಬಳಿಸಿಕೊಳ್ಳಲು, ನೈಸರ್ಗಿಕ ವೈಲಕ್ಷಣ್ಯಗಳನ್ನು ಉಪಯೋಗ ಮಾಡಿಕೊಳ್ಳಲು ನಮ್ಮ ಪೂರ್ವಜನರಿಗೆ ಇದ್ದ ಕೌಶಲ ಹಾಗೂ ಕಳಕಳಿಯನ್ನು ಇದು ತೋರಿಸುತ್ತದೆ.

ರಾಮಸಾಗದಲ್ಲಿ ಪಾಲಾರು ಎರಡಾಗಿ ಒಡೆದು, ಮುಂದೆ ಕೆಲವು ಮೈಲಿ ಕೆಳಗೆ ಮತ್ತೆ ಒಂದಾಗುತ್ತದೆ. ನಡುವಿನ ದಿಬ್ಬ ದ್ವೀಪವನ್ನು ಬಳಸಿಕೊಂಡು, ನದಿಯ ಎರಡು ಕವಲು ಅಡ್ಡಲಾಗಿ ಕಲ್ಲು ಕಟ್ಟೆಯ ಗೋಡೆಗಳನ್ನು ಕಟ್ಟಿ ಕೆರೆಯನ್ನು ನಿರ್ಮಿಸಲಾಗಿದೆ. ಈ ಎರಡು ಗೋಡೆಗಳೇ ಕೋಡಿಗಳ ಕೆಲಸವನ್ನೂ ಮಾಡುತ್ತವೆ. ಕೋಡಿಯ ಶಿಖರ, ನದಿಯ ಅತಿ ಕೆಳಗಿನ ತಳದಿಂದ ಸುಮಾರು ೫೦ ಅಡಿ ಎತ್ತರದಲ್ಲಿದೆ. ಕಲ್ಲುನೆಲ ಇರುವ ಕಡೆಯನ್ನೇ ಕೋಡಿ ಕಟ್ಟಲು ಆರಿಸಲಾಗಿದೆ. ಇದು ಕೋಡಿಯ ಗೋಡೆಗೆ ಒಳ್ಳೆಯ ಅಡಿಪಾಯವಾಗಿದೆ. ಮಾತ್ರವಲ್ಲ ಕೋಡಿಯಿಂದ ಬೀಳುವ ನೀರಿನ ಭಾರಿ ವೇಗದ ಹೊಡೆತವನ್ನು ತಡೆದುಕೊಳ್ಳಲು ಸೂಕ್ತವಾದ ಕಲ್ಲು ಹಾಸನ್ನೂ ಒದಗಿಸಿದೆ.

ಅತ್ಯಂತ ಎತ್ತರದ ಕೋಡಿ ಪ್ರವಾಹದ ದಾಖಲೆ ಎಂದರೆ, ೧೯೦೩ರಲ್ಲಿ ಕೋಡಿಯ ಶಿಖರದ ಮೇಲೆ ಸುಮಾರು೧೪ – ೧೫ ಅಡಿ ನೀರು ಹದಿದುದ್ದು. ಆಗಲೇ ಹೇಳಿದಂತೆ ಈ ಅಪಾರ ಪ್ರವಾಹ ಕೆರೆಯ ಏರಿಯನ್ನು ಹಲವು ಕಡೆ ಒಡೆದುಬಿಟ್ಟಿತ್ತು. ಬಲ ಪಾರ್ಶ್ವದ ಕೋಡಿಯನ್ನು ಕೊಚ್ಚಿ ಹಾಕಿತ್ತು. ಈಗ ಇರುವ ಏರಿ ಹಾಗೂ ಕೋಡಿಗಳು ೧೯೦೩ರ ನಂತರ ಪುನರ್ ನಿರ್ಮಿತವಾದುವು.

ರಾಮಸಾಗರ ಕೆರೆಗೆ ನಾಲ್ಕು ನೀರಾವರಿ ಕಾಲುವೆಗಳಿವೆ. ಎರಡು ಎಡ ಪಾರ್ಶ್ವದಲ್ಲಿ, ಒಂದು ದ್ವೀಪದ ನಡುವಿನಲ್ಲಿ ನಾಲ್ಕನೆಯದು ಬಲಪಾರ್ಶ್ವದಲ್ಲಿ. ನಡುವಿನ ದ್ವೀಪದಲ್ಲಿನ ಭೂಮಿಗಳಿಗೆ ನೀರು ಒದಗಿಸುವ ನಾಲೆ ನೇರವಾಗಿ ಕೆರೆ ಏರಿಯಿಂದಲೇ ಹೊರಡುತ್ತದೆ. ಇನ್ನು ಮೂರು ನಾಲೆಗಳು ಕೆರೆ ಏರಿಯಿಂದ ಹೊರಡುವುದಿಲ್ಲ. ಈ ನಾಲೆಗಳ ತೂಬಿನ ಬಾಗಿಲುಗಳನ್ನು ಕೋಡಿಯ ಗೋಡೆಯಲ್ಲಿ ಇರಿಸಲಾಗಿದೆ. ಈ ಬಾಗಿಲುಗಳಿಂದ ಬಿಡಲ್ಪಟ್ಟ ನೀರು ನದಿ ದಡದ ಮೇಲಿರುವ ನೀರಾವರಿ ನಾಲೆಯನ್ನು ತಲುಪುವ ಮುನ್ನ ನದಿಯನ್ನು (ಕೋಡಿ ಕಾಲುವೆ) ದಾಟಬೇಕು. ಇದಕ್ಕೆ ಮಾಡಿರುವ ವ್ಯವಸ್ಥೆ ಅಪೂರ್ವವಾದುದು.

ಎಡಪಾರ್ಶ್ವದ ಎರಡು ನಾಲೆಗಳು ಬೇರೆ ಬೇರೆ ಮಟ್ಟದಲ್ಲಿವೆ. ಕೆಳನಾಲೆ, ಮೇಲು ನಾಲೆಗಿಂತ ಸುಮಾರು ಎಂಟು ಅಡಿ ಕೆಳಗೆ ಇದೆ. ಕೋಡಿಯ ಗೋಡೆಯಲ್ಲಿನ ಎತ್ತರದ ಬಾಗಿಲಿನಿಂದ ನೀರನ್ನು ಕೋಡಿ ಕಾಲುವೆಗೆ ಬಿಡಲಾಗುವುದು. ನದಿಯ ದಡದ ಮೇಲೆ ನೀರಾವರಿ ಕಾಲುವೆ ಹೊರಡುವ ಕಡೆಯಲ್ಲಿ ಕೋಡಿ ಕಾಲುವೆಗೆ ಅಡ್ಡಲಾಗಿ ಒಂದು ಎತ್ತುಗಡೆ ಕಟ್ಟೆ ಅಥವಾ ಕಲ್ಲು ಕಟ್ಟೆಯನ್ನು ಕಟ್ಟಲಾಗಿದೆ. ಇಲ್ಲಿ ನೀರಿನ ಮಟ್ಟ ಏರಿ, ನೀರಾವರಿ ಕಾಲುವೆಯ ಬಾಗಿಲಿಗೆ ಹೋಗುತ್ತದೆ. ಕೆಳಮಟ್ಟದ ಕಾಲುವೆಗೆ ನೀರು ಬಿಡಲು ಮಾಡಿರುವ ವ್ಯವಸ್ಥೆ ಬೇರೆ ರೀತಿಯದು. ಕೋಡಿ ಕಟ್ಟೆಯಲ್ಲಿನ ಬಾಗಿಲಿನಿಂದ ಕೆಳಕ್ಕೆ ಬಿಡಲಾದ ನೀರು ಕೋಡಿ ಕಾಲುವೆ ಅಡಿಯಲ್ಲಿ ನಿರ್ಮಿಸಲಾದ ಒಂದು ಸುರಂಗ ಕಾಲುವೆಯಲ್ಲಿ ಹಾದು ಹೋಗುತ್ತದೆ. ಪ್ರಾಯಶಃ ಬೇರೆ ಬೇರೆ ಮಟ್ಟದಲ್ಲಿರುವ ಎರಡೂ ತೂಬುಗಳಿಗೆ ಬೇರೆ ಬೇರೆ ನಾಲೆ ಇರಬೇಕು ಎಂಬ ವಿಚಾರ ಇದ್ದಿರಬೇಕು ಹಾಗೂ ನಾಲೆಯ ತಳದ ಮಟ್ಟಗಳ ದೆಸೆಯಿಂದ ಎರಡೂ ನಾಲೆಗಳಿಗೆ ಒಂದೇ ರೀತಿಯ ವ್ಯವಸ್ಥೆ ಸಾಧ್ಯವಾಗಲಿಲ್ಲವೇನೋ. ವಾಸ್ತವವಾಗಿ ಈ ವ್ಯವಸ್ಥೆ ಚಮತ್ಕಾರಪೂರ್ಣವಾದುದು. ಇದು ಈ ಕೆರೆಯ ನಿರ್ಮಾತೃಗಳ ಇಂಜನಿಯರಿಂಗ್ ಸಾಮರ್ಥ್ಯವನ್ನು ಸಾರಿ ಹೇಳುತ್ತದೆ. ೧೯೦೩ರ ನೆರೆಯ ನಂತರ ಕೆರೆಯನ್ನು ಪುನರ್ ನಿರ್ಮಿಸಿದಾಗ ಮೇಲು ಮಟ್ಟದ ಕಾಲುವೆಯ ಎತ್ತುಗಡೆ ಕಟ್ಟೆಯ ವ್ಯವಸ್ಥೆಯನ್ನು ಕೈಬಿಡಲಾಯಿತು. ಅಲ್ಲೂ ನೀರನ್ನು ಒಂದು ಸುರಂಗ ಕಾಲುವೆ ಮೂಲಕ ಹರಿಯಿಸಲಾಗುತ್ತದೆ.

ಬಲ ಪಾರ್ಶ್ವದ ನಾಲೆಗೂ ಇದೇ ರೀತಿಯ ವ್ಯವಸ್ಥೆ ಇದೆ. ಕೋಡಿ ಕಟ್ಟೆಯ ಗೋಡೆಯಲ್ಲಿನ ತೂಬಿನಿಂದ ನೀರನ್ನು ಕೋಡಿ ನಾಲೆಯ ಅಡಿಯಲ್ಲಿ ಕಟ್ಟಿರುವ ಒಂದು ಸುರಂಗಕಾಲುವೆಯಲ್ಲಿ ಕೊಂಚ ದೂರ ಸಾಗಿಸಲಾಗುತ್ತದೆ. ಸುರಂಗದಿಂದ ಹೊರಬಂದ ಮೇಲೆ ನೀರು ಕೋಡಿ ನಾಲೆಯ ಅಗಲಕ್ಕೆ ಅಡ್ಡಲಾಗಿ ಕಟ್ಟಿರುವ ಒಂದು ಎತ್ತುಗಡೆ ಕಟ್ಟೆಯಲ್ಲಿ ತಂಗುತ್ತದೆ. ಮತ್ತೆ ಇಲ್ಲಿಂದ ನೀರನ್ನು ಇನ್ನೊಂದು ಸುರಂಗ ಕಾಲುವೆ ಮೂಲಕ ನೀರಾವರಿ ಕಾಲುವೆಗೆ ಹರಿಯಿಸಲಾಗುತ್ತದೆ. ಆ ಸ್ಥಳದ ಮೇಲ್ಮೈ ಸ್ವರೂಪವನ್ನು ಅತಿ ಕಡಿಮೆ ವೆಚ್ಚದಲ್ಲಿ ನಿಭಾಯಿಸಲು ಈ ಸಂಕೀರ್ಣ ವ್ಯವಸ್ಥೆಯನ್ನು ಮಾಡಿರುವುದು ಸುಸ್ಪಷ್ಟ. ೧೯೧೮ರಲ್ಲಿ ಎತ್ತುಗಡೆ ಕಟ್ಟೆಗೆ ಬದಲಾಗಿ ಒಂದು ಸುರಂಗ ಕಾಲುವೆಯನ್ನು ಕಟ್ಟಲಾಯಿತು. ಈಗ ನೀರು ತೂಬಿನಿಂದ ನಾಲೆಯ ವರೆಗೂ ಸುರಂಗ ಕಾಲುವೆಯಲ್ಲೆ ಸಾಗಿ ಹೋಗುತ್ತದೆ.

ಎಲ್ಲ ನಾಲ್ಕು ನೀರಾವರಿ ಕಾಲುವೆಗಳೂ ಭೂಮಿಯ ಮಟ್ಟ ರೇಖೆಯನ್ನೇ ಅನುಸರಿಸಿರುವ ಕಾಲುವೆಗಳು. ಎಡದಂಡೆಯ ಕಾಲುವೆ (ಕೆಳಮಟ್ಟದ ಕಾಲುವೆ) ಐದನೆಯ ಮೈಲಿಯಲ್ಲಿ ತಾಯಲೂರು ಹೊಳೆಗೆ ಸೇರುತ್ತದೆ (ತಾಯಲೂರು ಹಳ್ಳ ಈ ಸ್ಥಳದಿಂದ ಸುಮಾರು ಮೂರು ಮೈಲಿಯಲ್ಲಿ ಮುಖ್ಯ ಹೊಳೆ ಪಾಲಾರನ್ನು ಸೇರುತ್ತದೆ). ತಾಯಲೂರು ಹೊಳೆಯನ್ನು ಒಂದು ಮೇಲು ಕಾಲುವೆ ಮುಖಾಂತರ ದಾಟುವುದಕ್ಕೆ ಬದಲಾಗಿ ಕಾಲುವೆ ತಾಯಲೂರು ಹೊಳೆಗೆ ಬೀಳುತ್ತದೆ. ಅಲ್ಲಿಂದ ಸುಮಾರು ೩ ಫರ್ಲಾಂಗು ಕೆಳೆಗೆ ಒಂದು ಎತ್ತುಗಡೆ ಕಟ್ಟೆ ಅಥವಾ ಕಲ್ಲು ಕಟ್ಟೆಯನ್ನು ಹೊಳೆಗೆ ಅಡ್ಡಲಾಗಿ ಕಟ್ಟಲಾಗಿದೆ. ಸುಮಾರು ಒಂದೂವರೆ ಮೈಲಿ ಸಾಗಿದ ಮೇಲೆ ಈ ನಾಲೆ ಮಸ್ತೂರು ಹಳ್ಳಿಯ ಕೆರೆಗೆ ಸೇರಿಕೊಳ್ಳುತ್ತದೆ. ಕಾಲುವೆ ವ್ಯೂಹದಲ್ಲಿ ಬರುವ ಅಡತಡೆಗಳನ್ನು ನಿವಾರಿಸುವುದರಲ್ಲಿ ಆ ಕಾಲದ ನಿರ್ಮಾತೃಗಳಿಗಿದ್ದ ಕೌಶಲವನ್ನು ಈ ಕಾಲುವೆಯ ರಚನೆ ಎತ್ತಿತೋರಿಸುತ್ತದೆ.

ಬಲದಂಡೆ ನಾಲೆ ಹಾಗೂ ಎಡದಂತೆ ಕೆಳಮಟ್ಟದ ನಾಲೆಗಳು ಸುಮಾರು ಆರು ಮೈಲಿ ಉದ್ದ ಇವೆ. ಅವುಗಳನ್ನು ಬಿಟ್ಟರೆ ಉಳಿದ ಎರಡೂ ನಾಲೆಗಳು ಚಿಕ್ಕವು. ಎಲ್ಲವೂ ಒಟ್ಟು ೧೨೦೦ ಎಕರೆಯನ್ನು ಆವರಿಸುತ್ತವೆ. ಮೇಲು ಮಟ್ಟದ ಎಡದಂಡೆ ನಾಲೆಗೆ ಹತ್ತು ಹೊರ ಗಂಡಿ, ಮೂರು ತೆರೆದ ಸೀಳು ಇವೆ. ಅವುಗಳಿಂದ ಸುಮಾರು ೫೮ ಎಕರೆಗಳಿಗೆ ನೀರು ಹಾಯುತ್ತದೆ. ಪ್ರತಿಯೊಂದು ಹೊರಗಂಡಿ ಹಾಗೂ ಸೀಳುಗಳಲ್ಲೂ ನೀರಾವರಿ ಆಗುವ ಸರಾಸರಿ ಪ್ರದೇಶ ಕೇವಲ ನಾಲ್ಕು ಎಕರೆಯಷ್ಟು ಮಾತ್ರ. ಮುಂದಿನ ಕೆಳಮಟ್ಟದ ಎಡದಂಡೆ ನಾಲೆಗೆ ೪೧ ಹೊರ ಗಂಡಿ ಇವೆ. ೬೨೧ ಎಕರೆಗೆ ನೀರು ಹಾಯುತ್ತದೆ. ಈ ಪ್ರತಿಯೊಂದು ಹೊರಗಂಡಿಯಲ್ಲಿ ನೀರಾವರಿ ಆಗುವ ಸರಾಸರಿ ಪ್ರದೇಶ ಸುಮಾರು ೧೫ ಎಕರೆ. ಬಲದಂಡೆ ನಾಲೆಗೆ ೩೪ ಹೊರಗಂಡಿಗಳಿದ್ದು ಸುಮಾರು ೩೮೦ ಎಕರೆಗೆ ನೀರು ಒದಗುತ್ತದೆ. ಈ ಪ್ರತಿಯೊಂದು ಹೊರಗಂಡಿಯಲ್ಲಿ ನೀರಾವರಿ ಪ್ರದೇಶದ ಸರಾಸರಿ ಸುಮಾರು ೧೧ ಎಕರೆಗಳು. ಏರಿಯಿಂದಲೇ ಹೊರಡುವ ಕಾಲುವೆಗೆ ಒಂದೇ ಒಂದು ಹೊರಗಂಡಿ ಇದ್ದು, ಸುಮಾರು ೨೩ ಎಕರೆಗಳಿಗೆ ನೀರು ಒದಗುತ್ತದೆ. ಈ ಇಲ್ಲ ಹೊರ ಗಂಡಿಗಳಿಂದ ನೀರಾವರಿ ಆಗುವ ಪ್ರದೇಶ ತುಂಬ ಚಿಕ್ಕದು. ಹಾಗಾಗಿ ಸಾಕಷ್ಟು ನೀರು ವ್ಯರ್ಥವಾಗುತ್ತದೆ. ಗಮನಿಸಲಾದ ಇನ್ನೊಂದು ಮುಖ್ಯ ಅಂಶವೆಂದರೆ ನಾಲೆಗಳನ್ನು ವಿನ್ಯಾಸಗೊಳಿಸಿರುವುದು. ೨೫ ಎಕರೆಗೆ ೧೨ಗಂಟೆ ಕಾಲ ನೀರು ಒದಗಿಸಲು ಮಾತ್ರ. ಅಂಥ ನೀರಾವರಿ ಆಗುವುದು ಹಗಲು ಹೊತ್ತು ಮಾತ್ರ. ಕಾಲುವೆಯ ಅಂಥ ವಿನ್ಯಾಸಕ್ಕೆ ಹೆಚ್ಚು ನೀರು ಹರಿಸಲು ಸಾಮರ್ಥ್ಯ ಉಳ್ಳಂತೆ ಕಾಲುವೆ ನಿರ್ಮಿಸಬೇಕಾಗುತ್ತದೆ. ರಾತ್ರಿ ವೇಳೆ ನೀರು ವ್ಯರ್ಥವಾಗುವುದಿಲ್ಲ. ಒಂದು ಸಾವಿರ ಎಕರೆ ಹಾಗೂ ಕಡಿಮೆ ಅಚ್ಚುಕಟ್ಟಿನ ನಮ್ಮ ಎಲ್ಲ ಕೆರೆಗಳ ಬಗ್ಗೆಯೂ ಅಂಥ ವ್ಯವಸ್ಥೆ ಪ್ರಾಯಶಃ ಸಹಾಯಕವಾದೀತು.

ಮೂಲ:

ಎಸ್.ಎ.ರಾಮಸ್ವಾಮಿ – ಹ್ಯಾಂಡ್ ಬುಕ್ ಆನ್ ರಾಮಸಾಗರ ಟ್ಯಾಂಕ್ ಅಂಡ್ ಚಾನಲ್ಸ್ – ಮೈಸೂರು ಸರ್ಕಾರ.

೪. ಮದಗ – ಮಾಸೂರು ಕೆರೆ :

ತುಂಗಭದ್ರಾ ನದಿಯ ಉಪನದಿಯಾದ ಕುಮುದ್ವತಿಗೆ ಅಡ್ಡಲಾಗಿರುವ ಮದಗದ ಕಟ್ಟೆ ಕಟ್ಟಿದುದು ಕೃಷ್ಣದೇವರಾಯನ ಕಾಲದಲ್ಲಿ (೧೬ನೆಯ ಶತಮಾನ). ಕೆಳದಿ ನೃಪವಿಜಯದ ಪ್ರಕಾರ, ಕೆಳದಿಯ ಸದಾಶಿವನಾಯಕನು, ಕೃಷ್ಣದೇವರಾಯರ ಆಜ್ಞೆಯ ಮೇರೆ, ಬಂಕಾಪುರದ ಮಾದಣ್ಣ ಒಡೆಯನ ಸಹಕಾರದೊಂದಿಗೆ ಈ ಕೆರೆಯನ್ನು ಕಟ್ಟಿಸಿದನು೧. ಅತಿ ಎತ್ತರದ ಈ ಮಣ್ಣು ಕಟ್ಟೆ ಧಾರವಾಡ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಮಾಸೂರು ಗ್ರಾಮಕ್ಕೆ ಸುಮಾರು ೪ ಮೈಲಿ ದೂರದಲ್ಲಿದೆ. ಕಟ್ಟೆ ಬುಡದಲ್ಲಿ ಸುಮಾರು ೮೦೦ ಅಡಿ ಅಗಲವಿದೆ. ತಲೆಯಲ್ಲಿ ೪೦೦ ರಿಂದ ೬೦೦ ಅಡಿ ಅಗಲವಿದೆ. ನದಿಯ ಅಡಿಯಿಂದ ಸುಮಾರು ೧೦೦ ಅಡಿ ಎತ್ತರವಾಗಿದೆ.

ಮದಗ ಕೆರೆಯ ಹೊರಗಂಡಿಯ ಮೇಲೆ ಜೋಡಿಸಿರುವ ಒಂದು ಶಿಲಾಲೇಖ ಈ ಕೆರೆಯ ತೂಬನ್ನು ೧೮೬೩ರಲ್ಲಿ ಬ್ರಿಟಿಷ್ ಸರ್ಕಾರ ದುರಸ್ತಿ ಮಾಡಿಸಿತು ಎಂದು ತಿಳಿಸುತ್ತದೆ. ಈ ಶಿಲೆ ಗುಡ್ಡದ ಮೇಲಿನ ಕೋಟೆಯ ದಕ್ಷಿಣ ಬಾಗಿಲಿನಲ್ಲಿತ್ತು. ಅದನ್ನು ತಂದು ಇಲ್ಲಿ ಹೊರಂಗಡಿಯ ಮೇಲೆ ಜೋಡಿಸಲಾಗಿದೆ. ಶಿಲೆಯಲ್ಲಿ ಒಂದು ಪಾರಸೀ ಲೇಖವೂ ಇದೆ. ಏಳನೆಯ ಆದಿಲ್ ಷಾಹಿ ದೊರೆ ಮಹಮ್ಮದನ(೧೬೨೭ – ೧೬೫೬) ಒಬ್ಬ ಅಧಿಕಾರಿ ಮಹಮ್ಮದ್ ಬಿನ್ ರಾಜಾಫರೀದ್ ಏಂಬಾತ ಕೊಟೆಯನ್ನು ೧೬೩೨ರಲ್ಲಿ ಕಟ್ಟಿಸಿದ ಎಂದು ಈ ಲೇಖ ತಿಳಿಸುತ್ತದೆ.

ಎರಡು ಗುಡ್ಡಗಳ ನಡುವೆ ನದಿಗೆ ಅಡ್ಡಲಾಗಿ ಮಣ್ಣು ಕಟ್ಟೆಯನ್ನು ಕಟ್ಟಿ ಮದಗದ ಕೆರೆಯನ್ನು ನಿರ್ಮಿಸಲಾಗಿದೆ.

ಕಣಿವೆಯ ಬಲ ಹಾಗೂ ಏಡ ಪಾರ್ಶ್ವದ ಗುಡ್ಡಗಳ ನಡುವಿನ ಸಂದುಗಳಿಗೆ ಅಡ್ಡಲಾಗಿಯೂ ಇದೇ ತೆರನಾದ ಏರಡು ಕಟ್ಟೆಗಳನ್ನು ರಚಿಸಲಾಗಿತ್ತು; ಮತ್ತು ಕೆರೆ ಉದ್ದೇಶಿತ ಎತ್ತರದ ವರೆಗೂ ತುಂಬಿದಾಗ ನೀರು ಕೋಡಿ ಹರಿಯಲು ಗುಡ್ಡಗಳ ಪಕ್ಕದಲ್ಲಿ ಒಂದು ಕಾಲುವೆಯನ್ನು ತೋಡಲಾಗಿತ್ತು. ಕೆರೆ ತುಂಬಿದಾಗ ಹತ್ತರಿಂದ ಹದಿನೈದು ಮೈಲಿ ಉದ್ದ ಇದ್ದಿರಬೇಕು (ಅದರ ಹರವು). ತುಂಬಾ ವಿಶಾಲ ಪ್ರದೇಶದ ನೀರಾವರಿಗೆ ನೀರು ಒದಗಿಸುತ್ತಿದ್ದಿರಬೇಕು.

ಮದಗ ಕಟ್ಟೆಯ ಶಿಖರದ ಮಟ್ಟ ಆರ್ ಎಲ್ ೧೯೭೩.೦೦ ರಷ್ಟಿದೆ. ಕಟ್ಟೆಯಿಂದ ಹೊಳೆಯ ಮೇಲೆ ಸುಮಾರು ಹತ್ತು ಮೈಲಿಯಲ್ಲಿರುವ ಷಿಕಾರಿಪುರ ಊರಿನ ಸುತ್ತಲೂ ೬೦೦ ಮೀಟರ್ (ಆರ್‌ ಎಲ್ ೧೯೬೮.೦೦) ಭೂಮೇಲ್ಮೈ ರೇಖೆ ಹಾದು ಹೋಗುತ್ತದೆ. ಮದಗ ಸರೋವರ ಪೂರ್ಣಗೊಂಡಾಗ ನೀರಿನ ಮಟ್ಟ ಈ ಊರಿನ ಅಂಚನ್ನು ಮುಟ್ಟಿದ್ದು ಸಂಭವನೀಯ. ಆದ್ದರಿಂದ ಮದಗ ಕೆರೆ ತುಂಬಿದಾಗ ನೀರಿನ ಮಟ್ಟ ಸುಮಾರು ಆರ್‌ ಎಲ್ ೧೯೬೦.೦೦ ಇತ್ತು ಎಂದು ಊಹಿಸಬಹುದು.

ಧಾರವಾಡ ಗೆಜೆಟಿಯರ್ ಹೇಳುತ್ತದೆ – “ಮೂರು ಕಟ್ಟೆಗಳಲ್ಲಿ ಒಂದೊಂದಕ್ಕೂ ಕತ್ತರಿಸಿದ ಭಾರಿ ಕಲ್ಲು ಬಂಡೆಗಳಿಂದ ಕಟ್ಟಲಾದ ತೂಬುಗಳಿದ್ದವು. ಅವುಗಳಲ್ಲಿ ಎರಡು ಕಟ್ಟಿದಾಗ ಎಷ್ಟು ಚೆನ್ನಾಗಿದ್ದವೋ ಈಗಲೂ ಹಾಗೆ ಇವೆ. ಈ ತೂಬುಗಳನ್ನು ಇತರ ಹಳೆಯ ತೂಬುಗಳ ಸೂತ್ರಾನುಸಾರವಾಗಿಯೇ ಕಟ್ಟಲಾಗಿತ್ತು. ಏರಿಯ ಮೂಲಕ ಒಂದು ಆಯಾಕಾರದ ಕಲ್ಲು ಕಟ್ಟಡದ ಕಾಲುವೆ ಅದಕ್ಕೆ ಮರದ ಕೊಂತವನ್ನು ಜೋಡಿಸಿದ, ಒಂದು ರಂಧ್ರವಿರುವ ಕಲ್ಲು ಚಪ್ಪಡಿಯ ಬಾಗಿಲು. ಆದರೆ ತೂಬುಗಳನ್ನು ಕೆರೆಯ ಆಕಾರಕ್ಕೆ ತಕ್ಕ ಪ್ರಮಾಣದಲ್ಲಿರಬೇಕು. ಆದ್ದರಿಂದ ಸಾಮಾನ್ಯ ಕಾಮಗಾರಿಗಳಲ್ಲಿ ಇರುವಂತೆ ಕೊಂತದ ಮೇಲೆ ಕಲ್ಲು ಚಪ್ಪಡಿಯನ್ನು ಎತ್ತಿ ಹಿಡಿಯುವ ಸಣ್ಣ ಕಲ್ಲು ಕಂಭಗಳಿಗೆ ಬದಲಾಗಿ ತಲಾ ಸುಮಾರು ೨೦ ಟನ್ ಭಾರದ ಒಂದೇ ಕಲ್ಲನ್ನು ಆಧಾರಸ್ತಂಭವಾಗಿ ಜೋಡಿಸಲಾಗಿತ್ತು.”

“ಕೆರೆ ಪೂರೈಸಿ ನೀರಿನಿಂದ ತುಂಬಿತು. ಆದರೆ ಯಾವಾಗಲೊ ಒಮ್ಮೆ ಭಾರಿ ಪ್ರವಾಹ ಬಂದಾಗ ಒಡೆದು ಹೋಯಿತು. ಎಚ್ಚರಿಕೆಯಿಂದ ಮುಚ್ಚಿದ್ದ ಕಣಿವೆಯಲ್ಲಿ ಒಡೆಯಲಿಲ್ಲ, ಮೂರುಕಟ್ಟೆಗಳ ಪೈಕಿ ತೀರ ಪಶ್ಚಿಮಕ್ಕೆ ಇದ್ದ ಕಡೆ ಒಡೆಯಿತು. ಈ ಹೊರಗಂಡಿಯಿಂದ ವಿಶಾಲ ಜಲರಾಶಿ ನುಗ್ಗಿ ಹರಿದು ಆಳವಾದ ಕೊಳ್ಳಕ್ಕೆ, ಸುಮಾರು ನೂರು ಅಡಿ ಆಳಕ್ಕೆ ಧುಮುಕಿತು. ಚಾಕುವಿನಿಂದ ಕತ್ತರಿಸಿದಂತೆ ಲಂಬವಾಗಿ ದೊಡ್ಡ ಕೊರಕಲನ್ನೆ ನಿರ್ಮಾಣಮಾಡಿತು. ನೀರಿನ ಒತ್ತಡ ಇಳಿದಂತೆ ಹಾಗೂ ಕತ್ತರಿಸಬೇಕಾದ ಭೂಪದರ ಗಡುಸಾದಂತೆ ಕೊರೆತ ನಿಂತಿತು. ಈ ಅನಾಹುತ ಆದಮೇಲೆ ಒಡೆದ ಕೆರೆಯಲ್ಲಿ ಇನ್ನೂ ಉಳಿದಿದ್ದ ನೀರನ್ನು ಬಳಸಿಕೊಳ್ಳಲು ಯಾವ ಕ್ರಮವನ್ನು ತೆಗೆದುಕೊಳ್ಳಲಿಲ್ಲ.”

“ಬಿರುಕು ಉಂಟಾದಾಗ ವಿಪರೀತ ದಪ್ಪನಾದ ಕಟ್ಟೆಯ ಮೂಲಕ ನೀರನ್ನು ಹಾಯಿಸಲು ಇದ್ದ ಅತಿ ಕೆಳಗಿನ ತೂಬು ನೀರಿನ ಮಟ್ಟಕ್ಕಿಂತ ಮೇಲೆ ಇರುವಂತಾಗಿ ಯಾವ ಕೆಲಸಕ್ಕೂ ಬಾರದೆ ಹೋಯಿತು.”

“ಹೊರಗಂಡಿಯ ಆಳವಾದ ಕೊರಕಲನ್ನು ಅಡ್ಡಗಟ್ಟಿ, ಅದರಿಂದ ಹಳೆಯ ತೂಬುಗಳಲ್ಲಿ ನೀರು ಹಾಯಿಸಲು ಸಾಕಾಗುವಷ್ಟು ಮಟ್ಟಕ್ಕೆ ಕೆರೆಯ ನೀರಿನ ಮಟ್ಟವನ್ನು ಏರಿಸುವ ಪ್ರಯತ್ನಕ್ಕೆ ಭಾರಿ ವೆಚ್ಚ ಅಡ್ಡಿಯಾಯಿತು. ಅಷ್ಟೇ ಅಲ್ಲ ಮೈಸೂರು ಪ್ರಾಂತ್ಯದಲ್ಲಿ ಆ ಕೆರೆಯ ಅಂಚಿನಲ್ಲಿ ಕೆರೆ ನೀರಿನ ಮಟ್ಟದ ಏರಿಕೆಯಿಂದ ಮುಳುಗಡೆ ಆಗಬಹುದಾದ ಜಮೀನು ಪಡೆದಿದ್ದ ಗ್ರಾಮಸ್ಥರಿಂದಲೂ ವಿರೋಧ ಬಂದಿತು.”

“ಈ ಕಷ್ಟಗಳಿಂದಾಗಿ ೧೮೫೮ – ೫೯ರವರೆಗೆ ಏನನ್ನೂ ಮಾಡಲಿಲ್ಲ. ಆಗ ಲೆ.ಕರ್ನಲ್ ಪ್ಲೇಫೇರ್ ಧಾರವಾಡ ಬೆಳಗಾಂ ಜಿಲ್ಲೆಗಳ ಕಾರ್ಯನಿರ್ವಹಕ ಇಂಜನಿಯರ್ ಯೋಚನೆ ಮಾಡಿದ. ಹಳೆಯ ತೂಬಿನ ಕೆಳಗೆ ಒಂದು ಅಡಿಕಾಲುವೆ (ಕಲ್‌ವರ್ಟ್)ಯನ್ನು ಮಾಡಿದಲ್ಲಿ ಕೆರೆಯನ್ನು ಬಳಸಿಕೊಳ್ಳುವುದರಲ್ಲಿ ಸಫಲರಾಗಬಹುದು ಎಂದು ಯೋಚಿಸಿದ. ಕರ್ನಲ್ ಪ್ಲೇಫೇರ್‌ನ ಖುದ್ದು ಉಸ್ತುವಾರಿಯಲ್ಲಿ ಇದನ್ನು ಮಾಡಲಾಯಿತು. ಅದಕ್ಕಾಗಿ ಮಣ್ಣು ತುಂಬಿ ಹೋಗಿದ್ದ ಹಳೆಯ ತೂಬನ್ನು ಮೊದಲು ಚೊಕ್ಕಟ ಮಾಡಬೇಕಾಯಿತು. ಎರಡೂ ಪ್ರಾಂತ್ಯಗಳ ಕಡೆಯಿಂದಲೂ ಈ ಕೆಲಸ ಆರಂಭವಾಯಿತು. ಅದಕ್ಕೆ ಮೈಸೂರಿನವರ ವಿರೋಧ ತಪ್ಪಲಿಲ್ಲ. ಅವರು ಮೊದಲು ಕೆಲಸಗಾರರನ್ನು ಓಡಿಸಿಬಿಟ್ಟರು. ತಮ್ಮ ಕಡೆ ಏನನ್ನೂ ಮಾಡಬಾರದು ಎಂದು ಅಕ್ಷೇಪಿಸಿದರು. ಕೆಲಸಗಾರ ಎರಡು ತಂಡಗಳೂ ಪರಸ್ಪರ ೧೦೦ ಅಡಿಗಳಷ್ಟು ಹತ್ತಿರಕ್ಕೆ ಬಂದಾಗ ಕೆಲಸವನ್ನು ನಿಲ್ಲಿಸಬೇಕಾಯಿತು. ಏಕೆಂದರೆ ತೂಬಿನ ಮೇಲು ಚಾವಣಿಯನ್ನು ಹೊತ್ತು ನಿಂತಿದ್ದ ಕಲ್ಲುಗಳು ಕುಸಿದು ಬಿದ್ದವು. ತೂಬನ್ನು ಮೊದಲು ಕಣಿವೆಯ ಕಲ್ಲು ನೆಲದ ಮೇಲೆ ಜೋಡಿಸಿ. ಅದಕ್ಕೆ ದೈತ್ಯಾಕಾರದ ಕಲ್ಲು ಚಪ್ಪಡಿಗಳನ್ನು ಮುಚ್ಚಿ. ಅದರ ಮೇಲೆ ಕಟ್ಟಿ ಹಾಕಿದ್ದುದು ಕಂಡು ಬಂತು. ಒಂದು ನೂರು ಅಡಿ ಮಣ್ಣಿನ ಭಾರ ತೂಬಿನ ಚಾವಣಿಯ ಸಾಮಾರ್ಥ್ಯಕ್ಕೆ ಮೀರಿದುದಾಗಿತ್ತು.”

“ತೂಬಿನ ಚಾವಣಿ ಕುಸಿದಿದ್ದ ಭಾಗವನ್ನು ಖಾಲಿಮಾಡುವುದು ಅತ್ಯಂತ ಅಪಾಯವೆನಿಸಿತು. ತೋರಿದ ಒಂದೇ ಉಪಾಯ, ಮುರಿದುಬಿದ್ದ ಕಲ್ಲುಗಳನ್ನು ಮೆಲ್ಲಗೆ ಅಗೆದು ತೆಗೆದು ಅದರ ಅಚೆಗೆ ಗಟ್ಟಿ ಕಲ್ಲು ಸಿಗುವುದೇ, ಎಂದು ನೋಡುವುದು. ಆಮೇಲೆ ಮತ್ತೆ ತಲೆಯ ಮೇಲೆ ಚಾವಣಿ ಏರ್ಪಡಿಸುವುದು. ಈ ಪ್ರಯತ್ನ ಫಲಿಸಿತು. ಮುಚ್ಚಿದ್ದ ಕೆಲವು ಕಲ್ಲುಗಳಷ್ಟೆ ಬಿದ್ದು ಹೋಗಿದ್ದವು. ಅವುಗಳ ಮೇಲೆ ಇದ್ದ ಮಣ್ಣು ಕಾಲದ ದೆಸೆಯಿಂದ ಸಾಕಷ್ಟು ಗಟ್ಟಿಯಾಗಿದ್ದು ಅದರ ನಡುವೆ ಹಾದಿಯನ್ನು ಅಗೆಯಬಹುದಾಗಿತ್ತು. ಎರಡೂ ಕಡೆಯ ತಂಡಗಳು ಕೊನೆಗೂ ಸೇರಿದವು. ಹಳೆಯ ಸುರಂಗಮಾರ್ಗಗಳನ್ನು ಪೂರಾ ೮೦೦ ಅಡಿಗಳಷ್ಟು ತೆರೆಯಲಾಯಿತು.”

“ಅನಂತರ ಹಳೆಯ ತೂಬಿನ ಕೆಳಗೆ ಅಡಿಗಾಲುವೆ ಅಗೆಯುವುದನ್ನು ಆರಂಭಿಸಲಾಯಿತು. ಹಳೆಯ ಕಾಮಗಾರಿ ಗವಾಕ್ಷವೂ ಆಗಿತ್ತು. ಚಾವಣೆಯೂ ಆಗಿತ್ತು. ಹೊಸ ಸುರಂಗವನ್ನು ಮಾಡುವ ವರೆಗೂ ಕೇಂದ್ರ ಭಾಗದ ವರೆಗೂ ಎಲ್ಲ ಸುಗಮವಾಗಿ ಸಾಗಿತು. ಅಲ್ಲಿದ್ದ ಅತ್ಯಂತ ಗಟ್ಟಿಯಾದ ಭಾರಿ ಬಂಡೆಗಲ್ಲು ತುಂಬ ತೊಂದರೆಕೊಟ್ಟಿತು. ಅದನ್ನು ಸಿಡಿಸೋಣ ಎಂದರೆ ಮೇಲೆ ಶಿಥಿಲವಾದ ಹಳೆಯ ಕಲ್ಲು ಕಟ್ಟಡ. ಹಾಗಾಗಿ ಉಳಿದ ಕೆಲಸವನ್ನೆಲ್ಲ ಮಾಡಿದ್ದು ಅಕ್ಷರಶಃ ಪುಡಿಪುಡಿಮಾಡಿಯೆ”.

ಹೊರಗಂಡಿಯ ಕೊನೆಯಲ್ಲಿ ನೆಟ್ಟಿರುವ ಒಂದು ಕಲ್ಲಿನ ಫಲಕದಲ್ಲಿ ಹೀಗಿದೆ: “ಈ ಕೆರೆಯ ನೀರು ಅನೇಕ ವರ್ಷಗಳು ಕಾಲ ಬಂಧಿತವಾಗಿತ್ತು. ಈಗ ಈ ತೂಬನ್ನು ಕಟ್ಟಿ, ಸೂತಕೋಟೆ ಮತ್ತು ಸುತ್ತಲು ಹಳ್ಳಿಗಳ ಜಮೀನುಗಳನ್ನು ಫಲವತ್ತುಗೊಳಿಸಲು ನೀರನ್ನು ಹೊರತರಲಾಯಿತು.”

“ಇಡೀ ಕೆಲಸ ಕ್ಯಾಪ್ಟನ್ ಫ್ಲೇಫೇರ್ ಕಾರ್ಯನಿರ್ವಾಹಕ ಇಂಜನಿಯರ್ ಧಾರವಾಡ ಹಾಗೂ ವಿಠಲ ಭವಾನಿ ಸಬ್‌ಇಂಜನಿಯರ್ ಅವರಗಳಿಂದ ರೂಪಿತವಾಗಿ ನಿರ್ವಹಿಸಲ್ಪಟ್ಟಿತ್ತು. ಈ ಕೆಲಸ ಅನೇಕ ತೊಂದರೆಗಳನ್ನು ದಾಟಿ ೧೮೬೨ನೆಯ ಇಸವಿಯಲ್ಲಿ ಅಂಗ್ಲ ಸರ್ಕಾರದ ಖರ್ಚಿನಲ್ಲಿ ಪೂರೈಸಲ್ಪಟ್ಟಿತು೨”

ಗಟ್ಟಿಕಲ್ಲು ಪದರ ದವರೆಗೂ ಅಂದರೆ ಆರ್ ಎಲ್ ೧೮೭೪ ಮಟ್ಟದ ವರೆಗೂ ಹೊಳೆ, ಬಿರುಕಿನ ಸ್ಥಳದಲ್ಲಿ (ಸುಮಾರು ೧೫೦ ಅಡಿ ಅಗಲ) ಅಕ್ಷರಶಃ ಕೊಚ್ಚಿಹಾಕಿತ್ತು. ಆ ಸ್ಥಳದಲ್ಲಿ ೧೮೬೨ರಲ್ಲಿ ಒಂದು ಕಲ್ಲು ಕಟ್ಟೆಯನ್ನು ಕಟ್ಟಲಾಯಿತು. ಅದರ ಶಿಖರ ಆರ್ ಎಲ್ ೧೮೭೭.೭೩ರ ಮಟ್ಟಕ್ಕೆ ಇತ್ತು. ಹಳೆಯ ಹೊರಗಂಡಿಯ ಕೆಳಗೆ ಕಟ್ಟಲಾದ ಹೊಸ ಹೊರಗಂಡಿಯ ಮೇಲು ಚಪ್ಪಡಿಯನ್ನು ಆರ್ ಎಲ್ ೧೮೭೩.೨೫ರ ಮಟ್ಟದವಲ್ಲಿ ಇಡಲಾಯಿತು.(ಹಳೆಯ ಹೊರಗಂಡಿಯ ಮೇಲು ಚಪ್ಪಡಿ ಮಟ್ಟ ಆರ್ ಎಲ್ ೧೮೯೧.೦೦). ಈ ಹೊರಗಂಡಿಯಿಂದ ಎರಡು ನಾಲೆಗಳು ಹೊರಡುತ್ತವೆ. ಒಂದು ನದಿಯ ಎಡದಂಡೆಯ ಭೂಮಿಗಳಿಗೆ ನೀರು ಒದಗಿಸುತ್ತದೆ. ಇನ್ನೊಂದು ನದಿಯ ಬಲದಂಡೆಗೆ ಹೋಗುತ್ತದೆ. ಎಡ ದಂಡೆಯ ಉದ್ದ ೬.೫ ಮೈಲಿ. ಅದು ಒಂದು ಮೇಲು ಕಾಲುವೆಯ ಮೂಲಕ ನದಿಯನ್ನು ದಾಟುತ್ತದೆ. ಬಲದಂಡೆ ನಾಲೆ ೮.೫ ಮೈಲಿ ಉದ್ದವಿದೆ. ಎರಡೂ ನಾಲೆಗಳು ಒಟ್ಟು ಸುಮಾರು ೬೨೦ ಎಕರೆಗಳಿಗೆ ನೀರಾವರಿ ಒದಗಿಸುತ್ತವೆ. ವಿಚಿತ್ರವಾಗಿ ತೋರುವುದೆಂದರೆ ಹಳೆಯ ಹೊರಗಂಡಿಯ ಪ್ರವೇಶ ಸ್ಥಳದಲ್ಲಿ ಮೇಲು ಚಪ್ಪಡಿಯ ಮಟ್ಟ ೧೮೯೧.೦೦. ನಿರ್ಗಮನ ಸ್ಥಳದಲ್ಲಿ ಸುಮಾರು ೧೮೮೦. ಆರ್ ಎಲ್ ೧೮೮೦ರ ಮಟ್ಟದಲ್ಲಿ ಹೊರಡುವ ನಾಲೆಯಿಂದ ನೀರಾವರಿ ಒದಗಿಸಬೇಕಾಗಿದ್ದಲ್ಲಿ. ಸುರಂಗದ ಆರಂಭದ ಮೇಲು ಚಪ್ಪಡಿಯನ್ನು ಕನಿಷ್ಟ ೧೦ ಅಡಿ ಮೇಲೆ ಇರಿಸಿದ್ದು ಏಕೆ? ಬಹುಶಃ ಆ ಮಟ್ಟದಲ್ಲಿ ಒಳ್ಳೆಯ ಕಲ್ಲು ಸಿಕ್ಕಿರಬೇಕು(೧೮೬೨ ರಲ್ಲಿ ನಡೆಸಲಾದ ಕೆಲಸದ ವಿವರಣೆಯಿಂದ ತಿಳಿದುಬಂದಿರುವಂತೆ). ಅದರಿಂದ ಹಾಗೆ ಮಾಡಿರಬೇಕು. ಈ ಭಾವೆನಗಳ ಸಮರ್ಥನೆಗೆ ಇರುವ ಸಂಗತಿ, ಸುರಂಗದ ರಚನೆ ನೇರವಾಗಿ ಇರದೆ ಎರಡು ಕಡೆ ತಿರುವು ಇರುವುದು. ಇದಕ್ಕೂ ಬಹುಶಃ ನೆಲದಲ್ಲಿ ಕಲ್ಲು ಪದರ ಇದ್ದುದೆ ಕಾರಣವಿರಬೇಕು.

ಮದಗ ಕೆರೆಯಲ್ಲಿ ಹೆಚ್ಚು ಜಲ ಸಂಗ್ರಹವಾಗುವಂತೆ ಮಾಡಿ ಅಧಿಕ ಪ್ರದೇಶಕ್ಕೆ ನೀರಾವರಿ ಪ್ರಯೋಜನವನ್ನು ವಿಸ್ತರಿಸಲು ೧೮೬೨ರಿಂದಲೂ ಪ್ರಯತ್ನ ನಡೆದಿದೆ. ಅದರ ಯಾವುದೂ ಫಲಿಸಿಲ್ಲ. ಮದಗ ಕೆರೆಯ ಜಲ ಸಂಗ್ರಹದ ಹೆಚ್ಚುವಿಕೆಯಿಂದ ಮುಳುಗಡೆ ಆಗುವಂಥ ಪ್ರದೇಶಗಳೇ ಇದಕ್ಕೆ ಕಾರಣ. ೧೯೩೮ರಲ್ಲಿ ಮೈಸೂರು ಸಂಸ್ಥಾನ ಮದಗ ಕೆರೆಯಿಂದ ಹೊಳೆಗೆ ಸುಮಾರು ೨೦ ಮೈಲಿ ಮೇಲಕ್ಕೆ ಅಂಜನಾಪುರ ಜಲಾಶಯವನ್ನು ನಿರ್ಮಿಸಿತು. ಅಂಜನಾಪುರ ಬಲದಂಡೆ ನಾಲೆ ಮದಗ ಕೆರೆಯ ವರೆಗೂ ನೀರಾವರಿ ಒದಗಿಸುತ್ತದೆ. ಇದೇ ಪ್ರದೇಶದಲ್ಲಿ ಅನೇಕ ಸಣ್ಣ ಕೆರೆಗಳು ಇವೆ.

ಮದಗ ಏರಿಯ ಉದ್ದ ೧೮೫೦ ಅಡಿ. ಹೊಳೆಯ ಕಡೆಯ ಇಳಿಜಾರು ೧ ಲಂಬಕ್ಕೆ ಅಡ್ಡಮಟ್ಟ ೨.೫ ಆಚೆ ಪಕ್ಕದ ಇಳಿಜಾರು ಕೊಂಚ ಕಡಿದು ೧ ಲಂಬಕ್ಕೆ ೨ ಅಡ್ಡ ಮಟ್ಟ. ಹೊಳೆ ಕಡೆಯ ಮುಖದ ಇಳಿಜಾರಿನಲ್ಲಿ ಏರಿಯ ಶಿಖರದಿಂದ ನೀರಿನ ಮಟ್ಟದ ವರೆಗೂ ನಿಯಮಿತ ಅಂತರದಲ್ಲಿ ಭಾರಿ ಗಾತ್ರದ ಕಲ್ಲುಬಂಡೆಗಳನ್ನು ಮೆಟ್ಟಲು ಮೆಟ್ಟಲಾಗಿ ಜೋಡಿಸಲಾಗಿದೆ.

ಸುಮಾರು ೧೦ ಲಕ್ಷ ಘನ ಅಡಿಯ ಬೃಹತ್ ಮಣ್ಣಿನ ಕಟ್ಟೆ, ತೂಬುಗಳು, ಹೊರ ಮೈಯಿನ ಕಲ್ಲು ಕಟ್ಟಡಕ್ಕೂ ಬಳಸಿರುವ ಭಾರಿ ಗ್ರಾತ್ರದ ಕಲ್ಲುಗಳು ಇವೆಲ್ಲಕ್ಕೂ ಸಾವಿರಾರು ಮಂದಿ ಕೆಲಸಗಾರರು ಪ್ರಾಯಶಃ ಹತ್ತುವರ್ಷಕ್ಕೂ ಹೆಚ್ಚು ಕಾಲ ದುಡಿದಿರಬೇಕು. ಅಷ್ಟು ದೊಡ್ಡ ಕೆಲಸಗಾರರ ಪಡೆಯ ಸಂಘಟನೆ ಹಾಗೂ ನೇಮಕಕ್ಕೆ ನಿರ್ಮಾಣ ನಿರ್ವಹಣೆಯ ಉನ್ನತ ಸಾಮರ್ಥ್ಯವೇ ಇದ್ದಿರಬೇಕು. ಅಷ್ಟು ಭಾರಿಯೂ ಎತ್ತರವೂ ಆದ ಮಣ್ಣಿನ ಕಟ್ಟೆಯನ್ನು ಹೇಗೆ ಭದ್ರಗೊಳಿಸಿ ನೀರು ಸೋರದಂತೆ ಗಟ್ಟಿ ಮಾಡಿದರೋ ಅದೊಂದು ಅದ್ಭುತವೇ ಸರಿ. ಅಲ್ಲದೆ ಕರ್ನಲ್ ಪ್ಲಫೇರ್ ಹೇಳಿದ ಮಾತಿನ ಸಾಕ್ಷ್ಯವೇ ಇದೆ. “೧೮೬೬ರಲ್ಲಿ ಯೂರೋಪಿನ ಜಲಾಶಯಗಳು ಮದಗ ಕಟ್ಟಿಗೆ ಹೋಲಿಸಿದಲ್ಲಿ ತುಂಬ ಪುಟ್ಟವು೩.”

ಆಧಾರಗಳು :

೧. ಕೆಳದಿ ನೃಪವಿಜಯ ಕೆಳದಿ ಗುಂಡಾಜೋಯಿಸರ ಅನುವಾದ ಪು.೬೮.

೨. ಗೆಜೆಟಿಯರ್ ಆಫ್ ಬಾಂಬೆ ಸ್ಟೇಟ್ ? ಧಾರವಾಡ ಜಿಲ್ಲೆ ೧೯೩೧ – ೪

೩. ಸೆಲೆಕ್ಷನ್ಸ್ ಪ್ರಂ ದಿ ರಿಕಾರ್ಡ್ಸ್ ಆಫ್ ಬಾಂಬೆ ಗೌರ್ನಮೆಂಟ್ ಇರಿಗೇಷನ್ ಸೀರೀಸ್ ನವೆಂ. ೧೮೬೬.