ಜಲಸಂಗ್ರಹಣೆ: ನದಿಗಳು ಹಾಗೂ ಸರೋವರಗಳು ಮಾನವನ ಅಗತ್ಯಗಳಿಗೆ ನೀರನ್ನು ಒದಗಿಸುವ ಪ್ರಾಥಮಿಕ ಮೂಲಗಳು. ಆದರೂ ಯಾವುದೇ ನಿರ್ದಿಷ್ಟ ಸಮಯದಲ್ಲೂ ಇವು, ಭೂಮಿಯಲ್ಲಿ ಸಿಗುವ ನೀರಿನ ಶೇಕಡಾ ಒಂದಕ್ಕಿಂತ ಕಡಿಮೆಯಷ್ಟು ಪ್ರಮಾಣದವು.[1] ಇಂಥ ಅಲ್ಪ ಸಂಪನ್ಮೂಲದ ನಿರ್ವಹಣೆಯ ಸಮಸ್ಯೆ ಕಷ್ಟವೇ. ಮಳೆಯ ಏರುಪೇರಿನಿಂದ ಈ ಕಷ್ಟ ಮತ್ತೂ ಹೆಚ್ಚುತ್ತದೆ. ಎಷ್ಟೋ ಸಲ ನಮಗೆ ಅಗತ್ಯ ಇಲ್ಲದಿದ್ದಾಗ, ಅತಿ ನೀರು ಬರುತ್ತದೆ, ಅಗತ್ಯ ಇದ್ದಾಗ ಅತಿಕಡಿಮೆ ಸಿಗುತ್ತದೆ. ನೆರೆ ಮತ್ತು ಬರ ಎಂದಿನಿಂದಲೂ ಇರುವ ಸಮಸ್ಯೆಗಳಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಜನಸಂಖ್ಯೆ ಹೆಚ್ಚಳದಿಂದ ಹಾಗೂ ಅರಣ್ಯನಾಶದಿಂದ ಅವು ಇನ್ನೂ ತೀವ್ರವಾಗಿದೆ. ಈ ಸಮಸ್ಯೆಯ ತೀವ್ರತೆಯನ್ನು ಕಡಿಮೆ ಮಾಡಲು ಇರುವ ಒಂದು ಮಾರ್ಗ ನೀರನ್ನು ಜಲಾಶಯಗಳಲ್ಲಿ ಸಂಗ್ರಹಿಸಿಡುವುದು. ಅಂಥ ಸಂಗ್ರಹಣೆಗಳು ಭಾವಿಯ ಹಾಗೆ ನೆಲದೊಳಗೆ ಇರಬಹುದು. ಅಥವಾ ಕೊಳ, ಕೆರೆ ಅಥವಾ ಭಾರಿ ಜಲಾಶಯಗಳಾಗಿ ಭೂಮಿಯ ಮೇಲೆ ಇರಬಹುದು.

ದಕ್ಷಿಣ ಭಾರತದಲ್ಲಿ ಕೆರೆಗಳು:

ಕೆರೆಗಳು ದಕ್ಷಿಣ ಪರ್ಯಾಯಪ್ರದೇಶದ ವಿಶಿಷ್ಟಲಕ್ಷಣ. ಉತ್ತರ ಭಾರತದ ಭೌಗೋಳಿಕ ಪರಿಸ್ಥಿತಿ ದಕ್ಷಿಣ ಭಾರತದ ಸ್ಥಿತಿಗಿಂತ ಬೇರೆ. ಉತ್ತರ ಭಾರತದ ವಿಶಾಲ ಪ್ರದೇಶಗಳು ನಿರಂತರ ಹರಿಯುವ ನದಿಗಳಿಂದ ಆವೃತವಾಗಿದೆ. ಮಳೆಗಾಲದಲ್ಲಿ ಮಳೆಯ ನೀರೂ, ಬೇಸಿಗೆಯಲ್ಲಿ ಹಿಮ ಕರಗಿದ ನೀರೂ ಅವುಗಳಲ್ಲಿ ಹರಿದು ಬರುತ್ತವೆ. ಆ ನದಿಗಳು ಫಲವತ್ತಾದ ಮೆಕ್ಕಲು ಮಣ್ಣಿನ ಬಯಲುಗಳಲ್ಲಿ ಹರಿಯುತ್ತವೆ. ಅಲ್ಲಿ ನೀರಾವರಿಗಾಗಿ ಕೆರೆಗಳನ್ನು ಅಥವಾ ಜಲಾಶಯಗಳನ್ನು ಕಟ್ಟುವ ಅಗತ್ಯ ಬರಲಿಲ್ಲ. ನದಿಯಿಂದಲೇ ನೇರವಾಗಿ ನೀರು ಹಾಯುವ ಕಾಲುವೆಗಳ ನಿರ್ಮಾಣವೇ ನೀರಾವರಿ ಯೋಜನೆಯ ಮುಖ್ಯಾಂಗವಾಯಿತು. ಹಳೆಯ ಯಮುನಾ ನಾಲೆ, ಗಂಗಾನಾಲೆ ಹಾಗೂ ಪಂಜಾಬಿನ ನದಿಗಳ ಕಾಲುವೆ ಜಾಲ ಈ ವ್ಯವಸ್ಥೆಗೆ ಸಾಕ್ಷಿ. ಅಲ್ಲದೆ ಅಲ್ಲಿ ಭಾವಿ ತೋಡುವುದು ಸುಲಭ. ಆದ್ದರಿಂದಲೇ ವೇದಕಾಲದಿಂದಲೂ ಭಾವಿ ಅಥವಾ ಕೂಪಗಳ ಪ್ರಸ್ತಾಪ ನಮಗೆ ಸಿಗುತ್ತದೆ.

ಪಶ್ಚಿಮ ಮತ್ತು ಮಧ್ಯ ಭಾರತದ ಅರೆ ಒಣಕಲು ಪ್ರದೇಶಗಳಲ್ಲಿ, ಅಂದರೆ ರಾಜಸ್ತಾನ ಮತ್ತು ಮಾಳ್ವ ಪ್ರದೇಶಗಳಲ್ಲಿ, ಹಾಗೂ ಇಡೀ ದಕ್ಷಿಣ ಭಾರತದಲ್ಲಿ ಕೆರೆ ನೀರಾವರಿ ಪ್ರಮುಖವಾಗಿದೆ. ಈ ಶತಮಾನದ ಆದಿಯ ವರೆಗೆ ಹಾಗೂ ೧೯೫೧ರಲ್ಲಿ ಪಂಚವಾರ್ಷಿಕ ಯೋಜನೆಗಳ ಪ್ರಕಾರ ಅಭಿವೃದ್ಧಿ ಕಾರ್ಯ ಆರಂಭವಾಗುವ ವರೆಗೆ ದಕ್ಷಿಣಭಾರತದಲ್ಲಿ ನೀರಾವರಿ ಬಹುತೇಕ ಕೆರೆಗಳದೇ ಆಗಿತ್ತು. ಆಂಧ್ರಪ್ರದೇಶದ ತೆಲಂಗಾಣ ಪ್ರದೇಶ, ಕರ್ನಾಟಕ ಹಳೇ ಮೈಸೂರು ಪ್ರದೇಶ ಹಾಗೂ ತಮಿಳುನಾಡಿನ ಪೂರ್ವಭಾಗಗಳಲ್ಲಿ ಕೆರೆಗಳು ನಿಬಿಡವಾಗಿವೆ. ದಕ್ಷಿಣ ಭಾರತದಲ್ಲಿ ಗಟ್ಟಿಯಾದ ಬೆಣಚುಕಲ್ಲು ಮತ್ತು ಗ್ನೇಸ್ ಕಲ್ಲು ಇರುವುದರಿಂದ ಅಲ್ಲಿ ಭಾವಿ ನೀರಾವರಿಯ ಅಭಿವೃದ್ಧಿಗೆ ಅವಕಾಶ ಸೀಮಿತವಾಗಿದೆ. ಇತ್ತೀಚಿನ ವರೆಗೂ ಕರ್ನಾಟಕದ ನೀರಾವರಿ ಪ್ರದೇಶದ ಶೇಕಡಾ ೮೦ಕ್ಕಿಂತ ಹೆಚ್ಚು ಭಾಗ ಕೆರೆ ನೀರಾವರಿಯದೇ ಆಗಿತ್ತು.

ಅಧ್ಯಯನದ ಉದ್ದೇಶ:

ಈ ಅಧ್ಯಯನದಲ್ಲಿ ನಮ್ಮ ಮುಖ್ಯ ಗಮನ ಇರುವುದು, ಸಣ್ಣ ಜಲಾಶಯಗಳು ಅಥವಾ ಕೆರೆಗಳ ಬಗ್ಗೆ. ಭಾರಿ ಜಲಾಶಯ ಅಥವಾ ಅಣೆಕಟ್ಟುಗಳ ಬಗ್ಗೆ ಯಾಗಲಿ ಭಾವಿಗಳ ಬಗ್ಗೆಯಾಗಲಿ ಇಲ್ಲವೆ ಭೂಗರ್ಭ ಬಗ್ಗೆಯಾಗಲಿ ಅಷ್ಟಾಗಿ ನಾವು ಪರಿಶೀಲಿಸಿಲ್ಲ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಈಗಲೂ ಸಾವಿರಾರು ಕೆರೆಗಳಿವೆ. ಆದರೆ ಅವು ಪರಿಣಾಮರಹಿತವಾಗಿಬಿಟ್ಟಿವೆ. ಅವುಗಳ ಸಂರಕ್ಷಣೆಯ ಸಾಂಪ್ರದಾಯಿಕ ವಿಧಾನಗಳು ಶಿಥಿಲವಾಗಿರುವುದೇ ಇದಕ್ಕೆ ಕಾರಣ. ಇತ್ತೀಚೆಗೆ ಸರ್ಕಾರಗಳು ಹೊಸ ಕೆರೆಗಳನ್ನು ಕಟ್ಟಲು ಹಾಗೂ ಹಳೆಯವನ್ನು ಜೀರ್ಣೋದ್ಧಾರ ಮಾಡಲು ಪ್ರಯತ್ನಿಸಿವೆ. ಆದರೆ ಆ ಪ್ರಯತ್ನಗಳು ಸಾಲದು ಅಥವಾ ಸರಿಯಿಲ್ಲದ್ದಾಗಿವೆ. ಹಿಂದೆ ಕೆರೆ ನಿರ್ಮಾಣ ಬಹುತೇಕ ಖಾಸಗಿ ಉದ್ಯಮವಾಗಿತ್ತು. ಗ್ರಾಮ ಸಮುದಾಯದ ಮೇಲುಸ್ತುವಾರಿಯಲ್ಲಿ ನಡೆಯುವ ಉದ್ಯಮವಾಗಿತ್ತು. ಅದರಿಂದ ಉದ್ಯಮದಾರನಿಗೆ ಕೆರೆಯ ಆಯಕಟ್ಟಿನಲ್ಲಿ ಭೂಮಿ ಪ್ರತಿಫಲವಾಗಿ ಸಿಗುತ್ತಿತ್ತು. ಉದ್ಯಮದಾರನಿಗೆ ತನ್ನ ಸ್ವಂತಕ್ಕೆ ಹಾಗೂ ತನ್ನ ವಂಶಕ್ಕೆ ಸಿಗುವ ಲಾಭದ ಪ್ರೇರಣೆಯೂ ಇತ್ತು. ಪರಹಿತ ಚಿಂತನೆಯ ಪ್ರೇರಣೆಯೂ ಇತ್ತು. ಫಲಾನುಭವಿಗಳಿಗೆ ತೃಪ್ತಿಕರವಾಗುವಂತೆ ಗ್ರಾಮ ಸಮುದಾಯ ತನ್ನ ಅಧಿಕಾರಗಳ ಮೂಲಕ ನೀರನ್ನು ಹಂಚುತ್ತಿತ್ತು. ಇಂದು ಈ ಎಲ್ಲ ಹಳೆಯ ಪದ್ಧತಿಗಳನ್ನು ನಾವು ಅಧ್ಯಯನ ಮಾಡಬೇಕಾಗಿದೆ. ಇದು ಅಂಥ ಒಂದು ಪ್ರಯತ್ನ. ಇಲ್ಲಿ ನಾವು ಇತಿಹಾಸಪೂರ್ವದಿಂದ ನಮ್ಮ ಕಾಲದವರೆಗಿನ ಕೆರೆ ನೀರಾವರಿಯ ಚರಿತ್ರೆಯನ್ನು ಗುರುತಿಸುತ್ತಿದ್ದೇವೆ. ಕರ್ನಾಟಕದಲ್ಲಿ ಕೆರೆ ನೀರಾವರಿಯ ಬೆಳವಣಿಗೆ ಹಾಗೂ ಅವನತಿಗಳನ್ನು ಗುರುತಿಸುವುದು ಮಾತ್ರವಲ್ಲ ಕೆರೆಗಳ ರಚನೆ, ಜೀರ್ಣೋದ್ಧಾರ, ಜಲ ನಿರ್ವಹಣೆ ಹಾಗೂ ಹಣಕಾಸು ಪರಿಸ್ಥಿತಿಗಳ ಸಮಸ್ಯೆಗಳನ್ನು ನಮ್ಮ ಹಿಂದಿನವರು ಹೇಗೆ ಎದುರಿಸಿದರು – ಎನ್ನುವುದನ್ನು ತಿಳಿಯಲು ಯತ್ನಿಸಿದ್ದೇವೆ.

ಕೆರೆಗಳ ಇತಿಹಾಸದಿಂದ ನಾವು ಕಲಿಯಬೇಕಾದ ಪಾಠ ಇದು: ಕೆರೆಗಳ ರಚನೆ ಹಾಗೂ ಜೀರ್ಣೋದ್ಧಾರದಲ್ಲಿ ಫಲಾನುಭವಿಗಳನ್ನು, ಪಂಚಾಯಿತುಗಳನ್ನು ಸೇರಿಸಿಕೊಳ್ಳದೆ ಹೋದಲ್ಲಿ ಸಮಸ್ಯೆಯನ್ನು ಬಿಡಿಸುವುದು ಅಸಾಧ್ಯ. ಮುಂದೆ ಸಾಗುವ ಮೊದಲು ನಮ್ಮ ನೀರಾವರಿ ಸೌಲಭ್ಯಗಳ ಅಭಿವೃದ್ಧಿಗೆ ಕೆರೆಗಳ ಕೊಡುಗೆ ಏನು ಎಂಬುದನ್ನು ನೋಡೋಣ.

ನೀರಾವರಿ ಕೆರೆಗಳ ಪ್ರಸ್ತುತತೆ:

ಕೆರೆಗಳನ್ನು ಬಿಟ್ಟರೆ ಬೇರೆ ಪರ್ಯಾಯ ವ್ಯವಸ್ಥೆ ಏನಾದರೂ ಇದೆಯೇ? ಇದನ್ನು ಮೊದಲು ನೋಡಬೇಕು. ಭಾರಿ ನೀರಾವರಿ ಕಾಮಗಾರಿಗಳು ಹಾಗೂ ಭೂಗರ್ಭಜಲದ ಉಪಯೋಗ ಅಂಥ ಪರ್ಯಾಯಗಳು, ಒಂದೊಂದಾಗಿ ಅವುಗಳನ್ನು ನೋಡೋಣ.

ಭಾರಿ ಅಣೆಕಟ್ಟುಗಳು:

ಸಾವಿರಾರು ಹಳೆಯ ಕೆರೆಗಳ ಜೀರ್ಣೋದ್ಧಾರ ಮಾಡುವುದಕ್ಕೆ ಬದಲು ಕೆಲವೇ ಕೆಲವು ಭಾರಿ ಅಣೆಕಟ್ಟುಗಳನ್ನು ಕಟ್ಟುವುದು ಮೇಲು, ಅವು ಸಮಸ್ಯೆಯನ್ನು ಇನ್ನೂ ಚೆನ್ನಾಗಿ ಬಗೆಹರಿಸಬಲ್ಲವು ಎಂದು ಹೇಳಬಹುದು. ಎಲ್ಲೆಲ್ಲಿ, ಕೆರೆಗಳ ನಿರ್ಮಾಣ ಸೂಕ್ತವಲ್ಲವೊ, ಅಲ್ಲಿ ಭಾರಿ ನೀರಾವರಿ ಕಾಮಗಾರಿಗಳು ಅನಿವಾರ್ಯ. ಅಲ್ಲದೆ ಬರಪೀಡಿತ ಪ್ರದೇಶಗಳಲ್ಲಿ ತುಂಬಾ ದೂರದಿಂದ ನೀರನ್ನು ತಂದು ಒದಗಿಸದೆ ಬೇರೆ ಮಾರ್ಗ ಇಲ್ಲದ ಕಡೆಗಳಲ್ಲಿ, ದೊಡ್ಡ ಜಲಾಶಯಗಳನ್ನು ಕಟ್ಟಿ ಉದ್ದನೆಯ ಕಾಲವೆಗಳನ್ನು ರಚಿಸುವುದು ಅಗತ್ಯ. ಆದರೆ ನಮ್ಮ ನೀರಿನ ಅಗತ್ಯಕ್ಕೆ ದಿವ್ಯೌಷಧ ಎನ್ನಲಾಗಿದ್ದ ಭಾರಿ ಜಲಾಶಯಗಳು, ಉದ್ದನೆಯ ನಾಲೆಗಳು, ಪರಿಹರಿಸಿರುವುದಕ್ಕಿಂತ ಹೆಚ್ಚು ಕಷ್ಟಗಳನ್ನು ಹುಟ್ಟಿಸಿವೆ. ಆರ್ಥಿಕವಾಗಿ ಅವು ಭಾರಿ ಹೊರೆಯಾಗಿವೆ. ಆದರೂ ಅವುಗಳ ದೋಷ ಏನಿದ್ದರೂ, ಭಾರಿ ಅಣೆಕಟ್ಟು ಒಂದೇ ಸೂಕ್ತ ಎನಿಸುವ ಕಡೆಗಳಲ್ಲಿ ಅವುಗಳನ್ನು ಕಟ್ಟಲೇ ಬೇಕು. ಆಗ ಅವುಗಳ ದೋಷಗಳನ್ನು ಗಮನದಲ್ಲಿ ಇಟ್ಟುಕೊಂಡು ಅವುಗಳನ್ನು ತಗ್ಗಿಸಲು ಪ್ರಯತ್ನ ಮಾಡಬೇಕು.

ಅಂತರ್ಜಲ:

ಜಲಾಭಾವಸಮಸ್ಯೆಗೆ ಇನ್ನೊಂದು ಪರಿಹಾರ ಅಂತರ್ಜಲದ ಬಳಕೆ. ಇದನ್ನು ಗುಜರಾತು ತಮಿಳುನಾಡು ಮತ್ತಿತರ ಪ್ರದೇಶಗಳಲ್ಲಿ ಪ್ರಯತ್ನಿಸಲಾಗಿದೆ. ಆದರೆ ಅದರಿಂದ ಅನಿರೀಕ್ಷಿತ ಸಮಸ್ಯೆಗಳು ಉಂಟಾಗಿವೆ. ಇವುಗಳಲ್ಲಿ ಒಂದು, ಜಲಮಟ್ಟ ಆಳಕ್ಕೆ ಹೋಗಿರುವುದು.

ಈ ಬೆಳವಣಿಗೆಯಿಂದಾಗಿ ಹಣವಂತರು ಮಾತ್ರ ಜಲ ಸೌಲಭ್ಯವನ್ನು ಉಪಯೋಗಿಸ ಬಹುದಾಗಿದೆ.[2] ತಮಿಳುನಾಡಿನಲ್ಲಿ ಇದಕ್ಕೆ ಒಂದು ಪರಿಹಾರವನ್ನು ಕಂಡುಕೊಳ್ಳಲಾಗಿದೆ. ಜಿನುಗುವ ಕೊಳಗಳ ಮೂಲಕ ಭೂಮಿಗೆ ಮತ್ತೆ ನೀರನ್ನು ಇಂಗಿಸಬಹುದು – ಎಂದು ಆ ರಾಜ್ಯ ಕಂಡು ಹಿಡಿದಿದೆ.[3] ಭೂಮಿಯೊಳಕ್ಕೆ ನೀರನ್ನು ಮತ್ತೆ ಸೇರಿಸುವ ಒಂದೇ ಒಂದು ಉದ್ದೇಶದ ಕೊಳಗಳನ್ನು ಹೊಸದಾಗಿ ಕಟ್ಟುವುದಕ್ಕೆ ಬದಲಾಗಿ, ಹಳೆಯ ಕೆರೆಗಳನ್ನೇ ಜೀರ್ಣೋದ್ಧಾರ ಮಾಡಿದರೆ, ಜಲಮಟ್ಟವೂ ಏರುತ್ತದೆ, ನೀರಾವರಿಗೂ ಅನುಕೂಲ ಆಗಬಹುದು.

ನೀರಾವರಿ ಹಾಗೂ ಕುಡಿಯಲು ನೀರು ಒದಗಿಸುವುದು ಇವುಗಳ ವಿಷಯದಲ್ಲಿ ಕೆರೆಗಳ ಪಾತ್ರ ಗಣನೀಯವಾದುದು. ಇದು ಎಲ್ಲರಿಗೂ ತಿಳಿದದ್ದೇ. ಇದರ ಜೊತೆಗೆ ಕೆರೆಗಳು ಇನ್ನೂ ಇತರ ಅತ್ಯವಶ್ಯಕ ಸೇವೆಗಳನ್ನು ಮಾಡುತ್ತವೆ. ಅವು: ಪ್ರವಾಹ ನಿಯಂತ್ರಣ, ಬರದ ಹತೋಟಿ ಭೂಮಿಯೊಳಗಿನ ನೀರಿನ ಹೆಚ್ಚಳ, ಮೀನುಗಾರಿಕೆಗೆ ನೆರವು, ಹಾಗೂ ಕೊನೆಯದಾಗಿ ಪರಿಸರದ ಅಂದ ಚೆಂದ ಮತ್ತು ಶುಚಿತ್ವವನ್ನು ಕಾಪಾಡುವುದು. ಈ ಅಂಶಗಳನ್ನು ಈಗ ಪರಿಶೀಲಿಸೋಣ.

ಪ್ರವಾಹ ನಿಯಂತ್ರಣ:

ಜಲಪ್ರವಾಹಕ್ಕೆ ಜಲಾಶಯಗಳು ಹೇಗೆ ತಡೆ ಒಡ್ಡುತ್ತವೆ, ನೀರು ಹರಿಯುವುದನ್ನು ಹೇಗೆ ನಿಯಂತ್ರಿಸುತ್ತವೆ? ಇದನ್ನು ಅನೇಕ ಯೋಜನೆಗಳು ತೋರಿಸಿಕೊಟ್ಟಿವೆ. ಇವುಗಳಲ್ಲಿ ಅತ್ಯಂತ ಪ್ರಖ್ಯಾತವಾದುದು, ಅಮೆರಿಕಾದ ಟಿನಿಸ್ಸಿ ಕಣಿವೆ ಪ್ರಾಧಿಕಾರ. ಭಾರತದಲ್ಲಿ ದಾಮೋದರ ನದಿಯ ಪ್ರವಾಹದ ಬಿರುಸನ್ನು ತಗ್ಗಿಸಲು ದಾಮೋದರ ಕಣಿವೆ ಪ್ರಾಧಿಕಾರವನ್ನು ಅದೇ ಮಾದರಿಯಲ್ಲಿ ಸ್ಥಾಪಿಸಲಾಗಿದೆ. ಪ್ರವಾಹ ನಿಯಂತ್ರಣದಲ್ಲಿ ಈ ಬೃಹತ್ ಯೋಜನೆಗಳು ಏನು ಮಾಡಿವೆಯೋ ಅದನ್ನು ಶತಮಾನಗಳಿಂದಲೂ ಕೆರೆಗಳು ಮಾಡುತ್ತ ಬಂದಿವೆ. ಈಚಿನ ವರ್ಷಗಳಲ್ಲಿ ಕೆರೆಗಳಂಥ ಸಾಂಪ್ರಾದಾಯಿಕ ನೀರಾವರಿ ಮೂಲಗಳ ಬಗೆಗಿನ ಮಹಾ ಅಲಕ್ಷ್ಯದಿಂದ ದಕ್ಷಿಣ ಭಾರತದ ಅಸಂಖ್ಯಾತ ಕೆರೆಗಳ ಜಲಾನಯನ ಪ್ರದೇಶದಲ್ಲಿ ಮೇಲು ಭಾಗದಿಂದ ನೀರಿನ ಹರಿವು ಹೆಚ್ಚಿ, ಕೆಳ ಪ್ರದೇಶಗಳಲ್ಲಿ ನೆರೆ ಉಂಟಾಗಿದೆ.[4] ಈ ಸಮಸ್ಯೆಯನ್ನು ಕೆರೆಗಳ ಜೀರ್ಣೋದ್ಧಾರ ಬಹುಮಟ್ಟಿಗೆ ಬಗೆಹರಿಸುತ್ತದೆ.

ಬರ ಮತ್ತು ಜಲಮಟ್ಟವನ್ನು ಉಳಿಸುವಿಕೆ:

ಕೆರೆಗಳ ಎರಡನೆಯ ಮತ್ತು ಮೂರನೆಯ ಸೇವೆ ಎಂದರೆ ಬರಗಾಲದಲ್ಲಿ ನೆರವು ಹಾಗೂ ಭೂಮಿಯ ಒಳಗಿನ ನೀರಿನ ಮಟ್ಟವನ್ನು ಏರಿಸುವುದು. ಇವನ್ನು, ೧೯೦೧ರ ನೀರಾವರಿ ಆಯೋಗ ಕೆಳಗಿನ ಮಾತುಗಳಲ್ಲಿ ವರ್ಣಿಸಿದೆ.

“ಸಂರಕ್ಷಿಸುವ ಕಾಮಗಾರಿಗಳಾಗಿ ಅವುಗಳ ಮಹತ್ವ ಪ್ರಶ್ನಾತೀತ. ಮಳೆಬಾರದ ವರ್ಷಗಳಲ್ಲಿ ಅನೇಕ ಕೆರೆಗಳು ಸಂರಕ್ಷಿಸುವಲ್ಲಿ ವಿಫಲವಾಗಬಹುದು. ಆದರೆ ಸಾಧಾರಣ ದಿನಮಾನಗಳಲ್ಲಿ ಅವು ಮಾಡುವ ಒಳ್ಳೆಯ ಕೆಲಸ, ರೈತರು ಕೆಟ್ಟ ವರ್ಷವನ್ನು ದಾಟಲು ವಸ್ತುತ: ಸಹಾಯಕ. ಅತ್ಯಂತ ಒಣ ವರ್ಷದಲ್ಲೂ, ಅವು ಅಂತರ್ಜಲದ ಮಟ್ಟ ಉಳಿಸಲು ನೆರವಾಗುತ್ತವೆ. ಮುಕ್ಕಾಲು ಭಾಗ ಭಾವಿಗಳೆಲ್ಲ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಕೆರೆಗಳನ್ನೇ ಅವಲಂಬಿಸಿವೆ.[5]

ಮೀನುಗಾರಿಕೆ:

ಕೆರೆಗಳು ನೀಡುವ ಇನ್ನೊಂದು ಫಲವೆಂದರೆ, ಅವು ಮೀನುಗಾರಿಕೆಯ ಅಭಿವೃದ್ಧಿಗೆ ಒದಗಿಸುವ ಅವಕಾಶ. ನಮ್ಮ ದೇಶದಲ್ಲಿ ಜಲಚರಕೃಷಿಯನ್ನು ಯಶಸ್ವಿಯಾಗಿ ನಡೆಸಲು ಸಾಧ್ಯತೆಯುಳ್ಳ ವಿಶಾಲ ಪ್ರದೇಶವಿದೆ. ಆದರೆ ಈ ಕೃಷಿಗೆ ಅಗತ್ಯವಾದ ಸಂಶೋಧನ ಯತ್ನವಾಗಲಿ, ಸರ್ಕಾರಿ ಬೆಂಬಲವಾಗಿಲಿ ಬೇಸಾಯಕ್ಕೆ ಸಿಕ್ಕಂತೆ ಇದಕ್ಕೆ ಸಿಕ್ಕಿಲ್ಲ. ಭಾರತದ ಅರ್ಥವ್ಯವಸ್ಥೆಯ ಅಂಗವಾಗಿ, ಆಹಾರ ಒದಗಣೆಯ ಹೆಚ್ಚಳ, ಉದ್ಯೋಗ ಸೃಷ್ಟಿ ಹಾಗೂ ಆಹಾರ ಪುಷ್ಟಿಯ ಮಟ್ಟದ ಏರಿಕೆ – ಇವುಗಳಲ್ಲಿ ಒಳನಾಡು ಮೀನುಗಾರಿಕೆಗೆ ಪ್ರಮುಖ ಪಾತ್ರವಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪರಿಷತ್ತು ಒಳನಾಡು ಮೀನುಗಾರಿಕೆಗೆ ಕೆರೆಗಳನ್ನು ಯಶಸ್ವಿಯಾಗಿ ಬೆಳಸಿಕೊಂಡಿದೆ. ಈ ಮೂಲದಿಂದ ಬರುವ ಆದಾಯವು ಜಿಲ್ಲಾ ಪರಿಷತ್ತಿಗೆ ಲಾಭದಾಯಕವಾಗಿರುವುದರ ಜೊತೆಗೆ ಕೆರೆಗಳನ್ನು ಸುಸ್ಥಿತಿಯಲ್ಲಿ ಇರಿಸುವುದಕ್ಕೂ ಬಳಕೆಯಾಗಿದೆ.[6]

ಹಸಿರು ವಲಯ:

ಕೆರೆ ಮತ್ತು ಅದರ ಪರಿಸರ ಮಾಡುವ ಇತರ ಸೇವೆಗಳನ್ನೂ ಕಡೆಗಣಿಸುವಂತಿಲ್ಲ. ಉದಾಹರಣೆಗೆ ಸುತ್ತಲಿನ ಸಸ್ಯಸಂಪತ್ತು. ಕೆರೆಗಳ ಸುತ್ತ ಮುತ್ತಲ ಪ್ರದೇಶಗಳ ಉಷ್ಣತೆಯನ್ನು ಕಡಿಮೆಮಾಡುತ್ತವೆ. ಅಕ್ಕಪಕ್ಕದ ಅಂದವನ್ನು ಹೆಚ್ಚಿಸುತ್ತವೆ. ಅವು ಪ್ರಕೃತಿಯ ಹಸಿರು ವಲಯ. ಕೆರೆಯ ಸುತ್ತ ಎಲ್ಲೆಲ್ಲೂ ತುಂಬಿದ ಹಸಿರು, ದಂಡೆಯ ಮೇಲೆಯೂ ತುಂಬಿದ ಹಸಿರು ಅಪಾರ ಪರಿಸರ ಮೌಲ್ಯವುಳ್ಳದ್ದು. ಆ ಹುಲ್ಲು ಮಣ್ಣನ್ನು ಹಿಡಿದಿಡುತ್ತದೆ. ಜೊತೆಗೆ ಜೈವಿಕ ಪದಾರ್ಥವನ್ನೂ ಒದಗಿಸುತ್ತದೆ. ಗಾಳಿ ಮತ್ತು ನೀರಿನಿಂದ ಮಣ್ಣು ಕೊಚ್ಚಿ ಹೋಗದಂತೆ ಅತ್ಯಂತ ಶೀಘ್ರವಾಗಿ ಅತ್ಯಂತ ಸೊಗಸಾಗಿ ಹಿಡಿದಿಡುವಂಥದು ಹುಲ್ಲು. ಅದು ಅತ್ಯಂತ ದಕ್ಷವಾಗಿ ಮಳೆ ನೀರನ್ನು ಹಿಡಿದಿಡುವುದೂ ಹೌದು. ಹೂಳನ್ನು ತಡೆಹಿಡಿದು, ಅದು ಕೊಚ್ಚಿ ಹೋಗದಂತೆ ಮಾಡಬಲ್ಲದು. ವೆಟಿವರ್ ಎನ್ನುವಂಥ ಕೆಲವು ಜಾತಿಯ ಹುಲ್ಲನ್ನು ಕಟ್ಟೆಗಳ ಸುತ್ತ ನೆಟ್ಟುಬಿಟ್ಟರೆ ಸಾಕು, ಅದು ಬೇಲಿಯಾಗಿ ಬೆಳೆದು, ನೀರು ಭೂಮಿಯ ಒಳಕ್ಕೆ ಹೋಗುವಂತೆ ಮಾಡುತ್ತದೆ. ಹೊಳೆಗಳಿಗೆ ನದಿಗಳಿಗೆ ಇಳಿಜಾರಿನಲ್ಲಿ ಹರಿದು ಹೋಗದಂತೆ ತಡೆಯುತ್ತದೆ.[7] ಅಂಥ ಬೇಲಿಗಳನ್ನು ಬೆಳಸುವುದು ತುಂಬ ಅಗ್ಗ.

ಕೆರೆಗಳುಜನತೆಯ ಜೀವ:

ಹತ್ತೊಂಬತ್ತನೆಯ ಶತಮಾನದ ಕೊನೆಯ ವರೆಗೂ, ಕೆರೆಗಳು ಜನ ಹಾಗೂ ದನಗಳ ಆಹಾರದ ವಿಷಯದಲ್ಲಿ ಹಳ್ಳಿಗಳನ್ನು ಸ್ವಯಂಪೂರ್ಣವಾಗಿ ಮಾಡಿದ್ದವು. ರಾಜ್ಯದ ಬಹುಪಾಲು ಸಂಪತ್ತನ್ನು ಉತ್ಪತ್ತಿಮಾಡಿದ್ದವು. ಅಭಾವ ಹಾಗೂ ಪ್ರವಾಹಗಳ ವಿರುದ್ಧ, ರಕ್ಷಣೆ ಒದಗಿಸಿದ್ದವು. ಭಾವಿಗಳಲ್ಲಿ ನೆಲಮಟ್ಟಕ್ಕೆ ಹತ್ತಿರದಲ್ಲೆ ನೀರು ಸಿಗುವಂತೆ ಅಂತರ್ಜಲ ಮಟ್ಟ ಮೇಲುಗಡೆ ಇರುವಂತೆ ಮಾಡಿದ್ದವು. ಮಣ್ಣು ಕೊಚ್ಚಿ ಹೋಗುವುದನ್ನು ತಡೆದಿದ್ದವು. ಸುತ್ತಲ ಪ್ರದೇಶವನ್ನು ತಂಪಾಗಿ ಚೆಂದವಾಗಿ ಹಾಗೂ ಪರಿಸರ ಸಮಸ್ಯೆಗಳಿಂದ ಮುಕ್ತವಾಗಿ ಇರಿಸಿದ್ದವು. ೧೯೦೧ರ ನೀರಾವರಿ ಆಯೋಗದ ಮಾತಿನಲ್ಲಿ ಚುಟುಕಾಗಿ ಹೇಳುವುದಾದರೆ ಕೆರೆಗಳು ಜನತೆಯ ಜೀವ ಆಗಿದ್ದವು.[8] ಇದು ಕನಸಿನ ಆದರ್ಶ ಎನಿಸಬಹುದು. ಆದರೆ ಇದು ೧೯೦೧ ರ ನೀರಾವರಿ ಆಯೋಗದ ವರದಿಯಿಂದ ಮೂಡುವ ಚಿತ್ರ. ಭಾರತದ ಪರಿಸ್ಥಿತಿಗಳನ್ನು ಚೆನ್ನಾಗಿ ಅರಿತಿದ್ದ ಬ್ರಟಿಷ್ ಇಂಜನಿಯರುಗಳು, ಕೃಷಿತಜ್ಞರು, ರೆವಿನ್ಯೂ ಅಧಿಕಾರಿಗಳು ಹಾಗೂ ಸಾರ್ವಜನಿಕ ಕಾರ್ಯಕರ್ತರ ಅನುಭವಗಳ ಆಧಾರ ಉಳ್ಳದ್ದು, ಆ ಆಯೋಗದ ವರದಿ.

ಆ ಆಯೋಗ ವರದಿ ಮಾಡಿದಾಗ ಭಾವಿಗಳ ಪರಿಸ್ಥಿತಿ ಅನುಕೂಲಕರವಾಗಿತ್ತು. ಬೆಂಗಳೂರು ಕೋಲಾರದಂಥ ಜಿಲ್ಲೆಗಳಲ್ಲಿ ನೆಲಮಟ್ಟದಿಂದ ಮೂರು ನಾಲ್ಕು ಅಡಿಗಳಲ್ಲಿ ನೀರು ಇರುತ್ತಿತ್ತು. ಈಗ ಪರಿಸ್ಥಿತಿ ತುಂಬ ಕೆಟ್ಟಿದೆ, ಜಲಮಟ್ಟ ನೆಲಕ್ಕೆ ನೂರಾರು ಆಡಿಗಳ ಆಳಕ್ಕೆ ಹೋಗಿದೆ. ಹೇಗೆ ಆಯಿತು ಇದು, ಪರಿಸ್ಥಿತಿಯನ್ನು ಸುಧಾರಿಸಲು ಈಗ ಏನು ಮಾಡಬಹುದು – ಇದೇ ನಮ್ಮ ಅನ್ವೇಷಣೆಯ ಉದ್ದೇಶ. ನಾವು ಮುಂದೆ ಸಾಗುವ ಮುನ್ನ ಕರ್ನಾಟಕದಲ್ಲಿ ಕೆರೆ ನೀರಾವರಿಯ ಅಧ್ಯಯನದ ಆಕರಗಳನ್ನು ಪರಿಚಯ ಮಾಡಿಕೊಳ್ಳೋಣ.

ಆಕರಗಳು:

ಪ್ರಾಚ್ಯ ಸಂಶೋಧನಶಾಸ್ತ್ರ ಪ್ರಾಗೈತಿಹಾಸಿಕ ಸಂಶೋಧನೆಗಳು ಹಾಗೂ ಉತ್ಖನನಗಳು, ಶಾಸನಗಳು, ಸಾಹಿತ್ಯ ಕೃತಿಗಳು, ವಿದೇಶೀ ಪ್ರವಾಸಿಗಳ ಬರಹಗಳು ಹಾಗೂ ಸರ್ಕಾರಿ ಅಥವಾ ಪ್ರಭುತ್ವದ ದಾಖಲೆಗಳು – ಇವು ಕರ್ನಾಟಕದಲ್ಲಿ ಕೆರೆ ನೀರಾವರಿಯ ಇತಿಹಾಸದ ಆಕರಗಳು. ಇತಿಹಾಸ ಪೂರ್ವಯುಗದಲ್ಲಿ ದಕ್ಷಿಣ ಭಾರತದಲ್ಲಿ ಜಲಾಶಯಗಳನ್ನು ಕಟ್ಟಿದವರಲ್ಲಿ ತಾಮ್ರಯುಗ ಹಾಗೂ ಬೃಹತ್ ಶಿಲಾಯುಗದ ಜನರೇ ಮೊಟ್ಟಮೊದಲಿಗರು ಎನ್ನುವುದನ್ನು ಸಿದ್ಧಮಾಡಿ ತೋರಿಸಿವೆ. ಪ್ರಾಗೈತಿಹಾಸಿಕ ಸಂಶೋಧನೆ ಹಾಗೂ ಉತ್ಖನನಗಳಿಂದ ಪುಣೆಗೆ ಹತ್ತಿರದ ಇನಾಂಗಾಂವ್ ನಲ್ಲಿ ತಾಮ್ರಯುಗದ ಜನ ಕಟ್ಟಿದ ಜಲಾಶಯ ಪತ್ತೆಯಾಗಿದೆ. ಅದರ ಕಾಲವನ್ನು ಸುಮಾರು ಕ್ರಿ.ಪೂ. ೧೫೦೦ ಕ್ಕೆ ಗೊತ್ತು ಮಾಡಲಾಗಿದೆ.[9] ಅವರಾದ ಮೇಲೆ ಬೃಹತ್ ಶಿಲಾಯುಗದ ಜನ ಬೆಟ್ಟಗಳ ಬಳಿ ಇದ್ದರು. ಬೆಟ್ಟಗಳ ಇಳಿಜಾರಿನಿಂದ ಇಳಿದು ಬರುತ್ತಿದ್ದ ಮಳೆ ನೀರನ್ನು ಜಲಾಶಯಗಳಲ್ಲಿ ಸಂಗ್ರಹಿಸುತ್ತಿದ್ದರು.[10] ಬೃಹತ್ ಶಿಲಾಯುಗದ ಜನ ದಕ್ಷಿಣ ಭಾರತವನ್ನು ಅಕ್ರಮಿಸಿಕೊಳ್ಳಲು ಬಂದುದು ಕ್ರಿ.ಪೂ.೧೦೦೦ ದ ತರುಣದಲ್ಲಿ. ಆಂಧ್ರ, ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಈಗ ಕಾಣಿಸಿಗುವ ಅನೇಕ ಕೊಳಗಳು ಅವರ ರಚನೆಯೆ ಆಗಿದ್ದುದು ಸಾಧ್ಯ.

ಶಾಸನಗಳು : ಸಂಶೋಧನೆ, ಉತ್ಖನನಗಳು ಬಯಲುಮಾಡಿರುವುದು ಎಲ್ಲೊ ಕೆಲವು ಜಲಾಶಯಗಳನ್ನು ಮಾತ್ರ. ಆದರೆ ಸಾವಿರಗಟ್ಟಲೆ ಸಿಗುವ ಶಾಸನಗಳು ಕ್ರಿ.ಪೂ. ೩೦೦ ರಿಂದ ಸುಮಾರು ಕ್ರಿ.ಶ. ೧೮೦೦ ವರೆಗೆ ಅಸಂಖ್ಯಾತ ಕೆರೆಗಳು ಇದ್ದುದರ ಬಗ್ಗೆ ಬೆಳಕು ಚೆಲ್ಲುತ್ತದೆ. ನಮ್ಮ ಕೆರೆಗಳ ಇತಿಹಾಸದ ಪುನರ್ರ‍ಚನೆಗೆ ಶಾಸನಗಳು ಎಷ್ಟು ಉಪಯುಕ್ತ ಎನ್ನುವುದನ್ನು ಮುಂದೆ ಕೊಡಲಾದ ಕೆಲವು ಉದಾಹರಣೆಗಳಿಂದ ಸುಲಭವಾಗಿ ಕಾಣಬಹುದು. ಕೆಲವು ಶಾಸನಗಳು ಸಿಕಿರುವುದು ಕರ್ನಾಟಕದ ಹೊರಗೆ ಆದರೂ ಅವುಗಳನ್ನು ನಮ್ಮ ಕೆಲಸದಲ್ಲಿ ಬಳಸಿಕೊಳ್ಳಲಾಗಿದೆ. ಏಕೆಂದರೆ ಅವು ನಮ್ಮ ರಾಜ್ಯಕ್ಕೆ ಅಪ್ರತ್ಯಕ್ಷವಾಗಿ ಸಂಬಂಧಿಸಿವೆ. ಉದಾಹರಣೆಗೆ ಕ್ರಿ.ಶ. ೧೫೦ ರಿಂದ ರುದ್ರದಾಮನನ ಜುನಾಘಡ ಶಾಸನ ಶತಮಾನಗಳ ಕಾಲ ಅಸ್ತಿತ್ವದಲ್ಲಿದ್ದ ಜಲಾಶಯವೊಂದರ ಇತಿಹಾಸದ ಬಗ್ಗೆ ಪೂರ್ಣ ವಿವರಗಳನ್ನು ಕೊಡುತ್ತದೆ. ಅದು ಭಾರತೀಯ ಇತಿಹಾಸದ ಅತಿಪ್ರಾಚೀನ ಶಾಸನ. ಚಂಡಮಾರುತವೊಂದು ಹೇಗೆ ಒಂದು ಜಲಾಶಯವನ್ನು ನಾಶಮಾಡಿತು ಎಂಬುದು ಆ ಶಾಸನದ ಚಿತ್ರಣ. ಅತ್ಯಂತ ಶ್ರೇಷ್ಠವಾದುದು.[11] ಆ ಜಲಾಶಯವನ್ನು ಮೊದಲು ಕಟ್ಟಿದ್ದು ಮೌರ್ಯರು, ಸುಮಾರು ಕ್ರಿ.ಪೂ. ೩೨೦ರಲ್ಲಿ. ಅವರು ಮಧ್ಯ ಕರ್ನಾಟಕವನ್ನು ಒಂದು ಶತಮಾನಕ್ಕೂ ಹೆಚ್ಚುಕಾಲ ಆಳಿದರು. ಜಲಾಶಯಗಳ ನಿರ್ಮಾಣ ಹಾಗೂ ಸಂರಕ್ಷಣೆ ಬಗೆಗಿನ ತಮ್ಮ ತಿಳಿವಳಿಕೆಯನ್ನು ಕರ್ನಾಟಕದ ಜನ ಮೌರ್ಯರಿಂದ ಕಲಿತಿರುವ ಅಥವಾ ಉತ್ತಮ ಪಡಿಸಿಕೊಂಡಿರುವ ಸಾಧ್ಯತೆಯಿದೆ.

ಕೆರೆಯನ್ನು ನಿರ್ಮಿಸುವವರಿಗೆ ಕೈಪಿಡಿಯಂತೆ ಇರುವ ಏಕೈಕ ಶಾಸನ ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿರುವ ಕ್ರಿ.ಶ. ೧೫೬೯ರ ಪೋರುಮಾಮಿಲ್ಲ ಶಾಸನ. ಆ ಕೆರೆ ನಿರ್ಮಿತವಾದದ್ದು ವಿಜಯನಗರದ ಎರಡನೆಯ ಧೊರೆ ಬುಕ್ಕನ ಆಳ್ವಿಕೆಯಲ್ಲಿ.[12] ಆತನ ಉತ್ತರಾಧಿಕಾರಿಗಳು ತಮ್ಮ ರಾಜ್ಯದ ಕರ್ನಾಟಕ ಭಾಗದಲ್ಲಿ ಕೆರೆ ಕಟ್ಟಲು ಇದೇ ಸೂತ್ರಗಳನ್ನೇ ಅನುಸರಿಸಿದರು. ಅಂತೆಯೇ ಈ ಶಾಸನ ದಕ್ಷಿಣ ಭಾರತದ ಇತರ ಪ್ರದೇಶಗಳ ನೀರಾವರಿ ಕುರಿತು ಎಷ್ಟು ಪ್ರಸ್ತುತವೊ ನಮ್ಮ ಅಧ್ಯಯನಕ್ಕೂ ಅಷ್ಟೇ ಪ್ರಸ್ತುತ.

ಕರ್ನಾಟಕದ ಒಳಗಿನ ಅಥವಾ ಹತ್ತಿರದ ಶಾಸನಗಳಿಗೆ ಬಂದರೆ ಆದವಾನಿ[13],ಬನವಾಸಿ[14], ಚಂದ್ರವಳ್ಳಿ[15], ಮತ್ತು ತಾಳಗುಂದ[16]ಗಳಲ್ಲಿ ಸಿಕ್ಕಿರುವುದು. ಈ ರಾಜ್ಯದ ಇತಿಹಾಸದಲ್ಲಿ ಜಲಾಶಯಗಳ ಪ್ರಾಚೀನತೆಯನ್ನು ಗೊತ್ತುಮಾಡಲು ಇವು ಉಪಯುಕ್ತವಾಗಿವೆ. ಮುನಿರಾಬಾದಿನ ಒಂದು ಶಾಸನ, ಹೊಸಪೇಟೆಯ ಬಳಿ ತುಂಗಭದ್ರಾ ನದಿಯಿಂದ ಹೊರಟ ನಾಲೆಗಳನ್ನು ಕಾವ್ಯಮಯವಾಗಿ ವರ್ಣಿಸುತ್ತದೆ. ಕೆಳನಾಲೆ ಮೇಲುನಾಲೆಗಳನ್ನು ಪ್ರಸ್ತಾಪಿಸುತ್ತದೆ.[17] ಕೋಲಾರದ ಬಳಿಯ ಬೇತಮಂಗಲದ ಎರಡು ಶಾಸನಗಳು, ಸಾವಿರ ವರ್ಷಕ್ಕೂ ಹಿಂದಿನಿಂದ ಅಲ್ಲಿ ಇರುವ ಪ್ರಖ್ಯಾತ ಕೆರೆಯ ಚರಿತ್ರೆಯನ್ನು ಕೊಡುತ್ತದೆ.[18] ಹೊಳೇನರಸೀಪುರದ ಕ್ರಿ.ಶ. ೧೩೧೦ರ ಒಂದು ಶಾಸನ ಒಂದು ಕೆರೆಯನ್ನು ಕಟ್ಟಲು ಆದ ಒಟ್ಟು ವೆಚ್ಚವನ್ನು ಸೂಚಿಸುತ್ತದೆ.[19] ಬೋಳಕ್ಯಾತನಹಳ್ಳಿಯ (ಹಾಸನ ಜಿಲ್ಲೆ) ಒಂದು ಶಾಸನ ಕೆರೆಯ ಹೂಳು ತೆಗೆಯಲು ಏನು ಮಾಡಬೇಕೋ ತಿಳಿಸುತ್ತದೆ.[20] ಕೋಲಾರ ಜಿಲ್ಲೆಯ ರಾಜಗುಂಡ್ಲ ಹಳ್ಳಿ ಶಾಸನ ಕೆರೆ ನಿರ್ಮಾಣದಲ್ಲಿ ಅನುಸರಿಸಿದ ತಂತ್ರವನ್ನು ಬಳಸಿದ ವಸ್ತುಗಳನ್ನು ವಿವರಿಸುತ್ತದೆ.[21] ಲಕ್ಷ್ಮೀಧರಾಮತ್ಯನ ಹಂಪಿ ಶಾಸನ, ತಾಯಿ ತನಗೆ ಹಾಲೂಡಿಸುವಾಗ ಹಾಡುತ್ತಿದ್ದ ಜೋಗುಳಗಳಿಂದ ತಾನು ಕೆರೆ ಕಟ್ಟಿಸಲು ಭಾವಿ ತೋಡಿಸಲು ಹೇಗೆ ಪ್ರೇರಣೆ ಹೊಂದಿದ ಎಂಬುದನ್ನು ವರ್ಣಿಸುತ್ತದೆ.[22] ತಿಮ್ಮಾಲಾಪುರ ಕೆರೆಯ ಅಂಗಳದಲ್ಲಿ ಸಿಕ್ಕಿದ ಒಂದು ಶಾಸನದಲ್ಲಿ ಆ ಕೆರೆಯಲ್ಲಿ ನೀರು ಒಂದು ಆಳು ಪ್ರಮಾಣದಷ್ಟು ಇರಬೇಕು ಎಂದು ಹೇಳಿದೆ. ಪ್ರಾಯಶಃ ನೀರು ಆ ಮಿತಿಗೆ ಮೀರಿದರೆ, ಆ ಕೆರೆಗೆ ಸಂಬಂಧಪಟ್ಟ ಇತರ ಕೆರೆಗಳಿಗೆ ಅಪಾಯ ಆದೀತು ಎಂದೂ, ಅಥವಾ ಆ ಕೆರೆಗೆ ಅಪಾಯ ಆಗಬಹುದು ಎಂದೂ ಇರಬೇಕು.[23] ಈ ರೀತಿ ಕರ್ನಾಟಕದಲ್ಲಿ ದೊರೆತಿರುವ ನೂರಾರು ಶಾಸನಗಳಲ್ಲಿ ಇರುವ ವಿವರಗಳನ್ನು ಜೋಡಿಸಿದರೆ, ಕೆರೆಗಳ ರಚನೆ ಹಾಗೂ ಸಂರಕ್ಷಣೆಗೆ ಸಂಬಂಧಪಟ್ಟ ಎಲ್ಲವೂ ತಿಳಿದುಬರುತ್ತದೆ. ಕೆರೆಗಳ ವಿವಿಧ ಅಂಗಗಳಾದ ಏರಿ, ಅದರ ಆಕಾರ, ಕಟ್ಟಡದಲ್ಲಿ ಬಳಸಲಾದ ಸಾಮಗ್ರಿ, ತೂಬು, ಕೋಡಿ, ಕೆರೆಯಲ್ಲಿ ನಿಲ್ಲ ಬೇಕಾದ ನೀರಿನ ಆಳ, ನಿರ್ಮಾಣದ ಉದ್ದೇಶ, ನಿರ್ಮಾಣಕ್ಕೆ ಬೇಕಾದ ಹಣಕಾಸು, ಸಂರಕ್ಷಣೆಗೆ ಬೇಕಾದ ಅಗತ್ಯಗಳು ಎಲ್ಲವೂ ತಿಳಿದುಬರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ಬಹುಪಾಲು ಶಾಸನಗಳು ಕೆರೆ ನಿರ್ಮಾಣ ಅಥವಾ ಜೀರ್ಣೋದ್ಧಾರದ ನಿಖರವಾದ ದಿನವನ್ನು ಸೂಚಿಸುತ್ತವೆ.

ಸಾಹಿತ್ಯ ಮೂಲಗಳು: ಸಾಹಿತ್ಯ ಮೂಲಗಳ ಬಗ್ಗೆ ನೋಡುವುದಾದರೆ, ಪ್ರಾಚೀನ ಹಾಗೂ ಮಧ್ಯಕಾಲೀನ ಭಾರತದಲ್ಲಿ ವೃಕ್ಷಾಯುರ್ವೇದ ಎಂಬ ಹೆಸರಿನ ಒಂದು ಗ್ರಂಥವೇ ಇತ್ತು. ಸಸ್ಯಗಳು ಅವುಗಳ ರೋಗ ಹಾಗೂ ಪರಿಹಾರಗಳಿಗೆ ಸಂಬಂಧಿಸಿದ್ದು ಅದು. ಅದು ಜಾಲಾಶಯಗಳನ್ನು ಪ್ರಸ್ತಾಪಿಸುತ್ತದೆ. ಈ ಪಂಥವನ್ನು ಒಳಗೊಂಡ ಒಂದು ಅತ್ಯಂತ ಪ್ರಮುಖ ಕೃತಿ ಪರಾಶರನ ಕೃಷಿಸೂಕ್ತಿ. ಅದರ ಕಾಲ ಕ್ರಿ.ಶ. ೧೦೦೦ ಎನ್ನುತ್ತಾರೆ; ಲಾಲಂಜಿ ಗೋಪಾಲ್. ಕನ್ನಡದ ಲೋಕೋಪಕಾರ(ಕ್ರಿ.ಶ. ೧೦೨೫) ಹಾಗೂ ‘ರಟ್ಟಮತ’(ಕ್ರಿ.ಶ. ೧೩೦೦) ಸಹ ಅದೇ ಪಂಥದ ವಿಷಯಗಳನ್ನು ಒಳಗೊಂಡಿವೆ.

ಪೊರುಮಾಮಿಳ ಕೆರೆ ಶಾಸನದಲ್ಲಿ ಹಾಗೂ ಕೃಷಿಸೂಕ್ತಿಯಲ್ಲಿ ಇರುವ ಸೂಚನೆಗಳು ಪರಸ್ಪರ ಸಮರ್ಥಕ ಹಾಗೂ ಪರಸ್ಪರ ಪೂರಕವಾಗಿವೆ. ಕೆರೆ ನಿರ್ಮಾಣದ ಬಗ್ಗೆ ನಮ್ಮ ಹಿರಿಯರು ಪಡೆದಿದ್ದ ಜ್ಞಾನ ಅವೆರಡರಲ್ಲಿ ತುಂಬಿದೆ.

ನಮ್ಮ ವಿಷಯದ ಮೇಲೆ ಕ್ವಚಿತ್ತಾಗಿ ಬೆಳಕು ಚೆಲ್ಲುವ, ಪ್ರಾಚೀನ ಭಾರತೀಯ ಸಾಹಿತ್ಯದ ಇನ್ನಿತರ ಪ್ರಕಾರಗಳೂ ಉಂಟು. ಉದಾಹರಣೆಗೆ ಕೌಟಿಲ್ಯನ ಅರ್ಥಶಾಸ್ತ್ರ (ಕ್ರಿ.ಪೂ.೩೦೦) ಹೇಳುತ್ತದೆ, ನಿರಂತರವಾದ ಅಥವಾ ಇತರ ಯಾವುದಾದರೂ ಮೂಲಗಳಿಂದ ನೀರು ತುಂಬುವಂಥ ಅಣೆಕಟ್ಟು ಅಥವಾ ಜಲಾಶಯಗಳನ್ನು ದೊರೆ ಕಟ್ಟಿಸಬೇಕು, ಇಲ್ಲವೆ ಯಾರು ತಾವಾಗಿಯೆ ಜಲಾಶಯಗಳನ್ನು ಕಟ್ಟುತ್ತಾರೆಯೋ ಅವರಿಗೆ ಬೇಕಾದ ಸ್ಥಳ ರಸ್ತೆ ಮರುಮುಟ್ಟು ಇತ್ಯಾದಿ ಅಗತ್ಯಗಳನ್ನು ಒದಗಿಸಬೇಕು.[24] ಕೌಟಿಲ್ಯ ಮಳೆಯ ಮಾಪಕವನ್ನು ತಿಳಿದಿದ್ದ ಎನ್ನುವುದು ಗಮನಾರ್ಹ. ನಿರ್ದಿಷ್ಟ ಅಳತೆಗಳ ವಿಶೇಷ ಕುಂಡವನ್ನು ನಿರ್ಮಿಸಬೇಕು, ಅದರ ನಡುವೆ ಆಕಾಶದತ್ತ ಬಾಯಿ ಉಳ್ಳಂತೆ ಒಂದು ಮೊಳ ಅಳತೆಯ ರಂಧ್ರ ಇರಬೇಕು, ಅದೇ ಮಳೆ ನೀರಿನ ಮಾಪಕ ಅಥವಾ ವರ್ಷಮಾನ[25]ಎಂದು ಬರೆಯುತ್ತಾನೆ, ಕೌಟಿಲ್ಯ.

ಇಡೀ ಸಮಾಜದ ಅಭ್ಯುದಯಕ್ಕೆ ಮೂಲಭೂತ ಪ್ರಾಮುಖ್ಯತೆ ಉಳ್ಳದ್ದು ಕೆರೆಯ ನಿರ್ಮಾಣ ಎನ್ನುವುದು ಮಿತಾಕ್ಷರಕಾರನಾದ ವಿಜ್ಞಾನೇಶ್ವರ (ಕ್ರಿ.ಶ. ೧೧೦೦)ನಿಂದ ನಿಚ್ಚಳವಾಗಿ ತಿಳಿದು ಬರುತ್ತದೆ. ಆತ ಹೇಳುತ್ತಾನೆ: “ಒಂದು ಹೊಳೆಗೆ ಅಡ್ಡಲಾಗಿ ಆಣೆಕಟ್ಟು ನಿರ್ಮಿಸುವುದರಿಂದ ಒಬ್ಬನ ಭೂಮಿ ನಾಶವಾದರೂ ಸರಿಯೆ, ಅದು ಉಂಟುಮಾಡುವ ನಾಶ ಅಲ್ಪವಾಗಿದ್ದು ಅನೇಕರಿಗೆ ಲಾಭದಾಯಕವಾಗುವಂತಿದ್ದರೆ ಆ ಭೂಮಿಯ ಒಡೆಯ ನಿರ್ಮಾಣವನ್ನು ನಿಲ್ಲಿಸಕೂಡದು”.[26] ಈ ರೀತಿ ಕೃಷಿ ಹಾಗೂ ಅರ್ಥಶಾಸ್ತ್ರಕಾರರು ಹಾಗೂ ನ್ಯಾಯಶಾಸ್ತ್ರಕಾರರು ನೀರಾವರಿಯ ಪ್ರಾಮುಖ್ಯತೆ ಅರಿತುಕೊಂಡು ಜನತೆಗೆ ತಿಳಿಸಿದರು. ನಾಗವರ್ಮನ (೧೨ನೇ ಶತಮಾನ) ‘ಅಭಿಧಾನ ವಸ್ತುಕೋಶ’ ಹಾಗೂ ಮಂಗರಾಜನ (೧೫ನೇ ಶತಮಾನ ಪೂರ್ವಾರ್ಧ) ‘ಅಭಿನವಾಭಿಧಾನ’ ಎಂಬ ಎರಡು ಕನ್ನಡ ವಸ್ತುಕೋಶಗಳಲ್ಲಿ ಜಲ ಸಂಗ್ರಹಣೆಯ ನಾನಾರೀತಿಗಳನ್ನು ವರ್ಣಿಸಲು ಬಳಸುವ ಶಬ್ದಗಳನ್ನು ಒಳಗೊಂಡ ಪದ್ಯಗಳಿವೆ. ಇವು ಸಮಕಾಲೀನ ಶಾಸನಗಳಲ್ಲಿ ಬಳಕೆಯಾಗಿರುವ ಶಬ್ದಗಳ ಅರ್ಥವನ್ನೆ ವಿವರಿಸುತ್ತವೆ. ಆದ್ದರಿಂದ ಇವು ನಮ್ಮ ಗ್ರಹಿಕೆಗೆ ಅಮೂಲ್ಯ ಸಹಾಯಕವಾದಂಥವು.

ಕೃಷ್ಣದೇವರಾಯನ ತೆಲುಗು ಕೃತಿ ‘ಆಮುಕ್ತಮಾಲ್ಯ’ ನೀರಾವರಿಯ ಪ್ರಮುಖ್ಯತೆಯನ್ನು ಈ ರೀತಿ ಒತ್ತಿ ಹೇಳುತ್ತದೆ. “ರಾಜ್ಯ ಕಿರಿದಾಗಿದ್ದಲ್ಲಿ ಅದರ ಧರ್ಮ ಹಾಗೂ ಅರ್ಥ ಎರಡೂ ಹೆಚ್ಚುವುದು, ಕೆರೆಗಳನ್ನು ನೀರಾವರಿ ಕಾಲುವೆಗಳನ್ನು ನಿರ್ಮಿಸಿದಾಗ ಮಾತ್ರ.”[27]

ವಿದೇಶೀ ಪ್ರವಾಸಿಗರು: ಪ್ರಾಚೀನ ಹಾಗೂ ಮಧ್ಯಯುಗದಲ್ಲಿ ಬಹುಸಂಖ್ಯೆ ವಿದೇಶೀ ಪ್ರವಾಸಿಗರು ದಕ್ಷಿಣ ಭಾರತಕ್ಕೂ ಕರ್ನಾಟಕಕ್ಕೂ ಬಂದಿದ್ದರು. ಆದರೂ ನೀರಾವರಿಯ ಮೇಲೆ ಬರೆದಿರುವವರು ಇಬ್ಬರು ಮಾತ್ರ. ಅವರ ಪೈಕಿ ಡಾಮಿಂಗೊ ಪಾಯೋಸ್ ೧೫೨೦ ರಲ್ಲಿ ಬರೆದ. ಫರ್ನಾವ್ ನೂನಿಜ್ ೧೫೩೫ರಲ್ಲಿ ವಿಜಯನಗರದ ಚರಿತ್ರೆಯನ್ನು ರಚಿಸಿದ. ಇಬ್ಬರೂ ಕೃಷ್ಣದೇವರಾಯ ತನ್ನಹೊಸ ರಾಜಧಾನಿಯಲ್ಲಿ ಕೆರೆ ಕಟ್ಟಿಸಿದ್ದನ್ನು ವರ್ಣಿಸುತ್ತಾರೆ. ಅದರ ಈಗಿನ ಹೆಸರು ರಾಯರ ಕೆರೆ ಎಂದೇ. ಅ ವರ್ಣನೆ ಇಲ್ಲದೆ ಹೋಗಿದ್ದರೆ ಕೆರೆ ಕಟ್ಟಿಸಲು ಕೃಷ್ಣದೇವರಾಯ ಮಾಡಿದ ಅಪಾರ ಪ್ರಯತ್ನಗಳು ನಮಗೆ ತಿಳಿಯುತ್ತಲೆ ಇರಲಿಲ್ಲ. ಈ ಕೆರೆಯ ವಿವರಣೆ ಅನುಬಂಧ – ೬ ರಲ್ಲಿ ಕಾಣಸಿಗುತ್ತದೆ.

ಸರ್ಕಾರಿ ದಾಖಲೆಗಳು: ಪ್ರಾಚೀನ ಹಾಗೂ ಮಧ್ಯಕಾಲೀನ ಯುಗದ ಕೆರೆಗಳ ಅಧ್ಯಯನಕ್ಕೆ ಶಾಸನಗಳು ನಮಗೆ ಮುಖ್ಯ ಆಧಾರಮೂಲಗಳಾದರೆ, ಅಧುನಿಕ ಕಾಲಕ್ಕೆ ಸರ್ಕಾರಿ ದಾಖಲೆಗಳು ಅವುಗಳ ಸ್ಥಾನವನ್ನು ಪಡೆಯುತ್ತವೆ. ಆ ಪೈಕಿ ಅತ್ಯಂತ ಅಮೂಲ್ಯವಾದುದು ಬುಕಾನನ್ನನ ದಿನಚರಿ. ಮದರಾಸಿನಿಂದ ಮೈಸೂರು ಕನ್ನಡ ಜಿಲ್ಲೆಗಳು ಹಾಗೂ ಮಲಬಾರಿನಲ್ಲಿ ಕೃಷಿ ನೀರಾವರಿಗಳ ಸ್ಥಿತಿಗಳ ಮತ್ತು ಅಲ್ಲಿನ ಪುರಾತನ ವಸ್ತುಗಳ ಬಗ್ಗೆ ಆಗಿನ ಭಾರತದ ಗವರ್ನರ್ ಜನರಲ್ ಮಾರ್ಕ್ವಿಸ್ ಆಫ್ ವೆಲ್‌ಸ್ಲಿಗೆ ಒಪ್ಪಿಸಿದ ವರದಿಯಿದು. ಬುಕಾನನ್ನನ ಮೈಸೂರು, ಕನ್ನಡ ಜಿಲ್ಲೆಗಳ ಪ್ರವಾಸ ನಡೆದದ್ದು ೧೮೦೦ ರಿಂದ ೧೮೦೨ರ ನಡುವೆ. ಅವನ ದಿನಚರಿ ಆಗ ಇದ್ದ ಕೆರೆಗಳು, ಅವುಗಳ ಸಂರಕ್ಷಣೆ, ಕೃಷಿ ಮತ್ತು ನೀರಾವರಿ ಪದ್ಧತಿಗಳನ್ನು ಕುರಿತು ತುಂಬ ಬೆಲೆಯುಳ್ಳ ಮಾಹಿತಿಯನ್ನು ಒಳಗೊಂಡಿದೆ. ಮುಂದಿನ ಪ್ರಮುಖ ವಿಷಯಮೂಲ ಎಂದರೆ ೧೮೦೪ರಲ್ಲಿ ಕರ್ನಲ್ ಎಮ್. ವಿಲ್ಕ್ಸ್ ಮೈಸೂರು ಸರ್ಕಾರದ ಸಂಪನ್ಮೂಲಗಳು, ಮತ್ತು ವೆಚ್ಚ ಕುರಿತು ಒಳಾಡಳಿತದ ಬಗ್ಗೆ ಮಾಡಿದ ವರದಿ. ಇತರ ವಿವರಗಳ ಜೊತೆಗೆ, ಮೈಸೂರುನಲ್ಲಿ ಬೇಸಾಯದಲ್ಲಿದ್ದ ಹಾಗೂ ನೀರಾವರಿಗೆ ಒಳಪಟ್ಟಿದ್ದ ಭೂವಿಸ್ತಾರವನ್ನು ತಿಳಿಸುತ್ತದೆ, ಆ ವರದಿ. ಕೆರೆಗಳ ಸಂಖ್ಯೆ, ನಿರ್ಮಾಣ ಕ್ರಮದ ಕೆಲವು ವಿವರಗಳು, ಆಗ ಇದ್ದ ಕೆರೆಗಳ ಸ್ಥಿತಿ, ಅವುಗಳಿಂದ ಆಗುತ್ತಿದ್ದ ನೀರಾವರಿ ಇವುಗಳನ್ನು ಕುರಿತು ಮಾಹಿತಿಯ ಅತ್ಯಂತ ಅಮೂಲ್ಯ ಆಧಾರ, ಮೈಸೂರು ಮುಖ್ಯ ಇಂಜನಿಯರ್ ಆಗಿದ್ದ ಮೇಜರ್ ಸ್ಯಾಂಕಿಯ (೧೮೬೬) ವರದಿ.

ದಕ್ಷಿಣ ಮರಾಠಾ ಪ್ರದೇಶದಲ್ಲಿನ (ಮುಂಬೈ ಪ್ರಾಂತ್ಯದ ಕನ್ನಡ ಪ್ರದೇಶಗಳ) ನೀರಾವರಿಗೆ ಸಂಬಂಧಿಸಿದ ಇಷ್ಟೆ ಮುಖ್ಯ ಆಧಾರಮೂಲ, ನೀರಾವರಿ ಸೂಪರಿಂಟಿಂಡಿಂಗ್ ಇಂಜನಿಯರ್ ಆಗಿದ್ದ ಕರ್ನಲ್ ಪ್ಲೇಫೇರ್ ೧೮೬೬ರಲ್ಲಿ ಸಲ್ಲಿಸಿದ ವರದಿಗಳು. ೧೮೬೬ರಲ್ಲಿ ಮದಗ ಮಾಸೂರು ಕೆರೆಯನ್ನು ಜೀರ್ಣೋದ್ಧಾರ ಮಾಡಿದರ ಬಗ್ಗೆ ಆತ ಕೊಟ್ಟಿರುವ ವಿವರಣೆ ಅನುಬಂಧ – ೪ರಲ್ಲಿದೆ.

ಇತರ ಮಾಹಿತಿ ಮೂಲಗಳೆಂದರೆ ಮೈಸೂರು ರಾಜ್ಯದ (ಈಗ ಕರ್ನಾಟಕ) ಜಿಲ್ಲಾ ಗೆಜಿಟಿಯರುಗಳು ಹಾಗೂ ಮುಂಬೈ ಮತ್ತು ಮದರಾಸು ಪ್ರಾಂತ್ಯದಲ್ಲಿ ಪ್ರಕಟವಾಗಿದ್ದ ಗೆಜೆಟಿಯರುಗಳು. ಅವುಗಳಲ್ಲಿ ಲೂಯಿ ರೈಸ್‌ನ ಮೈಸೂರು ಮತ್ತು ಕೊಡಗಿನ ಗೆಜಿಟಿಯರ್ ಅಮೋಘವಾದ ಮಾಹಿತಿಮೂಲ. ಹತ್ತೊಂಭತ್ತನೆಯ ಶತಮಾನದಲ್ಲಿ ಕರ್ನಾಟಕದಲ್ಲಿನ ನೀರಾವರಿಯ ಸ್ಥಿತಿಯನ್ನು ಅರಿಯಲು ಈ ಗೆಜಿಟಿಯರುಗಳು ಸಪ್ರಮಾಣದ ಮೂಲಗಳಾಗಿವೆ.

ಮೈಸೂರು, ಮುಂಬೈ, ಮದರಾಸು ಮತ್ತು ಹೈದರಾಬಾದು ಸರ್ಕಾರಗಳ ಆಡಳಿತ ವರದಿಗಳು ಇನ್ನೊಂದು ಮುಖ್ಯ ಮೂಲ. ಮೈಸೂರಿಗೆ ಸಂಬಂಧಿಸಿದಂತೆ ೧೮೬೨ರಿಂದ ಮೊದಲಾಗಿ ಈ ವರದಿಗಳು ಸಿಗುತ್ತವೆ. ಆದರೆ ಇತರ ಪ್ರದೇಶಗಳ ಬಗ್ಗೆ ಹಾಗೆ ಇಲ್ಲ. ಅಷ್ಟೇ ಪ್ರಮುಖವಾದುವೆಂದರೆ ಈ ಎಲ್ಲ ನಾಲ್ಕು ಸರ್ಕಾರಗಳು ಪ್ರಕಟಿಸಿದ ವಾರ್ಷಿಕ ಋತು ಹಾಗೂ ಬೆಳೆಯ ವರದಿಗಳು, ಜನಗಣತಿ ವರದಿಗಳು ಮತ್ತು ಸರ್ವೇ ಸೆಟ್‌ಲ್‌ಮೆಂಟ್ ವರದಿಗಳು.

೧೯ನೆಯ ಶತಮಾನದ ಕ್ಷಾಮ ಆಯೋಗದ ವರದಿಗಳು, ಭಾರತೀಯ ನೀರಾವರಿ ಆಯೋಗದ ವರದಿ (೧೯೦೧), ಮುಂಬೈ ನೀರಾವರಿ ಸಮಿತಿಯ ವರದಿ (೧೯೩೮) ಮತ್ತು ನೀರಾವರಿ ಸಮಿತಿಯ ವರದಿ (೧೯೭೨) – ಇವು ಅಭಿವೃದ್ಧಿ ಕುರಿತ ಅಧಿಕಾರಯುತ ಮೂಲಗಳು. ಇವುಗಳ ಪೈಕಿ, ಕರ್ನಾಟಕದ ಎಲ್ಲ ಭಾಗಗಳ ನೀರಾವರಿ ಸಮಸ್ಯೆಗಳನ್ನು ಮೊಟ್ಟ ಮೊದಲಿಗೆ ಸಮೀಕ್ಷೆ ಮಾಡಿರುವ ಏಕಮಾತ್ರ ಮೂಲ ೧೯೦೧ ನೀರಾವರಿ ಆಯೋಗದ ವರದಿ. ಈ ವಿಷಯದಲ್ಲಿ ಮುಂಬೈ ಕರ್ನಾಟಕ ಕುರಿತಂತೆ ಇರುವ ಮಾಹಿತಿ ಅತ್ಯಲ್ಪ. ಹೈದರಬಾದ್ ಕರ್ನಾಟಕದ ಬಗ್ಗೆ ಇಲ್ಲವೇ ಇಲ್ಲ ಎನ್ನಬಹುದು. ಹೀಗಿದ್ದೂ ಈ ವರದಿಯ ಉಪಯುಕ್ತತೆಯನ್ನು ಕಿಂಚಿತ್ತೂ ಕಡಿಮೆ ಎಣಿಸುವಂತಿಲ್ಲ.

ಮೈಸೂರು ರೆವಿನ್ಯೂ ಕೈಪಿಡಿ, ಮೈಸೂರು ಕೆರೆಗಳ ರಿಜಿಸ್ಟರು ಪುಸ್ತಕಗಳು, ಮೈಸೂರು ಮುಂಬೈ ಹೈದರಬಾದುಗಳ ವಿವಿಧ ನೀರಾವರಿ ಕಾನೂನುಗಳು, ನಿಯಮಗಳು, ಇವೆಲ್ಲ ಇನ್ನಿತರ ಮುಖ್ಯ ಆಧಾರ ಮೂಲಗಳು.

ಈವರೆಗೆ ನಾವು ಪರಿಶೀಲಿಸಿದ ಎಲ್ಲ ಬಗೆಯ ಮೂಲಗಳಲ್ಲಿ ಶಾಸನಗಳು ಹಾಗೂ ಸರ್ಕಾರಿ ದಾಖಲೆಗಳು ಮುಖ್ಯವಾದವು. ಶಾಸನಗಳು ಸಾವಿರಾರು ಸಂಖ್ಯೆಯಲ್ಲಿವೆ. ಅವುಗಳಿಂದ ನಮಗೆ ಬೇಕಾದ ವಿಷಯಗಳನ್ನು ಹೆಕ್ಕಿತೆಗೆದು ಜೋಡಿಸಿಕೊಳ್ಳಬೇಕು. ಸರ್ಕಾರಿ ದಾಖಲೆಗಳು ಸಾವಿರಾರು ಪುಟ ಇವೆ, ಮತ್ತು ಸುಲಭವಾಗಿ ಸಿಗುತ್ತವೆ. ಅವುಗಳಲ್ಲಿ ಬುಕಾನನ್ನನ ಪ್ರವಾಸ ಕಥನ, ಸ್ಯಾಂಕಿಯ ವರದಿಗಳು, ರೈಸ್‌ನ ಗೆಜಿಟಿಯರ್, ೧೯೦೧ರ ನೀರಾವರಿ ಆಯೋಗದ ವರದಿ – ಇವು ಶಾಸನಗಳಲ್ಲಿ ಅಪೂರ್ಣವಾಗಿ ಅಥವಾ ತುಣುಕು ತುಣುಕಾಗಿ ಕಾಣಿಸಿಗುವ ಮಾಹಿತಿಯ ಮೇಲೆ ಬೆಳಕು ಚೆಲ್ಲುತ್ತವೆ.

 

[1]ಓಮ್ ಸ್ಟೆಡ್-ಲಾ ಆಫ್ ಇಂಟರ್‌ನ್ಯಾಷನಲ್ ಡ್ರೈನೇಜಿ ಬೇಸಿನ್ ಪು. ೫ ನ್ಯೂಯಾರ್ಕ್ ಯೂನಿವರ್ಷಿಟಿ ಸ್ಕೂಲ್ ಆಫ್ ಲಾ. ನ್ಯೂಯಾರ್ಕ್ ೧೯೬೭.

[2]ರಾಬರ್ಟ್ – ಚೇಂಬರ್ಸ್ ಮತ್ತು ಇತರರು – ಟು ದಿ ಹ್ಯಾಂಡ್ಸ್ ಆಫ್ ಪೂರ್ ವಾಟರ್ ಆಂಡ್ ಟ್ರೀಸ್ ಪು. ೬೩. ಅಕ್ಸ್ ಫರ್ಡ್ ಮತ್ತು ಐ.ಬಿ.ಹೆಚ್ಚ. ೧೯೮೯

[3]ಎಂ.ಎ.ರಾಧಾಕೃಷ್ಣ- “ಹಿಂದೂ”ಗೆ ಪತ್ರ, ಬೆಂಗಳೂರು ಮುದ್ರಣ ತಾ. ೫-೯-೧೯೯೧

[4]ಎನ್.ವಿ.ರತ್ನಂ-ಟೈಮ್ಸ್ ಅಫ್ ಇಂಡಿಯಾ’ಗೆ ಪತ್ರ, ಬೆಂಗಳೂರು ಮುದ್ರಣ ತಾ.೧೭-೧೨-೧೯೯೧

[5]ಇಂಡಿಯನ್ ಇರಿಗೇಷನ್ ಕಮಿಷನ್ ರಿಪೋರ್ಟ್-೧೯೦೧-೦೩ ಸಲೆಕ್ಟಡ್ ಎವಿಡೆನ್ಸ್-ಎವಿಡೆನ್ಸ್ ಆಫ್ ಕರ್ನಲ್ ಗ್ರ್ಯಾಂಟ್, ಸೂಪರಿಂಟೆಂಡೆಂಟ್ ರೆವಿನ್ಯೂ ಸರ್ವೇ-ಮೈಸೂರು ಪು.೩೧೨-೩೨೦.

[6]ಜಿ.ಎನ್.ಗೋಪಾಲಕೃಷ್ಣ-ಚೀಫ್ ಪ್ಲಾನಿಂಗ್ ಆಫೀಸರ್ ಬೆಂಗಳೂರು ಜಿಲ್ಲಾ ಪರಿಷತ್ ಗ್ರಾಮಾಂತರ “ಬೆಂಗಳೂರು ಜಿಲ್ಲಾ ಪರಿಷತ್ ಎಕ್ಸ್‌ಪೀರಿಯನ್ಸ್ ಇನ್ ಟ್ಯಾಂಕ್ ಫಿಷರೀಸ್ ಡೆವಲಪ್‌ಮೆಂಟ್ – ಪ್ರೊಮೋಟಿಂಗ್ ಪೀಪಲ್ಸ್ ಪಾರ್ಟಿಸಿಪೇಷನ್ ಇನ್ ದಿ ರಿಹೆಬಿಲಿಟೇಷನ್ ಆಫ್ ಟ್ಯಾಂಕ್ಸ್ ಇನ್ ಕರ್ನಾಟಕ-ವಾಮನ, ಎ.ಸುಂದರ್ (ಸಂಪಾದಕರು), ಹೈದರಾಬಾದು ೧೯೯೦.

[7]ಓಮರ್ ಸತ್ತಾರ್-ನ್ಯೂ ಸೈಂಟಿಸ್ಟ್-ಡಬ್ಲ್ಯೂ.ಸಿ.ಎನ್.ಇಂಗ್ಲೆಂಡ್ “ನ್ಯಾಚುರಲ್‌ಬಂಡ್” ರೀಡರ್ಸ್ ಡೈಜಿಸ್ಟ್-ಜನವರಿ೧೯೯೨ ಪು. ೩೦

[8]ಇಂಡಿಯನ್ ಇರಿಗೇಷನ್ ಕಮಿಷನ್ ರಿಪೋಟ್ ೧೯೦೧-೦೩(ಪೂರ್ವೆಲ್ಲೇಖಿತ)

[9]ಎಂ.ಕೆ.ಧವಳೀಕರ್ – “ಸೆಟಲ್‌ಮೆಂಟ್ ಅರ್ಕಿಯಾಲಜಿ ಅಫ್ ಇನಾಂಗಾಂವ್” ಪುರಾತತ್ವ ನಂ.೮ (೧೯೭೮) ಪು. ೪೭

[10]ಸಿ.ಮಾರ್ಗಬಂಧು – “ಮಟೀರಿಯಲ್ ಕಲ್ಚರ್ ಡ್ಯೂರಿಂಗ್ ದಿ ಅರ್ಲಿ ಹಿಸ್ಟಾರಿಕಲ್ ಪಿರಿಯಡ್ – ಸೌತ್ ಇಂಡಿಯನ್ ಸ್ಟಡೀಸ್” ಹಾ.ಮಾ.ನಾಯಕ ಮತ್ತು ಬಿ.ಆರ್.ಗೋಪಾಲ್(ಸಂ.)ಪು.೫೪ ಮೈಸೂರು ೧೯೯೦.

[11]ವಿ.ವಿ.ಮಿರಾಶಿ – “ದಿ. ಹಿಸ್ಟರಿ ಅಂಡ್ ಇನ್ಸ್‌ಕ್ರಿಷ್ಷನ್ಸ್ ಅಫ್ ದಿ ಶಾತಾವಾಹನಾಸ್ ಅಂಡ್ ವೆಸ್ಟರ್ನ್ ಕ್ಷತ್ರಪಾಸ್” ಭಾಗ ೨ ವಿಭಾಗ ೨ ಬಿ.ನಂ.೫೧ ಪು. ೧೨೧ ಬೊಂಬಾಯಿ. ೧೯೮೧

[12]ಇ.ಐ.೧೪ ನಂ.೪ ಜುಲೈ ೧೯೧೭.

[13]ವಿ.ವಿ.ಮಿರಾಶಿ (ಪೂರ್ವೋಲ್ಲೇಖಿತ) ಭಾಗ೨ ವಿಭಾಗ ೧ ನಂ. ೩೪. ಪು. ೮೫.

[14]ಅದೇ ವಿಭಾಗ ೧ ನಂ. ೩೭. ಪು. ೯೨.

[15]ಎಂ.ಏ.ಆರ್.೧೯೨೯ ನಂ. ೧.

[16]ಇ.ಸಿ.೭ ಷಿಕಾರಿಪುರ ೧೭೬.

[17]ಹೈದರಾಬಾದ್ ಆರ್ಕಿಯಾಲಜಿಕಲ್ ಸೀರಿಸ್ ನಂ.೫.

[18]ಇ.ಸಿ.೧೦ ಬೌರಿಂಗ್‌ಪೇಟ್ ೪ ಮತ್ತು ೯.

[19]ಇ.ಸಿ.ಆರ್.೮ ಹೊಳೇನರಸೀಪುರ ೪೨

[20]ಅದೇ ಅರಕಲಗೂಡು ೧೧

[21]ಇ.ಸಿ.೧೦ ಮುಳುಬಾಗಿಲು ೧೭೨ ಮತ್ತು ೧೭೩.

[22]ಎಸ್.ಐ.ಐ. ೪ ನಂ. ೨೬೭ ಪು. ೬೧-೬೬.

[23]ಇ.ಸಿ.೭ ಶಿವಮೊಗ್ಗ – ೩೫.

[24]ಆರ್.ಶಾಮಾಶಾಸ್ತ್ರಿ-ಕೌಟಿಲ್ಯನ ಅರ್ಥಶಾಸ್ತ್ರ ೧೯೬೭. ಭಾಗ ೨ ಅಧ್ಯಾಯ ೧ ಪು. ೪೬

[25]ಅದೇ ಭಾಗ ೨ ಅಧ್ಯಾಯ ೫ ಪು. ೫೬.

[26]ಮಿತಾಕ್ಷರ – (ಅನು) ಜೆ.ಆರ್.ಘುರಪುರೆ II ಪು. ೧೫೬ ೨ನೇ ಮುದ್ರಣ ಬೊಂಬಾಯಿ ೧೯೩೯

[27]ಆಮುಕ್ತ ಮಾಲ್ಯದ-ಸರ್ಗ ೪ ಶ್ಲೋಕ ೨೩೬