ಹದಿನಾರನೆಯ ಶತಮಾನ: ಕರ್ನಾಟಕದ ಇತಿಹಾಸದಲ್ಲಿ ಕ್ರಿ.ಶ. ೧೫೬೫ ತಾಳೀಕೋಟೆ ಅಥವಾ ರಕ್ಕಸತಗಂಡಿ ಯುದ್ಧದ ವರೆಗಿನ ಹದಿನಾರನೆಯ ಶತಮಾನ, ವಿಜಯನಗರ ಸಾಮ್ರಾಜ್ಯದ ವೈಭವ ಶಿಖರವನ್ನು ಮುಟ್ಟಿದ್ದನ್ನು ಕಂಡಿತು. ಆ ಯುದದ್ಧಲ್ಲಿ ದಖನ್ನಿನ ಷಾಹಿದೊರೆಗಳ ಕೈಯಲ್ಲಿ ಅದು ಸೋತಮೇಲೆ ಕರ್ನಾಟಕ ಉತ್ತರದಲ್ಲಿ ಆದಿಲ್ ಷಾಹಿ ಹಗೂ ದಕ್ಷಿಣದಲ್ಲಿ ಕೆಳದಿ ನಾಯಕರು, ಚಿತ್ರದುರ್ಗದ ಪಾಳೆಯಗಾರರು ಹಾಗೂ ಮೈಸೂರು ಒಡೆಯರು ಮುಂತಾದ ಸಣ್ಣ ಸಣ್ಣ ರಾಜ್ಯಗಳು ಒಡೆದುನಿಂತತು. ಕ್ರಿ.ಶ ೧೫೬೫ಕ್ಕೆ ಹಿಂದೆ ಅಣೆಕಟ್ಟು ಜಲಾಶಯಗಳ ನಿರ್ಮಾಣ ಕೃಷ್ಣದೇವರಾಯನಿಂದ ಅತ್ಯಂತ ಹೆಚ್ಚಿನ ಪ್ರೋತ್ಸಾಹವನ್ನು ಪಡೆಯಿತು. ಆತ ತನ್ನ ತಂದೆ ತಾಯಿಯರು ರಾಣಿಯರು, ರಾಜಕುಮಾರರು ಪುರೋಹಿತ ಹಾಗೂ ಧರ್ಮಗುರುಗಳ ಹೆಸರಿನಲ್ಲಿ ಅವುಗಳನ್ನು ಕಟ್ಟಿಸಿದ. ಆ ಚಳುವಳಿಗೆ ಅವನ ಅಧಿಕಾರಿಗಳು ಪೋತ್ಸಾಹವಿತ್ತರು. ಅವನ ಉತ್ತರಾಧಿಕಾರಿಗಳಾದ ಅಚ್ಯುತರಾಯ ಹಾಗೂ ರಾಮರಾಯನ ಕಾಲದಲ್ಲೂ ಕಾರ್ಯವೇಗ ಹಾಗೆಯೆ ಮುಂದುವರಿಯಿತು. ಹದಿನಾರನೆಯ ಶತಮಾನದಲ್ಲಿ ಕ್ರಿ.ಶ ೧೫೬೫ರ ವರೆಗೆ ನಡೆದ ಜಲಾಶಯ ನಿರ್ಮಾಣ ಹಾಗೂ ಜೀರ್ಣೋದ್ಧಾರ ಕಾರ್ಯದ ಕಾಲಾನುಕ್ರಮವಾದ ಸಾರಾಂಶವನ್ನು ಈಗ ಕೊಡುತ್ತೇವೆ.

ಕೃಷ್ಣರಾಯನ ಕಾಲದ (೧೫೦೯ – ೧೫೧೯) ಅತ್ಯಂತ ಹಳೆಯ ಶಾಸನ ಒಂದರಲ್ಲಿ[1]ಚಂದ್ರಗುತ್ತಿಯನ್ನು ಅಮರಂ ಅಥವಾ ಉಂಬಳಿಯಾಗಿ ನೀಡುವಾಗ ಒಂದು ಕರಾರನ್ನು ವಿಧಿಸಲಾಗಿದೆ. ಸ್ಥಳೀಯ ಕೆರೆಯಿಂದ ಪ್ರತಿವರ್ಷವು ಹೂಳು ತೆಗೆಯಬೇಕು. ಈ ಮುಖ್ಯ ಕಾರ್ಯದ ಹೊಣೆ ಗೌಡ ಸೇನಬೋವ ಹಾಗೂ ಗ್ರಾಮಸ್ಥರ ಮೇಲೆ ಇರತಕ್ಕದ್ದು. ಆ ಜನರ ಮುಂದಿನ ಉತ್ತರಾಧಿಕಾರಿಗಳು ಈ ಹೊಣೆಗಾರಿಕೆಯನ್ನು ನಿರ್ವಹಿಸಲು ವಿಫಲರಾದುದರಿಂದಲೇ ಕೆರೆಗಳು ನಿರುಪಯುಕ್ತವಾಗಿರುವುದು.

ಮುಂದಿನ ದಾಖಲೆ ಹಂಪಿಯ ಪ್ರಸಿದ್ಧ ವಿರೋಪಾಕ್ಷ ದೇವಾಲಯದಲ್ಲಿನ ಕೃಷ್ಣರಾಯನ ಕ್ರಿ.ಶ. ೧೫೧೩ರ ಶಾಸನ. [2] ಈ ಶಾಸನದಲ್ಲಿ ದೊರೆ ತನ್ನ ತಂದೆ ನರಸನಾಯಕ ಹಾಗೂ ತಾಯಿ ನಾಗಾಜಿ ಅಮ್ಮ ಅವರಿಗೆ ಕೃತಜ್ಞತಾಸೂಚಕವಾಗಿ ದಾನ ಮಾಡುತ್ತಾನೆ. ಶಾಸನ ಹಂಪಿಯಲ್ಲಿನ ಕನ್ನಿಕಿಕಟ್ಟೆ, ಭೂಪತಿಕೆರೆ, ಗೌರಾಜಿಕೆರೆಗಳನ್ನೂ ನಾಗಲಾಪುರ ನಾಲೆಯನ್ನೂ ಹೆಸರಿಸುತ್ತದೆ. ಕ್ರಿ.ಶ. ೧೫೧೬ ರಲ್ಲಿ ಕೃಷ್ಣರಾಯ ತನ್ನ ಪುರೋಹಿತ ರಂಗನಾಥ ದೀಕ್ಷಿತನಿಗೆ ರಾಜಧಾನಿಯ ಸಮೀಪದ ಒಂದು ಹಳ್ಳಿಯನ್ನು ಅಗ್ರಹಾರವಾಗಿ ನೀಡಿದ. ಆ ಹಳ್ಳಿಯಲ್ಲಿ ಪುರೋಹಿತ ನಾಗಸಮುದ್ರ ಎಂಬ ಕೆರೆಯನ್ನು ಕಟ್ಟಿಸಿದ. ಅಗ್ರಹಾರವನ್ನು ಕೃಷ್ಣರಾಯರ ತಾಯಿಯ ಹೆಸರಿನಲ್ಲಿ ನಾಗಲಾದೇವಿಪುರ ಎಂದು ಕರೆದ. [3] ಅದೇ ದೊರೆಯ ಅದೇ ಹಂಪಿಯ ಕ್ರಿ.ಶ. ೧೫೧೮ ರ ಇನ್ನೊಂದು ಶಾಸನ[4]ವಿಜಯನಗರ ಪಟ್ಟಣದಲ್ಲಿನ ಚಿಕ್ಕರಾಯನ ಕೆರೆಯನ್ನು ಉಲ್ಲೇಖಿಸುತ್ತದೆ. ದೊರೆ ತನ್ನ ಮಗ ತಿರುಮಲನ ಅಂದರೆ ಇಲ್ಲಿ ಯುವರಾಜ ಅಥವಾ ಚಿಕ್ಕರಾಯನ ಹೆಸರಿನಲ್ಲಿ ಕೆರೆಯನ್ನು ಕಟ್ಟಿಸಿದ್ದು ಸ್ಪಷ್ಟ.

ಕೃಷ್ಣರಾಯನ ಆಳ್ವಿಕೆಯ ಕ್ರಿ.ಶ. ೧೫೧೯ರ ಮೇಲುಕೋಟೆಯ ಒಂದು ಶಾಸನ[5]ಹೊಸಕೆರೆ ಏರಿ ಹಾಗೂ ಅದರ ನಾಲೆ ಒಡೆದು ಹಾಳಾದುದನ್ನು ಪ್ರಸ್ತಾಪಿಸುತ್ತದೆ. ಲೋಕೋಪಾಕಾರಿಯಾದ ಲಕ್ಷ್ಮೀಪತಿಸೆಟ್ಟಿ ಎಂಬಾತ ಏರಿಯನ್ನು, ತೂಬನ್ನು ಮತ್ತೆ ಕಟ್ಟಿಸಿ ಕಾಲುವೆಯಿಂದ ಹೂಳು ತೆಗೆಸಿದ. ಈ ಉದಾರ ದಾನದಿಂದ ಮೇಲುಕೋಟಿಯ ದೇವಾಲಯದ ಅಧಿಕಾರಿಗಳಿಗೆ ಎಷ್ಟು ನೆಮ್ಮದಿ ಆಯಿತು ಎಂದರೆ ಅವರು ದಾನಿಯ ತಂದೆಯ ಹೆಸರನಿಂದ ದೇವಾಲಯದಲ್ಲಿ ವಿಶೇಷ ಧಾರ್ಮಿಕ ಉತ್ಸವಗಳನ್ನು ನಡೆಸಿದರಂತೆ.

೧೫೨೧ರಲ್ಲಿ ಕೃಷ್ಣರಾಯ ಕೊರ್ರ‍ಗಾಲದ ದೊಡ್ಡ ಅಣೆಯನ್ನು ಹಾಗೂ ಬಸವಣ್ಣ ನಾಲೆಯನ್ನೂ ಕಟ್ಟಿಸಿದ. ಈ ಎರಡೂ ಇನ್ನೂ ಉಪಯೋಗದಲ್ಲಿದ್ದು ನಾಡಿಗೆ ದೊಡ್ಡ ಮೌಲ್ಯವುಳ್ಳದ್ದಾಗಿವೆ.26 ಕೋಲಾರ ಹಾಗೂ ಕಡಪಾ ಜಿಲ್ಲೆಗಳ ಅಂಚಿನಲ್ಲಿ ಚೆಳೂರಿನ ಬಳಿ, ಪಾಪಗ್ನಿ ನದಿಯ ಮೇಲೆ ವ್ಯಾಸಸಮುದ್ರವೆಂಬ ತುಂಬ ದೊಡ್ಡ ಕೆರೆಯನ್ನು ಕಟ್ಟಿಸಿದ್ದೂ ಕೃಷ್ಣರಾಯನೇ. ಕೃಷ್ಣರಾಯನ ಕ್ರಿ.ಶ ೧೫೨೬ರ ಭಟ್ಟಕೊಂಡ (ಕೃಷ್ಣರಾಜಪುರ) ಶಾಸನ[6]ವ್ಯಾಸಸಮುದ್ರದ ಕೆರೆಯ ಸಂರಕ್ಷಣೆಗಾಗಿ ಭಟ್ಟಕೊಂಡ (ಬೆಟ್ಟಕುಂಡ) ಎಂಬ ಹಳ್ಳಿಯನ್ನು ದಾನಮಾಡಿದ್ದನ್ನು ಪ್ರಸ್ತಾಪಿಸುತ್ತದೆ. ಅದಕ್ಕೆ ಕೃಷ್ಣರಾಜಪುರಂ ಎಂದು ಹೊಸ ಹೆಸರನ್ನು ಕೊಡಲಾಯಿತು.

ಕೃಷ್ಣರಾಯನ ಆಳ್ಚಿಕೆಯ ಕ್ರಿ.ಶ. ೧೫೨೭ರ ಗುಡಿಹಳ್ಳಿ (ಹರಪನಹಳ್ಳಿ) ತಾಲ್ಲೂಕು ಶಾಸನ[7]ಪ್ರಕಾರ ತಿಮ್ಮರಸ ಎಂಬಾತ ತನ್ನ ಮೇಲಧಿಕಾರಿ ನಾಗರಸಯ್ಯನ ಆಜ್ಞೆಯಂತೆ ಅರಸೀಕೆರೆ ಹಳ್ಳಿಯ ಕೆರೆಯ ತೂಬನ್ನು ಮತ್ತೆ ಕಟ್ಟಿಸಿದ. ಆ ಪುನರ್ರ‍ಚನೆಯ ಪೂರ್ಣ ವಿವರಗಳನ್ನು ಕೊಡುತ್ತದೆ. ಶಾಸನ. ಮೊದಲು ಕಟ್ಟುವಾಗ ಕಳಪೆ ಸಾಮಗ್ರಿಗಳನ್ನು ಬಳಸಿದ್ದರಿಂದ ತೂಬಿಗೆ ಅಪಾಯವಾಗಿ ಅದು ಕೆಲಸಕ್ಕೆ ಬಾರದೆ ಹೋಗಿತ್ತಂತೆ. ತಿಮ್ಮರಸ ಆ ತೂಬನ್ನು ಬಿಚ್ಚಿಸಿ, ಅದರ ನಾನಾ ಭಾಗಗಳನ್ನು ತೆಗೆಸಿಹಾಕಿ, ಬಲವಾದ ಕಲ್ಲುಗಳನ್ನು ಕಟ್ಟಸಿ, ಗಾರೆಹಾಕಿಸಿ ಮತ್ತೆ ಕಟ್ಟಿಸಿದೆ.

ಅದೇ ವರ್ಷದ ಆಳ್ಚಿಕೆಯಲ್ಲಿನ ಒಂದು ಕರಗಿಸುವ ಕತೆಯನ್ನು ಹೇಳುವುದು, ಡುಮ್ಮಿ (ಚಿತ್ರದುರ್ಗಜಿಲ್ಲೆ) ಶಾಸನ. [8] ಪ್ರವಾಹದಿಂದಾಗಿ ಅಲ್ಲಿನ ಕೆರೆಯಲ್ಲಿ ಉಂಟಾಗಿದ್ದ ಬಿರುಕುಗಳನ್ನು ದುರಸ್ತಿಮಾಡಲು ಅಧಿಕಾರಿಯೊಬ್ಬ ಅಲ್ಲಿನ ನಿವಾಸಿಗಳಿಂದ ಯದ್ವಾತದ್ವಾ ಹಣ ಕೇಳಿದನಂತೆ. ಹಳ್ಳಿಗರಿಗೆ ಅದನ್ನು ಕೊಡಲು ಆಗಲಿಲ್ಲ. ಅವರು ಊರನ್ನೆ ಬಿಟ್ಟು ಹೋದರಂತೆ. ರಾಮಣ್ಣನಾಯಕ ಎಂಬ ಹೊಸ ಅಧಿಕಾರಿ ಬಂದು ಊರಿಗೆ ಮರಳುವಂತೆ ಜನರನ್ನು ಮನವೊಲಿಸಿದ. ಹಾಗೂ ತಾನು ಅಷ್ಟು ದುಬಾರಿ ಬಾಕಿ ಹಣವನ್ನು ಕೇಳುವುದಿಲ್ಲ ಎಂದು ಸನ್ನದು ಕೊಟ್ಟ.

ಕ್ರಿ.ಶ. ೧೫೨೯ರಲ್ಲಿ ಬಳ್ಳಾರಿ ಜಿಲ್ಲೆಯ ದೊಂಡವಟೆ ಹಳ್ಳಿಯ ರೈತರು ಒಟ್ಟುಗೂಡಿ ಪ್ರಯತ್ನ ಮಾಡಿದ ಇದೇ ಬಗೆಯ ಇನ್ನೊಂದು ನಿದರ್ಶನವು ಉಂಟು. ನೀರಾವರಿ ಸೌಲಭ್ಯಗಳ ಅಭಾವದಿಂದ ಆ ಹಳ್ಳಿ ಹಿಂದೆ ಬಿದ್ದುದನ್ನು ಕಂಡು ಆ ಜನ, ಅಲ್ಲಿನ ತಮ್ಮ ದೊರೆ ಮೂಡಣನಾಯಕನ ಬಳಿಗೆ ಹೋಗಿ ಕೇಳಿಕೊಂಡರು. ನಾಯಕ ಮಲೇಸಾನಿ ಎಂಬವನಿಗೆ ಭೂಮಿಯನ್ನು ಕೊಟ್ಟ. ಅಲ್ಲಿ ಮಲೇಸಾನಿ ತನ್ನ ಹಣವನ್ನೆ ಖರ್ಚುಮಾಡಿ ಕೆರೆಯನ್ನು ಕಟ್ಟಿಸಿದ. [9] ತಮ್ಮ ಹಳ್ಳಿಗೆ ಒಂದು ಕೆರೆ ಇರಬೇಕು ಎನ್ನುವುದರಲ್ಲಿ ಜನ ಮುಂದೆ ನಿಂತುದಕ್ಕೆ ಹಾಗೂ ಒಬ್ಬ ಪ್ರಜೆ ತೋರಿದ ಸಾರ್ವಜನಿಕ ಸೇವಾಪ್ರಜೆಗೆ ಇದು ಒಳ್ಳೆಯ ಉದಾಹರಣೆ.

ಕ್ರಿ.ಶ. ೧೫೩೯ರ ಅಚ್ಚುತರಾಯನ ಆಳ್ವಿಕೆಯಲ್ಲಿ ಚಿಕ್ಕಕೆರೆಯಾಗಿನಹಳ್ಳಿ (ಕೂಡ್ಲಿಗಿ ತಾಲ್ಲೂಕು)ಶಾಸನದಲ್ಲಿ[10]ಬಯಕಾರ ರಾಮಪ್ಪಯ್ಯ ಎಂಬಾತ ತನ್ನ ತಾಯಿ ಹಿರಿಯ ಲಕ್ಕರಸಮ್ಮನ ಹೆಸರಿನಲ್ಲಿ ಹಿರಿಯ ಲಕ್ಕಸಮುದ್ರ ಎಂಬ ಕೆರೆಯನ್ನು ಕಟ್ಟಿಸಿದ್ದು ಉಲ್ಲೇಖಿತವಾಗಿದೆ. ಆತ ಇತರ ಅನೇಕ ಕೆರೆಗಳನ್ನು ಕಟ್ಟಿಸಿದ. ಅಚ್ಚುತಮ್ಮ ಸಮುದ್ರವನ್ನು ಕಟ್ಟಿಸಿ, ಅದರ ಸುತ್ತಲೂ ಮರಗಳನ್ನು ನೆಡೆಸಿ ಚಂದಗೊಳಿಸಿದ. ಆತ ಕಟ್ಟಿಸಿದ ಇನ್ನಿತರ ಕೆರೆಗಳೆಂದರೆ ಬಾಚಸಮುದ್ರ, ರಾಮಸಮುದ್ರ, ಅಕ್ಕಸಮುದ್ರ, ಕಾಮಸಮುದ್ರ, ಅಮ್ಮ ಸಮುದ್ರ, ವೀರಸಮುದ್ರ, ಅಚ್ಯುತೇಂದ್ರ ಸಮುದ್ರ, ವೆಂಕಟೇಂದ್ರ ಸಮುದ್ರ, ಪಿನ್ನಲಕ್ಕ ಸಮುದ್ರ, ಚಿನ್ನ ತಿಪ್ಪಸಮುದ್ರ, ಪೆದ್ದ ಲಕ್ಕಸಮುದ್ರ, ಲಿಂಗಾಲಯ ತಟಾಕ, ವೆಂಕಟಯ್ಯತಟಾಕ, ಪೆದ್ದ ತಿಮ್ಮಸಮುದ್ರ ಮತ್ತು ಚಿನ್ನ ಬಾಚಸಮುದ್ರ, ಅತಿ ಹೆಚ್ಚು ಸಂಖ್ಯೆಯ ಕೆರೆಗಳನ್ನು ಕಟ್ಟಿಸಿದ ಆತ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತಾನೆ. ರಾಮಪ್ಪಯ್ಯನ ಕಾರ್ಯದ ಇನ್ನೊಂದು ಗಮನಾರ್ಹ ಅಂಶವೆಂದರೆ ಆ ಕೆರೆಗಳಿಗೆ ಅಳರಸರ ಪರಿವಾರದವರ ಇಲ್ಲವೇ ತನ್ನ ಪರಿವಾರದವರ ಹೆಸರುಗಳನ್ನು ಇಟ್ಟಿದ್ದು. ಆತನ ಕಾರ್ಯದ ಮತ್ತೂ ಒಂದು ಅಸಾಧಾರಣ ಅಂಶವೆಂದರೆ ತಾನು ಕಟ್ಟಿದ ಕೆರೆಗಳ ಸುತ್ತಮುತ್ತಲೂ ತೋಟಗಳನ್ನು ಮಾಡಿಸಿ, ಚೆಂದಗೊಳಿಸಿದ್ದು.

ಚಾಮರಾಜನಗರ ತಾಲ್ಲೂಕಿನ ಹೊನ್ನರಬಾಳು ಶಾಸನದಲ್ಲಿ[11] (ಕ್ರಿ.ಶ. ೧೫೪೦) ಒಂದು ಕೆರೆಯ ಜೀರ್ಣೋದ್ಧಾರದ ದಾಖಲೆ ಇದೆ. ಕೆಟ್ಟ ಬರ ಬಂದಿದ್ದಾರ ಒಂದು ಹಣಕ್ಕೆ ೭ ಮಣ ಧಾನ್ಯ ಮಾರಾಟವಾಗುತ್ತಿದ್ದ ಕಾಲದಲ್ಲಿ ಆ ಕೆಲಸವನ್ನು ಮಾಡಲಾಯಿತು, ಎನ್ನುತ್ತದೆ ಶಾಸನ. ಬರಗಾಲದಲ್ಲಿ ಉದ್ಯೋಗ ಒದಗಿಸುವಿಕೆ ಹಾಗೂ ಭವಿಷ್ಯಕ್ಕಾಗಿ ಭದ್ರವ್ಯವಸ್ಥೆ ಮಾಡುವಿಕೆ – ಎರಡೂ ಉದ್ದೇಶ ನೆರವೇರಿಸಬೇಕು, ಆ ಕೆರೆಯ ಜೀರ್ಣೋದ್ಧಾರದಿಂದ. ರಾಯದುರ್ಗಸೀಮೆಯಲ್ಲಿ ಮುರಡಿ[12]ಹಾಗೂ ಕರಡಿಯಹಳ್ಳಿ[13]ಯಲ್ಲಿ ಅಕ್ಕಪಕ್ಕದಲ್ಲಿರುವ ಎರಡು ಶಾಸನಗಳು ಸ್ಥಳೀಯ ಜನ ತಮ್ಮ ಅಧಿಕಾರಿಗಳು ಮಾಡುತ್ತಿದ್ದ ಅನ್ಯಾಯನದ ಹಣವಸೂಲು ಬಗ್ಗೆ ಮಾಡಿಕೊಂಡ ಮನವಿಯನ್ನು ಒಳಗೊಂಡಿದೆ. ಆ ಹಳ್ಳಿಗಳ ನಿವಾಸಿಗಳಿಗೆ ಅನ್ಯಾಯದ ತೆರಿಗೆಗಳಿಂದ ವಿನಾಯಿತಿ ದೊಡುವಂತೆಯೂ, ಆ ಮೊದಲೇ ವಸೂಲು ಮಾಡಿದ್ದ ಅನ್ಯಾಯದ ತೆರಿಗೆ ಹಣವನ್ನು ಕೆರೆ ದೇವಾಲಯ ಮುಂತಾದ ಸಾರ್ವಜನಿಕ ಕಾರ್ಯಗಳ ದುರಸ್ತಿಗಾಗಿ ಬಳಸಿಕೊಳ್ಳುವಂತೆಯೂ ದೊರೆ ಸದಾಶಿವರಾಯ ಆಜ್ಞೆ ಮಾಡಿದ. ಕೆಲವು ಸ್ಥಳೀಯ ಅಧಿಕಾರಿಗಳು ತುಂಬ ದಬ್ಬಾಳಿಕೆಯವರಾಗಿದ್ದರೆಂದೂ ವ್ಯವಹಾರಗಳನ್ನು ಸರಿಪಡಿಸಲು ಕೇಂದ್ರ ಪ್ರಭುತ್ವವೇ ಪ್ರವೇಶಮಾಡಬೇಕಾಗುತ್ತಿತ್ತು ಎಂದೂ ಇದು ತೋರಿಸುತ್ತದೆ. ಇಲ್ಲಿ ಗಮನಿಸಬೇಕಾದುದೇನೆಂದರೆ ವ್ಯವಹಾರಗಳನ್ನು ಸರಿಪಡಿಸಿದ್ದು ಮಾತ್ರವಲ್ಲ, ಆ ಕ್ರಮದಲ್ಲಿ ಅಗತ್ಯವಾದ ಸಾರ್ವಜನಿಕ ಕಾರ್ಯಗಳೂ ನಿರ್ಮಿತವಾದವು.

ಕ್ರಿ.ಶ. ೧೫೬೨ರ ಸಕ್ಕರೆಹಾಳು (ಹಡಗಲಿ ತಾಲ್ಲೂಕು) ಶಾಸನದಲಿ[14]ಆ ಸ್ಥಳದ ಅಧಿಕಾರಿ ನಗರೇಹಾಳಿನ ನಾಲೆಗೆ ತೆರಬೇಕಾದ ದಶವಂದ ಹಣವನ್ನ ಗೊತ್ತುಮಾಡಿದ ಹಾಗೂ ಸೇನ ಬೋವ, ಗೌಡ, ತಳಾರ, ಜೋಯಿಸ ಮುಂತಾದ ಗ್ರಾಮಾಧಿಕಾರಿಗಳಿಗೆ ಮಾನ್ಯ ಭೂಮಿಗಳನ್ನು ದಾನವಿತ್ತ ಎಂದು ದಾಖಲೆಯಾಗಿದೆ. ಹಳ್ಳಿಯ ಸಮುದಾಯದ ಮುಖಂಡರು ಹಳ್ಳಿಯಲ್ಲಿ ನೀರಾವರಿ ಸೌಲಭ್ಯಗಳ ಸಂರಕ್ಷಣೆಯಲ್ಲಿ ಆಸಕ್ತಿ ವಹಿಸುತ್ತಿದ್ದರು ಮತ್ತು ಅದಕ್ಕಾಗಿ ಮೆಚ್ಚುಗೆಯ ಬಹುಮಾನಗಳನ್ನು ಪಡೆಯುತ್ತಿದ್ದರು ಎನ್ನುವುದನ್ನು ಇದು ತೊರಿಸುತ್ತದೆ.

ಬೆಂಗಳೂರಿನ ಸ್ಥಾಪಕ ಹಿರಿಯ ಕೆಂಪೇಗೌಡನು (೧೫೨೧ – ೧೫೬೯) ನಗರದಲ್ಲಿ ಹಲವಾರು ಕೆರೆಗಳ ನಿರ್ಮಾಪಕನಾಗಿದ್ದ. ಅವುಗಳಲ್ಲಿ ಅತ್ಯಂತ ಪ್ರಖ್ಯಾತವಾದುದು ಕೆಂಪಾಂಬುಧಿ ಕೆರೆ. ಈ ಕೆರೆ ಗವಿಪುರದ ಆಗ್ನೇಯಕ್ಕಿದೆ. ಚಾಮರಾಜಪೇಟೆಯನ್ನು ಮುಟ್ಟುವ ಒಂದು ಗುಡ್ಡ ಹಾಗೂ ಗವಿಪುರದ ವರೆಗೂ ಹಬ್ಬಿದ ಇನ್ನೊಂದು ಗುಡ್ಡದ ನಡುವಿನ ಕಿರಿದಾದ ಕಣಿವೆಗೆ ಅಡ್ಡಲಾಗಿ ಕಟ್ಟೆಯನ್ನು ಕಟ್ಟಿ ಕೆರೆಯನ್ನು ನಿರ್ಮಿಸಲಾಗಿದೆ. ಕೆಂಪೇಗೌಡ ಧರ್ಮಾಂಬುಧಿ ಕೆರೆಯನ್ನೂ (ಈಗಿನ ಬಸ್‌ ನಿಲ್ದಾಣ) ಕಟ್ಟಿಸಿದ. ಬೆಂಗಳೂರು ಎತ್ತರದಲ್ಲಿದೆ. ಇಲ್ಲಿಂದ ಮಳೆನೀರು ಕೋರಮಂಗಲ ಆಡುಗೋಡಿಗೆ ಹರಿದು ಅನಂತರ ಚೆಲ್ಲಘಟ್ಟ ಕೆರೆಗೆ ಹೋಗುತ್ತಿತ್ತು. ಅಲ್ಲಿಂದ ಮುಂದೆ ಯಮಲೂರು ಹಾಗೂ ಬೆಳ್ಳಂದೂರು ಕೆರೆಗಳನ್ನು ಸೇರುತ್ತಿತ್ತು. ಅದರಾಚೆಗೂ ಹರಿಯುತ್ತಿದ್ದ ನೀರಿಗೆ ವರತೂರಿನಲ್ಲಿ ಅಡ್ಡಗಟ್ಟೆ ಹಾಕಿಸಿದ, ಕೆಂಪೇಗೌಡ. ಅಂತಿಮವಾಗಿ ನೀರು ಉತ್ತರ ಪಿನಾಕಿನಿಯನ್ನು ಸೇರುತ್ತಿತ್ತು. [15]

ಯಲಹಂಕದ ಕೆಂಪೇಗೌಡನ ವಂಶದಂತೆಯೇ ಕೆಳದಿಯ ನಾಯಕರೂ ವಿಜಯನಗರದ ಅರಸರ ಕೈಕೆಳಗೆ ದಳವಾಯಿಗಳಾಗಿ ಕಾರ್ಯರಂಭಮಾಡಿದರು. ಈ ವಂಶದಲ್ಲಿ ಎರಡನೆಯ ದೊರೆ ಸದಾಶಿವನಾಯಕ (೧೫೧೨ – ೪೬). ಆತ ತನ್ನ ರಾಜಧಾನಿ ಕೆಳದಿಯ ಸುತ್ತಲೂ ಹದಿನಾಲ್ಕಕ್ಕೂ ಹೆಚ್ಚು ಕೆರೆಗಳನ್ನು ಕಟ್ಟಿಸಿದ, ಅವುಗಳಲ್ಲಿ ಮುಖ್ಯವಾದ ಹಿರಿಯಕೆರೆ ಇನ್ನೂ ಒಳ್ಳೆ ಸುಸ್ಥಿತಿಯಲ್ಲಿದೆ. ಈ ಕೆರೆಯ ರಚನೆ ಎಷ್ಟು ಭದ್ರವಾದುದೆಂದರೆ ಕೆರೆ ಯಾವತ್ತೂ ಒಣಗಿದ್ದೇ ಇಲ್ಲ.

ಮದಗಮಾಸೂರು ಕೆರೆಯನ್ನು ಪ್ರಾಯಶಃ ವಿಜಯನಗರದ ಕೃಷ್ಣದೇವಾರಾಯನ ಅಪ್ಪಣೆಯಂತೆ ಅದೇ ಸದಾಶಿವನಾಯಕನೇ ಕಟ್ಟಿಸಿರಬೇಕು. ಈ ಕೆರೆಯ ತೂಬನ್ನು ಕ್ರಿ.ಶ ೧೮೬೩ರಲ್ಲಿ ದುರಸ್ತಿ ಮಾಡಲಾಯಿತು ಎಂದು ಕರೆಯ ಏರಿಯ ಮೇಲಿರುವ ಶಾಸನ ಹೇಳುತ್ತದೆ. ಈ ಕೆರೆಯ ಬಗ್ಗೆ ಹೆಚ್ಚಿನ ಮಾಹಿತಿ ಅನುಬಂಧ – ೪ರಲ್ಲಿ ಕಾಣಸಿಗುತ್ತದೆ.

ತಾಳೀಕೋಟಿಯ ನಂತರದ ಕಾಲ : (೧೫೬೫೧೭೯೯)

ಶಾಂತಿಯ ಅವಧಿ (೧೫೬೫೧೬೩೫) : ತಾಳೀಕೋಟಿ ಅಥವಾ ರಕ್ಕಸತಂಗಡಿ ಯುದ್ಧವಾಗಿ ಅದರಲ್ಲಿ ವಿಜಯನಗರ ಸೋತು ಹೋದಮೇಲೆ, ರಾಜಧಾನಿ ಪೆನುಗೊಂಡೆಗೆ ವರ್ಗಾವಣೆ ಆಯಿತು. ಕರ್ನಾಟಕದಲ್ಲಿ ಕೆಳದಿನಾಯಕರು ಚಿತ್ರದುರ್ಗದ ಪಾಳೆಯಗಾರರು ಹಾಗೂ ಮೈಸೂರು ಒಡೆಯರು ಕೆರೆದೇವಾಲಯ ನಿರ್ಮಾಣಗಳಂಥ ಕಲ್ಯಾಣಕಾರ್ಯಗಳಲ್ಲಿ ಆ ಮಹಾ ಸಾಮ್ರಾಜ್ಯದ ಪರಂಪರೆಯನ್ನು ಮುಂದುವರಿಸಿದರು. ಆದರೆ ಅವರ ಸಂಪನ್ಮೂಲಗಳು ಮಿತವಾಗಿದ್ದವು. ಅಲ್ಲದೆ ಅವು ಪರಸ್ಪರ ಕಚ್ಚಾಟಗಳಲ್ಲಿ ಪೋಲಾಗಿ ಹೋಗುತ್ತಿದ್ದವು. ಈ ಅವಧಿಯಲ್ಲಿನ ಕೆರೆ ನಿರ್ಮಾಣ ಹಾಗೂ ಜೀರ್ಣೋದ್ಧಾರದ ಉದಾಹರಣೆಗಳನ್ನು ಮುಂದೆ ಕೊಡಲಾಗಿದೆ.

ಸಾಗರ ತಾಲ್ಲೂಕಿನ ಕೆಳದಿ ಗ್ರಾಮದಲ್ಲಿನ ಕೆಳದಿ ರಾಮರಾಜನಾಯಕನ ಕ್ರಿ.ಶ. ೧೫೭೩ರ ಒಂದು ಶಾಸನದಲ್ಲಿ[16]ಕೆಳದಿಯ ಸೆಟ್ಟಿ ಅಥವಾ ವರ್ತಕರು ಮಕ್ಕಳಿಲ್ಲದೆ ತೀರಿಕೊಂಡಲ್ಲಿ ಅವರೆಲ್ಲರ ಆಸ್ತಿಯನ್ನು ಅವರ ಅಣ್ಣ ಅಥವಾ ಇಲ್ಲವೇ ರಕ್ತಸಂಬಂಧಿಗಳು ಅನುಭವಿಸಬಹುದು. ಒಂದು ವೇಳೆ ಅಂಥವರು ಯಾರೂ ಮೂಂದೆ ಬರದೆಹೋದರೆ ಮೃತನ ವಿಧವೆ ಆಸ್ತಿಯನ್ನು ಪಡೆದುಗೊಳ್ಳಬಹುದು ಹಾಗೂ ಉಳಿದುದನ್ನು ಕೆರೆಕಟ್ಟೆಗಾಗಿಯೋ ದೇವಾಲಯಕ್ಕಾಗಿಯೋ ಕೊಡಬಹುದು ಎಂದು ಹೇಳಲಾಗಿದೆ. ಸಾರ್ವಜನಿಕ ಕಾರ್ಯಗಳಿಗೆ ನೀಡಿದ್ದ ಮಹತ್ವವನ್ನು ಇದು ತೋರಿಸುತ್ತದೆ.

ಸಿದ್ದರಾಯನ ಕೊಟೆಯ (ಚಿತ್ರದುರ್ಗ ಜಿಲ್ಲೆ) ಕ್ರಿ.ಶ. ೧೫೭೪ರ ಶಾಸನ[17]ಹಳ್ಳಿಯ ಪಶ್ಚಿಮಕ್ಕಿದ್ದ ಕೆರೆ ಬಹುಕಾಲದಿಂದಲೂ ಒಡೆದು ಹೋಗಿದ್ದುದನ್ನು ದಾಖಲಿಸುತ್ತದೆ. ಹಳ್ಳಿಯ ಗೌಡ, ಸೇನಬೋವ ಮತ್ತಿತರರು ಮಹಾನಾಯಕಾಚಾರ್ಯನಿಗೆ (ಹರತಿಯ ಸ್ಥಳೀಯ ಮುಖ್ಯ ಪದ್ದನಾಯಕ) ಮನವಿ ಸಲ್ಲಿಸಿದರು. ಕೆರೆ ತೂಬಿನ ಕೆಳಗಿನ ಭೂಮಿಯನ್ನು ತಮಗೆ ಕೊಟ್ಟರೇ ತಾವೇ ಕೆರೆಯನ್ನು ದುರಸ್ತು ಮಾಡುವುದಾಗಿ ಆ ಜನ ಹೇಳಿದರು. ತೂಬಿನ ಕೆಳಗಿನ ಭೂಮಿಗೆ ಮೊದಲು ನೀರು ಬರುವುದು. ಅದಕ್ಕೆ ಆ ಭೂಮಿಯನ್ನು ಪಡೆಯುವ ಆಸೆ ಅವರಿಗೆ.

ಶೃಂಗಾರಮ್ಮ ಎನ್ನುವ ಪ್ರಸಿದ್ಧನಾಟಕ ಕಲಾವಿದೆ ಶೃಂಗಾರ ಸಾಗರ ಎಂಬ ಕೆರೆಯನ್ನು ಕಟ್ಟಿಸಿ ತನ್ನ ಹಳ್ಳಿಗೆ ಖ್ಯಾತಿ ತಂದಿತ್ತಳು. ಹಳ್ಳಿಗೂ ಅದೇ ಹೆಸರು ಬಂತು. ಅದೇ ಸ್ಥಳದಲ್ಲಿನ ಕ್ರಿ.ಶ. ೧೫೯೯ರ ಎರಡು ಶಾಸನಗಳಲ್ಲಿ[18]ಇದನ್ನು ಹೇಳಲಾಗಿದೆ.

ಕೆರೆಗಳ ಕೆಳಗೆ ನೀರಿನ ನಿರ್ವಹಣೆಯಲ್ಲಿ ನಿರತನಾಗಿದ್ದ ಒಬ್ಬ ನೀರಾವರಿ ನೌಕರನ ಸೇವೆಯನ್ನು ಸಿರಾ ತಾಲ್ಲೂಕಿನ ಕ್ರಿ.ಶ. ೧೬೧೨ರಲ್ಲಿ ಮೇಲುಕುಂಟೆ ಶಾಸನ[19]ಪ್ರಸ್ತಾಪಿಸುತ್ತದೆ. ನಾಡಗೌಡಿಕೆ ಸ್ಥಾನದ ಬಗ್ಗೆ ಇಬ್ಬರು ಉಮೇದುವಾರರಲ್ಲಿ ಸಂಭವಿಸಿದ ವಿವಾದವನ್ನು ಶಾಸನ ಹೇಳುತ್ತದೆ. ಅವರಲ್ಲಿ ಒಬ್ಬ ತನ್ನ ಕಕ್ಷಿಯನ್ನು ಕೆಳೆದುಕೊಂಡನಂತೆ. ಏಕೆಂದರೆ ನಾಲೆ ಮೇಲ್ವಿಚಾರಕನ ತತ್ಸಂಬಂಧಿತ ಪತ್ರ ಸುಳ್ಳು ಎಂದು ಸಾಬೀತಾಯಿತು. ಬಹುಶಃ ಆ ಮೇಲ್ವಿಚಾರಕನೂ ಒಬ್ಬ ಸಾಕ್ಷಿ ಆಗಿದ್ದಿರಬೇಕು. ನಾಲೆಯ ಉಸ್ತುವಾರಿಗೆ ಒಬ್ಬ ನೌಕರ ಇದ್ದ ಎನ್ನುವುದು ತುಂಬ ಸ್ವಾರಸ್ಯದ ವಿಷಯ.

ಸೊರಬ ತಾಲ್ಲೂಕಿನ ಕ್ರಿ.ಶ ೧೬೧೩ರ ಒಂದು ಶಾಸನದಲ್ಲಿ[20]ಹೀಗೆ ಹೇಳಲಾಗಿದೆ: ಮೂಗುರು ಅಗ್ರಹರದ ಕೆರೆಯನ್ನು ತೋಡಿಸಿದಾಗ, ನೇರಳಿಗೆ ಗ್ರಾಮದ ವೀರಭದ್ರದೇವರಿಗೆ ಬಿಡಲಾಗಿದ್ದ ಸಂಗಿಶೆಟ್ಟಿ ಕೊಳ ಕೆರೆಯಲ್ಲಿ ಮುಳುಗಡೆಯಾಯಿತು. ಆದ್ದರಿಂದ ಮುಳುಗಡೆಯಾದ ಆ ಭೂಮಿಗೆ ಬದಲಾಗಿ ನೇರಳಿಗೆಯ ಕಾನೆ ಕೊಳದ ಕೆಳಗಿನ ಭೂಮಿಯನ್ನು ನೀಡಲಾಯಿತು. ಮೊದಲೇ ಇರುವ ಕೆರೆ ಕೆಳಗಿನ ಭೂಮಿಯನ್ನು ಮುಳುಗಡೆ ಮಾಡದೆ ಹೊಸ ಕೆರೆ ಕಟ್ಟುವುದು ಎಷ್ಟು ಕಷ್ಟವಾಗಿತ್ತು ಎನ್ನುವುದನ್ನು ಇದು ನಿಚ್ಚಳವಾಗಿ ತೋರಿಸುತ್ತದೆ.

ನಾಲ್ವರು ರೆಡ್ಡಿಗಳಿಗೆ ಕಟ್ಟುಕೊಡಿಗೆ ಅಥವಾ ಸಂರಕ್ಷಣಾರ್ಥ ದಾನವಾಗಿ ಕೊಡಲಾದ ಭೂಮಿ ಈ ಮೊದಲು ಇನ್ನಾರಿಗೂ ಕೊಟ್ಟುದಾಗಿತ್ತು ಎಂದು ಕೋಲಾರ ತಾಲ್ಲೂಕಿನ ಹೋಳೂರಿನ ಕ್ರಿ.ಶ. ೧೬೨೮[21]ಶಾಸನ ತಿಳಿಸುತ್ತದೆ. ಕೆರೆಯ ದುರಸ್ತಿ ಉದ್ದೇಶಕ್ಕೆಂದು ಕೆಲವರಿಗೆ ಮೊದಲೇ ಕೊಟ್ಟಿದ್ದ ಭೂಮಿಯನ್ನು, ಅವರು ಆ ಹೊಣೆಯಲ್ಲಿ ವಿಫಲರಾದ ಕಾರಣ, ಅವರಿಂದ ಹಿಂದಕ್ಕೆ ತೆಗೆದು ಕೊಂಡಿದ್ದನ್ನು ಇದು ಬಹುಶಃ ಸೂಚಿಸುತ್ತದೆ.

ಬಾಗೇಪಲ್ಲಿ ತಾಲ್ಲೂಕಿನ ಮಿಟ್ಟಿಮರ್ರಿ ಗ್ರಾಮದ ಸುಮಾರು ಕ್ರಿ.ಶ. ೧೬೩೬ರ ಶಾಸನ[22]ಮಹಾನಾಯಕಾಚಾರ್ಯ ಕದಿರೆಪ್ಪನಾಯನಿಯು ಮೇಕೊಲ ಬೊಮ್ಮನಿಗೆ ಒಂದು ದಶವಂದ ಅಥವಾ ಸಂರಕ್ಷಣಾರ್ಥ ದಾನವಿತ್ತ ಎಂದು ಹೇಳುತ್ತದೆ. “ಮಿಟ್ಟಿಮರಿಗಳ ಸ್ಥಳದಲ್ಲಿ ಲಿಂಗಂ ಒಡ್ಡು ಒಡೆದುಹೋಗಿತ್ತು. ಅದನ್ನು ನೀನು ಸರಿಪಡಿಸಿ ವಿಸ್ತರಿಸಿದ್ದೀಯ. ಅದರ ಕೆಳಗಿನ ತರಿ ಜಮೀನಿನಲ್ಲಿ ನಾಲ್ಕನೆಯ ಒಂದು ಪಾಲನ್ನು ದಶವಂದವಾಗಿ ನಿನಗೆ ಕೊಡಲಾಗಿದೆ. ಅದನ್ನು ನೀನೂ ನಿನ್ನ ಮುಂದಿನ ವಂಶಸ್ಥರೂ ಅನುಭವಿಸಬಹುದು”. ದಶವಂದ ಹತ್ತನೆಯ ಒಂದು ಪಾಲು ಆಗದೆ ಇಲ್ಲಿ ನಾಲ್ಕನೆಯ ಒಂದು ಪಾಲು ಆಗಿದೆ. ಇನ್ನು ಕೆಲವೆಡೆ ಹತ್ತರಲ್ಲಿ ಮೂರು ಪಾಲು ಆಗಿದೆ.

ಕದನಗಳ ಕಾಲ (೧೬೩೬೧೭೯೯) : ಕರ್ನಾಟಕದ ರಾಜಕೀಯ ಪರಿಸ್ಥತಿ ಕ್ರಿ.ಶ. ೧೬೩೬ರಿಂದ ಒಮ್ಮೆಲೇ ಬದಲಾಗಿ ಕೆಟ್ಟುಹೋಯಿತು. ಆ ವರ್ಷ ಬಿಜಾಪುರದ ಆದಿಲ್‌ಷಾಹಿಗಳು ಮೊಗಲರ ಮಹಾಬಲಕ್ಕೆ ಶರಣಾದ ಮೇಲೆ ಮೊಗಲರೊಂದಿಗೆ ಸಂಧಿ ಮಾಡಿಕೊಂಡರು. ಬಿಜಾಪುರ ಮೊಗಲರಿಗೆ ಪೊಗದಿ ಸಲ್ಲಿಸಲು ಒಪ್ಪಿಕೊಂಡಿತು. ಈ ಶಾಂತಿ ಒಪ್ಪಂದದಿಂದಾಗಿ ಆದಿಲ್ ಷಾಹಿಗಳು ಮಹಮ್ಮದನ ಆಳ್ವಿಕೆಯಲ್ಲಿ (ಕ್ರಿ.ಶ. ೧೬೨೭ – ೧೬೫೬) ಕರ್ನಾಟಕದ ಮಧ್ಯ ಹಾಗೂ ದಕ್ಷಿಣ ಪ್ರಾಂತ್ಯಗಳಿಗೆ ಗಮನ ಕೊಡಲು ಸಾಧ್ಯವಾಯಿತು. ಆಗ ಆ ಪ್ರಾಂತ್ಯ ಪರಸ್ಪರ ಕಾದಾಡುತ್ತಿದ್ದ ಪಾಳೆಯಪಟ್ಟುಗಳಲ್ಲಿ ಛಿದ್ರಛಿದ್ರವಾಗಿ ಹಂಚಿ ಹೋಗಿತ್ತು. ಬಿಜಾಪುರ ಈ ಛಿದ್ರದ ಲಾಭವನ್ನು ಪಡೆದು, ಕ್ರಿ.ಶ. ೧೬೩೬ ರಿಂದಾಚೆಗೆ ಒಂದಾದ ಮೇಲೆ ಒಂದರಂತೆ ದಂಡಯಾತ್ರೆ ನಡೆಸಿತು. ಕ್ರಿ.ಶ. ೧೬೩೬ ರಲ್ಲಿ ಆರಂಭವಾದ ಈ ಯುದ್ಧ ಯುಗ ನಡುನಡುವೆ ನಿಲ್ಲುತ್ತಾ, ಮತ್ತೆ ಹೊತ್ತಿಕೊಳ್ಳತ್ತ ಕ್ರಿ.ಶ. ೧೭೯೯ ರಲ್ಲಿ ಶ್ರೀರಂಗಪಟ್ಟಣ ಬ್ರಿಟಿಷರ ಕೈಗೆ ಬೀಳುವ ವರೆಗೂ ನಡೆಯಿತು.

ಆದಿಲ್ ಷಾಹಿ ದಂಡಯಾತ್ರೆಗಳು ಇಡೀ ಮಧ್ಯ ಮತ್ತು ದಕ್ಷಿಣ ಕರ್ನಾಟಕವನ್ನು ಕಲಕಿಬಿಟ್ಟವು. ಅವುಗಳ ನಂತರ ಕ್ರಿ.ಶ. ೧೬೭೭ರಲ್ಲಿ ಶಿವಾಜಿಯ ಪ್ರಖ್ಯಾತ ಕರ್ನಾಟಕ ದಂಡಯಾತ್ರೆ ನಡೆಯಿತು. ಶಿವಾಜಿಯ ಉತ್ತರಾಧಿಕಾರಿಗಳು ೧೭ನೆಯ ಶತಮಾನದ ಅಂತ್ಯ ಹಾಗೂ ೧೮ನೆಯ ಶತಮಾನದ ಆರಂಭದ ಅವಧಿಯಲ್ಲಿ ಔರಂಗಜೇಬನ ಸೇನೆಗಳೊಂದಿಗೆ ಕರ್ನಾಟಕದಲ್ಲಿ ಕೂಟಯುದ್ಧವನ್ನು ನಡೆಸಿದರು. ಶಿವಾಜಿಯ ವಂಶದ ನಂತರ ಅಧಿಕಾರಕ್ಕೆ ಬಂದ ಪೇಶ್ವೆಗಳು ಕರ್ನಾಟಕದ ದೊರೆಗಳನ್ನು ಹಾಗೂ ಜನರನ್ನು ವಿಶ್ರಮಿಸಿಕೊಳ್ಳಲು ಬಿಡಲಿಲ್ಲ. ಅವರ ಆಕ್ರಮಣಗಳು ಹೆಚ್ಚುಕಡಿಮೆ ೧೮ನೆಯ ಶತಮಾನ ತುಂಬ ಮುಂದುವರಿದವು. ಒಂದು ಕಡೆ ಪೇಶ್ವಗಳು ಇನ್ನೊಂದು ಕಡೆ ಹೈದರ್ ಮತ್ತು ಟಿಪ್ಪು ಇವರ ನಡುವಿನ ಹೋರಾಟ ಅತ್ಯುಗ್ರವಾಯಿತು. ಹಿಂದೆ ನಿರ್ಮಿಸಿದ್ದ ನೀರಾವರಿ ಕಾಮಗಾರಿಗಳಿಗೆ ಅಪಾರ ಹಾನಿ ಉಂಟುಮಾಡಿತು. ಮರಾಠರ ಅಕ್ರಮಣವೊಂದರ ಕಾಲದಲ್ಲಿ ಅಂದರೆ ಕ್ರಿ.ಶ. ೧೭೬೬ರಲ್ಲಿನ ಪೇಶ್ವ ಮಾಧವರಾಯನ ಆಕ್ರಮಣದಲ್ಲಿ ಹೈದರ್ ತನ್ನ ಅಧಿಕಾರಿಗಳಿಗೆ ಕೊಟ್ಟಿದ್ದ ಆಜ್ಞೆಗಳನ್ನು ನೋಡಿದರೆ ಈ ಹಾನಿಯ ಬಗ್ಗೆ ಒಂದು ಕಲ್ಪನೆ ಆದೀತು. ಹೈದರನ ಆಜ್ಞೆ ಹೀಗಿತ್ತು “ಮರಾಠ ಸೈನ್ಯ ಬಂದಾಗ ಜಲಾಶಯಗಳ ದಡಗಳನ್ನು ಒಡೆದು ಹಾಕತಕ್ಕದ್ದು. ಮೇವನ್ನೆಲ್ಲ ಸುಟ್ಟು ಹಾಕತಕ್ಕದ್ದು. ಧಾನ್ಯವನ್ನು ಹೂತುಬಿಡಬೇಕು. ಮರಾಠರಿಗೆ ಹುಲ್ಲು, ನೀರು, ಆಹಾರ ಏನನ್ನೂ ಬಿಡಬಾರದು.”[23]ಮರಾಠರ ಆಕ್ರಮಣಕ್ಕೆ ಸಿಕ್ಕಿದ ಜನ ತಮ್ಮ ಆಹಾರವನ್ನೂ ಹೂಳಬೇಕಾಗಿ ಬಂತು. “ಅಂತೆಯೇ ಮರಾಠರು ಈ ಕೆಟ್ಟ ಮರುಭೂಮಿಯಲ್ಲಿ ಕುಚು ಮಾಡಿಕೊಂಡು ಹೋದರು”[24]

ಕ್ರಿ.ಶ. ೧೭೬೯ರ ಅವಧಿಯಲ್ಲಿ ನಾಲ್ಕು ಆಂಗ್ಲ ಮೈಸೂರು ಯುದ್ಧಗಳಾದವು. ಮೂರು ಮತ್ತು ನಾಲ್ಕನೆಯ ಯುದ್ಧಗಳು ಜನರ ನಿತ್ಯ ಜೀವನವನ್ನು ಹಾಳುಮಾಡಿ, ನೀರಾವರಿ ಸೌಲಭ್ಯಗಳನ್ನು ನಾಶಮಾಡಿ, ಅಪಾರ ಸಂಕಟವನ್ನು ಉಂಟುಮಾಡಿದವು. ಇದಕ್ಕೆ ಕೆಳಗಿನ ಒಂದೆರಡು ನಿದರ್ಶನಗಳೇ ಸಾಕು. ೧೭೯೨ರಲ್ಲಿ ಕಾರ್ನವಾಲಿಸನು ಶ್ರೀರಂಗಪಟ್ಟಣಕ್ಕೆ ತನ್ನ ಸೇನೆಯನ್ನು ನಡೆಸುತ್ತಿದ್ದ. ಶ್ರೀರಂಗಪ್ಪಣದ ಪೂರ್ವಕ್ಕೆ ಒಂಭತ್ತು ಮೈಲು ದೂರದಲ್ಲಿ ಕಾವೇರಿಗೆ ಅಡ್ಡಲಾಗಿ ಕಟ್ಟಿದ ಅರಕೆರೆಯ ಕಲ್ಲು ಆಣೆಯನ್ನು ಕಂಡ.

“ಕಟ್ಟೆ ಕೆಳಗೆ ನದಿಯ ಪಾತ್ರ ಕಲ್ಲುಗಳಿಂದ ತುಂಬಿತ್ತು. ದಾಟಲು ಅಸಾಧ್ಯವಾಗಿತ್ತು. ಕಟ್ಟೆಯನ್ನು ಸೀಳಿಬಿಟ್ಟರೆ ನೀರಿನ ಮಟ್ಟ ಇಳಿದು ನದಿ ದಾಟಲು ಅನುಕೂಲವಾಗುತ್ತದೆ. ಎಂದು ಊಹಿಸಲಾಯಿತು. ಆದರೆ ಕಟ್ಟೆ ಎಷ್ಟು ಗಟ್ಟಿಯಾಗಿತ್ತು ಎಂದರೆ ಸೇನೆಯ ಮುಂಚೂಣಿಯವರಿಗೆ ಉದ್ದೇಶಿತ ಪರಿಣಾಮಕ್ಕಾಗಿ ಏನೂ ಮಾಡಲಾಗದೆ ಹೋಯಿತು. ಯೋಜನೆಯನ್ನೆ ಕೈಬಿಡಲಾಯಿತು”[25]

ಅರಕೆರೆ ಅಣೆಯೇನೊ ತನ್ನ ನಿರ್ಮಾಣ ಬಲದಿಂದಲೆ ಉಳಿದುಕೊಂಡಿತು. ಆದರೆ ಮುಂದಿನ ಯುದ್ಧದಲ್ಲಿ (ಕ್ರಿ.ಶ. ೧೭೯೯) ತೊಣ್ಣೂರು ಕೆರೆ ಟಿಪ್ಪುವಿನಂದಲೆ ನಾಶವಾಯಿತು. ತೊಣ್ಣೂರಿನ ಮಹಾಜಲಾಶಯ ಅಥವಾ ಮೋತಿ ತಲಾವ್ (ಮುತ್ತಿನ ಕೆರೆ) ರಾಜಧಾನಿ ಶ್ರೀರಂಗಪಟ್ಟಣಕ್ಕೆ ಅನುಕೂಲವಾಗಿದ್ದರೂ, ಹಿಂದೆ ಆಗಿಂದಾಗ್ಗೆ ಹಲವಾರು ಶತ್ರುಸೇನೆಗಳಿಗೆ ನೀರು ಮೇವು ಒದಗಿಸಿತ್ತು ಎನ್ನುವುದನ್ನು ಟಿಪ್ಪು ಕೇಳಿದ್ದ. ಈಗ ‘ಸಾವು ಅಥವಾ ಸಾಮ್ರಾಜ್ಯ’ ಎಂದು ತಾನು ನಿಶ್ಚಯಿಸಿದ್ದ. ಯುದ್ಧದಲ್ಲಿ ಆ ಕೆರೆ ಉಳಿಯಬಾರದು ಎಂದು ತೀರ್ಮಾನಿಸಿದ. ಕೆರೆ ಏರಿಯನ್ನು ಒಡೆದು ಬರಿದು ಮಾಡಲಾಯಿತು. [26] ಟಿಪ್ಪುವಿನ ಪತನಾನಂತರ ಮೈಸೂರು ಒಡೆಯರಿಗೆ ಮರಳಿತು. ಕ್ರಿ.ಶ೧೮೦೦ರಿಂದ ೧೮೧೨ರ ವರೆಗೆ ಪೂರ್ಣಯ್ಯ ಅವರ ದಿವಾನನಾದ. ನಾವು ಮುಂದೆ ನೋಡುವಂತೆ ಆ ಅವಧಿಯಲ್ಲಿ ಹಿಂದಿನ ಜಲಾಶಯಗಳ ಜೀರ್ಣೋದ್ಧಾರ ಕಾರ್ಯವನ್ನೇ ಆತ ತನ್ನ ವಿಶೇಷ ಗುರಿಯಾಗಿ ಮಾಡಿಕೊಂಡ. ನೀರಾವರಿ ಕೆರೆಗಳ ಅವನತಿ ಬ್ರಿಟಿಷರ ಆಗಮನದಿಂದ ಮೊದಲಾಯಿತು ಎನ್ನುವುದು ಸಾಮಾನ್ಯ ಅಭಿಪ್ರಾಯ. ಇದು ಬ್ರಿಟಿಷರ ನೇರ ಆಳ್ವಿಕೆಯಲ್ಲಿದ್ದ ಪ್ರದೇಶದಲ್ಲಿ ನಿಜ ಇರಬಹುದು. ದಕ್ಷಿಣ ಕರ್ನಾಟಕ ಅಥವಾ ಹಳೆಯ ಮೈಸೂರಿನಲ್ಲಿ ಮಾತ್ರ ಅವನತಿ ಪ್ರಾರಂಭವಾದುದು ೧೭ – ೧೮ ನೇಯ ಶತಮಾನದ ಯುದ್ಧಗಳಲ್ಲಿ. ಹಳೆಯ ಮೈಸೂರು ಸಂಸ್ಥಾನದ ಆಡಳಿತವರು ತಮ್ಮ ಅಮೂಲ್ಯ ವಾರಸಿಕೆಯಾದ ಕೆರೆಗಳನ್ನು ಜೀರ್ಣೋದ್ಧಾರ ಮಾಡುವುದರಲ್ಲಿ ಎಷ್ಟರಮಟ್ಟಿಗೆ ಯಶಸ್ವಿಗಳಾದರೋ ಮುಂದಿನ ಅಧ್ಯಾಯದಲ್ಲಿ ನೋಡೋಣ. ಮುಂಬೈ ಮತ್ತು ನಿಜಾಂ ಆಡಳಿತಗಳು ತಮ್ಮ ಅಧೀನದಲ್ಲಿದ್ದ ಕರ್ನಾಟಕ ಪ್ರದೇಶಗಳಲ್ಲಿ ಯಾವ ರೀತಿ ನಿಭಾಯಿಸಿದರೋ ಅದನ್ನೂ ನೋಡೋಣ.

 – – – –
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1]ಇ.ಸಿ. ೩ ಷಿಕಾರಿಪುರ ೨೩೪.

[2]ಎಸ್.ಐ.ಐ. ೯ (ii) ನಂ. ೪೯೧.

[3]ಅದೇ ನಂ. ೫೦೪.

[4]ಅದೇ ನಂ. ೫೧೦.

[5]ಇ.ಸಿ. ೪ (ಆರ್) ಪಾಂಡವಪುರ ನಂ. ೧೩೫.

[6]ಇ.ಇ.೩೧-ನಂ.೨೧.

[7]ಎಸ್.ಐ.೯ (ii) ನಂ. ೩೨೨.

[8]ವಿಜಯನಗರ ಇನ್ಸ್‌ಕ್ರಿಪಷನ್ಸ್‌ಸಂ. ೨ ಕರ್ನಾಟಕ (ಕೆ.ಎನ್.) ೫೯೨. (ಸಂ) ಬಿ.ಆರ್.ಗೋಪಾಲ್‌.

[9]ಎಸ್.ಐ.ಐ. (ii) ನಂ. ೩೨೨.

[10]ಅದೇ ನಂ. ೫೯೩.

[11]ಇ.ಸಿ. ೪ (ಆರ್) ಚಾಮಾರಾಜನಗರ ೨೩೨.

[12]ಇ.ಸಿ. ೧೧ ಮೊಳಕಾಲ್ಮೂರು ೪.

[13]ಅದೇ ೬

[14]ಎಸ್.ಐ.ಐ. ೯ (ii) ನಂ. ೬೭೬

[15]ಎಂ.ಎ.ಆರ್. ೧೯೩೫ ಪು. ೨೫ (ಎ)

[16]ಎಂ.ಎ.ಆರ್. ೧೯೩೦ ನಂ. ೬೦.

[17]ಇ.ಸಿ. ೧೧ ಹಿರಿಯೂರು ೨೫.

[18]ಇ.ಸಿ. ೧೨ ಕುಣಿಗಲ್ ೨೯ ಮತ್ತು ೩೦.

[19]ಅದೇ. ಸಿರಾ ೮೪.

[20]ಇ.ಸಿ. ೮ ಸೊರಬ ೯೫೩

[21]ಇ.ಸಿ. ೧೦ ಕೋಲಾರ ೨೨೦.

[22]ಅದೇ ಬಾಗೇಪಲ್ಲಿ ೭೧.

[23]ವಿಲ್ಕ್ಸ್‌ – ಹಿಸ್ಟರಿ ಆಫ್‌ಮೈಸೂರು ೧ ಪು. ೫೫೦.

[24]ಅದೇ ಪು ೫೫೨ ಮತ್ತು ಅಡಿ ಟಿಪ್ಪಣಿ.

[25]ಅದೇ (೨) ೪೫೩.

[26]ಅದೇ ಪು. ೬೧೦-೧೧.