ಕೆರೆಗಳು:

ಕೆರೆಗಳ ವರ್ಗೀಕರಣ: ಇತಿಹಾಸದಲ್ಲಿ ಕೆರೆ ನೀರಾವರಿಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಬೇಕಾದರೆ, ನಾನಾ ಬಗೆಯ ಕೆರೆಗಳ ಹಾಗೂ ಅವುಗಳ ಅಂಗಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಶಾಸನಗಳು ಕೆರೆಗಳನ್ನು ಕೆರೆ, ಕಟ್ಟೆ, ಸಾಗರ, ಸಮುದ್ರ, ಹಾಗೂ ತಟಾಕ ಎಂಬುದಾಗಿ ವರ್ಣಿಸುತ್ತವೆ. ಹಿರಿಯ ಕೆರೆ, ಹೆಗ್ಗೆರೆ, ಪಿರಿಯ ಕೆರೆ ಅರ್ಥಾತ್ ದೊಡ್ಡದಾರ ಕೆರೆ ಎಂದೂ ವರ್ಣಿಸುತ್ತವೆ. ಚಿಕ್ಕಕೆರೆ ಅಂದರೆ ಸಣ್ಣಕೆರೆ ಹಾಗೂ ಕನ್ನೆಗೆರೆ (ಹೊಸಕರೆ) ಎಂದೂ ಹೇಳುತ್ತವೆ. ಆದರೆ ಕೆರೆಗಳ ಗಾತ್ರ ಅಥವಾ ಅವುಗಳಿಂದ ನೀರಾವರಿ ಆಗುವ ಪ್ರದೇಶಗಳ ಬಗ್ಗೆ ಅವು ಯಾವ ಸುಳಿವನ್ನೂ ನೀಡುವುದಿಲ್ಲ. ೧೭೯೯ – ೧೮೦೬ ರಲ್ಲಿ ಮೈಸೂರು ರಾಜ್ಯದಲ್ಲಿ ಮಾಡಲಾದ ಸಮೀಕ್ಷೆಯ ಬಖೈರುಗಳಲ್ಲಿ ಕೆರೆ ಕಟ್ಟೆ ಕುಂಟೆಗಳ ಪಟ್ಟಿ ಇದೆ. ಆದರೂ ಆ ಕೆರೆಗಳ ಗಾತ್ರದ ಬಗ್ಗೆ ಅವುಗಳಲ್ಲಿ ಏನೂ ಹೇಳಿಲ್ಲ. ಆ ನಿರ್ಮಾಣಗಳ ವರ್ಗೀಕರಣದ ಆಧಾರವನ್ನು ಸೂಚಿಸುವ ಯಾವ ವಿವರಣೆಯನ್ನೂ ಕೊಟ್ಟಿಲ್ಲ.

ಆದರೆ ಅವುಗಳ ಅರ್ಥ ನಮಗೆ ತಿಳಿದುಬರುವುದು ಇನ್ನೊಂದು ಅನಿರಿಕ್ಷೀತ ಕಡೆಯಿಂದ. ಫ್ರಾನ್ಸಿಸ್ ಬುಕಾನನ್ ೧೮೦೦ರಲ್ಲಿ ಮೈಸೂರಿನ ಉದ್ದ ಅಗಲಕ್ಕೂ ಪ್ರವಾಸಮಾಡಿದ. ದನಕರುಗಳಿಗೆ ಕುಡಿಯಲು ನೀರು ಒದಗಿಸುವ ಸಣ್ಣ ಜಲಾಶಯವೇ ಕಟ್ಟೆ ಎಂದೂ, ಭೂಮಿಗೆ ನೀರು ಹಾಯಿಸಲು ಉಪಯೋಗಿಸುವ ದೊಡ್ಡ ಜಲಾಶಯವೇ ಕೆರೆ ಎಂದೂ ಆತ ತಿಳಿಸುತ್ತಾನೆ.

[1] ಅಲ್ಲದೆ ನೆಲದಲ್ಲಿ ಚೌಕವಾಗಿ ಆಗಿದು ಮಾಡಿದ ಕೆರೆಯ ಹೆಸರು ಕುಂಟೆ ಎಂದೂ ಹೇಳುತ್ತಾನೆ.[2] ಅದರೆ ಅಂಥ ವರ್ಗೀಕರಣಕ್ಕೆ ಗೊತ್ತಾದ ನಿರ್ದಿಷ್ಟ ಗಾತ್ರ ಏನು? ಎಂಬುದನ್ನು ಬುಕಾನನ್ ಸೂಚಿಸುವುದಿಲ್ಲ. ಪ್ರಾಯಶಃ ಅಂಥ ನಿರ್ದಿಷ್ಟತೆ ಇರಲಿಲ್ಲವೇನೋ, ಪ್ರತಿಯೊಂದು ಪ್ರದೇಶದಲ್ಲೂ ಅವರದೇ ಆದ ಬೇರೆ ಬೇರೆ ನಾಮ ನಿರ್ದೇಶನ ಇತ್ತೇನೋ.

ಅನುಸರಿಸಿದ ಇನ್ನೊಂದು ವರ್ಗೀಕರಣ ವಿಧಾನ ಎಂದರೆ ನದಿಯಿಂದ ತುಂಬುವ ಕೆರೆ ಮತ್ತು ಮಳೆಯಿಂದ ತುಂಬುವ ಕೆರೆ ಎಂದು ಹೇಳುವುದು. ನದಿಗೆ ಅಡ್ಡಲಾಗಿ ಕಟ್ಟಿದ ಅಣೆಕಟ್ಟಿನಿಂದ ನೀರನ್ನು ಪಡೆದುಕೊಂಡು ಇನ್ನಿತರ ಸಾಲು ಕೆರೆಗಳಿಗೆ, ಕಾಲುವೆಗಳಿಗೆ ನೀರು ಒದಗಿಸುವುದು ನದಿಯಿಂದ ತುಂಬವ ಕೆರೆ. ೧೮೬೨ರಲ್ಲಿ ಪುನರ್ ನಿರ್ಮಿಸಲಾದ ಮದ್ದೂರ ಆಣೆಕಟ್ಟು ಮತ್ತು ಕೆಳಗಿನ ಎಂಟು ಕೆರೆಗಳಿಗೆ ನೀರು ಒದಗಿಸುವ ಅದರ ನಾಲೆ ನದಿಯಿಂದ ತುಂಬುವ ಕೆರೆ ಜಾಲಕ್ಕೆ ಉದಾಹರಣೆ. ಕಣಿವೆಗೆ ಅಡ್ಡಲಾಗಿ ಉದ್ದನೆಯ ಏರಿಯನ್ನು ಕಟ್ಟಿ, ಅಥವಾ ಗುಡ್ಡಗಳ ನಡುವಿನ ಕಮರಿಗೆ ಅಡ್ಡಲಾಗಿ ಚಿಕ್ಕ ಏರಿಯನ್ನು ಕಟ್ಟಿ, ಜಲಾನಯನ ಪ್ರದೇಶದಲ್ಲಿ ಹರಿದು ಬರುವ ಮಳೆ ನೀರನ್ನು ಹಿಡಿದಿರುವ ಪರಸ್ಪರ ಸಂಪರ್ಕ ಉಳ್ಳ ಜಲಾಶಯಗಳ ಜಾಲಗಳೇ ಮಳೆ ನೀರಿನಿಂದ ತುಂಬುವ ಕೆರೆಗಳು. ಕರ್ನಾಟಕದಲ್ಲಿ ಬಹುಪಾಲು ಕೆರೆಗಳು ಈ ವರ್ಗಕ್ಕೆ ಸೇರಿವೆ.

ಮೇಜರ್ ಸ್ಯಾಂಕಿ ಅನುಸರಿಸಿದ ಇನ್ನೊಂದು ವರ್ಗೀಕರಣ ಹಳ್ಳಿ ಕೆರೆಗಳು ಹಾಗೂ ತುದಿಯ ಕೆರೆಗಳು ಎಂದು. ಹಳ್ಳಿ ಕೆರೆಗಳು ಸಣ್ಣವು, ಒಂದು ಹಳ್ಳಿಯ ಅಗತ್ಯವನ್ನು ಪೂರೈಸುವಂಥವು. ತುದಿಯ ಕೆರೆಗಳು ದೊಡ್ಡವು, ಕಣಿವೆಯೊಂದು ಮುಖ್ಯ ನದಿ ಕಣಿವೆಯನ್ನು ಸೇರುವ ಕಡೆ ಕಟ್ಟಲಾದುವು.[3] ಅವುಗಳಿಗೆ ದೊಡ್ಡ ಕೆರೆ ಅಥವಾ ಹಿರಿಯ ಕೆರೆ ಎಂದೂ ಹೆಸರು.

ಕೆಲವು ಹಳೆಯ ಕೆರೆಗಳ ಹೆಸರುಗಳು ಸಮುದ್ರ ಅಥವಾ ಸಾಗರ ಎಂದು ಕೊನೆಗೊಳ್ಳುತ್ತವೆ. ಅದು ಕೆರೆಗಳು ಸಾಗರದಂತೆ ವಿಶಾಲವಾದವು ಎಂಬುದನ್ನು ಸೂಚಿಸಲು ಇದ್ದರೂ ಅಂಥ ನಾಮಕರಣಕ್ಕೆ ನಿರ್ಮಾತೃವಿನ ಇಷ್ಟವೇ ಆಧಾರ ವಿನಾ ಕೆರೆ ತುಂಬ ದೊಡ್ಡದು ಎನ್ನುವುದನ್ನು ಸೂಚಿಸಲು ಅಲ್ಲ ಎಂದು ತೋರುತ್ತದೆ.

ಕೆರೆಯ ಅಂಗಗಳು:

ಜಲಾನಯನ ಪ್ರದೇಶ: ನೀರಾವರಿಗೆ ಬಳಸುವ ಎಲ್ಲ ನೀರಿಗೂ ಆಧಾರ ಮಳೆ. ನೆಲದ ಮೇಲೆ ಬೀಳುವ ಮಳೆ ನೀರು ಒಡನೆಯೇ ಹರಿದು ಹೋಗದಂತೆ ನೆಲದಲ್ಲಿರುವ ಸಸ್ಯಗಳು ತಡೆಇಡಿಯುತ್ತವೆ. ಅ ನೀರಿನ ಸ್ವಲ್ಪ ಭಾಗ ನೆಲದೊಳಕ್ಕೆ ಇಂಗುತ್ತದೆ. ಅದರಲ್ಲಿ ಸ್ವಲ್ಪ ಭಾಗವನ್ನು ಗಿಡಗಳ ಬೇರುಗಳು ಹೀರಿಕೊಳ್ಳುತ್ತವೆ. ಉಳಿದ ನೀರು ನೆಲದ ಆಳದಲ್ಲಿ ಸಂಗ್ರಹವಾಗುತ್ತದೆ. ನೆಲದ ಮೇಲ್ಭಾಗದಲ್ಲಿ ಹರಿಯುವ ನೀರಿನ ಭಾಗ ಸಣ್ಣ ಕೊಳ್ಳಗಳಲ್ಲಿ ಸಾಗುತ್ತದೆ. ಅಂಥ ಸಣ್ಣ ಸಣ್ಣ ಕೊಳ್ಳಗಳ ನೀರು ಒಟ್ಟಾಗಿ ಸೇರಿ ಹೊಳೆ ಅಥವಾ ನದಿ ಆಗುತ್ತದೆ. ಅಂಥ ಹೊಳೆಗಳಿಗೆ ಅಡ್ಡಲಾಗಿ ಕಟ್ಟೆಯನ್ನೊ ಏರಿಯನ್ನೊ ಕಟ್ಟೆ ಕೆರೆಯನ್ನು ನಿರ್ಮಿಸಲಾಗುವುದು.

ಗುಡ್ಡ ಬೆಟ್ಟಗಳ ಇಳಿಜಾರಿನಿಂದ ನೀರು ಕಣಿವೆಗಳಿಗೆ ಹರಿಯುತ್ತದೆ. ಯಾವುದೇ ಗೊತ್ತಾದ ಸ್ಥಳದಲ್ಲಿ ಹೊಳೆಗೆ ನೀರನ್ನು ಒದಗಿಸುವ ಪ್ರದೇಶವನ್ನು ಆ ಹೊಳೆಯ, ಆ ಸ್ಥಳದ ನೀರು ಬಸಿಯುವ ಪ್ರದೇಶ ಅಥವಾ ಜಲಾನಯನ ಪ್ರದೇಶ ಎನ್ನುತ್ತಾರೆ. ಕೆರೆಗೆ ಹರಿದು ಬರುವ ನೀರು ಯಾವ ಪ್ರದೇಶದ ಮಳೆಯಿಂದ ಬರುವದೊ ಆ ಪ್ರದೇಶವೇ ಕೆರೆಯ ಜಲಾಯನಯನ ಪ್ರದೇಶ. ಯಾವ ನೀರನ್ನು ಸಸ್ಯ ಹೀರಿ ಕೊಳ್ಳುವುದಿಲ್ಲವೋ ಹಾಗೂ ಯಾವ ನೀರು ನೆಲದೊಳಕ್ಕೆ ಇಂಗುವುದಿಲ್ಲವೋ, ಮಳೆ ನೀರಿನ ಆ ಉಳಿದ ಭಾಗ ಮಾತ್ರವೇ ನೆಲದ ಮೇಲೆ ಹರಿದು ಬರುತ್ತದೆ. ಕೆರೆಯನ್ನು ತಲುಪುವ ನೀರಿನ ಪ್ರಮಾಣ ಅಥವಾ ಕೆರೆಯ ನಿವೇಶನದಲ್ಲಿನ ನದಿಯ ಜಲಪ್ರಮಾಣ ಜಲಾನಯನ ಪ್ರದೇಶದ ವಿಸ್ತಾರಕ್ಕೂ ಅಲ್ಲಿ ಬೀಳುವ ಮಳೆಯ ಪ್ರಮಾಣಕ್ಕೂ ಸಂಬಂಧಪಟ್ಟಿರುತ್ತದೆ.

ಕೆರೆಗಳ ಅಂಗಳ: ಹೊಳೆಗೆ ಅಡ್ಡಲಾಗಿ ಏರಿಯನ್ನು ಕಟ್ಟಿದಾಗ ಹೊಳೆಯ ನೀರು ನಿಂತು, ಕೆರೆಯಲ್ಲಿ ಶೇಖರವಾಗುತ್ತದೆ. ಕೆರೆಯಲ್ಲಿ ನೀರನ್ನು ನಿಲ್ಲಗೊಡುವ ಅತ್ಯಧಿಕ ಮಟ್ಟವೇ ತುಂಬಿದ ಕೆರೆಯ ನೀರಿನ ಮಟ್ಟ. ಆ ನೀರು ಎಷ್ಟು ಪ್ರದೇಶದಲ್ಲಿ ನಿಲ್ಲುವುದೊ ಆ ಪ್ರದೇಶ ಕೆರೆಯ ನೀರಿನ ಹರವು. ಅದನ್ನೇ ಸಾಮಾನ್ಯವಾಗಿ ಕೆರೆಯ ಅಂಗಳ ಎನ್ನುತ್ತಾರೆ.

ಅಚ್ಚುಕಟ್ಟು ಪ್ರದೇಶ: ಕೆರೆಯ ಕಾಲುವೆ ಜಾಲಕ್ಕೂ ಕಾಲುವೆಯ ನೀರು ಗುರುತ್ತ್ವಾಕರ್ಷಣದಿಂದ ನದಿಯನ್ನೋ ಕೊಳ್ಳವನ್ನೋ ತಲುಪುವ ಸ್ಥಳಕ್ಕೂ ನಡುವೆ ಇರುವ ಭೂಪ್ರದೇಶಕ್ಕೆ ಅಚ್ಚುಕಟ್ಟುಪ್ರದೇಶ ಎಂದು ಹೆಸರು. ಅಂಥ ಅಚ್ಚುಕಟ್ಟು ಪ್ರದೇಶದಲ್ಲಿ ರಸ್ತೆ ಹಳ್ಳಿ ನಿವೇಶನ ದಿಬ್ಬಗಳು ಇರಬಹುದು. ಅವೆಲ್ಲವನ್ನೂ ಬಿಟ್ಟು ಉಳಿದ ಪ್ರದೇಶವೇ ಕೆರೆಯ ಅಥವಾ ನೀರಾವರಿ ಕಾಮಗಾರಿಯ ನೀರಾವರಿ ಪ್ರದೇಶ ಅಥವಾ ಆಯಕಟ್ಟು ಪ್ರದೇಶ ಅಥವಾ ಅಚ್ಚುಕಟ್ಟು ಪ್ರದೇಶ.

ಕೆರೆ ಏರಿಯ ಒಳ ಆರ್ಶ್ವನೋಟ :

ಕೆರೆಯ ಅಂಗಗಳ ರೇಖಾಚಿತ್ರ ಪ್ರಾನ್ಸಿಸ್‌ ಬುಕಾನನ್ ಕಂಡಂತೆ

ಕೆರೆಯ ಅಂಗಗಳ ರೇಖಾಚಿತ್ರ ಪ್ರಾನ್ಸಿಸ್‌ ಬುಕಾನನ್ ಕಂಡಂತೆ

ಏರಿ: ಕೆರೆಯ ಅಥವಾ ಜಲಾಶಯದ ಅತ್ಯಂತ ಮುಖ್ಯ ಭಾಗ ಏರಿ ಅಥವಾ ಕಟ್ಟೆ. ಸಾಮಾನ್ಯವಾಗಿ ನಮ್ಮ ಎಲ್ಲ ಕೆರೆಗಳ ಏರಿಗಳು ಮಣ್ಣಿನ ಕಟ್ಟೆಗಳು. ಏಕೆಂದರೆ ಮಣ್ಣು ಸುಲಭವಾಗಿ ಬೇಕಾದಷ್ಟು ಸಿಗುವುದು. ಹಳೆಯ ಕೆರೆಗಳ ಏರಿಗಳು ಬಹುಮಟ್ಟಿಗೆ ಸ್ಥಳದ ಪರಿಸ್ಥಿತಿ ಹಾಗೂ ಭದ್ರತೆಯ ಅಗತ್ಯಗಳಿಗೆ ಅನುಗುಣವಾಗಿರುತ್ತವೆ. ಭದ್ರತೆ ಪ್ರಾಯಶಃ ಅಷ್ಟು ಸೂಕ್ಷ್ಮ ಅಂಶವಾಗಿದ್ದಿರಲಾರದು. ಏಕೆಂದರೆ ಪ್ರಾಣ ಅಥವಾ ಆಸ್ತಿ ಹಾನಿಯ ಅಪಾಯಕ್ಕೆ ಕಾರಣವಾಗುವಷ್ಟು ದೊಡ್ಡ ಕಟ್ಟೆಗಳ ವಿರಳ.

ಏರಿಯ ಸ್ಥಿರತೆಯು ಮಣ್ಣಿನ ಇಳಿಜಾರಿನ ಸ್ಥಿರತೆ ಹಾಗೂ ಅಡಿಪಾಯವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಒಳ್ಳೆ ಗಟ್ಟಿಯಾದ ಅಡಿಪಾಯವನ್ನು ಆರಿಸಿಕೊಳ್ಳಲಾಗುತ್ತಿತ್ತು. ಪಾರ್ಶ್ವದ ಇಳಿಜಾರು ಸ್ಥಳೀಯ ಅನುಭವಕ್ಕೆ ಅನುಸಾರವಾಗಿರುತ್ತಿತ್ತು. ಏರಿಯ ತಳಭಾಗದ ಅಗಲ ದೊಡ್ಡದಾಗಿದ್ದು ಪಾರ್ಶ್ವದ ಇಳಿಜಾರುಗಳಿಗೆ ಅನುಗುಣವಾಗಿರುತ್ತಿತ್ತು. ಏರಿಯ ತಲೆಭಾಗದ ಅಗಲ ಕಿರಿದಾಗಿದ್ದು ಜನ ದನ ಓಡಾಡುವಷ್ಟು ಇರುತ್ತಿತ್ತು. ಬಹಳ ಅಗಲವಾದ ತಲೆಭಾಗವುಳ್ಳ ಏರಿಗಳ ಕೆರೆಗಳು ಕೆಲವು ಉಂಟು. ಸ್ಥಿರತೆಯ ದೃಷ್ಟಿಯಿಂದ ಅಷ್ಟೊಂದು ಅಗಲ ಅಗತ್ಯವಿಲ್ಲ.

ಅಷ್ಟು ಅಗಲದ ಏರಿಯನ್ನು ಕಟ್ಟಿದ್ದು, ಬಹುಶಃ ನದಿಯ ಒಂದು ದಡದಿಂದ ಇನ್ನೊಂದಕ್ಕೆ ಹೋಗಲು ಸಂಪರ್ಕ ಮಾರ್ಗವಾಗಲಿ ಎಂದಿರಬೇಕು.

ಜಲಾಶಯ ಅಥವಾ ಕೆರೆಯಲ್ಲಿನ ವಿಸ್ತಾರವಾದ ನೀರಿನ ಹರಹಿನ ಮೇಲೆ ಬೀಸುವ ಗಾಳಿ ಎತ್ತರದ ಅಲೆಗಳನ್ನು ಎಬ್ಬಿಸುತ್ತದೆ. ಸೂಕ್ತ ರಕ್ಷಣೆ ಒದಗಿಸದಿದ್ದರೆ ಅಲೆಗಳು ಮಣ್ಣಿನ ಏರಿಗೆ ಅಪಾಯ ಉಂಟುಮಾಡಬಹುದು. ಅದಕ್ಕಾಗಿ ಮಣ್ಣು ಏರಿಯ ಒಳಭಾಗದ ಇಳಿಜಾರಿನ ಉದ್ದಕ್ಕೂ ದೊಡ್ಡ ದೊಡ್ಡ ಕಲ್ಲುಗಳನ್ನು ಜೋಡಿಸಿ ರಕ್ಷಣೆ ಒದಗಿಸಲಾಗುತ್ತದೆ. ಆ ಕಲ್ಲು ಕಟ್ಟಡ (ರಿವೆಟ್‌ಮೆಂಟ್) ನೀರಿನ ಅಲೆಗಳ ಹೊಡತದಿಂದ ಏರಿಯನ್ನು ಕಾಪಾಡುತ್ತದೆ.

ಕೆಳಪಾರ್ಶ್ವಕ್ಕೆ ಅಂದರೆ ಏರಿಯ ಹಿಂಬದಿಯ ಇಳಿಜಾರಿಗೆ, ಭಾರಿ ಮಳೆ ಬಿದ್ದು ಮಣ್ಣು ಕೊಚ್ಚಿ ಹೋಗದೆ ಇರುವಂತೆ, ಹುಲ್ಲು ಬೆಳೆಸಿ ರಕ್ಷಣೆ ನೀಡಲಾಗುವುದು. ಕೆಲವು ಹಳೆಯ ಕೆರೆಗಳಲ್ಲಿ ಹಿಂಬದಿಯ ಇಳಿಜಾರಿನಲ್ಲೂ ಕಲ್ಲು ಕಟ್ಟೆ ಇರುವುದುಂಟು.

ಕಾಲುವೆ, ತೂಬು ಮತ್ತು ಕೋಡಿ: ಜಲಾಶಯದಲ್ಲಿ ಸಂಗ್ರಹವಾದ ನೀರು ಕಾಲುವೆಗಳ ಜಾಲದ ಮೂಲಕ ಜಮೀನನ್ನು ತಲುಪುತ್ತದೆ. ಕೆರೆಯಿಂದ ನೀರನ್ನು ಒಂದು ತೂಬಿನ ಮೂಲಕ ಕಾಲುವೆಗೆ ಬಿಡಲಾಗುವುದು. ಹಿಂದೆ ಒಂದು ಮರದ ಬಿರಡೆಯನ್ನು ಉಪಯೋಗಿಸಿ ತೂಬನ್ನು ತೆರೆದು ಮುಚ್ಚಲಾಗುತ್ತಿತ್ತು. ಇಪ್ಪತ್ತನೆಯ ಶತಮಾನದಲ್ಲಿ ಮರದ ಬಿರಡೆಯ ಜಾಗದಲ್ಲಿ ಉಕ್ಕಿನ ಬಾಗಿಲು ರೂಢಿಗೆ ಬಂದಿದೆ. ತೂಬು ಇರುವುದು ಏರಿಯ ಮೇಲು ಪಾರ್ಶ್ವದಲ್ಲಿ. ಅದಕ್ಕೆ ಹೋಗಲು ಒಂದು ಕಿರಿದಾದ ಕಾಲು ಸೇತುವೆ ಇರುತ್ತದೆ. ಹಿಂದಿನ ಕಾಲದಲ್ಲಿ ಹಳೆಯ ಕೆರೆಗಳಲ್ಲಿ ನೀರಿನಲ್ಲಿ ಈಸಿಕೊಂಡು ತೂಬಿಗೂ ಹೋಗುತ್ತಿದ್ದರು. ತೂಬಿಗೆ ಹಾಗೂ ಏರಿಯ ಕೆಳ ಪಾರ್ಶ್ವದಲ್ಲಿ ಇರುವ ಕಾಲುವೆಗೂ ನಡುವೆ ಏರಿಯ ಮುಖಾಂತರ ರಚಿಸಲಾದ ಒಂದು ಸುರಂಗದ ಸಂಪರ್ಕ ಇರುತ್ತದೆ. ಹಳೆಯ ಕಟ್ಟೆಗಳಲ್ಲಿ ಸುರಂಗ ಕಲ್ಲುಕಟ್ಟಡದ್ದಾಗಿರುತ್ತಿತ್ತು. ಈಗ ಕಟ್ಟುವ ಕಟ್ಟೆಗಳಲ್ಲಿ ಕಾಂಕ್ರೀಟು ಕೊಳಾಯಿಗಳ ಜೋಡಣೆ ಇರುತ್ತದೆ.

02_267_KKN-KUH

ನಿರ್ದಿಷ್ಟ ಪ್ರಮಾಣದ ನೀರನ್ನು ಮಾತ್ರ ಹಿಡಿದಿಡುವಂತೆ ಕೆರೆ ಅಥವಾ ಜಲಾಶಯ ನಿರ್ಮಿತವಾಗಿರುತ್ತದೆ. ಮಿತಿಮೀರಿ ಜಲಸಂಗ್ರಃಣೆಯಾದರೆ ಅದು ಮಣ್ಣು ಕಟ್ಟೆಯ ಮೇಲೆ ಹರಿದು ಏರಿ ಒಡೆದು ಹೋಗಬಹುದು. ಆದ್ದರಿಂದ ಹೆಚ್ಚು ಬರುವ ನೀರು ಯೋಜಿತ ಸಂಗ್ರಹಣೆಗೆ ಮೀರದಂತೆ, ಕೆಳಕ್ಕೆ ಹರಿದು ಹೋಗುವಂತೆ ಬಿಡಲು ವ್ಯವಸ್ಥೆ ಯಾವಾಗಲೂ ಇದ್ದೇ ಇರುತ್ತದೆ. ಹೆಚ್ಚುವರಿ ನೀರು ಸಲೀಸಾಗಿ ಹರಿದು ಹೋಗುವ ಏರಿಯ ಭಾಗವೇ ಕೋಡಿ. ಆ ಹೆಚ್ಚುವರಿ ನೀರು ಕೆಳಕ್ಕೆ ಹರಿದು ಕಟ್ಟೆಯ ಕೆಳಗೆ ನದಿಯ ಪಾತ್ರಕ್ಕೆ ಸೇರುತ್ತದೆ.

ಕೆರೆಯ ಅಂಗಗಳ ಬಗ್ಗೆ ಪರಿಚಯ ಮಾಡಿಕೊಂಡಮೇಲೆ, ಕೆರೆಗಳು ಎಲ್ಲೆಲ್ಲಿ ಅಗತ್ಯ ಎಂಬುದನ್ನು ನಾವು ಅರಿತುಕೊಳ್ಳಬೇಕು. ಕರ್ನಾಟಕದಲ್ಲಿ ಕೃಷಿ – ಹವಾಮಾನ ಪರಿಸ್ಥಿತಿ ಇದನ್ನು ವಿವರಿಸುತ್ತದೆ.

ಕೃಷಿಹವಾಮಾನ ಹಿನ್ನಲೆ:

ಕೃಷಿ ಹವಾಮಾನಕ್ಕೆ ತಕ್ಕಂತೆ ಕರ್ನಾಟಕವನ್ನು ಐದು ಪ್ರದೇಶಗಳಾಗಿ ಸ್ಥೂಲವಾಗಿ ವರ್ಗೀಕರಿಸಬಹುದು.

೧. ಕರಾವಳಿ ಪ್ರದೇಶ
೨. ಮಲೆನಾಡು
೩. ಮಧ್ಯಂತರ ಪ್ರದೇಶ
೪. ಬಯಲು ಸೀಮೆ
೫. ಈಶಾನ್ಯದ ಮಧ್ಯಂತರ ಪ್ರದೇಶ

ಕರಾವಳಿ ಪ್ರದೇಶ : ಪಶ್ಚಿಮ ಘಟ್ಟ ಹಾಗೂ ಅರಬ್ಬಿ ಸಮುದ್ರದ ನಡುವಿನ ಕಿರಿದಾದ ಭೂಪಟ್ಟಿಯೇ ಕರಾವಳಿ ಪ್ರದೇಶ. ಈ ಪಟ್ಟಿಯ ಉದ್ದ ಸುಮಾರು ೩೦೦ ಕಿ.ಮೀ. ಅಗಲ ಉತ್ತರದಲ್ಲಿ ೮ ರಿಂದ ೨೦ ಕಿ.ಮೀ. ದಕ್ಷಿಣದಲ್ಲಿ ೪೦ ರಿಂದ ೮೦ ಕಿ.ಮೀ. ಇಲ್ಲಿ ಮಳೆಗಾಲದಲ್ಲಿ ೩೦೦೦ ಮಿ.ಮಿ. ನಿಂದ ೪೦೦೦ ಮಿ.ಮಿ.ವರೆಗೆ ನಿಶ್ಚಿತವಾಗಿ ಮಳೆ ಬೀಳುತ್ತದೆ. ಉತ್ತರದಿಂದ ದಕ್ಷಿಣಕ್ಕೆ ಹರಡಿರುವ ಪಶ್ಚಿಮ ಘಟ್ಟಗಳು ಸಮುದ್ರ ಮಟ್ಟಕ್ಕಿಂತ ೮೦೦ – ೧೦೦೦ ಮೀಟರ್ ಎತ್ತರವಾಗಿವೆ. ಅತ್ಯುನ್ನತ ಶಿಖರವಾದ ಕುದುರೆಮುಖದ ಎತ್ತರ ಸಮುದ್ರ ಮಟ್ಟಕ್ಕಿಂತ ೨೦೭೨ ಮೀಟರ್. ಪಶ್ಚಿಮ ಘಟ್ಟಗಳು ಮಳೆಗಾಲದ ಮೋಡಗಳಿಗೆ ತಡೆ ಒಡ್ಡುತ್ತವೆ. ಅಂತೆಯೇ ಸಮುದ್ರಕ್ಕೆ ಅಭಿಮುಖವಾದ ಘಟ್ಟಗಳ ಪಾರ್ಶ್ಚದಲ್ಲಿ ಭಾರಿ ಮಳೆ ಬೀಳುತ್ತದೆ. ಘಟ್ಟದ ಈಚೆಗೆ ಮಳೆ ಕಡಿಮೆ. ತೀರ ಪ್ರದೇಶದ ಭಾರಿ ಮಳೆಯು ಅಲ್ಲಿ ದಟ್ಟವಾದ ಸದಾ ಹಸಿರಿನ ಅರಣ್ಯವನ್ನು ಪೋಷಿಸಿ ಬೆಳೆಸುತ್ತದೆ. ದಕ್ಷಿಣ ಕನ್ನಡ ಜಿಲ್ಲೆ ಪೂರಾ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿನ ಘಟ್ಟದ ಪಶ್ಚಿಮಕ್ಕಿರುವ ಪ್ರದೇಶವೆಲ್ಲ ಈ ಪಟ್ಟಿಗೆ ಸೇರುತ್ತದೆ. ಘಟ್ಟಗಳ ಶಿಖರಭಾಗದ ಪೂರ್ವಕ್ಕೆ ಹೋದಂತೆ ಮಳೆಯ ತೀವ್ರತೆ ಕಡಿಮೆಯಾಗುತ್ತದೆ. ಶಿಖರಭಾಗಕ್ಕೆ ೫೦ ಕಿ.ಮೀ ದೂರದಲ್ಲಿ ವಾರ್ಷಿಕ ಮಳೆಯ ಪ್ರಮಾಣವು ಘಟ್ಟಗಳ ಶಿಖರದಲ್ಲಿ ಹಾಗೂ ಸುತ್ತಮುತ್ತ ಬೀಳುವ ಮಳೆಯ ಪ್ರಮಾಣದ ಕಾಲು ಭಾಗವೂ ಇರುವುದಿಲ್ಲ. ಕಡಲತೀರಕ್ಕೆ ಸಾಕಷ್ಟು ಸಮೀಪದಲ್ಲಿ ಮಳೆಯ ಮಾರುತಗಳಿಗೆ ಅಡ್ಡಲಾಗಿ ಪಶ್ಚಿಮಘಟ್ಟಗಳು ಇರದೇ ಇದ್ದಲ್ಲಿ ಭಾರಿ ಮಳೆ ಆಗುತ್ತಲೇ ಇರಲಿಲ್ಲ. ಪಶ್ಚಿಮ ಹಾಗೂ ಪೂರ್ವಕ್ಕೆ ಹರಿಯುವ ನದಿಗಳು ಇರುತ್ತಿರಲ್ಲ. ಮತ್ತು ಕರ್ನಾಟಕ ಪೂರಾ ಅರೆ ಒಣಕಲು ಇಲ್ಲವೇ ಒಣಕಲು ಪ್ರದೇಶವಾಗಿರುತ್ತಿತ್ತು.[4] ಕರಾವಳಿಯ ನದಿಗಳು ಸಣ್ಣವು, ಎಲ್ಲವೂ ಪಶ್ಚಿಮಕ್ಕೆ ಹರಿಯುವುವು. ಅವುಗಳಲ್ಲಿ ಮುಖ್ಯವಾದುವು ಉತ್ತರದಲ್ಲಿ ಕಾಳಿನದಿ ಮತ್ತು ಶರಾವತಿ, ದಕ್ಷಿಣದಲ್ಲಿ ನೇತ್ರಾವತಿ ಮತ್ತು ಗುರುಪುರ ಹೊಳೆ. ಸಮತಟ್ಟಾದ ಭೂಮಿ ಇಲ್ಲಿ ಕಡಿಮೆ, ಆದ್ದರಿಂದ ಕೃಷಿಕಾರ್ಯ ಸೀಮಿತ. ಮಣ್ಣು ಬಹುಪಾಲು ಕೆಂಪು ಜಂಬುಮಣ್ಣು (ಲ್ಯಾಟರೈಟ್) ಹಾಗೂ ಕಡಲ ತೀರದ ಮೆಕ್ಕಲು (ಅಲ್ಯೂವಿಯಂ). ಇಲ್ಲಿ ತೆಂಗು, ಅಡಿಕೆ, ಗೋಡಂಬಿ, ಹಣ್ಣು ಮುಂತಾದ ದೀರ್ಘಾಕಾಲೀನ ಬೆಳೆಗಳು ವ್ಯಾಪಕವಾಗಿವೆ.

ಮಲೆನಾಡು: ಕಡಲತೀರ ಪ್ರದೇಶದ ಪೂರ್ವಕ್ಕೆ ಸಮಾನಾಂತರವಾಗಿ ೪೦ – ೬೦ ಕಿ.ಮೀ ಅಗಲವಾಗಿರುವ ಉದ್ದನೆಯ ಕಿರಿದಾದ ಬೆಟ್ಟಗಳ ಪ್ರದೇಶವೇ ಮಲೆನಾಡು. ಇಲ್ಲಿ ೧೦೦೦ ಮಿ.ಮಿ.ನಿಂಧ ೩೦೦೦ ಮಿ.ಮಿ. ನಷ್ಟು ನಿಶ್ಚಿತವಾದ ಮಳೆ ಆಗುತ್ತದೆ. ಕಾವೇರಿ, ಹೇಮಾವತಿ, ಭದ್ರಾ, ತುಂಗಾ, ಮಲಪ್ರಭಾ ಮುಂತಾದ ಹೆಚ್ಚು ಕಡಿಮೆ ಎಲ್ಲ ಮುಖ್ಯ ನದಿಗಳು ಹುಟ್ಟುವುದು, ಈ ಪ್ರದೇಶದಲ್ಲಿ ಕೊಡಗು ಜಿಲ್ಲೆ ಹಾಗೂ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಧಾರವಾಡ, ಬೆಳಗಾಂ ಜಿಲ್ಲೆಗಳ ಭಾಗಗಳು ಮತ್ತು ಹಾಸನ ಜಿಲ್ಲೆಯ ಕೊಂಚ ಭಾಗ ಈ ಪ್ರದೇಶದಲ್ಲಿವೆ. ಮಣ್ಣು ಸಾಮಾನ್ಯವಾಗಿ ಮಿಶ್ರಿತ ಕೆಂಪು ಜೇಡಿ ಹಾಗೂ ಜಂಬುಮಣ್ಣು. ಮುಖ್ಯಬೆಳೆಗಳು ಭತ್ತ, ಸಂಬಾರಪದಾರ್ಥಗಳು, ಹಾಗೂ ಕಾಫಿ ಮುಂತಾದ ತೋಟದ ಬೆಳೆಗಳು.

ಕಡಲತೀರ ಪ್ರದೇಶ ಹಾಗೂ ಮಲೆನಾಡು ಪ್ರದೇಶ ಒಟ್ಟಾರೆ, ರಾಜ್ಯದ ಒಟ್ಟು ಕೃಷಿ ಯೋಗ್ಯ ಭೂಮಿಯಲ್ಲಿ ಶೇಕಡ ೮ರಷ್ಟು ಇದೆ. ಇಲ್ಲಿ ಮಳೆ ಹೆಚ್ಚು ಹಾಗೂ ನಿಶ್ಚಿತ. ಸಾಗುವಳಿ ಜಮೀನು ಸೀಮಿತ. ಬಹುಮಟ್ಟಿಗೆ ಕಡಲ ತೀರದ ಮೆಕ್ಕಲು ಬಯಲು, ನದಿಯ ದಡದ ಬಯಲು ಮತ್ತು ಬೆಟ್ಟಗಳ ಕಿರಿದಾದ ಕಣಿವೆ ಇವಷ್ಟೆ ಸಾಗುವಳಿಗೆ ಯೋಗ್ಯವಾದವು. ಬಹುತೇಕ ಪ್ರದೇಶ ನಿರಂತರವಾದ ಹೊಳೆಗಳಿಂದ ನೀರು ಪಡೆಯುತ್ತದೆ. ಕೆಲವು ಕಡೆಗಳಲ್ಲಿ ತೇವಾಂಶವನ್ನು ಹಿಡಿದಿಟ್ಟುಕೊಳ್ಳೂವಂಥ ಜೇಡಿಮಣ್ಣು ಇದೆ. ತೀರಪ್ರದೇಶದಲ್ಲಿ ಈ ಭೂಮಿಯಲ್ಲಿ ಭತ್ತದ ಒಂದು ಬೆಳೆ ತೆಗೆಯುತ್ತಾರೆ. ಜಮೀನಿನ ಮೇಲೆ ಬೀಳುವ ಮಳೆ ಅಥವಾ ನೆಲದಲ್ಲಿ ಬಿದ್ದು ಸಣ್ಣ ಹಳ್ಳಗಳಲ್ಲಿ ಹರಿದು ಬರುವ ಮಳೆನೀರು ಇದೇ ಬೆಳೆಗೆ ಆಧಾರ. ಕೆಲವೊಮ್ಮೆ ಹೊಳೆಗಳಿಗೆ ಅಡ್ಡಲಾಗಿ ಮಣ್ಣು ಕಲ್ಲು ಹಾಗೂ ಮರದ ದಿಮ್ಮಿಗಳ ಕಟ್ಟೆ ಕಟ್ಟಿ ಸುತ್ತ ಮುತ್ತಲ ಭೂಮಿಗೆ ನೀರು ಒದಗಿಸಲಾಗುತ್ತದೆ. ಬೇಸೆಗೆಯ ಕೊನೆಯಲ್ಲಿ ಕಟ್ಟೆಯನ್ನು ತೆಗೆದು ಹಾಕಲಾಗುತ್ತದೆ. ಅಥವಾ ಪ್ರವಾಹಕ್ಕೆ ಕೊಚ್ಚಿಹೋಗಲು ಬಿಡಲಾಗುತ್ತದೆ. ಈ ಕಾರಣದಿಂದ ಈ ಪ್ರದೇಶದಲ್ಲಿ ಉಳಿದಿರುವ ಜಲಾಶಯಗಳು ಅತಿ ವಿರಳ.

ಮಧ್ಯಂತರ ಪ್ರದೇಶ: ಮಲೆನಾಡಿಗೂ ಬಯಲುನಾಡಿಗೂ ನಡುವೆ ಸುಮಾರು ೨೦ ರಿಂದ ೪೦ ಕಿ.ಮೀ ಅಗಲವಾಗಿ ಹಬ್ಬಿರುವ ಕಿರಿದಾದ ಸೀಳು, ಮಧ್ಯಂತರ ಪ್ರದೇಶ. ಇಲ್ಲಿ ಮಳೆ ೬೦೦ ಮಿ.ಮಿ. ನಿಂದ ೧೩೦೦ ಮಿ.ಮಿ. ವರೆಗೆ ಆಗುತ್ತದೆ. ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ದಕ್ಷಿಣದಲ್ಲಿ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು ಜಿಲ್ಲೆಗಳ ಕೆಲವು ಭಾಗಗಳು ಹಾಗೂ ಉತ್ತರದಲ್ಲಿ ಧಾರವಾಡ, ಬೆಳಗಾಂ ಜಿಲ್ಲೆಗಳ ಭಾಗಗಳು ಈ ಪ್ರದೇಶದಲ್ಲಿವೆ. ದಕ್ಷಿಣದಲ್ಲಿ ಪ್ರಧಾನವಾಗಿರುವುದು ಕೆಂಪು ಮರಳು ಮಿಶ್ರಿತ ಜೇಡಿ ಹಾಗೂ ಜೇಡಿ ಮಣ್ಣು. ಉತ್ತರದಲ್ಲಿ ಕಪ್ಪು ಮಣ್ಣು ಹಾಗೂ ಕೆಂಪು ಮರಳು ಮಿಶ್ರಿತ ಜೇಡಿ ಮಣ್ಣು ಕಾಣಿಸಿಗುತ್ತದೆ. ಭತ್ತ, ಜೋಳ, ಕಾಳುಗಳು ಹಾಗೂ ಕಬ್ಬು ಇಲ್ಲಿನ ಮುಖ್ಯ ಬೆಳೆಗಳು. ಉತ್ತರ ಭಾಗದಲ್ಲಿ ಹತ್ತಿಯು ಬೆಳೆಯಲಾಗುತ್ತದೆ.

ಮಧ್ಯಂತರ ಪ್ರದೇಶ, ರಾಜ್ಯದ ಒಟ್ಟು ಕೃಷಿ ಯೋಗ್ಯ ಭೂಮಿಯಲ್ಲಿ ಶೇ ೧೫ರಷ್ಟಿದೆ. ಈ ಪ್ರದೇಶಕ್ಕೆ ಸೇರಿರುವ ಬೆಳಗಾಂ, ಧಾರವಾಡ ಜಿಲ್ಲೆಗಳ ಪಶ್ಚಿಮ ಭಾಗಗಳಲ್ಲಿ ಹಾಗೂ ಮುಖ್ಯವಾಗಿ ಪುಣೆ – ಹರಿಹರ ರಸ್ತೆಯ ಪಶ್ಚಿಮಕ್ಕೆ ಮಳೆ ವರ್ಷಕ್ಕೆ ೬೦೦ ಮಿ.ಮಿ. ನಿಂದ ೧೩೦೦ ಮಿ.ಮಿ ವರೆಗೆ ಇರುತ್ತದೆ. ಈ ಪ್ರದೇಶದ ದಕ್ಷಿಣದಲ್ಲಿರುವ, ಮೈಸೂರು, ಹಾಸನ ಜಿಲ್ಲೆಗಳ ನೈಋತ್ಯಭಾಗಗಳಲ್ಲಿ ಹಾಗೂ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಭಾಗಗಳಲ್ಲಿ ವಾರ್ಷಿಕ ಮಳೆ ೬೦೦ ರಿಂದ ೧೦೦೦ ಮಿ.ಮಿ. ನಷ್ಟಿದ್ದು ಸ್ಥಳದಿಂದ ಸ್ಥಳಕ್ಕೆ ಬೇರೆ ಬೇರೆಯಾಗಿರುತ್ತದೆ. ಕಡಿಮೆ ಮಳೆಯ ಪ್ರದಶೇಗಳಲ್ಲಿ ಮಳೆ ನೀರಿಗೆ ಪೂರಕವಾಗಿ ನೀರಾವರಿಯೂ ಅಗತ್ಯ. ಕಣಿವೆಗಳಿಗೆ ಅಡ್ಡಲಾಗಿ ಸಣ್ಣ ಸಣ್ಣ ಸಂಗ್ರಹಣಾ ಕಟ್ಟೆಗಳನ್ನು ಕಟ್ಟಲಾಗಿದೆ. ಈ ನೀರಾವರಿ ಕಾಮಗಾರಿಗಳಿಂದ ಭತ್ತ ಮತ್ತು ಕಬ್ಬನ್ನು ಬೆಳೆಯಲಾಗುತ್ತದೆ.

ಬಯಲು ಪ್ರದೇಶ : ಈಶಾನ್ಯದಲ್ಲಿ ಬಿದರೆ ಮತ್ತು ಗುಲಬರ್ಗಾದ ಕೊಂಚ ಭಾಗಗಳನ್ನು ಬಿಟ್ಟರೆ ರಾಜ್ಯದ ಉಳಿದ ಭಾಗವೆಲ್ಲ (ರಾಜ್ಯದ ಕೃಷಿಯೋಗ್ಯ ಭೂಮಿಯ ಶೇ.೭೨ ಭಾಗ) ಬಯಲು ಪ್ರದೇಶಕ್ಕೆ ಸೇರಿದ್ದು. ಈ ಶುಷ್ಕ ವಲಯದಲ್ಲಿ ಮಳೆ ಸ್ಥಳದಿಂದ ಸ್ಥಳಕ್ಕೆ ತುಂಬ ಹೆಚ್ಚು ಕಡಿಮೆಯಾಗಿರುತ್ತದೆ. ೮೦೦ ಮಿ.ಮಿ ನಿಂದ ಹಿಡಿದು ಎಷ್ಟೋ ಕಡೆ ೪೦೦ ಮಿ.ಮಿ ಗೂ ಕಡಿಮೆ ಇರುತ್ತದೆ. ಇಲ್ಲಿ ದಕ್ಷಿಣ ಭಾಗ ವಿನಾ ಉಳಿದಡೆ ದಟ್ಟ ಕಪ್ಪು ಮಣ್ಣು ಪ್ರಧಾನ. ದಕ್ಷಿಣದಲ್ಲಿ ಕಪ್ಪು ಮಣ್ಣಿನ ಜೊತೆಗೆ ಕೆಂಪು ಮಿಶ್ರಿತ ಜೇಡಿಯು ಸೇರಿರುತ್ತದೆ. ಇಲ್ಲಿನ ಪ್ರಧಾನ ಬೆಳೆಗಳು ಜೋಳ ಸಾವೆ ರಾಗಿ ಮುಂತಾದ ಧಾನ್ಯಗಳು, ಬೇಳೆಕಾಳು, ಮೆಣಸಿನಕಾಯಿ, ಎಣ್ಣೆಕಾಳು, ಮತ್ತು ಹತ್ತಿ. ದಕ್ಷಿಣದಲ್ಲಿ ಭತ್ತ ಕಬ್ಬೂ ಸಹ ಬೆಳೆಯುತ್ತಾರೆ. ತುಂಗಭದ್ರಾ ನದಿಯ ಮೇಲಣ ಉತ್ತರ ಭಾಗಕ್ಕೆ ಭೀಮಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ನೀರು ಸಿಗುತ್ತದೆ. ಇವೆಲ್ಲ ಕೃಷ್ಣಾ ನದೀ ಜಾಲಕ್ಕೆ ಸೇರಿದವು. ಗುಲಬರ್ಗಾ ಬಿಜಾಪುರ ಬೆಳಗಾಂ ಧಾರವಾಡ ರಾಯಚೂರು ಜಿಲ್ಲೆಗಳು ಈ ಭಾಗಕ್ಕೆ ಸೇರಿವೆ. ಬಯಲು ಪ್ರದೇಶದ ಮಧ್ಯಭಾಗಕ್ಕೆ ಸೇರಿದ ಬಳ್ಳಾರಿ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳು ಬಹುತೇಕ ವೇದಾವತಿ ನದೀ ಬಯಲಿನಲ್ಲಿದೆ. ದಕ್ಷಿಣ ಒಣಪ್ರದೇಶದ ಪಶ್ಚಿಮದ ಭಾಗ ಮೈಸೂರು ಮಂಡ್ಯ ಹಾಸನ ಜಿಲ್ಲೆಗಳನ್ನು ಒಳಗೊಂಡಿದ್ದು, ಕಾವೇರಿ ಬಯಲಿನಲ್ಲಿದೆ. ಪೂರ್ವಭಾಗ ಬೆಂಗಳೂರು, ಕೋಲಾರ ಜಿಲ್ಲೆಗಳನ್ನು, ತುಮಕೂರು ಜಿಲ್ಲೆಯ ಭಾಗಗಳನ್ನು ಒಳಗೊಂಡಿದ್ದು ಬಹುಮಟ್ಟಿಗೆ ಪಾಲಾರು ಮತ್ತು ಪೆನ್ನಾರು ನದಿಗಳ ಬಯಲಿಗೆ ಸೇರಿದೆ. ಬಯಲುಪ್ರದೇಶದ ದಕ್ಷಿಣ ಭಾಗ ಮಾತ್ರ ನೈಋತ್ಯ ಹಾಗೂ ಈಶಾನ್ಯ ಮಾರುತಗಳೆರಡರಿಂದಲೂ ಮಳೆಯನ್ನು ಪಡೆಯುತ್ತದೆ.

ಕೃಷಿಯೋಗ್ಯ ಭೂಮಿಯ ಬಹುಪಾಲನ್ನು ಒಳಗೊಂಡಿರುವ ಬಯಲು ಪ್ರದೇಶ ಅಡಿಗಡಿಗೆ ಬರಕ್ಕೆ ಈಡಾಗುತ್ತದೆ. ಈ ಭಾಗದಲ್ಲಿ ಅತ್ಯಂತ ಪ್ರಾಚೀನ ದಾಖಲೆ ಪಡೆದಿರುವ ಮಳೆಯ ವೈಫಲ್ಯ ದುರ್ಗಾದೇವಿ ಮಹಾಕ್ಷಾಮ. ೧೨೯೬ರಲ್ಲಿ ಆರಂಭವಾದ ಆ ಕ್ಷಾಮ ನರ್ಮದೆಗೆ ದಕ್ಷಿಣ ಭಾರತವನ್ನೆಲ್ಲ ಅವರಿಸಕೊಂಡು, ಸುಮಾರು ಹನ್ನೆರಡು ವರ್ಷ ಇತ್ತೆಂದೂ ಹೇಳಲಾಗಿದೆ. ಸಕಾಲದಲ್ಲಿ ಮಳೆ ಕಿಂಚಿತ್ತೂ ಬಾರದಿದ್ದುದೇ ಆ ಕ್ಷಾಮಕ್ಕೆ ಕಾರಣ. ಮತ್ತೆ ೧೪೧೯ರಲ್ಲಿ ಮಳೆಯ ವೈಫಲ್ಯದಿಂದ ದಖನ್ ಮತ್ತು ಕರ್ನಾಟಕದಲ್ಲಿ ಬರ ಬಂದಿತ್ತು. ಆಗ ಅಹಮದ್ ಷಾ ಬಹುಮನಿ(೧೪೧೯ – ೧೪೩೧) ತನ್ನ ಸೇನೆಗಳಿಗೆ ಸಂಬಳ ಹೆಚ್ಚಿಸಿದನಂತೆ ಹಾಗೂ ಬಡವರ ಸಲುವಾಗಿ ಸಾರ್ವಜನಿಕ ದಿನಸಿ ಮಳಿಗೆಗಳನ್ನು ತೆರದನಂತೆ. ಪುನಃ ೧೪೨೦ರಲ್ಲಿ ಮಳೆ ಹೋಯಿತು. ೧೪೭೨ರಲ್ಲಿ ಹಾಗೂ ೧೪೭೩ ವಿಶೇಷ ಸಂಕಷ್ಟದ ಕಾಲ ಎನ್ನಲಾಗಿದೆ. ಈ ಎರಡು ವರ್ಷ ಯಾವ ಬಿತ್ತನೆಯೂ ಆಗಲಿಲ್ಲ. ಅನೇಕರು ಸತ್ತರು. ಅನೇಕರು ಊರು ಬಿಟ್ಟು ಹೋದರು, ಮೂರನೆಯ ವರ್ಷ ಮಳೆ ಬಂತು. ಆದರೆ ಭೂಮಿ ಉಳಲು ಆಳುಗಳೇ ಉಳಿದಿರಲಿಲ್ಲ.[5]

ಈ ಪ್ರದೇಶದಲ್ಲಿ ಮಳೆಯ ದಿನಗಳು ೪೦ಕ್ಕೂ ಕಡಿಮೆ, ಮಧ್ಯಭಾಗದಲ್ಲಿ (ಬಳ್ಳಾರಿ ಚಿತ್ರದುರ್ಗ) ೨೯ದಿನ ಮಾತ್ರ. (೧೦ಸೆಂಟ್ ಅಂದರೆ ೨ – ೫ ಮಿ.ಮಿ. ಗಿಂತ ಹೆಚ್ಚು ಮಳೆ ಬಿದ್ದ ದಿನವನ್ನು ಒಂದು ಮಳೆಯ ದಿನ ಎಂದು ಗಣಿಸಲಾಗುತ್ತದೆ). ಮಳೆಯ ದಿನಗಳಲ್ಲಿ ಶೇ.೧೦ ರಷ್ಟಲ್ಲೂ ೨೫ ಮಿ.ಮಿ. ಅಥವಾ ಹೆಚ್ಚು ಮಳೆ ಆಗುವುದಿಲ್ಲ.[6]

ತುಂಗಭದ್ರಾ, ಮಲಪ್ರಭಾ, ಘಟಪ್ರಭಾ, ಭೀಮಾ ಮುಂತಾದ ದೊಡ್ಡ ನದಿಗಳಲ್ಲಿ ಬೇಸಿಗೆಯಲ್ಲಿ ಹೆಚ್ಚು ಕಡಿಮೆ ನೀರು ಇರುವುದೇ ಇಲ್ಲ. ಇತರ ಸಣ್ಣ ಹೊಳೆಗಳು ಹರಿಯುವುದು ಮಳೆಗಾಲದಲ್ಲಿ ಕೆಲವು ದಿನಗಳು ಮಾತ್ರ. ಅಲ್ಲದೆ ತುಂಗಭದ್ರಾ ನದಿಯ ಉತ್ತರದ ಬಯಲು ಬಹುಪಾಲು ಸಮಮಟ್ಟಾದುದು. ಕಣಿವೆಗಳಿಗೆ ಅಡ್ಡಲಾಗಿ ಕಟ್ಟೆಕಟ್ಟಲು ಅಲ್ಲಿ ಅವಕಾಶವೇ ಇಲ್ಲ. ನೀರಾವರಿ ನಡೆಯುವುದೆಲ್ಲ ನದಿಗಳ ಪಕ್ಕಗಳಲ್ಲಿ ಹಾಗೂ ಭಾವಿಗಳು ಇರುವ ಹಳ್ಳಿಗಳ ಬಳಿಯ ಸಣ್ಣ ಸಣ್ಣ ತಾಕುಗಳಲ್ಲಿ ಮಾತ್ರ. ಇದೇ ಕಾರಣಕ್ಕಾಗಿ ಇಂದಿಗೂ ಈ ಪ್ರದೇಶದ ಉತ್ತರ ಭಾಗದಲ್ಲಿ ನೀರಾವರಿ ಕೆರೆಗಳು ಇರುವುದು ಅತಿ ವಿರಳ. ತುಂಗಭದ್ರಾ ನದಿಗೆ ಅಡ್ಡಲಾಗಿ ಸಣ್ಣ ಸಣ್ಣ ಅಣೆಗಳನ್ನು ಕಟ್ಟಿ, ನೀರನ್ನು ನೀರಾವರಿಗೆ ಹರಿಯಿಸುವುದನ್ನು ಮೊಟ್ಟ ಮೊದಲಿಗೆ ಯೋಚಿಸಿ, ಹಾಗೆ ಮಾಡಿದವರು ವಿಜಯನಗರದ ಅರಸರು ೧೪ನೆಯ ಶತಮಾನದಿಂದ ಈಚೆಗೆ. ಘಟಪ್ರಭಾ, ಮಲಪ್ರಭಾ, ಭೀಮಾ ಅಥವಾ ಕೃಷ್ಣಾ ನದಿಗಳಿಗೆ ಹಿಂದೆ ಅಂಥ ಕಾಮಗಾರಿಗಳು ಇದ್ದ ಬಗ್ಗೆ ಯಾವ ಸಾಕ್ಷ್ಯವೂ ಇಲ್ಲ.

ಬಯಲು ಪ್ರದೇಶದ ಉತ್ತರದ ಭಾಗ ನೈಋತ್ಯ ಮಾರುತದಿಂದ ಮಾತ್ರ ಜೂನ್ ನಿಂದ ಸೆಪ್ಟಂಬರ್ ನಾಲ್ಕು ತಿಂಗಳು ಮಳೆ ಪಡೆಯುತ್ತದೆ. ದಕ್ಷಿಣ ಭಾಗದಲ್ಲಾದರೂ ಅರು – ಏಳು ತಿಂಗಳು ಮಳೆ ಬರುತ್ತದೆ. ಈ ಭೂಪ್ರದೇಶದಲ್ಲಿ ಅನೇಕ ಸಣ್ಣ ಸಣ್ಣ ಬೆಟ್ಟ ಗುಡ್ಡದ ಸಾಲುಗಳಿದ್ದು ಜಲಾಶಯಗಳ ನಿರ್ಮಾಣಕ್ಕೆ ಅವಕಾಶ ಇರುತ್ತದೆ.

ಉತ್ತರದ ಒಣ ಪ್ರದೇಶದಲ್ಲಿ ಮಣ್ಣು ಪ್ರಧಾನವಾಗಿ ಅತಿ ಕಪ್ಪು ಅಥವಾ ಸುಮಾರು ಕಪ್ಪು (ಎರೆ ಮಣ್ಣು). ಒಂದೇ ಸಮನೆ ನೀರು ಹಾಯಿಸಿದರೆ ಅದು ಜೌಗು ಆಗುತ್ತದೆ. ಆದರೆ ದಕ್ಷಿಣ ಭಾಗದಲ್ಲಿ ಬಹುಮಟ್ಟಿಗೆ ಇರುವುದು ಕೆಂಪು ಜೇಡಿಮಣ್ಣು, ಅದು ನಿರಂತರ ನೀರಾವರಿಯಿಂದ ಕೆಟ್ಟ ಪರಿಣಾಮ ಉಂಟುಮಾಡುವುದಿಲ್ಲ.

ಈ ಅಂಶಗಳೆಲ್ಲ ಸೇರಿದುದರ ಫಲವೇ ದಕ್ಷಿಣ ಭಾಗದಲ್ಲಿ ಬಹು ಸಂಖ್ಯೆಯಲ್ಲಿ ನೀರಾವರಿ ಕೆರೆಗಳು ನಿರ್ಮಿತವಾದುದ್ದು. ಮೈಸೂರು ರಾಜ್ಯದ ಕೆರೆಗಳ ಕ್ರಮಬದ್ಧ ದುರಸ್ತಿಗಾಗಿ ತನ್ನ ಗಮನವಿತ್ತ ಮೇಜರ್ ಸ್ಯಾಂಕಿಯ ಮಾತು ಹೀಗಿದೆ:

“ಈ ಪ್ರದೇಶದಲ್ಲಿ ಜಲಸಂಗ್ರಹಣೆಯ ತತ್ವವನ್ನು ಎಷ್ಟರಮಟ್ಟಿಗೆ ಅನುಸರಿಸಲಾಗಿದೆ ಎಂದರೆ, ಈ ವಿಶಾಲ ಪ್ರದೇಶದಲ್ಲಿ ಹೊಸ ಕೆರೆಗೆ ಸೂಕ್ತವಾದ ನಿವೇಶನ ಹುಡುಕಲು ತುಂಬಾ ಚಾತುರ್ಯ ಬೇಕಾದೀತು. ಜೀರ್ಣೋದ್ಧಾರವೇನೊ ಸಾಧ್ಯವಿದೆ. ಆದರೆ ಈ ಬಗೆಯ ಹೊಚ್ಚ ಹೊಸ ಕೆಲಸವನ್ನು ಈ ಪ್ರದೇಶದಲ್ಲಿ ಅರಂಭಿಸಿದರೆ ಅದೇ ಬಯಲಿನ ಕೆಳಗಿನ ಇನ್ನೊಂದು ಯಾವುದಾದರೂ ಕೆರೆಗೆ ನೀರು ಹರಿಯುವುದು ತಪ್ಪಿಹೋಗುವುದು ಖಂಡಿತ. ಇದರಿಂದ ಪಟ್ಟಭದ್ರ ಹಿತಾಸಕ್ತಿಗಳು ಕೈಹಾಕಿದಂತಾಗುತ್ತದೆ.[7]

ಈಶಾನ್ಯದ ಮಧ್ಯಂತರ ಪ್ರದೇಶ :ಈಶಾನ್ಯದ ಮಧ್ಯಂತರ ಪ್ರದೇಶದಲ್ಲಿ ವರ್ಷಕ್ಕೆ ೮೦೦ ರಿಂದ ೯೦೦ ಮಿ.ಮಿ. ಮಳೆ ಬರುತ್ತದೆ. ಅದು ಬಹಪಾಲು ದಖನೀ ಕಲ್ಲು ಭೂಮಿ. ಬಹುಮಟ್ಟಿಗೆ ಕಪ್ಪು ನೆಲ. ನೀರು ಬಸಿಯುವುದು ತೀರ ಕಡಿಮೆ. ಮಂಜ್ರಾ ನದಿ ಹಾಗೂ ಅದರ ಉಪನದಿಯಾದ ಕಾರಂಜ ಈ ಪ್ರದೇಶಗಳಲ್ಲಿ ಹರಿಯುತ್ತವೆ. ಜೋಳ, ಮೆಕ್ಕೆಜೋಳ, ಹತ್ತಿ, ಮೆಣಸಿನಕಾಯಿ ಇಲ್ಲಿ ಬೆಳೆಯಲಾಗುತ್ತದೆ. ಹೊಳೆ ಕಣಿವೆಗಳು ತೀರ ವಿರಳವಾದುದರಿಂದ ಇಲ್ಲಿ ಸಣ್ಣ ಕೆರೆಗಳ ನಿರ್ಮಾಣ ಆಗಿಲ್ಲ. ಬಹುಪಾಲು ನೀರಾವರಿ ಆಗುವುದೆಲ್ಲ ಭಾವಿಗಳ ಸುತ್ತಮುತ್ತಲೇ.

ಅಂತರ್ಜಲ:

ಎಲ್ಲೆಲ್ಲಿ ಕೆರೆ ನಿರ್ಮಾಣ ಸಾಧ್ಯವಿಲ್ಲವೋ, ಎಲ್ಲಿಲ್ಲಿ ಅಂತರ್ಜಲ ಸುಲಭವಾದ ಆಳದಲ್ಲಿ ಸಿಗುವುದೋ, ಅಲ್ಲಲ್ಲಿ ಆ ಜಲವನ್ನು ನೀರಾವರಿಗೆ ಬಳಸಲಾಗಿದೆ. ಅಂತರ್ಜಲ ಇರುವುದನ್ನು ಗೊತ್ತುಪಡಿಸುವುದು ನಿಸರ್ಗ ಹಾಗೂ ಭೂರಚನೆಯ ಲಕ್ಷಣಗಳು. ಭೂವಿಜ್ಞಾನ ರೀತ್ಯಾ ಕರ್ನಾಟಕದಲ್ಲಿ ಇರುವುದು ಬಹುಮಟ್ಟಿಗೆ ಪ್ರಾಚೀನ ಜೀವಿಯುಗದ ಹಿಂದಿನ ಜ್ವಾಲಾಮುಖಿ ಹಾಗೂ ರೂಪಾಂತರಗೊಂಡ ಕಲ್ಲುಗಳು. ಅಂಥ ಕಲ್ಲು ಮೇಲುಪದರದಲ್ಲಿ ಒಡ್ಡಿ ಕೊಂಡಿರಬಹುದು. ಅಥವಾ ಉಳಿದ ಹಾಗೂ ಸಾಗಿಬಂದ ಮಣ್ಣಿನ ತೆಳುಪದರದಿಂದ ಆವೃತವಾಗಿದ್ದಿರಬಹುದು. ಸಾಮಾನ್ಯವಾಗಿ ಆ ಕಲ್ಲನ್ನು ಸ್ಫಟಿಕ ಶಿಲೆ ಎನ್ನುತ್ತಾರೆ. ಜಲ ಭೂವಿಜ್ಞಾನದ ರೀತ್ಯಾ ಗಟ್ಟಿಕಲ್ಲು ಎನ್ನಲಾಗಿದೆ. ಸುಟ್ಟಕಲ್ಲು (ಗ್ರಾನೈಟು), ಗ್ನೇಸ್‌ಕಲ್ಲು, ಹಾಗೂ ಪದರಕಲ್ಲು (ಚಿಸ್ಟ್) ಎಂಬುವು ಮುಖ್ಯ ಬಗೆಯ ಕಲ್ಲುಗಳು. ರಾಜ್ಯದ ಉತ್ತರ ಭಾಗದಲ್ಲಿ ಆ ಕಲ್ಲುಗಳು, ದಖನ್ನಿನ ಲಾವಾ ಪದರಗಳು(ಕರಿಯಕಲ್ಲು ಬೇಸಾಲ್ಟ್) ಒಂದರ ಮೇಲೆ ಒಂದರಂತೆ ಶೇಖರವಾಗಿವೆ. ಕೆಲವು ಕಡೆಗಳಲ್ಲಿ ಕಲಾದಗಿಯ ಮರಳುಕಲ್ಲುಗಳಿಂದಲೂ ಸುಣ್ಣ ಕಲ್ಲಿನ ಬಂಡೆಗಳಿಂದಲೂ ಆವೃತವಾಗಿದೆ.[8]

ಅಗ್ನಿಶಿಲೆ ಹಾಗೂ ರೂಪಾಂತರಿಕ ಕಲ್ಲುಗಳು ಕೆಲವೆಡೆಗಳಲ್ಲಿ ೩೦ ಮೀಟರ್ ಆಳಕ್ಕೆ ಶಿಥಿಲಗೊಂಡಿವೆ, ಕಲ್ಲಿನ ಲಕ್ಷಣಗಳು, ಭೂ ಮೇಲ್ಮೈ ಲಕ್ಷಣ ಹಾಗೂ ಹವಾಮಾನ ಮುಂತಾದವು ಈ ಆಳವನ್ನು ನಿರ್ಧರಿಸುವ ಅಂಶಗಳು. ಅತ್ಯಂತ ಆಳಕ್ಕೆ ಶಿಥಿಲಗೊಂಡಿರುವ ವಲಯವೆಂದರೆ ಸಾಮಾನ್ಯವಾಗಿ ಇಳಿಜಾರಿನಲ್ಲಿ ಕಿರಿದಾಗುವ ವಿಶಾಲ ಕಣಿವೆಯ ಅಡಿಯ ಪ್ರದೇಶ. ಆಲಶಾಸ್ತ್ರದ ಪ್ರಕಾರ ಎಲ್ಲ ಬಗೆಯ ಗಟ್ಟಿಕಲ್ಲುಗಳು ಅಂತರ್ಜಲದ ಅಭಿವೃದ್ಧಿಗೆ ಅಸೂಕ್ತವಾದುವು. ಕಲ್ಲುಗಳ ಸೀಳು ಹಾಗೂ ಬಿರುಕುಗಳಲ್ಲಿ ಮಾತ್ರ ಕೊಂಚ ನೀರು ನಿಲ್ಲಲು ಹಾಗೂ ಹಾಯಲು ಅವಕಾಶ ಇರುತ್ತದೆಯಾಗಿ ಅಂಥ ಕಡೆ ಸ್ವಲ್ಪ ಜಲಾಭಿವೃದ್ಧಿ ಸಾಧ್ಯ. ಗಟ್ಟಿಕಲ್ಲುಗಳ ಪೈಕಿ ಕರಿಕಲ್ಲು(ಬೇಸಾಲ್ಟ್) ಅತ್ಯುತ್ತಮ ಜಲಧರ. ಅನಂತರ ಸುಟ್ಟಕಲ್ಲು (ಗ್ರಾನೈಟ್) ಗ್ನೇಸ್ ಹಾಗೂ ಪದರಗಲ್ಲು(ಷಿಸ್ಟ್) ಎಂದು ಅಧ್ಯಯನಗಳಿಂದ ತೋರಿಬಂದಿದೆ.[9]

ಒಣ ಪ್ರದೇಶಗಳಲ್ಲಿ ಸರಾಸರಿ ವಾರ್ಷಿಕ ಮಳೆ ೭೦೦ ಮಿ.ಮಿ. ಅಥವಾ ಇನ್ನೂ ಕಡಿಮೆ. ಅಲ್ಲಿ ನೆಲದಲ್ಲಿ ಜಿನುಗಿ ಅಂತರ್ಜಲವಾಗಿ ಮಾರ್ಪಾಡಾಗುವ ಮಳೆ ನೀರಿನ ಪ್ರಮಾಣ ಅತಿ ಅಲ್ಪ. ಪ್ರತಿವರ್ಷ ಅಂತರ್ಜಲವಾಗಿ ಮಾರ್ಪಾಡಾಗುವ ಮಳೆ ನೀರಿನ ಭಾಗ ಶೇಕಡ ೩ ರಿಂದ ೫ರ ವರೆಗೆ ಮಾತ್ರ ಇರುವುದೆಂದು ಅಂದಾಜು ಮಾಡಲಾಗಿ[10]. ನಿರಂತರವಾಗಿ ಹಾಗೂ ಭಾರಿಯಾಗಿ ಮಳೆಯಾಗುವ ತಿಂಗಳುಗಳಲ್ಲಿ ಮಾತ್ರ ನೀರು ಅಂತರ್ಜಲವಾಗಿ ಸಂಗ್ರಹವಾಗುತ್ತದೆ. ಬಹುಪಾಲು ತಿಂಗಳುಗಳಲ್ಲಿ ಬೀಳುವ ಅಲ್ಪಸಲ್ಪ ಮಳೆಯೆಲ್ಲವೂ ಆವಿಯಾಗಿ ಹೋಗುವುದಕ್ಕೆ ಸರಿಹೋಗುತ್ತದೆ. ಈ ಕಾರಣಗಳಿಂದಾಗಿ ಭಾವಿ ನೀರಾವರಿಯ ಅಭಿವೃದ್ಧಿಯು ಸಾಮಾನ್ಯವಾಗಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಿಗೆ ಸೀಮಿತವಾಗಿದೆ. ಒಣ ಪ್ರದೇಶದಲ್ಲಿ ಅಥವಾ ಅಲ್ಪ ಮಳೆಯ ಪ್ರದೇಶದಲ್ಲಿ ಸಸ್ಯ ಅತಿ ಕಡಿಮೆ. ಕಲ್ಲು ಮತ್ತು ಮಣ್ಣಿನ ಮೇಲ್ಭಾಗ ಬೋಳಾಗಿರುತ್ತದೆ. ಎಲ್ಲಿ ಕಲ್ಲು ಶಿಥಿಲವಾಗಿ ಆಳದಲ್ಲಿ ಇರುವುದೋ ಹಾಗೂ ಮೇಲು ಪದರದಲ್ಲಿ ಚೂರು ಚೂರಾಗಿರುವುದೋ, ಎಲ್ಲಿ ಕಲ್ಲುಗಳ ಸೀಳುಗಳು ಬಿರುಕುಗಳು ತೆರೆದುಕೊಂಡಿರುವುದೋ, ಮಣ್ಣಿನಿಂದ ಮುಚ್ಚಿ ಹೋಗದೆ ಇರುವದೋ, ಅಲ್ಲೆಲ್ಲ ಬೀಳುವ ಅಲ್ಪಸ್ವಲ್ಪ ಮಳೆಯ ನೀರು ಕೂಡಲೇ ನೆಲದೊಳಕ್ಕೆ ಜಿನುಗಿಹೋಗುತ್ತದೆ. ಅಂಥ ಸ್ಥಳಗಳಲ್ಲಿ ಭಾವಿಗಳನ್ನು ತೋಡಲಾಗುತ್ತದೆ. ನೀರಾವರಿ ಸೊಗಸಾಗಿ ಆಗುತ್ತದೆ.

(ಟಿಪ್ಪಣಿಇಲ್ಲಿ ಹಾಗೂ ಮುಂದಿನ ಅಧ್ಯಾಯನಗಳಲ್ಲಿ ಕ್ರಿ.ಪೂ. ಅಥವಾ ಕ್ರಿ.ಶ ಎಂದು ಇಸವಿಗೆ ಮುಂದೆ ಹೇಳದಿದ್ದಲ್ಲಿ ಅದನ್ನು ಕ್ರಿ.ಶ ಎಂದೇ ಭಾವಿಸಬೇಕು).

 

[1]ಫ್ರಾನ್ಸಿಸ್ ಬುಕಾನನ್”ಎ ಜರ್ನಿ ಫ್ರಂ ಮದ್ರಾಸ್ ಥ್ರೂ ದಿ ಕಂಟ್ರೀಸ್ ಅಫ್ ಮೈಸೂರು ಕೆನರಾಸ್ ಅಂಡ್ ಮಲಬಾರ್” ಸಂ.೧ ಪು.೪೯ ಏಷಿಯನ್ ಎಜ್ಯೂಕೆಷನಲ್ ಸರ್ವಿಸಸ್, ನವದೆಹಲಿ ೧೯೮೮.

[2]ಅದೇ ಪು. ೨೬೭.

[3]ಭಾರತ ಸರ್ಕಾರದ ಕಾರ್ಯದರ್ಶಿಯವರಿಗೆ ಮೈಸೂರು ಚೀಫ್ ಕಮಿಷನರ್ ಬರೆದ ದಿ.೪.೩.೧೮೭೧ ಪತ್ರಕ್ಕೆ ಲಗತ್ತಿಸಿದ ಮೇಜರ್ ಸ್ಯಾಂಕಿಯವರ ಟಿಪ್ಪಣಿ, ಟಿಪ್ಪಣಿ ನಂ.೬ ಪ್ಯಾರಾ ೩.

[4] “ಹ್ಯಾಂಡ್ ಬುಕ್ ಅಫ್ ಹೈಡ್ರೋ ಮೀಟಿರಿಯಾಲಜಿ ಅಂಡ್ ಹೈಡ್ರಾಲಾಜಿ ಇನ್ ಕರ್ನಾಟಕ” ಸಂ.೧ ಭಾಗ ೧ ಪು.೫೨-ಕರ್ನಾಟಕ ಸರ್ಕಾರ ಮುಖ್ಯ ಇಂಜನಿಯರ್ ವಾಟರ್ ರಿಸೋರ್ಸಸ್ ಡೆವಲಪ್‌ಮೆಂಟ್ ಅರ್ಗೆನೈಸೇಷನ್ (ಡಬ್ಲ್ಯೂ.ಆರ್.ಡಿ.ಓ) ೧೯೮೬

[5]ಗ್ರ್ಯಾಂಟ್ ಡಫ್ ಅಂಡ್ ಬ್ರಿಗ್ಸ್ ಫೆರಿಸ್ಟ್, ಬೊಂಬಾಯಿ ಪ್ರಸಿಡೆನ್ಸಿ ಗೆಜಿಟಿಯರ್-ಬೆಳಗಾಂ ಜಿಲ್ಲೆ-ಇದರಲ್ಲಿ ಉಲ್ಲೇಖಿತ ಪುಟ ೨೮೦-೮೬, ೧೮೮೪.

[6]ಹ್ಯಾಂಡ್ ಬುಕ್ ಆಫ್ ಹೈಡ್ರೊ ಮೀಟೆರಿಯಾಲಜಿ ಅಂಡ್ ಹೈಡ್ರಾಲಜಿ ಇನ್ ಕರ್ನಾಟಕ” ಪು.೫೯-೬೧

[7]ಚೀಫ್ ಕಮಿಷನರ್ ಆಫ್ ಮೈಸೂರು, ಅವರಿಗೆ ಮೇಜರ್ ಸ್ಯಾಂಕಿಯ ಪತ್ರ ತಾ.೧೯-೧೧-೧೮೬೬ ಪ್ಯಾರ ೧೨.

[8]ಹ್ಯಾಂಡ್ ಬುಕ್ ಆಫ್ ಹೈಡ್ರೋಮೀಟರಿಯಾಲಜಿ ಅಂಡ್ ಹೈಡ್ರಾಲಜಿ ಇನ್ ಕರ್ನಾಟಕ”ಪು.೧೬.

[9]ಹ್ಯಾಂಡ್ ಬುಕ್ ಆಫ್ ಹೈಡ್ರೋಮೀಟರಿಯಾಲಜಿ ಅಂಡ್ ಹೈಡ್ರಾಲಜಿ ಇನ್ ಕರ್ನಾಟಕ”ಪು.೧೬.

[10]ಬಿ.ಪಿ.ರಾಧಾಕೃಷ್ಣ- “ಗ್ರೌಂಡ್ ವಾಟರ್ ಡೆವಲಪ್ ಮಂಟ್ ಇನ್ ಮೈಸೂರ್ ಪಾಸ್ಟ್ ಅಂಡ್ ಪ್ಯೂಚರ್” ಪು.೪ ಡಿಪಾರ್ಟ್‌ಮೆಂಟ್ ಆಫ್ ಮೈನ್ಸ್ ಅಂಡ್ ಜಿಯಾಲಜಿ ಕರ್ನಾಟಕ ಸರ್ಕಾರ- ‘ಗ್ರೌಂಡ್ ವಾಟರ್ ಸ್ವಡೀಸ್’ ನಂ.೧೩೮. ೧೯೭೪.