ಇತಿಹಾಸ ಪೂರ್ವಕಾಲ:

ಪ್ರಾಚೀನ ಕರ್ನಾಟಕದಲ್ಲಿ ಅಂದರೆ ಇತಿಹಾಸ ಪೂರ್ವದಿಂದ ಹಿಡಿದು ಕ್ರಿ.ಶ ೧೩೩೬ರಲ್ಲಿ ವಿಜಯನಗರ ಸ್ಥಾಪನೆ ಆಗುವ ವರೆಗಿನ ಕಾಲದ ಕೆರೆ ನೀರಾವರಿಯ ಉಗಮವನ್ನು ಈ ಅಧ್ಯಾಯನದಲ್ಲಿ ಪರಿಶೀಲಿಸಲಾಗಿದೆ. ಅನಂರ ನೀರಾವರಿಯ ಅಭಿವೃದ್ಧಿಯಲ್ಲಿ ದೊರೆಗಳು, ಅವರ ಅಧಿಕಾರಿಗಳು ಹಾಗೂ ಪ್ರಜೆಗಳು ವಹಿಸಿದ ಪಾತ್ರವನ್ನು ಪರಾಮರ್ಶಿಸಲಾಗಿದೆ. ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಹಾಗೂ ಕರ್ನಾಟಕದಲ್ಲಿ ವಿಶೇಷವಾಗಿ ಕೆರೆ ನೀರಾವರಿಯ ಮೂಲವನ್ನು ಇತಿಹಾಸಪೂರ್ವ ಮಾನವನಲ್ಲಿ ಗುರುತಿಸಬಹುದು. ಇತಿಹಾಸ ಪೂರ್ವ ಮಾನವ ಸಸ್ಯ ಬೆಳೆಯುವುದರ ರಹಸ್ಯವನ್ನು ಅರಿತುಕೊಂಡು ಬೇಸಾಯಗಾರನಾಗಿ ಪರವರ್ತಿತನಾದ ಮೇಲೆಯೂ ಮಳೆಯನ್ನೇ ಪೂರಾ ನೆಚ್ಚಿಕೊಂಡಿದ್ದ. ಅವನ ವಾಸಸ್ಥಳದಲ್ಲಿ ಮಳೆಯೇನೊ ಸಮೃದ್ಧವಾಗಿರುತ್ತಿತ್ತು. ಅವನ ಸಂಖ್ಯೆ ಹೆಚ್ಚಿದಂತೆ ಮೂಲ ಸ್ಥಳಕ್ಕಿಂತ ಕಡಿಮೆ ಮಳೆ ಆಗುವ ಸ್ಥಳಗಳಿಗೂ ವಲಸೆ ಹೋಗಬೇಕಾಯಿತು. ಆಗ ಆತ ಮಳೆ ಅತ್ಯಲ್ಪವಾಗುವ ಅಥವಾ ಮಳೆಯೇ ಬಾರದಂಥ ಕಾಲದಲ್ಲಿ ತನ್ನ ಅಗತ್ಯವನ್ನು ಪೂರೈಸಲು ಮಳೆ ನೀರನ್ನು ಕೂಡಿಡುವ ತಂತ್ರವನ್ನು ಬೆಳೆಸಿಕೊಂಡು. ಜಲ – ನೆಲ ಎರಡರಲ್ಲೂ ವಾಸಿಸಿ ನೀರಿಗೆ ಅಡ್ಡ ಕಟ್ಟುವ ಬೀವರ್ ಪ್ರಾಣಿಯ ಹಾಗೆ, ಅವನೂ ಹೊಳೆಗಳಿಗೆ ಅಡ್ಡಲಾಗಿ ರೆಂಬೆ ಎಲೆ ಮಣ್ಣುಗಳನ್ನು ಬಳಸಿ, ಸಣ್ಣ ಸಣ್ಣ ಒಡ್ಡುಗಳನ್ನು ಕಟ್ಟಿದ. ಜೋರಾಗಿ ಮಳೆ ಬಿದ್ದಾಗ ಆ ಒಡ್ಡುಗಳು ಕೊಚ್ಚಿ ಹೋಗುತ್ತಿದ್ದವು. ಅವನ್ನು ಮತ್ತೆ ಕಟ್ಟುತ್ತಿದ್ದ. ಅಲ್ಲಿ ಸಂಗ್ರಹವಾದ ನೀರನ್ನು ಸಣ್ಣ ಕಾಲುವೆಗಳನ್ನು ತೋಡಿ ತನ್ನ ಹೊಲಗಳಿಗೆ ಹಾಯಿಸುತ್ತಿದ್ದ. ಹಾಗೆ ಹಾಯಿಸಲು ಆಗದೆ ಇದ್ದ ಕಡೆ ತಾನೇ ನೀರನ್ನು ಎತ್ತಿ ಹೊಲಗಳಿಗೆ ಬಿಡುತ್ತಿದ್ದ.

ದಖನ್ನಿನ ಅತ್ಯಂತ ಪ್ರಾಚೀನ ಜಲಾಶಯದ ಉದಾಹರಣೆಯನ್ನು ಪುಣೆಯ ಬಳಿಯ ಇನಾಂಗಾಂವ್ ನಲ್ಲಿ ಕಾಣಬಹುದು. ಅದನ್ನು ಗುಂಡುಕಲ್ಲು ಹಾಗೂ ಮಣ್ಣು ಗಾರೆಯಿಂದ ಕಟ್ಟಲಾಗಿತ್ತು. ಸುಮಾರು ೨೪೦ಮೀ ಉದ್ದ ಮತ್ತು ೨.೨. ಮೀ ಅಗಲವಿತ್ತು. ಸಮೀಪದ ನದಿಯೊಂದಕ್ಕೆ ಸೇರುವಂತೆ ಅದಕ್ಕೆ ಒಂದು ನೀರಾವರಿ ಕಾಲುವೆ ಇತ್ತು. ಅದು ಸುಮಾರು ಕ್ರಿ.ಪೂ.೧೫೦೦ ತಾಮ್ರಯುಗಕ್ಕೆ ಸೇರಿದ್ದು ಎನ್ನಲಾಗಿದೆ.[1]

ದಖನ್ ಹಾಗೂ ದಕ್ಷಿಣ ಭಾರತಗಳಲ್ಲಿ ತಾಮ್ರಯುಗದ ಜನರ ನಂತರ ಇದ್ದವರು, ಮಹಾಶಿಲಾಯುಗದ ಜನ. ಅವರು ತಮ್ಮ ಬೀಡುಗಳಿಗೆ ಬೆಟ್ಟದ ಪಕ್ಕದ ಸ್ಥಳವನ್ನು ಆರಿಸಿಕೊಂಡರು. ಬೆಟ್ಟದ ಇಳಿಜಾರಿನಿಂದ ಹರಿದುಬರುವ ಮಳೆನೀರನ್ನು ಕಣಿವೆಗಳಲ್ಲಿ ಅಡ್ಡಗಟ್ಟಿ ಸಂಗ್ರಹಿಸಿದರು. ಆ ಕೆರೆಗಳ ನೀರಿನಿಂದ ಫಲವತ್ತಾದ ಕೃಷಿಭೂಮಿ ಅವರಿಗೆ ಆಧಾರವಾಗಿತ್ತು. ಪ್ರಾಯಶಃ ಈ ಭಾಗದಲ್ಲಿ ಭತ್ತ ಬೆಳೆದವರಲ್ಲಿ ಅವರೇ ಮೊದಲಿಗರು. ಮಹಾಶಿಲಾಯುಗದ ಜನ ಮಹಾರಾಷ್ಟ್ರ, ಕರ್ನಾಟಕ, ಆಂಧ್ರ, ತಮಿಳುನಾಡುಗಳ ಭಾಗಗಳಲ್ಲೆಲ್ಲ ಹರಡಿಕೊಂಡು, ಅಲ್ಲೆಲ್ಲ ಜಲಾಶಯಗಳನ್ನು ಕಟ್ಟಿರಬೇಕು.[2]

ಮೌರ್ಯರು:

ಭಾರತಾದ್ಯಂತ ಆಳಿದ ಮೌರ್ಯರಿಂದ ಇತಿಹಾಸ ಯುಗ ಆರಂಭವಾಗುತ್ತದೆ (ಸುಮಾರು ಕ್ರಿ.ಪೂ. ೩೨೦). ಆ ವೇಳೆಗೆ ಕೆರೆ ನಿರ್ಮಾಣ ಶ್ರೇಷ್ಠತೆಯಲ್ಲಿ ಉನ್ನತಮಟ್ಟವನ್ನು ಹೊಂದಿತ್ತು. ಇದಕ್ಕೆ ಉದಾಹರಣೆ ಸೌರಾಷ್ಟ್ರದ ಜುನಾಗಡದ ಸುದರ್ಶನ ಸರೋವರ. ಕ್ರಿ.ಶ. ೧೫೦ರ ಶಕ ರುದ್ರಧಾಮನನ ಶಾಸನವು ಮೌರ್ಯರಿಂದ ಶಕರ ಕಾಲದ ವರೆಗಿನ ಈ ಸರೋವರದ ಇತಿಹಾಸವನ್ನು ತೋರಿಸುತ್ತದೆ. ಅದನ್ನು ಕಟ್ಟಿದವನು ಚಂದ್ರಗುಪ್ತ ಮೌರ್ಯನ ರಾಜ್ಯಪಾಲ ಪುಷ್ಯಗುಪ್ತ. ಅಶೋಕನ ರಾಜ್ಯಪಾಲ ತುಷಸ್ಪ ಅದಕ್ಕೆ ಕಾಲುವೆಗಳನ್ನು ಕಟ್ಟಿಸಿದ. ಮೌರ್ಯರ ನಂತರ ಸೌರಾಷ್ಟ್ರದಲ್ಲಿ ಆಳಿದವರು ಶಕರು. ಶಕವಂಶದ ರುದ್ರದಾಮನ್‌ನ ಕಾಲದಲ್ಲಿ ಭಾರಿ ಬಿರುಗಾಳಿ ಎದ್ದು, ಆ ಕೆರೆಯ ಏರಿ ಒಡೆಯಿತು. ಸುದರ್ಶನ ಸರೋವರದ ನೀರೆಲ್ಲ ಒಡಕಿನಲ್ಲಿ ಹರಿದು ಹೋಗಿ ಕೆರೆ ಅಂಗಳ ಬರಿದಾಯಿತು. ಸುದರ್ಶನ ದುರ್ದರ್ಶನ ಆಯಿತು, ಚೆಲುವಾಗಿದ್ದುದು ವಿಕಾರವಾಯಿತು ಎನ್ನುತ್ತಾನೆ, ಶಾಸನದ ಕವಿ. ರುದ್ರದಾಮನ್ ಆ ಬಿರುಕನ್ನು ಸರಿ ಪಡಿಸಿದ. ತಾನು ಅಣೆಕಟ್ಟನ್ನು ಮೊದಲಿಗಿಂತ ಮೂರುಪಟ್ಟು ಬಲಪಡಿಸಿ ಸುದರ್ಶನವಾಗಿದ್ದುದು ಸುದರ್ಶನ ತರ ಆಯಿತು – ಎಂದು ಹೇಳಿಕೊಂಡಿದ್ದಾನೆ. ಇದನ್ನು ಮಾಡಿದ್ದು ತನ್ನ ಸ್ವಂತ ಹಣದಿಂದ ಮಾತ್ರ. ತೆರಿಗೆ ವಸೂಲುಮಾಡಿಯಾಗಲಿ ಕಡ್ಡಾಯದ ಕೂಲಿಮಾಡಿಸಿಯಾಗಲಿ ಅಥವಾ ತನ್ನ ಪ್ರಜೆಗಳಿಂದ ಕಾಣಿಕೆ ಪಡೆದಾಗಲಿ ಅಲ್ಲ ಎನ್ನುತ್ತಾನೆ. ಇದರಿಂದ, ಹಿಂದೆಯೂ ಅಂಥ ಸಾರ್ವಜನಿಕ ಕಾಮಗಾರಿಗಳನ್ನು ಆಗಾಗ ಕಟ್ಟಲಾಗುತ್ತಿತ್ತು ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ.[3] ಈ ಅಣೆಕಟ್ಟಿನ ಇತಿಹಾಸ ಮೌರ್ಯರಿಂದ (ಕ್ರಿ.ಪೂ.೩೨೦) ಹಿಡಿದು ಗುಪ್ತರ (ಕ್ರಿ.ಶ. ೪೫೦) ಕಾಲದ ವರೆಗೆ ಹರಡಿಕೊಂಡಿದೆ. ೭೫೦ ವಷ್ಕ್ಕೂ ಹೆಚ್ಚುಕಾಲ ನಿಲ್ಲುವಂಥ ಜಲಾಶಯಗಳನ್ನು ಮೌರ್ಯರು ಕಟ್ಟಬಲ್ಲವರಾಗಿದ್ದರು ಎನ್ನುವುದನ್ನು ತೋರಿಸಲಿಕ್ಕೆ ಈ ಅಣೆಕಟ್ಟಿನ ಇತಿಹಾಸವೇ ಸಾಕು. ಮೌರ್ಯರು ಕರ್ನಾಟಕದ ಉತ್ತರ ಮತ್ತು ಮಧ್ಯಭಾಗಗಳಲ್ಲಿ ಆಳಿದರು. ಆ ಪ್ರದೇಶದಲ್ಲಿ ಅವರ ಉತ್ತಾರಾಧಿಕಾರಿಗಳಾದ ಶಾತವಾಹನರು ಮೌರ್ಯರಿಂದಲೇ ಕೆರೆ ಕಾಲುವೆ ನಿರ್ಮಾಣದ ಕಲೆಯನ್ನು, ವಿಜ್ಞಾನವನ್ನು ಕಲಿತಿರಬೇಕು.

ಶಾತವಾಹನರು ಮತ್ತು ಚುಟುಗಳು:

ಕರ್ನೂಲು ಜಿಲ್ಲೆಯ ಆದವಾನಿಯಲ್ಲಿ ಶಾತವಾಹನ ವಂಶದ ಮುಮ್ಮಡಿ ಪುಲುಮಾವಿಯ ಶಿಲಾಶಾಸನವನ್ನು[4]ಮೈಕಡೋನಿ ಮತ್ತು ಚಿನ್ನಕಡಬೂರು ಗ್ರಾಮಗಳ ನಡುವೆ ಬಿದ್ದಿರುವ ಬಂಡೆಯಲ್ಲಿ ಕೆತ್ತಲಾಗಿದೆ. ಕುಮಾರದತ್ತನೆಂಬ ಸೇನಾಧಿಕಾರಿಗೆ ಸೇರಿದ ವೇಪುರಾಕ ಎಂಬ ಹಳ್ಳಿಯಲ್ಲಿ ಶಾಸನ ಇರುವ ಎಡೆಯ ಹತ್ತಿರ ಗೃಹಪತಿ ಸಾಂಬನು, ಕೆರೆಯನ್ನು ತೋಡಿಸಿದ ಎನ್ನುವುದನ್ನು ದಾಖಲುಮಾಡುವುದು ಆ ಶಾಸನದ ಉದ್ದೇಶ. ವೇಪುಕಾರ ಇದ್ದದ್ದು ಮಹಾಸೇನಾಪತಿ ಸ್ಕಂದನಾಗನಿಗೆ ಸೇರಿದ ಶಾತವಾಹನೀಹಾರ ವಿಭಾಗದಲ್ಲಿ ಎನ್ನಲಾಗಿದೆ. ಶಾಸನದಲ್ಲಿ ಉಕ್ತವಾಗಿರುವ ಹಳ್ಳಿಯನ್ನಾಗಲಿ ಕೆರೆಯನ್ನಾಗಲಿ ಗುರುತಿಸಲು ಆಗುವುದಿಲ್ಲ.

ಕರ್ನಾಟಕದಲ್ಲಿ ಶಾತವಾಹನರಾದ ಮೇಲೆ ಚುಟುಗಳು ಬಂದರು. ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿನ ಮಧುಕೇಶ್ವರ ದೇವಾಲಯದಲ್ಲಿ ಒಂದು ಶಿಲಾ ಶಾಸನವಿದೆ. ಚುಟುರಾಜ ವಿಷ್ಣುಕಡ ಚುಟುಕುಲಾನಂದ ಶಾತಕರ್ಣಿಯದು.[5] ಅದರಲ್ಲಿ ಹೀಗಿದೆ: ‘ಮಹಾರಾಜನ ಕುಮಾರಿ(ಹೆಸರು ಗೊತ್ತಿಲ್ಲ), ಯುವರಾಜ ಶಿವಸ್ಕಂಡ ನಾಗಶ್ರೀಯ ಪೂಜ್ಯಮಾತೆ ಒಂದು ನಾಗವನ್ನು ಕೆತ್ತಿಸಿದಳು, ಒಂದು ಕೆರೆಯನ್ನು ತೋಡಿಸಿದಳು ಹಾಗೂ ಒಂದು ವಿಹಾರವನ್ನು ಕಟ್ಟಿಸಿದಳು. ಅಮಾತ್ಯ ಸ್ಕಂದಸತಿ ಈ ಕಾಮಗಾರಿಗಳ ಮೇಲ್ವಿಚಾರಕನಾಗಿದ್ದ. ಈ ದಾಖಲೆಯಲ್ಲಿ ನಮೂದಿಸಿರುವ ಕೆರೆ ಎಲ್ಲಿತ್ತೊ ಗೊತ್ತು ಮಾಡಲು ಆಗುವುದಿಲ್ಲ.

ಆದಿ ಚೋಳರು:

ಕರ್ನಾಟಕದಲ್ಲಿ ಕೆರೆ ನಿರ್ಮಾಣದ ಇತಿಹಾಸವನ್ನು ಮುಂದುವರಿಸುವುದಕ್ಕೆ ಮೊದಲು ನೆರೆಯ ತಮಿಳುನಾಡಿನತ್ತ ಒಂದುಗಳಿಗೆ ದೃಷ್ಟಿ ಹಾಯಿಸೋಣ. ಅಲ್ಲಿ ಕ್ರಿಸ್ತಯುಗದ ಮೊದಲು ಶತಮಾನದಲ್ಲಿ ಆದಿ ಚೋಳರು ನೀರಾವರಿ ಬಗ್ಗೆ ದಾಪುಗಾಲು ಹಾಕಿದರು. ಒಂದು ನದಿಯನ್ನು ಅದರ ಮುಖಜ ಭೂಮಿಯ ಮುಂಭಾಗದಲ್ಲಿ ನಿಯಂತ್ರಿಸಲು ಅವರು ಯೋಜನೆಯೊಂದನ್ನು ಜಾರಿಗೆ ತಂದರು. ನೀರಾವರಿಗೆ ನದೀ ಮುಖಜ ಭೂಮಿಯನ್ನು ಅಳವಡಿಸಿಕೊಳ್ಳುವ ಅವರ ವಿಧಾನವನ್ನೇ ಎಲ್ಲ ಕಡೆಗಳಲ್ಲೂ ಅನುಸರಿಸಲಾಗಿದೆ. ಅವರು ಕಾವೇರಿಗೆ ಉನ್ನತವಾದ ಮಹಾ ಅಣೆಕಟ್ಟನ್ನೂ (GRAND ANICUT) ಮುಖ್ಯ ನೀರಾವರಿ ಕಾಲುವೆಗಳನ್ನೂ ನಿರ್ಮಿಸಿದರು. ಕಾವೇರಿಯ ಪ್ರವಾಹ ದಂಡೆಗಳನ್ನು ನಿರ್ಮಿಸಿದ್ದು ಕರಿಕಾಲ ಚೋಳ ಎಂದು ಐತಿಹ್ಯವಿದೆ.[6] ಆತ ಅನೇಕ ನೀರಾವರಿ ಕೆರೆಗಳನ್ನು ನಿರ್ಮಿಸಿದ ಎಂದು ಖ್ಯಾತಿ ಪಡೆದವನು.[7]

ಕದಂಬರು :

ಕರ್ನಾಟಕಕ್ಕೆ ಮತ್ತೆ ಬರೋಣ, ಶಾತವಾಹನ ಚುಟುಗಳ ನಂತರ ದಖನ್ನಿನಲ್ಲಿ ಅಂದರೆ ಉತ್ತರ ಕರ್ನಾಟಕದಲ್ಲಿ ಕದಂಬರು ಬಂದರು. ದಕ್ಷಿಣ ಕರ್ನಾಟಕದಲ್ಲಿ ಗಂಗರು ಬಂದರು. ಸುಮಾರು ಕ್ರಿ.ಶ. ನಾಲ್ಕನೆಯ ಶತಮಾನದ ಮಧ್ಯದಿಂದ ಹಿಡಿದು ಆರನೆಯ ಶತಮಾನದ ಮಧ್ಯಭಾಗದ ವರೆಗೂ ಈ ದೊರೆಗಳ ಕೆಲಸಗಳನ್ನು ನಾವೀಗ ಅವಲೋಕಿಸಬಹುದು. ಆರನೆಯ ಶತಮಾನದಲ್ಲಿ ಬಾದಾಮಿಯ (ಬಿಜಾಪುರ ಜಿಲ್ಲೆ) ಚಾಲುಕ್ಯರು ದಖನ್ನಿನಲ್ಲಿ ಪ್ರಬಲ ದೊರೆಗಳಾದರು.

ಮಧ್ಯಕರ್ನಾಟಕ ಚಿತ್ರದುರ್ಗದ ಬಳಿಯ ಚಂದ್ರವಳ್ಳಿಯಲ್ಲಿ ಒಂದು ಕೆರೆ ಕಟ್ಟಿಸಿದುದಾಗಿ ಮೊದಲನೆಯ ಕದಂಬರಾಜ ಮಯೂರವರ್ಮ (ಕ್ರಿ.ಶ. ೩೫೦) ಹೇಳುತ್ತಾನೆ. ಇದು ಕೆರೆಯ ಬಳಿಯ ಒಂದು ಬಂಡೆಯ ಮೇಲಿನ ಶಾಸನದ ಪಾಠ.[8] ಅದೇ ಶಾಸನವನ್ನು ಬೇರೆ ರೀತಿ ಓದಿದ ಪಾಠ ಪ್ರಕಾರ.[9] ಆತ ಕೆರೆಯನ್ನು ಜೀರ್ಣೋದ್ಧಾರಮಾಡಿದ. ಅಂದರೆ ಕರ್ನಾಟಕದಲ್ಲಿ ಕೆರೆ ನಿರ್ಮಾಣದ ಇತಿಹಾಸ ಇನ್ನೂ ಹಿಂದೆಯೇ ಆರಂಭವಾಯಿತು. ಮ್ಯಾಕಡೋಣೆ ಹಾಗೂ ಬನವಾಸಿ ದಾಖಲೆಗಳಲ್ಲಿ ಕೆರೆಗಳ ಬಗ್ಗೆ ಇನ್ನೂ ಹಳೆಯ ಪ್ರಸ್ತಾಪಗಳಿದ್ದರೂ ಅವು ಎಲ್ಲಿದ್ದವು? ಎಂಬುದು ತಿಳಿದುಬಂದಿಲ್ಲ. ಸ್ಥಳ ನಿರ್ದೇಶನದ ಬಗ್ಗೆ ಯಾವುದೇ ಶಂಕೆ ಇಲ್ಲದಂಥ ಅತಿ ಪ್ರಾಚೀನ ಕೆರೆ ಚಂದ್ರವಳ್ಳಿ ಕೆರೆ. ಅಲ್ಲದೆ, ಇದು ಇತ್ತೀಚೆಗೆ ಜೀರ್ಣೋದ್ಧಾರವಾಗಿ ಉಪಯೋಗಕ್ಕೆ ತರಲ್ಪಟ್ಟ ಹಳೆಯ ಕೆರೆಗಳಲ್ಲಿ ಒಂದು. ಅಂತೆಯೇ ಇಂದಿನ ಜನ ಹಳೆಯ ಕೆರೆಗಳನ್ನು ಉಪಯೋಗಕ್ಕೆ ತಂದುಕೊಳ್ಳುವುದಕ್ಕೆ ಪ್ರತ್ಯಕ್ಷ ನಿದರ್ಶನ, ಈ ಕೆರೆ. ಈ ಅಧ್ಯಯನ ಗ್ರಂಥ ನಮ್ಮ ಜನಕ್ಕೆ ಮಂದಟ್ಟುಮಾಡಿಕೊಡಲು ಇಚ್ಚಿಸುವುದು ಇದೇ ಪಾಠವನ್ನೇ. ಅಂದರೆ ಹೊಸ ಕೆರೆಗಳನ್ನು ಕಟ್ಟುವಾಗ, ಹಿಂದಿನವರು ಅಷ್ಟೊಂದು ಜತನದಿಂದ ನಿರ್ಮಿಸಿದ ಹಾಗೂ ನಿಶ್ಚಿತ ಯಶಸ್ಸು ಉಳ್ಳ ಹಳೆಯ ಕೆರೆಗಳ ಜೀರ್ಣೋದ್ಧಾರಕ್ಕೆ ನಾವು ಆದ್ಯತೆ ಕೊಡಬೇಕು.

ಕದಂಬರ ಎರಡನೆಯ ಕೆರೆ ದಾಖಲಾಗಿರುವುದು ಕಾಕುತ್ಸ್ಥವರ್ಮನ (೪೩೦ – ೪೫೦) ಪ್ರಖ್ಯಾತವಾದ ತಾಳಗುಂದ ಶಾಸನದಲ್ಲಿ.[10] ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತಾಳಗುಂದದ ಪ್ರಣವೇಶ್ವರ ಗುಡಿಯ ಎದುರಿಗೆ ಕೆರೆ ನಿರ್ಮಿಸಿದ್ದರ ಬಗ್ಗೆ ಆ ಶಾಸನ ಹೇಳುತ್ತದೆ. ಅದೇ ದೇವಸ್ಥಾನದಲ್ಲಿ ಶಾತವಾಹನರು ಪೂಜಿಸುತ್ತಿದ್ದರು – ಎಂದು ಶಾಸನ ಹೇಳುತ್ತದೆ. ಶಾತವಾಹನರ ಕಾಲದಲ್ಲಿ ಆ ಕೆರೆ ಇದ್ದುದು ತುಂಬ ಸಂಭವನೀಯ. ಹಾಗಿದ್ದಲ್ಲಿ ಅದೇ ಕರ್ನಾಟಕ ಇತಿಹಾಸದಲ್ಲಿ ಅತ್ಯಂತ ಪ್ರಾಚೀನ ಕೆರೆ ಆಗುತ್ತದೆ. ಮೇಲೆ ಹೇಳಿದ ಚಂದ್ರವಳ್ಳಿ ಕೆರೆಗೂ ಎರಡು ಶತಮಾನಗಳ ಹಿಂದಿನದು ಆಗುತ್ತದೆ.

ಉಲ್ಲೇಖಿಸಬೇಕಾದ ಕದಂಬರ ಮೂರನೆಯ ಕೆರೆ ರಾಜಾ ರವಿವರ್ಮನ ರಚನೆ (೪೮೫ – ೫೧೯). ಆತ ಗುಡ್ಡ ತಟಾಕ ಎಂಬ ದೊಡ್ಡ ಕೆರೆಯನ್ನು ತೋಡಿಸಿದ. ಗುಡ್ನಾಪುರ ಊರಿನ ಪ್ರವೇಶ ಭಾಗದಲ್ಲಿ ಒಂದು ದೊಡ್ಡ ಕೆರೆ ಇದೆ. ಇದು ಉತ್ತರ ಕನ್ನಡದ ಅತಿ ದೊಡ್ಡ ಕೆರೆಗಳಲ್ಲಿ ಒಂದು. ರವಿವರ್ಣ ತೊಡಿಸಿದ ಗುಡ್ಡತಟಾಕ ಇದೇ ಎನ್ನುವುದು, ಸ್ವತಃಸಿದ್ಧ. ಅದರ ದಾಖಲೆಗೆ[11]ತೇದಿ ಇಲ್ಲ. ಕ್ರಿ.ಶ ಆರನೆಯ ಶತಮಾನದ ಆದಿಭಾಗದ್ದು ಎನ್ನಲಾಗಿದೆ. ಈ ಕೆರೆ ನಮ್ಮ ಇತಿಹಾಸದಲ್ಲಿಯೆ ವಿಶಿಷ್ಟವಾದುದು. ಏಕೆಂದರೆ ಇದು ೧೩ ಶತಮಾನಗಳಿಂದಲೂ ಅಸ್ತಿತ್ವದಲ್ಲಿದೆ ಮತ್ತು ಎಡೆಬಿಡದೆ ಬಳಕೆಯಲ್ಲಿದೆ. ಗುಡ್ಡತಟಾಕ ದಿಂದಲೇ ಹಳ್ಳಿಗೆ ಗುಡ್ನಾಪುರ ಹೆಸರು ಬಂದಿದೆ. ಇದು ಬನವಾಸಿಗೆ ವಾಯುವ್ಯಕ್ಕೆ ೫ ಮೈಲು ದೂರದಲ್ಲಿದೆ. ಕದಂಬರ ಉಚ್ಛಾಯಕಾಲದಲ್ಲಿ ಗುಡ್ನಾಪುರವು ರಾಜಧಾನಿ ಬನವಾಸಿಯ ವಿಸ್ತರಣವಾಗಿರಬೇಕು. ಮತ್ತು ಈ ಭಾರಿ ಕೆರೆ ರಾಜಧಾನಿಗೂ ಸುತ್ತಲ ಬಯಲಿನ ನೀರಾವರಿಗೂ ನೀರನ್ನು ಒದಗಿಸುತ್ತಿದ್ದಿರಬೇಕು.

ಆದಿ ಗಂಗರು:

ಕದಂಬರ ಸಮಕಾಲೀನರಾಗಿದ್ದವರು ದಕ್ಷಿಣ ಕರ್ನಾಟಕ ಅಥವಾ ಗಂಗವಾಡಿಯ ಗಂಗರು. ತಮ್ಮ ಪ್ರಜೆಗಳಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸುವುದರಲ್ಲಿ ಅವರಿಗೂ ಅಷ್ಟೆ ಆಸಕ್ತಿ ಇತ್ತು. ತಡಂಗಲ ಮಾಧವರ್ಮನ(೬ನೇ ಶತಮಾನ) ಮೇಲುಕೋಟೆ ಶಾಸನದಲ್ಲಿ[12]ಕೆಲವು ಕೆರೆಗಳು ಇದ್ದುದರ ಪ್ರಸ್ತಾಪವಿದೆ. ಭೂಮಿದಾನದ ವಿವರಗಳು ಆಗ ಇದ್ದ ನೀರಾವರಿ ಸೌಲಭ್ಯಗಳ ಬಗ್ಗೆ ಸೂಕ್ಷ್ಮ ಪರಿಜ್ಞಾನವನ್ನು ಒದಗಿಸುತ್ತವೆ. ಶಾಸನ ಹೀಗೆ ದಾಖಲೆಮಾಡಿದೆ:

೧. ಏಕಕಾಲದಲ್ಲಿ ಎರಡು ಕೆರೆಗಳಿಂದ ಕೆಲವು ಗದ್ದೆಗಳಿಗೆ ನೀರಾವರಿ ಮತ್ತು

೨. ವರ್ಷಕ್ಕೆ ಎರಡು ಬೆಳೆಕೊಡುವ ಆರು ಖಂಡುಗಾಭೂಮಿ. ಹಾಗೂ ರಕ್ತತಟಾಕಕ್ಕೆ (ಕೆಂಪುಕೆರೆ) ಹತ್ತಿರ ಇದ್ದು, ಮಳೆಗಾಲದಲ್ಲಿ ಒಂದು ಬೆಳೆಯನ್ನು ಕೊಡುವ ಹತ್ತು ಖಂಡುಗಳಗಳು.

ಮಳೆಗಾಲದಲ್ಲಿ ಒಂದು, ಬೇಸಿಗೆಯಲ್ಲಿ ಇನ್ನೊಂದು – ಹೀಗೆ ಕೆರೆ ನೀರಾವರಿಯಿಂದ ಎರಡು ಬೆಳೆ ತೆಗೆಯುತ್ತಿದ್ದ ಅನ್ನುವುದನ್ನು, ಬೇಸಿಗೆಯಲ್ಲಿ ಕೆರೆ ನೀರಾವರಿಗೆ ಪೂರಕವಾಗಿ ಭೂಜಲವನ್ನು ಬಳಸಿಕೊಳ್ಳಲಾಗುತ್ತಿತ್ತು ಹಾಗೂ ಉತ್ತಮವಾಗಿ ಅಭಿವೃದ್ಧಿಯಾಗಿದ್ದ ಕೃಷಿ ಇತ್ತು ಎನ್ನುವುದನ್ನು ಇದು ಸೂಚಿಸುತ್ತದೆ.

ಅದೇ ರೀತಿ, ಆರನೆಯ ಶತಮಾನದ ಅವಿನೀತನ ಕಾಲದ ಹೊಸಕೋಟೆ ಶಾಸನ[13]ಕೆರೆ ಕೆಳಗೆ ಕಬ್ಬು ಬೆಳೆಯುವ ತೋಟ ಇದ್ದುದನ್ನು ಸೂಚಿಸುತ್ತದೆ. ದೇವರಹಳ್ಳಿಯ (ನಾಗಮಂಗಲ ತಾಲ್ಲೂಕು) ಗಂಗರಾಜ ಶ್ರೀಪುರುಷನ ೭೭೬ – ೭೭ರ ತಾಮ್ರಶಾಸನ ಆರು ಕೆರೆಗಳ ಸರಹದ್ದು ಉಳ್ಳ ಪೊನ್ನಳ್ಳಿಯ ದಾನದ ಬಗ್ಗೆ ತಿಳಿಸುತ್ತದೆ.[14] ಎಂಟನೆಯ ಶತಮಾನದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಒಂದು ಹಳ್ಳಿಯ ಬಳಿ ಇಷ್ಟೊಂದು ಕೆರೆಗಳು ಇದ್ದುದಕ್ಕೆ ಇದೇ ಮೊಟ್ಟ ಮೊದಲ ನಿದರ್ಶನ.

ಬಾದಮಿ ಚಾಲುಕ್ಯರು :

ಬಾದಾಮಿಯ ಚಾಲುಕ್ಯರು ಕ್ರಿ.ಶ. ಆರನೆಯ ಶತಮಾನದ ಮಧ್ಯದಿಂದ ಕ್ರಿ.ಶ. ಎಂಟನೆಯ ಶತಮಾನದ ಮಧ್ಯದ ವರೆಗೂ ಸುಮಾರು ಎರಡು ನೂರು ವರ್ಷ ದಖನ್ ಮತ್ತು ದಕ್ಷಿಣ ಭಾರತವನ್ನು ಆಳಿದರು. ನಮ್ಮ ಉದ್ದೇಶಕ್ಕೆ ಪ್ರಸ್ತುತವಾಗಿರುವ ದಾಖಲೆಗಳನ್ನು ಅವರು ಬಿಟ್ಟು ಹೋಗಿರುವುದು ಅತ್ಯಲ್ಪ. ಚಾಲುಕ್ಯರಾಜ ವಿಕ್ರಮಾದಿತ್ಯನ (ಕ್ರಿ.ಶ. ೬೭೦) ಅನುಗೋಡು ಶಾಸನ[15]ಒಂದು ಕೆರೆಯ ಕೆಳೆಗೆ ಭತ್ತದ ಗದ್ದೆಗಳನ್ನು ದಾನವಿತ್ತುದನ್ನು ದಾಖಲಿಸುತ್ತದೆ. ಚಾಲುಕ್ಯ ವಿಜಯಾದಿತ್ಯನ (೭೦೭) ಶಿಗ್ಗಾಂವಿ ಶಾಸನವು[16]ಹೇಳುತ್ತದೆ. ದಕ್ಷಿಣಕ್ಕೆ ವೆಣ್ಣ ಎಂಬ ಕೆರೆ, ಪಶ್ಚಿಮಕ್ಕೆ ಕುಪೇರ ಕೆರೆ, ವಾಯುವ್ಯಕ್ಕೆ ಕೋಡಿ ಎಂಬ ಕೆರೆ, ಉತ್ತರಕ್ಕೆ ಪುಲಿವಾರ ಕೆರೆ, ಈಶಾನ್ಯಕ್ಕೆ ಮಕ್ಕರೆ ಮತ್ತು ಅರಸಾಳ ಕೆರೆ ಇದ್ದವು ಎಂದು ತಿಳಿಸುತ್ತದೆ. ಖಪಟ್ಟಿ ಮತ್ತು ಪಾಟಾಳಿ ಎಂಬ ಇತರ ದಾನಗ್ರಾಮಗಳ ಸರಹದ್ದಿನಲ್ಲಿ ಕುರುಳೇಹಳ್ಳ ಕೆರೆ ಇತ್ತು. ಕಾನಪುರ ಎಂಬ ಇನ್ನೊಂದು ದಾನಗ್ರಾಮದ ಉತ್ತರಕ್ಕೆ ಮಹಿಷಿವಾಟ ಎಂಬ ಕೆರೆಯೂ, ಈಶಾನ್ಯಕ್ಕೆ ಪುಲಿ ಕೆರೆಯೂ ಇದ್ದವು. ಎಂಟನೆಯ ಶತಮಾನದ ಮೊದಲಿನಲ್ಲಿ ಪರಸ್ಪರ ಅಸುಪಾಸಿನಲ್ಲಿ ಅಷ್ಟೊಂದು ಕೆರೆಗಳು ಇದ್ದುದರ ಉಲ್ಲೇಖ ಧಾರವಾಡ ಪ್ರದೇಶದಲ್ಲಿ ಕೆರೆಗಳ ವ್ಯೂಹ ಬೆಳೆದಿದ್ದದನ್ನು ಸಮರ್ಥಿಸುತ್ತದೆ.

ರಾಷ್ಟ್ರಕೂಟರು :

ಒಂಬತ್ತು ಮತ್ತು ಹತ್ತನೆಯ ಶತಮಾನಗಳಲ್ಲಿ ದಕ್ಷಿಣ ಭಾರತ ರಾಷ್ಟ್ರಕೂಟರ ಏಳಿಗೆಯನ್ನು ಕಂಡಿತು. ಗಂಗರು ಅವರ ಅಧೀನರಾಜರಾದರು. ಇಬ್ಬರೂ ಅನೇಕ ಕೆರೆಗಳನ್ನು ಕಟ್ಟಿಸಿದರು. ಇಲ್ಲವೆ ಕಟ್ಟಲು ಪ್ರೋತ್ಸಾಹವಿತ್ತರು. ಬಿಜಾಪುರ ಜಿಲ್ಲೆಯ ಹುನಗಂದ ತಾಲ್ಲೂಕಿನ ಕೇಸರಭಾವಿ ಶಾಸನ[17]ಕ್ರಿ.ಶ. ೮೩೭ರಲ್ಲಿ ಅಮೋಘವರ್ಷನಿಂದ ಅಥವಾ ಅವನ ಆಳ್ವಿಕೆಯಲ್ಲಿ ಒಂದು ಕೆರೆ ಮತ್ತು ಅದರ ತೂಬು ಕಟ್ಟಿಸಿದ್ದನ್ನು ದಾಖಲಿಸುತ್ತದೆ. ಅದೇ ರಾಜನ ಆಳ್ವಿಕೆಯಲ್ಲಿ ಕ್ರಿ.ಶ. ೮೬೨ರ ಬಾಗೇವಾಡಿ ತಾಲ್ಲೂಕಿನ ಹೂವಿನ ಹಿಪ್ಪರಗಿ ಶಾಸನ[18]ಎರಡು ಕೆರೆಗಳು ಇದ್ದುದನ್ನು ದಾಖಲೆಮಾಡಿದೆ. ಅದೇ ಅಳ್ವಿಕೆಯ ಕಾಲದ ಗದಗು ತಾಲ್ಲೂಕಿನ ಚಿಂಚಲಿ ಶಾಸನ.[19] ಖಾಸಗಿ ವ್ಯಕ್ತಿಯೊಬ್ಬನ ಕೆರೆ ದಾನವನ್ನು ದಾಖಲಿಸುತ್ತದೆ. ಕ್ರಿ.ಶ. ೮೭೨ರ ಅದೇ ಶಾಸನ ನೀರುಣಿ ಸುಂಕದ (ನೀರಿನ ಸಂಗ್ರಹಣೆ ಅಥವಾ ಬಳಕೆಗಾಗಿ ವಿಧಿಸುವ ಸುಂಕ) ಬಗ್ಗೆ ಹೇಳುತ್ತದೆ.

ಗಂಗರು ಕೆರೆ ನಿರ್ಮಾಣಕ್ಕೆ ಒತ್ತಾಸೆಯನ್ನು ಮುಂದುವರಿಸಿದರು. ರಾಚಮಲ್ಲನ (ಕ್ರಿ.ಶ. ೮೧೯) ಸಾಲಿಗ್ರಾಮ ಶಾಸನ[20]ಎಡತೊರೆ (ಕೃಷ್ಣರಾಜನಗರ) ಬಳಿಯ ಹಳ್ಳಿಯಲ್ಲಿನ ಒಂದು ಭೂವ್ಯವಹಾರಕ್ಕೆ ಸಂಬಂಧಿಸಿದ್ದು, ಆ ಹಳ್ಳಿಯ ಸರಹದ್ದಿನಲ್ಲಿ ೧೪ ಕೆರೆಗಳು ಇದ್ದುದನ್ನು ದಾಖಲುಮಾಡಿದೆ. ಅವು ಹೀಗಿವೆ :

ಈಶಾನ್ಯ – ಗಾಮಗುಡ್ಡ ಕೆರೆ, ಪೂರ್ವ – ಚಿನಿವಾರ ಕೆರೆ, ಸ್ವಲ್ಪ ದೂರಕ್ಕೆ ಸೀಗೆಗೆರೆ ಕೆರೆ, ಅನಂತರ ಅಗಸರ ಕೆರೆ, ಮುಂದೆ ಮಹಾ ಕಮ್ರಕೆರೆಯ ನಾಲೆ, ಮೈಕೊಂಟಕೆರೆ, ಆಮೇಲೆ ತೊಂಡಿಕೆರೆ ಮತ್ತೆ ನಿಡುಗಟ್ಟಿ ಕೆರೆಯಿಂದ ದಕ್ಷಿಣಭಾಗ, ಮುಂದೆ ನೌಕ್ಕಿಕೆರೆ, ಅಲ್ಲಿಂದೀಚಿಗೆ ತೆನಂದಕಗೆರೆಯ ಅನಂತರ ಸಿರಿಕ್ಕಿಗೆರೆ ಕೆರೆ, ಆಮೇಲೆ ನಲ್ಲಾರು ಕೆರೆಯ ದಕ್ಷಿಣ ಭಾಗ, ಮುಂದೆ ಮಾದವಾಡಿ ಕೆರೆಯ ದಕ್ಷಿಣ ಭಾಗ, ಆಮೇಲೆ ಕೊಮಾರ ಕೆರೆಯ ದಕ್ಷಿಣ ಭಾಗ. ಒಂದೇ ಹಳ್ಳಿಯಲ್ಲಿ ಬಹುಸಂಖ್ಯೆಯ ಕೆರೆಗಳು ಇದ್ದುದರ ಜೊತೆಗೆ ಈ ಕೆಲವು ಕೆರೆಗಳ ಹೆಸರುಗಳೂ ಗಮನಾರ್ಹ. ಚಿನಿವಾರ ಕೆರೆ, ಅಗಸರ ಕೆರೆ ಮುಂತಾದವು. ಅದರ ಅರ್ಥ ಆ ಎರಡು ಜನಾಂಗಗಳೂ ಪ್ರತ್ಯೇಕ ಸ್ಥಳಗಳಲ್ಲಿ ವಾಸಿಸುತ್ತಿದ್ದರು. ಮತ್ತು ತಮ್ಮದೇ ಪ್ರತ್ಯೇಕ ಕೆರೆಗಳನ್ನು ಹೊಂದಿದ್ದರು. ಚಿನಿವಾರರು ತಮ್ಮ ಕೆರೆಯನ್ನು ತಾವೇ ಕಟ್ಟಿದ ಸಂಭವವೂ ಉಂಟು. ಅದೇ ಅರಸನ ತಿಪಟೂರು ತಾಲ್ಲೂಕಿನ ಕೆರೆಗೋಡು ? ರಂಗಪುರ ಶಾಸನ[21]ದಾನವಾಗಿತ್ತ ಭೂಮಿಯ ಸರಹದ್ದಿನಲ್ಲಿ ಐದು ಕೆರೆ ಇದ್ದುದನ್ನು ಸೂಚಿಸುತ್ತದೆ. ಎಡತೊರೆಯ (ಕೃಷ್ಣರಾಜನಗರ ಗಾಳಿಗಕೆರೆ ಶಾಸನ[22]ಐದು ಕೆರೆಗಳು ಇದ್ದುದನ್ನು ದಾಖಲಿಸುತ್ತದೆ.

ರಾಷ್ಟ್ರಕೂಟರು, ಅವರ ಸಾಮಂತರಾದ ಚಾಲುಕ್ಯರು ಮತ್ತು ಗಂಗರಿಂದ ಕೆರೆ ನಿರ್ಮಾಣ ಇನ್ನೂ ಹಚ್ಚಿದುದನ್ನು ಹತ್ತನೆಯ ಶತಮಾನದ ಶಾಸನಗಳು ದಾಖಲು ಮಾಡಿವೆ. ಆ ಪೈಕಿ ಕೆಳಗಿನವು ಗಮನಾರ್ಹ.

೧. ಗಂಗ ದಳವಾಯಿ ಸತ್ಯವಾಕ್ಯ ಪೇರ್ಮಾಡಿಯ (ಕ್ರಿ.ಶ. ೯೦೮) ಬಸವಣ್ಣ ಹಳ್ಳಿ ಶಾಸನದಲ್ಲಿ[23]ಒಂದು ದೇವಾಲಯಕ್ಕೆ ಎರಡು ಖಂಡುಗ ನೀರು ಮಣ್ಣನ್ನು (ಮಳೆ ನೀರು ಪಡೆಯುವ ಭೂಮಿ), ಎರಡು ಖಂಡುಗ ಮಡುವಿನ ಮಣ್ಣನ್ನು (ಭಾವಿ – ಕೆರೆಗಳಿಂದ ನೀರು ಪಡೆಯುವ ಭೂಮಿ) ದಾನವಾಗಿತ್ತುದು ದಾಖಲಾಗಿದೆ.

೨. ಸಿರಾ ತಾಲ್ಲೂಕಿನ ಬರಗೂರ ಶಾಸನ[24] (ಕ್ರಿ.ಶ. ೯೨೦) ನಾರಣಬ್ಬೆ ಎಂಬ ಹೆಂಗಸು ಕೆರೆ ಕಟ್ಟಿಸಿದ್ದನ್ನು ದಾಖಲುಮಾಡಿದೆ. ಆ ಕೆರೆ ೧೮೮೬ ರಲ್ಲಿ ಹಾಗೂ ೧೯೦೧ರಲ್ಲಿ ಜೀರ್ಣೋದ್ಧಾರ ಗೊಂಡಿತು. ಅದರಿಂದ ೨೫೦ ಎಕರೆ ನೀರಾವರಿ ಆಗುತ್ತದೆ.

೩. ಬಂಕಾಪುರದ ಕ್ರಿ.ಶ. ೯೨೯ – ೩೦ರ ನಾಲ್ಕನೆಯ ಗೋವಿಂದನ ಶಾಸನ[25]ಕೊಂಡಲೆಗೆರೆ ಎಂಬ ಸ್ಥಳೀಯ ಕೆರೆಯ ಮೇಲೆ ದಂಡ ಹಾಗೂ ತೆರಿಗೆ ವಿಧಿಸಿದ್ದನ್ನು (ಪ್ರಾಯಶ್ಚಿತ್ತ ದಕ್ಷಿಣ ಮತ್ತು ಪಸುಂಬೆ ಪಣ) ಪ್ರಸ್ತಾಪಿಸುತ್ತದೆ. ಕಾಳಿಯೂರು ಭವ್ಯವಾದ ಕೆರೆಗಳ ಊರು ಎಂದು ಅದೇ ಶಾಸನ ಹೇಳುತ್ತದೆ.

೪. ಬಂಗಾರ ಪೇಟೆಯ ತಾಲ್ಲೂಕಿನ (ಕ್ರಿ.ಶ೯೫೦ರ) ಬೇತಮಂಗಲದ ಶಾಸನವು[26]ಈಗ ಬೇತಮಂಗಲ ಎನಿಸಿಕೊಂಡಿದ್ದ ವಿಜಯಾದಿತ್ಯಮಂಗಲದ ಕೆರೆ ಒಡೆದಿದ್ದನ್ನು ಸರಿಪಡಿಸಿದ ಸಂಗತಿಯನ್ನು ದಾಖಲಿಸುತ್ತದೆ. ಈ ಬೇತಮಂಗಲ ಕೆರೆಯನ್ನು ಪ್ರಾಯಶಃ ಬಾಣರಾಜ ವಿಜಯಾದಿತ್ಯ ಹಿಂದೆ ಕಟ್ಟಿಸಿದ್ದರಬೇಕು ಮತ್ತು ಕ್ರಿ.ಶ ೯೫೦ರಲ್ಲಿ ಅದನ್ನು ಜೀರ್ಣೋದ್ಧಾರ ಮಾಡಲಾಯಿತು. ಕೆರೆ ಮತ್ತೊಮ್ಮೆ ಒಡೆದಂತೆ ತೋರುತ್ತದೆ. ಕ್ರಿ.ಶ ೧೧೫೫ರಲ್ಲಿ ಹೊಯ್ಸಳರಾಜ ವಿಷ್ಣುವರ್ಧನನ[27]ಹಿರಿಯ ದಳಪತಿ ಸೊಕ್ಕೆಮಯ್ಯ ಅದನ್ನು ಸರಿಪಡಿಸಿದ. ಈ ಕೆರೆಯ ಏರಿಯ ಉದ್ದ ೫೧೦೦ ಅಡಿ, ಎತ್ತರ ೩೦ ಅಡಿ ಹಾಗೂ ಅಗಲ ಬುಡದಲ್ಲಿ ೧೦೫ ಅಡಿ ಹಾಗೂ ತುದಿಯಲ್ಲಿ ೯ ಅಡಿ ಇತ್ತು ಎನ್ನುತ್ತದೆ ಮೈಸೂರು ಗೆಜೆಟಿಯರ್. ಇದು ೫೮೦ ಎಕರೆಗೆ ನೀರು ಒದಗಿಸುತ್ತಿತ್ತು.[28]೧೯೦೩ರಲ್ಲಿ ಭಾರಿ ಮಳೆಯಿಂದಾಗಿ ಕೆರೆ ಮತ್ತೆ ಒಡೆಯಿತು. ಮೈಸೂರು ಸರ್ಕಾರ ಅದನ್ನು ಸರಿಪಡಿಸಿತು. ಈಗ ಈ ಕೆರೆ ಕೋಲಾರ ಚಿನ್ನದ ಗಣಿ ಊರಿಗೆ ನೀರು ಒದಗಿಸಲು ಮೀಸಲಾಗಿದೆ.

೫. ಚೆನ್ನಗಿರಿ ತಾಲ್ಲೂಕಿನಲ್ಲಿರುವ ಚಾಲುಕ್ಯ ಅರಸು ರಾಜಾದಿತ್ಯನ (ಕ್ರಿ.ಶ ೯೫೧) ಹಿರೇಕೋಗಿಲೂರು ತಾಮ್ರಶಾಸನ[29]ಎರಡು ಗ್ರಾಮಗಳ ದಾನಕ್ಕೆ ಸಂಬಂಧಿಸಿದ್ದು. ಅವುಗಳ ಸರಹದ್ದುಗಳಲ್ಲಿ ನಾಲ್ಕು ಕೆರೆಗಳ ತಪಶೀಲು ಇದೆ. ಆ ಪೈಕಿ ಜಾಳಿಗಾ ಎಂಬ ದೊಡ್ಡ ಕೆರೆ ಬಹುಶಃ ಜಾಜೂರಿಗೆ ಸಂಬಂಧಿಸಿದ್ದು, ಈಗಲೂ ಅಲ್ಲಿ ಒಂದು ದೊಡ್ಡ ಕೆರೆ ಇದೆ.

೬. ತುಮಕೂರಿನ ಒಂದು ಶಾಸನದಲ್ಲಿ[30] (ಕ್ರಿ.ಶ೯೫೫) ತುಮಕೂರು ಕೆರೆಯ ಕೆಳಗೆ ಕೆಲವು ಜಮೀನುಗಳನ್ನು ದಾನವಾಗಿತ್ತುದು ದಾಖಲಾಗಿದೆ. ಕೆರೆ ಇಂದಿಗೂ ಇದೆ. ಸುಮಾರು ೮೦೦ ಎಕರೆಗಳಿಗೆ ನೀರು ಕೊಡುತ್ತದೆ.

೭. ನಂಜನಗೂಡು ತಾಲ್ಲೂಕಿನ ಕಾರ್ಯ ಶಾಸನ[31] (ಕ್ರಿ.ಶ೯೬೮) ದೇಸಿಕೆರೆ ಹಾಗೂ ಪೆರಿಯಕೆರೆ ಎಂಬ ಎರಡುಕೆರೆಗಳ ನಿರ್ಮಾಣವನ್ನು ದಾಖಲಿಸುತ್ತದೆ.

೮. ರಾಷ್ಟ್ರಕೂಟರ ಮೂರನೆಯ ಕೃಷ್ಣನ ಆಳ್ವಿಕೆಯಲ್ಲಿನ ಕುಡತಿನಿ ಶಾಸನ[32]ಕೆರೆ ಕೆಳಗೆ ೬೨ ಮತ್ತರು ಗದ್ದೆಯ ದಾನವನ್ನು ದಾಖಲಿಸುತ್ತದೆ. ಕುಡತಿನಿ ಕೆರೆ ಇಂದಿಗೂ ಇದೆ.

ಮೇಲೆ ಹೆಸರಿಸಿರುವ ಕೆರೆಗಳಲ್ಲಿ ಬಹುಪಾಲು ಇಂದಿಗೂ ಭದ್ರವಾಗಿವೆ. ಇದು ಸೋಜಿಗದ ಸಂಗತಿ. ಇದು ಅವುಗಳ ನಿರ್ಮಾಣ ಹಾಗೂ ಕಾಲಕಾಕ್ಕೆ ಆಗುತ್ತಿದ್ದ ದುರಸ್ತಿಗಳ ಬಗೆಗೆ ಮಹತ್ವದ ಸಾಕ್ಷಿ.

 

[1]ಎಂ.ಕೆ. ಧವಳೀಕರ “ಸೆಟಲ್‌ಮೆಂಟ್ ಆರ್ಕಿಯಾಲಜಿ ಆಫ್ ಇನಾಂಗಾಂ” ಪುರಾತತ್ವ ನಂ.೮. (೧೯೭೮) ಪು. ೪೭.

[2]ಸಿ. ಮಾರ್ಗಬಂಧು “ಮೆಟೀರಿಯಲ್ ಕಲ್ಚರ್ ಡ್ಯೂರಿಂಗ್‌ ಅರ್ಲಿ ಹಿಸ್ಟಾರಿಕ್‌ ಪೀರಿಯಡ್‌ – ಇನ್ ಸೌತ್‌ ಇಂಡಿಯನ್‌ ಸ್ಟಡೀಸ್” )ಸಂ.) ಹೆಚ್.ಎಮ್‌.ನಾಯಕ್. ಬಿ.ಆರ್.ಗೋಪಾಲ ಪು.೫೪.

[3]ವಿ.ವಿ. ಮಿರಾಶಿ “ದಿ ಹಿಸ್ಟರಿ ಅಂಡ್ ಇನ್ಸ್‌ಕ್ರಿಷ್ಪನ್ಸ್‌ ಆಫ್‌ ದಿ ಶಾತಾವಾಹನಾಸ್ ಅಂಡ್ ವೆಸ್ಟರ್ನ್‌ ಕ್ಷತ್ರಪಾಸ್” ಭಾಗ ೨ – ವಿಭಾಗ ೩-ಬಿ. ನಂ.೫೧. ಪುಟ ೧೨೧ ರಿಂದ

[4]ಅದೇ ಭಾಗ ೨ ವಿಭಾಗ ೧ ನಂ. ೩೪. ಪು.೮೫

[5]ಅದೇ ನಂ. ೩೭. ಪು ೯೨

[6]ಕೆ.ಎ.ನೀಲಕಂಠಶಾಸ್ತ್ರಿ “ದಿ. ಚೋಳಾಸ್” ಪು. ೩೬.

[7]ವಿ.ಆರ್.ಆರ್. ದೀಕ್ಸಿತ್ “ಎ. ಹಿಸ್ಟರಿ ಆಫ್ ಇರಿಗೇಷನ್ ಇನ್ ಸೌತ್ ಇಂಡಿಯಾ” ಇಂಡಿಯನ್ ಕಲ್ಚರ್ ೧೨ ಪು. ೭೨

[8]ಎಂ.ಎ.ಆರ್. ೧೯೨೯ ನಂ.೧

[9]ಬಿ.ರಾಜಶೇಖರಪ್ಪ “ನ್ಯೂ ಲೈಟ್ ಆನ್‌ ಚಂದ್ರವಳ್ಳಿ ಇನ್ಸ್‌ಕ್ರಿಷ್ಪನ್” ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ ಸಂ. ೬೯ ಭಾಗ ೨ ಡಿಸೆಂಬರ್ ೧೯೮೪.

[10]ಇ.ಸಿ. ೭ ಷಿಕಾರಿಪುರ ೧೭೬.

[11]ಬಿ.ಆರ್.ಗೋಪಾಲ್ “ಗುಡ್ನಾಪುರ್ ಇನ್ಸ್‌ಕ್ರಿಪ್ಷನ್‌ ಆಫ್ ಕದಂಬ ರವಿವರ್ಮ” ಶ್ರೀಕಂಠಿಕಾ (ಸಂ) ಬಿ.ಕೆ.ಗುರುರಾಜರಾವ್. ಪು.೬೧, ಕೆಳದಿ ನೃಪ ವಿಜಯ ಪು. ೨೫೫-೬ (ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ೧೯೭೭) ಕೆಳದಿಯ ಇಮ್ಮಡಿ ಸೋಮೇಶ್ವರ ನಾಯಕ ಹಾಗೂ ಸ್ವಾದಿಯ ಸದಾಶಿವ ನಾಯಕರು ಸುಮಾರು ೧೭೧೫ ರಲ್ಲಿ ಗುಡ್ನಾಪುರ ಕೆರೆ ಅಂಗಳದಲ್ಲಿ ಭೇಟಿ ಮಾಡಿದುದನ್ನು ವರ್ಣಿಸುತ್ತದೆ.

[12]ಎಂ.ಎ.ಆರ್. ೧೯೧೦ ಪು.೧೭

[13]ಎಂ.ಎ.ಆರ್. ೧೯೩೮ ನಂ.೧ ಪುಟ ೮೮

[14]ಇ.ಸಿ.ಆರ್. ನಾಗಮಂಗಲ ೧೯೪೯

[15]ಎಂ.ಎ.ಆರ್. ೧೯೩೯ ನಂ. ೩೦. ಪು. ೧೨೯-೧೩೭.

[16]ಸಿ.ಐ. ೩೨ ೧೯೫೭-೫೮ ಪು.೩೧೩

[17]ಎಸ್.ಐ.ಐ.೧೧(೧) ನಂ.೭ ಪು.೪

[18]ಅದೇ ನಂ.೯ ಪು.೫

[19]ಅದೇ ನಂ.೧೫ ಪು.೧೦-೧೧

[20]ಎಂ.ಎ.ಆರ್. ೧೯೪೨ ನಂ.೭೫ ಪು. ೨೦೮-೨೩೧

[21]ಎಂ.ಎ.ಆರ್. ೧೯೧೯ ನಂ. ೬೭ ಪು. ೨೭-೩೦

[22]ಇ.ಸಿ.೪ ಯಡತೊರೆ ೬೫

[23]ಎಂ.ಎ.ಆರ್. ೧೯೩೮ ಪು. ೧೮೮-೧೯೦

[24]ಇ.ಸಿ. ೧೨ ಸಿರಾ ೩೯

[25]ಇ.ಸಿ. ೧೪. ನಂ.೨೯

[26]ಇ.ಸಿ. ೧೦. ಬಂಗಾರಪೇಟೆ.೪

[27]ಅದೇ ಬಂಗಾರಪೇಟೆ ೯.

[28]ರೈಸ್. ೨. ಪು. ೧೧೯-೨೫

[29]ಎಂ.ಎ.ಆರ್. ೧೯೩೫ ಪು. ೧೧೭-೧೩೦

[30]ಇ.ಸಿ. ೧೨. ತುಮಕೂರು ೫

[31]ಇ.ಸಿ.೩(ಆರ್) ನಂಜನಗೂಡು ೨೮೨

[32]ಎಸ್.ಐ.ಐ.೯(i) ನಂ.೬೫