ಕಲ್ಯಾಣದ ಚಾಲುಕ್ಯರು :

ಕೆರೆಗಳ ಸ್ವರ್ಣಯುಗ (೯೭೩೧೩೩೬) :ಹತ್ತನೆಯ ಶತಮಾನದ ಕೊನೆಯ ಕಾಲುಭಾಗದಿಂದ ಹದಿನಾಲ್ಕನೆಯ ಶತಮಾನದ ನಾಲ್ಕನೆಯ ದಶಕದ ವರೆಗಿನ ಕಾಲ (ಸುಮಾರು ೩೫೦ ವರ್ಷ) ಕೆರೆಗಳ ಸ್ವರ್ಣಯುಗವಾಗಿತ್ತು. ವಿದ್ವಾಂಸರು ನೆಲೆಸುವುದಕ್ಕಾಗಿ ಅಸಂಖ್ಯಾತ ಹೊಸ ಹಳ್ಳಿಗಳನ್ನು ಕಟ್ಟುವುದು, ಅಗ್ರಹಾರಗಳನ್ನು ನಿರ್ಮಿಸುವುದು, ಅಲ್ಲಿ ಕೆರೆಗಳನ್ನು ಕಟ್ಟುವುದು, ಸತ್ರ ಅಥವಾ ವಿಶ್ರಾಂತಿ ಗೃಹಗಳನ್ನು ಹಾಗೂ ದೇವಸ್ಥಾನಗಳನ್ನು ಕಟ್ಟುವುದು – ಇದೆಲ್ಲದರ ಯುಗ, ಆ ಕಾಲ. ವಾಸ್ತವವಾಗಿ ಅಗ್ರಹಾರ, ಸತ್ರ, ಕೆರೆ, ದೇವಾಲಯ ಈ ಎಲ್ಲ ಸಂಸ್ಥೆಗಳು ಪರಸ್ಪರ ಸಂಬಂಧಿಸಿದ್ದೇ ಆಗಿದ್ದವು. ಹಳ್ಳಿಯನ್ನು ರಚಿಸಿದಾಗ ನೀರು ಸರಬರಾಜು ಮೂಲಭೂತ ಅಗತ್ಯ. ಹತ್ತಿರದಲ್ಲಿ ನದಿ ಇಲ್ಲದಿದ್ದಲ್ಲಿ ಆ ಹಳ್ಳಿಯಲ್ಲಿ ಕೆರೆ ಕಟ್ಟಲು ಸಾಧ್ಯವೇ? ಎಂಬುದರ ಮೇಲೆ ಗಮನ ಇರುತ್ತಿತ್ತು. ಕೆರೆಯನ್ನು ಕಟ್ಟಿ ಮುಗಿಸಿದ ನಂತರ, ಕೃತಜ್ಞತೆಯ ರೂಪವಾಗಿ ಒಂದು ಗುಡಿಯನ್ನು ಕೆರೆಯ ಹತ್ತಿರ ಕಟ್ಟಲಾಗುತ್ತಿತ್ತು. ಕೆಲವೊಮ್ಮೆ ಕೆರೆ ಒಡೆದಾಗ, ಅದರ ದುರಸ್ತಿಗೆ ದೇವಾಲಯದ ನಿಧಿಯ ಒದಗುತ್ತಿತ್ತು. ಅಲ್ಲದೆ ದೇವಾಲಯಗಳಿಗೆ ಬೇಕಾದಷ್ಟು ಜಮೀನು ಇರುತ್ತಿತ್ತು. ಆದ್ದರಿಂದ ನೀರಾವರಿ ಸೌಲಭ್ಯವನ್ನು ಒದಗಿಸುವುದರಲ್ಲಿ ದೇವಾಲಯದ್ದೂ ಮುಖ್ಯ ಪಾತ್ರ ಇರುತ್ತಿತ್ತು. ಈ ಎಲ್ಲ ಸಂಘಟನೆಗಳ ಪೂರಾ ಮೇಲುಸ್ತುವಾರಿ ಪಡೆದಿದ್ದ ಸಂಸ್ಥೆಯೇ ಹಳ್ಳಿಯ ಸ್ವಯಮಾಡಳಿತ ಅಥವಾ ಗ್ರಾಮಸಭೆ. ಕರ್ನಾಟಕ ಇತಿಹಾಸದಲ್ಲಿ ಈ ಯುಗಕ್ಕೆ ಹಿಂದೆಯಾಗಲಿ ಅಥವಾ ಅನಂತರವಾಗಲಿ ಅಂಥ ಸಂಸ್ಥೆ ಮೆರೆದಿರಲಿಲ್ಲ. ಅದಕ್ಕೆ ಮುಂದಾಳತ್ವ ಒದಗಿಸುತ್ತಿದ್ದವರು ಗಾವುಂಡರು ಅಥವಾ ಹಳ್ಳಿಯ ಮುಖ್ಯಸ್ಥರು. ಊರುಗಳಲ್ಲಿ ನಗರ ಅಥವಾ ಶ್ರೇಣಿ ಎಂಬ ಪ್ರಾತಿನಿಧಿಕ ಸಂಸ್ಥೆಗಳೂ ಇದ್ದವು. ಅವುಗಳ ಮುಖಂಡರು, ನಗರ ಶ್ರೇಷ್ಠ ಅಥವಾ ಪಟ್ಟಣ ಶ್ರೇಷ್ಠಿ, ಅವರು ಕೂಡ ಗುಡಿಗಳನ್ನು ಕೆರೆಗಳನ್ನು ಕಟ್ಟುವುದರಲ್ಲಿ ಮುಖ್ಯಪಾತ್ರ ವಹಿಸುತ್ತಿದ್ದರು. ಹಳ್ಳಿಗಳ ಗುಂಪಿಗೆ ಅಥವಾ ನಾಡುಗಳಿಗೆ ನಾಡಗೌಂಡ ಮುಖ್ಯಸ್ಥನಾಗಿರುತ್ತಿದ್ದ. ಎಷ್ಟೂ ವೇಳೆ ಈ ಗುಂಪು ಅಥವಾ ನಾಡುಗಳನ್ನು ರೂಪಿಸುತ್ತಿದ್ದುದು, ಒಂದೇ ಮೂಲದಿಂದ ನೀರಾವರಿ ಮಾಡಲು ಅನುಕೂಲವಾಗಲಿ ಎಂದೇ. ಈ ಯುಗದಲ್ಲಿ (೯೭೩ – ೧೩೩೬) ನೀರಾವರಿ ಸೌಲಭ್ಯಗಳ ನಿರ್ಮಾಣ ಹಾಗೂ ಸಂರಕ್ಷಣೆಯಲ್ಲಿ ಜನತೆಯ ಪಾತ್ರ ಅತ್ಯುನ್ನತ ಮಟ್ಟದಲ್ಲಿತ್ತು.

ಕಲ್ಯಾಣದ ಚಾಲುಕ್ಯರು ದಖನ್ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಕ್ರಿ.ಶ. ೯೯೭೩ ರಿಂದ ೧೧೮೪ರ ವರೆಗೆ ಸುಮಾರು ಇನ್ನೂರು ವರ್ಷ ಆಳಿದರು. ಕೆರೆಗಳ ನಿರ್ಮಾಣದ ಶೇಕಡಾ ೫೦ರಷ್ಟು ಇಮ್ಮಡಿ ತೈಲಪ (೯೭೩ – ೯೭೭), ಇಮ್ಡಿ ಜಯಸಿಂಹ (೧೦೧೫ – ೪೪) ಹಾಗೂ ಮೊದಲನೆಯ ಸೋಮೇಶ್ವರ (೧೦೬೮ – ೭೬) ಮತ್ತು ಮುಂದಿನ ದೊರೆಗಳ ಆಳ್ವಿಕೆಯಲ್ಲಿ ಆದರೆ, ಉಳಿದ ಭಾಗ ಆದದ್ದು ಆರನೆಯ ವಿಕ್ರಮಾದಿತ್ಯನ ಆಳ್ವಿಕೆ ಯೊಂದರಲ್ಲಿ. ಪ್ರಚಂಡ ನಿರ್ಮಾಣಕಾರ್ಯದ ಈ ಯುಗದಲ್ಲಿ ಮಧ್ಯಕರ್ನಾಟಕದ ಧಾರವಾಡ, ಬಳ್ಳಾರಿ, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಗಳು ಕೆರೆ ನಿರ್ಮಾಣದಲ್ಲಿ ಅತ್ಯಂತ ಹೆಚ್ಚಿನ ಲಾಭಕ್ಕೆ ಪಾತ್ರವಾದವು.

ಚಾಲುಕ್ಯರು ಬಹುಸಂಖ್ಯೆಯ ದಾಖಲೆಗಳನ್ನು ಹೊರಡಿಸಿದರು. ಅವುಗಳಲ್ಲಿ ಆಗ ಇದ್ದ ಅನೇಕ ಕೆರೆಗಳನ್ನು ಕುರಿತವು. ಬಹುಪಾಲು ಹಳ್ಳಿಗಳಲ್ಲಿ ಕೆರೆ ಇದ್ದವು. ಇವು ದಾಖಲೆಗಳಲ್ಲಿ ಪ್ರಸ್ತಾಪಿತವಾಗಿವೆ. ಕೆಲವು ಉದಾಹರಣೆ ಇಲ್ಲಿವೆ :

ಧಾರವಾಡ ಜಿಲ್ಲೆಯ ಕೋಟವುಮಚಿಗೆಯ ಸುಮಾರು ೧೦೧೦ ದಾಖಲೆ[1]ಕೆರೆಗೆ ಸಂಬಂಧಿಸಿದ ಚಾಲುಕ್ಯ ದಾಖಲೆಗಳಲ್ಲೆಲ್ಲ ಅತಿ ಪ್ರಾಚೀನವಾದವುಗಳಲ್ಲಿ ಒಂದು. ಅದರಲ್ಲಿ ದೇವಿರಿಗೆರೆ ಎಂಬುದರ ಉಲ್ಲೇಖ ಇದೆ. ಹಳ್ಳಿಯಲ್ಲಿ ವಿಧಿಸಲಾಗುವ ದಂಡ ದಶವಂದ ಅಥವಾ ಭೂಮಿಯ ಹುಟ್ಟುವಳಿಯ ಶೇ ೧೦ರಷ್ಟು ತೆರಿಗೆ ಮತ್ತು ಉಯಿಲು ಮಾಡದೆ ಹಾಗೂ ವಾರಸುದಾರರಿಲ್ಲದೆ ಸಾಯುವವರ ಆಸ್ತಿ ? ಇವುಗಳನ್ನು ಕೆರೆಯ ದುರಸ್ತಿಗಾಗಿ ಬಳಸಿಕೊಳ್ಳತಕ್ಕದ್ದು – ಎಂದು ಇದು ತಿಳಿಸುತ್ತದೆ. ಇಮ್ಮಡಿ ಜಯಸಿಂಹನ ಆಳ್ವಿಕೆಯ ಕ್ರಿ.ಶ. ೧೦೪೧ರ ಮಂಟೂರು ಶಾಸನ[2]ರಲ್ಲಿ ಮಂಟೂರು ಮಹಾಜನರು ರಟ್ಟಸಮುದ್ರವನ್ನು ಕಟ್ಟಿದುದು ದಾಖಲಾಗಿದೆ. ಒಂದನೆಯ ಸೋಮೇಶ್ವರ (೧೦೬೮ – ೭೬) ತನ್ನ ನಿರ್ಮಾಣ ಕಾರ್ಯವನ್ನು ಧಾರವಾಡ ಜಿಲ್ಲೆಗೆ ಮಿತಿಗೊಳಿಸಿದ್ದ. ಅವನ ಮಗನೂ ಉತ್ತರಾಧಿಕಾರಿಯೂ ಆದ ಆರನೆಯ ವಿಕ್ರಮಾದಿತ್ಯ ಕೆರೆ ನಿರ್ಮಾಣದಲ್ಲಿ ಅವನನ್ನು ಮೀರಿಸಿದ. ತ್ರೈಲೋಕ್ಯಮಲ್ಲ ಅಥವಾ ಒಂದನೆಯ ಸೋಮೇಶ್ವರನ ಆಳ್ವಿಕೆಯಲ್ಲಿ ಭಾವನಗಂಧವಾರಣ ಎಂಬ ಒಬ್ಬ ಅಧಿಕಾರಿ ಹಲವಾರು ಕೆರೆಗಳನ್ನು ಗುಡಿಗಳನ್ನು ಕಟ್ಟಿಸಿದ್ದು ಬಿಜಾಪುರ ಜಿಲ್ಲೆಯ ನಂದವಾಡಿಗೆ ಶಾಸನದಲ್ಲಿ[3] ದಾಖಲಾಗಿದೆ. ಹಾಗೆ ಕಟ್ಟಿಸಿದ ಸ್ಥಳಗಳು ಉತ್ತರ ಕರ್ನಾಟಕ ಎಲ್ಲ ಕಡೆ ಕಾಣಸಿಗುತ್ತವೆ. ಉದಾಹರಣೆಗೆ ಕಲ್ಯಾಣ, ಅಣ್ಣಿಗೇರೆ, ಮುಳುಗುಂದ, ಕೊಲವುಗೆ, ನಂದಪುರ, ಕೊಹಳ್ಳಿ, ಮಂಡಲಗೆರೆ, ಬೆಳಗಲಿ, ಬನವಾಸಿ, ಕರಿವಿಡಿ, ನವಿಲೆ, ನಂದವಾಡಿಗೆ ಹಾಗೂ ಪೇರೂರು. ಪ್ರಾಯಃ, ಆತ ಈ ಸ್ಥಳಗಳಲ್ಲಿ ಅಥವಾ ಆಸುಪಾಸಿನಲ್ಲಿ ಅಧಿಕಾರ ಮಾಡಿದ್ದಿರಬಹುದು. ಅದೇ ಮೊದಲನೆಯ ಸೋಮೇಶ್ವರನ ಮೋರಿಗೆರೆ ಶಾಸನ[4] ಕ್ರಿ.ಶ. ೧೦೪೬ರಂದು (ಬಳ್ಳಾರಿ ಜಿಲ್ಲೆ) ಕೆರೆ ನಿರ್ಮಾಣದಲ್ಲಿ ಅನುಸರಿಸಲಾದ ವಿಧಾನವನ್ನು ಪ್ರಸ್ತಾಪಿಸುತ್ತದೆ. ಮೊದಲು ಎಲ್ಲಿ ಕೆರೆಯನ್ನು ಕಟ್ಟಬೇಕೋ ಆ ಸ್ಥಳವನ್ನು ಖರೀದಿ ಮಾಡಲಾಗುತ್ತಿತ್ತು. ಈ ಶಾಸನದಂತೆ ಮಲ್ಲಿಪಯ್ಯ ಎಂಬವನಿಂದ ಭೂಮಿಯನ್ನು ಕೊಳ್ಳಲಾಯಿತು.

ಹಿಂದೆ ಹೇಳಿದಂತೆ ಕಲ್ಯಾಣದ ಚಾಲುಕ್ಯರ ಯುಗದಲ್ಲಿ ಆರನೆಯ ವಿಕ್ರಮಾದಿತ್ಯನ ಆಳ್ವಿಕೆ ಅತ್ಯಂತ ಹೆಚ್ಚಿನ ಸಂಖ್ಯೆಯ ಕೆರೆಗಳ ನಿಮಾರ್ಣವನ್ನು ಕಂಡಿತು. ಕ್ರಿ.ಶ. ೧೦೭೭ರ ಮೊರಬ(ನವಲಗುಂದ ತಾಲ್ಲೂಕು)ಶಾಸನದ ಪ್ರಕಾರ[5], ವಿಕ್ರಮಾದಿತ್ಯನ ತಮ್ಮ ನೊಳಂಬಾಧಿರಾಜ ಜಯಸಿಂಹ, ಸ್ಥಳೀಯ ಕೆರೆಗೆ ನೊಳಂಬಸಮುದ್ರ ಎಂಬ ಪುನರ್ನಾಮ ಕರಣಮಾಡಿದ. ಮತ್ತು ಅದರ ಸಂರಕ್ಷಣೆಗಾಗಿ ಭೂಮಿಯನ್ನು ದಾನವಿತ್ತ. ಕ್ರಿ.ಶ೧೦೮೦ರ ಆರನೆಯ ವಿಕ್ರಮಾದಿತ್ಯನ ಹಳೆಬೆನ್ನೂರು ಶಾಸನದಲ್ಲಿ.[6] ತಂಬ ಸಮುದ್ರವೆಂಬ ಕೆರೆ ಬಹು ಕಾಲದಿಂದ ಒಡೆದು ಹೋಗಿದ್ದುದರ ಪ್ರಸ್ತಾಪವಿದೆ.38 ಆ ಸ್ಥಳದ ಮಹಾಜನರು (ವಿದ್ವಾಂಸರು) ಅದನ್ನು ದುರಸ್ತಿಗೊಳಿಸುವಂತೆ ರಾಜ್ಯಪಾಲ ತಂಬನಿಗೆ ಮನವಿ ಮಾಡಿದರು. ರಾಜ್ಯಪಾಲ, ಜಕ್ಕಿಗೋಶಿ ಎಂಬ ತಂತ್ರಜ್ಞಾನಿ ಮೂಲಕ ಕೆರೆಯನ್ನು ಸರಿಪಡಿಸಿ ಅದಕ್ಕೆ ತನ್ನದೇ ಹೆಸರನ್ನಿಟ್ಟ. ಹಾಗೂ ಅದರ ಸಂರಕ್ಷಣೆಗೆ ವ್ಯವಸ್ಥೆ ಮಾಡಿದ. ಇದರಿಂದ, ಕೆರೆಗಳ ದುರಸ್ತಿ ಹಾಗೂ ಸಂರಕ್ಷಣೆಗಳು ಸ್ಥಳೀಯ ಸಭೆಯ ಹೊಣೆ ಆಗಿತ್ತು. ಮತ್ತು ಆ ಸಭೆ ತನ್ನ ಅಸಾಮರ್ಥ್ಯವನ್ನು ಹೇಳಿಕೊಂಡಾಗ ಮಾತ್ರ ಮೇಲಿನ ಅಧಿಕಾರಿಗಳ ಸಹಾಯವನ್ನು ಕೋರಲಾಗುತ್ತಿತ್ತು ಎನ್ನುವುದು ಕಂಡುಬರುತ್ತದೆ. ಪುಲಿಗೆ ಎಂಬ ಹಳ್ಳಿಯ ಅಭಿವೃದ್ಧಿಗಾಗಿ ತುಂಗಭದ್ರಾ ನದಿಯಿಂದ ಒಂದು ನಾಲೆ ಹಾಗೂ ಇತರ ಸಣ್ಣ ಕಾಲುವೆಗಳ ಜಾಲದ ವಿಶಿಷ್ಟ ರೀತಿಯ ನಿರ್ಮಾಣಕಾರ್ಯವನ್ನು ಕ್ರಿ.ಶ೧೦೮೮ರ ಮುನಿರಾಬಾದು ಶಾಸನ[7] ಪ್ರಸ್ತಾಪಿಸುತ್ತದೆ. ಈ ಜಾಲ ಕಮಲದ ದಂಟನ್ನು ಸೀಳಿ ಎಳೆಗಳನ್ನು ಹರಡಿದಂತೆ ಇತ್ತು. ಎಂದು ಶಾಸನದಲ್ಲಿ ಹೋಲಿಸಲಾಗಿದೆ. ಕೆಳಮಟ್ಟದ ನಾಲೆ ಹಾಗೂ ಮೇಲು ಮಟ್ಟದ ನಾಲೆಗಳ ಪ್ರಸ್ತಾಪವೂ ಈ ಶಾಸನದಲ್ಲಿದೆ. ಹುಲಿಗೆ (ಪುಲಿಗೆ) ಹಳ್ಳಿ ಈಗಿನ ತುಂಗಭದ್ರಾ ಅಣೆಕಟ್ಟಿನ ಕೆಳಕ್ಕೆ ಎರಡು ಮೈಲಿ ದೂರದಲ್ಲಿದೆ. ಹಳೆಯ ಅಣೆಕಟ್ಟು ಇನ್ನೂ ಇದೆ. ಹುಲಿಗೆ ನಾಲೆಯನ್ನು ಎಡದಂಡೆ ನಾಲೆಯ ಒಂದನೆಯ ಹಾಗೂ ಎರಡನೆಯ ಶಾಖೆಗಳಿಗೆ ಜೋಡಿಸಲಾಗಿದೆ.

ಬಾದಾಮಿ ತಾಲ್ಲೂಕಿನ ಕಟ್ಟಿಗೇರಿ ಅವಶೇಷಗಳನ್ನು ಕುರಿತ ಫ್ಲೀಟ್‌ನ ಟಿಪ್ಪಣಿಗಳು[8] ಕೆರೆಗಳ ವ್ಯೂಹಯೋಜನೆಯ ತಂತ್ರಜ್ಞಾನವು ಉನ್ನತ ಅಭಿವೃದ್ಧಿ ಮಟ್ಟವನ್ನು ಮುಟ್ಟಿತ್ತು ಎನ್ನುವುದನ್ನು ತೋರಿಸುತ್ತವೆ.

“ಕಟ್ಟಿಕೇರಿಯ ಕೆರೆಗಳ ವ್ಯೂಹ ಹಿಂದೆ ಭಾರಿಯಾಗಿತ್ತು. ಮೊದಲು ಕೋಟೆಯ ಪಶ್ಚಿಮದಲ್ಲಿ ಒಂದು ಸಣ್ಣ ಕೆರೆ, ಎರಡನೆಯದಾಗಿ ಕೊಂಚ ಮೇಲು ಮಟ್ಟದಲ್ಲಿ ಸ್ವಲ್ಪ ದೊಡ್ಡದಾದ ಕೆರೆ. ಅದು ದುರಸ್ತಿಯಲ್ಲಿದ್ದು, ತುಂಬಿದಾಗ ಮೊದಲನೆಯ ಕೆರೆಯನ್ನು ಒಳಗೊಳ್ಳುತ್ತಿತ್ತು. ಆ ಕೆರೆಗೆ ಕೋಟೆಯ ನೈಋತ್ಯಕ್ಕೆ ಸುಮಾರು ಕಾಲುಮೈಲಿ ದೂರದಲ್ಲಿ ಕೆಳಮಟ್ಟದಲ್ಲಿ ಇನ್ನೊ ದೊಡ್ಡ ಕಟ್ಟೆ ಇತ್ತು. ಅದು ಒಡೆದು ಹೋಗಿ ಈಗ ಅವಶೇಷಗಳು ಮಾತ್ರ ಉಳಿದು ನಿರುಪಯುಕ್ತವಾಗಿದೆ. ಅದು ದುರಸ್ತಿಯಲ್ಲಿದ್ದಾಗ ಸಾಕಷ್ಟು ವಿಸ್ತಾರದ ಕೆರೆ ಆಗಿತ್ತು ಎನ್ನುವುದು ಖಂಡಿತ. ಶಾಸನದಲ್ಲಿ ಹೇಳಲಾದ ಅತಿ ದೊಡ್ಡ ಕೆರೆ ಇದೇ ಆಗಿರಬೇಕು.”

ವಿವಿಧ ಮಟ್ಟಗಳಲ್ಲಿ ಕೆರೆಗಳ ಸಾಲುಸಾಲನ್ನೆ ಕಟ್ಟುವ ಈ ವ್ಯವಸ್ಥೆಯ ಉದ್ದೇಶ ನೀರಾವರಿ ಸೌಲಭ್ಯ ಒದಗಿಸುವುದರ ಜೊತೆಗೆ ನೆರೆ ಹತೋಟಿಯೂ ಆಗಿತ್ತು ಎನ್ನುವುದು ಸ್ಪಷ್ಟ. ಅತಿಪ್ರಾಚೀನ ಕಾಲದ ಸಾಲು ಕೆರೆಗಳ ಮೊಟ್ಟ ಮೊದಲ ವರ್ಣನೆ ಇದೇ.

ಕೆರೆಗಳನ್ನು ಕುರಿತಂತೆ ಇಲ್ಲಿ ಉದ್ಧರಿಸಲಾದ ಈ ವಂಶದ ಕೊನೆಯ ಶಾಸನ[9] ೧೧೮೪ದ್ದು, ನಾಲ್ವಡಿ ಸೋಮೇಶ್ವರನದು. ಡಂಬಳದ ಗೋಣಸಮುದ್ರ ಕೆರೆಯಲ್ಲಿ ಹೂಳು ತೆಗೆಯುವುದಕ್ಕೆ, ಕಲ್ಲು ಕಟ್ಟಡ ರಿಪೇರಿಗೆ ಹಾಗೂ ತೂಬಿನ ಕಟ್ಟಿಗೆಗಾಗಿ ಪನ್ನಾಯ ಸುಂಕವನ್ನು ದಾನಮಾಡಿದ್ದರ ಪ್ರಸ್ತಾಪವಿದೆ. ಈ ಶಾಸನದಲ್ಲಿ ಸ್ಥಳೀಯ ಪೌರ ಸಮಿತಿಗೆ ಸೇರಿದ ಹದಿನಾರು ಸೆಟ್ಟಿಗಳಿಗೆ(ವರ್ತಕರು) ಆ ದಾನವನ್ನುವಹಿಸಲಾಯಿತು. ಈ ಕೆರೆ ಈಗಲೂ ಇರುವಂಥದು. ಧಾರವಾಡ ಜಿಲ್ಲೆಯಲ್ಲಿನ ಅತಿದೊಡ್ಡ ಕೆರೆಗಳಲ್ಲಿ ಒಂದು.

ಶಿವಮೊಗ್ಗ ಜಿಲ್ಲೆಯ ಸಾಂತರ ಪಾಳೆಯಪಟ್ಟು ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿತ್ತು. ಕ್ರಿ.ಶ. ೧೦೬೨ರ ಮಾಹೂರಿನ ಸಾಂತರ ಶಾಸನ ಒಂದರಲ್ಲಿ[10] ಪಟ್ಟಣಸ್ವಾಮಿ ನೊಕ್ಕಯ್ಯ ಸಾಂತಗೆರೆಯನ್ನು ಕಟ್ಟಿಸಿದರ ಪ್ರಸ್ತಾಪವಿದೆ. ಆತ ಸಾಂತರ ಪಾಳೆಯಪಟ್ಟಿನ ರಾಜಧಾನಿ ಹೊಂಬುಚದ (ಹುಂಚ) ಒಬ್ಬ ಆದರ್ಶ ಪಟ್ಟಣಸ್ವಾಮಿ. ಆತ ಪ್ರಜೆಗಳ ಮುಖಕ್ಕೆ ಒಂದು ಒಡೆವೆ ಇದ್ದಂತೆ ಮತ್ತು ಇಡೀ ಸಾಂತರ ರಾಜ್ಯಕ್ಕೆ ಸಂಪಾದಾಭಿವೃದ್ಧಿಯ ಕಾರಣಕರ್ತ ಎಂದು ವರ್ಣಿಸುತ್ತದೆ, ಶಾಸನ. ಆತ ಸಾಂತಗೆರೆಯನ್ನು ಕಟ್ಟಿಸಿದ್ದುದೆ ಅಲ್ಲದೆ, ಮೊಳಕೆರೆ, ಪಟ್ಟಣಸ್ವಾಮಿಗೆರೆ ಹಾಗೂ ತಾಲವಿಂದಕೆರೆಗಳನ್ನು ಕಟ್ಟಿಸಿದ. ಈ ಪಟ್ಟಣಸ್ವಾಮಿ ೧೦೦ ಗದ್ಯಾಣ ವೆಚ್ಚಮಾಡಿ ಉಗುರೆ ಪ್ರವಾಹ ಪಾಗಿಮಂಗಳ ಕೆರೆಗೆ ಹೋಗುವಂತೆ ಮಾಡಿದ ಎನ್ನಲಾಗಿದೆ. ನೀರಾವರಿ ಸೌಲಭ್ಯದ ಅಭಿವೃದ್ಧಿಯಲ್ಲಿ ಈತನ ದಾಖಲೆಯನ್ನು ಬೇರೆ ಯಾವ ಸಮಕಾಲೀನ ಪಟ್ಟಣಸ್ವಾಮಿಯೂ ಮೀರಿಸಲಿಲ್ಲ.

ಚಾಲುಕ್ಯರ ಶಾಸನಗಳಲ್ಲಿ ಅದರಲ್ಲೂ ವಿಶೇಷವಾಗಿ ಧಾರವಾಡ, ಬಳ್ಳಾರಿ ಜಿಲ್ಲೆಗಳ ಶಾಸನಗಳಲ್ಲಿ ಸಾಕಷ್ಟು ಸಂಖ್ಯೆಯ ಕೆರೆಗಳ ಪ್ರಸ್ತಾಪವಿದೆ. ಕೆಲವು ಸ್ಥಳಗಳು ಕೆರೆಗಳಿಂದ ತುಂಬಿಹೋಗಿದ್ದವು. ಹೀಗೆನ್ನುವ ಶಾಸನಗಳಿಂದ ಆ ಪ್ರದೇಶಗಳು ಜಲಸಂಪನ್ಮೂಲಗಳ ವಿತರಣೆಯಲ್ಲಿ ಎಷ್ಟು ಶ್ರೀಮಂತವಾಗಿದ್ದವು ಎನ್ನುವುದು ನಿಚ್ಚಳವಾಗುತ್ತದೆ. ಅಂಥ ಕೆಲವು ಸ್ಥಳಗಳೆಂದರೆ ಮರತೂರು, ನರಗುಂದ, ಋಷ್ಯಶೃಂಗ, ನರೇಗಲ್ಲು, ಪೊಸವೂರು, ಹೂಲಿ, ತೇರದಾಳ, ಅಳವಂಡಿ, ಬೆಳಗಲಿ, ಮತ್ತು ಅಳಂದಿ. ಬನವಾಸಿ ಹಾಗೂ ಬೆಳುವೂಲದಂತ ನಾಡುಗಳನ್ನು ಅದೇ ರೀತಿ ಬಣ್ಣಿಸಲಾಗಿದೆ.

ಬಾಗಳಿ ಮತ್ತು ಅದರ ಕೆರೆಗಳು : ಕೆರೆಗಳು ನಿಬಿಡವಾಗಿದ್ದ ಪ್ರದೇಶಗಳ ಈ ಸಾಮಾನ್ಯ ವರ್ಣಿನೆಗಳ ಜೊತೆಗೆ, ಜನರು ತಾವೇ ಕೆರೆಗಳನ್ನು ಒದಗಿಸಿಕೊಳ್ಳುತ್ತಿದ್ದದನ್ನು ತೋರಿಸಲು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಬಾಗಳಿ ಊರನ್ನು ನಿರ್ದಿಷ್ಟ ನಿದರ್ಶನವಾಗಿ ಉಲ್ಲೇಖಿಸಬಹುದು. ಈ ಕೆರೆಯ ಬಗೆಗಿನ ಅತ್ಯಂತ ಪ್ರಾಚೀನ ಉಲ್ಲೇಖ ಇರುವುದು ರಾಷ್ಟ್ರಕೂಟ ದೊರೆ ಇಂದ್ರವಲ್ಲಭನ ಶಾಸನದಲ್ಲಿ.[11] ಕೆರೆಯ ವೆಚ್ಚಕ್ಕಾಗಿ ಒಂದು ಗ್ರಾಮದ ದಾನವನ್ನು ಬಾಡಮ್ಮ ಎಂಬಾಕೆ ನೀಡಿದ ಪ್ರಸ್ತಾಪ ಅದರಲ್ಲಿದೆ. ಕ್ರಿ.ಶ ೧೦೬೮ರಲ್ಲಿ ಮಹದೇವಯ್ಯ ಎಂಬಾತ ಪಿರಿಯಕೆರೆಗಾಗಿ (ದೊಡ್ಡಕೆರೆ) ೧೨ ಗದ್ಯಾಣ ದಾನವಿತ್ತು.[12] ಹೆಸರೇ ಸೂಚಿಸುವಂತೆ ಅದು ಆ ಪ್ರಾಂತ್ಯದಲ್ಲೆಲ್ಲ ಅತಿ ದೊಡ್ಡಕೆರೆ. ಕ್ರಿ.ಶ. ೧೧೦೭ರಲ್ಲಿ ಅದೇ ಪಿರಿಯ ಕೆರೆಯ ದುರಸ್ತಿಗಾಗಿ ದಂಡನಾಯಕ ಬರ್ಮರಸ ಬಾಗುಳಿಯ (ಬಾಗಲಿ) ಪನ್ನಾಯ ತೆರಿಗೆಯಿಂದ ತಿಂಗಳಿಗೆ ಒಂದು ಗದ್ಯಾಣವನ್ನು ಮಹಾಜನರಿಗೆ ನೀಡಿದ.[13] ಕ್ರಿ.ಶ೧೧೧೫ರಲ್ಲಿ ದಂಡನಾಯಕ ತಿಕ್ಕಭಟ್ಟ ಪಿರಿಯ ಈ ಕೆರೆಯ ದುರಸ್ತಿಗಾಗಿ ಸುಂಕದ ಆದಾಯವನ್ನು ದಾನವಿತ್ತ.[14] ಕಲ್ಲೇಶ್ವರ ಗುಡಿಯಲ್ಲಿ ಸಿಕ್ಕಿದ ತಾರೀಕು ಇಲ್ಲದ ಒಂದು ಶಾಸನದಂತೆ, ಚಿಕ್ಕಗೌಂಡನೆಂಬಾತ ಈ ಪಿರಿಯ ಕೆರೆಯನ್ನು ದುರಸ್ತಿ ಮಾಡಿದ್ದಕ್ಕಾಗಿ ಭೂಮಿದಾನ[15] ಪಡೆದ. ಅದೇ ಶಾಸನದಲ್ಲಿ ಬಾಚುಗೊಂಡ ಎಂಬಾತ ಅದೇ ಕೆರೆಗೆ ಇನ್ನೊಂದು ದಾನ ಕೊಟ್ಟ. ಕ್ರಿ.ಶ. ೧೧೦೮ರ ಇನ್ನೊಂದು ಶಾಸನದಲ್ಲಿ[16] ಈ ಪಿರಿಯ ಕೆರೆಯಷ್ಟೆ ಅಲ್ಲದೆ, ಕೆಂಚಮಯ್ಯಗೆರೆ, ಬೇಗೆಯರ ಕೆರೆ, ಕಪ್ಪೂರುಗೆರೆ ಎಂಬ ಇನ್ನೂ ಮೂರು ಕೆರೆಗಳ ಉಲ್ಲೇಖವಿದೆ. ಕ್ರಿ.ಶ ೧೧೮೮ರಲ್ಲಿ ಬಾಗುಳೆಯ ಮಹಾಜನರು, ಲಾಲಬ್ಬೆಯ ದಾಸೆಯ ನಾಯಕನ ಕೆರೆಗೆ ಭೂಮಿದಾನ ಕೊಟ್ಟರು.[17] ಇದು ಐದನೆಯ ಕೆರೆ. ಒಂದೇ ಊರಿನಲ್ಲಿದ್ದ ಈ ಎಲ್ಲ ಐದು ಕೆರೆಗಳ ನಿರ್ಮಾಣ ಹಾಗೂ ಉಸ್ತುವಾರಿ ಸ್ಥಳೀಯ ನಿವಾಸಿಗಳದೇ. ಅವರಿಗೆ ಸ್ಥಳೀಯ ಅಧಿಕಾರಿಗಳು, ಮುಖ್ಯಸ್ಥರೂ ನೆರವೀಯುತ್ತಿದ್ದರು. ಹಣ ಹಾಗೂ ಭೂಮಿದಾನಗಳನ್ನು ಧಾರಾಳವಾಗಿ ಕೊಡುತ್ತಿದ್ದರು. ಹತ್ತನೆಯ ಶತಮಾನದ ಆರಂಭದಿಂದ ಹನ್ನೆರಡನೆಯ ಶತಮಾನದ ಅಂತ್ಯದವರೆಗೂ ಇನ್ನೂರು ವರ್ಷಕಾಲ ಇದು ಸಾಗಿತ್ತು.

ವೀರಶೈವ ಸಂತರು : ವೀರಶೈವ ಸುಧಾರಕ ಸಿದ್ಧರಾಮ, ಗುಡಿಗಳನ್ನು ಕಟ್ಟುವ ಪದ್ಧತಿಗಿಂತ ಕೆರೆ ಕಾಲುವೆಗಳ ನಿರ್ಮಾಣ ಹೆಚ್ಚು ಉಪಯುಕ್ತ ಎಂದು ಬೋಧಿಸಿದ ಹಾಗಿದೆ. ತನ್ನ ಶಿಷ್ಯರನ್ನು ಪ್ರೇರಿಸುವುದಷ್ಟಕ್ಕೆ ಆತ ನಿಲ್ಲಲಿಲ್ಲ. ತಾನೇ ಸೋಲ್ಲಾಪುರದಲ್ಲಿ ಭಾರಿ ಕೆರೆಯನ್ನು ಕಟ್ಟಿಸಲು ಮುಂದೆ ನಿಂತ. ಆ ಕೆರೆ ಇವತ್ತಿಗೂ ಜನರಿಗೆ ಉಪಯುಕ್ತವಾಗಿದೆ. ಆತ ಇದ್ದುದು ೧೨ನೇಯ ಶತಮಾನದ ಉತ್ತರಾರ್ಧದಲ್ಲಿ.[18] ವೀರಶೈವ ಶರಣರಿಗೆ ಸಂಬಂಧಿಸಿದ ಇನ್ನೊಂದು ಕೆರೆ ಬಸವಕಲ್ಯಾಣಕ್ಕೆ (ಬೀದರ್ ಜಿಲ್ಲೆ) ೫ ಕಿ.ಮೀ ಹತ್ತಿರ ಇರುವ ತ್ರಿಪುರಾಂತಕ ಸರೋವರ. ಈ ಭವ್ಯ ಕೆರೆಯ ದಡದಲ್ಲಿ ತ್ರಿಪುರಾಂತಕೇಶ್ವರನ ದೇವಾಲಯ ಇದೆ. ಅಲ್ಲಿ ಸಿಕ್ಕಿರುವ ಒಂದು ಕನ್ನಡ ಶಾಸನದಲ್ಲಿ ಚಾಲುಕ್ಯ ಮುಮ್ಮಡಿ ತೈಲಪನ ಮಡಿವಾಳನಾಗಿದ್ದ ಬಸವ ಎಂಬಾತನು ಶರಣ ಮಡಿವಾಳ ಮಾಕೆಯನಿಗೆ ಇತ್ತ ದಾನದ ಪ್ರಸ್ತಾಪವಿದೆ.[19]

ರಾಜಧಾನಿ ಕಲ್ಯಾಣಕ್ಕೆ ನೀರು ಪೂರೈಕೆ : ಈ ಕೆರೆಯನ್ನು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಕಟ್ಟಿರಬೇಕು ಎನ್ನುವುದರಲ್ಲಿ ಸಂದೇಹವಿಲ್ಲ. ಅದು ನೀರಾವರಿಗೆ ಉಪಯುಕ್ತವಾಗುವುದರ ಜೊತೆಗೆ, ರಾಜಧಾನಿಗೆ ನೀರನ್ನು ಪೂರೈಸುತ್ತಿದ್ದಿರಬೇಕು. ಬಸವಕಲ್ಯಾಣದ ಬಳಿಯ ಒಂದು ಹೊಳೆಗೆ ಇವತ್ತು ಚುಳ್ಳಿ ನಾಲಾ ಎನ್ನುತ್ತಾರೆ. ಅದು ಚುಲುಕು (ಚಾಲುಕ್ಯ) ನಾಲಾ ಎಂಬುದರ ಅಪಭ್ರಂಶ ಎನ್ನುವುದು ಸ್ವತಃ ಸಿದ್ಧ. ಆ ನಾಲೆಯ ಕಲ್ಯಾಣಕ್ಕೂ ಆಸುಪಾಸಿಗೂ ನೀರನ್ನು ಒದಗಿಸುತ್ತಿದ್ದಿರಬೇಕು.

ಹುನಗುಂದ ತಾಲ್ಲೂಕಿನ ನಂದವಾಡಿಗೆ ಶಾಸನದ ಪ್ರಕಾರ, ಒಂದನೆಯ ಸೋಮೇಶ್ವರನ ೧೦೬೮ – ೭೬ ಅಧಿಕಾರಿಯಾಗಿದ್ದ ಭಾವನಗಂಧವಾರಣ ರಾಜಧಾನಿ ಕಲ್ಯಾಣದಲ್ಲಿ ಒಂದು ಕೆರೆ ಕಟ್ಟಿಸಿದ್ದನ್ನು ನಾವು ಆಗಲೇ ನೋಡಿದ್ದೇವೆ.

ಸಾಮ್ರಾಟ ಚೋಳರು :

ಕಲ್ಯಾಣ ಚಾಲುಕ್ಯರಿಗೆ ದಕ್ಷಿಣ ಕರ್ನಾಟಕದಲ್ಲಿ ಸಮಕಾಲೀನರಾಗಿದ್ದರು, ಚೋಳರು. ಅವರು ಆ ಪ್ರದೇಶ ಒಂದು ಭಾಗದಲ್ಲಿ ಒಂದೂವರೆ ಶತಮಾನ ಆಳಿದರು. ಅವರ ನಿರ್ಮಾಣ ಚಟುವಟಿಕೆ ಕೋಲಾರ, ಮೈಸೂರು, ಬೆಂಗಳೂರು, ಜಿಲ್ಲೆಗಳಿಗೆ ಸೀಮಿತವಾಗಿತ್ತು. ಒಂದನೆಯ ರಾಜೇಂದ್ರ (ಕ್ರಿ.ಶ ೧೦೧೨ – ೪೪) ಆ ಕಾರ್ಯವನ್ನು ಆರಂಭಮಾಡಿದ. ಕೆಲವು ಉದಾಹರಣೆ ಹೀಗಿವೆ: ಮಳಲೂರಿನ ನಿವಾಸಿಗಳೂ ಸ್ಥಳೀಯ ದೇವತೆಗೆ ಬಿಟ್ಟಿದ್ದ ಭೂಮಿಯ ನೀರಾವರಿಗೆ ಅನುಮತಿಯಿತ್ತರು ಎಂದು ಕ್ರಿ.ಶ. ೧೦೧೪ರ ಮಳೂರು ಪಟ್ಟಣ ಶಾಸನ[20] ಹೇಳುತ್ತದೆ. ಈ ವ್ಯವಸ್ಥೆಗೆ ಅಡ್ಡಿಮಾಡಿದವರ ಮೇಲೆ ೫೦ ಕಳಂಜು ಹೊನ್ನಿನ ದಂಡ ವಿಧಿಸುವ ಹಕ್ಕನ್ನು ದೇವಾಲಯದ ಅಧಿಕಾರಿ ವರ್ಗಕ್ಕೆ ಕೊಡಲಾಯಿತು. ಕೆಳಕಾಣಿಸಿರುವ ಒಂದನೆಯ ರಾಜೇಂದ್ರನ ಶಾಸನಗಳು ಕೆರೆಗಳ ನಿರ್ಮಾಣ ಅಥವಾ ಜೀರ್ಣೋದ್ಧಾರಕ್ಕೆ ಸಂಬಂಧಿಸಿವೆ. ಕೋಲಾರ ಜಿಲ್ಲೆಯ ಕ್ರಿ.ಶ. ೧೦೦೦ ಹೆಬ್ಬಣಿ ಶಾಸನ[21] ಒಂದು ಕೆರೆ ಒಡೆದುದನ್ನೂ ಒಬ್ಬ ಗಾವುಂಡ(ಮುಖ್ಯಸ್ಥ) ಅದನ್ನು ದುರಸ್ತು ಮಾಡಿದುದನ್ನೂ ಪ್ರಸ್ತಾಪಿಸುತ್ತದೆ. ಆ ಕೆರೆಯ ಸಂರಕ್ಷಣೆಗಾಗಿ, ನೊಳಂದ ವಂಶವು ಒಬ್ಬ ಖಾಸಗಿ ವ್ಯಕ್ತಿಗೆ ಭತ್ತದ ಗದ್ದೆಯನ್ನು ದಾನವಾಗಿ ಕೊಟ್ಟುದು ಮಳೂರು ಪಟ್ಟಣದ ಒಂದು ದಾಖಲೆಯಲ್ಲಿದೆ.[22] ವಂಡೂರಿನ ಗ್ರಾಮಸಭೆಯು ದೇವತೆಗಾಗಿ ಭೂಮಿಯನ್ನು ಸುಂಕರಹಿತ ದೇವದಾನ ಅಥವಾ ಕಾಣಿಕೆಯಾಗಿ ಕೊಟ್ಟಿತೆಂದು ಮಳೂರ ಪಟ್ಟಣದ ಶಾಸನದಲ್ಲಿ ಹೇಳಲಾಗಿದೆ. ಆ ಭೂಮಿಗಳಿಗೆ ಅಲ್ಲಿನ ಕೆರೆಯಿಂದ ನೀರಾವರಿ ಮಾಡಬಹುದೆಂದೂ ಅನುಮತಿಯಿತ್ತಿತ್ತು. ಒಂದನೆಯ ರಾಜೇಂದ್ರನ ಮುಂದಿನವ ಚೋಳ ಮಹಾರಾಜ ಕುಲೋತ್ತುಂಗ. ಅವನ ಕಾಲದಲ್ಲಿ ಕ್ರಿ.ಶ ೧೧೧೬ರಲ್ಲಿ ಹೊಯ್ಸಳ ವಿಷ್ಣುವರ್ಧನ ಗಂಗವಾಡಿಯನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡುದರಿಂದ ಕರ್ನಾಟಕದಲ್ಲಿ ಚೋಳರ ಆಳ್ವಿಕೆ ಕೊನೆಗೊಂಡಿತು. ಅಲ್ಲಿಗೆ ಕರ್ನಾಟಕದಲ್ಲಿ ಕೆರೆ ನೀರಾವರಿಯ ಬೆಳವಣಿಗೆಯಲ್ಲಿ ಹೊಯ್ಸಳರು ಕೊಡುಗೆಗೆ ಬರುತ್ತೇವೆ.

 

[1]ಇ.ಐ.೨೦.ನಂ.೬.

[2]ಎಸ್.ಐ.ಐ.೯(i) ನಂ.೬೫

[3]ಅದೇ. ನಂ.೧೩೩

[4]ಎಸ್.ಐ.ಐ.೯(i) ನಂ.೬೫

[5]ಅದೇ. ೧೧ (ii) ನಂ. ೧೨೪

[6]ಎಂ.ಎ.ಆರ್. ೧೯೩೦ ನಂ. ೭೬

[7]ಹೆಚ್.ಎ.ಎಸ್. ನಂ.೫ ಪು.೧೦ ಮತ್ತು ಎ.ಪಿ.ಎ.ಜಿ.ಎ.ಎಸ್.೩ ನಂ.೬

[8]ಇಂಡಿಯನ್ ಆಂಟಿಕ್ವರಿ ೬ ನಂ.೩೨ ಪು.೧೩೭.

[9]ಎಸ್.ಐ.ಐ.೧೫ ನಂ. ೫೭, ಪು. ೭೪

[10]ಇ.ಸಿ.೮ ನಗರ ೫೮

[11]ಎಸ್.ಐ.ಐ.೯(i) ನಂ.೫೯.

[12]ಅದೇ ನಂ. ೧೩೨

[13]ಅದೇ ನಂ. ೧೭೩.

[14]ಅದೇ ನಂ. ೧೯೨.

[15]ಅದೇ ನಂ. (ii) ನಂ. ೭೦೦.

[16]ಅದೇ (i) ನಂ. ೧೭೮.

[17]ಅದೇ (i) ನಂ. ೨೮೧.

[18]ರಾಘವಾಂಕನ “ಸಿದ್ಧರಾಮಚರಿತ್ರೆ” – (ಸಂ) ಆರ್.ಎಸ್.ರಾಮರಾವ್. ಪು. ೧೨೪-೬.

[19]ಬೀದರ್‌ಜಿಲ್ಲಾ ಗೆಜಿಟೆಯರ್ ೧೯೭೭ ಪು. ೫೫೪.

[20]ಇ.ಸಿ.೯ ಚೆನ್ನಪಟ್ಟಣ. ೧೨೭.

[21]ಇ.ಸಿ.೧೦ ಮುಳುಬಾಗಿಲು ೨೦೮.

[22]ಇ.ಸಿ.೯. ಚೆನ್ನಪಟ್ಟಣ ೧೩೨.