ಈ ಹೊತ್ತಿಗೆಯ ಪ್ರಸ್ತುತ ಭಾಗ ೩ರಲ್ಲಿ ಉನ್ನತಾಧಿಕಾರ ಸಮಿತಿಯು ನೀಡಿರುವ ಬಹುಮುಖ್ಯ ಶಿಫಾರಸ್ಸುಗಳಲ್ಲಿ ಆಯ್ದ ಕೆಲವನ್ನು ನೀಡಲಾಗಿದೆ. ಉನ್ನತಾಧಿಕಾರ ಸಮಿತಿಯ ಶಿಫಾರಸ್ಸುಗಳ ವಿವರವಾದ ಮಾಹಿತಿಗೆ ಮೂಲ ವರದಿಯನ್ನು ನೋಡುವುದು ಅಗತ್ಯ.

೧. ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ನಾವು ಅನುಸರಿಸಿಕೊಂಡು ಬಂದಿರುವ ಸಮಗ್ರವಾದಿ ದೃಷ್ಟಿಕೋನದ ಫಲವೇ ಪ್ರಾದೇಶಿಕ ಅಸಮಾನತೆ. ವಿಕೇಂದ್ರೀಕರಣ ಮತ್ತು ಪಂಚಾಯತ್‍ರಾಜ್ ವ್ಯವಸ್ಥೆ ಬಗ್ಗೆ ಒತ್ತು ನೀಡಲಾಗಿದ್ದರೂ ಸಮಗ್ರ ದೃಷ್ಟಿಕೋನದ ಅಭಿವೃದ್ಧಿ ಯೋಜನೆಗಳನ್ನು ಕೈಬಿಟ್ಟು ಪ್ರದೇಶ-ನಿರ್ದಿಷ್ಟ ಸೂಕ್ಷ್ಮ ತಳಮಟ್ಟದ ಅಭಿವೃದ್ಧಿ ಯೋಜನೆಗಳನ್ನು ಅಳವಡಿಸಿಕೊಳ್ಳುವುದು ಸಾಧ್ಯವಾಗಿಲ್ಲ. ಇದರಿಂದಾಗಿ ಅಭಿವೃದ್ಧಿ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆಯ ತೀವ್ರಗೊಳ್ಳುತ್ತಾ ನಡೆದಿದೆ. ಇದು ಬದಲಾಗಬೇಕು.

೨. ಸಮಿತಿಯ ಮೊಟ್ಟ ಮೊದಲ ಹಾಗೂ ಬಹುಮುಖ್ಯವಾದ ಶಿಫಾರಸ್ಸೆಂದರೆ ಸರ್ಕಾರವು ತುರ್ತಾಗಿ ‘ಪ್ರಾದೇಶಿಕ ಅಭಿವೃದ್ಧಿ ನೀತಿ’ ಯನ್ನು ಪ್ರಕಟಿಸಬೇಕು. ಜಿಲ್ಲೆ-ಜಿಲ್ಲೆಗಳ ನಡುವೆ, ಪ್ರದೇಶ-ಪ್ರದೇಶಗಳ ನಡುವೆ ಜಿಲ್ಲೆಗಳೊಳಗೆ, ಪ್ರದೇಶಗಳೊಳಗೆ ಕಂಡುಬರುವ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸುವುದು ಅದರ ಮುಖ್ಯ ಉದ್ದೇಶವಾಗಿರಬೇಕು.

೩. ಪಂಚವಾರ್ಷಿಕ ಅಥವಾ ವಾರ್ಷಿಕ ಅಭಿವೃದ್ಧಿ ಯೋಜನೆ ರೂಪಿಸುವಾಗ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಎರಡು ನೆಲೆಗಳಲ್ಲೂ ಪ್ರಾದೇಶಿಕ ಸಂಗತಿಗಳನ್ನು ಪರಿಗಣಿಸ ಬೇಕಾಗುತ್ತದೆ. ಪ್ರತಿವರ್ಷವೂ ಸರ್ಕಾರವು ಪ್ರಾದೇಶಿಕ ಅಸಮಾನತೆ ಎಷ್ಟರ ಮಟ್ಟಿಗೆ ಕಡಿಮೆಯಾಗಿದೆ ಎಂಬುದನ್ನು ಸಮೀಕ್ಷೆ ಮಾಡಬೇಕು.

೪. ರಾಜ್ಯಮಟ್ಟದ ಅಭಿವೃದ್ಧಿಯನ್ನು ಒಂದು ಮಾನದಂಡವನ್ನಾಗಿಟ್ಟುಕೊಂಡು ಪ್ರತಿಯೊಂದು ಜಿಲ್ಲೆ-ತಾಲ್ಲೂಕುಗಳ ಅಭಿವೃದ್ಧಿ ಮಟ್ಟವು ರಾಜ್ಯದ ಸರಾಸರಿ ಮಟ್ಟಕ್ಕೆ ಸಮಾನವಾಗುವಂತೆ ಮಾಡಲು ಅಗತ್ಯವಾದ ವಿಶೇಷ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು.

೫. ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕಗಳ ನಡುವೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಸಮಾನತೆ ಮುಂದುವರಿಯುತ್ತಿರುವುದು ದೃಢಪಟ್ಟಿದೆ. ಹಿಂದುಳಿದ ಪ್ರದೇಶಗಳಲ್ಲಿ ಅಭಿವೃದ್ಧಿ ಸಾಮರ್ಥ್ಯ ಅಗಾಧವಾಗಿದೆ. ಪ್ರಾದೇಶಿಕ ಸಮಾನತೆ ಸಾಧಿಸಿಕೊಳ್ಳಲು ಅಭಿವೃದ್ಧಿ ತಮ್ತ್ರದಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.

೬. ಪ್ರಾಥಮಿಕ ಶಿಕ್ಷಣ ಮತ್ತು ಪ್ರಾಥಮಿಕ ಆರೋಗ್ಯಕ್ಕೆ ಸಂಬಂಧಿಸಿದ ಜವಾಬ್ದಾರಿಯನ್ನು ಮಾರುಕಟ್ಟೆ ಶಕ್ತಿಗಳಿಗೆ ವಹಿಸದೆ, ಸರ್ಕಾರವೇ ಅದನ್ನು ನಿರ್ವಹಿಸಬೇಕಾಗುತ್ತದೆ.

೭. ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡ ಕಾರ್ಯಕ್ರಮಗಳ ಜೊತೆ ದುಸ್ಥಿತಿಯನ್ನು ಎದುರಿಸಲು ಅಗತ್ಯವಾದ ಕಾರ್ಯಯೋಜನೆ ಬಗ್ಗೆಯೂ ನಾವು ಯೋಚಿಸಬೇಕಾಗುತ್ತದೆ.

೮. ಸಂಪನ್ಮೂಲ ವಿತರಣೆಗೆ, ಅನುದಾನ ಹಮ್ಚಿಕೆಗೆ ಸರ್ಕಾರವು ಸಮಿತಿ ರೂಪಿಸಿರುವ ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಸಂಪನ್ಮೂಲ ಹಂಚಿಕೆಗೆ ಸಂಬಂಧಿಸಿದಂತೆ ದಕ್ಷಿಣ ಕರ್ನಾಟಕಕ್ಕೆ ಶೇ. ೪೦ ಮತ್ತು ಉತ್ತರ ಕರ್ನಾಟಕಕ್ಕೆ ಶೇ. ೬೦ರ ಅನುದಾನವಿರಬೇಕಾಂದು ಸಮಿತಿ ಸ್ಪಷ್ಟಪಡಿಸಿದೆ. ಈ ಸಮಿತಿಯ ಶಿಫಾರಸ್ಸಿನ ಪ್ರಕಾರ ಮತ್ತು ಸಮಿತಿ ಸೂತ್ರದ ಪ್ರಕಾರ ರೂ. ೧೬,೦೦೦=೦೦ ಯನ್ನು ನಾಲ್ಕು ವಿಭಾಗಗಳಿಗೆ ಮತ್ತು ೨೭ ಜಿಲ್ಲೆಗಳಿಗೆ ಹಂಚಿದರೆ ಪ್ರತಿಯೊಂದರ ಪಾಲು ಎಷ್ಟೆಂಬುದನ್ನು ಅನುಬಂಧ-೧ರಲ್ಲಿ ತೋರಿಸಿದೆ.

೯. ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿನ ಅತ್ಯಂತ ಹಿಂದುಳಿದ ಎಲ್ಲ ೧೦ ತಾಲ್ಲೂಕುಗಳು ಗುಲಬರ್ಗಾ ವಿಭಾಗದಲ್ಲಿವೆ. ಅವುಗಳಾವುವೆಂದರೆ ಶಿರಗುಪ್ಪೆ, ಅಫಜಲಪುರ, ಚಿತ್ತಾಪುರ. ಜೇವರ್ಗಿ, ಶಹಾಪುರ, ಯಾದಗಿರ್, ಯಲಬುರ್ಗಾ, ಸಿಂಧನೂರು, ದೇವದುರ್ಗ ಮತ್ತು ಮಾನವಿ. ಈ ಹತ್ತು ಅತ್ಯಂತ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಯನ್ನು ಆದ್ಯತೆಯ ಮೇಲೆ ಕೈಗೊಳ್ಳಲು ಸರ್ಕಾರವು ಸಮಿತಿ ಶಿಫಾರಸ್ಸು ಮಾಡಿದೆ.

೧೦. ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಸರ್ಕಾರವು ಹೆಚ್ಚು ಹೆಚ್ಚು ಶಾಲಾ-ಕಾಲೇಜುಗಳನ್ನು ಸ್ಥಾಪಿಸಬೇಕು ಹಾಗೂ ಖಾಸಗಿ ಸಂಸ್ಥೆಗಳಿಗೆ ಅನುದಾನ ನೀಡುವ ಕ್ರಮವನ್ನು ವಿಸ್ತರಿಸಬೇಕು. ಇವೆಲ್ಲವೂ ಆದ್ಯತೆಯ ಮೇಲೆ ನಡೆಯಬೇಕು.

೧೧. ರಾಜ್ಯದ ೧೧೪ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗಾಗಿ ಸಮಿತಿಯು ಎಂಟು ವರ್ಷಗಳ ರೂ. ೧೬.೦೦೦ ಕೋಟಿಗಳ ವಿಶೇಷ ಅಭಿವೃದ್ಧಿ ಯೋಜನೆಯನ್ನು ಶಿಫಾರಸ್ಸು ಮಾಡಿದೆ. ಇದರ ಕಾಲಾವಧಿ ೨೦೦೩-೨೦೧೦

ಉನ್ನತಾಧಿಕಾರ ಸಮಿತಿಯು ರಾಜ್ಯದ ಹಿಂದುಳಿದ ೧೧೪ ತಾಲ್ಲೂಕುಗಳ ಅಭಿವೃದ್ಧಿಗೆ ಅನೇಕ ವಿನೂತನ ಶಿಫಾರಸ್ಸುಗಳನ್ನು ಮಾಡಿದೆ. ಅವುಗಳಲ್ಲಿ ಕೆಲವನ್ನು ಸರ್ಕಾರವು ಕೈಗೆತ್ತಿಕೊಂಡಿದೆ. ಆದರೆ ಉನ್ನತಾಧಿಕಾರ ಸಮಿತಿ ವರದಿಯ ಸಾರವನ್ನು ಸರ್ಕಾರವು ಗ್ರಹಿಸಿದಂತೆ ಕಾಣಲಿಲ್ಲ. ಅದರ ಸಲಹೆಯಾದ ಪ್ರಾದೇಶಿಕ ಅಭಿವೃದ್ಧಿ ನೀತಿಯನ್ನು ರೂಪಿಸುವುದು ಸರ್ಕಾರಕ್ಕೆ ಇನ್ನೂ ಸಾಧ್ಯವಾಗಲಿಲ್ಲ. ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸುವ ದಿಶೆಯಲ್ಲಿ ಇದು ಸರ್ಕಾರದ ಅತಿದೊಡ್ಡ ವೈಫಲ್ಯವಾಗಿದೆ. ಉನ್ನತಾಧಿಕಾರ ಸಮಿತಿಯು ಶಿಕ್ಷಣಕ್ಕೆ ಸಂಬಂಧಿಸಿದಂತೆ ಗುರುತಿಸುವ ಅತ್ಯಂತ ಹಿಂದುಳಿದ ರಾಜ್ಯದ ಹತ್ತು ತಾಲ್ಲೂಕುಗಳಲ್ಲಿ ಇದುವರೆವಿಗೂ ಸರ್ಕಾರ ಯಾವುದೇ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿಲ್ಲ. ಇದನ್ನೆಲ್ಲ ಗಮನಿಸಿದರೆ ಸರ್ಕಾರವು ಹಾಗೂ ಜನ ಪ್ರತಿನಿಧಿಗಳು ಪ್ರಾದೇಶಿಕ ಅಸಮಾನತೆಯನ್ನು ಗಂಭೀರವಾಗಿ ಪರಿಗಣಿಸಿಲ್ಲವೆಂಬುದು ತಿಳಿಯುತ್ತದೆ. ರಾಜ್ಯದ ಹಿಂದುಳಿದ ಜಿಲ್ಲೆ-ತಾಲ್ಲೂಕುಗಳಲ್ಲಿ ಪ್ರಾಥಮಿಕ ಶಾಲೆಗಳನ್ನು, ಪ್ರೌಢಶಾಲೆಗಳನ್ನು, ಕಾಲೇಜುಗಳನ್ನು ಹೆಚ್ಚಾಗಿ ಸ್ಥಾಪಿಸುವಂತೆ ಸಮಿತಿ ಶಿಫಾರಸ್ಸು ಮಾಡಿದೆ. ಆದರೆ ಇದು ಕಾರ್ಯರೂಪಕ್ಕೆ ಬರಲಿಲ್ಲ.

ಭಾಗ ೪ – ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆ ಮತ್ತು ಅನುದಾನ ಹಂಚಿಕೆ ಸೂತ್ರ

ಉನ್ನತಾಧಿಕಾರ ಸಮಿತಿಯ ಬಹು ಮುಖ್ಯ ಸಲಹೆಯೆಂದರೆ ರಾಜ್ಯ ೧೧೪ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗಾಗಿ ಎಂಟು ವರ್ಷದ ಅಭಿವೃದ್ಧಿ ಯೋಜನೆಯಾಗಿದೆ. ಅದು ರೂ. ೧೬,೦೦೦ ಕೋಟಿ ಯೋಜನೆಯಾಗಿದೆ. ಈ ಯೋಜನೆಯಲ್ಲಿ ವಿಭಾಗಗಳ ನಡುವೆ, ಜಿಲ್ಲೆಗಳ ನಡುವೆ ಮತ್ತು ತಾಲ್ಲೂಕುಗಳ ನಡುವೆ ಅನುದಾನ ಹಂಚುವ ಸೂತ್ರವು ಸಂಚಯಿತ ದುಸ್ಥಿತಿ ಸೂಚ್ಯಂಕವನ್ನು ಅವಲಂಬಿಸಿದೆ. ಇದನ್ನು ಅನುಬಂಧದಲ್ಲಿ ತೋರಿಸಿದೆ.

೧. ಉನ್ನತಾಧಿಕಾರಿ ಸಮಿತಿಯು ರೂಪಿಸಿರುವ ರೂ. ೧೬೦೦೦ ಕೋಟಿಯ ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ ಗುಲಬರ್ಗಾ ವಿಭಾಗದ ಗುಲಬರ್ಗಾ ಜಿಲ್ಲೆ ಹಾಗೂ ಅದರ ತಾಲ್ಲೂಕುಗಳು ಅನುದಾನ ಲೆಕ್ಕವನ್ನು ಇಲ್ಲಿ ನೀಡಲಾಗಿದೆ.

೨. ವಿಶೇಷ ಅಭಿವೃದ್ಧಿ ಯೋಜನೆ ಮೊತ್ತ ರೂ. ೧೬,೦೦೦

೩. ಗುಲಬರ್ಗಾ ವಿಭಾಗದ ಪಾಲು ಶೇ. ೪೦ ರೂ. ೬೪೦೦ ಕೋಟಿ

೪. ಗುಲಬರ್ಗಾ ವಿಭಾಗದಲ್ಲಿ ಗುಲಬರ್ಗಾ ಜಿಲ್ಲೆಯ ಪಾಲು ಶೇ. ೪೧.೯೪ ರೂ. ೨೬೮೪.೧೬

ಕೋಷ್ಟಕ ೭

ಕ್ರ.ಸಂ ತಾಲ್ಲೂಕುಗಳು ಅನುದಾನದ ಹಂಚಿಕೆ ಸೂತ್ರ ಶೇಕಡ ಪ್ರಮಾಣ ಅನುದಾನದ ಮೊತ್ತ
೧. ಅಫಜಲಪುರ ೦.೩೮ / ೩.೩೮x೧೦೦ = ಶೇ. ೧೧.೨೪ ರೂ. ೩೦೧.೯೯ ಕೋಟಿ
೨. ಅಳಂದ ೦.೩೯ / ೩.೩೮x೧೦೦ = ೧೧.೫೪ ರೂ. ೩೦೯.೭೫ ಕೋಟಿ
೩. ಚಿಂಚೋಳಿ ೦.೪೩ / ೩.೩೮x೧೦೦ = ೧೨.೭೨ ರೂ. ೩೪೧.೪೨ ಕೋಟಿ
೪. ಚಿತ್ತಾಪುರ ೦.೩೫ / ೩.೩೮x೧೦೦ = ೧೦.೩೬ ರೂ. ೨೭೮.೦೭ ಕೋಟಿ
೫. ಗುಲಬರ್ಗಾ ೦.೧೧ / ೩.೩೮x೧೦೦ = ೩.೨೬ ರೂ. ೮೭.೦೫ ಕೋಟಿ
೬. ಜೇವರ್ಗಿ ೦.೪೩ / ೩.೩೮x೧೦೦ = ೧೨.೭೨ ರೂ. ೩೪೧.೪೨ ಕೋಟಿ
೭. ಸೇಡಂ ೦. ೨೮ / ೩.೩೮x೧೦೦ = ೮.೨೮ ರೂ. ೨೨೨.೨೪ ಕೋಟಿ
೮. ಶಹಾಪುರ ೦. ೩೮ / ೩.೩೮x೧೦೦ = ೮.೨೮ ರೂ. ೨೨೨.೨೪ ಕೋಟಿ
೯. ಶೋರಾಪುರ ೦. ೩೦ / ೩.೩೮x೧೦೦ = ೮.೮೮ ರೂ. ೨೩೮.೩೫ ಕೋಟಿ
೧೦. ಯಾದಗಿರ್ ೦. ೩೩ / ೩.೩೮x೧೦೦ = ೯.೭೬ ರೂ. ೨೬೧.೯೭ ಕೋಟಿ
  ಗುಲಬರ್ಗಾ ——– ೧೦೦.೦೦ ರೂ. ೨೬೮೪.೧೦ ಕೋಟಿ

ಉನ್ನತಾಧಿಕಾರ ಸಮಿತಿಯು ರೂಪಿಸಿರುವ ಅನುದಾನ ಹಂಚಿಕೆ ಸೂತ್ರದ ಆಧಾರದ ಮೇಲೆ ರಾಜ್ಯದ ಹಿಂದುಳಿದ ೧೧೪ ತಾಲ್ಲೂಕುಗಳ ನಡುವೆ ಅನುದಾನವನ್ನು ಹೇಗೆ ಹಂಚಬೇಕು ಎಂಬುದನ್ನು ಗುರುತಿಸಬಹುದಾಗಿದೆ.

ಅನುದಾನ ಹಂಚಿಕೆ ಸರ್ಕಾರಿ ಸೂತ್ರ : ೨೦೦೭-೦೮

ಉನ್ನತಾಧಿಕಾರ ಸಮಿತಿಯು ಸಲಹೆ ಮಾಡಿದ್ದ ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆಯನ್ನು ಒಪ್ಪಿಕೊಂಡ ಸರ್ಕಾರವು ೨೦೦೭-೦೮ರ ಆಯವ್ಯಯದಲ್ಲಿ ಮೊದಲ ವರ್ಷದ ಬಾಬ್ತು ರೂ. ೧೫೭೧.೫೦ ಕೋಟಿ ತೆಗೆದಿರಿಸಿದೆ. ಇದೊಂದು ಸ್ವಾಗತಾರ್ಹ ಕ್ರಮವಾಗಿದೆ. ಸರ್ಕಾರದ ಕ್ರಮವು ಅಭಿನಂದನೀಯವಾಗಿದೆ.

ಈ ಯೋಜನೆಯನ್ನು ಅನುಷ್ಠಾನಗೊಳಿಸಿದ ಸರ್ಕಾರವು ರಾಜ್ಯದ ೧೧೪ ಹಿಂದುಳಿದ ತಾಲ್ಲೂಕುಗಳ ನಡುವೆ ಅನುದಾನ ಹಂಚಿಕೆಗೆ ಕೆಳಕಂಡ ಸೂತ್ರವನ್ನು ರೂಪಿಸಿದೆ.

ರಾಜ್ಯದ ೩೯ ಅತ್ಯಂತ ಹಿಂದುಳಿದ ತಾಲ್ಲೂಕುಗಳಿಗೆ      ಶೇ. ೫೦

ರಾಜ್ಯದ ೪೦ ಅತಿ ಹಿಂದುಳಿದ ತಾಲ್ಲೂಕುಗಳಿಗೆ            ಶೇ. ೩೦

ರಾಜ್ಯದ ೩೫ ಹಿಂದುಳಿದ ತಾಲ್ಲೂಕುಗಳಿಗೆ                  ಶೇ. ೨೦

ಇದರ ಪ್ರಕಾರ ೨೦೦೭-೦೮ನೆಯ ಸಾಲಿನ ಅನುದಾನ ಹಂಚಿಕೆ ಹೀಗಿದೆ.

ರಾಜ್ಯದ ೩೯ ಅತ್ಯಂತ ಹಿಂದುಳಿದ ತಾಲ್ಲೂಕುಗಳು       ಶೇ. ೫೦ ರೂ. ೭೮೫.೭೫

ರಾಜ್ಯದ ೪೦ ಅತಿ ಹಿಂದುಳಿದ ತಾಲ್ಲೂಕುಗಳುಶೇ. ೩೦ ರೂ. ೪೭೧.೭೫

ರಾಜ್ಯದ ೩೫ ಹಿಂದುಳಿದ ತಾಲ್ಲೂಕುಗಳು                   ಶೇ. ೨೦ ರೂ. ೩೧೪.೩೦

ಒಟ್ಟು                                                               ಶೇ. ೧೦೦.೦೦      ರೂ. ೧೫೭೧.೮೦

ಇದರ ವಿಭಾಗವಾರು ಮತ್ತು ಜಿಲ್ಲಾವಾರು ಹಂಚಿಕೆಯ ವಿವರವನ್ನು ಅನುಬಂಧದಲ್ಲಿ ನೀಡಲಾಗಿದೆ.

ಗುಲಬರ್ಗಾ ವಿಭಾಗದ ಅನುದಾನದಲ್ಲಿ ಕಡಿತ

ಸರ್ಕಾರಿ ಸೂತ್ರದ ಪ್ರಕಾರ ೨೦೦೭-೦೮ರಲ್ಲಿ ನಿಗದಿಪಡಿಸಿದ ರೂ. ೧೫೭೧.೫೦ ಕೋಟಿಯಲ್ಲಿ ಗುಲಬರ್ಗಾ ವಿಭಾಗಕ್ಕೆ ದೊರೆಯುವ ಮೊರ್ರ ರೂ. ೪೯೯.೯೮ ಕೋಟಿ. ಆದರೆ ಉನ್ನತಾಧಿಕಾರ ಸಮಿತಿಯು ಸೂತ್ರದ ಪ್ರಕಾರ ಅನುದಾನ ಹಂಚಿದರೆ ಗುಲಬರ್ಗಾ ವಿಭಾಗಕ್ಕೆ ದೊರೆಯುವ ಮೊತ್ತ ರೂ. ೬೨೮.೬೦ ಕೋಟಿ. ಅನುದಾನ ಹಂಚಿಕೆ ಸೂತ್ರದ ಬದಲಾವಣೆಯಿಂದ ಗುಲಬರ್ಗಾ ವಿಭಾಗಕ್ಕೆ ಉಂಟಾಗುವ ಕಡಿತ ರೂ. ೧೨೮.೬೨ ಕೋಟಿ.

ಸರ್ಕಾರವು ರೂಪಿಸಿರುವ ೫೦:೩೦:೨೦ರ ಪ್ರಕಾರ ಅನುದಾನ ಹಂಚುವ ಸೂತ್ರದಲ್ಲಿ ಪ್ರಾದೇಶಿಕ ಸ್ವರೂಪಕ್ಕೆ ಸ್ಥಾನವಿಲ್ಲವಾಗಿದೆ. ಇದರಿಂದಾಗಿ ಗುಲಬರ್ಗಾ ವಿಭಾಗಕ್ಕೆ ಕಡಿತ ಉಂಟಾಗುತ್ತದೆ. ರಾಜ್ಯದ ಎಲ್ಲ ಹಿಂದುಳಿದ ಜಿಲ್ಲೆಗಳಿಗೂ ಇದರಿಂದ ಕಡಿತ ಉಂಟಾಗುತ್ತದೆ. ಉದಾಹರಣೆಗೆ ಸರ್ಕಾರಿ ಸೂತ್ರದ ಪ್ರಕಾರ ರಾಜ್ಯದ ಹಿಂದುಳಿದ ಮತ್ತೊಂದು ಜಿಲ್ಲೆಯಾದ ವಿಜಾಪುರಕ್ಕೆ ದೊರೆಯುವ ಮೊತ್ತ ರೂ. ೮೯.೫೭ ಕೋಟಿ. ಆದರೆ ಸಮಿತಿಯ ಸೂತ್ರವನ್ನು ಅನುಸರಿಸಿದರೆ ಅದಕ್ಕೆ ದೊರೆಯುವ ಮೊತ್ತ ರೂ. ೧೦೬.೮೩ ಕೋಟಿ.

ಹೀಗೆ ಅತ್ಯಂತ ಹಿಂದುಳಿದ ಜಿಲ್ಲೆ ಮತ್ತು ತಾಲ್ಲೂಕುಗಳಿಗೆ ಸರ್ಕಾರಿ ಸೂತ್ರದಿಂದ ಅನ್ಯಾಯವಾಗುತ್ತದೆ. ಸಮಿತಿಯು ರೂಪಿಸಿರುವ ಸೂತ್ರವು ಹಿಂದುಳಿದ ಪ್ರದೇಶಕ್ಕೆ ನ್ಯಾಯ ಒದಗಿಸುತ್ತದೆ. ಇವೆರಡೂ ಸೂತ್ರಗಳ ನಡುವಿನ ವ್ಯತ್ಯಾಸವನ್ನು ಅಗತ್ಯವಾಗಿ ನಾವು ಗಮನಿಸಬೇಕು. ಸರ್ಕಾರವು ರೂಪಿಸಿರುವ ೫೦:೩೦:೨೦ ಸೂತ್ರವನ್ನು ಕೈಬಿಟ್ಟು, ಸಮಿತಿ ಸೂಚಿಸಿರುವ ವಿಭಾಗವಾರು ಅನುದಾನ ಹಂಚಿಕೆಯನ್ನು ಅನುಸರಿಸುವುದು ಸೂಕ್ತ. ಏಕೆಂದರೆ ಸರ್ಕಾರಿಸೂತ್ರದಲ್ಲಿ ಅನುದಾನ ಹಂಚಿಕೆಗೆ ಹಿಂದುಳಿದಿರುವಿಕೆ ತೀವ್ರತೆಯು ಆಧಾರವಾಗಿಲ್ಲ. ಅಲ್ಲಿ ಜಿಲ್ಲೆಗಳ ನಡುವೆ ಮತ್ತು ತಾಲ್ಲೂಕುಗಳ ನಡುವೆ ಅನುದಾನ ಹಂಚಿಕೆಗೆ ಸರ್ಕಾರಿ ಸೂತ್ರದಲ್ಲಿ ಯಾವುದೇ ಕ್ರಮವಿಲ್ಲ.

ಭಾಗ ೫ – ನಾವೇನು ಮಾಡಬಹುದು – ಮಾಡಬೇಕು!

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಮತಕ್ಕೆ, ಜನಾಭಿಪ್ರಾಯದ ಒತ್ತಡಕ್ಕೆ ಮಹತ್ವದ ಪಾತ್ರವಿದೆ. ಜನಮನವು ಕೇವಲ ಜನಮತವಾಗಿರಬಾರದು. ಅದಕ್ಕೆ ಸೂಕ್ತವಾದ ಸೈದ್ಧಾಂತಿಕ ಹಾಗೂ ಎಂಫೆರಿಕಲ್ ಆಧಾರ-ಪುರಾವೆಗಳು ಇರಬೇಕು. ಅರಿವಿನಿಂದ ಕೂಡಿದ ಜನಮತವನ್ನು ಸಂಘಟಿಸಬೇಕಾಗುತ್ತದೆ. ಅತ್ಯಂತ ದುರದೃಷ್ಟದ ಸಂಗತಿಯೆಂದರೆ ರಾಜ್ಯದಲ್ಲಿನ ಮುಂದುವರಿದ ಪ್ರದೇಶಗಳಲ್ಲಿ ಜನಮತದ ಸಂಘಟನೆ ಉತ್ತಮವಾಗಿದೆ. ಆದರೆ ಹಿಂದುಳಿದ ಪ್ರದೇಶದಲ್ಲಿ ಜನಮತದ ಸಂಘಟನೆಯಿಲ್ಲ ಮತ್ತು ಪ್ರಾದೇಶಿಕ ಅಸಮಾನತೆ ಬಗ್ಗೆ ಸೂಕ್ಷ್ಮ ಮಾಹಿತಿಯು ಜನರಿಗೆ ಲಭ್ಯವಿಲ್ಲ. ಈ ದಿಶೆಯಲ್ಲಿ ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶವಾದ ಗುಲಬರ್ಗಾ ವಿಭಾಗದಲ್ಲಿ ಜನಮತದ ಸಂಘಟನೆ ನಡೆಸುವ ಅಗತ್ಯವಿದೆ ಹಾಗೂ ಅದರ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಅರಿವಿನಿಂದ ಕೂಡಿದ ಜನಮತವನ್ನು ಸರ್ಕಾರವು ನಿರ್ಲಕ್ಷಿಸಲು ಸಾಧ್ಯವಿಲ್ಲ. ಈ ಹೊತ್ತಿಗೆಯ ಮೂಲ ಉದ್ದೇಶವೇ ಇದಾಗಿದೆ. ಗುಲಬರ್ಗಾ ವಿಭಾಗದ ಅಭಿವೃದ್ಧಿಗೆ ಕಂಟಕವಾಗಿರುವ ಸಂಗತಿಗಳಾವುವು? ಈ ಭಾಗದಲ್ಲಿ ಸಾಕ್ಷರತೆಯನ್ನು ಅಧಿಕಗೊಳಿಸುವುದು ಹೇಗೆ? ಅಭಿವೃದ್ಧಿಯೆಂದರೆ ಕೇವಲ ಕಾಮಗಾರಿಯೇ? ಅದು ಕೇವಲ ರಸ್ತೆ, ಸೇತುವೆ, ಕಟ್ಟಡ, ಸಮುದಾಯ ಭವನಗಳೇ? ಹಾಗಾದರೆ ಶಾಲೆಗೆ ಸರಿಯಾಗಿ ಶಿಕ್ಷಕರು ಹಾಜರಾಗುವಂತೆ ಮಾಡುವುದು ಅಭಿವೃದ್ಧಿಯಾಗುವುದಿಲ್ಲವೆ? ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿರುವಂತೆ ಮಾಡುವುದು, ಜನರಿಗೆ ಔಷದೋಪಾಚಾರ ದೊರೆಯುವಂತೆ ಮಾಡುವುದು ಅಭಿವೃದ್ಧಿಯಲ್ಲವೆ? ವಲಸೆ ಹೋಗುವುದನ್ನು ತಡೆಯುವುದು ಏನು? ಕಾಮಗಾರಿ, ರಸ್ತೆ-ಸೇತುವೆ ನಿರ್ಮಾಣ, ಕಟ್ಟಡ ಕಟ್ಟಿಸುವುದು ಮುಂತಾದವುಗಳ ಬಗ್ಗೆ ಜನ ಪ್ರತಿನಿಧಿಗಳು ತೋರುವ ಆಸಕ್ತಿಯನ್ನು ಯಾಕೆ ಶಾಲೆಯನ್ನು ಮಧ್ಯದಲ್ಲಿ ಬಿಡುವ ಮಕ್ಕಳ ಸಮಸ್ಯೆಯನ್ನು ಬಗೆಹರಿಸುವುದರ ಬಗ್ಗೆ ಇರುವುದಿಲ್ಲ? ಯಾರನ್ನು ನಾವು ಬುದ್ಧಿಜೀವಿಗಳೆಂದು ಕರೆಯುತ್ತೇವೆಯೋ ಅವರು ಗುಲಬರ್ಗಾ ವಿಭಾಗದಲ್ಲಿ ಪ್ರಾದೇಶಿಕ ಅಸಮಾನತೆ ನಿವಾರಣೆ ಬಗ್ಗೆ ಏನು ಮಾಡಬಹುದು?

ಈ ಪ್ರದೇಶದ ಅಭಿವೃದ್ಧಿ ಸಂಬಂಧಿ ಆದ್ಯತೆಗಳನ್ನು ಗುರುತಿಸುವುದು ತುಂಬಾ ಅಗತ್ಯವಾಗಿದೆ. ಈ ಪ್ರದೇಶದ ಹಳ್ಳಿಗಳಲ್ಲಿ, ತಾಲ್ಲೂಕುಗಳಲ್ಲಿ ಜನರಿಗೆ ಸಂಬಂಧಿಸಿದಂತೆ ಸಮಸ್ಯೆಗಳೇನಿವೆ? ಇಂತಹ ಸಂಗತಿಗಳನ್ನು ಚರ್ಚೆಗೆ ಸಂವಾದಕ್ಕೆ ಒಳಪಡಿಸುವಲ್ಲಿ ಬುದ್ಧಿ ಜೀವಿಗಳ ಪಾತ್ರ ನಿರ್ಣಾಯಕವಾದುದಾಗಿದೆ. ಅವಕಾಶ ಎಲ್ಲಿ ದೊರೆಯುತ್ತದೋ ಅಂತಹ ವೇದಿಕೆಗಳಲ್ಲಿ, ಮಾಧ್ಯಮಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಗುಲಬರ್ಗಾ ವಿಭಾಗದ ಜನರ ಸಮಸ್ಯೆಗಳು ಚರ್ಚೆಯಾಗುವಂತೆ ನೋಡಿಕೊಳ್ಳಬೇಕು. ನಾವೇನು ಮಾಡಬೇಕು ಎಂಬುದಕ್ಕೆ ಸಿದ್ಧಸೂತ್ರಗಳೇನಿರುವುದಿಲ್ಲ. ಅದನ್ನು ನಾವು ನಮ್ಮ ಸಂದರ್ಭದ ಹಿನ್ನೆಲೆಯಲ್ಲಿ ಗುರುತಿಸಿ ಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಅನುದಾನ ಹಂಚಿಕೆ ಸೂತ್ರದಿಂದ ಗುಲಬರ್ಗಾ ವಿಭಾಗಕ್ಕೆ ಉಂಟಾಗುವ ಅನುದಾನದ ಕಡಿತವನ್ನು ಸರ್ಕಾರದ ಗಮನಕ್ಕೆ ತರಬೇಕಾಗುತ್ತದೆ. ಉನ್ನತಾಧಿಕಾರ ಸಮಿತಿಯು ಕೇಂದ್ರೀಯ ವಿಶ್ವವಿದ್ಯಾಲಯವನ್ನು ಗುಲಬರ್ಗಾದಲ್ಲಿ ಸ್ಥಾಪಿಸಲು ಶಿಫಾರಸ್ಸು ಮಾಡಿದೆ ಎಂಬುದನ್ನು ಜನರ ಗಮನಕ್ಕೆ ತರಬೇಕಾಗುತ್ತದೆ. ಈ ವಿಭಾಗದಲ್ಲಿ ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತೆ ತಮ್ಮ ಸ್ವಂತ ಜಿಲ್ಲೆ-ವಿಭಾಗಕ್ಕೆ ವರ್ಗಾವಣೆ ಮಾಡಿಸಿಕೊಂಡು ಹೋಗದಂತೆ ನೋಡಿಕೊಳ್ಳಬೇಕು.

ಬಹಳ ಮುಖ್ಯವಾಗಿ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಗುಲಬರ್ಗಾ ವಿಭಾಗದಲ್ಲಿ ಕೇವಲ ಉಚಿತ ಪಠ್ಯಪುಸ್ತಕ ವಿತರಣೆ. ಸಮವಸ್ತ್ರಗಳನ್ನು ಕೊಡುವುದು, ಅಕ್ಷರ ದಾಸೋಹ ಮುಂತಾದವು ಸಾಕಾಗುವುದಿಲ್ಲ. ಇಲ್ಲಿನ ಸಮಸ್ಯೆಯ ಸ್ವರೂಪವು ತುಂಬಾ ಸಂಕೀರ್ಣವಾಗಿದೆ. ಈ ವಿಭಾಗದಲ್ಲಿ ಬೃಹತ್ ಪ್ರಮಾಣದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿ ವಸತಿನಿಲಯಗಳು, ವಸತಿಯುತ ಶಾಲೆಗಳು, ವಿಶೇಷ ಬೋಧನೆ ಮುಂತಾದ ಸಂಗತಿಗಳನ್ನು ಒಳಗೊಂಡ ವಿಶೇಷ ಕಾರ್ಯಕ್ರಮವನ್ನೇ ಹಮ್ಮಿಕೊಳ್ಳಬೇಕಾಗುತ್ತದೆ. ರಾಜ್ಯಮಟ್ಟದಲ್ಲಿ ರೂಪಿಸುವ ಕಾರ್ಯ ಯೋಜನೆಯಿಂದ ಹಿಂದುಳಿದ ಜಿಲ್ಲೆಗಳ ಸಮಸ್ಯೆಯನ್ನು ಬಗೆಹರಿಸುವುದು ಸಾಧ್ಯವಿಲ್ಲ. ಈ ವಿಭಾಗದ ಪ್ರತಿ ತಾಲ್ಲೂಕಿಗೆ ಕನಿಷ್ಟ ೫ ವಿದ್ಯಾರ್ಥಿನಿಯರ ಮತ್ತು ೫ ವಿದ್ಯಾರ್ಥಿಗಳ ವಸತಿಯುತ ಶಾಲೆಗಳನ್ನು ಹಾಗೂ ಅದೇ ರೀತಿ ವಿದ್ಯಾರ್ಥಿನಿಲಯಗಳನ್ನು ತೆರೆಯಬೇಕು. ಶೈಕ್ಷಣಿಕವಾಗಿ-ಕೌಟುಂಬಿಕವಾಗಿ ಇಲ್ಲಿನ ಮಕ್ಕಳು ಎದುರಿಸುತ್ತಿರುವ ಕೊರತೆಯನ್ನು ಸರ್ಕಾರವು ವಿಶೇಷ ಕಾರ್ಯಕ್ರಮದ ಮೂಲಕ ತುಂಬಿಕೊಡಬೇಕಾಗುತ್ತದೆ. ಅದಕ್ಕಾಗಿ ಬೃಹತ್ ಪ್ರಮಾಣದ ಶೈಕ್ಷಣಿಕ ಅಂದೋಳನವನ್ನೇ ಇಲ್ಲಿ ಕೈಗೊಳ್ಳಬೇಕಾಗುತ್ತದೆ.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದಿನಗೂಲಿ ರೂ. ೭೦ ರಷ್ಟಿದ್ದರೆ ಗುಲಬರ್ಗಾ ವಿಭಾಗದಲ್ಲಿ ಅದು ಕನಿಷ್ಟ ರೂ. ೧೫೦ರಷ್ಟಿರಬೇಕಾಗುತ್ತದೆ. ಇಡೀ ರಾಷ್ಟ್ರಕ್ಕೆ ರಾಜ್ಯಕ್ಕೆ ಒಂದೇ ರೀತಿಯ ಕೂಲಿ ನಿಗದಿಪಡಿಸುವುದು ಸರಿಯಲ್ಲ. ಕೇಂದ್ರ ಸರ್ಕಾರವು ದಿನಗೂಲಿಗೆ ರೂ. ೭೦ ನೀಡಿದರೆ ಅದಕ್ಕೆ ಸಮವಾಗಿ ರಾಜ್ಯ ಸರ್ಕಾರವು ರೂ. ೭೦ ನೀಡಬೇಕು. ಈ ಬಗೆಯ ಕ್ರಿಯಾಶೀಲ ಕ್ರಮಗಳಿಂದ ಮಾತ್ರ ಪ್ರಾದೇಶಿಕ ಅಸಮಾನತೆಯನ್ನು ತೊಡೆದು ಹಾಕಬಹುದು. ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶವಾದ ಗುಲಬರ್ಗಾ ವಿಭಾಗಕ್ಕೆ ಹೆಚ್ಚಿನ ಸಂಪನ್ಮೂಲ ಹರಿಯುವಂತೆ ಮಾಡುವ ಅಗತ್ಯವಿದೆ.

ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆಯೂ ನಾವು ಗುಲಬರ್ಗಾ ವಿಭಾಗಕ್ಕೆ ವಿಶೇಷ ಕಾರುಅಯೋಜನೆ ರೂಪಿಸುವ ಅಗತ್ಯವಿದೆ. ಯಾವುದಾದರೂ ಯೋಜನೆಯ ನಿರ್ಮಾಣವನ್ನು ಕೈಗೆತ್ತಿಕೊಂಡರೆ ಅದನ್ನು ಅತಿ ಶೀಘ್ರವಾಗಿ ಮುಗಿಸುವ ಬಗ್ಗೆ ಒತ್ತು ನೀಡಬೇಕು. ಸಾಮಾನ್ಯ ಸಂದರ್ಭದಲ್ಲಿ ಐದು ವರ್ಷಗಳು ಒಂದು ಯೋಜನೆ ನಿರ್ಮಾಣಕ್ಕೆ ಕಾಲಾವಧಿ ಅಗತ್ಯವಿದ್ದರೆ ಗುಲಬರ್ಗಾ ವಿಭಾಗದಲ್ಲಿ ಅದನ್ನು ಮೂರು ವರ್ಷಕ್ಕೆ ಮುಗಿಸುವ ಬಗ್ಗೆ ನಾವು ಯೋಚಿಸಬೇಕು. ಈ ಬಗೆಯ ಯೋಜನೆಗಳನ್ನು ಸರ್ಕಾರವು ಜಾರಿಗೊಳಿಸುವಂತೆ ಗುಲಬರ್ಗಾ ವಿಭಾಗದ ಜನಸಮೂಹ ಒತ್ತಾಯಿಸಬೇಕಾಗುತ್ತದೆ.

ಜನಪ್ರತಿನಿಧಿಗಳ ಪಾತ್ರ ಮತ್ತು ಜನಸಂಘಟನೆ ಪಾತ್ರ

ಅಭಿವೃದ್ಧಿ ಸಂಗತಿಗಳನ್ನು ಪ್ರಾದೇಶಿಕ ಅಸಮಾನತೆ ವಿಷಯವನ್ನು ಮತ್ತು ಗುಲಬರ್ಗಾ ವಿಭಾಗದ ಹಿಂದುಳಿದಿರುವಿಕೆ ಸ್ಥಿತಿಯನ್ನು ‘ರಾಜಕೀಕರಣ’ ಗೊಳಿಸುವ ಅಗತ್ಯವಿದೆ. ಇಲ್ಲಿ ‘ರಾಜಕೀಕರಣ’ ವೆಂಬುದನ್ನು ವಿಸ್ತೃತವಾದ ಅರ್ಥದಲ್ಲಿ ಬಳಸಲಾಗಿದೆ. ಜನಸಮೂಹವು ಅಭಿವೃದ್ಧಿಯಲ್ಲಿ – ಅಧಿಕಾರದಲ್ಲಿ ಪಾಲು ಪಡೆಯುವುದು ಮತ್ತು ಪಾಲನ್ನು ಒತ್ತಾಯಿಸುವುದು ರಾಜಕಾರಣ. ಅದನ್ನು ಸೀಮಿತವಾದ ಹಾಗೂ ವಿಕೃತ ರೀತಿಯಲ್ಲಿ ಇಂದು ಬಳಸಲಾಗುತ್ತಿದೆ. ನಮ್ಮ ಸಂದರ್ಭದಲ್ಲಿ ಗುಲಬರ್ಗಾ ವಿಭಾಗ ಮತ್ತು ಈ ವಿಭಾಗದ ಜನಸಮೂಹವು ರಾಜ್ಯಮಟ್ಟದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ತನ್ನ ಪಾಲನ್ನು ಒತ್ತಾಯಿಸಬೇಕು. ಈ ಅರ್ಥದಲ್ಲಿ ಅಭಿವೃದ್ಧಿ ಮತ್ತು ಪ್ರಾದೇಶಿಕ ಅಸಮಾನತೆಯನ್ನು ರಾಜಕೀಕರಣಗೊಳಿಸಬೇಕೆಂದು ಇಲ್ಲಿ ಹೇಳಲಾಗಿದೆ.

ರಾಜಕೀಯ-ರಾಜಕಾರಣವೆನ್ನುವುದು ಕೇವಲ ಜನಪ್ರತಿನಿಧಿಗಳ ಜವಾಬುದಾರಿಯೆಂದು ಸಂಕುಚಿತ ನೆಲೆಯಲ್ಲಿ ಅರ್ಥಮಾಡಿಕೊಳ್ಳವುದು ಸರಿಯಲ್ಲ. ಜನಪ್ರತಿನಿಧಿಗಳು, ಸಂಸತ್ ಸದಸ್ಯರು, ವಿಧಾನ ಮಂಡಳದ ಸದಸ್ಯರು ನಿರ್ವಾತದಲ್ಲೇನು ಕೆಲಸ ಮಾಡುತ್ತಿರುವುದಿಲ್ಲ. ಪ್ರಾದೇಶಿಕ ಅಸಮಾನತೆಗೆ ಸಂಬಂಧಿಸಿದಂತೆ ಗುಲಬರ್ಗಾ ವಿಭಾಗಕ್ಕೆ ರಾಜ್ಯ ಸರ್ಕಾರದಿಂದ ನ್ಯಾಯ ದೊರಕದಿದ್ದರೆ ಅದು ಜನಪ್ರತಿನಿಧಿಗಳು ವೈಫಲ್ಯವೆಂಬುದರಲ್ಲಿ ಆಶ್ಚರ್ಯವಿಲ್ಲ. ಆದರೆ ಅವರನ್ನು ಮಾತ್ರವೇ ಅದಕ್ಕೆ ಕಾರಣವನ್ನಾಗಿ ಮಾಡುವುದು ಸರಿಯೆಂದು ಕಾಣುವುದಿಲ್ಲ.

ಜನಪ್ರತಿನಿಧಿಗಳು ರಾಜಕೀಯವಾಗಿ ವಿಫಲರಾಗಿದ್ದರೆ ಅದರಲ್ಲಿ ಜನಸಮೂಹದ ಪಾಲು ಇದೆ. ಆದ್ದರಿಂದ ಜನಸಂಘಟನೆಯನ್ನು ಇದಕ್ಕೆ ಸಂಬಂಧಿಸಿದಂತೆ ಕಟ್ಟುವ ಅಗತ್ಯವಿದೆ. ಜನಪ್ರತಿನಿಧಿಗಳು ರಾಜ್ಯಮಟ್ಟದಲ್ಲಿ ಮತ್ತು ರಾಷ್ಟ್ರಮಟ್ಟದಲ್ಲಿ ಗುಲಬರ್ಗಾ ವಿಭಾಗಕ್ಕೆ ನ್ಯಾಯವನ್ನು ಒದಗಿಸಿಕೊಡುವಂತೆ ಒತ್ತಾಯ ಹೇರುವಂತೆ ಮಾಡುವ ಜವಾಬುದಾರಿ ಜನ ಸಂಘಟನೆಗಿರುತ್ತದೆ. ಜನಸಂಘಟನೆ ಪಾತ್ರವು ರಾಜಕಾರಣದ ದೃಷ್ಟಿಯಿಂದ ನಿರ್ಣಾಯಕವಾದುದಾಗಿದೆ. ಪ್ರಾದೇಶಿಕ ಅಸಮಾನತೆಗೆ ಸಂಬಂಧಿಸಿದಂತೆ ಜನಸಮೂಹಕ್ಕೆ ಮಾಹಿತಿ ಇರಬೇಕು ಹಾಗೂ ಅರಿವು ಇರಬೇಕು. ಮಾಹಿತಿ ಮತ್ತು ಅರಿವಿನ ನೆಲೆಯಲ್ಲಿ ಜನಸಂಘಟನೆ ನಡೆದರೆ ಅದು ರಾಜಕೀಯವಾಗಿ ಯಶಸ್ವಿಯಾಗಬಲ್ಲುದಾಗಿದೆ. ಜನ ಸಂಘಟನೆಯು ಕೇವಲ ಡಾ.ಡಿ.ಎಂ.ನಂಜುಡಪ್ಪ ವರದಿಯ ಅನುಷ್ಠಾನವನ್ನು ಮಾತ್ರ ಒತ್ತಾಯಿಸಿದರೆ ಸಾಕಾಗುವುದಿಲ್ಲ. ಈ ವರದಿಯ ಹಿನ್ನೆಲೆಯಲ್ಲಿ ತಮ್ಮ ಪ್ರದೇಶದ ಅಭಿವೃದ್ಧಿ – ದುಸ್ಥಿತಿಯ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗುರುತಿಸಿಕೊಳ್ಳಬೇಕು. ವರ್ಗ ಸಂಬಂಧಗಳ ನೆಲೆಯಲ್ಲಿ ಜನಸಂಘಟನೆ ನಡೆಯಬೇಕು ಮತ್ತು ವರ್ಗಸಂಬಂಧಗಳ ನೆಲೆಯಲ್ಲಿ ಅಭಿವೃದ್ಧಿಯ ಅನುಸಂಧಾನ ನಡೆಯಬೇಕು. ವಿಮಾನ ನಿಲ್ದಾಣದಂತಹ ಬೇಡಿಕೆಯು ಗುಲಬರ್ಗಾ ವಿಭಾಗದ ಅಭಿವೃದ್ಧಿ ಆದ್ಯತೆಗಳ ವಿಕೃತಿಯಾಗಬಹುದೇ ವಿನಾ ಅದು ಜನಸಮೂಹದ ವರ್ಗಾಹಿತಾಸಕ್ತಿಗಳನ್ನು ಪ್ರತಿಬಿಂಬಿಸುವುದಿಲ್ಲ.

ಆದ್ದರಿಂದ ಅಭಿವೃದ್ಧಿ -ದುಸ್ಥಿತಿಗೆ ಸಂಬಂಧಿಸಿದಮ್ತೆ ಗುಲಬರ್ಗಾ ವಿಭಾಗದಲ್ಲಿ ಜನ ಸಂಘಟನೆ ನಡೆಸುವ ಅಗತ್ಯವಿದೆ. ಜನಸಂಘಟನೆಯ ಪಾತ್ರವನ್ನು ಅಮರ್ತ್ಯಸೆನ್ ಪಬ್ಲಿಕ್ ಅಕ್ಷ್ಯನ್ ಎಂದು ಕರೆದಿದ್ದಾರೆ. ಇಲ್ಲಿ ಪಬ್ಲಿಕ್ ಎನ್ನುವುದನ್ನು ಸಾರ್ವಜನಿಕವೆಂದು ತಿಳಿಯುವುದಕ್ಕೆ ಪ್ರತಿಯಾಗಿ ಜನಸಮೂಹ ಅಥವಾ ಜನಸಂಘಟನೆಯೆಂದು ತಿಳಿಯಬೇಕು. ಇಂತಹ ಜನಸಂಘಟನೆಯನ್ನು ಕಟ್ಟುವ ದಿಶೆಯಲ್ಲಿ ಪ್ರಸ್ತುತ ಕೈಪಿಡಿ-ಹೊತ್ತಿಗೆಯು ಒಂದು ಪ್ರಯತ್ನವಾಗಿದೆ. ಏನು ಮಾಡಬೇಕು-ಮಾಡಬಹುದು ಎಂಬುದು ಇಲ್ಲಿ ಜನ ಸಂಘಟನೆಯನ್ನು ಪ್ರತಿನಿಧಿಸುತ್ತದೆ. ಇಂತಹ ಜನಸಂಘಟನೆಯಲ್ಲಿ ಗುಲಬರ್ಗಾ ವಿಭಾಗದ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ತೊಡಗಿಸುವ ಅಗತ್ಯವಿದೆ. ಅಧ್ಯಯನ-ಅರಿವು-ಜಾಗೃತಿ ಒಂದು ಕಡೆ ಮತ್ತು ಇನ್ನೊಂದು ಕಡೆ ಕ್ರಿಯಾಶೀಲತೆ-ನೇರ ಕ್ರಮಗಳ ಸಂಯೋಜನೆ ಮೂಲಕ ಜನಸಂಘಟನೆಯನ್ನು ನಡೆಸಬೇಕಾಗಿದೆ.

ಜನಸಂಘಟನೆಯೆಂಬುದನ್ನು ಕೇವಲ ಬೇಡಿಕೆಗಳ ಪಟ್ಟಿಯನ್ನು ಸಿದ್ಧಪಡಿಸುವುದು ಮತ್ತು ಸರ್ಕಾರಕ್ಕೆ ಸಲ್ಲಿಸುವುದಕ್ಕೆ ಮೀಸಲಾದ ಸಂಗತಿಯಾಗಬಾರದು. ಅಭಿವೃದ್ಧಿ ಕಾರ್ಯಕ್ರಮಗಳು ಜನರಿಗೆ ಜನಸಮೂಹಕ್ಕೆ ಸಮರ್ಥವಾಗಿ ದೊರೆಯುವಂತೆ ಮಾಡುವ ಜವಾಬುದಾರಿಯನ್ನು ಅದು ನಿರ್ವಹಿಸಬೇಕಾಗುತ್ತದೆ.

ಅಭಿವೃದ್ಧಿ ಅನುಸಂಧಾನ

ಗುಲಬರ್ಗಾ ವಿಭಾಗದ ಅಭಿವೃದ್ಧಿ ಕುರಿತಂತೆ, ಅಲ್ಲಿನ ಪ್ರಾಥಮಿಕ ಶಿಕ್ಷಣ ಕುರಿತಂತೆ, ಆರೋಗ್ಯಕ್ಕೆ ಸಂಬಂಧಿಸಿದಂತೆ, ಮೂಲಸೌಲಭ್ಯ ಕುರಿತಂತೆ ಅನುಸಂಧಾನ ನಡೆಯಬೇಕು, ಸಂವಾದ ನಡೆಯಬೇಕು. ಈ ಬಗೆಯ ಅನುಸಂಧಾನ-ಸಂವಾದದ ಮೂಲಕ ಜನಸಂಘಟನೆ ನಡೆಯಬೇಕು. ಇಂತಹ ಜನಸಂಘಟನೆಯು ಜನಪ್ರತಿನಿಧಿಗಳ ಮೆಲೆ ಮತ್ತು ಸರ್ಕಾರದ ಮೇಲೆ ಒತ್ತಡ ತರಬಹುದು. ಆ ಮೂಲಕ ಗುಲಬರ್ಗಾ ವಿಭಾಗದ ಅಭಿವೃದ್ಧಿಗೆ ಹೆಚ್ಚಿನ ನೆರವನ್ನು ಪಡೆಯಬಹುದು. ಈ ಜನ ಸಂಘಟನೆಯ ಕಾರ್ಯದಲ್ಲಿ ಗುಲಬರ್ಗಾ ವಿಭಾಗದ ಕಾಲೇಜು ವಿದ್ಯಾರ್ಥಿಗಳು. ಶಿಕ್ಷಕರು, ಗ್ರಾಮಪಂಚಾಯಿತಿ ಸದಸ್ಯರು, ಜಿಲ್ಲಾ ಯೋಜನಾ ಸಮಿತಿ ಸದಸ್ಯರನ್ನು ತೊಡಗಿಸಬಹುದು. ಸ್ವಸಹಾಯ ಗುಂಪುಗಳು ಮಹಿಳಾ ಸದಸ್ಯರನ್ನು ಇದರಲ್ಲಿ ತೊಡಗಿಸಬಹುದು. ಮಹಿಳೆಯರು ಜನ ಸಂಘಟನೆಯಲ್ಲಿ ಹೆಚ್ಚು ತೊಡಗುವಂತೆ ಮಾಡುವ ಅಗತ್ಯವಿದೆ. ಏಕೆಂದರೆ ಪ್ರಾದೇಶಿಕ ಅಸಮಾನತೆಗೆ ಲಿಂಗಸಂಬಂಧಿ ಆಯಾಮ ಕೂಡ ಇದೆ ಎಂಬುದನ್ನು ನಾವು ಮರೆಯಬಾರದು.

ಅನುಬಂಧ ೧ – ಉನ್ನತಾಧಿಕಾರ ಸಮಿತಿ ಸೂತ್ರದ ಪ್ರಕಾರ ಅನುದಾನ ಹಂಚಿಕೆ : ೨೦೦೧

ಜಿಲ್ಲೆಗಳು ಶೇಕಡ ಪಾಲು ರೂ. ೧೬೦೦೦ ಕೋಟಿ ಪಾಲು ರೂ. ೧೫೭೧.೫೦
ಕೋಟಿಪಾಲು
ಜಿಲ್ಲೆಗಳು ಶೇಕಡ ಪಾಲು ರೂ. ೧೬೦೦೦ ಕೋಟಿ ಪಾಲು ರೂ. ೧೫೭೧.೫೦ ಕೋಟಿಪಾಲು
ಬಳ್ಳಾರಿ ೧೨.೪೧ ೭೯೪.೨೪ ೭೮.೦೦ ಬೆಂಗಳೂರು (ಗ್ರಾ) ೧.೮೯ ೭೫.೬೦ ೭.೪೩
ಬೀದರ್ ೧೪.೭೬ ೯೪೪.೬೪ ೯೨.೭೮ ಬೆಂಗಳೂರು (ನ) ೧೦.೩೪ ೪೧೩.೬೦ ೪೦.೬೨
ಗುಲಬರ್ಗಾ ೪೧.೯೪ ೨೬೮೪.೧೬ ೨೬೩.೬೪ ಚಿತ್ರದುರ್ಗ ೧೬.೧೬ ೬೪೬.೪೦ ೬೩.೪೯
ರಾಯಚೂರು ೧೮.೬೧ ೧೧೯೧.೦೪ ೧೧೬.೯೮೪ ದಾವಣಗೆರೆ ೧೫.೭೯ ೬೩೧.೬೦ ೬೨.೦೪
ಕೊಪ್ಪಳ ೧೨.೨೮ ೭೮೫.೯೨ ೭೭.೧೯೫ ಕೋಲಾರ ೧೭.೬೬ ೭೦೬.೪೦ ೬೯.೩೮
ಶಿವಮೊಗ್ಗ ೪.೮೯ ೧೯೫.೬೦ ೧೯.೨೧
ತುಮಕೂರು ೩೩.೨೭ ೧೩೩೦.೮೦ ೧೩೦.೭೧
ಗುಲಬರ್ಗಾ ವಿಭಾಗ ೧೦೦.೦೦ ೬೪೦೦.೦೦ ೬೨೮.೬೦ ಬೆಂಗಳೂರು ವಿಭಾಗ ೧೦೦.೦೦ ೪೦೦೦.೦೦ ೩೯೨.೮೭
ಬೆಳಗಾವಿ ೧೬.೭೫ ೫೩೬.೦೦ ೫೨.೬೫ ಚಿಕ್ಕಮಗಳೂರು ೧೦.೮೭ ೨೬೦.೮೮ ೨೫.೬೨
ಬಿಜಾಪುರ ೩೩.೯೯ ೧೦೮೭.೭೮ ೧೦೬.೮೩ ದಕ್ಷಿಣ ಕನ್ನಡ
ಬಾಗಲ ಕೋಟೆ ೧೩.೫೯ ೪೩೪.೮೮ ೪೨.೭೧ ಉಡುಪಿ
ಧಾರವಾಡ ೫.೩೪ ೨೪೦.೬೪ ೧೬.೭೮ ಹಾಸನ ೧೫.೨೨ ೩೬೫.೨೮ ೩೫.೮೮
ಗದಗ ೭೫೨ ೨೪೦.೬೪ ೨೩.೬೪ ಕೊಡಗು
ಹಾವೇರಿ ೧೨.೮೬ ೪೧೧.೫೨ ೪೦.೪೨ ಮಂಡ್ಯ ೨೩.೯೧ ೫೭೩.೮೪ ೫೬.೩೬
ಉ.ಕನ್ನಡ ೯.೯೫ ೩೧೮.೪೦ ೩೧.೨೭ ಮೈಸೂರು ೨೭.೯೦ ೬೬೯.೬೦ ೬೫.೭೭
ಚಾಮರಾಜನಗರ ೨೨.೦೦ ೫೩೦.೪೦ ೫೨.೦೦
ಬೆಳಗಾವಿ ವಿಭಾಗ ೧೦೦.೦೦ ೩೨೦೦.೦೦ ೩೧೪.೩೦ ಮೈಸೂರು ವಿಭಾಗ ೧೦೦.೦೦ ೨೪೦೦.೦೦ ೨೩೫.೭೩
ಉತ್ತರ ಕರ್ನಾಟಕ ೬೦.೦೦ ೯೬೦೦.೦೦ ೯೪೨.೯೦ ದಕ್ಷಿಣ ಕರ್ನಾಟಕ ೪೦.೦೦ ೬೪೦೦.೦೦ ೬೨೮.೬೦

ಮೂಲ : ಪ್ರಾದೇಶಿಕ ಅಸಮಾನತೆ ಅಧ್ಯಯನದ ಉನ್ನತಾಧಿಕಾರ ಸಮಿತಿಯ ಅಂತಿಮ ವರದಿ : ೨೦೦೨ 

ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆ ಅನುದಾನ ವಿನಿಯೋಗ (ಡಿ.ಎಂ.ನಂಜುಂಡಪ್ಪ ಸಮಿತಿ ಶಿಫಾರಸ್ಸು)

ಅನುಬಂಧ ೨ – (ಕೋಟಿ ರೂಪಾಯಿಗಳಲ್ಲಿ) ವಿಭಾಗಗಳು ಸರ್ಕಾರಿ ಸೂತ್ರ ಸಮಿತಿ ಸೂತ್ರ

ವಿಭಾಗಗಳು ಹಿಂದುಳಿದ ತಾಲ್ಲೂಕುಗಳು ಸರ್ಕಾರಿ ಸೂತ್ರ ಒಟ್ಟು ಹಿಂದುಳಿದ ತಾಲ್ಲೂಕುಗಳು ಸಮಿತಿ ಸೂತ್ರ ಒಟ್ಟು
ಅತಿ ಹಿಂದುಳಿದ ತಾಲ್ಲೂಕುಗಳು ಅತ್ಯಂತ ಅತಿ ಹಿಂದುಳಿದ ತಾಲ್ಲೂಕುಗಳು ಅತಿ ಹಿಂದುಳಿದ ತಾಲ್ಲೂಕುಗಳು ಅತ್ಯಂತ ಹಿಂದುಳಿದ ತಾಲ್ಲೂಕುಗಳು
ಬೆಂಗಳೂರು ವಿಭಾಗ ೮೦.೮೨ ೧೫೩.೨೨ ೨೨೧.೬೨ ೪೪೫.೬೬ ೭೮.೫೬ ೧೧೭.೮೬ ೧೯೬.೪೪ ೩೯೨.೮೬
ಮೈಸೂರು ವಿಭಾಗ ೮೯.೮೦ ೧೧೭.೮೬ ೪೦.೩೦ ೨೪೭.೯೬ ೪೭.೧೫ ೭೦.೭೨ ೧೧೭.೮೬ ೨೩೫.೭೩
ದಕ್ಷಿಣ ಕರ್ನಾಟಕ ಪ್ರದೇಶ ೧೭೦.೬೨ ೨೭೧.೦೮ ೨೬೧.೯೨ ೭೦೩.೬೨ ೧೨೫.೭೧ ೧೮೮.೫೮ ೩೧೪.೩೦ ೬೨೮.೫೯
ಬೆಳಗಾವಿ ವಿಭಾಗ ೧೨೫.೭೨ ೧೪೧.೪೪ ೧೦೦.೭೪ ೩೬೭.೯೦ ೬೨.೮೬ ೯೪.೨೯ ೧೫೭.೧೫ ೩೧೪.೩೦
ಗುಲಬರ್ಗಾ ವಿಭಾಗ ೧೭.೯೬ ೫೮.೭೩ ೪೨೩.೦೯ ೪೯೯.೯೮ ೧೨೫.೭೨ ೧೮೮.೫೦ ೪೧೪.೩೦ ೬೨೮.೫೨
ಉತ್ತರ ಕರ್ನಾಟಕ ಪ್ರದೇಶ ೧೪೩.೬೮ ೨೦೦.೩೭ ೫೨೩.೮೩ ೮೬೭.೮೮ ೧೮೮.೫೮ ೨೮೨.೭೯ ೪೭೧.೪೫ ೯೪೨.೮೨
ರಾಜ್ಯ ೩೧೪.೩೦ ೪೭೧.೭೫ ೭೮೫.೭೫ ೧೫೭೧.೫೦ ೩೧೪.೩೦ ೪೭೧.೭೫ ೭೮೫.೭೫ ೧೫೭೧.೫೦

ಟಿಪ್ಪಣಿ : ಸರ್ಕಾರವು ೨೦೦೭-೦೮ನೆಯ ಸಾಲಿನಲ್ಲಿ ಬಜೆಟ್ಟನಲ್ಲಿ ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆ ರೂ. ೧೫೭೧.೫ ಕೋಟಿ ಮೀಸಲಿಟ್ಟಿದೆ. ಅದನ್ನು ಸಮಿತಿ ಸೂತ್ರದಂತೆ ಹಂಚಿದರೆ ವಿಭಾಗಗಳಿಗೆ ಎಷ್ಟು ದೊರೆಯುತ್ತದೆ ಮತ್ತು ಸರ್ಕಾರಿ ಸೂತ್ರದ ಪ್ರಕಾರ ಹಂಚಿದರೆ ವಿಭಾಗಗಳಿಗೆ ಎಷ್ಟು ದೊರೆಯುತ್ತದೆ ಎಂಬುದನ್ನು ತೋರಿಸಿದೆ.