ಚಾರಿತ್ರಿಕವಾಗಿ ಯಾವುದನ್ನು ‘ಹೈದರಾಬಾದ್ ಕರ್ನಾಟಕ’ ಪ್ರದೇಶವೆಂದು ಕರೆಯಲಾಗುತ್ತದೆಯೋ ಅದರಲ್ಲಿ ಗುಲಬರ್ಗಾ ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಮಾತ್ರ ಸೇರುತ್ತವೆ. ಆಡಳಿತದ ಅನುಕೂಲಕ್ಕೆ ಏಕೀಕರಣದ ಸಂದರ್ಭದಲ್ಲಿ ಮದರಾಸು ಪ್ರಾಂತದಿಂದ ವರ್ಗಾವಣೆಯಾಗಿ ಕರ್ನಾಟಕವನ್ನು ಸೇರಿದ ಬಳ್ಳಾರಿ ಜಿಲ್ಲೆಯನ್ನು ಗುಲಬರ್ಗಾ ವಿಭಾಗಕ್ಕೆ ಸೇರಿಸಲಾಯಿತು. ಬೀದರ್, ಗುಲಬರ್ಗಾ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಹೈದರಾಬಾದ್ ನಿಜಾಮನ ಪ್ರಾಂತ್ಯದ ಭಾಗಗಳಾಗಿದ್ದವು. ರಾಜ್ಯ ಪುನರ್ವಿಂಗಡಣೆ ಸಂದರ್ಭದಲ್ಲಿ ಹೈದರಾಬಾದ್ ನಿಜಾಮ ಸಂಸ್ಥಾನವನ್ನು ಭಾಷಾವಾರು ಮೂರು ಭಾಗಗಳಾಗಿ ವಿಂಗಡಿಸಲಾಯಿತು.

ಮರಾಠಿ ಮಾತನಾಡುವ ಮರಾಠವಾಡ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ತೆಲುಗು ಭಾಷೆ ಮಾತನಾಡುವ ತೆಲಗೂ ಪ್ರದೇಶವನ್ನು ಆಂಧ್ರ ಪ್ರದೇಶಕ್ಕೆ ಮತ್ತು ಕನ್ನಡ ಮಾತನಾಡುವ ಪ್ರದೇಶವನ್ನು ಕರ್ನಾಟಕಕ್ಕೆ ವರ್ಗಾವಣೆ ಮಾಡಲಾಯಿತು. ಬಹಳ ಕುತೂಹಲದ ಸಂಗತಿಯೆಂದರೆ ನಿಜಾಮನ ಪ್ರಾಂತದಿಂದ ವರ್ಗಾವಣೆಯಾದ ಪ್ರದೇಶಗಳು ಆಯಾ ರಾಜ್ಯಗಳಲ್ಲಿ ಇಂದಿಗೂ ‘ಹಿಂದುಳಿದ’ ಪ್ರದೇಶಗಳಾಗಿ ಉಳಿದಿವೆ.

ಕೈಪಿಡಿಯ ಪ್ರಸ್ತುತ ಭಾಗದಲ್ಲಿ ಪ್ರಾದೇಶಿಕ ಅಸಮಾನತೆ ನಿವಾರಣೆ ಅಧ್ಯಯದ ಉನ್ನತಾಧಿಕಾರಿ ಸಮಿತಿಯ ವರದಿಯ ಹಿನ್ನೆಲೆಯಲ್ಲಿ ಗುಲಬರ್ಗಾ ವಿಭಾಗದ ಸ್ಥಿತಿಗತಿಯನ್ನು ವರಮಾನ, ಸಾಕ್ಷರತೆ, ದುಡಿಮೆಗಾರರ ಹಂಚಿಕೆ, ಲಿಂಗ ಸಂಬಂಧ, ಮಾನವ ಅಭಿವೃದ್ಧಿ ಮುಂತಾದ ಸಂಗತಿಗಳ ನೆಲೆಯಲ್ಲಿ ವಿವರಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

ಅಭಿವೃದ್ಧಿಯ ಮಟ್ಟ ಮತ್ತು ಗತಿ

ಇದೇ ರಾಜ್ಯದಲ್ಲಿ ಗುಲಬರ್ಗಾ ವಿಭಾಗವು ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿದೆಯೆಂದರೆ ಕಳೆದ ೫೦ ವರ್ಷಗಳಲ್ಲಿ (೧೯೫೬-೨೦೦೬) ಅಭಿವೃದ್ಧಿಯೇ ಅಲ್ಲಿ ನಡೆಸಿಲ್ಲವೆಂದು ಹೇಳಿದರೆ ತಪ್ಪಾಗುತ್ತದೆ. ಏಕೆಂದರೆ ಕಳೆದ ೫ ದಶಕಗಳ ಅವಧಿಯಲ್ಲಿ ಗುಲಬರ್ಗಾ ವಿಭಾಗದ ಜಿಲ್ಲೆಗಳು ಸಾಕಷ್ಟು ಅಭಿವೃದ್ಧಿ ಸಾಧಿಸಿಕೊಂಡಿವೆ. ಅನೇಕ ಸೂಚಿ-ಸೂಚ್ಯಂಕಗಳ ಮೂಲಕ ಇದನ್ನು ದೃಢಪಡಿಸಬಹುದಾಗಿದೆ. ಕೆಳಕಂಡ ಸೂಚಿಗಳನ್ನು ಬಳಸಿಕೊಂಡು ಗುಲಬರ್ಗಾ ವಿಭಾಗದ ಜಿಲ್ಲೆಗಳು ಸಾಧಿಸಿಕೊಂಡಿರುವ ಅಭಿವೃದ್ಧಿ ಮಟ್ಟವನ್ನು ಇಲ್ಲಿ ಗುರುತಿಸಲು ಪ್ರಯತ್ನಿಸಲಾಗಿದೆ.

೧. ಜಿಲ್ಲಾ ಒಟ್ಟು ವರಮಾನ ಮತ್ತು ತಲಾವರಮಾನ

೨. ಸಾಕ್ಷರತೆ

೩. ಕೃಷಿ ಅವಲಂಬನೆ ಮತ್ತು ಕೃಷಿ ಕಾರ್ಮಿಕರ ಪ್ರಮಾಣ

೪. ಮಾನವ ಅಭಿವೃದ್ಧಿ

ಜಿಲ್ಲಾ ಒಟ್ಟು ವರಮಾನ ಮತ್ತು ತಲಾವರಮಾನ

ಗುಲಬರ್ಗಾ ವಿಭಾಗಗಳ ಒಟ್ಟು ವರಮಾನ ಹಾಗೂ ತಲಾವರಮಾನವು ೧೯೯೩-೯೪ರಿಂದ ೨೦೦೩-೦೪ರ ಅವಧಿಯಲ್ಲಿ ತೀವ್ರ ಏರಿಕೆಯಾಗಿದೆ. ಈ ಪ್ರದೇಶವು ಅಭಿವೃದ್ಧಿಯನ್ನು ಸಾಧಿಸಿಕೊಂಡಿದೆ. ಆದರೆ ರಾಜ್ಯಮಟ್ಟದ ಅಭಿವೃದ್ಧಿಗೆ ಸಾಪೇಕ್ಷವಾಗಿ ಇದರ ಅಭಿವೃದ್ಧಿ ತುಂಬ ಮಂದಗತಿಯದ್ದಾಗಿದೆ.

ಗುಲಬರ್ಗಾ ವಿಭಾಗದ ಜಿಲ್ಲಾ ಒಟ್ಟು ವರಮಾನ ೧೯೯೩-೯೪ರಲ್ಲಿ ರೂ. ೫೬೬೪.೨೮ ಕೋಟಿಯಷ್ಟಿತ್ತು. ಇದು ೨೦೦೩-೦೪ರಲ್ಲಿ ರೂ. ೧೯೧೧೭.೩೮ ಕೋಟಿಗೇರಿದೆ. ಇಲ್ಲಿನ ವರಮಾನದ ವಾರ್ಷಿಕ ಬೆಳವಣಿಗೆ ಪ್ರಮಾಣ ಶೇ. ೨೩.೭೫. ಇದೇ ಅವಧಿಯಲ್ಲಿ ರಾಜ್ಯದ ಒಟ್ಟು ವರಮಾನವು ರೂ. ೪೧೦೭೯.೦೫ ಕೋಟಿಯಿಂದ ರೂ. ೧೩೦೧೨೬.೬೧ ಕೋಟಿಗೇರಿದೆ. ಇಲ್ಲಿನ ವಾರ್ಷಿಕ ಬೆಳವಣಿಗೆ ಪ್ರಮಾಣ ಶೇ. ೨೧.೬೮.

ರಾಜ್ಯದ ವರಮಾನದಲ್ಲಿ ಗುಲಬರ್ಗಾ ವಿಭಾಗದ ವರಮಾನದ ಪಾಲು ೧೯೯೩-೯೪ರಲ್ಲಿ ಶೇ. ೧೩.೭೯ರಷ್ಟಿತ್ತು. ಇದು ೨೦೦೩-೦೪ರಲ್ಲಿ ಶೇ. ೧೪.೬೯ರಷ್ಟಕ್ಕೇರಿದೆ. ಆದರೆ ರಾಜ್ಯದ ಜನಸಂಖ್ಯೆಯಲ್ಲಿ ಗುಲಬರ್ಗಾ ವಿಭಾಗದ ಪಾಲು ಎಷ್ಟು ಸರಿಸುಮಾರು ಶೇ. ೧೮ರಷ್ಟಿದೆ. ರಾಜ್ಯದ ಜನಸಂಖ್ಯೆಯಲ್ಲಿ ಗುಲಬರ್ಗಾ ವಿಭಾಗವು ಎಷ್ಟು ಪಾಲು ಪಡೆದಿದೆಯೋ ಅದಕ್ಕಿಂತ ಕಡಿಮೆ ಪಾಲನ್ನು ವರಮಾನಕ್ಕೆ ಸಂಬಂಧಿಸಿದಂತೆಪಡೆದಿದೆ. ಇದರ ಪ್ರಮಾಣದಲ್ಲಿ ತೀವ್ರ ಏರಿಕೆ ಕಂಡುಬಂದಿಲ್ಲ. ಕಳೆದ ೧೦ ವರ್ಷಗಳಲ್ಲಿ ಅದರ ಪಾಲು ಶೇ. ೧೩.೭೯ ರಿಂದ ಶೇ. ೧೪.೬೯ಕ್ಕೇರಿದೆ.

ಗುಲಬರ್ಗಾ ವಿಭಾಗದ ತಲಾವರಮಾನವು ೧೯೯೩-೯೪ ರಿಂದ ೨೦೦೩-೦೪ರ ಅವಧಿಯಲ್ಲಿ ರೂ. ೬೬೪೧.೫೦ರಿಂದ ರೂ. ೧೭೩೮೯ಕ್ಕೇರಿದೆ (ಚಾಲ್ತಿಬೆಲೆ). ಇಲ್ಲಿನ ವಾರ್ಷಿಕ ಏರಿಕೆ ಪ್ರಮಾಣ ಶೇ.೧೯.೬೪. ಇದೇ ಅವಧಿಯಲ್ಲಿ ರಾಜ್ಯ ಮಟ್ಟದಲ್ಲಿ ತಲಾ ವರಮಾನವು ರೂ. ೮೭೦೬ರಿಂದ ರೂ. ೨೩೮೫೯ಕ್ಕೇರಿದೆ. ಇದರ ವಾರ್ಷಿಕ ಬೆಳವಣಿಗೆ ಪ್ರಮಾಣ ಶೇ. ೧೭.೪೧. ಎರಡೂ ಕಾಲಘಟ್ಟಗಳಲ್ಲಿ ಗುಲಬರ್ಗಾ ವಿಭಾಗದ ತಲಾವರಮಾನವು ರಾಜ್ಯಮಟ್ಟದ ತಲಾ ವರಮಾನಕ್ಕಿಂತ ಕೆಳಮಟ್ಟದಲ್ಲಿದೆ.

ಗುಲಬರ್ಗಾ ವಿಭಾಗದ ತಲಾವರಮಾನವು ೧೯೯೩-೯೪ರಲ್ಲಿ ರಾಜ್ಯಮಟ್ಟದಲ್ಲಿನ ತಲಾವರಮಾನದ ಶೇ. ೭೬.೨೯ರಷ್ಟಿತ್ತು. ಇದು ೨೦೦೩-೦೪ರಲ್ಲಿ ಶೇ. ೮೨.೫೨ರಷ್ಟಾಗಿದೆ. ಅಂದರೆ ಈ ಪ್ರದೇಶದ ತಲಾವರಮಾನದಲ್ಲಿನ ಸಾಪೇಕ್ಷ ಪ್ರಮಾಣದಲ್ಲಿ ಏರಿಕೆ ಉಂಟಾಗಿದೆ.

ಒಟ್ಟಾರೆಯಾಗಿ ಗುಲಬರ್ಗಾ ವಿಭಾಗ ಅಭಿವೃದ್ಧಿಯಾಗುತ್ತಿದೆ. ಆದರೆ ರಾಜ್ಯಮಟ್ಟಕ್ಕೆ ಸಾಪೇಕ್ಷವಾಗಿ ಅದರ ಅಭಿವೃದ್ಧಿ ತೃಪ್ತಿಕರವಾಗಿಲ್ಲ. ಈ ದೃಷ್ಟಿಯಿಂದ ಸರ್ಕಾರವು ಗುಲಬರ್ಗಾ ವಿಭಾಗದ ಅಭಿವೃದ್ಧಿಗೆ ತೀವ್ರ ಗಮನ ನೀಡಬೇಕಾದ ಅಗತ್ಯವಿದೆ.

ಸಾಕ್ಷರತೆ

ಸಾಕ್ಷರತೆ ವಿಷಯದಲ್ಲಿ ಗುಲಬರ್ಗಾ ವಿಭಾಗದ ಸ್ಥಿತಿ ಅತ್ಯಂತ ಹೀನಾಯವಾಗಿದೆ. ನಿಜವಾದ ಸಮಸ್ಯೆ ಇಲ್ಲಿದೆ. ಇಲ್ಲಿ ಅತ್ಯಂತ ನಿಕೃಷ್ಟಕ್ಕೆ ಒಳಗಾಗಿರುವ ಅಭಿವೃದ್ಧಿ ಸೂಚಿಯೆಂದರೆ ಸಾಕ್ಷರತೆ.

ಇಡೀ ರಾಜ್ಯದಲ್ಲಿ ೨೦೦೧ರಲ್ಲಿನ ಅಕ್ಷರಸ್ಥನ ಸಂಖ್ಯೆ ೩೦೪.೩೫ಲಕ್ಷ. ಗುಲಬರ್ಗಾ ವಿಭಾಗದ ಅಕ್ಷರಸ್ಥರ ಸಂಖ್ಯೆ ೪೨.೫೭ ಲಕ್ಷ. ರಾಜ್ಯದ ಅಕ್ಷರಸ್ಥರಲ್ಲಿ ಗುಲಬರ್ಗಾ ವಿಭಾಗದ ಅಕ್ಷರಸ್ಥರ ಪಾಲು ೨೦೦೧ರಲ್ಲಿ ಶೇ.೧೪. ರಾಜ್ಯದ ಜನಸಂಖ್ಯೆಯಲ್ಲಿ ಗುಲಬರ್ಗಾ ವಿಭಾಗವು ಶೇ. ೧೮ರಷ್ಟು ಪಾಲು ಪಡೆದಿದ್ದರೆ, ರಾಜ್ಯದ ಜನಸಂಖ್ಯೆಯಲ್ಲಿ ಗುಲಬರ್ಗಾ ವಿಭಾಗವು ಶೇ. ೧೮ರಷ್ಟು ಪಾಲು ಪಡೆದಿದ್ದರೆ, ರಾಜ್ಯದ ಅಕ್ಷರಸ್ಥರಲ್ಲಿ ಅದರ ಪಾಲು ಕೇವಲ ಶೇ. ೧೪.

ಇದಕ್ಕಿಂತ ಆತಂಕಕಾರಿ ಸಂಗತಿಯೆಂದರೆ ಲಿಂಗ ಸಂಬಂಧಿ ಸಾಕ್ಷರತಾ ಸೂಚ್ಯಂಕ. ರಾಜ್ಯ ಮಟ್ಟದಲ್ಲಿ ಲಿಂಗ ಸಂಬಂಧಿ ಸಾಕ್ಷರತಾ ಸೂಚ್ಯಂಕ ೭೨.೩೩ರಷ್ಟಿದ್ದರೆ, ಗುಲಬರ್ಗಾ ವಿಭಾಗದಲ್ಲಿ ಅದರ ಸೂಚ್ಯಂಕ ಕೇವಲ ೬೦.೭೦.

ರಾಜ್ಯಮಟ್ಟದಲ್ಲಿ ೨೦೦೧ರಲ್ಲಿ ಸಾಕ್ಷರತೆ ಪ್ರಮಾಣ ಶೇ. ೬೭.೦೪. ಆದರೆ ಗುಲಬರ್ಗಾ ವಿಭಾಗದಲ್ಲಿ ಸಾಕ್ಷರತೆಯು ಅತಿ ಹೆಚ್ಚು ಬೀದರ್‌ನಲ್ಲಿ ಶೇ. ೬೧.೭೮ರಷ್ಟಿದ್ದರೆ, ಅತಿ ಕಡಿಮೆ ಶೇ.೫೦ರಷ್ಟು ಗುಲಬರ್ಗಾ ಮತ್ತು ರಾಯಚೂರು ಜಿಲ್ಲೆಗಳಲ್ಲಿದೆ. ಇವೆರಡೂ ಜಿಲ್ಲೆಗಳು ರಾಜ್ಯದಲ್ಲಿ ಅತಿ ಕಡಿಮೆ ಸಾಕ್ಷರತೆ ಜಿಲ್ಲೆಗಳಾಗಿವೆ. ಮಹಿಳೆಯರ ಸಾಕ್ಷರತಾ ಪ್ರಮಾಣವನ್ನು ತೆಗೆದುಕೊಂಡರೆ ಸ್ಥಿತಿ ಆತಂಕಕಾರಿಯಾಗಿದೆ. ರಾಜ್ಯ ಮಟ್ಟದಲ್ಲಿ ಮಹಿಳೆಯರ ಸಾಕ್ಷರತೆ ೨೦೦೧ರಲ್ಲಿ ಶೇ. ೫೭.೪೫. ಅತಿ ಹೆಚ್ಚು ಮಹಿಳಾ ಸಾಕ್ಷರತೆ ಶೇ.೭೭.೩೯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಮಹಿಳೆಯರ ಸಾಕ್ಷರತೆ ಶೇ. ೪೦ಕ್ಕಿಂತ ಕಡಿಮೆ ಗುಲಬರ್ಗಾ ಮತ್ತು ರಾಯಚೂರು ಜಿಲ್ಲೆಗಳಲ್ಲಿದೆ. ಸಾಕ್ಷರತೆಯು ಶೇ. ೩೦ಕ್ಕಿಂತ ಕಡಿಮೆಯಿರುವ ಯಾದಗೀರ್ (ಶೇ. ೨೬.೯೯), ಶಹಾಪುರ (ಶೇ. ೨೬.೯೭), ಜೇವರ್ಗಿ (ಶೇ. ೨೯.೮೬) ಮತ್ತು ದೇವದುರ್ಗ (ಶೇ. ೨೭.೨೦) ತಾಲ್ಲೂಕುಗಳು ಗುಲಬರ್ಗಾ ವಿಭಾಗದಲ್ಲಿವೆ.

ಸಾಕ್ಷರತೆಗೆ ಸಂಬಂಧಿಸಿದಂತೆ ಗುಲಬರ್ಗಾ ವಿಭಾಗವು ಸಾಗಬೇಕಾದ ದಾರಿ ಬಹಳ ದೂರವಿದೆ. ಇಲ್ಲಿ ಎರಡು ಸವಾಲುಗಳಿವೆ.

ಮೊದಲನೆಯದು ಈ ವಿಭಾಗವು ತನ್ನ ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಕು. ಎರಡನೆಯದಾಗಿ ಕನಿಷ್ಟ ಮೊದಲನೆಯ ಹಂತದಲ್ಲಿ ಅದು ರಾಜ್ಯಮಟ್ಟದ ಸಾಕ್ಷರತೆಗೆ ಸಮಾನವಾದ ಮಟ್ಟವನ್ನು ಸಾಧಿಸಿಕೊಳ್ಳಲು ಪ್ರಯತ್ನಿಸಬೇಕು. ಅಂದರೆ ಗುಲಬರ್ಗಾ ವಿಭಾಗದ ಸಾಕ್ಷರತೆ ಬೆಳವಣಿಗೆ ಪ್ರಮಾಣವು ರಾಜ್ಯಮಟ್ಟದ ಸಾಕ್ಷರತೆ ಬೆಳವಣಿಗೆ ಗತಿಗಿಂತ ತೀವ್ರ ಅಧಿಕವಾಗಿರಬೇಕು.

ಪರಿವರ್ತನಾ ಸೂಚ್ಯಂಕ : ೨೦೦೫-೦೬ ರಿಂದ ೨೦೦೬-೦೭

ಶಿಕ್ಷಣದ ಸಾರ್ವತ್ರೀಕರಣದ ಮಾಪನವಾಗಿ ಪರಿವರ್ತನಾ ಸೂಚ್ಯಂಕವನ್ನು ಬಳಸಬಹುದಾಗಿದೆ. ಪ್ರಾಥಮಿಕ ಹಂತದ ಏಳನೆಯ ತರಗತಿಯಿಂದ ಪ್ರೌಢ ಹಂತದ ಎಂಟನೆಯ ತರಗತಿಗೆ ಹರಿಯುವ ಮಕ್ಕಳ ಪ್ರಮಾಣವನ್ನು ಪರಿವರ್ತನಾ ಸೂಚ್ಯಂಕವು ತೋರಿಸುತ್ತದೆ. ಕರ್ನಾಟಕ ರಾಜ್ಯ ಮಟ್ಟದಲ್ಲಿ ೨೦೦೫-೦೬ರಲ್ಲಿ ಏಳನೆಯ ತರಗತಿಯಲ್ಲಿ ದಾಖಲಾದ ಮಕ್ಕಳ ಸಂಖ್ಯೆ ೯.೯೬ಲಕ್ಷ. ಆದರೆ ೨೦೦೬-೦೭ನೆಯ ಸಾಲಿನಲ್ಲಿ ಎಂಟನೆಯ ತರಗತಿಗೆ ಹರಿದುಬಂದ ಮಕ್ಕಳ ಸಂಖ್ಯೆ ೮.೯೫ಲಕ್ಷ. ಇಲ್ಲಿ ಪರಿವರ್ತನಾ ಸೂಚ್ಯಂಕ ೦.೮೯೯. ಆದರೆ ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಪರಿವರ್ತನಾ ಸೂಚ್ಯಂಕವು ೦.೯೭೩ ರಷ್ಟಾಗಿದೆ. ಅದು ಸಾರ್ವತ್ರೀಕರಣಕ್ಕೆ ತುಂಬಾ ಸನಿಹದಲ್ಲಿದೆ. ಆದರೆ ಗುಲಬರ್ಗಾ ವಿಭಾಗದಲ್ಲಿ ಪರಿವರ್ತನಾ ಸೂಚ್ಯಂಕ ಕೇವಲ ೦.೭೭೯. ಶಿಕ್ಷಣದ ಸಾರ್ವತ್ರೀಕರಣಕ್ಕೆ ಸಂಬಂಧಿಸಿದಂತೆ ಗುಲಬರ್ಗಾ ವಿಭಾಗವು ಸಾಗಬೇಕಾದ ದಾರಿ ಬಹಳ ದೂರವಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮವನ್ನು ರೂಪಿಸುವಾಗ ಪ್ರಾದೇಶಿಕ ಸಂಗತಿಗಳಿಗೆ ಆದ್ಯ ಗಮನ ನೀಡಬೇಕಾಗುತ್ತದೆ. ಅದರಲ್ಲೂ ಗುಲಬರ್ಗಾ ವಿಭಾಗದ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮವನ್ನು ವಿಶೇಷವಾಗಿ ರೂಪಿಸುವ ಅಗತ್ಯವಿದೆ.

ಕೃಷಿ ಅವಲಂಬನೆ ಮತ್ತು ಕೃಷಿ ಕಾರ್ಮಿಕರು

ಯಾವ ಆರ್ಥಿಕತೆಯಲ್ಲಿ ಕೃಷಿ ಅವಲಂಬನೆ ಅಧಿಕವಾಗಿರುತ್ತದೆಯೋ, ಎಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಅತ್ಯಧಿಕವಾಗಿರುತ್ತದೋ ಅಂತಹ ಆರ್ಥಿಕತೆಯು ಹಿಂದುಳಿದಿರುತ್ತವೆ ಎಂಬ ವಾದವನ್ನು ಅಭಿವೃದ್ಧಿ ಸಿದ್ಧಾಂತಗಳು ಮಂಡಿಸುತ್ತಾ ಬಂದಿವೆ. ಕೃಷಿ ಅವಲಂಬನೆ ಅತ್ಯಧಿಕವಾಗಿದ್ದಾಗ ಅಲ್ಲಿ ಪ್ರತಿ ತಲಾ ಉತ್ಪಾದನೆ – ತಲಾ ಕಾರ್ಮಿಕರ ಉತ್ಪನ್ನ ಅತ್ಯಂತ ಕಡಿಮೆಯಿರುತ್ತದೆ. ಇಂತಹ ಸಂದರ್ಭದಲ್ಲಿ ಬಂಡವಾಳ ಹೂಡಿಕೆ ಮತ್ತು ಕೃಷಿಯೇತರ ಚಟುವಟಿಕೆಗಳ ಬೆಳವಣಿಗೆ ಕೆಳಮಟ್ಟದಲ್ಲಿರುತ್ತದೆ. ಕೈಗಾರೀಕರಣ, ನಗರೀಕರಣ ಹಾಗೂ ಆಧುನೀಕರಣ ಅಲ್ಲಿ ಅತ್ಯಂತ ಮಂದಗತಿಯಲ್ಲಿ ನಡೆಯುತ್ತಿರುತ್ತವೆ.

ಕರ್ನಾಟಕ ರಾಜ್ಯದ ಗುಲಬರ್ಗಾ ವಿಭಾಗದಲ್ಲಿ ಕೃಷಿ ಅವಲಂಬನೆ ಹಾಗೂ ಕೃಷಿ ಕಾರ್ಮಿಕರ ಪ್ರಮಾಣವು ಸಾಪೇಕ್ಷವಾಗಿ ಅತ್ಯಧಿಕ ಮಟ್ಟದಲ್ಲಿದೆ. ರಾಜ್ಯಮಟ್ಟದಲ್ಲಿರುವುದಕ್ಕಿಂತ ಮತ್ತು ದಕ್ಷಿಣ ಕರ್ನಾಟಕದಲ್ಲಿರುವುದಕ್ಕಿಂತ ಕೃಷಿ ಅವಲಂಬನೆ ಇಲ್ಲಿ ಅಧಿಕವಾಗಿದೆ. ಊಳಿಗಮಾನ್ಯ ಭೂಸಂಬಂಧಗಳು ಇಲ್ಲಿ ತುಂಬಾ ಗಟ್ಟಿಯಾಗಿ ಉಳಿದುಕೊಂಡಿವೆ.

ವಿಭಾಗವಾರು ಕೃಷಿ ಅವಲಂಬನೆ ಮತ್ತು ಕೃಷಿ ಕಾರ್ಮಿಕರ ಪ್ರಮಾಣ : ೨೦೦೧

ಕೋಷ್ಟಕ ೨

ಕ್ರ. ಸಂ. ವಿಭಾಗಗಳು ಕೃಷಿ ಅವಲಂಬನೆ ಪ್ರಮಾಣ (ಶೇಕಡ) ಒಟ್ಟು ದುಡಿಮೆಗಾರರಲ್ಲಿ ಕೃಷಿ ಕಾರ್ಮಿಕರ ಪ್ರಮಾಣ
೧. ಬೆಂಗಳೂರು ವಿಭಾಗ ೪೭.೫೯ ೧೯.೮೨
೨. ಮೈಸೂರು ವಿಭಾಗ ೫೦.೩೮ ೧೮.೭೦
೩. ದಕ್ಷಿಣ ಕರ್ನಾಟಕ ೪೮.೫೨ ೧೯.೩೯
೪. ಬೆಳಗಾವಿ ವಿಭಾಗ ೬೪.೫೫ ೩೩.೦೨
೫. ಗುಲಬರ್ಗಾ ವಿಭಾಗ ೬೮.೩೮ ೪೦.೫೮
೬. ಉತ್ತರ ಕರ್ನಾಟಕ ೬೬.೧೫ ೩೬.೧೯
೭. ಕರ್ನಾಟಕ ರಾಜ್ಯ ೫೫.೯೭ ೨೬.೪೦

ಈ ಕೋಷ್ಟಕವು ತುಂಬಾ ಕುತೂಹಲಕಾರಿ ಸಂಗತಿಗಳನ್ನು ಅನಾವರಣ ಮಾಡುತ್ತಿದೆ. ತುಂಬಾ ಸೂಕ್ಷ್ಮವಾಗಿ ಇದನ್ನು ಗಮನಿಸುವ ಅಗತ್ಯವಿದೆ. ಈ ಕೋಷ್ಟಕವು ಕರ್ನಾಟಕ ರಾಜ್ಯದಲ್ಲಿನ ಅಭಿವೃದ್ಧಿ ಸಂಬಂಧಿ ಪ್ರದೇಶಿಕ ಅಸಮಾನತೆಯ ಪರಿಣಾಮವನ್ನು ಮತ್ತು ಅದರ ಮೂಲದಲ್ಲಿರುವ ಸಾಂಸ್ಥಿಕ ಕಾರಣಗಳನ್ನು ತಿಳಿಸುತ್ತಿದೆ. ಕಳೆದ ೫೦ ವರ್ಷಗಳಲ್ಲಿ ರಾಜ್ಯದ ಯಾವ ಪ್ರದೇಶ ತೀವ್ರ ಅಭಿವೃದ್ಧಿ ಸಾಧಿಸಿಕೊಂಡಿದೆ ಮತ್ತು ಯಾವ ಪ್ರದೇಶ ದುಸ್ಥಿತಿ ಅನುಭವಿಸುತ್ತಿದೆ ಎಂಬುದನ್ನು ಕೋಷ್ಟಕವು ತಿಳಿಸುತ್ತದೆ. ಕಳೆದ ೫೦ ವರ್ಷಗಳ ಅವಧಿಯಲ್ಲಿ ಕೃಷಿಯೇತರ ಚಟುವಟಿಕೆಗಳು ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ತೀವ್ರಗತಿಯಲ್ಲಿ ಬೆಳೆಯುತ್ತಿದ್ದರೆ ಉತ್ತರ ಕರ್ನಾಟಕ ಪ್ರದೇಶಗಳಲ್ಲಿ ಅದು ಮಂದಗತಿಯಲ್ಲಿ ಬೆಳೆಯುತ್ತಿದೆ. ರಾಜ್ಯದ ಗುಲಬರ್ಗಾ ವಿಭಾಗದಲ್ಲಿ ಕೃಷಿಯೇತರ ಚಟುವಟಿಕೆಗಳ ಪ್ರಮಾಣ ಅತ್ಯಂತ ಕೆಳಮಟ್ಟದಲ್ಲಿದೆ.

ಊಳಿಗಮಾನ್ಯ ಭೂಸಂಬಂಧಗಳು ಉತ್ತರ ಕರ್ನಾಟಕ ಪ್ರದೇಶದಲ್ಲಿ, ಅದರಲ್ಲೂ ಗುಲಬರ್ಗಾ ವಿಭಾಗದಲ್ಲಿ ಇನ್ನೂ ಗಟ್ಟಿಯಾಗಿ ನೆಲೆಗೊಂಡಿರುವುದು ಕೋಷ್ಟಕದಿಂದ ಸ್ಪಷ್ಟವಾಗುತ್ತದೆ. ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಭೂರಹಿತ ಕೃಷಿ ದಿನಗೂಲಿಗಳ ಪ್ರಮಾಣ ಕೇವಲ ಶೇ. ೨೦ಕ್ಕಿಂತ ಕಡಿಮೆಯಿದೆ. ರಾಜ್ಯಮಟ್ಟದಲ್ಲಿ ಶೇ. ೪೦ಕ್ಕಿಂತ ಅಧಿಕವಿದೆ. ಇದು ರಾಜ್ಯದಲ್ಲಿ ದುಸ್ಥಿತಿಯು ಗುಲಬರ್ಗಾ ವಿಭಾಗದ ಜಿಲ್ಲೆಗಳಲ್ಲಿ ಮಡುಗಟ್ಟಿಕೊಂಡಿರುವುದನ್ನು ಸೂಚಿಸುತ್ತದೆ. ಈ ಸಮಸ್ಯೆಯನ್ನು ಎಲ್ಲಿಯವರೆಗೆ ನಾವು ಎದುರಿಸುವುದಿಲ್ಲವೋ ಅಲ್ಲಿಯವರೆಗೆ, ಎಲ್ಲಿಯವರೆಗೆ ಊಳಿಗಮಾನ್ಯ ಭೂ ಸಂಬಂಧಗಳನ್ನು ಬದಲಾಯಿಸುವುದಿಲ್ಲವೋ ಅಲ್ಲಿಯವರೆಗೆ ದುಸ್ಥಿತಿಯು ರಾಜ್ಯದ ಹಿಂದುಳಿದ ಪ್ರದೇಶದಲ್ಲಿ ಮುಂದುವರಿಯುತ್ತದೆ.

ಪ್ರಾದೇಶಿಕ ಅಸಮಾನತೆಗೆ ಸಂಬಂಧಿಸಿದ ಸಾಂಸ್ಥಿಕ-ಭೂಸಂಬಂಧಗಳ ಪ್ರಶ್ನೆಗಳನ್ನು ಉನ್ನತಾಧಿಕಾರಿ ಸಮಿತಿಯು ನೇರವಾಗಿ ವಿಶ್ಲೇಷಣೆ ಮಾಡಲು ಪ್ರಯತ್ನಿಸಿಲ್ಲ. ಇದಕ್ಕೆ ಸಂಬಂಧಿಸಿದ ಸೂಚಿಗಳನ್ನು ಅದು ತನ್ನ ಸೂತ್ರದಲ್ಲಿ ಸೇರಿಸಿಕೊಂಡಿದೆ. ಗುಲಬರ್ಗಾ ವಿಭಾಗಗಳಲ್ಲಿ ಕೃಷಿ ಅವಲಂಬನೆ ಅತಿಯಾಗಿರುವುದಕ್ಕೂ, ಭೂರಹಿತ ಕೃಷಿ ಕೂಲಿಕಾರರ ಪ್ರಮಾಣ ಅಧಿಕವಾಗಿರುವುದಕ್ಕೂ, ಅನಕ್ಷರತೆ ಅಧಿಕವಾಗಿರುವುದಕ್ಕೂ, ಅಲ್ಲಿ ವಲಸೆ ಪ್ರವೃತ್ತಿ ತೀವ್ರವಾಗಿರುವುದಕ್ಕೂ ಸಂಬಂಧಗಳಿವೆ. ಪ್ರಾದೇಶಿಕ ಅಸಮಾನತೆ ಕುರಿತಂತೆ ಕೇವಲ ರಾಜ್ಯ ಸರ್ಕಾರದ ಮಲತಾಯಿ ಧೋರಣೆ ಬಗ್ಗೆ ಮಾತ್ರವೇ ಮಾತನಾಡುವುದರಲ್ಲಿ ಅರ್ಥವಿಲ್ಲ. ರಾಜ್ಯದಲ್ಲಿ ದುಸ್ಥಿತಿ ಎದುರಿಸುತ್ತಿರುವ ಪ್ರದೇಶದ ವಿಶಿಷ್ಟ ಸಂಗತಿಗಳ ಬಗ್ಗೆಯೂ ಗಮನ ನೀಡುವ ಅಗತ್ಯವಿದೆ.

ಮಾನವ ಅಭಿವೃದ್ಧಿ

ಅಭಿವೃದ್ಧಿಯನ್ನು ಅನೂಚಾನವಾಗಿ ವರಮಾನ ವರ್ಧನೆಯೆಂದು ನಿರ್ವಚಿಸಿಕೊಂಡು ಬರಲಾಗಿದೆ. ವರಮಾನದಲ್ಲಿ ಏರಿಕೆ, ಅಂದರೆ ದೇಶ / ಪ್ರದೇಶದಲ್ಲಿ ಉತ್ಪನ್ನ, ಉದ್ಯೋಗ, ಆಹಾರ ಮುಂತಾದವುಗಳಲ್ಲಿ ಉಂಟಾಗುವ ಏರಿಕೆಯನ್ನು ಅಭಿವೃದ್ಧಿಯೆಂದು ಗುರುತಿಸಿಕೊಂಡು ಬರಲಾಗಿದೆ. ಇದನ್ನು ವರಮಾನ ವರ್ಧನಾ ಅಭಿವೃದ್ಧಿ ಮೀಮಾಂಸೆಯೆಂದು ಕರೆಯಬಹುದು. ಈ ಬಗೆಯ ಅಭಿವೃದ್ಧಿ ಮೀಮಾಂಸೆಯನ್ನು ಅಮರ್ತ್ಯಸೆನ್ ಮತ್ತು ಮೆಹಬೂದ್ ಉಲ್‍ಹಕ್ ಅವರು ತೀವ್ರವಾಗಿ ಟೀಕಿಸುತ್ತಾರೆ. ಅವರ ಪ್ರಕಾರ ವರಮಾನದಲ್ಲಿನ ವರ್ಧನೆಯೇ ಅಭಿವೃದ್ಧಿಯಲ್ಲ. ಏಕೆಂದರೆ ಅದು ಅಭಿವೃದ್ಧಿಯ ಸಾಧನವೇ ವಿನಾ ಅದು ಅದರ ಅಂತಿಮ ಗಂತವ್ಯವಲ್ಲ. ಜನರ ಬದುಕು ಉತ್ತಮವಾಗಬೇಕಾದರೆ ಸಮಾಜದಲ್ಲಿ ಒದಗಿರುವ ಅವಕಾಶಗಳನ್ನು ದಕ್ಕಿಸಿಕೊಳ್ಳಲು ಸಾಮರ್ಥ್ಯವಿರಬೇಕು ಮತ್ತು ಸ್ವಾತಂತ್ರ್ಯವಿರಬೇಕು. ಗುಲಬರ್ಗಾ ವಿಭಾಗದ ೧೬.೬೯ ಲಕ್ಷ ಭೂರಹಿತ ಕೃಷಿ ಕೂಲಿಕಾರರ ಸ್ವಾತಂತ್ರ್ಯದ ವ್ಯಾಪ್ತಿ ತುಂಬಾ ಸೀಮಿತವಾದುದು. ಏಕೆಂದರೆ ಅವರಿಗಿರುವ ಆಯ್ಕೆಗಳು ಎರಡೇ! ಒಂದು : ಕೂಲಿ ಮಾಡಬೇಕು. ಎರಡು : ಉಪವಾಸವಿರಬೇಕು.

ಬದುಕನ್ನು ಉತ್ತಮಪಡಿಸಿಕೊಳ್ಳಲು ಸಮಾಜದಲ್ಲಿ ಒದಗಿಬರುವ ಅವಕಾಶಗಳಲ್ಲಿ ತಮಗೆ ಇಷ್ಟವಾದುದನ್ನು ಆಯ್ಕೆ ಮಾಡಿಕೊಳ್ಳುವ ಜನರ ಸಾಮರ್ಥ್ಯ ಮತ್ತು ಸ್ವಾತಂತ್ರ್ಯವನ್ನು ಅಮರ್ತ್ಯಸೇನ್ ಅಭಿವೃದ್ಧಿಯೆಂದು ಕರೆದಿದ್ದಾರೆ. ಆಯ್ಕೆ ಮಾಡಿಕೊಳ್ಳುವ ಜನರ ಸಾಮರ್ಥ್ಯ ಮತ್ತು ಸ್ವಾತಂತ್ರ್ಯಗಳನ್ನು ಸೆನ್ ‘ಧಾರಣಾ ಸಾಮರ್ಥ್ಯ’ವೆಂದು ಕರೆದಿದ್ದಾರೆ. ಈ ಧಾರಣಾ ಸಾಮರ್ಥ್ಯದ ವರ್ಧನೆಯೇ ಮಾನವ ಅಭಿವೃದ್ಧಿ. ಇದನ್ನು ಮಾಪನ ಮಾಡಲು ರೂಪಿಸಿರುವ ಸೂತ್ರವೇ ಮಾನವ ಅಭಿವೃದ್ಧಿ ಸೂಚ್ಯಂಕ. ಈಗಾಗಲೇ ನೋಡಿರುವಂತೆ ನಮ್ಮ ರಾಜ್ಯದಲ್ಲಿ ವರಮಾನದ ವರ್ಧನೆಯ ದೃಷ್ಟಿಯಿಂದಲೂ ಗುಲಬರ್ಗಾ ವಿಭಾಗವು ರಾಜ್ಯದ ಉಳಿದೆಲ್ಲ ವಿಭಾಗಗಳ ವರಮಾನದ ಮಟ್ಟಕ್ಕಿಂತ ತುಂಬಾ ಕೆಳಗಿದೆ. ಮಾನವ ಅಭಿವೃದ್ಧಿ ಅಥವಾ ಧಾರಣಾ ಸಾಮರ್ಥ್ಯದ ದೃಷ್ಟಿಯಿಂದಲೂ ಅದರ ಸ್ಥಿತಿ ತುಂಬಾ ಕೆಳಮಟ್ಟದಲ್ಲಿದೆ.

ಮಾನವ ಅಭಿವೃದ್ಧಿ ಸೂಚ್ಯಂಕವು ಆರೋಗ್ಯ, ಸಾಕ್ಷರತೆ/ಶಿಕ್ಷಣ ಮತ್ತು ವರಮಾನ-ಮೂರು ಸೂಚಿಗಳನ್ನು ಒಳಗೊಂಡ ಸಂಯುಕ್ತ ಮಾಪನವಾಗಿದೆ. ನಮ್ಮ ರಾಜ್ಯದ ಜಿಲ್ಲಾವಾರು ಮಾನವ ಸೂಚ್ಯಂಕದ ವಿವರವನ್ನು ಕೆಳಗೆ ನೀಡಲಾಗಿದೆ.

ಜಿಲ್ಲಾವಾರು ಮಾನವ ಅಭಿವೃದ್ಧಿ ಸೂಚ್ಯಂಕ : ೧೯೯೧ ಮತ್ತು ೨೦೦೧

ಕೋಷ್ಟಕ ೩

ವಿಭಾಗಗಳು ಗರಿಷ್ಟ ಸೂಚ್ಯಂಕ ಕನಿಷ್ಟ ಸೂಚ್ಯಂಕ
ಬೆಂಗಳೂರು ವಿಭಾಗ ೧೯೯೧ ಬೆಂಗಳೂರು ನಗರ ೦.೬೨೩ ಕೋಲಾರ ೦.೫೨೨
೨೦೦೧ ಬೆಂಗಳೂರು ನಗರ ೦.೭೫೩ ಕೋಲಾರ ೦.೬೨೫
ಮೈಸೂರು ವಿಭಾಗ ೧೯೯೧ ದಕ್ಷಿಣ ಕನ್ನಡ ೦.೬೬೬೧ ಚಾಮರಾಜನಗರ ೦.೪೮೮
೨೦೦೧ ದಕ್ಷಿಣ ಕನ್ನಡ ೦.೭೨೨ ಚಾಮರಾಜನಗರ ೦.೭೫೬
ಬೆಳಗಾವಿ ವಿಭಾಗ ೧೯೯೧ ಉತ್ತರ ಕನ್ನಡ ೦.೫೬೭ ಹಾವೇರಿ ೦.೪೯೬
೨೦೦೧ ಉತ್ತರ ಕನ್ನಡ ೦.೬೫೩ ವಿಜಾಪುರ ೦.೫೮೯
ಗುಲಬರ್ಗಾ ವಿಭಾಗ ೧೯೯೧ ಬಳ್ಳಾರಿ ೦.೫೧೨ ರಾಯಚೂರು ೦.೪೪೩
೨೦೦೧ ಬಳ್ಳಾರಿ ೦.೬೧೭ ರಾಯಚೂರು ೦.೫೪೭
ಕರ್ನಾಟಕ ೧೯೯೧   ೦.೫೪೧    
೨೦೦೧   ೦.೬೨೦    

ಮೂಲ : ಕರ್ನಾಟಕ ಮಾನವ ಅಭಿವೃದ್ಧಿ ವರದಿ : ೨೦೦೫

ಎರಡೂ ಕಾಲಘಟ್ಟಗಳಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ ಕನಿಷ್ಟವಿದ್ದುದು ಗುಲಬರ್ಗಾ ವಿಭಾಗದ ರಾಯಚೂರು ಜಿಲ್ಲೆಯಲ್ಲಿ ಎಂಬುದು ತುಂಬಾ ಮುಖ್ಯವಾದ ಸಂಗತಿಯಾಗಿದೆ. ಬಹಳ ಕುತೂಹಲಕಾರಿ ಸಂಗತಿಯೆಂದರೆ ಗುಲಬರ್ಗಾ ವಿಭಾಗದ ಗರಿಷ್ಟ ಮಾನವ ಅಭಿವೃದ್ಧಿ ಸೂಚ್ಯಂಕವು ಇಡೀ ರಾಜ್ಯದಲ್ಲಿ ಕನಿಷ್ಟವಾಗಿದೆ. ಗುಲಬರ್ಗಾ ವಿಭಾಗದ ಐದು ಜಿಲ್ಲೆಗಳ ಸೂಚ್ಯಂಕವು ಎರಡು ಕಾಲಘಟ್ಟಗಳಲ್ಲಿ ರಾಜ್ಯ ಮಟ್ಟದ ಸೂಚ್ಯಂಕಕ್ಕಿಂತ ಕೆಳಮಟ್ಟದಲ್ಲಿದೆ.

ಹೀಗೆ ಯಾವ ಸೂಚಿಯಂತೆ ತೆಗೆದುಕೊಂಡರೂ ರಾಜ್ಯದಲ್ಲಿ ಗುಲಬರ್ಗಾ ವಿಭಾಗದ ಜಿಲ್ಲೆಗಳು ಹಿಂದುಳಿದಿರುವುದು ಸ್ಪಷ್ಟವಾಗುತ್ತದೆ.

ಅಭಿವೃದ್ಧಿ ಸೂಚ್ಯಂಕ ಮತ್ತು ದುಸ್ಥಿತಿ ಸೂಚ್ಯಂಕ

ಪ್ರಾದೇಶಿಕ ಅಸಮಾನತೆ ನಿವಾರಣೆ ಅಧ್ಯಯನದ ಉನ್ನತಾಧಿಕಾರ ಸಮಿತಿಯು ಅಭಿವೃದ್ಧಿಯನ್ನು ಮಾಪನ ಮಾಡಲು ‘ಸಂಯುಕ್ತ ಸಮಗ್ರ ಅಭಿವೃದ್ಧಿ ಸೂಚ್ಯಂಕ’ ವೆಂಬುದನ್ನು ಮತ್ತು ದುಸ್ಥಿತಿಯನ್ನು ಮಾಪನ ಮಾಡಲು ‘ಸಂಚಯಿತ ದುಸ್ಥಿತಿ ಸೂಚ್ಯಂಕ’ ವೆಂಬುದನ್ನು ರೂಪಿಸಿದೆ. ಈ ಕೈಪಿಡಿಯ ಭಾಗ -೧ ರಲ್ಲಿ ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕದ ವಿವರಗಳನ್ನು ನೀಡಲಾಗಿದೆ. ಇಲ್ಲಿ ಸಂಚಯನ ದುಸ್ಥಿತಿ ಸೂಚ್ಯಂಕದ ವಿವರಗಳನ್ನು ನೀಡಲು ಪ್ರಯತ್ನಿಸಲಾಗಿದೆ.

ಈಗಾಗಲೇ ತಿಳಿಸಿರುವಂತೆ ರಾಜ್ಯಮಟ್ಟದ ಅಭಿವೃದ್ಧಿಯನ್ನು ‘ಒಂದು’ ಎಂಬ ಮಾನದಂಡದಿಂದ ಗುರುತಿಸಿಕೊಂಡು ತಾಲ್ಲೂಕುಗಳ ಅಭಿವೃದ್ಧಿಯನ್ನು ಮಾಪನ ಮಾಡಲಾಗಿದೆ. ಅದೇ ರೀತಿ ರಾಜ್ಯಮಟ್ಟದ ಅಭಿವೃದ್ಧಿ ‘ಒಂದು’ ಎಂಬ ಮಾನದಂಡದ ಆಧಾರದ ಮೇಲೆ ದುಸ್ಥಿತಿಯನ್ನು ಮಾಪನ ಮಾಡಬಹುದಾಗಿದೆ. ಒಂದು ತಾಲ್ಲೂಕಿನ ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕವು ರಾಜ್ಯಮಟ್ಟದ ‘ಒಂದು’ ಎಂಬ ಮಾನದಂಡದಿಂದ ಕಡಿಮೆಯಿದ್ದರೆ ಅದು ಹಿಂದುಳಿದಿರುವ ಮಾಪನವಾದರೆ ಅವೆರಡರ ನಡುವಿನ ಅಂತರವೇ ದುಸ್ಥಿತಿಯ ಮಾಪನ. ಕೆಳಗಿನ ಕೋಷ್ಟಕದಲ್ಲಿ ಗುಲಬರ್ಗಾ ಜಿಲ್ಲೆಯ ತಾಲ್ಲೂಕುಗಳ ಅಭಿವೃದ್ಧಿ ಹಾಗೂ ದುಸ್ಥಿತಿಯ ವಿವರವನ್ನು ನೀಡಲಾಗಿದೆ.

ದುಸ್ಥಿತಿ ಸೂಚ್ಯಂಕ : ಗುಲಬರ್ಗಾ ಜಿಲ್ಲೆ : ೨೦೦೧

ಕೋಷ್ಟಕ ೪

ಕ್ರ.ಸಂ ತಾಲ್ಲೂಕುಗಳು ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕ ದುಸ್ಥಿತಿ ಸೂಚ್ಯಂಕ
೧. ಅಫಜಲಪುರ ೦.೬೨ ೦.೩೮
೨. ಅಳಂದ ೦.೬೧ ೦.೩೯
೩. ಚಿಂಚೋಳಿ ೦.೫೭ ೦.೪೩
೪. ಚಿತ್ತಾಪುರ ೦.೬೫ ೦.೩೫
೫. ಗುಲಬರ್ಗಾ ೦.೮೯ ೦.೧೧
೬. ಜೇವರ್ಗಿ ೦.೫೭ ೦.೪೩
೭. ಸೇಡಂ ೦.೭೨ ೦.೨೮
೮. ಶಹಪುರ ೦.೬೨ ೦.೩೮
೯. ಸುರಪುರ ೦.೭೦ ೦.೩೦
೧೦. ಯಾದಗಿರ್ ೦.೬೭ ೦.೩೩
  ಗುಲಬರ್ಗಾ ಜಿಲ್ಲೆ .೬೨ .೩೮

ಈ ಲೆಕ್ಕಾಚಾರದ ಪ್ರಕಾರ ಗುಲಬರ್ಗಾ ಜಿಲ್ಲೆಯ ದುಸ್ಥಿತಿ ಸೂಚ್ಯಂಕ ೩.೩೮. ಇದೇ ಪ್ರಕಾರ ಎಲ್ಲ ಜಿಲ್ಲೆಗಳ ಸಂಚಯಿತ ದುಸ್ಥಿತಿ ಸೂಚ್ಯಂಕಗಳನ್ನು ಲೆಕ್ಕ ಹಾಕಬಹುದಾಗಿದೆ. ಉನ್ನತಾಧಿಕಾರಿ ಸಮಿತಿಯು ವಿಭಾಗವಾರು ಸಂಚಯಿತ ದುಸ್ಥಿತಿ ಸೂಚ್ಯಂಕದ ವಿವರವನ್ನು ನೀಡಿದೆ. ಅದರ ವಿವರವನ್ನು ಇಲ್ಲಿ ನೀಡಲಾಗಿದೆ.

ವಿಭಾಗವಾರು ಜಿಲ್ಲಾ ಸಂಚಯಿತ ದುಸ್ಥಿತಿ ಸೂಚ್ಯಂಕ : ೨೦೦೧

ಕೋಷ್ಟಕ ೫

ಕ್ರ. ಸಂ. ಜಿಲ್ಲೆ / ವಿಭಾಗಗಳು ಸಂಚಯಿತ ದುಸ್ಥಿತಿ ಸೂಚ್ಯಂಕ
  ಗುಲಬರ್ಗಾ ವಿಭಾಗ .೦೬
೧. ಬಳ್ಳಾರಿ ೧.೦೦
೨. ಬೀದರ್ ೧.೧೯
೩. ಗುಲಬರ್ಗಾ ೩.೩೮
೪. ರಾಯಚೂರು ೧.೫೦
೫. ಕೊಪ್ಪಳ ೦.೯೯
  ಬೆಳಗಾವಿ ವಿಭಾಗ .೧೨
೬. ಬೆಳಗಾವಿ ೦.೬೯
೭. ವಿಜಾಪುರ ೧.೪೦
೮. ಬಾಗಲಕೋಟೆ ೦.೫೬
೯. ಧಾರವಾಡ ೦.೨೨
೧೦. ಗದಗ ೦.೩೧
೧೧. ಹಾವೇರಿ ೦.೫೩
೧೨. ಉತ್ತರ ಕನ್ನಡ ೦.೪೧
  ಬೆಂಗಳೂರು ವಿಭಾಗ .೩೨
೧೩. ಬೆಂಗಳೂರು (ನಗರ) ೦.೧೦
೧೪. ಬೆಂಗಳೂರು (ಗ್ರಾಮೀಣ) ೦.೫೫
೧೫. ಚಿತ್ರದುರ್ಗ ೦.೮೬
೧೬. ದಾವಣಗೆರೆ ೦.೮೪
೧೭. ಕೋಲಾರ ೦.೯೪
೧೮. ಶಿವಮೊಗ್ಗ ೦.೨೬
೧೯. ತುಮಕೂರು ೧.೭೭
  ಮೈಸೂರು ವಿಭಾಗ .೭೬
೨೦. ಚಿಕ್ಕಮಗಳೂರು ೦.೩೦
೨೧. ದಕ್ಷಿಣ ಕನ್ನಡ
೨೨. ಉಡುಪಿ
೨೩. ಹಾಸನ ೦.೪೨
೨೪. ಕೊಡಗು
೨೫. ಮಂಡ್ಯ ೦.೬೬
೨೬. ಮೈಸೂರು ೦.೭೭
೨೭. ಚಾಮರಾಜನಗರ ೦.೬೧
  ರಾಜ್ಯ ೨೦.೨೬

ವಿಭಾಗವಾರು ದುಸ್ಥಿತಿಯ ಶೇಕಡಪಾಲು

ಕೋಷ್ಟಕ ೬

ಕ್ರ. ಸಂ ವಿಭಾಗ ಸಂಚಯಿತ ದುಸ್ಥಿತಿ ಸೂಚ್ಯಂಕ ಶೇಕಡ ಪಾಲು
೧. ಬೆಂಗಳೂರು ವಿಭಾಗ ೫.೩೨ ೫.೩೨/೨೦.೨೬x೧೦೦=೨೬.೨೬
೨೫
೨. ಮೈಸೂರು ವಿಭಾಗ ೨.೭೬ ೨.೭೬/೨೦.೨೬x೧೦೦=೧೩.೬೨
೧೫
೩. ಬೆಳಗಾವಿ ವಿಭಾಗ ೪.೧೨ ೪.೧೨/೦/೨೬x೧೦೦=೨೦.೩೪
೨೦
೪. ಗುಲಬರ್ಗಾ ವಿಭಾಗ ೮.೦೬ ೮.೦೬/೨೦.೨೬x೧೦೦=೩೯.೭೮
೪೦
೫. ರಾಜ್ಯ ೨೦.೨೬ ೧೦೦.೦೦

ಸಮಿತಿಯ ಅನುದಾನ ಹಂಚಿಕೆ ಸೂತ್ರ

ಸಂಚಯಿತ ದುಸ್ಥಿತಿ ಸೂಚ್ಯಂಕದ ಆಧಾರದ ಮೇಲೆ ವಿಭಾಗಗಳು, ಜಿಲ್ಲೆಗಳು ಮತ್ತು ತಾಲ್ಲೂಕುಗಳ ನಡುವೆ ಅನುದಾನ ಹಂಚಿಕೆಯಾಗಬೇಕು ಎಂಬುದು ಸಮಿತಿಯ ಅಭಿಮತವಾಗಿದೆ. ಈ ಸೂತ್ರದ ಪ್ರಕಾರ “ಹೆಚ್ಚು ಹಿಂದುಳಿದ ತಾಲ್ಲೂಕು / ಜಿಲ್ಲೆ / ವಿಭಾಗಗಳಿಗೆ ಹೆಚ್ಚು ಅನುದಾನ, ಕಡಿಮೆ ಹಿಂದುಳಿದ ತಾಲ್ಲೂಕು / ಜಿಲ್ಲೆ / ವಿಭಾಗಗಳಿಗೆ ಕಡಿಮೆ ಅನುದಾನ, ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ತಾಲ್ಲೂಕುಗಳಿಗೆ ವಿಶೇಷ ಅನುದಾನಕ್ಕೆ ಅವಕಾಶವಿಲ್ಲ.

ಸಮಿತಿಯ ಸೂತ್ರದ ಪ್ರಕಾರ ವಿಶೇಷ ಅಭಿವೃದ್ಧಿ ಅನುದಾನವನ್ನು ವಿಭಾಗವಾರು ಕೆಳಕಂಡಂತೆ ಹಂಚಬೇಕಾಗುತ್ತದೆ.

ಅನುದಾನ ಹಂಚಿಕೆ

ಬೆಂಗಳೂರು ವಿಭಾಗ ಶೇ. ೨೫
ಮೈಸೂರು ವಿಭಾಗ ಶೇ. ೧೫
ದಕ್ಷಿಣ ಕರ್ನಾಟಕ ಶೇ. ೪೦
ಬೆಳಗಾವಿ ವಿಭಾಗ ಶೇ. ೨೦
ಗುಲಬರ್ಗಾ ವಿಭಾಗ ಶೇ. ೪೦
ಉತ್ತರ ಕರ್ನಾಟಕ ಶೇ. ೬೦
ರಾಜ್ಯದ ೧೧೪ ತಾಲ್ಲೂಕುಗಳು ೧೦೦.೦೦