ಅಭಿವೃದ್ಧಿಯಲ್ಲಿ ಸಾಕ್ಷರತೆಯ ಮಹತ್ವವನ್ನು ಕುರಿತ ಚರ್ಚೆಯು ಅಮರ್ತ್ಯಸೆನ್‌, ಮೆಹಬೂಬ್‌ಉಲ್‌ಹಕ್‌ ಅವರ ಬರಣಿಗೆ ಹಾಗೂ ಸಂಶೋಧನೆಯಿಂದಾಗತಿ ಮತ್ತು ಯುಎನ್‌ಡಿಪಿಯು ಪ್ರಕಟಿಸುತ್ತಿರುವ ಮಾನವ ಅಭಿವೃದ್ಧಿ ವರದಿಗಳಿಂದಾಗಿ ಹೊಸ ನೆಲೆಯನ್ನು ಹಾಗೂ ಹೊಸ ಆಯಾಮವನ್ನು ಇಂದು ಪಡೆದುಕೊಂಡಿದೆ. ಅನೂಚಾನವಾಗಿ ಅದನ್ನು ಅಭಿವೃದ್ಧಿಯ ಸಾಧನವಾಗಿ ಮಾತ್ರ ಪರಿಭಾವಿಸಿಕೊಳ್ಳುತ್ತಾ ಬರಲಾಗಿದೆ. ಆದರೆ ಅದರ ಮಹತ್ವವನ್ನು ಅಮರ್ತ್ಯಸೆನ್‌ಅವರು ಎರಡು ನೆಲೆಗಳಿಂದ ಪರಿಭಾವಿಸಿಕೊಳ್ಳುವ ಪರಿಯನ್ನು ತಮ್ಮ ಬರಹಗಳಲ್ಲಿ ಮತ್ತೆ ಮತ್ತೆ ಪ್ರತಿಪಾದಿಸಿಕೊಂಡು ಬರುತ್ತಿದ್ದಾರೆ. ಅದನ್ನು ಅವರು ಅಭಿವೃದ್ಧಿಯ ‘ಸಾಧನ’ವಾಗಿ, ‘ಸಂಪನ್ಮೂಲ’ವಾಗಿ ಹಾಗೂ ಅದರ ‘ಸಾಧ್ಯ’ವಾಗಿಯೂ ನೋಡುವ ಕ್ರಮವನ್ನು ನಮಗೆ ತೋರಿಸಿಕೊಟ್ಟಿದ್ದಾರೆ. ಲಿಂಗ ಸಮಾನತೆ ದೃಷ್ಟಿಯಿಂದ ಮಹಿಳೆಯರ ಶಿಕ್ಷಣ ಮತ್ತು ಅವರ ಸಾಕ್ಷರತೆ- ಇವುಗಳ ಅಭಿವೃದ್ಧಿ ಸಂಬಂಧಿ ನಿರ್ಣಾಯಕ ಪಾತ್ರದ ಬಗ್ಗೆ ಇಂದು ವ್ಯಾಪಕ ಚರ್ಚೆಗಳಾಗುತ್ತಿವೆ. ಈ ಬಗೆಯ ಚರ್ಚೆಗೆ ಅನುವು ಮಾಡಿಕೊಟ್ಟ ಕೀರ್ತಿ ಅಮರ್ತ್ಯಸೆನ್‌ಗೆ ಸಲ್ಲಬೇಕು. ಒಂದು ಕಾಲದಲ್ಲಿ ಅರ್ಥಶಾಸ್ತ್ರದ ಪಠ್ಯಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕುರಿತಂತೆ ಯಾವುದೇ ಚರ್ಚೆಗಳಿರುತ್ತಿರಲಿಲ್ಲ. ಇಂದು ಪರಿಸ್ಥಿತಿ ಬದಲಾಗಿದೆ. ಯುಎನ್‌ಡಿಪಿಯು ರೂಪಿಸಿರುವ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿನ ಮೂರು ಸೂಚಿಗಳಲ್ಲಿ ಸಾಕ್ಷರತೆ ಮತ್ತು ಶಿಕ್ಷಣಗಳನ್ನು ಒಳಗೊಂಡ ಸಂಯುಕ್ತ ಸೂಚಿಯು ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಪ್ರಬಂಧದಲ್ಲಿ ಮಹಿಳೆಯರ ಸಾಕ್ಷರತೆ ಕುರಿತಂತೆ ಕರ್ನಾಟಕವು ಸಾಧಿಸಿಕೊಂಡಿರುವ ಸಾಧನೆ ಹಾಗೂ ಅದರ ಲಿಂಗ ಸಂಬಂಧಿ ಆಯಾಮಗಳನ್ನು ಚರ್ಚಿಸಲು ಪ್ರಯತ್ನಿಸಲಾಗಿದೆ. ಮಹಿಳೆಯರ ಸಾಕ್ಷರತೆ ಕುರಿತ ಚರ್ಚೆಯು ಕರ್ನಾಟಕದ ಅಭಿವೃದ್ಧಿಯನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. ವಾಸ್ತವವಾಗಿ ಮಹಿಳೆಯರು ಮತ್ತು ಪುರುಷರ ನಡುವಿನ ಸಾಕ್ಷರತಾ ಅಂತರವು ಲಿಂಗ ಅಸಮಾನತೆಯ ಬಹುಮುಖ್ಯ ಸೂಚಿಯಾಗಿದೆ. ಒಂದು ವೇಳೆ ಸಮಾಜದಲ್ಲಿ ಗಂಡು-ಹೆಣ್ಣುಗಳ ನಡುವೆ ಸಮಾನ ಅವಕಾಶಗಳಿದ್ದ ಪಕ್ಷದಲ್ಲಿ ಪುರುಷರ ಹಾಗೂ ಮಹಿಳೆಯರ ಸಾಕ್ಷರತೆಯಲ್ಲಿ ಅಸಮಾನತೆಯಿರಲು ಸಾಧ್ಯವಿಲ್ಲ. ಆದರೆ ವಾಸ್ತವವಾಗಿ ವಿಶ್ವದ ಯಾವುದೇ ದೇಶದಲ್ಲೂ ಸಾಕ್ಷರತೆಯಲ್ಲಿ ಲಿಂಗ ಸಮಾನತೆ ಕಂಡು ಬರುವುದಿಲ್ಲ(ನೋಡಿ: ಯುಎನ್‌ಡಿಪಿಯು ೧೯೯೦ರಿಂದ ಪ್ರಕಟಿಸುತ್ತಿರುವ ಯಾವುದೇ ವರ್ಷದ ಮಾನವ ಅಭಿವೃದ್ಧಿ ವರದಿ). ಈಗಲೂ ಮಹಿಳೆಯರ ಸಾಕ್ಷರತೆ ಹಾಗೂ ಶಿಕ್ಷಣವನ್ನು ಗ್ರಾಮಾಂತರ ಪ್ರದೇಶದಲ್ಲಿ ಕುಟುಂಬದ ಮೇಲಿನ ಹೊರೆಯೆಂದೆ ಭಾವಿಸಲಾಗುತ್ತಿದೆ. ಅವರ ಶಿಕ್ಷಣದ ಮೇಲೆ ಬಂಡವಾಳ ತೊಡಗಿಸುವುದೆಂದರೆ ಮತ್ತೊಬ್ಬರ ಮನೆಯ ಗಿಡಕ್ಕೆ ನೀರು ಹಾಕಿದಂತೆಯೆಂದೆ ಭಾವಿಸಲಾಗುತ್ತಿದೆ. ಸಾಕ್ಷರತೆಯಲ್ಲಿನ ಲಿಂಗಸಂಬಂಧಿ ಅಸಮಾನತೆಯನ್ನು ಕೇವಲ ಮಹಿಳೆಯರು ಮತ್ತು ಪುರುಷರ ನಡುವಿನ ನೆಲೆಯಲ್ಲಿ ಮಾತ್ರ ಚರ್ಚಿಸಲಾಗುತ್ತಿದೆ. ಮಹಿಳಯರನ್ನು ಒಂದು ‘ಅಭಿನ್ನ ವರ್ಗ’ವೆಂದು ಭಾವಿಸಿ ಚರ್ಚೆಗಳನ್ನು ಸಾಮಾನ್ಯವಾಗಿ ನಡೆಸುತ್ತಾ ಬಂದಿರುವುದನ್ನು ಕಾಣಬಹುದು. ಮಹಿಳೆಯರ ಸಾಕ್ಷರತೆಗೆ ಸಂಬಂಧಿಸಿದಂತೆ ಅದರ ವರ್ಗ ಸಂಬಂಧಿ ಹಾಗೂ ಲಿಂಗಸಂಬಂಧಿ ನೆಲೆಗಳನ್ನು ಮಾತ್ರ ಚರ್ಚೆಯ ನೆಲೆಗೆ ತರಲಾಗಿದೆ(ಗೋಪಾಲ ಗುರು:೧೯೯೫). ಆದರೆ ಭಾರತದಂತಹ ಸಂದರ್ಭದಲ್ಲಿ ಅದಕ್ಕೆ ಜಾತಿ ಸಂಬಂಧಿ ಆಯಾಮಮೂ ಇದೆ ಎಂಬುದನ್ನು ಸಾಮಾನ್ಯವಾಗಿ ನಿರ್ಲಕ್ಷಿಸುತ್ತಾ ಬರಲಾಗಿದೆ(ವಿವರಗಳಿಗೆ, ಅನುಪಮ ರಾವ್‌ಸಂಪಾದಿಸಿರುವ ‘ಜೆಂಡರ್ ಅಂಡ್‌ಕಾಸ್ಟ’ ಕೃತಿಯಲ್ಲಿನ ಪ್ರಬಂಧಗಳು:೨೦೦೩). ಇಲ್ಲಿನ ಚರ್ಚೆಯಲ್ಲಿ ಲಿಂಗಸಂಬಂಧಿ ಸಾಕ್ಷರತಾ ಅಸಮಾನತೆಯನ್ನು ಶಿಷ್ಟ ಮತ್ತು ಪರಿಶಿಷ್ಟವೆಂಬ ನೆಲೆಗಳಲ್ಲಿ ಚರ್ಚಿಸುವ ಉದ್ದೇಶವಿದೆ. ಸಾಕ್ಷರತೆಯನ್ನು ಅಮರ್ತ್ಯಸೆನ್‌ಜನರಿಗೆ ‘ಧಾರಣಾ ಸಾಮರ್ಥ್ಯ’ವನ್ನು ನೀಡುವ ಒಂದು ಸಂಗತಿಯನ್ನಾಗಿ ಪರಿಭಾವಿಸಿ ಕೊಂಡಿದ್ದಾರೆ. ಅನಕ್ಷರತೆಯನ್ನು ಅವರು ‘ಸಾಮಾಜಿಕ ವೈಫಲ್ಯ’ವೆಂದು ಮತ್ತು ಅದೊಂದು ‘ಅಸ್ವಾತಂತ್ರ್ಯ’ವೆಂದೂ ಪರಿಭಾವಿಸಿಕೊಂಡಿದ್ದಾರೆ. ಈ ಪ್ರಬಂಧದಲ್ಲಿ ಕೆಳಕಂಡ ಸಂಗತಿಗಳನ್ನು ಚರ್ಚಿಸಲು ಪ್ರಯತ್ನಿಸಲಾಗಿದೆ. ೧. ಅಭಿವೃದ್ಧಿಯಲ್ಲಿ ಸಾಕ್ಷರತೆಯ ಮಹತ್ವ ಮತ್ತು ಪಾತ್ರ ಹಾಗೂ ಸಾಕ್ಷರತೆಯ ಲಿಂಗ ಸಂಬಂಧಿ ನೆಲೆಗಳನ್ನು ಹಿಡಿದಿಡುವುದು.

೨. ಕರ್ನಾಟಕದಲ್ಲಿ ಮಹಿಳೆಯರ ಸಾಕ್ಷರತೆಯು ಬೆಳೆದು ಬಂದ ರೀತಿಯನ್ನು ಚರ್ಚಿಸುವುದು.

೩. ಸಾಕ್ಷರತೆಗೆ ಸಂಬಂಧಿಸಿದಂತೆ ಮೂರು ಬಗೆಯ ಅಸಮಾನತೆಗಳನ್ನು ಗುರುತಿಸಿಲಾಗಿದೆ ಮತ್ತು ಅವುಗಳ ನೆಲೆ-ಬೆಲೆಗಳನ್ನು ಚರ್ಚಿಸಲಾಗಿದೆ. ಅವುಗಳಾವುವೆಂದರೆ ವರ್ಗ ಸಂಬಂಧಿ ಸಾಕ್ಷರತಾ ಅಸಮಾನತೆ, ಲಿಂಗ ಸಂಬಂಧಿ ಸಾಕ್ಷರತಾ ಅಸಮಾನತೆ ಮತ್ತು ಜಾತಿ ಸಂಬಂಧಿ ಸಾಕ್ಷರತಾ ಅಸಮಾನತೆ.

೪. ಕರ್ನಾಟಕದಲ್ಲಿನ ಸಾಕ್ಷರತೆಗೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆಯ ನೆಲೆಗಳನ್ನು ಲಿಂಗಸಂಬಂಧಿ ಆಯಾಮಗಳಲ್ಲಿ ಹಿಡಿದಿಡಲು ಪ್ರಯತ್ನಿಸಲಾಗಿದೆ.

೫. ಅಭಿವೃದ್ಧಿ ಮತ್ತು ಲಿಂಗ ಸಮಾನತೆಗಳ ನಡುವೆ ಸಂಬಂಧವನ್ನು ಪರಿಶೀಲಿಸುವುದು.

ಈ ಪ್ರಬಂಧದಲ್ಲಿ ಏಳು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಅಭಿವೃದ್ಧಿಯಲ್ಲಿ ಸಾಕ್ಷರತೆಯ ಪಾತ್ರ ಹಾಗೂ ಅದರ ಮಹತ್ವವನ್ನು ಚರ್ಚಿಸಲು ಪ್ರಯತ್ನಿಸಲಾಗಿದೆ. ಎರಡನೆಯ ಭಾಗದಲ್ಲಿ ಕರ್ನಾಟಕದಲ್ಲಿ ಸಾಕ್ಷರತೆಯು ನಡೆದು ಬಂದ ದಾರಿಯನ್ನು ಸ್ಥೂಲವಾಗಿ ಗುರುತಿಸಲಾಗಿದೆ. ಮೂರನೆಯ ಭಾಗದಲ್ಲಿ ಮಹಿಳೆಯರ ಸಾಕ್ಷರತೆಯ ಶಿಷ್ಟ ಮತ್ತು ಪರಿಶಿಷ್ಟ ನೆಲೆಗಳನ್ನು ಹಿಡಿದಿಡಲಾಗಿದೆ. ನಾಲ್ಕನೆಯ ಭಾಗದಲ್ಲಿ ವಯಸ್ಕ ಮಹಿಳೆಯರ ಸಾಕ್ಷರತೆಯ ಸ್ವರೂಪವನ್ನು ಚರ್ಚಿಸಲಾಗಿದೆ. ಐದನೆಯ ಭಾಗದಲ್ಲಿ ಸಾಕ್ಷರತೆಗೆ ಸಂಬಂಧಿಸಿದಂತೆ ಗ್ರಾಮೀಣ ಮತ್ತು ನಗರಗಳ ನಡುವಿನ ಅಂತರವನ್ನು ಕುರಿತಂತೆ ಕೆಲವು ಸಂಗತಿಗಳನ್ನು ಪರಿಶೀಲಿಸಲಾಗಿದೆ. ಆರನೆಯ ಭಾಗದಲ್ಲಿ ಸಾಕ್ಷರತೆಗೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆಯ ಪ್ರಮಾಣವನ್ನು ಅಳೆಯಲು ಪ್ರಯತ್ನಿಸಲಾಗಿದೆ.

ಏಳನೆಯ ಭಾಗದಲ್ಲಿ ಲಿಂಗ ಸಮಾನತೆ ಮತ್ತು ಅಭಿವೃದ್ಧಿಗಳ ನಡುವಣ ಸಂಬಂಧವನ್ನು ಪರಿಶೀಲಿನೆಗೆ ಒಳಪಡಿಸಲಾಗಿದೆ. ವರಮಾನ ಕೇಂದ್ರಿತ ಅಭಿವೃದ್ಧಿ ಪ್ರಣಾಳಿಕೆ ಮತ್ತು ಜನರ ಧಾರಣಾಸಾಮರ್ಥ್ಯವನ್ನು ಕೇಂದ್ರನ್ನಾಗಿ ಮಾಡಿಕೊಂಡಿರುವ ಅಭಿವೃದ್ಧಿ ಪ್ರಣಾಳಿಕೆಗಳಿಗೂ ಮತ್ತು ಲಿಂಗಸಂಬಂಧಿ ಸಾಕ್ಷರತಾ ಅಂತರಕ್ಕೂ ನಡುವಣ ಸಂಬಂಧ ಎಷ್ಟೊಂದು ಸಂಕೀರ್ಣ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.