ಭಾಗ ಅಭಿವೃದ್ಧಿ ಮತ್ತು ಸಾಕ್ಷರತೆ

ಈಗಾಗಲೇ ತಿಳಿಸಿರುವಂತೆ ಅಭಿವೃದ್ಧಿಯಲ್ಲಿ ಸಾಕ್ಷರತೆಯ ಮಹತ್ವವನ್ನು ಅತ್ಯಂತ ಸೂಕ್ಷ್ಮವಾಗಿ ಹಿಡಿದಿಟ್ಟ ಕೀರ್ತಿ ಅಮರ್ತ್ಯಸೆನ್‌ಮತ್ತು ಮೆಹಬಬೂಬ್‌ಉಲ್‌ಹಕ್‌ಅವರಿಗೆ ಸಲ್ಲಿಸಬೇಕು. ಸಾಕ್ಷರತೆಯು ಅಭಿವೃದ್ಧಿಯ ಪ್ರಧಾನ ಸಾಧನವೆಂದು ಮತ್ತು ಅದು ಅಭಿವೃದ್ಧಿಯ ಪ್ರಾಥಮಿಕ ಗುರಿಯೆಂಬುದನ್ನು ಅವರು ಸ್ಪಷ್ಟವಾಗಿ ತೋರಿಸಿ ಕೊಟ್ಟಿದ್ದಾರೆ. (ಅಮರ್ತ್ಯಸೆನ್‌: ೧೯೯೯, ೨೦೦೨, ಮೆಹಬೂಬ್‌ಉಲ್‌ಹಕ್‌: ೧೯೯೫, ೧೯೯೮). ಆದರೆ ವಾಸ್ತವವಾಗಿ ಸಮಾಜದಲ್ಲಿ ಜನರನ್ನು-ಮಹಿಳೆಯರನ್ನು ಒಳಗೊಂಡಂತೆ-ಅಭಿವೃದ್ಧಿಯ ಸಾಧನವಾಗಿ ಮಾತ್ರ ನೋಡಲಾಗಿತ್ತಿದೆಯೇ ವಿನಾ ಅಭಿವೃದ್ಧಿಯ ಗುರಿಯಾಗಿಯಲ್ಲ. ಜನರು ಅಭಿವೃದ್ಧಿಯ ‘ಸಾಧನ’ವೋ ಅಥವಾ ಅದರ ‘ಸಾಧ್ಯ’ವೋ ಎಂಬುದನ್ನು ಕುರಿತ ಚರ್ಚೆಯನ್ನು ಮುಂಚೂಣಿಗೆ ಸೆನ್‌ಮತ್ತು ಹಕ್‌ತಂದರು. ಅಭಿವೃದ್ಧಿಯ ನಿರ್ವಚನದ ನೆಲೆಯಲ್ಲಿಯೆ ಅವರು ಇದನ್ನು ಪರಿಶೀಲಿಸುತ್ತಾರೆ.

ಸಾಕ್ಷರತೆಯು ಜನರಿಗೆ ಅದರಲ್ಲೂ ಮಹಿಳೆಯರಿಗೆ ಯಾಕೆ ಬೇಕು?

ಸಾಂಪ್ರದಾಯಿಕ ಅಭಿವೃದ್ಧಿ ಕುರಿತ ಮೀಮಾಂಸೆಯಲ್ಲಿ ರೈತನೊಬ್ಬ ದಕ್ಷನಾಗಿ ವ್ಯವಸಾಯ ಮಾಡಲು ಅಕ್ಷರಸ್ಥನಾಗಬೇಕು, ಕಾರ್ಮಿಕನೊಬ್ಬ ಉತ್ತಮವಾಗಿ ಕೆಲಸ ಮಾಡಲು ಅವನಿಗೆ ಅಕ್ಷರ ಜ್ಞಾನ ಬೇಕು, ಮಹಿಳೆಯೊಬ್ಬಳು ಉತ್ತಮ ತಾಯಿಯಾಗಲೂ ಅವಳಿಗೆ ಅಕ್ಷರ ಜ್ಞಾನ ಬೇಕು, ಕುಟುಂಬವೊಂದನ್ನು ಸಮರ್ಪಕವಾಗಿ ನಿರ್ವಹಿಸಲು ಮಹಿಳೆಗೆ ಸಾಕ್ಷರತೆ ಬೇಕು. ಒಳ್ಳೆಯ ಹೆಂಡತಿಯಾಗಲು, ಗೃಹಿಣಿಯಾಗಲು ಅವಳಿಗೆ ಅಕ್ಷರ ಜ್ಞಾನಬೇಕೆಂದು ವಾದ ಮಾಡುವುದು ಕಂಡುಬರುತ್ತದೆ. ಪತ್ರಿಕೆಯೊಂದರ ಅಂಕಣಗಾರ ಪ್ರತಾಪ ಸಿಂಹ ಎಂಬುವವರು ಬರೆದ ‘ಹುಚ್ಚು ಕುದುರೆಯಾಗಬೇಡ: ಹಾರುವ ಹಕ್ಕಿಯಾಗು’ ಎಂಬ ಲೇಖನದಲ್ಲಿ. (ದಿನಾಂಕ ೧೫, ಮಾರ್ಚ್, ೨೦೦೮. ವಿಜಯ ಕರ್ನಾಟಕ, ಪು. ೬) ಈ ಮಾತು ಬರೆದಿದ್ದಾರೆ. ‘ಮಕ್ಕಳಿಗೆ ಮತ್ತು ಗಂಡನಿಗೆ ಒಳ್ಳೆಯ ಸಂಸ್ಕಾರ ವಿದ್ಯೆ ಕೊಡಬೇಕಾದವಳು ಅಮ್ಮನಾದ ಹೆಣ್ಣು. ಒಂದು ವೇಳೆ ಅವಳು ಹಾಗೆ ಮಾಡದಿದ್ದರೆ ಅದು ಅವಳ ಕರ್ತವ್ಯ ಚ್ಯುತಿಯಾಗುತ್ತದೆ’ ಮಕ್ಕಳು, ಕುಟುಂಬ, ಗಂಡ ಅವರ ಸೇವೆ ಮಾಡುವುದು ಹೆಂಡತಿಯ ಜವಾಬ್ದಾರಿಯೆಂಬ ವಿಚಾರದಲ್ಲಿ ನಂಬಿಕೆಯಿಟ್ಟುಕೊಂಡಿರುವ ಜನರು ಇಂದಿಗೂ ಇದ್ದಾರೆಂಬುದಕ್ಕೆ ಮೇಲಿನ ಅಂಕಣಗಾರರ ಲೇಖನವು ಒಂದು ಉತ್ತಮ ನಿದರ್ಶನವಾಗಿದೆ. ಇವರ ವಾದವನ್ನು ಅನುಸರಿಸುವುದಾದರೆ ಮಹಿಳೆಗೆ ಅಕ್ಷರ ಜ್ಞಾನ ಯಾಕೆ ಬೇಕೆಂದರೆ ಅದರಿಂದ ಅವಳು ಉತ್ತಮ ತಾಯಿಯಾಗಬಹುದು ಎಂಬುದಾಗಿದೆ. (ಈ ಬಗ್ಗೆ ವಿವರವಾದ ಚರ್ಚೆಗೆ ನೋಡಿ: ಮಾರ್ತ ನುಸ್‌ಬೌಮ್‌೨೦೦೦:೨೪೨) ಇಲ್ಲಿ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ ಮಹಿಳೆಗೆ ಒಬ್ಬ ವ್ಯಕ್ತಿಯಾಗಿ ಮತ್ತು ವ್ಯಕ್ತಿಯಾಗಲು ಅಕ್ಷರ ಜ್ಞಾನ ಬೇಡವೆ? ಅರಿಸ್ಟಾಟಲ್‌ಹೇಳುವ ‘ಸಮೃದ್ಧವಾದ ಜೀವನ’ ನಡೆಸಲು ಅವರಿಗೆ ಅಕ್ಷರ ಸಂಸ್ಕೃತಿ ಬೇಡವೆ? ಅವಳಿಗೆ ತನ್ನ ವ್ಯಕ್ತಿತ್ವವನ್ನು, ಕಟ್ಟಿಕೊಳ್ಳಲು ಮಹಿಳೆಯರಿಗೆ ಸಾಕ್ಷರತೆ ಅಗತ್ಯವಿಲ್ಲವೆ? (ವಿವರಗಳಿಗೆ ನೋಡಿ: ಕರುಣಾ ಚನನಾ:೨೦೦೧). ಮಹಿಳೆಯನ್ನು ಒಬ್ಬ ವ್ಯಕ್ತಿಯಾಗಿ ಒಪ್ಪಿಕೊಳ್ಳಲು ಸಿದ್ಧವಿಲ್ಲದ ಮನೋಸ್ಥಿತಿಯನ್ನು ಪ್ರತಾಪಸಿಂಹರಂತವರ ಬರಹಗಳು ತೋರಿಸುತ್ತವೆ. ಅಂದರೆ ಮಹಿಳೆಯರು ಸ್ವತಂತ್ರವಾಗಿ ತಮ್ಮ ಬದುಕನಕ್ನು ಕಟ್ಟಿಕೊಳ್ಳುವ ಸ್ಥಿತಿಯಲಿಲ್ಲವೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ಬಗೆಯ ಮನೋಭಾವವನ್ನು, ಅಂತಹ ವಿಚಾರ ಪ್ರಣಾಳಿಕೆಯನ್ನು ಅಮರ್ತ್ಯಸೆನ್‌ಟೀಕಿಸುತ್ತಾರೆ. ತಾನು ಬಯಸಿದಂತೆ ಬದುಕಲು ಸಾಧ್ಯವಿಲ್ಲದ, ತಾನು ಏನಾಗಬೇಕೆಂದಿದ್ದಾಳೋ ಅದರಂತಾಗಲು ಸಾಧ್ಯವಿಲ್ಲದ ಸ್ಥಿತಿಯನ್ನು ಇಲ್ಲಿ ಅಸ್ವಾತಂತ್ರ್ಯವೆಂದು ಕರೆಯಬಹುದು. ಈ ಬಗೆಯ ಅಸ್ವಾತಂತ್ರ್ಯವನ್ನು ನಿವಾರಣೆ ಮಾಡುವ ದಿಶೆಯಲ್ಲಿ ಸಾಕ್ಷರತೆಯ ಪಾತ್ರ ನಿರ್ಣಾಯಕವಾದುದಾಗಿದೆ. ಅದು ಮಹಿಳೆಯರಿಗೆ ಧಾರಣಾ ಸಾಮರ್ಥ್ಯವನ್ನು ನೀಡುತ್ತದೆ. ಧಾರಣಾ ಸಾಮರ್ಥ್ಯವನ್ನು ಅಮರ್ತ್ಯಸೆನ್‌ನ ವಿಚಾರ ಪ್ರಣಾಳಿಕೆಯ ಹಿನ್ನೆಲೆಯಲ್ಲಿ ‘ಸ್ವಾತಂತ್ರ್ಯ’ವೆಂದು ಕರೆಯಬಹುದು. ಅಂದರೆ ಧಾರಣಾ ಸಾಮರ್ಥ್ಯ ವೆನ್ನುವುದು ಅಮರ್ತ್ಯಸೆನ್‌ರೂಪಿಸಿರುವ ಅಭಿವೃದ್ಧಿ ಸಿದ್ಧಾಂತದ ಅಡಿಪಾಯವಾಗಿದೆ. ಅವರು ಅನುಭವಿಸುವ ಸ್ವಾತಂತ್ರ್ಯವೆ ಅವರ ಧಾರಣಾ ಸಾಮರ್ಥ್ಯವಾಗಿದೆ. ಒಬ್ಬ ವ್ಯಕ್ತಿಯ ಧಾರಣಾ ಸಾಮರ್ಥ್ಯವೆಂದರೆ ಅದು ಆತನ/ಆಕೆಯ ಸಶಕ್ತೀಕರಣವಾಗಿದೆ. ಅದೇ ಅವರ ಧಾರಣಾ ಸಾಮರ್ಥ್ಯವಾಗಿದೆ.

ಈ ದೃಷ್ಟಿಯಿಂದ ನೋಡಿದಾಗ ನಮ್ಮ ಸಮಾಜದ ಸಂದರ್ಭದಲ್ಲಿ ಮಹಿಳೆಯರು ಅನೇಕ ಬಗೆಯ ಅಸ್ವಾತಂತ್ರ್ಯಗಳಿಂದ ನರಳುತ್ತಿದ್ದಾರೆ. ಅವರ ಧಾರಣಾ ಸಾಮರ್ಥ್ಯವು ಅತ್ಯಂತ ಕೆಳಮಟ್ಟದಲ್ಲಿದೆ. ಮಹಿಳೆಯರು ತಾವೇನಾಗಬೇಕೆಂದಿದ್ದಾರೊ ಅದರಂತಾಗುವುದು ಮತ್ತು ತಾವು ಹೇಗೆ ಬದುಕಬೇಕೆಂದಿದ್ದಾರೋ ಅದರಂತೆ ಬದುಕುವುದು ನಿಮ್ಮ ಸಮಾಜದ ಸಂದರ್ಭದಲ್ಲಿ ಸಾಧ್ಯವಿಲ್ಲವಾಗಿದೆ. ಅವರ ಧಾರಣಾ ಸಾಮರ್ಥ್ಯವನ್ನು ನಿರ್ಧರಿಸುವ ಬಹುಮುಖ್ಯವಾದ ಸಂಗತಿಯೆಂದರೆ ಅವರ ಸಾಕ್ಷರತೆಯ ಮಟ್ಟ ಮತ್ತು ಅವರ ಶಿಕ್ಷಣವಾಗಿದೆ. ತಾವು ಏನಾಗಬೇಕೆಂದಿದ್ದಾರೋ ಅದರಂತಾಗುವುದಕ್ಕೆ ಪ್ರತಿಯಾಗಿ ಮತ್ತು ತಾವು ಹೇಗೆ ಬದುಕ ಬೇಕೆಂದಿದ್ದಾರೊ ಅದರಂತೆ ಬದುಕುವುದಕ್ಕೆ ಪ್ರತಿಯಾಗಿ ಮತ್ತು ತಾವು ಹೇಗೆ ಬದುಕ ಬೇಕೆಂದಿದ್ದಾರೊ ಅದರಂತೆ ಬದುಕುವುದಕ್ಕೆ ಪ್ರತಿಯಾಗಿ ಮತ್ತು ತಾವು ಹೇಗೆ ಬದುಕ ಬೇಕೆಂದಿದ್ದಾರೊ ಅದರಂತೆ ಬದುಕುವುದಕ್ಕೆ ಪ್ರತಿಯಾಗಿ ಮತ್ತೊಬ್ಬರ ನಿರೀಕ್ಷೆಗೆ ತಕ್ಕಂತೆ ಮತ್ತು ಮತ್ತೊಬ್ಬರ ಅಗತ್ಯಗಳಿಗೆ ತಕ್ಕಂತೆ ಬದುಕುವುದು ಅವರ ಅಸ್ವಾತಂತ್ರ್ಯವನ್ನು ಮತ್ತು ಅವರ ಧಾರಣಾ ಸಾಮರ್ಥ್ಯವು ಕೆಳಮಟ್ಟದಲ್ಲಿರುವುದನ್ನು ಸೂಚಿಸುತ್ತದೆ. ಈ ಬಗೆಯ ಅಸ್ವಾತಂತ್ರ್ಯವನ್ನು ಮತ್ತು ಅವಕಾಶಗಳನ್ನು ಧಾರಣೆ ಮಾಡಿಕೊಳ್ಳಲು ಸಾಧ್ಯವಿಲ್ಲದ ಸ್ಥಿತಿಯನ್ನು ನಿವಾರಣೆ ಮಾಡುವ ದಿಶೆಯಲ್ಲಿ ಸಾಕ್ಷರತೆಯ ಪಾತ್ರವು ನಿರ್ಣಾಯಕವಾಗಿದೆ. ಈ ದಿಶೆಯಲ್ಲಿ ಕಾರ್ಲ್‌ಮಾರ್ಕ್ಸ್‌ನನ್ನು ಉಲ್ಲೇಖಿಸುತ್ತಾ ಅಮರ್ತ್ಯಸೆನ್‌‘ಜನರ ಮೇಲೆ ಸಂದರ್ಭ ಮತ್ತು ಸನ್ನಿವೇಶಗಳು ಸಾಧಿಸಿಕೊಂಡಿರುವ ನಿಯಂತ್ರಣವನ್ನು ಕಿತ್ತು ಹಾಕಿ ಜನರು ಸಂದರ್ಭ ಮತ್ತು ಸನ್ನಿವೇಶವನ್ನು ನಿಯಂತ್ರಿಸುವ ಸ್ಥಿತಿಯನ್ನು ಸಾಧಿಸಿಕೊಳ್ಳುವುದೇ ಸ್ವಾತಂತ್ರ್ಯ’ವೆಂದು ಬರೆಯುತ್ತಾರೆ (ಅಮರ್ತ್ಯಸೆನ್‌: ೨೦೦೪: ೫). ಈ ಬಗೆಯಲ್ಲಿ ಸನ್ನಿವೇಶ ಮತ್ತು ಸಂದರ್ಭಗಳ ಮೇಲೆ ನಿಯಂತ್ರಣ ಸಾಧಿಸಿಕೊಳ್ಳಲು ಸಾಕ್ಷರತೆ ತುಂಬಾ ಅಗತ್ಯ.

ಮಹಿಳೆಯರ ಬಗ್ಗೆ ಮತ್ತು ಮಹಿಳೆಯರ ಸಾಕ್ಷರತೆ ಬಗ್ಗೆ ಸಮಾಜದಲ್ಲಿ ನೆಲೆಯೂರಿರುವ ತಾರಮತ್ಯವಾದಿ ಮನೋಭಾವವನ್ನು ಪ್ರತಾಪಸಿಂಹರಂತಹ ಅಂಕಣಗಾರರ ವಿಚಾರಗಳಿಂದ ತಿಳಿದುಕೊಳ್ಳಬಹುದು. ಇದು ಅತ್ಯಂತ ತಿಳುವಳಿಕೆಯಿರುವ ಜನರೆಂದು ಭಾವಿಸಿರುವವರಲ್ಲೂ (ಅಂದರೆ ಪತ್ರಿಕೆಯೊಂದರ ಅಂಕಣಗಾರ ಪ್ರತಾಪ ಸಿಂಹ ಅಂತವರಲ್ಲೂ) ನೆಲೆಯೂರಿದೆಯೆಂಬುದೆ ನಮ್ಮ ಮುಂದಿರುವ ದುರಂತವಾಗಿದೆ.

ಈ ಬಗೆಯ ಮಹಿಳೆಯರ ಬಗೆಗಿನ ತಾರತಮ್ಯವಾದಿ ದೃಷ್ಟಿಕೋನವನ್ನು ಅಳಿಸಿಹಾಕುವ ದಿಶೆಯಲ್ಲಿ ಅಮರ್ತ್ಯಸೆನ್‌ಬಹಳಷ್ಟು ಕೆಲಸ ಮಾಡಿದ್ದಾರೆ. ಮಹಿಳೆಯನ್ನು ಒಬ್ಬ ವ್ಯಕ್ತಿಯನ್ನಾಗಿ ನೋಡುವ ಅಗತ್ಯವನ್ನು ಹಾಗೂ ಅವಳಿಗೆ ವ್ಯಕ್ತಿಯಾಗಿ ತನ್ನದೇ ಆದ ಹಿತಾಸಕ್ತಿಗಳಿರಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಅರಿಸ್ಟಾಟಲ್‌, ಇಮ್ಯಾನ್ಯುಯಲ್‌ಕಾಂಟ್‌, ಆಡಂಸ್ಮಿತ್‌, ಕಾರ್ಲ್‌ಮಾರ್ಕ್ಸ್ ಮುಂತಾದ ವಿದ್ವಾಂಸರ ವಿಚಾರಗಳನ್ನು ಉಲ್ಲೇಖಿಸುತ್ತ ಅವರು ಸಾಕ್ಷರತೆಯೆಂಬುದು ಮತ್ತಾವುದನ್ನೋ ಸಾಧಿಸಿಕೊಳ್ಳಲು ಅಗತ್ಯವಾದ ಒಂದು ಸಾಧನವಾಗಿ ನೋಡುವ ಕ್ರಮವನ್ನು ತಿರಸ್ಕರಿಸಿದ್ದಾರೆ. ಅರಿಸ್ಟಾಟಲ್‌ಹೇಳುವ ‘ಸಮೃದ್ಧವಾದ ಬದುಕನ್ನು’(flourishing life) ಸಾಧಿಸಿಕೊಳ್ಳಲು ಸಾಕ್ಷರತೆಯು ಅಗತ್ಯ ಎಂಬುದನ್ನು ಸೆನ್‌ನಿಮಗೆ ತಿಳಿಸಿಕೊಟ್ಟಿದ್ದಾರೆ (ವಿವರವಾದ ಚರ್ಚೆಗೆ ನೋಡಿ: ಇರನಿ ವಾನ್‌ಸ್ಟೆವರೆನ್‌: ೨೦೦೪: ೮೬-೮೭) ಆಡಂಸ್ಮಿತ್‌ಹೇಳುವಂತೆ ‘ಸಮ್ಮಾನವನ್ನು ಕಳೆದು ಕೊಳ್ಳದ ರೀತಿಯಲ್ಲಿ ಜನರ ಜೊತೆಯಲ್ಲಿ ಮುಕ್ತವಾಗಿ ಬೆರೆಯಲು ಅಕ್ಷರ ಸಂಸ್ಕೃತಿಯ ಅಗತ್ಯವಿದೆ’. ಇಮ್ಯಾನುಯಲ್‌ಕಾಂಟ್‌ನನ್ನು ಉಲ್ಲೇಖಿಸುತ್ತ “ಜನಸ್ತೋಮವನ್ನು ಯಾವತ್ತೂ ವೈಯುಕ್ತಿಕವಾಗಿಯಾಗಲಿ ಅಥವಾ ಸಾಮುದಾಯಿಕವಾಗಿಯಾಗಲಿ ‘ಸಾಧನ’ವಾಗಿ ನೋಡುವುದಕ್ಕೆ ಪ್ರತಿಯಾಗಿ ‘ಅಂತಿಮ ಗುರಿ’ಯಾಗಿಯೇ” ನೋಡಬೇಕೆಂಬುದನ್ನು ಸೆನ್‌ತೋರಿಸಿಕೊಟ್ಟಿದ್ದಾರೆ. ಈ ಮಾತು ಮಹಿಳೆಯರ ಸಾಕ್ಷರತೆಗೂ ಅನ್ವಯಿಸುತ್ತದೆ. ಅಮರ್ತ್ಯಸೆನ್‌ಪ್ರಕಾರ ಸಾಕ್ಷರತೆ ಮತ್ತು ಶಿಕ್ಷಣವು ಜನರ ಧಾರಣಾ ಶಕ್ತಿಯನ್ನು ನಿರ್ಧರಿಸುವ ಬಹುಮುಖ್ಯವಾದ ಸೂಚಿಗಳಾಗಿವೆ. ಜನರು ‘ಏನಾಗಿದ್ದಾರೆ ಮತ್ತು ಅವರು ಏನು ಮಾಡ ಬಲ್ಲರು’ ಎಂಬುದು ಬಹಳ ಮಟ್ಟಿಗೆ ಸಾಮಾಜಿಕ ಸೂಚಿಗಳ ಮಟ್ಟವನ್ನು ಅವಲಂಬಿಸಿದೆ. ಜನರು ತಾವು ಏನನ್ನು ಮಾಡಬೇಕೆಂದಿದ್ದಾರೋ ಅದನ್ನು ಮಾಡುವ ಸಾಮರ್ಥ್ಯ ಮತ್ತು ಅವರು ಏನಾಗಬೇಕೆಂದಿದ್ದಾರೋ ಅದರಂತಾಗುವ ಸಾಮರ್ಥ್ಯವನ್ನು ಸೆನ್‌ಸ್ವಾತಂತ್ರ್ಯವೆಂದು ಕರೆದಿದ್ದಾರೆ. ಸಾಕ್ಷರತೆಯು ಅಂತಹ ಬಹು ಮುಖ್ಯವಾದ ಒಂದು ಸಾಮಾಜಿಕ ಸೂಚಿಯಾಗಿದೆ. ಜೀನ್‌ಡ್ರೀಜ್‌ಮತ್ತು ಅಮರ್ತ್ಯಸೆನ್‌ಕೂಡಿ ರಚಿಸಿರುವ ‘ಇಂಡಿಯಾ ಡೆವಲಪ್‌ಮೆಂಟ್‌ಅಂಡ್‌ಪಾರ್ಟಿಸಿಪೇಶನ್‌’(೨೦೦೨) ಎಂಬ ಕೃತಿಯಲ್ಲಿ ಅಭಿವೃದ್ಧಿಯಲ್ಲಿ ಸಾಕ್ಷರತೆಯ ಪಾತ್ರವನ್ನು ಐದು ನೆಲೆಗಳಲ್ಲಿ ಗುರುತಿಸಿದ್ದಾರೆ.

. ಅಂತಸ್ಥವಾದಿ ಮಹತ್ವ

ಅಕ್ಷರ ಜ್ಞಾನ ಮತ್ತು ಶಿಕ್ಷಣ ಅವುಗಳಷ್ಟಕ್ಕೆ ಅವು ಮಹತ್ವ ಪಡೆದಿರುವ ಸಂಗತಿಗಳಾಗಿವೆ. ಸಾಕ್ಷರತೆಯು ಒದಗಿಸುವ ಅವಕಾಶಗಳನ್ನು ಪಡೆಯುವುದರ ಮೂಲಕ ಜನರು ತಮ್ಮ ಧಾರಣಾ ಸಾಮರ್ಥ್ಯವನ್ನು ಉತ್ತಮಪಡಿಸಿಕೊಳ್ಳಬಹುದು. ತಮ್ಮ ಸ್ವಾತಂತ್ರ್ಯದ ವ್ಯಾಪ್ತಿಯನ್ನು ವಿಸ್ತೃತಗೊಳಿಸಿಕೊಳ್ಳಬಹುದು. ಶಿಕ್ಷಣವು ಜನರ ಸ್ವಾಭಿಮಾನವನ್ನು, ಆತ್ಮಗೌರವವನ್ನು ಮತ್ತು ಸಾಮಾಜಿಕ ಸಹಭಾಗಿತ್ವವನ್ನು ಉತ್ತಮಪಡಿಸುತ್ತದೆ. ಒಬ್ಬ ವ್ಯಕ್ತಿಯಾಗಿ ಮಹಿಳೆಗೆ ಅಕ್ಷರ ಸಂಸ್ಕೃತಿಯಿಂದ ಘನತೆ ಮತ್ತು ಮನ್ನಣೆ ದೊರೆಯುತ್ತದೆ.

. ವೈಯುಕ್ತಿಕ ಉಪಕರಣವಾದಿ ಪಾತ್ರ

ಅಕ್ಷರಸ್ಥರಾಗುವುದೆಂದರೆ ಕೇವಲ ಅಕ್ಷರಸ್ಥರಾಗುವುದಲ್ಲ. ಅದು ಇತರೆ ಅನೇಕ ಬಗೆಯ ಪೂರಕ ಅನುಕೂಲಗಳನ್ನು ಒದಗಿಸುತ್ತದೆ. ಅದು ತನ್ನಷ್ಟಕ್ಕೆ ತಾನು ಮಹತ್ವ ಪಡೆದಿದೆ. ಅಕ್ಷರ ಜ್ಞಾನದಿಂದ ಮತ್ತು ಶಿಕ್ಷಣದಿಂದ ಜನರಿಗೆ ಉದ್ಯೋಗ ಪಡೆಯುವುದು ಸುಲಭವಾಗಬಹುದು. ಸಮಾಜದಲ್ಲಿ ಒದಗಿ ಬರುವ ಅವಕಾಶಗಳನ್ನು ಅಕ್ಷರಸ್ಥರು ತಮ್ಮದನ್ನಾಗಿಸಿ ಕೊಳ್ಳುವುದು ಸಾಧ್ಯವಾಗಬಹುದು. ಯಾವುದನ್ನು ಅರಿಸ್ಟಾಟಲ್‌‘ಸಮೃದ್ಧ ಜೀವನ’ವೆಂದು ಹೇಳಿದ್ದಾನೊ ಅದನ್ನು ಪಡೆದುಕೊಳ್ಳಲು ಹಾಗೂ ಸಾಧಿಸಿಕೊಳ್ಳಲು ಅಕ್ಷರ ಜ್ಞಾನವು ನೆರವಾಗುತ್ತದೆ.

. ಸಾಮಾಜಿಕ ಉಪಕರಣವಾದಿ ಪಾತ್ರ

ಸಾಮಾಜಿಕ ಅಗತ್ಯಗಳನ್ನು ಮತ್ತು ಸಾಮಾಜಿಕ ಸಂಗತಿಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡಲು ಅಗತ್ಯವಾದ ಸಾಮರ್ಥ್ಯವನ್ನು ಅಕ್ಷರ ಜ್ಞಾನವು ನೀಡುತ್ತದೆ. ಜಾಗೃತ ರೀತಿಯಲ್ಲಿ ಸಾಮೂಹಿಕ ಹಕ್ಕೊತ್ತಾಯಗಳನ್ನು ಮಂಡಿಸಲು ಇದರಿಂದ ಸಾಧ್ಯವಾಗುತ್ತದೆ. ಸಾರ್ವಜನಿಕ ಸೌಲಭ್ಯಗಳನ್ನು ವಿಸ್ತೃತಗೊಳಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಸಾರ್ವಜನಿಕ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಮತ್ತು ಗರಿಷ್ಟ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಪ್ರಜಾಪ್ರಭುತ್ವದ ಅನುಷ್ಟಾನಕ್ಕೆ ಮತ್ತು ಅದರ ಆಚರಣೆಗೆ ಅಕ್ಷರ ಸಂಸ್ಕೃತಿಯು ತುಂಬಾ ಅಗತ್ಯವಾಗಿದೆ. ಸಾಮಾಜಿಕ ಸಂಗತಿ ಕುರಿತಂತೆ ಚರ್ಚೆಯು ಇದರಿಂದ ಸಾಧ್ಯವಾಗುತ್ತದೆ.

. ಪ್ರಕ್ರಿಯಾತ್ಮಕ ಉಪಕರಣವಾದಿ ಪಾತ್ರ

ಶಾಲೆಗೆ ಹೋಗುವ ಪ್ರಕ್ರಿಯೆಯಿಂದ ಜನರಿಗೆ ಔಪಚಾರಿಕ ಶಿಕ್ಷಣದ ಜೊತೆಗೆ ಇತರೆ ಅನೇಕ ಬಗೆ ಅನುಕೂಲಗಳು ದೊರೆಯುತ್ತವೆ. ಮಕ್ಕಳು ೧೫ ವರ್ಷದವರೆಗೆ ಶಾಲೆಗೆ ಹೋಗುವುದರಿಂದ ಬಾಲ ಕಾರ್ಮಿಕ ಸಮಸ್ಯೆನ್ನು ನಿವಾರಿಸಬಹುದು ಮತ್ತು ಮಹಿಳೆಯರ ಬಾಲ ವಿವಾಹ ಪದ್ಧತಿಯನ್ನು ತಡಗಟ್ಟಬಹುದು. ಶಾಲೆಗೆ ಮಕ್ಕಳು ಹೋಗುವುದರಿಂದ ಅವರಿಗೆ ಇತರರ ಪರಿಚಯವಾಗುತ್ತದೆ ಮತ್ತು ಇದರಿಂದ ಅವರ ದೃಷ್ಟಿಕೋನ ಬದಲಾಗಬಹುದಾಗಿದೆ. ಇದು ಎಳೆಯ ಪ್ರಾಯದ ಹುಡುಗಿಯರ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ.

. ಸಶಕ್ತೀಕರಣವಾದಿ ಮತ್ತು ವಿತರಣಾವಾದಿ ಪಾತ್ರ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಜನರು ರಾಜಕೀಯವಾಗಿ ಸಂಘಟಿತರಾಗಲು, ಶೋಷಣೆ ವಿರುದ್ಧ ಹೋರಾಟ ಮಾಡಲು ಮತ್ತು ಸಾಮಾಜಿಕ ನ್ಯಾಯವನ್ನು ಒತ್ತಾಯಿಸಲು ಅಕ್ಷರ ಜ್ಞಾನ ಮತ್ತು ಶಿಕ್ಷಣದಿಂದ ಸಾಧ್ಯವಾಗುತ್ತದೆ. ಕುಟುಂಬದ ಹೊರಗೆ ಮಾತ್ರವಲ್ಲದೆ ಕುಟುಂಬದ ಒಳಗೆ ಸಶಕ್ತೀಕರಣ ಮತ್ತು ವಿತರಣವಾದಿ ಪಾತ್ರವು ಅನೇಕ ಅನುಕೂಲಗಳನ್ನು ಒದಗಿಸಬಲ್ಲದು. ಏಕೆಂದರೆ ಲಿಂಗಸಂಬಂಧಿ ಅಸಮಾನತೆಯ ಸಮಸ್ಯೆಯು ಕುಟುಂಬದೊಳಗೆ ಅಧಿಕವಾಗಿದೆ ಎಂಬ ಅಂಶ ಈಗ ನಿಚ್ಚಳವಾಗಿ ತಿಳಿದುಬಂದಿದೆ (ಮಾರ್ತ ನುಸಬೌಮ್‌: ೨೦೦೦:೨೪೨). ಅಕ್ಷರ ಜ್ಞಾನ ಮತ್ತು ಶಿಕ್ಷಣವು ಕೇವಲ ಅದನ್ನು ಪಡೆದುಕೊಂಡ ಮನುಷ್ಯರಿಗೆ ಮಾತ್ರ ಅನುಕೂಲಗಳನ್ನು ಒದಗಿಸುವುದಿಲ್ಲ. ಅದರ ರಾಜಕೀಯ ಪರಿಣಾಮಗಳು ವಿಸ್ತೃತವಾಗಿರುತ್ತವೆ. ಹಿಂದುಳಿದ ಸಮುದಾಯದಲ್ಲಿ ಅಕ್ಷರಸ್ಥರ ಗುಂಪು ತಮ್ಮ ಜನ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಲು ಅಗತ್ಯವಾದ ತಿಳುವಳಿಕೆಯನ್ನು ಶಿಕ್ಷಣವು ಜನರಿಗೆ ಒದಗಿಸುತ್ತದೆ.

ಜೀನ್‌ಡ್ರೀಜ್‌ಮತ್ತು ಅಮರ್ತ್ಯಸೆನ್‌ಅವರು ಭಾರತದ ಅಭಿವೃದ್ಧಿ ಕುರಿತಂತೆ ರಚಿಸಿರುವ ಕೃತಿಯಲ್ಲಿ ಸಾಕ್ಷರತೆಯ ಮಹತ್ವವನ್ನು ಹೀಗೆ ಹಿಡಿದಿಟ್ಟಿದ್ದಾರೆ. ‘ಸಾಮಾಜಿಕ ಸಂಬಂಧಗಳು ಮತ್ತು ಸಂಪರ್ಕಗಳು ಲಿಖಿತ ಮಾಧ್ಯಮದ ಮೂಲಕ ನಡೆಯುವುದರಿಂದ ಸಮಾಜದಲ್ಲಿ ಸಾಕ್ಷರತೆಯು ಆತ್ಮರಕ್ಷಣೆಯ ಸಾಧನವಾಗಿರುತ್ತದೆ. ಅಕ್ಷರ ಜ್ಞಾನವಿಲ್ಲದವರು ತಮ್ಮನ್ನು ತಾವು ನ್ಯಾಯಾಲಯದಲ್ಲಿ ರಕ್ಷಿಸಿಕೊಳ್ಳಲಾರರು. ಬ್ಯಾಂಕಿನಿಂದ ಸಾಲ ಎತ್ತಲಾರರು. ತಮ್ಮ ವಾರಸುದಾರಿಕೆ ಹಕ್ಕುಗಳನ್ನು ಚಲಾಯಿಸಲಾರರು. ಆಧುನಿಕ ತಂತ್ರಜ್ಞಾನದ ಲಾಭ ಪಡೆದುಕೊಳ್ಳಲಾರರು. ಉದ್ಯೋಗ ಮಾರುಕಟ್ಟೆಯಲ್ಲಿ ಅವರು ಪೈಪೋಟಿ ಮಾಡಲಾರರು. ಸರಿಯಾದ ಬಸ್ಸು ಏರಲಾರರು. ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಲಾರರು. ಒಟ್ಟಾರೆ ಆರ್ಥಿಕತೆ ಮತ್ತು ಸಮಾಜದಲ್ಲಿ ಯಶಸ್ವೀ ಪಾಲುದಾರರಾಗಲಾರರು (೨೦೦೨:೧೪೩).

ಲಿಂಗ ಸಮಾನತೆಯನ್ನು ಸಾಧಿಸಕೊಳ್ಳುವ ದಿಶೆಯಲ್ಲಿ ಅಕ್ಷರ ಜ್ಞಾನದ ಮತ್ತು ಶಿಕ್ಷಣದ ಪಾತ್ರ ತುಂಬಾ ಮಹತ್ವದ್ದಾಗಿದೆ. ಒಬ್ಬ ಒಳ್ಳೆಯ ತಾಯಿಯಾಗಲು ಮಹಿಳೆಗೆ ಸಾಕ್ಷರತೆ ಮತ್ತು ಶಿಕ್ಷಣ ಅಗತ್ಯ, ನಿಜ. ಆದರೆ ಅದಕ್ಕಿಂತ ಮುಖ್ಯವಾಗಿ ಅವಳು ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಕೂಡ ಸಾಕ್ಷರತೆಯ ಅಗತ್ಯವಿದೆ. ಮತ್ತೊಬ್ಬರ ನಿರೀಕ್ಷೆಗೆ ತಕ್ಕಂತೆ ಮಾತ್ರ ಅವಳು ಬದುಕಬೇಕೆಂದು ಬಯಸುವುದು ತಪ್ಪಾಗುತ್ತದೆ. ಮಹಿಳೆ ತಾನು ಏನಾಗಬೇಕೆಂದು ಬಯಸುತ್ತಾಳೊ ಅದರಂತಾಗಲು ಅವಶ್ಯಕವಾದ ಅವಕಾಶಗಳನ್ನು ಒದಗಿಸಬೇಕಾಗುತ್ತದೆ. ಸಾಕ್ಷರತೆಯು ಅಂತಹ ಅವಕಾಶವನ್ನು ಮಹಿಳೆಗೆ ಒದಗಿಸಬಲ್ಲುದಾಗಿದೆ. ಅಮರ್ತ್ಯಸೆನ್‌ಶಿಕ್ಷಣವನ್ನು ‘ಅವಕಾಶ’ವೆಂದು ಪರಿಗಣಿಸುತ್ತಾನೆ. ಅವಕಾಶಗಳ ವರ್ಧನೆಯು ಅಭಿವೃದ್ಧಿಯೆಂದಾದರೆ ಶಿಕ್ಷಣದ ವರ್ಧನೆಯು ಅಭಿವೃದ್ಧಿಯ ಒಂದು ಭಾಗವೇ ಆದಂತಾಗುತ್ತದೆ. ಅನೇಕ ಅಧ್ಯಯನಗಳು ದೃಢಪಡಿಸುವಂತೆ ವಿಶ್ವದ ಯಾವುದೇ ದೇಶದಲ್ಲೂ ಪುರುಷರಿಗೆ ಸಮಾನವಾದ ಸ್ಥಾನಮಾನವನ್ನು ಮಹಿಳೆಯರಿಗೆ ನೀಡಿಲ್ಲ. ಆದರೆ ಇದು ಬಹಳ ಮುಖ್ಯವಾದ ಸಂಗತಿಯಾಗಿದೆ. ಮಾರ್ತ ನುಸ್‌ಬೌಮ್‌(೨೦೦೦:೦೪) ಹೇಳುವಂತೆ ಬಡತನ ಮತ್ತು ಅಭಿವೃದ್ಧಿಯ ಸಮಸ್ಯೆಗಳನ್ನು ಸರಿಯಾಗಿ ಎದುರಿಸಲು ಮತ್ತು ಅರ್ಥ ಮಾಡಿಕೊಳ್ಳಲು ಬಹಳ ಮುಖ್ಯವಾಗಿ ನಾವು ಸಮಾಜದಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಜೀನ್‌ಡ್ರೀಜ್‌ಮತ್ತು ಅಮರ್ತ್ಯಸೆನ್‌ಸೇರಿ ರಚಿಸಿರುವ ಭಾರತ ಕುರಿತ ಅಧ್ಯಯನದಲ್ಲಿ(೨೦೦೨) ಲಿಂಗ ಸಮಾನತೆ ಮತ್ತು ಸಾಮಾಜಿಕ ಪ್ರಗತಿಗಳ ನಡುವಿನ ಸಂಬಂಧ ಕುರಿತು ವಿವರವಾಗಿ ಚರ್ಚೆ ಮಾಡಿದ್ದಾರೆ. ಅವರ ಪ್ರಕಾರ ಲಿಂಗ ಅಸಮಾನತೆ ಮತ್ತು ಮಹಿಳೆಯ ದುಸ್ಥಿತಿ ಭಾರತವು ಎದುರಿಸುತ್ತಿರುವ ಬಹು ದೊಡ್ಡ ಸಾಮಾಜಿಕ ವೈಫಲ್ಯವಾಗಿದೆ. ಎರಡನೆಯದಾಗಿ ದೇಶದ ವರಮಾನವು ವರ್ಧಿಸಿದಂತೆ ಲಿಂಗ ಅಸಮಾನತೆ ತನ್ನಷ್ಟಕ್ಕೆ ತಾನೆ ಕಡಿಮೆಯಾಗಿ ಬಿಡುವುದಿಲ್ಲ. ಆದ್ದರಿಂದ ಅದರ ಸಾಧನೆಗಾಗಿ ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಬೇಕಾಗುತ್ತದೆ (ಅಮರ್ತ್ಯಸೆನ್‌:೨೦೦೪:೩). ಮೂರನೆಯದಾಗಿ ಲಿಂಗ ಅಸಮಾನತೆಯೆಂಬುದು ಕೇವಲ ಸಾಮಾಜಿಕ ವೈಫಲ್ಯವಷ್ಟೆ ಅಲ್ಲ. ಅದು ಅನೇಕ ಬಗೆಯ ಇತರೆ ವೈಫಲ್ಯಗಳಿಗೆ ಕಾರಣವಾಗುತ್ತದೆ. ಮಕ್ಕಳ ಮರಣ ಪ್ರಮಾಣವನ್ನು ಕಡಿಮೆಗೊಳಿಸುವಲ್ಲಿ ಲಿಂಗ ಸಮಾನತೆಯ ಪಾತ್ರವು ತುಂಬಾ ನಿರ್ಣಾಯಕವಾಗಿರುತ್ತದೆ. ಅಭಿವೃದ್ಧಿ ಕುರಿತ ಸಿದ್ಧಾಂತಗಳಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಂಗತಿಯೆಂದರೆ ಸಾಮಾಜಿಕ ಬದಲಾವಣೆಯಲ್ಲಿ ಮಹಿಳೆಯರ ಪಾತ್ರವಾಗಿದೆ. ಅಭಿವೃದ್ಧಿಯ ಬಲಿಪಶುಗಳಾಗಿ ಮಹಿಳೆಯರು ಅನೇಕ ಬಗೆಯ ತಾರತಮ್ಯಗಳನ್ನು ಅನುಭವಿಸುತ್ತಿದ್ದಾರೆ. ಮಹಿಳೆಯರ ಅಧೀನ ಸ್ಥಿತಿಯಿಂದಾಗಿ ಕೇವಲ ಮಹಿಳೆಯರು ಮಾತ್ರವಲ್ಲ, ಅದಕ್ಕೆ ಪ್ರತಿಯಾಗಿ ಸಮಾಜದ ಎಲ್ಲ ವರ್ಗದ ಜನರು ಇದರಿಂದ ದುಷ್ಪರಿಣಾಮ ಅನುಭವಿಸಬೇಕಾಗಿದೆ. ಮಹಿಳೆಯರ ವಿಮಕ್ತಿಯು ಕೇವಲ ಮಹಿಳೆಯರಿಗೆ ಮಾತ್ರ ಸಂಬಂಧಿಸಿದ ಸಂಗತಿಯಲ್ಲ, ಅದು ಸಾಮಾಜಿಕ ಪ್ರಗತಿಯ ಅವಿಭಾಜ್ಯ ಅಂಗವಾಗಿದೆ. ಈ ದಿಶೆಯಲ್ಲಿ ಮಹಿಳೆಯರ ಸಾಕ್ಷರತೆಯ ಪಾತ್ರವು ಬಹಳ ಮಹತ್ವದ್ದಾಗಿದೆ. ಲಿಂಗ ಅಸಮಾನತೆಯ ದುಷ್ಪರಿಣಾಮಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಅಕ್ಷರ ಸಂಸ್ಕೃತಿಯ ಅಗತ್ಯವಿದೆ. ‘ದಕ್ಷಿಣ ಏಷ್ಯಾದಲ್ಲಿ ಮಾನವ ಅಭಿವೃದ್ಧಿ’ ಎಂಬ ಕೃತಿಯಲ್ಲಿ ಮೆಹಬೂಬ್‌ಉಲ್‌ಹಕ್‌ಮತ್ತು ಖದೀಜ ಹಕ್‌(೧೯೯೮) ಅವರು ಜನರಿಗೆ ಶಿಕ್ಷಣವಿಲ್ಲದಿದ್ದರೆ ಅಭಿವೃದ್ಧಿಯು ವಿಸ್ತೃತವೂ, ಸುಸ್ಥಿರಗತಿಯೂ ಮತ್ತು ಜನರನ್ನು ಒಳಗೊಳ್ಳುವ ರೀತಿಯದೂ ಆಗಲು ಸಾಧ್ಯವಿಲ್ಲವೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರವನ್ನು ಅವರು ಹೀಗೆ ಹಿಡಿದಿಟ್ಟಿದ್ದಾರೆ.

೧. ಶಿಕ್ಷಣವು ಒಳ್ಳೆಯ ಆರೋಗ್ಯ ಪಾಲನೆಗೆ ತುಂಬಾ ಅಗತ್ಯವಾಗಿದೆ. ಅದರಲ್ಲೂ ಮಹಿಳೆಯರ ದೃಷ್ಟಿಯಿಂದ ಇದು ಬಹಳ ಮುಖ್ಯವಾದುದಾಗಿದೆ.

೨. ಅದು ಜನಸಂಖ್ಯಾ ಬೆಳವಣಿಗೆ ಪ್ರಮಾಣವನ್ನು ಕಡಿಮೆ ಮಾಡಬಲ್ಲುದಾಗಿದೆ.

೩. ಅದು ಬಡತನದ ಪ್ರಮಾಣವನ್ನು ಕಡಿಮೆ ಮಾಡಬಲ್ಲುದು.

೪. ಅದು ವರಮಾನಕ್ಕೆ ಸಂಬಂಧಿಸಿದ ಅಸಮಾನತೆಯನ್ನು ಕಡಿಮೆ ಮಾಡಬಲ್ಲುದು.

೫. ಅದು ಸೌಹಾರ್ದಯುತ ಬದುಕಿನ ಮತ್ತು ರಾಷ್ಟ್ರೀಯ ಅನನ್ಯತೆಯ ಅಂತರ್ಗತ ಭಾಗವಾಗಿದೆ.

೬. ಅದು ಜನರನ್ನು ಸಶಕ್ತರನ್ನಾಗಿಸುತ್ತದೆ.

ಮಹಿಳಾ ಸಾಕ್ಷರತೆಯಿಂದ ಮಹಿಳಾ ಅಧ್ಯಯನದವರೆಗೆ….

ಮಹಿಳೆಯರ ಅಭಿವೃದ್ಧಿ ಕುರಿತಂತೆ ಚರ್ಚೆ ಮಾಡುವಾಗ ನಾವು ಸೂಕ್ಷ್ಮವಾಗಿ ಗಮನಿಸಬೇಕಾದ ಸಂಗತಿಯೆಂದರೆ ಚಾರಿತ್ರಿಕವಾಗಿ ಮಹಿಳೆಯರ ಕುರಿತ ಚರ್ಚೆ ಪ್ರಾರಂಭವಾಗುವುದೆ ಮಹಿಳೆಯರ ಶಿಕ್ಷಣದ ಒತ್ತಾಯದಿಂದ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಸ್ವಾತಂತ್ರ್ಯಪೂರ್ವದಲ್ಲಿ ಮಹಿಳೆಯರ ಶಿಕ್ಷಣದ ಬಗ್ಗೆ ಜನ ಜಾಗೃತಿ ಹಾಗೂ ಒತ್ತಡ ಅಧಿಕವಾಗಿತ್ತು. ಬ್ರಿಟಿಷರ ಆಳ್ವಿಕೆಯು ಅದಕ್ಕೆ ಅಗತ್ಯವಾದ ಅಡಿಪಾಯವನ್ನು ಒದಗಿಸಿಕೊಟ್ಟಿತು. ವೇದ ಕಾಲದಿಂದ ಬ್ರಿಟಿಷರ ಆಗಮನದವರೆಗೆ ಮಹಿಳೆಯರ ಶಿಕ್ಷಣವೆನ್ನುವುದು ಉನ್ನತ ವರ್ಗದ ಮನಾಪಲಿಯಾಗಿತ್ತು. ವೇದಗಳ ಸಮರ್ಥಕರು ಮತ್ತು ‘ಭಾರತೀಯವೆನ್ನುವುದೆಲ್ಲ ಬಂಗಾರ’ವೆನ್ನುವವರೆಲ್ಲರು ಮೈತ್ರೇಯಿ, ಗಾರ್ಗಿ ಮುಂತಾದವರ ಹೆಸರುಗಳನ್ನು ಹೇಳುತ್ತಾರೆ. ಆದರೆ ಅವರ ಪಟ್ಟಿಯು ಅಂತಹ ನಾಲ್ಕಾರು ಹೆಸರುಗಳಿಗಿಂತ ಹೆಚ್ಚಿಗೆ ಮುಂದುವರಿಯುವುದಿಲ್ಲ. ಮಹಿಳೆಯರ ಸಾಕ್ಷರತೆಯೆಂಬುದು ಭಾರತದ ಸಂದರ್ಭದಲ್ಲಿ ಇಪ್ಪತ್ತನೆಯ ಶತಮಾನದ ಬೆಳವಣಿಗೆಯಾಗಿದೆ.

ಭಾರತದಲ್ಲಿ ಮಹಿಳೆಯರ ಶಿಕ್ಷಣಕ್ಕೆ ಆದ್ಯತೆಯು ದೊರೆಯದುದಕ್ಕೆ ಡ್ರೀಜ್‌ಮತ್ತು ಸೆನ್‌ನೀಡುವ ಮೂರು ಕಾರಣಗಳು ಹೀಗಿವೆ.

೧. ಲಿಂಗಸಂಬಂಧಿ ಶ್ರಮ ವಿಭಜನೆಯಿಂದಾಗಿ ಶಿಕ್ಷಣದಿಂದ ದೊರೆಯಬಹುದಾದ ನಿರೀಕ್ಷಿತ ಲಾಭಗಳು ಜನರಿಗೆ ಅತ್ಯಂತ ಕಡಿಮೆಯೆಂದು ಕಾಣುತ್ತವೆ. ಏಕೆಂದರೆ ಬಾಲಕಿಯರು ಸಾಮಾನ್ಯವಾಗಿ ನಮ್ಮ ಸಂದರ್ಭದಲ್ಲಿ ಮನೆ ವಾರ್ತೆ ಮತ್ತು ಮಕ್ಕಳ ಲಾಲನೆಯ ಪಾಲನೆಯ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ಇದರಿಂದಾಗಿ ಹಿರಿಯರಿಗೆ ಮಹಿಳೆಯರ ಶಿಕ್ಷಣವು ಮಹತ್ವದ್ದಾಗಿ ಕಾಣುವುದಿಲ್ಲ.

೨. ಭಾರತದಲ್ಲಿರುವ ಪಿತೃಪ್ರಧಾನ ವಾರಸುದಾರಿಕೆಯಿಂದಾಗಿ ಪಾಲಕರು ಮಹಿಳೆಯರ ಶಿಕ್ಷಣಕ್ಕೆ ಎಷ್ಟು ಮಹತ್ವ ನೀಡಬೇಕೊ ಅಷ್ಟು ಮಹತ್ವ ನೀಡುತ್ತಿಲ್ಲ. ಏಕೆಂದರೆ ‘ಮಹಿಳೆಗೆ ಶಿಕ್ಷಣ ಕೊಡಿಸುವುದೆಂದರೆ ಪಕ್ಕದ ಮನೆಯ ಗಿಡಕ್ಕೆ ನೀರೆರದಂತೆ’ ಎಂಬ ನಾಣ್ಣುಡಿ ಜನರಲ್ಲಿ ಗಟ್ಟಿಯಾಗಿ ನೆಲೆಗೊಂಡು ಬಿಟ್ಟಿದೆ.

೩. ಸಮಾಜದಲ್ಲಿ ಕಂಡುಬರುತ್ತಿರುವ ವರದಕ್ಷಿಣೆ, ಉನ್ನತ ವರ್ಗದ ಗಂಡಿನೊಂದಿಗೆ ವಿವಾಹ ಮುಂತಾದವು ಮಹಿಳೆಯರ ಶಿಕ್ಷಣಕ್ಕೆ ವಿರುದ್ಧವಾಗಿ ಕೆಲಸ ಮಾಡಬಲ್ಲುವಾಗಿವೆ. ಇಂದು ಮಹಿಳೆಯರಿಗೆ ಶಿಕ್ಷಣ ಕೊಡಿಸಲು ಜನರು ಯಾಕೆ ಮುಂದೆ ಬರುತ್ತಿದ್ದಾರೆಂದರೆ ಅದರಿಂದ ಅವಳಿಗೆ ಒಳ್ಳೆಯ ಗಂಡು ದೊರೆಯುತ್ತದೆ ಎಂಬುದಾಗಿದೆ.

ವಿಶ್ವದ ಮಟ್ಟದಲ್ಲಿ ಮಹಿಳಾ ಚಳುವಳಿಗೆ ಆರಂಭದಲ್ಲಿ ಪ್ರೇರಣೆಯಾಗಿದ್ದ ಸಂಗತಿಯೆಂದರೆ ಮಹಿಳಾ ಶಿಕ್ಷಣವಾಗಿದೆ. ಮಹಿಳಾ ಚಳುವಳಿಯ ಎರಡನೆಯ ಹಂತದಲ್ಲಿ ಮಹಿಳೆಯರ ಶಿಕ್ಷಣದಿಂದ ಚಳುವಳಿಗಾರರ ಗಮನವು ಮಹಿಳಾ ಶಿಕ್ಷಣವಾಗಿದೆ. ಮಹಿಳಾ ಚಳುವಳಿಯ ಎರಡನೆಯ ಹಂತದಲ್ಲಿ ಮಹಿಳೆಯರ ಶಿಕ್ಷಣದಿಂದ ಚಳುವಳಿಗಾರರ ಗಮನವು ಮಹಿಳಾ ಅಧ್ಯಯನದ ಕಡೆಗೆ ತಿರುಗಿತು. ಕಳೆದ ಶತಮಾನದ ೬೦-೭೦ರ ದಶಕದಲ್ಲಿ ಮಹಿಳೆಯರ ಸ್ಥಿತಿಗತಿ ಮತ್ತು ಸ್ಥಾನಮಾನಗಳನ್ನು ಹಾಗೂ ಅವರು ಎದುರಿಸುತ್ತಿರುವ ತಾರತಮ್ಯ, ಶೋಷಣೆ, ಅಸಮಾನತೆ ಮುಂತಾದವುಗಳನ್ನು ಅರ್ಥ ಮಾಡಿಕೊಳ್ಳಲು ಆ ಮೂಲಕ ಅದನ್ನು ನಿವಾರಿಸಲು ಒಂದು ಪ್ರತ್ಯೇಕವಾದ ಜ್ಞಾನಶಿಸ್ತು ಬೇಕೆಂಬ ಒತ್ತಡ ಅಧಿಕವಾಯಿತು. ಇಂತಹ ಒತ್ತಡಕ್ಕೆ ಕಾರಣವಾಗಿದ್ದ ಸಂಗತಿಯೆಂದರೆ ೨೦ನೆಯ ಶತಮಾನದ ಆದಿ ಭಾಗದಲ್ಲಿ ಮಹಿಳೆಯರಿಗೆ ದೊರಕಿದ ಶಿಕ್ಷಣವೇ ಆಗಿದೆ. ಹೀಗೆ ಮಹಿಳಾ ಶಿಕ್ಷಣದ ನೆಲೆಯಿಂದ ಆರಂಭಗೊಂಡ ಪ್ರಕ್ರಿಯೆಯು ಇಂದು ಮಹಿಳಾ ಅಧ್ಯಯನವೆಂಬ ಅಧ್ಯಯನ ಶಿಸ್ತು ರೂಪುಗೊಳ್ಳುವಲ್ಲಿಗೆ ಬಂದು ನಿಂತಿದೆ.

ಮಹಿಳಾ ಶಿಕ್ಷಣದ ಉದ್ದೇಶ

ಸ್ವಾತಂತ್ರ್ಯ ಪೂರ್ವದಿಂದಲೂ ಮತ್ತು ಸ್ವಲ್ಪಮಟ್ಟಿಗೆ ಈಗಲೂ ಮಹಿಳೆಗೆ ಶಿಕ್ಷಣ ಕೊಡಿಸುವುದರ ಹಿಂದಿನ ಉದ್ದೇಶ ಅವಳನ್ನು ಕೇವಲ ಉತ್ತಮ ತಾಯಿಯನ್ನಾಗಿ ಉತ್ತಮ ಗೃಹಿಣಿಯನ್ನಾಗಿ ಮಾಡುವುದಾಗಿದೆಯೆ ವಿನಾ ಅವಳನ್ನು ವೃತ್ತಿಪರ ಮಹಿಳೆಯನ್ನಾಗಿ ಮಾಡುವುದಾಗಿಲ್ಲ. ಮಹಿಳೆಯರ ದೃಷ್ಟಿಯಿಂದ ಶಿಕ್ಷಣವು ಅವರನ್ನು ಪ್ರಾಥಮಿಕವಾಗಿ ಉತ್ತಮ ಗೃಹಿಣಿಯರನ್ನಾಗಿ ಮತ್ತು ಉತ್ತಮ ತಾಯಿಯಾಗಿ ಮಾಡುವುದಾಗಿದೆ. ಸಾಕ್ಷರತೆ ಯಾಕೆ ಬೇಕೆಂದರೆ ಅದರಿಂದ ಮತ್ತೊಂದನ್ನು ಸಾಧಿಸಿಕೊಳ್ಳಬಹುದಾಗಿದೆ. ಒಬ್ಬ ಮಹಿಳೆಗೆ ಸಾಕ್ಷರತೆ ತನ್ನಷ್ಟಕ್ಕೆ ಮಹತ್ವಾದುದೆಂದು ಪರಿಭಾವಿಸಿಕೊಳ್ಳುವ ಕ್ರಮ ಎಲ್ಲಿಯೂ ಕಂಡುಬರುವುದಿಲ್ಲ. ಅಲ್ಲಿ ಅವಳನ್ನು ವೃತ್ತಿಪರಳನ್ನಾಗಿ ಮಾಡುವುದು ಆನುಷಂಗಿಕವಾಗಿತ್ತು. ಆದರೆ ಪುರುಷರ ದೃಷ್ಟಿಯಿಂದ ವೃತ್ತಿಪರತೆಯು ಪ್ರಾಥಮಿಕವಾಗಿತ್ತು ಮತ್ತು ಉತ್ತಮ ತಂದೆಯಾಗುವುದು ಹಾಗೂ ಉತ್ತಮ ಗೃಹಸ್ಥನಾಗುವುದು ಆನುಷಂಗಿಕವಾಗಿತ್ತು. ಸ್ವಾತಂತ್ರ್ಯಪೂರ್ವ ಕಾಲದಿಂದಲೂ ಸಾಮಾಜಿಕ ಸುಧಾರಕರು ಮತ್ತು ಶಿಕ್ಷಣ ತಜ್ಞರೆನಿಸಿಕೊಂಡವರು ಮಹಿಳೆಯರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೌಟುಂಬಿಕ ಜವಾಬುದಾರಿಯನ್ನು ಮತ್ತು ಗೃಹವಿಜ್ಞಾನವನ್ನು ಮತ್ತೆ ಮತ್ತೆ ಒತ್ತಿ ಹೇಳುತ್ತಿದ್ದುದರ ಹಿಂದಿನ ಮರ್ಮವೇನು? ಒಂದು ಕಾಲಕ್ಕೆ ಶೈಕ್ಷಣಿಕ ಅವಕಾಶಗಳನ್ನು ಮಹಿಳೆಯರಿಗೆ ಮತ್ತು ಪುರುಷರಿಗೆ ಸಮಾನವಾಗಿ ನೀಡಬೇಕು ಎಂಬಲ್ಲಿಗೆ ಅಭಿವೃದ್ಧಿನೀತಿ ನಿಂತು ಬಿಡುತ್ತದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಹಿಳೆಯರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡಬೇಕು ಎಂಬುದೇ ಅನೇಕ ಚಳುವಳಿಗಾರರ ಮತ್ತು ಮಹಿಳಾವಾದಿಗಳ ನೀಡಬೇಕು ಎಂಬುದೇ ಅನೇಕ ಚಳುವಳಿಗಾರರ ಮತ್ತು ಮಹಿಳಾವಾದಿಗಳ ಪ್ರಧಾನ ಒತ್ತಾಯವಾಗಿತ್ತು. ಆದರೆ ಇಂದು ಮಹಿಳಾ ಶಿಕ್ಷಣವನ್ನು ಕುರಿತ ಚರ್ಚೆಯ ನೆಲೆ ಬದಲಾಗಿದೆ. ಮಹಿಳಾ ಸಮಾನತೆಗಾಗಿ ಮತ್ತು ಮಹಿಳೆಯರ ಸಶಕ್ತೀಕರಣಕ್ಕಾಗಿ ಶಿಕ್ಷಣವೆಂಬ ನೆಲೆಗೆ ಚರ್ಚೆ ಬಂದು ನಿಂತಿದೆ. ಅಂದರೆ ಮಹಿಳೆಯರ ಸಾಕ್ಷರತೆ ಮತ್ತು ಶಿಕ್ಷಣವೆಂಬುದು ಕೇವಲ‘ಔದಾರ್ಯ’ದ ಪ್ರಶ್ನೆಯಲ್ಲ. ಅದು ಹಕ್ಕಿನ ಸ್ವರೂಪವನ್ನು ತಳೆದಿದೆ. ಮಹಿಳೆಯರ ಶಿಕ್ಷಣದ ಹಿಂದಿನ ಮತ್ತೊಂದು ಉದ್ದೇಶವೇನಿತ್ತೆಂದರೆ ಅದು ಯಾವ ಕಾರಣಕ್ಕೂ ಮಹಿಳೆಯರು ಅಸ್ತಿತ್ವದಲ್ಲಿರುವ ಸಾಮಾಜಿಕ ವ್ಯವಸ್ಥೆಯ ಬದಲಾವಣೆಯನ್ನು ಒತ್ತಾಯಿಸುವಂತಹ ಪ್ರೇರಣೆಯನ್ನು ನೀಡುವಂತಿರಬಾರದೆಂಬುದಾಗಿತ್ತು. ಯಾವುದೇ ಕಾರಣಕ್ಕೂ ಮಹಿಳೆಯರು ತಮ್ಮ ಕೌಟುಂಬಿಕ ಜವಾಬುದಾರಿಯನ್ನು ಶಿಕ್ಷಣದ ಕಾರಣಕ್ಕೆ ಬಿಟ್ಟು ಬಿಡುವಂತಹದ್ದಾಗಬಾರದು. ಸಾಕ್ಷರತೆ ಮತ್ತು ಶಿಕ್ಷಣವು ಸಾಂಪ್ರದಾಯಕವಾಗಿ ಕಟ್ಟಿಕೊಂಡು ಬಂದಿರುವ ಲಿಂಗಸಂಬಂಧಗಳನ್ನು ಹಾಗೂ ಕುಟುಂಬ ವ್ಯವಸ್ಥೆಯನ್ನು ಊರ್ಜಿತಗೊಳಿಸುವಂತೆ ಇರಬೇಕು. ಈ ಸಂಗತಿಯು ನಮ್ಮ ಸಮಾಜದಲ್ಲಿ ಇನ್ನೂ ಗಟ್ಟಿಯಾಗಿ ನೆಲೆಯೂರಿದೆ.

ಈ ಬಗೆಯ ಹಿನ್ನೆಲೆಯಿಂದಾಗಿ ಇಂದಿಗೂ ಮಹಿಳೆಯರ ಸಾಕ್ಷರತೆ ಹಾಗೂ ಅವರ ಶಿಕ್ಷಣವು ತೀವ್ರ ಹಿಂದುಳಿದ ಸ್ಥಿತಿಯಲ್ಲಿದೆ. ರೂಢಿಗತ ಸಾಮಾಜಿಕ ನಂಬಿಕೆಗಳನ್ನು ಮೀರಿ ಮಹಿಳೆಯರ ಶಿಕ್ಷಣವನ್ನು ನಮಗೆ ಇಂದಿಗೂ ಪರಿಭಾವಿಸಿಕೊಳ್ಳುವುದು ಸಾಧ್ಯವಾಗಿಲ್ಲ. ಇಂದು ಕಂಡು ಬರುತ್ತಿರುವ ಲಿಂಗಸಂಬಂಧಿ ಸಾಕ್ಷರತಾ ಅಂತರವನ್ನು ಚಾರಿತ್ರಿಕ ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಲಿಂಗ ಅಸಮಾನತೆಯೆಂಬುದು ಅನೂಚಾನವಾಗಿ ಹರಿದುಕೊಂಡು ಬರುತ್ತಿರುವ ಒಂದು ಸಂಗತಿಯಾಗಿದೆ.

ಅಕ್ಷರಸ್ಥರಾಗುವುದೆಂದರೆ?

ಸಾಕ್ಷರತೆ ಬಗ್ಗೆ ಬಹು ಮುಖ್ಯವಾದ ಟೀಕೆಯೊಂದಿದೆ. ಅದೇನೆಂದರೆ ಅಕ್ಷರಸ್ಥರಾದವರೆಲ್ಲ ವಿವೇಕಿಗಳಾಗುವುದಿಲ್ಲ. ಅಕ್ಷರ ಜ್ಞಾನ ಬೇರೆ ಮತ್ತು ವಿವೇಕ ಬೇರೆ. ಅಕ್ಷರಸ್ಥರಾದ ಮಾತ್ರಕ್ಕೆ ಜನರು ಒಳ್ಳೆಯರಾಗುವುದಿಲ್ಲ. ಅಕ್ಷರ ಜ್ಞಾನವಿಲ್ಲದವರೆಲ್ಲ ಅವಿವೇಕಿಗಳಲ್ಲ ಅಥವಾ ಕೆಡುಕರಲ್ಲ. ಅಕ್ಷರ ಜ್ಞಾನವನ್ನು ಪಾಶ್ಚಿಮಾತ್ಯ ಮೌಲ್ಯವೆನ್ನುವವರು ಇದ್ದಾರೆ. ಆದರೆ ಅಮರ್ತ್ಯಸೆನ್‌ರ ಬರಹಗಳು ಮತ್ತು ಯುಎನ್‌ಡಿಪಿಯ ವರದಿಗಳು ಸಾಕ್ಷರತೆ ಮತ್ತು ಮಹಿಳೆಯರ ಅಭಿವೃದ್ಧಿಗಳ ನಡುವಿನ ಸಂಬಂಧವನ್ನು ಅನೇಕ ನಿದರ್ಶನಗಳ ಮೂಲಕ ತೋರಿಸಿಕೊಟ್ಟಿದ್ದಾರೆ (ವಿವರಗಳಿಗೆ ನೋಡಿ: ಜೀನ್‌ಡ್ರೀಜ್‌ಮತ್ತು ಅಮರ್ತ್ಯಸೆನ್‌: ೨೦೦೨, ಮಾರ್ತನುಸ್‌ಬಾಮ್‌೨೦೦೦). ಮಹಿಳೆಯರ ಸಾಕ್ಷರತೆಯನ್ನು ಉತ್ತಮ ಪಡಿಸುವುದರ ಮೂಲಕ ಜನಸಂಖ್ಯೆಯ ತೀವ್ರ ಬೆಳವಣಿಗೆಯನ್ನು ತಡೆಗಟ್ಟಬಹುದೆಂಬುದನ್ನು ಅನುಭವವಾದಿ ಅಧ್ಯಯನಗಳ ಮೂಲಕ ಅಮರ್ತ್ಯಸೆನ್‌ತೋರಿಸಿಕೊಟ್ಟಿದ್ದಾರೆ. ಮಮತಾ ಮೂರ್ತಿ ಮತ್ತು ಇತರರು(೧೯೯೫) ನಡೆಸಿದ ಒಂದು ಅಧ್ಯಯನದಲ್ಲಿ ಪುರುಷರ ಸಾಕ್ಷರತೆಗಿಂತ ಮಹಿಳೆಯರ ಸಾಕ್ಷರತೆಯು ಶಿಶು ಮರಣ ಪ್ರಮಾಣವನ್ನು ತಗ್ಗಿಸುವುದರಲ್ಲಿ ಹೆಚ್ಚು ಪರಿಣಾಮಕಾರಿಯೆಂಬುದನ್ನು ದೃಢಪಡಿಸಿದ್ದಾರೆ.

ಭಾಗ ಕರ್ನಾಟಕದಲ್ಲಿ ಮಹಿಳೆಯರ ಸಾಕ್ಷರತೆ ೧೯೯೧ ಮತ್ತು ೨೦೦೧

ಕೆಳಗಿನ ಕೋಷ್ಟಕದಲ್ಲಿ ೧೯೯೧ ಮತ್ತು ೨೦೦೧ರಲ್ಲಿ ಮಹಿಳೆಯರ ಸಾಕ್ಷರತೆ ಕರ್ನಾಟಕದಲ್ಲಿ ಹೀಗೆ ಏರಿಕೆಯಾಗಿದೆಯೆಂಬುದನ್ನು ತೋರಿಸಲಾಗಿದೆ.

ಕರ್ನಾಟದಲ್ಲಿ ಮಹಿಳೆಯರ ಸಾಕ್ಷರತಾ ಪ್ರಮಾಣ: ೧೯೯೧ ಮತ್ತು ೨೦೦೨

ಕೋಷ್ಟಕ

ಕ್ರಸಂ. ವಿವರಗಳು ಘಟಕ ೧೯೯೧ ೨೦೦೧ ದಶಕವಾರು ಏರಿಕೆ ಪ್ರಮಾಣ
೧. ಮಹಿಳೆಯರು ಶೇ ೪೪.೩೪ ೫೬.೯ ೧೮.೮೪
೨. ಪುರುಷರು ಶೇ. ೬೭೨೬ ೭೬.೧ ೧೩.೧೪
೩. ಒಟ್ಟು ಶೇ. ೫೬.೦೪ ೬೬.೬೪ ೨೮.೩೩
೪. ಲಿಂಗ ಸಮಾನತಾ ಸೂಚಿ ಶೇ. ೬೫.೦೪ ೭೪.೭೭ ೧೩.೪೨

ಮೂಲ: ೧. ಸೆನ್ಸಸ್‌ಆಫ್‌ಇಂಡಿಯಾ:೧೯೯೧, ಸಿರೀಸ್‌೧೧ ಕರ್ನಾಟಕ, ಪಾರ್ಟ್-ಬಿ. ಪ್ರೈಮರಿ ಸೆನ್ಸಸ್‌ಅಟ್‌ಸ್ಟ್ರಾಕ್ಟ ಜನರಲ್‌ಪಾಪುಲೇಶನ್‌, ಡೈರೆಕ್ಟರೇಟ್‌ಆಫ್‌ಸೆನ್ಸಸ್ ಆಪರೇಶನ್ಸ್, ಕರ್ನಾಟಕ.

೨. ಸೆನ್ಸ್ಸ್‌ಆಫ್‌ಇಂಡಿಯಾ: ೨೦೦೧ ಸಿರೀಸ್‌೩೦ ಕರ್ನಾಟಕ ಪೇಪರ್‌ಆಫ್‌೨೦೦೧. ಪ್ರಾವಿಶನಲ್‌ಪಾಪುಲೇಶನ್‌ಟೋಟಲ್ಸ್‌: ರೂರಲ್‌ಆರ್ಬನ್‌ಪಾಪುಲೇಶನ್‌, ಡೈರೆಕ್ಟರೇಟ್‌ಆಫ್‌ಸೆನ್ಸಸ್‌ಆಪರೇಶನ್ಸ್‌, ಕರ್ನಾಟಕ.

ಮೇಲಿನ ಕೋಷ್ಟಕದಲ್ಲಿ(೧) ಕರ್ನಾಟಕವು ೧೯೯೧ ಮತ್ತು ೨೦೦೧ರಲ್ಲಿ ಸಾಧಿಸಿಕೊಂಡಿರುವ ಸಾಕ್ಷರತಾ ಸಂಬಂಧಿ ಸಾಧನೆಯನ್ನು ತೋರಿಸಲಾಗಿದೆ. ಕಳೆದ ಒಂದು ದಶಕದಲ್ಲಿ ಮಹಿಳೆಯರ ಸಾಕ್ಷರತೆಯು ಶೇ.೧೮.೮೪ರಷ್ಟು ಏರಿಕೆಯಾಗಿದೆ. ಇದು ಪುರುಷರ ಸಾಕ್ಷರತೆಯಲ್ಲಿನ ಏರಿಕೆಗಿಂತ ಅಧಿಕವಾಗಿದೆ. ಇಷ್ಟಾದರೂ ಲಿಂಗಸಂಬಂಧಿ ಅಸಮಾನತೆಯ ಅಂತರವು ೧೯೯೧ರಲ್ಲಿ ಶೇ. ೨೨.೯೨ ಅಂಶಗಳಷ್ಟಿದ್ದುದು ೨೦೦೧ರಲ್ಲಿ ಅದು ಶೇ.೧೯.೨೦ ಅಂಶಗಳಿಗೆ ಕಡಿಮೆಯಾಗಿದೆ. ಇನ್ನೊಂದು ರೀತಿ ಹೇಳಬೇಕೆಂದರೆ ೧೯೯೧ರಲ್ಲಿ ಮಹಿಳೆಯರ ಸಾಕ್ಷರತೆಯು ಪುರುಷರ ಸಾಕ್ಷರತೆಯ ೨/೩ರಷ್ಟಿದ್ದುದು ೨೦೦೧ರಲ್ಲಿ ಅದು ಪುರುಷರ ಸಾಕ್ಷರತೆಯ ೩/೪ರಷ್ಟಾಗಿದೆ. ಇಷ್ಟಾದರೂ ಮಹಿಳೆಯರ ಸಾಕ್ಷರತೆಯು ಪುರುಷರ ಸಾಕ್ಷರತೆಗಿಂತ ಬಹಳ ಕಡಿಮೆಯಿದೆ.

ಕೋಷ್ಟಕ
ಕರ್ನಾಟಕದಲ್ಲಿ
ಅಕ್ಷರಸ್ಥರು ಮತ್ತು ಅನಕ್ಷರಸ್ಥರು೧೯೯೧

ಕ್ರಸಂ. ವಿವರಗಳು ಅಕ್ಷರಸ್ಥರು ಅನಕ್ಷರಸ್ಥರು
೧. ಒಟ್ಟು ಜನಸಂಖ್ಯೆ ೨೧೦.೧೩ ಲಕ್ಷ ೧೬೪.೮೭ ಲಕ್ಷ
೨. ಮಹಿಳೆಯರು ೮೧.೪೨ ಲಕ್ಷ ೧೦೨.೨೨ ಲಕ್ಷ
೩. ಪುರುಷರು ೧೨೮.೭೨ ಲಕ್ಷ ೬೨.೬೪ ಲಕ್ಷ

ಮೂಲ: ೧. ಸೆನ್ಸಸ್‌ಆಫ್‌ಇಂಡಿಯಾ: ೧೯೯೧, ಸಿರೀಸ್‌-೧೧ ಕರ್ನಾಟಕ, ಪಾರ್ಟ್-ಬಿ. ಪ್ರೈಮರಿ ಸೆನ್ಸಸ್‌ಅಟ್‌ಸ್ಟ್ರಾಕ್ಟ: ಜನರಲ್‌ಪಾಪುಲೇಶನ್‌, ಡೈರೆಕ್ಟರೇಟ್‌ಆಫ್‌ಸೆನ್ಸಸ್‌ಆಪರೇಶನ್ಸ್‌, ಕರ್ನಾಟಕ.

ಈ ಕೋಷ್ಟಕದಿಂದ (೨) ತಿಳಿದು ಬರುವ ಸಂಗತಿಯೆಂದರೆ ೧೯೯೧ರಲ್ಲಿ ಅಕ್ಷರಸ್ಥ ಮಹಿಳೆಯರಿಗಿಂತ ಅನಕ್ಷರಸ್ಥ ಮಹಿಳೆಯರ ಸಂಖ್ಯೆಯು ಅಧಿಕವಾಗಿತ್ತು. ರಾಜ್ಯದ ಒಟ್ಟು ಅಕ್ಷರಸ್ಥರಲ್ಲಿ ಪುರುಷರ ಪ್ರಮಾಣ ಶೇ. ೬೧.೨೫ರಷ್ಟಿದ್ದರೆ ಮಹಿಳೆಯರ ಪ್ರಮಾಣವು ಶೇ.೩೮.೭೫ರಷ್ಟಿತ್ತು. ಆದರೆ ಅನಕ್ಷರಸ್ಥರಲ್ಲಿ ಪುರುಷರ ಪ್ರಮಾಣವು ಶೆ. ೩೮ರಷ್ಟಿದ್ದರೆ ಮಹಿಳೆಯರ ಪ್ರಮಾಣವು ಶೇ. ೬೨ ರಷ್ಟಿತ್ತು.

ಈ ಚಿತ್ರವು ೨೦೦೧ರಲ್ಲಿ ಸ್ವಲ್ಪ ಬದಲಾಗಿದೆ. ಇದನ್ನು ಕೋಷ್ಟಕ-೩ರಲ್ಲಿ ತೋರಿಸಲಾಗಿದೆ.

ಕೋಷ್ಟಕ
ಕರ್ನಾಟಕದಲ್ಲಿ
ಅಕ್ಷರಸ್ಥರು ಮತ್ತು ಅನಕ್ಷರಸ್ಥರು೨೦೦೧

ಕ್ರ.ಸಂ. ವಿವರಗಳು ಅಕ್ಷರಸ್ಥರು ಅನಕ್ಷರಸ್ಥರು
೧. ಒಟ್ಟು ಜನಸಂಖ್ಯೆ ೩೦೪.೩೫ ಲಕ್ಷ ೧೫೨.೩೬ ಲಕ್ಷ
೨. ಮಹಿಳೆಯರು ೧೨೭.೭೪ ಲಕ್ಷ ೯೬.೮೭ ಲಕ್ಷ
೩. ಪುರುಷರು ೧೭೬.೬೧ ಲಕ್ಷ ೫೫.೪೭ ಲಕ್ಷ

ಮೂಲ: ೧. ಸೆನ್ಸಸ್‌ಆಫ್‌ಇಂಢಿಯಾ:೨೦೦೧ ಸಿರೀಸ್‌೩೦ ಕರ್ನಾಟಕ ಪೇಪರ‍೨ ಆಫ್‌೨೦೦೧. ಪ್ರಾವಿಶನಲ್‌ ಪಾಪುಲೇಶನ್‌ಟೋಟಲ್ಸ್‌: ರೂರಲ್‌ಆರ್ಬನ್‌ಪಾಪುಲೇಶನ್‌, ಡೈರೆಕ್ಟರೇಟ್‌ಆಫ್‌ಸೆನ್ಸ್ಸ್‌ಆಪರೇಶನ್ಸ್‌, ಕರ್ನಾಟಕ.

ಈ ಕೋಷ್ಟಕದಿಂದ ೨೦೦೧ರಲ್ಲಿ ರಾಜ್ಯದ ಒಟ್ಟು ಅಕ್ಷರಸ್ಥರಲ್ಲಿ ಮಹಿಳೆಯರ ಪ್ರಮಾಣ ಶೇ. ೪೧.೯೭ರಷ್ಟಿತ್ತು ಮತ್ತು ಪುರುಷರ ಪ್ರಮಾಣವು ಶೇ. ೫೮.೦೩ರಷ್ಟಿತ್ತು ಎಂಬುದು ತಿಳಿಯುತ್ತದೆ. ಆದರೆ ಅನಕ್ಷರಸ್ಥರಲ್ಲಿ ಪುರುಷರ ಪ್ರಮಾಣವು ಶೇ. ೩೬.೪೧ರಷ್ಟಿದ್ದರೆ ಮಹಿಳೆಯರ ಪ್ರಮಾಣವು ಶೇ. ೬೩.೫೯ರಷ್ಟಿತ್ತು. ಅಂದರೆ ೧೯೯೧ರಲ್ಲಿ ಅಕ್ಷರಸ್ಥ ಮಹಿಳೆಯರಿಗಿಂತ ಅನಕ್ಷರಸ್ಥ ಮಹಿಳೆಯರು ಅಧಿಕವಾಗಿದ್ದರೆ ೨೦೦೧ರಲ್ಲಿ ಚಿತ್ರ ಬದಲಾಗಿದೆ. ಇಲ್ಲಿ ಅಕ್ಷರಸ್ಥ ಮಹಿಳೆಯರ ಸಂಖ್ಯೆಯು ಅನಕ್ಷರಸ್ಥ ಮಹಿಳೆಯರ ಸಂಖ್ಯೆಗಿಂತ ಅಧಿಕವಾಗಿದೆ.

ಮೇಲಿನ ವಿಶ್ಲೇಷಣೆಯು ಮಹಿಳೆಯರ ಸಾಕ್ಷರತೆಯು ಸಾಗಬೇಕಾಗಿರುವ ದಾರಿ ಬಹು ದೂರವಿದೆಯೆಂಬುದನ್ನು ತೋರಿಸುತ್ತದೆ.