ಭಾಗ ೩ – ಮಹಿಳೆಯರ ಸಾಕ್ಷರತೆ: ಶಿಷ್ಟ ಮತ್ತು ಪರಿಶಿಷ್ಟ ನೆಲೆಗಳು

ಈ ಕೆಳಗಿನ ಕೋಷ್ಟಕ-೪ರಲ್ಲಿ ಮಹಿಳಾ ಸಾಕ್ಷರತೆಯ ಶಿಷ್ಟ(ದಲಿತೇತರರು) ಮತ್ತು ಪರಿಶಿಷ್ಟ(ಪ.ಜಾ ಮತ್ತು ಪ.ಪಂ) ನೆಲೆಗಳನ್ನು ತೋರಿಸಲು ಪ್ರಯತ್ನಿಸಲಾಗಿದೆ. ಈ ಕೋಷ್ಟಕದಿಂದ ಸ್ಪಷ್ಟವಾಗುವ ಸಂಗತಿಯೆಂದರೆ ‘ಮಹಿಳೆಯರು’ ಎಂಬುದು ಒಂದು ಅಖಂಡವಾದ ಮತ್ತು ಅಭಿನ್ನವಾದ ಗುಂಪಲ್ಲ. ಅದನ್ನು ಅಭಿನ್ನವಾಗಿ ಪರಿಗಣಿಸಲು ಬರುವುದಿಲ್ಲ. ಒಂದು ವೇಳೆ ಅವರು ಒಂದು ವರ್ಗವಾಗಿದ್ದಿದ್ದರೆ ದಲಿತ ಮತ್ತು ದಲಿತೇತರ ಮಹಿಳೆಯರ ಸಾಕ್ಷರತಾ ಪ್ರಮಾಣದಲ್ಲಿ ವ್ಯತ್ಯಾಸವಿರಲು ಯಾವುದೇ ಕಾರಣಗಳಿಲ್ಲ. ಈ ಕಾರಣಕ್ಕೆ ಗೋಪಾಲ ಗುರು ದಲಿತ ಮಹಿಳೆಯರ ಸಾಮಾಜಿಕ ಸ್ಥಿತಿಯನ್ನು ದಲಿತೇತರ ಮಹಿಳೆಯರ ಸ್ಥಿತಿಗತಿಗಿಂತ ಭಿನ್ನವಾಗಿ ನೋಡಬೇಕೆಂದು ವಾದಿಸುತ್ತಿದ್ದಾರೆ (೧೯೯೫). ಸಾಮಾನ್ಯವಾಗಿ ಲಿಂಗ ಸಂಬಂಧಿ ಅಸಮಾನತೆಯನ್ನು ಕುರಿತಂತೆ ಚರ್ಚೆ ಮಾಡುವಾಗ ಮಹಿಳೆಯರು ಮತ್ತು ಪುರುಷರ ನಡುವಿನ ಅಂತರವನ್ನು ಮಾತ್ರ ಪರಿಗಣಿಸಲಾಗುತ್ತದೆ. ಈ ಬಗೆಯ ಅಂತರವನ್ನು ಕುರಿತಂತೆ ಚರ್ಚೆ ಮಾಡುವ ಅಗತ್ಯವನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ. ಮಹಿಳೆಯರ ಸಾಕ್ಷರತೆ ಕುರಿತ ಚರ್ಚೆಯನ್ನು ನಾವು ಲಿಂಗಸಂಬಂಧಿ ನೆಲೆ, ವರ್ಗ ಸಂಬಂಧಿ ನೆಲೆ ಹಾಗೂ ಜಾತಿ ಸಂಬಂಧಿ ನೆಲೆಗಳಿಂದ ಪರಿಭಾವಿಸಿಕೊಳ್ಳಬೇಕಾಗುತ್ತದೆ.

ಒಟ್ಟು ಜನಸಂಖ್ಯೆಯನ್ನು ತೆಗೆದುಕೊಂಡರೆ ಲಿಂಗಸಂಬಂಧಿ ಸಾಕ್ಷರತಾ ಅಂತರ ಶೇ.೧೯.೨ ಅಂಶಗಳಷ್ಟಾಗುತ್ತದೆ. ಆದರೆ ಅದು ದಲಿತರಿಗೆ ಸಂಬಂಧಿಸಿದಂತೆ ಶೆ.೨೨.೩೫ ಅಂಶಗಳಷ್ಟಿದ್ದರೆ ದಲಿತೇತರರಿಗೆ ಸಂಬಂಧಿಸಿದಂತೆ ಅದು ಶೇ.೧೬.೭೯ ಅಂಶಗಳಷ್ಟಿದೆ. ಅಂದರೆ ಸಾಕ್ಷರತೆಗೆ ಸಂಬಂಧಿಸಿದಂತೆ ಅದು ಶೇ. ೧೬.೭೯ ಅಂಶಗಳಷ್ಟಿದೆ. ಅಂದರೆ ಸಾಕ್ಷರತೆಗೆ ಸಂಬಂಧಿಸಿದಂತೆ ಲಿಂಗಸಂಬಂಧಿ ಅಂತರ ದಲಿತರಲ್ಲಿ ದಲಿತೇತರರಲ್ಲಿರುವುದಕ್ಕಿಂತ ಅಧಿಕವಾಗಿದೆ. ಇದರ ಇನ್ನೊಂದು ಆಯಾಮವೆಂದರೆ ದಲಿತ ಮಹಿಳೆಯರು ಮತ್ತು ದಲಿತೇತರ ಮಹಿಳೆಯರ ನಡುವಿನ ಸಾಕ್ಷರತಾ ಅಂತರವಾಗಿದೆ.

ಕೋಷ್ಟಕ
ಸಾಕ್ಷರತೆಯ
ಸಾಮಾಜಿಕ ಮತ್ತು ಲಿಂಗ ಸಂಬಂಧಿ ನೆಲೆಗಳು೧೯೯೧

ಕ್ರ.ಸಂ. ವಿವರಗಳು ಅಕ್ಷರಸ್ಥರು (ಲಕ್ಷಗಳಲ್ಲಿ) ಅನಕ್ಷರಸ್ಥರು (ಲಕ್ಷಗಳಲ್ಲಿ) ಸಾಕ್ಷರತಾ ಪ್ರಮಾಣ (ಶೇ)
೧. ಒಟ್ಟು ಜನಸಂಖ್ಯೆ ೧೨೦.೧೩ ೧೬೪.೮೭ ೫೬.೦೩
೨. ಮಹಿಳೆಯರು ೮೧.೪೨ ೧೦೨.೨೨ ೪೪.೩೪
೩. ಪುರುಷರು ೧೨೮.೭೨ ೬೨.೬೪ ೬೭.೨೭
೪. ಒಟ್ಟು ದಲಿತ ಜನಸಂಖ್ಯೆ ೨೮.೨೩ ೪೬.೭೭ ೩೭.೬೪
೫. ದಲಿತ ಮಹಿಳೆಯರು ೯.೩೫ ೨೭.೪೦ ೨೫.೪೪
೬. ದಲಿತ ಪುರುಷರು ೧೮.೮೭ ೧೯.೩೮ ೪೯.೩೩
೭. ಒಟ್ಟು ದಲಿತೇತರ ಜನಸಂಖ್ಯೆ ೧೮೧.೯ ೧೧೮.೧೦ ೬೦.೬೩
೮. ದಲಿತೇತರ ಮಹಿಳೆಯರು ೭೨.೦೭ ೭೪.೮೨ ೪೯.೦೬
೯. ದಲಿತೇತರ ಪುರುಷರು ೧೦೯.೮೫ ೪೩.೨೬ ೭೧.೭೫

ಮೂಲ: ಸೆನ್ಸ್ ಆಫ್‌ಇಂಡಿಯಾ: ೧೯೯೧. ಕರ್ನಾಟಕ ಸಿರೀಸ್‌೧೧, ಕರ್ನಾಟಕ ಪಾರ್ಟ್-ಬಿ. ಪ್ರೈಮರಿ ಸೆನ್ಸಸ್ ಅಬ್‌ಸ್ಟ್ರಾಕ್ಟ್‌: ಶೆಡೂಲ್ಡ್‌ಕಾಸ್ಟ್ ಆಂಡ್‌ಶೆಡೂಲ್ಡ್‌ಪ್ರೈಬ್‌, ಡೈರೆಕ್ಟರೇಟ್‌ಆಫ್‌ಸೆನ್ಸಸ್‌ಆಪರೇಶನ್ಸ್‌ಕರ್ನಾಟಕ.

ಇದು ೨೦೦೧ರಲ್ಲಿ ಶೆ. ೨೩.೧೬ ಅಂಶಗಳಷ್ಟಿದೆ. ಆದರೆ ದಲಿತ ಪುರುಷರು ಮತ್ತು ದಲಿತೇತರ ಪುರುಷರನ್ನು ತೆಗೆದುಕೊಂಡರೆ ಅಲ್ಲಿ ಸಾಕ್ಷರತಾ ಅಂತರ ಶೆ. ೧೭.೬೦ ಅಂಶಗಳಷ್ಟಿದೆ.

ಸಾಕ್ಷರತೆಗೆ ಸಂಬಂಧಿಸಿದಂತೆ ನಾವು ಕಾರ್ಯಕ್ರಮವನ್ನು ರೂಪಿಸುವಾಗ ಸಾಕ್ಷರತೆಗೆ ಸಂಬಂಧಿಸಿದ ಲಿಂಗಸಂಬಂಧಿ ಅಂತರ ಜೊತೆಗೆ ದಲಿತ ಮಹಿಳೆಯರು ಮತ್ತು ದಲಿತೇತರ ಮಹಿಳೆಯರ ನಡುವಿನ ಸಾಕ್ಷರತಾ ಅಂತರದ ಬಗ್ಗೆಯೂ ಗಮನ ನೀಡಬೇಕಾಗುತ್ತದೆ. ದಲಿತರಿಗೆ ಸಂಬಂಧಿಸಿದಂತೆ ಸಾಕ್ಷರತೆಯ ಲಿಂಗ ಸಮಾನತಾ ಸೂಚ್ಯಂಕವು ೨೦೦೧ರಲ್ಲಿ ೦.೭೨ರಷ್ಟಿದ್ದರೆ ದಲಿತೇತರರಲ್ಲಿ ಅದು ೦.೯೯೭ರಷ್ಟಿದೆ. ದಲಿತರು ಮತ್ತು ದಲಿತೇತರರನ್ನು ಕೂಡಿಸಿ ನೋಡಿದಾಗ, ಅಂದರೆ ಒಟ್ಟು ಜನಸಂಖ್ಯೆಗೆ ಸಂಬಂಧಿಸಿದಂತೆ ಅದು ೦.೮೫೪ರಷ್ಟಿದೆ. ದಲಿತ ಮಹಿಳೆಯರ ಸಾಕ್ಷರತೆಗೆ ಸಂಬಂಧಿಸಿದ ಸಾಮಾಜಿಕ ಸಮಾನತಾ ಸೂಚ್ಯಂಕವು ೦.೭೦೭ರಷ್ಟಿದ್ದರೆ ದಲಿತೇತರ ಮಹಿಳೆಯರಲ್ಲಿ ಅದು ೧.೧೧೪ರಷ್ಟಿದೆ.

ಕೋಷ್ಟಕ
ಸಾಕ್ಷರತೆಯ
ಸಾಮಾಜಿಕ ಮತ್ತು ಲಿಂಗ ಸಂಬಂಧಿ ನೆಲೆಗಳು೨೦೦೧

ಕ್ರ.ಸಂ. ವಿವರಗಳು ಅಕ್ಷರಸ್ಥರು (ಲಕ್ಷಗಳಲ್ಲಿ) ಅನಕ್ಷರಸ್ಥರು (ಲಕ್ಷಗಳಲ್ಲಿ) ಸಾಕ್ಷರತಾ ಪ್ರಮಾಣ (ಶೇ)
೧. ಒಟ್ಟುಜನಸಂಖ್ಯೆ ೩೦೪.೩೫ ೧೫೨.೩೪ ೬೬.೬೦
೨. ಒಟ್ಟು ಮಹಿಳೆಯರು ೧೨೭.೭೪ ೯೬.೮೭ ೫೬.೯೦
೩. ಒಟ್ಟು ಪುರುಷರು ೧೭೬.೬೧ ೫೫.೪೭ ೭೬.೧೦
೪. ಒಟ್ಟು ದಲಿತ ಜನಸಂಖ್ಯೆ ೫೨.೪೯ ೪೯.೩೩ ೫೫.೫೫
೫. ದಲಿತ ಮಹಿಳೆಯರು ೨೦.೨೩ ೩೦.೦೫ ೪೦.೨೩
೬. ದಲಿತ ಪುರುಷರು ೩೨.೨೬ ೧೯.೨೯ ೬೨.೫೮
೭. ಒಟ್ಟು ದಲಿತೇತರ ಜನಸಂಖ್ಯೆ ೨೫೧.೮೬ ೧೦೨.೦೦ ೭೧.೪೫
೮. ದಲಿತೇತರ ಮಹಿಳೆಯರು ೧೦೭.೫೧ ೬೫.೯೨ ೬೩.೩೯
೯. ದಲಿತೇತರ ಪುರುಷರು ೧೪೪.೩೫ ೩೬.೦೮ ೮೦.೧೮

ಮೂಲ: ಸೆನ್ಸಸ್‌ಆಫ್‌ಇಂಡಿಯಾ: ೨೦೦೧. ಸಿರೀಸ್‌೩೦, ಕರ್ನಾಟಕ ಪ್ರೈಮರಿ ಸೆನ್ಸಸ್‌ಅಬ್‌ಸ್ಟ್ರಾಕ್ಟ್‌, ಡೈರೆಕ್ಟರೇಟ್‌ಆಫ್‌ಸೆನ್ಸಸ್‌ಆಪರೇಶನ್ಸ್‌, ಕರ್ನಾಟಕ.

ಇಲ್ಲಿ ಏನನ್ನು ಹೇಳಲು ಪ್ರಯತ್ನಿಸಲಾಗುತ್ತಿದೆಯೆಂದರೆ ಸಮಾಜದಲ್ಲಿ ಅತ್ಯಂತ ದುಸ್ಥಿತಿಗೆ ಒಳಗಾಗಿರುವ ವರ್ಗವೆಂದರೆ ದಲಿತ ಮಹಿಳೆಯರು ಎಂಬುದಾಗಿದೆ. ಈ ಅಧ್ಯಯನದಿಂದ ಕಂಡುಕೊಳ್ಳಲಾದ ಮತ್ತೊಂದು ತಥ್ಯವೆಂದರೆ ಸಾಕ್ಷರತೆಗೆ ಸಂಬಂಧಿಸಿದ ಅಂತರವನ್ನು ವಿಶ್ಲೇಷಿಸುವಾಗ ಒಟ್ಟು ಜನಸಂಖ್ಯೆ ಮತ್ತು ದಲಿತರ ನಡುವಿನ ಸಾಕ್ಷರತಾ ಅಂತರವನ್ನು ಗುರಿಯಾಗಿಟ್ಟುಕೊಳ್ಳುವುದಕ್ಕೆ ಪ್ರತಿಯಾಗಿ ದಲಿತರು ಮತ್ತು ದಲಿತೇತರರ ನಡುವಿನ ಸಾಕ್ಷರತಾ ಅಂತರವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದಾಗಿದೆ. ಒಟ್ಟು ಜನಸಂಖ್ಯೆ ಮತ್ತು ದಲಿತರ ನಡುವಿನ ಸಾಕ್ಷರತಾ ಅಂತರವನ್ನು ಗಮನದಲ್ಲಿಟ್ಟುಕೊಂಡರೆ ನಮಗೆ ದೊರೆಯುವ ಸಾಕ್ಷರತಾ ಅಂತರ ಪುರುಷರಿಗೆ ಸಂಬಂಧಿಸಿದಂತೆ ಶೆ.೧೩.೫೨ ಅಂಶಗಳು ಮತ್ತು ಮಹಿಳೆಯರಿಗೆ ಸಂಬಂಧಿಸಿದಂತೆ ಅದು ಶೆ.೧೬.೬೭ ಅಂಶಗಳು. ಆದರೆ ನಾವು ಸಾಕ್ಷರತೆಗೆ ಸಂಬಂಧಿಸಿದ ಅಂತರವನ್ನು ದಲಿತರು ಮತ್ತು ದಲಿತೇತರರ ನಡುವಿನ ಅಂತರವನ್ನು ಗಮನದಲ್ಲಿಟ್ಟುಕೊಂಡು ವಿಶ್ಲೇಷಿಸಿದರೆ ಆಗ ಅಂತರ ಪುರುಷರಿಗೆ ಸಂಬಂಧಿಸಿದಂತೆ ಶೆ.೧೭.೬ ಅಂಶಗಳಷ್ಟಾದರೆ ಮಹಿಳೆಯರಿಗೆ ಸಂಬಂಧಿಸಿದಂತೆ ಅದು ಶೇ.೨೩.೧೬ರಷ್ಟಾಗಿರುವುದು ತಿಳಿಯುತ್ತದೆ. ಈ ದೃಷ್ಟಿಯಿಂದ ಮಹಿಳೆಯರ ಸಾಕ್ಷರತೆಯನ್ನು ಪರಿಭಾವಿಸಿ ಕೊಂಡಾಗ ಗೋಪಾಲ ಗುರು(೧೯೯೫) ಅವರು ತಮ್ಮ ಪ್ರಸಿದ್ಧ ಲೇಖನ ‘ದಲಿತ್‌ವುಮೆನ್‌ಟಾಕ್‌ಡಿಫರೆಟ್ಲಿ’ಯಲ್ಲಿ ವಾದಿಸಿರುವ ಸಂಗತಿಯ ಮಹತ್ವ ಅರ್ಥವಾಗುತ್ತದೆ.

ಭಾಗ ೪ – ಕರ್ನಾಟಕದಲ್ಲಿ ವಯಸ್ಕ ಮಹಿಳೆಯರ ಸಾಕ್ಷರತಾ ಪ್ರಮಾಣ

ಪ್ರಸ್ತುತ ಭಾಗದಲ್ಲಿ ವಯಸ್ಕ ಮಹಿಳೆಯರ ಸಾಕ್ಷರತೆಯನ್ನು ಕುರಿತಂತೆ ಚರ್ಚೆ ಮಾಡಲಾಗಿದೆ. ಕರ್ನಾಟಕದ ಎಲ್ಲ ೨೭ ಜಿಲ್ಲೆಗಳಿಗೂ ಸಂಬಂಧಿಸಿದಂತೆ ೨೦೦೧ರ ವಯಸ್ಕರ ಸಾಕ್ಷರತೆಯನ್ನು ನಾನು ಬೇರೊಂದು ಸಂದರ್ಭದಲ್ಲಿ ಲೆಕ್ಕ ಹಾಕಿದ್ದೇನೆ. ಅದನ್ನು ಇಲ್ಲಿ ಲಿಂಗಸಂಬಂಧಿ ವಿಶ್ಲೇಷಣೆಗಾಗಿ ಬಳಸಿಕೊಳ್ಳಬಹುದಾಗಿದೆ. ಅದನ್ನು ಕೋಷ್ಟಕ-೬ರಲ್ಲಿ ನೀಡಲಾಗಿದೆ.

ವಯಸ್ಕರ ಸಾಕ್ಷರತೆಯನ್ನು ಲೆಕ್ಕ ಹಾಕುವ ವಿಧಾನವನ್ನು ತಿಳಿದುಕೊಳ್ಳಲು ನನ್ನ ೨೦೧೦ರ ಅಧ್ಯಯನ ಪ್ರಬಂಧವನ್ನು ನೋಡಬಹುದು (ಚಂದ್ರಶೇಖರ.ಟಿ.ಆರ್.೨೦೧೦). ಇಲ್ಲಿ ಕೇವಲ ವಯಸ್ಕರ ಸಾಕ್ಷರತೆಯಲ್ಲಿನ ಲಿಂಗಸಂಬಂಧಿ ಅಸಮಾನತೆಯ ಸ್ವರೂಪವನ್ನು ಚರ್ಚಿಸಲಾಗಿದೆ. ಹದಿನೈದು ವರ್ಷಕ್ಕಿಂತ ಮೇಲ್ಪಟ್ಟ ಜನರ ಅಕ್ಷರಜ್ಞಾನವನ್ನು ವಯಸ್ಕರ ಸಾಕ್ಷರತೆಯೆಂದು ಕರೆಯಲಾಗಿದೆ.

ಲಿಂಗ ಸಂಬಂಧದ ದೃಷ್ಟಿಯಿಂದ ನಾವು ಒಟ್ಟು ಸಾಕ್ಷರತೆ ಮತ್ತು ವಯಸ್ಕರ ಸಾಕ್ಷರತೆಗಳ ನಡುವಿನ ಭಿನ್ನತೆಯನ್ನು ಅವಶ್ಯ ಗಮನಿಸಬೇಕು. ಮಹಿಳೆಯರ ಒಟ್ಟು ಸಾಕ್ಷರತೆ ಮತ್ತು ಮಹಿಳಾ ವಯಸ್ಕರ ಸಾಕ್ಷರತಾ ಪ್ರಮಾಣಗಳ ನಡುವೆ ರಾಜ್ಯಮಟ್ಟದಲ್ಲಿ ಶೇ.೧೧.೫೨ಅಂಶಗಳಷ್ಟು ಅಂತರವಿದ್ದರೆ ಗುಲಬರ್ಗಾ ವಿಭಾಗದಲ್ಲಿ ಅದು ಶೇ.೨೦.೧೬ ಅಂಶಗಳಷ್ಟಿದೆ. ಆದರೆ ಮೈಸೂರು ವಿಭಾಗದಲ್ಲಿ ಅದು ಕೇವಲ ಶೇ.೮.೬೬ ಅಂಶಗಳಷ್ಟಿದೆ. ಇದು ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆಯ ಪ್ರಮಾಣವನ್ನು ಮತ್ತು ಲಿಂಗಸಂಬಂಧಿ ಅಸಮಾನತೆಯ ತೀವ್ರತೆಯನ್ನು ಏಕಕಾಲದಲ್ಲಿ ತೋರಿಸುತ್ತಿದೆ. ನೀತಿ-ನಿರೂಪಣೆಯಲ್ಲಿ ಇದು ತುಂಬಾ ಉಪಯುಕ್ತವಾದ ಸಂಗತಿಯಾಗಿದೆ. ಈ ಬಗೆಯ ವರ್ಗೀಕರಣದ ಮಹತ್ವವೆಲ್ಲಿದೆಯೆಂದರೆ ಸಾಕ್ಷರತೆಯ ಲಿಂಗಸಂಬಂಧಿ ಅಸಮಾನತೆಯ ವಿರಾಟ್‌ಸ್ವರೂಪದಲ್ಲಿದೆ. ಒಟ್ಟು ಸಾಕ್ಷರತೆಯಲ್ಲಿ ಲಿಂಗಸಂಬಂಧಿ ಅಸಮಾನತೆಯ ಪ್ರಮಾಣ ರಾಜ್ಯಮಟ್ಟದಲ್ಲಿ ಶೆ.೧೯.೨೩ ಅಂಶಗಳಷ್ಟಿದ್ದರೆ ವಯಸ್ಕರ ಸಾಕ್ಷರತೆಯಲ್ಲಿ ಅದು ಶೇ.೨೪.೬೦ ಅಂಶಗಳಷ್ಟಿದೆ.

ಕರ್ನಾಟಕದಲ್ಲಿ ಜಿಲ್ಲವಾರು ಒಟ್ಟು ಮತ್ತು ವಯಸ್ಕರ ಸಾಕ್ಷರತಾ ಪ್ರಮಾಣ ೨೦೦೧

ಕೋಷ್ಟಕ

ಜಿಲ್ಲೆಗಳು ಒಟ್ಟು ಸಾಕ್ಷರತಾ ಪ್ರಮಾಣ(ಶೇ) ವಯಸ್ಕರ ಸಾಕ್ಷರತಾ ಪ್ರಮಾಣ(ಶೇ)
ಒಟ್ಟು ಪುರುಷರು ಮಹಿಳೆಯರು ಒಟ್ಟು ಪುರುಷರು ಮಹಿಳೆಯರು
ಬೀದರ್ ೬೦.೯೪ ೭೨.೪೬ ೪೮.೮೧ ೪೬.೯೧ ೬೨.೬೫ ೩೦.೨೬
ಬಳ್ಳಾರಿ ೫೭.೪೦ ೬೯.೨೦ ೪೫.೨೮ ೪೩.೦೭ ೫೮.೭೦ ೨೭.೦೧
ಗುಲಬರ್ಗಾ ೫೦.೦೧ ೬೧.೭೭ ೩೭.೯೦ ೩೧.೩೮ ೪೭.೩೦ ೧೫.೧೩
ರಾಯಚೂರು ೪೮.೮೧ ೬೧.೫೨ ೩೫.೯೩ ೨೯.೮೩ ೪೬.೯೩ ೧೨.೭೫
ಕೊಪ್ಪಳ ೫೪.೧೦ ೬೮.೪೩ ೩೯.೬೧ ೩೭.೩೪ ೫೬.೬೪ ೧೮.೦೬
ಬೆಳಗಾಂ ೬೪.೨೧ ೭೫.೭೦ ೫೨.೩೨ ೬೧.೧೮ ೬೮.೬೫ ೫೩.೫೧
ಬಾಗಲಕೋಟ ೫೭.೩೦ ೭೦.೮೮ ೪೩.೫೬ ೪೩.೦೦ ೬೧.೨೯ ೨೬.೨೭
ವಿಜಾಪುರ ೫೭.೦೧ ೬೯.೯೪ ೪೩.೪೭ ೪೨.೫೩ ೫೯.೮೫ ೨೪.೭೧
ಗದಗ ೬೬.೧೧ ೭೯.೩೨ ೫೨.೫೨ ೫೬.೩೬ ೭೨.೫೮ ೪೦.೬೩
ಧಾರವಾಡ ೭೧.೬೧ ೮೦.೮೨ ೬೧.೯೨ ೬೪.೧೭ ೭೫.೮೦ ೫೧.೯೦
ಉತ್ತರ ಕನ್ನಡ ೭೬.೬೦ ೮೪.೫೩ ೬೮.೪೭ ೭೧.೦೩ ೮೦.೮೧ ೬೧.೦೩
ಹಾವೇರಿ ೬೭.೭೯ ೭೭.೬೧ ೫೭.೩೭ ೫೮.೪೨ ೭೧.೧೦ ೪೪.೮೯
ಬೆಂಗಳೂರು (ಗ್ರಾ) ೬೪.೭೦ ೭೩.೯೯ ೫೪.೯೯ ೫೫.೭೫ ೬೭.೪೪ ೪೩.೫೯
ಬೆಂಗಳೂರು ನಗರ ೮೨.೯೬ ೮೭.೯೨ ೭೭.೪೮ ೭೯.೪೮ ೮೫.೫೫ ೭೨.೬೮
ಚಿತ್ರದುರ್ಗ ೬೪.೪೫ ೭೪.೬೬ ೫೩.೭೮ ೫೪.೮೨ ೬೭.೮೦ ೪೧.೨೫
ದಾವಣಗೆರೆ ೬೭.೪೩ ೭೬.೩೭ ೫೮.೦೪ ೫೮.೫೩ ೬೮.೯೮ ೪೬.೪೭
ಕೋಲಾರ ೬೨.೮೪ ೭೩.೧೭ ೫೨.೨೩ ೫೨.೭೮ ೬೫.೯೩ ೩೯.೩೦
ಶಿವಮೊಗ್ಗ ೭೪.೫೨ ೮೨.೦೧ ೬೬.೮೮ ೬೮:೪೩ ೭೭.೬೯ ೫೯.೦೨
ತುಮಕೂರು ೬೭.೦೧ ೭೬.೭೮ ೫೬.೯೪ ೫೮.೯೨ ೭೧.೦೦ ೪೬.೦೨
ಮೈಸೂರು ೬೩.೪೮ ೭೦.೮೮ ೫೫.೮೧ ೩೭.೨೬ ೪೬.೫೯ ೨೭.೫೬
ದಕ್ಷಿಣ ಕನ್ನಡ ೮೩.೩೫ ೮೯.೭೦ ೭೭.೨೧ ೭೯.೬೬ ೪೭.೩೪ ೭೨.೩೧
ಚಿಕ್ಕಮಗಳೂರು ೭೨.೨೦ ೮೦.೨೨೯ ೬೪.೦೧ ೬೫.೮೮ ೭೫.೭೮ ೫೫.೯೦
ಹಾಸನ ೬೮.೬೩ ೭೮.೩೭ ೫೯.೦೦ ೬೧.೨೪ ೭೩.೧೮ ೪೯.೪೯
ಉಡುಪಿ ೮೧.೨೫ ೮೮.೨೩ ೭೫.೧೯ ೭೭.೧೯ ೮೩.೨೭ ೭೨.೧೦
ಕೊಡಗು ೭೭.೯೯ ೮೩.೭೦ ೭೨.೨೬ ೭೩.೧೧ ೮೦.೦೫ ೬೬.೧೮
ಚಾಮರಾಜನಗರ ೫೦.೮೭ ೪೭.೩೧ ೨೮.೬೦ ೩೯.೩೩ ೪೯.೩೬ ೨೯.೦೪
ಮಂಡ್ಯ ೬೧.೦೫ ೭೦.೫೦ ೫೧.೫೩ ೫೧.೮೩ ೬೩.೪೩ ೪೦.೨೦
ಕರ್ನಾಟಕ ೬೬.೬೪ ೭೬.೧೦ ೫೬.೮೭ ೫೭.೬೯ ೬೯.೯೫ ೪೫.೩೫

ಮೂಲ: ಸೆನ್ಸಸ್‌ಆಪ್‌ಇಂಡಿಯಾ-೨೦೦೧. ಕರ್ನಾಟಕ. ಸಿರೀಸ್‌೩೦. ಪ್ರೈಮರಿ ಸೆನ್ಸಸ್‌ಅಬ್‌ಸ್ಟ್ರಾಕ್ಟ್‌, ಡೈರಕ್ಟೋರೇಟ್‌ಆಫ್‌ಸೆನ್ಸಸ್‌ಆಫರೇಶನ್‌, ಕರ್ನಾಟಕ, ಪುಟಗಳು:೦೧-೧೪.

ಇದು ಹಿಂದುಳಿದ ಪ್ರದೇಶವಾದ ಗುಲಬರ್ಗಾ ವಿಭಾಗದಲ್ಲಿ ಕ್ರಮವಾಗಿ ಶೇ.೨೪.೮೦ ಮತ್ತು ಶೆ.೩೨.೪೬ ಅಂಶಗಳಷ್ಟಿದೆ. ಹಿಂದುಳಿದ ಪ್ರದೇಶದಲ್ಲಿನ ಲಿಂಗ ಅಸಮಾನತೆಯ ಬೃಹತ್‌ರೂಪವನ್ನು ಇದು ಅನಾವರಣ ಮಾಡುತ್ತಿದೆ. ಈ ಭಿನ್ನತೆಗೆ ಮುಖ್ಯ ಕಾರಣವೇನೆಂದರೆ +೧೫ ವರ್ಷಕ್ಕಿಂತ ಹೆಚ್ಚಿನ ವಯೋಮಾನದಲ್ಲಿ ಮಹಿಳೆಯರ ಸಾಕ್ಷರತೆಯ ಪ್ರಮಾಣ ಅತ್ಯಂತ ಕೆಳಮಟ್ಟದಲ್ಲಿರುತ್ತದೆ (ಶೇ.೪೫.೩೫). ಲಿಂಗ ಅಸಮಾನತೆಯು +೧೫ ವರ್ಷಕ್ಕಿಂತ ಮೇಲಿನ ವಯೋಮಾನದಲ್ಲಿ ಅಧಿಕವಿರುತ್ತದೆ ಮತ್ತು +೧೫ ವಯೋಮಾನಕ್ಕಿಂತ ಕಡಿಮೆಯಿರುವವರಲ್ಲಿ ಕೆಳಮಟ್ಟದಲ್ಲಿರುತ್ತದೆ. ಈ ‘ಲಿಂಗ ಸಮಾನತೆ’ ಎಂಬ ಸಂಗತಿಯು ಇತ್ತೀಚೆಗೆ ಮಹತ್ವವನ್ನು ಪಡೆದುಕೊಳ್ಳತೊಡಗಿದೆ. ಇದನ್ನು ನಿವಾರಿಸುವುದರ ಬಗ್ಗೆ ಇಂದು ಹೆಚ್ಚಿನ ಗಮನ ನೀಡಲಾಗುತ್ತಿದೆ. ಅನೇಕ ವಿಶೇಷ ಕಾರ್ಯಕ್ರಮಗಳನ್ನು ಇದಕ್ಕಾಗಿ ಹಮ್ಮಿಕೊಳ್ಳಲಾಗಿದೆ. ಈ ಕಾರಣದಿಂದಾಗಿ +೭ ವರ್ಷದಿಂದ ೧೪ ವರ್ಷದವರೆಗಿನ ಮಕ್ಕಳಲ್ಲಿ ಶಾಲಾ ದಾಖಲಾತಿಯು ನೂರಕ್ಕೆ ನೂರರಷ್ಟಿರುವುದರಿಂದ ಮತ್ತು ಬಾಲಕಿಯರ ದಾಖಲಾತಿ ಪ್ರಮಾಣ ಬಾಲಕರಿಗೆ ಸುಮಾರು ಸಮವಾಗಿರುವುದರಿಂದ ಇಲ್ಲಿ ಲಿಂಗ ಅಸಮಾನತೆಯು ಕಡಿಮೆಯಾಗಿರುವುದನ್ನು ಗುರುತಿಸಬಹುದಾಗಿದೆ. ಉದಾಹರಣೆಗೆ ೧೯೯೦-೧೯೯೧ರಲ್ಲಿ ೧ ರಿಂದ ೧೨ನೇ ತರಗತಿಯಲ್ಲಿ ಬಾಲಕರ ದಾಖಲಾತಿಯು ಶೆ.೭೩.೫೬ರಷ್ಟಿದ್ದರೆ ಬಾಲಕಿಯರ ದಾಖಲಾತಿಯು ಶೇ.೭೨.೧೧ರಷ್ಟಿತ್ತು. ಇಲ್ಲಿ ಲಿಂಗಸಂಬಂಧಿ ಅಂತರ ಶೆ.೧೦.೪೫ ಅಂಶಗಳಷ್ಟಾಗಿದೆ. ಆದರೆ ೨೦೦೩-೨೦೦೪ರಲ್ಲಿ ೧ರಿಂದ ೧೨ನೆಯ ತರಗತಿವರೆಗೆ ಬಾಲಕರ ದಾಖಲಾತಿ ಶೆ.೭೭.೮೨ರಷ್ಟಿದ್ದರೆ ಬಾಲಕಿಯರ ದಾಖಲಾತಿ ಶೆ.೭೫.೨೧ರಷ್ಟಿದೆ. ಇಲ್ಲಿ ಅಂತರ ಕೇವಲ ಶೇ.೨.೬೧ ಅಂಶಗಳಷ್ಟಿದೆ. ಶಾಲಾ ದಾಖಲಾತಿಯಲ್ಲಿ ಲಿಂಗಸಂಬಂಧಿ ಅಸಮಾನತೆಯು ತೀವ್ರವಾಗಿ ಕಡಿಮೆಯಾಗುತ್ತಿದೆ. ಇಂದು ಶಾಲಾ ದಾಖಲಾತಿಯ ಪ್ರಮಾಣವೂ ಅಧಿಕ ಮತ್ತು ಲಿಂಗಸಂಬಂಧಿ ಅಂತರವೂ ಕಡಿಮೆ (ವಿವರಗಳಿಗೆ ನೋಡಿ: ಕರ್ನಾಟಕ ಮಾನವ ಅಭಿವೃದ್ಧಿ ವರದಿ-೨೦೦೫). ಆದರೆ +೧೫ ವರ್ಷಕ್ಕೆ ಮೇಲ್ಪಟ್ಟವರಲ್ಲಿ ಲಿಂಗಸಂಬಂಧಿ ಸಾಕ್ಷರತಾ ಅಂತರ ಬಹಳ ಜಾಸ್ತಿ. ಇದಕ್ಕೆ ಚಾರಿತ್ರಿಕ ಕಾರಣಗಳಿವೆ. ಲಿಂಗ ಸಮಾನತೆಯೆಂಬ ಮೌಲ್ಯವು ಸರ್ಕಾರದ ನೀತಿಯಾದುದು ಮತ್ತು ಅದು ಸಮಾಜದಲ್ಲಿ ಮನ್ನಣೆ ಗಳಿಸಿಕೊಳ್ಳತೊಡಗಿದ್ದು ತೀರ ಇತ್ತೀಚೆಗೆ ಎಂಬುದನ್ನು ನಾವು ಗಮನಿಸಬೇಕು. ಈ +೧೫ ವರ್ಷದಿಂದ ಮೇಲ್ಪಟ್ಟ ವಯಸ್ಕರಲ್ಲಿ ಕಂಡುಬರುವ ಸಾಕ್ಷರತಾ ಅಂತರವನ್ನು ಸರಿಪಡಿಸಲು ಕಷ್ಟಸಾಧ್ಯ. ಇದರಲ್ಲಿ ಪ್ರಾದೇಶಿಕ ಅಸಮಾನತೆಯ ಸಂಗತಿಗಳು ಇವೆ. ಉದಾಹರಣೆಗೆ ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಸಾಕ್ಷರತಾ ಪ್ರಮಾಣ ಮತ್ತು ಶಿಕ್ಷಣ ಉತ್ತಮವಾಗಿದ್ದರೆ, ಬೆಳಗಾವಿ ವಿಭಾಗದ ಜಿಲ್ಲೆಗಳಲ್ಲಿ ಅವು ಮಧ್ಯಮ ಮಟ್ಟದಲ್ಲಿವೆ. ಏಕೆಂದರೆ ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ವಸಾಹತುಶಾಹಿ ಕಾಲಾವಧಿಯಲ್ಲಿ ಜನಾನುರಾಗಿ ಆಡಳಿತ ವೆನ್ನುವುದು ಸರ್.ಎಂ.ವಿಶ್ವೇಶ್ವರಯ್ಯ ಅವರಂತಹ ದಿವಾನರ ಆಡಳಿತದಿಂದ ದೊರೆಯಿತು. ಬಾಂಬೆ ಕರ್ನಾಟಕ ಪ್ರದೇಶಕ್ಕೆ ವಸಾಹತುಶಾಹಿ ಆಡಳಿತದ ಅನುಕೂಲ ದೊರೆಯಿತು. ಆದರೆ ಗುಲಬರ್ಗಾ ವಿಭಾಗದ ಜಿಲ್ಲೆಗಳಿಗೆ ಅಂತಹ ಅನುಕೂಲಗಳಾವುವು ದೊರೆಯಲಿಲ್ಲ. ಇದರ ಪರಿಣಾಮವನ್ನು ಅಲ್ಲಿರುವ ಇಂದಿನ ಕೆಳಮಟ್ಟದ ಸಾಕ್ಷರತೆ, ಶೈಕ್ಷಣಿಕ ಹಿಂದುಳಿದಿರುವಿಕೆ ಸಮಸ್ಯೆ, ಪ್ರಾದೇಶಿಕ ಅಸಮಾನತೆ, ತೀವ್ರ ಲಿಂಗ ಅಸಮಾನತೆ ಮುಂತಾದ ಸಮಸ್ಯೆಗಳಲ್ಲಿ ನೋಡಬಹುದಾಗಿದೆ.

ಕೊಷ್ಟಕ ೬ರಲ್ಲಿ ಕರ್ನಾಟಕದ ಜಿಲ್ಲೆಗಳಲ್ಲಿನ ಒಟ್ಟು ಮತ್ತು ವಯಸ್ಕರ ಸಾಕ್ಷರತಾ ಪ್ರಮಾಣಗಳನ್ನು ನೀಡಲಾಗಿದೆ. ಈ ವಿವರದ ಆಧಾರದ ಮೇಲೆ ನಾವು ಸಾಕ್ಷರತೆಗೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆಯ ಒಂದು ನೆಲೆಯನ್ನು ತಿಳಿದುಕೊಳ್ಳಬಹುದು. ಎಲ್ಲಿ ಮಹಿಳೆಯರ ಸಾಕ್ಷರತಾ ಪ್ರಮಾಣವು ಅತ್ಯಂತ ಕೆಳಮಟ್ಟದಲ್ಲಿರುತ್ತದೋ ಮತ್ತು ಲಿಂಗಸಂಬಂಧಿ ಸಾಕ್ಷರತಾ ಅಂತರವು ಅಧಿಕವಾಗಿರುತ್ತದೋ ಆ ಜಿಲ್ಲೆಗಳನ್ನು ಹಿಂದುಳಿದ ಜಿಲ್ಲೆಗಳೆಂದು ಪರಿಗಣಿಸಬಹುದು. ಉದಾಹರಣೆಗೆ ರಾಜ್ಯದ ೨೭ ಜಿಲ್ಲೆಗಳ ಪೈಕಿ ರಾಯಚೂರು, ಕೊಪ್ಪಳ ಮತ್ತು ಗುಲಬರ್ಗಾ ಜಿಲ್ಲೆಗಳಲ್ಲಿ ವಯಸ್ಕ ಮಹಿಳೆಯರ ಸಾಕ್ಷರತೆಯು ಶೇ. ೨೦ಕ್ಕಿಂತ ಕಡಿಮೆಯಿದೆ. ನಾವು ಶೇ. ೩೦ ಸಾಕ್ಷರತೆಯನ್ನು ಮಾನದಂಡವಾಗಿಟ್ಟುಕೊಂಡರೆ ಆಗ ರಾಜ್ಯದ ಏಳು ಜಿಲ್ಲೆಗಳಲ್ಲಿ ಅದು ಶೇ.೩೦ ಕ್ಕಿಂತ ಕಡಿಮೆಯಿರುವುದು ಕಂಡು ಬರುತ್ತದೆ. ಇವೆಲ್ಲವೂ ಅಭಿವೃದ್ಧಿಯ ದೃಷ್ಟಿಯಿಂದ ಹಿಂದುಳಿದ ಜಿಲ್ಲೆಗಳಾಗಿವೆ. ಈ ಪ್ರಾದೇಶಿಕ ಅಸಮಾನತೆಯ ಬಹುಮುಖ್ಯ ಸೂಚಿಯೆಂದರೆ ಲಿಂಗಸಂಬಂಧಿ ಸಾಕ್ಷರತಾ ಅಂತರ. ರಾಜ್ಯದಲ್ಲಿ ವಯಸ್ಕರ ಸಾಕ್ಷರತೆಗೆ ಸಂಬಂಧಿಸಿದಂತೆ ಲಿಂಗಸಂಬಂಧಿ ಸಾಕ್ಷರತಾ ಅಂತರ ಶೇ.೩೦ ಅಂಶಗಳಿಗಿಂತ ಅಧಿಕವಿರುವ ಜಿಲ್ಲೆಗಳೆಂದರೆ ಬಾಗಲಕೋಟೆ, ವಿಜಾಪುರ, ಗದಗ, ಬೀದರ್, ಬಳ್ಳಾರಿ, ಗುಲಬರ್ಗಾ, ಕೊಪ್ಪಳ ಮತ್ತು ರಾಯಚೂರು. ಇವೆಲ್ಲವೂ ಅಭಿವೃದ್ಧಿಯಲ್ಲಿ ದುಸ್ಥಿತಿಯನ್ನು ಅನುಭವಿಸುತ್ತಿರುವ ಜಿಲ್ಲೆಗಳಾಗಿವೆ. ಹಿಂದುಳಿದಿರುವಿಕೆಗೂ ಮತ್ತು ಲಿಂಗಸಂಬಂಧಿ ಅಸಮಾನತೆಗೂ ನಡುವೆ ಸಂಬಂಧವಿರುವಂತೆ ಕಾಣುತ್ತದೆ. ಇದರ ಆಧಾರದ ಮೇಲೆ ಮುಂದುವರಿದ ಜಿಲ್ಲೆಗಳಲ್ಲಿ ಲಿಂಗ ತಾರತಮ್ಯವಿಲ್ಲವೆಂದು ತಿಳಿಯ ಬೇಕಾಗಿಲ್ಲ. ಆದರೆ ಅಲ್ಲಿ ಅದರ ರೂಪ, ಪ್ರಮಾಣ ಮತ್ತು ಗತಿ ಭಿನ್ನವಾಗಿರುತ್ತದೆ. ಉದಾಹರಣೆಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಒಟ್ಟು ಸಾಕ್ಷರತೆಗೆ ಸಂಬಂಧಿಸಿದಂತೆ ಲಿಂಗಸಂಬಂಧಿ ಅಂತರ ಕ್ರಮವಾಗಿ ಶೇ.೧೫.೯೭ ಮತ್ತು ಶೇ.೧೨.೪೯ ರಷ್ಟಿದ್ದರೆ ವಯಸ್ಕರ ಸಾಕ್ಷರತೆಯಲ್ಲಿ ಲಿಂಗ ಸಂಬಂದಿ ಅಂತರ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕ್ರಮವಾಗಿ ಶೇ.೧೧.೧೭ ಮತ್ತು ಶೇ.೧೫.೦೩ರಷ್ಟಿದೆ. ಈ ಅಧ್ಯಯನವು ಅನೇಕ ರೀತಿಯಲ್ಲಿ ಉಪಯುಕ್ತವಾದ ಸಂಗತಿಗಳನ್ನು ನಮಗೆ ಒದಗಿಸುತ್ತದೆ. ಸಾಕ್ಷರತೆಗೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆಯ ನೆಲೆಗಳನ್ನು ಇದು ತೋರಿಸುತ್ತಿದೆ. ಹಿಂದುಳಿದಿರುವಿಕೆಗೂ ಮತ್ತು ಲಿಂಗಸಂಬಂಧಿ ಅಸಮಾನತೆಗೂ ನಡುವೆ ಇರುವ ಅನುಲೋಮ ಸಂಬಂಧವನ್ನು ಇದು ಅನಾವರಣ ಮಾಡುತ್ತಿದೆ. ಸಾಕ್ಷರತೆಯನ್ನು ಉತ್ತಮ ಪಡಿಸಬೇಕಾದರೆ ಪರಿಣಾಮಕಾರಿಯಾದ ಮಾರ್ಗ ಯಾವುದೆಂಬುದನ್ನು ಇದು ತೋರಿಸುತ್ತಿದೆ. ಕೋಷ್ಟಕ ೬ರಲ್ಲಿ ಒಂದು ವಿಚಿತ್ರ ಸಂಗತಿಯನ್ನು ಲಿಂಗಸಂಬಂಧವನ್ನು ಕುರಿತಂತೆ ಗುರುತಿಸಬಹುದಾಗಿದೆ, ಒಟ್ಟು ಸಾಕ್ಷರತೆ ಮತ್ತು ವಯಸ್ಕ ಸಾಕ್ಷರತೆಗಳ ನಡುವಿನ ಅಂತರವು ಪುರುಷ ಸಾಕ್ಷರತೆಯಲ್ಲಿರುವುದಕ್ಕಿಂತ ಮಹಿಳೆಯರ ಸಾಕ್ಷರತೆಯಲ್ಲಿ ಅಧಿಕವಾಗಿದೆ. ಉದಾಹರಣೆಗೆ ರಾಜ್ಯದಲ್ಲಿ ವಯಸ್ಕ ಪುರುಷ ಸಾಕ್ಷರತೆಯು ಒಟ್ಟು ಪುರುಷರ ಸಾಕ್ಷರತೆಯ ಶೆ.೯೧.೯೧ರಷ್ಟಿದ್ದರೆ ವಯಸ್ಕ ಮಹಿಳೆಯರ ಸಾಕ್ಷರತೆಯು ಅವರ ಒಟ್ಟು ಸಾಕ್ಷರತೆಯ ಶೇ.೭೯.೭೪ರಷ್ಟಿದೆ. ಈ ಲಿಂಗ ತಾರತಮ್ಯವು ಹಿಂದುಳಿದ ಜಿಲ್ಲೆಗಳಲ್ಲಿ ತೀವ್ರವಾಗಿದೆ. ರಾಯಚೂರು ಜಿಲ್ಲೆಯಲ್ಲಿ ವಯಸ್ಕ ಪುರುಷರ ಸಾಕ್ಷರತೆಯು ಒಟ್ಟು ಪುರುಷರ ಸಾಕ್ಷರತೆಯ ಶೇ. ೭೬.೨೮ರಷ್ಟಿದ್ದರೆ ಶಿವಮೊಗ್ಗ ಜಿಲ್ಲೆಯಲ್ಲಿ ಅದು ಶೇ.೯೪.೭೩ರಷ್ಟಿದೆ. ಅಂದಮೇಲೆ ಹಿಂದುಳಿದಿರುವಿಕೆಗೂ ಮತ್ತು ಲಿಂಗಸಂಬಂಧಿ ಅಸಮಾನತೆಗೂ ನಡುವೆ ಸಂಬಂಧವಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಕೋಷ್ಟಕ-೭ರಲ್ಲಿ ಒಟ್ಟು ಸಾಕ್ಷರತೆಗೆ ಸಂಬಂಧಿಸಿದಂತೆ ಲಿಂಗಸಂಬಂಧಿ ಸಾಕ್ಷರತ ಅಂತರವನ್ನು ಜಿಲ್ಲಾವಾರು ಲೆಕ್ಕ ಹಾಕಿ ತೋರಿಸಲಾಗಿದೆ.

ಲಿಂಗಸಂಬಂಧಿ ಸಾಕ್ಷರತಾ ಅಂತರ ಶೇ.೨೦ಕ್ಕಿಂತ ಅಧಿಕವಿರುವ ಜಿಲ್ಲಗಳಾವುವೆಂದರೆ ಗುಲಬರ್ಗಾ ವಿಭಾಗದ ಬೀದರ್, ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ಗುಲಬರ್ಗಾ ಹಾಗೂ ಬೆಳಗಾವಿ ವಿಭಾಗದ ವಿಜಾಪುರ, ಬಾಗಲಕೋಟೆ, ಬೆಳಗಾವಿ, ಹಾವೇರಿ ಮತ್ತು ಗದಗ ಜಿಲ್ಲೆಗಳು ಹಾಗೂ ಬೆಂಗಳೂರು ವಿಭಾಗದ ಚಿತ್ರದುರ್ಗ ಮತ್ತು ಕೋಲಾರ ಜಿಲ್ಲೆಗಳು.

ಕರ್ನಾಟಕದಲ್ಲಿ ಜಿಲ್ಲಾವಾರು ಮತ್ತು ಲಿಂಗವಾರು ಸಾಕ್ಷರತಾ ಪ್ರಮಾಣ:೨೦೦೧.

ಕೋಷ್ಟಕ-೭

ಜಿಲ್ಲೆಗಳು ಒಟ್ಟು ಪುರುಷರು ಮಹಿಳೆಯರು ಲಿಂಗ ಸಂಬಂಧಿ ಸಾಕ್ಷರತಾ ಅಂತರ
ಬೀದರ್ ೬೦.೯೪ ೭೨.೪೬ ೪೮.೮೧ ೨೩.೬೫
ಬಳ್ಳಾರಿ ೫೭.೪೦ ೬೯.೨೦ ೪೫.೨೮ ೨೩.೯೨
ಗುಲಬರ್ಗಾ ೫೦.೦೧ ೬೧.೭೭ ೩೭.೯೦ ೨೩.೮೭
ರಾಯಚೂರು ೪೮.೮೧ ೬೧.೫೨ ೩೫.೯೩ ೨೫.೬೨
ಕೊಪ್ಪಳ ೫೪.೧೦ ೬೮.೪೩ ೩೯.೬೧ ೨೮.೮೨
ಬೆಳಗಾಂ ೬೪.೨೧ ೭೫.೭೦ ೫೨.೩೨ ೨೩.೩೮
ಬಾಗಲಕಲೋಟೆ ೫೭.೩೦ ೭೦.೮೮ ೪೩.೫೬ ೨೭.೩೨
ವಿಜಾಪುರ ೫೭.೦೧ ೬೯.೯೪ ೪೩.೪೭ ೨೬.೪೭
ಗದಗ ೬೬.೧೧ ೭೯.೩೨ ೫೨.೫೨ ೨೬.೮೦
ಧಾರವಾಡ ೭೧.೬೧ ೮೦.೮೨ ೬೧.೯೨ ೧೮.೯೦
ಉತ್ತರ ಕನ್ನಡ ೭೬.೬೦ ೮೪.೫೩ ೬೮.೪೭ ೧೬.೦೮
ಹಾವೇರಿ ೬೭.೭೯ ೭೭.೬೧ ೫೭.೩೭ ೨೦.೨೪
ಬೆಂಗಳೂರು (ಗ್ರಾ) ೬೪.೭೦ ೭೩.೯೯ ೫೪.೯೯ ೧೯.೦೦
ಬೆಂಗಳೂರು (ನ) ೮೨.೯೬ ೮೭.೯೨ ೭೭.೪೮ ೧೦.೪೪
ಚಿತ್ರದುರ್ಗ ೬೪.೪೫ ೭೪.೬೬ ೫೩.೭೮ ೨೦.೮೮
ದಾವಣಗೆರೆ ೬೭.೪೩ ೭೬.೩೭ ೫೮.೦೪ ೧೮.೩೩
ಕೋಲಾರ ೬೨.೮೪ ೭೩.೧೭ ೫೨.೨೩ ೨೦.೯೪
ಶಿವಮೊಗ್ಗ ೭೪.೫೨ ೮೨.೦೧ ೬೬.೮೮ ೧೫.೧೩
ತುಮಕೂರು ೬೭.೦೧ ೭೬.೭೮ ೫೬.೯೪ ೧೯.೮೪
ಮೈಸೂರು ೬೩.೪೮ ೭೦.೮೮ ೫೫.೮೧ ೧೫.೦೭
ದಕ್ಷಿಣ ಕನ್ನಡ ೮೩.೩೫ ೮೯.೭೦ ೭೭.೨೧ ೧೨.೪೯
ಚಿಕ್ಕಮಗಳೂರು ೭೨.೨೦ ೮೦.೨೨ ೬೪.೦೧ ೧೬.೨೧
ಹಾಸನ ೬೮.೬೩ ೭೮.೩೭ ೫೯.೦೦ ೧೯.೩೭
ಉಡುಪಿ ೮೧.೨೫ ೮೮.೨೩ ೭೫.೧೯ ೧೩.೦೪
ಕೊಡಗು ೭೭.೯೯ ೮೩.೭೦ ೭೨.೨೬ ೧೧.೪೪
ಚಾಮರಾಜನಗರ ೫೦.೮೭ ೪೭.೩೧ ೨೮.೬೦ ೧೮.೭೧
ಮಂಡ್ಯ ೬೧.೦೫ ೭೦.೫೦ ೫೧.೫೩ ೧೮.೯೭
ಕರ್ನಾಟಕ ೬೬.೬೪ ೭೬.೧೦ ೫೬.೮೭ ೧೯.೨೩

ಮೂಲ: ಕರ್ನಾಟಕ ಸರ್ಕಾರ. ೨೦೦೬. ಕರ್ನಾಟಕ ಮಾನವ ಅಭಿವೃದ್ಧಿ ವರದಿ-೨೦೦೫. ಯೋಜನಾ ವಿಭಾಗ,

ಮಹಿಳೆಯರ ಸಾಕ್ಷರತೆಯನ್ನು ಪರಿಭಾವಿಸಿಕೊಂಡಿರುವ ಸಂಗತಿ ಕುತೂಹಲಕಾರಿಯಾಗಿದೆ. ಪುರುಷಶಾಹಿ ಪ್ರಣೀತ ಸಾಮಾಜಿಕೀಕರಣ ಮತ್ತು ಸಂತಾನೋತ್ಪತ್ತಿ ಕೇಂದ್ರಿತ ಲಿಂಗಸಂಬಂಧಿ ಪ್ರಣಾಳಿಕೆಗಳಿಂದಾಗಿ ಮಹಿಳೆಯರ ಸಾಕ್ಷರತೆಯು ನಮ್ಮ ಸಮಾಜದಲ್ಲಿ ಕೆಳಮಟ್ಟದಲ್ಲಿದೆ. ಅದು ಅಬಿರೇಶನ್‌ಅಲ್ಲ. ಅದು ಲಿಂಗ ತಾರತಮ್ಯ ಮೌಲ್ಯವು ಸಮಾಜದಲ್ಲಿ ಆಳವಾಗಿ ನೆಲೆಯೂರಿರುವುದರಿಂದ ಉಂಟಾಗಿರುವ ವಿಕೃತಿ. ಮಹಿಳೆಯರ ಸಾಕ್ಷರತೆಯ ಅಗತ್ಯವನ್ನು ಅವರ ವ್ಯಕ್ತಿತ್ವದ ಆಧಾರದ ಮೇಲೆ ನಿರ್ಣಯಿಸುವುದಕ್ಕೆ ಪ್ರತಿಯಾಗಿ ಅದನ್ನು ಅವರು ನಿರ್ವಹಿಸುವ ದೈಹಿಕ ಕರ್ತವ್ಯದ ಆಧಾರದ ಮೇಲೆ ನಿರ್ಣಯಿಸಲಾಗುತ್ತಿದೆ. ‘ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದನ್ನು ತೆರೆದಂತೆ’ ಎಂಬ ಪ್ರಸಿದ್ಧ ಘೋಷಣೆಯ ಅರ್ಥವೇನು?. ‘ಮನೆಯ ಮೊದಲ ಪಾಠಶಾಲೆ, ತಾಯೆ ಮೊದಲ ಗುರು’ ಎಂಬ ಘೋಷಣೆಯ ಅರ್ಥವೂ ಅತ್ಯಂತ ಲಿಂಗ ತಾರತಮ್ಯದಿಂದ ಕೂಡಿದೆ. ಮನುಸ್ಮೃತಿಯಲ್ಲಿನ ಒಂದು ಸೂತ್ರವು ಇದನ್ನು ಯಾವುದೇ ಅನುಮಾನವಿಲ್ಲದಂತೆ ಸ್ಪಷ್ಟಪಡಿಸುತ್ತದೆ. ಆ ಶ್ಲೋಕ ಹೀಗಿದೆ: ‘ಪಿತಾ ರಕ್ಷತಿ ಕೌಮಾರ್ಯೆ, ಭರ್ತಾ ರಕ್ಷತಿ ಯೌವನೇ, ರಕ್ಷತಿ ಪುತ್ರಃ ಸ್ಥವಿರೇನ ಸ್ತ್ರೀ ಸ್ವಾತಂತ್ರ್ಯಮರ್ಹತಿಃ’. ಸ್ವಾತಂತ್ರ್ಯವೆನ್ನುವುದನ್ನು ಮಹಿಳೆಯರಿಗೆ ನಿರಾಕರಿಸಲಾಗಿದೆ. ಈ ಬಗೆಯ ಚಾರಿತ್ರಿಕ ಪರಿಣಾಮವಾಗಿ ನಮ್ಮಲ್ಲಿ ಇಂದು ಲಿಂಗಸಂಬಂಧಿ ಸಾಕ್ಷರತಾ ಅಸಮಾನತೆಯು ಕಾಣುತ್ತಿದೆ. ಮಹಿಳೆಯ ಬದುಕು ತನಗಾಗಿ ಅಲ್ಲ ಎಂಬುದನ್ನು ಇವು ಗಟ್ಟಿಗೊಳಿಸುತ್ತವೆ. ಅವಳ ಬದುಕು ಮತ್ತೊಬ್ಬರಿಗಾಗಿ ಅಥವಾ ಮತ್ತೊಂದಕ್ಕಾಗಿ ಅಥವಾ ಮತ್ತೊಂದಕ್ಕಾಗಿ ಇದೆ ಎಂಬಂತಹ ಮೌಲ್ಯವನ್ನು ಇಂತಹ ಘೋಷಣೆಗಳು ಊರ್ಜಿತಗೊಳಿಸುತ್ತದೆ. ಮಹಿಳೆಯರು ಸಾಕ್ಷರರಾಗಬೇಕು ಎಂಬುದಕ್ಕೆ ಕೊಡುವ ಕಾರಣಗಳಲ್ಲಿ ಆಕೆಯನ್ನು ಒಬ್ಬ ವ್ಯಕ್ತಿಯನ್ನಾಗಿ ಪರಿಭಾವಿಸಿಕೊಳ್ಳುವ ಕ್ರಮಕ್ಕೆ ಪ್ರತಿಯಾಗಿ ಅವಳನ್ನು ಕುಟುಂಬದ, ಗಂಡನ, ಮಕ್ಕಳ ಹಿತಾಸಕ್ತಿಯನ್ನು ಕಾಪಾಡುವ ಒಂದು ಸಾಧನವಾಗಿ ಮಾತ್ರ ಎಂಬ ನೆಲೆಯಲ್ಲಿ ಪರಿಭಾವಿಸಿಕೊಳ್ಳುವುದು ಕಂಡು ಬರುತ್ತದೆ. ಮಹಿಳೆಯು ಅಕ್ಷರಸ್ಥಳಾದರೆ ಅವಳು ಆದರ್ಶ ತಾಯಿಯಾಗುತ್ತಾಳೆ, ಅವಳು ವಿಧೇಯ ಹೆಂಡತಿಯಾಗುತ್ತಾಳೆ ಎಂದು ನಂಬಲಾಗಿದೆ. ಮಹಿಳೆಯರ ಸಾಕ್ಷರತಾ ಪ್ರಮಾಣ ಹಚ್ಚುವುದರಿಂದ ಜನಸಂಖ್ಯಾ ಬೆಳವಣಿಗೆಯ ಪ್ರಮಾಣ ಕಡಿಮೆಯಾಗುತ್ತದೆ ಅಥವಾ ಕುಟುಂಬ ನಿಯಂತ್ರಣ ಸಾಧ್ಯವಾಗುತ್ತದೆ ಮತ್ತು ಅದರಿಂದ ಜನನ  ಪ್ರಮಾಣವು ಕಡಿಮೆಯಾಗುತ್ತದೆ ಮುಂತಾದ ಕಾರಣಗಳನ್ನು ಇಲ್ಲಿ ನೀಡಲಾಗುತ್ತದೆ. ಅನೇಕ ಅಧ್ಯಯನಗಳಲ್ಲಿ ಇದನ್ನು ಉಪಕರಣವಾದಿ ದೃಷ್ಟಿಕೋನವೆಂದು ಕರೆಯಲಾಗಿದೆ. ಮಹಿಳೆಯರು ತಮಗಾಗಿ ಅಕ್ಷರಸ್ಥರಾಗುವ ಕ್ರಮಕ್ಕೆ ಸಮಾಜದಲ್ಲಿ ಹೆಚ್ಚು ಆಸ್ಪದವಿಲ್ಲ. ಮಹಿಳೆಯರು ಹೆಚ್ಚು ಓದಿ ಬಿಟ್ಟರೆ ಅವರು ‘ದಾರಿ ಬಿಟ್ಟು ಬಿಡುತ್ತಾರೆ’ ಎಂಬ ನಂಬಿಕೆ ಇಂದಿಗೂ ನಮ್ಮ ಸಮಾಜದಲ್ಲಿದೆ. ಈ ಬಗೆಯ ನಂಬಿಕೆಯಿಂದಾಗಿಯೇ ಇಂದು ನಮ್ಮ ಸಮಾಜದ ಸಂದರ್ಭದಲ್ಲಿ ಸಾಕ್ಷರತೆಗೆ ಸಂಬಂಧಿಸಿದಂತೆ ತೀವ್ರ ಲಿಂಗಸಂಬಂಧಿ ಅಂತರ ಕಂಡು ಬರುತ್ತಿದೆ.