ಭಾಗ ೫ – ಕರ್ನಾಟಕದಲ್ಲಿ ಗ್ರಾಮೀಣ ಮತ್ತು ನಗರ ಸಾಕ್ಷರತೆಗಳಲ್ಲಿನ ಅಂತರ

ಸಾಕ್ಷರತೆಗೆ ಸಂಬಂಧಿಸಿದಂತೆ ನಮ್ಮ ಸಂದರ್ಭದಲ್ಲಿ ಚರ್ಚೆ ಮಾಡಬೇಕಾಗಿರುವ ಸಂಗತಿ ಯಾವುದೆಂದರೆ ಗ್ರಾಮೀಣ ಸಾಕ್ಷರತಾ ಪ್ರಮಾಣ. ಏಕೆಂದರೆ ನಮ್ಮಲ್ಲಿ ಇಂದಿಗೂ ಶೇ೬೬ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ರಾಜ್ಯದ ಕೆಲವು ಹಿಂದುಳಿದ ಜಿಲ್ಲೆಗಳಲ್ಲಿ ಗ್ರಾಮೀಣ ವಾಸಿಗಳ ಪ್ರಮಾಣ ಶೇ.೭೦ ದಾಟಿದೆ. ಅಂದಾಗ ನಾವು ಗ್ರಾಮೀಣ ಮಟ್ಟದಲ್ಲಿ ಸಾಕ್ಷರತೆಗೆ ಸಂಬಂಧಿಸಿದಂತೆ ಸ್ಥಿತಿ ಏನಿದೆ ಎಂಬುದನ್ನು ಪರಿಶೀಲಿಸುವುದು ಅಗತ್ಯ. ಪ್ರಸ್ತುತ ಭಾಗದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸಾಕ್ಷರತೆಗೆ ಸಂಬಂಧಿಸಿದ ಸಂಗತಿಗಳನ್ನು ಚರ್ಚಿಸಲಾಗಿದೆ. ಕರ್ನಾಟಕದಲ್ಲಿ ಗ್ರಾಮೀಣ ಮತ್ತು ನಗರ ಸಾಕ್ಷರತೆಯ ವಿವಿರಗಳನ್ನು ಕೋಷ್ಟಕ ೮ರಲ್ಲಿ ನೀಡಲಾಗಿದೆ.

ಕರ್ನಾಟಕದಲ್ಲಿ ಗ್ರಾಮೀಣ ಮತ್ತು ನಗರ ಸಾಕ್ಷರತಾ ಪ್ರಮಾಣ: ೧೯೯೧ ಮತ್ತು ೨೦೦೧.

ಕೋಷ್ಟಕ

ವಿವರಗಳು ಗ್ರಾಮೀಣ ಸಾಕ್ಷರತೆ ನಗರ ಸಾಕ್ಷರತೆ ಗ್ರಾಮೀಣ ಮತ್ತು ನಗರ ನಡುವಿನ ಅಂತರ (ಶೇಕಡ ಅಂಶಗಳು)
೧೯೯೧
ಒಟ್ಟು (ಶೇ) ೪೭.೬೯ ೭೪.೨೦ ೨೬.೫೧
ಪುರುಷರು (ಶೇ) ೬೦.೩೦ ೮೨.೦೪ ೨೧.೭೪
ಮಹಿಳೆಯರು (ಶೇ) ೩೪.೭೬ ೬೫.೭೪ ೩೨.೯೮
ಲಿಂಗ ಸಂಬಂದಿ ಸಾಕ್ಷರತಾ ಅಂತರ ೨೫.೫೪ ೧೬.೩೦
೨೦೦೧
ಒಟ್ಟು (ಶೇ) ೫೯.೩೩ ೮೦.೫೮ ೨೨.೨೫
ಪುರುಷರು (ಶೇ) ೭೦.೪೫ ೮೬.೬೬ ೧೬.೨೧
ಮಹಿಳೆಯರು (ಶೇ) ೪೮.೦೧ ೭೪.೧೩ ೨೬.೧೨
ಲಿಂಗ ಸಂಬಂದಿ ಸಾಕ್ಷರತಾ ಅಂತರ (ಶೇಕಡ ಅಂಶಗಳು) ೨೨.೪೪ ೧೨.೫೩

ಮೂಲ: ಕರ್ನಾಟಕ ಸರ್ಕಾರ. ೨೦೦೬. ಕರ್ನಟಕ ಮಾನವ ಅಭಿವೃದ್ಧಿ ವರದಿ-೨೦೦೫. ಯೋಜನಾ ವಿಭಾಗ, ಪು: ೩೭೮-೩೭೯.

ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಲಿಂಗಸಂಬಂಧಿ ಸಾಕ್ಷರತಾ ಅಂತರದಲ್ಲಿಯೂ ಲಿಂಗ ತಾರತಮ್ಯವು ತೀವ್ರವಾಗಿರುವುದನ್ನು ಮೇಲಿನ ಕೋಷ್ಟಕದಲ್ಲಿ ತೋರಿಸಲಾಗಿದೆ. ಒಂದು ಸಮಾಧಾನಕರ ಸಂಗತಿಯೆಂದರೆ ಈ ಅಂತರವು ಕಡಿಮೆಯಾಗುತ್ತಿದೆ. ಗ್ರಾಮೀಣ ಮತ್ತು ನಗರಗಳಿಗೆ ಸಂಬಂಧಿಸಿದಂತೆ ಲಿಂಗಸಂಬಂಧಿ ಸಾಕ್ಷರತಾ ಅಂತರವು ೧೯೯೧ರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೇ.. ೨೫.೫೪ ಅಂಶಗಳಷ್ಟಿದ್ದುದು ೨೦೦೧ರಲ್ಲಿ ಅದು ಶೇ. ೨೨.೪೪ ಅಂಶಗಳಿಗೆ ಕಡಿಮೆಯಾಗಿದೆ. ಅದೇ ರೀತಿಯಲ್ಲಿ ನಗರ ಪ್ರದೇಶದಲ್ಲಿ ಅದು ೧೯೯೧ರಲ್ಲಿ ಶೇ.೧೬.೩೦ರಷ್ಟಿದ್ದುದು ೨೦೦೧ರಲ್ಲಿ ಶೇ.೧೨.೫೩ ಅಂಶಗಳಿಗೆ ಕಡಿಮೆಯಾಗಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಲಿಂಗಸಂಬಂಧಿ ಸಾಕ್ಷರತಾ ಅಂತರವು ನಗರ ಪ್ರದೇಶದಲ್ಲಿರುವುದಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಅಧಿಕವಾಗಿದೆ. ಇಲ್ಲಿ ಎರಡು ಬಗೆಯ ಅಸಮಾನತೆಗಳು ನಮ್ಮ ಮುಂದಿವೆ. ಮೊದಲನೆಯದು ಗ್ರಾಮೀಣ ಮತ್ತು ನಗರ ನಡುವಿನ ಅಂತರವಾದರೆ ಎರಡನೆಯದು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಲಿಂಗಸಂಬಂಧಿ ಸಾಕ್ಷರತಾ ಅಂತರ. ಇವೆರಡನ್ನೂ ನಾವು ಏಕಕಾಲದಲ್ಲಿ ಎದುರಿಸಬೇಕಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಅಂತರಗಳನ್ನು ಗಮನಿಸಿದರೆ ಸಾಕಾಗುವುದಿಲ್ಲ. ಇಲ್ಲಿ ನಾವು ಪ್ರಜ್ಞಾಪೂರ್ವಕವಾಗಿ ಲಿಂಗಸಂಬಂಧಿ ಅಸಮಾನತೆಗಳನ್ನು ಗಮನಿಸಬೇಕು. ಅದರ ನಿವಾರಣೆಗೂ ಪ್ರಯತ್ನಿಸಬೇಕಾಗುತ್ತದೆ. ಹಾಗೆ ನೋಡಿದರೆ ಕರ್ನಾಟಕದಲ್ಲಿ ಗ್ರಾಮೀಣ ಮಹಿಳೆಯರ ಸಾಕ್ಷರತಾ ಪ್ರಮಾಣ ೨೦೦೧ರಲ್ಲಿಯೂ ಶೇ.೫೦ ಮೀರಿಲ್ಲ.

ಗ್ರಾಮೀಣ ಪರಿಶಿಷ್ಟ ಮಹಿಳೆಯರ ಸಾಕ್ಷರತಾ ಪ್ರಮಾಣ

ನಮ್ಮ ಸಂದರ್ಭದಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಂತ ತೀವ್ರತರವಾದ ದುಸ್ಥಿತಿಯನ್ನು ಅನುಭವಿಸುತ್ತಿರುವವರೆಂದರೆ ಗ್ರಾಮೀಣ ಪರಿಶಿಷ್ಟ ಮಹಿಳೆಯರು. ಇದನ್ನು ಸಾಕ್ಷರತೆಗೆ ಸಂಬಂಧಿಸಿದಂತೆ ಇಲ್ಲಿ ತೋರಿಸಲಾಗಿದೆ.

ಸಾಮಾಜಿಕ ಗುಂಪುವಾರು ಮಹಿಳೆಯರ ಸಾಕ್ಷರತಾ ಪ್ರಮಾಣ: ೨೦೦೧

ಕೋಷ್ಟಕ:

ಕ್ರ.ಸಂ. ಗ್ರಾಮೀಣ ಮಹಿಳೆಯರ ಸಾಕ್ಷರತಾ ಪ್ರಮಾಣ ೨೦೦೧
ವಿವರಗಳು ಸಾಕ್ಷರತಾ ಪ್ರಮಾಣ(ಶೇ)
ಗ್ರಾಮೀಣ ಒಟ್ಟು ಮಹಿಳೆಯರು ಶೇ.೪೮.೦೧
ಗ್ರಾಮೀಣ ಪರಿಶಿಷ್ಟ ಜಾತಿ ಮಹಿಳೆಯರು ಶೆ.೩೫.೫೬
ಗ್ರಾಮೀಣ ಪರಿಶಿಷ್ಟ ಪಂಗಡ ಮಹಿಳೆಯರು ಶೇ.೩೩.೩೧

ಮೂಲ: ಸೆನ್ಸಸ್‌ಆಫ್‌ಇಂಡಿಯಾ-೨೦೦೧. ಕರ್ನಾಟಕ. ಸಿರೀಸ್‌೩೦. ಪ್ರೈಮರಿ ಸೆನ್ಸಸ್‌ಅಬ್‌ಸ್ಟ್ರಾಕ್ಟ್‌ ಡೈರಕ್ಟಟೊರೇಟ್‌ಆಫ್‌ಸೆನ್ಸಸ್‌ಆಫರೇಶನ್‌, ಕರ್ನಾಟಕ. ಪುಟಗಳು:೦

ಕೋಷ್ಟಕ ೯ ರಲ್ಲಿ ತೋರಿಸಿರುವಂತೆ ನಮ್ಮ ಸಮಾಜದ ಸಂದರ್ಭದಲ್ಲಿ ಸಾಕ್ಷರತೆಯು ಸಾಮಾಜಿಕ ಶ್ರೇಣೀಕರಣಕ್ಕೆ ಅನುಗುಣವಾಗಿದೆ. ಒಟ್ಟು ಮಹಿಳೆಯರದ್ದು ಶೇ.೪೮.೦೧ರಷ್ಟಾದರೆ ಪ.ಜಾ. ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ.೩೫.೫೬. ಆದರೆ ಗ್ರಾಮೀಣ ಪರಿಶಿಷ್ಟ ಪಂಗಡ ಮಹಿಳೆಯರ ಸಾಕ್ಷರತಾ ಪ್ರಮಾಣ ೨೦೦೧ರಲ್ಲಿ ಶೆ. ೩೩.೩೧. ಇಲ್ಲಿ ನೀಡಿರುವ ಅಂಕಿಗಳು ಇಡೀ ಕರ್ನಾಟಕಕ್ಕೆ ಸಂಬಂಧಿಸಿವೆ. ಇದಕ್ಕೆ ಪ್ರತಿಯಾಗಿ ಜಿಲ್ಲಾ ಮಟ್ಟದಲ್ಲಿ ಇದನ್ನು ಪರಿಗಣಿಸಿದರೆ ನಮಗೆ ಆತಂಕಕಾರಿ ಸಂಗತಿಯು ಎದುರಾಗುತ್ತವೆ. ಉದಾಹರಣೆಗೆ ರಾಯಚೂರು ಜಿಲ್ಲೆಯ ಗ್ರಾಮೀಣ ಪರಿಶಿಷ್ಟ ಜಾತಿ ಮಹಿಳೆಯರ ಸಾಕ್ಷರತಾ ಪ್ರಮಾಣ ೨೦೦೧ರಲ್ಲಿ ಶೆ. ೨೦.೫೬ರಷ್ಟಾದರೆ ಅಲ್ಲಿನ ಗ್ರಾಮೀಣ ಪರಿಶಿಷ್ಟ ಪಂಗಡ ಮಹಿಳೆಯರ ಸಾಕ್ಷರತಾ ಪ್ರಮಾಣ ೨೦೦೧ರಲ್ಲಿ ಶೇ. ೧೫.೭೩. ಈ ಎಲ್ಲ ಸಂಗತಿಗಳು ತೀವ್ರ ನೀತಿ-ನಿರ್ದೇಶನ ಹೊಳಹುಗಳನ್ನು ಹೊಂದಿವೆ.

ಭಾಗ ೬ – ಮಹಿಳೆಯರ ಸಾಕ್ಷರತೆ: ಪ್ರಾದೇಶಿಕ ನೆಲೆಗಳು

ಜೀನ್‌ಡ್ರೀಜ್‌ಮತ್ತು ಅಮರ್ತ್ಯಸೆನ್‌ರಚಿಸಿರುವ ಭಾರತ ಕುರಿತ ಪ್ರಸಿದ್ಧ ಕೃತಿಯಲ್ಲಿ(೨೦೦೨) ತೋರಿಸಿರುವಂತೆ ಆರ್ಥಿಕವಾಗಿ ಹಿಂದುಳಿದಿರುವ ಪ್ರದೇಶಗಳಲ್ಲಿ ಲಿಂಗ ಅಸಮಾನತೆಯು ಆರ್ಥಿಕವಾಗಿ ಮುಂದುವರಿದ ಪ್ರದೇಶಗಳಲ್ಲಿರುವುದಕ್ಕಿಂತ ಅಧಿಕವಾಗಿರುತ್ತದೆ. ಇದಕ್ಕೆ ಅವರು ನೀಡುವ ಉದಾಹರಣೆಗಳೆಂದರೆ ಭಾರತದ ‘ಬಿಮಾರು’ರಾಜ್ಯಗಳೆಂದು ಹೆಸರು ಪಡೆದಿರುವ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ. ಈ ನಾಲ್ಕು ರಾಜ್ಯಗಳ ಮಹಿಳಾ ಜನಸಂಖ್ಯೆಯು ದೇಶದ ಒಟ್ಟು ಮಹಿಳಾ ಜನಸಂಖ್ಯೆಯಲ್ಲಿ ಶೇ. ೩೫.೧೭ರಷ್ಟಿದ್ದರೆ ದೇಶದ ಒಟ್ಟು ಮಹಿಳಾ ಸಾಕ್ಷರರಲ್ಲಿ ಬಿಮಾರು ರಾಜ್ಯಗಳ ಮಹಿಳಾ ಸಾಕ್ಷರರ ಪ್ರಮಾಣ ಶೇ. ೨೬.೪೬ರಷ್ಟಿದೆ ಮತ್ತು ದೇಶದ ಒಟ್ಟು ಮಹಿಳಾ ಅನಕ್ಷರಸ್ಥರಲ್ಲಿ ಬಿಮಾರು ರಾಜ್ಯಗಳ ಮಹಿಳಾ ಅನಕ್ಷರಸ್ಥರ ಪ್ರಮಾಣ ಶೇ. ೪೨.೩೮ರಷ್ಟಿದೆ. ಆದರೆ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಕರ್ನಾಟಕಗಳ ಚಿತ್ರ ಬಿಮಾರು ರಾಜ್ಯಗಳಿಗೆ ಹೋಲಿಸಿದರೆ ಸಂಪೂರ್ಣವಾಗಿ ಭಿನ್ನವಾಗಿದೆ. ಈ ನಾಲ್ಕು ರಾಜ್ಯಗಳಲ್ಲಿನ ಮಹಿಳಾ ಜನಸಂಖ್ಯೆಯು ದೇಶದ ಒಟ್ಟು ಮಹಿಳಾ ಜನಸಂಖ್ಯೆಯಲ್ಲಿ ಶೇ. ೨೨.೨೩ರಷ್ಟಿದೆ. ಆದರೆ ದೇಶದ ಮಹಿಳಾ ಅಕ್ಷರಸ್ಥರಲ್ಲಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಮಹಿಳಾ ಅಕ್ಷರಸ್ಥರ ಪ್ರಮಾಣ ಶೇ.೨೬.೫೬. ದೇಶದ ಒಟ್ಟು ಅನಕ್ಷರಸ್ಥ ಮಹಿಳೆಯರಲ್ಲಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಮಹಿಳಾ ಅನಕ್ಷರಸ್ಥರ ಪಾಲು ಕೇವಲ ಶೇ. ೧೯.೨೨. ಸುಮಾರು ರಾಜ್ಯಗಳಲ್ಲಿ ಅಕ್ಷರಸ್ಥ ಮಹಿಳೆಯರ ಸಂಖ್ಯೆಗಿಂತ (೫೯.೯೯೧,೪೯೪) ಅನಕ್ಷರಸ್ಥ ಮಹಿಳೆಯರ ಸಂಖ್ಯೆಯು(೮೧,೮೨೨,೪೧೮) ಅಧಿಕವಾಗಿದ್ದರೆ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಅಕ್ಷರಸ್ಥ ಮಹಿಳೆಯರ ಸಂಖ್ಯೆಯು (೬೦,೨೭೦,೩೯೨) ಅನಕ್ಷರಸ್ಥ ಮಹಿಳೆಯರ ಸಂಖ್ಯೆಗಿಂತ (೩೭,೦೯೪,೩೩೪) ಅಧಿಕವಿದೆ. ಸಾಕ್ಷರತೆಗೆ ಸಂಬಂಧಿಸಿದ ಪ್ರಾದೇಶಿಕ ಆಯಾಮಗಳನ್ನು ಅಗತ್ಯವಾಗಿ ಪರಿಗಣಿಸಬೇಕಾಗುತ್ತದೆ. ಅಲ್ಲದಿದ್ದರೆ ಅನಕ್ಷರತೆಯನ್ನು ಹೋಗಲಾಡಿಸುವುದು ಸಾಧ್ಯವಾಗುವುದಿಲ್ಲ. ಕರ್ನಾಟಕದಲ್ಲೂ ಸಾಕ್ಷರತೆಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳಿವೆ. ಆದರೆ ಸಾಕ್ಷರತೆಗೆ ಸಂಬಂಧಿಸಿದ ಎಲ್ಲ ಬಗೆಯ ಅಸಮಾನತೆಗಳನ್ನು ಸರ್ಕಾರ ಮತ್ತು ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೋಷ್ಟಕ-೧೦ರಲ್ಲಿ ಕರ್ನಾಟಕ ದಲ್ಲಿನ ಸಾಕ್ಷರತೆಗೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆಯ ಸ್ವರೂಪವನ್ನು ತೋರಿಸಲಾಗಿದೆ.

ಕರ್ನಾಟಕದ ಮಹಿಳಾ ಸಾಕ್ಷರತೆಯ ಪ್ರಾದೇಶಿಕ ಸ್ವರೂಪ ೨೦೦೧

ಕೋಷ್ಟಕ ೧೦

ಕ್ರ.ಸಂ ವಿವರಗಳು ರಾಜ್ಯದ ಜಿಲ್ಲೆಗಳು ಹಿಂದುಳಿದ ಏಳು (ಲಕ್ಷಗಳಲ್ಲಿ) ಕರ್ನಾಟಕ ರಾಜ್ಯ (ಲಕ್ಷಗಳಲ್ಲಿ)
೧. ಒಟ್ಟು ಮಹಿಳಾ ಜನಸಂಖ್ಯೆ ೬೩.೮೬ ೨೫೯.೫೨
೨. ಒಟ್ಟು ಮಹಿಳಾ ಜನಸಂಖ್ಯೆ (ಏಳು ವರ್ಷಕ್ಕೆ ಮೇಲ್ಪಟ್ಟು) ೫೩.೪೭ ೨೨೪.೬೧
೩. ಒಟ್ಟು ಮಹಿಳಾ ಅಕ್ಷರಸ್ಥರು ೨೨.೬೪ ೧೨೭.೭೪
೪. ಒಟ್ಟು ಮಹಿಳಾ ಅನಕ್ಷರಸ್ಥರು ೩೦.೮೩ ೯೬.೮೭
೫. ಒಟ್ಟು ಮಹಿಳಾ ಸಾಕ್ಷರತೆ ಪ್ರಮಾಣ (ಶೇ.) ೪೨.೩೩ ೫೬.೮೭

ಮೂಲ: ಸೆನ್ಸಸ್‌ಆಫ್‌ಇಂಡಿಯಾ: ೨೦೦೧. ಕರ್ನಾಟಕ ಸಿರೀಸ್‌೩೦ ಪ್ರೈಮರಿ ಸೆನ್ಸ್‌ಸ್‌ಅಬ್‌ಸ್ಟ್ರಾಕ್ಟ್‌ಡೈರೆಕ್ಟರೇಟ್‌ಆಫ್‌ಸೆನ್ಸ್ಸ್‌ಸ್‌ಆಪರೇಶನ್ಸ್‌, ಕರ್ನಾಟಕ.

ಡಾ. ಡಿ.ಎಂ. ನಂಜುಂಡಪ್ಪ ಸಮಿತಿ(೨೦೦೨) ಮತ್ತು ಕರ್ನಾಟಕ ಮಾನವ ಅಭಿವೃದ್ಧಿ ವರದಿಗಳಲ್ಲಿ(೧೯೯೯, ೨೦೦೬) ದೃಢಪಟ್ಟಿರುವಂತೆ ನಮ್ಮ ರಾಜ್ಯದಲ್ಲಿ ಅತ್ಯಂತ ಹಿಂದುಳಿದಿರುವ ಜಿಲ್ಲೆಗಳೆಂದರೆ ಬಾಗಲಕೋಟೆ, ವಿಜಾಪುರ, ಬೀದರ್, ಗುಲಬರ್ಗಾ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ. ಈ ಏಳು ಜಿಲ್ಲೆಗಳಲ್ಲಿ  ಮಹಿಳೆಯರ ಸ್ಥಿತಿಗತಿಗಳು ರಾಜ್ಯಮಟ್ಟದಲ್ಲಿರುವ ಮಹಿಳೆಯರ ಸ್ಥಿತಿಗತಿಗಳಿಗಿಂತ ಅತ್ಯಂತ ಕೆಳಮಟ್ಟದಲ್ಲಿರುವುದು ಅಧ್ಯಯನಗಳಿಂದ ತಿಳಿಯುತ್ತದೆ. ರಾಜ್ಯದ ಒಟ್ಟು ಮಹಿಳೆಯರ ಜನಸಂಖ್ಯೆಯಲ್ಲಿ ಹಿಂದುಳಿದ ಏಳು ಜಿಲ್ಲೆಗಳ ಮಹಿಳಾ ಜನಸಂಖ್ಯೆಯ ಪ್ರಮಾಣ ಶೇ.೨೪.೬೧.

ಸಾಮಾಜಿಕ ಗುಂಪುವಾರು ಸಾಕ್ಷರತಾ ಪ್ರಮಾಣ: ಪ್ರಾದೇಶಿಕ ಸ್ವರೂಪ:೨೦೦೧

ಕೋಷ್ಟಕ ೧೧

ಕ್ರ.ಸಂ. ವಿವರಗಳು ರಾಜ್ಯದ ಏಳು ಹಿಂದುಳಿದ ಜಿಲ್ಲೆಗಳು ಕರ್ನಾಟಕ ರಾಜ್ಯ
೧. ಒಟ್ಟು ದಲಿತ ಮಹಿಳಾ ಜನಸಂಖ್ಯೆ ೧,೮೪೨,೭೧೮ ೫,೯೩೧,೯೩೩
೨. ಒಟ್ಟು ದಲಿತ ಮಹಿಳಾ ಜನಸಂಖ್ಯೆ ೧,೫೦೭,೬೧೮ ೫,೦೨೭,೯೫೮
(ಏಳು ವರ್ಷಕ್ಕೆ ಮೇಲ್ಪಟ್ಟು)
೩. ಒಟ್ಟು ದಲಿತ ಅಕ್ಷರಸ್ಥ ಮಹಿಳೆಯರು ೪೨೫,೯೧೩ ೨,೦೨೩,೪೩೯
೪. ಒಟ್ಟು ದಲಿತ ಅನಕ್ಷರಸ್ಥ ಮಹಿಳೆಯರು ೧,೦೮೧,೭೦೫ ೩,೦೦೪,೫೧೯
೫. ಒಟ್ಟು ಮಹಿಳಾ ಸಾಕ್ಷರತಾ ಪ್ರಮಾಣ(ದಲಿತ) ಶೇ. ೨೮.೨೫ ಶೇ. ೪೦.೨೪
೬. ಒಟ್ಟು ಮಹಿಳಾ ಸಾಕ್ಷರತಾ ಪ್ರಮಾಣ (ದಲಿತ+ದಲಿತೇತರ) ಶೇ. ೪೨.೩೪ ಶೇ. ೫೬.೮೭
೭. ಒಟ್ಟು ಮಹಿಳಾ ಸಾಕ್ಷರತಾ ಪ್ರಮಾಣ(ದಲಿತೇತರ) ಶೇ. ೪೭.೮೨ ಶೇ.೬೧.೬೭

ಮೂಲ: ಸೆನ್ಸಸ್‌ಆಫ್‌ಇಂಡಿಯಾ:೨೦೦೧. ಕರ್ನಾಟಕ-ಸಿರೀಶ್‌೩೦ ಪ್ರೈಮರಿ ಸೆನ್ಸಸ್‌ಅಬ್‌ಸ್ಟ್ರಾಕ್ಟ್‌, ಡೈರೆಕ್ಟರೇಟ್‌ಆಫ್‌ಸೆನ್ಸಸ್‌ಆಪರೇಶನ್ಸ್‌,

ಆದರೆ ಈ ಜಿಲ್ಲೆಗಳ ಅಕ್ಷರಸ್ಥ ಮಹಿಳೆಯರ ಪ್ರಮಾಣ ಮಾತ್ರ ಕೇವಲ ಶೇ. ೧೭.೭೨. ಇದಕ್ಕೆ ಪ್ರತಿಯಾಗಿ ರಾಜ್ಯದ ಒಟ್ಟು ಅನಕ್ಷರಸ್ಥರಲ್ಲಿ ಹಿಂದುಳಿದ ಏಳು ಜಿಲ್ಲೆಗಳ ಅನಕ್ಷರಸ್ಥ ಮಹಿಳೆಯರ ಪ್ರಮಾಣ ಶೇ. ೩೧.೮೩. ಈ ಜಿಲ್ಲೆಗಳ ಮಹಿಳಾ ಸಾಕ್ಷರತೆಯ ಪ್ರಮಾಣವು ರಾಜ್ಯದ ಮಹಿಳಾ ಸಾಕ್ಷರತಾ ಪ್ರಮಾಣದ ಶೇ.೭೪.೪೩ರಷ್ಟಿದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವ ಸಂಗತಿಯೆಂದರೆ ರಾಜ್ಯದಲ್ಲಿ ಅಕ್ಷರಸ್ಥ ಮಹಿಳೆಯರ ಸಂಖ್ಯೆಯು ಅನಕ್ಷರಸ್ಥ ಮಹಿಳೆಯರ ಸಂಖ್ಯೆಗಿಂತ ಅಧಿಕವಾಗಿದ್ದರೆ ರಾಜ್ಯದ ಏಳು ಹಿಂದುಳಿದ ಜಿಲ್ಲೆಗಳಲ್ಲಿ ಅಕ್ಷರಸ್ಥ ಮಹಿಳೆಯರ ಸಂಖ್ಯೆಯು ಅನಕ್ಷರಸ್ಥ ಮಹಿಳೆಯರ ಸಂಖ್ಯೆಗಿಂತ ಕಡಿಮೆಯಿದೆ.

ಕರ್ನಾಟಕದಲ್ಲಿ ದಲಿತ ಮಹಿಳೆಯರ ಸಾಕ್ಷರತೆಯ ಪ್ರಾದೇಶಿಕ ಸ್ವರೂಪ

ಕರ್ನಾಟಕದಲ್ಲಿನ ಮಹಿಳೆಯರ ಸಾಕ್ಷರತೆಗೆ ಸಂಬಂಧಿಸಿದ ಪ್ರಾದೇಶಿಕ ನೆಲೆಗಳ ಜಾತಿ ಸ್ವರೂಪವನ್ನು ಕೋಷ್ಟಕ-೧೦ ಮತ್ತು ೧೧ರಲ್ಲಿ ತೋರಿಸಲಾಗಿದೆ.

ಈ ಕೋಷ್ಟಕ-೧೦ ಮತ್ತು ೧೧ರಲ್ಲಿರುವ ಅಂಕಿಅಂಶಗಳು ತೋರಿಸುತ್ತಿರುವಂತೆ ರಾಜ್ಯಮಟ್ಟದಲ್ಲಿನಕ ಮಹಿಳಾ ಸಾಕ್ಷರತೆ ಮತ್ತು ಹಿಂದುಳಿದ ಜಿಲ್ಲೆಗಳಲ್ಲಿನ ಮಹಿಳಾ ಸಾಕ್ಷರತೆ ನಡುವೆ ತೀವ್ರ ಅಂತರವಿದೆ. ಅದೇ ರೀತಿಯಲ್ಲಿ ಹಿಂದುಳಿದ ಪ್ರದೇಶದೊಳಗೆ ದಲಿತ ಮಹಿಳೆಯರು ಮತ್ತು ದಲಿತೇತರ ಮಹಿಳೆಯರ ನಡುವೆಯೂ ಸಾಕ್ಷರತೆಗೆ ಸಂಬಂಧಿಸಿದಂತೆ ಅಂತರವಿದೆ. ರಾಜ್ಯದ ಏಳು ಹಿಂದುಳಿದ ಜಿಲ್ಲೆಗಳಲ್ಲಿ ದಲಿತ ಮಹಿಳೆಯರ ಸಾಕ್ಷರತೆ ೨೦೦೧ರಲ್ಲಿ ಕೇವಲ ಶೇ. ೨೮.೨೫. ರಾಜ್ಯಮಟ್ಟದಲ್ಲಿ ಇದು ಶೇ.೪೦.೨೪ರಷ್ಟಿದೆ. .ಈ ಎಲ್ಲ ಚರ್ಚೆಯ ತಥ್ಯವೆಂದರೆ ಸಾಕ್ಷರತೆಗೆ ಸಂಬಂಧಿಸಿದಂತೆ ಅತ್ಯಂತ ದುಸ್ಥಿತಿಯಲ್ಲಿರುವ ವರ್ಗವೆಂದರೆ ದಲಿತ ಮಹಿಳೆಯರು. ಅದರಲ್ಲೂ ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿನ ದಲಿತ ಮಹಿಳೆಯರ ಸಾಕ್ಷರತೆ ಪ್ರಮಾಣವು ಅತ್ಯಂತ ಕೆಳಮಟ್ಟದಲ್ಲಿದೆ. ಅದನ್ನು ಅಖಂಡವಾದಿ-ವಿಶ್ವಾತ್ಮಕ ನೀತಿಗಳಿಂದ ಪರಿಹರಿಸಲು ಸಾಧ್ಯವಿಲ್ಲ. ಅದಕ್ಕೆ ಪ್ರದೇಶ-ನಿರ್ದಿಷ್ಟ ಮತ್ತು ಜಾತಿ-ನಿರ್ದಿಷ್ಟ ನೀತಿಗಳ ಅಗತ್ಯವಿದೆ.

ಭಾಗ ೭ – ಮಹಿಳೆಯರ ಸಾಕ್ಷರತೆ ಮತ್ತು ಸಂತಾನೊತ್ಪತ್ತಿ ಹೊಣೆಗಾರಿಕೆ

ಮಹಿಳೆಯರ ಸಾಕ್ಷರತೆಯು ಪುರುಷರ ಸಾಕ್ಷರತೆಗಿಂತ ಕೆಳಮಟ್ಟದಲ್ಲಿರಲು ಬಹು ಮುಖ್ಯವಾದ ಕಾರಣವೆಂದರೆ ಅವರನ್ನು ಕೇವಲ ಸಂತಾನೋತ್ಪತ್ತಿ ಜವಾಬುದಾರಿಯನ್ನು ನಿರ್ವಹಿಸುವವರೆಂದು ಪರಿಭಾವಿಸಿ ಕೊಂಡಿರುವುದರಲ್ಲಿದೆ. ಇಂದು ಕರ್ನಾಟಕದಲ್ಲಿ ಬಾಲ್ಯ ವಿವಾಹಗಳು ತೀವ್ರವಾಗಿ ಕಡಿಮೆಯಾಗುತ್ತಿವೆ ವಿನಾ ಸಂಪೂರ್ಣವಾಗಿ ನಿರ್ಮೂಲನವಾಗಿಲ್ಲ. ನಮ್ಮ ರಾಜ್ಯದಲ್ಲಿ ಮಹಿಳೆಯರ ಶಾಸನಾತ್ಮಕ ಮದುವೆಯ ವಯಸ್ಸು ಹದಿನೆಂಟು ವರ್ಷಗಳು. ಆದರೆ ನಮ್ಮಲ್ಲಿ ಹದಿನೆಂಟು ವಯಸ್ಸು ತುಂಬುವುದಕ್ಕಿಂತ ಮೊದಲೇ ಮದುವೆಯಾಗುವ ಮಹಿಳೆಯರ ಪ್ರಮಾಣ ಅಗಾಧವಾಗಿದೆ ಮತ್ತು ಇದರಿಂದಾಗಿ ೧೫-೧೯ ವಯೋಮಾನದಲ್ಲಿ ತಾಯಂದಿರಾಗುವ ಮಹಿಳೆಯರ ಪ್ರಮಾಣವೂ ಅಧಿಕವಾಗಿದೆ. ಇದನ್ನು ಕೋಷ್ಟಕ ೧೨ ರಲ್ಲಿ ಕರ್ನಾಟಕದ ಜಿಲ್ಲೆಗಳಿಗೆ ಸಂಬಂಧಿಸಿದಂತೆ ನೀಡಲಾಗಿದೆ.

ಕರ್ನಾಟಕದಲ್ಲಿ ಮಹಿಳೆಯರ ಮದುವೆ ವಯಸ್ಸು ಮತ್ತು ಹರೆಯದಲ್ಲಿ ತಾಯಂದಿರಾಗುವ ಮಹಿಳೆಯರು:೨೦೦೭೨೦೦೮.

ಕೋಷ್ಟಕ ೧೨

ಕ್ರ.ಸಂ. ಜಿಲ್ಲೆಗಳು ವಾರ್ಷಿಕ ಒಟ್ಟು ಜನನಗಳಲ್ಲಿ ೧೫೧೯ ವಯೋಮಾನದಲ್ಲಿನ ಜನನಗಳ ಪ್ರಮಾಣ ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿಗೆ ಮದುವೆಯಾದ ಮಹಿಳೆಯರ ಪ್ರಮಾಣ
೧. ಬಾಗಲಕೋಟೆ ೨೬.೫೦ ೪೭.೫೦
೨. ಬೆಂಗಳೂರು (ಗ್ರಾ) ೧೮.೦೦ ೧೪.೮೦
೩. ಬೆಂಗಳೂರು (ನ) ೧೦.೯೦ ೧೦.೧೦
೪. ಬೆಳಗಾವಿ ೧೭.೩೦ ೪೪.೨೦
೫. ಬಳ್ಳಾರಿ ೨೪.೩೦ ೩೬.೩೦
೬. ಬೀದರ್ ೨೫.೯೦ ೨೭.೪೦
೭. ಬಿಜಾಪುರ ೩೦.೩೦ ೪೩.೧೦
೮. ಚಾಮರಾಜನಗರ ೨೫.೦೦ ೨೪.೪೦
೯. ಚಿಕ್ಕಮಗಳೂರು ೯ಲ.೮೦ ೩.೫೦
೧೦. ಚಿತ್ರದುರ್ಗ ೨೪.೩೦ ೨೭.೬೦
೧೧. ದಕ್ಷಿಣಕನ್ನಡ ೭.೦೦ ೫.೭೦
೧೨. ದಾವಣಗೆರೆ
೧೩. ಧಾರವಾಡ ೧೯.೫೦ ೨೧.೩೦
೧೪. ಗದಗ ೨೩.೫೦ ೩೨.೪೦
೧೫. ಗುಲಬರ್ಗಾ ೩೨.೨೦ ೪೧.೬೦
೧೬. ಹಾಸನ ೧೬.೪೦ ೩.೨೦
೧೭. ಹಾವೇರಿ ೨೨.೬೦ ೧೯.೭೦
೧೮. ಕೊಡಗು ೧೧.೩೦ ೭.೧೦
೧೯. ಕೋಲಾರ ೧೮.೮೦ ೧೮.೪೦
೨೦. ಕೊಪ್ಪಳ ೩೧.೭೦ ೪೪.೭೦
೨೧. ಮಂಡ್ಯ ೨೦.೮೦ ೨೧.೭೦
೨೨. ಮೈಸೂರು ೨೦.೩೦ ೧೪.೩೦
೨೩. ರಾಯಚೂರು ೩೦.೬೦ ೩೮.೭೦
೨೪. ಶಿವಮೊಗ್ಗ ೧೪.೭೦ ೮.೯೦
೨೫. ತುಮಕೂರು ೧೮.೫೦ ೧೮.೪೦
೨೬. ಉಡುಪಿ ೩.೨೦ ೨.೭೦
೨೭. ಉತ್ತರ ಕನ್ನಡ ರಾಜ್ಯ ಕರ್ನಾಟಕ ೧೭.೩೬ ೨೪.೯೦

ಮೂಲ : ಜಿಲ್ಲಾ ಮಟ್ಟದ ಕುಟುಂಬ ಘಟಕಗಳ ಸಮೀಕ್ಷೆ:೨೦೦೭-೨೦೦೮.(ಮೂರನೆಯ ಸುತ್ತು).

ಟಿಪ್ಪಣಿ : ಡಿಎಲ್‌ಎಚ್‌ಎಸ್‌ನ ೨೦೦೭-೦೮ನೆಯ(ಮೂರನೆಯ)ಸುತ್ತಿನಲ್ಲಿ ಕರ್ನಾಟಕ ರಾಜ್ಯದ ವಿವರಗಳಲ್ಲಿ ದಾವಣಗೆರೆ ಜಿಲ್ಲೆ ಕೈಬಿಟ್ಟು ಹೋಗಿದೆ. ಅಲ್ಲಿ ೨೬ ಜಿಲ್ಲೆಗಳ ಮಾಹಿತಿ ಮಾತ್ರ ದೊರೆಯುತ್ತದೆ.

ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿ ೧೮ ವರ್ಷಕ್ಕೆ ಮೊದಲೇ ಮದುವೆಯಾಗುವ ಮಹಿಳೆಯರ ಪ್ರಮಾಣ ಸರಾಸರಿ ಶೇ.೩೫ಕ್ಕಿಂತ ಅಧಿಕವಿದೆ. ಇದು ಬಾಗಲಕೋಟೆಯಲ್ಲಿ ಶೇ.೪೭ರಷ್ಟಿದ್ದರೆ ವಿಜಾಪುರ, ಬೆಳಗಾವಿ, ಗುಲಬರ್ಗಾ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಅದು ಶೇ.೪೦ಕ್ಕಿಂತ ಅಧಿಕವಾಗಿದೆ. ಅದೇ ರೀತಿಯಲ್ಲಿ ಒಟ್ಟು ಹುಟ್ಟುವ ಮಕ್ಕಳಲ್ಲಿ ೧೫-೧೯ ವಯೋಮಾನದ ತಾಯಂದಿರಿಗೆ ಹುಟ್ಟುವ ಮಕ್ಕಳ ಪ್ರಮಾಣ ರಾಜ್ಯದ ಹಿಂದುಳಿದ ಕೆಲವು ಜಿಲ್ಲೆಗಳಲ್ಲಿ ಶೇ.೩೫ಕ್ಕಿಂತ ಅಧಿಕವಾಗಿದೆ. ಮಹಿಳೆಯರ ಸಾಕ್ಷರತಾ ಪ್ರಮಾಣ ಕಡಿಮೆಯಿರಲು ಇವೆರಡು ಪ್ರಮುಖ ಕಾರಣಗಳಾಗಿವೆ. ಈ ಸಂಗತಿಯ ಹಿನ್ನೆಲೆಯಲ್ಲಿ ಮಹಿಳೆಯರ ಸಾಕ್ಷರತೆಯನ್ನು ಮತ್ತು ಲಿಂಗಸಂಬಂಧಿ ಅಸಮಾನತೆಯ ಪ್ರಶ್ನೆಯನ್ನು ಪರಿಗಣಿಸಬೇಕಾಗುತ್ತದೆ. ಲಿಂಗಸಂಬಂಧಿ ಸಾಕ್ಷರತಾ ಅಂತರವನ್ನು ನಿವಾರಿಸುವುದು ಸರಳವಾದ ಸಂಗತಿಯಲ್ಲ. ಅದು ದೇಶ/ಪ್ರದೇಶವೊಂದು ಯಾವ ಬಗೆಯ ಅಭಿವೃದ್ಧಿಯನ್ನು ಸಾಧಿಸಿಕೊಂಡಿದೆ ಎಂಬುದನ್ನು ಅವಲಂಬಿಸಿದೆ. ಎಲ್ಲಿ ಅಭಿವೃದ್ಧಿ ವಿನ್ಯಾಸವು ವರಮಾನ ಕೇಂದ್ರಿತವಾಗಿರುತ್ತದೋ ಅಲ್ಲಿ ಅಭಿವೃದ್ಧಿಯು ಉನ್ನತ ಮಟ್ಟಕ್ಕೇರಿದಂತೆ ಲಿಂಗಸಂಬಂಧಿ ಅಸಮಾನತೆಯೇನು ಕಡಿಮೆಯಾಗುವುದಿಲ್ಲ. ಎಲ್ಲಿ ಅಭಿವೃದ್ಧಿಯು ಧಾರಣಾ ಸಾಮರ್ಥ್ಯವನ್ನು ವರ್ಧಿಸುವ ವಿನ್ಯಾಸದಲ್ಲಿರುತ್ತದೋ ಅಲ್ಲಿ ಅಭಿವೃದ್ಧಿಯು ಉನ್ನತ ಮಟ್ಟಕ್ಕೇರಿದಂತೆ ಲಿಂಗ ಅಸಮಾನತೆ ಮತ್ತು ಲಿಂಗ ಸಂಬಂಧಿ ಸಾಕ್ಷರತಾ ಅಸಮಾನತೆಯು ಕಡಿಮೆಯಾಗುತ್ತದೆ . ಈ ಸಂಕೀರ್ಣ ಸಂಗತಿಗೆ ಉದಾಹರಣೆಯೆಂದರೆ ಕರ್ನಾಟಕದ ಶಿವಮೊಗ್ಗ ಮತ್ತು ಬಳ್ಳಾರಿ ಜಿಲ್ಲೆಗಳ ಅಭಿವೃದ್ಧಿ ವಿನ್ಯಾಸಗಳು. ಇದನ್ನು ಕೆಳಗಿನ ಕೋಷ್ಟಕ-೧೩ರಲ್ಲಿ ತೋರಿಸಿದೆ; ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಯು ಧಾರಣ ಸಾಮರ್ಥ್ಯ ವರ್ಧನಾ ಮಾದರಿಯಲ್ಲಿದ್ದರೆ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಯು ವರಮಾನ ಕೇಂದ್ರಿತ ವಿನ್ಯಾಸದಲ್ಲಿದೆ. ವರಮಾನದಲ್ಲಿ ಬಳ್ಳಾರಿ ಜಿಲ್ಲೆಯು ಶಿವಮೊಗ್ಗಕ್ಕೆ ಸಾಪೇಕ್ಷವಾಗಿ ಅತ್ಯಂತ ಮುಂದುವರಿದ ಜಿಲ್ಲೆಯಾಗಿದೆ. ಅದರ ತಲಾ ವರಮಾನವು ಶಿವಮೊಗ್ಗ ಜಿಲ್ಲೆಯ ತಲಾ ವರಮಾನದ ಶೆ.೧೩೭.೫೫ರಷ್ಟಿದೆ. ಶಿವಮೊಗ್ಗ ಜಿಲ್ಲೆಯ ತಲಾ ವರಮಾನವು ಬಳ್ಳಾರಿ  ಜಿಲ್ಲೆಯ ತಲಾ ವರಮಾನದ ಶೇ. ೭೨.೭೦ರಷ್ಟಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಶಿವಮೊಗ್ಗಕ್ಕೆ ಹೋಲಿಸಿದರೆ ಬಳ್ಳಾರಿ ಜಿಲ್ಲೆಯು ಶ್ರೀಮಂತ ಜಿಲ್ಲೆಯಾಗಿದೆ. ಬಳ್ಳಾರಿ ಜಿಲ್ಲೆಗೆ ಹೋಲಿಸಿದರೆ ಶಿವಮೊಗ್ಗವು ಬಡ ಜಿಲ್ಲೆಯಾಗಿದೆ.

ಶಿವಮೊಗ್ಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮಹಿಳೆಯರ ಸ್ಥಿತಿಗತಿಯ ತುಲನಾತ್ಮಕ ಚಿತ್ರ

ಕೋಷ್ಟಕ೧೩

ಕ್ರ.ಸಂ. ಸೂಚಿಗಳು ಶಿವಮೊಗ್ಗ ಬಳ್ಳಾರಿ
ಒಟ್ಟು ಜಿಲ್ಲಾ ಆಂತರಿಕ ತಲಾ ಉತ್ಪನ್ನ (ಚಾಲ್ತಿ ಬೆಲೆಗಳಲ್ಲಿ): ೨೦೦೭-೨೦೦೮೯ ರೂ.೩೪೬೧೧ ರೂ.೪೭೬೦೭
೨. ಮಹಿಳೆಯರ ಸಾಕ್ಷರತಾ ಪ್ರಮಾಣ (೨೦೦೧) ಶೇ. ೬೬.೮೮ ಶೆ.೪೫.೨೮
೩. ಮಹಿಳೆಯರು ಮತ್ತು ಪುರುಷರ ಸಾಕ್ಷರತೆ ನಡುವಿನ ಅಂತರ (೨೦೦೧). (ಶೇಕಡಾಂಶಗಳು) ಶೇ ೧೫.೧೩ ಶೇ. ೨೩.೯೨
೪. ಹದಿನೆಂಟು ವರ್ಷಕ್ಕೆ ಮೊದಲೇ ಮದುವೆಯಾಗುವ ಮಹಿಳೆಯರ ಪ್ರಮಾಣ (೨೦೦೭-೦೮) ಶೇ ೮.೯೦ ಶೇ. ೩೬.೩೦
೫. ಜನಸಂಖ್ಯಾ ಬೆಳವಣಿಗೆ ಪ್ರಮಾಣ (ವಾರ್ಷಿಕ): ೧೯೯೧-೨೦೦೧ ಶೇ. ೧.೨೯ ಶೇ ೨.೨೩

ಮೂಲ: ೧) ಕರ್ನಾಟಕ ಸರ್ಕಾರ.೨೦೧೦. ಆರ್ಥಿಕ ಸಮೀಕ್ಷೆ: ೨೦೦೯-೨೦೧೦.
೨). ಕರ್ನಾಟಕ ಸರ್ಕಾರ ೨೦೦೬. ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ ವರದಿ-೨೦೦೫.

ಆದರೆ ಬಳ್ಳಾರಿ ಜಿಲ್ಲೆಯು ವರಮಾನದಲ್ಲಿ ಶ್ರೀಮಂತವಾಗಿದ್ದರೂ ಅಲ್ಲಿನ ಮಹಿಳೆಯರ ಬದುಕು ಶ್ರೀಮಂತವಾಗಿಲ್ಲ (ಸಮೃದ್ಧವಾಗಿಲ್ಲ). ಇದಕ್ಕೆ ಪ್ರತಿಯಾಗಿ ಶಿವಮೊಗ್ಗ ಜಿಲ್ಲೆಯ ವರಮಾನವು ಬಳ್ಳಾರಿಗೆ ಹೋಲಿಸಿದರೆ ಕೆಳಮಟ್ಟದಲ್ಲಿದ್ದರೂ ಅಲ್ಲಿ ಮಹಿಳೆಯರ ಬದುಕು ಸಮೃದ್ಧವಾಗಿಲ್ಲದಿದ್ದರೂ ಉತ್ತಮವಾಗಿದೆ. ಆದ್ದರಿಂದ ಪ್ರದೇಶವೊಂದು ಅಭಿವೃದ್ಧಿಯನ್ನು ಸಾಧಿಸಿಕೊಂಡು ಬಿಟ್ಟರೆ ಅಲ್ಲಿ ತನ್ನಷ್ಟಕ್ಕೆ ತಾನೆ ಮಹಿಳೆಯರ ಬದುಕು ಉತ್ತಮವಾಗುವುದಿಲ್ಲ. ಎಲ್ಲಿ ಅಭಿವೃದ್ಧಿಯು ಲಿಂಗ ಸ್ಪಂದಿಯಾಗಿರುತ್ತದೋ, ಎಲ್ಲಿ ಅದು ಜನರ ಧಾರಣಾ ಸಾಮರ್ಥ್ಯವನ್ನು ವಿಸ್ತೃತಗೊಳಿಸುವ ರೀತಿಯಲ್ಲಿರುತ್ತದೋ ಅಲ್ಲಿ ಮಾತ್ರ ಅಭಿವೃದ್ಧಿಯು ಮಹಿಳೆಯರ ಬದುಕನ್ನು ಉತ್ತಮ ಪಡಿಸುವುದು ಸಾಧ್ಯ.

ಸಾರಾಂಶ ಮತ್ತು ಅಧ್ಯಯನದ ತಥ್ಯಗಳು

ಈ ಅಧ್ಯಯನ ಪ್ರಬಂಧದಲ್ಲಿ ಬಹಳ ಮುಖ್ಯವಾಗಿ ಮಹಿಳೆಯರ ಸಾಕ್ಷರತೆಯನ್ನು ಮತ್ತು ಅವರ ಶಿಕ್ಷಣವನ್ನು ಸಾಂಪ್ರದಾಯಿಕವಾಗಿ ಹೇಗೆ ಪರಿಭಾವಿಸಿಕೊಳ್ಳಲಾಗಿದೆ ಮತ್ತು ಅದನ್ನು ಅಭಿವೃದ್ಧಿಯ ದೃಷ್ಟಿಯಿಂದ ಹೇಗೆ ಪರಿಭಾವಿಸಿಕೊಳ್ಳಬೇಕು ಎಂಬುದನ್ನು ವಿವರವಾಗಿ ಚರ್ಚಿಸಲಾಗಿದೆ.

ಸಾಕ್ಷರತೆಯನ್ನು, ಅದರಲ್ಲೂ ಮಹಿಳೆಯರ ಸಾಕ್ಷರತೆ ಮತ್ತು ಶಿಕ್ಷಣವನ್ನು ಅಭಿವೃದ್ಧಿಯ ‘ಸಾಧನ’ವಾಗಿ ಮಾತ್ರ ಪರಿಭಾವಿಸಿಕೊಂಡು ಬರಲಾಗಿದೆ. ಮಹಿಳೆಯೊಬ್ಬಳಿಗೆ ಮಹಿಳೆಯಾಗಿ ಸಾಕ್ಷರತೆ ಮತ್ತು ಶಿಕ್ಷಣ ಅಗತ್ಯವೆಂಬ ಸಂಗತಿಯನ್ನು ಒಪ್ಪಿಕೊಳ್ಳಲು ಸಮಾಜ ಇಂದಿಗೂ ಸಿದ್ಧವಿಲ್ಲ. ಮೊದಲ ಬಗೆಯ ದೃಷ್ಟಿಕೋನವನ್ನು ಅಮರ್ತ್ಯಸೆನ್‌‘ಉಪಕರಣ ವಾದಿ’ ದೃಷ್ಟಿಕೋನವೆಂದು ಕರೆಯುತ್ತಾನೆ. ಅಮರ್ತ್ಯಸೆನ್‌, ಜೀನ್‌ಡ್ರೀಜ್‌, ಮಾರ್ತನುಸ್‌ಬೌಮ್‌, ಮೆಹಬೂಬ್‌ಉಲ್‌ಹಕ್‌, ಇರನಿವಾನ್‌ಸ್ಟೆವರೆನ್‌, ಡೆಸ್‌ಗ್ಯಾಸ್ಟರ್, ಕರುಣಾ ಚನನ ಮುಂತಾದವರು ಸಾಕ್ಷರತೆಯನ್ನು ಮತ್ತು ಶಿಕ್ಷಣವನ್ನು ಅಭಿವೃದ್ಧಿಯ ಸಾಧನ ಹಾಗೂ ಸಾಧ್ಯವೆಂಬ ವಿಚಾರವನ್ನು ಪ್ರತಿಪಾದಿಸುತ್ತಿದ್ದಾರೆ. ಈ ಸಂಗತಿಯನ್ನು ಇಲ್ಲಿ ವಿವರವಾಗಿ ಚರ್ಚಿಸಲಾಗಿದೆ.

ಅಮರ್ತಸೆನ್‌ರೂಪಿಸಿರುವ ಧಾರಣಾ ಸಾಮರ್ಥ್ಯ ಆಧರಿತ ಅಭಿವೃದ್ಧಿ ಸಿದ್ಧಾಂತದ ಹಿನ್ನೆಲೆಯಲ್ಲಿ ಮಹಿಳೆಯರ ಸಾಕ್ಷರತೆ ಮತ್ತು ಅವರ ಶಿಕ್ಷಣಗಳ ಅಗತ್ಯವನ್ನು ವಿಶ್ಲೇಷಿಸಲಾಗಿದೆ. ಮಹಿಳೆಯು ಮಹಿಳೆಯಾಗಲು ಸಾಕ್ಷರತೆ ಮತ್ತು ಅವರ ಶಿಕ್ಷಣಗಳ ಅಗತ್ಯವನ್ನು ವಿಶ್ಲೇಷಿಸಲಾಗಿದೆ. ಅದು ಅವಳ ಬದುಕನ್ನು ಉತ್ತಮಪಡಿಸುವ ಸಾಧನವಾಗಿಯೂ ಮುಖ್ಯ ಮತ್ತು ಅದು ಒಂದು ದೃಷ್ಟಿಯಿಂದ ಅವಳ ಬದುಕೇ ಆಗಿದೆ ಎಂಬುದನ್ನು ಸಾಧಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

ಇಲ್ಲಿ ಮಹಿಳೆಯರ ಸಾಕ್ಷರತೆ ಕುರಿತ ಚರ್ಚೆಯನ್ನು ಕೇವಲ ವರ್ಗ ಮತ್ತು ಲಿಂಗದ ನೆಲೆಯಲ್ಲಿ ಮಾತ್ರ ನಡೆಸುವುದರ ಜೊತೆಗೆ ಅದನ್ನು ಜಾತಿಯ ನೆಲೆಯಲ್ಲೂ ನಡೆಸಲಾಗಿದೆ. ದಲಿತ ಮಹಿಳೆ ಮತ್ತು ದಲಿತ ಪುರುಷರ ನಡುವಿನ ಸಾಕ್ಷರತೆಗೆ ಸಂಬಂಧಿಸಿದ ಅಂತರವನ್ನು ವಿಶ್ಲೇಷಿಸುವುದರ ಜೊತೆಗೆ ದಲಿತ ಮಹಿಳೆ ಮತ್ತು ದಲಿತೇತರ ಮಹಿಳೆಯರ ನಡುವಿನ ಸಾಕ್ಷರತೆಗೆ ಸಂಬಂಧಿಸಿದ ಅಂತರಗಳನ್ನು ಇಲ್ಲಿ ವಿವರವಾಗಿ ಪರಿಶೀಲಿಸಬೇಕಗಿದೆ. ದಲಿತೇತರ ಮಹಿಳೆಯರ ದೃಷ್ಟಿಯಿಂದ ಅನಕ್ಷರತೆಯೆಂಬುದು ಅಸ್ವಾತಂತ್ರ್ಯವಾಗಿದೆ. ಆದರೆ ದಲಿತ ಮಹಿಳೆಯರ ದೃಷ್ಟಿಯಿಂದ ಅದು ಅಸ್ವಾತಂತ್ರ್ಯದ ಸಂಗತಿಯೂ ಹೌದು ಮತ್ತು ಅದು ಜಾತಿಯ ಪ್ರಶ್ನೆಯೂ ಆಗಿದೆ. ಈ ಸಂಗತಿಯನ್ನು ಇಲ್ಲಿ ಮುಖ್ಯ ಪ್ರಮೇಯವನ್ನಾಗಿ ಮಾಡಿಕೊಳ್ಳಲಾಗಿದೆ. ಮಹಿಳೆಯರ ಸಾಕ್ಷರತೆ ಮತ್ತು ಶಿಕ್ಷಣವನ್ನು ಲಿಂಗಸಂಬಂಧಿ ನೆಲೆಯಿಂದ ಹಾಗೂ ಜಾತಿ ಸಂಬಂಧಿ ನೆಲೆಯಿಂದಲೂ ಪರಿಭಾವಿಸಿಕೊಳ್ಳುವ ಅಗತ್ಯವನ್ನು ಇಲ್ಲಿ ತೋರಿಸಲಾಗಿದೆ.

ಸಾಕ್ಷರತೆಯ ದೃಷ್ಟಿಯಿಂದ ಅತ್ಯಂತ ದುಸ್ಥಿತಿಯಲ್ಲಿರುವ ವರ್ಗವೆಂದರೆ ದಲಿತ ಮಹಿಳೆಯರು ಎಂಬುದನ್ನು ನಿದರ್ಶನಾತ್ಮಕವಾಗಿ ಇಲ್ಲಿ ತೋರಿಸಲಾಗಿದೆ. ದಲಿತರ ಮತ್ತು ದಲಿತ ಮಹಿಳೆಯರ ಸ್ಥಿತಿಗತಿಯನ್ನು ಒಟ್ಟು ಜನಸಂಖ್ಯೆಗೆ ಸಂಬಂಧಿಸಿದಂತೆ ಪರಿಭಾವಿಸಿಕೊಳ್ಳುವುದಕ್ಕೆ ಪ್ರತಿಯಾಗಿ ದಲಿತರು ಮತ್ತು ದಲಿತೇತರರಿಗೆ ಸಂಬಂಧಿಸಿದಂತೆ ಪರಿಭಾವಿಸಿಕೊಳ್ಳುವ ಅಗತ್ಯವನ್ನು ಇಲ್ಲಿ ಎತ್ತಿ ತೋರಿಸಲಾಗಿದೆ.

ನೀತಿನಿರ್ದೇಶನ ಸಂಗತಿಗಳು

ನಮ್ಮದು ಮೂಲತಃ ಶ್ರೇಣೀಕೃತ ಸಮಾಜ. ಅಲ್ಲಿ ಅಭಿವೃದ್ಧಿ ಮತ್ತು ಅದರ ಸೂಚಿಗಳಾದ ಸಾಕ್ಷರತೆ, ಶಿಕ್ಷಣ, ಆರೋಗ್ಯ, ಘನತೆಯಿಂದ ಕೂಡಿದ ಬದುಕು ಮುಂತಾದವು ಶ್ರೇಣೀಕೃತವಾಗಿಯೇ ಸಂಭವಿಸುತ್ತವೆ. ನೀತಿ-ನಿರ್ದೇಶನ ಕಾರ್ಯದಲ್ಲಿ ತೊಡಗಿರುವವರು ಇಂತಹ ಸಂಗತಿಗಳ ಬಗ್ಗೆ ಜಾಗೃತರಾಗಿರಬೇಕು. ಲಿಂಗ ಸಂಬಂಧಿ ಸಾಕ್ಷರತಾ ಅಂತರದ ಮೂಲದಲ್ಲಿ ಅನೇಕ ಸಂಗತಿಗಳು ಕೆಲಸ ಮಾಡುತ್ತಿವೆ. ಪ್ರಸ್ತುತ ಅಧ್ಯಯನದಲ್ಲಿ ಕೆಳಕಂಡ ಮುಖ್ಯ ನೀತಿ-ನಿರ್ದೇಶನ ಸಂಗತಿಗಳನ್ನು ಗುರುತಿಸಲಾಗಿದೆ.

೧. ಲಿಂಗಸಂಬಂಧಿ ಸಾಕ್ಷರತಾ ಅಂತರ-ಅಸಮಾನತೆಯು ಎರಡು ಮುಖಗಳನ್ನು ಹೊಂದಿದೆ. ಮೊದಲನೆಯದು ರೂಡಿಗತವಾದ ಪುರುಷರು ಮತ್ತು ಮಹಿಳೆಯರ ನಡುವಿನ ಸಾಕ್ಷರತಾ ಅಂತರ. ಇದರ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಮಹಿಳಾ ಚಳುವಳಿಯಲ್ಲೂ ಸಾಕ್ಷರತೆಯ ಲಿಂಗ ಸಂಬಂಧಿ ಅಸಮಾನತೆಯ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಲಾಗುತ್ತದೆ. ಆದರೆ ಅದರ ಎರಡನೆಯ ಮುಖವಾದ ದಲಿತ ಮಹಿಳೆಯರು ಮತ್ತು ದಲಿತೇತರ ಮಹಿಲೆಯರ ನಡುವಿನ ಸಾಕ್ಷರತೆಗೆ ಸಂಬಂಧಿಸಿದ ಅಸಮಾನತೆಯು ಜ್ಞಾನ ಶಿಸ್ತುಗಳಲ್ಲಿ ಚರ್ಚೆಗೆ ಒಳಗಾಗದಿರುವುದು ಆಶ್ಚರ್ಯವುಂಟು ಮಾಡುತ್ತದೆ. ಈ ಬಗೆಯ ಭಿನ್ನತೆ ಕಡೆಗೆ ನೀತಿ-ಕಾರ್ಯಕ್ರಮ ರೂಪಿಸುವವರು ಗಮನ ನೀಡಬೇಕಾಗುತ್ತದೆ.

೨. ನಮ್ಮ ಶ್ರೇಣೀಕೃತ ವ್ಯವಸ್ಥೆಯಲ್ಲಿ ಅತ್ಯಂತ ದುಸ್ಥಿತಿಯನ್ನು ಮತ್ತು ಎಲ್ಲ ಬಗೆಯ ಅಸಮಾನತೆಗಳನ್ನು ಅನುಭವಿಸುತ್ತಿರುವ ವರ್ಗವೆಂದರೆ ದಲಿತ ಮಹಿಳೆಯರು. ಅವರು ಲಿಂಗಸಂಬಂಧಿ ಸಾಕ್ಷರತಾ ಅಂತರದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅವರು ಜಾತಿ ಸಂಬಂಧಿ ಅಸಮಾನತೆಯನ್ನು ಅನುಭವಿಸುತ್ತಿದ್ದಾರೆ. ಅವರು ಮಹಿಳೆಯರೊಳಗೆ ಅನೇಕ ಬಗೆಯ ಅಸಮಾನತೆಗಳನ್ನು ಎದುರಿಸುತ್ತಿದ್ದಾರೆ. ಇದನ್ನು ಸರಿಪಡಿಸುವ ದಿಶೆಯಲ್ಲಿ ಸರ್ಕಾರ ಗಮನ ನೀಡಬೇಕಾಗುತ್ತದೆ.

೩. ಅಭಿವೃದ್ಧಿ ಮತ್ತು ಲಿಂಗಸಂಬಂಧಗಳ ನಡುವಿನ ಸಂಬಂಧ ಅತ್ಯಂತ ಸಂಕೀರ್ಣವಾದುದು. ಅದಕ್ಕೆ ಅನೇಕ ಮುಖಗಳಿವೆ. ಈ ಸಂಬಂಧವು ಅಭಿವೃದ್ಧಿಯ ವಿನ್ಯಾಸವಮ್ಮಿ ಅವಲಂಬಿಸಿದೆ. ವರಮಾನ ವರ್ಧನೆಯನ್ನು ಕೇಂದ್ರವನ್ನಾಗಿಟ್ಟುಕೊಂಡ ಅಭಿವೃದ್ಧಿ ಪ್ರಣಾಳಿಕೆಯಿಂದ ಲಿಂಗಸಂಬಂಧಿ ಅಸಮಾನತೆಯನ್ನು ಮತ್ತು ಸಾಕ್ಷರತೆಗೆ ಸಂಬಂಧಿಸಿದ ಅಸಮಾನತೆಯನ್ನು ಹೋಗಲಾಡಿಸುವುದು ಸಾಧ್ಯವಿಲ್ಲ. ಅಭಿವೃದ್ಧಿಯು ಎಲ್ಲಿ ಜನರನ್ನು ಒಳಗೊಳ್ಳುವಂತಿರುತ್ತದೋ, ಎಲ್ಲಿ ಅಭಿವೃದ್ಧಿಯು ಜನರ ಧಾರಣಾ ಸಾಮರ್ಥ್ಯವನ್ನು ವಿಸ್ತೃತಗೊಳಿಸುವ ರೀತಿಯಲ್ಲಿರುತ್ತದೋ ಅಲ್ಲಿ ಮಾತ್ರ ಅಭಿವೃದ್ಧಿಯೊಂದಿಗೆ ಲಿಂಗಸಂಬಂಧಿ ಅಸಮಾನತೆಯ ನಿವಾರಣೆಯಾಗಬಲ್ಲುದು. ಆದ್ದರಿಂದ ನಾವು ಎರಡನೆಯ ಬಗೆಯ ಅಭಿವೃದ್ಧಿ ಪ್ರಣಾಳಿಕೆಯನ್ನು ಅನುಷ್ಟಾನ ಗೊಳಿಸುವುದರ ಬಗೆ ಒತ್ತಾಯ ಮಾಡಬೇಕಾಗುತ್ತದೆ ಮತ್ತು ಸರ್ಕಾರವು ಅತ್ತ ಕಡೆಗೆ ಗಮನ ನೀಡಬೇಕಾಗುತ್ತದೆ . ಒಟ್ಟಾರೆ ಅಸಮಾನತೆಯನ್ನು ಪ್ರಜ್ಞಾಪೂರ್ವಕವಾಗಿ ಎದುರಿಸಬೇಕು. ಅದು ತನ್ನಷ್ಟಕ್ಕೆ ತಾನು ಅಭಿವೃದ್ಧಿಯೊಂದಿಗೆ ನಿವಾರಣೆಯಾಗುವುದಿಲ್ಲ. ಇದು ಪ್ರಸ್ತುತ ಅಧ್ಯಯನದ ಮೂಲಭೂತ ನೀತಿ-ನಿರ್ದೇಶನವಾಗಿದೆ.